Tuesday, August 1, 2017

ಕಾಡು ಹಣ್ಣುಗಳ ಕಾರುಬಾರು!
ಹೊಸದಿಗಂತದ 'ಮಾಂಬಳ' ಅಂಕಣ  / 22-3-2017

              ಕಳೆದ ವರುಷದ ಮೇ-ಜೂನ್ ತಿಂಗಳು. ನಗರದಲ್ಲಿ ವಾಸ ಮಾಡುವ ಕೃಷಿ ಮೂಲದ ಒಂದು ಕುಟುಂಬದ ಸದಸ್ಯರು ಶುಭ ಕಾರ್ಯಕ್ಕಾಗಿ ಹಳ್ಳಿಗೆ ಬಂದಿದ್ದರು. ನಗರದ ಸಂಸ್ಕೃತಿಯಲ್ಲೇ ಬೆಳದ ಮೂರ್ನಾಲ್ಕು ಮಕ್ಕಳೂ ಜತೆಗಿದ್ದರು. ಮದುವೆ ಮನೆ ಅಂದಾಗ ಕೇಳಬೇಕೇ? ಮಕ್ಕಳ ಗುಲ್ಲು, ಗಲಾಟೆ. ಜತೆಗೆ ಬೇಸಿಗೆ ಕಾಲ. ಕಾಡುಹಣ್ಣುಗಳ ಸೀಸನ್. ಯಾವ ಮರದಲ್ಲಿ ಯಾವ ರುಚಿಯ ಹಣ್ಣು ಇದೆಯೆಂಬುದು ಹಳ್ಳಿಯಲ್ಲೇ ಬೆಳೆದ ಮಕ್ಕಳಿಗೆ ಗೊತ್ತಿದೆ.
                ಮಕ್ಕಳ ಮಕ್ಕಳಾಟಕ್ಕೆ ಸಾಥ್ ಆಗಿದ್ದೆ. ಹತ್ತಾರು ಮಕ್ಕಳು ಸನಿಹದ ಗುಡ್ಡದಲ್ಲಿ ಕೋತಿಗಳಾಗಿದ್ದರು! ಕಾಡು ಹಣ್ಣುಗಳ ಬೇಟೆ ಶುರುವಾಗಿತ್ತು. ನಗರದಿಂದ ಬಂದವರು ಅವಾಕ್ಕಾಗಿ ನೋಡುತ್ತಿದ್ದರು. ಪಾಪ, ಅವರಿಗೆ ಕಾಡುಗಳ ಪರಿಚಯವಿಲ್ಲ. ಇರಲೂ ಸಾಧ್ಯವಿಲ್ಲ ಬಿಡಿ. ಸೇಬು, ದ್ರಾಕ್ಷಿ, ಕಿತ್ತಳೆ, ಮುಸುಂಬಿ... ಹೊರತಾದ, ಅದರಲ್ಲೂ ಕಾಡುಗಣ್ಣುಗಳ ರುಚಿಗಳನ್ನು ಸವಿದು ಗೊತ್ತಿಲ್ಲ. ಅಂದು ಅಪರೂಪದ್ದಾದ ಮಡಕೆ ಹಣ್ಣು ಮಕ್ಕಳ ಹಿಡಿಯಲ್ಲಿತ್ತು.  ನಗರದಿಂದ ಬಂದಿದ್ದರಲ್ಲಾ, ಆ ಚಿಣ್ಣರಿಗೆ ಈ ಹಣ್ಣನ್ನು ನೀಡಿದಾಗ ತಿನ್ನಲು ಹಿಂದೆ ಸರಿದರು. ರುಚಿಯ ಅನುಭವ ಇಲ್ಲದೆ ಕಚ್ಚಿ ಉಗುಳಿದರಷ್ಟೇ. ನನಗನ್ನಿಸಿತು, ಕಾಡುವ ಕಾಡು ಹಣ್ಣುಗಳ ರುಚಿ, ಮತ್ತು ಕಾಡಿನಲ್ಲಿ ಕಳೆಯುವ ಬಾಲ್ಯವನ್ನು ನಗರ ಕಸಿದುಕೊಂಡಿತಲ್ಲಾ.!
                ಎಲ್ಲಾ ಹಣ್ಣುಗಳಲ್ಲಿ ಒಂದೊಂದು ಗುಣ, ರುಚಿ. ಅದರಲ್ಲೂ ಮಡಕೆ ಹಣ್ಣು ತುಂಬಾ ಇಷ್ಟವಾಯಿತು. ಅದರ ಗಾತ್ರ, ನೋಟಕ್ಕೆ ಮರುಳಾಗಿದ್ದೆ. ಅದರ ಗುಣಗಳ ಕುರಿತು ಒಬ್ಬೊಬ್ಬರಲ್ಲಿ ಒಂದೊಂದು ವಿಚಾರಗಳಿವೆ. ವಿದ್ಯಾರ್ಥಿಗಳಲ್ಲಿ ಒಂದು ಪ್ರಶ್ನೆ ಕೇಳಿ - ಮಡಕೆ ಹಣ್ಣು ನೋಡಿದ್ದೀರಾ? ಮುಖ ಮುಖ ನೋಡಿಯಾರಷ್ಟೇ. ನಗರದ ವಿದ್ಯಾರ್ಥಿಗಳೇ ಆಗಬೇಕಿಲ್ಲ. ಗ್ರಾಮೀಣ ವಿದ್ಯಾರ್ಥಿಗಳನ್ನೇ ಕೇಳಿ? ಉತ್ತರಿಸುವುದಕ್ಕೆ ಕಷ್ಟಪಡುತ್ತಾರೆ. ಯಾಕೆಂದರೆ ಈಗ ಹಳ್ಳಿಯಲ್ಲೂ ನಗರದ ಮನಃಸ್ಥಿತಿ ಬೆಳೆಯುತ್ತಿದೆ. ಮಡಕೆ ಹಣ್ಣು ಬಿಡಿ, ಮಣ್ಣಿನ ಮಡಕೆಯೂ ನೋಡಲಾರದಂತಹ ಬದುಕನ್ನು ಕಾಂಚಾಣ ತೆಕ್ಕೆಗೆ ಸೇರಿಸಿಕೊಂಡಿದೆ.
                ಸಾಮಾನ್ಯವಾಗಿ ಜೂನ್ ತಿಂಗಳಲ್ಲಿ ಮಡಕೆ ಹಣ್ಣು ಲಭ್ಯ. ಜುಲೈ ವರೆಗೂ ವಿರಳವಾಗಿ ಸಿಗುತ್ತದೆ. ಚಿಕ್ಕ ಗಿಡ. ಸುಲಿದ ಚಾಲಿ ಅಡಿಕೆಯಷ್ಟು ದೊಡ್ಡ ಗಾತ್ರದ ಹಣ್ಣು. ಬಲಿತ ಕಾಯಿಗೆ ಹಸಿರು ಬಣ್ಣ. ಹಣ್ಣಾದರೆ ಮಣ್ಣಿನ ವರ್ಣ. ಆಕರ್ಷಕ ನೋಟ. ಬಿಳಿ-ಹಳದಿ ಮಿಶ್ರಿತ ಗುಳ. ಹುಳಿ ಮಿಶ್ರಿತ ಸಿಹಿ ರುಚಿ. ಹಣ್ಣಿನ ಬಣ್ಣವು ಮಕ್ಕಳನ್ನು ಸೆಳೆಯುತ್ತದೆ. ನೆಟ್ಟು ಬೆಳೆಸುವಂತಹುದಲ್ಲ. ಗೊಬ್ಬರ ಕೊಟ್ಟು ಬೆಳೆಸಿದವರಿದ್ದಾರೆ. ಹೇಳುವಂತಹ ಬೆಳವಣಿಗೆಯಿಲ್ಲ. ಇವೆಲ್ಲಾ ಕಾಡಿನ ವಾಸಿಗರು. ಹಾಗಾಗಿ ಕಾಡಿನ ವಾತಾವರಣ ಬೇಕು. ಕಾಡುಪ್ರಾಣಿ, ಪಕ್ಷಿಗಳು ಕಾಡುಹಣ್ಣಿನ ಮೊದಲ ಗಿರಾಕಿಗಳು. ಮಿಕ್ಕುಳಿದರೆ ಮಕ್ಕಳಿಗೆ ಆಹಾರ.
               ಬಾಲ್ಯದ ಶಾಲಾ ದಿನಗಳು ನೆನಪಾಗುತ್ತವೆ. ದಾರಿಯ ಇಕ್ಕೆಲೆಗಳಲ್ಲಿ ಎಷ್ಟೊಂದು ಹಣ್ಣುಗಳು. ನೇರಳೆ ಹಣ್ಣು,     ಮುಳ್ಳು ಅಂಕೋಲೆ ಹಣ್ಣು, ಮುಳ್ಳಿನೆಡೆಯಿಂದ ಇಣುಕುವ 'ಬೆಲ್ಲಮುಳ್ಳು', ಹುಳಿಮಜ್ಜಿಗೆ ಕಾಯಿ, ಕೇಪುಳ ಹಣ್ಣು, ಜೇಡರ ಬಲೆಯ ಒಳಗಿರುವಂತೆ ಕಾಣುವ 'ಜೇಡರ ಹಣ್ಣು', ನೆಲ್ಲಿಕಾಯಿ, ಹುಣಸೆ, ಅಂಬಟೆ, ನಾಣಿಲು, ಚೂರಿ ಮುಳ್ಳಿನ ಹಣ್ಣು, ಅಬ್ಳುಕ, ಪೇರಳೆ, ಹೆಬ್ಬಲಸು, ಪುನರಪುಳಿ, ರಂಜೆ, ಕೊಟ್ಟೆಮುಳ್ಳು, ಶಾಂತಿಕಾಯಿ..ಗಳ ಸಿಹಿ-ಹುಳಿ ರುಚಿಗಳನ್ನು ಸವಿದ ನಾಲಗೆಗಳ ಭಾಗ್ಯ. ಮಲೆನಾಡಿಗರಿಗೆ ಮೊಗೆದು ತಿನ್ನುವಷ್ಟು ಹಣ್ಣುಗಳ ಸಂಪತ್ತಿದೆ.
             ಶರೀರಕ್ಕೆ ಬೇಕಾದ ವಿಟಮಿನ್ಗಳು ಹಣ್ಣಿನ ಸಹವಾಸದಲ್ಲಿ ಲಭ್ಯ. 'ಎ', 'ಬಿ'.. ಮಿಟಮಿನ್ ಅಂತ ಹೆಸರಿಸಲು ಬಾರದಿರಬಹುದು. ಆದರೆ ಸಣ್ಣಪುಟ್ಟ ದೇಹದ ಆರೋಗ್ಯದ ವ್ಯತ್ಯಾಸಗಳಿಗೆ ಇಂತಹುದೇ ಹಣ್ಣು ತಿನ್ನಬೇಕು ಎಂಬುದು ಹಿರಿಯರಿಗೆ ಗೊತ್ತಿತ್ತು. ಉದಾ: ಬಾಯಿಹುಣ್ಣು ಬಂದಾಗ 'ಕೊಟ್ಟೆಮುಳ್ಳು ಹಣ್ಣು' ತಿನ್ನಲೇ ಬೇಕು ಅಂತ ಅಮ್ಮ ಹೇಳುತ್ತಿದ್ದುರು.
ದ.ಕ.ಜಿಲ್ಲೆಯ ಮೂಡುಬಿದಿರೆಯ ಡಾ.ಎಲ್.ಸಿ.ಸೋನ್ಸ್ ಹೇಳಿದ ಮಾತು ನೆನಪಾಗುತ್ತದೆ, ಮನೆಯ ಎದುರು ಒಂದು ಚೆರ್ರಿ ಹಣ್ಣಿನ ಮರವರಲಿ. ಇದರ ಹಣ್ಣುಗಳು ಮಕ್ಕಳಿಗೆ ಖುಷಿ ಕೊಡುತ್ತದೆ. ಹೇರಳವಾದ ವಿಟಮಿನ್ ಹಣ್ಣಿನಲ್ಲಿದೆ. ವಿಟಮಿನ್ನಿಗಾಗಿ ಮಾತ್ರೆಗಳನ್ನು ತಿನ್ನುವುದಕ್ಕಿಂತ ಇದು ಎಷ್ಟೋ ವಾಸಿ. ಮೊದಲು ಅಮ್ಮಂದಿರಿಗೆ ಚೆರ್ರಿ ಹಣ್ಣು ತಿಂದು ಅಭ್ಯಾಸವಾಗಬೇಕು. ಆಗಷ್ಟೇ ಮಕ್ಕಳಿಗದು ತಿನ್ನಬೇಕೂಂತ ಕಾಣಬಹುದು.
              ಕೊಡಗಿನ ಕಾಡುಗಳಲ್ಲಿ ನುಚ್ಚಕ್ಕಿ ಹಣ್ಣು ಸಾಮಾನ್ಯ. ಮೂರು ವಿಧದ ರಾಸ್ಬೆರಿ. ಕಪ್ಪು ವರ್ಣದ ಮೈಸೂರು ರಾಸ್ಬೆರಿ. ಹಿಮಾಲಯ ಮೂಲದ ಹಳದಿ ಮತ್ತು ಆಸ್ಟ್ರೇಲಿಯಾದಲ್ಲಿ ಹೆಚ್ಚು ಕಂಡು ಬರುವ ಕೆಂಪು ಬಣ್ಣದವು. ಇವು ಮೂರೂ ಕೊಡಗಿನಲ್ಲಿವೆ. ಇದು ಇಲ್ಲಿಗೆ ಅಪರೂಪದ್ದು ಎನ್ನುವ ಅರಿವು ಇಲ್ಲದ್ದರಿಂದ ಕಾಡು ಹಣ್ಣು ಕಾಡಲ್ಲೇ ಮಣ್ಣಾಗುತ್ತಿವೆ, ಎಂದು ವಿಷಾದಿಸುತ್ತಾರೆ ಮಡಿಕೇರಿಯ ಇಂಜಿನಿಯರ್ ಕೃಷಿಕ ಶಿವಕುಮಾರ್.
                   ಕಾಡು ಹಣ್ಣುಗಳ ಹಿಂದೆ ರೋಚಕವಾದ ಬಾಲ್ಯವಿದೆ, ಕಾಲದ ಕಥನವಿದೆ. ಕಾಡುವ ನೆನಪಿದೆ. ಸವಿದ ಒಬ್ಬೊಬ್ಬರಲ್ಲಿ ಒಂದೊಂದು ಅನುಭವಗಳು. ಒಂದು ಕಾಲಘಟ್ಟದಲ್ಲಿ ಮಾವು, ಹಲಸು ಬಿಟ್ಟರೆ ಮಿಕ್ಕಂತೆ ನಾಲಗೆಯ ರುಚಿಗಳನ್ನು ಕಾಡು ಹಣ್ಣುಗಳು ನೀಗಿಸುತ್ತಿದ್ದುವು. ವಿಷರಹಿತವಾದ, ನೈಸರ್ಗಿಕವಾದ ಹಣ್ಣುಗಳು ಆರೋಗ್ಯಕ್ಕೂ ದೊಡ್ಡ ಕಾಣ್ಕೆ ನೀಡಿತ್ತು.
              ರಬ್ಬರ್ ಕೃಷಿಯ ಭರಾಟೆ ಶುರುವಾದುವಲ್ಲಾ. ಗಿಡಗಳನ್ನು ಬೆಳೆಸುವ ಧಾವಂತದಲ್ಲಿ ಗುಡ್ಡಗಳೆಲ್ಲಾ ನುಣುಪಾದುವು. ಇತರ ಮರಗಳೊಂದಿಗೆ ಹಣ್ಣು ನೀಡುವ ಮರಗಳೂ ನೆಲಕ್ಕೊರಗಿವೆ. ಇವುಗಳನ್ನೇ ತಿಂದು ಬದುಕುವ ಕಾಡು ಪ್ರಾಣಿಗಳು ನಾಡಿಗೆ ಬಂದಿವೆ. 'ಛೇ.. ಮಂಗಗಳು, ಹಂದಿಗಳು ಎಲ್ಲಾ ಹಾಳು ಮಾಡುತ್ತವಲ್ಲಾ..' ಅಂತ ಮರುಗುವ ನಮಗೆ ಕಾಡು ಕಡಿಯಲು ಅಧಿಕಾರವಿದೆ. ಒಂದು ಗಿಡವನ್ನಾದರೂ ನೆಟ್ಟು ಪೋಶಿಸಲು ಮನಸ್ಸು ಇದೆಯಾ?
             ಒಂದೊಂದು ಜಿಲ್ಲೆಯಲ್ಲಿ ಪ್ರಾದೇಶಿಕ ವೈಶಿಷ್ಟ್ಯಗಳಿಂದ ಕೂಡದ ಕಾಡು ಹಣ್ಣುಗಳಿವೆ. ಅವೆಲ್ಲ ನೆಟ್ಟು ಬೆಳೆಸುವುಂತಹುದಲ್ಲ. ಕಾಡಿನ ಮಧ್ಯೆ ಅವು ಕೂಡಾ ಕಾಡಾಗಿ ಬೆಳೆಯುತ್ತವೆ. ನಾವು ಕಾಡೊಳಗೆ ಹೊಕ್ಕರೆ ಮಾತ್ರ ಅವರು ಗೋಚರ. ಸರಕಾರದಿಂದ ಒಂದು ಕಡಿತಲೆಯ ಆದೇಶ ಬಂದರೆ ಸಾಕು, ಇಡೀ ಮರವನ್ನೇ ನಾಶ ಮಾಡಿ ನುಂಗುವ ನುಂಗಣ್ಣಗಳಿಂದ ಕಾಡಿನ ದಟ್ಟತ ಕಡಿಮೆಯಾಗುತ್ತಿದೆ. ಜತೆಗೆ ಅವುಗಳನ್ನೇ ಆಸರೆಯಾಗಿ ಬೆಳೆಯುವ ಕಾಡುಹಣ್ಣುಗಳ ವೈವಿಧ್ಯತೆಯೂ ಮಣ್ಣುಪಾಲಾಗುತ್ತಿವೆ.
            ಎರಡು ವರುಷಗಳ ಹಿಂದೆ ಕಾಡು ಹಣ್ಣುಗಳನ್ನು ನೆನಪಿಸುವ ಕಾರ್ಯಾಗಾರವೊಂದನ್ನು ದ.ಕ. ಜಿಲ್ಲೆಯ ಅಳಿಕೆ ಸನಿಹದ ಕೇಪು-ಉಬರು ಹಲಸು ಸ್ನೇಹಿ ಕೂಟವು ಆಯೋಜಿಸಿತ್ತು. ಕೊಡಗಿನ ಚೆಟ್ಟಳ್ಳಿಯ ಕೇಂದ್ರೀಯ ತೋಟಗಾರಿಕಾ ಪ್ರಾಯೋಗಿಕ ಕೇಂದ್ರದಲ್ಲೂ ಕಾಡು ಹಣ್ಣುಗಳ ಕಾರ್ಯಗಾರ ನಡೆದಿತ್ತು.

0 comments:

Post a Comment