Tuesday, July 20, 2010

ಸಡಿಲವಾಗುತ್ತಿರುವ ಆಹಾರ-ಕೊಂಡಿ 'ಸಿರಿಧಾನ್ಯ'

ಜಾಗತೀಕರಣದ ಕರಿನೆರಳಿನಲ್ಲಿ ಕೃಷಿಯಲ್ಲಿ ಬದಲಾವಣೆಗಳಾಗುತ್ತಿವೆ. ರೈತನ ಜ್ಞಾನ ಕೃಷಿ ಕಂಪೆನಿಗಳ ಹಿಡಿತದಲ್ಲಿವೆ. ಹಸಿರುಕ್ರಾಂತಿ, ಜೀನ್ಕ್ರಾಂತಿಗಳು 'ಬೀಜ ಸ್ವಾತಂತ್ಯ'ವನ್ನು ಕಸಿದಿವೆ. ಪರಿಣಾಮ, ಮನೆಯಲ್ಲಿದ್ದ 'ಬೀಜದ ತಿಜೋರಿ' ಕಳೆದು ಹೋಗಿದೆ.

ಏನಿದು ಕಿರುಧಾನ್ಯ? ಚಿಕ್ಕ ಧಾನ್ಯದ ಬೆಳೆ. ಬಡವರ ಪಾಲಿಗದು 'ಸಿರಿಧಾನ್ಯ.' ರೈತರಿಗೆ ಆಹಾರ ಮತ್ತು ಮೇವಿನ ಬೆಳೆಯಾಗಿ ಪರಿಚಿತ. ಮಳೆಯಾಶ್ರಿತದಲ್ಲಿ ಬೆಳೆಯುತ್ತಾರೆ. ಬರಪೀಡಿತ ಪ್ರದೇಶಗಳಲ್ಲಿ ರೈತರಿಗೆ ಆಸರೆಯಾಗಿ, ಹಸಿದ ಹೊಟ್ಟೆಗಳನ್ನು ತಣಿಸಿವೆ. ಹಾಗಾಗಿ ಇದು 'ಬರಗಾಲದ ಮಿತ್ರ'. ಗಾತ್ರದಲ್ಲಿ ದೊಡ್ಡದು ಮತ್ತು ಸಣ್ಣದು ಎಂದು ಎರಡು ವಿಧವಾಗಿ ಇವುಗಳನ್ನು ವಿಂಗಡಿಸುತ್ತಾರೆ. ಜೋಳ ಮತ್ತು ಸಜ್ಜೆಗಳು ದೊಡ್ಡಧಾನ್ಯಗಳ ಸಾಲಿಗೆ ಸೇರಿದರೆ; ರಾಗಿ, ನವಣೆ, ಸಾಮೆ, ಹಾರಕ, ಊದಲು ಮತ್ತು ಬರಗು ಚಿಕ್ಕ ಧಾನ್ಯಗಳು.

ರಾಗಿ ಸರ್ವಕಾಲಕ್ಕೂ ಸಲ್ಲುವ ಸಿರಿಧಾನ್ಯ. ರಾಗಿ ಉತ್ಪಾದನೆಯಲ್ಲಿ ಕರ್ನಾಟಕದ ಸ್ಥಾನ ಹಿರಿದು. ದಕ್ಷಿಣ ಕರ್ನಾಟಕದಲ್ಲಿ ಮುಖ್ಯ ಆಹಾರ ಬೆಳೆ. 'ರಾಗಿ ಮುದ್ದೆ' ಇಲ್ಲಿನ ಪ್ರಿಯವಾದ ಆಹಾರ. 'ನವಣೆ' ಉತ್ತರ ಕರ್ನಾಟಕದ ಕೊಪ್ಪಳ ಭಾಗದಲ್ಲಿ ಪ್ರಮುಖ ಬೆಳೆ. ಬರಗಾಲವನ್ನು ಎದುರಿಸಿ ಬೆಳೆಯುವ ಧಾನ್ಯ 'ಸಾಮೆ'. ಹೊಳೆಯುವಂತೆ ನುಣುಪಾದ ಕಾಳುಗಳು. ಬೇರೆ ಕಾಳುಗಳ ಜೊತೆ ಬೆರೆತರೆ ವಿಂಗಡಿಸಲು ಕಷ್ಟ. ಹಾಗಾಗಿ ಇತರ ಬೆಳೆಗಳ ಜೊತೆ ಬೆಳೆಯದೆ ಏಕ ಬೆಳೆಯಾಗಿ ಬೆಳೆಯುತ್ತಾರೆ.

'ಹಾರಕ' 'ಬರಗಾಲದ ಮಿತ್ರ'. ಅಪರೂಪದ ಸಿರಿಧಾನ್ಯ. ಏಳು ಪದರಗಳುಳ್ಳ ದಪ್ಪದಾದ ಬೀಜದ ಹೊದಿಕೆ ಇದೆ ಎಂಬುದು ರೈತಾಭಿಪ್ರಾಯ. ಕಲ್ಲು ಮಿಶ್ರಿತ, ಪಾಳುಬಿಟ್ಟ, ಬಂಜರು ನೆಲ ಇದಕ್ಕೆ ಸೂಕ್ತ. 'ಬರಗು' ತೇವಾಂಶವನ್ನು ಬಳಸಿಕೊಂಡು ಬೇಗ ಬೆಳೆಯುವ ಗುಣ ಹೊಂದಿರುವ ಧಾನ್ಯ. ಇದರ ಹಳದಿ ಬಣ್ಣದ ಕಾಳುಗಳಿಗೆ ಚಿನ್ನದ ಹೊಳಪು.

ಕೊಂಬು, ಬಾಜ್ರ ಎಂಬ ಹೆಸರಿನಿಂದ ಕರೆಯಲ್ಪಡುವ ಕಿರುಧಾನ್ಯ 'ಸಜ್ಜೆ'. ಭಾರತದ ಆಹಾರ ಉತ್ಪಾದನೆಯಲ್ಲಿ ಭತ್ತ, ಜೋಳ ಮತ್ತು ಗೋಧಿಯ ನಂತರ ಸಜ್ಜೆಗೆ ಸ್ಥಾನ. ದಕ್ಷಿಣ ಕರ್ನಾಟಕದಲ್ಲಿ ಇದು ಮಿಶ್ರಬೆಳೆ. ಉತ್ತರ ಕರ್ನಾಟಕದಲ್ಲಿ ಮುಖ್ಯ ಆಹಾರ ಬೆಳೆ. ಸಜ್ಜೆಯಿಂದ ತಯಾರಿಸಿದ ರೊಟ್ಟಿ ಇಲ್ಲಿನವರ ಅಚ್ಚು ಮೆಚ್ಚಿನ ಆಹಾರ. ಜೋಳ ಉತ್ತರ ಕರ್ನಾಟಕ ಭಾಗದ ಮುಖ್ಯ ಆಹಾರ ಬೆಳೆ. ಈ ಭಾಗದ ಜನರಿಗೆ ಜೋಳದ ರೊಟ್ಟಿಯಿಲ್ಲದೆ ಊಟ ರುಚಿಸದು!

'ಕೊರಲೆ, ಕೊರ್ಲೆ' ಹುಲ್ಲಿನಂತೆ ಒತ್ತಾಗಿ ಮೊಳಕಾಳತ್ತೆರಕ್ಕೆ ಬೆಳೆಯುತ್ತದೆ. ಮಳೆಯಾಶ್ರಿತ ಭಾಗದ ಎಲ್ಲ ವಾತಾವರಣಕ್ಕೂ ಹೊಂದಿಕೊಳ್ಳುವ ಗುಣವಿದೆ. ತುಮಕೂರಿನ ಮಧುಗಿರಿ, ಕೊರಟಗೆರೆ ಭಾಗದಲ್ಲಿ ವಿರಳವಾಗಿ ಬೆಳೆಯುತ್ತಾರೆ. ಇದರ ರೊಟ್ಟಿಯನ್ನು ವಾರಗಟ್ಟಲೆ ಕಾಪಿಟ್ಟು ಬಳಸುತ್ತಾರೆ.

ಸಿರಿಧಾನ್ಯಗಳು ಹೇರಳ ಪೌಷ್ಠಿಕಾಂಶವನ್ನು ಹೊಂದಿವೆ. ಅಕ್ಕಿಗಿಂತ ಹೆಚ್ಚು ಸತ್ವಭರಿತ. 'ನ್ಯಾಯಬೆಲೆ ಅಂಗಡಿಗಳಲ್ಲಿ 2-3 ರೂಪಾಯಿಗೆ ಅಕ್ಕಿ ಸಿಗುತ್ತಿರುವಾಗ ಮೈಬಗ್ಗಿಸಿ ದುಡಿಯಲು ರೈತರಿಗೆ ಸೋಮಾರಿತನ. ಹಾಂಗಾಗಿ ಇವೆಲ್ಲಾ ಮೂಲೆ ಸೇರ್ತು' ಎನ್ನುತ್ತಾರೆ ಚಿನ್ನಿಕಟ್ಟೆಯ ಮೂಕಪ್ಪ ಪೂಜಾರ್.

ಕಿರುಧಾನ್ಯಗಳ ಸಂಸ್ಕರಣೆ ನಿಜಕ್ಕೂ ತಲೆನೋವು. ಹಿಂದೆಲ್ಲಾ ಸಂಸ್ಕರಣೆ ಮಾಡುವ ದೇಸೀ ಪದ್ದತಿಗಳು ಬದುಕಿಗಂಟಿತ್ತು. ಮನೆಗೆ ಬಂದ ಸೊಸೆಗೆ ಹಿಟ್ಟು ರುಬ್ಬುವುದೇ ದೊಡ್ಡ ಕೆಲಸ ಮತ್ತು ಕ್ಷಮತೆಯ ಪರೀಕ್ಷೆ! ಈಗಲೂ ಅನೇಕ ಹಳ್ಳಿಗಳಲ್ಲಿ ಕೈಯಿಂದಲೇ ಧಾನ್ಯಗಳ ಸಂಸ್ಕರಣೆ ಮಾಡುತ್ತಾರೆ. ರಾಗಿಯನ್ನು 'ರಾಗಿ ಕಲ್ಲಿನಿಂದ' ಪುಡಿ ಮಾಡಿ ಬಳಸಿದರೆ, ಸಾಮೆ ಮತ್ತು ನವಣೆಯನ್ನು ಒನಕೆಯಿಂದ ಕುಟ್ಟಿ ಅಕ್ಕಿ ಮಾಡುವ ಪಾರಂಪರಿಕ ವಿಧಾನ. ಎಲ್ಲಕ್ಕಿಂತ ತ್ರಾಸವಾದ ಕೆಲಸವೆಂದರೆ ಹಾರಕದ ಅಕ್ಕಿ ಮಾಡುವುದು!
ಕೊಪ್ಪಳ ಭಾಗದಲ್ಲಿ ಹಾರಕದ ಕಾಳಿಗೆ ಕೆಮ್ಮಣ್ಣು ಹಚ್ಚಿ ಒಂದು ದಿನ ಒಣಗಿಸಿದ ನಂತರ ಅದನ್ನು ಮಿಲ್ಗೆ ಹಾಕಿಸಿ ಅಕ್ಕಿ ಮಾಡುತ್ತಾರೆ.
ಪಾರಂಪರಿಕ ವಿಧಾನಗಳು ಆಧುನಿಕತೆಯ ಥಳಕುಗಳಿಂದ ಅಜ್ಞಾತವಾಗಿವೆ. ರಾಗಿಕಲ್ಲು ಮೂಲೆಸೇರಿವೆ, ಒನಕೆ 'ಅಟ್ಟ'ದಲ್ಲಿ ಭದ್ರವಾಗಿದೆ. ರೆಡಿಮೇಡ್ ಫುಡ್ಗಳು ಮೇಜನ್ನೇರಿವೆ. ಅಂಗಡಿಗೆ ಹೋದರೆ ಮಿರಿಮಿರಿ ಪ್ಯಾಕೆಟ್ನಲ್ಲಿ ರಾಗಿಹುಡಿಯೋ, ಜೋಳವೋ ಸಿಗುತ್ತಿರುವಾಗ ಬೆಳೆಯುವ ತ್ರಾಸ ಯಾರಿಗೆ ಬೇಕು - ಅಂತ ನಗರದತ್ತ ಮುಖಮಾಡುವ ಹೈದಂದಿರು! ಇದು ವಾಸ್ತವ ಚಿತ್ರ.
ಇನ್ನೂ ಕೆಲವು ಕಾರಣಗಳನ್ನು ಪಟ್ಟಿ ಮಾಡಬಹುದೇನೋ?
ವಾಣಿಜ್ಯ ಬೆಳೆಗಳು ಕಿರುಧಾನ್ಯ ಬೆಳೆ ಪ್ರದೇಶವನ್ನು ಆಕ್ರಮಿಸಿದೆ. ಬದಲಾದ ಕೃಷಿಯಿಂದ ಮಿಶ್ರಬೆಳೆಗಳಲ್ಲಿ ಇವುಗಳ ಬಳಕೆ ಕಡಿಮೆಯಾಗಿದೆ. ಮಾರುಕಟ್ಟೆ ಅಲಭ್ಯತೆ, ಆಹಾರವಾಗಿ ಉಪಯೋಗಿಸುವ ತಿಳುವಳಿಕೆ ಅಭಾವ. ಗ್ರಾಮೀಣ ಪ್ರದೇಶಗಳಲ್ಲಿ ಬದಲಾಗುತ್ತಿರುವ ಆಹಾರ ಪದ್ಧತಿ. ಕಿರುಧಾನ್ಯಗಳಲ್ಲಿರುವ ಪೌಷ್ಠಿಕಾಂಶದ ಬಗ್ಗೆ ಮಾಹಿತಿ ಇಲ್ಲದಿರುವುದು.. ಹೀಗೆ ಸಿರಿಧಾನ್ಯಗಳ ಹಿಂಬೀಳಿಕೆಗೆ 'ಬುದ್ದಿಪೂರ್ವಕ' ಕಾರಣಗಳು ಅಂಗೈಯಲ್ಲಿವೆ.
ಭತ್ತ, ಕೊಬ್ಬರಿ ಮಿಲ್ಲುಗಳಿದ್ದಂತೆ ಸಿರಿಧಾನ್ಯಗಳಿಗೂ ಪ್ರತ್ಯೇಕವಾದ ಮಿಲ್ಗಳ ಆವಿಷ್ಕಾರವಾಗಿ, ಸಿರಿಧಾನ್ಯಗಳನ್ನು ಬೆಳವ ಊರಲ್ಲಿ ಅವುಗಳು ಸ್ಥಾಪನೆಯಾದರೆ ಮತ್ತೆ ಮರಳಿ ಹೊಲ ಸೇರಿಯಾವು, ಊಟದ ಬಟ್ಟಲಿನಲ್ಲಿ ಸ್ಥಾನ ಪಡೆದಾವು. ಸಹಜ ಸಮೃದ್ಧ, ಡೆಕ್ಕನ್ ಡೆವಲಪ್ಮೆಂಟ್ ಸೊಸೈಟಿಗಳಂತಹ ಸ್ವಯಂಸೇವಾ ಸಂಸ್ಥೆಗಳು ಸಿರಿಧಾನ್ಯಗಳ ಉಳಿವಿಗೆ ಕೆಲಸ ಮಾಡುತ್ತಿರುವುದು ಸಮಾಧಾನಕರವಾದ ಸಂಗತಿ.

0 comments:

Post a Comment