Tuesday, July 23, 2013

ಕೃಷಿಕ-ಉದ್ಯಮಿಗಳನ್ನು ಬೆಸೆದ "ಹಲಸಿನ ಹಬ್ಬ"



             ಎಂಟು ವರುಷದ ಹಿಂದೆ ಕೇರಳ ವಯನಾಡಿನ ಉರವು ಎಂಬ ಸರಕಾರೇತರ ಸಂಸ್ಥೆಯು ಹಲಸನ್ನು ಜನಪ್ರಿಯಗೊಳಿಸಲು 'ಹಲಸು ಮೇಳ'ಕ್ಕೆ ಶ್ರೀಕಾರ ಹಾಕಿತು. ಕೇರಳದಲ್ಲಿ ಹಲಸು ಯಥೇಷ್ಟವಾಗಿ ಬೆಳೆಯುವುದಲ್ಲದೆ, ಅದರ ಬಳಕೆ ಮತ್ತು ಮೌಲ್ಯವರ್ಧನೆಯಲ್ಲೂ ಮುಂದು. ಎರಡು ವರುಷದ ಹಿಂದೆ ಕೇರಳದ ರಾಜಧಾನಿಯಲ್ಲಿ ರಾಷ್ಟ್ರೀಯ ಹಲಸು ಉತ್ಸವ ಜರುಗಿ, ದೇಶಮಟ್ಟದಲ್ಲಿ ಹಲಸು ಪ್ರಿಯರ ಕೊಂಡಿ ಏರ್ಪಟ್ಟಿರುವುದು ಇತಿಹಾಸ.

              ಉರವು ಹಾಕಿಕೊಟ್ಟ ಹಲಸು ಹಬ್ಬದ ಪರಿಕಲ್ಪನೆಯು ಕನ್ನಾಡಿನ ವಿವಿಧ ಜಾಗದಲ್ಲಿ ಅನುಷ್ಠಾನಗೊಂಡಿತು. ಖಾಸಗಿಯಾಗಿ ಜರುಗಿದ ಹಬ್ಬ ಯಾ ಮೇಳವು ಉದ್ದೇಶದ ಹತ್ತಿರ ಸುಳಿದಾಡಿದರೆ, ಸರಕಾರಿ ಪ್ರಣೀತ ಮೇಳಗಳ ಫಂಡ್ ಮುಗಿಸುವ ಕಾಯಕ್ರಮಕ್ಕೆ ಸೀಮಿತ! ಶಿರಸಿಯ ಕದಂಬ ಸಂಸ್ಥೆಯು ಹಲಸಿನ ಮೌಲ್ಯವರ್ಧನೆ ಮತ್ತು ಮೇಳವನ್ನು ಆಯೋಜಿಸುವಲ್ಲಿ ದೊಡ್ಡ ಹೆಜ್ಜೆಯಿಟ್ಟಿದೆ.

               ಈಚೆಗೆ ಜುಲೈ ಏಳರಂದು ಬಂಟ್ವಾಳ ತಾಲೂಕಿನ ಅಡ್ಯನಡ್ಕ ಜನತಾ ಜ್ಯೂನಿಯರ್ ಕಾಲೇಜಿನ ಎಲ್ಲಾ ಕೋಣೆಗಳಲ್ಲೂ ಹಲಸಿನ ಪರಿಮಳ. ದಿನವಿಡೀ ಧಾರಾಕಾರ ಮಳೆಯಿದ್ದರೂ ಅಮಿತ ಉತ್ಸಾಹದ ಹಲಸು ಪ್ರೇಮಿಗಳ ಉಪಸ್ಥಿತಿ. ನಿಗದಿತ ಶುಲ್ಕ ಪಾವತಿಸಿ, ಪ್ರತಿನಿಧಿಗಳಾಗಿ ಹಲಸಿನ ಹಬ್ಬದಲ್ಲಿ ಬರೋಬ್ಬರಿ ಎಂಟುನೂರಕ್ಕೂ ಮಿಕ್ಕಿ ಪ್ರತಿನಿಧಿಗಳ ಭಾಗಿ. ಉದ್ಯಮಿಗಳ, ವಿಜ್ಞಾನಿಗಳ, ಕೃಷಿಕರ ಮಾತು. ಮಧ್ಯಾಹ್ನ ಹಲಸಿನ ಭೋಜನ. ಸೀಮಿತ ಮಳಿಗೆಗಳಲ್ಲಿ ವಿವಿಧ ಖಾದ್ಯಗಳು. ಸ್ಪರ್ಧೆಗೆ ಐವತ್ತಕ್ಕೂ ಮಿಕ್ಕಿ ಐಟಮ್ಮುಗಳು ಬಂದಿದ್ದುವು.

                ಹಬ್ಬದಲ್ಲಿ ಹತ್ತೊಂಭತ್ತು ವಿವಿಧ ಹಲಸಿನ ತಳಿಗಳನ್ನು ಅರಣ್ಯ ಸಚಿವ ಶ್ರೀ ರಮಾನಾಥ ರೈಗಳು ಬಿಡುಗಡೆಗೊಳಿಸಿದರು. ನಾಲ್ಕು ವರುಷಗಳಿಂದ ಅಳಿಕೆ, ಕೇಪು, ಪೆರುವಾಯಿ, ಅಡ್ಯನಡ್ಕ.. ಕೇಂದ್ರವಾಗಿಟ್ಟುಕೊಂಡು ಹಲಸಿನ ಆಂದೋಳನ ಶುರುವಾಗಿತ್ತು. 'ರುಚಿ ನೋಡಿ ತಳಿ ಆಯ್ಕೆ' ಪ್ರಕ್ರಿಯೆಯಲ್ಲಿ ಆಯ್ಕೆಗೊಂಡ ಇಪ್ಪತ್ತೈದಕ್ಕೂ ಮಿಕ್ಕಿದ ಹಲಸಿನ ತಳಿಗಳು ಆಯ್ಕೆಯಾಗಿವೆ. ಅದರಲ್ಲಿ ಕೆಲವನ್ನು ಹಬ್ಬದಲ್ಲಿ ಬಿಡುಗಡೆಗೊಳಿಸಲಾಗಿತ್ತು. ಹೀಗೆ ಆಯ್ಕೆಗೊಂಡ ತಳಿಗಳನ್ನು ಕಸಿ ಕಟ್ಟುವ ಮೂಲಕ ಅಭಿವೃದ್ಧಿಪಡಿಸಲಾಗುತ್ತಿದೆ.

               ಎರಡು ವರುಷದ ಹಿಂದೆ ಕೇಪು ಉಬರು ರಾಜಗೋಪಾಲ ಭಟ್ಟರ ಮನೆಯಲ್ಲಿ ಹಲಸು ಸ್ನೇಹಿ ಕೂಟವು ಹಲಸಿನ ಹಬ್ಬವನ್ನು ಆಚರಿಸಿತ್ತು. ಅಂದಿನ ಹಬ್ಬದಲ್ಲಿ ಖಾದ್ಯಗಳದ್ದೇ ಭರಾಟೆ. ಜತೆಗೆ ತಳಿ ಆಯ್ಕೆ ಪ್ರಕ್ರಿಯೆ. ಅಡ್ಯನಡ್ಕದ ಮೇಳದಲ್ಲಿ ಕೃಷಿಕರು, ವಿಜ್ಞಾನಿಗಳು ಮತ್ತು ಉದ್ಯಮಿಗಳೊಳಗೆ ಸಂವಹನ ನಡೆದು ಕೊಂಡಿ ಏರ್ಪಟ್ಟಿರುವುದು ಆಶಾದಾಯಕ ಬೆಳವಣಿಗೆ.

                 ಮಂಗಳೂರಿನ ಏಸ್ಫುಡ್ಸ್ ಪ್ರೈ ಲಿಮಿಟೆಡ್ ಇದರ ಡಾ. ಅಣ್ಣಪ್ಪ ಪೈಗಳು ತಮ್ಮ ಘಟಕದಲ್ಲಿ ಹಲಸಿಗೆ ಸ್ಥಾನ ಕೊಟ್ಟಿದ್ದಾರೆ. ಹಲಸಿನ ಚಿಪ್ಸ್ಗೆ ವಿದೇಶದಲ್ಲಿ ಉತ್ತಮ ಬೇಡಿಕೆಯಿರುವುದನ್ನು ಮನದಟ್ಟು ಮಾಡಿದ್ದರು. ವಾರಣಾಶಿ ಹಲಸು ಬೆಳೆಗಾರರ ಸಂಘವು ಈ ವರುಷ ಹಲಸಿನ ಸೊಳೆಯನ್ನು ಏಸ್ ಫುಡ್ಸಿಗೆ ನೀಡಿ ಹಲಸಿನ ಸೊಳೆ ವ್ಯವಹಾರಕ್ಕೆ ಶುಭ ನಾಂದಿ ಹಾಡಿದ್ದಾರೆ. ಡಾ.ಪೈಗಳು ಹಲಸಿನ ಮಿನಿಮಲ್ ಸಂಸ್ಕರಣೆಯು ಹೆಚ್ಚು ಶ್ರಮ ಬೇಡುವ ಕೆಲಸ. ಹಿತ್ತಿಲಿನಲ್ಲಿ ಹಾಳಾಗುವ, ಉಪಯೋಗಿಸದೆ ಕೊಳೆತು ಹೋಗುವ ಹಲಸಿಗೆ ಮಾರಾಟಾವಕಾಶವಿದೆ. ಆಸಕ್ತರು ಜತೆಸೇರಿದಾಗ ಶ್ರಮ ಹಗುರವಾಗುತ್ತದೆ. ಹಲಸಿಗೆ ದೇಶವಲ್ಲ, ವಿಶ್ವ ಮಾರುಕಟ್ಟೆಯಿದೆ' ಎಂದರು.

               ಕಾರ್ಕಳ ಮಾಳದ ಚಿರಾಗ್ ಹೋಮ್ ಉದ್ಯಮದ ಪರಮಾನಂದ ಜೋಶಿಯವರು ಹಲಸು ಹಪ್ಪಳ ಉದ್ಯಮದ ಅನುಭವ ತೆರೆದಿಟ್ಟರು. ವರುಷಪೂರ್ತಿ ಲೈವ್ ಆಗಿರುವ ಇವರ ಉದ್ಯಮದಲ್ಲಿ ಹಲಸಿಗೆ ಮಣೆ. ಮಿಕ್ಕುಳಿದ ಸಮಯದಲ್ಲಿ ಅಕ್ಕಿ ರೊಟ್ಟಿಯಂತಹ ಉತ್ಪನ್ನಗಳ ತಯಾರಿ. ಮಾಳದ ಮಾಜಿ ಪಂಚಾಯತ್ ಅಧ್ಯಕ್ಷ ಹರಿಶ್ಚಂದ್ರ ತೆಂಡೂಲ್ಕರ್ ಉಪ್ಪುಸೊಳೆ ವ್ಯವಹಾರದ ತಮ್ಮ ಅನುಭವವನ್ನು ಹಂಚಿಕೊಂಡರು. ಮಹಾರಾಷ್ಟ್ರ ರತ್ನಾಗಿರಿಯ ಪವಾಸ್ ಕ್ಯಾನಿಂಗ್ ಮಾಲಿಕರಾದ ಹೇಮಂತ ದೇಸಾಯಿ ಮೌಲ್ಯವರ್ಧಿತ ಉತ್ಪನ್ನಗಳನ್ನು ಪರಿಚಯಿಸುತ್ತಿದ್ದಾಗ ಎಲ್ಲರಿಗು ಬೆರಗು!

               ಬೆಂಗಳೂರು ಕೃಷಿ ವಿವಿಯ ಡಾ.ಶ್ಯಾಮಲಮ್ಮ, ಬೆಂಗಳೂರಿನ ಐಐಹೆಚ್ಆರ್ ವಿಜ್ಞಾನಿ ಡಾ.ಪ್ರಕಾಶ ಪಾಟೀಲ್, ಅಂಬಲವಾಯಲಿನ ಡಾ.ಪಿ.ರಾಜೇಂದ್ರನ್ ತಮ್ಮ ಸಂಸ್ಥೆಯಲ್ಲಿ ಜರುಗಿದ ಹಲಸಿನ ಕೆಲಸಗಳನ್ನು ಪವರ್ಪಾಯಿಂಟ್ ಮೂಲಕ ಪ್ರಸ್ತುತಪಡಿಸಿದ್ದರು. ಹಲಸು ಆಂದೋಳನದ ರೂವಾರಿ ಶ್ರೀ ಪಡ್ರೆಯವರಿಂದ ಚಿತ್ರಗಳ ಮೂಲಕ ಹಲಸಿನ ವಿಶ್ವದರ್ಶನ ಪ್ರಸ್ತುತಿ.

                  ಹಲಸು ಸ್ನೇಹಿ ಕೂಟದ ಮುಳಿಯ ಶರ್ಮರು ತಮ್ಮ ತೋಟದ ರುಚಿಯಾದ 'ಬಡಾಪಸಂದ್' ತಳಿಯ ಹಲಸಿನ ಹಣ್ಣನ್ನು ಹಲ್ವಕ್ಕೆ ರೂಪಾಂತರಿಸಿದ್ದರು. ಸುಮಾರು ಹದಿನೈದು ಕಿಲೋದಷ್ಟು ಹಲ್ವ ತಯಾರಿಸಿದ್ದು ಮೇಳದಲ್ಲಿ ಮಾರಾಟವಾಗಿತ್ತು. 'ರೈತರೇ ಮೌಲ್ಯವರ್ಧನೆ ಮಾಡಿದರೆ ರೈತರಿಂದಲೇ ಪ್ರೋತ್ಸಾಹ ಸಿಗುವುದರಲ್ಲಿ ಸಂಶಯವಿಲ್ಲ' ಎನ್ನುತ್ತಾರೆ ಶರ್ಮ. ಕೃಷಿಕ ಮತ್ತು ಐಟಿ ಉದ್ಯೋಗಿ ವಸಂತ ಕಜೆ ಕುಟುಂಬ ಹಣ್ಣಿನ ಐಸ್ಕ್ರಿಮ್ ಮತ್ತು ತೆಂಗಿನ ಹಾಲಿನ ಐಸ್ಕ್ರೀಂ ತಯಾರಿಸಿದ್ದರು. ಅಡಿಕೆ ಹಾಳೆಯ ಕಪ್ಪಿನಲ್ಲಿ ಹದಿನೈದು ರೂಪಾಯಿಗೆ ಐಸ್ಕ್ರೀಮ್ ವಿತರಿಸಿದಾಗ ಸಂತೋಷದಿಂದ ಹೊಟ್ಟೆಗಿಳಿಸಿದ ಹಲಸು ಪ್ರಿಯರಿಂದ ಶಹಬ್ಬಾಸ್ ಮೆಚ್ಚುಗೆ. ಬೆಂಗಳೂರಿನ ಬೀಕೆಎಸ್ ಬೇಕರಿಯ ಬಾಲಸುಬ್ರಹ್ಮಣ್ಯ ಭಟ್ಟರು ಹಲಸನ್ನು ಮಾಡಿದ ಐಟಮನ್ನು ಪ್ರದರ್ಶನಕ್ಕಿಟ್ಟಿದ್ದರು.

               ವಾರಣಾಶಿ ಹಲಸು ಬೆಳೆಗಾರರ ಸಂಘ, ಹಲಸು ಸ್ನೇಹಿ ಕೂಟದ ಮುಂದಾಳ್ತನ. ವಾರಣಾಶಿ ಸಂಶೋಧನಾ ಪ್ರತಿಷ್ಠಾನ, ತೋಟಗಾರಿಕಾ ಇಲಾಖೆಗಳ ಸಹಯೋಗ. ಕಸಿ ಗಿಡಗಳಿಗೆ ಬೇಡಿಕೆ ಸಲ್ಲಿಸುವ, ತೋಟ ಮಾಡಲು ಉಮೇದಿರುವ, ತಮ್ಮ ಹಿತ್ತಿಲಿನ ಹಲಸನ್ನು ಪರಿಚಯಿಸಲು ಉತ್ಸುಕರಾಗಿರುವ ಹಲವು ಕೃಷಿಕರನ್ನು ಹಲಸಿನ ಹಬ್ಬ ಬೆಸೆದಿತ್ತು.

(ಚಿತ್ರ : ರಾಧಾ ಮುಳಿಯ)

0 comments:

Post a Comment