Monday, July 26, 2010

ಸಸ್ಯ ವಿಜ್ಞಾನಿ ಡಾ.ಪಳ್ಳತಡ್ಕ ಕೇಶವ ಭಟ್ ನಿಧನ

ಅಂತಾರಾಷ್ಟ್ರೀಯ ಸಸ್ಯವಿಜ್ಞಾನಿ ಡಾ.ಪಳ್ಳತಡ್ಕ ಕೇಶವ ಭಟ್ (71) ಅವರು ಅಮೇರಿಕಾದ ಶಾಂಪೆರ್ ನ ತಮ್ಮ ಪುತ್ರಿಯ ಮನೆಯಲ್ಲಿ ನಿನ್ನೆ ಸಂಜೆ (ಜು.25) ನಿಧನರಾದರು.

ಅಮೇರಿಕಾದ ವೆನಿಜುವೆಲ್ಲಾ ವಿಶ್ವವಿದ್ಯಾಲಯದಲ್ಲಿ ಸುದೀರ್ಘ ಕಾಲ ಸಸ್ಯವಿಜ್ಞಾನಿಯಗಿದ್ದ ಅವರು ಪ್ರಕೃತ ವಿಶ್ರಾಂತಿ ಜೀವನದಲ್ಲಿದ್ದರು. ಭಾರತದ ವಿವಿಧ ವಿಶ್ವವಿದ್ಯಾಲಯದಲ್ಲಿ ಸಂದರ್ಶನ ಪ್ರಾಧ್ಯಾಪಕರಾಗಿದ್ದ ಭಟ್, ಸಸ್ಯಶಾಸ್ತ್ರದ ವಿವಿಧ ಆಯಾಮಗಳ ಕುರಿತು ಸಂಶೋಧನೆ ಮತ್ತು ಅಧ್ಯಯನ ಕೈಗೊಂಡಿದ್ದರು. ರಾಷ್ಟ್ರೀಯ ವಿಚಾರಗೋಷ್ಠಿ, ಕಮ್ಮಟಗಳಲ್ಲಿ ಭಾಗವಹಿಸಿದ್ದರು. ಜಾಗತಿಕ ಮಟ್ಟದ ವಿಜ್ಞಾನ ಕೂಟದಲ್ಲಿ ಹಲವು ಬಾರಿ ಭಾರತವನ್ನು ಪ್ರತಿನಿಧಿಸಿದ್ದರು. ಡಾ.ಭಟ್ ಪ್ರಕೃತಿ ಚಿಕಿತ್ಸೆಯ ಬಗ್ಗೆ ಸಂಶೋಧನೆ ನಡೆಸಿದ್ದರು.

ತತ್ವಶಾಸ್ತ್ರ ಮತ್ತು ಇತಿಹಾಸದ ಬಗ್ಗೆ ಅಪಾರ ಜ್ಞಾನವಿತ್ತು. ವೆನಿಜುವೆಲ್ಲಾ, ಪೆರು, ಕೊಲಂಬಿಯಾ, ಬ್ರೆಝಿಲ್, ಮೆಕ್ಸಿಕೋ, ಬೊಲಿವಿಯಾ, ಯುನೈಟೆಡ್ ಸ್ಟೇಟ್ಸ್, ಕೆನಡಾ, ಫ್ರಾನ್ಸ್, ಇಟಲಿ.. ಮೊದಲಾದ ದೇಶಗಳಲ್ಲಿ ಅವರು ಉಪನ್ಯಾಸ ನೀಡಿದ್ದರು. ರೋಮ್, ಇಟೆಲಿ, ಬ್ರೆಝಿಲ್ ಗಳಲ್ಲಿ ನಡೆದ ವಿಚಾರ ಸಂಕಿರಣಗಳಲ್ಲಿ ವೈದ್ಯಕೀಯ ಸಸ್ಯದ ಕುರಿತು ವಿಶೇಷ ಅಧ್ಯಯನ ಕೈಗೊಂಡಿದ್ದರು.

1940ರಲ್ಲಿ ಜನಿಸಿದ ಡಾ.ಪಳ್ಳತಡ್ಕ ಕೇಶವ ಭಟ್ ಮದ್ರಾಸ್ ವಿವಿಯಿಂದ 1959ರಲ್ಲಿ ಬಿಎಸ್ಸಿ ಪದವಿ, 1961ರಲ್ಲಿ ಎಂಎಸ್ಸಿ ಪದವಿ, 1966ರಲ್ಲಿ ಸಸ್ಯಶಾಸ್ತ್ರದಲ್ಲಿ ಪಿಎಚ್.ಡಿ.ಪದವಿ ಪಡೆದಿದ್ದರು. ಪಳ್ಳತಡ್ಕದ ದಿ.ಸುಬ್ರಾಯ ಭಟ್-ಲಕ್ಷ್ಮೀ ದಂಪತಿಗಳ ಪುತ್ರ ಡಾ.ಭಟ್ ಅವರು ಪಳ್ಳತ್ತಡ್ಕ ಎಯುಪಿ ಶಾಲೆಯ ಸ್ಥಾಪಕರಲ್ಲೊಬ್ಬರು. ಕಾಸರಗೋಡಿನ ಸಾಮಜಿಕ, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದರು.

ಅಗಲಿದ ಹಿರಿಯ ಚೇತನಕ್ಕೆ ನುಡಿನಮನ.

(ಚಿತ್ರ : ಜಾಲತಾಣದಿಂದ)

Saturday, July 24, 2010

ಕೃಷಿಕನು ಸಮಾಜದ ಜೀತದಾಳೇ!

'ರೈತ ಜೀತದಾಳು. ಬೆಳೆ ತೆಗೆದು ಸಮಾಜಕ್ಕೆ ನೀಡುವುದು ಆತನ ಕರ್ತವ್ಯ ಎಂಬಂತೆ ಸಮಾಜ ಅವನನ್ನು ನಡೆಸಿಕೊಳ್ಳುತ್ತಿದೆ' - ಹಾಸನದ ಜೈವಿಕ ಮೇಳದ ವೇದಿಕೆಯಿಂದ ಹಿರಿಯ ಕೃಷಿಕರೊಬ್ಬರ ಮನದಾಳದ ಮಾತು.

ದುಡಿಮೆ - ರೈತನ ಮಂತ್ರ. ದುಡಿಯುವುದು ಅವನ ಕರ್ಮ. ಭಗವದ್ಗೀತೆಯಲ್ಲಿ ಶ್ರೀಕೃಷ್ಣನೇ ಆದೇಶ ಕೊಡುತ್ತಾನೆ - ಕರ್ಮ ಮಾಡು, ಫಲಾಪೇಕ್ಷೆ ಬಯಸಬೇಡ'. ಪ್ರಸ್ತುತ ಕಾಲಘಟ್ಟದಲ್ಲಿ ರೈತನಿಗೆ ಹೆಚ್ಚು ಅನ್ವಯವಾಗುತ್ತದೆ! ರೈತ ಅನುಭವಿಸುತ್ತಿದ್ದಾನೆ ಕೂಡಾ! ಶೋಷಣೆ, ಅವಮಾನ, ಅನ್ಯಾಯಗಳನ್ನು 'ಮನಸಾ ಸ್ವೀಕರಿಸಿ' ದುಡಿಯುತ್ತಲೇ ಇದ್ದಾನೆ. ಬೆಳೆದ ಬೆಲೆಯನ್ನು ಸಿಕ್ಕ ಬೆಲೆಗೆ ಮಾರಿ 'ನನ್ನದು ಸಂತೃಪ್ತ' ಜೀವನದ ಬಲವಂತದ ನಗು ಚೆಲ್ಲಿದಲ್ಲಿಗೆ 'ಕೃಷಿ ಬದುಕಿನ ಅನಾವರಣ'!

ನಾಡಿನ ದೊರೆಗಳಿಗೂ ಇದೇ ಬೇಕಾಗಿರುವುದು. ಹೆಜ್ಜೆ ಹೆಜ್ಜೆಗೂ ರೈತನ ಜಪ ಮಾಡುತ್ತಾ, 'ನಾನೂ ನಿಮ್ಮೊಂದಿಗಿದ್ದೇನೆ' ಎಂಬ ತೋರಿಕೆಯ ಮುಖವನ್ನು ಪ್ರದರ್ಶಿಸುತ್ತಿರುವುದು ರಾಜಕಾರಣ. ರೈತನೆಂಬುದು ಚಲಾವಣೆಯ ನಾಣ್ಯ. ಅಸ್ತಿತ್ವ ಉಳಿಸಿಕೊಳ್ಳುವ ಜಾಣ್ಮೆ.

ದ್ರಾಕ್ಷಿ, ಟೊಮೆಟೋ, ಆಲೂಗೆಡ್ಡೆಗಳ ದರಗಳು ಅಲುಗಾಡಿದಾಗ ಮಾರ್ಗಕ್ಕೆ ಚೆಲ್ಲಿ ತಲೆಮೇಲೆ ಕೈಹೊತ್ತು ಕುಳಿತಾಗ ಯಾರೂ ರೈತನಾಸರೆಗೆ ಬರುವುದಿಲ್ಲ ಬಿಡಿ. ಅನುಕಂಪದ ಬಿನ್ನಾಣದ ನುಡಿಗಳಲ್ಲಿ ಆತನನ್ನು ಕಟ್ಟಿ, ಕಣ್ಣೀರೊರೆಸುವ ಪ್ರಹಸನ. ಹುನ್ನಾರಗಳ ಜಾಡಿನಲ್ಲಿ ಸಾಗುವ ಆಡಳಿತ ಯಂತ್ರಕ್ಕೆ ರೈತನ ಜೀವವೆಂಬುದು ದಾಳ.

ಮಾತೆತ್ತಿದರೆ ಕೋಟಿಗಟ್ಟಲೆ ಅಂಕಿಅಂಶಗಳನ್ನು ತೋರಿಸುವ ತಃಖ್ತೆಗಳು ಇಲಾಖೆಗಳ ಕಡತದಲ್ಲಿರುತ್ತದೆ. ಇದರೊಳಗೆ ಇಣುಕಿದರೆ 'ರೈತನ ಬದುಕು' ಸಮೃದ್ಧವಾಗಿದೆ! ಕೋಟಿ ಕೋಟಿಗಳ ಬ್ಯಾಲೆನ್ಸ್ಶೀಟ್ 'ಟ್ಯಾಲಿ'ಯಾಗಿರುತ್ತವೆ!

ಕಚೇರಿಗಳಿಗೆ ರೈತ ಪ್ರವೇಶಿಸಿದರೆ ಸಾಕು, - 'ನಾಳೆ ಬಾ' ಸಂಸ್ಕೃತಿ ಎದುರಾಗುತ್ತದೆ. ದುಡಿದ ಹಣವೆಲ್ಲಾ ಬಸ್ಸಿಗೋ, ಕಾಣದ ಕೈಗೊ? ತಿಂಗಳುಗಟ್ಟಲೆ ಕಾದರೂ, ಕೆಲಸವನ್ನು ಪೂರೈಸಲಾಗದ ಅಸಹಾಯಕತೆ. ಹಾಗೆಂತ ಕೃಷಿಕನ ನಾಡೀಮಿಡಿತವನ್ನು ಅರಿತು, ರೈತರೊಂದಿಗೆ ವ್ಯವಹರಿಸುವ ಅಧಿಕಾರಿಗಳೂ ಇದ್ದಾರೆನ್ನಿ. ಇಂತವರ ಸೇವೆ ಎಲ್ಲೂ ದಾಖಲಾಗುವುದಿಲ್ಲ, ಪ್ರಕಟವಾಗುವುದೂ ಇಲ್ಲ.

ಒಂದು ದಿವಸ ಹಳ್ಳಿಯಿಂದ ಕೊತ್ತಂಬರಿ ಸೊಪ್ಪಾಗಲೀ, ಟೊಮೆಟೋ, ಆಲೂಗೆಡ್ಡೆ ಬಾರದಿದ್ದರೆ ನಗರದ ಹೋಟೇಲುಗಳು, ಅಡುಗೆ ಮನೆಗಳ ಒಲೆ ಉರಿಯುವುದಿಲ್ಲ. ಭತ್ತ, ರಾಗಿಗಳು ನಗರ ಪ್ರವೇಶಿಸದಿದ್ದರೆ ಹಸಿದ ಹೊಟ್ಟೆಗೆ ತಂಪು ಬಟ್ಟೆಯೇ ಗತಿ.

ಕೃಷಿಕರ ಮನೆಯನ್ನು, ಬದುಕನ್ನು ಜೆಸಿಬಿ ತಂದು ನೆಲಸಮ ಮಾಡಿದಾಗಲೂ ಆತ ಮಾತನಾಡಬಾರದು, ಪ್ರತಿಭಟಿಸಬಾರದು? ಅಭಿವೃದ್ಧಿಯ ಹೆಸರಿನಲ್ಲಿ ಕನ್ನಾಡಿಗೆ ಕೋಟಿಗಟ್ಟಲೆ ಹರಿದುಬರುತ್ತಿರುವಾಗ, ಅದರಲ್ಲಿ ರೈತನ ಉದ್ದಾರದ ಪಾಲೆಷ್ಟು? ಹೊಸ ಹೊಸ ಯೋಜನೆಗಳಿಗೆ ಅಂಕಿತ ಬೀಳುತ್ತಿರುವ ಹೊತ್ತಿಗೆ; ಇತ್ತ ರೈತ ತನ್ನ ಅಸ್ತಿತ್ವದ ಉಳಿವಿಗಾಗಿ, ಮನೆಮಂದಿಯ ರಕ್ಷಣೆಗಾಗಿ ಸಿದ್ಧತೆ ಮಾಡಬೇಕಾಗುತ್ತದೆ. ಯಾಕೆಂದರೆ ಬೆಳಗಾಗುವುದರೊಳಗೆ ದೈತ್ಯ ಯಂತ್ರ ಅಂಗಳದಲ್ಲಿ ಪ್ರತ್ಯಕ್ಷವಾದೀತು ಎಂಬ ಭಯ!

ಇದನ್ನೆಲ್ಲಾ ಚಿಂತಿಸಿದರೆ ನನಗನ್ನಿಸುತ್ತದೆ, ಕೃಷಿಕನು ಸಮಾಜದ ಜೀತದಾಳೇ? ಅವನು ಕೃಷಿ ಉತ್ಪನ್ನಗಳನ್ನು ಬೆಳೆಯುತ್ತಿರಲೇ ಬೇಕು, ಸಮಾಜಕ್ಕೆ ಅದನ್ನು ಪೂರೈಸುತ್ತಿರಲೇ ಬೇಕು. ಬೆಲೆ ಮಾತ್ರ ಹೆಚ್ಚು ಕೊಡಿ ಅಂತ ಕೇಳಬಾರದು. ಹಾಗಿದ್ದಾಗ ಮಾತ್ರ ಆತ ದೇಶದ ಬೆನ್ನೆಲುಬು!

ಅಡಿಕೆ, ತೆಂಗು, ಕಬ್ಬು.. ರೈತನನ್ನು ಸಾಕುವ ಬೆಳೆಗಳಿಗೆ ಉತ್ತಮ ಬೆಲೆ ಕೊಡಿ - ಇದು ರೈತನ ಬೇಡಿಕೆ. ಆದರೆ ದುರಂತ ನೋಡಿ, ಕೇಳಿದ್ದನ್ನು ನಮ್ಮ ದೊರೆಗಳು ಕೊಡರು, ಕೇಳದೇ ಇದ್ದಂತಹ 'ಬಿಟಿ ಬದನೆ'ಯನ್ನು ಬಲವಂತದಿಂದ ಕಿಟಕಿಯೊಳಗೆ ಹಾಕಿಯಾರು!
ವಿಜ್ಞಾನಿಗಳು ಸಂಶೋಧನೆ ಮಾಡಿದ್ದಾರಲ್ಲಾ. ಮತ್ಯಾಕೆ ವಿರೋಧ - ಫಕ್ಕನೆ ಮೂಡುವ ಪ್ರಶ್ನೆ. ನಮ್ಮ ಸಂಶೋಧನೆಗಳೆಲ್ಲಾ ಹೀಗೇನೆ. ಲ್ಯಾಬ್ ಟು ಲ್ಯಾಂಡ್ ಆಗುವುದೇ ಇಲ್ಲ. ರೈತರ ಹೊಲದಲ್ಲೇ ಪ್ರಾತ್ಯಕ್ಷಿಕೆ ನಡೆಯಲಿ. ವ್ಯವಹಾರಗಳೆಲ್ಲವೂ ಪಾರದರ್ಶಕವಾಗಿರಲಿ. ಆಗ ರೈತರಿಗೂ ನಂಬುಗೆ ಬರುತ್ತದೆ.


ಕೃಷಿಕರ ಕುರಿತು ಮಾತನಾಡುವುದು ಈಗೊಂದು 'ಫ್ಯಾಶನ್' ಆಗಿಬಿಟ್ಟಿದೆ. ಮಳೆ ಹೆಚ್ಚು ಬಂತೆನ್ನಿ, 'ರೈತರೀಗ ಖುಷ್' ಅಂತ ಹೇಳಿಕೆ, ಉತ್ಪನ್ನವೊಂದಕ್ಕೆ ಎರಡ್ಮೂರು ರೂಪಾಯಿ ಏರಿಕೆಯಾಯಿತೆನ್ನಿ, 'ರೈತರ ಮುಖದಲ್ಲಿ ಮಂದಹಾಸ' ಎಂಬ ಶೀರ್ಷಿಕೆಯ ಹೇಳಿಕೆ. ಮಾತೆತ್ತಿದರೆ 'ನಾವೂ ರೈತ ಪರ' ಎಂಬ ಫೋಸ್!

ರೈತ ಕೇಳುವುದಿಷ್ಟೇ - ನಮ್ಮ ಮಟ್ಟಿಗೆ ನಾವು ನೆಮ್ಮದಿಯಾಗಿದ್ದೇವೆ. ಭಯ ಹುಟ್ಟಿಸುವ ಯಾವುದೇ 'ಗುಮ್ಮ'ಗಳು ನಮ್ಮ ಅಂಗಳ ಪ್ರವೇಶಿಸದಂತೆ ನೋಡಿಕೊಂಡರೆ ಸಾಕು. ಇದು ನಾವು ಕೇಳುವ ಏಕೈಕ ಬೇಡಿಕೆ! ಹಾಗೆಂತ ನಾವೇನೂ ಅಭಿವೃದ್ಧಿಯ ವಿರೋಧಿಗಳಲ್ಲ.

Tuesday, July 20, 2010

ವಿಜಯಕರ್ನಾಟಕ ಹಿರಿಯ ಪತ್ರಿಕಾ ಛಾಯಾಗ್ರಾಹಕ ನಾಗೇಶ್ ಪಾಣತ್ತಲೆ ಅವರ ಛಾಯಾಚಿತ್ರಕ್ಕೆ ರಾಷ್ಟ್ರೀಯ ಪುರಸ್ಕಾರ ಲಭಿಸಿದೆ. ದಿಲ್ಲಿಯ ಪಿಎಸ್ಎ ಮತ್ತು ಐಐಪಿಸಿ ಸಹಯೋಗದಲ್ಲಿ ಸ್ಯಾಮ್ ಸರ್ಕ್ಯೂಟ್ ಆಯೋಜಿಸಿದ್ದ ರಾಷ್ಟ್ರಮಟ್ಟದ ಪರಿಸರ ಹಾಗೂ ವನ್ಯಜೀವಿ ವಿಭಾಗದಲ್ಲಿ ಈ ಪುರಸ್ಕಾರ ದೊರೆತಿದೆ. ಕಿಂಗ್ಫಿಶರ್ ಹಕ್ಕಿಯು ಮೀನಿನ ಬೇಟೆ ಮುಗಿಸಿರುವ ಛಾಯಾಚಿತ್ರಕ್ಕೆ ಒಂದು ಪದಕ ಹಾಗೂ ನಾಲ್ಕು ಸರ್ಟಿಫಿಕೇಟ್ಗಳು ನಾಗೇಶ್ ಅವರ ಛಾಯಾಚಿತ್ರಕ್ಕೆ ಬಂದಿದೆ. ಈ ಸ್ಪರ್ಧೆಯಲ್ಲಿ ದೇಶಾದ್ಯಂತ 600ಕ್ಕೂ ಹೆಚ್ಚು ಛಾಯಾಗ್ರಾಹಕರು ಪಾಲ್ಗೊಂಡಿದ್ದರು. ಇದೇ ಛಾಯಾಚಿತ್ರ ಅಲಹಾಬಾದ್, ನೈನಿತಾಲ್, ಭೂಸ್ವಾಲ್, ಜೋಧ್ಪುರ್, ಪಿಲಾಖುವಾದಲ್ಲೂ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲಿದೆ.

ಸಡಿಲವಾಗುತ್ತಿರುವ ಆಹಾರ-ಕೊಂಡಿ 'ಸಿರಿಧಾನ್ಯ'

ಜಾಗತೀಕರಣದ ಕರಿನೆರಳಿನಲ್ಲಿ ಕೃಷಿಯಲ್ಲಿ ಬದಲಾವಣೆಗಳಾಗುತ್ತಿವೆ. ರೈತನ ಜ್ಞಾನ ಕೃಷಿ ಕಂಪೆನಿಗಳ ಹಿಡಿತದಲ್ಲಿವೆ. ಹಸಿರುಕ್ರಾಂತಿ, ಜೀನ್ಕ್ರಾಂತಿಗಳು 'ಬೀಜ ಸ್ವಾತಂತ್ಯ'ವನ್ನು ಕಸಿದಿವೆ. ಪರಿಣಾಮ, ಮನೆಯಲ್ಲಿದ್ದ 'ಬೀಜದ ತಿಜೋರಿ' ಕಳೆದು ಹೋಗಿದೆ.

ಏನಿದು ಕಿರುಧಾನ್ಯ? ಚಿಕ್ಕ ಧಾನ್ಯದ ಬೆಳೆ. ಬಡವರ ಪಾಲಿಗದು 'ಸಿರಿಧಾನ್ಯ.' ರೈತರಿಗೆ ಆಹಾರ ಮತ್ತು ಮೇವಿನ ಬೆಳೆಯಾಗಿ ಪರಿಚಿತ. ಮಳೆಯಾಶ್ರಿತದಲ್ಲಿ ಬೆಳೆಯುತ್ತಾರೆ. ಬರಪೀಡಿತ ಪ್ರದೇಶಗಳಲ್ಲಿ ರೈತರಿಗೆ ಆಸರೆಯಾಗಿ, ಹಸಿದ ಹೊಟ್ಟೆಗಳನ್ನು ತಣಿಸಿವೆ. ಹಾಗಾಗಿ ಇದು 'ಬರಗಾಲದ ಮಿತ್ರ'. ಗಾತ್ರದಲ್ಲಿ ದೊಡ್ಡದು ಮತ್ತು ಸಣ್ಣದು ಎಂದು ಎರಡು ವಿಧವಾಗಿ ಇವುಗಳನ್ನು ವಿಂಗಡಿಸುತ್ತಾರೆ. ಜೋಳ ಮತ್ತು ಸಜ್ಜೆಗಳು ದೊಡ್ಡಧಾನ್ಯಗಳ ಸಾಲಿಗೆ ಸೇರಿದರೆ; ರಾಗಿ, ನವಣೆ, ಸಾಮೆ, ಹಾರಕ, ಊದಲು ಮತ್ತು ಬರಗು ಚಿಕ್ಕ ಧಾನ್ಯಗಳು.

ರಾಗಿ ಸರ್ವಕಾಲಕ್ಕೂ ಸಲ್ಲುವ ಸಿರಿಧಾನ್ಯ. ರಾಗಿ ಉತ್ಪಾದನೆಯಲ್ಲಿ ಕರ್ನಾಟಕದ ಸ್ಥಾನ ಹಿರಿದು. ದಕ್ಷಿಣ ಕರ್ನಾಟಕದಲ್ಲಿ ಮುಖ್ಯ ಆಹಾರ ಬೆಳೆ. 'ರಾಗಿ ಮುದ್ದೆ' ಇಲ್ಲಿನ ಪ್ರಿಯವಾದ ಆಹಾರ. 'ನವಣೆ' ಉತ್ತರ ಕರ್ನಾಟಕದ ಕೊಪ್ಪಳ ಭಾಗದಲ್ಲಿ ಪ್ರಮುಖ ಬೆಳೆ. ಬರಗಾಲವನ್ನು ಎದುರಿಸಿ ಬೆಳೆಯುವ ಧಾನ್ಯ 'ಸಾಮೆ'. ಹೊಳೆಯುವಂತೆ ನುಣುಪಾದ ಕಾಳುಗಳು. ಬೇರೆ ಕಾಳುಗಳ ಜೊತೆ ಬೆರೆತರೆ ವಿಂಗಡಿಸಲು ಕಷ್ಟ. ಹಾಗಾಗಿ ಇತರ ಬೆಳೆಗಳ ಜೊತೆ ಬೆಳೆಯದೆ ಏಕ ಬೆಳೆಯಾಗಿ ಬೆಳೆಯುತ್ತಾರೆ.

'ಹಾರಕ' 'ಬರಗಾಲದ ಮಿತ್ರ'. ಅಪರೂಪದ ಸಿರಿಧಾನ್ಯ. ಏಳು ಪದರಗಳುಳ್ಳ ದಪ್ಪದಾದ ಬೀಜದ ಹೊದಿಕೆ ಇದೆ ಎಂಬುದು ರೈತಾಭಿಪ್ರಾಯ. ಕಲ್ಲು ಮಿಶ್ರಿತ, ಪಾಳುಬಿಟ್ಟ, ಬಂಜರು ನೆಲ ಇದಕ್ಕೆ ಸೂಕ್ತ. 'ಬರಗು' ತೇವಾಂಶವನ್ನು ಬಳಸಿಕೊಂಡು ಬೇಗ ಬೆಳೆಯುವ ಗುಣ ಹೊಂದಿರುವ ಧಾನ್ಯ. ಇದರ ಹಳದಿ ಬಣ್ಣದ ಕಾಳುಗಳಿಗೆ ಚಿನ್ನದ ಹೊಳಪು.

ಕೊಂಬು, ಬಾಜ್ರ ಎಂಬ ಹೆಸರಿನಿಂದ ಕರೆಯಲ್ಪಡುವ ಕಿರುಧಾನ್ಯ 'ಸಜ್ಜೆ'. ಭಾರತದ ಆಹಾರ ಉತ್ಪಾದನೆಯಲ್ಲಿ ಭತ್ತ, ಜೋಳ ಮತ್ತು ಗೋಧಿಯ ನಂತರ ಸಜ್ಜೆಗೆ ಸ್ಥಾನ. ದಕ್ಷಿಣ ಕರ್ನಾಟಕದಲ್ಲಿ ಇದು ಮಿಶ್ರಬೆಳೆ. ಉತ್ತರ ಕರ್ನಾಟಕದಲ್ಲಿ ಮುಖ್ಯ ಆಹಾರ ಬೆಳೆ. ಸಜ್ಜೆಯಿಂದ ತಯಾರಿಸಿದ ರೊಟ್ಟಿ ಇಲ್ಲಿನವರ ಅಚ್ಚು ಮೆಚ್ಚಿನ ಆಹಾರ. ಜೋಳ ಉತ್ತರ ಕರ್ನಾಟಕ ಭಾಗದ ಮುಖ್ಯ ಆಹಾರ ಬೆಳೆ. ಈ ಭಾಗದ ಜನರಿಗೆ ಜೋಳದ ರೊಟ್ಟಿಯಿಲ್ಲದೆ ಊಟ ರುಚಿಸದು!

'ಕೊರಲೆ, ಕೊರ್ಲೆ' ಹುಲ್ಲಿನಂತೆ ಒತ್ತಾಗಿ ಮೊಳಕಾಳತ್ತೆರಕ್ಕೆ ಬೆಳೆಯುತ್ತದೆ. ಮಳೆಯಾಶ್ರಿತ ಭಾಗದ ಎಲ್ಲ ವಾತಾವರಣಕ್ಕೂ ಹೊಂದಿಕೊಳ್ಳುವ ಗುಣವಿದೆ. ತುಮಕೂರಿನ ಮಧುಗಿರಿ, ಕೊರಟಗೆರೆ ಭಾಗದಲ್ಲಿ ವಿರಳವಾಗಿ ಬೆಳೆಯುತ್ತಾರೆ. ಇದರ ರೊಟ್ಟಿಯನ್ನು ವಾರಗಟ್ಟಲೆ ಕಾಪಿಟ್ಟು ಬಳಸುತ್ತಾರೆ.

ಸಿರಿಧಾನ್ಯಗಳು ಹೇರಳ ಪೌಷ್ಠಿಕಾಂಶವನ್ನು ಹೊಂದಿವೆ. ಅಕ್ಕಿಗಿಂತ ಹೆಚ್ಚು ಸತ್ವಭರಿತ. 'ನ್ಯಾಯಬೆಲೆ ಅಂಗಡಿಗಳಲ್ಲಿ 2-3 ರೂಪಾಯಿಗೆ ಅಕ್ಕಿ ಸಿಗುತ್ತಿರುವಾಗ ಮೈಬಗ್ಗಿಸಿ ದುಡಿಯಲು ರೈತರಿಗೆ ಸೋಮಾರಿತನ. ಹಾಂಗಾಗಿ ಇವೆಲ್ಲಾ ಮೂಲೆ ಸೇರ್ತು' ಎನ್ನುತ್ತಾರೆ ಚಿನ್ನಿಕಟ್ಟೆಯ ಮೂಕಪ್ಪ ಪೂಜಾರ್.

ಕಿರುಧಾನ್ಯಗಳ ಸಂಸ್ಕರಣೆ ನಿಜಕ್ಕೂ ತಲೆನೋವು. ಹಿಂದೆಲ್ಲಾ ಸಂಸ್ಕರಣೆ ಮಾಡುವ ದೇಸೀ ಪದ್ದತಿಗಳು ಬದುಕಿಗಂಟಿತ್ತು. ಮನೆಗೆ ಬಂದ ಸೊಸೆಗೆ ಹಿಟ್ಟು ರುಬ್ಬುವುದೇ ದೊಡ್ಡ ಕೆಲಸ ಮತ್ತು ಕ್ಷಮತೆಯ ಪರೀಕ್ಷೆ! ಈಗಲೂ ಅನೇಕ ಹಳ್ಳಿಗಳಲ್ಲಿ ಕೈಯಿಂದಲೇ ಧಾನ್ಯಗಳ ಸಂಸ್ಕರಣೆ ಮಾಡುತ್ತಾರೆ. ರಾಗಿಯನ್ನು 'ರಾಗಿ ಕಲ್ಲಿನಿಂದ' ಪುಡಿ ಮಾಡಿ ಬಳಸಿದರೆ, ಸಾಮೆ ಮತ್ತು ನವಣೆಯನ್ನು ಒನಕೆಯಿಂದ ಕುಟ್ಟಿ ಅಕ್ಕಿ ಮಾಡುವ ಪಾರಂಪರಿಕ ವಿಧಾನ. ಎಲ್ಲಕ್ಕಿಂತ ತ್ರಾಸವಾದ ಕೆಲಸವೆಂದರೆ ಹಾರಕದ ಅಕ್ಕಿ ಮಾಡುವುದು!
ಕೊಪ್ಪಳ ಭಾಗದಲ್ಲಿ ಹಾರಕದ ಕಾಳಿಗೆ ಕೆಮ್ಮಣ್ಣು ಹಚ್ಚಿ ಒಂದು ದಿನ ಒಣಗಿಸಿದ ನಂತರ ಅದನ್ನು ಮಿಲ್ಗೆ ಹಾಕಿಸಿ ಅಕ್ಕಿ ಮಾಡುತ್ತಾರೆ.
ಪಾರಂಪರಿಕ ವಿಧಾನಗಳು ಆಧುನಿಕತೆಯ ಥಳಕುಗಳಿಂದ ಅಜ್ಞಾತವಾಗಿವೆ. ರಾಗಿಕಲ್ಲು ಮೂಲೆಸೇರಿವೆ, ಒನಕೆ 'ಅಟ್ಟ'ದಲ್ಲಿ ಭದ್ರವಾಗಿದೆ. ರೆಡಿಮೇಡ್ ಫುಡ್ಗಳು ಮೇಜನ್ನೇರಿವೆ. ಅಂಗಡಿಗೆ ಹೋದರೆ ಮಿರಿಮಿರಿ ಪ್ಯಾಕೆಟ್ನಲ್ಲಿ ರಾಗಿಹುಡಿಯೋ, ಜೋಳವೋ ಸಿಗುತ್ತಿರುವಾಗ ಬೆಳೆಯುವ ತ್ರಾಸ ಯಾರಿಗೆ ಬೇಕು - ಅಂತ ನಗರದತ್ತ ಮುಖಮಾಡುವ ಹೈದಂದಿರು! ಇದು ವಾಸ್ತವ ಚಿತ್ರ.
ಇನ್ನೂ ಕೆಲವು ಕಾರಣಗಳನ್ನು ಪಟ್ಟಿ ಮಾಡಬಹುದೇನೋ?
ವಾಣಿಜ್ಯ ಬೆಳೆಗಳು ಕಿರುಧಾನ್ಯ ಬೆಳೆ ಪ್ರದೇಶವನ್ನು ಆಕ್ರಮಿಸಿದೆ. ಬದಲಾದ ಕೃಷಿಯಿಂದ ಮಿಶ್ರಬೆಳೆಗಳಲ್ಲಿ ಇವುಗಳ ಬಳಕೆ ಕಡಿಮೆಯಾಗಿದೆ. ಮಾರುಕಟ್ಟೆ ಅಲಭ್ಯತೆ, ಆಹಾರವಾಗಿ ಉಪಯೋಗಿಸುವ ತಿಳುವಳಿಕೆ ಅಭಾವ. ಗ್ರಾಮೀಣ ಪ್ರದೇಶಗಳಲ್ಲಿ ಬದಲಾಗುತ್ತಿರುವ ಆಹಾರ ಪದ್ಧತಿ. ಕಿರುಧಾನ್ಯಗಳಲ್ಲಿರುವ ಪೌಷ್ಠಿಕಾಂಶದ ಬಗ್ಗೆ ಮಾಹಿತಿ ಇಲ್ಲದಿರುವುದು.. ಹೀಗೆ ಸಿರಿಧಾನ್ಯಗಳ ಹಿಂಬೀಳಿಕೆಗೆ 'ಬುದ್ದಿಪೂರ್ವಕ' ಕಾರಣಗಳು ಅಂಗೈಯಲ್ಲಿವೆ.
ಭತ್ತ, ಕೊಬ್ಬರಿ ಮಿಲ್ಲುಗಳಿದ್ದಂತೆ ಸಿರಿಧಾನ್ಯಗಳಿಗೂ ಪ್ರತ್ಯೇಕವಾದ ಮಿಲ್ಗಳ ಆವಿಷ್ಕಾರವಾಗಿ, ಸಿರಿಧಾನ್ಯಗಳನ್ನು ಬೆಳವ ಊರಲ್ಲಿ ಅವುಗಳು ಸ್ಥಾಪನೆಯಾದರೆ ಮತ್ತೆ ಮರಳಿ ಹೊಲ ಸೇರಿಯಾವು, ಊಟದ ಬಟ್ಟಲಿನಲ್ಲಿ ಸ್ಥಾನ ಪಡೆದಾವು. ಸಹಜ ಸಮೃದ್ಧ, ಡೆಕ್ಕನ್ ಡೆವಲಪ್ಮೆಂಟ್ ಸೊಸೈಟಿಗಳಂತಹ ಸ್ವಯಂಸೇವಾ ಸಂಸ್ಥೆಗಳು ಸಿರಿಧಾನ್ಯಗಳ ಉಳಿವಿಗೆ ಕೆಲಸ ಮಾಡುತ್ತಿರುವುದು ಸಮಾಧಾನಕರವಾದ ಸಂಗತಿ.

Sunday, July 11, 2010

ಹಹ ಸಿಪ್-ಅಪ್

ಐಸ್ ಕ್ಯಾಂಡಿಯಂತೆ ಚೀಪಿ ತಿನ್ನುವ್ ’ಸಿಪ್ - ಅಪ್' ಎಳೆಯರಿಗೆ ಚಿರಪರಿಚಿತ. ಫ್ರಿಜ್ ನಲ್ಲಿಟ್ಟು ಬಳಕೆ. ಹಲಸಿನ ಹಣ್ಣು (ಹಹ) ಮುಖ್ಯ ಒಳಸುರಿ. ನಾಲ್ಕು ಪಾಲು ಹಲಸಿನ ಹಣ್ಣಿಗೆ ಒಂದು ಭಾಗ ಅನಾನಸು ಮಿಶ್ರಣ. ಕೇರಳದ ಪತ್ತನಾಂತಿಟ್ಟದ ಕೆವಿಕೆಯಿಂದ ತರಬೇತಿ, ಪ್ರೇರಣೆ.

ಅಜಿತಾಮಣಿ ಎಂಬ ಹೆಣ್ಮಗಳ ಗೃಹೋದ್ದಿಮೆಯಿದು. ಸಣ್ಣ ಮಕ್ಕಳಿಂದ ಕಾಲೇಜು ವಿದ್ಯಾರ್ಥಿಗಳ ತನಕ ಗಿರಾಕಿ. ಐದು ಕಿಲೋಮೀಟರ್ ವ್ಯಾಪ್ತಿಯ ಪಂಚಾಯತ್ನಲ್ಲಿಡೀ ಪೂರೈಕೆ. ಬೇಸಿಗೆಯಲ್ಲಿ ದಿವಸಕ್ಕೆ ಒಂದು ಸಾವಿರ ಸಿಪ್ಅಪ್ ಬಿಕರಿ. ಬೆಲೆ ಒಂದೂವರೆ ರೂಪಾಯಿ. ಮಳೆಗಾಲದಲ್ಲೂ ದಿನಕ್ಕೆ ಇನ್ನೂರೈವತ್ತು ಸಿಪ್ಗೆ ಗಿರಾಕಿಗಳಿದ್ದಾರೆ.
(ಕೃಪೆ : ಅಡಿಕೆ ಪತ್ರಿಕೆ)

Friday, July 9, 2010

'ಕೆಸರುಮಡು' ಹಲಸು

ತುಮಕೂರಿನ 'ಕೆಸರುಮಡು' ಗ್ರಾಮದ ರಂಗಯ್ಯ ಅವರ ಹೊಲದಲ್ಲಿರುವ ನಲವತ್ತು ಸಂವತ್ಸರ ತುಂಬಿರುವ ಈ ಮರ ವರುಷಕ್ಕೆ ಒಂದೂವರೆ ಸಾವಿರ ಹಣ್ಣು ಕೊಡುತ್ತದೆ! ನಲವತ್ತು ವರುಷ ಪ್ರಾಯದ ಮರ. ಮೇ- ಆಗಸ್ಟ್ ತನಕ ಇಳುವರಿ. ದೊಡ್ಡ ಹಣ್ಣಿನಲ್ಲಿ 30-40 ತೊಳೆಗಳು. ಅತಿ ಸಣ್ಣದರಲ್ಲಿ 25-30. ಮೇಣ ಹೆಚ್ಚು. ದಪ್ಪ ತೊಳೆ. ಹಳದಿ ಬಣ್ಣ. ಸಿಹಿ ರುಚಿ. ಹಣ್ಣು ಕಿತ್ತ ಬಳಿಕ ಹದಿನೈದು ದಿನದ ತಾಳಿಕೆ. ಬಹುತೇಕ ಹಣ್ಣುಗಳು ಕ್ಯಾತಸಂದ್ರದಲ್ಲಿ ಬಿಕರಿ. ಮಿಕ್ಕುಳಿದವು ಬಟವಾಡಿ, ತುಮಕೂರಲ್ಲಿ ಮಾರಾಟ.
( ಚಿತ್ರ ಕ್ಲಿಕ್ಕಿಸುವಾಗಲೇ ಆರುನೂರು ಹಣ್ಣುಗಳು ಕಿತ್ತಾಗಿತ್ತು!)

Sunday, July 4, 2010

ಹಲಸಿಗೆ ರಾಜಕಿರೀಟ ತೊಡಿಸಿದ ವಯನಾಡುಜೂನ್ 19-20. ಕೇರಳದ ವಯನಾಡಿನ ಕಲ್ಪೆಟ್ಟಾದ ಜೈನ್ ಸ್ಕೂಲ್ ಪೂರ್ತಿ ಹಲಸಿನ ಪರಿಮಳ. ನಿರ್ಲಕ್ಷಿತ ಹಣ್ಣಿಗೆ ಉತ್ಸವದ ಥಳಕು. ಇದು ಕಳೆದೆರಡು ವರ್ಷಗಳ 22ನೇ ಹಲಸು ಮೇಳದ ಸಂಪನ್ನತೆ. 'ಉರವು' ಸಂಸ್ಥೆಯ ಸಾರಥ್ಯ.

ಹಲಸಿನ ಎಲೆಯಿಂದ ತಯಾರಿಸಿದ 'ಕಿರೀಟ'ಗಳನ್ನು ಧರಿಸಿದ ಮಕ್ಕಳ ಸಂಭ್ರಮ. ಹಲಸಿನ ಹಣ್ಣಿಗೆ ಅರಶಿನದ, ಹಿಂಗಾರ-ಹೂವಿನ ಅಲಂಕಾರ. ಉದ್ಘಾಟನೆ ಮಾಡುವ ಕೇರಳದ ಸಚಿವರು ಆಗಮಿಸುತ್ತಿದ್ದಂತೆ ಅವರಿಗೂ 'ಕಿರೀಟ'ದ ತೊಡಿಕೆ. ಹಲಸಿನ ಮೆರವಣಿಗೆ. ಸಾಂಕೇತಿಕ ಉದ್ಘಾಟನೆ. ಅಲ್ಲೇ ಹಿತನುಡಿ-ಆಶ್ವಾಸನೆ. ಢಾಂ-ಢೂಂ ಇಲ್ಲದ ಕಾರ್ಯಕ್ರಮ.

ಎರಡೂ ದಿವಸಗಳಲ್ಲಿ ಕೇವಲ ಒಂದು 'ಸಂವಾದ'. ಸಭಾಕಾರ್ಯಕ್ರಮಗಳಿಲ್ಲ. ಕರ್ಣಕೊರೆತವಿರಲಿಲ್ಲ. ಹಿರಿಯ ಪತ್ರಕರ್ತ 'ಶ್ರೀ' ಪಡ್ರೆಯವರ ಸಾರಥ್ಯದಲ್ಲಿ ಹಲಸಿನ ಮೌಲ್ಯವರ್ಧಿತ ಉತ್ಪನ್ನ ಮತ್ತು ಭವಿಷ್ಯದ ಸಾಧ್ಯತೆ ಕುರಿತಾದ ತಾಜಾ ಮಾಹಿತಿ ಮತ್ತು ಮಾತುಕತೆ. ಆಗಾಗ್ಗೆ ಸೂಚನೆಗಳನ್ನು ನೀಡುವ ನಿರ್ವಾಹಕ ಎಲ್ಲೋ ಅಜ್ಞಾತವಾಗಿದ್ದುಕೊಂಡು ಧ್ವನಿವರ್ಧಕದ ಮೂಲಕ ಕಾರ್ಯಕ್ರಮವನ್ನು ನಿಯಂತ್ರಿಸುತ್ತಿದ್ದ! ಎರಡೂ ದಿವಸಗಳಲ್ಲಿ ಕಲ್ಪೆಟ್ಟ ನಗರಾದ್ಯಂತ ಹಲಸು ಮೇಳದ ಉದ್ಘೋಷಣೆಯ ವ್ಯವಸ್ಥೆ ಮಾಡಿದ್ದರು.

ಉರವು ಸಂಸ್ಥೆಯು ನಾಲ್ಕು ವರುಷದ ಹಿಂದೆ ಹಲಸಿನ ಮೇಳವನ್ನು ಪ್ರಪ್ರಥಮವಾಗಿ ನಡೆಸಿತ್ತು. ನಂತರ ಕನ್ನಾಡಿನಾದ್ಯಂತ ವಿವಿಧ-ವೈವಿಧ್ಯ ಮೇಳಗಳನ್ನು ಕಂಡಿತ್ತು. ಬೆಂಗಳೂರಿನ ಕೃಷಿ ವಿಶ್ವವಿದ್ಯಾಲಯದ ಕದವನ್ನು ತಟ್ಟುವಷ್ಟು ಮೇಳಗಳು ಪರಿಣಾಮ ಬೀರಿದುವು.

ಮೇಳವೆಂದಾಗ ಒಂದಷ್ಟು ಫ್ಲೆಕ್ಸಿಗಳು, ಮೇಜಿನ ಮೇಲೆ ಮಗುಮ್ಮಾಗಿ ಕುಳಿತ ಹಲಸಿನ ಹಣ್ಣುಗಳು, ಗಿಡಗಳು. ಹೋಂಮೇಡ್ ಹಪ್ಪಳ-ಸೆಂಡಿಗೆಗಳು. ಕಲ್ಪೆಟ್ಟಾದ ಮೇಳ ಭಿನ್ನ. ಹಲಸಿಗೆ ಸಂಬಂಧಪಟ್ಟಂತೆ ಐವತ್ತರಷ್ಟು ಮಳಿಗೆಗಳು. ಎಲ್ಲವೂ 'ಲೈವ್'!
ಮಳಿಗೆಗಳ ಒಂದು ಪಾಶ್ರ್ವ ತಾಜಾ ಬಿಸಿಬಿಸಿ ತಿಂಡಿಗಳ ತಯಾರಿ ಮತ್ತು ಮಾರಾಟ. ನೈಯಪ್ಪಮ್, ಪಕ್ಕವಡ, ದೋಸೆ, ಪಪ್ಸ್.. ಗಳು ತಯಾರಾಗಿ ನೇರ ಪ್ಲೇಟಿಗೆ ಬೀಳುತ್ತಿದ್ದುವು. ಮಿತ ಬೆಲೆ. ಹೊಟ್ಟೆಗೂ ಇಳಿಸಿಕೊಂಡು, ಮನೆಗೂ ಕಟ್ಟಿಸಿಕೊಂಡು, ಮಳಿಗೆಯೆಲ್ಲಾ ಸುತ್ತಿ, ಬಸ್ಸನ್ನೇರುವ ನಗರದ ಅಪ್ಪಟ ಹಲಸು ಪ್ರಿಯರು ಮೇಳವನ್ನು ಮಿಸ್ ಮಾಡಿಕೊಂಡಿಲ್ಲ.

'ಫುಟ್ಬಾಲ್ ಸೀಸನ್ ಅಲ್ವಾ ಸಾರ್. ಹಾಗಾಗಿ ಅರ್ಧಕ್ಕರ್ಧ ಜನ ಟಿವಿ ಮುಂದೆಯೇ ಠಿಕಾಣಿ ಹೂಡಿದ್ದಾರೆ. ಬಹುಶಃ ನಾವೇ ಇಲ್ಲಿ ಟಿವಿ ಇಡುತ್ತಿದ್ದರೆ ಇನ್ನಷ್ಟು ಜನ ಬರುತ್ತಿದ್ದರೇನೋ' ಎಂದು ನಗೆಯಾಡುತ್ತಾರೆ ಸಂಘಟಕರಲ್ಲೊಬ್ಬರಾದ ಹರಿಹರನ್.

ಹಲಸಿನ ಬೇಳೆಯ, ಸೊಳೆಯ ವಿವಿಧ ಖಾದ್ಯಗಳು, ಉಪ್ಪಿನಕಾಯಿ, ವರಟ್ಟಿ, ಮಿಠಾಯಿ, ಜೆಲ್ಲಿ, ಜ್ಯಾಂ, ಸಿಪ್ಅಪ್, ಜ್ಯೂಸ್, ಕಟ್ಲೆಟ್, ಹಪ್ಪಳ, ಕ್ಯಾಂಡಿ.. ಎಲ್ಲವೂ ಹಲಸೇ. ಉರವು ಸಂಸ್ಥೆ ತರಬೇತಿ ನೀಡಿದ ಹೆಣ್ಮಕ್ಕಳದೇ ಕಾರುಬಾರು. ಪಾಳಿಯಂತೆ ಗೊಣಗಾಟವಿಲ್ಲದ ಮಳಿಗೆ ನಿರ್ವಹಣೆ. ಜಾಣ್ಮೆಯ ವ್ಯವಹಾರ. ಮೊದಲ ದಿನವೇ ಶೇ.50 ಉತ್ಪನ್ನಗಳ ಬಿಕರಿ.

ವಯನಾಡು ಜಿಲ್ಲೆಯಲ್ಲಿ ಶೇ.90ರಷ್ಟು ಹಲಸು ನಿರ್ಲಕ್ಷಿತ. ಬಹುತೇಕ ಅಂಬಲಿ (ತುಳುವ) ಹಲಸು. ಬಕ್ಕೆ ಹಲಸಿನ ಸೊಳೆ ತೆಗೆದು, ಪ್ಲಾಸ್ಟಿಕ್ನೊಳಗಿಟ್ಟು ಮಾರಾಟಕ್ಕಿಟ್ಟರೆ ಹತ್ತೋ ಹದಿನೈದೋ ರೂಪಾಯಿ ತೆತ್ತು ಕೊಳ್ಳುವವರಿದ್ದಾರೆ. ಪ್ಯಾಕ್ ಮಾಡಿದ ಒಂದೆರಡು ಗಂಟೆಯಲ್ಲೇ ಎಲ್ಲವೂ ಮಾರಾಟ! 'ಇಲ್ಲಿ ಹಲಸು ತಿನ್ನುವುದು ನಾಚಿಕೆ. ಪ್ರತಿಷ್ಠೆಯ ವಿಚಾರ. ಅದರ ಸಿಹಿ-ಖಾರ ತಿಂಡಿ ಮಾಡಿ ಕೈಗಿಡಿ. ಜನ ತಿನ್ನುತ್ತಾರೆ. ಮನೆಗೂ ಒಯ್ಯುತ್ತಾರೆ' - ವಾಸ್ತವದತ್ತ ಬೆರಳು ತೋರುತ್ತಾರೆ ಕೃಷಿಕ ಪ್ರಕಾಶ್.

ಐದು ರೂಪಾಯಿ ತೆತ್ತು ಒಂದು ಹಲಸಿನ ಹಣ್ಣನ್ನು ಕೊಳ್ಳಲು ಆಚೀಚೆ ನೋಡುವ ಮಂದಿ, ಮೇಳದಲ್ಲಿ ಐವತ್ತು ತೆತ್ತು ಹೊತ್ತೊಯ್ಯುವ ದೃಶ್ಯ ಮೇಳದ ಇಂಪ್ಯಾಕ್ಟ್. ಮಳಿಗೆಯೊಳಗೆ ಬಾಯಿ ಸ್ವಾದ ಮಾಡಿ ಹೊರಬಂದಾಗ ಹಣ್ಣು ಒಯ್ಯುವ ಹಂಬಲ.
'ಇವೆಲ್ಲಾ ಬಕ್ಕೆ ಜಾತಿಯವು. ಹುಡುಕಿ ತರಲು ತ್ರಾಸ ಬೇಕು. ಮೇಳಕ್ಕಾಗಿಯೇ ಬಕ್ಕೆ ಯನ್ನು ಆಯ್ದು ತಂದಿದ್ದೇವೆ' ಎನ್ನುತ್ತಾರೆ ಹಲವು ವ್ಯಾಪಾರಿಗಳಾದ ಸತೀಶ್ ಮತ್ತು ಪ್ರದೀಪ್.

ಕಲ್ಲಿಕೋಟೆ ಸನಿಹದ ತಾಮರಶ್ಶೇರಿಯ ಜೋಸ್ ಸೆಬಾಸ್ಟಿಯನ್ ಅವರ ಹಲಸಿನ ಹಣ್ಣಿನ ವೈನ್ ಮೇಳದ ಹೈಲೈಟ್! ವರುಷಕ್ಕೆ ಸಾವಿರ ಲೀಟರಿನಷ್ಟು ವೈನ್ ತಯಾರಿಸುತ್ತಾರೆ.

ಉರವು ನಾಲ್ಕು ವರುಷದ ಹಿಂದೆ ಹಲಸಿನ ಮೇಳ ಮಾಡಿದಾಗ ಹೇಳುವಂತಹ ಪ್ರತಿಕ್ರಿಯೆ ಇದ್ದಿರಲಿಲ್ಲ. ಹಲಸಿಗೂ ಮೇಳ ಯಾಕಪ್ಪಾ ಅಂತ ಗೇಲಿ ಮಾಡಿದವರೇ ಹೆಚ್ಚು. ಆದರೆ ಹಲಸಿನ ಮೌಲ್ಯವರ್ಧಿತ ಉತ್ಪನ್ನಗಳು ಜನರನ್ನು ಆಕರ್ಶಿಸಿತು. ಉರವು ಸಂಸ್ಥೆಯ ಹೆಣ್ಮಕ್ಕಳಿಗೆ ತರಬೇತಿ ನೀಡಿ ಇನ್ನಷ್ಟು ಉತ್ಪನ್ನಗಳನ್ನು ತಯಾರಿಸಿತು.

'ಇದರಿಂದಾಗಿ ಹೆಣ್ಮಕ್ಕಳೊಳಗೆ ತಾವೂ ಮನೆಯಲ್ಲಿ ಉತ್ಪನ್ನಗಳನ್ನು ತಯಾರಿಸಬೇಕು ಎಂಬ ಭಾವನೆ ಬಂದುಬಿಟ್ಟಿದೆ. ಅವರೊಳಗೆ ಪರಸ್ಪರ ಸಂಪರ್ಕ ಕೊಂಡಿ ಏರ್ಪಟ್ಟಿದೆ' ಎನ್ನುತ್ತಾರೆ ಉರವಿನ ಶಿವರಾಜ್. ಆರಂಭದ ಮೇಳಗಳಲ್ಲಿ ಉತ್ಪನ್ನಗಳಿಗೆ ಪ್ಯಾಕಿಂಗ್ ಇರಲಿಲ್ಲ. ಈ ವರುಷ ಆಕರ್ಷಕವಾದ ಪ್ಯಾಕಿಂಗ್. ಅದಕ್ಕೆ ವೃತ್ತಿಪರ ಟಚ್. ಇದು ಗಿರಾಕಿಗಳನ್ನು ಹೆಚ್ಚು ಆಕರ್ಷಿಸುತ್ತಿತ್ತು.
'ವಯನಾಡ್ ಟೂರಿಸಂ ಜಿಲ್ಲೆಯಾದರೆ ಹಲಸಿಗೆ ಮತ್ತು ಅದರ ಉತ್ಪನ್ನಗಳಿಗೆ ಚೆನ್ನಾದ ಅವಕಾಶವಿದೆ. ಕೊನೆ ಪಕ್ಷ ಪೇಟೆಯ ಜನ ಬಳಕೆದಾರರಾದರೆ ಸಾಕು' ಎಂಬ ಆಶಯ ವ್ಯಕ್ತಪಡಿಸುತ್ತಾರೆ ಬಾಬುರಾಜ್.

ಬರೋಬ್ಬರಿ ನಲವತ್ತೆರಡು ಕಿಲೋದ ಹಲಸಿನ ಹಣ್ಣು ಮೇಳದ ಕಿಂಗ್! ಕಲ್ಪೆಟ್ಟಾದ ಫೈಜಲ್ ಅವರ ತೋಟದ್ದು. ಕಳೆದ ಮೇಳದಲ್ಲಿ ಕಿಂಗ್ ಪಟ್ಟ ಲಭಿಸಿದ ಹಣ್ಣಿನ ತೂಕ 47.5 ಕಿಲೋ. ಈ ವರೆಗೆ ಗಿನ್ನಿಸ್ ದಾಖಲೆಗೆ ಸೇರಿದ ಜಗತ್ತಿನ ಗರಿಷ್ಠ ತೂಕದ ಹಲಸು 34.6ಕಿಲೋ. ಹವಾಯಿಯ ಕೆನ್ ಲವ್ ಅವರ ಪ್ರಯತ್ನ. ಒಂದಷ್ಟು ಪ್ರಯತ್ನಪಟ್ಟರೆ ವಯನಾಡಿನ ಹಣ್ಣೇಕೆ, ನಮ್ಮೂರಿನದ್ದೂ ಸೇರಬಹುದು. 'ನಮ್ಮೂರಿನ ದಾಖಲೆಯ ಹಿಂದಿಕ್ಕಿ' - ಕೆನ್ ಅವರ ಆಶಯ.

'ಹಲಸಿನ ಬಗ್ಗೆ ಜನರಲ್ಲಿ ಮಾನಸಿಕ ತಡೆ ಇದೆ. ಹಿರಿಯರಲ್ಲಿ ಈ ಕುರಿತು ಒಲವು ಇದ್ದರೂ, ಮಕ್ಕಳಲ್ಲಿ ಫಾಸ್ಟ್ಫುಡ್ ಮೋಹ ಹೆಚ್ಚಾಗಿ ಹಲಸಿನ ಸೊಳೆಗಳು ಮೇಜು ಸೇರುವುದೇ ಇಲ್ಲ' ಎನ್ನುತ್ತಾರೆ ಕೃಷಿಕ ರತ್ನಾಕರನ್.

ತಂತಮ್ಮಲ್ಲಿದ್ದ ಯಾವುದೇ ಹಣ್ಣುಗಳನ್ನು ತರುವಂತೆ ಜೈನ್ ಶಾಲೆಯ ವಿದ್ಯಾರ್ಥಿಗಳಿಗೆ ಸಂಘಟಕರು ಮನವಿ ಮಾಡಿದ್ದರು. ಸುಮಾರು ಅರುವತ್ತು ವಿಧಧ ಹಣ್ಣುಗಳ ಸಂಗ್ರಹವಾಗಿತ್ತು. ಅದರಲ್ಲಿ ಪ್ಯಾಶನ್ಫ್ರುಟ್ನದೇ ಸಿಂಹಪಾಲು. 'ವಯನಾಡಿನಲ್ಲಿ ಹಲಸಿನಂತೆ ಪ್ಯಾಶನ್ಫ್ರುಟ್ ಕೂಡಾ ಮೌಲ್ಯವರ್ಧನೆ ಮಾಡುವ ಆಲೋಚನೆಯಿದೆ' ಹೊಸ ಸುಳಿವನ್ನು ಬಿಚ್ಚಿದರು ಉರವಿನ ಸುನೀಶ್.
ಹಲಸಿನ ಬಗ್ಗೆ ಆಲೋಚಿಸುವ ಮನಸ್ಸುಗಳು ವಯನಾಡಿನಲ್ಲಿ ಒಂದೇ ಸೂರಿನಲ್ಲಿ ಸೇರುತ್ತಿವೆ. ಅದನ್ನು 'ರೆಡೆ ಟು ಸರ್ವ್' ಆಗಿಸುವ ಪ್ರಯತ್ನಗಳು ನಡೆಯುತ್ತಿವೆ. ಹಲಸನ್ನು 'ಟೇಬಲ್ ಫ್ರುಟ್' ಆಗಿ ಸ್ವೀಕರಿಸುವಂತಹ ಯೋಜನೆ-ಯೋಚನೆಗಳು ಉರವಿನ ಸ್ನೇಹಿತರಲ್ಲಿದೆ.

ಉರವಿನಲ್ಲಿ ಹುಟ್ಟಿದ ಹಲಸಿನ ಮೇಳದ ಕಲ್ಪನೆಯ ಬೀಜ ಈಗ ಮೊಳಕೆಯೊಡೆದಿದೆ. ಕನ್ನಾಡಿನಲ್ಲೂ ಬೇರೂರಿದೆ. ಮುಂದೆ ತಮಿಳುನಾಡಿನಲ್ಲೂ ಮೇಳ ನಡೆಯುವ ಸೂಚನೆ ಸಿಕ್ಕಿದೆ!