Friday, July 28, 2017

ಚೀನಾ ಸೇರಿದ ಕನ್ನಾಡಿನ ಅಡಿಕೆ


ಹೊಸದಿಗಂತ-ಮಾಂಬಳ / 14-12-2016

                ಪ್ರತಿಷ್ಠಿತ ಅಡಿಕೆ ಸಂಸ್ಥೆ 'ಕ್ಯಾಂಪ್ಕೋ' ಚೀನಾಕ್ಕೆ ಅಡಿಕೆಯನ್ನು ರಫ್ತು ಮಾಡಿದೆ! ಅಲ್ಲಿನ ಅಡಿಕೆಯ ಮೌತ್ಪ್ರೆಶರನ್ನು ಅಭಿವೃದ್ಧಿ ಪಡಿಸಿದ 'ಕಿಂಗ್ ಆಫ್ ಟೇಸ್ಟ್' ಕಂಪೆನಿಯು ಕ್ಯಾಂಪ್ಕೋದೊಂದಿಗೆ ವ್ಯವಹಾರ ನಡೆಸಿತ್ತು.  ಶಿವಮೊಗ್ಗ, ಪುತ್ತೂರು, ಕೊಯಂಬತ್ತೂರು ಪ್ರದೇಶದ ಆಯ್ದ ಅಡಕೆಯನ್ನು ಕ್ಯಾಂಪ್ಕೋದ ಪುತ್ತೂರು ಶಾಖೆಯಲ್ಲಿ ಸಂಸ್ಕರಣಗೊಳಿಸಲಾಗಿತ್ತು. ಇದನ್ನು ಭಾರತ ಸರಕಾರದ ಅಧೀನದಲ್ಲಿರುವ ಕೃಷಿ ಪ್ರಯೋಗಾಲಯವು  ಪರೀಕ್ಷಿಸಿ ದೃಢೀಕರಿಸಿತ್ತು. ಇಷ್ಟೆಲ್ಲಾ ಪ್ರಕ್ರಿಯೆಯನ್ನು ಪೂರ್ತಿಗೊಳಿಸಿದ ಅಡಿಕೆಯು ನವೆಂಬರ್ 24ರಂದು ಚೆನ್ನೈ ಬಂದರಿನ ಮೂಲಕ ಚೀನಾ ಪ್ರವೇಶಿಸಿದೆ. ಕೃಷಿಕರ ಪಾಲಿಗೆ ಮಹತ್ತರ ಮತ್ತು ಖುಷಿ ಪಡಬಹುದಾದ ಸಂಗತಿ. ಇದೊಂದು ಕ್ಯಾಂಪ್ಕೋದ ಮಹತ್ವಾಕಾಂಕ್ಷಿ ಯೋಜನೆಯಾಗಿತ್ತು.
             ಚೀನಾ ಸೇರಿದ್ದು ಎಳೆ ಅಡಿಕೆಯ ಸಂಸ್ಕರಿತ ರೂಪ. ಕಳೆದ ಜುಲೈ-ಆಗಸ್ಟ್ ತಿಂಗಳಿನಲ್ಲಿ ಚೀನಾದ 'ಕೋವೀವಾಂಗ್' ಕಂಪನಿಯ ಪ್ರತಿನಿಧಿ ಲೀ ಯುವೆ ಹುವಾ ಕರಾವಳಿಗೆ ಆಗಮಿಸಿದ್ದರು. ಕ್ಯಾಂಪ್ಕೋ ಸಿಬ್ಬಂದಿ ಜತೆ ಆಯ್ದ ಅಡಿಕೆ ತೋಟಕ್ಕೆ ಭೇಟಿ. ಎಳೆ ಅಡಿಕೆಯನ್ನು ಪರೀಕ್ಷಿಸಿದ ಬಳಿಕ ಗೊನೆ ಕೊಯ್ಯಲು ಸೂಚನೆ.  ತೊಟ್ಟು ಇರುವ (ಅಡಿಕೆಯಲ್ಲಿ ಮೊಗಡ ಅಥವಾ ಮುತ್ತು) ಅಡಿಕೆ ಬೇಕಾದ್ದರಿಂದ ಗೊನೆಯನ್ನು ಕೊಯಿದು ಕೆಳಗೆ ಬೀಳಿಸುಂತಿಲ್ಲ.  ಮರವೇರಿ ಗೊನೆಯನ್ನು ಜಾಗ್ರತೆಯಿಂದ ಇಳಿಸಿದ್ದರು. ಮೋಹಿತ್ನಗರ, ಇಂಟರ್ಸೀ ಮಂಗಳ ಮತ್ತು ಸ್ಥಳೀಯ ತಳಿಗಳ ಅಡಿಕೆಯು ಗಾತ್ರದಲ್ಲಿ ಉದ್ದವಾಗಿದ್ದು ಚೀನಾ ಕಂಪೆನಿಗೆ ಒಪ್ಪಿಗೆಯಾಗಿತ್ತು. ಮಂಗಳ ತಳಿಯ ಅಡಿಕೆಯು ದುಂಡಗೆ ಇದ್ದುದರಿಂದ ಬಳಸಿಲ್ಲ.
             ಪುತ್ತೂರಿನ ಕ್ಯಾಂಪ್ಕೋ ಶಾಖೆಯಲ್ಲಿ ಹೀಗೆ ಸಂಗ್ರಹಿಸಿದ ಎಳೆ ಅಡಿಕೆಯ ಸಂಸ್ಕರಣೆ. ಗೊನೆಯಿಂದ ಬೇರ್ಪಡಿಸಿದ ಅಡಿಕೆಯನ್ನು ಒಂದೆರಡು ಗಂಟೆ ಬೇಯಿಸುತ್ತಾರೆ. ನಂತರ ಡ್ರ್ಯೆಯರಿಗೆ ವರ್ಗಾವಣೆ. ಅಲ್ಲಿಯೂ ಎರಡು ದಿನ 'ಬಿಸಿ' ಸ್ನಾನ. ಅಂತಿಮ ಉತ್ಪನ್ನ - ಒಣಗಿದ ಅಡಿಕೆ. ಚೀನಾ ಕಂಪೆನಿಗೆ ಬೇಕಾಗಿರುವುದು ಈ ಅಡಿಕೆಯ ಸಿಪ್ಪೆ! ಬೇಯಿಸಿದಾಗ ಅಡಿಕೆಯ ಸಾರವನ್ನು ಸಿಪ್ಪೆ ಎಳೆದುಕೊಳ್ಳುವ ಕಾರಣ ಅವರು ಸಿಪ್ಪೆಯನ್ನು ಮೆಲ್ಲುತ್ತಾರೆ. ಅದಕ್ಕೆ ಒಂದಿಷ್ಟು ಸಿಹಿ, ಸಂಬಾರ ವಸ್ತು, ಸುಗಂಧ ದ್ರವ್ಯ ಸೇರಿಸಿ ಸಂಸ್ಕರಿಸುತ್ತಾರೆ. ಮೌತ್ ಫ್ರೆಶನರ್ ಆಗಿ ಬಳಸುತ್ತಾರೆ.
              ಅಡಿಕೆ ಸಿಪ್ಪೆಯಿಂದ ಮೌತ್ಫ್ರೇಶನರ್ ತಯಾರಿಸುವ ಕಂಪೆನಿಗಳು ಚೀನಾದಲ್ಲಿ ಹತ್ತಾರು. ತೈವಾನಿನಿಂದ ಅಡಿಕೆಯನ್ನು ಆಮದು ಮಾಡಿಕೊಳ್ಳುತ್ತಿದ್ದಾರೆ. ಅಲ್ಲಿ ನವೆಂಬರಿನಲ್ಲಿ ಅಡಿಕೆ ಬೆಳೆಯ ಸೀಸನ್ ಶುರು. ಅಡಿಕೆಯನ್ನು ಬೇಯಿಸಿ ತಂಪು ಪೆಟ್ಟಿಗೆಗಳಲ್ಲಿ ಸಂಗ್ರಹಿಸಿಟ್ಟುಕೊಂಡು ಬೇಕಾದಾಗ ವಿವಿಧ ಸಂಸ್ಕರಣೆಗೆ ಒಳಪಡಿಸಿ ಬಳಸುತ್ತಾರೆ. ಈ ಸಂಸ್ಕರಿಸಿದ ಸಿಪ್ಪೆಗೆ 'ಬಿಂಗ್ಲಾಂಗ್' ಎನ್ನುತ್ತಾರೆ. ಅಲ್ಲಿನ ಕೆಲವು ಪ್ರದೇಶಗಳಲ್ಲಿ ಅಡಿಕೆಯ ಟೂತ್ಬ್ರಶ್, ಸೌಂದರ್ಯವರ್ಧಕ ಕ್ರೀಮ್ ತಯಾರಿಸುತ್ತಾರೆ.
              ಚೀನಾಕ್ಕೆ ಬೇಕಾಗಿರುವ ಎಳೆಯ ಹಸಿ ಅಡಿಕೆಯನ್ನು ಕ್ಯಾಂಪ್ಕೋ ಕಿಲೋಗೆ ನೂರ ಹತ್ತು ರೂಪಾಯಿಗಳಂತೆ ಖರೀದಿಸಿತ್ತು. ಕೊಯಿಲು, ಸಾಗಾಟ ವೆಚ್ಚವನ್ನು ಕ್ಯಾಂಪ್ಕೋ ಭರಿಸಿತ್ತು. ಸುಮಾರು ಐವತ್ತರಿಂದ ಐವತ್ತೈದು ಎಳೆ ಅಡಿಕೆಯು ಒಂದು ಕಿಲೋ ತೂಗುತ್ತದೆ. ಚಾಲಿ ಅಡಿಕೆಗೆ ಕಿಲೋಗೆ ಸುಮಾರು ಇನ್ನೂರೈವತ್ತು ರೂಪಾಯಿ ದರವಿದ್ದು ಕಿಲೋಗೆ ಸುಮಾರು ನೂರ ಇಪ್ಪತ್ತೈದು ಒಣ ಅಡಿಕೆ ಬೇಕು. ಅದರಲ್ಲಿ ಶೇ.15ರಷ್ಟು ಪಟೋರ, ಸಿಪ್ಪೆಗೋಟು, ಕರಿ ಸಿಕ್ಕಿದರೆ ಸರಾಸರಿ ಕಿಲೊಗೆ ಇನ್ನೂರ ಮೂವತ್ತು ರೂಪಾಯಿ ಸಿಕ್ಕಿದಂತಾಯಿತು. ಇದಲ್ಲದೆ ಕೊಯಿಲು, ಹೆಕ್ಕುವುದು, ಒಣಗಿಸಿ ಸುಲಿಯುವ ವೆಚ್ಚ ಪ್ರತ್ಯೇಕ. ಇದರ ಬದಲಾಗಿ ಆರು ತಿಂಗಳ ಮೊದಲೇ ಎಳತು ಅಡಿಕೆ ಮಾರಾಟ ಮಾಡಿದರೆ ಒಂದು ಅಡಿಕೆಗೆ ಎರಡು ರೂಪಾಯಿ ಸಿಕ್ಕಂತಾಗುತ್ತದೆ, ಇದು ಕ್ಯಾಂಪ್ಕೋದ ಮಾಜಿ ಅಧ್ಯಕ್ಷ ಕೊಂಕೋಡಿ ಪದ್ಮನಾಭರ ಲೆಕ್ಕಾಚಾರ.
              ಚಾಲಿ ಅಡಿಕೆ ಪ್ರದೇಶದ ಕೃಷಿಕರು ಎಳೆ ಅಡಿಕೆಯತ್ತ ಇನ್ನೂ ಆಸಕ್ತಿ ವಹಿಸುತ್ತಿಲ್ಲ ಎನ್ನುವುದು ಕ್ಯಾಂಪ್ಕೋ ಕಂಡುಕೊಂಡ ಅಂಶ. ಈ ವರುಷ ಚೀನಾದ ಬೇಡಿಕೆ ಇದ್ದುದು ಹತ್ತು ಮೆಟ್ರಿಕ್ ಟನ್ ಒಣ ಎಳೆ ಅಡಿಕೆ. ನಾವು ಒಪ್ಪಿಕೊಂಡುದು ಎರಡು ಮೆಟ್ರಿಕ್ ಟನ್. ಮುಂದಂತೂ ಚೀನಾದೊಂದಿಗಿನ ನಮ್ಮ ವ್ಯವಹಾರ ನಿರೀಕ್ಷಿತ ಪ್ರಮಾಣದಲ್ಲಿ ಅಭಿವೃದ್ಧಿಯಾಗುವುದಂತೂ ಖಂಡಿತ, ಎನ್ನುವ ಆಶಯ ಅಧ್ಯಕ್ಷ ಎಸ್.ಆರ್.ಸತೀಶ್ಚಂದ್ರರದು.
                ಕೃಷಿಕ ಪತ್ರಕರ್ತ ಪಡಾರು ರಾಮಕೃಷ್ಣ ಶಾಸ್ತ್ರಿಯವರು ಚೀನಾಗೆ ಅಡಿಕೆ ರಫ್ತಿನ ವಿಚಾರವಾಗಿ ಅಧ್ಯಯನ ಮಾಡಿದ್ದರು. ಕಳೆದ ನಾಲ್ಕೂವರೆ ದಶಕಗಳಿಂದ ಹೆಚ್ಚು ಪ್ರಚಾರದಲ್ಲಿರುವ ಸಿ.ಪಿ.ಸಿ.ಆರ್.ಐ. ಸಂಶೋಧಿತ ಮಂಗಳ ತಳಿಯ ಅಡಿಕೆಯು ವ್ಯಾಪಕವಾಗಿದೆ. ಮೂರನೇ ಎರಡರಷ್ಟು ತೋಟವನ್ನು ಆಕ್ರಮಿಸಿದೆ. ಚೀನಾ ಕಂಪೆನಿಯು ಗಾತ್ರದಲ್ಲಿ ಉದ್ದವಾಗಿರುವ ಸ್ಥಳೀಯ ತಳಿಗಳ ಅಡಿಕೆಯನ್ನು ಆರಿಸಿದೆ. ಹೀಗಾಗಿ ಮುಂದೆ ಸ್ಥಳೀಯ ತಳಿಗಳ ಅಡಿಕೆಗಳನ್ನು ಬೆಳೆಸುವತ್ತ ದೂರಾಲೋಚನೆ ಮಾಡಬಹುದೇನೋ?
                 ಕ್ಯಾಂಪ್ಕೋ ಸಂಸ್ಥೆಗೆ ಚೀನಾ ಪ್ರತಿನಿಧಿಗಳು ಬಂದದು 2014ರಲ್ಲಿ. ಶಿರಸಿ, ಕಾಸರಗೋಡು, ಬಂಟ್ವಾಳ   ಪುತ್ತೂರು ಪ್ರದೇಶಗಳ ತೋಟಗಳಿಗೆ ಭೇಟಿ ನೀಡಿದ್ದರು. ಐದು ತಿಂಗಳು ಬೆಳೆದ, ತೊಟ್ಟು ಇರುವ, ಕನಿಷ್ಟ ಎರಡಿಂಚು ಉದ್ದವಿರುವ ಅಡಿಕೆಗೆ ಬೇಡಿಕೆ ಸಲ್ಲಿಸಿದ್ದರು. ಬದಿಯಡ್ಕ, ವಿಟ್ಲ, ಪುತ್ತೂರು, ಬಂಟ್ವಾಳಗಳಲ್ಲಿ ನಿರೀಕ್ಷಿತ ಗಾತ್ರದ ಅಡಿಕೆಯು ಬೆಳೆಯುತ್ತಿರುವುದು ತಿಳಿದು ಬಂತು. ಇಲ್ಲಿಂದ ಸ್ವಲ್ಪ ಪ್ರಮಾಣದಲ್ಲಿ ಎಳೆಯ ಅಡಿಕೆಯನ್ನು ಒಣಗಿಸಿ ಒಯ್ದಿದ್ದರು. ಈ ವರುಷ ಬರುವಾಗ ಈ ಅಡಿಕೆಯ ಉತ್ಪನ್ನಗಳ ಮಾದರಿಯನ್ನು ತಂದು ಇನ್ನಷ್ಟು ಬೇಡಿಕೆ ಸಲ್ಲಿಸಿದರು.
                 ನಮ್ಮ ದೇಶದ ಅಡಿಕೆ ಉತ್ಪಾದನೆ ಆರು ಲಕ್ಷ ಟನ್. ಚೀನಾದ ಬೇಡಿಕೆಯನ್ನು ಸುಲಭದಲ್ಲಿ ಪೂರೈಸಬಹುದು. ಸಹಕಾರಿ ರಂಗದ ದಿಗ್ಗಜ ಕ್ಯಾಂಪ್ಕೋದೊಂದಿಗೆ ಚೀನಾ ಕಂಪೆನಿಯೊಂದು ಕೈಜೋಡಿಸಿರುವುದು ಅಭಿಮಾನದ ವಿಚಾರ.  ಕ್ಯಾಂಪ್ಕೋ ಮಾಡಹೊರಟ ಈ ಯತ್ನ ಯಶಸ್ವಿಯಾಗಲು ಕೃಷಿಕರ ಸಹಭಾಗಿತ್ವ ಮುಖ್ಯ.
(ಮಾಹಿತಿ ಮತ್ತು ಚಿತ್ರ : ಪಡಾರು ರಾಮಕೃಷ್ಣ ಶಾಸ್ತ್ರಿ ಮತ್ತು ಅಡಿಕೆ ಪತ್ರಿಕೆ)


0 comments:

Post a Comment