Wednesday, February 24, 2010

ಕಡೂರು : ಕೃಷಿಮೇಳ



ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಫೆ.18, 19, 20ರಂದು
ಕಡೂರಿನಲ್ಲಿ ಜರುಗಿದ ಕೃಷಿಮೇಳದ ನೆನಪು ಸಂಚಿ.

30ನೇ ಕೃಷಿ ಮೇಳದ ಕುರಿತು ರಾಜರ್ಶಿ ಡಾ. ವೀರೇಂದ್ರ ಹೆಗ್ಗಡೆಯವರು ಹೇಳುವಂತೆ -
* 'ಗ್ರಾಮಾಭಿವೃದ್ಧಿ ಯೋಜನೆ ಆರಂಭವಾದ ಇಷ್ಟು ವರ್ಷದಲ್ಲಿ ಇದೇ ಮೊದಲ ಬಾರಿಗೆ ಬಯಲು ಸೀಮೆಯಲ್ಲಿ ಕೃಷಿ ಮೇಳ ನಡೆಯುತ್ತಿದೆ. ಮಿಶ್ರಬೆಳೆ, ಉಪಬೆಳೆಗಳ ಬಗ್ಗೆ ಇಲ್ಲಿ ಹೆಚ್ಚು ಚರ್ಚೆಯಾಗಿದೆ. ಕೃಷಿ ಯಾಂತ್ರೀಕರಣ ಮಳಿಗೆಗಳಲ್ಲಿ ಅಪರೂಪದ ಮಾಹಿತಿ.'

* "ನಮ್ಮ ಎಲ್ಲಾ ಯೋಜನೆಗಳೂ ರೈತನ ಅಭ್ಯುದಯಕ್ಕಾಗಿ. ನಾವು ದುಡಿಯಬೇಕಾದ್ದು ರೈತನಿಗಾಗಿ ಎಂಬ ಮನೋಭಾವ ನಮ್ಮ ಅಧಿಕಾರಿ ವರ್ಗದಲ್ಲಿ ಮೂಡುವವರೆಗೂ ಪರಿಸ್ಥಿತಿ ಬದಲಾಗುವುದಿಲ್ಲ.'

* ಸಾಲ ಕೊಡುವುದೊಂದೇ ಗ್ರಾಮಾಭಿವೃದ್ಧಿಯಲ್ಲ. ಹಾಗೆಂದು ಸಾಲವೆಂಬುದು ಶೂಲವೂ ಅಲ್ಲ. ಅದು ಜೀವದ್ರವ್ಯದ ಮೂಲ ಬಂಡವಾಳ. ಸಾಲವನ್ನು ಬಂಡವಾಳವಾಗಿ ಪರಿವರ್ತಿಸಿ ಬಳಸಿಕೊಂಡವನು ಜೀವನದಲ್ಲಿ ಖಂಡಿತಾ ಗೆಲ್ಲುತ್ತಾನೆ. ಈ ಕಲೆಯನ್ನು ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯಕರ್ತರು ಹಳ್ಳಿಗಳಲ್ಲಿ ಕಲಿಸುತ್ತಿದ್ದಾರೆ. ಹೀಗಾಗಿಯೇ ಯೋಜನೆ ವಿತರಿಸಿದ ಸಾಲಕ್ಕೆ ಶೇ.100 ವಸೂಲಿ ಇದೆ.

* ಮತ್ತೊಬ್ಬರ ಭಾವನೆ ಮತ್ತು ಅವಕಾಶಕ್ಕೆ ಧಕ್ಕೆ ತರದ ಯಾವ ಬೆಳವಣಿಗೆಯನ್ನಾದರೂ ನಾವು ಒಪ್ಪಲೇ ಬೇಕಾಗುತ್ತದೆ. ಭಾರೀ ಪ್ರಮಾಣದಲ್ಲಿ ಯಾಂತ್ರೀಕೃತ ಕೃಷಿಯ ಅಳವಡಿಕೆ ಇಂದಿನ ಅನಿವಾರ್ಯ ಎಂದು ಇತ್ತೀಚೆಗೆ ನನಗೆ ಅನ್ನಿಸುತ್ತಿದೆ. ನೂರು ಕೋಟಿ ಜನರ ಹೊಟ್ಟೆ ತುಂಬಿಸಲು ಹೆಚ್ಚು ಬೆಳೆಯುವುದು ಇಂದಿನ ತುರ್ತು. ಕೃಷಿಯಲ್ಲಿ ಬಂಡವಾಳ ಹೂಡುವವರೆಲ್ಲರನ್ನೂ ನಾವು ಅನುಮಾನದಿಂದ ನೋಡುವುದು ತಪ್ಪು. ಸಣ್ಣ ಕೃಷಿಕರಿಗೆ ಅವರಿಂದ ಧಕ್ಕೆಯಾಗಬಾರದೆನ್ನುವ ಎಚ್ಚರಬೇಕು.
ಚಿತ್ರ, ಮಾಹಿತಿ ಕೃಪೆ : ಡಿ.ಎಂ.ಘನಶ್ಯಾಮ

ಚಹಕ್ಕೆ ಬಿದ್ದ ನೀರುಳ್ಳಿ ಸಿಪ್ಪೆ!

ಮಂಗಳೂರಿನ ಅರೆಪ್ರತಿಷ್ಠಿತ ಹೋಟೆಲ್. ಇಳಿ ಹೊತ್ತಾಗಿತ್ತು. ಹೋಟೆಲ್ ತುಂಬಿತ್ತು. ಪಕ್ಕದ ಮೇಜಿನಲ್ಲಿ ಕುಳಿತ ಒಬ್ಬರ ಚಹದ ಲೋಟದಲ್ಲಿ ಅಪ್ಪಿತಪ್ಪಿ ನೀರುಳ್ಳಿ ಸಿಪ್ಪೆ ಬಿದ್ದಿತ್ತು. 'ಬೇರೆ ತಂದು ಕೊಡ್ತೀನಿ' ಎಂದು 'ವಿತರಕ' (ಸಪ್ಲೆಯರ್) ಹೇಳುತ್ತಿದ್ದಂತೆ, ಆ ಗಿರಾಕಿ ವಾಚಾಮಗೋಚರವಾಗಿ ಆತನಿಗೆ ಬಯ್ಯುತ್ತಿದ್ದ. ತಂದಿಟ್ಟ ಚಹವನ್ನು ಆತ ಕುಡಿಯಲಾರ, ಬೇರೆ ಚಹ ತರಲು ಬಿಡ - ಎಂಬಂತಹ ಸ್ಥಿತಿ ನಿರ್ಮಾಣವಾಗಿತ್ತು.

ಈ 'ಗಿರಾಕಿ ದೇವರ' ಅವತಾರ ಎಷ್ಟಿತ್ತೆಂದರೆ, ನೀರುಳ್ಳಿ ಸಿಪ್ಪೆಯಿದ್ದ ಚಹದ ಅರ್ಧ ಭಾಗವನ್ನು ಅಲ್ಲೇ ಚೆಲ್ಲಿ, ಉಳಿದರ್ಧವನ್ನು ಆತನ ಮೇಲೆರಚಿ, 'ಬೇರೆ ತೆಕ್ಕೊಂಡು ಬಾ' ಸುಗ್ರೀವಾಜ್ಞೆ ಮಾಡಿದ. ಇತರ ಮೇಜಿನಲ್ಲಿರುವ ಗಿರಾಕಿಗಳಿಂದ ಈತನಿಗೆ 'ಆತನಿಗೆ ಕಣ್ಣು ಕೋಣೊಲ್ವಾ. ಇವನ್ನು ಸಿಪ್ಪೆ, ನಾಳೆ ಇನ್ನೊಂದು. ನೀವು ಮಾಡಿದ್ದು ಸರಿ' ಎಂಬ ಪ್ರೋತ್ಸಾಹ.

ಆತನೇನೋ ಚಹ ತಂದಿಟ್ಟ. ಅತ್ತ ಯಜಮಾನನಿಂದಲೂ ಸಹಸ್ರನಾಮ. ಇನ್ನೊಂದು ಮೇಜಿಗೆ ಚಹ-ತಿಂಡಿ ವಿತರಣೆ ಮಾಡಲು ತೆರಳಿದ. ನಮ್ಮ ಸಮಾಜದಲ್ಲಿ ಇಂತಹ ಎಷ್ಟೋ ಘಟನೆಗಳಿಗೆ ಪ್ರೋತ್ಸಾಹ ಕೊಡುವ 'ಪತನ ಸುಖಿ'ಗಳನ್ನು ನೋಡಿದರೆ, ನಮ್ಮ ಗ್ರಹಿಸುವ ನರದ ಶಕ್ತಿ ಮಸುಕಾಗಿದೆ! ನಾಲ್ಕು ಜನ ಸೇರಿದಲ್ಲಿ 'ಗೆಜಲು'ವ ಕಂಠತ್ರಾಣಿಗಳ ಈ ವಿಕಾರವನ್ನು 'ಗುಣ' ಅಂತ ಸ್ವೀಕರಿಸಲ್ಪಡುತ್ತದೆ.

ಚಹದ ಲೋಟನಲ್ಲಿ ಬಿದ್ದಿರುವುದು ನೀರುಳ್ಳಿ ಸಿಪ್ಪೆ ತಾನೆ? ಬೇರೇನೂ ಅಲ್ವಲ್ಲ! 'ಆರು ರೂಪಾಯಿ ಚಹಕ್ಕೆ ಆರುನೂರು ರೂಪಾಯಿ'ಯಷ್ಟು ಮಾತನಾಡಬೇಕಿತ್ತೇ? ವಿನಯದಿಂದ ಹೇಳಿದರೆ ಇನ್ನೊಂದು ಕಪ್ ಸಿಗುತ್ತಿತ್ತು. ಬೇಕಿದ್ದರೆ ನೀರುಳ್ಳಿ ಸಿಪ್ಪೆ ಬಿದ್ದ ಚಹವೂ ಕೂಡಾ!

ಎಷ್ಟೋ ಸಲ ನಮ್ಮ 'ಪ್ರತಿಷ್ಠೆ' ಸ್ಥಾಪಿತವಾಗುವುದು ಇಂತಹ ಹೊತ್ತಲ್ಲಿ! ಅರ್ಹತೆ ಇದೆಯೋ, ಇಲ್ಲವೋ ಬೇರೆ ಮಾತು. ನಾನೋರ್ವ ಗಣ್ಯವ್ಯಕ್ತಿ, ಪ್ರಭಾವಿ ವ್ಯಕ್ತಿಯಾಗಿ ಕಾಣಿಸಿಕೊಳ್ಳವ' ಛಾತಿ. ಅಡುಗೆ ಮನೆ ಅಂದ ಮೇಲೆ ಅಲ್ಲಿ ನೀರುಳ್ಳಿ ಸಿಪ್ಪೆಯೂ ಇರುತ್ತದೆ, ಆಲೂಗೆಡ್ಡೆಯೂ ಇರುತ್ತದೆ.

ಇದೇ ಪ್ರಕರಣವನ್ನು ಮನೆಗೆ ಥಳಕು ಹಾಕೋಣ. ಮನೆಯೊಡತಿ ತಂದಿತ್ತ ಕಾಫಿ ಲೋಟದಲ್ಲಿ ಕಸವೋ ಇನ್ನೊಂದೋ ಇದ್ದಾಗ ಇಷ್ಟೊಂದು ರಂಪಾಟ ಮಾಡುವುದಿಲ್ಲ. ಯಾಕೆ ಹೇಳಿ? ಅದು 'ಆರು ರೂಪಾಯಿ'ಯ ಮಹಿಮೆ! ಇಲ್ಲಿ ಕಾಣಿಸಿಕೊಳ್ಳಲು ಆಗುವುದಿಲ್ಲವಲ್ಲಾ!

ಕಳೆದ ವಾರ ಗುಲ್ಬರ್ಗಾದಲ್ಲಿ ಹೋಟೆಲ್ಗೆ ಹೋಗಿದ್ದೆ. ಚಿಕ್ಕ ಗೂಡಿನಂತಹ ಕೋಣೆಯಲ್ಲಿ ಚಹ ಮಾಡ್ತಾರೆ ಎಂಬ ಕಾರಣಕ್ಕಾಗಿ ಅದು ಹೋಟೆಲ್! ಅಲ್ಲಿನ ಮೇಜು, ಚಹ ಮಾಡುವಾತ, ಚಹದ ಗ್ಲಾಸ್, ಒಲೆ, ಮಿಕ್ಕುಳಿದ ಪರಿಕರ - ಇವೆಲ್ಲವನ್ನು ನೋಡಿದರೆ, 'ನೀರುಳ್ಳಿ ಸಿಪ್ಪೆ ಬಿದ್ದ ಚಹ' ಎಷ್ಟೋ ವಾಸಿ ಅನ್ನಿಸಿತ್ತು.

ನಮ್ಮೂರಲ್ಲಿ ಹುಕ್ರಪ್ಪ ಎಂಬವರ ಹೋಟೆಲ್ ಉದ್ಯಮಕ್ಕೆ ಅರ್ಧ ಶತಮಾನ. ಈಗವರು ಕೀರ್ತಿಶೇಷ. ಹಳ್ಳಿಯಿಂದ ಪೇಟೆಗೆ ಹೋಗುವವರು ಇವರ ಹೋಟೆಲಿಗೆ ನುಗ್ಗದೆ ಮುಂದಿನ ಪ್ರಯಾಣವಿಲ್ಲ. ಅಲ್ಲಿ ಕಾಫಿ, ಚಹ ಮತ್ತು ಅವಲಕ್ಕಿಗೆ ಮಿಶ್ರ ಮಾಡಿದ ಸೇಮಿಗೆ - ಇವಿಷ್ಟೇ ಪಾಕಗಳು. ಚಹ ಮಾಡುವ ಕೋಣೆ ತೀರಾ ಕತ್ತಲು. ಅಲ್ಲೊಂದು ಮೂಲೆಯಲ್ಲಿ ಚಿಮಿಣಿ ದೀಪ. ಕುಬ್ಜ ದೇಹದ ಅವರೊಬ್ಬರೇ ಸಲೀಸಾಗಿ ಅದರೊಳಗೆ ಹೋದಾರು ವಿನಾ ಇನ್ನೊಬ್ಬರಿಗೆ ಅಸಾಧ್ಯ. ತಂದಿಡುವ ಚಹದಲ್ಲಿ ಒಂದೊಂದು ಸಲ ಒಂದೊಂದು ಬೋನಸ್ ಇರುತ್ತಿತ್ತು! ಅದನ್ನು ಅಷ್ಟೇ ನಯವಾಗಿ ಕೆಳಗಿಟ್ಟು, ಚಹವನ್ನು ಹೀರಿ, ಹಣಕೊಟ್ಟು ಹಿಂದಿರುಗುವ ಗಿರಾಕಿಗಳನ್ನು ಹತ್ತಿರದಿಂದ ನೋಡಿದ ನನಗೆ ಈ 'ನೀರುಳ್ಳಿ ಸಿಪ್ಪೆ ಬಿದ್ದ ಚಹ' ಏನು ಮಹಾ?

ಜಾತ್ರೆಗಳ ಸಂತೆಗಳ ಹೋಟೆಲಿಗೊಮ್ಮೆ ಇಣುಕುವಾ. ಬಿದಿರಿನ ಸಲಕೆಗಳಿಂದ ಮಾಡಿದ ಬೆಂಚ್, ಮೇಜು. ತಿಂಡಿಯಿಡುವ ಮೇಜು ಕೂಡಾ ದೇಸಿ! ಇತ್ತೀಚೆಗೆ ಗುಲ್ಬರ್ಗ ಜಿಲ್ಲೆಯ ಒಂದು ಹಳ್ಳಿಯ ಜಾತ್ರೆಗೆ ಮಿತ್ರ ಸಂಪತ್ ಜತೆಗೆ ಹೋಗಿದ್ದೆ. ಚಾ ಕುಡಿಯಲೆಂದು 'ಸಂತೆ ಹೋಟೆಲ್'ನಲ್ಲಿ ಕುಳಿತಿದ್ದೆವು. ಚಹ ಆರ್ಡರ್ ಮಾಡಿ ಹತ್ತಿಪ್ಪತ್ತು ನಿಮಿಷವಾದರೂ ಪತ್ತೆನೇ ಇಲ್ಲ! ಮೆಲ್ಲನೆ ಪಾಕಶಾಲೆಗೆ ಇಣುಕಿದೆ.

ಆ ಹೋಟೆಲನ್ನು ನಡೆಸುವುದು ಪಾಪ, ಓರ್ವ ಮಹಿಳೆ. ಇನ್ನೊಬ್ಬ ಶುಚಿಗೊಳಿಸುವಾತ. ಆಕೆಯ ಗಂಡ ಜಿನಸಿ ತರಲು ಹೋಗಿದ್ದ. ಪಾಕಶಾಲೆಯ ಒಂದೆಡೆ ತನ್ನ ಮಗುವಿಗೆ ಹಾಲುಣಿಸುತ್ತಾ ಇದ್ದಾಳೆ. ಮತ್ತೊಂದೆಡೆ ಅವಳ ಇನ್ನೊಂದು ಮಗು ರಂಪಾಟ ಮಾಡುತ್ತಾ ಅಲ್ಲೇ ಬಹಿರ್ದೆಶೆಯನ್ನೂ ಪೂರೈಸಿತ್ತು. ಈಗ ಕಲ್ಪಿಸಿಕೊಳ್ಳಿ - ಈ ದೃಶ್ಯವನ್ನು ನೋಡದಿರುತ್ತಿದ್ದರೆ ಆ ಹೋಟೆಲಿನ ಚಹ ಎಷ್ಟು ಸವಿಯಾಗಿರುತ್ತಿತ್ತು. 'ಇಲ್ಲೆಲ್ಲಾ ಕಾಮನ್ ಸಾರ್' ಸಂಪತ್ ಪಿಸುಗುಟ್ಟಿದರು. ಸರಿ, ಈ ದೃಶ್ಯವನ್ನು ಮನಸ್ಸಿಗೆ ತೆಕ್ಕೊಂಡರೆ, 'ಚಹಕ್ಕೆ ಬಿದ್ದ ನೀರುಳ್ಳಿ ಸಿಪ್ಪೆ' ಎಷ್ಟೋ ವಾಸಿ.

ಗುಲ್ಬರ್ಗಾದ ಹಳ್ಳಿಯಲ್ಲಿ ಜತೆಗಿದ್ದ ಸಂಪತ್ ಒತ್ತಾಯಕ್ಕೆ ರೈತರೊಬ್ಬರ ಮನೆಗೆ ಹೋಗಿದ್ದೆವು. 'ಚಹ ಕೊಡ್ರಿ' ಬೇಡಿಕೆ ಮುಂದಿಟ್ಟೆವು. 'ಚಾ ಇಲ್ಲಾರಿ. ರಾಗಿ ಅಂಬ್ಲಿ ಇದೆ. ನಮ್ಮ ಹೊಲಾದ್ದೇ ರಾಗಿ. ಚೆನ್ನಾಗಿದೆ' ಎಂದು ಬೀದರ್ ಕನ್ನಡದಲ್ಲಿ ಮನೆಯೊಡತಿ ಸಣ್ಣವ್ವ ಮಾತನಾಡುತ್ತಾ, ಎರಡು ಲೋಟದಲ್ಲಿ ರಾಗಿ ಅಂಬ್ಲಿ ತಂದಿಟ್ಟರು. ಆ ಅಂಬಲಿಗೆ ಯಾವುದೋ ಸೊಪ್ಪನ್ನು ಅರೆದು ಸೇರಿಸಿದ್ದರು. ಒಳ್ಳೆಯ ಸ್ವಾದ, ಪರಿಮಳ. ಅತ್ತ ಹೆಚ್ಚು ದ್ರವವೂ ಅಲ್ಲ, ಇತ್ತ ಹೆಚ್ಚು ಮಂದವೂ ಅಲ್ಲದ ಪಾಕ. ಕುಡಿಯುತ್ತಾ ಇನ್ನೇನು ಮುಗಿಯುತ್ತಾ ಬಂತೆನ್ನುವಾಗ - 'ಚಹಕ್ಕೆ ಬಿದ್ದ ನೀರುಳ್ಳಿ ಸಿಪ್ಪೆ' ನೆನಪಾಯಿತು!

Monday, February 22, 2010

ಚೇರ್ಕಾಡಿ : ನುಡಿ ನಮನ

ಕೇವಲ ಎರಡೂವರೆ ಎಕರೆ ಜಾಗ. ಮಳೆಯಾಶ್ರಯದ ಭೂಮಿಯಲ್ಲಿ ಕಳೆದಾರು ದಶಕಗಳಿಂದ, ಮನೆಮಂದಿಯ ಕೈ ದುಡಿಮೆಯಿಂದಲೇ ಕೃಷಿಯನ್ನು ಸಂಪನ್ನಗೊಳಿಸುತ್ತಾ ಹೊರಗಿನ ಸೌಲಭ್ಯಗಳಾದ ವಿದ್ಯುತ್, ರಾಸಾಯನಿಕ, ನೀರಾವರಿ, ಯಂತ್ರ, ದೂರವಾಣಿಗಳಿಂದೆಲ್ಲಾ ಉದ್ದೇಶಪೂರ್ವಕವಾಗಿ ದೂರ ಉಳಿದು, ಸ್ಥಳೀಯ ಬೆಳೆಗಳನ್ನು ಜಾಣ್ಮೆಯಿಂದ ಪೋಷಿಸುತ್ತ, ಭತ್ತದ ಕೃಷಿಯಲ್ಲಿ ಹೊಸತೊಂದು ಸಾಧ್ಯತೆಯನ್ನು ಕಂಡುಹಿಡಿದು, ನಾಡಿಗೆ ಪರಿಚಯಿಸಿ, ನೆಮ್ಮದಿಯ ಸುಂದರ ಜೀವನವನ್ನು ವಿನ್ಯಾಸಗೊಳಿಸಿದ, ಹೆಮ್ಮೆಯ ಹಿರಿಯ ಚೇತನ ಚೇರ್ಕಾಡಿ ರಾಮಚಂದ್ರ ರಾಯರಿಗೆ ಅಕ್ಷರ ನಮನ.

* ಜನನ : 1919 * ಮರಣ: 21 ಫೆಬ್ರವರಿ 2010
* ಮಡದಿ : ಲಕ್ಷ್ಮೀ * ಮೂವರು ಮಕ್ಕಳು - ಸುಮತಿ, ಮಂಜುನಾಥ, ಆನಂದ.

(ಹೆಚ್ಚಿನ ವಿವರ - ನಿರೀಕ್ಷಿಸಿ!)

Saturday, February 20, 2010

'ಮೇಳ'ಗಳ ಮಾಲೆ!




2009 ರಲ್ಲಿ ಮೇಳಗಳಿಗೆ ಸುಗ್ಗಿ! ಯಂತ್ರದಿಂದ ತೊಡಗಿ ನಾಟೀ ಬದನೆ ತನಕ!
'ಐವತ್ತರಷ್ಟು ನಾಟೀ ಬದನೆ ತಳಿಗಳ ಪ್ರದರ್ಶನ, ಜತೆಗೆ ಆರು ಕಾಡು ಬದನೆಗಳು. ಬದನೆಯ ಚಟ್ನಿಪುಡಿ, ಒಣಗಿಸಿದ ಬಾಳುಕ, ಒಣಗಿಸಿದ ಬದನೆ ಪಲ್ಯ, ಮೊಳಕೆ ಹುರುಳಿ-ಬದನೆ ಸಾರು, ಬೋಂಡ, ಹುಳಿ, ಮಸಾಲೆ ಬೋಂಡ, ಎಣ್ಣೆಗಾಯಿ. ಹೀಗೆ ಖಾದ್ಯದಲ್ಲಿ ಬದನೆಯದ್ದೇ ಕಾರುಬಾರು. ಕೆಲವು ಹೊಟ್ಟೆಗಿಳಿದರೆ, ಮತ್ತೆ ಕೆಲವು ಪ್ರದರ್ಶನಕ್ಕೆ ಸೀಮಿತ. ಮಾತುಕತೆಗಳು ನಾಟಿ-ಬಿಟಿ ಸುತ್ತ' ಮೈಸೂರಿನ ಇಂದ್ರಪ್ರಸ್ಥದ ಎ.ಪಿ.ಚಂದ್ರಶೇಖರ್ ಬದನೆ ಮೇಳವನ್ನು ಬಿಡಿಸಿದರು.

ಒಂದೆಡೆ ಬಿಟಿ ಬದನೆಯ ಗುಲ್ಲು. ಈ ಮಧ್ಯೆ ನಾಟಿ ತಳಿಗಳ ಹುಡುಕಾಟ. 'ಮೇಳಕ್ಕೆ ಬರುವಾಗ ನಿಮ್ಮೂರಿನ ಬದನೆ ತನ್ರಿ' ಎಂದು ಸಹಜ ಸಮೃದ್ಧದ ಕೃಷ್ಣಪ್ರಸಾದ್ ಬುಲಾವ್. ಮೈಸೂರಿನ ರಂಗಾಯಣದಲ್ಲಿ ಜರುಗಿದ ಮೇಳದಲ್ಲಿ ಭಾಗವಹಿಸಿದವರು ಐನೂರಕ್ಕೂ ಹೆಚ್ಚು. 'ಜನ ಏನೋ ಬಂದರು. ಇವರಲ್ಲಿ ಶೇ. 70 ರಷ್ಟು ಮಂದಿಗೆ ಬಿಟಿ ಗೊತ್ತೇ ಇಲ್ಲ' ಎಪಿ ಮಾತಿನ ಮಧ್ಯೆ ಸೇರಿಸಿದರು. ಹೌದು, ಜಾಗತಿಕವಾಗಿ ನಡೆಯುವ ಸದ್ದಿಲ್ಲದ ಹುನ್ನಾರಗಳು ತಳಮಟ್ಟಕ್ಕೆ ಬರುವಾಗ ಬದುಕು ತಲ್ಲಣವಾಗುತ್ತದೆ.

ಬಿಟಿಯ ಲೋಕವೇ ಬೇರೆ! ನಮ್ಮ ಕೃಷಿ, ಕೃಷ್ಯುತ್ಪನ್ನಗಳ ಸುತ್ತಮುತ್ತ ನಡೆದ 'ಮೇಳ'ಗಳು ಆಯಾ ಕಾಲದಲ್ಲಿ ಒಂದಷ್ಟು ಅರಿವನ್ನು, ಜಾಗೃತಿಯನ್ನು ಮೂಡಿಸಿವೆ. ಇತ್ತ ಕೇರಳದ ಆಲೆಪ್ಪಿಯ ಮಾರಾರಿಕುಳಂನಲ್ಲಿ ಎಂಟು ದಿವಸಗಳ ಬದನೆ ಮೇಳ ನಡೆದಿರುವುದು ಬಹುಶಃ ಮೇಳಗಳಲ್ಲೇ ದೊಡ್ಡಣ್ಣ!

ವರುಷಾರಂಭಕ್ಕೆ ರಾಜಧಾನಿಯಲ್ಲಿ ರಾಷ್ಟ್ರೀಯ 'ಕಿತ್ತಳೆ ಮೇಳ' ಜರುಗಿತು. ರಾಜಸ್ಥಾನ್, ಪಂಜಾಬ್, ಅಸ್ಸಾಂ, ಕೊಡಗು.. ಹೀಗೆ ಇಪ್ಪತ್ತೈದಕ್ಕೂ ಮಿಕ್ಕಿದ ಕಿತ್ತಳೆ ತಳಿಗಳ ಪ್ರದರ್ಶನ. 'ನಾಗಪುರ ಕಿತ್ತಳೆಯನ್ನು ಸ್ಥಳದಲ್ಲೇ ಜ್ಯೂಸ್ ಮಾಡಿ ಕೊಡುವ ವ್ಯವಸ್ಥೆಯಿತ್ತು. ಅದರ ರುಚಿಯ ಮುಂದೆ ನಮ್ಮ ಕೊಡಗಿನ ಕಿತ್ತಳೆಯದ್ದೇ ಮೇಲುಗೈ' - ಮೇಳದಲ್ಲಿ ಭಾಗವಹಿಸಿದ ಪತ್ರಕರ್ತ ಮಿತ್ರ ಸುಚೇತನ ಹೇಳಿದರು. ರಾಜಸ್ಥಾನದಿಂದ ಬಂದ ಕಿನೋ ಎಲ್ಲದರಕ್ಕಿಂತಲೂ ಹಿರಿದು! ಎಲ್ಲಾ ಮಳಿಗೆಯಲ್ಲೂ ರುಚಿ ನೋಡಲು ಕಿತ್ತಳೆಯ ಎಸಳನ್ನು ಕೊಡುತ್ತಿದ್ದರಂತೆ.

ಕಳೆದ ವರುಷ ಹದಿಮೂರು 'ಹಲಸು ಮೇಳ'ಗಳು ನಡೆದುವು. 2007ರಲ್ಲಿ ವಯನಾಡಿನ 'ಉರವು ಸಂಸ್ಥೆ' ಮೊದಲಿಗೆ ಹಲಸು ಮೇಳ ಮಾಡಿತ್ತು. ಬಳಿಕ - ಶಿರಸಿಯ ಕದಂಬ ಮತ್ತು ತಿಪಟೂರಿನ ಬೈಫ್ ನಡೆಸಿದರೆ ನಂತರದ ದಿವಸಗಳಲ್ಲಿ ಶಿರಸಿ, ತೀರ್ಥಹಳ್ಳಿ, ನಿಟ್ಟೂರು, ಬೆಂಗಳೂರು, ರಾಜಧಾನಿಯ ಸಿಂಪ್ಲಿ ಆರ್ಗಾನಿಕ್, ಮೂಡಿಗೆರೆ; ಕೇರಳದ ವಯನಾಡ್, ಪತ್ತನಾಂತಿಟ್ಟ, ತ್ರಿಚೂರು, ವೆಂಗೇರಿ, ಕಾಂಜಿರಪುಳ, ಎಡನಾಡು ಮತ್ತು ಮಂಗಳೂರುಗಳಲ್ಲಿ ಹಲಸಿನ ಪರಿಮಳ.

ಒಂದೆಡೆ ಹಲಸೆಂದರೆ 'ಇಸ್ಸಿ' ಎಂದು ಮೂಗು ಮುರಿಯುವ ವರ್ಗ, ಮತ್ತೊಂದೆಡೆ ತೊಟ್ಟನ್ನು ಮಾತ್ರ ಬಿಟ್ಟು ಉಳಿದೆಲ್ಲಾ ಭಾಗಗಳನ್ನು ಮೌಲ್ಯವರ್ಧಿಸುವ ಹಲಸು ಪ್ರಿಯರು! ಹಪ್ಪಳ, ಚಿಪ್ಸ್ಗೆ ಸೀಮಿತವಾಗದೆ, ಮೌಲ್ಯವರ್ಧನೆಯೊಂದಿಗೆ ತನ್ನ ಮಾನವರ್ಧನೆಯನ್ನೂ ಹಲಸು ಮಾಡಿಕೊಂಡಿದೆ. ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಉಮೇದಿನಿಂದ ಬೆಂಗಳೂರಿನ ತೂಬುಗೆರೆಯಲ್ಲಿ ಹಲಸು ಬೆಳೆಗಾರರ ಸಂಘವೇ ಅಸ್ತಿತ್ವಕ್ಕೆ ಬಂದಿದೆ. ಮಂಗಳೂರಿನ 'ಐಡಿಯಲ್' ಸಂಸ್ಥೆಯು ಹಲಸಿನ ಐಸ್ಕ್ರೀಂ, ಸ್ಕ್ವಾಷನ್ನು ಜನಪ್ರಿಯಗೊಳಿಸಿದೆ.

ಮೇಳದ ರುಚಿಯುಂಡ ಮನೆಗಳಲ್ಲಿ ಅತ್ತೆಯಿಂದ ಕೇಳಿಯೋ, ಅಮ್ಮನಿಂದ ಆಲಿಸಿಯೋ ಹಲಸಿನ ಹೊಸ ಹೊಸ 'ರೆಸಿಪಿ'ಗಳು ತಯಾರಾಗಿವೆ. ಜರುಗಿದ ಮೇಳಗಳ ವರಿಷ್ಠರ ಮಧ್ಯೆ ಪರಸ್ಪರ ಕೊಂಡಿ ಏರ್ಪಡುವ ಮೊದಲ ಹೆಜ್ಜೆಗೆ ಚಾಲನೆ ಬಂದಿದೆ.
ವರುಷಗಳ ಹಿಂದೆ ಶಿರಸಿಯ ಕಳವೆಯಲ್ಲಿ 'ಅನ್ನ-ಆಹಾರ-ಔಷಧ' ಎಂಬ ಎರಡು ದಿವಸಗಳ ಅಪರೂಪದ ಮೇಳ ನಡೆದಿತ್ತು. ಎಲ್ಲಾ ಮೇಳಗಳಂತೆ ಗೌಜಿ-ಗದ್ದಲವಿರಲಿಲ್ಲ. ಸೀಮೀತ ಪ್ರೇಕ್ಷಕರು. ಸುಮಾರು ನೂರು ಮನೆಗಳ ಅಡುಗೆ ಮನೆಗಳಂದು ಬಂದ್! ಮಲೆನಾಡಿಯಲ್ಲಿ ರೂಢಿಯಲ್ಲಿದ್ದು, ಮರೆತುಹೋದ ಅನೇಕ ತಂಬುಳಿ, ಕಷಾಯಗಳನ್ನು ಮನೆಯೊಡತಿಯರು ದಾಖಲಿಸಿಕೊಂಡರು. ಇದು ಅಡುಗೆ ಮನೆಗೂ ನುಗ್ಗಿದುವು! 'ಐವತ್ತಕ್ಕೂ ಮಿಕ್ಕಿ ತಂಬುಳಿಗಳು, ಕಷಾಯಗಳಂದು ದಾಖಲೆಯಾದುವು' ಎನ್ನುತ್ತಾರೆ ಮೇಳದ ರೂವಾರಿ ಶಿವಾನಂದ ಕಳವೆ.

ಈ ಮೇಳದಲ್ಲಿ ಮೂಲಿಕಾ ತಜ್ಞ ವೆಂಕಟ್ರಾಮ ದೈತೋಟರು ಎಚ್ಚ್ಚರಿಸಿದ್ದು ಹೀಗೆ - 'ನಮ್ಮ ಹೊಟ್ಟೆ ತ್ಯಾಜ್ಯ ತುಂಬುವ ಚೀಲವಲ್ಲ. ಟಿವಿ ನೋಡುತ್ತಾ, ರಾಜಕೀಯ ಹರಟುತ್ತಾ, ಏನೇನನ್ನೋ ಆಲೋಚಿಸುತ್ತಾ ಉಂಡರೆ ರುಚಿ ಹೇಗೆ ಗೊತ್ತಾಗುತ್ತೆ ಅಲ್ವಾ. 'ಹೊಟ್ಟೆಯೆನ್ನುವುದು ತ್ಯಾಜ್ಯ ತುಂಬಿಸಿಡುವ ಗುಡಾಣವಲ್ಲ.'

ನಮ್ಮ ಮಧ್ಯೆ ನಡೆಯುವ ಸಮಾರಂಭಗಳ ಊಟ ಹೇಗಿರುತ್ತೇ? ಅದು 'ಹೊಟ್ಟೆ ತುಂಬಿಸುವುದು'. ಕುಳಿತೋ, ನಿಂತೋ.....ಹೊಟ್ಟೆಚೀಲಕ್ಕೆ ಹೋಗುತ್ತಾ... ಇರುತ್ತದೆ. ಮಧ್ಯೆ ಏನೋನೋ ಆಲಾಪಗಳು, ಕೋಪಗಳು, ಸಮಸ್ಯೆಗಳ ಧಿಮಿಕಿಟ. 'ಹೀಗೆಲ್ಲಾ ಇದ್ದರೆ ರೋಗವಲ್ಲದೆ ಮತ್ತೇನು ಬರಲು ಸಾಧ್ಯ. ಭಾರತದಲ್ಲಿ ಈಗಿರುವ ಸಮಸ್ಯೆಯ ಮೂಲವೇ ಇದು. ಹಾಗಾಗಿ ನಾಲಗೆಯ ಮಾತು ಕೇಳಿ ಹೊಟ್ಟೆ ತುಂಬಿಸುವ ಬದಲು, ಹೊಟ್ಟೆಯ ಮಾತು ಕೇಳಿ ಊಟ ಮಾಡಬೇಕು

ತಿಪಟೂರಿನ ಬಿಳಿಗೆರೆಯಲ್ಲಿ ನಡೆದ 'ಎಳನೀರು ಮೇಳ'ವು ಎಳನೀರಿನ ಕುರಿತಾದ ಭಾವನೆಗಳನ್ನು ಪೋಸ್ಟ್ಮಾರ್ಟಂ ಮಾಡಿತು. ತೆಂಗಿನಕಾಯಿಗೆ ಎಷ್ಟು ಅವಕಾಶಗಳಿವೆಯೋ, ಅದಕ್ಕಿಂತ ಹೆಚ್ಚೆ ಎನ್ನಬಹುದಾದಷ್ಟು ಎಳನೀರು ಮತ್ತು ಅದರ ಮೌಲ್ಯವರ್ಧಿತ ಉತ್ಪನ್ನಗಳಿಗಿದೆ. ಪರಿಣಾಮ, ನಲವತ್ತು ಮಂದಿಯ ಕೂಡು ವ್ಯವಸ್ಥೆಯಿಂದ 'ಸೌಹಾರ್ದ ಸಹಕಾರಿ ಸಂಘ'ದ ಮೂಲಕ ಎಳನೀರು ಮಾರಾಟ. ದಿನಕ್ಕೆ ನೂರಕ್ಕೂ ಮಿಕ್ಕಿ ಎಳನೀರು ಮಾರಾಟ. 'ಎಳನೀರು ಮಾರುವುದೇ ದರಿದ್ರ ಸ್ಥಿತಿ ಎಂದಿದ್ದ ಜಾಗದಲ್ಲಿ ದಿನಕ್ಕೆ ನೂರು ಎಳನೀರು ಮಾರಾಟವಾಗುತ್ತೆ ಅಂದರೆ ಅದು ಮೇಳದ ಫಲಶೃತಿ.'

ಎಳನೀರು ಕುಡಿಯುವವರ ಸಂಖ್ಯೆ ಹೆಚ್ಚಾಗುತ್ತಿದೆಯಂತೆ. ಬೆಳೆದ ಎಲ್ಲವನ್ನೂ ಕೊಬ್ಬರಿ ಮಾಡಿದರೆ ಉಳಿಗಾಲವಿಲ್ಲ ಎಂಬ ಸತ್ಯ ಕೆಲವು ಕೃಷಿಕರಿಗೆ ಮನವರಿಕೆಯಾಗಿದೆ. ಬೆಳೆದ ಅರ್ಧದಷ್ಟಾದರೂ ಎಳನೀರು ಮಾರಾಟ, ಮೌಲ್ಯವರ್ಧನೆ ಮಾಡುವ ಮೂಲಕವೋ ಮಾರುಕಟ್ಟೆ ಮಾಡಲೇಬೇಕು - ಎಂಬ ವಿಚಾರ ತಲೆಯೊಳಗೆ ಹೊಕ್ಕಿರುವುದು ಸಂತೋಷ ಸುದ್ದಿ.

ಮೊನ್ನೆ ಮೊನ್ನೆ ಕಾಫಿಯ ನಾಡು ಮೂಡಿಗೆರೆ ಸನಿಹದ ದೇವವೃಂದದಲ್ಲಿ ಹಳ್ಳಿಹಬ್ಬ ನಡೆಯಿತು. ಬದುಕಿನಿಂದ ಮರೆಯಾದ, ಮರೆಯಾಗುತ್ತಿರುವ ಅರುವತ್ತು ಹಳ್ಳಿ ರುಚಿಗಳನ್ನು ಹಿರಿಯ ಅನುಭವಿಗಳಿಂದ ಮಾಡಿಸಿ ಪ್ರದರ್ಶನಕ್ಕಿಟ್ಟಿದ್ದರು. ಮಧ್ಯಹ್ನ ಭೋಜನದ ಹೊತ್ತಿಗೆ ಅವೆಲ್ಲಾ ಹೊಟ್ಟೆ ಸೇರಿದ್ದುವು. ಒಂದೆಡೆ ಪ್ಯಾಕೆಟ್ ಸಂಸ್ಕೃತಿ ಬೆಳೆಯುತ್ತಿರುವಂತೆ, ಮತ್ತೊಂದೆಡೆ ಇಂತಹ ಹಳ್ಳಿರುಚಿಯನ್ನು ಹುಡುಕುವ ವರ್ಗ ಬೆಳೆಯುತ್ತಿದೆ!

ಪುತ್ತೂರಿನಲ್ಲಿ 'ಅಡಿಕೆ ಯಂತ್ರ ಮೇಳ' ಜರುಗಿತ್ತು. ಈ ವರೆಗೆ ಕೃಷಿಕ ಮಟ್ಟದಲ್ಲಿ ಆವಿಷ್ಕಾರವಾದ ಯಂತ್ರಗಳು ಒಂದೇ ಸೂರಿನಡಿ ಬಂದಿದ್ದವು. ಮೇಳ ಪೂರ್ತಿ ಭಾಗವಹಿಸಿದ ಕೃಷಿಕರ ಅಭಿಪ್ರಾಯ - 'ನೋಡಿ, ಇನ್ನು ಐದಾರು ತಿಂಗಳಲ್ಲಿ ಕನಿಷ್ಠ ನೂರು ಯಂತ್ರಗಳಾದರೂ ಕೃಷಿಕರಂಗಳದಲ್ಲಿ ಸದ್ದುಮಾಡುತ್ತವೆ'.

ಭತ್ತ ಉತ್ಸವ, ಬೀಜ ಮೇಳಗಳು ಪ್ರತೀ ವರುಷ ನಡೆಯುತ್ತಿವೆ. ಇದರಿಂದಾಗಿ ಭತ್ತದ ತಳಿಗಳ ಸಂರಕ್ಷಕರ ಪರಸ್ಪರ ಪರಿಚಯ, ಬೀಜ ವಿನಿಮಯಗಳು ಸದ್ದಿಲ್ಲದೆ ನಡೆಯುತ್ತಿವೆ. ಹಿಂದೆ ಸಾಗರದಲ್ಲಿ 'ಮಿಡಿ ಮಾವು' ಮೇಳ ನಡೆದಿತ್ತು. ಸಾಕಷ್ಟು ಮಂದಿಗೆ `ತಾವೂ ಗಿಡ ನೆಡಬೇಕು' ಎಂಬ ಭಾವನೆ ಶುರುವಾಗಿತ್ತು. `ನಾವು ಕಸಿ ಮಾಡಲು ಕಲೀತಿವಿ. ಕಲಿಸುವವರು ಯಾರ್ಯಾರಿದ್ದಾರೆ' ಎಂಬ ಹುಡುಕಾಟ. ಉಪ್ಪಿನಕಾಯಿಗೆ ಬೇಡಿಕೆ. ರಸರುಚಿಗಳ ಬಗ್ಗೆ ಮಹಿಳೆಯರೊಳಗೆ ಮಾತುಕತೆ-ಚರ್ಚೆ. ಉತ್ಸವದ ಗೋಷ್ಠಿಯಲ್ಲಿ ಭಾಗವಹಿಸಿದ ಸಂಪನ್ಮೂಲ ವ್ಯಕ್ತಿಗಳ ಬೆನ್ನು ಹತ್ತಿ ಮಾಹಿತಿ ಸಂಗ್ರಹ..... ಮೇಳದ ಕಣ್ಣಿಗೆ ಕಾಣದ ಫಲಶ್ರುತಿಗಳಿವು.

ಅಡಿಕೆ ಸಂಶೋಧನೆ ಮತ್ತು ಅಭಿವ್ರದ್ಧಿ ಪ್ರತಿಷ್ಠಾನದ ಆಶ್ರಯದಲ್ಲಿ ಅಂತಾರಾಷ್ಟ್ರೀಯ ಮಟ್ಟದ ಅಡಿಕೆ ಮೇಳ ನಡೆದಿದೆ. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಗ್ರಾಮಮಟ್ಟದಲ್ಲಿ ಕೃಷಿ ಉತ್ಸವವನ್ನು ನಡೆಸುತ್ತಿದೆ. ಸ್ಪಷ್ಟ ಉದ್ದೇಶವಿಟ್ಟು ಸಂಘಟಿತವಾದಂತಹ ಮೇಳಗಳು ಗೆದ್ದಿವೆ.
ಮಾವು, ಹಲಸು, ಎಳನೀರು, ಬದನೆ, ಕಿತ್ತಳೆಯಂತೆ ಉಳಿದ ಕೃಷಿ ಉತ್ಪನ್ನಗಳಿಗೂ ಆ ಭಾಗ್ಯ ಬರಲಿ. ಮುಂದಿನ ಮೇಳ ಯಾವುದೋ?

Tuesday, February 16, 2010

'ರೈತರ ಭಾಷೆಯಲ್ಲೇ ಮಾತಾಡಿ, ಅರ್ಥವಾಗುತ್ತೆ'

ಹಾಸನದ ಆಲೂರು ಸನಿಹದ 'ಪುಣ್ಯಭೂಮಿ'ಯಲ್ಲಿ ಜನವರಿ ಕೊನೆಯಲ್ಲಿ ಎರಡು ದಿವಸಗಳ ಜೈವಿಕ ಮೇಳ. ಮುನ್ನೂರಕ್ಕೂ ಮಿಕ್ಕಿ 'ಮಣ್ಣು ಮುಟ್ಟಿ ದುಡಿವ ರೈತರ' ಉಪಸ್ಥಿತಿ. 79ರ ಹಿರಿಯ ಗಂಗಯ್ಯ ರೆಡ್ಡಿ ಮಾತನಾಡುತ್ತಾ, 'ರೈತರು ಸಮಾಜದ ಜೀತದಾಳು. ಆತ ಎಷ್ಟು ಬೆಳೆದು ಸಮಾಜಕ್ಕೆ ಕೊಟ್ಟರೂ ತೃಪ್ತಿಯಿಲ್ಲ, ಪ್ರಶಂಸೆಯಿಲ್ಲ, ಗೌರವವಿಲ್ಲ' ಎಂದರು.

ಈ ಮಾತು ಬ್ಯಾಡರಹಳ್ಳಿಯ ರೈತ ರವಿಶಂಕರ್ರಿಗೆ ಪಥ್ಯವಾಗಲಿಲ್ಲ. 'ರೈತ ಹೇಂಗೆ ಜೀತದಾಳಾಗ್ತಾನೆ. ಅವ ದುಡಿಯೋದು ಅವನ ಹೊಟ್ಟೆಗಾಗಿ. ಸಮಾಜದ ಉದ್ದಾರಕ್ಕಲ್ಲ. ಹೀಂಗೆಲ್ಲಾ ಮಾತನಾಡಬಾರ್ದು' ಅಸಹನೆ ವ್ಯಕ್ತಪಡಿಸಿದರು. 'ನೀವು ನನ್ನಲ್ಲಿ ಹೇಳಿ ಪ್ರಯೋಜನವಿಲ್ಲ. ದಯವಿಟ್ಟು ವೇದಿಕೆಯಲ್ಲಿ ನಿಮ್ಮ ಭಾವನೆಯನ್ನು ಪ್ರಕಟಪಡಿಸಿ' ಎಂದಾಗ ಜಾಗ ಖಾಲಿ ಮಾಡಿದರು!

ಗಂಗಯ್ಯ ರೆಡ್ಡಿಯವರ ಮಾತಿನಲ್ಲಿ ಅರ್ಥವಿಲ್ವೇ? ಸಮಾಜವಿಂದು 'ರೈತರು ಬೆಳೆಯನ್ನು ಬೆಳೆದು ನಮಗೆ ಕೊಡಬೇಕು' ಅಂತ ಬಯಸುತ್ತದೆ. ಸರಿ, ಆದರೆ ಬೆಳೆದ ಬೆಳೆಗೆ ದರದ ವಿಚಾರ ಬಂದಾಗ, 'ಛೇ ಅಷ್ಟೊಂದು ಇದೆಯಾ, ಜಾಸ್ತಿಯಾಯಿತು. ಇಷ್ಟಕ್ಕೆ ಕೊಡು' ಅಂತ ವಶೀಲಿ. ಕೊನೆಗೆ 'ಮೂರು ಮುಕ್ಕಾಲು' ದರಕ್ಕೆ ಬೆಳೆಯ ಮಾರಾಟ.

ಪುಣ್ಯಭೂಮಿ ರೈತರಿಂದಲೇ ರೂಪಿತವಾದ ಸಂಸ್ಥೆ. ಇದರ ನಿರ್ದೇಶಕ ಡಾ.ವಿಜಯ ಅಂಗಡಿ. ಐದು ವರುಷಗಳಿಂದ ಜೈವಿಕ ಮೇಳವನ್ನು ಇತರ ಕೃಷಿಮೇಳಗಳಿಗಿಂತ ತುಸು ಭಿನ್ನವಾಗಿ ನಡೆಸುತ್ತಿದ್ದಾರೆ. ಇಲ್ಲಿ ರೈತರ ಭಾವನೆಗಳನ್ನು ತೆರೆದಿಡಲು ಮುಕ್ತ ಅವಕಾಶ. ಮಾಡಿದ ಕೃಷಿ ಸಾಧನೆಗಳನ್ನು ಹಂಚಿಕೊಳ್ಳಲು ವೇದಿಕೆ ಕಲ್ಪಿಸಿದೆ.

ರವಿಶಂಕರ್, ರೆಡ್ಡಿಯಂತಹ ಅನುಭವಿ ಕೃಷಿಕರಿಗೆ ಇಲ್ಲಿ ಮಣೆ. 'ಬೇಕು-ಬೇಡ'ಗಳ ಕುರಿತ ಮಾತುಕತೆಯಲ್ಲಿ ಪುಣ್ಯಭೂಮಿ ಹೆಚ್ಚು ಆಸಕ್ತಿ. ಇಲ್ಲಿ ಯಾವುದೇ ಮೆರವಣಿಗೆಯಿಲ್ಲ, ತಾಸುಗಟ್ಟಲೆ ಉದ್ಘಾಟನಾ ಸಮಾರಂಭವಿಲ್ಲ. ಸಮಾರೋಪ ಭಾಷಣವಿಲ್ಲ, ಪ್ರಬಂಧ ಮಂಡನೆಯಿಲ್ಲ.

ಒಮ್ಮೆ ಸಮಾರಂಭ ಶುರುವಾಯಿತೆಂದರೆ, ಮುಗಿಯುವುದು ಸೂರ್ಯಾಸ್ತಕ್ಕೆ! ಮಧ್ಯದಲ್ಲೆಲ್ಲೂ ಬ್ರೇಕ್ ಇಲ್ಲ. ನಿರಂತರ ಏಳೆಂಟು ಗಂಟೆ ಮಾಹಿತಿ ವಿನಿಮಯ. ಒಬ್ಬರು ಮಾತನಾಡಿದ ಬಳಿಕ ಅವರು ನಿರ್ಗಮಿಸುತ್ತಾರೆ. ಆ ಸ್ಥಾನ ಇನ್ನೊಬ್ಬ ಸಂಪನ್ಮೂಲ ವ್ಯಕ್ತಿಗೆ! ಭೋಜನಕ್ಕೆ ಪ್ರತ್ಯೇಕ ಸಮಯವಿಲ್ಲ. ಸಭಾಭವನ ಖಾಲಿಯಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ಪ್ರೇಕ್ಷಕರದ್ದು.
ಮೇಳಕ್ಕೆ ಇಲಾಖೆಗಳು ಕೈಜೋಡಿಸಿವೆ. ಹಾಗಾಗಿ ಅವುಗಳಿಗೆ ಸ್ವಲ್ಪ ವಿಶೇಷ ಆತಿಥ್ಯ, ಗೌರವ! 'ಎಂ ವಿಟಾಮಿನ್' ಬೇಕಲ್ವಾ ನಗೆಯಾಡುತ್ತಾರೆ ಅಂಗಡಿ.

ಸಮಾರಂಭ ಪೂರ್ತಿ ಆವರಿಸುವಷ್ಟು ಅಂಗಡಿಯವರ ನಿರ್ವಹಣೆ! ರೈತರೂ ಒಪ್ಪಿದ್ದಾರೆ ಬಿಡಿ. ಕಲಾಪದ ಮಧ್ಯೆ ಕ್ವಿಜ್, ಪುಣ್ಯಭೂಮಿಯ ಕೆಲಸ, ರೈತರು ಬೆಳೆದ ರೀತಿ, ಅವರ ಬದುಕಿನ ರೀತಿಗಳು ಬಿತ್ತರ.

ಮೇಳದಲ್ಲಿ ರೈತ ಸಾಧಕರಿಗೆ ಸಂಮಾನ, ಪರಿಸರ ಪ್ರಶಸ್ತಿ ಪ್ರದಾನ ಹೆಚ್ಚು ಆಕರ್ಷಕ. ಪ್ರಶಸ್ತಿ ಪುರಸ್ಕೃತರ ಮನೆಯ ಎಲ್ಲಾ ಸದಸ್ಯರ ಉಪಸ್ಥಿತಿ ಕಡ್ಡಾಯ. ಸಂಮಾನದ ಸಮಯದಲ್ಲಿ ಅವರ ಸಾಧನೆಯನ್ನು ಸ್ವಾರಸ್ಯವಾಗಿ ವಿಜಯ ಅಂಗಡಿಯವರೇ ವಿವರಿಸುತ್ತಾರೆ. ಕುಟುಂಬದ ಎಲ್ಲಾ ಸದಸ್ಯರ ಪರಿಚಯದೊಂದಿಗೆ ಸಂಮಾನ. ಇವೆಲ್ಲಾ ನಡೆಯುವುದು ವೇದಿಕೆಯ ಮುಂಭಾಗದಲ್ಲಿ. ಸಂಮಾನದ ಹೊತ್ತಿಗೆ ವೇದಿಕೆಯಿಂದ ಗಣ್ಯರು ಕೆಳಗಿಳಿದು ಸಂಮಾನ ಮಾಡುತ್ತಾರೆ.

ಗಂಧದ ಹಾರವೆಂದು ಯಾವುದೋ ಮರದ ಕೆತ್ತೆಯಿಂದ ತಯಾರಿಸಿದ ಹಾರಗಳು ಇಲ್ಲಿ ವಜ್ರ್ಯ. ಬಿಸಿಲಿಗೆ ಬಾಡದ, ಮಳೆಗೆ ಒದ್ದೆಯಾಗದ ರೇಷ್ಮೆ ಗೂಡಿನ ಹಾರದ ಬಳಕೆ. ಸ್ಮರಣಿಕೆ ಏನು ಗೊತ್ತೇ? ಮನೆ ಬಳಕೆಯ ಅರಶಿನ, ಏಲಕ್ಕಿ, ಚಕ್ಕೆ, ದಾಲ್ಚಿನ್ನಿ ಇವುಗಳ ಸುಂದರ ಪೊಟ್ಟಣ. 'ಇಲ್ಲಿ ಕೊಡುವ ವಸ್ತುಗಳು ಮನೆಬಳಕೆಗೆ ಪೂರಕವಾಗಿರಬೇಕು. ಅಡುಗೆ ಮನೆ ಸೇರಬೇಕು. ಸಂಮಾನಿತರಿಗೆ ಒಯ್ಯಲು ಭಾರವಾಗಿಬಾರದು' ಎನ್ನುತ್ತಾರೆ ಅಂಗಡಿ.

ಡಾ.ಅಂಗಡಿಯವರು ಹಾಸನ ಆಕಾಶವಾಣಿಯಲ್ಲಿ ಕೃಷಿರಂಗ ನಿರ್ವಾಹಕರು. ಬಹುತೇಕ ರೈತರನ್ನು ಆಕಾಶವಾಣಿಯ ತೆಕ್ಕೆಗೆ ಕರೆಸಿಕೊಂಡವರು. ಈ ಭಾಗದಲ್ಲಿ ರೇಡಿಯೋ ಕೇಳುಗರೇ ಸೃಷ್ಟಿಯಾಗಿದ್ದಾರೆ. 'ರಾಷ್ಟ್ರಗೀತೆಯನ್ನು ನಾನು ಎಷ್ಟು ಗೌರವಿಸುತ್ತೇನೋ, ರೇಡಿಯೋವನ್ನೂ ಅಷ್ಟೇ ಗೌರವಿಸುತ್ತೇನೆ' ಎನ್ನುವ ಬೈರಾಪುರದ ಕೃಷಿಕ ಹರಿಂಜಯರ ಮಾತು ರೇಡಿಯೋ ಬಳಕೆಯ ಗಾಢತೆಯನ್ನು ಸಾರುತ್ತದೆ.

'ನೋಡ್ರಿ. ಬೆಳಗ್ಗೆ, ಸಂಜೆ ಕೃಷಿ ಕಾರ್ಯಕ್ರಮ ಕೇಳಿಯೇ ಮಿಕ್ಕುಳಿದ ಕೆಲಸ' ಹೊಳೆನರಸಿಪುರದ ಪುಟ್ಟಪ್ಪರೂ ದನಿಸೇರಿಸುತ್ತಾರೆ. ಹೀಗೆ ಪುಣ್ಯಭೂಮಿಯ ಹಿಂದೆ ರೇಡಿಯೋ ಸಾಕಷ್ಟು ಕೆಲಸ ಮಾಡಿದೆ. ಸಂಪನ್ಮೂಲ ವ್ಯಕ್ತಿಗಳು ರೂಪಿತಗೊಂಡಿದ್ದಾರೆ.
ಜೈವಿಕ ಮೇಳಕ್ಕೆ ನೂರು ರೂಪಾಯಿ ಪ್ರವೇಶ ಶುಲ್ಕ. ಇದರಲ್ಲಿ ಐವತ್ತು ರೂಪಾಯಿಯ ವಸ್ತುಗಳನ್ನು ಉಚಿತವಾಗಿ ಖರೀದಿಸುವ ಸೌಲಭ್ಯ. ಸಾವಯವ ಅಕ್ಕಿ, ಬೆಲ್ಲ.. ಹೀಗೆ. ಮಿಕ್ಕುಳಿದ ಐವತ್ತು ರೂಪಾಯಿ ಮೇಳದ ವೆಚ್ಚಕ್ಕೆ. ಅಂಗಡಿಯವರ 'ಜಾಣ್ಮೆ' ಲೆಕ್ಕಾಚಾರಕ್ಕೆ ಭಲೇ!

ಬೈರಾಪುರದ ಬಿ.ಎಂ.ಹರಿಂಜಯ ರಾಗಿಕಲ್ಲಿಗೆ ಮರುಜೀವ ನೀಡಿದ್ದಾರೆ. ರಾಗಿ ಬೀಸುವ ಕಲ್ಲುಗಳು ಮೂಲೆ ಸೇರಿವೆ. ಕಲ್ಲನ್ನು ತಿರುಗಿಸಲು ಸುಲಭವಾಗುವಂತೆ ಬೇರಿಂಗ್ ಬಳಸಿದ್ದಾರೆ. ಇದರಿಂದಾಗಿ ರಟ್ಟೆ ನೋವಾಗದು. ಈ ಚಿಕ್ಕ ಆವಿಷ್ಕಾರದಿಂದಾಗಿ ಈ ಭಾಗದಲ್ಲಿ ರಾಗಿಕಲ್ಲು ತಿರುಗಲು ಶುರುವಾಗಿದೆಯಂತೆ!

'ಮೂವತ್ತು ವರುಷದಿಂದ ನಮ್ಮಲ್ಲಿ ರಾಜಮುಡಿ ಭತ್ತ ಮರುಬಳಕೆಯಾಗುತ್ತಲೇ ಇದೆ. ಈಗಲೂ ನಮ್ಮ ಮನೆಯಲ್ಲಿ ಮಣ್ಣಿನ ಪಾತ್ರೆಯಲ್ಲೇ ಅಡುಗೆ. ಇದರಲ್ಲಿ ಉಂಡ ನನಗೆ ಬೇರೆ ಪಾತ್ರೆಯಲ್ಲಿ ಬೇಯಿಸಿದ ಅನ್ನ ರುಚಿಸುವುದಿಲ್ಲ' ಎನ್ನುವ ಬ್ಯಾಡರಹಳ್ಳಿ ರವಿಶಂಕರ್; 'ನಮ್ಮ ಹೊಲಗಳು ಸಾವಯವವಾಗಿದೆ. ಆದರೆ ಅಡುಗೆ ಮನೆಗಳು ಆಗಿಲ್ಲ' ಎನ್ನುತ್ತಾರೆ ಸವಣೂರಿನ ರಾಜಶೇಖರ ಸಿಂಧೂರು.

ದೊಡ್ಡ ದೊಡ್ಡ ಗೋಷ್ಠಿಗಳು ರೈತರನ್ನು ತಲಪುವುದಿಲ್ಲ. 'ರೈತರ ಭಾಷೆಯಲ್ಲೇ ಮಾತನಾಡಿ. ಅವರಿಗೆ ಅರ್ಥವಾಗುತ್ತದೆ' ಸಾವಯವ ಪ್ರತಿಪಾದಕ ನಾರಾಯಣ ರೆಡ್ಡಿಯವರ ಮಾತು - ಎರಡೂ ದಿವಸದ ಜೈವಿಕ ಮೇಳದಲ್ಲಿ ಅನಾವರಣಗೊಂಡಿದೆ.

ಪುಣ್ಯಭೂಮಿಯು ಪರಿಸರಕ್ಕೆ ಒತ್ತು ಕೊಡುವುದರಿಂದ, ಪ್ಲಾಸ್ಟಿಕ್ ಬಳಕೆಯನ್ನು ಸಾಧ್ಯವಾದಷ್ಟೂ ಕಡಿಮೆಗೊಳಿಸಬಹುದು. ಜವಾಬ್ದಾರಿಗಳನ್ನು ಇನ್ನಷ್ಟು ಹಂಚಿಕೊಂಡರೆ ನಿರ್ದೇಶಕರ ಭಾರ ಹಗುರ. ಸಾಧ್ಯವಾದಷ್ಟೂ ರೈತರ ಮಾತುಗಳಿಗೆ ಅವಕಾಶ ಕೊಡುವುದೊಳ್ಳಿತು.

Sunday, February 7, 2010

ಬಿ.ಟಿ. - ದ್ವಂದ್ವ

* ದೇಶಧ ಏಳು ಸ್ಥಳಗಳಲ್ಲಿ ಎಂಟು ಸಾವಿರಕ್ಕು ಅಧಿಕ ಅಭಿಪ್ರಾಯ ಸಂಗ್ರಹಿಸಿದ್ದೇನೆ. ಫೆಬ್ರವರಿ 10ರಂದು ಕೇಂದ್ರ ಸರಕಾರದ ಪ್ರತಿನಿಧಿಯಾಗಿ ಬಿಟಿ ಬದನೆ ಬಗ್ಗೆ ನಿರ್ಧಾರ ಪ್ರಕಟಿಸುತ್ತೇನೆ. ಜನಾಭಿಪ್ರಾಯಕ್ಕೆ ಮನ್ನಣೆ ನೀಡುವಂತಹ ನಿರ್ಧಾರ ಆಗಿರುತ್ತದೆ. ಇದೇ ವೇಳೆ ವೈಜ್ಞಾನಿಕ ಸಂಶೋಧನೆಗಳನ್ನೂ ಕೇಂದ್ರ ಕಡೆಗಣಿಸದು.
- ಜೈರಾಂ ರಮೇಶ್, ಕೇಂದ್ರ ಪರಿಸರ ಸಚಿವ

* ಬಿ.ಟಿ.ಬದನೆ ಮಾನವನ ಆರೋಗ್ಯಕ್ಕೆ ಹಾನಿಕರ ಆಗಲಿದೆ ಎಂದು ತಜ್ಞರ ವರದಿಗಳು ಹೇಳುತ್ತವೆ. ಇಂತಹ ಮಾನವನ ಜೀವಕ್ಕೆ ಆಪಾಯಕಾರಿ ಆಗುವಂತಹ ತಳಿ ನಮಗೆ ಬೇಕಿಲ್ಲ. ಇದನ್ನು ಸರಕಾರ ಶೇ.101ರಷ್ಟು ವಿರೋಧಿಸುತ್ತದೆ. ಇದೇ ನಮ್ಮ ಅಂತಿಮ ನಿಲುವು. ಈ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ.
- ಬಿ.ಎಸ್.ಯಡಿಯೂರಪ್ಪ, ಮುಖ್ಯಮನ್ತ್ರಿಗಳು

* ಕುಲಾಂತರಿ ಬದನೆ ಬಗ್ಗೆ ವಿಜ್ಞಾನಿಗಳಲ್ಲೇ ಒಡಕಿನ ಧ್ವನಿ ಕೇಳಿಬರುತ್ತಿದೆ. ಹೀಗಾಗಿ ಇದರ ಕುರಿತು ವಿಸ್ತೃತ ಚರ್ಚೆ ನಡೆಸಿ ಜಾಗ್ರತೆಯ ನಿರ್ಧಾರ ಕೈಗೊಳ್ಳಬೇಕಿದೆ. ಹಾಗಂತ ನಮ್ಮ ರೈತರ ಮೇಲೆ ಯಾವುದೇ ಕಾರಣಕ್ಕೂ ಇದನ್ನು ಮೊದಲು ಪ್ರಯೋಗಿಸುವುದು ಸರಿಯಲ್ಲ. ಈ ಬಗ್ಗೆ ಇನ್ನಷ್ಟು ಸಂಶೋಧನೆ ನಡೆಯಲಿ.
- ಎಚ್.ಡಿ.ದೇವೇಗೌಡ, ಮಾಜಿ ಪ್ರಧಾನಿಗಳು

ರೈತರ ದನಿ

* ಆಹಾರಕ್ಕೆ ವಿಷ ಬೆರೆಸುವ ಪ್ರಯತ್ನ ಇದು. ಅದೆಷ್ಟೋ ಕಾಲದಿಂದ ನಾವು ಬೆಳೆ ಬೆಳೆಯುತ್ತಾ ಬದುಕುತ್ತಿಲ್ಲವೇ? ಈಗ ಇದ್ದಕ್ಕಿದ್ದಂತೆ ಬಿಟಿ ಬೆಳೆದು ಮುಂದಿನ ಜನಾಂಗದ ಮೇಲೆ ಪರಿಣಾಮ ಉಂಟು ಮಾಡುವ ಮನಸ್ಸಿದೆಯೇ? ಬಿಟಿ ಬೇಡವೇ ಬೇಡ
- ಪಾಪಮ್ಮ, ಮುಳುಬಾಗಿಲು

* ಬಿಟಿ ಬದನೆಯನ್ನು ಸಂಶೋಧಿಸಿದ ವಿಜ್ಞಾನಿಗಳು ಮೊದಲು ತಿಂದು, ನಂತರ ತಮ್ಮ ಮಕ್ಕಳಿಗೆ ಕೊಡಲಿ. ಆಮೇಲೆ ಜನರಿಗೆ ತಿನ್ನಿಸಲಿ. ಈಗಾಗಲೇ ಬಿಟಿ ಬದನೆಯನ್ನು ಇಲಿ ಮೇಲೆ ಪ್ರಯೋಗಿಸಲಾಗಿದ್ದು, ಅದಕ್ಕೆ ಲಿವರ್ ಕಾಯಿಲೆ ಬಂದಿದೆ. ಸಂಶೋಧನೆಯಾದ ಮೇಲೆ ಮಾತನಾಡಿ.
- ನಾರಾಯಣ ರೆಡ್ಡಿ, ದೊಡ್ಡಬಳ್ಳಾಪುರ

* ರೈತರು ಭಿಕ್ಷಾ ಪಾತ್ರೆ ಹಿಡಿಯಲಿ ಎಂದು ಬಿಟಿಗೆ ಅವಕಾಶ ಕೊಡುತ್ತಿದ್ದಿರಾ? ನಾವೀಗ ಆರಾಮವಾಗಿ ಊರ ಬದನೆ ಬೆಳೆಯುತ್ತ ಸಂಸಾರ ನಡೆಸುತ್ತಿದ್ದೇವೆ. ಯಾವುದೇ ಸಮಸ್ಯೆ ಇಲ್ಲ. ಅಂದ ಮೇಲೆ ಬಿಟಿ ಏಕೆ ಬೇಕು. ಹೀಗಾಗಿ ಸರ್ಕಾರ ತನ್ನ ಹಠ ಬಿಡುವುದು ಒಳ್ಳೆಯದು.
- ಗಂಗಮ್ಮ, ಬ್ಯಾದಾಗಿ

* ಕುಲಾಂತರಿ ಬದನೆ ಸಂಪೂರ್ಣ ಪ್ರಯೋಗ ನಡೆದಿಲ್ಲ. ಹೊಸ ತಂತ್ರಜ್ಞಾನಕ್ಕೆ ಬೆಲೆ ಕೊಡೋಣ. ಆದರೆ ಇನ್ನೂ ಸಂಶೋಧನೆಯಾಗಬೇಕಾದ ಕಾರಣ 30-40 ವರ್ಷ ಕಾಯಬೇಕು. ಸಂಶೋಧನೆಯಾಗದೆ ಇಷ್ಟೊಂದು ಜನರ ಮೇಲೆ ಪ್ರಯೋಗ ಮಾಡುವುದು ತಪ್ಪು.
- ಅಪರ್ಣಾ, ಬಯೋವಿಜ್ಞಾನಿ

ವಿಜ್ಞಾನಿಗಳ ಮತ

* ನಮ್ಮ ವಿವಿಯಲ್ಲೇ ಸಂಶೋಧನೆ ನಡೆಸುತ್ತಿದ್ದೇವೆ. ಇಂತಹ ಪರ-ವಿರೋಧ ಅಭಿಪ್ರಾಯ ಹಿಂದೆ ಹೈಬ್ರಿಡ್ ತಳಿ ಬಂದಾಗಲೂ ಇತ್ತು.
- ಡಾ.ಪಿ.ಜಿ.ಚೆಂಗಪ್ಪ, ಬೆಂ.ಕೃ.ವಿವಿ. ಕುಲಪತಿ

* ಬಿಟಿಯನ್ನು ಸರಕಾರಿ ಸ್ವಾಮ್ಯದ ಸಂಸ್ಥೆಯೊಂದರಲ್ಲಿ ಬೆಳೆಯುತ್ತ ಇದ್ದೇವೆ. ಮೊಬೈಲ್, ಟಿವಿ ಬೇಕು ಎಂದಾದಲ್ಲಿ ಬಿಟಿ ಯಾಕೆ ಬೇಡ?
- ವಾಗೀಶ್ ಬಾಬು, ವಿಜ್ಞಾನಿ

* ಬಿಟಿಯಲ್ಲಿ ಪ್ರೋಟೀನ್ ಅಂಶ ಮಣ್ಣಿನಲ್ಲಿ ಸುಲಭವಾಗಿ ಕರಗುತ್ತದೆ. ಜೊತೆಗೆ ಇದನ್ನು ಸೇವಿಸುವುದರಿಮದ ಯಾವುದೇ ಹಾನಿ ಇಲ್ಲ.
- ವಾಣಿ, ಭಾರತೀಯ ಕೃಷಿ ವಿಜ್ಞಾನ ಸಂಸ್ಥೆ ವಿಜ್ಞಾನಿ

* ನಮ್ಮ ದೇಶದಲ್ಲಿ ಬದನೆಗೆ ಬೇಡಿಕೆಯೇ ಇಲ್ಲ. ಈ ಬಗ್ಗೆ ವ್ಯಾಪಕ ಸಂಶೋಧನೆ ಆಗಲಿ. ವಿಸ್ತೃತ ಸಂಶೋಧನೆ, ಚರ್ಚೆ ಆಗದೆ ಬಿಡುಗಡೆ ಮಾಡೋದು ಬೇಡ.
- ಡಾ. ಬಡೆ, ವಿಜ್ಞಾನಿ

* ಬಿಟಿ ಬದನೆ ಮೂಲ ವಿಜ್ಞಾನಕ್ಕೆ ವಿರೋಧವಾದದ್ದು. ರಾಷ್ಟ್ರೀಯ ವಿಜ್ಞಾನ ಅಕಾಡೆಮಿ ಇದನ್ನು ಒಪ್ಪಿದೆಯೇ? ಬಿಟಿ ಬದನೆ ಕುಲಾಂತರಿ ತಳಿಯಲ್ಲೇ ಪ್ರಥಮವಾಗಿ ಬಂದಿರುವಂತಹದ್ದು. ಅದು ಭಾರತೀಯರ ಮೇಲೆಯೇ ಯಾಕೆ ಪ್ರಯೋಗವಾಗಬೇಕು?
- ಡಾ.ವಿಜಯನ್
(ಫೆ.೬ರಂದು ಬೆಂಗಳೂರಿನಲ್ಲಿ ಕೇಂದ್ರ ಪರಿಸರ ಸಚಿವರ ಉಪಸ್ಠಿತಿಯಲ್ಲಿ ಜರುಗಿದ ಬಿಟಿ ಸಮಾಲೋಚನಾ ಸಭೆಯಲ್ಲಿ ವ್ಯಕ್ತವಾದ ಕೆಲವು ಪ್ರತಿಕ್ರಿಯೆಗಳು. - ಕನ್ನಡಪ್ರಭದಿಂದ)-

Saturday, February 6, 2010

ನಾಟಿಯೇ ಓಕೆ.. ಬಿ.ಟಿ.ಯಾಕೆ - ಜನಾಭಿಮತ



ಫೆ.6ರಂದು ಬೆಂಗಳೂರಿನ ಜ್ಞಾನಜ್ಯೋತಿ ಸಭಾಂಗಣದಲ್ಲಿ ಜರುಗಿದ 'ಕುಲಾಂತರಿ ಬದನೆ' ಕುರಿತ
ರಾಷ್ಟ್ರೀಯ ಸಂವಾದ. ಕೇಂದ್ರ ಪರಿಸರ ಖಾತೆ ಸಚಿವ ಜೈರಾಮ್ ರಮೇಶ್ ಉಪಸ್ಥಿತಿ.
ಸಂವಾದ ಸಮಾರಂಭದ ಕೆಲವು ಚಿತ್ರಗಳು.
(ಚಿತ್ರ ಕೊಡುಗೆ : ರಮಾರಮಣ, ಬೆಂಗಳೂರು)

ರೈತನು ಸಮಾಜದ ಜೀತದಾಳೇ!

'ರೈತ ಜೀತದಾಳು. ಬೆಳೆ ತೆಗೆದು ಸಮಾಜಕ್ಕೆ ನೀಡುವುದು ಆತನ ಕರ್ತವ್ಯ ಎಂಬಂತೆ ಸಮಾಜ ಅವನನ್ನು ನಡೆಸಿಕೊಳ್ಳುತ್ತಿದೆ' - ಹಾಸನದ ಜೈವಿಕ ಮೇಳದ ವೇದಿಕೆಯಿಂದ ಹಿರಿಯ ಕೃಷಿಕ ಗಂಗಯ್ಯ ಹೆಗ್ಡೆಯವರ ಮನದಾಳದ ಮಾತು.

ವೇದಿಕೆಯ ಮುಂದೆ ನಾಟೀ ತಳಿ ಬದನೆಯನ್ನು ಮಾಲೆಯಾಕಾರ ಮಾಡಿ ತೂಗುಹಾಕಲಾಗಿತ್ತು. 'ನಮ್ಮಲ್ಲಿ ಸಮೃದ್ಧವಾದ ನಾಟೀ ತಳಿಗಳಿರುವಾಗ ಬದನೆ ಬಗ್ಗೆ ಏನ್ರೀ ಹೊಡೆದಾಟ! ಬೀಟಿಯೋ. ಇನ್ನೊಂದೋ..' ಪಕ್ಕದಲ್ಲಿ ಕುಳಿತ ರೈತರೊಬ್ಬರು ಗೊಣಗಿದರು.
ರೈತನಿಗೆ 'ಬದನೆ ಗುಮ್ಮ' ಗೊತ್ತು! ಕಂಪೆನಿಗಳ, ವಿಜ್ಞಾನಿಗಳ, ಅಧಿಕಾರಿಗಳ 'ಒಳಗುದಿ'ಯನ್ನು ಅರಿಯುವಷ್ಟು ಜ್ಞಾನಿ. ಏನೇ ಪ್ರತಿರೋಧ ಬಂದರೂ ತನ್ನೊಂದಿಗೆ ಬೆಳೆದ ತಳಿಗಳನ್ನು ಬಿಟ್ಟುಕೊಡಲಾರ. ಆದರೆ 'ಆಮಿಷ'ಗಳ ಮೂಲಕ 'ಗರಿಗರಿ' ನೋಟಿನ ಚಿತ್ರಣವನ್ನು ಬಿಂಬಿಸಿದಾಗ ಅವನ ಮೊದಲ ಆಯ್ಕೆ ಯಾವುದಿರಬಹುದು?

ಈ ಪ್ರಶ್ನೆಗೆ - 'ಅಲ್ಲಾರಿ.. ಬದುಕಬೇಕೆಂದರೆ ಹಣ ಬೇಕಲ್ವಾ. ಹಣವಿಲ್ಲದೆ ಏನೋ ಮಾಡೋಕಾಗಲ್ಲ. ಬಿಟಿ ಆದ್ರೆ ಏನಾಯ್ತ. ಹೆಚ್ಚು ರೊಕ್ಕ ಸಿಗೊಲ್ವಾ. ಬರ್ಲಿ ಬಿಡಿ. ಉಳಿದ ಚಿಂತೆ ನಮಗ್ಯಾಕ್ರೀ' - ರೈತರೊಬ್ಬರ ಉತ್ತರ. ಬಿಟಿ ಬದನೆ ಅಂದರೆ - ಅದು ಹಣ ಗಳಿಸಲಿಕ್ಕಿರುವ ಬೆಳೆ - ಎಂದಷ್ಟೇ ಗೊತ್ತು. ಇದರಾಚೆಗಿನ ವಿಚಾರಗಳು ಮಸುಕಾಗಿವೆ.

ದುಡಿಮೆ - ರೈತನ ಮಂತ್ರ. ದುಡಿಯುವುದು ಅವನ ಕರ್ಮ. ಭಗವದ್ಗೀತೆಯಲ್ಲಿ ಶ್ರೀಕೃಷ್ಣನೇ ಆದೇಶ ಕೊಡುತ್ತಾನೆ - ಕರ್ಮ ಮಾಡು, ಫಲಾಪೇಕ್ಷೆ ಬಯಸಬೇಡ'. ಪ್ರಸ್ತುತ ಕಾಲಘಟ್ಟದಲ್ಲಿ ರೈತನಿಗೆ ಇದು ಹೆಚ್ಚು ಅನ್ವಯವಾಗುತ್ತದೆ. ಎನ್ನುವ ಮಾತನ್ನು ಪ್ರಸ್ತುತ ಕಾಲಘಟ್ಟದ ರೈತ ಅನುಭವಿಸುತ್ತಿದ್ದಾನೆ! ಶೋಷಣೆ, ಅವಮಾನ, ಅನ್ಯಾಯಗಳನ್ನು 'ಮನಸಾ ಸ್ವೀಕರಿಸಿ' ದುಡಿಯುತ್ತಲೇ ಇದ್ದಾನೆ. ಬೆಳೆದ ಬೆಲೆಯನ್ನು ಸಿಕ್ಕ ಬೆಲೆಗೆ ಮಾರಿ 'ನನ್ನದು ಸಂತೃಪ್ತ' ಜೀವನ ಅಂತ ಬಲವಂತದ ನಗು ಚೆಲ್ಲಿದಲ್ಲಿಗೆ 'ಕೃಷಿ ಬದುಕಿನ ಅನಾವರಣ'!

ನಾಡಿನ ದೊರೆಗಳಿಗೂ ಇದೇ ಬೇಕಾಗಿರುವುದು. ಹೆಜ್ಜೆ ಹೆಜ್ಜೆಗೂ ರೈತನ ಜಪ ಮಾಡುತ್ತಾ, 'ನಾನೂ ನಿಮ್ಮೊಂದಿಗಿದ್ದೇನೆ' ಎಂಬ ತೋರಿಕೆಯ ದರಿದ್ರ ಮುಖವನ್ನು ಪ್ರದರ್ಶಿಸುತ್ತಿರುವುದು ರಾಜಕಾರಣ. ಇವರಿಗೆ ರೈತನೆಂಬುದು ಚಲಾವಣೆಯ ನಾಣ್ಯ. ಅಸ್ತಿತ್ವ ಉಳಿಸಿಕೊಳ್ಳುವ ಜಾಣ್ಮೆ.

ದ್ರಾಕ್ಷಿ, ಟೊಮೆಟೋ, ಆಲೂಗೆಡ್ಡೆಗಳ ದರಗಳು ಅಲುಗಾಡಿದಾಗ ಮಾರ್ಗಕ್ಕೆ ಚೆಲ್ಲಿ ತಲೆಮೇಲೆ ಕೈಹೊತ್ತು ಕುಳಿತಾಗ ಯಾವ ಇಲಾಖೆಗಳೂ ರೈತನಾಸರೆಗೆ ಬಂದಿಲ್ಲ. ಅನುಕಂಪದ ಬಿನ್ನಾಣದ ನುಡಿಗಳಲ್ಲಿ ಆತನನ್ನು ಕಟ್ಟಿ, ಕಣ್ಣೀರೊರೆಸುವ ಪ್ರಹಸನ. ಹುನ್ನಾರಗಳ ಜಾಡಿನಲ್ಲಿ ಸಾಗುವ ಆಡಳಿತ ಯಂತ್ರಕ್ಕೆ ರೈತನ ಜೀವವೆಂಬುದು ದಾಳ.

ಮಾತೆತ್ತಿದರೆ ಕೋಟಿಗಟ್ಟಲೆ ಅಂಕಿಅಂಶಗಳನ್ನು ತೋರಿಸುವ ತಃಖ್ತೆಗಳು ಇಲಾಖೆಗಳ ಕಡತದಲ್ಲಿರುತ್ತದೆ. ಇದರೊಳಗೆ ಇಣುಕಿದರೆ 'ರೈತನ ಬದುಕು' ಸಮೃದ್ಧವಾಗಿದೆ! ಕೋಟಿ ಕೋಟಿಗಳ ಬ್ಯಾಲೆನ್ಸ್ಶೀಟ್ 'ಟ್ಯಾಲಿ'ಯಾಗಿರುತ್ತವೆ!

ದ.ಕ.ಜಿಲ್ಲೆಯ ಕೋಡಪದವಿನ ನಿಟಿಲೆ ಮಹಾಬಲೇಶ್ವರ ಭಟ್ಟರಲ್ಲಿಗೆ ಹೋಗಿದ್ದೆ. ಅವರ ತೋಟದಲ್ಲಿ ಪಿವಿಸಿ ಪೈಪ್ಗಳನ್ನು ಪೇರಿಸಿದ್ದರು. 'ಇದು ಕೃಷಿ ಇಲಾಖೆಯಿಂದ ಸಬ್ಸಿಡಿಯಲ್ಲಿ ಸಿಕ್ಕಿದ್ದು' ಎಂದರು. ನಮ್ಮ ಇಲಾಖೆಯಲ್ಲಿ ರೈತರಿಗೆ ಉಪಯೋಗವಾಗುವ ಎಷ್ಟೊಂದು ವ್ಯವಸ್ಥೆಗಳಿವೆ. ಎಷ್ಟು ಮಂದಿ ಬಳಸಿಕೊಳ್ಳುತ್ತಾರೆ? ಇಲಾಖೆಗಳ ಸಂಪರ್ಕವಿಟ್ಟುಕೊಂಡ ರೈತರಿಂದ ಕರ್ಣಾಕರ್ಣಿಕೆಯಾಗಿ ಸುದ್ದಿಗಳು ಹರಡಬೇಕೇ ವಿನಾ ಇಲಾಖೆಗಳು ಇದನ್ನು ತಿಳಿಸುವತ್ತ ಯಾಕೋ ಜಡವಾಗಿದೆ, ಬಡವಾಗಿದೆ.

ಕಚೇರಿಗಳಿಗೆ ರೈತ ಪ್ರವೇಶಿಸಿದರೆ ಸಾಕು, - 'ನಾಳೆ ಬಾ' ಸಂಸ್ಕೃತಿ ಎದುರಾಗುತ್ತದೆ. ದುಡಿದ ಹಣವೆಲ್ಲಾ ಬಸ್ಸಿಗೋ, ಕಾಣದ ಕೈಗೊ? ತಿಂಗಳುಗಟ್ಟಲೆ ಕಾದರೂ, ಕೆಲಸವನ್ನು ಪೂರೈಸಲಾಗದ ಅಸಹಾಯಕತೆ. ಹಾಗೆಂತ ಕೃಷಿಕನ ನಾಡೀಮಿಡಿತವನ್ನು ಅರಿತು, ರೈತರೊಂದಿಗೆ ವ್ಯವಹರಿಸುವ ಅಧಿಕಾರಿಗಳೂ ಇದ್ದಾರೆನ್ನಿ. ಇಂತವರ ಸೇವೆ ಎಲ್ಲೂ ದಾಖಲಾಗುವುದಿಲ್ಲ, ಪ್ರಕಟವಾಗುವುದೂ ಇಲ್ಲ.

ಒಂದು ದಿವಸ ಹಳ್ಳಿಯಿಂದ ಕೊತ್ತಂಬರಿ ಸೊಪ್ಪಾಗಲೀ, ಟೊಮೆಟೋ, ಆಲೂಗೆಡ್ಡೆ ಬಾರದಿದ್ದರೆ ಹೋಟೇಲುಗಳು, ಅಡುಗೆ ಮನೆಗಳ ಒಲೆ ಉರಿಯುವುದಿಲ್ಲ. ಭತ್ತ, ರಾಗಿಗಳು ನಗರ ಪ್ರವೇಶಿಸದಿದ್ದರೆ ಹಸಿದ ಹೊಟ್ಟೆಗೆ ತಂಪು ಬಟ್ಟೆಯೇ ಗತಿ.
ಇದನ್ನೆಲ್ಲಾ ಚಿಂತಿಸಿದರೆ ಆರಂಭದಲ್ಲಿ ಉಲ್ಲೇಖಿಸಿದ ಹೆಗ್ಡೆಯವರ 'ರೈತ ಜೀತದಾಳು' ಎಂಬ ಮಾತು ಹೆಚ್ಚು ಮಹತ್ವ ಪಡೆದುಕೊಳ್ಳುತ್ತದೆ. ರೈತ ಬೆಳೆಯುತ್ತಿರಲೇ ಬೇಕು, ಸಮಾಜಕ್ಕೆ ಪೂರೈಸುತ್ತಿರಲೇ ಬೇಕು. ಬೆಲೆ ಮಾತ್ರ ಹೆಚ್ಚು ಕೊಡಿ ಅಂತ ಕೇಳಬಾರದು. ಹಾಗಿದ್ದಾಗ ಮಾತ್ರ ಆತ ದೇಶದ ಬೆನ್ನೆಲುಬು!

ಅಡಿಕೆ, ತೆಂಗು, ಕಬ್ಬು.. ರೈತನನ್ನು ಸಾಕುವ ಬೆಳೆಗಳಿಗೆ ಉತ್ತಮ ಬೆಲೆ ಕೊಡಿ - ಇದು ರೈತನ ಬೇಡಿಕೆ. ಆದರೆ ದುರಂತ ನೋಡಿ, ಕೇಳಿದ್ದನ್ನು ನಮ್ಮ ದೊರೆಗಳು ಕೊಡರು, ಕೇಳದೇ ಇದ್ದಂತಹ 'ಬಿಟಿ ಬದನೆ'ಯನ್ನು ಬಲವಂತದಿಂದ ಕಿಟಕಿಯೊಳಗೆ ಹಾಕಿಯಾರು!
ವಿಜ್ಞಾನಿಗಳು ಸಂಶೋಧನೆ ಮಾಡಿದ್ದಾರಲ್ಲಾ. ಮತ್ಯಾಕೆ ವಿರೋಧ - ಫಕ್ಕನೆ ಮೂಡುವ ಪ್ರಶ್ನೆ. ನಮ್ಮ ಸಂಶೋಧನೆಗಳೆಲ್ಲಾ ಹೀಗೇನೆ. ಲ್ಯಾಬ್ ಟು ಲ್ಯಾಂಡ್ ಆಗುವುದೇ ಇಲ್ಲ. ರೈತರ ಹೊಲದಲ್ಲೇ ಪ್ರಾತ್ಯಕ್ಷಿಕೆ ನಡೆಯಲಿ. ವ್ಯವಹಾರಗಳೆಲ್ಲವೂ ಪಾರದರ್ಶಕವಾಗಿರಲಿ. ಆಗ ರೈತರಿಗೂ ನಂಬುಗೆ ಬರುತ್ತದೆ. ಆಗ ಬದನೆಯ ನಂಟು ಕಗ್ಗಂಟಾಗದು.

ರೈತ ಕೇಳುವುದಿಷ್ಟೇ - ನಮ್ಮ ಮಟ್ಟಿಗೆ ನಾವು ನೆಮ್ಮದಿಯಾಗಿದ್ದೇವೆ. ಭಯ ಹುಟ್ಟಿಸುವ ಯಾವುದೇ 'ಗುಮ್ಮ'ಗಳು ನಮ್ಮ ಅಂಗಳ ಪ್ರವೇಶಿಸದಂತೆ ನೋಡಿಕೊಂಡರೆ ಸಾಕು. ಇದು ನಾವು ಕೇಳುವ ಏಕೈಕ ಬೇಡಿಕೆ! ಹಾಗೆಂತ ನಾವೇನೂ ಅಭಿವೃದ್ಧಿಯ ವಿರೋಧಿಗಳಲ್ಲ.