Monday, July 26, 2010

ಸಸ್ಯ ವಿಜ್ಞಾನಿ ಡಾ.ಪಳ್ಳತಡ್ಕ ಕೇಶವ ಭಟ್ ನಿಧನ

ಅಂತಾರಾಷ್ಟ್ರೀಯ ಸಸ್ಯವಿಜ್ಞಾನಿ ಡಾ.ಪಳ್ಳತಡ್ಕ ಕೇಶವ ಭಟ್ (71) ಅವರು ಅಮೇರಿಕಾದ ಶಾಂಪೆರ್ ನ ತಮ್ಮ ಪುತ್ರಿಯ ಮನೆಯಲ್ಲಿ ನಿನ್ನೆ ಸಂಜೆ (ಜು.25) ನಿಧನರಾದರು.

ಅಮೇರಿಕಾದ ವೆನಿಜುವೆಲ್ಲಾ ವಿಶ್ವವಿದ್ಯಾಲಯದಲ್ಲಿ ಸುದೀರ್ಘ ಕಾಲ ಸಸ್ಯವಿಜ್ಞಾನಿಯಗಿದ್ದ ಅವರು ಪ್ರಕೃತ ವಿಶ್ರಾಂತಿ ಜೀವನದಲ್ಲಿದ್ದರು. ಭಾರತದ ವಿವಿಧ ವಿಶ್ವವಿದ್ಯಾಲಯದಲ್ಲಿ ಸಂದರ್ಶನ ಪ್ರಾಧ್ಯಾಪಕರಾಗಿದ್ದ ಭಟ್, ಸಸ್ಯಶಾಸ್ತ್ರದ ವಿವಿಧ ಆಯಾಮಗಳ ಕುರಿತು ಸಂಶೋಧನೆ ಮತ್ತು ಅಧ್ಯಯನ ಕೈಗೊಂಡಿದ್ದರು. ರಾಷ್ಟ್ರೀಯ ವಿಚಾರಗೋಷ್ಠಿ, ಕಮ್ಮಟಗಳಲ್ಲಿ ಭಾಗವಹಿಸಿದ್ದರು. ಜಾಗತಿಕ ಮಟ್ಟದ ವಿಜ್ಞಾನ ಕೂಟದಲ್ಲಿ ಹಲವು ಬಾರಿ ಭಾರತವನ್ನು ಪ್ರತಿನಿಧಿಸಿದ್ದರು. ಡಾ.ಭಟ್ ಪ್ರಕೃತಿ ಚಿಕಿತ್ಸೆಯ ಬಗ್ಗೆ ಸಂಶೋಧನೆ ನಡೆಸಿದ್ದರು.

ತತ್ವಶಾಸ್ತ್ರ ಮತ್ತು ಇತಿಹಾಸದ ಬಗ್ಗೆ ಅಪಾರ ಜ್ಞಾನವಿತ್ತು. ವೆನಿಜುವೆಲ್ಲಾ, ಪೆರು, ಕೊಲಂಬಿಯಾ, ಬ್ರೆಝಿಲ್, ಮೆಕ್ಸಿಕೋ, ಬೊಲಿವಿಯಾ, ಯುನೈಟೆಡ್ ಸ್ಟೇಟ್ಸ್, ಕೆನಡಾ, ಫ್ರಾನ್ಸ್, ಇಟಲಿ.. ಮೊದಲಾದ ದೇಶಗಳಲ್ಲಿ ಅವರು ಉಪನ್ಯಾಸ ನೀಡಿದ್ದರು. ರೋಮ್, ಇಟೆಲಿ, ಬ್ರೆಝಿಲ್ ಗಳಲ್ಲಿ ನಡೆದ ವಿಚಾರ ಸಂಕಿರಣಗಳಲ್ಲಿ ವೈದ್ಯಕೀಯ ಸಸ್ಯದ ಕುರಿತು ವಿಶೇಷ ಅಧ್ಯಯನ ಕೈಗೊಂಡಿದ್ದರು.

1940ರಲ್ಲಿ ಜನಿಸಿದ ಡಾ.ಪಳ್ಳತಡ್ಕ ಕೇಶವ ಭಟ್ ಮದ್ರಾಸ್ ವಿವಿಯಿಂದ 1959ರಲ್ಲಿ ಬಿಎಸ್ಸಿ ಪದವಿ, 1961ರಲ್ಲಿ ಎಂಎಸ್ಸಿ ಪದವಿ, 1966ರಲ್ಲಿ ಸಸ್ಯಶಾಸ್ತ್ರದಲ್ಲಿ ಪಿಎಚ್.ಡಿ.ಪದವಿ ಪಡೆದಿದ್ದರು. ಪಳ್ಳತಡ್ಕದ ದಿ.ಸುಬ್ರಾಯ ಭಟ್-ಲಕ್ಷ್ಮೀ ದಂಪತಿಗಳ ಪುತ್ರ ಡಾ.ಭಟ್ ಅವರು ಪಳ್ಳತ್ತಡ್ಕ ಎಯುಪಿ ಶಾಲೆಯ ಸ್ಥಾಪಕರಲ್ಲೊಬ್ಬರು. ಕಾಸರಗೋಡಿನ ಸಾಮಜಿಕ, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದರು.

ಅಗಲಿದ ಹಿರಿಯ ಚೇತನಕ್ಕೆ ನುಡಿನಮನ.

(ಚಿತ್ರ : ಜಾಲತಾಣದಿಂದ)

1 comments:

ಸುಬ್ರಹ್ಮಣ್ಯ ಭಟ್ said...

ಪಳ್ಳತ್ತಡ್ಕ ಎಯುಪಿ ಶಾಲೆಯ ಸ್ಥಾಪಕರು "ಮುದ್ದು ಮಾಷ್ಟ್ರು " ಎಂದೇ ಪ್ರಖ್ಯಾತರಾದ ಪಳ್ಳತ್ತಡ್ಕ ಸುಬ್ರಾಯ ಭಟ್ ಅಂದರೆ ಪಳ್ಳತ್ತಡ್ಕ ಕೇಶವ ಭಟ್ಟರ ತೀರ್ಥರೂಪರು. ಪಳ್ಳತ್ತಡ್ಕ ಕೇಶವ ಭಟ್ಟರ ಪ್ರಾಥಮಿಕ ವಿದ್ಯಾಭ್ಯಾಸ ಪಳ್ಳತ್ತಡ್ಕದಲ್ಲೂ , ಹೈಸ್ಕೂಲ್ ಜೀವನ ನವಜೀವನ ಹೈಸ್ಕೊಲ್ ಪೆರಡಾಳದಲ್ಲೂ ನಡೆಯಿತು.
ಅಸಾಮಾನ್ಯ ಪ್ರತಿಭಾವನ್ತರೊಬ್ಬರ ಅಗಲುವಿಕೆ ನಿಜವಾಗಿಯೂ ತುಂಬಲಾರದ ನಷ್ಟ

Post a Comment