Saturday, July 20, 2013

ಅಶಕ್ತ ಕಲಾವಿದ, ವೈದಿಕ ಸಹಾಯಕ - ಕನ್ಯಾನ ಕೇಶವ ಭಟ್ಟರಿಗೆ ನೆರವಾಗ್ತೀರಾ?



              ಕನ್ಯಾನ ಕೇಶವ ಭಟ್ ಮೂಲತಃ ಬಂಟ್ವಾಳ ತಾಲೂಕಿನ ಕನ್ಯಾನದವರು. ಬಾಲ್ಯದಿಂದಲೇ ಹೋಟೆಲ್ ಉದ್ಯಮಿ. ಪುತ್ತೂರಿನ ಬೊಳ್ವಾರಿನಲ್ಲಿದ್ದ ಭಟ್ಟರ ಹೋಟೆಲ್ ಪುಷ್ಯರಾಗ ಗುಣಮಟ್ಟದ ತಿಂಡಿಗಳಿಗೆ ಖ್ಯಾತಿಯಾಗಿತ್ತು. ಹುಡುಕಿ ಬರುವ ಗ್ರಾಹಕರಿದ್ದರು. ಬಳಿಕ ಚೇತನ ಆಸ್ಪತ್ರೆ, ಆದರ್ಶ ಆಸ್ಪತ್ರೆಗಳ ಕ್ಯಾಂಟಿನ್ಗಳನ್ನು ವಹಿಸಿಕೊಂಡಿದ್ದರು. ಹೋಟೆಲ್ ಕೆಲಸಗಳಲ್ಲಿ ಹೇಳುವಂತಹ ಆರ್ಥಿಕ ಸಂಪತ್ತು ಬಾರದೇ ಹೋದಾಗ ಸುಬ್ರಹ್ಮಣ್ಯಕ್ಕೆ ವಸತಿಯನ್ನು ಸ್ಥಳಾಂತರಿದ್ದರು. ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ವೈದಿಕ ಸಹಾಯಕರಾಗಿ ಹೊಸ ವೃತ್ತಿ ಜೀವನ ಆರಂಭಿಸಿದ್ದರು.

             ಕೇಶವ ಭಟ್ಟರು ಯಕ್ಷಗಾನ ಕಲಾವಿದ. ತಾಳಮದ್ದಳೆ ಅರ್ಥಧಾರಿ. ಭಾರ್ಗವ ವಿಜಯ ಪ್ರಸಂಗದ ಅವರ ’ಜಮದಗ್ನಿ", ಶಬರಿಮಲೆ ಕ್ಷೇತ್ರ ಮಹಾತ್ಮೆಯ ’ವಾವರ", ದಕ್ಷಾಧ್ವರ ಪ್ರಸಂಗದ ’ದಕ್ಷ ಮತ್ತು ಈಶ್ವರ.’. ಪಾತ್ರಗಳಿಗೆ ಹೊಸ ಮೆರುಗು ತಂದಿದ್ದರು. ಹವ್ಯಾಸಿಯಾಗಿ ಸಾಕಷ್ಟು ವೇಷಗಳನ್ನು ಮಾಡಿದ್ದರು. ತಾಳಮದ್ದಳೆಯಲ್ಲಿ ಕರುಣ, ದುಃಖ ರಸದ ಪಾತ್ರ ಪೋಷಣೆಯಲ್ಲಿ ಕೇಶವ ಭಟ್ಟರದು ಪ್ರತ್ಯೇಕ ಸ್ಥಾನ.

                ಹಲವು ವರುಷಗಳಿಂದ ಮಧುಮೇಹಕ್ಕೆ (ಸಕ್ಕರೆ ಕಾಯಿಲೆ) ಒಳಗಾದರು. ಎರಡು ವರುಷದಿಂದೀಚೆಗೆ ಕಿಡ್ನಿಗಳು ನಿಷ್ಕ್ರಿಯವಾದುವು. ಲಂಗ್ಸ್ನಲ್ಲಿ ನೀರು ತುಂಬಿ ಅಪಾಯ ಸ್ಥಿತಿಯಲ್ಲಿದ್ದಾಗ ಬೆಂಗಳೂರಿನ ಆಸ್ಪತ್ರೆಗಳಲ್ಲಿ ದಾಖಲಾಗಿ ಚಿಕಿತ್ಸೆ ಪಡೆದರು. ದೇಹದಲ್ಲಿ ರಕ್ತ ಪರಿಚಲನೆ ಸಮಸ್ಯೆಯಿಂದಾಗಿ ವಾರಕ್ಕೆ ಮೂರು ಸಲ ಡಯಾಲಿಸೀಸ್ ಮಾಡಿಸಿಕೊಳ್ಳಬೇಕಾಯಿತು. ವೈದ್ಯಕೀಯ ಆರೈಕೆಗಳು ನಡೆಯುತ್ತಿದ್ದಂತೆ ಎಡಗಾಲಿಗೆ ಡ್ರೈ ಗ್ಯಾಂಗಿನ್ ಬಾಧಿಸಿತು. ಪರಿಣಾಮವಾಗಿ ಎಡಗಾಲನ್ನು ಕತ್ತರಿಸಬೇಕಾದ ಪ್ರಮೇಯ ಬಂತು. ಪ್ರಸ್ತುತ ಕೇಶವ ಭಟ್ಟರು ಪುತ್ತೂರಿನ ಧನ್ವಂತರಿ ಆಸ್ಪತ್ರೆಯಲ್ಲಿ ದಾಖಲಾಗಿ ಡಾ.ರವಿಪ್ರಕಾಶರ ಶುಶ್ರೂಷೆಯಲ್ಲಿ ಚೇತರಿಸಲು ಸಾಹಸ ಪಡುತ್ತಿದ್ದಾರೆ.

               ಕೇಶವ ಭಟ್ಟರಿಗೆ ಸ್ವಂತದ್ದಾದ ಸೂರಿಲ್ಲ. ನಿವೇಶನವಿಲ್ಲ. ಹೋಟೆಲ್, ವೈದಿಕ, ಯಕ್ಷಗಾನದಲ್ಲಿ ಸಿಕ್ಕ ಅಲ್ಪ ಹಣದಿಂದ ಕುಟುಂಬವನ್ನು ನಿಭಾಯಿಸುತ್ತಿದ್ದರು. ಪತ್ನಿ ವಿನೋದ ಭಟ್. ಇಬ್ಬರು ಮಕ್ಕಳು. ಕೂಡಿಟ್ಟ ಹಣ, ಸ್ನೇಹಿತರಿಂದ ಪಡೆದ ಸಹಾಯಗಳು ಆಸ್ಪತ್ರೆ ವೆಚ್ಚಕ್ಕೆ ಸರಿದೂಗಿತು. ಇದುವರೆಗೆ ಹತ್ತು ಲಕ್ಷಕ್ಕೂ ಮಿಕ್ಕಿ ವೆಚ್ಚವಾಗಿದೆ. ಈಗ ಏನಿಲ್ಲವೆಂದರೂ ತಿಂಗಳಿಗೆ 35 ರಿಂದ 40 ಸಾವಿರ ರೂಪಾಯಿಗಳು ಆಸ್ಪತ್ರೆ ವೆಚ್ಚಗಳಿಗೆ ಬೇಕು.

                ಕೇಶವ ಭಟ್ಟರು ದುಡಿಯುವ ಸ್ಥಿತಿಯಲ್ಲಿಲ್ಲ. ಆರ್ಥಿಕವಾಗಿ ಸೊರಗಿದ್ದಾರೆ. ಆಸ್ಪತ್ರೆ ವೆಚ್ಚವನ್ನು ನೀಡುವಷ್ಟೂ ಆರ್ಥಿಕ ತೊಂದರೆಯಲ್ಲಿದ್ದಾರೆ. ಇಂತಹ ಸ್ಥಿತಿಯಲ್ಲಿ ಸಹೃದಯಿಗಳಾದ ತಾವು ಕೇಶವ ಭಟ್ಟರಿಗೆ ನೆರವೀಯುತ್ತೀರಾ? ಅವರ ಕುಟುಂಬದ ಕಣ್ಣೀರನ್ನು ಒರೆಸುವ ಸಣ್ಣ ಕೆಲಸವನ್ನಾದರೂ ಮಾಡೋಣ ಅಲ್ಲವೇ? ಅವರಿಗೆ ಬದುಕುವ ಅವಕಾಶವನ್ನು ಕೊಡೋಣ ಅಲ್ವಾ. ಇದೊಂದು ಪುಣ್ಯದ ಕೆಲಸ. ಅವರಿಗೀಗ ಬೇಕಾಗಿರುವುದು ಆರ್ಥಿಕ ಸಹಾಯ.

ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು (Puttur) ಇಲ್ಲಿನ ಎಕ್ಸಿಕ್ ಬ್ಯಾಂಕಿನಲ್ಲಿ ಕೇಶವ ಭಟ್ಟರ ಪತ್ನಿ ವಿನೋದ ಕೆ. ಭಟ್ ಅವರ ಉಳಿತಾಯ ಖಾತೆಯ ಅಕೌಂಟ್ ನಂಬ್ರ ಹೀಗಿದೆ : 910010049568821 (IFSC Code : UTIB 0001002)

ನಿಮ್ಮ ನೀಡುವ ಸಹಕಾರವನ್ನು ಅವರಿಗೆ ಎಸ್.ಎಂ.ಎಸ್.ಮೂಲಕ ತಿಳಿಸಿದರೆ ಉಪಕಾರ - ಮೊಬೈಲ್ ಸಂಖ್ಯೆ 9448616336

0 comments:

Post a Comment