Monday, July 31, 2017

ಇರುನೆಲೆಯನ್ನು ಮೀರಿ ವ್ಯಾಪಿಸಿದ ಹಲಸು


ಹೊಸದಿಗಂತದ 'ಮಾಂಬಳ' ಅಂಕಣ / 8-3-2017

               "ಮಲೇಶ್ಯಾದ ಮಾರ್ಗದ ಬದಿಗಳಲ್ಲಿ ಹಲಸಿನ ಗಿಡ, ಮರಗಳು ಸದೃಢವಾಗಿವೆ. ಬೆಳೆಯೂ ಚೆನ್ನಾಗಿದೆ. ಇಲ್ಲಿನ ಇಳುವರಿ ಸಾಕಾಗದೆ ಥಾಯ್ಲ್ಯಾಂಡಿನಿಂದ ಹಣ್ಣು ತರಿಸಿಕೊಳ್ಳುತ್ತಾರೆ. ಮಾರುಕಟ್ಟೆಯಲ್ಲಿ ಹಣ್ಣು, ಸೊಳೆಯನ್ನು ಆಕರ್ಷಕ ನೋಟದ ಪ್ಯಾಕೆಟ್ಗಳಲ್ಲಿ ಮಾರುತ್ತಾರೆ.  ಹಣ್ಣು ತುಂಬಾ ಕ್ರಿಸ್ಪ್, ಸಿಹಿ, ದಪ್ಪ, ಉತ್ತಮ ಸ್ವಾದ. ವರುಷಪೂರ್ತಿ ಹಣ್ಣು ಸಿಗುವುದು ಅಲ್ಲಿನ ವೈಶಿಷ್ಟ್ಯ,," ಕೃಷಿಕ ಡಾ.ಸಿ.ಚೌಟರು ಮಲೇಶ್ಯಾ ಪ್ರವಾಸದಲ್ಲಿ ಕಂಡ ಚೋದ್ಯ. ಇವರು ಕೇರಳ-ಕಾಸರಗೋಡು ಜಿಲ್ಲೆಯ ಮೀಯಪದವಿನವರು. ಕಳೆದ ವರುಷ ತಮ್ಮ ಸ್ನೇಹಿತರೊಂದಿಗೆ ಮಲೇಶ್ಯಾ ಹಣ್ಣುಗಳ ಅಧ್ಯಯನಕ್ಕಾಗಿ ಪ್ರವಾಸ ಮಾಡಿದ್ದರು.
             ವರುಷಪೂರ್ತಿ ಹಲಸಿನ ಹಣ್ಣು ಸಿಗುವುದು ಮಲೇಶ್ಯಾದ ವೈಶಿಷ್ಟ್ಯ . ಹೆದ್ದಾರಿ ಬದಿಗಳಲ್ಲಿ ಸೊಳೆಗಳು ಮಾರಾಟಕ್ಕೂ ಲಭ್ಯ. ಇಲ್ಲಿನ 'ಎನ್ ಪಾರ್ಟ್ ' ಎನ್ನುವ ಉದ್ದಿಮೆಯು ತಾಜಾ ಪ್ರಿಪ್ಯಾಕ್ ಹಲಸಿನ ಹಣ್ಣಿನ ಆನ್ಲೈನ್ ಬುಕ್ಕಿಂಗ್ ಸ್ವೀಕರಿಸಿ ಮನೆಬಾಗಿಲಿಗೆ ಕಳುಹಿಸಿಕೊಡುತ್ತದೆ. ಮೂವರು ತರುಣರು ಶ್ರಮದಿಂದ ಉದ್ದಿಮೆ ಮೇಲೆದ್ದಿದೆ. ಮೊದಲು ಇವರು ಹಣ್ಣಿನ ಸೊಳೆ ಬಿಡಿಸಿ ರಖಂ ಮಾರಾಟಗಾರರಿಗೆ ಪೂರೈಸುತ್ತಿದ್ದರು. ಈಗ ನೇರವಾಗಿ ಗ್ರಾಹಕರನ್ನು ತಲಪುವ ಹೊಸ ಯೋಜನೆಯನ್ನು ರೂಪಿಸಿದ್ದಾರೆ.
              ಭಾರತದಿಂದ ಮಲೇಶ್ಯಾಕ್ಕೆ ಉದ್ಯೋಗ ಹುಡುಕಿ ಹೋದ ಎರಡು ಕುಟುಂಬಗಳ ಉತ್ಸಾಹಿಗಳು ಅಲ್ಲಿ ಹಲಸಿನ ತೋಟವನ್ನು ಎಬ್ಬಿಸಿದ್ದಾರೆ ಎಂದರೆ ನಂಬ್ತೀರಾ? ಅವರೇ ಮನ್ಮೋಹನ್ ಸಿಂಗ್ ಮತ್ತು ಹರ್ವಿಂದರ್ ಸಿಂಗ್. ಇಲ್ಲಿ ಹಲಸು ಜನಪ್ರಿಯ ಮತ್ತು ಆದಾಯಕರ ಕೃಷಿ. ಸದ್ಯಕ್ಕಂತೂ ಉತ್ಪಾದನೆಗಿಂತ ಹೆಚ್ಚು ಬೇಡಿಕೆಯಿದೆ.  ಮುಂದಿನ ಹತ್ತು ವರುಷದ ವರೆಗೆ ತೊಂದರೆಯಿಲ್ಲ. ದಶಕದ ನಂತರದ ಸ್ಥಿತಿ ಹೇಳುವಂತಿಲ್ಲ. ಕಾದು ನೋಡಬೇಕಷ್ಟೇ' ಎನ್ನುತ್ತಾರೆ ಮನ್ಮೋಹನ್. ಮಲೇಶ್ಯಾ ಸರಕಾರವು ಹಲಸನ್ನು ಆಹಾರ ಬೆಳೆ ಎಂದು ಪರಿಗಣಿಸಿದೆ. ಇತರ ಹಣ್ಣು, ತರಕಾರಿಗಳನ್ನು ಇದೇ ವರ್ಗಕ್ಕೆ ಸೇರಿಸಿದೆ. ಸರಕಾರದ ವಿಶೇಷ ಉತ್ತೇಜನದಿಂದ ಮಲೇಶ್ಯಾದಲ್ಲಿ ಹಲಸಿನ ಕೃಷಿ ಹಬ್ಬುತ್ತಿದೆ.
              ಅಮೇರಿಕಾದ ಆನ್ ಮೇರಿ, ಆಸ್ಟ್ರೇಲಿಯಾದ ಜೂಲಿಯನ್ ಫ್ಯಾಂಗ್, ಇಂಗ್ಲೇಂಡಿನ ಥಿಯಾ ಫೋರ್ಡ್ ಇವರೆಲ್ಲಾ ಹಲಸನ್ನು ಮೈಮೇಲೆ ಅಂಟಿಸಿಕೊಂಡವರು. ಈಗ ಜರ್ಮನಿಯ ಜೂಲಿಯ ಹತ್ಮನ್ ಅವರನ್ನು ಹಲಸು ಆವರಿಸಿದೆ. ಶ್ರೀಲಂಕಾದಲ್ಲಿ ಸಂಶೋಧನಾ ಕಾರ್ಯದಲ್ಲಿದ್ದಾಗ ಪರಿಚಯವಾದ ಹಲಸು, ಊರಿಗೆ ಮರಳಿದ ಬಳಿಕ ಹಲಸಿಗಾಗಿಯೇ ಕಂಪೆನಿಯೊಂದನ್ನು ಹುಟ್ಟುಹಾಕಿದರು! ಮೊದಲಿಗೆ ಬರ್ಗರ್ ತಯಾರಿಸಿದರು, ರುಚಿ ನೋಡಲು ಹಲವರಿಗೆ ನೀಡಿದರು. ಉತ್ತಮ ಹಿಮ್ಮಾಹಿತಿ. ತಿಂದ ಶೇ.90ರಷ್ಟು ಮಂದಿಯೂ ಉತ್ಪನ್ನವನ್ನು ಇಷ್ಟಪಟ್ಟರು ತಯಾರು ಮಾಡುವ ತಿಂಡಿಯಲ್ಲಿ ಜರ್ಮನ್ ಸಂಬಾರವಸ್ತುವನ್ನು ಬಳಸಿದರ ಹೆಚ್ಚು ಮಂದಿಯನ್ನು ತಲುಪಬಹುದು, ಎನ್ನುವುದು ಅವರ ಆಶಯ.
              ಅಮೇರಿಕದ ಕಾನ್ಸಾಸ್ ನಗರದ ಜನಸಂಖ್ಯೆ ಆಜೂಬಾಜು ಹತ್ತು ಲಕ್ಷ. ಇಲ್ಲಿನವರಿಗೆ ಹಲಸು ಗೊತ್ತಿಲ್ಲ. ಏಳು ವರುಷದ ಹಿಂದೆ ಸ್ಟೆಫಾನಿ ಶೆಲ್ಪನ್ ಅವರ 'ಮೀನ್ ವೆಗಾನ್' ಕಂಪೆನಿಯು ಮೊತ್ತಮೊದಲಿಗೆ 'ಜಾಕ್ ತಮಾಲೆ'ಯ ಮೂಲಕ ಪರಿಚಯಿಸಿತು. ತಮಾಲೆ ಎಂದರೆ ಮೆಕ್ಸಿಕೋದ ಸಾಂಪ್ರದಾಯಿಕ ಆಹಾರ. ಕೇರಳದ ಎಲೆಯಡ ಅಥವಾ ಕನ್ನಾಡಿನ ಗೆಣಸಲೆಯಂತೆ.  ತಮಾಲೆ ಉಗಿಯಲ್ಲಿ ಬೇಯಿಸಿದ ತಿಂಡಿ. ಜೋಳದ ತೆನೆಯ ಹೊರಪದರಲ್ಲಿ ಸುತ್ತಿದ ಮಾಂಸ ತುಂಬಿದ ಉತ್ಪನ್ನ. 'ಡೋರ್ ಟು ಡೋರ್' ಎನ್ನುವ ವಿತರಣಾ ಸಂಸ್ಥೆಯು ತಮಾಲೆಗಳನ್ನು ನಾಲ್ಕು ರಾಜ್ಯಗಳಿಗೆ - ಮಿಸ್ಸೋರಿ, ಕಾನ್ಸಸ್, ಅಯೋವಾ, ನೆಬ್ರಾಸ್ಕಾ - ತಲುಪಿಸುತ್ತಿದೆ. ತಮಾಲೆ ಹೋದಲ್ಲೆಲ್ಲಾ ಅದರ ಮೂಲವಸ್ತು ಹಲಸಿನ ಪರಿಚಯವನ್ನೂ ಮಾಡಿ ಬೇಡಿಕೆ ಕುದುರಿಸುತ್ತಿರುವುದು ಸ್ಟೆಫಾನಿ ಶೆಲ್ಪನ್ ಜಾಣ್ಮೆ.
               ಚೀನಾದಲ್ಲಿ ಹಲಸು ಈಗ ಲಾಭದಾಯಕ ಬೆಳೆ. 1999ರಲ್ಲಿ ಹಲಸಿನ ತೋಪುಗಳು ಅಲ್ಲಿ ಆರಂಭವಾದುವು. ಅಲ್ಲಿನ ಒಂದು ಅಂಕಿಅಂಶ ಹೀಗಿದೆ - ಒಂದು ಹೆಕ್ಟಾರ್ ತೋಪಿನಿಂದ ಅಂದಾಜು ತೊಂಭತ್ತು ಸಾವಿರ ಯುವಾನ್ ಅಂದರೆ ಒಂಭತ್ತು ಲಕ್ಷ ರೂಪಾಯಿ ಆದಾಯ. ಹತ್ತು ಕಿಲೋದ ಹಲಸಿಗೆ, ಕೃಷಿಕನಿಗೆ ಇನ್ನೂರೈವತ್ತರಿಂದ ನಾಲ್ಕು ನೂರು ರೂಪಾಯಿ ಸಿಗುತ್ತದೆ. ಚೀನಿ ಭಾಷೆಯಲ್ಲಿ ಹಲಸನ್ನು 'ಬೊಲುಮಿ' ಎಂದು ಕರೆಯುತ್ತಾರೆ. ಚೀನಾದ ಹಲಸಿನ ಉತ್ಪಾದನೆಯು ಆ ದೇಶದ ಬೇಡಿಕೆ ಪೂರೈಸಲು ಅಶಕ್ತ. ಪ್ರತಿವರುಷ ವಿಯೆಟ್ನಾಂ ಮತ್ತು ಥಾಯ್ಲ್ಯಾಂಡಿನಿಂದ ಆಮದು ಮಾಡಿಕೊಳ್ಳುತ್ತಾರೆ. ನಿರ್ಜಲೀಕರಿಸಿದ ಹಲಸಿನ ಹಣ್ಣು, ಕ್ಯಾಂಡಿ, ಹೋಳಿಗೆಯಂತಹ ಉತ್ಪನ್ನಗಳನ್ನು ತಯಾರಿಸುವ ಉದ್ದಿಮೆಗಳಿವೆ.
              ಚೀನಾದಲ್ಲಿ ಹಲಸಿನ ಹಣ್ಣಿನ ಹುಡಿ ಜನಪ್ರಿಯ. ಒಂದು ಕಂಪೆನಿಯು ಈ ಉತ್ಪನ್ನಕ್ಕೆ 'ಜ್ಯಾಕ್ ಫ್ರುಟ್ ಪಿಝ್ಝಾ' ಎಂದು ನಾಮಕರಣ ಮಾಡಿದೆ. ಇಲ್ಲಿನ ಪ್ಯಾನ್ಕೇಕ್ (ಹಲಸಿನ ಉತ್ಪನ್ನ) ತಯಾರಿಸುವ ಚುಂಗುವಾಂಗ್ ಕಂಪೆನಿಯ ಸ್ಟೆಫಾನಿ ಅವರನ್ನು ಸಂಪರ್ಕಿಸಿದ ಅಡಿಕೆ ಪತ್ರಿಕೆ ಸಂಪಾದಕ ಶ್ರೀ ಪಡ್ರೆಯವರು ಮಾಹಿತಿ ನೀಡುತ್ತಾರೆ, ಪ್ಯಾನ್ಕೇಕ್ ತಯಾರಿಗೆ ಒಂದೂವರೆ ವರುಷದ ಇತಿಹಾಸವಿದೆ. ಈ ಥರದ ಪ್ಯಾನ್ಕೇಕುಗಳಿಗೆ ಮೂಲ ಆಗ್ನೇಯ ಏಷ್ಯಾ. ಆಗೆಲ್ಲ ತೆಂಗಿನಕಾಯಿಯ ಪ್ಯಾನ್ಕೇಕ್ ಮಾತ್ರ ಇತ್ತು. ಕಾಲಕ್ರಮದಲ್ಲಿ ಹಲಸಿನ ಹಣ್ಣಿನದನ್ನೂ ಆರಂಭಿಸಿದರು.
              ಮತ್ತೊಂದೆಡೆ ಮೆಕ್ಸಿಕೋದಲ್ಲೂ ಹಲಸಿನ ಸುದ್ದಿ. ಇಲ್ಲಿಗೆ ಹಲಸು ಪ್ರವೇಶಿಸಿ ಮೂರು ದಶಕ ಸಂದಿದೆ. ಮೆಕ್ಸಿಕೋದಲ್ಲಿ ಹಲಸಿನ ಹಣ್ಣಿಗೆ ಹೇಳುವಂತಹ ಬೇಡಿಕೆಯಿಲ್ಲ. ತರಕಾರಿಯಾಗಿ ಅಪರಿಚಿತ. ತನ್ನ ಗರಿಷ್ಠ ಸಂಖ್ಯೆಯ ಹಲಸನ್ನು ಅಮೇರಿಕಾಕ್ಕೆ ರಫ್ತು ಮಾಡುತ್ತಿದೆ. ಮಲೇಶ್ಯಾದಂತೆ ಇಲ್ಲೂ ವರುಷದ ಹನ್ನೆರಡು ತಿಂಗಳೂ ಬೆಳೆ ಸಿಗುತ್ತಿದೆ. ಕೊಯ್ಲಿನಿಂದಾರಂಭಿಸಿ ಕೊಯ್ಲೋತ್ತರ ತನಕ ತುಂಬಾ ನಿಗಾ ವಹಿಸುತ್ತಾರೆ. ಉತ್ತಮ ಗುಣಮಟ್ಟದ ಪ್ಯಾಕಿಂಗ್. ಶೀತಲ ಟ್ರಕ್ಕಿನಲ್ಲಿ ಸಾಗಾಟ.
               ಕೇರಳದ ಕೊಟ್ಟಯಂ ಜಿಲ್ಲೆಯ ಸಂಸ್ಥೆಯೊಂದು ಕಾಯಿಸೊಳೆಯನ್ನು ವಿದೇಶಕ್ಕೆ ರಫ್ತು ಮಾಡುತ್ತಿದೆ. ವಿದೇಶಿ ಮಲೆಯಾಳಿಗಳಿಗೆ 'ಅಡುಗೆಗೆ ಸಿದ್ಧ ಹಲಸು' ಕೊಳ್ಳಲು ಮಾರುಕಟ್ಟೆ ಸರಪಳಿ ಮಾಡಿಕೊಂಡಿದೆ. ಕಳೆದ ಸೀಸನ್ನಿನಲ್ಲಿ ನೂರಹತ್ತು ಟನ್ ಹಲಸನ್ನು ಕೊಂಡು ಕಾಯಿಸೊಳೆಯಾಗಿಸಿ ವಿದೇಶಕ್ಕೆ ಕಳಿಸಿದ್ದಾರೆ. ಈ ಸೀಸನ್ನಿನಲ್ಲಿ ಮೂರು ಲಕ್ಷ ಕಿಲೋ ಹಲಸನ್ನಾದರೂ ಒಟ್ಟು ಮಾಡಿ ಸೊಳೆಯಾಗಿಸಬೇಕು ಎನ್ನುವುದು ಆ ಸಂಸ್ಥೆಯ ಮುಖ್ಯಸ್ಥ ರೋನಿ ಮ್ಯಾಥ್ಯೂ ಸಂಕಲ್ಪ.
ಹೀಗಿ ಕಲಡಾಚೆಯ ವಿವಿಧ ದೇಶಗಳು ಹಲಸಿನ ಪರಿಮಳಕ್ಕೆ ಮನಸೋತಿವೆ. ಒಂದು ಕಾಲಘಟ್ಟದಲ್ಲಿ ಯಾರಿಗೂ ಬೇಡದ, ಬಡವರ ಹಣ್ಣೆಂದೇ ಹಣೆಪಟ್ಟಿ ಹಚ್ಚಿಸಿಕೊಂಡ ಹಲಸಿಗೆ ಮಾನ ಬರುತ್ತಿದೆ. ವಿದೇಶದಲ್ಲಿ ಬೇಡಿಕೆ ಬರುತ್ತಿದೆ. ನಾವು ಕಣ್ಣುಮುಚ್ಚಿ ತೆರೆಯುವುದರೊಳಗೆ ಅಲ್ಲಿ ಹಲಸಿನ ಉತ್ಪನ್ನದ ಒಂದಾದರೂ ಕಂಪೆನಿ ಆರಂಭವಾಗಿರುತ್ತದೆ!
               ಜಗತ್ತಿನ ಆಹಾರ ನೀಗಿಸುವಲ್ಲಿ ಹಲಸು ದೊಡ್ಡ ಪಾತ್ರ ವಹಿಸಬಹುದು. ಕರ್ನಾಟಕದ ಒಣಪ್ರದೇಶದಲ್ಲಿ ಮೂರು ಸಾವಿರ ಹೆಕ್ಟಾರ್ ಹಲಸಿನ ತೋಪು ಆರಂಭವಾಗಿದೆ. ಆದರೂ ಹಲಸು ಕೃಷಿಯ ತಿಳುವಳಿಕೆಯಲ್ಲಿ,  ಮಾರುಕಟ್ಟೆ ವ್ಯವಸ್ಥೆಯಲ್ಲಿ ನಾವು ಅಪ್ಡೇಟ್ ಆಗಿಲ್ಲ. ಆ ಬಗ್ಗೆ ಆಸಕ್ತಿ ತೋರಿಸುತ್ತಲೂ ಇಲ್ಲ. ಅದನ್ನು ನಿರ್ಲಕ್ಷಿಸಿದರೂ 'ನಮ್ಮದು ಹಲಸಿನ ತವರು' ಎಂದು ಬೀಗುತ್ತಾ, ಎಷ್ಟು ಕಾಲ ಹೀಗೆ ನಡೆಯಲಿದ್ದೇವೆ, ಹಲಸು ಆಂದೋಳನಕಾರ ಶ್ರೀಪಡ್ರೆಯವರ ವಿಷಾದ.
(ಮಾಹಿತಿ / ಚಿತ್ರಕೃಪೆ : ಶ್ರೀ ಪಡ್ರೆ/ಅಡಿಕೆಪತ್ರಿಕೆ)

Sunday, July 30, 2017

ಸೇತುಬಂಧದ ಯಶೋಯಾನಕ್ಕೆ ಪದ್ಮಶ್ರೀಯ ಉಪಾಯನ


ಉದಯವಾಣಿಯ 'ನೆಲದ ನಾಡಿ' ಅಂಕಣ /16-2-2017

               ಮನಗಳನ್ನು ಒಗ್ಗೂಡಿಸಿದ, ದಡಗಳನ್ನು ಸೇರಿಸಿದ ಕರಾವಳಿಯ ಹೆಮ್ಮೆಯ ಬಿ.ಗಿರೀಶ್ ಭಾರದ್ವಾಜರಿಗೆ ರಾಷ್ಟ್ರದ ಪರಮೋಚ್ಚ 'ಪದ್ಮಶ್ರೀ' ಗೌರವ. ಇದು ಗ್ರಾಮೀಣ ಭಾರತಕ್ಕೆ ಸಂದ ಮಾನ. ಹಳ್ಳಿ ಮನಸ್ಸುಗಳ ಖುಷಿಗೆ ಸಂದ ಸಂಮಾನ.
ಮನುಷ್ಯ ಮನುಷ್ಯರ ಹೃದಯಗಳನ್ನು, ಹಳ್ಳಿ-ಹಳ್ಳಿಗಳನ್ನು, ಪಕ್ಷ-ವಿಪಕ್ಷಗಳನ್ನು ಒಂದುಮಾಡಿದ 'ಸೇತುಬಂಧ' ನಿಜಾರ್ಥದ ಗ್ರಾಮಾಭಿವೃದ್ಧಿ. ಭಾರದ್ವಾಜರು ಮೂಲತಃ ಕೃಷಿಕರು. ದೇಶಾದ್ಯಂತ ಹಳ್ಳಿಗಳಲ್ಲಿ ಓಡಾಡಿದ್ದಾರೆ. ಜನರ ಮಧ್ಯೆ ಇದ್ದುಕೊಂಡು ಬದುಕನ್ನು ಓದಿದ್ದಾರೆ. ಇಪ್ಪತ್ತೆಂಟು ವರುಷದಲ್ಲಿ ನೂರ ಇಪ್ಪತ್ತೇಳು  ತೂಗುಸೇತುವೆಗಳನ್ನು ನಿರ್ಮಿಸಿದ್ದಾರೆ.
              ಹದಿನೈದು ವರುಷವಾಗಿರಬಹುದು. ಸ್ವಿಸ್ ಪ್ರಜೆ ಟೋನಿ ರುಟ್ಟಿಮಾನ್ ಗಿರೀಶರನ್ನು ಹುಡುಕಿ ಸುಳ್ಯಕ್ಕೆ ಬಂದ ಆ ದಿವಸಗಳು ಭಾರದ್ವಾಜರಿಗೆ ಸಿಹಿ ದಿನಗಳು. ಭಾರದ್ವಾಜರ ತೂಗುಸೇತುವೆಯ ಯಶೋಗಾಥೆಯು ಟೋನಿಯರನ್ನು ಕನ್ನಾಡಿಗೆ ಸೆಳೆದಿತ್ತು. ಟೋನಿಯದ್ದೂ 'ತೂಗುಸೇತುವೆ'ಯ ಕಾಯಕ. ಆದರದು ಯುದ್ಧಪೀಡಿತ ಪ್ರದೇಶಗಳಲ್ಲಿ ಕಮರಿದ ಬದುಕನ್ನು ಮತ್ತೆ ಎತ್ತರಿಸಲು ಸೇತುಬಂಧ.  ಈ ಸಂದರ್ಭದಲ್ಲಿ ಟೋನಿಯವರ ಯಶೋಯಾನವನ್ನು ನೆನಪಿಸುವುದು ಕೂಡಾ ಗಿರೀಶರ ಸೇತುಯಾನಕ್ಕೆ ಗೌರವ.
             1989. ಟೀವಿಯಲ್ಲಿ ಇಕ್ವೆಡಾರ್ನ ಭೂಕಂಪದ ದೃಶ್ಯ ಪ್ರಸಾರವಾಗುತ್ತಿತ್ತು. ಅದು ಒಬ್ಬ ಸ್ವಿಸ್ ಹುಡುಗನ ನಿದ್ದೆಗೆಡಿಸಿತು. ಆತನೇ ಟೋನಿ ರುಟ್ಟಿಮಾನ್, ಕಾಲೇಜು ವಿದ್ಯಾರ್ಥಿ 'ನಾನೇನಾದರೂ ಮಾಡಬೇಕು' ಎಂಬ ಸಂಕಲ್ಪ. ಅಲ್ಲಿನ ಹಳ್ಳಿಯೊಂದರ  ಜನರ ನರಕಸದೃಶ ಬದುಕು ಟೋನಿಯ ಮನ ಕಲಕಿತು. ತುತ್ತು ಅನ್ನಕ್ಕೆ ತತ್ವಾರ. ಅನಾರೋಗ್ಯದಿಂದ ಒದ್ದಾಡಿ, ಆಸ್ಪತ್ರೆಗೆ ಒಯ್ಯಲಾಗದೆ ಸಾಯುತ್ತಿದ್ದ ಜನ. ನದಿ ದಾಟುವುದೇ ಸಮಸ್ಯೆ. ಸಂಚಾರ ಸರಿಹೋದರೆ ಮೂಲಭೂತ ಸಮಸ್ಯೆಗಳೂ ಕರಗುತ್ತವೆ ಅನಿಸಿತು. ಅಂದಿನಿಂದ ಟೋನಿಯ ಲಕ್ಷ್ಯ ಒಂದೇ, ಸೇತುವೆ ರಚನೆ.
              ಸೇತುವೆ ಕಟ್ಟಲು ಇವರಲ್ಲಿ ಏನಿತ್ತು? ಪರಿಚಯವಿಲ್ಲ. ಸಹಾಯಕರಿಲ್ಲ, ಪರಿಕರಗಳಿಲ್ಲ. ತಂತ್ರಜ್ಞಾನ, ಅನುಭವ ಮೊದಲೇ ಇಲ್ಲ! ಇದ್ದದ್ದು ಸಾಧಿಸುವ ಆತ್ಮವಿಶ್ವಾಸ ಒಂದೇ! ಅವರಲ್ಲಿದ್ದದ್ದೂ, ಸ್ನೇಹಿತರಿಂದ ಪಡೆದದ್ದೂ ಸೇರಿದಾಗ ಎರಡು ಲಕ್ಷ ರೂಪಾಯಿ ಮಾತ್ರ. ಜನರಿಗೆ ಅರಿವು ಮೂಡಿಸುವ ಕೆಲಸಕ್ಕೆ ಶುರು. ಮೊದಲಿಗೆ ಜನ ನಂಬಲಿಲ್ಲ. ಬೆರಳೆಣಿಕೆಯ ಯುವಕರು ಜತೆಯಾದರು. ಡಚ್ ಇಂಜಿನಿಯರೊಬ್ಬರು ತಾಂತ್ರಿಕ ಮಾರ್ಗದರ್ಶನ ಕೊಡಲೊಪ್ಪಿದರು. ಒಂದು ಎಣ್ಣೆ ಕಂಪೆನಿಯಿಂದ ರೋಪ್, ಪೈಪ್, ಕೇಬಲ್ಗಳು ಕೊಟ್ಟಿತು. ಇವರ ಕಿಸೆಯ ಮೊತ್ತ ಸಿಮೆಂಟ್, ಜಲ್ಲಿಗಳಿಗೆ. ಜನರು ಕಾಮಗಾರಿಗೆ ಮುಂದಾದರು. ಐವತ್ತೈದು ಮೀಟರ್ ಉದ್ದದ ತೂಗುಸೇತುವೆ ಸಿದ್ಧವಾಯಿತು.
            ಮತ್ತೆ ಸ್ವದೇಶಕ್ಕೆ. ಸಿವಿಲ್ ಇಂಜಿನಿಯರಿಂಗ್ ಕಲಿಕೆ ಸುರು.  ಈ ನಡುವೆಯೂ ಇಕ್ವೆಡಾರ್ ಭೂಕಂಪ ಪೀಡಿತರ ನರಳಿಕೆಯ ಚಿತ್ರ ಕಾಡಿಸುತ್ತಲೇ ಇತ್ತು. ಅಧ್ಯಯನ ಅರ್ಧದಲ್ಲೇ ಕೈಬಿಟ್ಟು ಮತ್ತೆ ಇಕ್ವೆಡಾರ್ಗೆ. ಹೊಳೆ ದಾಟಲಾಗದ ಜನಸಮುದಾಯದ ಕಣ್ಣೀರು ಒರೆಸುವುದೇ ಬದುಕಿನ ಗುರಿ ಆಯಿತು. ಹದಿನಾಲ್ಕು ವರುಷ ಹಣೆಯ ಬೆವರೊರೆಸಲಿಲ್ಲ! ಒಂದು ನೂರ ಐವತ್ತೈದು ಸೇತುವೆಯಾದಾಗಲೇ ವಿಶ್ರಾಂತಿ! ಮೊದಮೊದಲ ಯಶಸ್ಸಿನಿಂದ ಮತ್ತಷ್ಟು ಸೇತುವೆಗಳಿಗೆ ಚಾಲನೆ. ಯಶಸ್ಸಿನ ಸುದ್ದಿ ಪ್ರತಿಷ್ಠಿತ ಕಂಪೆನಿಗಳ ಕಿವಿಯರಳಿಸಿತು!
               ಕೇಬಲ್ಕಾರ್ ಕಂಪೆನಿಗಳಿಗೆ ಭೇಟಿ. ಉದ್ದೇಶವರಿತ ಕಂಪೆನಿಗಳು ಕೇಬಲ್ ಕೊಡಲು ಮುಂದಾದುವು. ಬೇರೆಬೇರೆ ಕಂಪೆನಿಗಳಿಂದ ರೋಪ್, ಪೈಪ್, ಚಕ್ಕರ್ಡ್ ಪ್ಲೇಟ್ ಹೀಗೆ ಒಮ್ಮೆ ಬಳಸಿದ ಕಚ್ಚಾವಸ್ತುಗಳುಗಳು ಸಿಗತೊಡಗಿದುವು. ಜಲ್ಲಿ, ಸಿಮೆಂಟ್ಗಳನ್ನೂ. ಕೈಗೂಡಿಸಲು ಅಲ್ಲಲ್ಲಿನ ಜನರು. ಟೋನಿ ನಿರ್ದೇಶನ. ಸಂಶಯ ಬಂದಾಗಲೆಲ್ಲಾ ಅದೇ ಡಚ್ ಇಂಜಿನಿಯರ ಸಂಪರ್ಕ. ಟೋನಿಯ ಮನಸ್ಸರಿತ ವೆಲ್ಡರ್ ವಾಲ್ಟರ್ ಯೆನೆಜ್ ಕೈಜೋಡಿಸಿದರು. ಮುಂದಿನೆಲ್ಲಾ ಯೋಜನೆಗಳಿಗೆ ಇಬ್ಬರ ಹೆಗಲೆಣೆ. ಸೇತುವೆ ರಚನೆಯಾದಂತೆಲ್ಲಾ, ಅನುಭವ ವಿಸ್ತಾರವಾಯಿತು. ಇಂಜಿನಿಯರಿಂಗ್ ಪದವೀಧರರಿಗಿಂತಲೂ ಒಂದು ಹೆಜ್ಜೆ ಮುಂದೆ!
                ಈ ಮಧ್ಯೆ ವಿಯೆಟ್ನಾಂ ಯುದ್ಧ. ವಿಯೆಟ್ನಾಂ, ಕಾಂಬೋಡಿಯಾ, ಲಾವೋಸ್ಗಳಲ್ಲಿ ಇಕ್ವೆಡಾರ್ನ ಮರುಕಳಿಕೆ. ಅಲ್ಲಿ ಭೂಕಂಪ, ಇಲ್ಲಿ ಯುದ್ಧ. ಇಕ್ವೆಡಾರ್ನ ಸೂತ್ರ್ರ ಇಲ್ಲೂ ಯಶಸ್ವಿ. ಜನಸಹಭಾಗಿತ್ವದಿಂದಲೇ ನಿರ್ಮಾಣ. ನಾಲ್ಕುನೂರಕ್ಕೂ ಮಿಕ್ಕಿ ಸೇತುವೆಗಳು! ಹಾರ, ತುರಾಯಿಯಿಂದ ಟೋನಿ ದೂರ. 'ಜನರದೇ ಸೇತುವೆ, ನನ್ನ ಪಾತ್ರ ಏನಿಲ್ಲ' ಎನ್ನುವ ನಿಲುವು. ಕಚ್ಚಾವಸ್ತು ಕೊಟ್ಟ ಕಂಪೆನಿಗಳಿಗೆ ಅವು ಯಾವ ಸೇತುವೆಗೆ ಬಳಕೆಯಾಗಿವೆ, ವೆಚ್ಚ, ಉಳಿತಾಯ ಇತ್ಯಾದಿಗಳ ಸವಿವರ ಲೆಕ್ಕ.
             ಈ ಸೇತುವೆಗಾಥೆ ಕೇಳಿ 2002ರಲ್ಲಿ ಕಾಂಬೋಡಿಯಾ ಅಧ್ಯಕ್ಷರಿಂದ ಬುಲಾವ್. ಸಹಕಾರದ ಭರವಸೆ. ಕಡತಗಳು ಮಂತ್ರಿಯ ಬಳಿಗೆ. 'ಸಹಾಯ ಕೊಡಬಹುದು. ಆದರೆ ಉದ್ಘಾಟನೆಗೆ ಕರೆಯಬೇಕು, ಸೇತುವೆಯಲ್ಲಿ ಪಕ್ಷದ ಚಿಹ್ನೆ ಕೊರೆಯಬೇಕು.' ಟೋನಿಗೆ ಕಿರಿಕಿರಿ. 'ಇದು ಜನಸೇತುವೆ. ಹಾಗಾಗಿ ಅವರೇ ಉದ್ಘಾಟಕರು' ಎನ್ನುತ್ತಾ ಈ ಕೊಡುಗೆ ತಿರಸ್ಕರಿಯೇಬಿಟ್ಟರು. ಮಾಧ್ಯಮಗಳಲ್ಲಿ ಪ್ರಕಟವಾದ ಸುದ್ದಿ ಅಧ್ಯಕ್ಷರಿಗೂ ತಲಪಿತು. ಕೊನೆಗೆ ಅವರೇ ಪರಿಸ್ಥಿತಿ ತಿಳಿಯಾಗಿಸಿದ್ದರು!
              ಸೇತುವೆ ನಿರ್ಮಾಣಕ್ಕಾಗಿ ಟೋನಿ ಸ್ಥಳಕ್ಕೆ ಭೇಟಿ ಕೊಡುವುದು ಮೂರೇ ಬಾರಿ. ಸ್ಥಳವೀಕ್ಷಣೆ, ಆವಶ್ಯಕತೆ, ಜನರೊಂದಿಗೆ ಮಾತುಕತೆ, ಅಂದಾಜು ವೆಚ್ಚ, ಸಹಭಾಗಿತ್ವದ ವಿಧಾನ, ಬೇಕಾಗುವ ಸರಕುಗಳ ನಿರ್ಧಾರ ಮೊದಲ ಭೇಟಿಯಲ್ಲಿ. ಎರಡನೇ ಭೇಟಿ ಅಡಿಪಾಯಕ್ಕೆ. ಕೊನೆಯದ್ದು ಟವರ್, ಕೇಬಲ್ ಜೋಡಣೆ. ಎಲ್ಲಾ ಸರಿಹೋದರೆ ಐದೇ ವಾರದಲ್ಲಿ ಸೇತುವೆ ರೆಡಿ. ಕೈಜೋಡಿಸಲು ಒಪ್ಪಿದ ಜನ ಕೈಕೊಟ್ಟರೆ ಅಲ್ಲಿಗೇ ಪ್ಯೆಲ್  ಕ್ಲೋಸ್. 'ಲ್ಯಾಪ್ಟಾಪ್' ಮೂಲಕ ಸಕಲ ನಿಯಂತ್ರಣ.
              ಭಾರತದ ರಾಯಭಾರ ಕಚೇರಿಯಲ್ಲಿ ಟೋನಿಯ ಪರಿಚಯದ ಸ್ವಿಸ್ ಮಹಿಳೆಯೊಬ್ಬರಿದ್ದರು. ಇವರು ಮಾಧ್ಯಮದಿಂದ ಗಿರೀಶರ ಸೇತುವೆಗಾಥೆಯನ್ನು ತಿಳಿದಿದ್ದರು. 'ನೀನೊಬ್ಬನೇ ಅಲ್ಲ, ಇನ್ನೊಬ್ಬರು ಭಾರತದಲ್ಲಿದ್ದಾರೆ' ಎಂದು ಟೋನಿಯನ್ನು ಚುಚ್ಚಿದರು. ತಗೊಳ್ಳಿ, ಟೋನಿ ನೇರ ಸುಳ್ಯಕ್ಕೆ! ಕಿಸೆಯಲ್ಲಿದ್ದ ವಿಳಾಸ - ಗಿರೀಶ್ ಭಾರಧ್ವಾಜ್, ಸುಳ್ಯ, ಕರ್ನಾಟಕ, ಇಂಡಿಯಾ. ಆಗ ಭಾರದ್ವಾಜ್ ವಾರಂಗಲ್ಲಿನಲ್ಲಿ ಸೇತುವೆಯ ಕೆಲಸದಲ್ಲಿದ್ದರು! ಟೋನಿ ಕಾದರು. ವಾರದ ಬಳಿಕ ಬಂದ ಗಿರೀಶ್ರೊಂದಿಗೆ ಹತ್ತು ದಿನ ಕಳೆದರು.
                ಟೋನಿಯ ಆಸ್ತಿ ಎರಡು ಬ್ಯಾಗ್ ಮಾತ್ರ. ಒಂದರಲ್ಲಿ ಉಡುಪು, ಮತ್ತೊಂದರಲ್ಲಿ ಲ್ಯಾಪ್ಟಾಪ್ ಇತ್ಯಾದಿ. 'ಟೋನಿ ಒಂದೇ ಹಾಸಿಗೆಯಲ್ಲಿ ಮೂರು ದಿನ ನಿದ್ರಿಸಿದ್ದರೆ ಅದು ಸುಳ್ಯದಲ್ಲಿ ಮಾತ್ರ'! ಭಾರತದ, ನಮ್ಮ ಸುಳ್ಯದ ಗಿರೀಶ್ ಭಾರದ್ವಾಜ್, ಸ್ವಿಜರ್ಲ್ಯಾಂಡ್ನ ಟೋನಿ - ಇವರಿಬ್ಬರ ಮಧ್ಯೆ ಸ್ನೇಹಸೇತುವಿಗೆ ಕಾರಣ -
ತೂಗುಸೇತುವೆ. ಈಗಲೂ ಮಿಂಚಂಚೆಯಲ್ಲಿ ಟೋನಿ ಮತ್ತು ಭಾರದ್ವಾಜ್ ಮಾತನಾಡುತ್ತಿರುತ್ತಾರೆ.
                 ಹಿಂದೊಮ್ಮೆ ಭಾರದ್ವಾಜರು ನಮ್ಮ ಆಡಳಿತ ವ್ಯವಸ್ಥೆಯ ಕಾಣದ ಮುಖದ ವಿಷಾದದ ಸುದ್ದಿಯನ್ನು ಹೇಳಿದ್ದರು. ಸೇತುವೆ ಕೆಲಸ ನಡೆಯುತ್ತಿದ್ದಾಗ ಕೇರಳದಲ್ಲಿ ಬೆಂಬಲ ಸಿಕ್ಕಿದಷ್ಟು ಕರ್ನಾಟಕದಲ್ಲಿ ಸಿಗುತ್ತಿಲ್ಲ. ಕೇರಳದಲ್ಲಿ ನಮ್ಮ ಸೇತುವೆ ಮುಗಿಯುವಷ್ಟರಲ್ಲಿ ಒಂದಷ್ಟು ಜನ ಸ್ನೇಹಿತರಾಗಿ ಬಿಡುತ್ತಾರೆ. ಆದರೆ ಕರ್ನಾಟಕದಲ್ಲಿ ಗುತ್ತಿಗೆ ಕೆಲಸ ಅಂದರೆ ಜನ ಹತ್ತಿರ ಬರುವುದಿಲ್ಲ. ಅಧಿಕಾರಿಗಳು ಬಿಕ್ಷುಕ ಹತ್ತಿರ ಬಂದಂತೆ ವರ್ತಿಸುತ್ತಾರೆ. ಇವರ ವರ್ತನೆ ನೋಡಿದಾಗ ಸೇತುವೆ ಸಹವಾಸವೇ ಬೇಡ ಅನ್ನಿಸುತ್ತದೆ. ಆದರೆ ಜನರ ಕಣ್ಣೀರನ್ನು ಕಂಡಾಗ ನೋವು ಮರೆಯಾಗುತ್ತದೆ.
               ಒಂದೆಡೆ ಪದ್ಮಶ್ರೀ ಪ್ರಶಸ್ತಿಯ ಖುಷಿ. ಮತ್ತೊಂದೆಡೆ ಒಪ್ಪಿಕೊಂಡ ಕಾಯಕ ಪೂರೈಸುವ ಬದ್ಧತೆ. ಅವರ ಇಡೀ ತಂಡದ ಮಿಲಿಟರಿ ಶಿಸ್ತು ಭಾರದ್ವಾಜರ ಸೇತುಯಾನದ ಯಶ. ಪ್ರಶಸ್ತಿಗೆ ಅಭಿನಂದನೆ ಹೇಳಲು ಫೋನ್ ಮಾಡಿದಾಗ ಗಿರೀಶರು ಉತ್ತರ ಕನ್ನಡದ ಸೇತುವ ನಿರ್ಮಾಣದ ಭರದಲ್ಲಿದ್ದರು. "ಎರಡು ತೂಗುಸೇತುವೆಗಳು ರೆಡಿ ಆಗ್ತಿವೆ. ಒಂದು, ಉತ್ತರ ಕನ್ನಡ ಜಿಲ್ಲೆಯ ಗಂಗಾವಳಿ ನದಿಗೆ ಅಡ್ಡವಾಗಿ ಸೇತುವೆ. ಇದು ಬಿದರಳ್ಳಿ, ಡೋಂಗ್ರಿ ಮತ್ತು ಹೆಗ್ಗರಣೆ ಈ ಮೂರು ಹಳ್ಳಿಗಳಿಗೆ ಪ್ರಯೋಜನ. ಇನ್ನೊಂದು ಗುಂಡುಬಾಳ ಗ್ರಾಮದಲ್ಲಿ ಗುಂಡುಬಾಳ ನದಿಗೆ ಸೇತುವೆ," ಎನ್ನುವ ಮಾಹಿತಿ ನೀಡಿದರು.
              ಭಾರದ್ವಾಜರು ಎನ್ಡಿಟಿವಿ ಪ್ರಶಸ್ತಿ, ಕನ್ನಡ ಪ್ರಭ ಸುವರ್ಣ ವಾಹಿನಿಯ ಅಸಾಮಾನ್ಯ ಕನ್ನಡಿಗ ಪ್ರಶಸ್ತಿ, ಸಿಎನ್ಎನ್-ಐಬಿಎನ್ ಪ್ರಶಸ್ತಿ.. ಹೀಗೆ ರಾಷ್ಟ್ರದ ಪ್ರತಿಷ್ಠಿತ ಪ್ರಶಸ್ತಿ ಪಡೆದಿದ್ದಾರೆ. ಈಗ ಪದ್ಮಶ್ರೀ ಪ್ರಶಸ್ತಿ. ಮಣ್ಣಿನ ಮಗನಾಗಿ, ಮಣ್ಣನ್ನು ನಂಬಿರುವವರ ಬಾಳಿಗೆ ನಿಜಾರ್ಥದಲ್ಲಿ ಭಾರದ್ವಾಜರು ದೀವಿಗೆಯಾಗಿದ್ದಾರೆ. ಅಭಿನಂದನೆಗಳು.


Saturday, July 29, 2017

ಶಿವಣ್ಣ ಊರಿದ ಹಲಸಿನ ಹೆಜ್ಜೆಹೊಸದಿಗಂತದ ಅಂಕಣ - 'ಮಾಂಬಳ' / 22-2-2017

               ಚಿಕ್ಕಮಗಳೂರು ಜಿಲ್ಲೆಯ ಸಖರಾಯಪಟ್ಟಣದ ಶಿವಣ್ಣ ಹಲಸು ಪ್ರಿಯ. ಸಖರಾಯಪಟ್ಟಣವು ಕರ್ನಾಟಕದಲ್ಲೇ ಹೆಸರು ಪಡೆಯಬೇಕಾದ ಉತ್ಕೃಷ್ಟ ಹಲಸಿನ ತಳಿಗಳ ಊರು. ಚಿಕ್ಕಮಗಳೂರಿನಿಂದ ಇಪ್ಪತ್ತೆರಡು ಕಿಲೋಮೀಟರ್ ದೂರ. ಕಡೂರು ಮಂಗಳೂರು ಹೆದ್ದಾರಿಯಲ್ಲಿದೆ.
             ಶಿವಣ್ಣರಿಗೆ ಹಲಸಿನ ಮೌಲ್ಯವರ್ಧನೆಯತ್ತ ಸದಾ ಚಿಂತನೆ. 'ಪರಿವರ್ತನ್' ಎನ್ನುವ ಸಂಘಟನೆಯನ್ನು ಹುಟ್ಟು ಹಾಕಿದ್ದಾರೆ. ಅದರ ಮೂಲಕ ಹಳ್ಳಿಯ ಉತ್ಪನ್ನಕ್ಕೆ ಮಾನ ತರಲು ಶ್ರಮಿಸುತ್ತಿದ್ದಾರೆ. ಮೊದಲು ಸ್ವತಃ ತಾನು ಕಲಿತು, ಬಳಿಕ ಪರಿವರ್ತನ್ ಸಂಸ್ಥೆಯ ಸದಸ್ಯರಿಗೆ ತರಬೇತಿ ನೀಡಿ ತಂಡವನ್ನು ಸದೃಢವನ್ನಾಗಿಸಿದ್ದಾರೆ. ಹಪ್ಪಳ ಮತ್ತು ಚಿಪ್ಸ್ ಮುಖ್ಯ ಉತ್ಪನ್ನ.
              ಆರೇಳು ವರುಷವಾಯಿತು, ಪಾಲಕ್ಕಾಡು ಜಿಲ್ಲೆಯ ಕಾಞಿರಪುಳದ ಜೇಮ್ಸ್ ಪಿ. ಮ್ಯಾಥ್ಯೂ ಅವರ ಹಲಸಿನ ಒಣ ಉತ್ಪನ್ನಗಳು ಶಿವಣ್ಣರನ್ನು ಸೆಳೆದಿತ್ತು. ಹಲಸಿನ ವಿವಿಧ ಉತ್ಪನ್ನಗಳ ವೀಕ್ಷಣೆ, ಅಧ್ಯಯನ, ತರಬೇತಿಯನ್ನು ಕಲಿತು ಬಂದರು. 'ಪರಿವರ್ತನ್' ಮೂಲಕ ಆಸಕ್ತ ಮಹಿಳೆಯರನ್ನು ಒಗ್ಗೂಡಿಸಿದ್ದರು. ಅವರಿಗೆ ಮಾಹಿತಿ ನೀಡಿ ಒಂದೊಂದು ಉತ್ಪನ್ನಗಳ ಮಾದರಿ ಸಿದ್ಧಪಡಿಸಿದ್ದರು. ಆಸಕ್ತರಿಗೆ ಹಂಚಿದರು. ಚಿಪ್ಸ್, ಹಪ್ಪಳ, ಜಾಮ್, ಜ್ಯೂಸ್, ಉಪ್ಪಿನಕಾಯಿ ಅಲ್ಲದೆ ಹಲಸಿನ ಒಣ ಕಾಯಿ ಸೊಳೆ, ಹಣ್ಣು ಸೊಳೆ, ಪೌಡರ್, ಕ್ಯಾಂಡಿ, ಒಣ ಎಳೆಹಲಸು.. ಹೀಗೆ ಸಾಲು ಸಾಲು ಉತ್ಪನ್ನಗಳ ತಯಾರಿ.
                ಹಲಸಿಗೆ ಸಂಬಂಧಿಸಿದ ಸೆಮಿನಾರ್, ಗೋಷ್ಠಿಗಳು, ಮೇಳಗಳು ಎಲ್ಲಿದ್ದರೂ ತಮ್ಮ ತಂಡದೊಂದಿಗೆ ಅಥವಾ ವೈಯಕ್ತಿಕವಾಗಿ ಶಿವಣ್ಣ ಭಾಗಿ. ತರಬೇತಿಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿಯೂ, ಶಿಬಿರಾರ್ಥಿಯಾಗಿಯೂ ಭಾಗವಹಿಸುತ್ತಲೇ ಇರುತ್ತಾರೆ. ಸಂದರ್ಭ ಸಿಕ್ಕಾಗಲೆಲ್ಲಾ ತಮ್ಮ ಉತ್ಪನ್ನಗಳನ್ನು ಪ್ರದರ್ಶನಕ್ಕಿಟ್ಟು ಪ್ರಚಾರ ಮಾಡುತ್ತಾರೆ. ಕೃಷಿಕರ ಫೋನ್ ನಂಬ್ರಗಳನ್ನು ದಾಖಲಿಸಿಟ್ಟು ಸದಾ ಸಂಪರ್ಕದಲ್ಲಿರುತ್ತಾರೆ. ಹಲಸಿಗೆ ಸಂಬಂಧಿಸಿದ ಕೆಲಸಗಳಿಗೆ ಶಿವಣ್ಣರಿಗೆ ವಿಶ್ರಾಂತಿಯಿಲ್ಲ. ಉತ್ಪಾದನೆ ಮತ್ತು ಮಾರುಕಟ್ಟೆಗಾಗಿ ಸಖರಾಯಪಟ್ಟಣದಲ್ಲಿ 'ಅಂಕುರ ಆಹಾರ ಸಂಸ್ಕರಣ ಸಂಘ' ಹುಟ್ಟುಹಾಕಿದ್ದಾರೆ. ತಿರುವನಂತಪುರದಲ್ಲಿ ಜರುಗಿದ ರಾಷ್ಟ್ರೀಯ ಹಲಸು ಹಬ್ಬದಲ್ಲಿ ಹವಾಯಿಯಿ ಕೆನ್ಲವ್ ಅವರು ಹಲಸಿನ ಹಣ್ಣಿನ ಸೊಳೆಯನ್ನು ಬಹುಕಾಲ ಕಾಪಿಡುವ ರೆಸಿಪಿಯೊಂದನ್ನು ಪರಿಚಯಿಸಿದ್ದರು. ಇದನ್ನು ಕೂಡಾ ತನ್ನ ಯೋಜನೆಯನ್ನು ಅಳವಡಿಸಿಕೊಳ್ಳುವ ಫೈಲ್ ತೆರೆದುಕೊಂಡಿದೆ.
                 ವಾರದ ಹಿಂದೆ ವಾಟ್ಸಪ್ಪಿನಲ್ಲಿ ಕೆಲವು ಚಿತ್ರಗಳನ್ನು ಹರಿಯಬಿಟ್ಟಿದ್ದರು. ಎಳೆಹಲಸಿನ (ಗುಜ್ಜೆ) 'ಅಡುಗೆಗೆ ಸಿದ್ಧ' - ರೆಡಿ ಟು ಕುಕ್ - ಉತ್ಪನ್ನವನ್ನು ಪ್ಯಾಕೆಟ್ ಮಾಡಿ ಮಾರುಕಟ್ಟೆ ಮಾಡುವ ಯತ್ನ. ಕಳೆದ ವರುಷ ಪ್ರಾಯೋಗಿಕವಾಗಿ ಒಂದು ಕ್ವಿಂಟಾಲ್ ಗುಜ್ಜೆಯನ್ನು ಅಡುಗೆಗೆ ಸಿದ್ಧ ರೂಪದಲ್ಲಿ ಮಾರುಕಟ್ಟೆ ಮಾಡಿದ್ದಾರೆ. ಈ ಉತ್ಪನ್ನಕ್ಕೆ ತಾಳಿಕೆ ಕಡಿಮೆ. ಕ್ಷಿಪ್ರವಾಗಿ ಗ್ರಾಹಕರಿಗೆ ತಲಪಿಸುವುದು ದೊಡ್ಡ ಸವಾಲು.
                 ಬೆಂಗಳೂರು, ಮಂಗಳೂರಿನಂತಹ ದೊಡ್ಡ ನಗರದಲ್ಲಿ ಕ್ಯಾಟರಿಂಗ್, ಅಡುಗೆಯವರನ್ನು ಭೇಟಿ ಮಾಡುವ ಯೋಚನೆಯಿದೆ. ಅವರಿಂದ ದೊಡ್ಡ ಪ್ರಮಾಣದಲ್ಲಿ ಆರ್ಡರ್ ಸಿಕ್ಕಿ ಬಿಟ್ಟರೆ ಅಡುಗೆಗೆ ಬೇಕಾದ ಗುಜ್ಜೆಯನ್ನು 'ರೆಡಿ ಟು ಕುಕ್' ರೂಪದಲ್ಲಿ ಒದಗಿಸಬಹುದು, ಎನ್ನುತ್ತಾರೆ. ಈ ಕುರಿತು ಹುಡುಕಾಟ ಆರಂಭವಾಗಿದೆ. ಶಿವಣ್ಣ ಭುವನೇಶ್ವರಕ್ಕೆ ಹೋಗಿದ್ದಾಗ ಚಿಕ್ಕ ಗಾಡಿಯೊಂದರಲ್ಲಿ ಎಳೆ ಹಲಸಿನ 'ರೆಡಿ ಟು ಕುಕ್' ಉತ್ಪನ್ನ ಮಾರಿಹೋಗುತ್ತಿರುವುದನ್ನು ನೋಡಿದ್ದರು. ಅಲ್ಲಿ ಸಾಧ್ಯವಾದುದು ನಮ್ಮಲ್ಲಿ ಸಾಧ್ಯವಿಲ್ವಾ? ಈ ಪ್ರಶ್ನೆ ಶಿವಣ್ಣರ ಮನದಲ್ಲಿ ರಿಂಗಣಿಸುತ್ತಿದೆ.
               ಕೇವಲ ರೆಡಿ ಟು ಕುಕ್ ಉತ್ಪನ್ನ ಮಾತ್ರವಲ್ಲ ಹಲಸಿನ ಹಣ್ಣನ್ನು ಮಾರುಕಟ್ಟೆ ಮಾಡುವ ಕಾಯಕ ನಿರಂತರ. ವರುಷಪೂರ್ತಿ ಹಲಸಿನ ಹಣ್ಣು ಸಿಗಬೇಕೆನ್ನುವುದು ಅವರ ದೂರದೃಷ್ಟಿ. ಮೂರು ವರುಷದ ಹಿಂದೆ ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ ಸಮಾರಂಭವೊಂದರಲ್ಲಿ ಜೇಮ್ ಜೋಸೆಫ್ ಅವರ 'ಜ್ಯಾಕ್ಫ್ರುಟ್365' ಬ್ರಾಂಡಿನ ಶೈತ್ಯೀಕರಿಸಿದ ಹಣ್ಣು (ಫ್ರೀಝ್ ಡ್ರೈ) ತಿಂದಿದ್ದರು. ಅದರ ರುಚಿಗೆ ಮಾರುಹೋದ ಶಿವಣ್ಣರಿಗೆ ಸದಾ ಫ್ರೀಝ್ ಡ್ರೈ ಗುಂಗು. ಸಂಬಂಧಪಟ್ಟ ಕಂಪೆನಿ, ಯಂತ್ರೋಪಕರಣಗಳಿಗೆ ಗೂಗಲ್ ಹುಡುಕಾಟ. ಗುಜರಾತಿನ ವಡೋದರದಲ್ಲಿ  ಒಂದು ಕಂಪೆನಿ ಪತ್ತೆ. ಅದರ ವರಿಷ್ಠರೊಂದಿಗೆ ನಿರಂತರ ಮಾತುಕತೆ. ಹಲಸಿನ ಹಣ್ಣಿನೊಂದಿಗೆ ವಡೋದರಕ್ಕೆ ಹೋದರು. ಯಂತ್ರಗಳನ್ನು ಅಭ್ಯಸಿಸಿದರು. ಯಂತ್ರಕ್ಕೆ ಸ್ವತಃ ಹಣ್ಣನ್ನು ಉಣಿಸಿ ಪ್ರಾಯೋಗಿಕವಾಗಿ ಫ್ರೀಝ್ ಡ್ರೈ ಉತ್ಪನ್ನವನ್ನು ಮಾಡಿದರು.
               ಹಲಸಿನ ಹಣ್ಣಿನಲ್ಲಿರುವ ತೇವಾಂಶ ದ್ರವರೂಪಕ್ಕೆ ಬಾರದೆ ನೇರವಾಗಿ ಆವಿಯಾಗಿ ಹೋಗುವುದು ಫ್ರೀಝ್ ಡ್ರೈಯಿಂಗಿನ ವೈಶಿಷ್ಟ್ಯ. ಸಾಮಾನ್ಯವಾಗಿ ಬಿಸಿ ಗಾಳಿ ಬಳಸಿ ಮಾಡುವ  ಡ್ರೈಯಿಂಗಿನಲ್ಲಿ  ಹನ್ನೆರಡರಿಂದ ಹದಿನೈದು ಶೇಕಡ ತೇವಾಂಶ ಉಳಿಯುತ್ತದೆ. ಆದರೆ ಫ್ರೀಝ್ ಡ್ರೈಯಿಂಗಿನಲ್ಲಿ ಉಳಿಯುವುದು ನಾಲ್ಕು ಶೇಕಡಾ ಮಾತ್ರ. ಉಳಿದೆಲ್ಲಾ ಒಣಗಿಸುವ ವಿಧಾನಕ್ಕಿಂತ ಹೆಚ್ಚಾಗಿ ಈ ವಿಧಾನವು ಮೂಲ ಉತ್ಪನ್ನದ  ಪರಿಮಳ, ರೂಪ, ಉಳಿಸಿಕೊಡುತ್ತದೆ.  ಆಯಾಯ ಒಳಸುರಿಯಲ್ಲಿರುವ ತೇವಾಂಶ ಹೊಂದಿಕೊಂಡು ಫ್ರೀಝ್ ಡ್ರೈ ಕೊನೆ ಉತ್ಪನ್ನ ಸಿಗುತ್ತದೆ. ಶಿವಣ್ಣರ ಅಧ್ಯಯನವಿದು.
ವಡೋದರಕ್ಕೆ ಹೋಗಿ ಬಂದ ಮೇಲೆ ಶಿವಣ್ಣರ ತಲೆಯೊಳಗೆ ಫ್ರೀಝ್ ಡ್ರೈಯರ್ ಯಂತ್ರದ ಸದ್ದು! ಸ್ವಲ್ಪ ಹೆಚ್ಚೇ ಹಣಕಾಸು ಬೇಡುವ ಈ ಯಂತ್ರವನ್ನು ಹೊಂದುವ ಕನಸಿನ ತೇವ ಇನ್ನೂ ಆರಿಲ್ಲ. ಹಲಸು ಮತ್ತಿತರ ಸ್ಥಳಿಯ ಹಣ್ಣುಗಳ ಸಂಸ್ಕರಣೆ ಮಾಡುವ ಉದ್ದೇಶ. ಸಖರಾಯಪಟ್ಟಣದಲ್ಲೂ ಯುನಿಟ್ ಸ್ಥಾಪಿಸಿಬೇಕು ಎನ್ನುವ ಆಶೆ ಹಸಿಯಾಗಿದೆ. ಮಧುರೈಯಲ್ಲಿ ಒಂದು ಯುನಿಟ್ ಕಾರ್ಯಾಚರಿಸುತ್ತಿದೆ. ನೋಡಿದ್ದೇನೆ, ಎನ್ನುವ ಹಿಮ್ಮಾಹಿತಿ ನೀಡುತ್ತಾರೆ.
                 ಸದಾ ಅಧ್ಯಯನಶೀಲ ಮತ್ತು ಹೊಸತರ ಹುಡುಕಾಟದಲ್ಲಿರುವ ಶಿವಣ್ಣರಿಗೆ ಒಂದು ಮಾಹಿತಿ ಸಿಕ್ಕಿತು. ಪಿಲಿಪೈನ್ಸಿನಲ್ಲಿ ಹಲಸಿನ ಬೀಜವನ್ನು ಬಳಸಿ ಪೇಯ ಮಾಡುತ್ತಾರಂತೆ. ನಮ್ಮಲ್ಲಿ ಯಾಕೆ ಆಗದು? ಪ್ರಯೋಗ ಶುರು. ಒಂದೇ ವರುಷದಲ್ಲಿ ಫಾರ್ಮುುಲಾ ಕೈವಶ. ಈ ಪೇಯಕ್ಕೆ 'ಜಾಫಿ' ಎಂದು ನಾಮಕರಣ ಮಾಡಿದರು. ಕ್ಲಿಕ್ ಆಯಿತು. ಈಗ ಬೇಡಿಕೆ ಏರುತ್ತಿದೆ. ಕನ್ನಾಡಿನಾದ್ಯಂತ ಓಡಾಡಿ ಸ್ಥಳೀಯ ಹಲಸು ಪ್ರಿಯ ಸಂಘಟನೆಗಳೊಂದಿಗೆ ಹಲಸಿನ ಖಾದ್ಯಗಳ ಪ್ರಾತ್ಯಕ್ಷಿಕೆಯನ್ನು ಶಿವಣ್ಣ ಆಯೋಜಿಸಿದ್ದರು.
                 ವರುಷದಿಂದ ವರುಷಕ್ಕೆ ಸಖರಾಯಪಟ್ಟಣದ ಹಲಸಿಗೆ ಬೇಡಿಕೆ ಹೆಚ್ಚುತ್ತಿದೆ. ದಶಕಗಳಿಂದ ಮೂರು ನಾಲ್ಕು ತಿಂಗಳಷ್ಟೇ ನಡೆಯುತ್ತಿರುವ ಹಲಸಿನ ವ್ಯಾಪಾರವು ಕೆಲವು ವರುಷಗಳಿಂದ ಹೆಚ್ಚು ಕಾಲಕ್ಕೆ ಹಬ್ಬುತ್ತಾ ಬಂದು ಈಗ ವರ್ಷಕ್ಕಿಡೀ ಚಾಚಿದೆ. ಇಲ್ಲಿಯ ಹಣ್ಣು ಶಿವಮೊಗ್ಗ, ಮಂಗಳೂರು, ಬೆಂಗಳೂರು, ತಮಿಳುನಾಡು, ಬೆಳಗಾವಿ... ಮೊದಲಾದ ಊರುಗಳಿಗೆ ಹೋಗುತ್ತದೆ, ಎಂದು ಖುಷಿಯಿಂದ ಶಿವಣ್ಣ ತನ್ನೂರಿನ ಹಲಸಿಗೆ ದನಿಯಾಗುತ್ತಾರೆ. (ಶಿವಣ್ಣ - 94814 09660) 'ಹಲಸಿನ ಮೌಲ್ಯವರ್ಧನೆಯಾದಾಗ ಮಾತ್ರ ಅದರ ಮಾನವರ್ಧನೆಯಾಗುತ್ತದೆ' ಎನ್ನುವ ಸ್ವ-ಖಚಿತ ನಿಲುವು ಶಿವಣ್ಣರದು.

ಪೇಟೆಯಲ್ಲಿ ಊರಿನ ತರಕಾರಿಯ ಹುಡುಕಾಟ


ಉದಯವಾಣಿಯ ಅಂಕಣ 'ನೆಲದ ನಾಡಿ' / 2-2-2017

                 'ಊರಿನ ತರಕಾರಿ ಬಂದಿದೆಯಾ?' ಬಹುತೇಕ ತರಕಾರಿ ಅಂಗಡಿಗಳಲ್ಲಿ ಗ್ರಾಹಕರು ಕೇಳುವ ಮೊದಲ ಪ್ರಶ್ನೆ. ಊರಿನದ್ದಾದರೆ ದರದಲ್ಲಿ ಚೌಕಾಶಿ ಮಾಡದೆ ತಮಗೆ ಬೇಕಾದ್ದಕ್ಕಿಂತ ಒಂದರ್ಧ ಕಿಲೋ ಹೆಚ್ಚೇ ಒಯ್ಯುತ್ತಾರೆ. ಉಣ್ಣುವವನಿಗೆ ಗೊತ್ತಿದೆ, ಇಂದು ಎಲ್ಲಾ ತರಕಾರಿಗಳು ರಾಸಾಯನಿಕದಿಂದ ಮಿಂದು 'ಶುದ್ಧ'ವಾಗಿ ಬರುತ್ತದೆ. ಸ್ಥಳೀಯವಾಗಿ ಬೆಳೆಯುವ ತರಕಾರಿಯಲ್ಲಿ ಹೇಳುವಂತಹ ರಾಸಾಯನಿಕಗಳಿಲ್ಲ ಎನ್ನುವುದು ನಂಬುಗೆ. ಆದರೆ ವಾಸ್ತವ ಮಾತ್ರ ಭಿನ್ನ. ಮಾರುಕಟ್ಟೆಗಾಗಿ ವಿವಿಧ ಸಿಂಪಡಣೆಗಳಿಂದ ತೋಯ್ದ ಹೊಲದಲ್ಲೇ ಮನೆಗೆ ಬೇಕಾದಷ್ಟು ವಿಷ ರಹಿತವಾಗಿ ಪ್ರತ್ಯೇಕವಾಗಿ ಬೆಳೆಯುವವರೂ ಇದ್ದಾರೆ!
              ರಾಸಾಯನಿಕ ಗೊಬ್ಬರ ಹಾಕದೆ, ವಿಷ ಸಿಂಪಡಿಸದೆ ತರಕಾರಿಯನ್ನು ಬೆಳೆಯಲು ಸಾಧ್ಯವೇ ಇಲ್ಲ ಎನ್ನುವುದು ಒಂದು ವಾದ ಮತ್ತು ಸಮರ್ಥನೆ. ಈ ಗುಲ್ಲುಗಳ ಮಧ್ಯೆ ಸದ್ದಿಲ್ಲದೆ ಯಾವುದೇ ರಾಸಾಯನಿಕ ಒಳಸುರಿಗಳನ್ನು ಬಳಸದೆ, ದೇಸಿ ಜ್ಞಾನದ ವಿವಿಧ ಸಾವಯವ ಒಳಸುರಿಗಳನ್ನು ಸಿದ್ಧಪಡಿಸಿ ವರುಷಪೂರ್ತಿ ಬೆಳೆಯುವ ಕೃಷಿಕರ ಅನುಭವವೇ ಭಿನ್ನ. ಬೆಳ್ತಂಗಡಿಯ ಅಮೈ ದೇವರಾವ್, ಪೆರ್ಲದ ವರ್ಮುುಡಿ ಶಿವಪ್ರಸಾದ್, ಪುತ್ತೂರು ಮರಿಕೆಯ ಎ.ಪಿ.ಸದಾಶಿವ, ಮುಳಿಯ ವೆಂಕಟಕೃಷ್ಣ ಶರ್ಮ.. ಹೀಗೆ ಹಲವು ಮಂದಿ ಕೃಷಿಕರು  ವಿಷರಹಿತ ಕೃಷಿಗೆ ವಿದಾಯ ಹೇಳಿದ ಅನುಭವಿಗಳ ತರಕಾರಿ ಕೃಷಿ ಅನುಭವವು ಅಧುನಿಕ ಕೃಷಿಯನ್ನು ಅಣಕಿಸುತ್ತದೆ.
              "ನಾವು ಅಂಗಡಿಯಿಂದ ತರಕಾರಿ ತರುವುದೇ ಇಲ್ಲ. ನಮ್ಮ ಊಟಕ್ಕೆ ನಾವೇ ಬೆಳೆದ ತರಕಾರಿ. ಕೃಷಿಕನಾದವನು ಅಂಗಡಿಯಿಂದ ತರಕಾರಿ ತರುವುದೆಂದರೆ ನಮಗೆ ನಾವೇ ಅವಮಾನ ಮಾಡಿಕೊಂಡ ಹಾಗೆ," ಹೀಗೆನ್ನುತ್ತಾರೆ ಅಮೈ ದೇವರಾವ್. ಅವರಿಗೀಗ ಎಪ್ಪತ್ತೆರಡು ವರುಷ. ಬೆಳ್ತಂಗಡಿ ತಾಲೂಕಿನ ಮಿತ್ತಬಾಗಿಲಿನ ಕಿಲ್ಲೂರಿನವರು. ಭತ್ತದ ತಳಿ ಸಂರಕ್ಷಕರು. ಇವರಿಗೆ ತರಕಾರಿ ಕೃಷಿಗೆ ರಜೆಯಿಲ್ಲ. ಇದಕ್ಕಾಗಿ ಪ್ರತ್ಯೇಕ ಶ್ರಮ ವ್ಯಯಿಸುವುದಿಲ್ಲ.  ಅಡಿಕೆ, ಭತ್ತದ ಕೃಷಿಯ ಮಧ್ಯೆ ಸ್ವಲ್ಪ ಹೆಚ್ಚು ಗಮನ ಕೊಡುತ್ತಾರೆ. ತರಕಾರಿ ಕೃಷಿಯಲ್ಲಿ ಇವರದ್ದೇ ಆದ ಕ್ರಮ, ವಿಧಾನ.
              ಜನವರಿ ತಿಂಗಳಿನಲ್ಲಿ ಸೌತೆಕಾಯಿ ಕೃಷಿ. ಮೊದಲು ಸಾಲನ್ನು ಸಿದ್ಧ ಮಾಡಿಕೊಳ್ಳುತ್ತಾರೆ. ಸಾಲಿನ ಮೇಲೆ ಭತ್ತದ ಹೊಟ್ಟು ಸುರಿದು, ಬೆಂಕಿ ಹಾಕಿ ಸುಡುತ್ತಾರೆ. ಮಣ್ಣಿನಲ್ಲಿರುವ ಚಿಕ್ಕಪುಟ್ಟ ಕೀಟ, ಬ್ಯಾಕ್ಟೀರಿಯಾಗಳ ನಾಶಕ್ಕೆ ಈ ಉಪಾಯ. ಸುಟ್ಟ ಜಾಗದ ಮಣ್ಣನ್ನು ಹಾರೆಯಿಂದ ಕೊಚ್ಚಿ ಬೀಜ ಪ್ರದಾನ. ಮೊಳಕೆಯೊಡೆದು ಸಸಿಯಾದಂತೆ ಹಟ್ಟಿಗೊಬ್ಬರ, ಸುಡುಮಣ್ಣು ಉಣಿಕೆ. ಒಂದೂವರೆ ತಿಂಗಳ ಬಳಿಕ ಪುನಃ ಗೊಬ್ಬರ ಹಾಕಿ ಮಣ್ಣನ್ನು ಪೇರಿಸಿ ಮಡಿಯಂತೆ ಮಾಡುತ್ತಾರೆ.
               ಬಿಸಿಲ ಕಾಲವಾದ್ದರಿಂದ ಸಸಿಗಳಿಗೆ ನಿರಂತರ ತೇವಕ್ಕಾಗಿ ಎರಡು ಸಾಲುಗಳ ಮಧ್ಯದಲ್ಲಿ ನೀರು ನಿಲ್ಲಿಸುತ್ತಾರೆ. ಮುಂಜಾವು ಕೊಡದಲ್ಲಿ ನೀರನ್ನು ಚಿಮುಕಿಸುವುದು ಹಳೆಯ ಪದ್ಧತಿ. ಎಲೆಗಳ ಮೇಲೆ ಕುಳಿತ ಮಂಜಿನ ನೀರನ್ನು ಹೊರ ಹಾಕುವುದೂ ಉದ್ದೇಶ. ಹತ್ತು ಸಾಲಿನಲ್ಲಿ ಸೌತೆ, ಎರಡು ಸಾಲು ಬೆಂಡೆ, ಎರಡು ಸಾಲು ಅಲಸಂಡೆ ಬೀಜಗಳನ್ನು ಏಕಕಾಲದಲ್ಲಿ ಹಾಕುತ್ತಾರೆ.
              "ಕುಂಬಳ ಮತ್ತು ಸಿಹಿಗುಂಬಳ (ಚೀನಿಕಾಯಿ) ಗಳ ಬೀಜಗಳನ್ನು ಜತೆಯಲ್ಲಿ ಹಾಕಬೇಡಿ.  ಹಾಕುವಾಗಲೇ ಸ್ವಲ್ಪ ಹೆಚ್ಚೇ ಬೀಜಗಳನ್ನು ಊರಿ. ಮೊಳಕೆಯೊಡೆದು ಸಸಿಯಾದಾಗ ಆರೋಗ್ಯವಂತ ಸಸಿಗಳನ್ನು ಬಿಟ್ಟುಬಿಡಿ. ಉಳಿದುದನ್ನು ಕಿತ್ತು ಬಿಡಿ. ಚೀನಿಕಾಯಿಗೆ ಕೃತಕ ಪರಾಗಸ್ಪರ್ಶ ಬೇಕು" ಎನ್ನುತ್ತಾರೆ. ಎಪ್ರಿಲ್, ಮೇ, ಜೂನ್ ತಿಂಗಳು ಮಾವು, ಹಲಸಿನ ಋತು. ಒಂದೇ ಒಂದು ಮಾವಿನಹಣ್ಣು, ಹಲಸಿನ ಕಾಯಿ ದೇವರಾಯರಲ್ಲಿ ವ್ಯರ್ಥವಾಗುವುದಿಲ್ಲ. ಹಲಸಿನ ಕಾಯಿಯ ಹಪ್ಪಳ, ಸಾಂಬಾರು, ಪಲ್ಯ. ಮಾವಿನ ಮಾಂಬಳ, ರಸಾಯನ, ಪಲ್ಯ, ಸಾಂಬಾರು.. ಹೀಗೆ ಊಟದ ಬಟ್ಟಲಿನಲ್ಲಿ ರುಚಿ ವೈವಿಧ್ಯ. ಇದೇ ಸಮಯಕ್ಕೆ ದೀವಿಹಲಸು, ಕಣಿಲೆ, ಎಲೆ ತರಕಾರಿಗಳೂ ಕಾಯುತ್ತಿರುತ್ತವೆ.
                 "ನಮ್ಮಲ್ಲಿ ಸೌತೆ, ಚೀನಿಕಾಯಿ, ಕುಂಬಳಕಾಯಿಗಳನ್ನು ಸ್ಟಾಕ್ ಮಾಡಿಡುತ್ತೇವೆ. ಮಳೆಗಾಲಕ್ಕೆ ಬೇಕಲ್ವಾ. ಆಟಿ ತಿಂಗಳಲ್ಲಿ - ಆಗಸ್ಟ್ - ಹಣ್ಣಾದ ಸೌತೆಕಾಯಿಯನ್ನು ಹೆರೆದು ಬೆಲ್ಲ ಹಾಕಿ ತಿಂದರೆ ಅಮೃತ ಸದೃಶವಾದ ರುಚಿ. ಆರೋಗ್ಯಕ್ಕೂ ಒಳ್ಳೆಯದು. ಸೌತೆ ಬೀಜದ ಸಾರು, ಸೌತೆ ಮತ್ತು ಹಲಸಿನ ಬೀಜ ಸೇರಿಸಿದ ಪಲ್ಯ ಇದ್ದರೆ ಒಂದೆರಡು ತುತ್ತು ಅನ್ನ ಹೆಚ್ಚೇ ಹೊಟ್ಟೆಸೇರುತ್ತದೆ" ಎನ್ನುತ್ತಾರೆ. ಅಲಸಂಡೆಗೆ ಬಂಬುಚ್ಚಿ ಬಾಧೆಯಿದೆ. ಕೆಂಪಿರುವೆಯನ್ನು ಸಾಲಿನಲ್ಲಿ ಬಿಟ್ಟರೆ ಬಂಬುಚ್ಚಿ ಕಾಟ ನಿಯಂತ್ರಣ. ಜೂನ್ ತಿಂಗಳಿನಲ್ಲಿ ಕೆಸು, ತುಪ್ಪಗೆಣಸು, ಸಾಂಬ್ರಾಣಿ ಗಡ್ಡೆ ನಾಟಿ ಮಾಡಿದರೆ ದಶಂಬರಕ್ಕೆ ಅಗೆಯಬಹುದು. 
               ಮುಳ್ಳುಸೌತೆ ಬೀಜ ಹಾಕಲು ಜುಲೈ ತಿಂಗಳು ಪ್ರಶಸ್ತ. ಗೋಬರ್ ಗ್ಯಾಸ್ ಘಟಕದ ತ್ಯಾಜ್ಯದ ಹುಡಿಯನ್ನು ಸಾಲಿನಲ್ಲಿ ಉದ್ದಕ್ಕೆ ಸ್ವಲ್ಪ ದಪ್ಪಕ್ಕೆ ಹಾಕಿ. ಅದರ ಮೇಲೆ ಸುಡುಮಣ್ಣನ್ನು ಸೇರಿಸಿ ಬೀಜವನ್ನು ಊರಿ. ಚೆನ್ನಾಗಿ ಬೆಳೆಯುತ್ತದೆ. ಮುಳ್ಳುಸೌತೆಯ ಬಳ್ಳಿ ಹಬ್ಬಿಸಲು ಚಪ್ಪರ ಬೇಡ. ನೆಲದಲ್ಲಿ ಹಬ್ಬಲು ಬಿಡಿ. ನೆಲದಲ್ಲಾದರೆ ಫಸಲು ಜಾಸ್ತಿ ಎಂಬ ಅನುಭವ ರಾಯರದು.
                   ಸೆಪ್ಟೆಂಬರ್, ಅಕ್ಟೋಬರ್ ತಿಂಗಳಲ್ಲಿ ಯಥೇಷ್ಟ ಮುಳ್ಳುಸೌತೆ ಫಸಲು. ಎಳತರಲ್ಲಿ ತಿನ್ನಲು ರುಚಿ. ತಿಂದಷ್ಟೂ ಮತ್ತೂ ತಿನ್ನಿಸುವ ಸ್ವಾದ. ತಿಂದು ತಿಂದು ಸಾಕಾಗಿ ಹೋಯಿತು ಅನ್ನಿಸಿದಾಗ ಕಡುಬು, ದೋಸೆ, ಪಾಯಸ ಮಾಡಿ ಮೌಲ್ಯವರ್ಧನೆ ಮಾಡುತ್ತೇವೆ, ಎಂದು ಬಾಯ್ತುಂಬಾ ನಗುತ್ತಾರೆ. ನವಂಬರ ಮಧ್ಯ ಭಾಗದಲ್ಲಿ ಹಲಸಿನ ಎಳೆ ಗುಜ್ಜೆ ಲಭ್ಯ. ದಶಂಬರಕ್ಕೆ ಹೇಗೂ ಗೆಡ್ಡೆ ತರಕಾರಿಗಳು ಭೂಒಡಲಲ್ಲಿ ಕಾಯುತ್ತಿರುತ್ತವೆ.
                 ಇವರದು ಸೊಪ್ಪಿನ ಹಟ್ಟಿ. ಗೊಬ್ಬರದಿಂದ ಹೊರಬರುವ ದ್ರಾವಣವನ್ನು ಸಂಗ್ರಹಿಸಿಟ್ಟುಕೊಳ್ಳುತ್ತಾರೆ.. ತರಕಾರಿಗಳು ಹೂ ಬಿಡುವ ಹೊತ್ತಿಗೆ ಈ ದ್ರಾವಣವನ್ನು 1:2 ಪ್ರಮಾಣದಲ್ಲಿ ನೀರಿನೊಂದಿಗೆ ಬೆರಕೆ ಮಾಡಿ ಎರೆಯುತ್ತಾರೆ.  ಗಿಡಗಳು ಸದೃಢವಾಗಿ ಬೆಳೆಯುತ್ತವೆ. ತರಕಾರಿ ಬೀಜಗಳು ಪ್ರತೀವರುಷವೂ ಮರುಬಳಕೆಯಾಗುತ್ತದೆ. ತರಕಾರಿ ಬೀಜಗಳ ಸಂಗ್ರಹವು ಕೃಷಿಕರಲ್ಲಿರಬೇಕು. ಬೀಜಕ್ಕಾಗಿ ಅಲೆಯಬಾರದು. ನಾವೇ ಬೆಳೆದದ್ದನ್ನು ತಿನ್ನುವುದು ಹೆಮ್ಮೆ ಅಲ್ವಾ - ದೇವರಾಯರ ಬದ್ಧತೆ.
               ಕಾಸರಗೋಡು ಜಿಲ್ಲೆಯ ಪೆರ್ಲ ಸನಿಹದ ವರ್ಮುುಡಿ ಶಿವಪ್ರಸಾದ್ ಅವರ ಅನುಭವ ನೋಡಿ - ಮನೆಗೆಂದು ಸೀಮಿತವಾಗಿ ತರಕಾರಿ ಬೆಳೆಸುವ ಬದಲು ಮಾರುಕಟ್ಟೆಯ ಲಕ್ಷ್ಯವೂ ಇದ್ದರೆ ನಿರ್ವಹಣೆ ಸುಲಭ. ತರಕಾರಿಯಲ್ಲಿ ಸ್ವಾವಲಂಬಿಯೂ ಆಗಬಹುದು ಎನ್ನುತ್ತಾರೆ. " ಮೂರು ದಶಕದ ಹಿಂದೆ ಇವರ ತೀರ್ಥರೂಪರಿಗೆ ಮಧುಮೇಹ ಬಾಧಿಸಿತು. ವೈದ್ಯರು 'ಹೆಚ್ಚು ತರಕಾರಿ ತಿನ್ನಿ' ಎಂದು ಸಲಹೆ ಮಾಡಿದ್ದರು. ಕೊಂಡು ತರುವುದಕ್ಕಿಂತ ತಾವೇ ಬೆಳೆಯುವ ಛಲ.. ಇವರಿಗೆ ವರುಷಪೂರ್ತಿ ತಾಜಾ, ನಿರ್ವಿಷ ಮನೆ ತರಕಾರಿ. ಮನೆ ತರಕಾರಿ ತಿಂದು ಒಗ್ಗಿಹೋಗಿದೆ. ಹಾಗಾಗಿ ರಾಸಾಯನಿಕ ತರಕಾರಿಯ ಒಂದು ಹೋಳು ಬಾಯಿಗಿಟ್ಟರೂ ಗೊತ್ತಾಗಿಬಿಡುತ್ತದೆ" ಎಂದು ನಗುತ್ತಾರೆ.
               ಮಂಗಳೂರಿನ ಹೆಸರಾಂತ ವೈದ್ಯರಾದ ಡಾ.ಕೆ.ಸುಂದರ ಭಟ್ ಕೆಲವು ವರುಷಗಳಿಂದ ಪ್ಲಾಸ್ಟಿಕ್ ಗ್ರೋಬ್ಯಾಗ್ ಮತ್ತಿತರ ಚೀಲಗಳಲ್ಲಿ ತಾರಸಿಯಲ್ಲಿ ತರಕಾರಿ ಕೃಷಿ ಮಾಡುತ್ತಿದ್ದಾರೆ. "ನಾನು ಕೃಷಿ ಕುಟುಂಬದಿಂದ ಬಂದವ. ಚಿಕ್ಕವನಾಗಿದ್ದಾಗಲಿಂದಲೂ ಕೃಷಿ ಚಟುವಟಿಕೆಗಳಲ್ಲಿ ತೊಡಗಿದ್ದೆ. ಹೀಗೆ ಹವ್ಯಾಸವಾಗಿ ಆರಂಭಿಸಿದ ತರಕಾರಿ ಕೃಷಿಯಲ್ಲಿ ಆಸಕ್ತಿ ಹೆಚ್ಚಾಗುತ್ತಾ ಬಂತು," ಎನ್ನುತ್ತಾರೆ. ಇನ್ನೋರ್ವ ಸಾಧಕ ಕಲ್ಲಡ್ಕ ಕರಿಂಗಾಣದ ಡಾ.ಕೆ.ಎಸ್.ಕಾಮತ್ ಅನುಭವ, ತರಕಾರಿ ಕೃಷಿಯು ಅವಲಂಬನಾ ಕೆಲಸವಲ್ಲ. ನಾವೇ ದುಡಿದರೆ ವರುಷಪೂರ್ತಿ ತಾಜಾ ತರಕಾರಿ ಪಡೆಯಬಹುದು.
                 ನಾವು ಬೆಳೆದ ತರಕಾರಿಯನ್ನು ನಾವೇ ತಿನ್ನಬೇಕು ಎನ್ನುವ ಮನಃಸ್ಥಿತಿಗೆ ಒಗ್ಗಿದ, ಅದರಲ್ಲೂ ಸಾವಯವದಲ್ಲೇ ಬೆಳೆದದ್ದಾಗಿರಬೇಕು ಎನ್ನುವ ಅಪ್ಪಟ ವಿಷರಹಿತ ಆಹಾರದ ಮೈಂಡ್ಸೆಟ್ ಹೊಂದಿದ ಮನಸ್ಸುಗಳು ಕನ್ನಾಡಿನಾದ್ಯಂತ ಹಬ್ಬುತ್ತಿದೆ. ಹಾಗಾಗಿ ನೋಡಿ, ತರಕಾರಿ ಅಂಗಡಿಯಲ್ಲಿ 'ಊರಿನ ತರಕಾರಿ ಇದೆಯಾ' ಎಂದು ವಿಚಾರಿಸುವ ಗ್ರಾಹಕರು ನಗರದಲ್ಲಿ ಮಾತಿಗೆ ಸಿಗುತ್ತಾರೆ. ಊರಿನ ತರಕಾರಿಯ ಹುಡುಕಾಟ ನಿತ್ಯ ನಡೆಯುತ್ತಿದೆ.

Friday, July 28, 2017

ಗ್ರಾಮದ ನಕ್ಷೆಗೆ ಹೊಳಪು ತಂದ ಯುವಶಕ್ತಿ

 ನಂದಳಿಕೆ ಬಾಲಚಂದ್ರ ರಾಯರು
 ಕವಿ ಮುದ್ದಣ ಸ್ಮಾರಕ ಭವನ

ಉದಯವಾಣಿಯ 'ನೆಲದ ನಾಡಿ' ಅಂಕಣ / ೧೨-೧-೧೭

            ಮಣಿಪಾಲದ ಅಕಾಡೆಮಿ ಆಫ್ ಜನರಲ್ ಎಜುಕೇಶನ್' ನೀಡುವ ಹೊಸ ವರುಷದ ವಾರ್ಶಿಕ ಪ್ರಶಸ್ತಿಗೆ ನಂದಳಿಕೆ ಬಾಲಚಂದ್ರ ರಾಯರು ಭಾಜನರಾಗಿದ್ದಾರೆ. ಇದರಲ್ಲೇನು ಹೊಸತು? ನಂದಳಿಕೆಯವರಿಗೆ ಸಂದ ಈ ಪ್ರಶಸ್ತಿ ಇದೆಯಲ್ಲಾ, ಅದು ಗ್ರಾಮೀಣ ಭಾರತಕ್ಕೆ ಸಂದ ಮಾನ. ಹಳ್ಳಿಯೊಂದು ಸಶಕ್ತವಾಗಿ ಎದ್ದು ನಿಲ್ಲಲು ಕಾರಣರಾದ ಮನಸ್ಸುಗಳಿಗೆ ಸಂದ ಸಂಮಾನ. ನಂದಳಿಕೆಯ ನೆಲದಲ್ಲಿ ಅರಳಿದ ಕವಿ ಮುದ್ದಣನಿಗೆ ಪರೋಕ್ಷವಾಗಿ ಸಲ್ಲಲ್ಪಟ್ಟ ಗೌರವ.
             ಕವಿ ನಂದಳಿಕೆ ಲಕ್ಷ್ಮೀನಾರ್ಣಪ್ಪಯ್ಯ - ಕಾವ್ಯನಾಮ 'ಮುದ್ದಣ.'  ಬದುಕಿದ್ದು ಮೂವತ್ತೊಂದು ವರುಷ. ಸಾಧಿಸಿದ್ದು ಅಪಾರ. ಅದು ವಾಙ್ಮಯ ಬೆರಗು. ಕವಿಗೆ ನೆಲೆ ಕಲ್ಪಿಸಲು ಯೋಚನೆ-ಯೋಜನೆ. 'ಕವಿ ಮುದ್ದಣ ಸ್ಮಾರಕ ರೈತ ಸಂಘ' ಕಾರ್ಯಪಡೆ (1958) ಅಸ್ತಿತ್ವಕ್ಕೆ ಬಂತು. ಚಾವಡಿ ಸೀತಮ್ಮ ಹೆಗ್ಗಡತಿ ಉದಾರ ಜಮೀನು ನೀಡಿದರು. ಸ್ಮಾರಕಕ್ಕೆ ಅಡಿಗಲ್ಲು ಬಿತ್ತು. ಹಾಕಿದ ಅಡಿಗಲ್ಲು ಕ್ರಮೇಣ ಸ್ಮಾರಕವಾಯಿತು. ಸಂಘ ನಿಶ್ಶಕ್ತಿಯಿಂದ ಬಳಲಿತು. ಕವಿ ಪುನಃ ಯುವಕರ ಮನದ ಕದ ತಟ್ಟಿದ. 'ಕವಿ ಮುದ್ದಣ ಸ್ಮಾರಕ ಮಿತ್ರ ಮಂಡಳಿ' (1979) ರೂಪುಗೊಂಡಿತು. ಊರಿನ ತರುಣ ನಂದಳಿಕೆ ಬಾಲಚಂದ್ರ ರಾವ್ ಮಿತ್ರಮಂಡಳಿಯ ಮುಂಚೂಣಿಯಲ್ಲಿ ನಿಂತರು. ಇವಿಷ್ಟು ಅರ್ಧ ಶತಮಾನದ ಹಿಂದಿನ ದಿನಮಾನಗಳು.
              ಮುದ್ದಣನ ಹೆಸರನ್ನು ಶಾಶ್ವತವಾಗಿಸಬೇಕೆನ್ನುವ ಮಹತ್ತಾದ ಆಶಯದ ಹಿನ್ನೆಲೆಯಲ್ಲಿ ಗ್ರಾಮಾಭಿವೃದ್ಧಿಯ ಅಡಿಗಟ್ಟಿರಬೇಕೆನ್ನುವುದು ಬಾಲಚಂದ್ರರ ಆಶಯವಾಗಿತ್ತು. ಅದಕ್ಕೆ ಪೂರಕವಾಗಿ ಸುಮಾರು ಅರುವತ್ತರ ಆಜೂಬಾಜಿನಲ್ಲಿ ಘಟಿಸಿಹೋದ ಘಟನೆಯು ಬಾಲಚಂದ್ರರೊಳಗೆ ಸುಪ್ತ ರೂಪದಲ್ಲಿ ಜಾಗೃತವಾಗಿತ್ತು. ಇವರ ಅಣ್ಣ ಭಾಸ್ಕರ ರಾಯರಿಗೆ ವಿಷಮಶೀತ ಜ್ವರ ಬಾಧಿಸಿತ್ತು. ಊರಿನಲ್ಲಿ ಆಸ್ಪತ್ರೆಯಿದ್ದಿರಲಿಲ್ಲ. ದೂರದ ಪೇಟೆಯಿಂದ ವೈದ್ಯರು ಬರಬೇಕಾಗಿತ್ತು. ತಕ್ಷಣ ಬರೋಣ ಎಂದರೂ ರಸ್ತೆಯ ಸಮಸ್ಯೆ. ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಸಿಗದೆ ಭಾಸ್ಕರ ರಾಯರು ನಿಧನರಾಗಿದ್ದರು. ಬಾಲಚಂದ್ರರು ಅಧೀರರಾದರು.
              ನಂದಳಿಕೆಯಲ್ಲಿ ಚಿಕಿತ್ಸೆಯ ಕೊರತೆಯಿಂದಾಗಿ ಜನರಿಗೆ ತೊಂದರೆಯಾಗಬಾರದು ಎನ್ನುವ ದೃಢ ಸಂಕಲ್ಪ. ಊರಿಗೆ ರಸ್ತೆ, ಸಾರಿಗೆ, ಆಸ್ಪತ್ರೆ - ಈ ಮೂರು ಮೊದಲಾದ್ಯತೆಯಲ್ಲಿ ಆಗಬೇಕಾದ ವ್ಯವಸ್ಥೆಗಳು. ಭಾಸ್ಕರ ರಾಯರ ಅಗಲಿಕೆಯು ಊರಿನ ಜನರ ಮನಃಸ್ಥಿತಿಯನ್ನು ಬದಲಿಸಿತು. ಊರಿಗೆ ಊರೇ ಬೆಂಬಲಕ್ಕೆ ನಿಂತಿತು. ಮಿತ್ರ ಮಂಡಳಿಯ ಮೂಲಕ ಹೋರಾಟಕ್ಕೆ ವೇದಿಕೆ ಸಜ್ಜಾಯಿತು. ಬಾಲಚಂದ್ರ ರಾಯರಿಗೆ ಮಿತ್ರಮಂಡಳಿಯ ಅಧ್ಯಕ್ಷತೆ ಹೆಗಲೇರಿತು. ಊರಿನ ಅಭಿವೃದ್ಧಿಗಾಗಿ ದುಡಿಯುವ ಸಂಕಲ್ಪ. ಊರವರನ್ನು ಹೆಗಲೆಣೆಯಾಗಿ ಬಳಸಿದರು, ಬೆಳೆಸಿದರು. ಬ್ಯಾಂಕ್ ಉದ್ಯೋಗಿಯಾಗಿದ್ದ ಇವರು ಹಗಲು ಬ್ಯಾಂಕ್, ಮಿಕ್ಕ ಸಮಯದಲ್ಲಿ ಮುದ್ದಣ ಸ್ಮರಣೆ, ಊರಿನ ಅಭಿವೃದ್ಧಿ.
               ಊರಿನ ಅಭಿವೃದ್ಧಿಯ ರೂಪುರೇಷೆ ಸಿದ್ಧವಾಯಿತು. ಸಂಬಂಧಪಟ್ಟ ಇಲಾಖೆಯೊಂದಿಗೆ ನಿರಂತರ ಸಂಪರ್ಕ. ಕಾಗದ ಪತ್ರಗಳ ರವಾನೆ. ವರಿಷ್ಠರ ಭೇಟಿ. ಬೆನ್ನು ಬಿಡದ ಬೇತಾಳನಂತೆ ಇಲಾಖೆಗಳ ಮೇಜಿಂದ ಮೇಜಿಗೆ ಅಲೆದಾಡಿದರು. ಕಚೇರಿಯ ಕೆಂಪು ಪಟ್ಟಿ ವ್ಯವಸ್ಥೆಯನ್ನು ಹತ್ತಿರ ಕಂಡರು. ಹಲವು ಬಾರಿ ಅನುಭವಿಸಿದರು. ಇಲಾಖೆಗಳಿಗೆ ಕಾಗದ ಪತ್ರ ರವಾನಿಸಲು ಅಂಚೆ ಚೀಟಿ ಬೇಕಲ್ವಾ. ಅದಕ್ಕೆ ಹಣ ಹೊಂದಿಸಲು ಊಟ ಬಿಡಬೇಕಾದ ದಿನಗಳಿದ್ದುವು, ಎಂದು ನೆನಪಿಸಿಕೊಳ್ಳುತ್ತಾರೆ. ಕಳುಹಿಸಿದ ಕಾಗದ ಪತ್ರಗಳಲ್ಲಾ ಕಡತದೊಳಗೆ ಬೆಚ್ಚಗೆ ಸೇರುತ್ತಿದ್ದುವೇ ವಿನಾ ಮಂಜೂರಾತಿಯ ನಿರೀಕ್ಷೆಯಲ್ಲಿ ದಿನಗಳು ಸಾಗುತ್ತಿದ್ದುವು.
            ಕಡತಗಳು ವಿಧಾನಸೌಧ ಪ್ರವೇಶಿಸಿದುವು. ಆ ಸಮಯದಲ್ಲಿ ನಂದಳಿಕೆಯವರಾದ ಪ್ರಭಾಕರ ರಾವ್ ವಿತ್ತ ಇಲಾಖೆಯಲ್ಲಿ ಕಾರ್ಯದರ್ಶಿಯಾಗಿದ್ದರು. ಕಡತಗಳ ಶೀಘ್ರ ನಡಿಗೆ ಸುಲಭವಾಯಿತು. ಅವಿರತ ಸಂಪರ್ಕ. ಸುಮಾರು ಏಳು ಕಿಲೊಮೀಟರ್ ರಸ್ತೆಯ ನಿರ್ಮಾಣಕ್ಕಾಗಿ ಮೊತ್ತ ಮಂಜುರಾಯಿತು. ಈ ಸುದ್ದಿಗೆ ನಂದಳಿಕೆ ಗ್ರಾಮವೇ ಖುಷಿಯಿಂದ ತೇಲಾಡಿತು. ಗ್ರಾಮದ ನಕ್ಷೆಗೆ ಹೊಳಪು ಬಂತು. ಕಡತದಲ್ಲೇ ಓಡಾಡುತ್ತಿದ್ದ ಅಭಿವೃದ್ಧಿ ಎನ್ನುವ ಪದವು ಅನುಷ್ಠಾನಕ್ಕೆ ಅಣಿಯಿಟ್ಟಿತು. 1982ರ ಹೊತ್ತಿಗೆ ರಸ್ತೆ ಸಿದ್ಧವಾಯಿತು. ಈಗಿನಂತೆ ಮನೆಯ ಸದಸ್ಯರೊಬ್ಬರಂತೆ ವಾಹನಗಳಿಲ್ಲ. ಉಳ್ಳವರ ಮನೆಯಲ್ಲಿ ಅಲ್ಲೋ ಇಲ್ಲೋ ವಾಹನಗಳು. ಅವರು ಭರ್ರನೆ ಬಂದು ಹೋಗುವಾಗ ಹಳ್ಳಿಯಲ್ಲಿ ಪುಳಕ! ರಸ್ತೆ ಏನೋ ಆಯಿತು, ಬಸ್ ಬರಬೇಡ್ವೇ? ಸ್ವಲ್ಪ ಸಮಯದಲ್ಲಿ ಈ ಆಶಯವೂ ಈಡೇರಿತು.
               ಊರಿಗೆ ರಸ್ತೆ, ಸಾರಿಗೆ ಬಂದು ಬಿಟ್ರೆ ಸಾಕು, ನಗರವೇ ಹಳ್ಳಿಗೆ ನುಗ್ಗಿಬಿಡುತ್ತದೆ! ಇದು ವರ್ತಮಾನದ ಸತ್ಯ. ಇಷ್ಟೆಲ್ಲಾ ವ್ಯವಸ್ಥೆಗಳಾದರೂ ಬಾಲಚಂದ್ರ ರಾಯರ ಆಸ್ಪತ್ರೆಯ ಕನಸು ಕನಸಾಗಿಯೇ ಉಳಿದಿತ್ತು. ತನ್ನ ಅಣ್ಣ ಕನಸಿನಲ್ಲಿ ಸದಾ ಕಾಡುತ್ತಿದ್ದರು. ಅಧಿಕಾರಿಗಳೊಂದಿಗೆ ಮಿತ್ರಮಂಡಳಿಯ ಆಗ್ರಹ. ಆಸ್ಪತ್ರೆ ಮಂಜೂರಾಯಿತು. ಕಟ್ಟಡ ನಿರ್ಮಾಣದ ಹೊಣೆಯನ್ನು ಸಂಘಟನೆ ವಹಿಸಿಕೊಂಡಿತ್ತು. 'ನಂದಳಿಕೆ ಕೃಷ್ಣರಾವ್ ಸ್ಮಾರಕ ಟ್ರಸ್ಟ್' ಆ ಕಾಲದಲ್ಲಿ ದೊಡ್ಡ ಮೊತ್ತವನ್ನು ನೀಡಿತು. ಊರವರೂ ದೇಣಿಗೆ ನೀಡಿದರು. ಪ್ರಾಥಮಿಕ ಆರೋಗ್ಯ ಘಟಕ ಸಾರ್ವಜನಿಕರಿಗೆ ತೆರೆದುಕೊಂಡಿತು. ಜತೆಜತೆಗೆ ವಾಹನ ನಿಲ್ದಾಣ, ಕೊಳವೆ ಬಾವಿ ನಿರ್ಮಾಣ, ದಾರಿ ದೀಪ, ಊರಿಗೆ ವಿದ್ಯುತ್, ಅಂಚೆ ಕಚೇರಿ, ದೂರವಾಣಿ... ಹೀಗೆ ಊರಿಗೆ ಒಂದೊಂದೇ ಸವಲತ್ತುಗಳು ಪ್ರವೇಶಿಸಿದುವು. ಮಿತ್ರಮಂಡಳಿಯ ಗ್ರಾಮಾಭಿವೃದ್ಧಿಯ ಕೆಲಸಗಳನ್ನು ನಂದಳಿಕೆಯ ಪ್ರತಿ ಮನೆಯು ಶ್ಲಾಘಿಸಿತ್ತು.
                ಬಾಲಚಂದ್ರ ರಾಯರ ಕಡತದೊಳಗೆ ಒಂದು ಯೋಜನೆ ಉಸಿರೆಳೆದುಕೊಳ್ಳುತ್ತಾ ಉಳಿದಿತ್ತು. ಗ್ರಾಮದ ಸವಲತ್ತುಗಳ ಈಡೇರಿಕೆಯ ಖುಷಿಯ ಆವರಣದೊಳಗೆ ಕವಿ ಮುದ್ದಣ ಸ್ಮಾರಕ ಭವನ ನಿರ್ಮಾಣ ಕೆಲಸಗಳಿಗೆ ಶ್ರೀಕಾರ. ಈ ಸಂಕಲ್ಪ ಮಾಡಿದ್ದೇ ತಡ, ರಾಯರೊಳಗೆ ಕವಿ ಇಳಿದುಬಿಟ್ಟ, ಉಳಿದುಬಿಟ್ಟ! ಅಕ್ಷರ ಸವಿಯನ್ನುಣಿಸಿದ. ಕೈಹಿಡಿದು ಮುನ್ನಡೆಸಿದ. ಊರಿನ ಜನ ಹೆಗಲು ನೀಡಿದರು. ನಂದಳಿಕೆಯಲ್ಲಿ ಕವಿಗೆ ಸ್ಮಾರಕವಾಯಿತು. ಊರಿಗೇ ಉಪಾಯನವಾಯಿತು. ಅಕ್ಷರಪ್ರಿಯರ ಮನದೊಳಗೆ ಮುದ್ದಣ ಲೀನವಾದ.
               'ಶ್ರೀ ರಾಮಾಶ್ವಮೇಧಂ', 'ಅದ್ಭುತ ರಾಮಾಯಣಂ' ಎರಡು ಗದ್ಯ ಕಾವ್ಯಗಳು. ವಾರ್ಧಕ ಷಟ್ಪದಿಯಲ್ಲಿ  'ಶ್ರೀ ರಾಮ ಪಟ್ಟಾಭಿಷೇಕಂ', 'ಕುಮಾರ ವಿಜಯ-ರತ್ನಾವತಿ ಕಲ್ಯಾಣ' ಎಂಬೆರಡು ಯಕ್ಷಗಾನ ಪ್ರಸಂಗಗಳು; ಸಂಪ್ರದಾಯದ ಹಾಡುಗಳು, ಕರ್ನಾಟಕ ರಾಮಾಯಣ.. ಮೊದಲಾದವುಗಳು ಕವಿಯ ಕೃತಿಗಳು. 1995ರಿಂದ ಮುದ್ದಣ ಪ್ರಕಾಶನಕ್ಕೆ  ಶ್ರೀಕಾರ. ಮುದ್ದಣದ ಕೃತಿಗಳ ಮುದ್ರಣ. 'ಶ್ರೀ ರಾಮಾಶ್ವಮೇಧಂ' ಕೃತಿಗೆ ಕಡಲಾಚೆಯ ಅಮೇರಿಕಾದಲ್ಲಿ ಬಿಡುಗಡೆಯ ಭಾಗ್ಯ. ಮಿತ್ರ ಮಂಡಳಿ ವತಿಯಿಂದ ಸಂಮಾನ, ಮುದ್ದಣ ಪುರಸ್ಕಾರಗಳ ಪ್ರದಾನ ನಿರಂತರ ನಡೆಯಿತು. ಬಾಲಚಂದ್ರ ರಾಯರು ಕಾಲಿಗ ಚಕ್ರ ಕಟ್ಟಿಕೊಂಡು ಓಡಾಡಿದರು. ಮಾತಿಗಿಳಿದರೆ ಸಾಕು, ಮುದ್ದಣ ಬಿಟ್ಟು ಬೇರೆ ವಿಚಾರವಿಲ್ಲ. ಕವಿಯನ್ನು ಆವೇಶ ಮಾಡಿಕೊಂಡಿದ್ದರು ಅಥವಾ ಕವಿಯೇ ಪರಕಾಯಪ್ರವೇಶ ಮಾಡಿದ್ದನೋ?  ವೈಯಕ್ತಿಕ ನಿಂದೆಯನ್ನು ಸಹಿಸಿದರು. ಗೇಲಿಯನ್ನು ನಗುತ್ತಾ ಸ್ವೀಕರಿಸಿದರು. ಹಿಡಿದ ಕೆಲಸವನ್ನು ಬೆನ್ನುಹಿಡಿದು ಪೂರೈಸಿದರು. ಪರಿಣಾಮ, ಮುದ್ದಣ ಇಂದು ರಾಜ್ಯ, ದೇಶವನ್ನು ಮೀರಿದ ಚೇತನ.
            ಕಷ್ಟದಲ್ಲಿ ಇಷ್ಟ ಕಂಡುದರಿಂದ ಸಾಧ್ಯವಾಯಿತು. ನಂದಳಿಕೆ ಭಾಸ್ಕರ ರಾವ್, ಚಾವಡಿಮನೆ ಸುಂದರರಾಮ ಹೆಗಡೆ, ಎಂ.ಅನಂತ ಪದ್ಮನಾಭ, ಎನ್.ದಿವಾಕರ ಶೆಟ್ಟಿ ಮೊದಲಾದ ಹಿರಿಯರ ಹಾರೈಕೆಯ ಫಲವಿದು. ಸುಹಾಸ್ ಹೆಗಡೆಯವರು ಪ್ರಸ್ತುತ ಮಿತ್ರಮಂಡಳಿಯನ್ನು ಮುನ್ನಡೆಸುತ್ತಿದ್ದಾರೆ, ಎನ್ನುತ್ತಾರೆ ಅರುವತ್ತನಾಲ್ಕರ ಹರೆಯದ, ಪುಟಿಯುವ ಉತ್ಸಾಹದ ಬಾಲಚಂದ್ರ ರಾವ್. ಗ್ರಾಮಾಭಿವೃದ್ಧಿಯ ಜತೆಗೆ ಮುದ್ದಣ ಕವಿಗೆ ನಿಜಾರ್ಥದಲ್ಲಿ ಮಾನ-ಸಂಮಾನವನ್ನು ಸಲ್ಲಿಸಿದ ಕೀರ್ತಿಯು ಬಾಲಚಂದ್ರ ರಾಯರ ನೇತೃತ್ವದ ಮಿತ್ರಮಂಡಳಿಗೆ ಸಲ್ಲುತ್ತದೆ.
                ಊರಿನ ಯುವಕ ಮಂಡಳಿಯೊಂದು ಟೊಂಕ ಕಟ್ಟಿದರೆ ಗ್ರಾಮದ ಚಿತ್ರಣವನ್ನೇ ಬದಲಾಯಿಸಬಹುದು ಎನ್ನುವುದಕ್ಕೆ ನಂದಳಿಕೆಯ ಮಿತ್ರ ಮಂಡಳಿಯ ಸಾಧನೆ ದೃಷ್ಟಾಂತ. ಈ ಸಾಧನೆಯು ಈಗ ಕಾಲಗರ್ಭಕ್ಕೆ ಸಂದು ಹೋದರೂ ಊರಿನ ಅಭಿವೃದ್ಧಿಯ ಚರಿತ್ರೆ ಮಾತನಾಡುವಾಗ ಮಿತ್ರಮಂಡಳಿಯನ್ನು ಮರೆತು ಮಾತನಾಡಲು ಸಾಧ್ಯವಿಲ್ಲ. ಹಾಗಾಗಿ ಬಾಲಚಂದ್ರ ರಾಯರಿಗೆ ಸಂದ ಪ್ರಶಸ್ತಿ ಇದೆಯಲ್ಲಾ, ಅದು ಇಡೀ ನಂದಳಿಕೆಗೆ ಸಂದ ಪ್ರಶಸ್ತಿಯಾಗಿ ಹೊರಹೊಮ್ಮುತ್ತದೆ. ೨೦೧೭ ಜನವರಿ ೧೪ರಂದು ಮಣಿಪಾಲದಲ್ಲಿ ಪ್ರಶಸ್ತಿ ಪ್ರದಾನ.
             ಕಳೆದ ವರುಷ ಬಾಲಚಂದ್ರ ರಾಯರ ಬದುಕಿನ ವಿವಿಧ ಕೋನಗಳ ನೋಟವನ್ನು ಸಾಹಿತಿ ವಿ.ಗ.ನಾಯಕರು 'ನಂದಳಿಕೆಯ ಹಠಯೋಗಿ' ಎನ್ನುವ ಕೃತಿಯಲ್ಲಿ ಪೋಣಿಸಿದ್ದಾರೆ.

ಅಕ್ಷರ ಸಾಕ್ಷರತೆಯೊಂದಿಗೆ ಮಿಳಿತವಾದ ಜಲಸಾಕ್ಷರತೆಹೊಸದಿಗಂತ_ಮಾಂಬಳ /  25-1-2017

               ದೇಶದೆಲ್ಲಡೆ ನೀರಿನದ್ದೇ ಮಾತುಕತೆ. ಮಳೆಗಾಲ ಕಳೆದು ನಿಜಾರ್ಥದ ಚಳಿಗಾಲದ ಅನುಭವ ಕನ್ನಾಡಿನ ಹಲವೆಡೆ ಅನುಭವಕ್ಕೆ ಬಂದಿದೆ. ಚಳಿಯ ಕಚಗುಳಿಯ ಮಧ್ಯೆ ಬೇಸಿಗೆಯು ನಿಧಾನಕ್ಕೆ ಪರದೆ ಸರಿಸುತ್ತಿದೆ. ಕಳೆದ ವರುಷದ ಬೇಸಿಗೆಯ ಬೇಗೆಯನ್ನು ಗ್ರಹಿಸಿಕೊಂಡರೆ ಗರ್ಭದಲ್ಲಿ ಚಳಿ! ಮುಂದಿನ ಬೇಸಿಗೆ ಹೇಗೋ ಎನ್ನುವ ಆತಂಕ. ಈ ಮಧ್ಯೆ ನೀರಿನ ಬರಕ್ಕೆ ಪರಿಹಾರವಾಗಿ ಖಾಸಗಿ ನೆಲೆಯಲ್ಲಿ ಮತ್ತು ಸಾಮೂಹಿಕವಾಗಿ ಒಂದಷ್ಟು ಗಣನೀಯ ಪ್ರಮಾಣದ ನೆಲ-ಜಲ ಸಂರಕ್ಷಣೆಯ ಕೆಲಸಗಳು ಆಗಿವೆ, ಆಗುತ್ತಿವೆ. ಕರಾವಳಿಯ ಶಾಲೆಗಳಲ್ಲಿ ಪಠ್ಯದೊಂದಿಗೆ ನೀರಿನ ಪಾಠದ ಸ್ಪರ್ಶವಾಗಿದೆ. ಅಧ್ಯಾಪಕರು ಸಕ್ರಿಯರಾಗಿದ್ದಾರೆ. ನೀರುಳಿತಾಯಕ್ಕೆ ಕೇರಳದ ಶಾಲೆಯೊಂದು ಮಾಡಿದ ಮಾದರಿ ಕನ್ನಾಡಿಗೂ ಅನ್ವಯಿಸಬಹುದಾಗಿದೆ.    
             ’ಕೊಂಬುಗಿಂಡಿ - ದೇವರ ನಾಡಿನ ಸಂಸ್ಕೃತಿಯ ಒಂದಂಗ. ಮಲೆಯಾಳದಲ್ಲಿದು 'ವಾಲ್ಕಿಂಡಿ'. ಕಾಲುದೀಪ, ಗಿಂಡಿಗಳಿಲ್ಲದ ಮನೆಯಿಲ್ಲ. ಮನೆಮಂದಿಗೆ, ಅತಿಥಿಗಳಿಗೆ ಕೈಕಾಲು, ಬಟ್ಟಲು-ಪಾತ್ರೆ ತೊಳೆಯಲು ಕೊಂಬುಗಿಂಡಿಯನ್ನೇ ಬಳಸುತ್ತಿರುವುದು ಪಾರಂಪರಿಕವಾಗಿತ್ತು. ಹೊಸ ವ್ಯವಸ್ಥೆಗಳು ಕೊಂಬುಗಿಂಡಿಯ ಜಾಗವನ್ನು ಅತಿಕ್ರಮಿಸಿದೆ. ಕೆಲವೊಂದು ಧಾಮರ್ಿಕ ಆಚರಣೆಗಳಿಗಷ್ಟೇ ಅಟ್ಟದಿಂದ ಇಳಿದು ಬರುತ್ತದೆ! ಬದಲಾದ ಕಾಲಘಟ್ಟದಲ್ಲೂ ಹಿರಿ ಮನೆಗಳಲ್ಲಿ ಗಿಂಡಿಯ ಬಳಕೆ ಈಗಲೂ ಊರ್ಜಿತ.
               ಅವಶ್ಯವಿದ್ದಷ್ಟೇ ನೀರು ಹೊರಹರಿಸಿ ಬಳಸುವುದು ಗಿಂಡಿಯ ವಿಶೇಷ. ಒಂದರ್ಥದಲ್ಲಿ ಹಿರಿಯರು ಹಾಕಿಕೊಟ್ಟ ನೀರಿನರಿವು. ನಳ್ಳಿ ನೀರು ಬರುವುದಕ್ಕಿಂತ ಮೊದಲು ಕೊಂಬಿನಗಿಂಡಿಯು ಕೇರಳದ ಮನೆಮನೆಯ ಜಲದಾಯಿ. ಒಂದೊಂದು ಮನೆಯಲ್ಲಿ ಕನಿಷ್ಠ ನಾಲ್ಕೈದು ಗಿಂಡಿಗಳು ಇದ್ದೇ ಇರುತ್ತಿದ್ದುವು. ಕಾಲುದೀಪ, ಆರತಿಗಳು, ಗಿಂಡಿಗಳೆಲ್ಲಾ ಕಂಚಿನಿಂದ ಸಿದ್ಧಪಡಿಸಿದವುಗಳು. ವಿವಿಧ ವಿನ್ಯಾಸದ ರಚನೆಗಳಲ್ಲಿ ಸೂಕ್ಷ್ಮ ಕಸೂತಿಗಳು ಹಿರಿಯರ ಕಲಾಗಾರಿಕೆಗೆ ಸಾಕ್ಷಿಯಾಗಿ ನಿಲ್ಲುತ್ತದೆ.
               ಅದು ಕಣ್ಣೂರು ಜಿಲ್ಲೆಯ ಮುಳಕ್ಕುನ್ನು ಸರಕಾರಿ ಪ್ರಾಥಮಿಕ ಶಾಲೆ. ಹಳ್ಳಿ ಪರಿಸರ. ಶಾಲೆಯಲ್ಲಿ ಹದಿನೈದಕ್ಕೂ ಮಿಕ್ಕಿದ ಡಿವಿಜನ್ಗಳಿವೆ. ಐನೂರಕ್ಕೂ ಮಿಕ್ಕಿ ವಿದ್ಯಾರ್ಥಿಗಳಿದ್ದಾರೆ. ಕೊಂಬುಗಿಂಡಿಗೆ ಇಲ್ಲಿ ಜಲಸಾಕ್ಷರತೆಯ ಕೆಲಸ. ಪುಟ್ಟ ಮಕ್ಕಳಿಗೆ ಎತ್ತಿ ಬಳಸಲು ಕಂಚಿನ ಗಿಂಡಿಯು ಭಾರವಾಗುತ್ತದೆ. ಬದಲಿಗೆ ಅದನ್ನೇ ಹೋಲುವ ಪ್ಲಾಸ್ಟಿಕ್ಕಿನ ಗಿಂಡಿಯನ್ನು ತಯಾರಿಸಿ ಮಕ್ಕಳ ಕೈಗೆ ನೀಡಿದ್ದಾರೆ. ಅಲ್ಲಿನ ಮಕ್ಕಳು ಬಟ್ಟಲು, ಕೈಕಾಲು ಅಲ್ಲದೆ ಉದ್ಯಾನದ ಹಸಿರಿಗೆ ನೀರುಣಿಸುವುದೂ ಇದರಲ್ಲೇ. ಇದು ಎಳೆ ಮನಸ್ಸುಗಳೊಳಗೆ ನೀರಿನ ಎಚ್ಚರ ಮತ್ತು ಜಲ ಸಂರಕ್ಷಣೆಗೆ ಬೀಜಾಂಕುರ. ಅವಶ್ಯವಿದ್ದಷ್ಟೇ ನೀರು ಬಳಸಿ ಎಂಬ ಪರೋಕ್ಷ ಪಾಠ.
              ಈ ಶಾಲೆಯು ನೀರಿನ ಅರಿವನ್ನು ಬಿತ್ತುವ ಚಟುವಟಿಕೆಗಳನ್ನು ನಡೆಸುತ್ತಿದೆ. ಆಡಳಿತದ ಗಮನ ಸೆಳೆದಿದೆ. ಮಾಧ್ಯಮಗಳು ಬೆಳಕು ಹಾಕಿವೆ. ಪ್ರತಿ ತಿಂಗಳು ವಿದ್ಯಾರ್ಥಿಗಳು 'ನೀರರಿವು' ಭಿತ್ತಪತ್ರವನ್ನು ಸಿದ್ಧಪಡಿಸುತ್ತಾರೆ. ಅದು ಜಲತರಂಗ ಹಸ್ತಪತ್ರಿಕೆಯಾಗಿ ರೂಪುಗೊಂಡು ಚಿಣ್ಣರು ಓದುವಂತೆ ವ್ಯವಸ್ಥೆ ಮಾಡಿಕೊಂಡಿದ್ದಾರೆ. ನೀರುಳಿತಾಯದ ಸಂದೇಶವನ್ನು ಸಾರುವ ಕವನಗಳು ಪ್ರಕಟಗೊಳ್ಳುತ್ತಿವೆ. ಕೇರಳದ ಅನೇಕ ಪ್ರಸಿದ್ಧ ಕವಿಗಳಿಂದ ಬರೆಸಿದ ಕವನಗಳು ಕಂದಮ್ಮಗಳ ಜ್ಞಾನಕ್ಕೊಂದು ಉಪಾಧಿ. ಈ ಕವನಗಳ ಸಂಕಲನವು ಅಚ್ಚು ಕಂಡಿದೆ. ಆರಂಭದಲ್ಲಿ ಒಂದೆರಡು ಕೈ ಬರಹದ ಪುಸ್ತಿಕೆ. ಈಗದು ಸುಂದರ ವಿನ್ಯಾಸದಿಂದ ಮುದ್ರಣವಾಗಿ ಮಕ್ಕಳ ಕೈ ಅಲಂಕರಿಸುತ್ತಿದೆ. ವಿದ್ಯಾರ್ಥಿಗಳಿಗೆ ಓದುವುದಕ್ಕಾಗಿಯೇ ಪ್ರತ್ಯೇಕವಾದ 'ಜಲ ಲೈಬ್ರರಿ'ಯಿದೆ.
               ಬಳಸಿ ಬಿಸಾಕುವ ಬಾಟ್ಲಿ, ಪೆಟ್ಟಿಗೆಗಳು ಇಲ್ಲಿ ವಿಜ್ಞಾನದ ಮಾದರಿಗಳು. ಪ್ರತೀ ತರಗತಿಗೆ ನೀರಿನ ಪ್ರಯೋಗದ ಮಾರ್ಗದರ್ಶನ ಮಾಡುವ ಅಧ್ಯಾಪಕರು. 'ಲೋ ಕೋಸ್ಟ್-ನೋ ಕೋಸ್ಟ್' ಕಿಟ್ ನಿರ್ಮಿಸುವ ಇಂತಹ ಪಾಠ ಪಠ್ಯೇತರ. ನ್ಯೂಟನ್ನಿನ ನಿಯಮ, ಜಾದೂಗಾರರ 'ವಾಟರ್ ಆಫ್ ಇಂಡಿಯಾ' ಮಸೂರದಲ್ಲಿ ಎದುರಿನ ಬಿಂಬ ಕಾಣುವ ಬಗೆ, ಮೋಡದಿಂದ ಮಳೆ ಹೇಗೆ.. ಇಂತಹ ಕುತೂಹಲಕಾರಿ ಪ್ರಯೋಗಗಳು. ಇದಕ್ಕೆಲ್ಲಾ ದುಬಾರಿ ವೆಚ್ಚದಲ್ಲಿ ಉಪಕರಣಗಳನ್ನು ಖರೀದಿಸಿದ್ದಲ್ಲ ಎನ್ನುವುದು ಗಮನೀಯ.
              ಬಾಟ್ಲಿಗೆ ಸುತ್ತಲೂ ರಂಧ್ರ ಕೊರೆದು ನೀರು ತುಂಬಿ ಮೇಲೆತ್ತಿದ್ದಾಗ ಹೊರ ಚಿಮ್ಮುವ ನೀರಿನ ಧಾರೆಯು ಬಾಟ್ಲಿಯನ್ನು ತನ್ನ ಅಕ್ಷದಲ್ಲಿ ತಿರುಗಿಸುತ್ತದೆ. ಅಂದರೆ ಪ್ರತಿಯೊಂದು ಕ್ರಿಯೆಗೂ ಸಮ ಮತ್ತು ವಿರುದ್ಧವಾದ ಪ್ರತಿಕ್ರಿಯೆ ಇರುತ್ತದೆ ಎಂಬ ನ್ಯೂಟನ್ನದ ಮೂರನೇ ನಿಯಮವನ್ನು ಮನದಟ್ಟು ಮಾಡಲು ಇಂತಹ ಪ್ರಯೋಗಗಳು. ಇದಕ್ಕೂ ಜಲಸಂರಕ್ಷಣೆಗೂ ನೇರಾನೇರ ಸಂಬಂಧವಿಲ್ಲ. ಆದರೆ ವಿದ್ಯಾರ್ಥಿಗಳ ಮನಸೆಳೆಯುವ ಕೆಣಿ. ಜತೆಜತೆಗೆ ನೀರಿನ ಪಾಠ. ವಿಜ್ಞಾನದ ಇಂತಹ ಐವತ್ತಕ್ಕೂ ಮಿಕ್ಕಿದ ಸೂತ್ರಗಳ 'ಜಲಸೂತ್ರ' ಪ್ರಕಟವಾಗಿದೆ.  ಅದರಲ್ಲಿ ನೀರುಳಿತಾಯದ ಸಂದೇಶಕ್ಕೆ ಮೊದಲ ಮಣೆ.
              ಶಾಲೆಯ ಎಲ್ಲಾ ಡಿವಿಜನ್ನಿಗೊಂದು 'ಕಿಂಡಿ ಲೀಡರ್' ಇದ್ದಾರೆ. ಎಲ್ಲಾ ಲೀಡರುಗಳಿಗೆ ಮತ್ತೊಬ್ಬ ಮುಖ್ಯಸ್ಥ. ಮಕ್ಕಳ ಮೇಲೆ ಎಷ್ಟು ಪರಿಣಾಮ ಎಂದರೆ ಲೀಡರ್ಗಳು ಮನೆಯಲ್ಲಿ ಆಧುನಿಕವಾದ ನಲ್ಲಿ ವ್ಯವಸ್ಥೆ ಇದ್ದರೂ ಕೊಂಬುಗಿಂಡಿಯನ್ನೇ ಬಳಸುತ್ತಾರೆ. ಹೆತ್ತವರಿಗೆ ನೀರಿನ ಅರಿವಿನ ಮಹತ್ವ ಅರಿವಾಗಿದೆ. 'ಇಂತಹ ಕೊಂಬುಗಿಂಡಿಯನ್ನು ಖರೀದಿಸಿ ಬಳಸುತ್ತೇವೆ, ಎನ್ನುವವರ ಸಂಖ್ಯೆ ದಿನೇದಿನೇ ವೃದ್ಧಿಸುತ್ತಿದೆ. ಮಕ್ಕಳ ಮನಸ್ಸನ್ನು ತಟ್ಟಿದ ನೀರಿನ ಎಚ್ಚರ ಮನೆಯ ಕದವನ್ನೂ ತಟ್ಟಿದೆ. 
               ಕೇರಳದ ಶಿಕ್ಷಣ ಇಲಾಖೆಯು ಮುಳಕ್ಕುನ್ನು ಶಾಲೆಯ ನೀರಿನ ಪಾಠವನ್ನು ಶ್ಲಾಘಿಸಿದೆ. ಅಧ್ಯಾಪಕರಿಗೆ ವಿತರಿಸುವ ಇಲಾಖೆಯ ಮಾರ್ಗದರ್ಶನಯಲ್ಲಿ ಶಾಲೆಯ ಕೊಂಬುಗಿಂಡಿ ಪ್ರಯೋಗವನ್ನು ಉಲ್ಲೇಖಿಸಿದ್ದಾರೆ. ಕೊಂಬುಗಿಂಡಿಯು ಜಲಸಂರಕ್ಷಣೆಯ ಒಂದು ಸಂಕೇತ ಮಾತ್ರ. ಇಂತಹ ಚಟುವಟಿಕೆಗಳಿಗೆ ಊರಿನವರ ಸಹಕಾರ ಸ್ಮರಣೀಯ. ಎಲ್ಲಾ ಕೊಂಬುಗಿಂಡಿಗಳೂ ದೇಣಿಗೆಯಾಗಿಯೇ ಬಂದಿವೆ, ಎನ್ನಲು ಅಧ್ಯಾಪಕರಿಗೆ ಹೆಮ್ಮೆ. ಈ ಶಾಲೆಯಲ್ಲಿ ನೀರಿನ ಕೊರತೆಯಿಲ್ಲ. ಆದರೆ ಹತ್ತಿರದ ಶಾಲೆಗಳು ಈ ಪ್ರಯೋಗವನ್ನು ತಮ್ಮಲ್ಲೂ ಮಾಡಿಕೊಳ್ಳಲು ಉತ್ಸುಕರಾಗಿದ್ದಾರೆ. ಕೆಲವರು ಅನುಷ್ಠಾನದತ್ತ ಹೆಜ್ಜೆ ಊರಿದ್ದಾರೆ.
               ಶಾಲೆಯ 'ಕೊಂಬುಗಿಂಡಿ'ಯ ಮೂಲಕ ನೀರಿನೆಚ್ಚರದ ಕಾವು ವಿದ್ಯಾರ್ಥಿಗಳಿಗೆ ಮಾತ್ರವಲ್ಲ, ಊರಿನ ಮನೆಗಳಿಗೂ ಹಬ್ಬಿವೆ. ನೀರು ವ್ಯರ್ಥ ಮಾಡಬಾರದು. ಇದು ಜೀವಜಲ. ಎಚ್ಚರದಿಂದ ಬಳಸಬೇಕು, ಅರಿವು ಮೂಡುತ್ತಿದೆ. ನೂರಕ್ಕೂ ಮಿಕ್ಕಿ ಮನೆಗಳಲ್ಲಿ ಕಂಚಿನ ಕೊಂಬುಗಿಂಡಿ ಅಟ್ಟದಿಂದ ಕೆಳಗೆ ಇಳಿದಿವೆಯಂತೆ. ಜಲಸಾಕ್ಷರತೆಯಲ್ಲಿ ಶಾಲೆಯ ಸಾಧನೆಗೆ ಅಲ್ಲಿನ ಪ್ರಸಿದ್ಧ ಪತ್ರಿಕೆ ಮಲೆಯಳ ಮನೋರಮಾ ನಗದು ಪುರಸ್ಕಾರವನ್ನು ನೀಡಿ ಬೆನ್ನುತಟ್ಟಿದೆ.


ನೂತನ ಪರಿಕಲ್ಪನೆಯ ಅಶರೀರ ಕೃಷಿ ಪತ್ರಿಕೋದ್ಯಮ ತರಬೇತಿ

ಉದಯವಾಣಿ_ನೆಲದ ನಾಡಿ / 29-12-2016

                ದಶಂಬರ 12. ಕೃಷಿ ಮಾಧ್ಯಮ ಕೇಂದ್ರದ (Centre for Agricultural Media – CAM) ) 'ಕೃಷಿ-ಗ್ರಾಮೀಣ-ಅಭಿವೃದ್ಧಿ ಪತ್ರಿಕೋದ್ಯಮ ತರಬೇತಿ'ಯ ಉದ್ಘಾಟನೆ. ವಾರ ಮುಂಚಿತವಾಗಿ 'ಕಾಮ್ ಕೋರ್ಸ್’ನ ವಾಟ್ಸಪ್ ಗುಂಪಿನಲ್ಲಿ ಆಮಂತ್ರಣ. ಸಂಜೆ ಏಳು ಗಂಟೆಗೆ ಸರಿಯಾಗಿ ಶ್ರೀ ಪಡ್ರೆಯವರಿಂದ ಉದ್ಘಾಟನೆ. ಇಪ್ಪತ್ತೆಂಟು ಮಂದಿ ಶಿಬಿರಾರ್ಥಿಗಳು, ಐವತ್ತಕ್ಕೂ ಮಿಕ್ಕಿ ಸಂಪನ್ಮೂಲ ವ್ಯಕ್ತಿಗಳು, ವಿಶೇಷ ಆಹ್ವಾನಿತರು... ಹೀಗೆ ಸುಮಾರು ನೂರು ಮಂದಿ ಸಭಾಸದರು.
             ರಾಜಧಾನಿಯಿಂದ ಕೃಷಿ ಮಾಧ್ಯಮ ಕೇಂದ್ರದ ಮುಖ್ಯಸ್ಥರು ಉದ್ಘಾಟನಾ ಸಮಾರಂಭಕ್ಕೆ ಅಣಿಯಾದರು. ಒಂದೈದು ನಿಮಿಷ ಮುಂಚಿತವಾಗಿ ಸೂಚನೆಗಳನ್ನು ಘೋಷಿಸಿದರು ಏಳು ಗಂಟೆಗೆ ಸರಿಯಾಗಿ ಇತ್ತ ಕಾಸರಗೋಡು ಹತ್ತಿರದ ಪಡ್ರೆ ಹಳ್ಳಿಯಿಂದ ಕಂಪ್ಯೂ ಮುಂದೆ ಉದ್ಘಾಟಕರು ಸಂದೇಶವನ್ನು ಟೈಪಿಸುವ ಚಿತ್ರ ಮೂಡಿತು. ಜತೆಗೆ ಉದ್ಘಾಟನಾ ಧ್ವನಿ ಸಂದೇಶದ ಫೈಲ್ ಎಲ್ಲರ ಸ್ಮಾರ್ಟ್ ಪೋನಿನೊಳಗೆ ನುಸುಳಿತು. ಕ್ಷಣಕ್ಷಣದ ಕಲಾಪದ ಬದಲಾವಣೆಯನ್ನು ನಿರ್ವಾಹಕರು ತಿಳಿಸುತ್ತಾ ಹೋದರು. ವೀಕ್ಷಕರಾಗಿ ಹಿರಿಯರನ್ನು ಗುಂಪಿಗೆ ಆಹ್ವಾನಿಸಲಾಗಿತ್ತು. ಅವರೆಲ್ಲರ ಸಂದೇಶಗಳು ಅಪ್ಲೋಡ್ ಆದುವು. ಸಂಪನ್ಮೂಲ ವ್ಯಕ್ತಿಗಳ ಸಂದೇಶ. ಶಿಬಿರಾರ್ಥಿಗಳ ಶುಭಾಶಂಸನೆ ಮತ್ತು ರಸಪ್ರಶ್ನೆ. ಸುಮಾರು ಒಂದೂವರೆ ಗಂಟೆಗಳಷ್ಟು ಕಾಲ ಈ ಕಲಾಪ ನಡೆಯಿತು. ಕೊನೆಗೆ ವೀಕ್ಷಕರಾಗಿ ಆಗಮಿಸಿದ ಗಣ್ಯರಿಗೆ ವಿದಾಯ.
               ಕೃಷಿ ಮಾಧ್ಯಮ ಕೇಂದ್ರದ ಪತ್ರಿಕೋದ್ಯಮ ತರಬೇತಿಯ ಉದ್ಘಾಟನೆ ನಡೆದುದು ಯಾವುದೇ ಸಭಾಮಂದಿರದಲ್ಲಿ ಅಲ್ಲ. ಅಂಗೈಯಲ್ಲಿರುವ ಸ್ಮಾರ್ಟ್ ಫೋನಿನಲ್ಲಿ! ವಾಟ್ಸಪ್ ಗುಂಪಿನಲ್ಲಿ! ಶಿಸ್ತುಬದ್ಧವಾಗಿ ಸಭಾಮಂದಿರದಲ್ಲಿ ಹೇಗೆ ನಡೆಯುತ್ತದೋ ಅಂತೆಯೇ ಇಲ್ಲೂ ನಡೆದಿದೆ. ಇದೊಂದು ನೂತನ ಪರಿಕಲ್ಪನೆ. ಕೃಷಿ ಮಾದ್ಯಮ ಕೇಂದ್ರದ ಮಿದುಳ ಮರಿ.
ಧಾರವಾಡವನ್ನು ಕೇಂದ್ರವಾಗಿಟ್ಟುಕೊಂಡು ಕೇಂದ್ರವು 2003 ರಿಂದ 2012ರ ತನಕ ಕೃಷಿ-ಗ್ರಾಮೀಣ ಪತ್ರಿಕೋದ್ಯಮ ಶಿಬಿರಗಳನ್ನು ನಡೆಸಿತ್ತು. ನೂರಕ್ಕೂ ಮಿಕ್ಕಿ ಮಂದಿ ಯಶಸ್ವಿಯಾಗಿ ತರಬೇತಿಯನ್ನು ಪಡೆದು 'ಕಾಮ್ ಫೆಲೋ' ಗೌರವ ಪಡೆದಿದ್ದಾರೆ. ಬಹುತೇಕ ಮಂದಿ ಪತ್ರಿಕೆಗಳಿಗೆ ಕೃಷಿ-ಗ್ರಾಮೀಣ ವಿಚಾರಗಳನ್ನು ಬರೆಯುತ್ತಿದ್ದಾರೆ. ನಾಲ್ಕು ವರುಷಗಳ ಬಿಡುವಿನ ಬಳಿಕ ಮತ್ತೆ ತರಬೇತಿಗೆ ಚಾಲನೆ. ಬದಲಾದ ಕಾಲಘಟ್ಟಕ್ಕೆ ಅನುಸಾರವಾಗಿ ಸಿಲೆಬಸನ್ನು ಟ್ಯೂನ್ ಮಾಡಿಕೊಂಡ ಕೇಂದ್ರವು 'ವಾಟ್ಸಪ್ ಕೃಷಿ ಪತ್ರಿಕೋದ್ಯಮ ತರಬೇತಿ'ಯನ್ನಾಗಿ ಬದಲಿಸಿಕೊಂಡಿದೆ.
             ಈ ಮೊದಲು - ಶಿಬಿರದ ಆರಂಭಕ್ಕೆ ಎಲ್ಲಾ ಶಿಬಿರಾರ್ಥಿಗಳು ತಿಳಿದುಕೊಳ್ಳಬೇಕಾದ ಮೂಲ ಅಂಶಗಳ ಪುಸ್ತಿಕೆ ತಯಾರಿಸಿ ಅಂಚೆಯಲ್ಲಿ ಕಳುಹಿಸಲಾಗುತ್ತಿತ್ತು. ನಾಲ್ಕು ದಿವಸಗಳ ಶಿಬಿರವನ್ನೂ ಆಯೋಜಿಸಲಾಗುತ್ತಿತ್ತು. ಪ್ರತಿ ತಿಂಗಳು ಶಿಬಿರಾರ್ಥಿಗಳು ಅಸೈನ್ಮೆಂಟ್ ಬರೆಯಬೇಕಾಗಿತ್ತು. ಕೇಂದ್ರದ ಮುಖ್ಯಸ್ಥರು ತಿದ್ದಿ, ಪರಿಷ್ಕರಿಸಿ, ಸೇರಿಸಬೇಕಾದ ಅಂಶಗಳು, ಬಿಡಬೇಕಾದ ಮಾಹಿತಿಗಳನ್ನು ಸೂಚಿಸಿ ಕಳುಹಿಸುತ್ತಿದ್ದರು. ಸೂಚನೆಯಂತೆ ಲೇಖನವನ್ನು ಪರಿಷ್ಕರಿಸಿ ಕಳುಹಿಸಿಬೇಕು. ಹೀಗೆ ಲೇಖನ ಬರೆಯುತ್ತಾ ಒಂದೊಂದೇ ಹೆಜ್ಜೆಗಳನ್ನು ತರಬೇತಿ ಮೂಲಕ ಕಲಿಸಲಾಗುತ್ತಿತ್ತು. ರಾಜ್ಯದ ನಾನಾ ಭಾಗಗಳ ಸಂಪನ್ಮೂಲ ವ್ಯಕ್ತಿಗಳು ತರಬೇತಿ ನೀಡುತ್ತಿದ್ದರು.
              ಈಗ ತಂತ್ರಜ್ಞಾನ ಬಳಕೆಯ ಕಾಲ. ಕೈಯೊಳಗೆ ಬಗೆಬಗೆಯ ಮೊಬೈಲ್ಗಳು ಅಂಟಿಕೊಂಡಿವೆ. ಕ್ಷಣಮಾತ್ರದಲ್ಲಿ ಆಗುಹೋಗುಗಳ ಅಪ್ಡೇಟ್ ಮಾಡಿಕೊಳ್ಳುವಂತಹ ಅವಕಾಶ. ವಾಟ್ಸಪ್ ಬಳಕೆಯು ಗರಿಷ್ಠ ಪ್ರಮಾಣದಲ್ಲಿ ಆಗುತ್ತಿರುವುದರಿಂದ ಇದನ್ನೇ ಪತ್ರಿಕೋದ್ಯಮಕ್ಕೆ ಬಳಸಿಕೊಂಡರೆ ಹೇಗೆ? ಯೋಚನೆಯು ಯೋಜನೆಯಾಗಿ ರೂಪುಗೊಂಡಿತು. ನವಂಬರ್ ತಿಂಗಳಲ್ಲಿ ಪುತ್ತೂರಿನ 'ಫಾರ್ಮರ್ ಫಸ್ಟ್ ಟ್ರಸ್ಟ್' ಮತ್ತು 'ಕೃಷಿ ಮಾಧ್ಯಮ ಕೇಂದ್ರ'ದ ಆಯೋಜನೆಯಲ್ಲಿ 'ವಾಟ್ಸಪ್ ಕೃಷಿ ಪತ್ರಿಕೋದ್ಯಮ ಶಿಬಿರ'ವು ಪುತ್ತೂರಿನಲ್ಲಿ ಸಂಪನ್ನಗೊಂಡಿತ್ತು. ಕನ್ನಾಡಿನ ನಾನಾ ಭಾಗಗಳಿಂದ ಇಪ್ಪತ್ತಾರು ಮಂದಿ ಶಿಬಿರಾರ್ಥಿಗಳು ಭಾಗವಹಿಸಿದರು. ರಾಜ್ಯ ಯಾಕೆ, ರಾಷ್ಟ್ರದ ಪತ್ರಿಕೋದ್ಯಮ ಇತಿಹಾಸದಲ್ಲಿ ಹೊಸತೊಂದು ಪುಟಕ್ಕೆ ಶ್ರೀಕಾರ ಹಾಕಿತು. ಸಂಪನ್ಮೂಲ ವ್ಯಕ್ತಿಗಳ ಸಿಲೆಬಸಿನ ಮೊದಲ ಪುಟ ತೆರೆದುಕೊಂಡಿತು.
              ಮಲೆಯಾಳ ಕೃಷಿ ಜಾಲತಾಣ ಪತ್ರಿಕೆ 'ಕಾರ್ಶಿಕರಂಗಮ್ ಡಾಟ್ ಕಾಮ್' ಇದರ ಸಂಪಾದಕರಾದ ನೆಮೆ ಜಾರ್ಜ್  ಹೇಳುತ್ತಾರೆ, ವಾಟ್ಸಪ್ ಪತ್ರಿಕೋದ್ಯಮ ತುಂಬ ವಿನೂತನ. ಕೃಷಿಕರಿಗೆ ಇಂದು ಭಟ್ಟಿ ಇಳಿಸಿ ಕೊಡುವ ಮಾಹಿತಿ ಬೇಕು. ಈ ಅತ್ಯಂತ ನವೀನ ಪತ್ರಿಕೋದ್ಯಮ ವಿಧಾನವು ಕಾಲದ ಆವಶ್ಯಕತೆ.   ಅಡಿಕೆ ಪತ್ರಿಕೆಯು ಹಾಕಿಕೊಟ್ಟ 'ಕೃಷಿಕರ ಕೈಗೆ ಲೇಖನಿ'ಯ ಆಶಯವನ್ನು ಯಶಸ್ವಿಯಾಗಿ ಕೃಷಿ ಮಾಧ್ಯಮ ಕೇಂದ್ರವು ತನ್ನ ಹೂರಣಗಳ ಮೂಲಕ ಅನುಷ್ಠಾನಗೊಳಿಸುತ್ತಾ ಬಂದಿದೆ. ಈ ಬಾರಿ ಹೊಸ ಕಲ್ಪನೆಯೊಂದಿಗೆ ಆನ್ಲೈನ್ ತರಬೇತಿಗೆ ಪದಾರ್ಪಣೆ ಮಾಡಿದೆ. ತರಬೇತಿಯ  ಹೂರಣ, ಗುಣಮಟ್ಟ, ನೀತಿ ನಿರೂಪಗಳೆಲ್ಲವೂ ಮೊದಲಿನಂತಿದ್ದು ಯಥಾಸಾಧ್ಯ 'ಇ-ತಂತ್ರಜ್ಞಾನ'ಕ್ಕೆ ಅಳವಡಿಸಿಕೊಳ್ಳಲಾಗಿದೆ. ಇದಕ್ಕಾಗಿ 'ಕಾಮ್ ಕೋರ್ಸ್’ ಎನ್ನುವ ವಾಟ್ಸಪ್ ಗುಂಪನ್ನು ತೆರೆಯಲಾಗಿದೆ.
                 ಇದರಲ್ಲಿ ಇಪ್ಪತ್ತೆಂಟು ಮಂದಿ ಶಿಬಿರಾರ್ಥಿಗಳಿದ್ದಾರೆ. ಸಂಪನ್ಮೂಲ ವ್ಯಕ್ತಿಗಳಿದ್ದಾರೆ. ತಾವು ಬರೆದ ಲೇಖನವನ್ನು ಇ-ಮೆಯಿಲ್ ಮಾಡಿ, ಅದಕ್ಕೆ ಸಂಬಂಧ ಪಟ್ಟ ಸಂಶಯಗಳನ್ನು ವಾಟ್ಸಪ್ ಮೂಲಕ ಪರಿಹರಿಸಿಕೊಳ್ಳುವುದು ಒಂದು ವಿಧಾನ. ಪ್ರತಿದಿನ ಸಂಜೆ ಗಂಟೆ 7 ರಿಂದ 9ರ ತನಕ ಗ್ರೂಪ್ ಸಕ್ರಿಯ. ಕೃಷಿ ಮಾಧ್ಯಮ ಕೇಂದ್ರದ ವರಿಷ್ಠರು, ಸಂಪನ್ಮೂಲ ವ್ಯಕ್ತಿಗಳು ಆ ಅವಧಿಯಲ್ಲಿ ತರಗತಿಗೆ ಬರುತ್ತಾರೆ. ಶಿಬಿರಾರ್ಥಿಗಳ ಸಂಶಯಗಳನ್ನು ಪರಿಹರಿಸುತ್ತಾರೆ. ಒಬ್ಬನ ಸಂಶಯ ಮತ್ತು ಅದಕ್ಕಿರುವ ಪರಿಹಾರ ಇವೆರಡೂ ಏಕ ಕಾಲದಲ್ಲಿ ಎಲ್ಲಾ ಶಿಬಿರಾರ್ಥಿಗಳಿಗೆ ರವಾನೆಯಾಗುತ್ತದೆ. ವೈಯಕ್ತಿವಾಗಿಯೂ ಸಂಪನ್ಮೂಲ ವ್ಯಕ್ರಿಗಳನ್ನು ಸಂಪರ್ಕಿಸುತ್ತಾರೆ.
             ವಾಟ್ಸಪ್ ಗುಂಪಿನಲ್ಲಿ ತರಬೇತಿಯೇತರ ವಿಚಾರಗಳು ಬಂದಾಗ ಅಡ್ಮಿನ್ ಗರಂ ಆಗುತ್ತಾರೆ! ಸಂಬಂಧಪಟ್ಟವರಿಗೆ ಎಚ್ಚರಿಕೆ. ಕ್ಷಿಪ್ರ ಅಲರ್ಟ್. ಮತ್ತೂ ತಿದ್ದಿಕೊಳ್ಳದಿದ್ದರೆ ದಂಡ ಪ್ರಯೋಗ! ಈ ಹಂತಕ್ಕೆ ಯಾರೂ ಬಂದಿಲ್ಲ. ಈ ರೀತಿಯ ವ್ಯವಸ್ಥೆಗಳು ಶಿಸ್ತುಬದ್ಧಗೊಳಿಸಿರುವುದು ಅನಿವಾರ್ಯ. ಪತ್ರಿಕೋದ್ಯಮ ತರಬೇತಿಯು ಗ್ರೂಪಿನ ಉದ್ದೇಶವಾಗಿರುವುದರಿಂದ ಅನ್ಯ ವಿಚಾರಗಳು ಬೇಕಾಗಿಲ್ಲ. ಅಂತಹುದಕ್ಕೆ ಬೇರೆ ಗ್ರೂಪಿದೆ. ಅದನ್ನು ಬಳಸಿಕೊಳ್ಳಬಹುದು, ಎನ್ನುತ್ತಾರೆ ಕೇಂದ್ರದ ಸಂಚಾಲಕಿ ರೇಖಾ ಸಂಪತ್.
              ನಾಗೇಶ ಹೆಗಡೆ, ಶ್ರೀ ಪಡ್ರೆ, ಮಲ್ಲಿಕಾರ್ಜುುನ ಹೊಸಪಾಳ್ಯ, ಅಡ್ಡೂರು ಕೃಷ್ಣ ರಾವ್, ಡಾ.ಮೊಹನ್ ತಲಕಾಲುಕೊಪ್ಪ, ಆನಂದತೀರ್ಥ ಪ್ಯಾಟಿ, ಗಾಣದಾಳು ಶ್ರೀಕಂಠ... ಹೀಗೆ ಐವತ್ತಕ್ಕೂ ಮಿಕ್ಕಿ ಅನುಭವಿ ಸಂಪನ್ಮೂಲ ವ್ಯಕ್ತಿಗಳಿದ್ದಾರೆ. ಅವರೆಲ್ಲರ ಸಲಹೆ, ಸೂಚನೆಗಳು ಶಿಬಿರಾರ್ಥಿಗಳಿಗೆ ನಿರಂತರ. ಗುಂಪಿನಲ್ಲಿ ಅಂಕಣ ಬರೆಹಗಳು ಆರಂಭವಾಗಿವೆ. ಶ್ರೀ ಪಡ್ರೆಯವರ 'ಸುಳಿವೊಂದು ಮಿಂಚು', ಡಾ.ಮೋಹನ್ ತಲಕಾಲುಕೊಪ್ಪ ಅವರ 'ತಂತ್ರ-ತಾಣ' ಮಲ್ಲಿಕಾರ್ಜುನ ಹೊಸಪಾಳ್ಯರ 'ಬಂಡಿ-ಜಾಡು', ಡಾ.ಮನೋಹರ ಉಪಾಧ್ಯರ 'ಸಹ-ಸಹ್ಯ' ಮತ್ತು ಮೈಸೂರಿನ ಕೃಷ್ಣಪ್ರಸಾದ್ ಅವರ 'ಬೀಜ-ಮಾತು' ಅಂಕಣಗಳು ಆರಂಭಗೊಂಡಿವೆ.
               ದೂರ ಶಿಕ್ಷಣ ವ್ಯವಸ್ಥೆಯಲ್ಲಿ  ಕಾಮ್ ತರಬೇತಿಯು ಒಂದು ಹೊಸ ಮೈಲಿಗಲ್ಲು. ಇಂದಿನ ಮಾಧ್ಯಮ ರಂಗದಲ್ಲಿ ನಮಗೆ ಅನ್ನ ನೀಡುವ ಕೃಷಿಯನ್ನು ಕಡೆಗಣಿಸಿರುವುದು ವಿಪರ್ಯಾಸ. ಇಂತಹ ಸಂದರ್ಭದಲ್ಲಿ ಪತ್ರಿಕಾ ಮಾಧ್ಯಮದಲ್ಲಿ ಕೃಷಿ ಬಗ್ಗೆ ಹೆಚ್ಚಿನ ಗುಣಮಟ್ಟದ ಮಾಹಿತಿಯನ್ನು ಪಸರಿಸುವ ನಿಟ್ಟಿನಲ್ಲಿ ಆಸಕ್ತರನ್ನು ಗುರುತಿಸಿ, ಅವರಿಗೆ ವೃತ್ತಿಪರರಿಂದ ಮಾರ್ಗದರ್ಶನ ದೊರೆಯುವಂತಹ ಅವಕಾಶ, ಶಿಬಿರಾರ್ಥಿ ಸುಜಯ್ ಆರ್.ಕೆ. ಅಭಿಪ್ರಾಯ.
                ಶ್ರೀ ಪಡ್ರೆಯವರು ಶಿಬಿರವನ್ನು ಉದ್ಘಾಟಿಸುತ್ತಾ ಹೇಳಿದ ಧ್ವನಿ ಸಂದೇಶದಲ್ಲಿ ಶಿಬಿರದ ಸ್ವರೂಪ, ಆಶಯವಿದೆ, ದೇಶದಲ್ಲೇ ಈ ರೀತಿಯ ಪತ್ರಿಕೋದ್ಯಮ ಶಿಕ್ಷಣ - ಇಷ್ಟು ಕಳಕಳಿಯುಳ್ಳದ್ದು, ಇಷ್ಟು ಆಳ-ವಿಸ್ತಾರ ಹರವುಗಳಿರುವಂಥದ್ದು, ಶಿಬಿರಾರ್ಥಿಗಳ ಚಿಕಿತ್ಸಕ ದೃಷ್ಟಿಯನ್ನು ಮತ್ತು ನಿಷ್ಪಕ್ಷಪಾತ ದೃಷ್ಟಿಕೋನವನ್ನು ಹರಿತಗೊಳಿಸುವಂಥದ್ದು - ಬೇರೆಲ್ಲೂ ಸಿಗಲು ಸಾಧ್ಯವಿಲ್ಲ. ಅಶರೀರ ಪತ್ರಿಕೋದ್ಯಮ ಶಿಕ್ಷಣದ ಹೊಸ ಅಧ್ಯಾಯ ಆರಂಭವಾಗಿದೆ. ಮುಂದಿನ ಒಂದು ವರುಷ ಅತ್ಯಪೂರ್ವವಾದ ಶಿಕ್ಷಣ ಸಿಗಲಿದೆ. ಅದನ್ನು ಪಡಕೊಳ್ಳಲು ಅಭ್ಯರ್ಥಿಗಳು ಶ್ರಮ ಪಡಬೇಕಾಗುತ್ತದೆ. ಜ್ಞಾನ ಸಂಪಾದನೆಯ ಹಸಿವು ಇಟ್ಟುಕೊಳ್ಳಬೇಕಾಗುತ್ತದೆ.
                 ಕೃಷಿ ಮಾಧ್ಯಮ ಕೇಂದ್ರದ ಈ ನೂತನ ಪರಿಕಲ್ಪನೆಯ 'ಇ-ಪತ್ರಿಕೋದ್ಯಮ ಶಿಬಿರ' ಹೊಸ ಮೈಲಿಗಲ್ಲು. ಇದರ ವರಿಷ್ಠರಲ್ಲಿ 'ಇಷ್ಟು ಸಾಕು' ಎನ್ನುವ ಮನಃಸ್ಥಿತಿ ಇಲ್ಲದ್ದರಿಂದ ಶಿಬಿರ ಯಶಸ್ವಿಯಾಗುವುದಂತೂ ಖಂಡಿತ. ವಿಚಾರಗಳಲ್ಲಿ ರಾಜಿಯಿಲ್ಲದೆ, ಹೇಳಬೇಕಾದುದನ್ನು ನೇರ ಹೇಳುವ ಜಾಯಮಾನವನ್ನಿಟ್ಟುಕೊಂಡ ಕೃಷಿ ಮಾಧ್ಯಮ ಕೇಂದ್ರವು ಕನ್ನಾಡಿನ ಹೆಮ್ಮೆಯ ಸಂಸ್ಥೆಯಾಗಿದೆ.

ಚಿಣ್ಣರ ಮನದೊಳಗೆ ಜಿನುಗಿದ ನೀರಿನ ಒರತೆ

ಉದಯವಾಣಿ_ನೆಲದ ನಾಡಿ / 15-12-2016

            ನವೆಂಬರ್ ತಿಂಗಳಲ್ಲಿ ಕನ್ನಡ ಸಂಭ್ರಮ. ತಿಂಗಳುಗಟ್ಟಲೆ ಕನ್ನಡ ಅಭಿಮಾನದ ಹೊನಲು. ಮೈಮೇಲೆ ಅಂಟುವ ಕನ್ನಡದ ಕಂಪು ತಿಂಗಳೊಳಗೆ ಪರಿಮಳ ಕಳೆದುಕೊಳ್ಳುತ್ತದೆ. ಜತೆಗೆ ಬರುವ ಮಕ್ಕಳ ಮನಸ್ಸನ್ನು ಅರಳಿಸುವ ಮಕ್ಕಳ ದಿನಾಚರಣೆ. ಚಾಚಾ ನೆಹರು ಸ್ಮರಣೆ. ಅಂದು ಹೂ ಮನಸ್ಸಿನ ಮಕ್ಕಳ ಮನಸ್ಸು ಅರಳಬೇಕು ಎಂದರ್ಥ. ಆದರಂದು ರಜಾ ಮಜಾದ ಭರ. ನಾಡ ಹಬ್ಬ, ರಾಷ್ಟ್ರೀಯ ಹಬ್ಬಗಳನ್ನು ಹಗುರವಾಗಿ ಸ್ವೀಕರಿಸುತ್ತೇವೆ. ಮಕ್ಕಳ ಮನಕ್ಕೆ, ಮತಿಗೆ ಮೇವು ಒದಗಿಸುವ ಅವಕಾಶಗಳನ್ನು ಹೊತ್ತಿರುವ ಆಚರಣೆಗಳು ಕಾಯಕಲ್ಪಕ್ಕೆ ಕಾಯುತ್ತಿವೆ. ಮಾಡುವವರು ಯಾರು? ಪರಸ್ಪರ ಗೂಬೆ ಕೂರಿಸುವ, ಹುನ್ನಾರಗಳನ್ನು ಹೆಣೆಯುವ ಜಾಲಗಳ ಮಧ್ಯೆ ವ್ಯವಸ್ಥೆಗಳಿಗೆ ಎಲ್ಲಿದೆ ಪುರುಸೊತ್ತು?
                ಸರಿ, ಕರಾವಳಿಯುದ್ದಕ್ಕೂ ಒಮ್ಮೆ ಇಣುಕೋಣ. ನವೆಂಬರ್ ತಿಂಗಳಲ್ಲಿ ಶಾಲಾ ವಿದ್ಯಾರ್ಥಿಗಳು, ಅಧ್ಯಾಪಕರು ಬ್ಯುಸಿ. ಪಠ್ಯ, ಪಾಠ, ಸಭೆ, ಕಚೇರಿ ಓಡಾಟ ಎನ್ನುತ್ತಾ ಬಿಡುವಿಲ್ಲದೆ ಓಡಾಡುವ ಅಧ್ಯಾಪಕರು ಮಕ್ಕಳೊಂದಿಗೆ ಮಕ್ಕಳಾಗಿದ್ದಾರೆ. ಅವರ ಮನಸ್ಸುಗಳನ್ನು ಓದಿದ್ದಾರೆ. ವರ್ತಮಾನದ ಜ್ವಲಂತ ಸಮಸ್ಯೆಗಳತ್ತ ಅವರನ್ನು ಸೆಳೆದಿದ್ದಾರೆ. ನೀರಿನ ಅರಿವನ್ನು ಮೂಡಿಸಲು ಯತ್ನಿಸಿದ್ದಾರೆ. ಅಂತರ್ಜಲವನ್ನು ವೃದ್ಧಿಸುವ ಕೆಣಿಗಳತ್ತ ಗಮನ ಸೆಳೆದಿದ್ದಾರೆ. ಥಿಯರಿಗಿಂತ ಪ್ರಾಕ್ಟಿಕಲ್ ವಿಚಾರಗಳಿಗೆ ಮಹತ್ತ್ತು ಕೊಟ್ಟಿದ್ದಾರೆ.
                ನವೆಂಬರ್ ತಿಂಗಳಿನ ಕೆಲವು ದಿನಗಳಂದು ಜಲಸಂರಕ್ಷಣೆಯ ಆಶಯದ ಭಿತ್ತಿಪತ್ರ ರಚನೆಯ ಸ್ಪರ್ಧೆಯೊಂದನ್ನು ಆಯೋಜಿಸಲಾಗಿತ್ತು. ಶಾಲಾ ಮಟ್ಟ, ನಂತರ ಸಮೂಹ, ಬಳಿಕ ತಾಲೂಕು ಮತ್ತು ಜಿಲ್ಲಾ ಮಟ್ಟ.. ಹೀಗೆ ನಾಲ್ಕು ಹಂತಗಳಲ್ಲಿ ಸ್ಪರ್ಧೆಗಳು. ಕ್ರೀಡೆ, ಸ್ಪರ್ಧೆ, ಪ್ರಬಂಧ ಅಂದಾಗ ಶಾಲೆಗಳಲ್ಲಿರುವ ಕಲೆಯ ಟಚ್ ಇರುವ ಕೆಲವೇ ಕೆಲವು ವಿದ್ಯಾರ್ಥಿಗಳು ತೊಡಗಿಸಿಕೊಳ್ಳುತ್ತಾರೆ. ಭಿತ್ತಿ ಪತ್ರ ರಚನೆಯ ಸ್ಪರ್ಧೆಯಲ್ಲಿ ಬಹುತೇಕ ವಿದ್ಯಾರ್ಥಿಗಳು ಭಾಗವಹಿಸಿರುವುದು ವಿಶೇಷ. ಅಂದವಾಗಿ ಹೇಗೆ ಚಿತ್ರ ಬಿಡಿಸಿದ್ದಾರೆ ಎನ್ನುವುದಕ್ಕಿಂತ, ತಲೆಯೊಳಗೆ ನೀರು ಹೇಗೆ ಅಂದವಾಗಿ ಚಿತ್ತಾರವಾಗಿದೆ ಎನ್ನುವುದು ಮುಖ್ಯ. ಸುಮಾರು ಹದಿಮೂರು ಸಾವಿರಕ್ಕೂ ಮಿಕ್ಕಿ ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದಾರೆ!
                ಮಗು ಸ್ಪರ್ಧೆಯಲ್ಲಿ ಭಾಗವಹಿಸುತ್ತದೆ ಎಂದಾದರೆ ಆ ಮಗುವಿನ ಹೆತ್ತವರು ಅಲರ್ಟ್ ಆಗುವುದು ಸಹಜ. ತನ್ನ ಮಗ ಪ್ರಥಮ ಸ್ಥಾನದಲ್ಲಿ ಬರಬೇಕು ಎನ್ನುವ ನಿರೀಕ್ಷೆ. ಜಲಸಂರಕ್ಷಣೆಯ ಸುತ್ತಮುತ್ತ ಸ್ಪರ್ಧೆ ಇರುವುದರಿಂದ ಮನೆಯಲ್ಲೂ ನೀರಿನ ಬಳಕೆ, ಉಳಿಕೆಗಳ ಮಾತುಕತೆ ಆಗಿಯೇ ಆಗುತ್ತದೆ. ಇದರಿಂದಾಗಿ ಮಗುವಿನ ಮೂಲಕ ಹೆತ್ತವರಿಗೂ ಜಲಸಂರಕ್ಷಣೆಯ ಪಾಠದ ಒಂದೆಳೆಯ ಸ್ಪರ್ಶವಾಗುತ್ತದೆ. ಮನೆಯಲ್ಲಿ ಸಣ್ಣಕೆ ಚಿಂತನೆಯ ಬೀಜ ಮೊಳಕೆಯೊಡೆಯುತ್ತದೆ. ಇದರಿಂದ ಎತ್ತಿ ಹೇಳುವಂತಹ ಬದಲಾವಣೆ ಕಾಣದಿದ್ದರೂ ಅರಿವಿನ ತಂಗಾಳಿ ಬೀಸಲಾರಂಬಿಸುವುದಂತೂ ಖಂಡಿತ.
                ಸುಮಾರು ಹತ್ತನೇ ತರಗತಿಯ ತನಕ ವಿದ್ಯಾರ್ಥಿಗೆ ಅಧ್ಯಾಪಕರ ಮಾತೇ ಪ್ರಮಾಣ. ಅಧ್ಯಾಪಕ ಗೊತ್ತಿಲ್ಲದೆ ತಪ್ಪು ಶಬ್ದ ಉಚ್ಚರಿಸಿದರೂ ಅದನ್ನೇ ಸತ್ಯವೆಂದು ನಂಬುವ ವಯಸ್ಸು, ಭಕ್ತಿ, ನಂಬುಗೆ, ವಿಶ್ವಾಸ. ಅರಿವಿನ ವಿಚಾರಗಳನ್ನು ಹೆತ್ತವರು ಎಷ್ಟೇ ಗಾಢವಾಗಿ ಹೇಳಿದರೂ ಮಕ್ಕಳು ಫಕ್ಕನೆ ಸ್ವೀಕರಿಸಲಾರರು. ಆದರೆ ಅಧ್ಯಾಪಕರು ತರಗತಿಯಲ್ಲಿ ಹೇಳುವಂತಹ ಒಂದೊಂದು ವಾಕ್ಯವನ್ನೂ ಅನುಸರಿಸುತ್ತಾರೆ, ಅನುಷ್ಠಾನಿಸುತ್ತಾರೆ. ಈ ಹಿನ್ನೆಲೆಯಲ್ಲಿ ನೆಲ-ಜಲದ ಪಾಠಕ್ಕೇ ಅಧ್ಯಾಪಕರೇ ಟೊಂಕ ಕಟ್ಟಿದ್ದು ಶ್ಲಾಘನೀಯವಾದ ವಿಚಾರ. ಜಲಸಂರಕ್ಷಣೆಯ ಮಹತ್ವವನ್ನು ಸಾರುವ, ಬಿತ್ತುವ, ತನ್ನೊಳಗೆ ಇಳಿಸಿಕೊಳ್ಳುವ ಚಿಕ್ಕ ಸ್ಪರ್ಧೆಯೊಂದಕ್ಕೆ ಇಷ್ಟೊಂದು ಪ್ರಮಾಣದಲ್ಲಿ ಮಕ್ಕಳು ಭಾಗವಹಿಸಿದ್ದಾರೆ ಎನ್ನುವುದು ಸಣ್ಣ ವಿಚಾರವಲ್ಲ.
                 ಈಗ ಶಾಲೆಯ ವಾರ್ಶಿಕೋತ್ಸವಗಳ ಭರಾಟೆ. ನೆಲ-ಜಲ ಆಂದೋಳನದ ಕಾಳಜಿಯುಳ್ಳ ಅಧ್ಯಾಪಕರು ಇರುವ ಶಾಲೆಗಳಲ್ಲೆಲ್ಲಾ ಸಾಂಸ್ಕೃತಿಕ ಕಾರ್ಯಕ್ರಮದ ಅಜೆಂಡಾ ಬದಲಾಗುತ್ತಿದೆ. ಕಲಾಪಗಳ ಮಧ್ಯೆ ಜಲಸಾಕ್ಷರತೆಯ ಮಹತ್ವವನ್ನು ಸಾರುವ ತುಣುಕುಗಳ ಪ್ರಸ್ತುತಿ. ಸಮಾಜ ಮತ್ತು ಜಲಸಂರಕ್ಷಣೆಯ ಮಾತುಕತೆಗಳು. ಕಿರು ಪ್ರಹಸನ, ನೃತ್ಯ, ನಾಟಕ.. ಎಲ್ಲವೂ ಜಲದ ಸುತ್ತಮುತ್ತ. ಯಾವುದೇ ಆಂದೋಳನಗಳು 'ಮೈಮೇಲೆ ಬಂದರೆ' ಮಾತ್ರ ಅದರಿಂದ ಪರಿಣಾಮ. ನಮ್ಮ ಬಹುತೇಕ ಪರಿಸ್ನೇಹಿ ಅಧ್ಯಾಪಕರ ಸತತ ಯತ್ನ ಮತ್ತು ಆ ಕುರಿತು ಟ್ಯೂನ್ ಮಾಡಿಕೊಂಡ ಮನಃಸ್ಥಿತಿಗಳು ನಿಜಕ್ಕೂ ಅನುಕರಣೀಯ.
                ಇಷ್ಟೆಲ್ಲಾ ಹೇಗೆ ಸಾಧ್ಯವಾಯಿತು? ಕರ್ನಾಟಕ ಸರಕಾರದ ಲೋಕಶಿಕ್ಷಣ ಇಲಾಖೆಯಡಿ ಬರುವ ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿಗಳ ಮುಂದಾಳ್ತನದಲ್ಲಿ 'ಜಲ ಸಾಕ್ಷರತಾ ಆಂದೋಳನ'ವು ಕರಾವಳಿಯ ಶಾಲೆಗಳಲ್ಲಿ ಸದ್ದಿಲ್ಲದೆ ನಡೆಯುತ್ತದೆ. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯವರು ಮುಖ್ಯಸ್ಥರಾಗಿರುವ ಸಮಿತಿಯೊಂದು ಹೆಗಲೆಣೆಯಾಗಿದೆ. ಜತೆಗೆ ಕಂಕನಾಡಿಯ ಜನಶಿಕ್ಷಣ ಟ್ರಸ್ಟಿನ ನಿರ್ದೇಶಕರಾದ ಶೀನ ಶೆಟ್ಟಿ, ಕೃಷ್ಣ ಮೂಲ್ಯರ ಯೋಜನೆ, ಯೋಚನೆ. ಒಂದು ಪಂಚಾಯತಿನಿಂದ ಪ್ರಾಯೋಗಿಕವಾಗಿ ಜಲಮರುಪೂರಣ ಆಭಿಯಾನ ಆರಂಭಿಸಬೇಕೆನ್ನುವುದು ಪೂರ್ವಯೋಜನೆಯಾಗಿತ್ತು. ಆಗಿನ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿದ್ದ ಕು.ಶ್ರೀವಿದ್ಯಾ ಅದನ್ನು ಜಿಲ್ಲೆಗೆ ವಿಸ್ತರಿಸಿದರು.
                ಕರಾವಳಿ ಯಾಕೆ, ಕನ್ನಾಡು ಹಲವು ಆಂದೋಳನಗಳಿಗೆ ಖ್ಯಾತಿ. ಯಶಸ್ಸಾದುದು ಸುದ್ದಿಯಾಗುತ್ತದೆ. ಕೆಲವು ಫೈಲ್ಗಳಲ್ಲೇ ಮಲಗಿರುತ್ತದೆ. ಇನ್ನೂ ಕೆಲವು ಚಳುವಳಿಗಳು ಕಾಗದಗಳಲ್ಲಿ ಮಾತ್ರ ಅನುಷ್ಠಾನವಾಗಿರುತ್ತದೆ. ಇದರ ಅರಿವಿದ್ದ ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿ ಸುಧಾಕರ್ ವಿದ್ಯಾರ್ಥಿಗಳ ಮೂಲಕ ಯೋಜನೆಯನ್ನು ಅನುಷ್ಠಾನ ಮಾಡುವತ್ತ ಉತ್ಸಾಹ ತೋರಿದರು. ಅಧ್ಯಾಪಕರಿಂದ ವಿದ್ಯಾರ್ಥಿಗಳಿಗೆ ಜಲಸಾಕ್ಷರತೆಯ ಅರಿವು ಹರಿದು ಬರಬೇಕೆನ್ನುವ ದೂರದೃಷ್ಟಿ. ಆಯ್ದ ಶಾಲೆಗಳಲ್ಲಿ ಶುರುವಾದ ಪ್ರಕ್ರಿಯೆಗಳು ಜಿಲ್ಲೆಗೆ ವಿಸ್ತಾರಗೊಂಡವು. ಮಳೆನೀರನ್ನು ಭೂಮಿಗೆ ಇಂಗಿಸುವುದು ಆಂದೋಳನದ ಮೊದಲ ಪುಟ. ಜತೆಜತೆಗೆ ಅರಣ್ಯೀಕರಣದ ಪುಟ್ಟ ಯತ್ನ.
               ವರ್ತಮಾನ ಬೇಡುವ ಇಂತಹ ದೂರದೃಷ್ಟಿ ನಿಮ್ಮಲ್ಲಿ ಹೇಗೆ ಬೀಜಾಂಕುರವಾಯಿತು? ಸುಧಾಕರ್ ಹೇಳುತ್ತಾರೆ, ಯಾವಾಗಲೂ ಕರಾವಳಿಯು ನೀರಿನ ಬರವನ್ನು ಕಂಡಿಲ್ಲ. ಕಳೆದ ವರುಷದ ಬೇಸಿಗೆಯು ನೀರಿನ ಬರದ ಅನುಭವ ಕೊಟ್ಟಿತು. ಕುಡಿಯುವ ನೀರಿಗೂ ಒದ್ದಾಟ, ರಂಪಾಟ. ಮುಖ್ಯವಾಗಿ ಕೃಷಿ ರಂಗದ ಮೇಲೆ ಪರಿಣಾಮ. ಮಂಗಳೂರಿನಂತಹ ಪಟ್ಟಣಕ್ಕೆ ಕಳೆದ ವರುಷ ಜಲದ ಬರವು ಬಿಸಿ ಮುಟ್ಟಿಸಿದೆ. ಜಲಮರುಪೂರಣದತ್ತ ದೊಡ್ಡ ಸ್ವರವನ್ನು ಎಬ್ಬಿಸುತ್ತಾ ಬಂದಿರುವ ಜಲಯೋಧರು ಹಬ್ಬಿಸಿದ ಮಾಹಿತಿಯ ಪುಟ ತೆರೆಯಲು ಶುರು ಮಾಡಿದ್ದಾರೆ! ನೀರಿನ ಬರಕ್ಕೆ ಏನಾದರೊಂದು ಪರಿಹಾರವನ್ನು ಸಣ್ಣ ಮಟ್ಟದಲ್ಲಿ ಕಂಡುಕೊಳ್ಳುವ ಚಿಕ್ಕ ಬಿಂದು ಇಂದು ಸಿಂಧುವಾಗುತ್ತಿದೆ.
               ಸುಧಾಕರ್ ಆಂದೋಳನದ ಪರಿಣಾಮಗಳನ್ನು ಹೇಳುತ್ತಾರೆ, ಬಾವಿ, ಕೊಳವೆಬಾವಿ ಮರುಪೂರಣ. ಜತೆಜತೆಗೆ ಇಂಗುಗುಂಡಿಗಳ ನಿರ್ಮಾಣ ಮಾಡಿದ ಶಾಲೆಗಳು ಆರುನೂರು ಮೀರಬಹುದು. ಈಗಾಗಲೇ ನೆಲಜಲ ಸಂರಕ್ಷಣೆಯಲ್ಲಿ ತೊಡಗಿಸಿಕೊಂಡಿರುವ ಶಾಲೆಗಳ ಪರಸ್ಪರ ಅನುಭವ ಹಂಚಿಕೆಯು ಕೆಲಸಗಳು ವೇಗವನ್ನು ಹೆಚ್ಚಿಸಿತು. ಯಶಸ್ಸು ಸಾಧಿಸಿದ ರೀತಿಗಳನ್ನು ಉಳಿದ ಶಾಲೆಗಳಿಗೆ ತಿಳಿಸುವ ಯತ್ನವೂ ಜತೆಜತೆಗೆ ನಡೆದಿತ್ತು. ಪರಿಸರ ಕಾಳಜಿಯುಳ್ಳ ಅಧ್ಯಾಪಕರಿರುವಲ್ಲೆಲ್ಲಾ ನೀರೆಚ್ಚರದ ಕೆಲಸಗಳು ವೇಗ ಪಡೆದುವು. ವಿದ್ಯಾರ್ಥಿಗಳಿಗೆ ಜಲಸಂರಕ್ಷಣೆಯ ಪರಿಕಲ್ಪನೆ ಸ್ಪಷ್ಟವಾಗಿದೆ. ಮಾಹಿತಿ ವಿನಿಮಯಕ್ಕೆ 'ಜಲ ಸಾಕ್ಷರತಾ ಆಂದೋಳನ' ವಾಟ್ಸಪ್ ಗ್ರೂಪಿದೆ.
                 ಬಂಟ್ವಾಳ ತಾಲೂಕಿನ ಅಳಿಕೆ ಶ್ರೀ ಸತ್ಯಸಾಯಿ ಲೋಕಸೇವಾ ಪ್ರೌಢ ಶಾಲೆಯ ವಿದ್ಯಾರ್ಥಿಗಳು ರೂಪಿಸಿದ ತಡೆಗಟ್ಟ, ನೀರಿನ ಪೋಲಿನ ತಡೆ, ಕಾಡು ಕೃಷಿ; ಕೇಪು-ಕಲ್ಲಂಗಳ ಶಾಲೆಯ ನೀರೆಚ್ಚರದ ಮಾದರಿಗಳು, ಮನೆಗೊಂದು ಇಂಗುಗುಂಡಿ; ಮಾಣಿಲದ ಜಲಗಣತಿ, ಮಂಗಳೂರು ಉರ್ವದ ಪೊಂಪೈ ಶಾಲೆಯಲ್ಲಿ ಕವನಗಳ ಮೂಲಕ ಮಕ್ಕಳ ಮನಸ್ಸನ್ನು ಅರಳಿಸುವ ಯತ್ನ, ಪಾಣಾಜೆ ಶಾಲೆಯ ನೀರಿನ ಸೋಸು ವಿಧಾನ, ಸುರಿಬೈಲು ಶಾಲೆಯ ಅಂತರ್ಜಲ ಮರುಪೂರಣ, ಉಜಿರೆ-ಬೆಳಾರು ಶಾಲೆಯ ಮಳೆನೀರು ಇಂಗುವ ವ್ಯವಸ್ಥೆ.. ಹೀಗೆ ಒಂದೊಂದು ಶಾಲೆಯಲ್ಲಿ ಒಂದೊಂದು ವಿಧಾನಗಳು ನೀರೆಚ್ಚರದತ್ತ ವಿದ್ಯಾಥರ್ಿಗಳನ್ನು ಸೆಳೆದಿದೆ.
               ನೀರಿನ ಕಟ್ಟಗಳ ಬಗ್ಗೆ ನಾವಿನ್ನೂ ಯೋಚಿಸಿಲ್ಲ. ಎನ್.ಎಸ್.ಎಸ್. ಶಿಬಿರಗಳಲ್ಲಿ ಜಾಗೃತಿ ಜಾಥಾಗಳನ್ನು ಹಮ್ಮಿಕೊಳ್ಳುವ ಇರಾದೆಯಿದೆ' ಎಂದು ಹೊಸ ಸುಳಿವನ್ನು ಬಿಟ್ಟುಕೊಟ್ಟರು ಸುಧಾಕರ್. ಶಾಲೆಗಳಲ್ಲಿ ಆಗುವ ಈ ಜಲ ಆಂದೋಳನಕ್ಕೆ ಮಿತಿಗಳಿವೆ. ಇವರು ಹುಟ್ಟು ಹಾಕಿದ ಹಣತೆಯ ಬೆಳಕನ್ನು ಯುವಕಮಂಡಲಗಳು, ಸ್ಥಳೀಯ ಸಂಸ್ಥೆಗಳು ಸಮಾಜಕ್ಕೆ ಹಬ್ಬಿಸಬಹುದು. ಇದೊಂದು ಸಾರ್ವಜನಿಕ ಆಂದೋಳನವಾಗಿ ವಿಸ್ತರಿಸಬೇಕು.


ಹಲಸಿನ ಅರಿವು ಮೂಡಿಸುವ ಯಾತ್ರೆ

ಹೊಸದಿಗಂತ-ಮಾಂಬಳ / 28-12-2016

              ಕೇರಳ ರಾಜಧಾನಿಯಿಂದ ೨೦೧೬ ಜುಲೈಯಲ್ಲೊಂದು ರಥಯಾತ್ರೆ ಹೊರಟಿದೆ. ಹೆಸರು 'ಹಲಸಿನ ಅರಿವು ಮೂಡಿಸುವ ಯಾತ್ರೆ'. ಭವಿಷ್ಯದ ಬೆಳೆ ಹಲಸಿನ ಬಗ್ಗೆ ಊರವರಿಗೆ, ಅದಕ್ಕೂ ಹೆಚ್ಚು ಶಾಲಾ ವಿದ್ಯಾರ್ಥಿಗಳಿಗೆ ತಿಳಿಹೇಳುವುದು ಪರಮೋದ್ದೇಶ. ಜತೆಗೆ ಹಲಸಿನಿಂದ ಬೇರೆಬೇರೆ ಉತ್ಪನ್ನ ಸಾಧ್ಯತೆಗಳ, ಮಾರಾಟಾವಕಾಶಗಳ ಕಲ್ಪನೆ ಕೊಡುವುದು. ಹಲಸಿನ ತಯಾರಿಗಳ ಮಾರಾಟ. ಕೇರಳದ ಹಲವು ಶಾಸಗಿ ಮತ್ತು ಸರಕಾರಿ ಸಂಸ್ಥೆಗಳು ಈ ಯಾತ್ರೆಗೆ ಹೆಗಲು ಕೊಟ್ಟಿವೆ.
              ಈ ರಥದ ಹೆಸರು 'ಚಕ್ಕವಂಡಿ' ಅಂದರೆ ಹಲಸಿನ ಗಾಡಿ. ಪಾಲಕ್ಕಾಡಿನ ಚಿಕ್ಕೂಸ್ ಐಸ್ಕ್ರೀಮಿನ ಮಾಲಕ ಮೃದುವರ್ಣನ್ ಅವರ ಕನಸು. ಜ್ಯಾಕ್ಫ್ರುಟ್ ಪ್ರೊಮೋಶನ್ ಕೌನ್ಸಿಲ್ ಮತ್ತು ಜ್ಯಾಕ್ಫ್ರುಟ್ ಪ್ರೊಮೋಶನ್ ಕನ್ಸೋಶರ್ಿಯಂ ಹೆಗಲೆಣೆ. ಎರಡು ವರುಷಗಳ ದೀರ್ಘ ಸಿದ್ಧತೆ. ಇವರಿಗೆ 2011ರಲ್ಲಿ ತಿರುವನಂತಪುರದಲ್ಲಿ ಜರುಗಿದ ಅಂತಾರಾಷ್ಟ್ರೀಯ ಹಲಸು ಮೇಳದ ಸ್ಫೂರ್ತಿ. ಮೃದುವರ್ಣನ್ ಆಶಯಕ್ಕೆ ಹಲಸಿಗಾಗಿ ಕೆಲಸ ಮಾಡುವ ಸಂಸ್ಥೆಗಳು ಜತೆಸೇರಿವೆ. ಶಾಲೆ, ಪಂಚಾಯತ್ಗಳಲ್ಲಿ ಪ್ರೀತಿಯ ಸ್ವಾಗತ.
              ಚಕ್ಕವಂಡಿಯಲ್ಲಿ ಏನೇನಿದೆ? ಐಸ್ಕ್ರೀಂ, ಕಸಿಗಿಡಗಳು, ಮನೆಉತ್ಪನ್ನಗಳು, ಅಂದಂದೇ ತಯಾರಿಸಿದ ಉತ್ಪನ್ನಗಳು.. ಇದು ವ್ಯಾಪಾರ ವ್ಯವಸ್ಥೆಯಲ್ಲ. ಇದು ಶಿಕ್ಷಣ ವ್ಯವಸ್ಥೆಯಾಗಿ ರೂಪುಗೊಳ್ಳಬೇಕು ಎನ್ನುವುದು ಮೃದುವರ್ಣನ್ ಆಶಯ. ದಶಂಬರ್ ಮೊದಲ ವಾರದಲ್ಲಿ ಹಲಸಿನ ಗಾಡಿಯು ಕಾಞಂಗಾಡ್, ಕಾಸರಗೋಡು  ವರೆಗೂ ಬಂದಿತ್ತು. ಯಾತ್ರೆಯುದ್ದಕ್ಕೂ ಶಾಲಾ ವಿದ್ಯಾಥರ್ಿಗಳಿಗೆ ಹಲಸಿನ ಬಳಕೆ, ಅವುಗಳ ಮೌಲ್ಯವರ್ಧಿತ ಉತ್ಪನ್ನಗಳ ಪರಿಚಯ, ಔಷಧೀಯ ಮಹತ್ವ.. ಮೊದಲಾದ ವಿಚಾರಗಳನ್ನು ತಿಳಿಹೇಳಲಾಗುತ್ತದೆ.
              ಮೃದುವರ್ಣನ್ ಮೂರು ವರುಷದ ಹಿಂದೆ ಮಿತ್ರ ಜಾನ್ಸನ್ ಜತೆ ಮಹಾರಾಷ್ಟ್ರದ ಕುಡಾಲಿಗೆ ಹೋಗಿದ್ದರು. ಅಲ್ಲಿ ಹಲಸಿನ ಹಣ್ಣಿನ(ಹಹ)ಪಲ್ಪ್ ಮಾಡುವ ಜ್ಞಾನವನ್ನು ಕಲಿತರು. ಹಲಸಿನ ಹಣ್ಣಿನ ಪಲ್ಪ್ನೊಂದಿಗೆ ಊರಿಗೆ ಮರಳಿದ್ದರು. ಈ ಪಲ್ಪನ್ನು ಬಳಸಿ ತಮ್ಮ 'ಚಿಕ್ಕೂಸ್' ಉದ್ಯಮದಲ್ಲಿ ಐಸ್ಕ್ರೀಂ ಸಿದ್ಧಪಡಿಸಿದ್ದರು. ಹಲಸಿನ ಹಣ್ಣಿನ ಐಸ್ಕ್ರೀಮಿಗೆ ಹಳ್ಳಿ ಜನರ ಒಲವು ತೀರಾ ಕಡಿಮೆಯಿತ್ತು. ಆದರೆ ಪೇಟೆ ಮಂದಿಗೆ ತುಂಬಾ ಇಷ್ಟವಾಯಿತು.  ಈ ಐಸ್ಕ್ರೀಮಿನ ಮಾರಾಟಕ್ಕೆ ನಗರದಲ್ಲಿ ಅವಕಾಶ ದೊರೆಯಿತು. ಮೇಳಗಳಲ್ಲಿ ಮಳಿಗೆ ತೆರೆದು ರುಚಿ ಉಣಿಸಿದರು. ಉತ್ತಮ ಹಿಮ್ಮಾಹಿತಿ ಸಿಕ್ಕಿತು. ಈ ಯಶದ ಹಿನ್ನೆಲೆಯಲ್ಲಿ ಜನರೇ ಇರುವಲ್ಲಿಗೆ ಉತ್ಪನ್ನದೊಂದಿಗೆ ಹೋದರೆ ಹೇಗೆ ಎನ್ನುವ ಯೋಚನೆಯು ಚಕ್ಕವಂಡಿ ಮೂಲಕ ತೆರೆಯಿತು.
               ಕೊಟ್ಟಾಯಂನಲ್ಲಿ 'ಭೂಮಿಕಾ' ಸಂಸ್ಥೆಯು 'ಜಾಕ್ಅಪ್' ಬ್ರಾಂಡಿನಲ್ಲಿ ಈಗಾಗಲೇ ಹಲಸಿನ ಉತ್ಪನ್ನಗಳನ್ನು ಗ್ರಾಹಕರಿಗೆ ನೀಡುತ್ತಿದೆ. ವರುಷಪೂರ್ತಿ ಹಲಸಿನ ಉತ್ಪನ್ನ ಸಿದ್ಧಪಡಿಸುವಷ್ಟು ಸದೃಢರಾಗಿದ್ದಾರೆ. ತಾವೂ ಒಂದು ಚಕ್ಕವಂಡಿ ಆರಂಭಿಸುವ ಬಗ್ಗೆ ಇವರು ಚಿಂತನೆ ಆರಂಭಿಸಿದ್ದಾರೆ. ಗುಜ್ಜೆ, ಹಲಸಿನ ಹಣ್ಣನ್ನು ತಾಜಾ ಅಗಿಯೇ ಮಾರಾಟ ಮಾಡುವ ಕನಸು ಇವರದು.
              ಅಂತಾರಾಷ್ಟ್ರೀಯ ಮಟ್ಟದಲ್ಲಿ ಕ್ಯಾಲಿಫೋರ್ನಿಯಾದ ಮಿರಿಯಮ್ ಎಂಬ ಮಹಿಳೆ ಟ್ರಕ್ಕಿನಲ್ಲಿ 'ಲಾ ಜಾಕಾ ಮೊಬೈಲ್' ಎನ್ನುವ ಹೆಸರಿನಲ್ಲಿ ಹಲಸಿನ ಉತ್ಪನ್ನಗಳನ್ನು ಜನಪ್ರಿಯಗೊಳಿಸುತ್ತಿದ್ದಾರೆ. ಶ್ರೀ ಪಡ್ರೆಯವರ ಹಲಸಿನ ಬಗೆಗಿನ ಮಾಹಿತಿ ಆಂದೋಳನ, ಹಲಸಿನ ಕೆಲಸಗಳು ತನಗೆ ಸ್ಫೂತರ್ಿ ನೀಡಿದೆ ಎನ್ನುತ್ತಾರೆ. ಶ್ರೀ ಪಡ್ರೆಯವರು ಹಲಸು ಆಂದೋಳನಕ್ಕೆ ಶ್ರೀಕಾರ ಬರೆದವರು.
                 ಕ್ಯಾಲಿಫೋರ್ನಿಯಾದಲ್ಲಿ ಹಲಸಿನ ಬೆಳೆ ಕಡಿಮೆ. ಮೆಕ್ಸಿಕೋದಿಂದ ತರಿಸಿಕೊಳ್ಳಬೇಕಷ್ಟೇ. ಅವರು ಹಲಸಿನ ಸಿದ್ಧ ಉತ್ಪನ್ನಗಳನ್ನು ತಯಾರಿಸಿ ರುಚಿ ನೋಡಿ ಖರೀದಿಸುವಂತೆ ವಿನಂತಿಸುತ್ತಾರೆ. ಟ್ರಕ್ಕಿನಲ್ಲಿ ಸ್ಥಳದಲ್ಲೇ ತಯಾರಿಸುವ ತಿಂಡಿಗಳನ್ನು ಜನರು ಇಷ್ಟಪಟ್ಟು ತಿನ್ನುತ್ತಾರೆ. ಮದುವೆಗಳಲ್ಲಿ ಇವರ ಗಾಡಿಯನ್ನು ಬುಕ್ ಮಾಡುತ್ತಾರೆ. ಹಲಸಿನ ರುಚಿ ತೋರಿಸಲು ಇದು ಒಳ್ಳೆಯ ದಾರಿ. ಗಾಡಿಯಲ್ಲೇ ಬಿಸಿಯಾದ ತಿಂಡಿ ತಯಾರಿಸಿ ನೀಡಿದರೆ ತಿಂಡಿ ಮಾಡುವಷ್ಟು ಪುರುಸೊತ್ತಿಲ್ಲ! ಗಿರಾಕಿಗಳ ಹತ್ರ ಹಲಸನ್ನು ಒಯ್ಯುವ ತಂತ್ರವಿದು.
                ಕಬ್ಬಿನ ಹಾಲಿಗಿರುವ 'ಕೆನೋಲ' (ಅಚಿಟಿಠಟಚಿ) ಒಳ್ಳೆಯ ಕಲ್ಪನೆ. ನೊಣ ಹಾರುವ ವಾತಾವರಣಕ್ಕಿಂತ ಭಿನ್ನವಾಗಿ ಕಬ್ಬಿನ ಹಾಲನ್ನು ಸವಿಯುವ ವ್ಯವಸ್ಥೆ. ಬೆಂಗಳೂರಿನಲ್ಲಿ ಏನಿಲ್ಲವೆಂದರೂ ನೂರಕ್ಕೂ ಮಿಕ್ಕಿ ಯಾಂತ್ರೀಕೃತ ಕಬ್ಬಿನ್ನು ಹಿಂಡಿ ರಸತೆಗೆದು ಸರ್ವ್ ಮಾಡುವ ಮಳಿಗೆಗಳಿವೆ. ಬಸ್ ನಿಲ್ದಾಣಗಳಿಗೂ ಕೆನೋಲ ಲಗ್ಗೆಯಿಟ್ಟು ಕ್ರಾಂತಿ ಮಾಡಿತು. ಈಗ ಎಲ್ಲಾ ವರ್ಗದ ಜನರೂ ಒಂದೇ ಸೂರಿನಲ್ಲಿ ನಿಂತು ನಿರ್ಮಲವಾಗಿ ಕಬ್ಬಿನ ಹಾಲನ್ನು ಕುಡಿಯುತ್ತಾರೆ. ಫುಟ್ಪಾತ್ ಯೋಗವನ್ನು ಕೆನೋಲ ತಪ್ಪಿಸಿತು!
              ಇದೇ ರೀತಿ ಹಲಸಿಗೂ ವ್ಯವಸ್ಥೆ ರೂಪುಗೊಳ್ಳಬೇಕು. ಅಕಾಲದಲ್ಲಿ ಹಣ್ಣು, ಉತ್ಪನ್ನಗಳು ಒದಗಿಸುವಂತಿರಬೇಕು. ಬೆಂಗಳೂರು, ಮೈಸೂರು, ಹುಬ್ಬಳ್ಳಿ, ತಿರುವನಂತಪುರ, ಚೆನ್ನೈ.. ಮೊದಲಾದ ಪಟ್ಟಣಗಳಲ್ಲಿ ಕ್ಲಿಕ್ ಆಗಬಹುದು. ರೈತರ ಜತೆ ಸಂಪರ್ಕವಿರಿಸಿ ಹಲಸಿನ ಹಣ್ಣು ಖರೀದಿಯ ಮಾತುಕತೆಯನ್ನು ಮಾಡಿಕೊಟ್ಟುಕೊಳ್ಳಬಹುದು. ಈ ದೇಶದಲ್ಲಿ ನಿರ್ವಿಷ ಹಣ್ಣಾಗಿ, ತರಕಾರಿಯಾಗಿ ಸಿಗುವಂತಹ ಹಲಸಿಗೆ ಈ ಮೂಲಕ ನ್ಯಾಯ ಸಲ್ಲಿಸಬಹುದು. ಗಿರಾಕಿಗಳ ಕೊರತೆ ಖಂಡಿತಾ ಬಾರದು.
ಪ್ರಚಾರ ಮತ್ತು ಮಾರಾಟವನ್ನು ಜನರ ಮಧ್ಯೆ ಹೋಗಿ ಮಾಡಲು ಸುಲಭ. ನಗರದಲ್ಲಿ ನೋಡಿ. ಗಾಡಿಗಳಲ್ಲಿ ಆಹಾರವನ್ನು ಸಿದ್ಧಪಡಿಸಿ ಶುಚಿ, ರುಚಿಯಾಗಿ ನೀಡುವ ವ್ಯವಸ್ಥೆಯನ್ನು ಪ್ರಜ್ಞಾವಂತರೂ ಸ್ವೀಕರಿಸಿದ್ದಾರೆ. ಅಂತಹ ಗಾಡಿಯನ್ನು ವಿದ್ಯಾವಂತರೇ ನಡೆಸುತ್ತಿರುವುದು ಗಮನೀಯ. ಚಕ್ರದ ಮೇಲೆ ಆಹಾರ ಬರುವುದು ಹೊಸತಲ್ಲ. ಅದನ್ನು ಹಲಸಿನ ಜತೆ ಸಮೀಕರಿಸಿದರೆ?
            ಯಾವುದೇ ಆಹಾರವನ್ನು ಜನರ ಬಳಿಗೆ ಒಯ್ಯುವುದು ದೊಡ್ಡ ಕೆಲಸವಲ್ಲ. ಉತ್ತಮ ನೋಟ ಮತ್ತು ಒಳ್ಳೆಯ ನಿರ್ವಹಣೆ ಮುಖ್ಯ. ರುಚಿಯಾದ ತುಮಕೂರು ಹಲಸು, ತೂಬುಗೆರೆ ಹಲಸಿನ ಸೊಳೆಯನ್ನು ಒಮ್ಮೆ ಹೊಟ್ಟೆಗಿಳಿಸಿದರೆ ಇನ್ನೂ ತಿನ್ನಬೇಕೆಂಬ ಸ್ವಾದ. ಅಂತೆಯೇ ಕೆಂಪುಸೊಳೆ ತಳಿಯ ಹಣ್ಣು ಗ್ರಾಹಕ ಸ್ವೀಕೃತಿ ಪಡೆಯುವುದು ಖಂಡಿತ. ಇವೆಲ್ಲಾ ಅಕಾಲದಲ್ಲಿ ಜನರಿಗೆ ಸರ್ವ್ ಮಾಡಲು ಸ್ವಲ್ಪ ಹೈಫೈ ವ್ಯವಸ್ಥೆ ಬೇಕು.
              ಕೇರಳದ ಚಕ್ಕವಂಡಿಯು ಹಲಸಿನ ಉದ್ಯಮಕ್ಕೆ ಹೊಸ ಸಂದೇಶವನ್ನು ನೀಡಿದೆ. ಜನರದ್ದೆಡೆ ಉತ್ಪನ್ನವನ್ನು ಒಯ್ಯುವ ಮೃದುವರ್ಣನ್ ಅವರ ಶ್ರಮ ಮಾದರಿಯಾಗಲಿ. ಕ್ಯಾಲಿಫೋರ್ನಿಯಾದಲ್ಲಿ ಮಾತ್ರ ಹಲಸಿನ ಟ್ರಕ್ ಯಾಕೆ? ನಮ್ಮೂರಲ್ಲೂ ಯಶಸ್ವಿಯಾಗದೇ?ಚೀನಾ ಸೇರಿದ ಕನ್ನಾಡಿನ ಅಡಿಕೆ


ಹೊಸದಿಗಂತ-ಮಾಂಬಳ / 14-12-2016

                ಪ್ರತಿಷ್ಠಿತ ಅಡಿಕೆ ಸಂಸ್ಥೆ 'ಕ್ಯಾಂಪ್ಕೋ' ಚೀನಾಕ್ಕೆ ಅಡಿಕೆಯನ್ನು ರಫ್ತು ಮಾಡಿದೆ! ಅಲ್ಲಿನ ಅಡಿಕೆಯ ಮೌತ್ಪ್ರೆಶರನ್ನು ಅಭಿವೃದ್ಧಿ ಪಡಿಸಿದ 'ಕಿಂಗ್ ಆಫ್ ಟೇಸ್ಟ್' ಕಂಪೆನಿಯು ಕ್ಯಾಂಪ್ಕೋದೊಂದಿಗೆ ವ್ಯವಹಾರ ನಡೆಸಿತ್ತು.  ಶಿವಮೊಗ್ಗ, ಪುತ್ತೂರು, ಕೊಯಂಬತ್ತೂರು ಪ್ರದೇಶದ ಆಯ್ದ ಅಡಕೆಯನ್ನು ಕ್ಯಾಂಪ್ಕೋದ ಪುತ್ತೂರು ಶಾಖೆಯಲ್ಲಿ ಸಂಸ್ಕರಣಗೊಳಿಸಲಾಗಿತ್ತು. ಇದನ್ನು ಭಾರತ ಸರಕಾರದ ಅಧೀನದಲ್ಲಿರುವ ಕೃಷಿ ಪ್ರಯೋಗಾಲಯವು  ಪರೀಕ್ಷಿಸಿ ದೃಢೀಕರಿಸಿತ್ತು. ಇಷ್ಟೆಲ್ಲಾ ಪ್ರಕ್ರಿಯೆಯನ್ನು ಪೂರ್ತಿಗೊಳಿಸಿದ ಅಡಿಕೆಯು ನವೆಂಬರ್ 24ರಂದು ಚೆನ್ನೈ ಬಂದರಿನ ಮೂಲಕ ಚೀನಾ ಪ್ರವೇಶಿಸಿದೆ. ಕೃಷಿಕರ ಪಾಲಿಗೆ ಮಹತ್ತರ ಮತ್ತು ಖುಷಿ ಪಡಬಹುದಾದ ಸಂಗತಿ. ಇದೊಂದು ಕ್ಯಾಂಪ್ಕೋದ ಮಹತ್ವಾಕಾಂಕ್ಷಿ ಯೋಜನೆಯಾಗಿತ್ತು.
             ಚೀನಾ ಸೇರಿದ್ದು ಎಳೆ ಅಡಿಕೆಯ ಸಂಸ್ಕರಿತ ರೂಪ. ಕಳೆದ ಜುಲೈ-ಆಗಸ್ಟ್ ತಿಂಗಳಿನಲ್ಲಿ ಚೀನಾದ 'ಕೋವೀವಾಂಗ್' ಕಂಪನಿಯ ಪ್ರತಿನಿಧಿ ಲೀ ಯುವೆ ಹುವಾ ಕರಾವಳಿಗೆ ಆಗಮಿಸಿದ್ದರು. ಕ್ಯಾಂಪ್ಕೋ ಸಿಬ್ಬಂದಿ ಜತೆ ಆಯ್ದ ಅಡಿಕೆ ತೋಟಕ್ಕೆ ಭೇಟಿ. ಎಳೆ ಅಡಿಕೆಯನ್ನು ಪರೀಕ್ಷಿಸಿದ ಬಳಿಕ ಗೊನೆ ಕೊಯ್ಯಲು ಸೂಚನೆ.  ತೊಟ್ಟು ಇರುವ (ಅಡಿಕೆಯಲ್ಲಿ ಮೊಗಡ ಅಥವಾ ಮುತ್ತು) ಅಡಿಕೆ ಬೇಕಾದ್ದರಿಂದ ಗೊನೆಯನ್ನು ಕೊಯಿದು ಕೆಳಗೆ ಬೀಳಿಸುಂತಿಲ್ಲ.  ಮರವೇರಿ ಗೊನೆಯನ್ನು ಜಾಗ್ರತೆಯಿಂದ ಇಳಿಸಿದ್ದರು. ಮೋಹಿತ್ನಗರ, ಇಂಟರ್ಸೀ ಮಂಗಳ ಮತ್ತು ಸ್ಥಳೀಯ ತಳಿಗಳ ಅಡಿಕೆಯು ಗಾತ್ರದಲ್ಲಿ ಉದ್ದವಾಗಿದ್ದು ಚೀನಾ ಕಂಪೆನಿಗೆ ಒಪ್ಪಿಗೆಯಾಗಿತ್ತು. ಮಂಗಳ ತಳಿಯ ಅಡಿಕೆಯು ದುಂಡಗೆ ಇದ್ದುದರಿಂದ ಬಳಸಿಲ್ಲ.
             ಪುತ್ತೂರಿನ ಕ್ಯಾಂಪ್ಕೋ ಶಾಖೆಯಲ್ಲಿ ಹೀಗೆ ಸಂಗ್ರಹಿಸಿದ ಎಳೆ ಅಡಿಕೆಯ ಸಂಸ್ಕರಣೆ. ಗೊನೆಯಿಂದ ಬೇರ್ಪಡಿಸಿದ ಅಡಿಕೆಯನ್ನು ಒಂದೆರಡು ಗಂಟೆ ಬೇಯಿಸುತ್ತಾರೆ. ನಂತರ ಡ್ರ್ಯೆಯರಿಗೆ ವರ್ಗಾವಣೆ. ಅಲ್ಲಿಯೂ ಎರಡು ದಿನ 'ಬಿಸಿ' ಸ್ನಾನ. ಅಂತಿಮ ಉತ್ಪನ್ನ - ಒಣಗಿದ ಅಡಿಕೆ. ಚೀನಾ ಕಂಪೆನಿಗೆ ಬೇಕಾಗಿರುವುದು ಈ ಅಡಿಕೆಯ ಸಿಪ್ಪೆ! ಬೇಯಿಸಿದಾಗ ಅಡಿಕೆಯ ಸಾರವನ್ನು ಸಿಪ್ಪೆ ಎಳೆದುಕೊಳ್ಳುವ ಕಾರಣ ಅವರು ಸಿಪ್ಪೆಯನ್ನು ಮೆಲ್ಲುತ್ತಾರೆ. ಅದಕ್ಕೆ ಒಂದಿಷ್ಟು ಸಿಹಿ, ಸಂಬಾರ ವಸ್ತು, ಸುಗಂಧ ದ್ರವ್ಯ ಸೇರಿಸಿ ಸಂಸ್ಕರಿಸುತ್ತಾರೆ. ಮೌತ್ ಫ್ರೆಶನರ್ ಆಗಿ ಬಳಸುತ್ತಾರೆ.
              ಅಡಿಕೆ ಸಿಪ್ಪೆಯಿಂದ ಮೌತ್ಫ್ರೇಶನರ್ ತಯಾರಿಸುವ ಕಂಪೆನಿಗಳು ಚೀನಾದಲ್ಲಿ ಹತ್ತಾರು. ತೈವಾನಿನಿಂದ ಅಡಿಕೆಯನ್ನು ಆಮದು ಮಾಡಿಕೊಳ್ಳುತ್ತಿದ್ದಾರೆ. ಅಲ್ಲಿ ನವೆಂಬರಿನಲ್ಲಿ ಅಡಿಕೆ ಬೆಳೆಯ ಸೀಸನ್ ಶುರು. ಅಡಿಕೆಯನ್ನು ಬೇಯಿಸಿ ತಂಪು ಪೆಟ್ಟಿಗೆಗಳಲ್ಲಿ ಸಂಗ್ರಹಿಸಿಟ್ಟುಕೊಂಡು ಬೇಕಾದಾಗ ವಿವಿಧ ಸಂಸ್ಕರಣೆಗೆ ಒಳಪಡಿಸಿ ಬಳಸುತ್ತಾರೆ. ಈ ಸಂಸ್ಕರಿಸಿದ ಸಿಪ್ಪೆಗೆ 'ಬಿಂಗ್ಲಾಂಗ್' ಎನ್ನುತ್ತಾರೆ. ಅಲ್ಲಿನ ಕೆಲವು ಪ್ರದೇಶಗಳಲ್ಲಿ ಅಡಿಕೆಯ ಟೂತ್ಬ್ರಶ್, ಸೌಂದರ್ಯವರ್ಧಕ ಕ್ರೀಮ್ ತಯಾರಿಸುತ್ತಾರೆ.
              ಚೀನಾಕ್ಕೆ ಬೇಕಾಗಿರುವ ಎಳೆಯ ಹಸಿ ಅಡಿಕೆಯನ್ನು ಕ್ಯಾಂಪ್ಕೋ ಕಿಲೋಗೆ ನೂರ ಹತ್ತು ರೂಪಾಯಿಗಳಂತೆ ಖರೀದಿಸಿತ್ತು. ಕೊಯಿಲು, ಸಾಗಾಟ ವೆಚ್ಚವನ್ನು ಕ್ಯಾಂಪ್ಕೋ ಭರಿಸಿತ್ತು. ಸುಮಾರು ಐವತ್ತರಿಂದ ಐವತ್ತೈದು ಎಳೆ ಅಡಿಕೆಯು ಒಂದು ಕಿಲೋ ತೂಗುತ್ತದೆ. ಚಾಲಿ ಅಡಿಕೆಗೆ ಕಿಲೋಗೆ ಸುಮಾರು ಇನ್ನೂರೈವತ್ತು ರೂಪಾಯಿ ದರವಿದ್ದು ಕಿಲೋಗೆ ಸುಮಾರು ನೂರ ಇಪ್ಪತ್ತೈದು ಒಣ ಅಡಿಕೆ ಬೇಕು. ಅದರಲ್ಲಿ ಶೇ.15ರಷ್ಟು ಪಟೋರ, ಸಿಪ್ಪೆಗೋಟು, ಕರಿ ಸಿಕ್ಕಿದರೆ ಸರಾಸರಿ ಕಿಲೊಗೆ ಇನ್ನೂರ ಮೂವತ್ತು ರೂಪಾಯಿ ಸಿಕ್ಕಿದಂತಾಯಿತು. ಇದಲ್ಲದೆ ಕೊಯಿಲು, ಹೆಕ್ಕುವುದು, ಒಣಗಿಸಿ ಸುಲಿಯುವ ವೆಚ್ಚ ಪ್ರತ್ಯೇಕ. ಇದರ ಬದಲಾಗಿ ಆರು ತಿಂಗಳ ಮೊದಲೇ ಎಳತು ಅಡಿಕೆ ಮಾರಾಟ ಮಾಡಿದರೆ ಒಂದು ಅಡಿಕೆಗೆ ಎರಡು ರೂಪಾಯಿ ಸಿಕ್ಕಂತಾಗುತ್ತದೆ, ಇದು ಕ್ಯಾಂಪ್ಕೋದ ಮಾಜಿ ಅಧ್ಯಕ್ಷ ಕೊಂಕೋಡಿ ಪದ್ಮನಾಭರ ಲೆಕ್ಕಾಚಾರ.
              ಚಾಲಿ ಅಡಿಕೆ ಪ್ರದೇಶದ ಕೃಷಿಕರು ಎಳೆ ಅಡಿಕೆಯತ್ತ ಇನ್ನೂ ಆಸಕ್ತಿ ವಹಿಸುತ್ತಿಲ್ಲ ಎನ್ನುವುದು ಕ್ಯಾಂಪ್ಕೋ ಕಂಡುಕೊಂಡ ಅಂಶ. ಈ ವರುಷ ಚೀನಾದ ಬೇಡಿಕೆ ಇದ್ದುದು ಹತ್ತು ಮೆಟ್ರಿಕ್ ಟನ್ ಒಣ ಎಳೆ ಅಡಿಕೆ. ನಾವು ಒಪ್ಪಿಕೊಂಡುದು ಎರಡು ಮೆಟ್ರಿಕ್ ಟನ್. ಮುಂದಂತೂ ಚೀನಾದೊಂದಿಗಿನ ನಮ್ಮ ವ್ಯವಹಾರ ನಿರೀಕ್ಷಿತ ಪ್ರಮಾಣದಲ್ಲಿ ಅಭಿವೃದ್ಧಿಯಾಗುವುದಂತೂ ಖಂಡಿತ, ಎನ್ನುವ ಆಶಯ ಅಧ್ಯಕ್ಷ ಎಸ್.ಆರ್.ಸತೀಶ್ಚಂದ್ರರದು.
                ಕೃಷಿಕ ಪತ್ರಕರ್ತ ಪಡಾರು ರಾಮಕೃಷ್ಣ ಶಾಸ್ತ್ರಿಯವರು ಚೀನಾಗೆ ಅಡಿಕೆ ರಫ್ತಿನ ವಿಚಾರವಾಗಿ ಅಧ್ಯಯನ ಮಾಡಿದ್ದರು. ಕಳೆದ ನಾಲ್ಕೂವರೆ ದಶಕಗಳಿಂದ ಹೆಚ್ಚು ಪ್ರಚಾರದಲ್ಲಿರುವ ಸಿ.ಪಿ.ಸಿ.ಆರ್.ಐ. ಸಂಶೋಧಿತ ಮಂಗಳ ತಳಿಯ ಅಡಿಕೆಯು ವ್ಯಾಪಕವಾಗಿದೆ. ಮೂರನೇ ಎರಡರಷ್ಟು ತೋಟವನ್ನು ಆಕ್ರಮಿಸಿದೆ. ಚೀನಾ ಕಂಪೆನಿಯು ಗಾತ್ರದಲ್ಲಿ ಉದ್ದವಾಗಿರುವ ಸ್ಥಳೀಯ ತಳಿಗಳ ಅಡಿಕೆಯನ್ನು ಆರಿಸಿದೆ. ಹೀಗಾಗಿ ಮುಂದೆ ಸ್ಥಳೀಯ ತಳಿಗಳ ಅಡಿಕೆಗಳನ್ನು ಬೆಳೆಸುವತ್ತ ದೂರಾಲೋಚನೆ ಮಾಡಬಹುದೇನೋ?
                 ಕ್ಯಾಂಪ್ಕೋ ಸಂಸ್ಥೆಗೆ ಚೀನಾ ಪ್ರತಿನಿಧಿಗಳು ಬಂದದು 2014ರಲ್ಲಿ. ಶಿರಸಿ, ಕಾಸರಗೋಡು, ಬಂಟ್ವಾಳ   ಪುತ್ತೂರು ಪ್ರದೇಶಗಳ ತೋಟಗಳಿಗೆ ಭೇಟಿ ನೀಡಿದ್ದರು. ಐದು ತಿಂಗಳು ಬೆಳೆದ, ತೊಟ್ಟು ಇರುವ, ಕನಿಷ್ಟ ಎರಡಿಂಚು ಉದ್ದವಿರುವ ಅಡಿಕೆಗೆ ಬೇಡಿಕೆ ಸಲ್ಲಿಸಿದ್ದರು. ಬದಿಯಡ್ಕ, ವಿಟ್ಲ, ಪುತ್ತೂರು, ಬಂಟ್ವಾಳಗಳಲ್ಲಿ ನಿರೀಕ್ಷಿತ ಗಾತ್ರದ ಅಡಿಕೆಯು ಬೆಳೆಯುತ್ತಿರುವುದು ತಿಳಿದು ಬಂತು. ಇಲ್ಲಿಂದ ಸ್ವಲ್ಪ ಪ್ರಮಾಣದಲ್ಲಿ ಎಳೆಯ ಅಡಿಕೆಯನ್ನು ಒಣಗಿಸಿ ಒಯ್ದಿದ್ದರು. ಈ ವರುಷ ಬರುವಾಗ ಈ ಅಡಿಕೆಯ ಉತ್ಪನ್ನಗಳ ಮಾದರಿಯನ್ನು ತಂದು ಇನ್ನಷ್ಟು ಬೇಡಿಕೆ ಸಲ್ಲಿಸಿದರು.
                 ನಮ್ಮ ದೇಶದ ಅಡಿಕೆ ಉತ್ಪಾದನೆ ಆರು ಲಕ್ಷ ಟನ್. ಚೀನಾದ ಬೇಡಿಕೆಯನ್ನು ಸುಲಭದಲ್ಲಿ ಪೂರೈಸಬಹುದು. ಸಹಕಾರಿ ರಂಗದ ದಿಗ್ಗಜ ಕ್ಯಾಂಪ್ಕೋದೊಂದಿಗೆ ಚೀನಾ ಕಂಪೆನಿಯೊಂದು ಕೈಜೋಡಿಸಿರುವುದು ಅಭಿಮಾನದ ವಿಚಾರ.  ಕ್ಯಾಂಪ್ಕೋ ಮಾಡಹೊರಟ ಈ ಯತ್ನ ಯಶಸ್ವಿಯಾಗಲು ಕೃಷಿಕರ ಸಹಭಾಗಿತ್ವ ಮುಖ್ಯ.
(ಮಾಹಿತಿ ಮತ್ತು ಚಿತ್ರ : ಪಡಾರು ರಾಮಕೃಷ್ಣ ಶಾಸ್ತ್ರಿ ಮತ್ತು ಅಡಿಕೆ ಪತ್ರಿಕೆ)