Monday, August 2, 2010

ಸಾತ್ವಿಕ ಆಹಾರದ ಸಮರ್ಥ ಪ್ರತಿಪಾದಕ

'ಇಂದು ಯಾವುದೇ ಆಸ್ಪತ್ರೆಯಲ್ಲಿ ನೋಡಿ. ಚಿಕಿತ್ಸೆಗಾಗಿ ಬರುವ ರೋಗಿಗಳಲ್ಲಿ ಶೇ.80ರಷ್ಟು ಮಂದಿ ಮಲಬದ್ಧತೆ ಸಮಸ್ಯೆಗೆ ಒಳಪಟ್ಟವರು. ಕಾರಣ, ನಮ್ಮ ಆಹಾರ ಪದ್ಧತಿ. ಮೈದಾ ಬಳಸಿದ ತಿಂಡಿಗಳು, ಪಾಲಿಶ್ ಮಾಡಿದ ಅಕ್ಕಿಯ ಬಳಕೆ, ನೀರನ್ನು ಸಾಕಷ್ಟು ಪ್ರಮಾಣದಲ್ಲಿ ಸೇವಿಸದಿರುವುದು, ವ್ಯಾಯಾಮ ಮತ್ತು ವಿಶ್ರಾಂತಿಗಳಲ್ಲಿ ಸಮತೋಲವಿಲ್ಲದಿರುವುದೇ ಇದಕ್ಕೆ ಕಾರಣ' - ಹೀಗೆ ಹಲವು ವೇದಿಕೆಗಳಿಂದ ಪ್ರತಿಪಾದಿಸುತ್ತಿದ್ದವರು ಡಾ.ಪಳ್ಳತ್ತಡ್ಕ ಕೇಶವ ಭಟ್ಟರು.

'ಶಾಲೆಗಳಲ್ಲಿ ಎಳೆಯ ಮಕ್ಕಳು ಬಾಲ್ಯದಲ್ಲೇ ಮಲ-ಮೂತ್ರಗಳನ್ನು ತಡೆಹಿಡಿದುಕೊಳ್ಳುವಂತಹ ವಾತಾವರಣವಿದೆ. ಮಂದೆ ಇಂತಹ ಮಕ್ಕಳು ಮಲಬದ್ಧತೆಯ ಸಮಸ್ಯೆಗೆ ಒಳಗಾಗುವುದಂತೂ ಖಂಡಿತ. ಹಾಗಾಗಿ ಶಾಲೆಗಳಲ್ಲಿ ವ್ಯವಸ್ಥೆ ಬದಲಾಗಬೇಕು' - ವರುಷದ ಹಿಂದೆ ಪುತ್ತೂರಿನ 'ಸಮೃದ್ಧಿ' ಬಳಗವು ಆಯೋಜಿಸಿದ ಸಭೆಯಲ್ಲಿ ಡಾ.ಭಟ್ ಹೇಳಿದ ನೆನಪು. ಇವರು ಮಾತನಾಡುವ ಪ್ರತೀ ವಿಷಯದಲ್ಲೂ ಭವಿಷ್ಯದ ಎಚ್ಚರಿಕೆಯ ಗಂಟೆ.

ಡಾ. ಕೇಶವ ಭಟ್ ಈಗ ವಿಧಿವಶ. (ಭಾರತದವರಾಗಿದ್ದು, ತನ್ನ ಬಹುತೇಕ ಜೀವಿತವನ್ನು ಕಡಲಾಚೆ ಕಳೆದ ಇವರ ಮರಣವೂ (೨೫-೭-೨೦೧೦) ಕಡಲಾಚೆಯೇ ಆಗಿಹೋಯಿತು! ಮರಣದ ಹೊತ್ತಿಗೆ ಅವರಿಗೆ 71 ವಯಸ್ಸು. ಇವರು ಸಸ್ಯವಿಜ್ಞಾನಿ. ರಾಷ್ಟ್ರದಾಚೆಗೂ ತನ್ನ ವಿಚಾರಗಳಿಂದ ಜನಮನದಲ್ಲಿ ಚಿಂತನೆಯ ಬೀಜ ಬಿತ್ತಿದವರು. ಭೂಗೋಳ, ಖಗೋಳ, ವೈದ್ಯಕೀಯ.. ಹೀಗೆ ಯಾವುದೇ ಕ್ಷೇತ್ರದ ಬಗ್ಗೆ ಅಧ್ಯಯನಾಧಾರಿತವಾಗಿ ಮಾತನಾಡುವುದರಿಂದಲೇ ಕೇಶವ ಭಟ್ಟರ ವಿಚಾರಗಳಿಗೂ 'ಮಾನ' ಬಂದಿದೆ. ಡಾ.ಭಟ್ ಮೂವತ್ತೈದು ಬಾರಿ ವಿಶ್ವಪರ್ಯಟನೆ ಮಾಡಿದ್ದಾರೆ. ಎಂಭತ್ತೈದು ದೇಶಗಳನ್ನು ಸುತ್ತಿದ್ದಾರೆ. ಹದಿನೇಳು ಭಾಷೆಗಳಲ್ಲಿ ಪ್ರಾವಿಣ್ಯತೆ. ಸ್ವಾಧ್ಯಾಯ, ಸ್ವಾನುಭವ ಮತ್ತು ಸಾಧನೆ - ಯಶಸ್ವೀ ಬದುಕಿನ ಗುಟ್ಟು.

ಮೂಲತಃ ಕಾಸರಗೋಡು ಜಿಲ್ಲೆಯ ಬದಿಯಡ್ಕ ಸನಿಹದ ಪಳ್ಳತಡ್ಕದವರು. ಪೆರಡಾಲದ ನವಜೀವನ ಪ್ರೌಢಶಾಲೆಯಲ್ಲಿ ಕಲಿಕೆ. ಉಡುಪಿ ಎಂ.ಜಿ.ಎಂ.ಕಾಲೇಜಿನಲ್ಲಿ ಮುಂದಿನ ವಿದ್ಯಾಭ್ಯಾಸ; ಮದರಾಸಿನಲ್ಲಿ ಬಿಎಸ್ಸಿ, ಎಂಎಸ್ಸಿ, ಪಿಎಚ್ಡಿ ತನಕದ ಉನ್ನತ ವ್ಯಾಸಂಗ. ಒರಿಯಂತೆ ವಿಶ್ವವಿದ್ಯಾಲಯದಲ್ಲಿ ಸುಮಾರು ಎರಡು ದಶಕ ಪ್ರಾಧ್ಯಾಪಕರಾಗಿ ಸೇವೆ. ನಿವೃತ್ತಿಯ ಬಳಿಕ ಸಸ್ಯಶಾಸ್ತ್ರ ಸಂಶೋಧನೆ. ವೆನಿಜುವೆಲಾ ಸರಕಾರವು ಒಂದುಸಾವಿರ ಹೆಕ್ಟೇರಿಗೂ ಮಿಕ್ಕಿದ ಕಾಡನ್ನು ಭಟ್ಟರಿಗೆ ಸಂಶೋಧನೆಗಾಗಿ ನೀಡಿತ್ತು.
'ಸರಳ ಚಿಕಿತ್ಸೆಯಿಂದ ಸಮಗ್ರ ಚಿಂತನದೆಡೆಗೆ' - ಕನ್ನಡದಲ್ಲಿ ಬೆಳಕು ಕಂಡ ಜನಪ್ರಿಯ ಕೃತಿ. ಸಸ್ಯಗಳ ಪರಿಚಯ, ಅವುಗಳ ಬಳಕೆ, ಬೆಳೆವ ಕ್ರಮ, ಅದಕ್ಕೆ ಸಂಬಂಧಿಸಿದ ಸಿದ್ಧಾಂತಗಳು, ಆಹಾರ ಕ್ರಮಗಳ ಕುರಿತಾಗಿ ಸ್ಪಾನಿಷ್ ಭಾಷೆಯಲ್ಲಿ ಹಲವು ಪುಸ್ತಕಗಳು ಪ್ರಕಟವಾಗಿದ್ದು, ಅವುಗಳು ಆಂಗ್ಲ, ಫ್ರೆಂಚ್ ಭಾಷೆಗಳಿಗೆ ತರ್ಜುಮೆಗೊಂಡಿವೆ. ಕಾಂತಾವರ ಕನ್ನಡ ಸಂಘವು ಭಟ್ಟರ ಪರಿಚಯ ಪುಸ್ತಿಕೆಯೊಂದನ್ನು ಪ್ರಕಟಿಸದೆ.

ವೈಜ್ಞಾನಿಕ ದೃಷ್ಟಿಕೋನ

'ಭೂಮಿ ಗೋಳಾಕಾರವಾಗಿಲ್ಲ. ಆಧುನಿಕ ವೈದ್ಯ ಪದ್ದತಿಯಲ್ಲಿರುವ ರಕ್ತಪರೀಕ್ಷೆ ಅಸಂಗತ ಮತ್ತು ಅನಗತ್ಯ, ವಿಜ್ಞಾನದ ಅವೈಜ್ಞಾನಿಕ ಪ್ರತಿಪಾದನೆ, ನ್ಯೂಟನ್ನನ ಸಿದ್ಧಾಂತ.. ಹೀಗೆ' - ಭಟ್ಟರ ವಿಚಾರಗಳು, ಬೇರೆ ಬೇರೆ ಆಕರಗಳು, ವ್ಯವಸ್ಥೆಗಳು ನೀಡಿದ ಸ್ಥಾಪಿತ ಸತ್ಯಗಳನ್ನು ಅಣಕಿಸುತ್ತಿವೆ!

ಹೃದಯಾಘಾತ ಹೇಗೆ ಉಂಟಾಗುತ್ತದೆ ಎಂಬುದರ ಕುರಿತು ಒಂದೆಡೆ ಹೀಗೆ ಹೇಳುತ್ತಾರೆ - 'ಮಾನವನ ಶರೀರದಲ್ಲಿ ಶೇ.10 ಸೂಕ್ಷ್ಮಾಣು ಜೀವಿಗಳು; ಶೇ.20 ಎಲುಬು, ಮಾಂಸ, ಕಣಭಿತ್ತಿಗಳಂತಹ ಘನವಸ್ತುಗಳು, ಶೇ.70 ದ್ರವ. ಇದರಲ್ಲಿ ಶೇ.10 ರಕ್ತ. ಉಳಿದ ಶೇ.90 ರಸಸಾಗರ. ಮಾನವನ ಮಿದುಳು ಶರೀರದ ಶೇ.19 ಶಕ್ತಿಯನ್ನು ಬಳಸಿಕೊಳ್ಳುತ್ತದೆ. ಆದರೆ ಮಿದುಳಿನ ಜೀವಕಣಗಳಿಗೆ ರಕ್ತದ ಸಂಪರ್ಕವಿಲ್ಲ. ಅನ್ನನಾಳದ ಒಳಪದರ, ಕಣ್ಣಿಗೆ ತೇವಭರಿತ ಹೊರಪದರ, ಅಂತೆಯೇ ಇತರ ಅಂಗಗಳಲ್ಲಿಯೂ ಇರುವ ಜೀವಕಣಗಳಿಗೂ ರಕ್ತ ಸಂಪರ್ಕವಿಲ್ಲ. ಇವುಗಳೆಲ್ಲಾ ರಸಸಾಗರದಲ್ಲಿ ಮುಳುಗಿರುವುದು ಗಮನಾರ್ಹ.'

'ಅಪಧಮನಿ, ಅಭಿಧಮನಿ ಹಾಗೂ ಹೃದಯದ ರಕ್ತದಲ್ಲಿ ಪೋಷಕಾಂಶಗಳು ಕಂಡುಬಂದಿಲ್ಲ, ಬದಲಾಗಿ ಕಶ್ಮಲವೇ ತುಂಬಿದೆ! ರಕ್ತದ ಚಲನೆಯನ್ನು ಗಮನಿಸಿದರೆ ಹೃದಯದಿಂದ ಹೊರಟ ಕಶ್ಮಲಯುಕ್ತ ರಕ್ತ ಅಪಧಮನಿಗಳ ಮೂಲಕ ಯಕೃತ್, ಮೂತ್ರಜನಕಾಂಗಗಳು, ಚರ್ಮ, ಶ್ವಾಶಕೋಶಗಳು ಮತ್ತು ಪ್ಲೀಹ ಇವುಗಳಲ್ಲಿ ಕಶ್ಮಲಗಳನ್ನು ಬಿಟ್ಟುಕೊಡುತ್ತದೆ. ಇನ್ನೂ ಹೆಚ್ಚು ಕೊಳೆಗಳಿದ್ದರೆ ರಕ್ತದ ಒತ್ತಡ ಹೆಚ್ಚಾಗುತ್ತದೆ. ಅಲ್ಲದೆ ರಕ್ತನಾಳದ ಒಳಮೈಯಲ್ಲಿ ಕೊಳೆ ಸಂಗ್ರಹವಾಗಿ ರಕ್ತದ ಚಲನೆಗೆ ತಡೆಯಾಗಬಹುದು. ಕಶ್ಮಲರಹಿತ ರಕ್ತ ಮತ್ತೆ ಬಳಕೆಯಾಗಬಹುದಾದ ಭಾಗ ಅಭಿಧಮನಿಯ ಮೂಲಕ ಹೃದಯದೆಡೆಗೆ ಹರಿಯುವುದು. ರಕ್ತನಾಳಗಳು ಒಡೆದೆ ಮಾತ್ರ ಜೀವಕಣಗಳಿಗೆ ರಕ್ತದ ಸಂಪರ್ಕ ಏರ್ಪಡುತ್ತದೆ. ಇದರಿಂದ ಹೃದಯಾಘಾತಗಳು ಸಂಭವಿಸುತ್ತದೆ'. ಇಂತಹ ವೈದ್ಯ ವಿಜ್ಞಾನಕ್ಕೆ ಸವಾಲಾಗುವಂತಹ ವಿಚಾರಗಳನ್ನು ನಿರ್ಭೀತಿಯಿಂದ ಹೇಳುವುದರಲ್ಲಿ ಅವರಿಗೆ ಅಳುಕಿರಲಿಲ್ಲ.

'ವೈದ್ಯ ವಿಜ್ಞಾನದ ದಾರಿಯನ್ನೇ ಬಹುತೇಕರು ಒಪ್ಪಿರುವುದರಿಂದ ಇಂತಹ ವಿಚಾರಗಳು ವಿವಾದಕ್ಕೆ ಎಡೆಯಾಗುವುದಿಲ್ಲವೇ' ಒಮ್ಮೆ ಔಪಚಾರಿಕವಾಗಿ ಪ್ರಶ್ನಿಸಿದ್ದೆ. 'ನಾನು ಸಂಶೋಧನೆಗಳಿಂದ ಕಂಡುಕೊಂಡ ಸತ್ಯವನ್ನು ಸಮಾಜದ ಮುಂದೆ ಹೇಳುವುದರಲ್ಲಿ ಅಳುಕೇಕೆ' ಎಂದು ಮರುಪ್ರಶ್ನೆ ಹಾಕಿದ್ದು ನೆನಪಾಗುತ್ತದೆ.

ನಮ್ಮ ಪರಿಸರ ಮತ್ತು ಶಿಕ್ಷಣದ ಕುರಿತು ಒಂದೆಡೆ ಭಟ್ ಬರೆಯುತ್ತಾರೆ - 'ಮಾಧ್ಯಮಗಳ ಪ್ರಚಾರ ವೈಖರಿಯಿಂದ ಇಂದಿನ ಸಮಾಜ ಯಂತ್ರತಂತ್ರಗಳ ದಾಸನಾಗಿ ಉಳಿದಿದೆ. ಕೈಗಾರಿಕಾ ಮುನ್ನಡೆಯಿಂದ ಪರಿಸರ ಮಾಲಿನ್ಯ ಪರಮಾವಧಿಗೆ ತಲುಪಿದೆ. ರಾಸಾಯಿನಿಕ ತ್ಯಾಜ್ಯಗಳನ್ನು ಸಾಗರದ ಆಳಕ್ಕೆ ಇಳಿಸುತ್ತೇವೆ. ವಾತಾವರಣ, ಜಲಾವರಣ, ಶಿಲಾವರಣಗಳಲ್ಲಿ ಎರಚಿದ ತ್ಯಾಜ್ಯಗಳು ಸಾಗರ ಗರ್ಭದಲ್ಲಿ ಸೇರಿ ಧ್ರುವಗಳತ್ತ ಹರಿದಿವೆ. ಇದರಿಂದಾಗಿ ಹಿಮಗೆಡ್ಡೆಗಳ ತಳ ಕರಗುತ್ತಿದೆ. ಪರಿಸರ ಮಾಲಿನ್ಯವು ಮಾನವನನ್ನು ವಿನಾಶದತ್ತ ಎಳೆದೊಯ್ಯುವಂತಿದೆ.'

ಆಹಾರ ಕ್ರಮದಲ್ಲಿ ಬದಲಾವಣೆ

ಡಾ.ಭಟ್ ವಿಚಾರ ಸಂಕಿರಣಗಳ ಮೂಲಕ, ಕಾರ್ಯಾಗಾರಗಳ ಮೂಲಕ ಆರೋಗ್ಯ ಸಂರಕ್ಷಣೆಯ ಕಾಳಜಿಯ ಅರಿವನ್ನು ಹುಟ್ಟುಹಾಕುತ್ತಿದ್ದರು. ಜನರನ್ನು ಕಾಡುತ್ತಿರುವ ವಿವಿಧ ಪ್ರಮುಖ ಆರೋಗ್ಯ ಸಮಸ್ಯೆಯ ಪರಿಹಾರಕ್ಕೆ ಪೂರಕವಾಗಿ ನಮ್ಮ ಆಹಾರದಲ್ಲಿ ಆಗಬೇಕಾದ ಬದಲಾವಣೆಯನ್ನು ಸೂಚಿಸುತ್ತಿದ್ದರು.

'ಆರೋಗ್ಯವೇ ಭಾಗ್ಯ' ಅವರ ಸರಳ ಸೂತ್ರ. ನಮ್ಮಲ್ಲಿ ಮಿತಿಮೀರಿ ಸಂಗ್ರಹವಾಗಿರುವ ಶಾರೀರಿಕ-ಮಾನಸಿಕ ಕಲ್ಮಶಗಳನ್ನು ದೂರೀಕರಿಸಬೇಕಾದುದು ಮೊದಲಾದ್ಯತೆ. ಆಹಾರ, ವಿಹಾರ, ವ್ಯಾಯಾಮ, ವಿರಾಮ ಹಾಗೂ ಚಿಂತನೆಗಳು ದೇಹ ಪ್ರಕೃತಿಗೆ ಹೊಂದಿಕೊಂಡಿರುವುದೇ 'ಪ್ರಕೃತಿ ಜೀವನ ಕ್ರಮ'. ಈ ವಿಚಾರದ ಸುತ್ತ ಅವರ ಚಿಂತನೆಗಳು ಸುತ್ತುತ್ತಿತ್ತು.

ಮೈಸೂರಿನ 'ಪ್ರಜೀವಾ' ಬಳಗಕ್ಕೆ ಡಾ.ಭಟ್ ಸಂಪನ್ಮೂಲ ವ್ಯಕ್ತಿ. ಪ್ರಜೀವಾದ ಪ್ರಕಾಶಕಿ ಶ್ರೀಮತಿ ವಿಜಯಲಕ್ಷ್ಮೀ ಅವರು ಕೇಶವ ಭಟ್ಟರನ್ನು ಜ್ಞಾಪಿಸಿಕೊಂಡದ್ದು ಹೀಗೆ - 'ನಗರದಲ್ಲಿ ನಡೆಯುವಂತಹ ಕಾರ್ಯಾಗಾರದಲ್ಲಿ ಸಾಕಷ್ಟು ಮಂದಿ ಇವರ 'ಸಹಜ ಜೀವನ - ಸಾತ್ವಿಕ ಆಹಾರ' ಪದ್ಧತಿಗಳನ್ನು ಅಳವಡಿಸಿಕೊಂಡಿದ್ದಾರೆ. ನಮಗೀಗ ಔಷಧಿಗಳೇ ಆಹಾರಗಳಾಗಿವೆ. ಆಹಾರಗಳು ಔಷಧಿಯಾಗಬೇಕು. ನಮ್ಮ ಅಡುಗೆ ಮನೆಗಳು ಔಷಧಾಲಯವಾಗಬೇಕು. ಅಂದರೆ ರೋಗವನ್ನು ದೂರವಿಡುವ ಆಹಾರಗಳು ಅಲ್ಲಿ ತಯಾರಾಗಬೇಕು ಎನ್ನುತ್ತಿದ್ದರು. ಕಾರ್ಯಾಗಾರಗಳಲ್ಲಿ ತಾವೇ ಪತ್ನಿ ದೇವಕಿ ಅಮ್ಮ ಅವರೊಂದಿಗೆ ಆಹಾರದ ಡೆಮೋ ಮಾಡುತ್ತಿದ್ದರು.'

'ಅಕ್ಕಿ ಕುಟ್ಟಿದಾಗ ಸಿಗುತ್ತದಲ್ಲಾ, 'ತೌಡು' - ಅದು ಉತ್ಕೃಷ್ಟ. ಅದಕ್ಕೆ ಬೆಲ್ಲ ಸೇರಿಸಿ ಮಾಡಿದ ಸಿಹಿ, ಅನಾನಸು ಸಿಪ್ಪೆಯ ಜಾಮ್, ಕಾಯಿ ಪಪ್ಪಾಯಿ ಸಿಪ್ಪೆಯ ಚಟ್ನಿ - ಇವೆಲ್ಲಾ ಆಹಾರದ ರೂಪದಲ್ಲಿ ಹೊಟ್ಟೆಯೊಳಗೆ ಸೇರಿ ನಮ್ಮನ್ನು ಆರೋಗ್ಯವಂತರನ್ನಾಗಿ ಮಾಡುತ್ತವೆ' - ಎನ್ನುತ್ತಿದ್ದರು.

'ಸಕ್ಕರೆ ಬಳಕೆ' ಆರೋಗ್ಯಕ್ಕೆ ಹಾನಿಕರ. ಬೆಲ್ಲವನ್ನು ಬಳಸಲು ಅವರ ಅಡ್ಡಿಯಿಲ್ಲ. ಸಕ್ಕರೆ ಬಳಸಿ ಮಾಡುವಂತಹ ಯಾವುದೇ ಪಾನೀಯಕ್ಕೆ ಸಕ್ಕರೆ ಬದಲಿಗೆ ಜೇನುತುಪ್ಪವನ್ನು ಬಳಸಬಹುದು. ಕಾಫಿ, ಚಹದ ಬದಲು ಕಷಾಯ ಸೇವೆ ಯೋಗ್ಯ - ಹೀಗೆ ಆರೋಗ್ಯದ ಪ್ರತೀಯೊಂದು ಸೂಕ್ಷ್ಮ ವಿಚಾರಗಳನ್ನು ಹೇಳುವುದಲ್ಲದೆ, ತಾನೇ ಸ್ವತಃ ಅನುಷ್ಠಾನಿಸಿ ತೋರಿಸಿದ್ದಾರೆ.
ಒಟ್ಟಿನಲ್ಲಿ 'ರೋಗಕ್ಕೆ ಚಿಕಿತ್ಸೆಯಿಲ್ಲ. ಚಿಕಿತ್ಸೆ ಬೇಕಾಗಿರುವುದು ರೋಗಿಗೆ. ರೋಗಿ ತನ್ನ ಆಹಾರ ಮತ್ತು ಇತರ ಶಾರೀರಿಕ ವ್ಯವಹಾರವನ್ನು ಸರಿಪಡಿಸಿಕೊಂಡರೆ ರೋಗವನ್ನು ದೂರವಿಡಬಹುದು' - ಡಾ.ಭಟ್ಟರ ಆಹಾರ ವಿಚಾರಗಳ ಒಟ್ಟೂ ಸಾರ.

ಡಾ.ಪಳ್ಳತಡ್ಕ ಕೇಶವ ಭಟ್ ಈಗ ನಮ್ಮಿಂದ ದೂರವಾಗಿದ್ದಾರೆ. ಅವರು ಬಿಟ್ಟು ಹೋದ ವಿಚಾರಗಳು ಜೀವಂತ. ನಾವು ಒಪ್ಪುತ್ತೇವೋ, ಬಿಡುತ್ತೇವೋ ಅದು ನಮ್ಮ ಬೌದ್ಧಿಕ ಹರವಿಗೆ ಬಿಟ್ಟ ವಿಚಾರ. ತನ್ನ ಜೀವಿತದಲ್ಲಿ ಪರಿಸರ ಸಂರಕ್ಷಣೆ, ಬದುಕಿನಲ್ಲಿ ಆಹಾರ, ಇದರಿಂದ ಆರೋಗ್ಯ ಮತ್ತು ತಾನು ಕಂಡುಕೊಂಡ ವಿಜ್ಞಾನದ ಸತ್ಯಗಳನ್ನು ಪ್ರಪಂಚದ ಮುಂದೆ 'ವಿವಾದಗಳು ಬಂದೀತು' ಎಂಬ ಜಾಗೃತ ಪ್ರಜ್ಞೆಯಿಂದ ಬಿಚ್ಚಿಟ್ಟ ಹಿರಿಯ ಚೇತನಕ್ಕಿದು ಅಕ್ಷರನಮನ.

1 comments:

ಸುಬ್ರಹ್ಮಣ್ಯ ಭಟ್ said...

ಕೇಶವ ಭಟ್ಟರ ವಿವರಗಳು ಕೆಳಗಿನ ಕೊಂಡಿಯಲ್ಲಿ ಲಭ್ಯ .
http://helicalhelix.blogspot.com/

Post a Comment