ನಂದಳಿಕೆ ಬಾಲಚಂದ್ರ ರಾಯರು
ಕವಿ ಮುದ್ದಣ ಸ್ಮಾರಕ ಭವನ
ಉದಯವಾಣಿಯ 'ನೆಲದ ನಾಡಿ' ಅಂಕಣ / ೧೨-೧-೧೭
ಮಣಿಪಾಲದ ಅಕಾಡೆಮಿ ಆಫ್ ಜನರಲ್ ಎಜುಕೇಶನ್' ನೀಡುವ ಹೊಸ ವರುಷದ ವಾರ್ಶಿಕ ಪ್ರಶಸ್ತಿಗೆ ನಂದಳಿಕೆ ಬಾಲಚಂದ್ರ ರಾಯರು ಭಾಜನರಾಗಿದ್ದಾರೆ. ಇದರಲ್ಲೇನು ಹೊಸತು? ನಂದಳಿಕೆಯವರಿಗೆ ಸಂದ ಈ ಪ್ರಶಸ್ತಿ ಇದೆಯಲ್ಲಾ, ಅದು ಗ್ರಾಮೀಣ ಭಾರತಕ್ಕೆ ಸಂದ ಮಾನ. ಹಳ್ಳಿಯೊಂದು ಸಶಕ್ತವಾಗಿ ಎದ್ದು ನಿಲ್ಲಲು ಕಾರಣರಾದ ಮನಸ್ಸುಗಳಿಗೆ ಸಂದ ಸಂಮಾನ. ನಂದಳಿಕೆಯ ನೆಲದಲ್ಲಿ ಅರಳಿದ ಕವಿ ಮುದ್ದಣನಿಗೆ ಪರೋಕ್ಷವಾಗಿ ಸಲ್ಲಲ್ಪಟ್ಟ ಗೌರವ.
ಕವಿ ನಂದಳಿಕೆ ಲಕ್ಷ್ಮೀನಾರ್ಣಪ್ಪಯ್ಯ - ಕಾವ್ಯನಾಮ 'ಮುದ್ದಣ.' ಬದುಕಿದ್ದು ಮೂವತ್ತೊಂದು ವರುಷ. ಸಾಧಿಸಿದ್ದು ಅಪಾರ. ಅದು ವಾಙ್ಮಯ ಬೆರಗು. ಕವಿಗೆ ನೆಲೆ ಕಲ್ಪಿಸಲು ಯೋಚನೆ-ಯೋಜನೆ. 'ಕವಿ ಮುದ್ದಣ ಸ್ಮಾರಕ ರೈತ ಸಂಘ' ಕಾರ್ಯಪಡೆ (1958) ಅಸ್ತಿತ್ವಕ್ಕೆ ಬಂತು. ಚಾವಡಿ ಸೀತಮ್ಮ ಹೆಗ್ಗಡತಿ ಉದಾರ ಜಮೀನು ನೀಡಿದರು. ಸ್ಮಾರಕಕ್ಕೆ ಅಡಿಗಲ್ಲು ಬಿತ್ತು. ಹಾಕಿದ ಅಡಿಗಲ್ಲು ಕ್ರಮೇಣ ಸ್ಮಾರಕವಾಯಿತು. ಸಂಘ ನಿಶ್ಶಕ್ತಿಯಿಂದ ಬಳಲಿತು. ಕವಿ ಪುನಃ ಯುವಕರ ಮನದ ಕದ ತಟ್ಟಿದ. 'ಕವಿ ಮುದ್ದಣ ಸ್ಮಾರಕ ಮಿತ್ರ ಮಂಡಳಿ' (1979) ರೂಪುಗೊಂಡಿತು. ಊರಿನ ತರುಣ ನಂದಳಿಕೆ ಬಾಲಚಂದ್ರ ರಾವ್ ಮಿತ್ರಮಂಡಳಿಯ ಮುಂಚೂಣಿಯಲ್ಲಿ ನಿಂತರು. ಇವಿಷ್ಟು ಅರ್ಧ ಶತಮಾನದ ಹಿಂದಿನ ದಿನಮಾನಗಳು.
ಮುದ್ದಣನ ಹೆಸರನ್ನು ಶಾಶ್ವತವಾಗಿಸಬೇಕೆನ್ನುವ ಮಹತ್ತಾದ ಆಶಯದ ಹಿನ್ನೆಲೆಯಲ್ಲಿ ಗ್ರಾಮಾಭಿವೃದ್ಧಿಯ ಅಡಿಗಟ್ಟಿರಬೇಕೆನ್ನುವುದು ಬಾಲಚಂದ್ರರ ಆಶಯವಾಗಿತ್ತು. ಅದಕ್ಕೆ ಪೂರಕವಾಗಿ ಸುಮಾರು ಅರುವತ್ತರ ಆಜೂಬಾಜಿನಲ್ಲಿ ಘಟಿಸಿಹೋದ ಘಟನೆಯು ಬಾಲಚಂದ್ರರೊಳಗೆ ಸುಪ್ತ ರೂಪದಲ್ಲಿ ಜಾಗೃತವಾಗಿತ್ತು. ಇವರ ಅಣ್ಣ ಭಾಸ್ಕರ ರಾಯರಿಗೆ ವಿಷಮಶೀತ ಜ್ವರ ಬಾಧಿಸಿತ್ತು. ಊರಿನಲ್ಲಿ ಆಸ್ಪತ್ರೆಯಿದ್ದಿರಲಿಲ್ಲ. ದೂರದ ಪೇಟೆಯಿಂದ ವೈದ್ಯರು ಬರಬೇಕಾಗಿತ್ತು. ತಕ್ಷಣ ಬರೋಣ ಎಂದರೂ ರಸ್ತೆಯ ಸಮಸ್ಯೆ. ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಸಿಗದೆ ಭಾಸ್ಕರ ರಾಯರು ನಿಧನರಾಗಿದ್ದರು. ಬಾಲಚಂದ್ರರು ಅಧೀರರಾದರು.
ನಂದಳಿಕೆಯಲ್ಲಿ ಚಿಕಿತ್ಸೆಯ ಕೊರತೆಯಿಂದಾಗಿ ಜನರಿಗೆ ತೊಂದರೆಯಾಗಬಾರದು ಎನ್ನುವ ದೃಢ ಸಂಕಲ್ಪ. ಊರಿಗೆ ರಸ್ತೆ, ಸಾರಿಗೆ, ಆಸ್ಪತ್ರೆ - ಈ ಮೂರು ಮೊದಲಾದ್ಯತೆಯಲ್ಲಿ ಆಗಬೇಕಾದ ವ್ಯವಸ್ಥೆಗಳು. ಭಾಸ್ಕರ ರಾಯರ ಅಗಲಿಕೆಯು ಊರಿನ ಜನರ ಮನಃಸ್ಥಿತಿಯನ್ನು ಬದಲಿಸಿತು. ಊರಿಗೆ ಊರೇ ಬೆಂಬಲಕ್ಕೆ ನಿಂತಿತು. ಮಿತ್ರ ಮಂಡಳಿಯ ಮೂಲಕ ಹೋರಾಟಕ್ಕೆ ವೇದಿಕೆ ಸಜ್ಜಾಯಿತು. ಬಾಲಚಂದ್ರ ರಾಯರಿಗೆ ಮಿತ್ರಮಂಡಳಿಯ ಅಧ್ಯಕ್ಷತೆ ಹೆಗಲೇರಿತು. ಊರಿನ ಅಭಿವೃದ್ಧಿಗಾಗಿ ದುಡಿಯುವ ಸಂಕಲ್ಪ. ಊರವರನ್ನು ಹೆಗಲೆಣೆಯಾಗಿ ಬಳಸಿದರು, ಬೆಳೆಸಿದರು. ಬ್ಯಾಂಕ್ ಉದ್ಯೋಗಿಯಾಗಿದ್ದ ಇವರು ಹಗಲು ಬ್ಯಾಂಕ್, ಮಿಕ್ಕ ಸಮಯದಲ್ಲಿ ಮುದ್ದಣ ಸ್ಮರಣೆ, ಊರಿನ ಅಭಿವೃದ್ಧಿ.
ಊರಿನ ಅಭಿವೃದ್ಧಿಯ ರೂಪುರೇಷೆ ಸಿದ್ಧವಾಯಿತು. ಸಂಬಂಧಪಟ್ಟ ಇಲಾಖೆಯೊಂದಿಗೆ ನಿರಂತರ ಸಂಪರ್ಕ. ಕಾಗದ ಪತ್ರಗಳ ರವಾನೆ. ವರಿಷ್ಠರ ಭೇಟಿ. ಬೆನ್ನು ಬಿಡದ ಬೇತಾಳನಂತೆ ಇಲಾಖೆಗಳ ಮೇಜಿಂದ ಮೇಜಿಗೆ ಅಲೆದಾಡಿದರು. ಕಚೇರಿಯ ಕೆಂಪು ಪಟ್ಟಿ ವ್ಯವಸ್ಥೆಯನ್ನು ಹತ್ತಿರ ಕಂಡರು. ಹಲವು ಬಾರಿ ಅನುಭವಿಸಿದರು. ಇಲಾಖೆಗಳಿಗೆ ಕಾಗದ ಪತ್ರ ರವಾನಿಸಲು ಅಂಚೆ ಚೀಟಿ ಬೇಕಲ್ವಾ. ಅದಕ್ಕೆ ಹಣ ಹೊಂದಿಸಲು ಊಟ ಬಿಡಬೇಕಾದ ದಿನಗಳಿದ್ದುವು, ಎಂದು ನೆನಪಿಸಿಕೊಳ್ಳುತ್ತಾರೆ. ಕಳುಹಿಸಿದ ಕಾಗದ ಪತ್ರಗಳಲ್ಲಾ ಕಡತದೊಳಗೆ ಬೆಚ್ಚಗೆ ಸೇರುತ್ತಿದ್ದುವೇ ವಿನಾ ಮಂಜೂರಾತಿಯ ನಿರೀಕ್ಷೆಯಲ್ಲಿ ದಿನಗಳು ಸಾಗುತ್ತಿದ್ದುವು.
ಕಡತಗಳು ವಿಧಾನಸೌಧ ಪ್ರವೇಶಿಸಿದುವು. ಆ ಸಮಯದಲ್ಲಿ ನಂದಳಿಕೆಯವರಾದ ಪ್ರಭಾಕರ ರಾವ್ ವಿತ್ತ ಇಲಾಖೆಯಲ್ಲಿ ಕಾರ್ಯದರ್ಶಿಯಾಗಿದ್ದರು. ಕಡತಗಳ ಶೀಘ್ರ ನಡಿಗೆ ಸುಲಭವಾಯಿತು. ಅವಿರತ ಸಂಪರ್ಕ. ಸುಮಾರು ಏಳು ಕಿಲೊಮೀಟರ್ ರಸ್ತೆಯ ನಿರ್ಮಾಣಕ್ಕಾಗಿ ಮೊತ್ತ ಮಂಜುರಾಯಿತು. ಈ ಸುದ್ದಿಗೆ ನಂದಳಿಕೆ ಗ್ರಾಮವೇ ಖುಷಿಯಿಂದ ತೇಲಾಡಿತು. ಗ್ರಾಮದ ನಕ್ಷೆಗೆ ಹೊಳಪು ಬಂತು. ಕಡತದಲ್ಲೇ ಓಡಾಡುತ್ತಿದ್ದ ಅಭಿವೃದ್ಧಿ ಎನ್ನುವ ಪದವು ಅನುಷ್ಠಾನಕ್ಕೆ ಅಣಿಯಿಟ್ಟಿತು. 1982ರ ಹೊತ್ತಿಗೆ ರಸ್ತೆ ಸಿದ್ಧವಾಯಿತು. ಈಗಿನಂತೆ ಮನೆಯ ಸದಸ್ಯರೊಬ್ಬರಂತೆ ವಾಹನಗಳಿಲ್ಲ. ಉಳ್ಳವರ ಮನೆಯಲ್ಲಿ ಅಲ್ಲೋ ಇಲ್ಲೋ ವಾಹನಗಳು. ಅವರು ಭರ್ರನೆ ಬಂದು ಹೋಗುವಾಗ ಹಳ್ಳಿಯಲ್ಲಿ ಪುಳಕ! ರಸ್ತೆ ಏನೋ ಆಯಿತು, ಬಸ್ ಬರಬೇಡ್ವೇ? ಸ್ವಲ್ಪ ಸಮಯದಲ್ಲಿ ಈ ಆಶಯವೂ ಈಡೇರಿತು.
ಊರಿಗೆ ರಸ್ತೆ, ಸಾರಿಗೆ ಬಂದು ಬಿಟ್ರೆ ಸಾಕು, ನಗರವೇ ಹಳ್ಳಿಗೆ ನುಗ್ಗಿಬಿಡುತ್ತದೆ! ಇದು ವರ್ತಮಾನದ ಸತ್ಯ. ಇಷ್ಟೆಲ್ಲಾ ವ್ಯವಸ್ಥೆಗಳಾದರೂ ಬಾಲಚಂದ್ರ ರಾಯರ ಆಸ್ಪತ್ರೆಯ ಕನಸು ಕನಸಾಗಿಯೇ ಉಳಿದಿತ್ತು. ತನ್ನ ಅಣ್ಣ ಕನಸಿನಲ್ಲಿ ಸದಾ ಕಾಡುತ್ತಿದ್ದರು. ಅಧಿಕಾರಿಗಳೊಂದಿಗೆ ಮಿತ್ರಮಂಡಳಿಯ ಆಗ್ರಹ. ಆಸ್ಪತ್ರೆ ಮಂಜೂರಾಯಿತು. ಕಟ್ಟಡ ನಿರ್ಮಾಣದ ಹೊಣೆಯನ್ನು ಸಂಘಟನೆ ವಹಿಸಿಕೊಂಡಿತ್ತು. 'ನಂದಳಿಕೆ ಕೃಷ್ಣರಾವ್ ಸ್ಮಾರಕ ಟ್ರಸ್ಟ್' ಆ ಕಾಲದಲ್ಲಿ ದೊಡ್ಡ ಮೊತ್ತವನ್ನು ನೀಡಿತು. ಊರವರೂ ದೇಣಿಗೆ ನೀಡಿದರು. ಪ್ರಾಥಮಿಕ ಆರೋಗ್ಯ ಘಟಕ ಸಾರ್ವಜನಿಕರಿಗೆ ತೆರೆದುಕೊಂಡಿತು. ಜತೆಜತೆಗೆ ವಾಹನ ನಿಲ್ದಾಣ, ಕೊಳವೆ ಬಾವಿ ನಿರ್ಮಾಣ, ದಾರಿ ದೀಪ, ಊರಿಗೆ ವಿದ್ಯುತ್, ಅಂಚೆ ಕಚೇರಿ, ದೂರವಾಣಿ... ಹೀಗೆ ಊರಿಗೆ ಒಂದೊಂದೇ ಸವಲತ್ತುಗಳು ಪ್ರವೇಶಿಸಿದುವು. ಮಿತ್ರಮಂಡಳಿಯ ಗ್ರಾಮಾಭಿವೃದ್ಧಿಯ ಕೆಲಸಗಳನ್ನು ನಂದಳಿಕೆಯ ಪ್ರತಿ ಮನೆಯು ಶ್ಲಾಘಿಸಿತ್ತು.
ಬಾಲಚಂದ್ರ ರಾಯರ ಕಡತದೊಳಗೆ ಒಂದು ಯೋಜನೆ ಉಸಿರೆಳೆದುಕೊಳ್ಳುತ್ತಾ ಉಳಿದಿತ್ತು. ಗ್ರಾಮದ ಸವಲತ್ತುಗಳ ಈಡೇರಿಕೆಯ ಖುಷಿಯ ಆವರಣದೊಳಗೆ ಕವಿ ಮುದ್ದಣ ಸ್ಮಾರಕ ಭವನ ನಿರ್ಮಾಣ ಕೆಲಸಗಳಿಗೆ ಶ್ರೀಕಾರ. ಈ ಸಂಕಲ್ಪ ಮಾಡಿದ್ದೇ ತಡ, ರಾಯರೊಳಗೆ ಕವಿ ಇಳಿದುಬಿಟ್ಟ, ಉಳಿದುಬಿಟ್ಟ! ಅಕ್ಷರ ಸವಿಯನ್ನುಣಿಸಿದ. ಕೈಹಿಡಿದು ಮುನ್ನಡೆಸಿದ. ಊರಿನ ಜನ ಹೆಗಲು ನೀಡಿದರು. ನಂದಳಿಕೆಯಲ್ಲಿ ಕವಿಗೆ ಸ್ಮಾರಕವಾಯಿತು. ಊರಿಗೇ ಉಪಾಯನವಾಯಿತು. ಅಕ್ಷರಪ್ರಿಯರ ಮನದೊಳಗೆ ಮುದ್ದಣ ಲೀನವಾದ.
'ಶ್ರೀ ರಾಮಾಶ್ವಮೇಧಂ', 'ಅದ್ಭುತ ರಾಮಾಯಣಂ' ಎರಡು ಗದ್ಯ ಕಾವ್ಯಗಳು. ವಾರ್ಧಕ ಷಟ್ಪದಿಯಲ್ಲಿ 'ಶ್ರೀ ರಾಮ ಪಟ್ಟಾಭಿಷೇಕಂ', 'ಕುಮಾರ ವಿಜಯ-ರತ್ನಾವತಿ ಕಲ್ಯಾಣ' ಎಂಬೆರಡು ಯಕ್ಷಗಾನ ಪ್ರಸಂಗಗಳು; ಸಂಪ್ರದಾಯದ ಹಾಡುಗಳು, ಕರ್ನಾಟಕ ರಾಮಾಯಣ.. ಮೊದಲಾದವುಗಳು ಕವಿಯ ಕೃತಿಗಳು. 1995ರಿಂದ ಮುದ್ದಣ ಪ್ರಕಾಶನಕ್ಕೆ ಶ್ರೀಕಾರ. ಮುದ್ದಣದ ಕೃತಿಗಳ ಮುದ್ರಣ. 'ಶ್ರೀ ರಾಮಾಶ್ವಮೇಧಂ' ಕೃತಿಗೆ ಕಡಲಾಚೆಯ ಅಮೇರಿಕಾದಲ್ಲಿ ಬಿಡುಗಡೆಯ ಭಾಗ್ಯ. ಮಿತ್ರ ಮಂಡಳಿ ವತಿಯಿಂದ ಸಂಮಾನ, ಮುದ್ದಣ ಪುರಸ್ಕಾರಗಳ ಪ್ರದಾನ ನಿರಂತರ ನಡೆಯಿತು. ಬಾಲಚಂದ್ರ ರಾಯರು ಕಾಲಿಗ ಚಕ್ರ ಕಟ್ಟಿಕೊಂಡು ಓಡಾಡಿದರು. ಮಾತಿಗಿಳಿದರೆ ಸಾಕು, ಮುದ್ದಣ ಬಿಟ್ಟು ಬೇರೆ ವಿಚಾರವಿಲ್ಲ. ಕವಿಯನ್ನು ಆವೇಶ ಮಾಡಿಕೊಂಡಿದ್ದರು ಅಥವಾ ಕವಿಯೇ ಪರಕಾಯಪ್ರವೇಶ ಮಾಡಿದ್ದನೋ? ವೈಯಕ್ತಿಕ ನಿಂದೆಯನ್ನು ಸಹಿಸಿದರು. ಗೇಲಿಯನ್ನು ನಗುತ್ತಾ ಸ್ವೀಕರಿಸಿದರು. ಹಿಡಿದ ಕೆಲಸವನ್ನು ಬೆನ್ನುಹಿಡಿದು ಪೂರೈಸಿದರು. ಪರಿಣಾಮ, ಮುದ್ದಣ ಇಂದು ರಾಜ್ಯ, ದೇಶವನ್ನು ಮೀರಿದ ಚೇತನ.
ಕಷ್ಟದಲ್ಲಿ ಇಷ್ಟ ಕಂಡುದರಿಂದ ಸಾಧ್ಯವಾಯಿತು. ನಂದಳಿಕೆ ಭಾಸ್ಕರ ರಾವ್, ಚಾವಡಿಮನೆ ಸುಂದರರಾಮ ಹೆಗಡೆ, ಎಂ.ಅನಂತ ಪದ್ಮನಾಭ, ಎನ್.ದಿವಾಕರ ಶೆಟ್ಟಿ ಮೊದಲಾದ ಹಿರಿಯರ ಹಾರೈಕೆಯ ಫಲವಿದು. ಸುಹಾಸ್ ಹೆಗಡೆಯವರು ಪ್ರಸ್ತುತ ಮಿತ್ರಮಂಡಳಿಯನ್ನು ಮುನ್ನಡೆಸುತ್ತಿದ್ದಾರೆ, ಎನ್ನುತ್ತಾರೆ ಅರುವತ್ತನಾಲ್ಕರ ಹರೆಯದ, ಪುಟಿಯುವ ಉತ್ಸಾಹದ ಬಾಲಚಂದ್ರ ರಾವ್. ಗ್ರಾಮಾಭಿವೃದ್ಧಿಯ ಜತೆಗೆ ಮುದ್ದಣ ಕವಿಗೆ ನಿಜಾರ್ಥದಲ್ಲಿ ಮಾನ-ಸಂಮಾನವನ್ನು ಸಲ್ಲಿಸಿದ ಕೀರ್ತಿಯು ಬಾಲಚಂದ್ರ ರಾಯರ ನೇತೃತ್ವದ ಮಿತ್ರಮಂಡಳಿಗೆ ಸಲ್ಲುತ್ತದೆ.
ಊರಿನ ಯುವಕ ಮಂಡಳಿಯೊಂದು ಟೊಂಕ ಕಟ್ಟಿದರೆ ಗ್ರಾಮದ ಚಿತ್ರಣವನ್ನೇ ಬದಲಾಯಿಸಬಹುದು ಎನ್ನುವುದಕ್ಕೆ ನಂದಳಿಕೆಯ ಮಿತ್ರ ಮಂಡಳಿಯ ಸಾಧನೆ ದೃಷ್ಟಾಂತ. ಈ ಸಾಧನೆಯು ಈಗ ಕಾಲಗರ್ಭಕ್ಕೆ ಸಂದು ಹೋದರೂ ಊರಿನ ಅಭಿವೃದ್ಧಿಯ ಚರಿತ್ರೆ ಮಾತನಾಡುವಾಗ ಮಿತ್ರಮಂಡಳಿಯನ್ನು ಮರೆತು ಮಾತನಾಡಲು ಸಾಧ್ಯವಿಲ್ಲ. ಹಾಗಾಗಿ ಬಾಲಚಂದ್ರ ರಾಯರಿಗೆ ಸಂದ ಪ್ರಶಸ್ತಿ ಇದೆಯಲ್ಲಾ, ಅದು ಇಡೀ ನಂದಳಿಕೆಗೆ ಸಂದ ಪ್ರಶಸ್ತಿಯಾಗಿ ಹೊರಹೊಮ್ಮುತ್ತದೆ. ೨೦೧೭ ಜನವರಿ ೧೪ರಂದು ಮಣಿಪಾಲದಲ್ಲಿ ಪ್ರಶಸ್ತಿ ಪ್ರದಾನ.
ಕಳೆದ ವರುಷ ಬಾಲಚಂದ್ರ ರಾಯರ ಬದುಕಿನ ವಿವಿಧ ಕೋನಗಳ ನೋಟವನ್ನು ಸಾಹಿತಿ ವಿ.ಗ.ನಾಯಕರು 'ನಂದಳಿಕೆಯ ಹಠಯೋಗಿ' ಎನ್ನುವ ಕೃತಿಯಲ್ಲಿ ಪೋಣಿಸಿದ್ದಾರೆ.
0 comments:
Post a Comment