Monday, July 31, 2017

ಇರುನೆಲೆಯನ್ನು ಮೀರಿ ವ್ಯಾಪಿಸಿದ ಹಲಸು


ಹೊಸದಿಗಂತದ 'ಮಾಂಬಳ' ಅಂಕಣ / 8-3-2017

               "ಮಲೇಶ್ಯಾದ ಮಾರ್ಗದ ಬದಿಗಳಲ್ಲಿ ಹಲಸಿನ ಗಿಡ, ಮರಗಳು ಸದೃಢವಾಗಿವೆ. ಬೆಳೆಯೂ ಚೆನ್ನಾಗಿದೆ. ಇಲ್ಲಿನ ಇಳುವರಿ ಸಾಕಾಗದೆ ಥಾಯ್ಲ್ಯಾಂಡಿನಿಂದ ಹಣ್ಣು ತರಿಸಿಕೊಳ್ಳುತ್ತಾರೆ. ಮಾರುಕಟ್ಟೆಯಲ್ಲಿ ಹಣ್ಣು, ಸೊಳೆಯನ್ನು ಆಕರ್ಷಕ ನೋಟದ ಪ್ಯಾಕೆಟ್ಗಳಲ್ಲಿ ಮಾರುತ್ತಾರೆ.  ಹಣ್ಣು ತುಂಬಾ ಕ್ರಿಸ್ಪ್, ಸಿಹಿ, ದಪ್ಪ, ಉತ್ತಮ ಸ್ವಾದ. ವರುಷಪೂರ್ತಿ ಹಣ್ಣು ಸಿಗುವುದು ಅಲ್ಲಿನ ವೈಶಿಷ್ಟ್ಯ,," ಕೃಷಿಕ ಡಾ.ಸಿ.ಚೌಟರು ಮಲೇಶ್ಯಾ ಪ್ರವಾಸದಲ್ಲಿ ಕಂಡ ಚೋದ್ಯ. ಇವರು ಕೇರಳ-ಕಾಸರಗೋಡು ಜಿಲ್ಲೆಯ ಮೀಯಪದವಿನವರು. ಕಳೆದ ವರುಷ ತಮ್ಮ ಸ್ನೇಹಿತರೊಂದಿಗೆ ಮಲೇಶ್ಯಾ ಹಣ್ಣುಗಳ ಅಧ್ಯಯನಕ್ಕಾಗಿ ಪ್ರವಾಸ ಮಾಡಿದ್ದರು.
             ವರುಷಪೂರ್ತಿ ಹಲಸಿನ ಹಣ್ಣು ಸಿಗುವುದು ಮಲೇಶ್ಯಾದ ವೈಶಿಷ್ಟ್ಯ . ಹೆದ್ದಾರಿ ಬದಿಗಳಲ್ಲಿ ಸೊಳೆಗಳು ಮಾರಾಟಕ್ಕೂ ಲಭ್ಯ. ಇಲ್ಲಿನ 'ಎನ್ ಪಾರ್ಟ್ ' ಎನ್ನುವ ಉದ್ದಿಮೆಯು ತಾಜಾ ಪ್ರಿಪ್ಯಾಕ್ ಹಲಸಿನ ಹಣ್ಣಿನ ಆನ್ಲೈನ್ ಬುಕ್ಕಿಂಗ್ ಸ್ವೀಕರಿಸಿ ಮನೆಬಾಗಿಲಿಗೆ ಕಳುಹಿಸಿಕೊಡುತ್ತದೆ. ಮೂವರು ತರುಣರು ಶ್ರಮದಿಂದ ಉದ್ದಿಮೆ ಮೇಲೆದ್ದಿದೆ. ಮೊದಲು ಇವರು ಹಣ್ಣಿನ ಸೊಳೆ ಬಿಡಿಸಿ ರಖಂ ಮಾರಾಟಗಾರರಿಗೆ ಪೂರೈಸುತ್ತಿದ್ದರು. ಈಗ ನೇರವಾಗಿ ಗ್ರಾಹಕರನ್ನು ತಲಪುವ ಹೊಸ ಯೋಜನೆಯನ್ನು ರೂಪಿಸಿದ್ದಾರೆ.
              ಭಾರತದಿಂದ ಮಲೇಶ್ಯಾಕ್ಕೆ ಉದ್ಯೋಗ ಹುಡುಕಿ ಹೋದ ಎರಡು ಕುಟುಂಬಗಳ ಉತ್ಸಾಹಿಗಳು ಅಲ್ಲಿ ಹಲಸಿನ ತೋಟವನ್ನು ಎಬ್ಬಿಸಿದ್ದಾರೆ ಎಂದರೆ ನಂಬ್ತೀರಾ? ಅವರೇ ಮನ್ಮೋಹನ್ ಸಿಂಗ್ ಮತ್ತು ಹರ್ವಿಂದರ್ ಸಿಂಗ್. ಇಲ್ಲಿ ಹಲಸು ಜನಪ್ರಿಯ ಮತ್ತು ಆದಾಯಕರ ಕೃಷಿ. ಸದ್ಯಕ್ಕಂತೂ ಉತ್ಪಾದನೆಗಿಂತ ಹೆಚ್ಚು ಬೇಡಿಕೆಯಿದೆ.  ಮುಂದಿನ ಹತ್ತು ವರುಷದ ವರೆಗೆ ತೊಂದರೆಯಿಲ್ಲ. ದಶಕದ ನಂತರದ ಸ್ಥಿತಿ ಹೇಳುವಂತಿಲ್ಲ. ಕಾದು ನೋಡಬೇಕಷ್ಟೇ' ಎನ್ನುತ್ತಾರೆ ಮನ್ಮೋಹನ್. ಮಲೇಶ್ಯಾ ಸರಕಾರವು ಹಲಸನ್ನು ಆಹಾರ ಬೆಳೆ ಎಂದು ಪರಿಗಣಿಸಿದೆ. ಇತರ ಹಣ್ಣು, ತರಕಾರಿಗಳನ್ನು ಇದೇ ವರ್ಗಕ್ಕೆ ಸೇರಿಸಿದೆ. ಸರಕಾರದ ವಿಶೇಷ ಉತ್ತೇಜನದಿಂದ ಮಲೇಶ್ಯಾದಲ್ಲಿ ಹಲಸಿನ ಕೃಷಿ ಹಬ್ಬುತ್ತಿದೆ.
              ಅಮೇರಿಕಾದ ಆನ್ ಮೇರಿ, ಆಸ್ಟ್ರೇಲಿಯಾದ ಜೂಲಿಯನ್ ಫ್ಯಾಂಗ್, ಇಂಗ್ಲೇಂಡಿನ ಥಿಯಾ ಫೋರ್ಡ್ ಇವರೆಲ್ಲಾ ಹಲಸನ್ನು ಮೈಮೇಲೆ ಅಂಟಿಸಿಕೊಂಡವರು. ಈಗ ಜರ್ಮನಿಯ ಜೂಲಿಯ ಹತ್ಮನ್ ಅವರನ್ನು ಹಲಸು ಆವರಿಸಿದೆ. ಶ್ರೀಲಂಕಾದಲ್ಲಿ ಸಂಶೋಧನಾ ಕಾರ್ಯದಲ್ಲಿದ್ದಾಗ ಪರಿಚಯವಾದ ಹಲಸು, ಊರಿಗೆ ಮರಳಿದ ಬಳಿಕ ಹಲಸಿಗಾಗಿಯೇ ಕಂಪೆನಿಯೊಂದನ್ನು ಹುಟ್ಟುಹಾಕಿದರು! ಮೊದಲಿಗೆ ಬರ್ಗರ್ ತಯಾರಿಸಿದರು, ರುಚಿ ನೋಡಲು ಹಲವರಿಗೆ ನೀಡಿದರು. ಉತ್ತಮ ಹಿಮ್ಮಾಹಿತಿ. ತಿಂದ ಶೇ.90ರಷ್ಟು ಮಂದಿಯೂ ಉತ್ಪನ್ನವನ್ನು ಇಷ್ಟಪಟ್ಟರು ತಯಾರು ಮಾಡುವ ತಿಂಡಿಯಲ್ಲಿ ಜರ್ಮನ್ ಸಂಬಾರವಸ್ತುವನ್ನು ಬಳಸಿದರ ಹೆಚ್ಚು ಮಂದಿಯನ್ನು ತಲುಪಬಹುದು, ಎನ್ನುವುದು ಅವರ ಆಶಯ.
              ಅಮೇರಿಕದ ಕಾನ್ಸಾಸ್ ನಗರದ ಜನಸಂಖ್ಯೆ ಆಜೂಬಾಜು ಹತ್ತು ಲಕ್ಷ. ಇಲ್ಲಿನವರಿಗೆ ಹಲಸು ಗೊತ್ತಿಲ್ಲ. ಏಳು ವರುಷದ ಹಿಂದೆ ಸ್ಟೆಫಾನಿ ಶೆಲ್ಪನ್ ಅವರ 'ಮೀನ್ ವೆಗಾನ್' ಕಂಪೆನಿಯು ಮೊತ್ತಮೊದಲಿಗೆ 'ಜಾಕ್ ತಮಾಲೆ'ಯ ಮೂಲಕ ಪರಿಚಯಿಸಿತು. ತಮಾಲೆ ಎಂದರೆ ಮೆಕ್ಸಿಕೋದ ಸಾಂಪ್ರದಾಯಿಕ ಆಹಾರ. ಕೇರಳದ ಎಲೆಯಡ ಅಥವಾ ಕನ್ನಾಡಿನ ಗೆಣಸಲೆಯಂತೆ.  ತಮಾಲೆ ಉಗಿಯಲ್ಲಿ ಬೇಯಿಸಿದ ತಿಂಡಿ. ಜೋಳದ ತೆನೆಯ ಹೊರಪದರಲ್ಲಿ ಸುತ್ತಿದ ಮಾಂಸ ತುಂಬಿದ ಉತ್ಪನ್ನ. 'ಡೋರ್ ಟು ಡೋರ್' ಎನ್ನುವ ವಿತರಣಾ ಸಂಸ್ಥೆಯು ತಮಾಲೆಗಳನ್ನು ನಾಲ್ಕು ರಾಜ್ಯಗಳಿಗೆ - ಮಿಸ್ಸೋರಿ, ಕಾನ್ಸಸ್, ಅಯೋವಾ, ನೆಬ್ರಾಸ್ಕಾ - ತಲುಪಿಸುತ್ತಿದೆ. ತಮಾಲೆ ಹೋದಲ್ಲೆಲ್ಲಾ ಅದರ ಮೂಲವಸ್ತು ಹಲಸಿನ ಪರಿಚಯವನ್ನೂ ಮಾಡಿ ಬೇಡಿಕೆ ಕುದುರಿಸುತ್ತಿರುವುದು ಸ್ಟೆಫಾನಿ ಶೆಲ್ಪನ್ ಜಾಣ್ಮೆ.
               ಚೀನಾದಲ್ಲಿ ಹಲಸು ಈಗ ಲಾಭದಾಯಕ ಬೆಳೆ. 1999ರಲ್ಲಿ ಹಲಸಿನ ತೋಪುಗಳು ಅಲ್ಲಿ ಆರಂಭವಾದುವು. ಅಲ್ಲಿನ ಒಂದು ಅಂಕಿಅಂಶ ಹೀಗಿದೆ - ಒಂದು ಹೆಕ್ಟಾರ್ ತೋಪಿನಿಂದ ಅಂದಾಜು ತೊಂಭತ್ತು ಸಾವಿರ ಯುವಾನ್ ಅಂದರೆ ಒಂಭತ್ತು ಲಕ್ಷ ರೂಪಾಯಿ ಆದಾಯ. ಹತ್ತು ಕಿಲೋದ ಹಲಸಿಗೆ, ಕೃಷಿಕನಿಗೆ ಇನ್ನೂರೈವತ್ತರಿಂದ ನಾಲ್ಕು ನೂರು ರೂಪಾಯಿ ಸಿಗುತ್ತದೆ. ಚೀನಿ ಭಾಷೆಯಲ್ಲಿ ಹಲಸನ್ನು 'ಬೊಲುಮಿ' ಎಂದು ಕರೆಯುತ್ತಾರೆ. ಚೀನಾದ ಹಲಸಿನ ಉತ್ಪಾದನೆಯು ಆ ದೇಶದ ಬೇಡಿಕೆ ಪೂರೈಸಲು ಅಶಕ್ತ. ಪ್ರತಿವರುಷ ವಿಯೆಟ್ನಾಂ ಮತ್ತು ಥಾಯ್ಲ್ಯಾಂಡಿನಿಂದ ಆಮದು ಮಾಡಿಕೊಳ್ಳುತ್ತಾರೆ. ನಿರ್ಜಲೀಕರಿಸಿದ ಹಲಸಿನ ಹಣ್ಣು, ಕ್ಯಾಂಡಿ, ಹೋಳಿಗೆಯಂತಹ ಉತ್ಪನ್ನಗಳನ್ನು ತಯಾರಿಸುವ ಉದ್ದಿಮೆಗಳಿವೆ.
              ಚೀನಾದಲ್ಲಿ ಹಲಸಿನ ಹಣ್ಣಿನ ಹುಡಿ ಜನಪ್ರಿಯ. ಒಂದು ಕಂಪೆನಿಯು ಈ ಉತ್ಪನ್ನಕ್ಕೆ 'ಜ್ಯಾಕ್ ಫ್ರುಟ್ ಪಿಝ್ಝಾ' ಎಂದು ನಾಮಕರಣ ಮಾಡಿದೆ. ಇಲ್ಲಿನ ಪ್ಯಾನ್ಕೇಕ್ (ಹಲಸಿನ ಉತ್ಪನ್ನ) ತಯಾರಿಸುವ ಚುಂಗುವಾಂಗ್ ಕಂಪೆನಿಯ ಸ್ಟೆಫಾನಿ ಅವರನ್ನು ಸಂಪರ್ಕಿಸಿದ ಅಡಿಕೆ ಪತ್ರಿಕೆ ಸಂಪಾದಕ ಶ್ರೀ ಪಡ್ರೆಯವರು ಮಾಹಿತಿ ನೀಡುತ್ತಾರೆ, ಪ್ಯಾನ್ಕೇಕ್ ತಯಾರಿಗೆ ಒಂದೂವರೆ ವರುಷದ ಇತಿಹಾಸವಿದೆ. ಈ ಥರದ ಪ್ಯಾನ್ಕೇಕುಗಳಿಗೆ ಮೂಲ ಆಗ್ನೇಯ ಏಷ್ಯಾ. ಆಗೆಲ್ಲ ತೆಂಗಿನಕಾಯಿಯ ಪ್ಯಾನ್ಕೇಕ್ ಮಾತ್ರ ಇತ್ತು. ಕಾಲಕ್ರಮದಲ್ಲಿ ಹಲಸಿನ ಹಣ್ಣಿನದನ್ನೂ ಆರಂಭಿಸಿದರು.
              ಮತ್ತೊಂದೆಡೆ ಮೆಕ್ಸಿಕೋದಲ್ಲೂ ಹಲಸಿನ ಸುದ್ದಿ. ಇಲ್ಲಿಗೆ ಹಲಸು ಪ್ರವೇಶಿಸಿ ಮೂರು ದಶಕ ಸಂದಿದೆ. ಮೆಕ್ಸಿಕೋದಲ್ಲಿ ಹಲಸಿನ ಹಣ್ಣಿಗೆ ಹೇಳುವಂತಹ ಬೇಡಿಕೆಯಿಲ್ಲ. ತರಕಾರಿಯಾಗಿ ಅಪರಿಚಿತ. ತನ್ನ ಗರಿಷ್ಠ ಸಂಖ್ಯೆಯ ಹಲಸನ್ನು ಅಮೇರಿಕಾಕ್ಕೆ ರಫ್ತು ಮಾಡುತ್ತಿದೆ. ಮಲೇಶ್ಯಾದಂತೆ ಇಲ್ಲೂ ವರುಷದ ಹನ್ನೆರಡು ತಿಂಗಳೂ ಬೆಳೆ ಸಿಗುತ್ತಿದೆ. ಕೊಯ್ಲಿನಿಂದಾರಂಭಿಸಿ ಕೊಯ್ಲೋತ್ತರ ತನಕ ತುಂಬಾ ನಿಗಾ ವಹಿಸುತ್ತಾರೆ. ಉತ್ತಮ ಗುಣಮಟ್ಟದ ಪ್ಯಾಕಿಂಗ್. ಶೀತಲ ಟ್ರಕ್ಕಿನಲ್ಲಿ ಸಾಗಾಟ.
               ಕೇರಳದ ಕೊಟ್ಟಯಂ ಜಿಲ್ಲೆಯ ಸಂಸ್ಥೆಯೊಂದು ಕಾಯಿಸೊಳೆಯನ್ನು ವಿದೇಶಕ್ಕೆ ರಫ್ತು ಮಾಡುತ್ತಿದೆ. ವಿದೇಶಿ ಮಲೆಯಾಳಿಗಳಿಗೆ 'ಅಡುಗೆಗೆ ಸಿದ್ಧ ಹಲಸು' ಕೊಳ್ಳಲು ಮಾರುಕಟ್ಟೆ ಸರಪಳಿ ಮಾಡಿಕೊಂಡಿದೆ. ಕಳೆದ ಸೀಸನ್ನಿನಲ್ಲಿ ನೂರಹತ್ತು ಟನ್ ಹಲಸನ್ನು ಕೊಂಡು ಕಾಯಿಸೊಳೆಯಾಗಿಸಿ ವಿದೇಶಕ್ಕೆ ಕಳಿಸಿದ್ದಾರೆ. ಈ ಸೀಸನ್ನಿನಲ್ಲಿ ಮೂರು ಲಕ್ಷ ಕಿಲೋ ಹಲಸನ್ನಾದರೂ ಒಟ್ಟು ಮಾಡಿ ಸೊಳೆಯಾಗಿಸಬೇಕು ಎನ್ನುವುದು ಆ ಸಂಸ್ಥೆಯ ಮುಖ್ಯಸ್ಥ ರೋನಿ ಮ್ಯಾಥ್ಯೂ ಸಂಕಲ್ಪ.
ಹೀಗಿ ಕಲಡಾಚೆಯ ವಿವಿಧ ದೇಶಗಳು ಹಲಸಿನ ಪರಿಮಳಕ್ಕೆ ಮನಸೋತಿವೆ. ಒಂದು ಕಾಲಘಟ್ಟದಲ್ಲಿ ಯಾರಿಗೂ ಬೇಡದ, ಬಡವರ ಹಣ್ಣೆಂದೇ ಹಣೆಪಟ್ಟಿ ಹಚ್ಚಿಸಿಕೊಂಡ ಹಲಸಿಗೆ ಮಾನ ಬರುತ್ತಿದೆ. ವಿದೇಶದಲ್ಲಿ ಬೇಡಿಕೆ ಬರುತ್ತಿದೆ. ನಾವು ಕಣ್ಣುಮುಚ್ಚಿ ತೆರೆಯುವುದರೊಳಗೆ ಅಲ್ಲಿ ಹಲಸಿನ ಉತ್ಪನ್ನದ ಒಂದಾದರೂ ಕಂಪೆನಿ ಆರಂಭವಾಗಿರುತ್ತದೆ!
               ಜಗತ್ತಿನ ಆಹಾರ ನೀಗಿಸುವಲ್ಲಿ ಹಲಸು ದೊಡ್ಡ ಪಾತ್ರ ವಹಿಸಬಹುದು. ಕರ್ನಾಟಕದ ಒಣಪ್ರದೇಶದಲ್ಲಿ ಮೂರು ಸಾವಿರ ಹೆಕ್ಟಾರ್ ಹಲಸಿನ ತೋಪು ಆರಂಭವಾಗಿದೆ. ಆದರೂ ಹಲಸು ಕೃಷಿಯ ತಿಳುವಳಿಕೆಯಲ್ಲಿ,  ಮಾರುಕಟ್ಟೆ ವ್ಯವಸ್ಥೆಯಲ್ಲಿ ನಾವು ಅಪ್ಡೇಟ್ ಆಗಿಲ್ಲ. ಆ ಬಗ್ಗೆ ಆಸಕ್ತಿ ತೋರಿಸುತ್ತಲೂ ಇಲ್ಲ. ಅದನ್ನು ನಿರ್ಲಕ್ಷಿಸಿದರೂ 'ನಮ್ಮದು ಹಲಸಿನ ತವರು' ಎಂದು ಬೀಗುತ್ತಾ, ಎಷ್ಟು ಕಾಲ ಹೀಗೆ ನಡೆಯಲಿದ್ದೇವೆ, ಹಲಸು ಆಂದೋಳನಕಾರ ಶ್ರೀಪಡ್ರೆಯವರ ವಿಷಾದ.
(ಮಾಹಿತಿ / ಚಿತ್ರಕೃಪೆ : ಶ್ರೀ ಪಡ್ರೆ/ಅಡಿಕೆಪತ್ರಿಕೆ)

0 comments:

Post a Comment