Wednesday, September 16, 2009

ಪುಳ್ಳಿ ಸಂಘ

ಹಿಡಿಯಗಲದ ಮೊಬೈಲ್ನಲ್ಲಿ ಪ್ರಪಂಚವನ್ನು ಕಾಣುವಷ್ಟು ಮುಂದುವರಿದಿದ್ದೇವೆ! ಈ ಓಟದಲ್ಲಿ 'ಓಡಲೇಬೇಕಾದ್ದು' ಅನಿವಾರ್ಯ. ಓಡುವ ವೇಗದಲ್ಲಿ ಸಂಬಂಧಗಳು, ಬಾಂಧವ್ಯಗಳು, ಕುಟುಂಬ ಅನ್ಯೋನ್ಯತೆಗಳು ಮಸುಕಾಗುತ್ತಿವೆ. ದೊಡ್ಡಪ್ಪನ ಮಕ್ಕಳು, ಚಿಕ್ಕಪ್ಪನ ಮಕ್ಕಳು ಯಾರೆಂದೇ ಗೊತ್ತಿರುವುದಿಲ್ಲ. 'ಗೊತ್ತಿರಬೇಕಾಗಿಲ್ಲ' ಎಂದು ವಾದಿಸುವವರೂ ಇಲ್ಲದಿಲ್ಲ!

ಕೌಟುಂಬಿಕ ವಾತಾವರಣವೂ ಮುಖ್ಯ ಕಾರಣ. ಉದಾ: ನನ್ನದೇ ಉದಾಹರಣೆ! ಹೊಟ್ಟೆಪಾಡಿಗಾಗಿ ಕೇರಳದ ಆ ತುದಿಯಿಂದ ಈ ತುದಿಗೆ ತಂದೆಯವರು ಬಂದಾಗ - ಬಂಧುಗಳು ಅಪರೂಪವಾದರು. ತಂದೆಯಣ್ಣ ತಿರುವನಂತಪುರದಲ್ಲಿ ವಾಸ. ಅವರ ಮಕ್ಕಳೆಲ್ಲರೂ ಅಲ್ಲೇ ಉದ್ಯೋಗ ಹಿಡಿದು 'ಸೆಟ್ಲ್' ಅಗಿದ್ದಾರೆ. ದೊಡ್ಡಪ್ಪನನ್ನು ಒಮ್ಮೆಯೂ ಕಂಡದ್ದಿಲ್ಲ. ಮತ್ತೆ ಅವರ ಮಕ್ಕಳ ಗುರುತು ಸಿಕ್ಕಿತೇ? ಅಪರೂಪಕ್ಕೆ ಭೇಟಿಯಾದಾಗ ಅಪರಿಚಿತರಂತೆ ಇರಬೇಕಾದ 'ಏಕಾಂತ'! ಮಾತಿಗೆಳೆದರೂ 'ಮಾತುಸಿಗದಷ್ಟು' ಅಂತರ. ಭಾಷಾ ಸಮಸ್ಯೆಯೂ ಇತ್ತು. ಅದು ದೊಡ್ಡದಲ್ಲ ಬಿಡಿ. ಭುಜಹಾರಿಸುತ್ತಾ, ಕೈಸನ್ನೆ ಮಾಡುತ್ತಾ, ಮುಖ ಕಿವುಚುತ್ತಾ ಮಾತನಾಡಬಹುದು. ಆದರೆ ವಿಷಯ ಬೇಕಲ್ಲಾ!

'ಒಲೆಯೊಂದು ಹತ್ತಾದಾಗ ಸಮಸ್ಯೆಯೂ ತಲೆ ಮೇಲೆ ಕೂರುತ್ತೆ' ಕೊಪ್ಪದ ವಸಂತ್ ತಮ್ಮ ಅನುಭವ ಹೇಳಿಕೊಳ್ಳುತ್ತಾರೆ. ಇದು ವಸಂತರ ಸಮಸ್ಯೆ ಮಾತ್ರವಲ್ಲ. ಮನೆಮನೆಯ ಸಮಸ್ಯೆ. ಎಲ್ಲರ ಸಮಸ್ಯೆ.ಇದರಿಂದ ಬಿಡುಗಡೆ ಹೇಗೆ? ಇದಕ್ಕೊಂದು ಸಂಘಟನೆ ಇದ್ದರೆ? ಒಂದೋ ಎಲ್ಲರೂ ಒಟ್ಟಾಗಲು ಅಥವಾ ದೂರವಿದ್ದೇ ಅರ್ಥಮಾಡಿಕೊಳ್ಳುವಂತಹ ವ್ಯವಸ್ಥೆ ಇದ್ದರೆ ಕೊನೇ ಪಕ್ಷ ಸಂವಹನವಾದರೂ ನಡೆದೀತು.

ಈ ಆಲೋಚನೆ ಗಿರಿಕಿಯಲ್ಲಿರುವಾಗಲೇ ಕೋಡಪದವಿನ ಕಿನಿಲ ಅಶೋಕರಲ್ಲಿಗೆ ಹೋಗಿದ್ದೆ. ಮಾತಿನ ಮಧ್ಯೆ ತಾನಿರುವ ಹಿರಿಮನೆಯ 'ಪುಳ್ಳಿ ಸಂಘ'ವನ್ನು ಜ್ಞಾಪಿಸಿಕೊಂಡರು. (ಪುಳ್ಳಿ ಅಂದರೆ ಮೊಮ್ಮಗ, ಮೊಮ್ಮಗಳು) ಅರೇ, ಸಹಕಾರ ಸಂಘವನ್ನು ಕೇಳಿದ್ದೇನೆ. ಇತರ ಕಲಾ ಸಂಘಗಳು ಗೊತ್ತು. ಜಾತಿ ಸಂಘಗಳನ್ನು ದೂರದಿಂದ ನೋಡಿದ್ದೇನೆ. ಆದರೆ 'ಪುಳ್ಳಿ ಸಂಘ'?

ಈ ಸಂಘಕ್ಕೆ ಕುಟುಂಬದ 'ದೊಡ್ಡಪುಳ್ಳಿ' ಅಧ್ಯಕ್ಷ. ಶುಭ ಸಮಾರಂಭಗಳಿಗೆ ಎಲ್ಲಾ ಸದಸ್ಯರು ಸೇರಿದಾಗ ಹಿರಿಯಜ್ಜನ ಉಸ್ತುವಾರಿಕೆಯಲ್ಲಿ ಸಂಘದಿಂದ ಸಾಂಸ್ಕೃತಿಕ ಕಾರ್ಯಕ್ರಮ. ಕೈಬರೆಹದ 'ಕಾಟಂಕೋಟಿ' ಎಂಬ ವಾರ್ತಾಪತ್ರ. ಅದಕ್ಕೊಬ್ಬ ಸಂಪಾದಕ. ಎರಡು ದಶಕಗಳ ಹಿಂದಿನವರೆಗೂ ಸುಮಾರು 40-45 ಪುಳ್ಳಿಗಳಿದ್ದ ಸಂಘ ನಮ್ಮ ಮನೆಯಲ್ಲಿತ್ತು - ಅಶೋಕರು ತಮ್ಮ ನೆನಪಿನಾಳದಿಂದ ಒಂದಷ್ಟನ್ನು ಮೊಗೆಯುತ್ತಾರೆ.

ಜತೆಯಲ್ಲಿದ್ದ ಮಂಚಿ ಶ್ರೀನಿವಾಸ ಆಚಾರ್ರಿಗೆ ಪುಳ್ಳಿ ಸಂಘ ಪ್ರೇರಣೆ ನೀಡಿತು. ಮಂಚಿ ಮನೆಯಲ್ಲಿ ತಮ್ಮ ತೀರ್ಥರೂಪರ ನೆನಪಿನಲ್ಲಿ 'ಮಂಚಿ ನಾರಾಯಣ ಆಚಾರ್ ಪುಳ್ಳಿ ಸಂಘ'ಕ್ಕೆ ಚಾಲನೆ ನೀಡಿದರು. ಮೊದಲ ಕಾರ್ಯ ವಾರ್ತಾಪತ್ರ ಪ್ರಕಟಣೆ. ಕುಟುಂಬದ ಸದಸ್ಯರೊಳಗೆ ಬಾಂಧವ್ಯ ಬೆಳೆಯುವಂತೆ ಹಾಗೂ ಬೇರೆಡೆ ನೆಲೆಸಿರುವವರಲ್ಲಿ ಸಂಪರ್ಕ, ಮಾಹಿತಿ ವಿನಿಮಯ ಹೂರಣ.

ಮಂಚಿ ನಾರಾಯಣ ಆಚಾರ್ರವರು ಸಾಮಾಜಿಕ ಕಾರ್ಯಕರ್ತರಾಗಿದ್ದರು. ಹಲವು ಪ್ರಥಮಗಳ ರೂವಾರಿ. ಹತ್ತು ಮಕ್ಕಳ ತಂದೆ. 24 ಮೊಮ್ಮಕ್ಕಳು, 23 ಮರಿಮಕ್ಕಳು, 15 ಸಂಗಾತಿಗಳು..ಹೀಗೆ ದೊಡ್ಡ ಸಂಸಾರ. ಇವರೆಲ್ಲರೂ ಈಗ ಪುಳ್ಳಿ ಸಂಘದ ಸದಸ್ಯರು!ಪ್ರಕಟಿತ ವಾರ್ತಾಪತ್ರದಲ್ಲಿ ಕುಟುಂಬ ವಂಶಾವಳಿ; ಮೊಮ್ಮಕ್ಕಳು, ಜೀವನಸಂಗಾತಿಗಳು, ಮರಿಮಕ್ಕಳ ವಿವರಗಳು, ಮೊಮ್ಮಕ್ಕಳ ಪ್ರಸ್ತುತ ವಿದ್ಯಾಭ್ಯಾಸ, ಉದ್ಯೋಗದ ವಿವರ, ರಸಪ್ರಶ್ನೆ, ನಿಕಟ ಭವಿಷ್ಯದ ಕೌಟುಂಬಿಕ ಕಾರ್ಯಕ್ರಮ...ಇವಿಷ್ಟು. ಇದು ಅನಿಯತಕಾಲಿಕ ಪ್ರಕಟಣೆ. ಮೊದಲ ಸಂಚಿಕೆಯನ್ನು 80ರ ಅಜ್ಜಿ (ಈಗ ದಿವಂಗತ) ಪದ್ಮಾವತಿಯವರಿಗೆ ಸಮರ್ಪಿಸಿದ್ದಾರೆ.

ಕಳೆದ್ಮೂರು ವರುಷದಲ್ಲಿ ಐದಾರು ವಾರ್ತಾಪತ್ರಗಳು ಪ್ರಕಟಗೊಂಡಿವೆ. ಹಿರಿಮನೆಯ ಆಗುಹೋಗುಗಳ ಕುರಿತು ಮಾಹಿತಿ ನೀಡಬಲ್ಲ ಇಂತಹ ಕೌಟುಂಬಿಕ ವಾರ್ತಾಪತ್ರವು ದೂರದೂರಿನ ಮನೆಬಂಧುಗಳಿಗೆ ಒಂದು ಮಾತನಾಡುವ ವೇದಿಕೆ. ಕುಟುಂಬವನ್ನು ಹತ್ತಿರದಿಂದ ನೋಡುವ ವ್ಯವಸ್ಥೆಯಿದು. ಮಂಚಿ ಶ್ರೀನಿವಾಸ ಆಚಾರ್, ಕಿನಿಲ ಅಶೋಕ....ತಮ್ಮ ಕುಟುಂಬದ ವಂಶಾವಳಿಯನ್ನು ತಯಾರಿಸಿ, ಅದನ್ನು ತಮ್ಮ ಕುಟುಂಬದ ಮಂದಿಗೆ ಹಂಚಿದ್ದಾರೆ. 'ಮೊದಲು ಕುಟುಂಬವನ್ನು ಅರಿಯೋಣ, ಮತ್ತೆ ಪ್ರಪಂಚವನ್ನು ಅರಿಯೋಣ' ಎಂಬ ಮಾತನ್ನು ಸಾಕಾರಗೊಳಿಸಿದ್ದಾರೆ.

ಪರಿಸ್ಥಿತಿಯ ಕೈಗೊಂಬೆಯಿಂದಾಗಿ ಚದುರಿದ್ದ ಕೌಟುಂಬಿಕರನ್ನು ಪುಳ್ಳಿಸಂಘವು ಒಟ್ಟು ಮಾಡುತ್ತದೆ. ಮನಸ್ಸು-ಮನಸ್ಸುಗಳನ್ನು ಬೆಸೆಯುತ್ತದೆ. ಅಜ್ಜ, ಮುತ್ತಜ್ಜ, ತಾತ...ಶಬ್ದದ ಉಚ್ಚಾರದ ಮೂಲಕ ಮತ್ತೊಮ್ಮೆ ಕುಟುಂಬ ಸಂತೋಷವನ್ನು ಅನುಭವಿಸುವಂತೆ ಮಾಡುತ್ತದೆ.ಈಚೆಗೆ 'ವಂಶಾವಳಿ'ಗಳ ಬಗ್ಗೆ ಆಸಕ್ತಿ ಮೂಡುತ್ತಿದೆ. ದಾಖಲಾತಿ ನಡೆಯುತ್ತಿದೆ. ಹಿರಿಯರನ್ನು ಜ್ಞಾಪಿಸುವ, ಬದುಕನ್ನು ಹಿಂತಿರುಗಿ ನೋಡುವ ಅಭ್ಯಾಸ ಶುರುವಾಗಿದೆ.

1 comments:

Unknown said...

ನಮಸ್ಕಾರ, ನಾನು ರಘು, ಶ್ರೀನಿವಾಸ ಆಚಾರ್ರ ಮಗ. ಇವತ್ತು ಆಫೀಸಿಂದ ಮನೆಗ ಬಂದಾಗ ರಮ್ಯ (ನನ್ನ ಹೆಂಡತಿ) ನಿಮ್ಮ ಬ್ಲಾಗಲ್ಲಿ ನಮ್ಮ, ಅಂದ್ರೆ "ಪುಳ್ಳಿಗಳ" ಫೋಟೋ ತೋರ್ಸಿದ್ಲು. ನೋಡಿ ತುಂಬಾ ಖುಷಿ ಆಯ್ತು. "ಹಸಿರು ಮಾತು" ಚೆನ್ನಾಗಿದೆ. ಪ್ರತೀ ಬ್ಲಾಗ್ ತಪ್ಪದೇ ಓದ್ತೇವೆ.
-ರಘು & ರಮ್ಯ.

Post a Comment