Tuesday, June 22, 2010

ವಯನಾಡು ‘ಹಲಸು ಉತ್ಸವ’

ಕೇರಳದ ವಯನಾಡು ಜಿಲ್ಲೆಯ ಕಲ್ಪೆಟ್ಟಾದಲ್ಲಿ
ಜೂನ್ ೧೯, ೨೦ರಂದು ನಡೆದ ಹಲಸು ಮೇಳದ ಸಿಹಿ ನೋಟ. ಉರವು ಸಂಸ್ಠೆಯ ಸಾರಥ್ಥ್ಯ.
ಇದು ನಾಲ್ಕನೇ ಹಲಸು ಉತ್ಸವ.

Wednesday, June 9, 2010

ನಾಗರಾಜ್ ಕೈಹಿಡಿದ ಕಾಕಡ

ತುಮಕೂರು ಜಿಲ್ಲೆಯ ತೋವಿನಕೆರೆಯ ನಾಗನಾಯಕನಪಾಳ್ಯದ ನಾಗರಾಜ್ ಮೂಲತಃ ತೆಂಗು ಕೃಷಿಕರು. ನಾಲ್ಕೆಕರೆಯಲ್ಲಿ ಮೂರೂವರೆ ಎಕರೆ ತೆಂಗಿನ ತೋಟ. ಚಳಿಗಾಲದ ನಂತರ ಮುಂಗಾರು ತನಕ ಗಿಡಗಳಿಗೆ ಬಿಸಿಲ ಸ್ನಾನ! ಕುಡಿ ನೀರಿಗೂ ತತ್ವಾರ. ಇಳುವರಿ ತೀರಾ ಕಡಿಮೆ.

ಪರ್ಯಾಯ ಕೃಷಿಯೊಂದರ ಅಗತ್ಯ ಎದುರಾದಾಗ ಮಲ್ಲಿಗೆ ಕೃಷಿಯತ್ತ (ಕಾಕಡ ಹೂ) ಗಮನ. ಸುತ್ತುಮುತ್ತಲಿನ ಬಹುತೇಕ ಮಂದಿ ಕಾಕಡ ಬೆಳೆಯುತ್ತಿದ್ದರು. ಹಾಗಾಗಿ ಅರ್ಧ ಎಕರೆಯಲ್ಲಿ ಕಾಕಡ ಹೂ ಕೃಷಿ ಆರಂಭ. ಪ್ರಸ್ತುತ ನಾಗರಾಜ್ ಕುಟುಂಬವನ್ನು ಕಾಕಡವೊಂದೇ ಆಧರಿಸುತ್ತದೆ. ವರುಷಕ್ಕೆ ಒಂದೂವರೆ ಲಕ್ಷಕ್ಕೂ ಮಿಕ್ಕಿ ರೊಕ್ಕವನ್ನು ಕೈಗಿಡುತ್ತಿದೆ!

ಅರ್ಧ ಎಕರೆಯಲ್ಲಿ ನಾಲ್ಕು ವರುಷ ಪ್ರಾಯದ ಮುನ್ನೂರು ಕಾಕಡ ಗಿಡಗಳಿವೆ. ಕೊಳವೆಬಾವಿಯ ನೀರಿನಿಂದ ನೀರಾವರಿ. ಹಾಯಿ ಪದ್ಧತಿ ಮೂಲಕ ಹತ್ತು ದಿನಕ್ಕೊಮ್ಮೆ ನೀರುಣಿಕೆ. ವರುಷಕ್ಕೊಮ್ಮೆ ಹಟ್ಟಿಗೊಬ್ಬರದ ಜತೆ ರಾಸಾಯನಿಕ ಗೊಬ್ಬರ ಉಣಿಕೆ. 'ಮಳೆಗಾಲದಲ್ಲಿ ಹುಳ ಬರುತ್ತೆ. ಹಾಗಾಗಿ ತಿಂಗಳಿಗೊಮ್ಮೆ ವಿಷ ಸಿಂಪಡಣೆ ಅನಿವಾರ್ಯ' ಎನ್ನುವ ನಾಗರಾಜ್, ಉಳಿದ ಋತುವಿನಲ್ಲಿ ಹುಳಗಳ ನಿಯಂತ್ರಣಕ್ಕಾಗಿ ಕಾಕಡ ಹೂವಿನ ಎಲೆಗಳ ಮೇಲೆ ಹೊಗೆಸೊಪ್ಪು ಹುಡಿಗಳನ್ನು ಉದುರಿಸುತ್ತಾರೆ. ಇವುಗಳ ಘಾಟು ವಾಸನೆಗೆ ಹುಳಗಳು ಅಷ್ಟಾಗಿ ಬರುವುದಿಲ್ಲ ಎನ್ನುತ್ತಾರೆ.

ಮೊದಲ ವರುಷ ಕಾಕಡ ಗಿಡಗಳ ನಾಟಿ. ಅದರ ಮಧ್ಯದಲ್ಲಿ ಬದನೆ ಬೆಳೆದರು. 'ಕಾಕಡಕ್ಕೆ ಹೂಡಿದ ಬಂಡವಾಳ ಬದನೆ ಭರಿಸಿತು' ಎನ್ನುತ್ತಾರೆ. ಎರಡನೇ ವರುಷದಿಂದ ಮೊಗ್ಗು ಬಿರಿಯಲು ಶುರು. ಮೂರನೇ ವರುಷದಿಂದ ಇಳುವರಿ. ಕಾಕಡಕ್ಕೆ ನೆರಳು ಬೀಳುವ ಪ್ರದೇಶವಾದರೆ ಗಿಡ ಮತ್ತು ಹೂ ಚೆನ್ನಾಗಿ ಬರುವುದಿಲ್ಲ.

ಬೆಳಿಗ್ಗೆ ಏಳು ಗಂಟೆಗೆ ನಾಗರಾಜ್ ದಂಪತಿ ಹೂ ತೋಟದಲ್ಲಿರುತ್ತಾರೆ. ಹನ್ನೊಂದುವರೆಗೆಲ್ಲಾ ಹೂವನ್ನು ಆಯ್ದು ತೋವಿನಕೆರೆಯ ಕಾಕಡ ಮಾರುಕಟ್ಟೆಗೆ ನೀಡಿಕೆ. 'ದೂರದ ತುಮಕೂರಿಗೆ ಬೆಳ್ಳಂಬೆಳಿಗ್ಗೆ ಹೂ ಒಯ್ದರೆ ದರ ಚೆನ್ನಾಗಿ ಬರುತ್ತದೆ. ಬಿಸಿಲೇರಿದಂತೆ ಸುತ್ತಲಿನ ಹಳ್ಳಿಗಳಿಂದ ಹೂ ಬರಲಾರಂಭಿಸುತ್ತಿದ್ದಂತೆ ದರ ಇಳಿಯುತ್ತದೆ. ಈ ಏರಿಳಿಕೆಯನ್ನು ಸ್ಥಳದಲ್ಲಿದ್ದುಕೊಂಡೇ ಗಮನಿಸಬೇಕಾಗುತ್ತದೆ. ಹಳ್ಳಿಯ ನಮಗದು ತ್ರಾಸ. ಹಾಗಾಗಿ ಲೋಕಲ್ ಮಾರ್ಕೆಟ್ ಹೆಚ್ಚು ಸೂಕ್ತ' ಎಂದು ಅನುಭವ ಹಂಚಿಕೊಳ್ಳುತ್ತಾರೆ.

ಒಂದೂವರೆ ಕಿಲೋ ಕಾಕಡ ಹೂವೆಂದರೆ ಮೂರೂವರೆ ಸೇರು. ಸೇರು ಲೆಕ್ಕದಲ್ಲಿ ಮೊಗ್ಗನ್ನು ಖರೀದಿ ಮಾಡುತ್ತಿದ್ದ ದಿನಗಳಿದ್ದುವು. ಆದರೆ ಮಾರುಕಟ್ಟೆಯಲ್ಲಿ ಕಿಲೋ ಲೆಕ್ಕದಲ್ಲಿ ಮಾರಾಟ. ಕಿಲೋಗೆ 60ರಿಂದ 70 ರೂಪಾಯಿ ದರ. ಆಯುಧ ಪೂಜೆಯ ಸಮಯದಲ್ಲಿ ಕಿಲೋಗೆ ನಾಲ್ಕುನೂರು ರೂಪಾಯಿ ಆದುದೂ ಇದೆ! ಮಕರ ಸಂಕ್ರಾಂತಿಯ ನಂತರ ದರ ಕಡಿಮೆಯಾಗುತ್ತದೆ.

'ಸೀಸನ್ ಸಮಯದಲ್ಲಿ ಒಂದು ದಿವಸಕ್ಕೆ ಹದಿನೆಂಟು ಕಿಲೋದವರೆಗೂ ಮಾರುಕಟ್ಟೆಗೆ ಕೊಟ್ಟಿದ್ದೀವಿ. ಕಳೆದ ಜನವರಿ-ಮಾರ್ಚ್ ತಿಂಗಳುಗಳಲ್ಲಿ ಮೂವತ್ತು ಸಾವಿರ ಹೂ ಗಳಿಸಿಕೊಟ್ಟಿದೆ' ಎಂಬ ಸಂತಸ ಹಂಚಿಕೊಳ್ಳುತ್ತಾರೆ ಸುಧಾ ನಾಗರಾಜ್. ಇಂತಹ ಸಮಯದಲ್ಲಿ ಹೂವನ್ನು ಆಯಲು ಹೆಚ್ಚು ಮಂದಿ ಸಹಾಯಕರು ಬೇಕಾಗುತ್ತದೆ.

ತೋವಿನಕೆರೆ ಮಾರುಕಟ್ಟೆ ಮಧ್ಯಾಹ್ನ ಒಂದೂವರೆ ಗಂಟೆಗೆ ಬಾಗಿಲು ಮುಚ್ಚುತ್ತದೆ. ನಂತರ ಆಯ್ದ ಹೆಚ್ಚಿನ ಹೂವಿದ್ದರೆ ತುಮಕೂರು ಮಾರುಕಟ್ಟೆಗೆ. 'ಬೇಡಿಕೆ ಋತುವಿನಲ್ಲಿ ಕನಿಷ್ಠ ಹತ್ತು ಮಂದಿಯಾದರೂ ಸಹಾಯಕರು ಬೇಕೇ ಬೇಕು. ಒಬ್ಬರಿಗೆ ದಿವಸಕ್ಕೆ 30-40 ರೂಪಾಯಿ ವೇತನ. ಹೂವಿನಿಂದ ಸಿಕ್ಕ ರೊಕ್ಕದಲ್ಲಿ ಶೇ.25-30ರಷ್ಟು ಗೊಬ್ಬರ, ವೇತನ, ನಿರ್ವಹಣಾ ವೆಚ್ಚಕ್ಕೆ ಬೇಕು' ಎಂಬ ಅಂಕಿಅಂಶವನ್ನು ಮುಂದಿಡುತ್ತಾರೆ.

ನಾಗರಾಜ್ಗೆ ಬೇರೆ ಆದಾಯ ಮೂಲವಿಲ್ಲ. ಪೂರಿ ಕಾಕಡ ಹೂವಿನ ಕೃಷಿಯೇ ವೃತ್ತಿ. 'ಹೂ ಕೃಷಿಗೆ ತೊಡಗುವಾಗ ಕೃಷಿ ಇಲಾಖೆಯು ಎಕರೆಗೆ ಹದಿನೈದು ಸಾವಿರ ಸಹಾಯಧನ ಕೊಡ್ತೇವೆ ಅಂತ ಮುಂದೆ ಬಂದ್ರು. ನಾನು ತೆಕ್ಕೊಂಡಿಲ್ಲ' ಎಂದು ನಾಗರಾಜ್ ಹೇಳುವಾಗ ಅವರ ಸ್ವಾಭಿಮಾನದ ಬದುಕಿನ ಅನಾವರಣವಾಗುತ್ತದೆ. ಸ್ವಂತ ಕಾಲ ಮೇಲೆ ನಿಲ್ಲುವ ಛಲ.

'ವರುಷ ಪೂರಿ ಕಾಕಡಕ್ಕೆ ಬೇಡಿಕೆಯಿದೆ. ಈಗ ಸುತ್ತಮುತ್ತಲಿನ ಕೃಷಿಕರು ಹೂ ಬೆಳೆಯಲು ಆರಂಭಿಸಿದ್ದಾರೆ. ಆದರೆ ನಾವು ಹೂಗಳೊಂದಿಗೆ ಎಷ್ಟು ಹೊತ್ತು ಇರ್ತೀವೋ ಅಷ್ಟು ಪ್ರತಿಫಲ ಕೊಡ್ತದೆ' ಎಂಬ ವಿಶ್ವಾಸ ಅವರದು. ಕೆಲವೊಂದು ಸಲ ದರ ಕುಸಿದು ಕಿಲೋಗೆ ಐದು ರೂಪಾಯಿ ಆದುದೂ ಇದೆ. ಹಾಗೆಂತ ಹೂವನ್ನು ಕೊಯ್ಯದೆ ಗಿಡದಲ್ಲೇ ಬಿಟ್ಟರೆ ರೋಗ ಆಹ್ವಾನಿಸಿದಂತೆ.

'ಕಾಕಡಕ್ಕೆ ಚೆನ್ನಾದ ಮಾರುಕಟ್ಟೆಯಿದೆ. ಹೂವನ್ನೇ ನಂಬಿ ಬದುಕಬಹುದು ಎಂಬುದಕ್ಕೆ ನಾನೇ ಸಾಕ್ಷಿ' ಎನ್ನುತ್ತಾರೆ. ತನ್ನ ತೋಟದ ಪಕ್ಕದಲ್ಲಿ ಒಂದೆಕರೆ ಜಾಗವನ್ನು ನಾಗರಾಜ್ ಖರೀದಿಸಿ, ಅದರಲ್ಲಿ ಹೂವಿನ ಕೃಷಿಯನ್ನು ವಿಸ್ತರಿಸಲಿದ್ದಾರೆ. ಈಗಾಗಲೇ ಬೆಳೆವ ಹಂತದಲ್ಲಿರುವ ಮುನ್ನೂರೈವತ್ತು ಗಿಡಗಳು ಮುಂದಿನ ಋತುವಿನಲ್ಲಿ ಇಳುವರಿ ಪ್ರಾರಂಭಿಸಲಿದೆ. ಬೆಲೆ, ಬೆಳೆ ಎಲ್ಲವೂ ಸರಿಹೋದರೆ ನಾಗರಾಜ್ ಖುಷ್! ಅದೃಷ್ಟ ಬೇಕಷ್ಟೇ.

Saturday, June 5, 2010

ಅಂಬಲಿ ಹಲಸಿಗೆ ಮಾನವರ್ಧನೆ

ಈಗ ಹಲಸಿನ ಋತು. ಹಲಸಿನ ಹಪ್ಪಳವನ್ನು ಮಾಡುವ ಹಳ್ಳಿ ಸಡಗರಕ್ಕೆ ಇಳಿಲೆಕ್ಕವಾದರೂ, ಕೆಲವು ಮನೆಗಳಲ್ಲಿ ಈಗಲೂ ಅದೇ ಸಂಭ್ರಮ. ಈ ಸಾರಿಯ ಅಕಾಲ ಮಳೆಯಿಂದಾಗಿ ಹಪ್ಪಳ ಸಡಗರಕ್ಕೆ ಮಸುಕು. ಕಳೆದ ವಾರ ಬೆಂಗಳೂರಿನ ಕೃಷಿ ವಿಶ್ವವಿದ್ಯಾಲಯವು ಹಲಸಿನ ರಾಷ್ಟ್ರೀಯ ಕಾರ್ಯಾಗಾರ ಏರ್ಪಡಿಸಿತ್ತು. ಹಲಸನ್ನು ಕೂಡಾ ರಾಷ್ಟ್ರೀಯ ಮಟ್ಟಕ್ಕೇರಿಸುವ ವಿವಿಯ ಪ್ರಯತ್ನ ಶ್ಲಾಘನೀಯ.

ಹಲಸು ಉದ್ಯಮ ಬೆಳೆಯುತ್ತಿದೆ. ಸೊಳೆ ಮಾರಾಟದಿಂದ ತೊಡಗಿ, ವಿವಿಧ ಮೌಲ್ಯವರ್ಧಿತ ಉತ್ಪನ್ನಗಳಿಗೆ ಸಾಗರದಾಚೆಗೂ ಹಲಸಿನ ರುಚಿ ಗೊತ್ತಿದ್ದ ಗ್ರಾಹಕರಿದ್ದಾರೆ. ಹಪ್ಪಳ, ಚಿಪ್ಸ್ಗಳಿಗೆ ಈ ಋತುವಿನಲ್ಲಿ ಬೇಡಿಕೆ. ಕೆಲವರು ತಮ್ಮ ಕೈಗುಣದಿಂದಾಗಿ ಹುಡುಕಿ ಬರುವ ಗ್ರ್ರಾಹಕರನ್ನು ಸೃಷ್ಟಿಸಿದ್ದಾರೆ ! ಅಂತಹವರಲ್ಲಿ ತೀರ್ಥಹಳ್ಳಿಯ ರಮೇಶ್ ಒಬ್ಬರು.

ತೀರ್ಥಹಳ್ಳಿಯ ಟಿಎಪಿಸಿಎಂಎಸ್ ಬಳಿ ರಮೇಶರಿಗೆ ಚಿಕ್ಕ ಕ್ಯಾಂಟೀನ್. ಗಿರಾಕಿಗಳು ಇಲ್ಲದೆ ಇದ್ದಾಗಲೂ ಇವರಿಗೆ ಕೈ ತುಂಬಾ ಕೆಲಸ. ಮಧ್ಯಾಹ್ನ ಊಟದ ಬಿಡುವಿನಲ್ಲಿ ರಮೇಶ್ ನಾಲ್ಕೈದು ಹಲಸಿನ ಕಾಯಿ ತಂದು, ಮನೆಯಲ್ಲಿ ತುಂಡರಿಸಿಕೊಳ್ಳುತ್ತಾರೆ. ಒಂದು ಕಾಯನ್ನು ಕ್ಯಾಂಟೀನಿಗೆ ತರುತ್ತಾರೆ. ಬಿಡುವಿದ್ದಾಗ ಸೊಳೆ ಆಯುತ್ತಾರೆ. ಮನೆಯಲ್ಲಿ ಮಡದಿ ರಾಧಿಕಾರಿಗೂ ಇದೇ ಕೆಲಸ. ರಾತ್ರಿ ಹತ್ತರ ನಂತರ ಚಿಪ್ಸ್ ತಯಾರಿ.

ದಿನಕ್ಕೆ ಐದು ಕಿಲೋ ಮಾತ್ರ ಚಿಪ್ಸನ್ನು ತಯಾರಿಸುತ್ತಾರೆ. ಅಂದಂದಿನ ಉತ್ಪನ್ನ ಅಂದದೇ ಖಾಲಿ! ಹೆಚ್ಚು ಬೇಡಿಕೆಯಿದ್ದರೂ ತಯಾರಿಯ ಪ್ರಮಾಣದಲ್ಲಿ ವ್ಯತ್ಯಾಸವಾಗುವುದಿಲ್ಲ. 'ಸದ್ಯದ ಸ್ಥಿತಿಯಲ್ಲಿ ನಮ್ಮಿಂದಾಗುವುದು ಇಷ್ಟೇ. ಇದು ಸಹಾಯಕರನ್ನು ನಂಬಿ ಮಾಡುವ ಕೆಲಸವಲ್ಲ' ಎನ್ನುತ್ತಾರೆ ರಮೇಶ್.

ಹಲಸಿನ ಕಾಯಿ ತರುವುದು ಪರಿಚಯದ ನಾಲ್ಕೈದು ಮಂದಿಯ ಹಿತ್ತಿಲಿಂದ. ಒಂದಕ್ಕೆ ಹತ್ತು ರೂಪಾಯಿ ವರೆಗೂ ಪಾವತಿ. 'ಕಾಯಿ ಖಾಲಿ ಮಾಡಿ ಮಾರಾಯ್ರೆ. ಫ್ರೀಯಾಗಿ ಕೊಂಡೋಗಿ' ಎಂದು ಒತ್ತಾಯಿಸುವವರೂ ಇದ್ದಾರೆ. 'ಉಚಿತ ಅಂದರೆ ಒಂದೆರಡು ದಿನ ಒಯ್ಯಬಹುದು. ನಂತರ ಕಾಯಿ ಕೀಳುವಾಗೆಲ್ಲಾ ಸೌಜನ್ಯಕ್ಕಾಗಿಯಾದರೂ ಕಾಲೋ, ಆರ್ಧ ಕಿಲೋ ಚಿಪ್ಸ್ ಉಡುಗೊರೆ ಕೊಡಬೇಕು. ಕಾಲು ಕಿಲೋಗೆ 30 ರೂಪಾಯಿ ವೆಚ್ಚವಾಗುತ್ತದೆ. ಹೀಗೆ ನಷ್ಟ ಮಾಡಿಕೊಳ್ಳುವುದಕ್ಕಿಂತ ಕಾಯಿಗೆ ಹಣ ಕೊಟ್ಟೇ ತರುವುದು ಒಳ್ಳೆದಲ್ವಾ.'

ಚಿಪ್ಸ್ಗೆ ಅಂಬಲಿ ಹಲಸೇ ಬೇಕು. ಬಕ್ಕೆಯಾದರೆ ಚಿಪ್ಸ್ ಗಡುಸಾಗುತ್ತದೆ. ಕೊಯಿದಂದೇ ಚಿಪ್ಸ್ ಮಾಡಬೇಕು. ಹುರಿಯಲು ತೆಂಗಿನೆಣ್ಣೆ. ಹದ ಬಲಿತ ನಾಲ್ಕು ಕಾಯಿಂದ ಐದು ಕಿಲೋ ತಯಾರಾಗುತ್ತದೆ. ''ಚಿಪ್ಸ್ ತಿನ್ನುವಾಗ ಹೆಚ್ಚು ಗಟ್ಟಿಯಾಗಲೂ ಬಾರದು, ಮೆತ್ತಗಾಗಲೂ ಬಾರದು. ಗರಿಗರಿ ಇರಬೇಕು, ಜನ ಇದನ್ನು ಹೆಚ್ಚು ಇಷ್ಟ ಪಡುತ್ತಾರೆ'' ರಾಧಿಕಾ ಹೇಳುತ್ತಾರೆ. ತೆಂಗಿನೆಣ್ಣೆಯಲ್ಲಿ ಹುರಿದ ಚಿಪ್ಸ್ ಒಂದೂವರೆ ತಿಂಗಳು ಉಳಿಯುತ್ತದಂತೆ.

''ಗುಣಮಟ್ಟವೆಂಬುದು ದೊಡ್ಡ 'ಹೇಳಲಾರದ' ವಿದ್ಯೆಯಲ್ಲ. ಬೆಂಕಿ ಹದವಾಗಿರಬೇಕು. ಎಣ್ಣೆಯಲ್ಲಿರುವ ಸೊಳೆಯನ್ನು ಆಗಾಗ್ಗೆ ಅಲ್ಲಾಡಿಸುತ್ತಾ ಇರಬೇಕು. ಉಪ್ಪುನೀರು ಹಾಕಿ, ಸೌಟಿನಲ್ಲಿ ತಿರುಗಿಸದಿದ್ದರೆ ಚಿಪ್ಸ್ ಗಟ್ಟಿಯಾಗುತ್ತದೆ. ತುಂಬಾ ನಿಗಾ ಬೇಕು. ಮಾಡುತ್ತಾ ಮಾಡುತ್ತಾ ಪಾಕ ಕೈವಶವಾಗುತ್ತದೆ'' ದನಗೂಡಿಸಿದರು ರಮೇಶ್.

ಹಲಸಿನ ಸೊಳೆಯನ್ನು ಆಯ್ದು ಕತ್ತರಿಸುವಾಗ ಒಂದೇ ಆಕಾರ, ಉದ್ದಳತೆ ಬರುವಂತೆ ಎಚ್ಚರ. ಹುರಿದಿಟ್ಟ ಚಿಪ್ಸ್ ನೋಡಲು ಒಂದೇ ಥರ. ಗುಣಮಟ್ಟದ ಜತೆ ಇದೂ ಗಿರಾಕಿಗಳನ್ನು ಆಕರ್ಷಿಸುತ್ತದೆ.

ಕಿಲೋಗೆ ನೂರಿಪ್ಪತ್ತು ರೂಪಾಯಿ ಬೆಲೆ. ಕಚ್ಚಾವಸ್ತುಗಳ ದರ ಏರಿದಾಗ ನೂರ ಐವತ್ತರ ತನಕವೂ ಆದದ್ದಿದೆ. ಕಾಲು, ಅರ್ಧ ಮತ್ತು ಒಂದು ಕಿಲೋದ ಪ್ಯಾಕೆಟ್. ಸುಮಾರು 15-20 ಮಂದಿ ಖಾಯಂ ಗಿರಾಕಿಗಳು. ಬಹುತೇಕ ಸಾರಸ್ವತರು. ಅವರು ತಾವೂ ಬಳಸುವುದಲ್ಲದೆ ದೂರದ ಬಂಧುಗಳಿಗೆ ಚಿಪ್ಸ್ನ್ನು ಕಳುಹಿಸುತ್ತಾರಂತೆ. ಅದಕ್ಕಾಗಿ ಮುಂದಾಗಿ ಆರ್ಡರ್ ಕೊಟ್ಟು ಮಾಡಿಸುತ್ತಾರೆ. ಕೆಲವೊಮ್ಮೆ ಒಂದು ವಾರದ ಮುಂಚೆ ಚಿಪ್ಸನ್ನು ಆರ್ಡರ್ ಕೊಡಬೇಕಾಗುತ್ತದೆ! 'ತಕ್ಷಣಕ್ಕಾಗಿ ಅಂತ ಒಂದು ಕಿಲೋ ಸ್ಟಾಕ್ ಇರುತ್ತದೆ' ಗುಟ್ಟಿನಲ್ಲಿ ಹೇಳಿದರು.

ರಮೇಶ-ರಾಧಿಕಾರ 'ಎನ್. ಆರ್. ಹೋಮ್ ಪ್ರಾಡಕ್ತ್ಸ್'ನ ಚಿಪ್ಸ್ ದೂರದ ಮುಂಬಯಿ, ಹೈದರಾಬಾದ್, ದೆಹಲಿ, ದುಬಾಯಿ ಸೇರುತ್ತದೆ. ವಾರಕ್ಕೊಮ್ಮೆ ಸ್ಥಳೀಯ ಬೇಕರಿಗೆ ಐದು ಕಿಲೋ ಪೂರೈಕೆ. ಮಾರ್ಚಿನಿಂದ ಜೂನ್ ತನಕ ಬಿಡುವಿಲ್ಲದ ಕೈಕೆಲಸ.
ಇಪ್ಪತ್ಮೂರು ವರುಷಗಳಿಂದ ಕ್ಯಾಂಟೀನ್ ವೃತ್ತಿ. ತಿಂಡಿಯ ರುಚಿಗೆ ಹುಡುಕಿ ಬರುವ ಗಿರಾಕಿಗಳು. ಚಿಪ್ಸ್ ಉದ್ಯಮಕ್ಕೆ ಹತ್ತು ವರುಷವಾಗಿದೆ. 'ಮುಖ್ಯ ವೃತ್ತಿ ಕ್ಯಾಂಟೀನ್. ಇದು ಸೈಡ್ ಐಟಂ ಅಷ್ಟೇ' ಎಂದರೂ ನಾಲ್ಕು ತಿಂಗಳ ಕಾಲ ಇವರನ್ನು ಹಲಸು ಆಧರಿಸುತ್ತದೆ. ಏನಿಲ್ಲವೆಂದರೂ ಅರ್ಧ ಲಕ್ಷ ಗಳಿಸಿಕೊಡುತ್ತದೆ.


'ಹಲಸಿನ ಉತ್ಪನ್ನಗಳಿಗೆ ಅವಕಾಶಗಳು ಇವೆ. ಮಾಡುವ ಜನರಿಲ್ಲ ಅಷ್ಟೇ' ಜತೆಗಿದ್ದ ಸುಳುಗೋಡಿನ ಉಮೇಶ್ ವಸ್ತುಸ್ಥಿತಿಯನ್ನು ಹೇಳುತ್ತಾರೆ. ಬಿದ್ದು ಕೊಳೆತು ಮಣ್ಣಾಗಿ ಹೋಗುವ ಅಂಬಲಿ ಹಲಸು ಹೇಗೆ ತನ್ನ ಮಾನ ಉಳಿಸಿಕೊಳ್ಳಬಹುದು ಎಂಬುದಕ್ಕೆ ಈ ಉದ್ಯಮ ಚಿಕ್ಕ ಉದಾಹರಣೆ.

Thursday, June 3, 2010

ಕೃಷಿ-ಗ್ರಾಮೀಣ ಪತ್ರಿಕೋದ್ಯಮ ತರಬೇತಿಗೆ ಅರ್ಜಿ ಆಹ್ವಾನ

ಧಾರವಾಡದ ಕೃಷಿ ಮಾಧ್ಯಮ ಕೇಂದ್ರ 2010-11ನೇ ಸಾಲಿನ ಕೃಷಿ-ಗ್ರಾಮೀಣ ಪತ್ರಿಕೋದ್ಯಮ ತರಬೇತಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ಬರುವ ಅಕ್ಟೋಬರ್ನಲ್ಲಿ ಶುರುವಾಗಲಿರುವ ಅಂಚೆ ತೆರಪಿನ (ಕರೆಸ್ಪಾಂಡೆನ್ಸ್) ತರಬೇತಿ ಒಂದು ವರ್ಷ ಅವಧಿಯದ್ದಾಗಿರುತ್ತದೆ.

ಕೃಷಿ-ಗ್ರಾಮೀಣ ಪತ್ರಿಕೋದ್ಯಮದ ಮಹತ್ವ ಮತ್ತು ಸ್ವರೂಪ, ಬರಹದ ಪ್ರಕಾರಗಳು, ಬರವಣಿಗೆಯ ತಂತ್ರಗಾರಿಕೆ, ಛಾಯಾ ಪತ್ರಿಕೋದ್ಯಮ ಇವೇ ಮುಂತಾದ ವಿಷಯಗಳ ಕುರಿತು ಅನುಭವಿ ಬರಹಗಾರರಿಂದ ತರಬೇತಿ ನೀಡಲಾಗುವುದು. ಪ್ರಾಯೋಗಿಕ ಕಲಿಕೆಗೆ ಹೆಚ್ಚಿನ ಅವಕಾಶವಿದೆ. ಕೃಷಿಕರು, ಕಾಲೇಜು ಮತ್ತು ವಿಶ್ವವಿದ್ಯಾಲಯುಗಳಲ್ಲಿ ಪತ್ರಿಕೋದ್ಯಮ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು, ಸ್ವಯಂಸೇವಾ ಸಂಸ್ಥೆಗಳ ಕಾರ್ಯುಕರ್ತರು, ಕೃಷಿ-ಗ್ರಾಮೀಣ ಸಂಬಂಧಿ ಇಲಾಖೆಗಳು ಮತ್ತು ಸಂಸ್ಥೆಗಳಲ್ಲಿ ಕೆಲಸಮಾಡುತ್ತಿರುವವರಿಗೆ ಈ ತರಬೇತಿಯಿಂದ ವಿಶೇಷ ಪ್ರಯೋಜನವಿದೆ. ಇತರ ಆಸಕ್ತರೂ ಅರ್ಜಿ ಸಲ್ಲಿಸಬಹುದು. ವಿದ್ಯಾರ್ಹತೆ - ಎಸ್.ಎಸ್.ಎಲ್.ಸಿ. ಅಥವಾ ತತ್ಸಮಾನ ಕಲಿಕೆ. ಕನ್ನಡ ಚೆನ್ನಾಗಿ ಬರೆಯಬಲ್ಲ ಇತರ ಅಭ್ಯರ್ಥಿಗಳೂ ಅರ್ಜಿ ಸಲ್ಲಿಸಬಹುದು. ವಯೋಮಿತಿ 50 ವರ್ಷ.

ಕನ್ನಡದಲ್ಲಿ ಕೃಷಿ-ಗ್ರಾಮೀಣ ಪತ್ರಿಕೋದ್ಯಮದ ಬೆಳವಣಿಗೆಗಾಗಿ ಕೃಷಿ ಮಾಧ್ಯಮ ಕೇಂದ್ರ ಏಳು ವರ್ಷಗಳ ಹಿಂದೆ ಈ ತರಬೇತಿ ಆರಂಭಿಸಿದೆ. ಮೊದಲ ಆರು ತಂಡಗಳಲ್ಲಿ ತೇರ್ಗಡೆಯಾದ 70 ಮಂದಿಯನ್ನು 'ಕಾಮ್ ಫೆಲೋ'ಗಳೆಂದು ಪರಿಗಣಿಸಲಾಗಿದೆ. ಏಳನೇ ತಂಡದಲ್ಲಿ 30 ಮಂದಿ ತರಬೇತಿ ಪಡೆಯುತ್ತಿದ್ದಾರೆ. ಇದುವರೆಗೆ ತರಬೇತಿ ಪಡೆದವರು ವಿವಿಧ ಪತ್ರಿಕೆಗಳಿಗೆ ಲೇಖನಗಳನ್ನು ಬರೆಯುತ್ತಿದ್ದಾರೆ.

ಮಾಹಿತಿ ಪತ್ರ ಪಡೆದುಕೊಳ್ಳಲು ಕೊನೆಯ ದಿನ ಜುಲೈ 30, 2010. ಆಗಸ್ಟ್ 15ರ ಒಳಗಾಗಿ ಅರ್ಜಿ ನಮಗೆ ತಲುಪಬೇಕು. ಆಗಸ್ಟ್ 31ಕ್ಕೆ ಅಭ್ಯರ್ಥಿಗಳ ಮೊದಲ ಪಟ್ಟಿ ಪ್ರಕಟಿಸಲಾಗುವುದು. ತರಬೇತಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಅಕ್ಟೋಬರ್ 28ರಿಂದ 31ರ ವರೆಗೆ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆಯ ದೇವವೃಂದದಲ್ಲಿ ಪ್ರಾಥಮಿಕ ಶಿಬಿರ ನಡೆಸಲಾಗುವುದು. ಇದರಲ್ಲಿ ಅನುಭವಿ ಅಭಿವೃದ್ಧಿ ಬರಹಗಾರರು ಸಂಪನ್ಮೂಲ ವ್ಯಕ್ತಿಗಳಾಗಿ ಪಾಲ್ಗೊಂಡು ಶಿಬಿರಾರ್ಥಿಗಳಿಗೆ ಲೇಖನ ಬರವಣಿಗೆಯಲ್ಲಿ ಮಾಹಿತಿ-ಮಾರ್ಗದರ್ಶನ ನೀಡಲಿದ್ದಾರೆ. ಕ್ಷೇತ್ರಭೇಟಿ ಹಾಗೂ ಬರವಣಿಗೆಯಲ್ಲಿ ಪ್ರಾಯೋಗಿಕ ತರಬೇತಿ ಕೂಡ ಇರುತ್ತದೆ.

ಮಾಹಿತಿ ಪತ್ರ, ಅರ್ಜಿ ಮತ್ತಿತರ ವಿವರಕ್ಕಾಗಿ 50 ರೂಪಾಯಿ ಮೌಲ್ಯದ ಅಂಚೆಚೀಟಿ ಜತೆಯಲ್ಲಿರಲಿ.

ರಾಜ್ಯಮಟ್ಟದ ಕೃಷಿಪತ್ರಿಕೋದ್ಯಮ ಪ್ರಶಸ್ತಿಗೆ ಆಹ್ವಾನ

ಧಾರವಾಡದ ಕೃಷಿ ಮಾಧ್ಯಮ ಕೇಂದ್ರ 2010ನೇ ಸಾಲಿನ ರಾಜ್ಯಮಟ್ಟದ ಕೃಷಿಪತ್ರಿಕೋದ್ಯಮ ಪ್ರಶಸ್ತಿಗೆ ಪ್ರವೇಶಗಳನ್ನು ಆಹ್ವಾನಿಸಿದೆ. ಕನ್ನಡದಲ್ಲಿ ಅರ್ಥಪೂರ್ಣ ಕೃಷಿ-ಗ್ರಾಮೀಣ ಪತ್ರಿಕೋದ್ಯಮಕ್ಕೆ ಉತ್ತೇಜನ ನೀಡುವುದಕ್ಕಾಗಿ ಕೇಂದ್ರ ಈ ಪ್ರಶಸ್ತಿ ಸ್ಥಾಪಿಸಿದೆ.

ಆಸಕ್ತರು ಸೆಪ್ಟೆಂಬರ್ 2009ರಿಂದ ಆಗಸ್ಟ್ 2010ರ ನಡುವೆ ಯಾವುದೇ ಪತ್ರಿಕೆ ಅಥವಾ ನಿಯತಕಾಲಿಕದಲ್ಲಿ ಪ್ರಕಟಗೊಂಡ ಕೃಷಿಕಪರ ಬರಹವನ್ನು ಕಳುಹಿಸಿಕೊಡಲು ಕೋರಲಾಗಿದೆ. ಒಬ್ಬರು ಗರಿಷ್ಠ ಎರಡು ಲೇಖನಗಳನ್ನು ಕಳುಹಿಸಬಹುದು. ಲೇಖಕರು ತಮ್ಮ ಪೂರ್ಣ ವಿಳಾಸ ಹಾಗೂ ಸಣ್ಣ ಪರಿಚಯ ಬರೆಯುವುದು ಅಗತ್ಯ. ಪ್ರವೇಶದೊಂದಿಗೆ ಬಂದ ಲೇಖನಗಳನ್ನು ಹಿಂದಿರುಗಿಸಲಾಗುವುದಿಲ್ಲ. ಪ್ರವೇಶದೊಂದಿಗೆ ಹತ್ತು ರೂಪಾಯಿ ಅಂಚೆಚೀಟಿ ಕಳುಹಿಸಲು ಕೋರಿಕೆ. ಪ್ರವೇಶ ಸ್ವೀಕರಿಸಲು ಕೊನೆಯ ದಿನಾಂಕ : ಸೆಪ್ಟೆಂಬರ್ 5, 2010.

ವಿಳಾಸ:
ಕೃಷಿ ಮಾಧ್ಯಮ ಕೇಂದ್ರ,
119, 1ನೇ ಮುಖ್ಯರಸ್ತೆ, 4ನೇ ಅಡ್ಡರಸ್ತೆ, ನಾರಾಯಣಪುರ, ಧಾರವಾಡ - 580 008.