Thursday, August 10, 2017

ಹುಳಿಯ ಕತೆಯಲ್ಲಿ ಸಿಹಿಯ ಲೇಪ


ಉದಯವಾಣಿಯ ’ನೆಲದ ನಾಡಿ’ ಅಂಕಣ / 20-4-2017

           ಸುಡುಬಿಸಿಲು ತರುವ ಸಂಕಟಕ್ಕೆ ಪುನರ್ಪುಳಿ (ಕೋಕಂ, ಮುರುಗಲು, ಗಾರ್ಸೀನಿಯಾ ಇಂಡಿಕಾ) ಹಣ್ಣಿನ ಜ್ಯೂಸ್ ಸೇವನೆ ಹಿತಕಾರಿ. ಉತ್ತರ ಕನ್ನಡ, ದಕ್ಷಿಣೋತ್ತರ ಜಿಲ್ಲೆಗಳಲ್ಲಿ ಹಣ್ಣಿಗೆ ವಿಶೇಷ ಸ್ಥಾನ. ಆಹಾರವಾಗಿ ಮತ್ತು ಔಷಧವಾಗಿ ಸೇವಿಸುವುದು ಪಾರಂಪರಿಕ. ಬಹುತೇಕ ಕಾಡಂಚಿನ ಮರಗಳಿಂದ ಹಣ್ಣುಗಳನ್ನು ಸಂಗ್ರಹಿಸಲಾಗುತ್ತದೆ. ಮನೆಮಟ್ಟದಲ್ಲಿ ಸಿರಪ್, ಸಿಪ್ಪೆಗಳಿಂದ; ಪಾನೀಯ, ಸಾರು, ತಂಬುಳಿಗಳ ರೂಪದಲ್ಲಿ ಬಳಕೆಯಲ್ಲಿದೆ. ಮಹಾರಾಷ್ಟ್ರದ ಕೊಂಕಣ್ ಪ್ರದೇಶ ಮತ್ತು ಗೋವಾಗಳಲ್ಲಿ ಹಣ್ಣಿನ ಸಿಪ್ಪೆ(ಅಮ್ಸೊಲ್)ಯು ಅಡುಗೆಯಲ್ಲಿ ವ್ಯಾಪಕವಾಗಿ ಬಳಸಲಾಗುತ್ತಿದೆ.
             ಹಣ್ಣಿಗೆ ಬಾಯಾರಿಕೆ ನೀಗುವ ವಿಶೇಷ ಗುಣವಿದೆ. ಕೆಲವು ಹಣ್ಣುಗಳನ್ನು ಆಯಾಯ ಋತುವಿನಲ್ಲೇ ಸೇವಿಸಬೇಕು. ಪುನರ್ಪುಳಿಗೆ ಈ ಶಾಪವಿಲ್ಲ! "ಎಲ್ಲಾ ಋತುವಿನಲ್ಲಿ ಸೇವಿಸಬಹುದು. ಪಿತ್ತಶಮನ ಮತ್ತು ರಕ್ತವರ್ಧಕ ಗುಣವಿದೆ. ಮಣ್ಣಿನ ಪಾತ್ರೆಯಲ್ಲಿ ಪುನರ್ಪುಳಿ ಹಣ್ಣಿನ ಒಣ ಸಿಪ್ಪೆಗಳನ್ನು ಹಾಕಿಟ್ಟು, ಹತ್ತಿಬಟ್ಟೆಯಿಂದ ಮಡಕೆಯ ಬಾಯನ್ನು ಬಿಗಿದಿಟ್ಟರೆ ಮೂರು ವರುಷವಾದರೂ ತಾಜಾ ಆಗಿಯೇ ಉಳಿಯುತ್ತದೆ ಎನ್ನುವ ಮಾಹಿತಿಯನ್ನು ಹಿರಿಯರು ನೀಡುತ್ತಾರೆ.
             ಪುನರ್ಪುಳಿಯ ಹೊರ ಸಿಪ್ಪೆಯ ರಸವೇ ಉತ್ಕೃಷ್ಟ ಔಷಧ. ಹೃದಯೋತ್ತೇಜಕ ಮತ್ತು ಬಲದಾಯಕ, ರುಚಿಕಾರಿ, ಜೀರ್ಣಕಾರಿ,  ಯಕೃತ್ ಪ್ಲೀಹ, ಮೂತ್ರರೋಗಗಳಿಗೆ ಔಷಧಿ. ರಕ್ತಶೋಧಕ, ವರ್ಧಕ-ಶರೀರದೊಳಗಿನ ಆಮವನ್ನು ಕರಗಿಸಿ ಚುರುಕಾಗಿಸುತ್ತದೆ ಬೀಜಗಳನ್ನು ಅರೆದು ಕುದಿಸಿ ತೆಗೆದ ಕೊಬ್ಬು - ಮುರುಗಲು ತುಪ್ಪ - ಅಡುಗೆಯಲ್ಲಿ ತುಪ್ಪದಂತೆ ಬಳಸಬಹುದಾಗಿದೆ. ಪೌಷ್ಟಿಕ, ವಿಷನಿವಾರಕ, ಬಾಯಿಹುಣ್ಣು, ಪಿತ್ತಜ್ವರ, ಕ್ಷಯಗಳಲ್ಲಿ ಔಷಧ. ಶುದ್ಧೀಕರಿಸಿ ಬಳಸಿದರೆ ಆಯುಸ್ಸು, ಶರೀರ ಕಾಂತಿ ಹೆಚ್ಚಿಸುವುದು. ಪಾಶ್ಚಿಮಾತ್ಯ ದೇಶಗಳಲ್ಲಿ ಕೊಬ್ಬು ತೊಲಗಿಸಿ, ಶರೀರ ತೆಳುವಾಗಿಸಲು ಬಳಸುವ ದುಬಾರಿ 'ಹೈಡಾಕ್ಸಿ ಸಿಟ್ರಿಕ್ ಆಮ್ಲ'ದ ಮೂಲವಸ್ತು ಹಣ್ಣಿನ ಒಣಸಿಪ್ಪೆ." ಔಷಧೀಯ ಗುಣಗಳನ್ನು ಮೂಲಿಕಾ ತಜ್ಞ ಪಾಣಾಜೆಯ ವೆಂಕಟರಾಮ ದೈತೋಟ ಹೇಳುತ್ತಾರೆ.
            ಗೋವಾದ ವೆಸ್ಟರ್ನ್  ಘಾಟ್ಸ್ ಕೋಕಮ್ ಫೌಂಡೇಶನ್ ಎನ್ನುವ ಸರಕಾರೇತರ ಸಂಸ್ಥೆಯು ಪುನರ್ಪುಳಿ ಹಣ್ಣಿನ ಅಭಿವೃದ್ಧಿಗಾಗಿ ಕೆಲಸ ಮಾಡುತ್ತಿದೆ. ಅಜಿತ್ ಶಿರೋಡ್ಕರ್ ಅವರ ನೇತೃತ್ವದಲ್ಲಿ ರಾಷ್ಟ್ರ ಮಟ್ಟದ ವಿಚಾರ ಸಂಕಿರಣಗಳು ನಡೆದಿವೆ. ಫಲವಾಗಿ ಹಣ್ಣಿನ ಸಿಪ್ಪೆಯಿಂದು ವಿದೇಶಕ್ಕೂ ಹಾರುತ್ತಿದೆ! ಮಹಾರಾಷ್ಟ್ರದ ಸಿಂಧುದುರ್ಗ ಮತ್ತು ರತ್ನಾಗಿರಿ ಜಿಲ್ಲೆಗಳಲ್ಲಿ ಪುನರ್ಪುಳಿಯ ಇಳುವರಿ ಅಧಿಕ. ಎರಡೂ ಜಿಲ್ಲೆಗಳಲ್ಲಿ ಮುನ್ನೂರಕ್ಕೂ ಹೆಚ್ಚು ಚಿಕ್ಕಪುಟ್ಟ ಮೌಲ್ಯವರ್ಧನಾ ಘಟಕಗಳಿವೆ. ಇತ್ತ ಕೇರಳದಲ್ಲಿ ಪುನರ್ಪುಳಿ ಪರಿಚಿತವಲ್ಲ. ಇದರ ಸೋದರ 'ಮಂತುಹುಳಿ'ಯ ಮಂದಸಾರವು ಮಾಂಸದ ಅಡುಗೆಗಳಲ್ಲಿ ಬಳಕೆಯಾಗುತ್ತಿದೆ.
             ಮಾರುಕಟ್ಟೆಯಲ್ಲಿ ಫ್ರೂಟಿಯಂತಹ ಟೆಟ್ರಾಪ್ಯಾಕ್ಗಳು ವಿವಿಧ ಸ್ವಾದದಲ್ಲಿ ಸಿಗುತ್ತವೆ. ಆರೇಳು ವರುಷದ ಹಿಂದೆ ಪುಣೆಯ ಅಪರಂತ್ ಆಗ್ರೋ ಫುಡ್ಸ್ನ ಮುಕುಂದ ಭಾವೆ, ಪುನರ್ಪುಳಿಯ ಟೆಟ್ರಾಪ್ಯಾಕ್ ಮಾಡಿ ಮಾರುಕಟ್ಟೆಗೆ ಇಳಿಸಿದ್ದರು. ಹೆಚ್ಚು ವೆಚ್ಚದ  ಪ್ಯಾಕಿಂಗ್. ಮೇಲ್ನೋಟಕ್ಕೆ ಸ್ವಲ್ಪ ಅಧಿಕವೇ ಅನ್ನಿಸುವ ದರ. ತೋಟದ ತಾಜಾ ಉತ್ಪನ್ನವೊಂದು ಟೆಟ್ರಾಪ್ಯಾಕ್ ಆಗಿರುವುದು ಹೆಮ್ಮೆಯ ವಿಚಾರ. ಅನ್ಯಾನ್ಯ ಕಾರಣಗಳಿಂದ ಈಗ ಉದ್ದಿಮೆ ಶಟರ್ ಎಳೆದಿದೆ. ಶಿರಸಿಯಲ್ಲಿ ನವೀನ್ ಹೆಗಡೆಯವರು 'ಹೂಗ್ಲು' ಬ್ರಾಂಡಿನಲ್ಲಿ ಆಕರ್ಷಕ ಪ್ಯಾಕಿನಲ್ಲಿ 'ಕುಡಿಯಲು ಸಿದ್ಧ' ಉತ್ಪನ್ನ ಮಾರುಕಟ್ಟೆಗಿಳಿಸಿದ್ದಾರೆ.
              ಮಹಾರಾಷ್ಟ್ರದಲ್ಲಿ 'ಆಮ್ಸೋಲ್' - ಪುನರ್ಪುಳಿಯ ಜ್ಯೂಸ್ನಲ್ಲಿ ಮುಳುಗಿಸಿದ ಒಣಸಿಪ್ಪೆ. ಮಾಂಸಾಹಾರ ಪದಾರ್ಥಗಳಿಗೆ ಬಳಸುತ್ತಾರೆ. ಹಣ್ಣಿನ ಉಪ್ಪುಮಿಶ್ರಿತ ರಸ - 'ಸೋಲ್ಕಡಿ'. ಊಟದ ಕೊನೆಗೆ ಮಜ್ಜಿಗೆಯ ಬದಲಿಗೆ ಹೆಚ್ಚು ಇಷ್ಟ ಪಡುತ್ತಾರೆ. ಪೇಯವಾಗಿಯೂ ಬಳಸುತ್ತಾರೆ. ಇದನ್ನು ಹೋಟೆಲ್ಗಳಿಗೆ ವಿತರಿಸುವ ಒಂದೆರಡು ಮನೆ ಉದ್ದಿಮೆಗಳೂ ತಲೆಯೆತ್ತಿವೆ. ಹಣ್ಣನ್ನು ಕತ್ತರಿಸುವ ಯಂತ್ರಗಳೂ ಬಂದಿವೆ.
               ಗರ್ಡಾಡಿಯ ಕೃಷಿಕ ಅನಿಲ್ ಬಳೆಂಜರಲ್ಲಿ 'ಸಿಹಿ ಪುನರ್ಪುಳಿ' ಈಚೆಗೆ ಗಮನ ಸೆಳೆಯುತ್ತಿದೆ. ಸಹಜವಾಗಿ ಬೆಳೆದ ಹದಿನೇಳು ವರುಷದ ಮರ. ಮೂವತ್ತಡಿಯಷ್ಟು ಎತ್ತರಕ್ಕೆ ಬೆಳೆದಿದೆ. ಎಂಟನೇ ವರುಷದಿಂದ ಫಸಲು ಕೊಡಲು ಶುರುವಾಗಿತ್ತು. ದೊಡ್ಡ ಗಾತ್ರದ ಹಣ್ಣು. ಕಪ್ಪುಗೆಂಪು ಬಣ್ಣ. ಸಿಪ್ಪೆಯಿಂದ ತೆಗೆದ ರಸವು ಗಾಢ ವರ್ಣದಿಂದ ಕೂಡಿದೆ.  ರಸವು ಎರಡು ವರುಷ ಕಳೆದರೂ ಬಣ್ಣ ಮಾಸದು. ಉಳಿದ ಪುನರ್ಪುಳಿ ತಳಿಗಿಂತ ಇದರಲ್ಲಿ ರಸ ಅಧಿಕ. ಎಪ್ರಿಲ್-ಮೇ ಇಳುವರಿ ಸಮಯ. ಎಲ್ಲಾ ಹಣ್ಣುಗಳು ಸಮಾನ ಗಾತ್ರದಲ್ಲಿರುವುದು ವಿಶೇಷ.
               "ಕೆಂಪು ಮುರುಗಲಿಗಿಂತ ಬಿಳಿ ಮುರುಗಲಿನಲ್ಲಿ ಹುಳಿಯ ಅಂಶ ಹೆಚ್ಚು. ಕೆಂಪಿನದರಂತೆ ಇದೂ ಅಡವಿಯಲ್ಲಿ ಸ್ವಾಭಾವಿಕವಾಗಿ ಬೆಳೆಯುವ ಅಪರೂಪದ ಗಿಡ. ನೂರು ಕೆಂಪು ಮುರುಗಲು ಗಿಡಗಳಿದ್ದೆಡೆ ನಾಲ್ಕೈದು ಬಿಳಿಯದು ಸಿಗಬಹುದು. ಎರಡೂ ನೋಡಲು ಒಂದೇ ಥರ. ಹೂವು, ಕಾಯಿಯ ಆಕಾರ-ಗಾತ್ರಗಳಲ್ಲಿ ವ್ಯತ್ಯಾಸವಿಲ್ಲ. ಬಿಳಿ ಮುರುಗಲು ನಿಜವಾಗಿ ಬಿಳಿಯಲ್ಲ. ಬದಲಿಗೆ ಹಳದಿ ಬಣ್ಣ ಹೊಂದಿರುತ್ತದೆ. ಕೆಂಪಿನದರಂತೆಯೇ, ಬಿಳಿ ಮುರುಗಲಿನ ಯಾವ ಭಾಗವೂ ನಿರರ್ಥಕವಲ್ಲ. ಬೀಜದಿಂದ  ತುಪ್ಪ, ರಸದಿಂದ ಜಾಮ್, ಸಿಪ್ಪೆಯಿಂದ ಉಪ್ಪಿನಕಾಯಿ.. ಹೀಗೆ ಒಂದೊಂದು ಥರ , ಎನ್ನುತ್ತಾರೆ" ಕೋಕಂನ ಬಗ್ಗೆ ಅಧ್ಯಯನ ಮಾಡಿದ ಡಾ.ಗಣೇಶ ಎಂ.ನೀಲೇಸರ.
             ಬಿಳಿ ಮುರುಗಲು ಗಿಡಗಳನ್ನು ದೊಡ್ಡ ಪ್ರಮಾಣದಲ್ಲಿ ನೆಟ್ಟು ಬೆಳೆಸಿದವರು ತೀರಾ ಕಡಿಮೆ. ಶಿರಸಿಯ ಬೆಂಗಳಿ ವೆಂಕಟೇಶ ಮತ್ತು ಗೋಕರ್ಣದ ವೇದಶ್ರವ ಶರ್ಮಾ ಬಿಳಿ ಮುರುಗಲನ್ನು ಬೆಳೆಸಿದ ಕೃಷಿಕರು. ಬೆಂಗಳಿ ವೆಂಕಟೇಶರು ಬೆಳೆಯುವುದಲ್ಲದೆ, ಮೌಲ್ಯವರ್ಧಿತ ಉತ್ಪನ್ನಗಳನ್ನು ತಯಾರಿಸಿ, ತಮ್ಮದೇ ಮಾರುಕಟ್ಟೆ ಜಾಲವನ್ನು ಹೊಂದಿದ್ದಾರೆ. ಕೆಂಪು ಮುರುಗಲಿನ ತೋಟವನ್ನು ಎಬ್ಬಿಸಿದವರಲ್ಲಿ ಇಬ್ಬರು ಮುಂಚೂಣಿಯಲ್ಲಿದ್ದಾರೆ. ಒಬ್ಬರು ಗೋವಾದ ಶ್ರೀಹರಿ ಕುರಾಡೆ. ಇಪ್ಪತ್ತೈದು ಎಕ್ರೆಯಲ್ಲಿ ಕೋಕಂ ಬೆಳೆದಿದ್ದಾರೆ. ಇನ್ನೊಬ್ಬರು ಪುಣೆ ಸನಿಹದ ವಿಕಾಸ್ ರಾಯ್ಕರ್. ತೆಂಗು, ನೆಲ್ಲಿಗಳ ಮಧ್ಯೆ ಮತ್ತು ಮಾರ್ಗದ ಇಕ್ಕೆಡೆಗಳಲ್ಲಿ ಬೆಳೆಸಿದ್ದಾರೆ.
              ಮಂಗಳೂರಿನಲ್ಲಿ ಪುನರ್ಪುಳಿಯ ತಾಜಾ ಹಣ್ಣಿಗೂ ಮಾರುಕಟ್ಟೆಯಿದೆ! ಸೇಬು, ಕಿತ್ತಳೆ, ಮುಸುಂಬಿ, ಮಾವಿನೊಂದಿಗೆ 'ಪುನರ್ಪುಳಿ'ಗೂ ಸ್ಥಾನ. ಮಂಗಳೂರಿನ ಸೆಂಟ್ರಲ್ ಮಾರುಕಟ್ಟೆ ಹಾಗೂ ಸುತ್ತಮುತ್ತಲಿನ ಹಣ್ಣಿನಂಗಡಿಯಲ್ಲಿ ತಾಜಾ ಹಣ್ಣು ಲಭ್ಯ. ಅರ್ಧ, ಒಂದು ಕಿಲೋದ ಸಾದಾ ಪ್ಯಾಕೆಟ್ನಲ್ಲಿ ಬಿಕರಿ. ಸೆಂಟ್ರಲ್ ಮಾಕರ್ೆಟ್ನ ತರಕಾರಿ ವ್ಯಾಪಾರಿ ಡೇವಿಡ್ ಕರಾವಳಿಯಲ್ಲಿ ತಾಜಾ ಹಣ್ಣಿನ ಮಾರಾಟಕ್ಕೆ ಸಾಥ್ ಕೊಟ್ಟವರು. ಅಲ್ಲದೆ ಗಿರಾಕಿಗಳಿಗೆ ಹಣ್ಣಿನ ಔಷಧೀಯ ಗುಣಗಳ ಅರಿವನ್ನು ಮೂಡಿಸಿ, ಗ್ರಾಹಕ ವಲಯವನ್ನು ರೂಪಿಸಿದ ಹೆಗ್ಗಳಿಕೆ ಇವರಿಗಿದೆ.
              ದಾಪೋಲಿಯ ಡಾ.ಬಾಳಾಸಾಹೇಬ್ ಸಾವಂತ್ ಕೊಂಕಣ್ ಕೃಷಿ ವಿದ್ಯಾಪೀಠವು 'ಕೊಂಕಣ್ ಅಮೃತ' ಮತ್ತು 'ಕೊಂಕಣ್ ಹಾತಿಸ್' ಎಂಬ ಎರಡು ಪುನರ್ಪುಳಿ ತಳಿಗಳನ್ನು ಅಭಿವೃದ್ಧಿಪಡಿಸಿದೆ. ಕೋಕಮ್ ಅಮೃತವು ಮಾರ್ಚ್-ಎಪ್ರಿಲ್ ಹಣ್ಣು ಕೊಟ್ಟರೆ, ಕೋಕಮ್ ಹಾತಿಸ್ ಎಪ್ರಿಲ್-ಮೇಯಲ್ಲಿ ಇಳುವರಿ ನೀಡುತ್ತದೆ. ಏಳನೇ ವರುಷದಲ್ಲಿ ಅಮೃತ ತಳಿಯ ಒಂದು ಮರದಲ್ಲಿ ಒಂದುನೂರ ಮೂವತ್ತೆಂಟು ಕಿಲೋ ಹಣ್ಣು ನೀಡಿದೆ. ಕಿಲೋವೊಂದರಲ್ಲಿ ಇಪ್ಪತ್ತೊಂಭತ್ತು ಹಣ್ಣುಗಳು ತೂಗುತ್ತದೆ. ಹಾತಿಸ್ನಲ್ಲಿ ಇನ್ನೂರೈವತ್ತು ಕಿಲೋ ಹಣ್ಣುಗಳನ್ನು ಮರವೊಂದು ನೀಡಿದರೆ, ಒಂದು ಕಿಲೋದಲ್ಲಿ ತೂಗುವ ಹಣ್ಣುಗಳ ಸಂಖ್ಯೆ ಹನ್ನೊಂದು!
              ಪುನರ್ಪುಳಿ ಹಣ್ಣಿನ ವಿವಿಧ ಬಳಕೆಯ ಕುರಿತು ಸಂಶೋಧನೆಗಳು ನಡೆದುದು ವಿರಳ. ದೊಡ್ಡ ದೊಡ್ಡ ನಗರಗಳಲ್ಲಿ ಬಹುಶಃ ಹಣ್ಣು ಅಪರಿಚಿತ. ಮಳೆ ಬಿದ್ದ ಬಳಿಕವೇ ಹಣ್ಣು ಸಿಗುವುದು ಶಾಪ! ಕುಂದಾಪುರ ಭಾಗದಲ್ಲಿ ಜನವರಿಗೆ ಇಳುವರಿ ಬಿಡುವ ತಳಿಗಳಿವೆಯಂತೆ. ಇಲಾಖಾ ಮಟ್ಟದಲ್ಲಿ ಹೇಳುವಂತಹ ಸಂಶೋಧನೆ ನಡೆದಿಲ್ಲ.  ಇದನ್ನು ಮಾನ ಕೊಡುವ ಮತ್ತು ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಕೃಷಿಕ ಮಟ್ಟದಲ್ಲಿ ಸಂಘಟಿತ ಕಾರ್ಯಕ್ರಮವೊಂದು ಮೇ 1ರಂದು ಸಂಪನ್ನವಾಗಲಿದೆ. ದಕ್ಷಿಣ ಕನ್ನಡ ಜಿಲ್ಲೆಯ ಅಳಿಕೆ ಸನಿಹದ ಮುಳಿಯ ವೆಂಕಟಕೃಷ್ಣ ಶರ್ಮರಲ್ಲಿ 'ಪುನರ್ಪುಳಿ ಪ್ರಪಂಚದೊಳಕ್ಕೆ' ಎನ್ನುವ ವಿಶಿಷ್ಟ ಕಾರ್ಯಕ್ರಮಕ್ಕೆ ಸಿದ್ಧತೆಗಳು ನಡೆಯುತ್ತಿವೆ. ಉಬರು 'ಹಲಸು ಸ್ನೇಹಿ ಕೂಟ', ಪಶ್ಚಿಮ ಘಟ್ಟ ಕೋಕಂ ಪ್ರತಿಷ್ಠಾನ ಮತ್ತು ಅಡಿಕೆ ಪತ್ರಿಕೆಯು ಜಂಟಿಯಾಗಿ 'ಕೋಕಂ ಡೇ'ಯನ್ನು ಆಯೋಜಿಸುತ್ತಿದೆ.
              ಹಲಸಿನಲ್ಲಿ 'ರುಚಿ ನೋಡಿ-ತಳಿ ಆಯ್ಕೆ' ಎನ್ನುವ ತಳಿ ಆಯ್ಕೆಯ ಪರಿಕಲ್ಪನೆಯನ್ನು ಅನುಷ್ಠಾನಿಸಿದ 'ಹಲಸು ಸ್ನೇಹಿ ಕೂಟ'ವು ಪುನರ್ಪುಳಿಯ ಅಭಿವೃದ್ಧಿಯತ್ತ ಹೆಜ್ಜೆಯೂರಿದೆ. ಕಿರಿದಾದ ಈ ಹೆಜ್ಜೆಯು ಹಿರಿದು ಹೆಜ್ಜೆಯ ಅಡಿಗಟ್ಟು ಎನ್ನುವುದನ್ನು ಮರೆಯುವಂತಿಲ್ಲ.

Tuesday, August 8, 2017

ಕೃಷಿಕ ಜ್ಞಾನದ ನೀರಿನ ರೇಶನ್!

ಉದಯವಾಣಿಯ 'ನೆಲದ ನಾಡಿ' ಅಂಕಣ / 6-4-2017

                ಬಿಸಿಲ ಧಗೆ ಏರುತ್ತಿದೆ. ಕೊಳವೆ ಬಾವಿ ಕೊರೆತದ ಯಂತ್ರಗಳು ಸದ್ದನ್ನು ಹೆಚ್ಚಿಸುತ್ತಿವೆ. ಒಂದೆಡೆ ಕನ್ನಾಡಿನ ಕೆಲವೆಡೆ ಕೊಳವೆ ಬಾವಿ ಕೊರತಕ್ಕೆ ನಿಷೇಧ. ಮತ್ತೊಂದೆಡೆ ನಿಷೇಧ ತೆರವುಗೊಳಿಸುವ ಪರವಾನಿಗೆಗೆ ಸಹಿ ಹಾಕುವ ತರಾತುರಿ! ಕೆರೆ, ಬಾವಿ ಮೊದಲಾದ ನೀರಿನ ಮೂಲಗಳನ್ನು ಬರಿದಾಗಿಸಿದ ಮೇಲೆ ಕಟ್ಟಕಟೆಯ ಕೊಳವೆ ಬಾವಿ ಕೊರೆತದ ಯತ್ನವು ಯಶಕ್ಕಿಂತ ವಿಫಲದ ಸುದ್ದಿಗಳೇ ಕೇಳಿಸುತ್ತಿವೆ.
            ಶಿರಸಿಯ ಪಾಂಡುರಂಗ ಹೆಗಡೆ ಉಲ್ಲೇಖಿಸುತ್ತಾರೆ - ದಶಕದ ಹಿಂದೆ ಬಯಲು ಸೀಮೆಯಲ್ಲಿ ಆರುನೂರರಿಂದ ಎಂಟುನೂರು ಅಡಿ ಆಳದಲ್ಲಿ ನೀರು ಸಿಗುತ್ತಿತ್ತು. ಇಂದು ಒಂದು ಸಾವಿರದ ನಾಲ್ಕುನೂರರಿಂದ ಸಾವಿರದ ಎಂಟು ನೂರು ಅಡಿಗೆ ಕುಸಿದಿದೆ. ಹೆಚ್ಚು ಮಳೆ ಬೀಳುವ ಕರಾವಳಿ, ಮಲೆನಾಡು ಇದಕ್ಕಿಂತ ಹೊರತಲ್ಲ.
              ಒಂದು ಕೊಳವೆ ಬಾವಿ ವೈಫಲ್ಯಗೊಂಡರೆ ಮತ್ತೊಂದು, ಇನ್ನೊಂದು.. ಹೀಗೆ ಕೊರೆತಗಳ ಸಾಲು ಯಶೋಗಾಥೆಗಳು ಕಣ್ತೆರೆದರೆ ಕಾಲಬುಡದಲ್ಲೇ ಇದೆ. ಪ್ರತೀಯೊಬ್ಬನಿಗೂ ತನ್ನ ಸ್ಥಳದಲ್ಲಿ ಒಂದಾದರೂ ಕೊಳವೆ ಬಾವಿ ಇರಲೇ ಬೇಕೆನ್ನುವ ಹಪಾಹಪಿ, ಜತೆಗೆ ಹಠ!  ಧರಣಿಗೆ ನೀರುಣಿಸುವ ಕಾಳಜಿ ಇಲ್ಲ, ಕೊರೆಯಲು ಎಷ್ಟೊಂದು ಅತ್ಯುತ್ಸಾಹ! ನೀರಿನ ಕೊರತೆಯ ಈ ಹೊತ್ತಲ್ಲಿ ಇಂತಹ ಮಾತು ಅಪಥ್ಯವಾಗಬಹುದು.
             ನೀರಿನ ಅಭಾವದ ಸಂಕಷ್ಟದ ಮನಃಸ್ಥಿತಿಯ ತೇವವು ಮಳೆಗಾಲ ಬಂದಾಗಲೂ ಆರಕೂಡದು ಅಲ್ವಾ. ಬಹುಶಃ ಆಗ ಭೂ ಒಡಲಿಗೆ ನೀರಿಂಗಿಸುವ, ಮಳೆಕೊಯ್ಲಿನಂತಹ ಜಲಸಂರಕ್ಷಣೆಯ ಅರಿವಿನ ಅನುಷ್ಠಾನಕ್ಕೆ ಕಾಲ ಪಕ್ವ.  ನೀರಿಲ್ಲ ಎಂದಾಗ ಸರಕಾರದಲ್ಲಿರುವ ಒಂದೇ ಅಸ್ತ್ರ - ಕೊಳವೆ ಬಾವಿಗಳ ಕೊರೆತ. ಇಂತಹ ಬಾವಿಗಳ ವೈಫಲ್ಯದ ಕತೆಗಳು ಸರಕಾರದ ಕಡತದಲ್ಲಿ ಎಷ್ಟಿಲ್ಲ. ಅವು ಎಂದೂ ತೆರೆದುಕೊಳ್ಳುವುದಿಲ್ಲ ಬಿಡಿ.
             'ನಮ್ಮ ಬಾವಿ, ನಮ್ಮ ನೀರು' ಎಂದು ಬೀಗುವ ಕಾಲಕ್ಕೀಗ ಇಳಿಲೆಕ್ಕ. ಬಾವಿಯಲ್ಲಿ ನೀರಿದೆ ಎಂದು ಟ್ಯಾಂಕಿ ತುಂಬಿ ಪೋಲಾಗುವಷ್ಟು ಪಂಪ್ ಚಾಲೂ ಮಾಡುವಾತನಿಗೆ ಭವಿಷ್ಯದ ಕರಾಳತೆಯ ಅರಿವು ಬೇಕಾಗಿಲ್ಲ.  'ನೀರನ್ನು ತುಪ್ಪದಂತೆ ಬಳಸಿ' ಎಂದು ಜಲಯೋಧರು ಕಳೆದೆರಡು ದಶಕದಿಂದ ಹೇಳುತ್ತಿದ್ದರೂ ನಗೆಯಾಡಿದವರೇ ಅಧಿಕ. ಆ ನಗೆಯ ಮುಖದಲ್ಲಿ ಈಗ ವಿಷಾದದ ಛಾಯೆ!
             ನೀರನ್ನು ತುಪ್ಪದಂತೆ ಬಳಸುವ ಮನಃಸ್ಥಿತಿಯನ್ನು ಅನಿವಾರ್ಯವಾಗಿ ರೂಢಿಸಿಕೊಳ್ಳಬೇಕಾದುದು ಕಾಲದ ಅನಿವಾರ್ಯತೆ. ಹಿಂದೊಮ್ಮೆ ಕ್ಯಾಂಪ್ಕೋದ ಮಾಜಿ ಅಧ್ಯಕ್ಷ ಕೊಂಕೋಡಿ ಪದ್ಮನಾಭರು ಇಸ್ರೆಲಿಗೆ ಹೋಗಿದ್ದರು. "ಕಡಿಮೆ ಮಳೆ ಬೀಳುವ ಇಸ್ರೆಲ್ ದೇಶದ ನೀರಿನ ಬಳಕೆಯ ಪಾಠ ನಿಜಕ್ಕೂ ನೀರಿನ ಪಠ್ಯ. ಅಲ್ಲಿ ನೀರು ತುಪ್ಪಕ್ಕೆ ಸಮಾನ. ಜನರ ಮನಃಸ್ಥಿತಿ ಅದಕ್ಕೆ ಟ್ಯೂನ್ ಆಗಿದೆ. ಹಾಗಾಗಿ ನೋಡಿ, ಕೃಷಿಯಲ್ಲಿ ಇಸ್ರೆಲ್ ಮುಂದಿದೆ," ಎಂದಿದ್ದರು.
            ಕನ್ನಾಡಿನಲ್ಲಿ ಅದರಲ್ಲೂ ಕರಾವಳಿಯಲ್ಲಿ ಸಹಕಾರ ವ್ಯವಸ್ಥೆಯು ಗ್ರಾಮೀಣ ಭಾರತದ ಉಸಿರು. ಇಂತಹ ಸಹಕಾರ ವ್ಯವಸ್ಥೆಯು ನೀರಿನ ವಿಚಾರದಲ್ಲೂ ಹೊಂದಿದರೆ ಕೊಳವೆ ಬಾವಿಗಳ ಅವಿರತ ಕೊರೆತಕ್ಕೆ ಪರ್ಯಾಯ ಪರಿಹಾರವಾಗಬಹುದು. ಕೇವಲ ಕೊಳವೆ ಬಾವಿ ಮಾತ್ರವಲ್ಲ, ಜಲನಿಧಿಗಳಾದ ಕಟ್ಟ, ಮದಕಗಳ ನೀರಿನ ಬಳಕೆಯಲ್ಲೂ ಇದೇ ಮಾದರಿಯನ್ನು ಹೊಂದಿರುವ ಉದಾಹರಣೆಗಳು ಎಷ್ಟಿಲ್ಲ. ಅಂತಹ ತಂಪು ಸುದ್ದಿಗಳು ಎಲ್ಲೂ ಸುದ್ದಿಯಾಗುವುದಿಲ್ಲ.
            ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಮುಂಡಾಜೆ ಗ್ರಾಮಕ್ಕೆ ಮೃತ್ಯುಂಜಯ ನದಿ ಜಲದಾತೆ. ನೇತ್ರಾವತಿಯ ಮೂರನೇ ಒಂದು ಉಪನದಿ. ಅಗಲ ಸುಮಾರು ಐವತ್ತು ಮೀಟರ್. ಆಳ ಒಂದೂವರೆ ಮೀಟರ್. ಇದು ಚಾರ್ಮಾಡಿಯ ಮಧುಗುಂಡಿಯಲ್ಲಿ ಹುಟ್ಟಿ ಹದಿನೈದು ಕಿಲೋಮೀಟರ್ ಹರಿದು ಫಜಿರಡ್ಕದಲ್ಲಿ ನೇತ್ರಾವತಿಯನ್ನು ಸೇರುತ್ತದೆ. ಇಲ್ಲಿನ ಪೂರ್ವಜರು ಶತಮಾನಕ್ಕೂ ಮೊದಲೇ ಕಟ್ಟ ನಿರ್ಮಿಸಿ ಕೃಷಿಗೆ ನೀರು ಬಳಸುತ್ತಿದ್ದರು.
            ಕಟ್ಟ ಎಂದರೆ ಹರಿಯುವ ನೀರನ್ನು ತಡೆಯಲು ಸ್ಥಳೀಯ ಸಂಪನ್ಮೂಲಗಳನ್ನು ಬಳಸಿ ನದಿಗೆ (ತೋಡಿಗೆ) ಅಡ್ಡವಾಗಿ ಕಟ್ಟುವ ತಾತ್ಕಾಲಿಕ ತಡೆಗಟ್ಟ ಅಥವಾ ಚೆಕ್ಡ್ಯಾಮ್. ನದಿಗುಂಟದ ಹದಿನೆಂಟು ಮನೆಗಳು ಕಟ್ಟದ ಫಲಾನುಭವಿಗಳು. ಮೊದಲು ಇಪ್ಪತ್ತೆರಡು ಕುಟುಂಬಗಳಿದ್ದುವಂತೆ. ಎಲ್ಲರದೂ ಮುಖ್ಯ ಕೃಷಿ ಅಡಿಕೆ. ಕಟ್ಟದ ನೀರೇ ಆಧಾರ. ಸುಮಾರು 1906ರಲ್ಲಿ ಈ ಕಟ್ಟ ಆರಂಭವಾಗಿರುವ ಉಲ್ಲೇಖ ಕೃಷಿಕರಲ್ಲಿದೆ. 1917ರಿಂದ ಸವಿವರವಾದ ಖರ್ಚುವೆಚ್ಚ ಬರೆದಿಟ್ಟ ದಾಖಲೆಗಳಿವೆ.
             ಕಟ್ಟದ ಫಲಾನುಭವಿಗಳಲ್ಲಿ ಒಬ್ಬರು ಗಜಾನನ ವಝೆ ಅವರಿಗೆ ಕಟ್ಟದ ಸುದ್ದಿ ಹೇಳಲು ಖುಷಿ - ಪ್ರತಿ ವರುಷ ನವೆಂಬರ್ ತಿಂಗಳಲ್ಲಿ ಕಟ್ಟ ಕಟ್ಟುವ ಮುಹೂರ್ತ. ನಮ್ಮೆಲ್ಲರ ತೋಟಗಳಿಗೆ ಎರಡು ತಿಂಗಳ ಕಾಲ ಸಮೃದ್ಧ ಹಾಯಿ ನೀರಾವರಿ. ನೀರು ಕಡಿಮೆಯಾಗುತ್ತಿದ್ದಂತೆ ರೇಶನ್! ಅಂದರೆ ನಾಲ್ಕು ತಿಂಗಳ ತುಂತುರು ನೀರಾವರಿ. ತೋಡಿನಲ್ಲಿ ನೀರಿನ ಹರಿವಿರುವಾಗ ಎಲ್ಲ ಕೆರೆ, ಬಾವಿಗಳು ತುಂಬಿರುತ್ತವೆ. ಕಟ್ಟ ಕಟ್ಟುವ ಸ್ಥಳವು ಪೂರ್ತಿ ನೇರವಾಗಿಲ್ಲ. ನದಿಯಲ್ಲೇ ನೈಸರ್ಗಿಕ  ಬಂಡೆಕಲ್ಲುಗಳಿವೆ. ಇವು ಕೆಲಸವನ್ನು ಸುಲಭವಾಗಿಸಿದೆ. ಅಲ್ಲಲ್ಲಿ ಖಾಲಿ ಇರುವ ಸ್ಥಳಗಳಲ್ಲಿ ಅಡ್ಡ ಕಟ್ಟಿದರೆ ಸಾಕು, ಕಟ್ಟ ಆಗಿಬಿಡುತ್ತದೆ.
            ಕಟ್ಟದ ಕತೆಗೆ ಕಿವಿಯಾಗುತ್ತಿದಂತೆ ಸಹಜವಾಗಿ 'ನೀರಿನ ಖುಷಿ' ಆಗುತ್ತದೆ. ಆದರೆ ವರುಷ ವರುಷ ಮಳೆ ಕಡಿಮೆಯಾಗುತ್ತಿದ್ದಂತೆ ಕಟ್ಟದ ನೀರಿನಲ್ಲೂ ವ್ಯತ್ಯಯವಾಗುತ್ತಿದೆ. ಎಪ್ರಿಲ್-ಮೇ ತಿಂಗಳಲ್ಲಿ ತೋಡಿನಲ್ಲಿ ಧಾರಾಳವಾಗಿ ನೀರು ಹರಿಯುತ್ತಿದ್ದ ದಿನಮಾನಗಳನ್ನು ನೆನೆಯುತ್ತಾರೆ ವಝೆ, "ಆ ಕಾಲದಲ್ಲಿ ನದಿಯ ನೀರನ್ನು ಪಂಪ್ ಮಾಡುತ್ತಿರಲಿಲ್ಲ. ಕೆಲವರು ಅವರವರ ತೋಟದ ಕೆಳಭಾಗದಲ್ಲಿ ಪಂಪ್ ಇಟ್ಟಿರುತ್ತಾರೆ. ಬರಬರುತ್ತಾ ಕಟ್ಟದ ನೀರು ತೋಟಕ್ಕೆ ಹರಿಯುವ ದಿನಗಳು ತುಂಬಾ ಕಡಿಮೆಯಾಗುತ್ತಿವೆ.  ಬಹುತೇಕ ಫೆಬ್ರವರಿ ತನಕ ನೀರು ಹರಿಯುತ್ತದಷ್ಟೇ. ಕೆಲವೊಮ್ಮೆ ಜನವರಿಗೇ ಕಡಿಮೆಯಾಗಿರುತ್ತದೆ. ಹೀಗಿದ್ದೂ ಆರು ತಿಂಗಳ ಬದಲು ಎರಡೇ ತಿಂಗಳಿಗೆ ನೀರು ಸಿಗುತ್ತಿದ್ದರೂ ಕಟ್ಟ ಕಟ್ಟುವುದನ್ನು ನಿಲ್ಲಿಸಿಲ್ಲ."
           ಕಾಸರಗೋಡು ಜಿಲ್ಲೆಯ ಮೀಯಪದವಿನ 'ಉಪ್ಪಳ ನದಿ'ಯ ಒಂದು ದಡದಲ್ಲಿ ಡಾ.ಡಿ.ಸಿ.ಚೌಟರ ತೋಟ. ಮತ್ತೊಂದು ದಡದಲ್ಲಿ ಸುಮಾರು ಇಪ್ಪತ್ತೈದು ಮಂದಿ ಕೃಷಿಕರ ಗದ್ದೆ-ತೋಟ. ಒಂದೆಕ್ರೆಯಿಂದ ಐದೆಕ್ರೆ ತನಕ. ಏತದ ಮೂಲಕ ನೀರೆತ್ತಿ ಗದ್ದೆ ಬೇಸಾಯ ಮಾಡಿದ ದಿನಮಾನಗಳನ್ನು ಕೃಷಿಕರು ಜ್ಞಾಪಿಸಿಕೊಳ್ಳುತ್ತಿದ್ದಾರೆ. ಮೋಟಾರು ಪಂಪ್ ಇಲ್ಲದ ಕಾಲಘಟ್ಟ. ಭೂಮಿಯಿದೆ, ಕೃಷಿ ಮಾಡುವ ಉಮೇದಿದೆ. ಮಾಡಲಾಗುತ್ತಿಲ್ಲ ಎನ್ನುವ ಸ್ಥಿತಿ.
          ಈ ಸಂಕಟ ಪರಿಹಾರಕ್ಕೆ ಕೃಷಿಕ ಡಾ.ಡಿ.ಸಿ.ಚೌಟರ ಯೋಜನೆ. ಮೊದಲಿಗೆ ಹನ್ನೆರಡು ಮಂದಿಯ ಗುಂಪು ರಚನೆ. ವಿದ್ಯುತ್ ಸಂಪರ್ಕಕ್ಕೆ ಮೊದಲಾದ್ಯತೆ. ಹೊಳೆಯಿಂದ ಮೋಟಾರ್ ಪಂಪ್ ಮೂಲಕ ನೀರೆತ್ತಿ ಕೃಷಿಗೆ ಸಹಕಾರಿ ವ್ಯವಸ್ಥೆಯಲ್ಲಿ ಬಳಕೆ. ಅವರವರ ಕೃಷಿ ಭೂಮಿಗೆ ಹೊಂದಿಕೊಂಡು ನೀರಿನ ವಿತರಣೆ. ಎಲ್ಲರ ತೋಟಗಳು ಒತ್ತಟ್ಟಿಗೆ ಇದ್ದುದರಿಂದ ಯೋಜನೆಗೆ ಶೀಘ್ರ ಚಾಲನೆ. ಸುಮಾರು ಇಪ್ಪತ್ತೆರಡು ವರುಷವಾಯಿತು, ಕೃಷಿಕರಲ್ಲಿ ಪರಸ್ಪರ ನಿಜಾರ್ಥದ ಒಗ್ಗಟ್ಟು ಮತ್ತು ಸನ್ಮನಸ್ಸು ಮೂಡಿದ್ದರಿಂದಾಗಿ ನೀರಿನ ಬಳಕೆಯಲ್ಲಿ ಸಹಕಾರಿ ತತ್ವ ಅನ್ವಯವಾಗಿ ಯಶವಾಗಿವೆ. ಸಹಕಾರಿ ನೀರಾವರಿ ಶುರುವಾಗುವ ಮೊದಲು ಹದಿನೈದೆಕ್ರೆ ಕೃಷಿಯಾಗುತ್ತಿತ್ತು. ಈಗ ದುಪ್ಪಟ್ಟು ಅಲ್ಲ ಅದಕ್ಕಿಂತಲೂ ಹೆಚ್ಚು ವಿಸ್ತಾರಗೊಂಡಿದೆ' ಎನ್ನುತ್ತಾರೆ ಚೌಟರು.
ಈ ಎಲ್ಲಾ ಜಲವಿಚಾರಗಳನ್ನು ಜಾಲಾಡುತ್ತಿದ್ದಾಗ ಪುತ್ತೂರು ಬಲ್ನಾಡಿನ ಕೃಷಿಕ ಸುರೇಶ್ ಭಟ್ ಮಾಹಿತಿ ಹಂಚಿಕೊಂಡರು - ತನ್ನೂರಲ್ಲಿ ಒಂದು ಕೊಳವೆ ಬಾವಿಯಿಂದ ದಿನಕ್ಕೊಬ್ಬರಂತೆ ಏಳು ಮಂದಿ ಕೃಷಿಕರು ಸಹಕಾರಿ ತತ್ವದಂತೆ ನೀರನ್ನು ಬಹುಕಾಲ ಬಳಸುತ್ತಿದ್ದರು. ಈ ವ್ಯವಸ್ಥೆ ಒಂದಷ್ಟು ಕಾಲ ನಡೆದಿತ್ತು.
           ಕೊಳವೆ ಬಾವಿಗಳನ್ನು ಕೊರೆಯುತ್ತಾ ಹೋಗುವುದಕ್ಕಿಂತ ಜೀವವಿದ್ದ ಕೊಳವೆಬಾವಿಗಳ ನೀರನ್ನು 'ಸಹಕಾರಿಕರಣ'ಗೊಳಿಸಬಹುದು. ಇದರಲ್ಲಿ ಸಮಸ್ಯೆ ಇಲ್ಲವೆಂದಲ್ಲ. ಅಲ್ಲಲ್ಲಿನ ಸಂಪನ್ಮೂಲ, ಅಗತ್ಯಗಳಿಗೆ ಹೊಂದಿಕೊಂಡು ಮನಃಸ್ಥಿತಿಗಳನ್ನು ಬದಲಾಯಿಸಿಕೊಳ್ಳಬೇಕಾಗಬಹುದು. ಮನಸ್ಸು  ಸಜ್ಜಾಗಬೇಕಷ್ಟೇ. ಸಹಕಾರಿ ವ್ಯವಸ್ಥೆಯನ್ನು ಒಪ್ಪಿಕೊಂಡಿದ್ದೇವೆ. ಬಹುಶಃ ನೀರಿಗೂ ರೇಶನ್ ಸಿಸ್ಟಂ ಅನಿವಾರ್ಯ.
           ಒಂದು ನೆನಪಿಟ್ಟುಕೊಳ್ಳೋಣ - ನೀರಿನ ಬರಕ್ಕೆ ಕೊಳವೆ ಬಾವಿಗಳ ಕೊರೆತ ಪರಿಹಾರವಲ್ಲ. ಇಂತಹ ಚಿಕ್ಕಪುಟ್ಟ ಸಹಕಾರಿಕರಣವು ಕೂಡಾ ಜಲಸಂರಕ್ಷಣೆಗೆ ಮಾದರಿ. ಕನ್ನಾಡಿನಲ್ಲಿ ನೀರುಳಿತಾಯದ ಸಹಕಾರಿ ಮಾದರಿಗಳು ವಿರಳವಾಗಿವೆ. ಅರಿವಿನ ದೃಷ್ಟಿಯಿಂದ ಅದಕ್ಕೆ ಬೆಳಕ್ಕೊಡ್ಡುವ ತುರ್ತಿದೆ.  

Wednesday, August 2, 2017

ಹೂಳಿನೊಳಗೆ ಅವಿತ ಜೀವನಿಧಿಗೆ ಮರು ಉಸಿರು

ಉದಯವಾಣಿಯ 'ನೆಲದ ನಾಡಿ' ಅಂಕಣ / 2-3-2017

                "ಕನ್ನಾಡಿನಾದ್ಯಂತ  ನೀರು ಬಿಸಿಯಾಗುತ್ತಿದೆ! ಇನ್ನೊಂದೇ ತಿಂಗಳು, ಮತ್ತೆ ದೇವ್ರೇ ಗತಿ. ಕಳೆದ ವರ್ಷಕ್ಕಿಂತಲೂ ಈ ಬಾರಿ ನೀರು ಕೈಕೊಡುತ್ತೆ. ಕೃಷಿ ಕೈಬಿಡುತ್ತೆ. ಕುಡಿಯಲು ನೀರಿಲ್ಲ. ಬದುಕು ಹೇಂಗಪ್ಪಾ.." ದೂರದ ಕೊಪ್ಪಳದಿಂದ ಮಹಂತೇಶ ಸುಖ-ದುಃಖದ ಮಧ್ಯೆ ವರ್ತಮಾನದ ವಿಷಾದವನ್ನು ಉಸುರಿದರು. ಅವರ ವಿಷಾದದ ಉಸಿರಿನಲ್ಲಿ ಬಿಸಿಯ ಅನುಭವವಾಗುತ್ತಿತ್ತು. ಭವಿಷ್ಯದ ಕಷ್ಟದ ದಿನಗಳ ಚಿತ್ರಣ ಎದುರಿದ್ದು ಅಸಹಾಯಕರಾಗಿ ಅದನ್ನು ಒಪ್ಪಿಕೊಳ್ಳಬೇಕಾದ ದಿನಗಳಿಗೆ ಅಣಿಯಾಗುತ್ತಿದ್ದಾರೆ.
              ಕೊಪ್ಪಳ ಯಾಕೆ, ಕನ್ನಾಡಿನ ಬಹುತೇಕ ಜಿಲ್ಲೆಗಳ ನೀರಿನ ಕತೆಗಳಲ್ಲಿ ವಿಷಾದಗಳೇ ತುಂಬಿವೆ. ಬಾವಿಗಳಲ್ಲಿ ನೀರು ಕೆಳಕೆಳಗೆ ಇಳಿಯುತ್ತಿವೆ. ಕೆರೆಗಳಲ್ಲಿ ಇನ್ನೇನು ಕ್ಷಣಗಣನೆ. ಕೊಳವೆ ಬಾವಿಗಳಲ್ಲಿ ಜಲ ಪಾತಾಳಕ್ಕಿಳಿದಿವೆ. ನದಿಗಳು ಹರಿವನ್ನು ನಿಧಾನವಾಗಿಸುತ್ತಿವೆ. ಕೊಪ್ಪಳದ ಮಿತ್ರ ಹೇಳಿದಂತೆ ಒಂದೇ ತಿಂಗಳು! ಮತ್ತೇನು ಎನ್ನುವ ಪ್ರಶ್ನೆಗೆ ಉತ್ತರಿಸಲು ಕಷ್ಟವಾಗುತ್ತಿದೆ. ಕೆಲವು ವರುಷಗಳಿಂದ ಇಂತಹ ಸ್ಥಿತಿಗಳು ಮರುಕಳಿಸುತ್ತಿದ್ದರೂ ಮಳೆ ಬಂದಾಗ ಖುಷ್ ಆಗಿರುತ್ತೇವೆ. ಬೇಸಿಗೆ ಬಂದಾಗ ಅದೇ ಹಾಡು, ಅದೇ ಕೂಗು.
              ಜಲಸಂರಕ್ಷಣೆಯ ತಿಳುವಳಿಕೆಯು ಕನ್ನಾಡಿನಲ್ಲಿ ಹೊಸತೇನಲ್ಲ. ದಶಕಕ್ಕೂ ಆಚೆ ನೀರೆಚ್ಚರದ ಅರಿವನ್ನು ಮೂಡಿಸುವ ಕೆಲಸಗಳು ನಡೆಯುತ್ತಲೇ ಇವೆ. ಜಲಯೋಧರು ಕನ್ನಾಡಿನಾದ್ಯಂತ ಓಡಾಡಿ ಜಲಸಂರಕ್ಷಣೆಯ ಮಾದರಿ, ಅರಿವನ್ನು ಮೂಡಿಸುತ್ತಲೇ ಬಂದಿದ್ದಾರೆ, ಬರುತ್ತಿದ್ದಾರೆ. ಬರದ ನೋವಿನ ಮಧ್ಯೆ ಜಲಸಂರಕ್ಷಣೆಯ ಮಾದರಿಗಳು ರೂಪುಗೊಳ್ಳುತ್ತಿವೆ. ನೀರಿಲ್ಲ ಎಂದವರಿಗೆ 'ನೀರು ನಾವು ಕೊಡುತ್ತೇವೆ' ಎಂದು ನಗುನಗುತ್ತಾ ಸ್ವಾಗತಿಸುವ ಮನಸ್ಸುಗಳು ಅಲ್ಲೋ ಇಲ್ಲೋ ರೂಪುಗೊಳ್ಳುತ್ತಿವೆ.
              ಇಂತಹ ಮಾದರಿಗಳನ್ನು, ಅರಿವನ್ನು ಬಿತ್ತುವ ಕೆಲಸಗಳನ್ನು ನಮ್ಮ ಸ್ಥಳೀಯಾಡಳಿತಗಳು ಗಂಭೀರವಾಗಿ ಪರಿಗಣಿಸಿಲ್ಲ. ಜನರನ್ನು ಈ ದಿಸೆಯಲ್ಲಿ ವಿಶ್ವಾಸಕ್ಕೆ ತೆಗೆದುಕೊಂಡು ಅದನ್ನು ಸಾಮೂಹಿಕ ಜಾಗೃತಿಯನ್ನಾಗಿ ಮಾಡುವತ್ತ ಹೆಜ್ಜೆ ಊರಿಲ್ಲ. ವಿವಿಧ ಸ್ತರಗಳಲ್ಲಿ ರಾಜಕೀಯದ ಅವತಾರಗಳು ಮೇಳೈಸುತ್ತಿರುವ ಮಧ್ಯೆ  ಮಾಡಬೇಕಾದವರಿಗೆ ಉತ್ಸಾಹವಿಲ್ಲ. ಉತ್ಸಾಹವಿದ್ದವರಿಗೆ ಆಡಳಿತ ವ್ಯವಸ್ಥೆಗಳು ರಸ್ತೆಉಬ್ಬುಗಳಾಗಿವೆ. ವೈಯಕ್ತಿಕವಾಗಿ, ಕೆಲವು ಸ್ಥಳೀಯ ಖಾಸಗಿ ಸಂಸ್ಥೆಗಳಿಂದ ಅಲ್ಲಿಲ್ಲಿ ನೀರೆಚ್ಚರದ ಪಾಠಗಳಾಗುತ್ತಿವೆ. ಶಾಲೆಗಳಲ್ಲಿ ಅರಿವು ಮೂಡಿಸುವ ಯತ್ನಗಳಾಗುತ್ತಿವೆ. ಇಷ್ಟೆಲ್ಲಾ ವಿಷಾದಗಳ ಮಧ್ಯೆ ಕನ್ನಾಡಿನ ಕೆಲವೆಡೆ ನೀರಿನ ಬರವನ್ನು ಲಕ್ಷಿಸಿ ಕೆರೆಗಳ ಹೂಳು ತೆಗೆಯುವ, ಅಭಿವೃದ್ಧಿ ಮಾಡುವ ಕಾರ್ಯಗಳು ಸದ್ದು ಮಾಡುತ್ತಿವೆ. ನೀರನ್ನು ಹಿಡಿದಿಡುವ ಕೆರೆಗಳಲ್ಲಿ ಕೆಲವು ಬಹುಮಹಡಿ ಕಟ್ಟಡದ ಅಡಿಪಾಯಗಳಾಗಿವೆ! ಅಳಿದುಳಿದ ಕೆರೆಗಳ ಅಭಿವೃದ್ಧಿಗೆ ನೀರಿನ ಮನಸ್ಸುಗಳು ಟೊಂಕಕಟ್ಟಿದ ಸುದ್ದಿಗಳು ಮಹತ್ವ ಪಡೆಯುತ್ತಿವೆ.
              ನಟ ಯಶ್ ನಟನೆಯಿಂದ ಒಂದು ಕ್ಷಣ ದೂರ ನಿಂತು ಘೋಷಣೆಯನ್ನೇ ಮಾಡಿಬಿಟ್ಟರು - 'ರಾಜ್ಯಾದ್ಯಂತ ಕೆರೆಗಳಿಗೆ ಕಾಯಕಲ್ಪ'. ಫೆಬ್ರವರಿ 28ರಂದು ಚಾಲನೆ. ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ತಲ್ಲೂರು ಗ್ರಾಮದಲ್ಲಿರುವ ಕೆರೆ ಅಭಿವೃದ್ಧಿಗೆ ಮೊದಲ ಶ್ರೀಕಾರ. ಅವರ 'ಯಶೋಮಾರ್ಗ' ಸಂಸ್ಥೆಯ ಹೊಣೆ. ನಾಲ್ಕು ಕೋಟಿ ರೂಪಾಯಿ ವೆಚ್ಚದ ಯೋಜನೆ. ಯಶ್ ಅವರ ಸಂಕಲ್ಪದಂತೆ ಕೆರೆ ಅಭಿವೃದ್ಧಿಯಾದರೆ ನಲವತ್ತು ಗ್ರಾಮಗಳಿಗೆ ಕುಡಿಯುವ ನೀರಿಗೆ ತೊಂದರೆಯಾಗದು. ಸುಮಾರು ಇಪ್ಪತ್ತು ಕಿಲೋಮೀಟರ್ ವ್ಯಾಪ್ತಿಯಲ್ಲಿ ಅಂತರ್ಜಲ ವೃದ್ಧಿಯಾಗುತ್ತದೆ. ಇದೆಲ್ಲಾ ಅಂಕಿಅಂಶಗಳಷ್ಟೇ. ಇದು ಘೋಷಣೆಗಳ ಕಾಲ. ಜನ ನಂಬುವ ಸ್ಥಿತಿಯಲ್ಲಿಲ್ಲ. ಘೋಷಣೆ, ಆಶ್ವಾಸನೆಗಳನ್ನು ಕೇಳಿ ಕೇಳಿ ಜನ ರೋಸಿಹೋಗದ್ದಾರೆ. ಯಶ್ ಅವರ ಈ ಘೋಷಣೆ ಶೀಘ್ರ ಅನುಷ್ಠಾನ ಆಗಬೇಕಾದುದು ಮುಖ್ಯ. ಆದೀತೆಂದು ಆಶಿಸೋಣ.
                ಕಳೆದ ವರುಷ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಧಾರವಾಡ ತಾಲೂಕಿನ ಐದು ಕೆರೆಗಳಿಗೆ ಕಾಯಕಲ್ಪ ನೀಡಿತ್ತು. ನೂರಾರು ವರುಷಗಳ ಇತಿಹಾಸವಿರುವ ಹೆಬ್ಬಳ್ಳಿ ಗ್ರಾಮದ ಕೆಂಗಳಮ್ಮನ ಕೆರೆಯಿಂದ ನೀರು ಬಳಸದೆ ಅರ್ಧ ಶತಮಾನವಾಗಿತ್ತು. ಈ ಗ್ರಾಮದ ಜನಸಂಖ್ಯೆ ಸುಮಾರು ಮೂರುವರೆ ಸಾವಿರ. ಕಾಲಗರ್ಭಕ್ಕೆ ಸೇರಿಹೋದ ಕೆರೆಯು ಜನರ ಮನಸ್ಸಿನಿಂದಲೂ ದೂರವಾಯಿತು. ಜಾಲಿಮರಗಳು ಹುಟ್ಟಿ ಕಾಡಾಯಿತು. ಜತೆಗೆ ಕೆರೆ ಒತ್ತುವರಿಯಾಯಿತು. ದನಕರುಗಳ ಮೇವು, ಸೌದೆ ಸಂಗ್ರಹಗಳಿಗೆ ಆಶ್ರಯವಾಗಿತ್ತು. ಪುಂಡಾಡಿಕೆಯ ತಾಣವಾಯಿತು. 2012ರಲ್ಲಿ ಒತ್ತುವರಿಯನ್ನು ತೆರವುಗೊಳಿಸಿದರೂ ಅಭಿವೃದ್ಧಿ ಕಾರ್ಯ ಆರಂಭವಾಗಿರಲಿಲ್ಲ. ಹೆಬ್ಬಳ್ಳಿಯ ಕೆರೆಯದ್ದು ಒಂದು ಮಾದರಿಯಷ್ಟೇ. ರಾಜ್ಯದ್ಯಂತ ಇಂತಹ ಕೆರೆಗಳು ಸಾವಿರಾರಿವೆ.
              ಯೋಜನೆಯ ನಿರ್ದೇಶಕ ಜಯಶಂಕರ ಶರ್ಮ ಕೆರೆಗಳ ಸ್ಥಿತಿಗತಿ ವಿವರಿಸುತ್ತಾರೆ, "ಮಹಾರಾಜರ ಆಡಳಿತದಲ್ಲಿ ಅಂತರ್ಜಲ ವೃದ್ಧಿ, ಜನ-ಜಾನುವಾರು, ಪ್ರಾಣಿ-ಪಕ್ಷಿಗಳಿಗೆ ಕುಡಿಯಲು ನೀರು ಮತ್ತು ಕೃಷಿ ಉದ್ದೇಶಗಳಿಗೆ ನೀರಿನ ಬಳಕೆಯನ್ನು ಲಕ್ಷಿಸಿ ಕೆರೆ-ಕಟ್ಟೆಗಳನ್ನು ನಿರ್ಮಿಸುತ್ತಿದ್ದರು. ಪ್ರಸ್ತುತ ಇರುವ ಕೆರೆಗಳು ನಿರ್ವಹಣೆಯ ಕೊರತೆಯಿಂದ ಹೂಳು ತುಂಬಿ ಆಟದ ಮೈದಾನಗಳಾಗಿವೆ. ಕೆಲವು ಉಳ್ಳವರ ಆಸ್ತಿಗಳಾಗಿವೆ! ಒಂದು ಅಂಕಿಅಂಶದ ಪ್ರಕಾರ ರಾಜ್ಯದಲ್ಲಿ ಮೂರುವರೆ ಸಾವಿರಕ್ಕೂ ಮಿಕ್ಕಿ ಸಣ್ಣ ನೀರಾವರಿ ಕೆರೆಗಳಿವೆ. ಧಾರವಾಡ ಜಿಲ್ಲೆಯೊಂದರಲ್ಲೇ ನೂರಕ್ಕೂ ಹೆಚ್ಚು ಕೆರೆಗಳಿವೆ. ಇವುಗಳೆಲ್ಲಾ ಮಳೆಗಾಲದಲ್ಲಿ  ನೀರು ತುಂಬಿಕೊಂಡು ಅಂತರ್ಜಲ ವೃದ್ಧಿ ಕಾರ್ಯವನ್ನು ಸಹಜವಾಗಿ ಮಾಡುತ್ತಿದ್ದುವು."
              ಧಾರವಾಡ ತಾಲೂಕಿನ ಹೆಬ್ಬಳ್ಳಿ, ಮುಗುದ, ಹಳ್ಳಿಕೆರೆ, ಕೊಟಬಾಗಿ ಹಾಗೂ ತಿಮ್ಮಾಪುರ ಗ್ರಾಮದ ಐದು ಕೆರೆಗಳ ಹೂಳು ತೆಗೆದು ವರುಷವಾಗುತ್ತಾ ಬಂತು. ಕೆಲವು ಕೆರೆಗಳ ಸುತ್ತ ಹಣ್ಣು, ಹೂವು ಸಸಿಗಳ ನಾಟಿ. ಹೆಬ್ಬಳ್ಳಿಯ ಒಂದು ಕೆರೆ ತುಂಬಿತೆಂದರೆ ಸುತ್ತಲಿನ ನಲವತ್ತೊಂದು ಕೊಳವೆ ಬಾವಿಗಳು ಮರುಪೂರಣವಾದಂತೆ. ಮುಗುದ ಕೆರೆಯು ಆರುವತ್ತು ಕುಟುಂಬದ ಮೀನುಗಾರಿಕೆಗೆ ಆಸರೆ. ಹಳ್ಳಿಗೆರೆಯ ಕೆರೆಯಿಂದ ಸುತ್ತಲಿನ ಮೂವತ್ತೆಂಟು ಬೋರ್ವೆಲ್ಗಳು,. ಕೊಟಬಾಗಿ ಕೆರೆಯು ಇಪ್ಪತ್ತೆರಡು ಮತ್ತು ತಿಮ್ಮಾಪುರದ ಮೂವತ್ತು ಕೊಳವೆ ಬಾವಿಗಳಿಗೆ ಅಂತರ್ಜಲ ಪೂರೈಕೆಗೆ ಸಹಕಾರಿ. ಏನಿದ್ದರೂ ನಿರೀಕ್ಷಿತ ಫಲಿತಾಂಶಕ್ಕಾಗಿ ಒಂದೆರಡು ವರುಷ ಕಾಯಬೇಕು.
               ನಲವತ್ತು ವರುಷಗಳಿಂದ ಜನಪ್ರತಿನಿಧಿಗಳು ಹೆಬ್ಬಳ್ಳಿಯ ಕೆರೆ ಕಾರ್ಯವನ್ನು ಮುಂದೂಡುತ್ತಾ ಬಂದಿದ್ದಾರೆ. ಯೋಜನೆಯ ಪ್ರವೇಶದಿಂದ ಮತ್ತು ಕೆಲವು ಸಂಸ್ಥೆಗಳ ಸಹಕಾರದಿಂದ ಕೆರೆ ಪುನರುಜ್ಜೀವನ ಗೊಂಡಿತು. ಒಂದು ಕೆರೆ ಅಭಿವೃದ್ಧಿ ಅಂದರೆ ಒಂದು ದೇವಾಲಯ ಕಟ್ಟಿದಂತೆ., ಹೆಬ್ಬಳ್ಳಿ ಶ್ರೀ ಶಿವಾನಂದ ಮಠದ ಶ್ರೀ ಬ್ರಹ್ಮಾನಂದ ಸ್ವಾಮಿಗಳ ಅಭಿಮತ. ಯೋಜನೆಯು ಕನ್ನಾಡಿನ ವಿವಿಧ ಜಿಲ್ಲೆಗಳಲ್ಲಿ ಕೆರೆಗಳ ಹೂಳೆತ್ತುವ ಕಾರ್ಯಕ್ಕೆ ಸ್ಥಳೀಯರೊಂದಿಗೆ ಕೈ ಜೋಡಿಸುತ್ತಾ ಬಂದಿದೆ. ಈ ಹೂಳೆತ್ತುವ ಕೆಲಸಗಳ ಪ್ರಯೋಜನಗಳ ವಸ್ತುಸ್ಥಿತಿ ಅರಿಯಲು ರಾಜರ್ಶಿ ಡಾ. ವೀರೇಂದ್ರ ಹೆಗ್ಗಡೆಯವರು ಸ್ವತಃ ಕ್ಷೇತ್ರ ಸಂದರ್ಶನ ಮಾಡುತ್ತಿರುವುದರಿಂದ ಈ ಕುರಿತ ಅರಿವಿಗೆ ವೇಗ ಹೆಚ್ಚಿದೆ. ವೈಯಕ್ತಿಕವಾಗಿ ಜಲಮೂಲಗಳನ್ನು ಸಂರಕ್ಷಿಸುವ ನೈತಿಕ ಹೊಣೆಗಾರಿಕೆಯನ್ನು ಪ್ರತಿಯೊಬ್ಬ ಹೊರಬೇಕು.
               ಗ್ರಾಮಾಭಿವೃದ್ಧಿ ಯೋಜನೆಯಂತೆ ಜಲಕಾಯಕವನ್ನು ತಪಸ್ಸಿನಂತೆ ಮಾಡುವ ಖಾಸಗಿ ಸಂಸ್ಥೆಗಳ ಕೆಲಸಗಳು ಸದ್ದಾಗುವುದಿಲ್ಲ. ಸರಕಾರಿ ಮಟ್ಟದ ಜಲ ಕಾಯಕಗಳು ಪತ್ರಿಕೆಗಳಲ್ಲಿ ಮಾತ್ರ ಸದ್ದಾಗುತ್ತಿವೆ. ಅದು ಜನರ ಮನಸ್ಸಿನಲ್ಲಿ ಸದ್ದಾಗಬೇಕು. ಅವರು ಅದಕ್ಕೆ ಸ್ಪಂದಿಸಬೇಕು. ಅರಿವನ್ನು ಮೂಡಿಸಬೇಕು. ಆದರೆ ಹಾಗಾಗುತ್ತಿಲ್ಲ. ಕೆರೆಗಳ ಹೂಳು ತುಂಬಿದಷ್ಟೂ ತಮ್ಮ ಜನನಾಯಕರಿಗೆ ಖುಷಿ! ಯಾಕೆ ಹೇಳಿ? ದಾಖಲೆಗಳಲ್ಲಿ ಪ್ರತೀವರುಷ ಹೂಳು ತೆಗೆಯುತ್ತಲೇ ಇರುತ್ತಾರೆ!
               ಐದು ವರುಷದ ಹಿಂದೆ ಹಿರಿಯ ಪರ್ತಕರ್ತ ನಾಗೇಶ ಹೆಗಡೆಯವರು ಆಡಳಿತ ವ್ಯವಸ್ಥೆಯ ಹೂಳಿನ ಚಿತ್ರಣವನ್ನು ಒಂದೆಡೆ ಉಲ್ಲೇಖಿಸಿದ್ದರು - ನಮ್ಮ ಪಂಚಾಯತ್ಗಳಲ್ಲಿ ಚೆಕ್ಡ್ಯಾಮ್ ಕಟ್ಟಲು, ಹೂಳೆತ್ತಲು ಹಣ ಎಲ್ಲಿದೆ? ಈ ಪ್ರಶ್ನೆಗೆ ಉತ್ತರ ಬೇಕಿದ್ದರೆ ನಮ್ಮ ದೊಡ್ಡ 'ಜಲಾಶಯ'ಗಳತ್ತ ನೋಡೋಣ. ಕೇಂದ್ರ ಬಜೆಟ್ ದಾಖಲೆಗಳ ಪ್ರಕಾರ, ಹಿಂದಿನ ವರುಷ ದೊಡ್ಡ ಕಂಪೆನಿಗಳಿಂದ ಬರಬೇಕಿದ್ದ - ಆದರೆ ಸಂಗ್ರಹಿಸಲಾಗದೆ ಕೈಬಿಡಲಾದ ವರಮಾನ ತೆರಿಗೆ, ಅಬಕಾರಿ ಸುಂಕದ ಮೊತ್ತ 4,87,112 ಕೋಟಿ ರೂಪಾಯಿ. ಅದೂ ಒಂಥರಾ ಹೂಳು ತಾನೆ? ಹೀಗೆ ಆರೇಳು ವರುಷಗಳ ಲೆಕ್ಕ ನೋಡಿದಾಗ ಹೀಗೆ ಕೈಬಿಟ್ಟ ಹಣದ ಮೊತ್ತ ಇಪ್ಪತ್ತೈದು ಲಕ್ಷ ಕೋಟಿಗೂ ಮಿಕ್ಕಿ! ಈಗಂತೂ ಈ ಸಂಖ್ಯೆ ದುಪ್ಪಟ್ಟಾಗಿರಬಹುದು. ಆ ಹೂಳನ್ನು ಮೇಲಕ್ಕೆತ್ತಿ ಸಂಗ್ರಹಿಸಿ ಪಂಚಾಯ್ತಿಗಳಿಗೆ ವಿತರಿಸಿದರೆ ದೇಶದ ಎಲ್ಲಾ ಕೆರೆಕಟ್ಟೆಗಳೂ ಸದಾ ತುಂಬಿರುತ್ತವೆ. ಬರ ಅಥವಾ ಮಹಾಪೂರದ ಸಮಸ್ಯೆಯೇ ಇರುವುದಿಲ್ಲ.

Tuesday, August 1, 2017

ಕಾಡು ಹಣ್ಣುಗಳ ಕಾರುಬಾರು!
ಹೊಸದಿಗಂತದ 'ಮಾಂಬಳ' ಅಂಕಣ  / 22-3-2017

              ಕಳೆದ ವರುಷದ ಮೇ-ಜೂನ್ ತಿಂಗಳು. ನಗರದಲ್ಲಿ ವಾಸ ಮಾಡುವ ಕೃಷಿ ಮೂಲದ ಒಂದು ಕುಟುಂಬದ ಸದಸ್ಯರು ಶುಭ ಕಾರ್ಯಕ್ಕಾಗಿ ಹಳ್ಳಿಗೆ ಬಂದಿದ್ದರು. ನಗರದ ಸಂಸ್ಕೃತಿಯಲ್ಲೇ ಬೆಳದ ಮೂರ್ನಾಲ್ಕು ಮಕ್ಕಳೂ ಜತೆಗಿದ್ದರು. ಮದುವೆ ಮನೆ ಅಂದಾಗ ಕೇಳಬೇಕೇ? ಮಕ್ಕಳ ಗುಲ್ಲು, ಗಲಾಟೆ. ಜತೆಗೆ ಬೇಸಿಗೆ ಕಾಲ. ಕಾಡುಹಣ್ಣುಗಳ ಸೀಸನ್. ಯಾವ ಮರದಲ್ಲಿ ಯಾವ ರುಚಿಯ ಹಣ್ಣು ಇದೆಯೆಂಬುದು ಹಳ್ಳಿಯಲ್ಲೇ ಬೆಳೆದ ಮಕ್ಕಳಿಗೆ ಗೊತ್ತಿದೆ.
                ಮಕ್ಕಳ ಮಕ್ಕಳಾಟಕ್ಕೆ ಸಾಥ್ ಆಗಿದ್ದೆ. ಹತ್ತಾರು ಮಕ್ಕಳು ಸನಿಹದ ಗುಡ್ಡದಲ್ಲಿ ಕೋತಿಗಳಾಗಿದ್ದರು! ಕಾಡು ಹಣ್ಣುಗಳ ಬೇಟೆ ಶುರುವಾಗಿತ್ತು. ನಗರದಿಂದ ಬಂದವರು ಅವಾಕ್ಕಾಗಿ ನೋಡುತ್ತಿದ್ದರು. ಪಾಪ, ಅವರಿಗೆ ಕಾಡುಗಳ ಪರಿಚಯವಿಲ್ಲ. ಇರಲೂ ಸಾಧ್ಯವಿಲ್ಲ ಬಿಡಿ. ಸೇಬು, ದ್ರಾಕ್ಷಿ, ಕಿತ್ತಳೆ, ಮುಸುಂಬಿ... ಹೊರತಾದ, ಅದರಲ್ಲೂ ಕಾಡುಗಣ್ಣುಗಳ ರುಚಿಗಳನ್ನು ಸವಿದು ಗೊತ್ತಿಲ್ಲ. ಅಂದು ಅಪರೂಪದ್ದಾದ ಮಡಕೆ ಹಣ್ಣು ಮಕ್ಕಳ ಹಿಡಿಯಲ್ಲಿತ್ತು.  ನಗರದಿಂದ ಬಂದಿದ್ದರಲ್ಲಾ, ಆ ಚಿಣ್ಣರಿಗೆ ಈ ಹಣ್ಣನ್ನು ನೀಡಿದಾಗ ತಿನ್ನಲು ಹಿಂದೆ ಸರಿದರು. ರುಚಿಯ ಅನುಭವ ಇಲ್ಲದೆ ಕಚ್ಚಿ ಉಗುಳಿದರಷ್ಟೇ. ನನಗನ್ನಿಸಿತು, ಕಾಡುವ ಕಾಡು ಹಣ್ಣುಗಳ ರುಚಿ, ಮತ್ತು ಕಾಡಿನಲ್ಲಿ ಕಳೆಯುವ ಬಾಲ್ಯವನ್ನು ನಗರ ಕಸಿದುಕೊಂಡಿತಲ್ಲಾ.!
                ಎಲ್ಲಾ ಹಣ್ಣುಗಳಲ್ಲಿ ಒಂದೊಂದು ಗುಣ, ರುಚಿ. ಅದರಲ್ಲೂ ಮಡಕೆ ಹಣ್ಣು ತುಂಬಾ ಇಷ್ಟವಾಯಿತು. ಅದರ ಗಾತ್ರ, ನೋಟಕ್ಕೆ ಮರುಳಾಗಿದ್ದೆ. ಅದರ ಗುಣಗಳ ಕುರಿತು ಒಬ್ಬೊಬ್ಬರಲ್ಲಿ ಒಂದೊಂದು ವಿಚಾರಗಳಿವೆ. ವಿದ್ಯಾರ್ಥಿಗಳಲ್ಲಿ ಒಂದು ಪ್ರಶ್ನೆ ಕೇಳಿ - ಮಡಕೆ ಹಣ್ಣು ನೋಡಿದ್ದೀರಾ? ಮುಖ ಮುಖ ನೋಡಿಯಾರಷ್ಟೇ. ನಗರದ ವಿದ್ಯಾರ್ಥಿಗಳೇ ಆಗಬೇಕಿಲ್ಲ. ಗ್ರಾಮೀಣ ವಿದ್ಯಾರ್ಥಿಗಳನ್ನೇ ಕೇಳಿ? ಉತ್ತರಿಸುವುದಕ್ಕೆ ಕಷ್ಟಪಡುತ್ತಾರೆ. ಯಾಕೆಂದರೆ ಈಗ ಹಳ್ಳಿಯಲ್ಲೂ ನಗರದ ಮನಃಸ್ಥಿತಿ ಬೆಳೆಯುತ್ತಿದೆ. ಮಡಕೆ ಹಣ್ಣು ಬಿಡಿ, ಮಣ್ಣಿನ ಮಡಕೆಯೂ ನೋಡಲಾರದಂತಹ ಬದುಕನ್ನು ಕಾಂಚಾಣ ತೆಕ್ಕೆಗೆ ಸೇರಿಸಿಕೊಂಡಿದೆ.
                ಸಾಮಾನ್ಯವಾಗಿ ಜೂನ್ ತಿಂಗಳಲ್ಲಿ ಮಡಕೆ ಹಣ್ಣು ಲಭ್ಯ. ಜುಲೈ ವರೆಗೂ ವಿರಳವಾಗಿ ಸಿಗುತ್ತದೆ. ಚಿಕ್ಕ ಗಿಡ. ಸುಲಿದ ಚಾಲಿ ಅಡಿಕೆಯಷ್ಟು ದೊಡ್ಡ ಗಾತ್ರದ ಹಣ್ಣು. ಬಲಿತ ಕಾಯಿಗೆ ಹಸಿರು ಬಣ್ಣ. ಹಣ್ಣಾದರೆ ಮಣ್ಣಿನ ವರ್ಣ. ಆಕರ್ಷಕ ನೋಟ. ಬಿಳಿ-ಹಳದಿ ಮಿಶ್ರಿತ ಗುಳ. ಹುಳಿ ಮಿಶ್ರಿತ ಸಿಹಿ ರುಚಿ. ಹಣ್ಣಿನ ಬಣ್ಣವು ಮಕ್ಕಳನ್ನು ಸೆಳೆಯುತ್ತದೆ. ನೆಟ್ಟು ಬೆಳೆಸುವಂತಹುದಲ್ಲ. ಗೊಬ್ಬರ ಕೊಟ್ಟು ಬೆಳೆಸಿದವರಿದ್ದಾರೆ. ಹೇಳುವಂತಹ ಬೆಳವಣಿಗೆಯಿಲ್ಲ. ಇವೆಲ್ಲಾ ಕಾಡಿನ ವಾಸಿಗರು. ಹಾಗಾಗಿ ಕಾಡಿನ ವಾತಾವರಣ ಬೇಕು. ಕಾಡುಪ್ರಾಣಿ, ಪಕ್ಷಿಗಳು ಕಾಡುಹಣ್ಣಿನ ಮೊದಲ ಗಿರಾಕಿಗಳು. ಮಿಕ್ಕುಳಿದರೆ ಮಕ್ಕಳಿಗೆ ಆಹಾರ.
               ಬಾಲ್ಯದ ಶಾಲಾ ದಿನಗಳು ನೆನಪಾಗುತ್ತವೆ. ದಾರಿಯ ಇಕ್ಕೆಲೆಗಳಲ್ಲಿ ಎಷ್ಟೊಂದು ಹಣ್ಣುಗಳು. ನೇರಳೆ ಹಣ್ಣು,     ಮುಳ್ಳು ಅಂಕೋಲೆ ಹಣ್ಣು, ಮುಳ್ಳಿನೆಡೆಯಿಂದ ಇಣುಕುವ 'ಬೆಲ್ಲಮುಳ್ಳು', ಹುಳಿಮಜ್ಜಿಗೆ ಕಾಯಿ, ಕೇಪುಳ ಹಣ್ಣು, ಜೇಡರ ಬಲೆಯ ಒಳಗಿರುವಂತೆ ಕಾಣುವ 'ಜೇಡರ ಹಣ್ಣು', ನೆಲ್ಲಿಕಾಯಿ, ಹುಣಸೆ, ಅಂಬಟೆ, ನಾಣಿಲು, ಚೂರಿ ಮುಳ್ಳಿನ ಹಣ್ಣು, ಅಬ್ಳುಕ, ಪೇರಳೆ, ಹೆಬ್ಬಲಸು, ಪುನರಪುಳಿ, ರಂಜೆ, ಕೊಟ್ಟೆಮುಳ್ಳು, ಶಾಂತಿಕಾಯಿ..ಗಳ ಸಿಹಿ-ಹುಳಿ ರುಚಿಗಳನ್ನು ಸವಿದ ನಾಲಗೆಗಳ ಭಾಗ್ಯ. ಮಲೆನಾಡಿಗರಿಗೆ ಮೊಗೆದು ತಿನ್ನುವಷ್ಟು ಹಣ್ಣುಗಳ ಸಂಪತ್ತಿದೆ.
             ಶರೀರಕ್ಕೆ ಬೇಕಾದ ವಿಟಮಿನ್ಗಳು ಹಣ್ಣಿನ ಸಹವಾಸದಲ್ಲಿ ಲಭ್ಯ. 'ಎ', 'ಬಿ'.. ಮಿಟಮಿನ್ ಅಂತ ಹೆಸರಿಸಲು ಬಾರದಿರಬಹುದು. ಆದರೆ ಸಣ್ಣಪುಟ್ಟ ದೇಹದ ಆರೋಗ್ಯದ ವ್ಯತ್ಯಾಸಗಳಿಗೆ ಇಂತಹುದೇ ಹಣ್ಣು ತಿನ್ನಬೇಕು ಎಂಬುದು ಹಿರಿಯರಿಗೆ ಗೊತ್ತಿತ್ತು. ಉದಾ: ಬಾಯಿಹುಣ್ಣು ಬಂದಾಗ 'ಕೊಟ್ಟೆಮುಳ್ಳು ಹಣ್ಣು' ತಿನ್ನಲೇ ಬೇಕು ಅಂತ ಅಮ್ಮ ಹೇಳುತ್ತಿದ್ದುರು.
ದ.ಕ.ಜಿಲ್ಲೆಯ ಮೂಡುಬಿದಿರೆಯ ಡಾ.ಎಲ್.ಸಿ.ಸೋನ್ಸ್ ಹೇಳಿದ ಮಾತು ನೆನಪಾಗುತ್ತದೆ, ಮನೆಯ ಎದುರು ಒಂದು ಚೆರ್ರಿ ಹಣ್ಣಿನ ಮರವರಲಿ. ಇದರ ಹಣ್ಣುಗಳು ಮಕ್ಕಳಿಗೆ ಖುಷಿ ಕೊಡುತ್ತದೆ. ಹೇರಳವಾದ ವಿಟಮಿನ್ ಹಣ್ಣಿನಲ್ಲಿದೆ. ವಿಟಮಿನ್ನಿಗಾಗಿ ಮಾತ್ರೆಗಳನ್ನು ತಿನ್ನುವುದಕ್ಕಿಂತ ಇದು ಎಷ್ಟೋ ವಾಸಿ. ಮೊದಲು ಅಮ್ಮಂದಿರಿಗೆ ಚೆರ್ರಿ ಹಣ್ಣು ತಿಂದು ಅಭ್ಯಾಸವಾಗಬೇಕು. ಆಗಷ್ಟೇ ಮಕ್ಕಳಿಗದು ತಿನ್ನಬೇಕೂಂತ ಕಾಣಬಹುದು.
              ಕೊಡಗಿನ ಕಾಡುಗಳಲ್ಲಿ ನುಚ್ಚಕ್ಕಿ ಹಣ್ಣು ಸಾಮಾನ್ಯ. ಮೂರು ವಿಧದ ರಾಸ್ಬೆರಿ. ಕಪ್ಪು ವರ್ಣದ ಮೈಸೂರು ರಾಸ್ಬೆರಿ. ಹಿಮಾಲಯ ಮೂಲದ ಹಳದಿ ಮತ್ತು ಆಸ್ಟ್ರೇಲಿಯಾದಲ್ಲಿ ಹೆಚ್ಚು ಕಂಡು ಬರುವ ಕೆಂಪು ಬಣ್ಣದವು. ಇವು ಮೂರೂ ಕೊಡಗಿನಲ್ಲಿವೆ. ಇದು ಇಲ್ಲಿಗೆ ಅಪರೂಪದ್ದು ಎನ್ನುವ ಅರಿವು ಇಲ್ಲದ್ದರಿಂದ ಕಾಡು ಹಣ್ಣು ಕಾಡಲ್ಲೇ ಮಣ್ಣಾಗುತ್ತಿವೆ, ಎಂದು ವಿಷಾದಿಸುತ್ತಾರೆ ಮಡಿಕೇರಿಯ ಇಂಜಿನಿಯರ್ ಕೃಷಿಕ ಶಿವಕುಮಾರ್.
                   ಕಾಡು ಹಣ್ಣುಗಳ ಹಿಂದೆ ರೋಚಕವಾದ ಬಾಲ್ಯವಿದೆ, ಕಾಲದ ಕಥನವಿದೆ. ಕಾಡುವ ನೆನಪಿದೆ. ಸವಿದ ಒಬ್ಬೊಬ್ಬರಲ್ಲಿ ಒಂದೊಂದು ಅನುಭವಗಳು. ಒಂದು ಕಾಲಘಟ್ಟದಲ್ಲಿ ಮಾವು, ಹಲಸು ಬಿಟ್ಟರೆ ಮಿಕ್ಕಂತೆ ನಾಲಗೆಯ ರುಚಿಗಳನ್ನು ಕಾಡು ಹಣ್ಣುಗಳು ನೀಗಿಸುತ್ತಿದ್ದುವು. ವಿಷರಹಿತವಾದ, ನೈಸರ್ಗಿಕವಾದ ಹಣ್ಣುಗಳು ಆರೋಗ್ಯಕ್ಕೂ ದೊಡ್ಡ ಕಾಣ್ಕೆ ನೀಡಿತ್ತು.
              ರಬ್ಬರ್ ಕೃಷಿಯ ಭರಾಟೆ ಶುರುವಾದುವಲ್ಲಾ. ಗಿಡಗಳನ್ನು ಬೆಳೆಸುವ ಧಾವಂತದಲ್ಲಿ ಗುಡ್ಡಗಳೆಲ್ಲಾ ನುಣುಪಾದುವು. ಇತರ ಮರಗಳೊಂದಿಗೆ ಹಣ್ಣು ನೀಡುವ ಮರಗಳೂ ನೆಲಕ್ಕೊರಗಿವೆ. ಇವುಗಳನ್ನೇ ತಿಂದು ಬದುಕುವ ಕಾಡು ಪ್ರಾಣಿಗಳು ನಾಡಿಗೆ ಬಂದಿವೆ. 'ಛೇ.. ಮಂಗಗಳು, ಹಂದಿಗಳು ಎಲ್ಲಾ ಹಾಳು ಮಾಡುತ್ತವಲ್ಲಾ..' ಅಂತ ಮರುಗುವ ನಮಗೆ ಕಾಡು ಕಡಿಯಲು ಅಧಿಕಾರವಿದೆ. ಒಂದು ಗಿಡವನ್ನಾದರೂ ನೆಟ್ಟು ಪೋಶಿಸಲು ಮನಸ್ಸು ಇದೆಯಾ?
             ಒಂದೊಂದು ಜಿಲ್ಲೆಯಲ್ಲಿ ಪ್ರಾದೇಶಿಕ ವೈಶಿಷ್ಟ್ಯಗಳಿಂದ ಕೂಡದ ಕಾಡು ಹಣ್ಣುಗಳಿವೆ. ಅವೆಲ್ಲ ನೆಟ್ಟು ಬೆಳೆಸುವುಂತಹುದಲ್ಲ. ಕಾಡಿನ ಮಧ್ಯೆ ಅವು ಕೂಡಾ ಕಾಡಾಗಿ ಬೆಳೆಯುತ್ತವೆ. ನಾವು ಕಾಡೊಳಗೆ ಹೊಕ್ಕರೆ ಮಾತ್ರ ಅವರು ಗೋಚರ. ಸರಕಾರದಿಂದ ಒಂದು ಕಡಿತಲೆಯ ಆದೇಶ ಬಂದರೆ ಸಾಕು, ಇಡೀ ಮರವನ್ನೇ ನಾಶ ಮಾಡಿ ನುಂಗುವ ನುಂಗಣ್ಣಗಳಿಂದ ಕಾಡಿನ ದಟ್ಟತ ಕಡಿಮೆಯಾಗುತ್ತಿದೆ. ಜತೆಗೆ ಅವುಗಳನ್ನೇ ಆಸರೆಯಾಗಿ ಬೆಳೆಯುವ ಕಾಡುಹಣ್ಣುಗಳ ವೈವಿಧ್ಯತೆಯೂ ಮಣ್ಣುಪಾಲಾಗುತ್ತಿವೆ.
            ಎರಡು ವರುಷಗಳ ಹಿಂದೆ ಕಾಡು ಹಣ್ಣುಗಳನ್ನು ನೆನಪಿಸುವ ಕಾರ್ಯಾಗಾರವೊಂದನ್ನು ದ.ಕ. ಜಿಲ್ಲೆಯ ಅಳಿಕೆ ಸನಿಹದ ಕೇಪು-ಉಬರು ಹಲಸು ಸ್ನೇಹಿ ಕೂಟವು ಆಯೋಜಿಸಿತ್ತು. ಕೊಡಗಿನ ಚೆಟ್ಟಳ್ಳಿಯ ಕೇಂದ್ರೀಯ ತೋಟಗಾರಿಕಾ ಪ್ರಾಯೋಗಿಕ ಕೇಂದ್ರದಲ್ಲೂ ಕಾಡು ಹಣ್ಣುಗಳ ಕಾರ್ಯಗಾರ ನಡೆದಿತ್ತು.