Friday, August 25, 2017

ಬದಲಾವಣೆಯ ತಂಗಾಳಿ - ತೆಂಗಿನ ಕಾಯಲ್ಲಿ ಫಲದಾಯಕನ ಕಾಯ


ಉದಯವಾಣಿಯ - ನೆಲದ ನಾಡಿ - ಅಂಕಣ / 17-8-2017

                 ಗಣೇಶನ ಹಬ್ಬದ ಸಂಭ್ರಮದ ಕ್ಷಣಕ್ಕೆ ಕನ್ನಾಡು ತೆರೆದುಕೊಳ್ಳುತ್ತಿದೆ. ಮನೆಮನಗಳು ಸಜ್ಜಾಗುತ್ತಿವೆ. ಗಣೇಶನ ವಿಗ್ರಹಗಳಿಗೆ ಕಲಾಗಾರರು ಅಂತಿಮ ಟಚ್ ಕೊಡುತ್ತಿದ್ದಾರೆ. ಇನ್ನೊಂದೇ ವಾರ. ಎಲ್ಲರ ಮನದೊಳಗೆ ಗಣೇಶ ಇಳಿದು ಬಿಡುತ್ತಾನೆ. ಪುಳಕದ ಅನುಭವ, ಅನುಭಾವ.
                ಗಣೇಶ ಕಲ್ಪವೃಕ್ಷ ಫಲಪ್ರಿಯ. ಗಣಹವನಕ್ಕೆ ತೆಂಗಿನಕಾಯಿಯ ಎಲ್ಲಾ ಭಾಗಗಳು ಅವಶ್ಯ. ಹೋಮಿಸಲು ಕೂಡಾ. ಮಂಟಪಕ್ಕೆ ತೆಂಗಿನಗರಿಯಿಂದ ತಯಾರಿಸಿದ ಹೆಣಿಕೆಯು ಪಾರಂಪರಿಕ. ಹೀಗೆ ಸರ್ವತ್ರ ತೆಂಗಿನ ಬಳಕೆಯು ಗಣೇಶನ ಹಬ್ಬದಲ್ಲಿ ಸ್ಥಾನ ಪಡೆದಿದೆ. ಹಬ್ಬಾಚರಣೆಯಲ್ಲಿ ತೆಂಗು ಇಷ್ಟೊಂದು ಪ್ರಭಾವಿಯಾಗಿ ಆವರಿಸಿರಬೇಕಾದರೆ ಗಣೇಶನ ಮೂರ್ತಿಯೂ ತೆಂಗಿನಕಾಯಿಯದ್ದೇ ಆಗಿಬಿಟ್ಟರೆ ಇನ್ನೂ ಶ್ರೇಷ್ಠವಲ್ವಾ!
               ಧಾರವಾಡದಲ್ಲಿ ಸರಕಾರದ ಆದೇಶವೊಂದು ಈ ಯೋಚನೆಗೆ ಬೀಜಾಂಕುರ ಮಾಡಿತು. ನೈಸರ್ಗಿಕವಲ್ಲದ ವಸ್ತುಗಳಿಂದ ತಯಾರಿಸುವ ಗಣಪನ ಮೂರ್ತಿಯನ್ನು ಸಾರ್ವಜನಿಕವಾಗಿ ಪ್ರತಿಷ್ಠಾಪಿಸಬಾರದು ಎನ್ನುವುದು ಜಿಲ್ಲಾಧಿಕಾರಿಗಳ ಕಟ್ಟುನಿಟ್ಟಿನ ಆದೇಶ. ಇದಕ್ಕೆ ಕಾರಣ ಇಲ್ಲದಿಲ್ಲ. ಪ್ಲಾಸ್ಟರ್ ಆಫ್ ಪ್ಯಾರೀಸ್ ಮತ್ತು ವಿವಿಧ ರಾಸಾಯನಿಕ ಬಣ್ಣಗಳನ್ನು ಬಳಸಿ ಮೂರ್ತಿಗಳನ್ನು ರಚಿಸುವುದು ವಾಡಿಕೆ. ಗಣೇಶನ ವಿಸರ್ಜನೆ ಬಳಿಕ ಮೂರ್ತಿಯು ನೀರಿನಲ್ಲಿ ಕರಗುವುದಿಲ್ಲ. ಮೂರ್ತಿಯ ಅಂದಕ್ಕಾಗಿ ಲೇಪಿಸಿದ್ದ ಕೃತಕ ಬಣ್ಣಗಳು ನೀರಿನೊಂದಿಗೆ ಮಿಶ್ರಗೊಂಡು ಕಲುಶಿತವಾಗುತ್ತದೆ. ಇದರಿಂದ ನಾನಾ ತರಹದ ಕಾಯಿಲೆಗಳು ಬರುವುದಲ್ಲದೆ ಜೀವವೈವಿಧ್ಯಕ್ಕೂ ಹಾನಿಯಾಗುತ್ತದೆ.
                 ಮಣ್ಣಿನಿಂದಲೇ ಮೂರ್ತಿಗಳನ್ನು ಮಾಡಿದರೆ ಓಕೆ. ಈಗಾಗಲೇ ಈ ಯತ್ನದಲ್ಲಿ ಯಶ ಸಾಧಿಸಿದವರಿದ್ದಾರೆ. ಮಣ್ಣಿನ ಬದಲಿಗೆ ಗಣಪನಿಗೆ ಪ್ರಿಯವಾದ ತೆಂಗಿನಕಾಯಿಯಿಂದಲೇ ಮೂರ್ತಿ ಸಿದ್ಧವಾದರೆ ಪರಿಸರ ನೈರ್ಮಲ್ಯಕ್ಕೆ ಆತಂಕವಿಲ್ಲ. ಜಿಲ್ಲಾಧಿಕಾರಿಗಳ ಈ ಆದೇಶವನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಗಂಭೀರವಾಗಿ ಪರಿಗಣಿಸಿತು. ಪ್ಲಾಸ್ಟರ್ ಆಫ್ ಪ್ಯಾರೀಸ್ಗೆ ಪರ್ಯಾಯ ವ್ಯವಸ್ಥೆಯೊಂದನ್ನು ಜನರ ಮುಂದಿಡಲು ಬಹುಕಾಲದಿಂದ ಯೋಚಿಸುತ್ತಲೇ ಇತ್ತು.
ಧಾರವಾಡ ಇಂಜಿನಿಯರಿಂಗ್ ಕಾಲೇಜಿನ ನಿರ್ವಹಣಾ ಮೇಲ್ವಿಚಾರಕ ಬಾವಿಕಟ್ಟಿಯ ಜಗದೀಶ ಗೌಡ ಮತ್ತು ಅವರ ಸಹೋದರ ವೀರನಗೌಡರು ತೆಂಗಿನಿಂದ ವಿವಿಧ ವಿನ್ಯಾಸಗಳನ್ನು ಸ್ವ-ಆಸಕ್ತಿಗಾಗಿ ಮಾಡುತ್ತಿದ್ದರು. ಆಸಕ್ತರಿಗೆ ಹಂಚುತ್ತಿದ್ದರು. ಮೇಳಗಳಲ್ಲಿ ಪ್ರದರ್ಶನಕ್ಕಿಡುತ್ತಿದ್ದರು. ಅದರಲ್ಲಿ ತೆಂಗಿನಕಾಯಿ ಗಣಪನ ಮೂರ್ತಿಯೂ ಒಂದು. ಗ್ರಾಮಾಭಿವೃದ್ಧಿ ಯೋಜನೆಯ ಯೋಚನೆಗೆ ಜಿಲ್ಲಾಧಿಕಾರಿಗಳ ಆದೇಶವೂ ಬಲ ನೀಡಿತು. ಜಗದೀಶರ ಕಲೆಯನ್ನು ಜನರ ಮುಂದಿಡಲು ಮುಂದಾಯಿತು.
             ಯೋಜನೆಯ 'ಕೌಶಲ್ಯ ಅಭಿವೃದ್ಧಿ ತರಬೇತಿ'ಯಡಿ ಸ್ವ-ಸಹಾಯ ಸಂಘದ ಐವತ್ತು ಮಹಿಳೆಯರಿಗೆ ಜಗದೀಶರು ತರಬೇತಿ ನೀಡಿದರು. ಇಪ್ಪತ್ತೈದು ಮಂದಿಯ ಎರಡು ತಂಡಕ್ಕೆ ಏಳೇಳು ದಿವಸಗಳ ತರಬೇತಿ. ತೆಂಗಿನಕಾಯಿಯ ಆಯ್ಕೆಯಲ್ಲಿಂದ ಅಂತಿಮ ಸ್ಪರ್ಶದ ತನಕದ ಸಿಲೆಬಸ್. ಪರೀಕ್ಷೆಯಲ್ಲಿ ಎಲ್ಲರೂ ಉತ್ತೀರ್ಣ. ಫಲವಾಗಿ ಐನೂರಕ್ಕೂ ಮಿಕ್ಕಿ ತೆಂಗಿನಕಾಯಿಯಲ್ಲಿ ಮೂಡಿದ ಗಣೇಶ ಪೂಜೆಗೆ ಸಿದ್ಧನಾಗಿದ್ದಾನೆ. ಇನ್ನೂ ಐನೂರಕ್ಕೆ ನಕ್ಷೆ ತಯಾರಾಗಿದೆ.
              "ಈ ವರುಷ ಒಂದು ಸಾವಿರ ಮನೆಗಳಲ್ಲಿ ತೆಂಗಿನಕಾಯಿಯಿಂದ ರಚಿತವಾದ ಗಣಪನ ವಿಗ್ರಹಕ್ಕೆ ಪೂಜೆ ಸಲ್ಲಲ್ಪಡುತ್ತದೆ. ಮನೆಮನೆ ಭೇಟಿ ಮೂಲಕ ಅರಿವು ಮೂಡಿಸುವ ಯತ್ನಗಳಾಗುತ್ತಿವೆ. ಗಣೇಶ ಮೂರ್ತಿ ಅಂದಾಗ ನೀರಿನಲ್ಲಿ ವಿಸರ್ಜನೆ ಮಾಡಬೇಕೆನ್ನುವ ಮೈಂಡ್ಸೆಟ್ ಬಹುತೇಕರಲ್ಲಿದೆ. ತೆಂಗಿನ ಗಣಪನನ್ನು ನೀರಿನಲ್ಲಿ ವಿಸರ್ಜನೆ ಮಾಡಿ ನಂತರ ಮಣ್ಣಿಗೆ ಸೇರಿಸಿ. ಅದು ಮೊಳಕೆ ಬಂದು ಸಸಿಯಾಗುತ್ತದೆ, ಕಲ್ಪವೃಕ್ಷವಾಗುತ್ತದೆ. ಅದೊಂದು ಪವಿತ್ರ ಮರವಾಗುತ್ತದೆ. ಇಲ್ಲವೇ ಅಂದಕ್ಕಾಗಿ ಶೋಕೇಸಿನಲ್ಲಿಡಿ. ನಮ್ಮ ವಿಚಾರಗಳಿಗೆ ಮಹಿಳೆಯರು ಉತ್ತಮವಾಗಿ ಸ್ಪಂದಿಸುತ್ತಿದ್ದಾರೆ" ಎನ್ನುವ ಮಾಹಿತಿ ನೀಡಿದರು ಪ್ರಿಯಾ. ಈ ಉದ್ದೇಶಕ್ಕಾಗಿಯೇ ಧಾರವಾಡದ ಕೆಲ್ಕೇರಿಯಲ್ಲಿ ರೂಪುಗೊಂಡ 'ತೆಂಗಿನಕಾಯಿ ಗಣೇಶನ ಮೂರ್ತಿ ಕೆತ್ತನೆಗಾರರ ಸಮಿತಿ'ಯ ಮುಖ್ಯಸ್ಥರಿವರು.
                  ಐವತ್ತು ಮಂದಿ ತರಬೇತಿಯೇನೋ ಪಡೆದರು. ಪ್ರಾಕ್ಟಿಕಲ್ ವಿಚಾರಕ್ಕೆ ಬಂದಾಗ ಸಹಜವಾಗಿ ಎಡವಿದರು. ಆಕಾರಗಳು ಮೊದಲಿಗೆ ವಿಕಾರವಾದುವು. ಅನುಭವದ ಗಾಢತೆ ವಿಸ್ತಾರವಾಗುತ್ತಾ ಬಂದಂತೆ ಕಲೆ ಕೈವಶವಾಯಿತು. ಒಬ್ಬರು ದಿವಸಕ್ಕೆ ನಾಲ್ಕು ಮೂರ್ತಿಗಳನ್ನು ರಚಿಸುವಷ್ಟು ನಿಷ್ಣಾತರಾದರು. ತೆಂಗಿನಕಾಯಿಯ ಆಯ್ಕೆಗೆ ಮೊದಲಾದ್ಯತೆ. ಉರುಟಾಗಿರುವ ಸುಲಿಯದ ಕಾಯಿಯಾಗಿರಬೇಕು. ಹೆಚ್ಚು ಎಳೆಯದಾಗಿರಬಾರದು, ಕೊಬ್ಬರಿಯ ಹಂತಕ್ಕೂ ತಲುಪಿರಬಾರದು-ಇಂತಹ ಕಾಯಿಗಳನ್ನು ವಿಗ್ರಹ ರಚನೆಗೆ ಆಯ್ಕೆ. ಯಲ್ಲಾಪುರದಿಂದ ಕುಸುರಿಗೆ ಬೇಕಾದ ಆಕಾರಗಳ ಕಾಯಿಗಳ ಖರೀದಿ. ಅದರ ಮೇಲೆ ಸ್ಕೆಚ್ ಹಾಕುವುದು ಮೊದಲ ಕೆಲಸ. ಮತ್ತೆಲ್ಲಾ ಚಾಕುವಿನ ಚಮತ್ಕೃತಿ. ಮನದೊಳಗಿನ ಕಲೆಯು ಚಕಚಕನೆ ತೆಂಗಿಗೆ ಆಕಾರ ಕೊಡುತ್ತದೆ. ಗಣಪನನ್ನು ಕೂರಿಸುವುದಕ್ಕೆ ಚಿಕ್ಕ ಪೀಠ. ಒಂದು ಮೂರ್ತಿಗೆ ನಾಲ್ಕು ನೂರಒಂದು ರೂಪಾಯಿ.
                 ಹೀಗೆ ಸಿದ್ಧವಾದ ವಿಗ್ರಹಕ್ಕೆ ಕಿರೀಟ, ಕಿವಿ ಆಭರಣ, ಕಣ್ಣುಗಳನ್ನು ಪ್ರತ್ಯೇಕವಾಗಿ ಫಿಕ್ಸ್ ಮಾಡುತ್ತಾರೆ. "ಬಹುಕಾಲ ಕೆಡದಿರುವಂತೆ ಟಚ್ವುಡ್ಡಿನ ಲೇಪ. ಹೀಗೆ ಮಾಡಿದ್ದರಿಂದ  ತಾಳಿಕೆ ಹೆಚ್ಚು. ಅಲಂಕಾರಕ್ಕಾಗಿ ಕಾಪಿಡಬಹುದು. ಪರಿಸರಕ್ಕೆ ಹಾನಿಯಿಲ್ಲ. ತೆಂಗು ನೈಸರ್ಗಿಕ ಉತ್ಪನ್ನ. ಬದಲಾದ ಕಾಲಘಟ್ಟದಲ್ಲಿ ಇಂತಹ ಬದಲಾವಣೆಯ ಮನಃಸ್ಥಿತಿಯನ್ನೂ ರೂಢಿಸುವುದು ಅನಿವಾರ್ಯವಿದೆ. ಈಗಾಗಲೇ ಮಾರುಕಟ್ಟೆಯಲ್ಲಿ ಸ್ಥಾಪಿತ  ಮಾರಾಟಗಾರರು ಇದನ್ನು ಪಕ್ಕನೆ ಒಪ್ಪಲಾರರು ಎಂದೂ ಗೊತ್ತಿದೆ. ಆದರೆ ಜನರು ಒಪ್ಪುತ್ತಿದ್ದಾರೆ, ಎನ್ನುವ ಮಾಹಿತಿ ನೀಡುತ್ತಾರೆ," ಗ್ರಾಮಾಭಿವೃದ್ಧಿ ಯೋಜನೆಯ ನಿರ್ದೇಶಕ ಧಾರವಾಡದ ದಿನೇಶ್ ಎಂ.
                 ಹುಬ್ಬಳ್ಳಿ, ಧಾರವಾಡ ಪೇಟೆಯುದ್ದಕ್ಕೂ ಓಡಾಡಿದರೆ ಸಾಕು, ಗಣೇಶನ ಸಾಲು ಸಾಲು ವಿಗ್ರಹಗಳು. ಕೆಲವೆಡೆ 'ಇಲ್ಲಿ ಗಣಪತಿ ಮೂರ್ತಿ ಸಿಗುತ್ತದೆ' ಎನ್ನುವ ಫಲಕವೂ ಗೋಚರವಾಗುತ್ತದೆ. ವ್ಯಾಪಾರವನ್ನು ನೆಚ್ಚಿಕೊಂಡ ಬಹು ಮಂದಿ ಮೂರ್ನಾಲ್ಕು ಹಿಂದೆಯೆ ಗಣೇಶನ ಮೂರ್ತಿಯ ರಚನೆಯಲ್ಲಿ ಬ್ಯುಸಿಯಾಗಿದ್ದರು. ಬಹುಶಃ ಪಿಓಪಿಯಿಂದ ಬಳಸಿ ಮಾಡಿದ ವಿಗ್ರಹಗಳೂ ಸಾಕಷ್ಟು ಇದ್ದಿರಬೇಕು. ಜಿಲ್ಲಾಧಿಕಾರಿಗಳ ಆದೇಶವು ಇವರೆಲ್ಲರ ಮುಖದಲ್ಲಿ ವಿಷಾದದ ಗೆರೆಯನ್ನು ಮೂಡಿಸಿದೆ.
              ಗಣೇಶ ಹಬ್ಬದಂತೆ ಇತರ ಹಬ್ಬಗಳೂ ಇವೆಯಲ್ಲಾ. ಉದಾ. ದೀಪಾವಳಿ, ನವರಾತ್ರಿ. ಇಂತಹ ಸಂದರ್ಭಗಳಲ್ಲಿ ಯಾವ ರೀತಿಯ ಮಾದರಿಯನ್ನು ಕೊಡುತ್ತೀರಿ? ಪ್ರಿಯಾ ಹೇಳುತ್ತಾರೆ, "ಈಗಾಗಲೇ ಸಾವಿರದಷ್ಟು ಗಣೇಶನ ಮೂರ್ತಿಗಳು ಸಿದ್ಧವಾಗಿದೆ. ಅವಕ್ಕೆ ಅಂದವನ್ನು ಕೊಡುವಲ್ಲಿ ಸುಧಾರಣೆಯಾಗುತ್ತಿವೆ. ಯಾವುದೇ ದೇವರ ಮೂರ್ತಿಗಳನ್ನು ತೆಂಗಿನಲ್ಲಿ ಮೂಡಿಬಹುದೆಂಬ ಧೈರ್ಯ ಬಂದಿದೆ. ಕರಕುಶಲ ಮೇಳಗಳಲ್ಲಿ ಇಂತಹ ವಿನ್ಯಾಸಗಳನ್ನು ಪರಿಚಯಿಸಬಹುದು. ದೇವಸ್ಥಾನಗಳ ಪಕ್ಕದ ಮಳಿಗೆಗಳಲ್ಲಿಟ್ಟು ಜನರ ಚಿತ್ತವನ್ನು ಸೆಳೆಯಬಹುದು. ಗುಣಮಟ್ಟವನ್ನು ವೃದ್ಧಿಸಿ ಈ ದಿಸೆಯಲ್ಲಿ ನಮ್ಮ ಸಮಿತಿಯು ಹೆಜ್ಜೆಯೂರಲಿದೆ.
                ಆರಂಭದಲ್ಲಿ ತರಬೇತಿಗೆ ಸದಸ್ಯರನ್ನು ನಿಯುಕ್ತಿ ಮಾಡುವಾಗ ನಿಜಾಸಕ್ತರನ್ನೇ ಆಯ್ಕೆ ಮಾಡಿದ್ದು ದೊಡ್ಡ ಬಲ. ಪ್ರಿಯಾ ಸ್ವತಃ ಕಲಾವಿದೆ. ಚಾಕು ಹಿಡಿದು ತೆಂಗಿನಕಾಯಿಯ ಮೇಲೆ ಸುಲಭದಲ್ಲಿ ಮತ್ತು ಕ್ಷಿಪ್ರವಾಗಿ ಕುಸುರಿ ಮಾಡಬಲ್ಲರು. ಎಲ್ಲಾ ಸದಸ್ಯರ ಆಸಕ್ತಿ, ಹುಮ್ಮಸ್ಸಿನಲ್ಲಿ ಪೈಪೋಟಿ ಇರುವುದರಿಂದ ಅಲ್ಪಕಾಲದಲ್ಲಿ ಐನೂರು ಮೂರ್ತಿಯನ್ನು ಮಾಡಲು ಸಾಧ್ಯವಾಯಿತು. ಸಮಿತಿ ರೂಪೀಕರಣದ ಬಳಿಕ ಆಸಕ್ತರ ಒಲವು ಹೆಚ್ಚಾಗಿ ಸದಸ್ಯರ ಸಂಖೈಯಲ್ಲೂ ಏರಿಕೆಯಾಗುತ್ತಿದೆ. ಈ ಸಮಿತಿಯು ಸ್ವತಂತ್ರವಾಗಿ ಕಾರ್ಯನಿರ್ವಹಿಸಬೇಕೆನ್ನುವುದು ದೂರದೃಷ್ಠಿ.
                ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಯವರು ತೆಂಗಿನ ಗಣೇಶನ ಪರಿಕಲ್ಪನೆಯನ್ನು ಮೆಚ್ಚಿಕೊಂಡಿದ್ದಾರೆ. ತಮ್ಮ ಮನೆಯಲ್ಲೂ ಅನುಷ್ಠಾನಿಸಲು ನಿರ್ಧಾರ ಮಾಡಿದ್ದಾರಂತೆ. ಜಿಲ್ಲಾಧಿಕಾರಿಯವರು ಮತ್ತು ಇತರ ಅಧಿಕಾರಿ ವರ್ಗದವರನ್ನು ಗ್ರಾಮಾಭಿವೃದ್ದಿ ಯೊಜನೆಯ ವರಿಷ್ಠರು ಭೇಟಿ ಮಾಡಿ ಬೆಂಬಲಿಸಲು ಕೋರಲಿದ್ದಾರೆ. ಪರಿಸರದ ಕಾಳಜಿ ಹೊಂದಿರುವ ಒಂದಿಬ್ಬರು ಮಠಾಧೀಶರು ಕೂಡ ಈಗಾಗಲೇ ಒಲವು ವ್ಯಕ್ತಪಡಿಸಿದ್ದಾರೆ.
               ಧಾರವಾಡದ ಕೆಲಕೇರಿಯ ಮಂಜುನಾಥ ಹಿರೇಮಠ ಮತ್ತು ಅವರ ತಂಡವು ಬಹುಕಾಲದಿಂದ ಇಂತಹ ನೈಸರ್ಗಿಕ ವಿಚಾರಗಳನ್ನು ಜನರ ಮುಂದಿಡುತ್ತ ಬಂದಿದೆ. ಅನುಷ್ಠಾನವನ್ನೂ ಮಾಡಿದೆ. ಬೆಳಗಾವಿ ಜಿಲ್ಲೆಯ ಖಾನಾಪುರದ ಇಡ್ಲಹುಂಡ್ ಹಳ್ಳಿಯ ಮಲ್ಲಪ್ಪ ಶಂಕರಪ್ಪ ಕುಂಬಾರ್ ಕುಟುಂಬ ಸಾವಿರಗಟ್ಟಲೆ ಮಣ್ಣಿನ ಮೂರ್ತಿಗಳನ್ನು ಪಾರಂಪರಿಕವಾಗಿ ರಚಿಸುತ್ತಿದ್ದಾರೆ. ಕುಲಕಸುಬನ್ನು ಉಳಿಸುತ್ತಿದ್ದಾರೆ.
                 ಒಂದು ವ್ಯವಸ್ಥೆಗಳಿಗೆ ಒಪ್ಪಿಕೊಂಡ ಮನಸ್ಸು ತಕ್ಷಣ ಬದಲಾವಣೆಯನ್ನು ಸ್ವೀಕರಿಸುವುದಿಲ್ಲ. ಮನೆಯ ಪದ್ಧತಿ, ನಂಬುಗೆಗಳು ಗಾಢವಾಗಿ ಬದುಕಿನಲ್ಲಿ ಬೇರನ್ನು ಇಳಿಸಿರುತ್ತವೆ ಮಾದರಿಗಳು ಮುಂದಿದ್ದರೆ ಅನುಸರಿಸಲು ಹಾದಿ ಸುಲಭ. ಈ ಹಿನ್ನೆಲೆಯಲ್ಲಿ ತೆಂಗಿನಕಾಯಿಯಿಂದ ರೂಪುಗೊಂಡ ಗಣಪತಿಯ ಮೂರ್ತಿಯು ಪಾರಿಸಾರಿಕವಾಗಿಯೂ ನೈಸರ್ಗಿಕವಾಗಿಯೂ ಜನ ಸ್ವೀಕೃತಿ ಪಡೆಯುತ್ತಿದೆ. ಅವಳಿ ನಗರದಲ್ಲಿ ಬದಲಾವಣೆಯ ತಂಗಾಳಿ ಬೀಸುತ್ತಿದೆ.

0 comments:

Post a Comment