Monday, September 28, 2009

ಮಾಸಿಕ 'ಆಯುಧ ಪೂಜೆ'


ನವರಾತ್ರಿ ಕೊನೆಗೆ ಆಯುಧಪೂಜೆಯ ಸಡಗರ. ವರುಷಕ್ಕೊಮ್ಮೆ ಬರುವ ಈ ಹಬ್ಬ ನಗರದಿಂದ ಗ್ರಾಮದ ಕೊನೇ ತನಕ ಆಚರಿಸಲ್ಪಡುತ್ತದೆ. ವಾಹನಗಳೆಲ್ಲಾ ಶುಚಿಗೊಂಡು, ಕೆಲವು ಕಾಯಕಲ್ಪಗೊಂಡು, ಶೃಂಗಾರಗೊಳ್ಳುತ್ತವೆ. ಇನ್ನೂ ಕೆಲವಕ್ಕೆ ತಳಿರು-ತೋರಣ. ಆಯುಧಪೂಜೆ ತಿಂಗಳಿಗೊಂದು ಇರುತ್ತಿದ್ದರೆ? ಒಂದಂತೂ ಲಾಭ! ನಮ್ಮ ಸರಕಾರಿ ಬಸ್ಸುಗಳು ಶುಚಿಯಾಗುತ್ತಿದ್ದುವೋ ಏನೋ?
ಉತ್ತರ ಕರ್ನಾಟಕದ ಕೆಲವು ಭಾಗಗಳಲ್ಲಿ ತಿಂಗಳಿಗೊಮ್ಮೆ ವಾಹನಗಳಿಗೆ ಪೂಜೆ ಸಲ್ಲುತ್ತದೆ. ಗದಗಿನ ಕೃಷಿ-ಪತ್ರಕರ್ತ ಮಿತ್ರ ಆರ್.ಎಸ್.ಪಾಟೀಲರ ಮನೆ ಸೇರಿದಾಗ ಬೆಳಗ್ಗಿನ ಎಂಟು ಗಂಟೆಯಾಗಿತ್ತು. ಮನೆಯಲ್ಲಿ ಯಾಕೋ ಸಂಭ್ರಮದ ಛಾಯೆ. ಅರೆ. ಇಂದು ಅಮಾವಾಸ್ಯೆಯಾಗಿಯೂ ಯಾಕೆ ಇಷ್ಟೊಂದು ಲವಲವಿಕೆ! ಬಹುಶಃ ಈ ಭಾಗದಲ್ಲಿ ಇಂತಹ ಪರಂಪರೆ ಇದೆಯೋ ಏನೋ. ಸುಮ್ಮನಾದೆ.
ಪಾಟೀಲರಲ್ಲಿರುವ ಮೂರು ದ್ವಿಚಕ್ರ ವಾಹನಗಳಂದು ಸ್ನಾನಸುಖ ಅನುಭವಿಸುತ್ತಿದ್ದುವು. ಪೂರ್ತಿ ಶುಚಿಯಾದ ನಂತರ ಅಂಗಳದಲ್ಲಿ ಸರತಿ ಸಾಲಿನಲ್ಲಿ ನಿಂತುವು. ಮನೆಯ ಹಿರಿಯರಾದ ಉಮಾಬಾಯಿಯವರು ತಾವೇ ಕೊಯಿದು ಕಟ್ಟಿದ ಮೂರು ಹಾರವನ್ನು ತಂದು ವಾಹನಕ್ಕೆ ಹಾಕಿದರು. ಅದರ ಬೆನ್ನಿಗೆ ಮನೆಯೊಡತಿ ಅರಸಿನ, ಕುಂಕುಮದ ಹರಿವಾಣದೊಂದಿಗೆ ಬಂದರು. ಎಲ್ಲಾ ವಾಹನಗಳಿಗೂ ಪ್ರಸಾದ ಸ್ಪರ್ಸಿಸಿದರು. ಪಾಟೀಲರು ಮೂರೂ ವಾಹನಗಳ ಚಕ್ರದ ಮುಂದೆ ನಿಂಬೆಹಣ್ಣನ್ನಿಟ್ಟು, ವಾಹನವನ್ನು ಮುಂದಕ್ಕೆ ಚಾಲೂ ಮಾಡಿ ನಿಂಬೆಯನ್ನು ಅಪ್ಪಚ್ಚಿ ಮಾಡಿದಲ್ಲಿಗೆ ಪೂಜೆ ಮುಕ್ತಾಯ. ಇದು ಪ್ರತೀ ಅಮವಾಸ್ಯೆಯಂದು ನಡೆಯುವ 'ವಾಹನ ಪೂಜೆ' ಯಾ 'ಆಯುಧ ಪೂಜೆ'.
ಗದಗ, ಧಾರವಾಡ, ಹುಬ್ಬಳ್ಳಿ..ಮೊದಲಾದ ಜಿಲ್ಲೆಗಳಲ್ಲಿ ಅಮವಾಸ್ಯೆಯಂದು ದ್ವಿಚಕ್ರದಿಂದ ತೊಡಗಿ ಚತುಶ್ಚಕ್ರದ ವಾಹನಗಳಿಗೆ ಸುಗ್ಗಿ! ತೀರಾ ಅಗತ್ಯವಿದ್ದರೆ ಮಾತ್ರ ವಾಹನ ಚಾಲೂ. ಸಣ್ಣಪುಟ್ಟ ರಿಪೇರಿ ಕೆಲಸಗಳಿಗೆ ಆ ದಿನ ಶುಭದಿನ. ರಿಪೇರಿ ಕೆಲಸವಾಗುವಾಗ ರಾತ್ರಿಯಾಯಿತು ಎಂದಟ್ಟುಕೊಳ್ಳೋಣ. 'ರಿಪೇರಿಮನೆ'ಯಲ್ಲೇ ಪೂಜೆ ಮುಗಿಸಿ ತರುವುದು ಸಂಪ್ರದಾಯ. ಬದುಕಿನಲ್ಲಿ ಅಂಟಿದ ಆಚರಣೆ.
ಇದು ಆಮದಿತ ಆಚರಣೆ! ಉತ್ತರಪ್ರದೇಶದಲ್ಲಿ ಬಹು ನಂಬಿಕೆಯ ಆರಾಧನೆ. ಪಾಟೀಲರು ಹೇಳುತ್ತಾರೆ - ಉತ್ತರಪ್ರದೇಶದಿಂದ ಸಾಮಗ್ರಿ ತುಂಬಿದ ಲಾರಿಗಳು ಗದಗ ದಾರಿಯಾಗಿ ಸಾಗುತ್ತವೆ. ಅಮವಾಸ್ಯೆಯಂದು ನೀರಿರುವ ಕೆರೆ ಸಮೀಪ ಲಾರಿಗಳನ್ನು ನಿಲ್ಲಿಸುತ್ತಾರೆ. ವಾಹನಗಳನ್ನು ಶುಚಿಗೊಳಿಸುತ್ತಾರೆ. ಹೂಗಳಿಂದ ಅಲಂಕರಿಸುತ್ತಾರೆ. ಹಸಿಮೆಣಸಿನಕಾಯಿ, ನಿಂಬೆಹಣ್ಣು ಮತ್ತು ಪೊರಕೆ ಕಡ್ಡಿಗಳನ್ನು ಪರಸ್ಪರ ಪೋಣಿಸಿ ಲಾರಿಯ ಮುಂಭಾಗಕ್ಕೆ ಬಿಗಿಯುತ್ತಾರೆ. ವಾಹನಕ್ಕೆ ಆರತಿ ಮಾಡ್ತಾರೆ. ಅಂದು ವೃತ್ತಿಗೆ ಬಿಡುವು. ವಾಹನ ಚಾಲೂ ಮಾಡುವುದಿಲ್ಲ. ಮರುದಿವಸ ಪ್ರಯಾಣ ಶುರು.
ವಾಹನದಲ್ಲಿ ದೂರ ಪ್ರಯಾಣ ಮಾಡುವುದರಿಂದ 'ಸುರಕ್ಷತೆ' ದೃಷ್ಟಿಯಿಂದ ಈ ಆಚರಣೆ ಬಂದಿದೆ. ಇದನ್ನು ನೋಡಿ ನಮ್ಮ ಭಾಗದ ಜನ ಅನುಸರಿಸಿದರು. ಎಲ್ಲಿಯವರೆಗೆ ಅಂದರೆ ಅದನ್ನು ಬಿಡಲಾಗದಷ್ಟು ಬದುಕಿನಲ್ಲಿ ಹಾಸುಹೊಕ್ಕಾಗಿದೆ ಎನ್ನುತ್ತಾರೆ ಹಿರಿಯರಾದ ಉಮಾಬಾಯಿಯವರು. ಇದು ವಾಹನದ ಮಾತಾಯಿತು. ಜಾನುವಾರುಗಳ ಸುರಕ್ಷತೆಗೂ ಅಮವಾಸ್ಯೆಯಂದು ಪೂಜೆ ಇಲ್ಲಿ ನಡೆಯುತ್ತದೆ.
ಹಟ್ಟಿಯಲ್ಲಿ ವಿಶೇಷವಾಗಿ ಒಂದು ಕಂಬವನ್ನು ಊರುತ್ತಾರೆ. ಇದು 'ಕರೆವ್ವ' ದೇವತೆಯ ಪ್ರತೀಕ. ಕಂಬಕ್ಕೆ ಅಲಂಕಾರ ಮಾಡಿ, ಪೂಜೆ ಮಾಡುತ್ತಾರೆ. ತೆಂಗಿನಕಾಯಿಯನ್ನು ಒಡೆದು ಸಮರ್ಪಣೆ. ದನಗಳು ಹಾಲು ಕರೆಯಲು ಬಿಡದೇ ಇದ್ದಾಗ, ಆಗಾಗ್ಗೆ ಕರು ಸಾಯುವಿಕೆ, ದನಗಳ ರೋಗಗಳು - ಇಂತಹ ಜಾನುವಾರು ರೋಗಗಳಿಗೆ ಕರೆವ್ವಳ ಆರಾಧನೆ ದಿವ್ಯ ಔಷಧಿ ಎಂಬುದು ನಂಬುಗೆ.
'ಜಾನುವಾರುಗಳಿಗೆ ಈ ರೀತಿಯ ರೋಗಗಳು ಬಂದಾಗ ರೈತ ಗಾಬರಿಯಾಗುತ್ತಾನೆ. ಗೊಂದಲಕ್ಕೀಡಾಗುತ್ತಾನೆ. ಈ ಗಾಬರಿ ಪರಿಹಾರಕ್ಕೆ ಒಂದು ದೇವರು - ಕರೆವ್ವಾ. ಇವಳು ಆಕಳ ದೇವತೆ. ನಮ್ಮ ಮನೆಯಲ್ಲೂ ಈ ಆರಾಧನೆ ಅಮವಾಸ್ಯೆಯನ್ನು ನಡೆಯುತ್ತದೆ. ಈಗಷ್ಟೇ ಮುಗಿಸಿ ಬಂದೆ' ಎನ್ನುವಾಗ ಉಮಾಬಾಯಿಯವರಲ್ಲಿ ಸಂತೃಪ್ತಿ. ಮನುಷ್ಯನ ಸಮಾಧಾನಕ್ಕೆ, ಸುಖಕ್ಕಾಗಿ 'ಕೈಮೀರಿದ ಶಕ್ತಿಗೆ ಶರಣು' ಬರುವುದಕ್ಕೆ ಇವೆಲ್ಲಾ ಉಪಾಧಿಗಳು.
ನಮ್ಮೆಲ್ಲಾ ಆಚರಣೆಗಳ ಹಿಂದಿನ ಆಶಯಗಳೂ ಹೀಗೇನೇ. ಎಪ್ಪತ್ತರ ಹಿರಿಯ ಜೀವ ಉಮಾಬಾಯಿಯವರು 'ಇಂತಹ ಸಂಪ್ರದಾಯಗಳನ್ನು ಬಿಡಬಾರದು. ಅದು ಬದುಕಿನ ಸೂತ್ರ. ಅದನ್ನು ಮೂಢನಂಬಿಕೆಯ ಪಾಶದಲ್ಲಿ ಬಂಧಿಸಬೇಡಿ. ಯಾರೋ ಒಬ್ಬನಿಗೆ ಸುಖ ಸಿಕ್ತದೆ ಅಂತಾದರೆ ಅದನ್ನು ಕಸಿಯುವ ಹಠ ಯಾಕೆ' ಎಂದು ಪ್ರಶ್ನಿಸುತ್ತಾರೆ. ಸರಿ, ಮೂಢನಂಬಿಕೆಯ ಸಾಲಿಗೆ ಬೇಕಾದರೆ ಸೇರಿಸಿ. ಆದರೆ ಅಮವಾಸ್ಯೆಯ ಹೆಸರಿನಲ್ಲಿ ವಾಹನಗಳಾದರೂ ಶುಚಿಯಾಗ್ತದಲ್ಲಾ! ಮನಸ್ಸು ಶುಚಿಯಾಗದಿದ್ದರೂ ತೊಂದರೆಯಿಲ್ಲ - ಆರ್.ಎಸ್.ಪಾಟೀಲರು ದನಿಗೂಡಿಸಿದರು.

Wednesday, September 23, 2009

ಮಳೆಗೆ ಕೊಚ್ಚಿಹೋದ 'ಕೃಷಿಮೇಳ'!

ಸೆಪ್ಟೆಂಬರ್ 19 ರಿಂದ 22ರ ತನಕ ಧಾರವಾಡ ಕೃಷಿ ವಿಶ್ವವಿದ್ಯಾಲಯದ ಕಾಲಾವಧಿ 'ಕೃಷಿಮೇಳ'ನಡೆಯಿತು. ಐದು ಲಕ್ಷಕ್ಕೂ ಮಿಕ್ಕಿ ರೈತರು ಭಾಗವಹಿಸಿದ್ದರು ಎನ್ನುವುದು ವರಿಷ್ಠರ ಅಂಕಿಅಂಶ. ಮೂರು ದಿವಸ ಅಪರಾಹ್ನ ಬೀಸಿದ ಮಳೆಗೆ 'ಕೃಷಿಮೇಳ'ವೇ ಕೊಚ್ಚಿಹೋಯಿತು ಎಂದರೆ 'ಯಾಕಪ್ಪಾ ನೆಗೆಟಿವ್' ಮಾತನಾಡುತ್ತಾರೆ ಅನ್ನಬಹುದು! ನಾಲ್ಕುನೂರಕ್ಕೂ ಮಿಕ್ಕಿದ ಮಳಿಗೆದಾರರನ್ನು ಮಾತನಾಡಿಸಿದರೆ ಇದೇ ಮಾತು.

ಕಾರಣ ಇಲ್ಲದಿಲ್ಲ. ಒಂದೆಡೆ ಬೆಳೆದುನಿಂತ ಪೈರಿನ ಹೊಲ. ಮತ್ತೊಂದೆಡೆ ಹೊಲದಲ್ಲಿ ತಲೆಯೆತ್ತಿದ ಮಳಿಗೆಗಳು. ಮಧ್ಯದಲ್ಲಿ ಸ್ವಲ್ಪ ಎತ್ತರದಲ್ಲಿ ರಸ್ತೆ. ಮಳೆನೀರು ಹರಿದು ಹೋಗದೆ ಮಳಿಗೆಗಳಿಗೆ ನುಗ್ಗಿ, ಅಚೀಚೆ ಹರಿದು ಕೊಚ್ಚೆಯನ್ನೇ ನಿರ್ಮಿಸಿಬಿಟ್ಟಿತು. ಈ ಕೊಚ್ಚೆ ಇಂಗುವುದು ಬಿಡಿ, ಬಿಸಿಲಿಗೂ ಒಣಗದಷ್ಟು ಅಂಟಟು. ಜನರು ಓಡಾಡಿ ಕೆಸರು ಎಷ್ಟು ಹದವಾಗಿತ್ತು ಅಂದರೆ, ಕಾಲಿಗಂಟಿದ ಮಣ್ಣು 'ಬಬ್ಲ್ಗಂ' ಆಗಿತ್ತು!

ಈ ರಾಡಿಯಲ್ಲಿ ಶೇ.25 ಮಂದಿ ಓಡಾಡಿರಬಹುದು. ಉಳಿದಂತೆ ರಸ್ತೆಯಲ್ಲಿ ಉದ್ದಕ್ಕೆ ಪಥಸಂಚಲನ ಮಾಡಿ, 'ನಾನೂ ಕೃಷಿ ಮೇಳಕ್ಕೆ ಹೋಗಿ ಬಂದೆ' ಎನ್ನಲಡ್ಡಿಯಿಲ್ಲ! 'ಇಲ್ಲಾರಿ, ನಮಗೆ ಇಂತಹ ರಾಡಿಯಲ್ಲಿ ಒಡಾಡಿ ರೂಢಿಯಿದೆ' ಕೆಲವರೆಂದರು. ಸಂಸಾರದೊಡನೆ ಬಂದಂತಹವರು 'ಎಂತಹ ಕೊಚ್ಚೆ ಮಾರಾಯ್ರೆ. ನಮ್ಮಿಂದಾಗದು' ಎನ್ನುತ್ತಾ ಹಾಗೆ ಸುತ್ತಾಡಿ ಹೋದವರೇ ಜಾಸ್ತಿ! ಕೊಚ್ಚೆಯಲ್ಲಿ ಜನರು ನಡೆದಾಡುವ ಜಾಗದಲ್ಲಿ ಒಂದಷ್ಟು ಜಲ್ಲಿ ಹಾಕಿ ವಿವಿ 'ಮಾನವೀಯತೆ' ಮೆರೆಯಿತು!

ಮಳಿಗೆಗಳಲ್ಲಿ (ಕ್ಷಮಿಸಿ, ಅಂಗಡಿಗಳು!) ವ್ಯಾಪಾರನೂ ಅಷ್ಟಕ್ಕಷ್ಟೇ. ಈ ಮಧ್ಯೆ ವಿವಿಯ ಮಾಮೂಲಿ ಮೇಳ ಕಲಾಪ ಮುಖ್ಯ ವೇದಿಕೆಯಲ್ಲಿ ನಡೆಯುತ್ತಿತ್ತು. ಮಳೆ, ಮಿಂಚು, ಗುಡುಗು..ಇದ್ಯಾವುದೂ ಕಲಾಪಕ್ಕೆ ಅಡ್ಡಿ ಬರಲಿಲ್ಲ. ಕಾರಣ - ಅಲ್ಲಿ ಸುರಕ್ಷತೆಯಿತ್ತು!ಅಕಾಲ ವರ್ಷಕ್ಕೆ (ಧಾರವಾಡದಲ್ಲಿ 2ನೇ ಮಳೆಗಾಲ) ವಿವಿಯಾದರೂ ಏನು ಮಾಡಬಹುದು? ಉತ್ತಮ ಟ್ರಾಫಿಕ್, ಆಸಕ್ತ ವಿಜ್ಞಾನಿಗಳು, ಅಧಿಕಾರಿಗಳು, ಸಿಬ್ಬಂದಿಗಳು ತೊಡಗಿಸಿಕೊಂಡಿದ್ದರು.

ಒಟ್ಟಿನಲ್ಲಿ ಎಲ್ಲರಲ್ಲೂ ಒಂದೇ ಮಾತು - 'ಒಂದು ತಿಂಗಳು ಬಿಟ್ಟು ಕೃಷಿಮೇಳ ಮಾಡಬಹುದಿತ್ತು'.

Wednesday, September 16, 2009

ಪುಳ್ಳಿ ಸಂಘ

ಹಿಡಿಯಗಲದ ಮೊಬೈಲ್ನಲ್ಲಿ ಪ್ರಪಂಚವನ್ನು ಕಾಣುವಷ್ಟು ಮುಂದುವರಿದಿದ್ದೇವೆ! ಈ ಓಟದಲ್ಲಿ 'ಓಡಲೇಬೇಕಾದ್ದು' ಅನಿವಾರ್ಯ. ಓಡುವ ವೇಗದಲ್ಲಿ ಸಂಬಂಧಗಳು, ಬಾಂಧವ್ಯಗಳು, ಕುಟುಂಬ ಅನ್ಯೋನ್ಯತೆಗಳು ಮಸುಕಾಗುತ್ತಿವೆ. ದೊಡ್ಡಪ್ಪನ ಮಕ್ಕಳು, ಚಿಕ್ಕಪ್ಪನ ಮಕ್ಕಳು ಯಾರೆಂದೇ ಗೊತ್ತಿರುವುದಿಲ್ಲ. 'ಗೊತ್ತಿರಬೇಕಾಗಿಲ್ಲ' ಎಂದು ವಾದಿಸುವವರೂ ಇಲ್ಲದಿಲ್ಲ!

ಕೌಟುಂಬಿಕ ವಾತಾವರಣವೂ ಮುಖ್ಯ ಕಾರಣ. ಉದಾ: ನನ್ನದೇ ಉದಾಹರಣೆ! ಹೊಟ್ಟೆಪಾಡಿಗಾಗಿ ಕೇರಳದ ಆ ತುದಿಯಿಂದ ಈ ತುದಿಗೆ ತಂದೆಯವರು ಬಂದಾಗ - ಬಂಧುಗಳು ಅಪರೂಪವಾದರು. ತಂದೆಯಣ್ಣ ತಿರುವನಂತಪುರದಲ್ಲಿ ವಾಸ. ಅವರ ಮಕ್ಕಳೆಲ್ಲರೂ ಅಲ್ಲೇ ಉದ್ಯೋಗ ಹಿಡಿದು 'ಸೆಟ್ಲ್' ಅಗಿದ್ದಾರೆ. ದೊಡ್ಡಪ್ಪನನ್ನು ಒಮ್ಮೆಯೂ ಕಂಡದ್ದಿಲ್ಲ. ಮತ್ತೆ ಅವರ ಮಕ್ಕಳ ಗುರುತು ಸಿಕ್ಕಿತೇ? ಅಪರೂಪಕ್ಕೆ ಭೇಟಿಯಾದಾಗ ಅಪರಿಚಿತರಂತೆ ಇರಬೇಕಾದ 'ಏಕಾಂತ'! ಮಾತಿಗೆಳೆದರೂ 'ಮಾತುಸಿಗದಷ್ಟು' ಅಂತರ. ಭಾಷಾ ಸಮಸ್ಯೆಯೂ ಇತ್ತು. ಅದು ದೊಡ್ಡದಲ್ಲ ಬಿಡಿ. ಭುಜಹಾರಿಸುತ್ತಾ, ಕೈಸನ್ನೆ ಮಾಡುತ್ತಾ, ಮುಖ ಕಿವುಚುತ್ತಾ ಮಾತನಾಡಬಹುದು. ಆದರೆ ವಿಷಯ ಬೇಕಲ್ಲಾ!

'ಒಲೆಯೊಂದು ಹತ್ತಾದಾಗ ಸಮಸ್ಯೆಯೂ ತಲೆ ಮೇಲೆ ಕೂರುತ್ತೆ' ಕೊಪ್ಪದ ವಸಂತ್ ತಮ್ಮ ಅನುಭವ ಹೇಳಿಕೊಳ್ಳುತ್ತಾರೆ. ಇದು ವಸಂತರ ಸಮಸ್ಯೆ ಮಾತ್ರವಲ್ಲ. ಮನೆಮನೆಯ ಸಮಸ್ಯೆ. ಎಲ್ಲರ ಸಮಸ್ಯೆ.ಇದರಿಂದ ಬಿಡುಗಡೆ ಹೇಗೆ? ಇದಕ್ಕೊಂದು ಸಂಘಟನೆ ಇದ್ದರೆ? ಒಂದೋ ಎಲ್ಲರೂ ಒಟ್ಟಾಗಲು ಅಥವಾ ದೂರವಿದ್ದೇ ಅರ್ಥಮಾಡಿಕೊಳ್ಳುವಂತಹ ವ್ಯವಸ್ಥೆ ಇದ್ದರೆ ಕೊನೇ ಪಕ್ಷ ಸಂವಹನವಾದರೂ ನಡೆದೀತು.

ಈ ಆಲೋಚನೆ ಗಿರಿಕಿಯಲ್ಲಿರುವಾಗಲೇ ಕೋಡಪದವಿನ ಕಿನಿಲ ಅಶೋಕರಲ್ಲಿಗೆ ಹೋಗಿದ್ದೆ. ಮಾತಿನ ಮಧ್ಯೆ ತಾನಿರುವ ಹಿರಿಮನೆಯ 'ಪುಳ್ಳಿ ಸಂಘ'ವನ್ನು ಜ್ಞಾಪಿಸಿಕೊಂಡರು. (ಪುಳ್ಳಿ ಅಂದರೆ ಮೊಮ್ಮಗ, ಮೊಮ್ಮಗಳು) ಅರೇ, ಸಹಕಾರ ಸಂಘವನ್ನು ಕೇಳಿದ್ದೇನೆ. ಇತರ ಕಲಾ ಸಂಘಗಳು ಗೊತ್ತು. ಜಾತಿ ಸಂಘಗಳನ್ನು ದೂರದಿಂದ ನೋಡಿದ್ದೇನೆ. ಆದರೆ 'ಪುಳ್ಳಿ ಸಂಘ'?

ಈ ಸಂಘಕ್ಕೆ ಕುಟುಂಬದ 'ದೊಡ್ಡಪುಳ್ಳಿ' ಅಧ್ಯಕ್ಷ. ಶುಭ ಸಮಾರಂಭಗಳಿಗೆ ಎಲ್ಲಾ ಸದಸ್ಯರು ಸೇರಿದಾಗ ಹಿರಿಯಜ್ಜನ ಉಸ್ತುವಾರಿಕೆಯಲ್ಲಿ ಸಂಘದಿಂದ ಸಾಂಸ್ಕೃತಿಕ ಕಾರ್ಯಕ್ರಮ. ಕೈಬರೆಹದ 'ಕಾಟಂಕೋಟಿ' ಎಂಬ ವಾರ್ತಾಪತ್ರ. ಅದಕ್ಕೊಬ್ಬ ಸಂಪಾದಕ. ಎರಡು ದಶಕಗಳ ಹಿಂದಿನವರೆಗೂ ಸುಮಾರು 40-45 ಪುಳ್ಳಿಗಳಿದ್ದ ಸಂಘ ನಮ್ಮ ಮನೆಯಲ್ಲಿತ್ತು - ಅಶೋಕರು ತಮ್ಮ ನೆನಪಿನಾಳದಿಂದ ಒಂದಷ್ಟನ್ನು ಮೊಗೆಯುತ್ತಾರೆ.

ಜತೆಯಲ್ಲಿದ್ದ ಮಂಚಿ ಶ್ರೀನಿವಾಸ ಆಚಾರ್ರಿಗೆ ಪುಳ್ಳಿ ಸಂಘ ಪ್ರೇರಣೆ ನೀಡಿತು. ಮಂಚಿ ಮನೆಯಲ್ಲಿ ತಮ್ಮ ತೀರ್ಥರೂಪರ ನೆನಪಿನಲ್ಲಿ 'ಮಂಚಿ ನಾರಾಯಣ ಆಚಾರ್ ಪುಳ್ಳಿ ಸಂಘ'ಕ್ಕೆ ಚಾಲನೆ ನೀಡಿದರು. ಮೊದಲ ಕಾರ್ಯ ವಾರ್ತಾಪತ್ರ ಪ್ರಕಟಣೆ. ಕುಟುಂಬದ ಸದಸ್ಯರೊಳಗೆ ಬಾಂಧವ್ಯ ಬೆಳೆಯುವಂತೆ ಹಾಗೂ ಬೇರೆಡೆ ನೆಲೆಸಿರುವವರಲ್ಲಿ ಸಂಪರ್ಕ, ಮಾಹಿತಿ ವಿನಿಮಯ ಹೂರಣ.

ಮಂಚಿ ನಾರಾಯಣ ಆಚಾರ್ರವರು ಸಾಮಾಜಿಕ ಕಾರ್ಯಕರ್ತರಾಗಿದ್ದರು. ಹಲವು ಪ್ರಥಮಗಳ ರೂವಾರಿ. ಹತ್ತು ಮಕ್ಕಳ ತಂದೆ. 24 ಮೊಮ್ಮಕ್ಕಳು, 23 ಮರಿಮಕ್ಕಳು, 15 ಸಂಗಾತಿಗಳು..ಹೀಗೆ ದೊಡ್ಡ ಸಂಸಾರ. ಇವರೆಲ್ಲರೂ ಈಗ ಪುಳ್ಳಿ ಸಂಘದ ಸದಸ್ಯರು!ಪ್ರಕಟಿತ ವಾರ್ತಾಪತ್ರದಲ್ಲಿ ಕುಟುಂಬ ವಂಶಾವಳಿ; ಮೊಮ್ಮಕ್ಕಳು, ಜೀವನಸಂಗಾತಿಗಳು, ಮರಿಮಕ್ಕಳ ವಿವರಗಳು, ಮೊಮ್ಮಕ್ಕಳ ಪ್ರಸ್ತುತ ವಿದ್ಯಾಭ್ಯಾಸ, ಉದ್ಯೋಗದ ವಿವರ, ರಸಪ್ರಶ್ನೆ, ನಿಕಟ ಭವಿಷ್ಯದ ಕೌಟುಂಬಿಕ ಕಾರ್ಯಕ್ರಮ...ಇವಿಷ್ಟು. ಇದು ಅನಿಯತಕಾಲಿಕ ಪ್ರಕಟಣೆ. ಮೊದಲ ಸಂಚಿಕೆಯನ್ನು 80ರ ಅಜ್ಜಿ (ಈಗ ದಿವಂಗತ) ಪದ್ಮಾವತಿಯವರಿಗೆ ಸಮರ್ಪಿಸಿದ್ದಾರೆ.

ಕಳೆದ್ಮೂರು ವರುಷದಲ್ಲಿ ಐದಾರು ವಾರ್ತಾಪತ್ರಗಳು ಪ್ರಕಟಗೊಂಡಿವೆ. ಹಿರಿಮನೆಯ ಆಗುಹೋಗುಗಳ ಕುರಿತು ಮಾಹಿತಿ ನೀಡಬಲ್ಲ ಇಂತಹ ಕೌಟುಂಬಿಕ ವಾರ್ತಾಪತ್ರವು ದೂರದೂರಿನ ಮನೆಬಂಧುಗಳಿಗೆ ಒಂದು ಮಾತನಾಡುವ ವೇದಿಕೆ. ಕುಟುಂಬವನ್ನು ಹತ್ತಿರದಿಂದ ನೋಡುವ ವ್ಯವಸ್ಥೆಯಿದು. ಮಂಚಿ ಶ್ರೀನಿವಾಸ ಆಚಾರ್, ಕಿನಿಲ ಅಶೋಕ....ತಮ್ಮ ಕುಟುಂಬದ ವಂಶಾವಳಿಯನ್ನು ತಯಾರಿಸಿ, ಅದನ್ನು ತಮ್ಮ ಕುಟುಂಬದ ಮಂದಿಗೆ ಹಂಚಿದ್ದಾರೆ. 'ಮೊದಲು ಕುಟುಂಬವನ್ನು ಅರಿಯೋಣ, ಮತ್ತೆ ಪ್ರಪಂಚವನ್ನು ಅರಿಯೋಣ' ಎಂಬ ಮಾತನ್ನು ಸಾಕಾರಗೊಳಿಸಿದ್ದಾರೆ.

ಪರಿಸ್ಥಿತಿಯ ಕೈಗೊಂಬೆಯಿಂದಾಗಿ ಚದುರಿದ್ದ ಕೌಟುಂಬಿಕರನ್ನು ಪುಳ್ಳಿಸಂಘವು ಒಟ್ಟು ಮಾಡುತ್ತದೆ. ಮನಸ್ಸು-ಮನಸ್ಸುಗಳನ್ನು ಬೆಸೆಯುತ್ತದೆ. ಅಜ್ಜ, ಮುತ್ತಜ್ಜ, ತಾತ...ಶಬ್ದದ ಉಚ್ಚಾರದ ಮೂಲಕ ಮತ್ತೊಮ್ಮೆ ಕುಟುಂಬ ಸಂತೋಷವನ್ನು ಅನುಭವಿಸುವಂತೆ ಮಾಡುತ್ತದೆ.ಈಚೆಗೆ 'ವಂಶಾವಳಿ'ಗಳ ಬಗ್ಗೆ ಆಸಕ್ತಿ ಮೂಡುತ್ತಿದೆ. ದಾಖಲಾತಿ ನಡೆಯುತ್ತಿದೆ. ಹಿರಿಯರನ್ನು ಜ್ಞಾಪಿಸುವ, ಬದುಕನ್ನು ಹಿಂತಿರುಗಿ ನೋಡುವ ಅಭ್ಯಾಸ ಶುರುವಾಗಿದೆ.

Tuesday, September 15, 2009

'ಎಂಚಿನ ಸಾವುದ ಬರ್ಸ..'!

ವರುಷ ಜೂನ್ ಪೂರ್ತಿ ಮಳೆ ಮುಷ್ಕರ ಹೂಡಿತ್ತು. 'ಛೇ ಮಳೆ ಬರ್ಲೇ ಇಲ್ಲ. ಎಂತಹ ಅವಸ್ಥೆ ಮಾರಾಯ್ರೆ' - ಸಿಕ್ಕಲ್ಲೆಲ್ಲಾ ಇದೇ ಮಾತು. 'ನಮ್ಮ ಕಾಲದಲ್ಲಿ ಹೀಗೆ ಆಗಿದ್ದಿಲ್ಲ. ಮೇ ಶುರುವಾಗಬೇಕಾದರೆ ಜಡಿಮಳೆ' ಹಿರಿಯರು ದನಿಸೇರಿಸುತ್ತಾರೆ.

ಇತ್ತ ನಮ್ಮ ಜಲಾಶಯಗಳು ಬತ್ತುವ ಆತಂಕ. ವಿದ್ಯುತ್ಗೆ ಕುತ್ತು. 'ಈಗಿರುವ ನೀರು ಒಂದೇ ವಾರಕ್ಕೆ ಸಾಕು' - ಮಂತ್ರಿ ಮಹೋದಯರು ಜನರಲ್ಲಿ ಇನ್ನಷ್ಟು ಆತಂಕದ ಬೀಜ ಬಿತ್ತಿದರು! ಎಲ್ಲೋ ಒಂದೆಡೆ 'ಮೋಡ ಬಿತ್ತನೆ' ಮಾಡಬಹುದೆನ್ನುವ ಸುದ್ದಿ. ಕೃಷಿ ವಲಯ ತತ್ತರ. 'ಮುಂದೇನು' ಪ್ರಶ್ನೆಯೊಂದಿಗೆ ಆಗಸದತ್ತ ದೃಷ್ಟಿ!

ಮಳೆ ಬರಲು ದೇವಾಲಯಗಳಲ್ಲಿ ಪೂಜೆ ಆರಂಭವಾಯಿತು. ಕಪ್ಪೆಗಳಿಗೆ ಮದುವೆಯಾಯಿತು. ಸೀಮಂತ ನಡೆಯಿತು. ಪುತ್ರೋತ್ಸವದ ಸುದ್ದಿ ಬಂದಿಲ್ಲ! ಅಂತೂ ಜುಲಾಯಿಯಲ್ಲಿ ಮಳೆ ಸುರುವಾಯಿತು. ಬಾಕಿಯಿದ್ದ ಎಲ್ಲವನ್ನೂ 'ಬಾಚಿ ಕೊಟ್ಟಂತೆ' ಸುರಿಯಿತು. ಮಧ್ಯದಲ್ಲಿ ಸ್ವಲ್ಪ ಬಿಡುವು ತೆಕ್ಕೊಂಡು ಮತ್ತೆ ಎಂದಿನಂತೆ ತನ್ನ ಪಾಡಿಗೆ ಸುರಿಯುತ್ತಿದೆ. ಜಲಾಶಯಗಳೆಲ್ಲಾ ಭರ್ತಿಯಾದುವು. ಮೊದಲು 'ನೀರು ಇಲ್ಲ' ಎಂಬ ಆತಂಕ. ಈಗ ಭರ್ತಿಯಾಗಿ ಹೆಚ್ಚಿನ ನೀರು ಬಿಟ್ಟರೆ ಕೆಳಗಿನ ಪ್ರದೇಶಕ್ಕೆ ನೀರು ನುಗ್ಗಿ ಒಂದಷ್ಟು ಅನಾಹುತ ಮಾಡಿಬಿಡುತ್ತದೆಂಬ ಆತಂಕ.

ಕಪ್ಪೆಗಳಿಗೆ ಮದುವೆ ಮಾಡಿದವರು 'ನೋಡಿ ಮದುವೆಯ ಪ್ರಭಾವ' ಅಂತ ಬೀಗಿದರೆ, ಸೀಮಂತ ಮಾಡಿದವರಿಗೆ ತಲೆಬಿಸಿ- 'ಛೇ... ಮೊದಲೇ ಮಾಡುತ್ತಿದ್ದರೆ ಬೇಗ ಮಳೆ ಬರುತ್ತಿತ್ತೇನೋ'!ಈ ಮಧ್ಯೆ ಗ್ರಹಣ ಬಂತು. 'ಇದು ದೇಶಕ್ಕೆ ಅನಿಷ್ಟ' ಎಂಬ ಭಾವನೆ ಬರುವಂತಹ ವಾತಾವರಣ ಸೃಷ್ಟಿಯಾಯಿತು. ಹೋಮ ಹವನಾದಿಗಳು ನಡೆದುವು. 'ಗ್ರಹಣದಿಂದ ನಮ್ಮ ಲೈಫಲ್ಲಿ ಏನೋಗುತ್ತೋ ಏನೋ' ಎಂಬ ಆತಂಕದಲ್ಲಿ ಕೆಲವರಿದ್ದರೆ, ಇನ್ನೂ ಕೆಲವರು 'ಛೇ..ಮೋಡ ಬಂದು ಗ್ರಹಣ ನೋಡಲು ಆಗಲೇ ಇಲ್ವಲ್ಲಾ' ಅಂತ ಕೈ ಹಿಚುಕಿಕೊಂಡರು.

ನಿನ್ನೆ ಮೊನ್ನೆ ದಿನವಿಡೀ ಮಳೆ. 'ಎಂಚಿನ ಸಾವುದ ಬರ್ಸಯಾ..ಉಂತುನಲಾ ಉಜ್ಜಿ..ನರಕ್ಕದ..' ಹತ್ತು ಬಾಯಿಗಳಿಂದ ಸಹಸ್ರನಾಮ! ಮಳೆ ಬಂದರೂ ಕಷ್ಟ, ಬಾರದಿದ್ದರೂ ಕಷ್ಟ! ಒಂದಷ್ಟು ನಾಶ-ನಷ್ಟಗಳು. ನಾಡದೊರೆಗಳ ಆಗಮನ. ಅಂತರಿಕ್ಷದಿಂದ ಸಮೀಕ್ಷೆ. ಪರಿಹಾರ ಘೋಷಣೆ ಮುಂತಾದ ಪ್ರಹಸನಗಳ ಸುದ್ದಿ ಕೇಳುವುದೇ ರೋಚಕ!

ಕಳೆದ ವಾರ ನಮ್ಮ ಚೇರ್ಕಾಡಿ ರಾಮಚಂದ್ರ ರಾಯರಲ್ಲಿಗೆ ಹೋಗಿದ್ದೆ. ಅವರಿಗೀಗ ತೊಂಭತ್ತು. ದೇಹ ಮಾಗಿದೆ. ಆದರೆ ಮನಸ್ಸು ಮಾಗಿಲ್ಲ! 'ಮಳೆ ಬರಲಿ. ಅದನ್ನು ಪ್ರಕೃತಿಯೇ ನಿಶ್ಚಯಮಾಡುತ್ತದೆ. ನನ್ನ ಬಾಲ್ಯ ನೆನಪಿದೆ. ಮೇ ತಿಂಗಳಲ್ಲಿ ಮಳೆ ಹೊಯ್ಯಲು ಶುರುಮಾಡಿದರೆ ಆಗಸ್ಟ್-ಸೆಪ್ಟೆಂಬರ್ ತಿಂಗಳ ತನಕವೂ ಹನಿಕಡಿಯುವುದಿಲ್ಲ' ಎಂದು ಜ್ಞಾಪಿಸಿಕೊಂಡರು.

ನಗರದ ಮಧ್ಯೆ ನಿಂತು 'ನಾನು ಮಳೆಯನ್ನು ಅನುಭವಿಸಿದೆ' ಎಂದರೆ ಹಾಸ್ಯಾಸ್ಪದ. ನಿಜಕ್ಕೂ ಹಳ್ಳಿ ಮನೆಯಲ್ಲಿದ್ದು 'ಮಳೆಗಾಲ'ವನ್ನು ಕಳೆಯಬೇಕು. ಏನಾಗುತ್ತೋ ಅಂತ ಕ್ಷಣಕ್ಷಣಕ್ಕೂ ಆತಂಕ, ಭಯ. ನೆರೆಪೀಡಿತ ಪ್ರದೇಶವಾದರಂತೂ

ಮುಗಿಯಿತುಬಹುಶಃ 25-30 ವರುಷಗಳ ಹಿಂದಿನ ಒಂದು ಆಟಿ ತಿಂಗಳು. ನಮ್ಮ ಮನೆ ಪಯಸ್ವಿನೀ ನದಿಯ ತೀರದಲ್ಲಿತ್ತು. ಮನೆಯ ಒಂದು ಪಾರ್ಶ್ವ ಹೊಳೆ, ಮತ್ತೊಂದು ಬದಿ ಗದ್ದೆ-ಬಯಲು. ಆಟಿಯ ಮಳೆಯೆಂದರೆ ಮನೆಯ ಹೊರಗೆ ಕಾಲಿಡಲೂ ಆಗದಂತಹ ಸ್ಥಿತಿ. ಆ ವರುಷ ಸುರಿದ ಮಳೆಗೆ ಹೊಳೆ ತುಂಬಿ ನೆರೆ ಬಯಲನ್ನೂ ಆಕ್ರಮಿಸಿತು. ನಮ್ಮದು ಮುಳಿಮಾಡು, ಮಣ್ಣಿನಗೋಡೆ. ಮನೆ ಆರ್ಧ ನೆರೆನೀರಲ್ಲಿ ಮುಳುಗಿದಾಗ, ನಾವು ಅಟ್ಟವನ್ನೇರಿದ್ದೆವು. ಊರಿನವರು ಬಿದಿರಿನಿಂದ ಮಾಡಿದ 'ಪಿಂಡಿ'ಯನ್ನು ಬಳಸಿ ನಮ್ಮ ಕುಟುಂಬವನ್ನು ರಕ್ಷಿಸಿದ ಅಂದಿನ ಘಟನೆಯನ್ನು ಅಮ್ಮ ಹೇಳಿದಾಗ ರೋಮಾಂಚನವಾಗುತ್ತದೆ. ಬಹುಶಃ ಅಂತಹ ಮಾರಿ ಮತ್ತೆ ನೋಡಿಲ್ಲ!

ಈ ರೀತಿಯ ಅನುಭವ ಹೊಳೆತೀರದಲ್ಲಿ ವಾಸ್ತವ್ಯವಿದ್ದ ಬಹುತೇಕರಿಗೆ ಆದ ಅನುಭವ. 'ಕಳೆದ ವರುಷ ಗುರುಪುರದ ಹತ್ತಿರದ ಒಂದು ಕುದ್ರುವಿಗೆ ಹೋಗಿದ್ದೆ. ಮಳೆಗಾಲದ ನಾಲ್ಕು ತಿಂಗಳು ಪೂರ್ತಿ ದ್ವೀಪ. ದೋಣಿ ಬದುಕು. ಕೃಷಿ ಮಾಡುವಂತಿಲ್ಲ. ಕೂಡಿಟ್ಟದ್ದು ಆಗ ಉಪಯೋಗಕ್ಕೆ ಬರುತ್ತದೆ. ಇಂತಹ ಕುದ್ರುಗಳು ಕರಾವಳಿ ಉದ್ದಗಲಕ್ಕೂ ಬೇಕಾದಷ್ಟಿವೆ. ಇಲ್ಲಿನ ಮಳೆಗಾಲದ ಅನುಭವವೇ ಬೇರೆ. ಇವರು ಎಲ್ಲಾದರೂ 'ಎಂಚಿನ ಸಾವುದ ಬರ್ಸ' ಅಂತ ಹೇಳಿದರೆ ಅದಕ್ಕೊಂದು ಅರ್ಥವಿದೆ!

ಗದ್ದೆಹುಣಿಯಲ್ಲಿ ಜಾರುತ್ತಾ-ಬೀಳುತ್ತಾ, ಹಳ್ಳಕ್ಕೆ ಅಡ್ಡವಾಗಿರುವ 'ಪಾಂಪು' (ಎರಡು ಮರವನ್ನು ಜೋಡಿಸಿ ನಿರ್ಮಿಸಿದ ದೇಸೀ ಸೇತುವೆ) ದಾಟಿ ಶಾಲೆ ಸೇರಿದಾಗ, 'ಕೋಣ..ಯಾಕೆ ತಡ ಮಾಡಿದಿ' ಎಂದು ಗುದ್ದು ಕೊಡುವ ಅಧ್ಯಾಪಕರು! ಅಡುಗೆ ಮನೆಯಲ್ಲಿ ಒದ್ದೆಯಾದ ಉಡುಪನ್ನು ಆರಲು ತೂಗಿಸಿ, ಮರುದಿನ ಅದೇ 'ಹೊಗೆವಾಸನೆ'ಯ ಉಡುಪನ್ನು ತೊಟ್ಟು ಶಾಲೆಗೆ ಹೋಗುವ ಆ ದಿನಗಳು - ನಿಜಕ್ಕೂ 'ಮಳೆಗಾಲದ ಅನುಭವದ' ದಿನಗಳು! 'ಬೇಸಿಗೆಯಲ್ಲಿ ಮಾಡಿಟ್ಟ ಹಪ್ಪಳ, ಸಾಂತಾಣಿಗೆ ರುಚಿ ಬರುವುದು ಆಟಿ ತಿಂಗಳಲ್ಲಿ! ಧೋ ಎಂದು ಮಳೆ ಸುರಿಯುತ್ತಿದ್ದಾಗ, ಒಲೆ ಮುಂದೆ ಬೆಚ್ಚಗೆ ಕುಳಿತು 'ಕಟುಕುಟುಂ' ಅಂತ ಜಗಿಯುತ್ತಿದ್ದಾಗ ಸಿಕ್ಕುವ ಆನಂದ ಬೇರೆಲ್ಲೂ ಸಿಗದು!

ಕಾಲ ಬದಲಾಗಿದೆ. ನಾವು ಬದಲಾಗಿದ್ದೇವೆ. ಅಭಿವೃದ್ಧಿಗೊಂಡಿದ್ದೇವೆ.' ಎಂಬ ಭ್ರಮೆ ನಮ್ಮಲ್ಲಿದೆಯಲ್ಲಾ. ಅಲ್ಲಿನ ತನಕ ಸುರಿವ ಮಳೆಯೂ 'ಎಂಚಿನ ಸಾವುದ ಬರ್ಸ'ವಾಗುತ್ತದೆ. ಬೇಸಿಗೆಯಲ್ಲಿ ನೀರಿಗೆ ಹಾಹಾಕಾರವಾಗುವಾಗ ಮತ್ತೆ 'ನೀರು, ಮಳೆಯ' ನೆನಪಾಗುತ್ತದೆ.

Monday, September 7, 2009

ಪುತ್ತೂರಿನಲ್ಲಿ ಅಡಿಕೆ ಯಂತ್ರ ಮೇಳ-2009

ಕೃಷಿಕರಿಗೆ ಎಲ್ಲಾ ಅಡಿಕೆ ಸುಲಿಯುವ ಯಂತ್ರಗಳನ್ನು ಒಂದೇ ಕಡೆ ವೀಕ್ಷಿಸುವ ಸದವಕಾಶ ಕಲ್ಪಿಸಲು ಅಕ್ಟೋಬರ್ 30 ರಿಂದ ಮೂರು ದಿನಗಳ ಕಾಲ ಪುತ್ತೂರಿನಲ್ಲಿ 'ಅಡಿಕೆ ಯಂತ್ರ ಮೇಳ-2009'ನ್ನು ಪ್ರಪ್ರಥಮ ಬಾರಿಗೆ ಸಂಯೋಜಿಸಲಾಗಿದೆಯೆಂದು ಅಡಿಕೆ ಸಂಶೋಧನೆ ಮತ್ತು ಅಭಿವೃದ್ಧಿ ಪ್ರತಿಷ್ಠಾನದ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

ಪುತ್ತೂರಿನ ವಿವೇಕಾನಂದ ವಿದ್ಯಾವರ್ಧಕ ಸಂಘದ ಸಹಯೋಗದಲ್ಲಿ ನಡೆಸುವ ಈ ಕಾರ್ಯಕ್ರಮಕ್ಕೆ ಫಾರ್ಮರ್ ಫಸ್ಟ್ ಟ್ರಸ್ಟ್ ಸಹಕಾರ ನೀಡಲಿದೆ. ಪುತ್ತೂರಿನ ನೆಹರೂ ನಗರದಲ್ಲಿರುವ ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನ ಆವರಣದಲ್ಲಿ ಈ ಮೇಳವು ನಡೆಯಲಿದ್ದು, ಇದರಲ್ಲಿ ಹಸಿ ಮತ್ತು ಗೋಟಡಿಕೆ ಸುಲಿಯುವ ಯಂತ್ರ ಮತ್ತು ಅಡಿಕೆಗೆ ಬೋರ್ಡೋ ದ್ರಾವಣ ಸಿಂಪಡಿಸುವ ಉಪಕರಣಗಳ ಪ್ರಾತ್ಯಕ್ಷಿಕೆಯೂ ಇರುತ್ತದೆ.

ಈ ವರೆಗೆ ಅಭಿವೃದ್ಧಿಪಡಿಸಲಾಗಿರುವ ಸುಮಾರು 30ಕ್ಕೂ ಹೆಚ್ಚು ಅಡಿಕೆ ಸುಲಿಯುವ ಮತ್ತು ಸಿಂಪಡಣ ಉಪಕರಣ/ಯಂತ್ರಗಳ ಪೈಕಿ ಬೆರಳೆಣಿಕೆಯವನ್ನು ಬಿಟ್ಟರೆ ಉಳಿದವನ್ನೆಲ್ಲಾ ಮೆಕ್ಯಾನಿಕಲ್ ಇಂಜಿನಿಯರಿಂಗ್ನಲ್ಲಿ ಶಿಕ್ಷಣ ಪಡೆಯದಿರುವ ಕೃಷಿಕರೇ ಅಭಿವೃದ್ಧಿಪಡಿಸಿರುವುದು ಗಮನಾರ್ಹ ವಿಷಯವಾಗಿದೆ. ಕೃಷಿಕರಿಗೆ ಈ ಯಂತ್ರಗಳ ಪರಿಚಯ ಮಾಡುವುದರ ಜೊತೆಗೆ ಸಂಶೋಧಕ/ತಯಾರಕರಿಗೆ ತಮ್ಮ ಯಂತ್ರಗಳನ್ನು ನಾಡಿನ ರೈತರಿಗೆ ತೋರಿಸಿಕೊಡುವ ಅಪೂರ್ವ ಅವಕಾಶವೂ ಇದಾಗಿದೆ. ಅಡಿಕೆ ಕೃಷಿರಂಗದಲ್ಲಿ ಇಂತಹ ಕಾರ್ಯಕ್ರಮ ನಡೆಯುವುದು ಇದೇ ಮೊದಲು.

ಈ ಮೇಳದಲ್ಲಿ ಅಡಿಕೆ ಯಂತ್ರಗಳ ಬಗ್ಗೆ ವಿಚಾರ ಸಂಕಿರಣ, ಸಂಶೋಧಕರೊಂದಿಗೆ ಮುಖಾಮುಖಿ ಸಂವಾದ ಕಾರ್ಯಕ್ರಮವೂ ಇರುತ್ತದೆ. ಈ ಅಡಿಕೆ ಯಂತ್ರ ಮೇಳದ ಯಶಸ್ವೀ ನಿರ್ವಹಣೆಗಾಗಿ ಸಂಯೋಜನಾ ಸಮಿತಿಯೊಂದನ್ನು ರಚಿಸಿದ್ದು, ಆ ಸಮಿತಿಯು ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿದೆ. ಈಗಾಗಲೇ ಹೆಚ್ಚಿನ ಯಂತ್ರೋಪಕರಣ ತಯಾರಕರಿಗೆ ಆಹ್ವಾನ ನೀಡಲಾಗಿದ್ದು, ಅಕಸ್ಮಾತ್ ಆಹ್ವಾನ ತಲುಪಿರದಿದ್ದಲ್ಲಿ, ಅವರು ಸದ್ರಿ ಅಡಿಕೆ ಯಂತ್ರ ಮೇಳ - 2009 ರ ಸಮಿತಿಯ ಸಂಚಾಲಕ ಶ್ರೀ ಪಿ. ಶ್ಯಾಮ್ ಭಟ್ (ಮೊಬೈಲ್ ನಂಬರ್ 9448122272 ಅಥವಾ 0824 - 2445606) ರವರನ್ನು ಕೂಡಲೇ ಸಂಪರ್ಕಿಸಿ ತಮ್ಮ ಹೆಸರನ್ನು 15/09/2009 ರ ಒಳಗೆ ನೊಂದಣಿ ಮಾಡಿಕೊಳ್ಳಬಹುದು.

ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ, ರಾಜರ್ಷಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರ ಅಧ್ಯಕ್ಷತೆಯಲ್ಲಿ ಹಾಗೂ ಕ್ಯಾಂಪ್ಕೋದ ಅಧ್ಯಕ್ಷರಾದ ಶ್ರೀ ಎಸ್. ಆರ್. ರಂರಂಗಮೂರ್ತಿಯವರು ಮೆನೇಜಿಂಗ್ ಟ್ರಸ್ಟಿಯಾಗಿರುವ ಈ ಸಂಶೋಧನಾ ಪ್ರತಿಷ್ಠಾನವು ಕಳೆದ ವರ್ಷ ಮಂಗಳೂರಿನಲ್ಲಿ ಅಡಿಕೆಯ ಅಂತಾರಾಷ್ಟ್ರೀಯ ಮಟ್ಟದ ಸಮ್ಮೇಳನವನ್ನು ನಡೆಸಿದೆ.

Saturday, September 5, 2009

ನೀರಿನರಿವಿಗೆ 'ಕಾಡ ನಡಿಗೆ'

ಹೊಸಗುಂದ - ಸಾಗರ ತಾಲೂಕಿನ ಸರಹದ್ದಿನಲ್ಲಿರುವ ಗ್ರಾಮ. ಇಲ್ಲಿನ ಶರಾವತಿ ನದಿ ಕಣಿವೆಯ ಮೇಲ್ಬಾಗದಲ್ಲಿ ಸುಮಾರು ಆರುನೂರು ಎಕರೆ ದಟ್ಟವಾದ ಕಾಡಿದೆ. ಅಂಚಿನಲ್ಲಿ ಪ್ರಾಚೀನ ಉಮಾಮಹೇಶ್ವರ ದೇವಸ್ಥಾನವು ಕಾಯಕಲ್ಪಗೊಳ್ಳುತ್ತಿದೆ. ಹಾಗಾಗಿ ಈ ಕಾಡು ಈಗ 'ದೇವರ ಕಾಡು'.

ಕಳೆದೆರಡು ವರುಷಗಳಿಂದ ಕಾಡಿನಂಚಿನಲ್ಲಿ ಮಳೆಕೊಯ್ಲನ್ನು ಮತ್ತು ನೀರಿನರಿವನ್ನು ಬಿತ್ತುವ 'ನೀರಿನ ಹಬ್ಬ' ನಡೆದಿತ್ತು. ಹಿಂದಿನ ವರುಷಗಳ ನೀರಿನ ಕೆಲಸದ ಫಲಶ್ರುತಿಯನ್ನು ಪ್ರತ್ಯಕ್ಷ ತೋರಿಸುವ ಈ ವರುಷದ 'ನೀರಿನ ಹಬ್ಬ'ವೇ ವಿಶಿಷ್ಟ. ಸಾಗರದ ಸುತ್ತಮುತ್ತಲಿನ ಐದಾರು ಶಾಲೆಗಳ ವಿದ್ಯಾರ್ಥಿಗಳಂದು ನೀರಿನಲ್ಲಿ ತೋಯ್ದರು, ಮಣ್ಣಲ್ಲಿ ಬಿದ್ದೆದ್ದು 'ಮಣ್ಣಿನ ಮಕ್ಕಳಾದರು'! ಕಾಡಿನಲ್ಲೆಲ್ಲಾ ಓಡಾಡಿದರು.

'ನೋಡಿ. ಎರಡು ವರುಷದ ಹಿಂದೆ ಈ ಪುಷ್ಕರಣಿ ಭಣಗುಟ್ಟುತ್ತಿತ್ತು. ಈಗ ಎಷ್ಟು ತುಂಬಿದೆ. ನೀರಿಂಗಿಸಿದ್ದರ ಫಲಶ್ರುತಿ' ಸಿಎಮ್ಮೆನ್ ಶಾಸ್ತ್ರಿಯವರು ವಿವರಿಸುತ್ತಿದ್ದಂತೆ, 'ಅದು ಹೇಗೆ ಸಾಧ್ಯ' ವಿದ್ಯಾರ್ಥಿಗಳಂದ ಚೋದ್ಯಪ್ರಶ್ನೆ.'ಕಾಡಿನಂಚಿನಲ್ಲಿ ನೂರೈವತ್ತು ಇಂಗುಗುಂಡಿಗಳು, ಎಂಟು ಕೆರೆಗಳ ಮೂಲಕ ಮಳೆನೀರು ಇಂಗಿ ಪುಷ್ಕರಣಿ ತುಂಬಿದೆ. ಈ ವರುಷದ ಬೇಸಿಗೆಯಲ್ಲೂ ಬತ್ತಿಲ್ಲ!' - ಕಾತರದ ಕಣ್ಣುಗಳಿಗೆ ಮತ್ತಷ್ಟು ಗೊಂದಲ. ಎಂಟು ಸರಣಿ ಕೆರೆಗಳ ಹತ್ತಿರ ಕರೆದೊಯ್ದು, ವಿವರಿಸಿದಾಗಲೇ ಸಮಾಧಾನ. 'ಮಳೆನೀರು ಎಫ್.ಡಿ.ಇದ್ದಂತೆ, ಅದನ್ನು ನಗದೀಕರಿಸುವುದು ಮಾತ್ರ ಬೇಸಿಗೆಯಲ್ಲಿ' - ಶ್ರೀ ಪಡ್ರೆಯವರಿಂದ ಇನ್ನಷ್ಟು ಮಾಹಿತಿ.

'ಹೊಸ ಕೊಳವೆ ಬಾವಿ ಕೊರೆಯುವುದಕ್ಕಿಂತ ಒಂದೆರಡು ಇಂಗುಗುಂಡಿಯೋ, ಕೆರೆಯನ್ನೋ ತೋಡಿಸಿ. ಹೆಚ್ಚು ವೆಚ್ಚವಾಗದು, ಫಲಿತಾಂಶ ಶೀಘ್ರ' ಹಾಸ್ಯಮಿಶ್ರಿತ ಧ್ವನಿಯಲ್ಲಿ ಹೇಳಿದರು ಸ್ಥಳೀಯ ಷಣ್ಮುಖಪ್ಪ. ಸರಣಿ ಕೆರೆಗಳು ಯಾವಾಗ ತುಂಬಿದುವೋ, ನಮ್ಮ ತೋಟದ ಕೊಳವೆ ಬಾವಿಯೂ ತುಂಬಿತು - ಶಾಸ್ತ್ರಿ ಉವಾಚ. ' ನೋಡಿ, ಕೆಳಗಿನ ಗದ್ದೆಗಳು ಐದು ದಶಕಗಳ ಹಿಂದೆ ವರುಷಕ್ಕೆ ಎರಡು ಬೆಳೆ ನೀಡುತ್ತಿದ್ದುವು. ಕಾಡು ಒಣಗಿತು. ಅಂತರ್ಜಲ ಕುಗ್ಗಿತು. ಬಾವಿಗಳು-ಕೆರೆಗಳು ಭಣಭಣ. ಒಂದು ಬೆಳೆ ಭತ್ತದ ಬೇಸಾಯ ಮಾಡಲೂ ತ್ರಾಸ ಪಡಬೇಕಾಯಿತು' ಎನ್ನುವಾಗ ಪಂಚತಂತ್ರದ ಕಥೆ ಕೇಳುವಂತೆ ಪಿನ್ಡ್ರಾಪ್ ನಿಶ್ಶಬ್ಧ! 'ಇನ್ನೈದು ವರುಷಗಳಲ್ಲಿ ಎರಡು ಬೆಳೆ ಖಂಡಿತಾ ತೆಗಿತೀವಿ' ಊರಿನ ಹಿರಿಯ ಕೋವಿ ಪುಟ್ಟಪ್ಪ ಅನ್ನುವಾಗ ಮಕ್ಕಳಲ್ಲಿ ಎಷ್ಟೊಂದು ಖುಷಿ.

ಇಂತಹ ವಿಚಾರಗಳು ಮಕ್ಕಳಿಗೆ ಎಲ್ಲಿ ಸಿಗುತ್ತೆ ಹೇಳಿ. ಪಠ್ಯದಲ್ಲೋ, ವಾಹಿನಿಯಲ್ಲೋ! ಕೇವಲ 'ಜಲಮರುಪೂರಣ, ಮಳೆಕೊಯ್ಲು' ಎಂದಷ್ಟೇ ಕೇಳಿ ಗೊತ್ತಿರುತ್ತದೆ. ಪ್ರತ್ಯಕ್ಷ ನೋಡಿದ ಅನುಭವವಿರುವುದಿಲ್ಲ. 'ನೀರಿನ ಹಬ್ಬ'ದಲ್ಲಿ ಭಾಗವಹಿಸಿದ ಮಕ್ಕಳಿಗೆ ಪ್ರತ್ಯಕ್ಷ ನೀರಿಂಗಿದುದರ ಪಾಠ ಸಿಕ್ಕಿದಾಗ ಸಾಗರದ ವನಶ್ರೀ ಶಾಲೆಯ ರಂಜಿತಾ ಹೇಳಿದ್ದೇನು ಗೊತ್ತೇ - 'ನಮಗೆ ನೀರಿನ ಬಗ್ಗೆ ಅಲ್ಪಸ್ವಲ್ಪ ಓದಿ ಗೊತ್ತಿತ್ತು. ನೋಡಿದ ಅನುಭವವಿರಲಿಲ್ಲ. ನೀರನ್ನು ದುರ್ಬಳಕೆ ಮಾಡುವುದು ತಪ್ಪು ಅಂತ ಗೊತ್ತಾಯಿತು' ಎಂದಳು.

'ನೋಡಿ. ಇಂಗು ಗುಂಡಿ ಮಾಡುವುದು ಹೀಗೆ' ಎನ್ನುತ್ತಾ ಷಣ್ಮುಖಪ್ಪ ಕಚ್ಚೆ ಬಿಗಿದು, ಹಾರೆ ಹಿಡಿದು ಅಗೆಯಲು ಶುರುಮಾಡಿದಾಗ, ಮಕ್ಕಳು ಗುಂಪು ಸೇರಿ, 'ಇಷ್ಟೆನಾ' ಅನ್ನಬೇಕೇ. 'ಸಣ್ಣ ಸಣ್ಣ ರಚನೆಗಳೇ ನೀರಿಂಗಿಸಲಿರುವ ಉಪಾಧಿಗಳು' ವಿವರವನ್ನಿತ್ತರು ಶ್ರೀಪಡ್ರೆ. ಅಗೆಯುತ್ತಿದ್ದಾಗ ರಾಶಿರಾಶಿ ಎರೆಹುಳಗಳು. ಕೆಲವರು ಕೈಯಲ್ಲಿ ಹಿಡಿದು, ' ಇದೇನಾಎರೆಗೊಬ್ಬರ ಮಾಡುವ ಹುಳುಗಳು' ಆಶ್ಚರ್ಯಪಟ್ಟರು. 'ಪಟ್ಟಣದಲ್ಲಿ ಹುಟ್ಟಿದ್ದೇನೆ. ಹಳ್ಳಿ ನೋಡಿ ಖುಷಿಯಾಯಿತು. ಎರೆಹುಳು ಸ್ಪರ್ಶ ಹೊಸ ಅನುಭವ ನೀಡಿತು' ವಿದ್ಯಾರ್ಥಿನಿ ವರ್ಷಿಣಿಯ ಅಂತರಾಳದ ಮಾತು.

ಪಾಠದೊಂದಿಗೆ ಪ್ರತ್ಯಕ್ಷ ದರ್ಶನ ಮಾಡಿದಾಗ ಮಕ್ಕಳು ಹೇಗೆ ಅದನ್ನು ಸ್ವೀಕರಿಸುತ್ತಾರೆ ಎಂಬುದಕ್ಕೆ ವಿದ್ಯಾರ್ಥಿಗಳಾದ ಜಯಣ್ಣ, ಹಾಲೇಶ್ ದನಿಸೇರಿಸಿದ್ದು ಹೀಗೆ - 'ನಮ್ಮೂರು ಬಳ್ಳಾರಿಯಲ್ಲಿ ಹಸಿರಿಲ್ಲ. ಇಲ್ಲಿನ ನೀರಿನ ಪಾಠ ಖುಷಿಯಾಯಿತು. ಕಡು ಬೇಸಿಗೆಯಲ್ಲಿ ಒಂದು ಕೊಡ ನೀರಿಗೆ ಒಂದೂವರೆ ರೂಪಾಯಿ ಕೊಟ್ಟದು ನೆನಪಿದೆ. ಇಲ್ಲಿ ಎಷ್ಟೊಂದು ನೀರಿನ ಸಮೃದ್ಧತೆ'.

ಕಾಡಿನ ನಡಿಗೆಯಲ್ಲಿ ನೀರಿನ ಪಾಠದೊಂದಿಗೆ ಔಷಧೀಯ ಗಿಡಗಳ ಪರಿಚಯವೂ ಜತೆಜತೆಗೆ ನಡೆಯಿತು. ಫಲದ ಸಂಸ್ಥೆಯ ಉಮೇಶ್ ಅಡಿಗರೊಂದಿಗೆ ಊರಿನ ಹಿರಿಯರೂ ಹೆಜ್ಜೆ ಹಾಕಿದ್ದರು. 'ಸಮಾರಂಭಗಳಲ್ಲಿ ಮಾವಿನ ತೋರಣ ಯಾಕೆ ಕಟ್ಟುತ್ತಾರೆ' ಮಕ್ಕಳಿಗೆ ಅಡಿಗರ ಪ್ರಶ್ನೆ. 'ಅಲಂಕಾರಕ್ಕೆ' ಎಂಬ ಉತ್ತರ. 'ಅಲ್ಲ, ಮಾವಿನ ಎಲೆಯು ಆಲ್ಕೋಲೈಡ್ನ್ನು ಬಿಡುಗಡೆ ಮಾಡುತ್ತದೆ. ಇದು ಖಾಯಿಲೆಯನ್ನು ಹರಡುವ ಸೂಕ್ಷ್ಮಾಣುಜೀವಿಯನ್ನು ನಿಯಂತ್ರಣ ಮಾಡುತ್ತವೆ' ಎಂದರು. ವೀರಭದ್ರ ಬಳ್ಳಿ, ಬಿಳಿಮತ್ತಿ, ಹುಲಿಸೊಪ್ಪು, ಭದ್ರಮುಷ್ಠಿಯಂತಹ ಸಸ್ಯಗಳ ವಿವರಣೆ ದಾರಿಯುದ್ದಕ್ಕೂ ನಡೆದಿತ್ತು.

'ನೋಡಿ ಕೆಲವು ಗಿಡಗಳಿವೆ. ಅವುಗಳನ್ನು ನಾವು ಸ್ಪರ್ಶಿಸಿದರೆ ಸಾಕು, ಕಣ್ಣೀರು ಬರುತ್ತೆ, ಇನ್ನೂ ಕೆಲವಿವೆ, ಅವುಗಳಿಂದ ನಗು ಬರುತ್ತೆ. ಮತ್ತೊಂದು ಗಿಡವಿದೆ - ಅದು ನಮ್ಮ ಕೈಗೆ ತಾಗಿತೋ - ಆರು ತಿಂಗಳ ಕಾಲ ಕೈಮೇಲೆ ಏನೋ ಭಾರವಿದ್ದ ಅನುಭವವಾಗುತ್ತದೆ' ಅಡಿಗರೆಂದಾಗ ಮಕ್ಕಳು ಅಕ್ಕಪಕ್ಕದ ಗಿಡಗಳನ್ನು ನೋಡಿ ಸಂಶಯಪಡಬೇಕೇ!

ಒಟ್ಟಿನಲ್ಲಿ ಕಾಡಿನ ನಡಿಗೆ ಮಕ್ಕಳಲ್ಲಿ ಹೊಸ ಸಂಚಲನವನ್ನುಂಟು ಮಾಡಿದ್ದಂತೂ ಸ್ಪಷ್ಟ. ಹಬ್ಬದಲ್ಲಿ ಸಿಂಗಾಪುರದ ರಘುಪತಿ ಮತ್ತು ಸುಕುಮಾರನ್ ಭಾಗವಹಿಸಿ ತಮ್ಮೂರಿನ ನೀರಿನ ಸಮಸ್ಯೆಯನ್ನು ಮುಂದಿಟ್ಟರು - 'ಸಮುದ್ರ ಮಟ್ಟಕ್ಕೆ ಸಮವಾಗಿರುವ ಸಿಂಗಾಪುರವು ಮಲೇಶ್ಯಾದಿಂದ ಕುಡಿನೀರನ್ನು ಖರೀದಿಸುತ್ತಿದೆ. ಪೈಪ್ ಮೂಲಕ ನೀರಿನ ಸರಬರಾಜು. ಬಳಸಿದ ನೀರನ್ನು ಶುದ್ಧೀಕರಿಸಿ ಪುನರ್ಬಳಕೆ ಮಾಡುವ ಕುರಿತು ಅಲ್ಲಿನ ಸರಕಾರ ಆಲೋಚಿಸುತ್ತಿದೆ. ನೀರಿನ ವಿಚಾರದಲ್ಲಿ ನೀವೇ ಅದೃಷ್ಟವಂತರು' ಎಂದರು.