Monday, July 29, 2013

ಹಿರಿಯ ಕೃಷಿಕ, ದಾನಿ - ಪಡಾರು ನರಸಿಂಹ ಶಾಸ್ತ್ರಿ ನಿಧನ


                  ಬಂಟ್ವಾಳ ತಾಲೂಕಿನ ಮಾಣಿ ಗ್ರಾಮದ ಲಕ್ಕಪ್ಪಕೋಡಿಯಲ್ಲಿ ವಾಸ್ತವ್ಯವಿರುವ ಹಿರಿಯ ಕೃಷಿಕ ಪಡಾರು ನರಸಿಂಹ ಶಾಸ್ತ್ರಿಯವರು ಅಲ್ಪಕಾಲದ ಅಸೌಖ್ಯದಿಂದ ಜುಲೈ 26ರಂದು ಸ್ವಗೃಹದಲ್ಲಿ ನಿಧನರಾದರು. ಅವರಿಗೆ ಎಪ್ಪತ್ತೊಂಭತ್ತು ವರ್ಷ ವಯಸ್ಸಾಗಿತ್ತು.
                 ನರಸಿಂಹ ಶಾಸ್ತ್ರಿಯವರು ಪ್ರಗತಿಪರ ಕೃಷಿಕರು. ಮಾಣಿಯ ಶ್ರೀ ರಾಮಚಂದ್ರಾಪುರ ಮಠದ ಮಾಣಿಶಾಖೆಯಲ್ಲಿರುವ ವೇದಪಾಠ ಶಾಲೆಯ ನೂತನ ಕಟ್ಟಡದ ರೂವಾರಿಯಿವರು. ಹವ್ಯಕ ಸಭಾಭವನ, ಗೋಶಾಲೆ, ಮೂಲ ಮಠಕ್ಕೆ ಆರ್ಥಿಕ ದೇಣಿಗೆಯನ್ನು ನೀಡಿದ ಕೊಡುಗೈ ದಾನಿ.
                  ನರಸಿಂಹ ಶಾಸ್ತ್ರಿಗಳು ಯಕ್ಷಗಾನ ಅಭಿಮಾನಿ, ವಿಮರ್ಶಕ. ಉಡುಪಿಯ ಯಕ್ಷಗಾನ ಕಲಾರಂಗದ ಪೋಷಕರು. ಕಲಾರಂಗದಲ್ಲಿ 'ಪಡಾರು ನರಸಿಂಹ ಶಾಸ್ತ್ರಿ ಪ್ರಶಸ್ತಿ'ಯನ್ನು ಸ್ಥಾಪಿಸಿದ್ದರು. ಇದರ ಮೂಲಕ ವರುಷಕ್ಕೊಬ್ಬ ಕಲಾವಿರಿಗೆ ಪ್ರಶಸ್ತಿ ಪ್ರದಾನ.
                   ಕಳೆದ ಐದು ದಶಕದೀಚೆಗೆ ಅಡಿಕೆ, ತೆಂಗು, ಕೊಕ್ಕೊ.. ಕೃಷಿಯಲ್ಲಿ ಹೊಸ ಆವಿಷ್ಕಾರ, ಹೊಸ ವಿಚಾರಗಳತ್ತ ನಿತ್ಯ ಆಸಕ್ತಿ. ಇದನ್ನು ತಮ್ಮ ತೋಟದಲ್ಲಿ ಅಳವಡಿಸುವತ್ತ ಕುತೂಹಲಿ. ಕೃಷಿಯ ಸೂಕ್ಷ್ಮ ವಿಚಾರಗಳನ್ನು ಅನುಭವಾಧಾರದಿಂದ ಹೇಳುವ ಸಂಪನ್ಮೂಲ ವ್ಯಕ್ತಿ. ಎಳೆವಯಸ್ಸಿನಿಂದಲೇ ಸಾಹಿತ್ಯಪ್ರೀತಿ.
                  ನರಸಿಂಹ ಶಾಸ್ತ್ರಿಯವರು ಪತ್ನಿ ಸಾವಿತ್ರಿ, ಪುತ್ರ ಲೇಖಕ ಪಡಾರು ರಾಮಕೃಷ್ಣ ಶಾಸ್ತ್ರಿ ಮತ್ತು ಅಪಾರ ಬಂಧುವರ್ಗದವರನ್ನು ಅಗಲಿದ್ದಾರೆ.

Tuesday, July 23, 2013

ಕೃಷಿಕ-ಉದ್ಯಮಿಗಳನ್ನು ಬೆಸೆದ "ಹಲಸಿನ ಹಬ್ಬ"             ಎಂಟು ವರುಷದ ಹಿಂದೆ ಕೇರಳ ವಯನಾಡಿನ ಉರವು ಎಂಬ ಸರಕಾರೇತರ ಸಂಸ್ಥೆಯು ಹಲಸನ್ನು ಜನಪ್ರಿಯಗೊಳಿಸಲು 'ಹಲಸು ಮೇಳ'ಕ್ಕೆ ಶ್ರೀಕಾರ ಹಾಕಿತು. ಕೇರಳದಲ್ಲಿ ಹಲಸು ಯಥೇಷ್ಟವಾಗಿ ಬೆಳೆಯುವುದಲ್ಲದೆ, ಅದರ ಬಳಕೆ ಮತ್ತು ಮೌಲ್ಯವರ್ಧನೆಯಲ್ಲೂ ಮುಂದು. ಎರಡು ವರುಷದ ಹಿಂದೆ ಕೇರಳದ ರಾಜಧಾನಿಯಲ್ಲಿ ರಾಷ್ಟ್ರೀಯ ಹಲಸು ಉತ್ಸವ ಜರುಗಿ, ದೇಶಮಟ್ಟದಲ್ಲಿ ಹಲಸು ಪ್ರಿಯರ ಕೊಂಡಿ ಏರ್ಪಟ್ಟಿರುವುದು ಇತಿಹಾಸ.

              ಉರವು ಹಾಕಿಕೊಟ್ಟ ಹಲಸು ಹಬ್ಬದ ಪರಿಕಲ್ಪನೆಯು ಕನ್ನಾಡಿನ ವಿವಿಧ ಜಾಗದಲ್ಲಿ ಅನುಷ್ಠಾನಗೊಂಡಿತು. ಖಾಸಗಿಯಾಗಿ ಜರುಗಿದ ಹಬ್ಬ ಯಾ ಮೇಳವು ಉದ್ದೇಶದ ಹತ್ತಿರ ಸುಳಿದಾಡಿದರೆ, ಸರಕಾರಿ ಪ್ರಣೀತ ಮೇಳಗಳ ಫಂಡ್ ಮುಗಿಸುವ ಕಾಯಕ್ರಮಕ್ಕೆ ಸೀಮಿತ! ಶಿರಸಿಯ ಕದಂಬ ಸಂಸ್ಥೆಯು ಹಲಸಿನ ಮೌಲ್ಯವರ್ಧನೆ ಮತ್ತು ಮೇಳವನ್ನು ಆಯೋಜಿಸುವಲ್ಲಿ ದೊಡ್ಡ ಹೆಜ್ಜೆಯಿಟ್ಟಿದೆ.

               ಈಚೆಗೆ ಜುಲೈ ಏಳರಂದು ಬಂಟ್ವಾಳ ತಾಲೂಕಿನ ಅಡ್ಯನಡ್ಕ ಜನತಾ ಜ್ಯೂನಿಯರ್ ಕಾಲೇಜಿನ ಎಲ್ಲಾ ಕೋಣೆಗಳಲ್ಲೂ ಹಲಸಿನ ಪರಿಮಳ. ದಿನವಿಡೀ ಧಾರಾಕಾರ ಮಳೆಯಿದ್ದರೂ ಅಮಿತ ಉತ್ಸಾಹದ ಹಲಸು ಪ್ರೇಮಿಗಳ ಉಪಸ್ಥಿತಿ. ನಿಗದಿತ ಶುಲ್ಕ ಪಾವತಿಸಿ, ಪ್ರತಿನಿಧಿಗಳಾಗಿ ಹಲಸಿನ ಹಬ್ಬದಲ್ಲಿ ಬರೋಬ್ಬರಿ ಎಂಟುನೂರಕ್ಕೂ ಮಿಕ್ಕಿ ಪ್ರತಿನಿಧಿಗಳ ಭಾಗಿ. ಉದ್ಯಮಿಗಳ, ವಿಜ್ಞಾನಿಗಳ, ಕೃಷಿಕರ ಮಾತು. ಮಧ್ಯಾಹ್ನ ಹಲಸಿನ ಭೋಜನ. ಸೀಮಿತ ಮಳಿಗೆಗಳಲ್ಲಿ ವಿವಿಧ ಖಾದ್ಯಗಳು. ಸ್ಪರ್ಧೆಗೆ ಐವತ್ತಕ್ಕೂ ಮಿಕ್ಕಿ ಐಟಮ್ಮುಗಳು ಬಂದಿದ್ದುವು.

                ಹಬ್ಬದಲ್ಲಿ ಹತ್ತೊಂಭತ್ತು ವಿವಿಧ ಹಲಸಿನ ತಳಿಗಳನ್ನು ಅರಣ್ಯ ಸಚಿವ ಶ್ರೀ ರಮಾನಾಥ ರೈಗಳು ಬಿಡುಗಡೆಗೊಳಿಸಿದರು. ನಾಲ್ಕು ವರುಷಗಳಿಂದ ಅಳಿಕೆ, ಕೇಪು, ಪೆರುವಾಯಿ, ಅಡ್ಯನಡ್ಕ.. ಕೇಂದ್ರವಾಗಿಟ್ಟುಕೊಂಡು ಹಲಸಿನ ಆಂದೋಳನ ಶುರುವಾಗಿತ್ತು. 'ರುಚಿ ನೋಡಿ ತಳಿ ಆಯ್ಕೆ' ಪ್ರಕ್ರಿಯೆಯಲ್ಲಿ ಆಯ್ಕೆಗೊಂಡ ಇಪ್ಪತ್ತೈದಕ್ಕೂ ಮಿಕ್ಕಿದ ಹಲಸಿನ ತಳಿಗಳು ಆಯ್ಕೆಯಾಗಿವೆ. ಅದರಲ್ಲಿ ಕೆಲವನ್ನು ಹಬ್ಬದಲ್ಲಿ ಬಿಡುಗಡೆಗೊಳಿಸಲಾಗಿತ್ತು. ಹೀಗೆ ಆಯ್ಕೆಗೊಂಡ ತಳಿಗಳನ್ನು ಕಸಿ ಕಟ್ಟುವ ಮೂಲಕ ಅಭಿವೃದ್ಧಿಪಡಿಸಲಾಗುತ್ತಿದೆ.

               ಎರಡು ವರುಷದ ಹಿಂದೆ ಕೇಪು ಉಬರು ರಾಜಗೋಪಾಲ ಭಟ್ಟರ ಮನೆಯಲ್ಲಿ ಹಲಸು ಸ್ನೇಹಿ ಕೂಟವು ಹಲಸಿನ ಹಬ್ಬವನ್ನು ಆಚರಿಸಿತ್ತು. ಅಂದಿನ ಹಬ್ಬದಲ್ಲಿ ಖಾದ್ಯಗಳದ್ದೇ ಭರಾಟೆ. ಜತೆಗೆ ತಳಿ ಆಯ್ಕೆ ಪ್ರಕ್ರಿಯೆ. ಅಡ್ಯನಡ್ಕದ ಮೇಳದಲ್ಲಿ ಕೃಷಿಕರು, ವಿಜ್ಞಾನಿಗಳು ಮತ್ತು ಉದ್ಯಮಿಗಳೊಳಗೆ ಸಂವಹನ ನಡೆದು ಕೊಂಡಿ ಏರ್ಪಟ್ಟಿರುವುದು ಆಶಾದಾಯಕ ಬೆಳವಣಿಗೆ.

                 ಮಂಗಳೂರಿನ ಏಸ್ಫುಡ್ಸ್ ಪ್ರೈ ಲಿಮಿಟೆಡ್ ಇದರ ಡಾ. ಅಣ್ಣಪ್ಪ ಪೈಗಳು ತಮ್ಮ ಘಟಕದಲ್ಲಿ ಹಲಸಿಗೆ ಸ್ಥಾನ ಕೊಟ್ಟಿದ್ದಾರೆ. ಹಲಸಿನ ಚಿಪ್ಸ್ಗೆ ವಿದೇಶದಲ್ಲಿ ಉತ್ತಮ ಬೇಡಿಕೆಯಿರುವುದನ್ನು ಮನದಟ್ಟು ಮಾಡಿದ್ದರು. ವಾರಣಾಶಿ ಹಲಸು ಬೆಳೆಗಾರರ ಸಂಘವು ಈ ವರುಷ ಹಲಸಿನ ಸೊಳೆಯನ್ನು ಏಸ್ ಫುಡ್ಸಿಗೆ ನೀಡಿ ಹಲಸಿನ ಸೊಳೆ ವ್ಯವಹಾರಕ್ಕೆ ಶುಭ ನಾಂದಿ ಹಾಡಿದ್ದಾರೆ. ಡಾ.ಪೈಗಳು ಹಲಸಿನ ಮಿನಿಮಲ್ ಸಂಸ್ಕರಣೆಯು ಹೆಚ್ಚು ಶ್ರಮ ಬೇಡುವ ಕೆಲಸ. ಹಿತ್ತಿಲಿನಲ್ಲಿ ಹಾಳಾಗುವ, ಉಪಯೋಗಿಸದೆ ಕೊಳೆತು ಹೋಗುವ ಹಲಸಿಗೆ ಮಾರಾಟಾವಕಾಶವಿದೆ. ಆಸಕ್ತರು ಜತೆಸೇರಿದಾಗ ಶ್ರಮ ಹಗುರವಾಗುತ್ತದೆ. ಹಲಸಿಗೆ ದೇಶವಲ್ಲ, ವಿಶ್ವ ಮಾರುಕಟ್ಟೆಯಿದೆ' ಎಂದರು.

               ಕಾರ್ಕಳ ಮಾಳದ ಚಿರಾಗ್ ಹೋಮ್ ಉದ್ಯಮದ ಪರಮಾನಂದ ಜೋಶಿಯವರು ಹಲಸು ಹಪ್ಪಳ ಉದ್ಯಮದ ಅನುಭವ ತೆರೆದಿಟ್ಟರು. ವರುಷಪೂರ್ತಿ ಲೈವ್ ಆಗಿರುವ ಇವರ ಉದ್ಯಮದಲ್ಲಿ ಹಲಸಿಗೆ ಮಣೆ. ಮಿಕ್ಕುಳಿದ ಸಮಯದಲ್ಲಿ ಅಕ್ಕಿ ರೊಟ್ಟಿಯಂತಹ ಉತ್ಪನ್ನಗಳ ತಯಾರಿ. ಮಾಳದ ಮಾಜಿ ಪಂಚಾಯತ್ ಅಧ್ಯಕ್ಷ ಹರಿಶ್ಚಂದ್ರ ತೆಂಡೂಲ್ಕರ್ ಉಪ್ಪುಸೊಳೆ ವ್ಯವಹಾರದ ತಮ್ಮ ಅನುಭವವನ್ನು ಹಂಚಿಕೊಂಡರು. ಮಹಾರಾಷ್ಟ್ರ ರತ್ನಾಗಿರಿಯ ಪವಾಸ್ ಕ್ಯಾನಿಂಗ್ ಮಾಲಿಕರಾದ ಹೇಮಂತ ದೇಸಾಯಿ ಮೌಲ್ಯವರ್ಧಿತ ಉತ್ಪನ್ನಗಳನ್ನು ಪರಿಚಯಿಸುತ್ತಿದ್ದಾಗ ಎಲ್ಲರಿಗು ಬೆರಗು!

               ಬೆಂಗಳೂರು ಕೃಷಿ ವಿವಿಯ ಡಾ.ಶ್ಯಾಮಲಮ್ಮ, ಬೆಂಗಳೂರಿನ ಐಐಹೆಚ್ಆರ್ ವಿಜ್ಞಾನಿ ಡಾ.ಪ್ರಕಾಶ ಪಾಟೀಲ್, ಅಂಬಲವಾಯಲಿನ ಡಾ.ಪಿ.ರಾಜೇಂದ್ರನ್ ತಮ್ಮ ಸಂಸ್ಥೆಯಲ್ಲಿ ಜರುಗಿದ ಹಲಸಿನ ಕೆಲಸಗಳನ್ನು ಪವರ್ಪಾಯಿಂಟ್ ಮೂಲಕ ಪ್ರಸ್ತುತಪಡಿಸಿದ್ದರು. ಹಲಸು ಆಂದೋಳನದ ರೂವಾರಿ ಶ್ರೀ ಪಡ್ರೆಯವರಿಂದ ಚಿತ್ರಗಳ ಮೂಲಕ ಹಲಸಿನ ವಿಶ್ವದರ್ಶನ ಪ್ರಸ್ತುತಿ.

                  ಹಲಸು ಸ್ನೇಹಿ ಕೂಟದ ಮುಳಿಯ ಶರ್ಮರು ತಮ್ಮ ತೋಟದ ರುಚಿಯಾದ 'ಬಡಾಪಸಂದ್' ತಳಿಯ ಹಲಸಿನ ಹಣ್ಣನ್ನು ಹಲ್ವಕ್ಕೆ ರೂಪಾಂತರಿಸಿದ್ದರು. ಸುಮಾರು ಹದಿನೈದು ಕಿಲೋದಷ್ಟು ಹಲ್ವ ತಯಾರಿಸಿದ್ದು ಮೇಳದಲ್ಲಿ ಮಾರಾಟವಾಗಿತ್ತು. 'ರೈತರೇ ಮೌಲ್ಯವರ್ಧನೆ ಮಾಡಿದರೆ ರೈತರಿಂದಲೇ ಪ್ರೋತ್ಸಾಹ ಸಿಗುವುದರಲ್ಲಿ ಸಂಶಯವಿಲ್ಲ' ಎನ್ನುತ್ತಾರೆ ಶರ್ಮ. ಕೃಷಿಕ ಮತ್ತು ಐಟಿ ಉದ್ಯೋಗಿ ವಸಂತ ಕಜೆ ಕುಟುಂಬ ಹಣ್ಣಿನ ಐಸ್ಕ್ರಿಮ್ ಮತ್ತು ತೆಂಗಿನ ಹಾಲಿನ ಐಸ್ಕ್ರೀಂ ತಯಾರಿಸಿದ್ದರು. ಅಡಿಕೆ ಹಾಳೆಯ ಕಪ್ಪಿನಲ್ಲಿ ಹದಿನೈದು ರೂಪಾಯಿಗೆ ಐಸ್ಕ್ರೀಮ್ ವಿತರಿಸಿದಾಗ ಸಂತೋಷದಿಂದ ಹೊಟ್ಟೆಗಿಳಿಸಿದ ಹಲಸು ಪ್ರಿಯರಿಂದ ಶಹಬ್ಬಾಸ್ ಮೆಚ್ಚುಗೆ. ಬೆಂಗಳೂರಿನ ಬೀಕೆಎಸ್ ಬೇಕರಿಯ ಬಾಲಸುಬ್ರಹ್ಮಣ್ಯ ಭಟ್ಟರು ಹಲಸನ್ನು ಮಾಡಿದ ಐಟಮನ್ನು ಪ್ರದರ್ಶನಕ್ಕಿಟ್ಟಿದ್ದರು.

               ವಾರಣಾಶಿ ಹಲಸು ಬೆಳೆಗಾರರ ಸಂಘ, ಹಲಸು ಸ್ನೇಹಿ ಕೂಟದ ಮುಂದಾಳ್ತನ. ವಾರಣಾಶಿ ಸಂಶೋಧನಾ ಪ್ರತಿಷ್ಠಾನ, ತೋಟಗಾರಿಕಾ ಇಲಾಖೆಗಳ ಸಹಯೋಗ. ಕಸಿ ಗಿಡಗಳಿಗೆ ಬೇಡಿಕೆ ಸಲ್ಲಿಸುವ, ತೋಟ ಮಾಡಲು ಉಮೇದಿರುವ, ತಮ್ಮ ಹಿತ್ತಿಲಿನ ಹಲಸನ್ನು ಪರಿಚಯಿಸಲು ಉತ್ಸುಕರಾಗಿರುವ ಹಲವು ಕೃಷಿಕರನ್ನು ಹಲಸಿನ ಹಬ್ಬ ಬೆಸೆದಿತ್ತು.

(ಚಿತ್ರ : ರಾಧಾ ಮುಳಿಯ)

Saturday, July 20, 2013

ಅಶಕ್ತ ಕಲಾವಿದ, ವೈದಿಕ ಸಹಾಯಕ - ಕನ್ಯಾನ ಕೇಶವ ಭಟ್ಟರಿಗೆ ನೆರವಾಗ್ತೀರಾ?              ಕನ್ಯಾನ ಕೇಶವ ಭಟ್ ಮೂಲತಃ ಬಂಟ್ವಾಳ ತಾಲೂಕಿನ ಕನ್ಯಾನದವರು. ಬಾಲ್ಯದಿಂದಲೇ ಹೋಟೆಲ್ ಉದ್ಯಮಿ. ಪುತ್ತೂರಿನ ಬೊಳ್ವಾರಿನಲ್ಲಿದ್ದ ಭಟ್ಟರ ಹೋಟೆಲ್ ಪುಷ್ಯರಾಗ ಗುಣಮಟ್ಟದ ತಿಂಡಿಗಳಿಗೆ ಖ್ಯಾತಿಯಾಗಿತ್ತು. ಹುಡುಕಿ ಬರುವ ಗ್ರಾಹಕರಿದ್ದರು. ಬಳಿಕ ಚೇತನ ಆಸ್ಪತ್ರೆ, ಆದರ್ಶ ಆಸ್ಪತ್ರೆಗಳ ಕ್ಯಾಂಟಿನ್ಗಳನ್ನು ವಹಿಸಿಕೊಂಡಿದ್ದರು. ಹೋಟೆಲ್ ಕೆಲಸಗಳಲ್ಲಿ ಹೇಳುವಂತಹ ಆರ್ಥಿಕ ಸಂಪತ್ತು ಬಾರದೇ ಹೋದಾಗ ಸುಬ್ರಹ್ಮಣ್ಯಕ್ಕೆ ವಸತಿಯನ್ನು ಸ್ಥಳಾಂತರಿದ್ದರು. ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ವೈದಿಕ ಸಹಾಯಕರಾಗಿ ಹೊಸ ವೃತ್ತಿ ಜೀವನ ಆರಂಭಿಸಿದ್ದರು.

             ಕೇಶವ ಭಟ್ಟರು ಯಕ್ಷಗಾನ ಕಲಾವಿದ. ತಾಳಮದ್ದಳೆ ಅರ್ಥಧಾರಿ. ಭಾರ್ಗವ ವಿಜಯ ಪ್ರಸಂಗದ ಅವರ ’ಜಮದಗ್ನಿ", ಶಬರಿಮಲೆ ಕ್ಷೇತ್ರ ಮಹಾತ್ಮೆಯ ’ವಾವರ", ದಕ್ಷಾಧ್ವರ ಪ್ರಸಂಗದ ’ದಕ್ಷ ಮತ್ತು ಈಶ್ವರ.’. ಪಾತ್ರಗಳಿಗೆ ಹೊಸ ಮೆರುಗು ತಂದಿದ್ದರು. ಹವ್ಯಾಸಿಯಾಗಿ ಸಾಕಷ್ಟು ವೇಷಗಳನ್ನು ಮಾಡಿದ್ದರು. ತಾಳಮದ್ದಳೆಯಲ್ಲಿ ಕರುಣ, ದುಃಖ ರಸದ ಪಾತ್ರ ಪೋಷಣೆಯಲ್ಲಿ ಕೇಶವ ಭಟ್ಟರದು ಪ್ರತ್ಯೇಕ ಸ್ಥಾನ.

                ಹಲವು ವರುಷಗಳಿಂದ ಮಧುಮೇಹಕ್ಕೆ (ಸಕ್ಕರೆ ಕಾಯಿಲೆ) ಒಳಗಾದರು. ಎರಡು ವರುಷದಿಂದೀಚೆಗೆ ಕಿಡ್ನಿಗಳು ನಿಷ್ಕ್ರಿಯವಾದುವು. ಲಂಗ್ಸ್ನಲ್ಲಿ ನೀರು ತುಂಬಿ ಅಪಾಯ ಸ್ಥಿತಿಯಲ್ಲಿದ್ದಾಗ ಬೆಂಗಳೂರಿನ ಆಸ್ಪತ್ರೆಗಳಲ್ಲಿ ದಾಖಲಾಗಿ ಚಿಕಿತ್ಸೆ ಪಡೆದರು. ದೇಹದಲ್ಲಿ ರಕ್ತ ಪರಿಚಲನೆ ಸಮಸ್ಯೆಯಿಂದಾಗಿ ವಾರಕ್ಕೆ ಮೂರು ಸಲ ಡಯಾಲಿಸೀಸ್ ಮಾಡಿಸಿಕೊಳ್ಳಬೇಕಾಯಿತು. ವೈದ್ಯಕೀಯ ಆರೈಕೆಗಳು ನಡೆಯುತ್ತಿದ್ದಂತೆ ಎಡಗಾಲಿಗೆ ಡ್ರೈ ಗ್ಯಾಂಗಿನ್ ಬಾಧಿಸಿತು. ಪರಿಣಾಮವಾಗಿ ಎಡಗಾಲನ್ನು ಕತ್ತರಿಸಬೇಕಾದ ಪ್ರಮೇಯ ಬಂತು. ಪ್ರಸ್ತುತ ಕೇಶವ ಭಟ್ಟರು ಪುತ್ತೂರಿನ ಧನ್ವಂತರಿ ಆಸ್ಪತ್ರೆಯಲ್ಲಿ ದಾಖಲಾಗಿ ಡಾ.ರವಿಪ್ರಕಾಶರ ಶುಶ್ರೂಷೆಯಲ್ಲಿ ಚೇತರಿಸಲು ಸಾಹಸ ಪಡುತ್ತಿದ್ದಾರೆ.

               ಕೇಶವ ಭಟ್ಟರಿಗೆ ಸ್ವಂತದ್ದಾದ ಸೂರಿಲ್ಲ. ನಿವೇಶನವಿಲ್ಲ. ಹೋಟೆಲ್, ವೈದಿಕ, ಯಕ್ಷಗಾನದಲ್ಲಿ ಸಿಕ್ಕ ಅಲ್ಪ ಹಣದಿಂದ ಕುಟುಂಬವನ್ನು ನಿಭಾಯಿಸುತ್ತಿದ್ದರು. ಪತ್ನಿ ವಿನೋದ ಭಟ್. ಇಬ್ಬರು ಮಕ್ಕಳು. ಕೂಡಿಟ್ಟ ಹಣ, ಸ್ನೇಹಿತರಿಂದ ಪಡೆದ ಸಹಾಯಗಳು ಆಸ್ಪತ್ರೆ ವೆಚ್ಚಕ್ಕೆ ಸರಿದೂಗಿತು. ಇದುವರೆಗೆ ಹತ್ತು ಲಕ್ಷಕ್ಕೂ ಮಿಕ್ಕಿ ವೆಚ್ಚವಾಗಿದೆ. ಈಗ ಏನಿಲ್ಲವೆಂದರೂ ತಿಂಗಳಿಗೆ 35 ರಿಂದ 40 ಸಾವಿರ ರೂಪಾಯಿಗಳು ಆಸ್ಪತ್ರೆ ವೆಚ್ಚಗಳಿಗೆ ಬೇಕು.

                ಕೇಶವ ಭಟ್ಟರು ದುಡಿಯುವ ಸ್ಥಿತಿಯಲ್ಲಿಲ್ಲ. ಆರ್ಥಿಕವಾಗಿ ಸೊರಗಿದ್ದಾರೆ. ಆಸ್ಪತ್ರೆ ವೆಚ್ಚವನ್ನು ನೀಡುವಷ್ಟೂ ಆರ್ಥಿಕ ತೊಂದರೆಯಲ್ಲಿದ್ದಾರೆ. ಇಂತಹ ಸ್ಥಿತಿಯಲ್ಲಿ ಸಹೃದಯಿಗಳಾದ ತಾವು ಕೇಶವ ಭಟ್ಟರಿಗೆ ನೆರವೀಯುತ್ತೀರಾ? ಅವರ ಕುಟುಂಬದ ಕಣ್ಣೀರನ್ನು ಒರೆಸುವ ಸಣ್ಣ ಕೆಲಸವನ್ನಾದರೂ ಮಾಡೋಣ ಅಲ್ಲವೇ? ಅವರಿಗೆ ಬದುಕುವ ಅವಕಾಶವನ್ನು ಕೊಡೋಣ ಅಲ್ವಾ. ಇದೊಂದು ಪುಣ್ಯದ ಕೆಲಸ. ಅವರಿಗೀಗ ಬೇಕಾಗಿರುವುದು ಆರ್ಥಿಕ ಸಹಾಯ.

ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು (Puttur) ಇಲ್ಲಿನ ಎಕ್ಸಿಕ್ ಬ್ಯಾಂಕಿನಲ್ಲಿ ಕೇಶವ ಭಟ್ಟರ ಪತ್ನಿ ವಿನೋದ ಕೆ. ಭಟ್ ಅವರ ಉಳಿತಾಯ ಖಾತೆಯ ಅಕೌಂಟ್ ನಂಬ್ರ ಹೀಗಿದೆ : 910010049568821 (IFSC Code : UTIB 0001002)

ನಿಮ್ಮ ನೀಡುವ ಸಹಕಾರವನ್ನು ಅವರಿಗೆ ಎಸ್.ಎಂ.ಎಸ್.ಮೂಲಕ ತಿಳಿಸಿದರೆ ಉಪಕಾರ - ಮೊಬೈಲ್ ಸಂಖ್ಯೆ 9448616336

Thursday, July 18, 2013

ಉತ್ಪನ್ನಗಳಿಗೆ ಬೇಕು, ಇರುನೆಲೆಯ ಮಾರುಕಟ್ಟೆ


          "ನಾನು ಮೀಯಪದವಿನ ಅಂಗಡಿಗೆ ಎಳನೀರು ಮಾರಾಟ ಮಾಡಿದಾಗ ಹಲವರು ನಕ್ಕರು, ಗೇಲಿ ಮಾಡಿದರು. ಅವರೇ ಇಂದು ಅಂಗಡಿಯಿಂದ ಎಳನೀರನ್ನು ಖರೀದಿಸಿ ಒಯ್ಯುತ್ತಾರೆ," ಹದಿನೈದು ವರುಷದ ಹಿಂದಿನ ನೆನಪನ್ನು ಡಾ.ಚಂದ್ರಶೇಖರ ಚೌಟರು ಜ್ಞಾಪಿಸಿಕೊಂಡರು. 

           ಹೊಸಂಗಡಿಯಿಂದ ಮೀಯಪದವಿಗೆ ಒಂಭತ್ತು ಕಿಲೋಮೀಟರ್ ದೂರ. ಕಾಸರಗೋಡು ಜಿಲ್ಲೆಯ ಚಿಕ್ಕ ಹಳ್ಳಿ. ಸುಮಾರು ಎರಡು ಸಾವಿರ ಜನಸಂಖ್ಯೆಯಿರುವ ಪಂಚಾಯತ್ ಕೇಂದ್ರ. ಬಹುತೇಕ ಶ್ರಮಿಕ ವರ್ಗ. ಹಿತ್ತಿಲಲ್ಲಿ ತೆಂಗಿನ ಮರಗಳಿದ್ದರೂ ಅಂಗಡಿಯಿಂದ ಖರೀದಿಸುತ್ತಾರಲ್ಲಾ? ಚೌಟರು ಹೇಳುತ್ತಾರೆ," ಒಬ್ಬರಿಗೆ ಐದು ಎಳನೀರು (ಬೊಂಡ, ಸೀಯಾಳ) ಅಗತ್ಯವಿದೆ ಎಂದಿಟ್ಟುಕೊಳ್ಳೋಣ. ಅಂಗಡಿಯಲ್ಲಾದರೆ ಐದಕ್ಕೆ ನೂರು ರೂಪಾಯಿ. ಆದರೆ ಒಬ್ಬರನ್ನು ಮರಹತ್ತಿಸಿ ಕೊಯಿಸಲು ನೂರೈವತ್ತು ರೂಪಾಯಿ ಸಂಭಾವನೆ ಬೇಕು." 

            ಕಾರ್ಮಿಕ ಸಮಸ್ಯೆ ಕೃಷಿಯಲ್ಲಿ ನೇರ ಪರಿಣಾಮ ಬೀರಿದೆ. ಬದುಕನ್ನು ನಲುಗಿಸಿದೆ.   ಹಿತ್ತಿಲಿನಲ್ಲಿ ತೆಂಗಿನ, ಹಲಸಿನ ಮರವಿದ್ದರೂ ಅಂಗಡಿಯನ್ನು ಅವಲಂಬಿಸಬೇಕಾದ ಸ್ಥಿತಿಯು ಮೀಯಪದವು ಹಳ್ಳಿ ಒಂದರ ಕತೆಯಲ್ಲ, ಬಹುತೇಕ ಹಳ್ಳಿಗಳ ಕತೆ-ವ್ಯಥೆ. ನಗರದ ಅಂಗಡಿಗಳಿಗಾದರೆ ದೂರದೂರಿನ ಸರಬರಾಜು ಸರಪಣಿಯಿದೆ. ಮೀಯಪದವಿಗೆ ಹೊರಗಿನಿಂದ ಎಳನೀರು ಬರುವುದಿಲ್ಲ. ನಿತ್ಯ ಕಾಣುತ್ತಿರುವ ಮರಗಳೇ ಒದಗಿಸುತ್ತವೆ. 

          ಮೀಯಪದವು ಅಂಗಡಿಗಳಲ್ಲಿ ಸಿಗುವ ಎಳನೀರು ಇದೆಯಲ್ಲಾ, ಅದರಲ್ಲಿ ಚೌಟರ ತೋಟದ್ದು ಸಿಂಹಪಾಲು. ದೇಹಾಯಾಸದಿಂದ ಬಳಲಿದ್ದ ದೇಹಕ್ಕೆ ಎಳನೀರು ಸೇವನೆ ಟಾನಿಕ್. ಅಂಗಡಿಯಲ್ಲಿ ಕುಡಿಯುವುದಲ್ಲದೆ ಮನೆಗೆ ಒಂದೋ ಎರಡೋ ಕಟ್ಟಿಸಿಕೊಂಡು ಒಯ್ಯುವವರಿದ್ದಾರೆ.  ರಾಜಾನಂದ ಶೆಟ್ಟರ ಅಂಗಡಿಯೊಂದರಲ್ಲೇ ಚೌಟರ ತೋಟದ ಇನ್ನೂರು ಎಳನೀರು ದಿನವಹಿ ಮಾರಾಟವಾಗುತ್ತಿದೆ! ಇತರ ಅಂಗಡಿಗಳಿಗೆ ಸರಬರಾಜು ಮಾಡುವ ಕೃಷಿಕರು ರೂಪುಗೊಂಡಿದ್ದಾರೆ. 

         ಕೃಷಿ ಖುಷಿಯಾಗಲು ಹುಲುಸಾದ ಬೆಳೆ, ಉತ್ತಮ ಬೆಲೆ ಮಾನದಂಡ. ಬೆಲೆ ಸಾಕಷ್ಟಿದ್ದು ಬೆಳೆಯೇ ಇಲ್ಲದಿದ್ದರೆ? ಅಥವಾ ಬೆಳೆ ಯಥೇಷ್ಟವಿದ್ದು ಬೆಲೆಯೇ ಇಲ್ಲದಿದ್ದರೆ? ಡೋಲಾಯಮಾನ ಸ್ಥಿತಿ. ಎಲ್ಲಿಯೋ ಬೆಳೆದ ಕೃಷ್ಯುತ್ಪನ್ನ ಮತ್ತೊಂದು ಊರಿಗೆ ತಲಪುವಾಗ ಗುಣಮಟ್ಟ ಕುಸಿದಿರುತ್ತದೆ. ಆದರೆ ಸಾರಿಗೆ, ಕೂಲಿ ಎನ್ನುತ್ತಾ ಬೆಲೆ ವೃದ್ಧಿಯಾಗಿರುತ್ತದೆ. ಗ್ರಾಹಕನಿಗೆ ಅಧಿಕ ಹೊರೆ.

          ಒಂದೂರಿನ ಕೃಷಿ ಉತ್ಪನ್ನಗಳಿಗೆ ಆಯಾ ಊರಿನ ಹತ್ತು ಕಿಲೋಮೀಟರ್ ವ್ಯಾಪ್ತಿಯಲ್ಲಿ ಮಾರುಕಟ್ಟೆ ಸೃಷ್ಟಿಯಾಗಬೇಕು. ಆಗ ಕೃಷಿಕನಿಗೂ ಲಾಭ, ಗ್ರಾಹಕನಿಗೂ ಸಂತೃಪ್ತಿ ಎನ್ನುವುದು ಚೌಟರ ಅನುಭವ. 'ಇದು ಸಾಧ್ಯವಿಲ್ಲವಪ್ಪಾ, ನಮ್ಮಿಂದಾಗದು' ಎಂದು ಶೈಶವದಲ್ಲೇ ಮಾರಾಟ ಆಸಕ್ತಿಯನ್ನು ಮುರಿಟಿಸಿಲ್ಲ. ತನ್ನ ತೋಟದ ಉತ್ಪನ್ನಗಳನ್ನು ಊರಲ್ಲೇ ಮಾರುವತ್ತ ಮಾಡಿದ ಯತ್ನಗಳಲ್ಲಾ ಫಲಕಾರಿಯಾಗಿವೆ. ಇತರ ಕೃಷಿಕರಿಗೂ ಪ್ರೇರಣೆಯಾಗಿವೆ.

             ಎರಡು ವರುಷದ ಹಿಂದೆ ತರಕಾರಿ ಋತುವಿನಲ್ಲಿ ಮನೆ ಬಳಕೆಗಾಗಿ ಮಿಕ್ಕಿದ ಬೆಂಡೆಕಾಯಿಯನ್ನು ಸ್ಥಳೀಯ ಅಂಗಡಿಗಳಿಗೆ ಮಾರಿದ್ದಾರೆ. ಕಿಲೋಗೆ ಅರುವತ್ತು ರೂಪಾಯಿ. ಹಳ್ಳಿಯಲ್ಲಿ ಇಷ್ಟು ದುಬಾರಿ ಹಣ ತೆತ್ತು ಖರೀದಿಸುವವರು ಯಾರು? ಚೌಟರು ಹೇಳುತ್ತಾರೆ, ಕೂಲಿ ಮಾಡುವ ಶ್ರಮಿಕರು ದೊಡ್ಡ ಮಟ್ಟದ ಮಾರುಕಟ್ಟೆಗೆ ಕಾರಣರಾಗಿದ್ದಾರೆ. ಸ್ವತಃ ಬೆಳೆಯಲು ಜಮೀನಿನ ಕೊರತೆ. ಜಮೀನಿದ್ದವರಿಗೆ ದುಡಿಯಲು ಪುರುಸೊತ್ತಿಲ್ಲ. ಮನೆಗೆ ತಲಪುವಾಗ ರಾತ್ರಿಯಾಗಿರುತ್ತದೆ. ಹಾಗಾಗಿ ಬೇರೆಡೆ ದುಡಿದು ಸಿಕ್ಕ ಸಂಪಾದನೆಯಲ್ಲಿ ಉತ್ಪನ್ನಗಳನ್ನು ಖರೀದಿಸುತ್ತಾರೆ. 

          ತೊಂಡೆಕಾಯಿ, ಸೊರೆಕಾಯಿ, ಹೀರೆಕಾಯಿ..ಗಳು ಅಂಗಡಿಗೆ ಬಂದ ತಕ್ಷಣ ಖಾಲಿಯಾಗಿ ಬಿಡುತ್ತವೆ. ದುಡಿವ ಹಳ್ಳಿಯಲ್ಲೇ ತನಗೆ ಬೇಕಾದ ವಸ್ತುಗಳು ಸಿಗುತ್ತವೆ ಎಂದಾದರೆ ಸಮೀಪದ ಪೇಟೆಯನ್ನು ಆಶ್ರಯಿಸಬೇಕಾಗಿಲ್ಲವಲ್ಲ. ಸಂಜೆ ಮನೆ ಸೇರುವಾಗ ತಾಜಾ ತರಕಾರಿ ಅಂಗಡಿಯಲ್ಲಿ ಸಿಕ್ಕರೆ ಆಯಿತು. ಒಂದು ಕಿಲೋ, ಎರಡು ಕಿಲೋದಂತೆ ಮನೆಗೆ ಒಯ್ಯುತ್ತಾರೆ. ಬೆಳಿಗ್ಗೆ ಕೆಲಸಕ್ಕೆ ಹೋಗುವಾಗ ತಾಜಾ ತರಕಾರಿಗೆ ಮೊದಲೇ ಬುಕ್ ಮಾಡಿಡುತ್ತಾರಂತೆ.

            ರಂಬುಟಾನ್ ಹಣ್ಣನ್ನು ಮೀಯಪದವು ಸನಿಹ ಹೆದ್ದಾರಿಗೆ ತಾಗಿಕೊಂಡ ಉಪ್ಪಳದಲ್ಲಿ ಮಾರುಕಟ್ಟೆ ಕುದುರಿಸಿದ್ದಾರೆ. ಉಪ್ಪಳ ಚಿಕ್ಕ ಪೇಟೆ. ನಿತ್ಯ ಬ್ಯುಸಿ. ದ್ರಾಕ್ಷಿಯಿಂದ ಸೀಬೆ ತನಕ ರಂಗುರಂಗಿನ ಹಣ್ಣುಗಳು ಲಭ್ಯ. ರಂಬುಟಾನ್ ಹಣ್ಣು ಹೊಸತು. ಜನರಿಗೆ ಕೇಳಿ ಗೊತ್ತಿದೆ. ತಿಂದು ಗೊತ್ತಿಲ್ಲ. ಇಲ್ಲಿಗೆ ತೀರಾ ಹೊಸತಾದ ಹಣ್ಣನ್ನು ಮೊದಲು ಯಾರೂ ಮೆಚ್ಚಿಕೊಂಡಿಲ್ಲವಂತೆ. ಈಗ ಎಷ್ಟಿದ್ದರೂ ಬೇಕು! 

               ಚೌಟರು ಶುರುವಿಗೆ ಹತ್ತು ಕಿಲೋ ಹಣ್ಣು ಒಯ್ದರು. ಅಂಗಡಿಯವರಿಗೆ ಹಣ್ಣಿನ ಪರಿಚಯವಿಲ್ಲದೆ ಒಲವು ತೋರಲಿಲ್ಲ. ಕೊನೆಗೆ ರಿಕ್ಷಾ ಚಾಲಕರಿಗೆ, ಮಕ್ಕಳಿಗೆ, ಸುತ್ತುಮುತ್ತಲಿನ ಅಂಗಡಿಯವರಿಗೆ ಉಚಿತವಾಗಿ ನೀಡಿ ತಿನ್ನುವಂತೆ ಪ್ರೇರೇಪಿಸಿರು. ಪರಿಣಾಮ, ರುಚಿನೋಡಿದ ಅನೇಕರು ಅಂಗಡಿಯವರಲ್ಲಿ ಹಣ್ಣಿಗೆ ಬೇಡಿಕೆ ಮುಂದಿಟ್ಟರು. ಗ್ರಾಹಕರ ಒಲವು ಹೆಚ್ಚಾಯಿತು. ಯಾರು ಬೇಡ ಅಂತ ಹೇಳಿದ್ದರೋ; ಅವರೇ ಐದು, ಹತ್ತು ಕಿಲೋಗೆ ಆರ್ಡರ್ ಮಾಡಿದರು. ದರ ನಿಗದಿ ಮಾತ್ರ ಮಾಡಿಲ್ಲ. ಕೊಟ್ಟಷ್ಟು ಸಾಕು ಅಂದಿದ್ದರು. ಮೊದಲು ಕಿಲೋಗೆ ಎಂಭತ್ತು ರೂಪಾಯಿಯಂತೆ, ಬಳಿಕ ನೂರು ರೂಪಾಯಿಯಂತೆ ಮಾರಾಟ. ಈಗ ಚೌಟರ ತೋಟದ ರಂಬುಟಾನಿಗೆ ಉಪ್ಪಳ ದೊಡ್ಡ ಮಾರುಕಟ್ಟೆ. 

           ಈ ವರುಷದಿಂದ ಮೀಯಪದವಿನಲ್ಲೇ ರಂಬುಟಾನ್ ಹಣ್ಣಿನ ಮಾರಾಟಕ್ಕೆ ಯತ್ನ. ಉಪ್ಪಳದ ಉಪಾಯವನ್ನೇ ಇಲ್ಲೂ ಮಾಡಿದರು. ರುಚಿ ತೋರಿಸಲು ಉಚಿತ ಹಂಚಿದರು. ಹಳ್ಳಿಯಲ್ಲೂ ತಿನ್ನುವ ಗ್ರಾಹಕರು ರೂಪುಗೊಂಡರು. 'ನೀವೇನೋ ಕೊಟ್ಟಿರಿ. ಇದನ್ನು ಹೇಗೆ ಸಾರ್ ತಿನ್ನುವುದು' ಎಂದವರೂ ಇದ್ದಾರೆ! ಅಂದರೆ ರಂಬುಟಾನ್ ಹಣ್ಣಿನ ಹೊರ ಮೈಯಲ್ಲಿ ಮುಳ್ಳಿನಂತರಹ ರಚನೆಯಿದೆ. ಹಣ್ಣನ್ನು ಇಬ್ಬಾಗ ಮಾಡಿ ಅದರೊಳಗಿನ ಗುಳವನ್ನು ತಿನ್ನಬೇಕೆಂಬುದು ಬಹುತೇಕರಿಗೆ ಗೊತ್ತಿಲ್ಲ. ಹಾಗಾಗಿ ಕೆಲವೆಡೆ ಚೌಟರು ರಂಬುಟಾನ್ ಹಣ್ಣನ್ನು ತಿನ್ನುವ ಡೆಮೋ ಕೊಡಬೇಕಾಯಿತು.

            ಮಾರುಕಟ್ಟೆ ದೃಷ್ಟಿಯಿಂದ ಪಪ್ಪಾಯಿ ಬೆಳೆದ ಚೌಟರಿಗೆ ಮಂಗಳೂರು ಮಾರುಕಟ್ಟೆ ನಿರಾಶೆ ಮೂಡಿಸಿತು. ಆದರೂ ಕೆಲವೆಡೆ ವ್ಯಾಪಾರ ಕುದುರಿತು. ಈ ವರುಷದಿಂದ ತನ್ನೂರು ಮತ್ತು ಸನಿಹದ ಉಪ್ಪಳ ಮಾರುಕಟ್ಟೆಯಲ್ಲಿ ಪಪ್ಪಾಯಿಗೆ ಬೇಡಿಕೆ ಹೆಚ್ಚಿದೆ. ದೂರದ ಊರಿನಿಂದ ಲಾರಿಯೇರಿ ಪಪ್ಪಾಯಿ ಮಾರುಕಟ್ಟೆಗೆ, ಕ್ರೀಂಪಾರ್ಲರಿಗೆ ಬರುತ್ತದೆ. ಇಲ್ಲಿಗೆ ತಲಪುವಾಗ ಗುಣಮಟ್ಟ ಕೆಟ್ಟಿರುತ್ತದೆ. ಒಂದಷ್ಟು ಕೊಳೆತು ಹೋಗಿರುತ್ತದೆ. ಹಾಗಾಗಿ ಊರಿನ ತಾಜಾ ಪಪ್ಪಾಯಿಯನ್ನು ಅಂಗಡಿಯವರು ಅಪೇಕ್ಷೆ ಪಡುತ್ತಾರೆ. 

             ತಾವೇ ರೂಪಿಸಿದ ಸಾಂಸ್ಕೃತಿಕ ವೇದಿಕೆ 'ಚೌಟರ ಚಾವಡಿ' ಮೂಲಕ ಕಳೆದ ವರುಷ ಹಲಸಿನ 'ಅಡುಗೆಗೆ ಸಿದ್ಧ' (ರೆಡಿ ಟು ಕುಕ್) ಸೊಳೆಗಳನ್ನು ಊರಲ್ಲೇ ಮಾರಾಟ ಮಾಡುವ ಮೊದಲ ಹೆಜ್ಜೆ ಆಶಾದಾಯಕ ದಾರಿ ತೋರಿತು. ಹಳ್ಳಿಯಲ್ಲಿ ಬೇಕಾದಷ್ಟು ಹಲಸು ಇರುವಾಗ ಸೊಳೆಗಳನ್ನು ಯಾರು ಖರೀದಿಸುತ್ತಾರೆ ಎಂಬ ಶಂಕೆ ದೂರವಾಗಿದೆ. ಮೀಯಪದವು ಸರಹದ್ದಿನಲ್ಲಿ ಇನ್ನೂರಕ್ಕೂ ಮಿಕ್ಕಿ ಉದ್ಯೋಗಿಗಳು ಬಾಡಿಗೆ ಮನೆಗಳಲ್ಲಿ ವಾಸ ಮಾಡುತ್ತಾರೆ. ದೊಡ್ಡದಾದ ಶ್ರಮಿಕ ವರ್ಗವಿದೆ. ಮರವಿದ್ದೂ ಮರವೇರದ ಅಸಹಾಯಕತೆ. ಕೃಷಿ ಸಹಾಯಕರ ಅಲಭ್ಯತೆ. ಈ ಎಲ್ಲಾ 'ಸಮಸ್ಯೆ'ಗಳಿಂದಾಗಿ ಕೃಷಿ ಉತ್ಪನ್ನಗಳಿಗೆ ಸ್ಥಳೀಯ ಬೇಡಿಕೆ ಅಧಿಕ. ಎರಡು ಬಾರಿ ಹಲಸಿನ ಹಬ್ಬವನ್ನು ಏರ್ಪಡಿಸಿದ್ದರು. 

           ಜುಲೈ ಮೊದಲ ವಾರ ಮಂಗಳೂರು ಪಡೀಲಿನ ಸರೋಶ್ ಇನ್ಸ್ಟಿಟ್ಯೂಟ್ ಆಪ್ ಹೋಟೆಲ್ ಅಡ್ಮಿನಿಸ್ಟ್ರೇಶನ್ ಶಿಕ್ಷಣ ಸಂಸ್ಥೆಯಲ್ಲಿ ಚೌಟರ ನೇತೃತ್ವದಲ್ಲಿ ಒಂದು ದಿವಸದ ಕಾರ್ಯಾಗಾರ. ಇಲ್ಲಿನ ಮತ್ತು ಇತರ, ಹೋಟೆಲಿನ ಚೆಫ್ಗಳಿಗೆ ಹಲಸಿನ ಖಾದ್ಯಗಳ ಪ್ರಾತ್ಯಕ್ಷಿಕೆ ಮತ್ತು ಅರಿವನ್ನು ಮೂಡಿಸುವ ಪ್ರಯತ್ನ. ಕಾಲೇಜಿನ ಸೂಪಜ್ಞರು ಹಲಸಿನ ಹಣ್ಣನ್ನು ಬಳಸಿ ಪಿಜ್ಜಾ, ಬರ್ಗರ್, ಕಾಕ್ಟೈಲ್, ಮೂಸ್.. ಹೀಗೆ ವಿದೇಶಿ ತಿಂಡಿಗೆ ದೇಸಿ ಸ್ಪರ್ಶ ನೀಡಿದ್ದರು. 

           ಚೌಟರು ಮಾರುಕಟ್ಟೆಯತ್ತ ನಿತ್ಯ ಆಸಕ್ತ. ಎಲ್ಲೆಲ್ಲಿ ಯಾವುದಕ್ಕೆ ಬೇಡಿಕೆಯಿದೆ ಎಂಬ ಅವರ ಮೂರನೇ ಕಣ್ಣು ಸದಾ ಜಾಗೃತ. ತನ್ನ ಯಶಸ್ಸನ್ನು ಸ್ನೇಹಿತರೊಂದಿಗೆ ಹಂಚಿಕೊಂಡು 'ನೀವೂ ನಿಮ್ಮೂರಲ್ಲಿ ಮಾರುಕಟ್ಟೆ ಸೃಷ್ಟಿಸಿ' ಎಂಬ ಅನುಭವವನ್ನು ಹೇಳಲು ಖುಷಿ. ಅವರ ಯೋಚನೆ-ಯೋಜನೆಗಳಿಗೆ ಸ್ಪಂದಿಸುವ ಹಸುರು ಮನಸ್ಸಿನ ಕೃಷಿಕರ ಗಡಣವಿದೆ. 
           ಚೌಟರು ಮಾತ್ರವಲ್ಲ ಇತರ ಕೃಷಿಕರು ಕೂಡಾ ಉತ್ಪನ್ನಗಳನ್ನು ಮಾರುಕಟ್ಟೆ ಮಾಡಲು ಉತ್ಸುಕರಾಗಿದ್ದಾರೆ.
 ಗ್ರಾಹಕರ ಆಸಕ್ತಿಯಂತೆ ಉತ್ಪನ್ನಗಳು ಸ್ಥಳೀಯವಾಗಿಯೇ ಪೂರೈಕೆಯಾದರೆ ಮಾರುಕಟ್ಟೆ ಸುಲಭ. ಎಲ್ಲೆಡೆ ಇಂತಹ ಪ್ರಯತ್ನಗಳಾಗಬೇಕು.  ಮನಸ್ಸು ಮಾಡಿದರೆ ಕಷ್ಟವೇನಲ್ಲ. ಕೃಷಿ ಉತ್ಪನ್ನಗಳ ಮಾರುಕಟ್ಟೆಗೆ ಮೆಗಾ ಸಿಟಿಯೇ ಆಗಬೇಕಿಂದಲ್ಲ. ಇರುನೆಲೆಯಲ್ಲೇ ಮಾರುಕಟ್ಟೆ ಮಾಡಬಹುದು ಎಂಬುದಕ್ಕೆ ಚೌಟರ ತೋಟ ನಿದರ್ಶನ.
(09447193984)


ಬೇಕರಿ ಉತ್ಪನ್ನದಲ್ಲಿ 'ಫನಸ್'

             ದಕ್ಷಿಣ ಕನ್ನಡ ಮೂಲದ ಬಾಲಸುಬ್ರಹ್ಮಣ್ಯ ಭಟ್ (ಬಿ.ಎಸ್.ಭಟ್) ಬೇಕರಿ ಉದ್ಯಮಿ. ಇಪ್ಪತ್ತೆಂಟು ವರುಷದ ಅನುಭವ. ಎಂಭತ್ತು ಮಂದಿ ಸಿಬ್ಬಂದಿಗಳಿರುವ 'ಬೀಕೇಸ್' ಬೇಕರಿ ರಾಜಧಾನಿಯಲ್ಲಿ ಹುಡುಕಿ ಬರುವ ಗ್ರಾಹಕರನ್ನು ಹೊಂದಿದೆ. ಬಿ.ಎಸ್.ಭಟ್ಟರು (60) ಹಲಸು ಪ್ರಿಯ. ಬೇಕರಿ ಐಟಂಗಳಲ್ಲಿ ಹಲಸಿನ (ಫನಸ್) ಹಣ್ಣನ್ನು ಬಳಸಿ ಮಾಡಿದ ತಿಂಡಿಗಳು ಗ್ರಾಹಕ ವಲಯವನ್ನು ಅಕರ್ಶಿಸಿದೆ.

            ಈಚೆಗೆ ಅಡ್ಯನಡ್ಕದಲ್ಲಿ ಜರುಗಿದ ಹಲಸಿನ ಹಬ್ಬದಲ್ಲಿ ಆರು ಬಗೆಯ ಉತ್ಪನ್ನಗಳನ್ನು ಪ್ರದರ್ಶನಕ್ಕಿಟ್ಟಿದ್ದರು. ಬನ್ನಿ.. ನಮ್ಮೂರ ಹಲಸು. ಬಳಸಲು ಕಲಿಯೋಣ. ರುಚಿಯಾದ ತಿಂಡಿ ಮಾಡಿ ತಿನ್ನೋಣ. ಹಿತ್ತಿಲಲ್ಲಿರುವ ಕಲ್ಪವೃಕ್ಷದ ಅನಾದರ ದೂರಮಾಡೋಣ, ಎನ್ನುತ್ತಾ ಉತ್ಪನ್ನ ತಯಾರಿ, ಅದರ ಗುಣಮಟ್ಟ, ರುಚಿಗಳನ್ನು ತಿಳಿಸಿದಷ್ಟೂ ಖುಷಿ.

                ಹಲಸಿನ ಬೀಜದ ಚಟ್ನಿ, ಎಳೆ ಹಲಸಿಂದ (ಗುಜ್ಜೆ) ಪಪ್ಸ್, ಮೊಟ್ಟೆ ಸೇರಿಸದ ಕಪ್ ಕೇಕ್, ಪಾವ್ ಬನ್, ಬ್ರೆಡ್, ಫ್ರೂಟ್ಬ್ರೆಡ್, ಹಲಸಿನ ಹಣ್ಣಿನ ರೋಲ್.. ಆಕರ್ಷಿಸಿತ್ತು. ಕಪ್ ಕೇಕನ್ನು ಸಮಾರಂಭದಲ್ಲಿ ಉಚಿತವಾಗಿ ನೀಡಿ ರುಚಿ ಹತ್ತಿಸಿದ್ದರು. ಪಿಜ್ಜಾ, ಬರ್ಗರ್ಗಳಿಗೂ ಹಲಸನ್ನು ಬಳಸಿದ್ದಾರೆ.

                  ಸಾಮಾನ್ಯವಾಗಿ ಬಟಾಣಿ, ತರಕಾರಿಗಳು ಪಪ್ಸಿನ ಒಳಸುರಿ. ಭಟ್ಟರು ಇದರ ಬದಲಿಗೆ ಹಲಸಿನ ಪಲ್ಯವನ್ನು ಹೂರಣವಾಗಿಟ್ಟು ಪಪ್ಸ್ ತಯಾರಿಸಿದರು. ಉತ್ತಮ ಪ್ರತಿಕ್ರಿಯೆ. ಪಪ್ಸ್ ಒಲವಿನ ಗ್ರಾಹಕರು ಹೆಚ್ಚಾಗುತ್ತಿದ್ದಾರೆ. ತರಕಾರಿ ಬೆಲೆಯು ಏರುಗತಿಯಲ್ಲಿದೆ. ಪರ್ಯಾಯವಾಗಿ ಪಪ್ಸಿಗೆ ಹಲಸು ಬಳಸುವುದರಿಂದ ಉತ್ಪಾದನಾ ವೆಚ್ಚ ಕಡಿಮೆ. ಅಲ್ಲದೆ ಹಲಸು ಪೂರ್ತಿ ನಿರ್ವಿಷ ತರಕಾರಿ. ಆರೋಗ್ಯಕ್ಕೂ ಹಾನಿಯಿಲ್ಲ.

                  ಹಲಸಿನ ಹಣ್ಣಿನಿಂದ ಬೇಕರಿ ಉತ್ಪನ್ನಗಳನ್ನು ಮಾಡುವ ಕಲ್ಪನೆ ಬಂದುದಾದರೂ ಹೇಗೆ? ಭಟ್ ಹೇಳುತ್ತಾರೆ, ಎರಡು ವರುಷದ ಹಿಂದೆ ತಮಿಳುನಾಡಿನ ಪನ್ರುತ್ತಿಗೆ ಹೋಗಿದ್ದೆ. ಅದು ಹಲಸಿನ ಕಾಶಿ. ಹಿಂದಿರುಗುವಾಗ ಎರಡು ಹಲಸನ ಹಣ್ಣು ತಂದಿದ್ದೆ. ಬೇಕರಿಯ ಚೆಫ್ಗೆ ನೀಡಿ ಜ್ಯಾಮ್, ಕ್ರೊಸೆಂಟ್, ಬನ್ಸ್.. ತಯಾರಿಸಿದೆವು. ಹಲಸಿನ ಬೀಜವನ್ನು ಹುಡಿ ಮಾಡಿ ಕಟ್ಲೆಟ್ಟಿಗೆ ಸೇರಿಸಿದಾಗ ಪ್ರತ್ಯೇಕ ರುಚಿ. ಇದು ಗ್ರಾಹಕರ ಒಲವು ಗಳಿಸಬಹುದು ಎಂದು ಮನದಟ್ಟಾಯಿತು.

                ನಾವು ಅಮ್ಮಂದಿರ ದಿನ, ಅಪ್ಪಂದಿರ ದಿನ, ಪ್ರೇಮಿಗಳ ದಿನ ಆಚರಿಸುತ್ತೇವೆ. ಈ ಸಾಲಿಗೆ 'ಹಲಸು ದಿನ ಯಾ ಜ್ಯಾಕ್ ಡೇ' ಸೇರಬೇಕು - 'ಬೀಕೇಸ್' ಬೇಕರಿಯ ನಿರ್ವಾಹಕ ನಿರ್ದೇಶಕ ಬಿ.ಎಸ್.ಭಟ್ಟರ ಆಶಯ. ಡಯಟ್ ರಸ್ಕ್, ಡಯಟ್ ಬ್ರೆಡ್, ವಿಟಾಮಿನ್ಯುಕ್ತ ವಿಟ್ರಸ್ಕ್.. ಮೊದಲಾದ ವಿಶೇಷ ಉತ್ಪನ್ನಗಳ ತಯಾರಿಗೆ ಬೀಕೇಸ್ ಖ್ಯಾತಿ.

                ಭಟ್ಟರಿಗೆ ಹಲಸಿನ ಹಣ್ಣು ಬಳಸಿ ಉತ್ಪನ್ನಗಳನ್ನು ತಯಾರಿಸುವ ಉಮೇದಿದೆ. ಇನ್ನೂರು ಸಾಪ್ಟ್ವೇರ್ ಕಂಪೆನಿಗಳಿಗೆ ಬೇಕರಿ ಉತ್ಪನ್ನಗಳನ್ನು ಪರಿಚಯಿಸುವ ಬೀಕೇಸ್ ಮೆನುವಿಗೆ ಹಲಸಿನ ಉತ್ಪನ್ನಗಳು ಸೇರುವ ದಿವಸಗಳು ಹತ್ತಿರವಿದೆ. ಆದರೆ ಸಮರ್ಪಕ ಗುಣಮಟ್ಟದ ಕಚ್ಚಾವಸ್ತು ಸಿಗಬೇಕಷ್ಟೇ.


bhat@bakeryindia.com
(080) 23481512
Wednesday, July 17, 2013

ಗುಡ್ಡದ ನೆತ್ತಿ ತಂಪಾಯಿತು, ಹಸಿರು ಉಸಿರಾಡಿತು

           ಬಂಟ್ವಾಳ ತಾಲೂಕಿನ ಅಳಿಕೆಗಂಟಿದ ಮಾಯಿಲರಕೋಟೆ ಇತಿಹಾಸ ಉಲ್ಲೇಖವಿರುವ ಗುಡ್ಡ. ಇದರ ಉತ್ತರ ಭಾಗದ ತಪ್ಪಲಿನಲ್ಲಿ ಮಿತ್ತಳಿಕೆ ಊರು. ದಕ್ಷಿಣದಲ್ಲಿ ಮುಳಿಯದ ಅಡಿಕೆ, ಭತ್ತದ ಕೃಷಿಯ ಪ್ರದೇಶಗಳು. ಬೇಸಿಗೆಯಲ್ಲಿ ನೀರಿಲ್ಲದೆ ಗಿಡಗಳೆಲ್ಲಾ ಕಂಗಾಲಾಗುತ್ತಿರುವ ದಿವಸಗಳಿದ್ದುವು.

              ಮಾಯಿಲರಕೋಟೆಗೆ ತಾಗಿದ ಚಿಕ್ಕ ಗುಡ್ಡದಲ್ಲಿ ಮರಗಳು ವಿರಳ. ಹನ್ನೆರಡು ಎಕ್ರೆ ಜಾಗವು ಅಮೃತಧಾರಾ ಗೋಶಾಲೆಯ ಸುಪರ್ದಿಯಲ್ಲಿದೆ. ಪೂರ್ತಿ ಕುರುಚಲು ಗಿಡಗಳು. ತೇವವನ್ನು ಹಿಡಿದಿಡುವ ಶಕ್ತಿಯಿಲ್ಲದ ಮಣ್ಣು. ಮಳೆನೀರಿನೊಂದಿಗೆ ಮೇಲ್ಮಣ್ಣು ಕೊಚ್ಚಿಹೋಗಿ ಮಣ್ಣಿನ ಫಲವತ್ತತೆಯೂ ನಾಶವಾಗುತ್ತಿತ್ತು. 

           2005ರಲ್ಲಿ ಸ್ಥಳೀಯ ಮುಳಿಯ ತಿಮ್ಮಪ್ಪಯ್ಯ ಸ್ಮಾರಕ ವಿದ್ಯಾಲಯದ ವಿದ್ಯಾರ್ಥಿಗಳಿಂದ ಕಾಡುಗಿಡಗಳನ್ನು ನೆಡುವ ವನಮಹೋತ್ಸವ. ಗುಡ್ಡಕ್ಕೆ ಹಸಿರು ಹೊದೆಸಲು ನಾಂದಿ. ಉಪನ್ಯಾಸಕ ವದ್ವ ವೆಂಕಟ್ರಮಣ ಭಟ್ಟರ ಸಾರಥ್ಯದಲ್ಲಿ ವಿಟ್ಲ ಜ್ಯೂನಿಯರ್ ಕಾಲೇಜಿನ ಎನ್.ಎಸ್.ಎಸ್. ವಿದ್ಯಾರ್ಥಿಗಳಿಂದ ಗುಡ್ಡದ ನೆತ್ತಿಯ ಮೇಲೆ ಮದಕ ನಿರ್ಮಾಣ. ಜತೆಜತೆಗೆ ಗೇರು ಸಸಿಗಳ ನಾಟಿ.
              ಹರಿದು ಹೋಗುವ ಮಳೆ ನೀರನ್ನು ಹಿಡಿದಿಟ್ಟುಕೊಳ್ಳುವುದು ಮೊದಲಾದ್ಯತೆ. ಮದಕದಲ್ಲಿ ಸಣ್ಣಪ್ರಮಾಣದಲ್ಲಿ ನೀರು ಸಂಗ್ರಹವಾಗುತ್ತಿತ್ತು. ಇದನ್ನು ಹಿರಿದಾಗಿಸುವತ್ತ ಲಕ್ಷ್ಯ. 2006ರಲ್ಲಿ ಬಂಟ್ವಾಳ ರೋಟರಿ ಕ್ಲಬ್ಬಿನ ಆರ್ಥಿಕ ನೆರವಿನೊಂದಿಗೆ ಮದಕವು ಕೆರೆಯಾಗಿ ರೂಪಾಂತರವಾಯಿತು. ಐವತ್ತಡಿ ಅಗಲ ಮತ್ತು ಉದ್ದ, ಹತ್ತಡಿ ಆಳದ ಕೆರೆಯು ಸುಮಾರು ಏಳು ಲಕ್ಷ ನೀರನ್ನು ಹಿಡಿದಿಡುತ್ತದೆ.

                   ಆ ವರುಷದ ಮಳೆಗಾಲದಲ್ಲಿ ನೀರು ತುಂಬಿತು. ಮಳೆ ಅಧಿಕವಾದಾಗ ಕೆರೆಯಿಂದ ನೀರು ತುಂಬಿ ಹೊರಗೆ ಹರಿಯಿತು. ನೀರು ಇಂಗಲಿಲ್ಲ. ಮುಂದಿನ ಮಳೆಗಾಲಕ್ಕಾಗುವಾಗ ಎನ್.ಎಸ್.ಎಸ್.ವಿದ್ಯಾರ್ಥಿಗಳು ಈಗಿರುವ ಕೆರೆಗಿಂತ ನೂರು ಮೀಟರ್ ಕೆಳಗಡೆ ಇನ್ನೊಂದು ಕೆರೆಯನ್ನು ನಿರ್ಮಾಣ ಮಾಡಿದರು. ದೊಡ್ಡದರಲ್ಲಿ ಹೆಚ್ಚುವರಿಯಾದ ನೀರು ಮತ್ತು ಮಣ್ಣಿನಡಿಯಿಂದ ಹೊರಗೆ ತೆವಳುವ ನೀರನ್ನು ಎರಡನೇ ಕೆರೆಯಲ್ಲಿ ಹಿಡಿದಿಟ್ಟರು.

                 ಈ ಕೆರೆಯ ಕೆಳಭಾಗದಲ್ಲಿ ಸಹಜವಾಗಿ ಮಳೆಗಾಲದಲ್ಲಿ ಚಿಕ್ಕ ಪಳ್ಳ ನಿರ್ಮಾಣವಾಗುತ್ತಿತ್ತು. ಜಲಾನಯನ ಇಲಾಖೆಯ ನೆರವಿನಿಂದ ಮತ್ತೊಂದು ಕೆರೆಯ ರಚನೆ. ಸರಣಿ ಕೆರೆಗಳಿಂದಾಗಿ ನೀರು ಹರಿದು ಹೋಗುವುದು ನಿಂತಿತು. ನೀರಿನೊಂದಿಗೆ ಮಣ್ಣು ಕೊಚ್ಚಿಹೋಗುವುದಕ್ಕೂ ತಡೆಯಾಯಿತು. ಒರತೆಯ ಪ್ರಮಾಣ ಹೆಚ್ಚಾಯಿತು. ಕಳೆದ ನಾಲ್ಕೈದು ವರುಷಗಳಿಂದ ಎಷ್ಟೇ ಮಳೆ ಬರಲಿ, ದೊಡ್ಡ ಕೆರೆಯಲ್ಲಿ ನೀರು ಹೆಚ್ಚಾಗಿ ಹೊರಗೆ ಹರಿದು ಹೋಗದೆ ಇಂಗುತ್ತದೆ.

               ಗುಡ್ಡದ ತಪ್ಪಲಿನಲ್ಲಿ ಹೇಮಾವತಿ ಅಮ್ಮನವರ ತೋಟ. ಮೊದಲು ಬೇಸಿಗೆಯಲ್ಲಿ ತೋಟದ ಅಡಿಕೆ ಗಿಡಗಳು ನೀರಿನ ಅಭಾವದಿಂದಾಗಿ ಹಳದಿಯಾಗುತ್ತಿದ್ದವು. ಯಾವಾಗ ಗುಡ್ಡದ ನೆತ್ತಿಯಲ್ಲಿ ನೀರಿಂಗಿಸುವ ಪ್ರಕ್ರಿಯೆ ಶುರುವಾಯಿತೋ, ಅಲ್ಲಿಂದ ಎರಡೇ ವರುಷದಲ್ಲಿ ತೇವಾಂಶ ಹೆಚ್ಚಾಯಿತು. ಬೇಸಿಗೆಯಲ್ಲಿ ಗಿಡಗಳು ಹಳದಿ ವರ್ಣಕ್ಕೆ ತಿರುಗುವುದು ನಿಂತಿತು, ಎನ್ನುತ್ತಾರೆ.

               ಇವರ ತೋಟದ ಪಕ್ಕದಲ್ಲಿ ಕೆರೆಯಿದೆ. ಸದಾ ಒರತೆ. ಬೇಸಿಗೆಯಲ್ಲೂ ಶುದ್ಧ ನೀರು. ಅಡಿಕೆ ತೋಟ, ಗೋಶಾಲೆ, ಹುಲ್ಲುಗಾವಲಿಗೆ ಬೇಕಾದಷ್ಟು ನೀರಿನ ಸಂಪನ್ಮೂಲ. ನೀರಿಂಗಿಸುವ ಕೆಲಸದಿಂದಾಗಿ ಸುಮಾರು ಐವತ್ತು ಎಕ್ರೆ ಕೃಷಿ ಭೂಮಿಗೆ ಪ್ರಯೋಜನವಾಗಿದೆ. ಅಂತರ್ಜಲ ವೃದ್ಧಿಯಾಗಿದೆ. ಮಣ್ಣಿನಲ್ಲಿ ತೇವದ ಅಂಶ ಗಣನೀಯವಾಗಿ ಏರಿರುವುದು ಕಾಣಬಹುದು, ಎಂದು ಒಟ್ಟೂ ಫಲಿತಾಂಶವನ್ನು ಕಟ್ಟಿಕೊಡುತ್ತಾರೆ, ಜಲಯೋಧ ಮುಳಿಯ ವೆಂಕಟಕೃಷ್ಣ ಶರ್ಮ.

                  ಗುಡ್ಡದ ಮಣ್ಣು ಗೇರು ಕೃಷಿಗೆ ಸೂಕ್ತ. ಗೇರು ಗಿಡಗಳ ನಾಟಿ ನಡೆದಿದೆ. ಕೆಲವು ಫಲ ನೀಡುತ್ತಿದೆ. ಮಾವು, ಹಲಸು, ಸಾಗುವಾನಿ ಗಿಡ ನೆಟ್ಟರೂ ಗಿಡಗಳ ಬೆಳವಣಿಗೆಯಿಲ್ಲ. ಮುಳಿಯ ಶಾಲಾ ವಿದ್ಯಾರ್ಥಿಗಳು ಕಿರಾಲ್ ಬೋಗಿ ಗಿಡಗಳನ್ನು ನೆಟ್ಟಿದ್ದು ಸದೃಢವಾಗಿ ಬೆಳೆದಿವೆ. ಈ ಮಣ್ಣಿಗೆ ಕಿರಾಲ್ಬೋಗಿ ಕಾಡು ಗಿಡಗಳು ಸೂಕ್ತ. ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಕೆಲಸಗಳಿಗೆ ಕಿರಾಲ್ಬೋಗಿ ಮರಗಳನ್ನು ಬಳಸಲಾಗಿತ್ತು. ಮರ ಕಡಿದುದಕ್ಕಾಗಿ ವಿಟ್ಲ ಸೀಮೆಯಲ್ಲಿ ಸುಮಾರು ಐದುಸಾವಿರ ಕಿರಾಲ್ಬೋಗಿ ಗಿಡಗಳನ್ನು ನೆಡುವ ಕಾರ್ಯವನ್ನು ದೇವಳದ ಆಡಳಿತವು ಇಲಾಖೆಯ ಸಹಕಾರದಿಂದ ನಿರ್ವಹಿಸಿದೆ ಎಂಬ ಮಾಹಿತಿಯನ್ನು ಶರ್ಮ ನೀಡುತ್ತಾರೆ. 

                     ಕಿರಾಲ್ಬೋಗಿ ಬರವನ್ನು ಎದುರಿಸುವ ಶಕ್ತಿ ಹೊಂದಿದ ಮರ. ಒಂದು ವರುಷ ನೀರಿಗೆ ತೊಂದರೆಯಾದರೂ ತಾಳಿಕೊಳ್ಳುವ ಸಾಮಥ್ರ್ಯವಿದೆ. ಹಾಗಾಗಿ ಗುಡ್ಡದಲ್ಲಿನ್ನು ಕಿರಾಲ್ಬೋಗಿಗೆ ಮಣೆ.  ಕಾಡುಹಂದಿಯ ಸಂಚಾರ ಹೊರತು ಪಡಿಸಿ ಈ ಗುಡ್ಡಕ್ಕೆ ಮಾನವನ ಹಸ್ತಕ್ಷೇಪವಿಲ್ಲ. ಕತ್ತಿಯ ಕುತ್ತಿಲ್ಲ. ಗರಗಸದ ಸದ್ದಿಲ್ಲ. ಆರಂಭದ ದಿವಸಗಳಲ್ಲಿ ನೆಟ್ಟ ಅಕೇಶಿಯಾ ಮರಗಳನ್ನು ತೆಗೆದು ಅಲ್ಲೆಲ್ಲಾ ಕಿರಾಲ್ಬೋಗಿಯನ್ನು ನೆಡುವ ಯೋಚನೆ, ಯೋಜನೆ ರೂಪಿತವಾಗುತ್ತಿದೆ.

                  ಗುಡ್ಡದ ನೆತ್ತಿ ತಂಪಾದರೆ ಕೆಳಗಿನ ಕೃಷಿ, ಗದ್ದೆ, ಕುಡಿ ನೀರು ಎಲ್ಲವೂ ಸಮೃದ್ಧಿಯಾಗುತ್ತದೆ ಎನ್ನುವುದಕ್ಕೆ ಮಾಯಿಲರಕೋಟೆಯ ನೀರಿನ ಕೆಲಸಗಳೇ ಸಾಕ್ಷಿ. ಈ ಗುಡ್ಡದಲ್ಲಿ ಬಿದ್ದ ಮಳೆನೀರು ಭೂಒಡಲಿಗೆ ಪುನಃ ಸೇರಿಕೊಳ್ಳುತ್ತವೆ. ಇದಕ್ಕೇನೂ ಲಕ್ಷ, ಕೋಟಿ ರೂಪಾಯಿಗಳು ವ್ಯಯವಾಗಿಲ್ಲ.

                     ದೇವಳದ ಕಾಮಗಾರಿಗೆ ಕಿರಾಲ್ಬೋಗಿ ಮರ ಕಡಿದುದಕ್ಕಾಗಿ ಸಾವಿರಗಟ್ಟಲೆ ಗಿಡಗಳನ್ನು ನೆಡುವ ಮನಸ್ಸು ರೂಪಿತವಾಗಿರುವುದು ಆದರ್ಶ. ದೇವಸ್ಥಾನ, ಭೂತಸ್ಥಾನ, ಭಜನಾ ಮಂದಿರ.. ಹೀಗೆ ಶ್ರದ್ಧಾಕೇಂದ್ರಗಳ ರಚನೆಗಳ ಸಂದರ್ಭಗಳಲ್ಲಿ ಕಾಡು ಬೆಳೆಸುವ ಉತ್ತಮ ಮನಸ್ಸುಗಳನ್ನು ರೂಪಿಸಬೇಕಾದುದು ಭವಿಷ್ಯ ಭಾರತದ ಅಗತ್ಯ.

Saturday, July 13, 2013

ಬಂದಿದೆ, ಹಲಸಿನ 'ಸಸ್ಯ ಮಾಂಸ'!

 
     
                 ಶಾಖಾಹಾರಿಗಳಿಗೊಂದು ಸಿಹಿ ಸುದ್ದಿ! ಬಂದಿದೆ, ಸಸ್ಯ ಮಾಂಸ. ಇದು ಜಾಹೀರಾತು ವಾಕ್ಯಗಳಲ್ಲ. ಮಾಂಸಾಹಾರದಲ್ಲಿ ಬಳಸುವ ಮಸಾಲೆ ಸೇರಿಸಿದ ಆಹಾರವನ್ನು ತಿನ್ನಬೇಕಿತ್ತು, ಅದರೊಂದಿಗೆ ಮಾಂಸದ ತುಂಡುಗಳಿವೆಯಲ್ಲಾ.. ಕೈ ಕೈ ಹಿಸುಕಬೇಕಾಗಿಲ್ಲ. ಇನ್ನು 'ಸಸ್ಯ ಮಾಂಸ' ತಿಂದು 'ಅಪ್ಪಟ ಸಸ್ಯಾಹಾರಿ'ಗಳಾಗಿ ಉಳಿಯಬಹುದು!

                  ವಿದರ್ಭದ ರೆಸ್ಟುರಾಗಳಲ್ಲಿ ಹಲಸಿನ 'ಸಸ್ಯ ಮಾಂಸ' ಜನಪ್ರಿಯವಾಗುತ್ತಿದೆ. ಆಹಾರದಲ್ಲಿ ಮಾಂಸದ ತುಂಡುಗಳ ಬದಲಿಗೆ ಹಲಸಿನ ಗುಜ್ಜೆಯನ್ನು ಬಳಸುತ್ತಾರಷ್ಟೇ. ಗುಜ್ಜೆಯ ತುಂಡುಗಳು ಬೆಂದಾಗ ಥೇಟ್ ಮಾಂಸದಂತೆ ಕಾಣುತ್ತದಂತೆ. ಅಮೆರಿಕಾ ಮತ್ತು ಇತರ ಪಾಶ್ಚಿಮಾತ್ಯ ದೇಶಗಳಲ್ಲಿ ಎಳೆಹಲಸು 'ಸಸ್ಯಾಹಾರಿ ಮಾಂಸ'ವಾಗಿ ಒಲವು ಪಡೆಯುತ್ತಿದೆ. ಡಮ್ಮಿ ಮೀಟ್ (ನಕಲು ಮಾಂಸ) ಎನ್ನುವುದು ಇನ್ನೊಂದು ಹೆಸರು.

                  ಗುಜ್ಜೆಯ ಬಣ್ಣ, ನೋಟ, ರಚನೆ ಮತ್ತು ಮೃದುತ್ವದಲ್ಲಿ ಮಾಂಸದ ಹೋಲಿಕೆ. ಉಪ್ಪು, ಖಾರ, ಮಸಾಲೆಯೊಂದಿಗೆ ಮಾಂಸವು ಬೇಯುವಾಗ ಇವೆಲ್ಲಾ ಹೀರುವಂತೆ ಗುಜ್ಜೆಯೂ ಎಲ್ಲವನ್ನೂ ಹೀರುವ ಸಾಮಥ್ರ್ಯ ಹೊಂದಿದೆ. ವಿದರ್ಭದ ಆಯ್ದ ಹೋಟೆಲುಗಳಲ್ಲಿ ಡಮ್ಮಿ ಮೀಟ್ ಬಯಸಿ ಬರುವ ಗ್ರಾಹಕರು ಹೆಚ್ಚುತ್ತಿದ್ದಾರೆ. ನಾಗಪುರ ಪಟ್ಟಣದಲ್ಲೊಂದರಲ್ಲೇ ನಕಲಿ ಮಾಂಸವನ್ನು ನೀಡುವ ನಲವತ್ತಕ್ಕೂ ಮಿಕ್ಕಿ ರೆಸ್ಟೋರೆಂಟ್ಗಳಿವೆ. ಉತ್ತರದ ಧಾಬಾ, ಸಸ್ಯಾಹಾರಿ-ಮಾಂಸಾಹಾರಿ ಹೋಟೆಲ್ಗಳಲ್ಲಿ ಸಸ್ಯಮಾಂಶದ 'ಕರಿ' ಜನಪ್ರಿಯ.

                   ಈಚೆಗೆ ಹಿರಿಯ ಪತ್ರಕರ್ತ ಶ್ರೀ ಪಡ್ರೆಯವರು ಹಲಸಿನ ಅಧ್ಯಯನಕ್ಕಾಗಿ ವಿದರ್ಭಕ್ಕೆ ಭೇಟಿ ನೀಡಿದ್ದರು. 'ಅಲ್ಲಿನ ಹೋಟೆಲುಗಳ ಮೆನುವಿನಲ್ಲಿ ಹಲಸಿನ ಡಮ್ಮಿ ಮೀಟ್ ಸೇರಿದೆ. ಒಂದು ಪ್ಲೇಟಿಗೆ ನೂರು ರೂಪಾಯಿ. ಅದರಲ್ಲಿ ಕೇವಲ ಐದು ಗುಜ್ಜೆ ತುಂಡುಗಳಿದ್ದುವು. ಹೃದಯ ಖಾಯಿಲೆ ಮತ್ತು ಮಧುಮೇಹ ಇದ್ದವರಿಗೆ ಮಾಂಸವನ್ನು ತಿನ್ನದಂತೆ ವೈದ್ಯರು ಪಥ್ಯ ಸೂಚಿಸುತ್ತಾರೆ. ಇಂತಹವರು ಗುಜ್ಜೆಯ ನಕಲಿ ಮಾಂಸ ಇಷ್ಟಪಟ್ಟು ತಿನ್ನುತ್ತಾರೆ' ಎನ್ನುತ್ತಾರೆ.

                ಇವರೊಂದಿಗೆ ಪ್ರವಾಸ ಮಾಡಿದ ಕೇರಳ ವಯನಾಡಿನ ಸುನೀಶ್ ವಿದರ್ಭದಿಂದ ಮರಳಿದ ಬಳಿಕ ಡಮ್ಮಿ ಮೀಟ್ ಮಾಡಿದ್ದರು. ಸ್ನೇಹಿತರಿಗೆ ಹಂಚಿದ್ದರು. ಅಲ್ಲಿನ ಪಂಚತಾರಾ ಹೋಟೆಲಿನವರಿಗೂ ರುಚಿ ತೋರಿಸಲು ಉತ್ಸುಕರಾಗಿದ್ದಾರೆ. ಸುನೀಶ್ ಬತ್ತಳಿಗೆಯಲ್ಲಿ ಹಲಸಿನ ಮೆನುಗಳ ರಾಶಿಯಿದೆ. ಈಗ 'ಡಮ್ಮಿ ಮೀಟ್' ಸೇರ್ಪಡೆ. ಸಸ್ಯಮಾಂಸವಾಗುವ ಹಲಸು ವಿವಿಧ ಖಾದ್ಯಗಳ ಮೂಲಕ ಮೌಲ್ಯವರ್ಧಿಸಿಕೊಳ್ಳುತ್ತಿದೆ.

               ಅರಿಶಿನ ಎಲೆ, ತೇಗದ ಎಲೆ ಬಳಸಿ ಕೊಟ್ಟಿಗೆ, ಕಡುಬು ಮಾಡುವುದು ಕರಾವಳಿಯಲ್ಲಿ ರೂಢಿ. ಅಕ್ಕಿಹಿಟ್ಟು, ಬೆಲ್ಲ, ತರಕಾರಿ, ಹಲಸಿನ ಹಣ್ಣು.. ಇದರೊಳಗಿನ ಹೂರಣ. ಮೆಕ್ಸಿಕೋದಲ್ಲಿ ಇಂತಹುದೇ ಖಾದ್ಯಕ್ಕೆ 'ತಮಾಲೆ' ಎನ್ನುತ್ತಾರೆ. ಇದರೊಳಗಿರುವುದು ವಿವಿಧ ಮಾಂಸಗಳು. ಇದೊಂದು ದೊಡ್ಡ ಉದ್ಯಮ. ಕಾನ್ಸಾಸಿನ ಸ್ಟೆಫಾನಿ-ಶಾನ್ ದಂಪತಿಗಳು ಕಳೆದ ವರುಷ ತಮಾಲೆಯೊಳಗೆ ಮಾಂಸದ ಬದಲು ಹಲಸಿನ ಗುಜ್ಜೆಯನ್ನು ಬಳಸಿದ್ದು ಕ್ಲಿಕ್ ಆಗಿತ್ತು. ಎಲ್ಲಿಯವರೆಗೆ ಜ್ಯಾಕ್ಫ್ರುಟ್ ತಮಾಲೆ ಜನಪ್ರಿಯವಾಗಿದೆಯೆಂದರೆ ಜಾಲತಾಣಗಳ ಮೂಲಕ ಪೂರೈಕೆಯ ಆದೇಶ ಬರುತ್ತಿದೆ.

             'ಸೆಲಿಯಾಕ್ ಕಾಯಿಲೆ' ಇರುವ ಮಂದಿಗೆ ಗೋಧಿ, ಮೈದಾ ತಿಂಡಿಗಳು ವಜ್ರ್ಯ. ಈ ತಿಂಡಿಯಲ್ಲಿರುವ 'ಗ್ಲುಟೆನ್' ತೊಂದರೆ ನೀಡುವ ಘಟಕ. ಗುಟೆನ್ಫ್ರೀ ಆಹಾರ ಸೇವನೆಯಿಂದ ಮಾತ್ರ ಸೆಲಿಯಾಕನ್ನು ನಿಯಂತ್ರಿಸಬಹುದಷ್ಟೇ. ಅಮೆರಿಕಾದಲ್ಲಿ ಹಲಸಿನ ಬೀಜದ ಹುಡಿಯಿಂದ ತಯಾರಿಸಿದ ಉತ್ಪನ್ನಗಳು ಗ್ಲುಟೇನ್ಮುಕ್ತ ಎನ್ನುವುದು ಪ್ರಾಯೋಗಿಕವಾಗಿ ಕಂಡು ಬಂದ ಅಂಶ. ಇತರ ಗ್ಲುಟೇನ್ಮುಕ್ತ ಹುಡಿಗಳೊಂದಿಗೆ ಹೋಲಿಸಿದಾಗ ಹಲಸಿನ ಬೀಜನ ಹುಡಿಯು ಉತ್ತೇಜಿತ ಫಲಿತಾಂಶ ನೀಡಿರುವುದು ಅಮೆರಿಕಾದ ಹಲಸು ಪ್ರಿಯರಿಗೆ ಖುಷಿ ನೀಡಿದೆ.

               ಫಿಲಿಪ್ಪೈನ್ಸಿನ ಆಸ್ಪತ್ರೆಯೊಂದು ಐದು ವರುಷಗಳಿಂದ ರೋಗಿಗಳಿಗೆ ಹಲಸಿನ ಹಣ್ಣನ್ನು ನೀಡುತ್ತಿದೆ. ಇದರಲ್ಲಿರುವ ಉತ್ತಮ ಪೌಷ್ಟಿಕಾಂಶ ಮತ್ತು ನಾರು ಇರುವುದರಿಂದ ರೋಗಿಗಳ ಆಹಾರದಲ್ಲಿ ಬಳಸಿಕೊಳ್ಳುತ್ತಿದ್ದಾರೆ. ಹಲಸಿನ ಹಣ್ಣಿನಲ್ಲಿ ಪೊಟ್ಯಾಸಿಯಂ, ಸಿ ಜೀವಾತು, ಮ್ಯಾಂಗನೀಸ್ ಅಧಿಕ. ಕೊಲೆಸ್ಟರಾಲ್, ಸೋಡಿಯಂ ಮತ್ತು ಕೊಬ್ಬು ಕಡಿಮೆ. ಹೀಗಾಗಿ ರೋಗಿಗಳ ಆರೋಗ್ಯವನ್ನು ಕಾಯುವುದೆಂದು ವೈದ್ಯರ ಅಂಬೋಣ. ಫಿಲಿಪ್ಪೈನ್ಸ್ ಮಂದಿಗೆ ಹಲಸಿನ ಹಣ್ಣು ಪ್ರಿಯ. ಹಣ್ಣನ್ನು ತಿನ್ನುವುದು ಮಾತ್ರವಲ್ಲ, ಅದರ ಮೌಲ್ಯವರ್ಧನೆಯಲ್ಲೂ ಅವರು ಮುಂದು.

               ದೂರ ಯಾಕೆ, ನಮ್ಮ ದೇಶದಲ್ಲೇ ಎಷ್ಟೊಂದು ಉತ್ಪನ್ನಗಳು. ತುಳುವ (ಬಿಳುವ) ಹಲಸಿನಿಂದ ಪಲ್ಪ್ ತಯಾರಿಸುವ 'ಕೊನಿಮ್ ಸ್ಫೂರ್ತಿ' ಎಂಬ ಉದ್ದಿಮೆಯು ಮಹಾರಾಷ್ಟ್ರದ ಕುಡಾಲ್ ಎಂಬಲ್ಲಿದೆ. ತುಳುವ ಹಲಸಿಲ್ಲಿ 'ಬಕರ್’ , ಬಕ್ಕೆಯು 'ಕಾಪಾ' ಎನ್ನುತ್ತಾರೆ. ಹಣ್ಣಿನ ಪಲ್ಪನ್ನು ಬಳಸಿ ಮುಳುಕ, ಮಿಲ್ಕ್ ಶೇಕ್, ಐಸ್ಕ್ರೀಂ, ಟಾಫಿ, ಚಾಕೊಲೇಟ್, ಫ್ರುಟ್ರೋಲ್, ಸಿಹಿ ಇಡ್ಲಿ.. ಖಾದ್ಯಗಳನ್ನು ತಯಾರಿಸಬಹುದು.

                 ಮಹರಾಷ್ಟ್ರದ ರತ್ನಾಗಿರಿ ಜಿಲ್ಲೆಯ ಕರಾವಳಿಯ ಮಂದಿಗೆ ಧಾರ್ಮಿಕ ಆಚರಣೆಯಲ್ಲಿ ನಂಬುಗೆ. ಕೆಲವು ಶುಭ ದಿವಸಗಳಂದು ಉಪವಾಸದಲ್ಲಿರುವುದು ಆಚಾರ. ಹಲಸಿನ ಬೀಜದ ಹುಡಿಯನ್ನು ಬಳಸಿ ಮಾಡಿದ 'ಉಪವಾಸ್ ಭಾಜನ್' ಹಿಟ್ಟು ಉಪವಾಸದಂದು ಬಳಸಲು ಯೋಗ್ಯ. ಸಬ್ಬಕ್ಕಿ ಮತ್ತು ಜೀರಿಗೆ ಇದರೊಂದಿಗಿರುವ ಒಳಸುರಿ. ಹಿಟ್ಟಿಗೆ ಮಜ್ಜಿಗೆ, ಉಪ್ಪು ಸೇರಿಸಿ ಉಪ್ಪಿಟ್ಟಿನಂತಹ ಖಾದ್ಯ ತಯಾರಿಸುತ್ತಾರೆ. ಇವೆಲ್ಲಾ ಮನೆಮಟ್ಟದಲ್ಲಿ ಬಳಕೆಯಾಗುತ್ತಿದ್ದು, ಜನರ ಒಲವು ಗಳಿಸ ಹತ್ತಿದೆ.

           ಮಹಾರಾಷ್ಟ್ರದ ಇನ್ನೊಂದು ಉತ್ಪನ್ನ 'ಹಲಸಿನ ಹಣ್ಣಿನ ಟಾಫಿ'. ಹಣ್ಣಿನ ಪಲ್ಪ್, ಸಕ್ಕರೆ ಮತ್ತು ದ್ರವರೂಪದ ಗ್ಲೂಕೋಸ್ ಒಳಸುರಿ. ವರುಷಕ್ಕೆ ಅರುವತ್ತು ಸಾವಿರ ಟಾಫಿ ಮಾರಾಟ! ಒಂದು ಟಾಫಿಗೆ ಎಂಟು ರೂಪಾಯಿ ಬೆಲೆ. ಮೂರು ತಿಂಗಳ ತಾಳಿಕೆ. ಏಳು ಸೆಂಟಿಮೀಟರ್ ಉದ್ದ, ಮೂರು ಸೆಂಟಿಮೀಟರ್ ಅಗಲದ ಟಾಫಿಗೆ ಅಲ್ಯೂಮಿನಿಯಂ ಫಾಯಿಲಿನ ಸುರಕ್ಷಿತ ಅಂಗಿ. ಪುಣೆ, ಗೋವಾ ಮುಂಬಯಿ, ಗುಜರಾತಿನಲ್ಲಿ ಟಾಫಿಗೆ ದೊಡ್ಡ ಗ್ರಾಹಕರು.

              ದೇಸಿ, ವಿದೇಶಗಳಲ್ಲಿ ಹಲಸಿನ ಬಳಕೆ ಮತ್ತು ಒಲವಿನ ಹಿನ್ನೆಲೆಯಲ್ಲಿ, ಹಲಸಿನ ಬೆಳೆಗಾರರ ನಡುವೆ, ದೇಶಗಳ ನಡುವೆ ವಿಚಾರ ವಿನಿಮಯ ಮತ್ತು ನೆಟ್ ವರ್ಕಿಂಗ್ ಆಗಬೇಕು. ಹಲಸಿನ ಸಂಶೋಧನೆಗೆ ಒತ್ತು ಸಿಗಬೇಕು. ಜಾಗತಿಕ ಹಲಸು ಇನ್ಸ್ಟಿಟ್ಯೂಟ್ ರೂಪುಗೊಳ್ಳಬೇಕು. ಸಂಶೋಧನೆಯ ಜತೆಜತೆಗೆ ಇದು ಮಾಹಿತಿಯ ಕೊರತೆಯನ್ನೂ ತುಂಬಬಹುದು, ಎಂಬ ಆಶಯವನ್ನು ಅಡಿಕೆಯ ಪತ್ರಿಕೆಯ ಸಂಪಾದಕೀಯವೊಂದರಲ್ಲಿ ಶ್ರೀ ಪಡ್ರೆಯವರು ವ್ಯಕ್ತಪಡಿಸಿದ್ದರು.

                 ಸಂವಹನ ವೃದ್ಧಿಸುವ ನಿಟ್ಟಿನಲ್ಲಿ ಬೆಂಗಳೂರಿನ ಕೃಷಿ ವಿಶ್ವವಿದ್ಯಾಲಯವು ಚಿಕ್ಕ ಪ್ರಯತ್ನ ಮಾಡಿತ್ತು. ಇದರ ಮುಖ್ಯಸ್ಥರಾದ ಡಾ.ನಾರಾಯಣ ಗೌಡರ ಆಸಕ್ತಿಯ ಫಲವಾಗಿ ದೊಡ್ಡಬಳ್ಳಾಪುರ ತೂಬುಗೆರೆ ಹಲಸು ಬೆಳೆಗಾರರ ಸಂಘ ಸ್ಥಾಪನೆಯಾಯಿತು. ಗ್ರಾಮಮಟ್ಟದಲ್ಲಿ ಅಲ್ಪಸ್ಪಲ್ಪ ಮಾರಾಟವಾಗುತ್ತಿದ್ದ ಹಲಸಿನ ಹಣ್ಣು ರಾಜಧಾನಿಯ ಲಾಲ್ಬಾಗಿನ ಬಾಗಿಲು ತಟ್ಟಿತು. ಒಂದೊಂದು ಹಣ್ಣಿಗೂ ನೂರರಿಂದ ಮುನ್ನೂರು ರೂಪಾಯಿ ತನಕ ದರ ನೀಡಿ ಒಯ್ಯುವ ಗ್ರಾಹಕರು ರೂಪುಗೊಂಡರು.

                ಕೃಷಿ ವಿಶ್ವವಿದ್ಯಾಲಯವು ಹುಟ್ಟು ಹಾಕಿದ ಹಲಸು ಅಭಿವೃದ್ಧಿಯ ಬೀಜ ಅಧಿಕಾರಿಗಳ ಉತ್ಸಾಹಕ್ಕನುಗುಣವಾಗಿ ಅಲ್ಲಿಲ್ಲಿ ಮೊಳಕೆಯೊಡೆಯಿತು. ಇಲಾಖಾ ವ್ಯಾಪ್ತಿಯಲ್ಲಿ ಒತ್ತಾಯಕ್ಕಾಗಿಯಾದರೂ ಹಲಸು ಮೇಳಗಳು ಆಯೋಜನೆಗೊಂಡವು. 'ಫಂಡ್ ಮುಗಿಸುವ' ಮೇಳಗಳಿಂದ ಹೇಳುವಂತಹ ಫಲಿತಾಂಶ ನಿರೀಕ್ಷಿಸಲಾಗದು. ಇಲಾಖೆಯ ಸಂಪರ್ಕದಲ್ಲಿರುವ ಕೃಷಿಕರಿಗೆ ಹಲಸಿನ ಸ್ವಯಂ ಅರಿವು ಸಣ್ಣ ಪ್ರಮಾಣದಲ್ಲಾದರೂ ಆಗಬಹುದು.

                 ಬಂಟ್ವಾಳ ತಾಲೂಕಿನ ಅಡ್ಯನಡ್ಕ, ಕೇಪು, ಅಳಿಕೆ ವ್ಯಾಪ್ತಿಯಲ್ಲಿ ಕಳೆದ ನಾಲ್ಕು ವರುಷಗಳಿಂದ ಸದ್ದಿಲ್ಲದೆ ಹಲಸಿನ ಅಭಿವೃದ್ಧಿಯ ಕೆಲಸಗಳು ನಡೆಯುತ್ತಿವೆ. ರೈತರೇ 'ರುಚಿ ನೋಡಿ ತಳಿ ಆಯ್ಕೆ' ಮಾಡುವ ಮೂಲಕ ಇಪ್ಪತ್ತೈದಕ್ಕೂ ಮಿಕ್ಕಿ ಹಲಸಿನ ತಳಿಗಳನ್ನು ಗುರುತಿಸಿ, ಕಸಿ ಕಟ್ಟಿ ಅಭಿವೃದ್ಧಿ ಪಡಿಸಲಾಗುತ್ತಿದೆ. ತೋಟಗಾರಿಕೆ ಇಲಾಖೆಯು 'ಹಲಸಿನ ಕ್ಲಸ್ಟರ್' ರೂಪಿಸಿ, 'ವಾರಣಾಶಿ ಹಲಸು ಬೆಳೆಗಾರರ ಸಂಘ'ವನ್ನು ಸ್ಥಾಪಿಸಿದೆ. ಸಂಘದ ಮೂಲಕ ಹಲಸಿನ ಸೊಳೆಯನ್ನು ಮಾರಾಟ ಮಾಡುವ ಪ್ರಕ್ರಿಯೆ ಶುರುವಾಗಿದೆ. ಕಳೆದ ವರುಷ ಇಪ್ಪತ್ತೆಂಟು ಟನ್ ಹಲಸನ್ನು ಮುಂಬಯಿಯ ಐಸ್ಕ್ರೀಂ ಘಟಕಕ್ಕೆ ಮಾರಾಟ ಮಾಡಿರುವುದು ಒಂದು ದಾಖಲೆ. ಹತ್ತಕ್ಕೂ ಮಿಕ್ಕಿ ಕೃಷಿಕರು ಅರ್ಧ ಎಕ್ರೆಯಿಂದ ಎರಡು ತನಕ ಹಲಸಿನ ತೋಟ ಎಬ್ಬಿಸುತ್ತಿದ್ದಾರೆ.

                ಹಲಸಿನ ಚಿಪ್ಸ್, ಹಪ್ಪಳ, ಐಸ್ಕ್ರೀಂ, ಮಾಂಬಳ, ಹಲ್ವ.. ಹೀಗೆ ಮೌಲ್ಯವರ್ಧಿತ ಉತ್ಪನ್ನಗಳು ಮನೆಮಟ್ಟದಲ್ಲಿ, ಸ್ವಸಹಾಯ ಸಂಘಗಳ ಮೂಲಕ ಸಿದ್ಧವಾಗುತ್ತಿವೆ. ಬೇಡಿಕೆ ಹೆಚ್ಚುತ್ತಿದೆ. ಹಲಸಿನ ಸಾರ್ವಕಾಲಿಕ ಬಳಕೆ ಮತ್ತು ಅದರ ಮಾರುಕಟ್ಟೆ ವಿಸ್ತಾರದ ಕುರಿತು ಉದ್ಯಮದವರೊಂದಿಗೆ ಕೃಷಿಕರ ನೇರ ಮುಖಾಮುಖಿಗೆ ವೇದಿಕೆ ಸಜ್ಜಾಗಿದೆ. ಜುಲೈ 7ರಂದು ಅಡ್ಯನಡ್ಕದ ಜನತಾ ಜ್ಯೂನಿಯರ್ ಕಾಲೇಜಿನಲ್ಲಿ ನಡೆಯುವ ಸಮಾರಂಭವು ಹಲಸು ಆಂದೋಳನದಲ್ಲೊಂದು ಮೈಲುಗಲ್ಲು.

(ಚಿತ್ರ/ಮಾಹಿತಿ : ಶ್ರೀ ಪಡ್ರೆ/ಅಡಿಕೆಪತ್ರಿಕೆ)

Tuesday, July 9, 2013

ದೇಶಮಟ್ಟದಲ್ಲೇ ಮೊದಲಿನದು ! ಹಲಸು ಕಾರ್ಯಾಗಾರ
          ಮಂಗಳೂರಿನ ಸರೋಶ್ ಇನ್ಸ್ಟಿಟ್ಯೂಟ್ ಆಫ್ ಹೋಟೆಲ್ ಮ್ಯಾನೇಜ್ಮೆಂಟ್ ಕಾಲೇಜಿನಲ್ಲಿ ಇಂದು ಅಪರೂಪದ ಮತ್ತು ದೇಶಮಟ್ಟದಲ್ಲೇ ಮೊದಲಿನದು ಎನ್ನಬಹುದಾದ ಕಾರ್ಯಾಗಾರ. ಮನೆಯ ಹಿತ್ತಿಲಿನ ಹಲಸು ಹೋಟೆಲ್ ವ್ಯವಹಾರವನ್ನು ಕಲಿಯುತ್ತಿರುವ ನೂತನ ಬಾಣಸಿಗರ ಕೈಯಲ್ಲಿ ಹಣ್ಣಿನ ಪಾಯಸದಿಂದ ತೊಡಗಿ ಪಿಜ್ಜಾ, ಬರ್ಗರ್ ತಯಾರಿಯ ತನಕ ಅವಕಾಶವನ್ನು ತೆರೆದಿಟ್ಟಿತು. ಕಾಲೇಜಿನ ಆಡಳಿತ ಮಂಡಳಿ, ಅಧ್ಯಾಪಕ ವರ್ಗ, ವಿದ್ಯಾರ್ಥಿ ಸಮೂಹ ಬಹಳ ಆಸಕ್ತಿಯಿಂದ ಸಂಪೂರ್ಣ ತೊಡಗಿಸಿಕೊಂಡಿರುವುದು ಗಮನಾರ್ಹ.

              ಒಂದೆಡೆ ಅಡುಗೆಮನೆಯಲ್ಲಿ ವಿವಿಧ ಖಾದ್ಯಗಳ ತಯಾರಿ. ಮತ್ತೊಂದೆಡೆ ಪ್ರಾತ್ಯಕ್ಷಿಕೆ. ಮೀಯಪದವಿನ ಪ್ರೇಮಾ ಭಟ್ (70) ಓಡಾಡಿಕೊಂಡು ಖಾದ್ಯಗಳ ರೆಸಿಪಿಯನ್ನು ವಿವರಿಸುತ್ತಿದ್ದಾಗ ವಿದ್ಯಾರ್ಥಿಗಳು ಕಾಗದಕ್ಕಿಳಿಸುತ್ತಿದ್ದರು. ಕಾರ್ಯಾಗಾರದ ಕೊನೆಗೆ 'ನಮ್ಮ ಕಾಲೇಜಿನ ಸಮಾರಂಭಗಳಲ್ಲಿ ಹಲಸಿನ ಒಂದಾದರೂ ಖಾದ್ಯವನ್ನು ಮಾಡುತ್ತೇವೆ' ಎಂದು ವರಿಷ್ಠರ ನಿರ್ಧಾರ.

                ಕಾಸರಗೋಡು ಜಿಲ್ಲೆಯ ಚೌಟರ ಚಾವಡಿ-ಸಂಸ್ಕೃತಿ ವೇದಿಕೆ ಮತ್ತು ಅಡಿಕೆ ಪತ್ರಿಕೆಯು ಕಾರ್ಯಾಗಾರವನ್ನು ಆಯೋಜಿಸಿತ್ತು. ಮಂಗಳೂರಿನ ಶಾಸಕ ಜೆ.ಆರ್.ಲೋಬೋ ಸಮಾರಂಭವನ್ನು ಉದ್ಘಾಟಿಸಿದ್ದರು. ಮೇಯರ್ ಸುದೇಶ್ ಶೆಟ್ಟಿ ಉಪಸ್ಥಿತಿ. ಅಪ ಸಂಪಾದಕ ಶ್ರೀಪಡ್ರೆಯವರು ಹಲಸಿನ ಅವಕಾಶಗಳ ಪವರ್ ಪಾಯಿಂಟ್ ಪ್ರಸ್ತುತಿ. ಕನ್ನಾಡು ಮಾತ್ರವಲ್ಲ ಹೊರಗಿನ ರಾಜ್ಯಗಳ ವಿದ್ಯಾರ್ಥಿಗಳು ಭಾಗವಹಿಸಿದ ಕಾರ್ಯಾಗಾರವು ಹಲಸನ್ನು ನಗರಕ್ಕೆ ಒಯ್ಯುವಲ್ಲಿ ಮೊದಲ ಹೆಜ್ಜೆಯಾಗಿ ಭರವಸೆ ಮೂಡಿಸಿತು.

Monday, July 8, 2013

ಅಡ್ಯನಡ್ಕದಲ್ಲಿ ಹಲಸು ಹಬ್ಬ - ಉದ್ದಿಮೆದಾರರೊಂದಿಗೆ ಮಾತುಕತೆ

                  ಬಂಟ್ವಾಳ ತಾಲೂಕು (ದ.ಕ.) ಅಡ್ಯನಡ್ಕ ವಾರಣಾಶಿ ಹಲಸು ಬೆಳೆಗಾರರ ಸಂಘ, ಹಲಸು ಸ್ನೇಹಿ ಕೂಟದ ಆಶ್ರಯದಲ್ಲಿ ಜುಲೈ 7ರಂದು ಅಡ್ಯನಡ್ಕ ಹೈಸ್ಕೂಲಿನಲ್ಲಿ ಹಲಸು ಹಬ್ಬ ಜರುಗಿತ್ತು. ಆಶಯ : ಬೆಳೆಗಾರರು ಮತ್ತು ಉದ್ದಿಮೆದಾರರೊಂದಿಗೆ ನೇರ ಮುಖಾಮುಖಿ. ಹನಿಕಡಿಯದ ಧಾರಾಕಾರ ಮಳೆ ಬರುತ್ತಿದ್ದರೂ ಹಬ್ಬಕ್ಕೆ ಸಾವಿರಕ್ಕೂ ಮಿಕ್ಕಿ ಹಲಸು ಪ್ರಿಯರು ಆಗಮಿಸಿದ್ದರು. ಪುತ್ತೂರು ಶಾಸಕಿ ಶ್ರೀಮತಿ ಶಕುಂತಳಾ ಟಿ. ಶೆಟ್ಟಿಯವರಿಂದ ಹಲಸನ್ನು ತುಂಡರಿಸುವ ಮೂಲಕ ಉದ್ಘಾಟನೆ. ಈ ಸಂದರ್ಭದಲ್ಲಿ ಸವಿತಾ ಎಸ್. ಭಟ್ ಅಡ್ವಾಯಿ ಅವರ ಹಲಸು ಪುಸ್ತಕದ ಅನಾವರಣ.

               ಕರ್ನಾಟಕ ಸರಕಾರದ ಅರಣ್ಯ ಸಚಿವರಾದ ಶ್ರೀ ಬಿ.ರಮಾನಾಥ ರೈಯವರು ರೈತರಿಂದ ಆಯ್ಕೆಯಾದ ಹಲಸಿನ ತಳಿಗಳನ್ನು ಬಿಡುಗಡೆಗೊಳಿಸಿದರು. ಮಂಗಳೂರು ಏಸ್. ಫುಡ್ಸ್ ಪ್ರೈ ಲಿ., ಇದರ ಡಾ. ಯಂ ಅಣ್ಣಪ್ಪ ಪೈ, ಮಾಳ ಚಿರಾಗ್ ಹೋಮ್ ಇಂಡಸ್ಟ್ರೀಸ್ ಇದರ ಪರಮಾನಂದ ಜೋಶಿ, ಮಹಾರಾಷ್ಟ್ರ ರತ್ನಾಗಿರಿಯ ಪವಾಸ್ ಕ್ಯಾನಿಂಗ್ ಇದರ ಮಾಲಕರಾದ ಹೇಮಂತ ದೇಸಾಯಿ, ಮುಂಬಯಿಯ ಉದ್ಯಮಿ ಶ್ರೀಮತಿ ಸೌಮ್ಯ ಡಿ. ಪೈ, ಮಾಳದ ಮಾಜಿ ಗ್ರಾ. ಪ. ಆಧ್ಯಕ್ಷ ಹರಿಶ್ಚಂದ್ರ ತೆಂಡೂಲ್ಕರ್ - ತಮ್ಮ ಉದ್ದಿಮೆಯ ಅನುಭಗಳನ್ನು ತೆರೆದಿಟ್ಟರು. ಬೆಂಗಳೂರು ಕೃಷಿ ವಿವಿಯ ಸಹ ಪ್ರಾಧ್ಯಾಪಕರಾದ ಡಾ.ಶ್ಯಾಮಲಮ್ಮ, ಬೆಂಗಳೂರು ಐ.ಐ.ಹೆಚ್.ಆರ್. ವಿಜ್ಞಾನಿ ಡಾ. ಪ್ರಕಾಶ್ ಪಾಟೀಲ, ಕೇರಳ ಅಂಬಲವಾಯಲ್ ಆರ್.ಎ.ಆರ್.ಎಸ್. ಇದರ ಸಹ ನಿರ್ದೇಶಕ ಡಾ. ಪಿ.ರಾಜೇಂದ್ರನ್ - ತಂತಮ್ಮ ಸಂಸ್ಥೆಗಳಲ್ಲಿ ಮಾಡಿದ ಹಲಸಿನ ಕೆಲಸಗಳನ್ನು ಪವರ್ ಪಾಯಿಂಟ್ ಮೂಲಕ ಉಪನ್ಯಾಸ ಮಾಡಿದರು.

              ಅಡಿಕೆ ಪತ್ರಿಕೆಯ ಸಹಾಯಕ ಸಂಪಾದಕ ಶ್ರೀ ಪಡ್ರೆಯವರು ತಮ್ಮ ಹಲಸಿನ ಸಾಧ್ಯತೆಗಳ ವಿಶ್ವಲೋಕವನ್ನು ತೆರೆದಿಟ್ಟರು. ವಿದರ್ಭ, ಕೇರಳ, ಶ್ರೀಲಂಕಾ. ಮೆಕ್ಸಿಕೋ.. ಹೀಗೆ ಹಲವು ರಾಷ್ಟ್ರಗಳ ಹಲಸಿನ ಮೌಲ್ಯವರ್ಧನೆಯ ಯಶೋಗಾಥೆಗಳು ಹಬ್ಬದ ಹೈಲೈಟ್.

                 ಐಟಿ ಉದ್ಯೋಗಿ ಮಂಚಿಯ ವಸಂತ ಕಜೆಯವರು ಹಲಸಿನ ಹಣ್ಣಿನ ಐಸ್ ಕ್ರೀಮ್ ಮತ್ತು ತೆಂಗಿನ ಹಾಲಿನ ಐಸ್ ಕ್ರೀಮ್ ಹಬ್ಬಕ್ಕಾಗಿಯೇ ಸಿದ್ದಪಡಿಸಿದ್ದರು. ಕಪ್ ಒಂದರ ಹದಿನೈದು ರೂಪಾಯಿ. ಮಧ್ಯಾಹ್ನದ ಹೊತ್ತಿಗೆ ಎಲ್ಲವೂ ಖಾಲಿ. ಮುಂಬಯಿಯ ನ್ಯಾಚುರಲ್ ಐಸ್ ಕ್ರೀಮ್ ಇದರ ರಘುನಂದ ಕಾಮತರು ಹಲಸಿನ ಹಣ್ಣಿನ ಐಸ್ ಕ್ರೀಮನ್ನು ಉಚಿತವಾಗಿ ವಿತರಿಸಿದ್ದರು. ಬೆಂಗಳೂರಿನ ಬಿಕೇಸ್ ಬೇಕರಿಯ ಬಿ.ಎಸ್.ಭಟ್ಟರು ಉಪಸ್ಥಿತರಿದ್ದು, ಹಲಸಿನ ಹಣ್ಣನ್ನು ಬಳಸಿ ಮಾಡಿದ ಬೇಕರಿ ಐಟಂನ್ನು ಪ್ರದರ್ಶನಕ್ಕಿಟ್ಟಿದ್ದರು. ಅಲ್ಲದೆ ಸಂಜೆಯ ಉಪಾಹಾರಕ್ಕೆ ಕಪ್ ಕೇಕನ್ನು ಉಚಿತವಾಗಿ ನಿಡಿದ್ದರು. ಕೊಪ್ಪದ ವಿಜಯಕುಮಾರ್ ದಂಪತಿಗಳು ಉಪ್ಪಿನಲ್ಲಿ ಹಾಕಿದ ರೆಡಿ ಟು ಗುಜ್ಜೆ, ಒಣ ಹಲಸಿನ ಹಣ್ಣು.. ಉತ್ಪನ್ನಗಳು ಗಮನಾರ್ಹ. ಹಲಸು ಸ್ನೇಹಿ ಕೂಟದ ವೆಂಕಟಕೃಷ್ಣ ಶರ್ಮ ಮುಳಿಯ ಇವರ ಉಸ್ತುವಾರಿಕೆಯಲ್ಲಿ ಸಿದ್ಧವಾದ ಹಲಸಿನ ಹಣ್ಣಿನ ಹಲ್ವಕ್ಕೆ ಉತ್ತಮ ಬೇಡಿಕೆ.

                ಮಧ್ಯಾಹ್ನ ಹಲಸು ಸ್ನೇಹಿ ಕೂಟದ ಉಬರು ರಾಜಗೋಪಾಲ ಭಟ್ ಮತ್ತು ಶಿರಂಕಲ್ಲು ನಾರಾಯಣ ಭಟ್ಟರ ಉಸ್ತುವಾರಿಕೆಯಲ್ಲಿ ಹಲಸಿನ ಸವಿ ಭೋಜನ. ವರ್ಮುಡಿ ಶಿವಪ್ರಸಾದ್ ಅವರಿಗೆ ಹಲಸಿನ ಸ್ಪರ್ಧಾ ವಿಭಾಗದ ನಿರ್ವಹಣೆ. ಐವತ್ತಕ್ಕೂ ಮಿಕ್ಕಿ ಖಾದ್ಯಗಳು ಪ್ರದರ್ಶನಕ್ಕೆ ಬಂದಿದ್ದುವು. ವಾರಣಾಶಿ ಸಂಶೋಧನಾ ಪ್ರತಿಷ್ಠಾನದ ಪೂರ್ಣ ಸಹಯೋಗ. ಹಲಸಿನ ರೆಸಿಪಿ, ಗಿಡಗಳತ್ತ ಬಹುಮಂದಿಯ ಚಿತ್ತ ಎದ್ದು ಕಾಣುತ್ತಿದ್ದುವು. 

ಚಿತ್ರ : ಮಹೇಶ ಪಿ.

Tuesday, July 2, 2013

ಅಡ್ಯನಡ್ಕ: ಜುಲೈ 7ರಂದು ವಿಶಿಷ್ಟ ಹಲಸಿನ ಹಬ್ಬ

              
               ವಾರಣಾಶಿ ಹಲಸು ಬೆಳೆಗಾರರ ಸಂಘ ಜುಲೈ ಏಳರ ಭಾನುವಾರದಂದು ಅಡ್ಯನಡ್ಕದಲ್ಲಿ ವಿನೂತನ ರೀತಿಯ ಹಲಸಿನ ಹಬ್ಬ ನಡೆಸಲಿದೆ. ತೋಟಗಾರಿಕಾ ಇಲಾಖೆ, ವಾರಣಾಶಿ ಸಂಶೋಧನಾ ಪ್ರತಿಷ್ಠಾನ ಮತ್ತು ಹಲಸುಸ್ನೇಹಿ ಕೂಟಗಳು ಈ ಕಾರ್ಯಕ್ರಮಕ್ಕೆ ಸಹಯೋಗ ನೀಡುತ್ತಿವೆ. ಅಡ್ಯನಡ್ಕದ ಜನತಾ ಜೂನಿಯರ್ ಕಾಲೇಜಿನಲ್ಲಿ ಬೆಳಗ್ಗೆ 9.30 ರಿಂದ ಸಂಜೆ 5 ಗಂಟೆಯ ವರೆಗೆ ಈ ಹಬ್ಬ ನಡೆಯಲಿದೆ.

                 ಹಲಸು ಉದ್ದಿಮೆದಾರ - ಬೆಳೆಗಾರರ ಸಮಾವೇಶ ಮತ್ತು ರೈತ ಆಯ್ಕೆಯ ಸ್ಥಳೀಯ ತಳಿಗಳ ಬಿಡುಗಡೆ ಈ ಏಕದಿನದ ಹಬ್ಬದ ಎರಡು ಅಭೂತಪೂರ್ವ ವಿಶೇಷಗಳು.

               ಜಿಲ್ಲೆಯ ಹಲಸಿನ ಉದ್ದಿಮೆದಾರರು ಮತ್ತು ಬೆಳೆಗಾರರ ನಡುವೆ ಸಂಪರ್ಕ ಕಲ್ಪಿಸಿ, ಪರಸ್ಪರ ತಿಳುವಳಿಕೆ ಮೂಡಿಸುವುದು ಮತ್ತು ಉತ್ತಮ ತಳಿ ನೆಟ್ಟು ಸರಿಯಾದ ರೀತಿಯಲ್ಲಿ ಹಲಸಿನ ಕೃಷಿ ಮಾಡುವ ಬಗ್ಗೆ ರೈತರಲ್ಲಿ ಭರವಸೆ ಮೂಡಿಸುವುದು ಉದ್ದಿಮೆದಾರ - ಬೆಳೆಗಾರರ ಸಮಾವೇಶದ ಉದ್ದೇಶ.

                ಈ ಕಾರ್ಯಕ್ರಮದಲ್ಲಿ ಜಿಲ್ಲೆಯ ಹಲಸಿನ ಮುಖ್ಯ ಉದ್ದಿಮೆಗಳಾದ ಚಿಪ್ಸ್, ಹಪ್ಪಳ ಮತ್ತು ಉಪ್ಪುಸೊಳೆ ಉತ್ಪನ್ನಗಳ ಉದ್ದಿಮೆದಾರ ಪ್ರತಿನಿಧಿಗಳು ಮಾತನಾಡಲಿದ್ದಾರೆ. ಈಚೆಗೆ ಹಲಸಿನ ತೋಟ ಮಾಡಿದ ಕೃಷಿಕರು ತಮ್ಮ ಅನುಭವ ಹಂಚಿಕೊಳ್ಳುತ್ತಾರೆ. ದೇಶವಿದೇಶಗಳಲ್ಲಿ ಹಲಸಿನ ಅಭಿವೃದ್ಧಿಯ ಬಗ್ಗೆ ದಿಕ್ಸೂಚಿ ಸ್ಲೈಡ್ ಪ್ರದರ್ಶನವಿದೆ.

                ಶ್ರೀಮತಿ ಸವಿತಾ ಎಸ್ ಭಟ್ ಅಡ್ವಾಯಿ ಬರೆದ 'ಹಲಸಿನ ಸವಿ' ಪುಸ್ತಕವನ್ನು ಪುತ್ತೂರು ಶಾಸಕಿ ಶ್ರೀಮತಿ ಶಕುಂತಳಾ ಶೆಟ್ಟಿ ಬಿಡುಗಡೆ ಮಾಡುತ್ತಾರೆ. ಕಳೆದೆರಡು ವರ್ಷಗಳಲ್ಲಿ ಸರಳ ರೀತಿಯ ಆಯ್ಕೆ ಪ್ರಕ್ರಿಯೆಯಿಂದ ಊರಿನ ಕೃಷಿಕರೇ ಆಯ್ದ ಹತ್ತೊಂಭತ್ತು ಸ್ಥಳೀಯ ಉತ್ತಮ ಹಲಸಿನ ತಳಿಗಳನ್ನು ಅರಣ್ಯ ಸಚಿವ ಶ್ರೀ ರಮಾನಾಥ ರೈ ಬಿಡುಗಡೆಗೊಳಿಸಲಿದ್ದಾರೆ. ಇವುಗಳ ಸಾಕಷ್ಟು ಕಸಿಗಿಡಗಳು ಹಲಸಿನ ಹಬ್ಬದಲ್ಲಿ ಕೊಂಡುಕೊಳ್ಳಲು ಲಭ್ಯವಿರುತ್ತವೆ.
ಉದ್ದಿಮೆ ಮತ್ತು ಬೆಳೆಗಾರರ ನಡುವೆ ಸಂಪರ್ಕ ಕಲ್ಪಿಸುವ ಮತ್ತು ರೈತರೇ ಸಂಘಟಿತ ರೀತಿಯಲ್ಲಿ ತಳಿ ಆಯ್ಕೆ ಮಾಡಿ, ಅದನ್ನು ದೊಡ್ಡ ಪ್ರಮಾಣದಲ್ಲಿ ಕಸಿ ಮಾಡಿ ಬಿಡುಗಡೆ - ದೇಶದಲ್ಲಿ ಇದೇ ಮೊದಲು.

               ಊಟದ ನಂತರದ ವೈಜ್ನಾನಿಕ ಸೆಶನಿನಲ್ಲಿ ಕೇರಳ-ಕರ್ನಾಟಕಗಳ ಹಲಸು ವಿಜ್ನಾನಿಗಳು ಹಲಸು ಅಭಿವೃದ್ಧಿಯ ಬಗ್ಗೆ ಮಾತನಾಡಲಿದ್ದಾರೆ. ಹಲಸಿನ ಅಡುಗೆಯ ಸ್ಪರ್ಧೆ ಇನ್ನೊಂದು ವಿಶೇಷ. ಇದಕ್ಕಾಗಿ ಗೃಹಿಣಿಯರು ಸಂಘಟಕರು ಸೂಚಿಸಿದ ವಿಭಾಗಗಳಲ್ಲಿ ಮಾಡಿದ ಹೊಸ ರುಚಿಗಳನ್ನು ಮನೆಯಲ್ಲೇ ಮಾಡಿ ತರಬಹುದು.

                ಹಲಸಿನ ಅಡುಗೆ ಸ್ಪರ್ಧೆ ವಿಜೇತರಿಗೆ ಸಮಾರೋಪ ಕಾರ್ಯಕ್ರಮದಲ್ಲಿ ಬಹುಮಾನ ವಿತರಣೆ ನಡೆಯಲಿದೆ. ಸಮಾರೋಪ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಪ್ರಭಾರ ತೋಟಗಾರಿಕಾ ನಿರ್ದೇಶಕ ಶ್ರೀ ಮಹೇಶ್ವರ್ ಭಾಗವಹಿಸುತ್ತಾರೆ.

               ಹಲಸಿನಹಣ್ಣು ಬಳಸಿ ಬೆಂಗಳೂರಿನ ಪ್ರಸಿದ್ಧ ಬೇಕಿಂಗ್ ಹೌಸ್ 'ಬೀಕೇಸ್' ತಯಾರಿಸಿದ ಬೇಕರಿ ಉತ್ಪನ್ನಗಳ ಪ್ರದರ್ಶನವಿದೆ. 'ಉದ್ದಿಮೆದಾರ' ಸಮಾವೇಶದಲ್ಲಿ ಎಳೆಹಲಸಿನ (ಗುಜ್ಜೆ) ಕ್ಯಾನಿಂಗ್ ಉದ್ದಿಮೆಯ ಹರಿಕಾರ, ಎರಡು ದಶಕಗಳಿಂದ ಇದನ್ನು ಉತ್ಪಾದಿಸಿ ಮಾರುತ್ತಿರುವ ಮಹಾರಾಷ್ಟ್ರದ ರತ್ನಾಗಿರಿಯ 'ಪವಸ್ ಕ್ಯಾನಿಂಗಿನ' ಒಡೆಯ ಹೇಮಂತ್ ದೇಸಾಯಿ ಮತ್ತು ಮುಂಬಯಿಯಲ್ಲಿ ಮೊತ್ತಮೊದಲ ಬಾರಿಗೆ 'ರೆಡಿ ಟು ಕುಕ್' ಗುಜ್ಜೆಯನ್ನು ಮೇಲ್ದರ್ಜೆಯ ಸೂಪರ್ ಮಾರ್ಕೆಟ್ ಮೂಲಕ ಪರಿಚಯಿಸಿದ ಶ್ರೀಮತಿ ಸೌಮ್ಯ ಡಿ.ಪೈ ತಮ್ಮ ಅನುಭವ ಹಂಚಲಿರುವುದು ಈ ಭಾಗದ ಹಲಸುಪ್ರಿಯರಿಗೆ ಉತ್ತೇಜನ ನೀಡಲಿದೆ.

                ಹಬ್ಬ ಸಂಘಟನೆಗೆ ಹಲಸು ಅಭಿವೃದ್ಧಿಗಾಗಿ ಪ್ರಚಾರ ನಡೆಸುತ್ತಿರುವ ಕೃಷಿಕರ ಮಾಧ್ಯಮ ಅಡಿಕೆ ಪತ್ರಿಕೆ ಸಹಕಾರ ನೀಡುತ್ತಿದೆ. ಪಾಲ್ಗೊಳ್ಳುವವರಿಗೆ ನೋಂದಣಿ ಶುಲ್ಕವಿದೆ.

ಹೆಚ್ಚಿನ ವಿವರಗಳಿಗೆ (08255) 270 254; 94484 70254

(ಚಿತ್ರ : ಶ್ರೀ ಪಡ್ರೆ)