'ರೈತ ಜೀತದಾಳು. ಬೆಳೆ ತೆಗೆದು ಸಮಾಜಕ್ಕೆ ನೀಡುವುದು ಆತನ ಕರ್ತವ್ಯ ಎಂಬಂತೆ ಸಮಾಜ ಅವನನ್ನು ನಡೆಸಿಕೊಳ್ಳುತ್ತಿದೆ' - ಹಾಸನದ ಜೈವಿಕ ಮೇಳದ ವೇದಿಕೆಯಿಂದ ಹಿರಿಯ ಕೃಷಿಕ ಗಂಗಯ್ಯ ಹೆಗ್ಡೆಯವರ ಮನದಾಳದ ಮಾತು.
ವೇದಿಕೆಯ ಮುಂದೆ ನಾಟೀ ತಳಿ ಬದನೆಯನ್ನು ಮಾಲೆಯಾಕಾರ ಮಾಡಿ ತೂಗುಹಾಕಲಾಗಿತ್ತು. 'ನಮ್ಮಲ್ಲಿ ಸಮೃದ್ಧವಾದ ನಾಟೀ ತಳಿಗಳಿರುವಾಗ ಬದನೆ ಬಗ್ಗೆ ಏನ್ರೀ ಹೊಡೆದಾಟ! ಬೀಟಿಯೋ. ಇನ್ನೊಂದೋ..' ಪಕ್ಕದಲ್ಲಿ ಕುಳಿತ ರೈತರೊಬ್ಬರು ಗೊಣಗಿದರು.
ರೈತನಿಗೆ 'ಬದನೆ ಗುಮ್ಮ' ಗೊತ್ತು! ಕಂಪೆನಿಗಳ, ವಿಜ್ಞಾನಿಗಳ, ಅಧಿಕಾರಿಗಳ 'ಒಳಗುದಿ'ಯನ್ನು ಅರಿಯುವಷ್ಟು ಜ್ಞಾನಿ. ಏನೇ ಪ್ರತಿರೋಧ ಬಂದರೂ ತನ್ನೊಂದಿಗೆ ಬೆಳೆದ ತಳಿಗಳನ್ನು ಬಿಟ್ಟುಕೊಡಲಾರ. ಆದರೆ 'ಆಮಿಷ'ಗಳ ಮೂಲಕ 'ಗರಿಗರಿ' ನೋಟಿನ ಚಿತ್ರಣವನ್ನು ಬಿಂಬಿಸಿದಾಗ ಅವನ ಮೊದಲ ಆಯ್ಕೆ ಯಾವುದಿರಬಹುದು?
ಈ ಪ್ರಶ್ನೆಗೆ - 'ಅಲ್ಲಾರಿ.. ಬದುಕಬೇಕೆಂದರೆ ಹಣ ಬೇಕಲ್ವಾ. ಹಣವಿಲ್ಲದೆ ಏನೋ ಮಾಡೋಕಾಗಲ್ಲ. ಬಿಟಿ ಆದ್ರೆ ಏನಾಯ್ತ. ಹೆಚ್ಚು ರೊಕ್ಕ ಸಿಗೊಲ್ವಾ. ಬರ್ಲಿ ಬಿಡಿ. ಉಳಿದ ಚಿಂತೆ ನಮಗ್ಯಾಕ್ರೀ' - ರೈತರೊಬ್ಬರ ಉತ್ತರ. ಬಿಟಿ ಬದನೆ ಅಂದರೆ - ಅದು ಹಣ ಗಳಿಸಲಿಕ್ಕಿರುವ ಬೆಳೆ - ಎಂದಷ್ಟೇ ಗೊತ್ತು. ಇದರಾಚೆಗಿನ ವಿಚಾರಗಳು ಮಸುಕಾಗಿವೆ.
ದುಡಿಮೆ - ರೈತನ ಮಂತ್ರ. ದುಡಿಯುವುದು ಅವನ ಕರ್ಮ. ಭಗವದ್ಗೀತೆಯಲ್ಲಿ ಶ್ರೀಕೃಷ್ಣನೇ ಆದೇಶ ಕೊಡುತ್ತಾನೆ - ಕರ್ಮ ಮಾಡು, ಫಲಾಪೇಕ್ಷೆ ಬಯಸಬೇಡ'. ಪ್ರಸ್ತುತ ಕಾಲಘಟ್ಟದಲ್ಲಿ ರೈತನಿಗೆ ಇದು ಹೆಚ್ಚು ಅನ್ವಯವಾಗುತ್ತದೆ. ಎನ್ನುವ ಮಾತನ್ನು ಪ್ರಸ್ತುತ ಕಾಲಘಟ್ಟದ ರೈತ ಅನುಭವಿಸುತ್ತಿದ್ದಾನೆ! ಶೋಷಣೆ, ಅವಮಾನ, ಅನ್ಯಾಯಗಳನ್ನು 'ಮನಸಾ ಸ್ವೀಕರಿಸಿ' ದುಡಿಯುತ್ತಲೇ ಇದ್ದಾನೆ. ಬೆಳೆದ ಬೆಲೆಯನ್ನು ಸಿಕ್ಕ ಬೆಲೆಗೆ ಮಾರಿ 'ನನ್ನದು ಸಂತೃಪ್ತ' ಜೀವನ ಅಂತ ಬಲವಂತದ ನಗು ಚೆಲ್ಲಿದಲ್ಲಿಗೆ 'ಕೃಷಿ ಬದುಕಿನ ಅನಾವರಣ'!
ನಾಡಿನ ದೊರೆಗಳಿಗೂ ಇದೇ ಬೇಕಾಗಿರುವುದು. ಹೆಜ್ಜೆ ಹೆಜ್ಜೆಗೂ ರೈತನ ಜಪ ಮಾಡುತ್ತಾ, 'ನಾನೂ ನಿಮ್ಮೊಂದಿಗಿದ್ದೇನೆ' ಎಂಬ ತೋರಿಕೆಯ ದರಿದ್ರ ಮುಖವನ್ನು ಪ್ರದರ್ಶಿಸುತ್ತಿರುವುದು ರಾಜಕಾರಣ. ಇವರಿಗೆ ರೈತನೆಂಬುದು ಚಲಾವಣೆಯ ನಾಣ್ಯ. ಅಸ್ತಿತ್ವ ಉಳಿಸಿಕೊಳ್ಳುವ ಜಾಣ್ಮೆ.
ದ್ರಾಕ್ಷಿ, ಟೊಮೆಟೋ, ಆಲೂಗೆಡ್ಡೆಗಳ ದರಗಳು ಅಲುಗಾಡಿದಾಗ ಮಾರ್ಗಕ್ಕೆ ಚೆಲ್ಲಿ ತಲೆಮೇಲೆ ಕೈಹೊತ್ತು ಕುಳಿತಾಗ ಯಾವ ಇಲಾಖೆಗಳೂ ರೈತನಾಸರೆಗೆ ಬಂದಿಲ್ಲ. ಅನುಕಂಪದ ಬಿನ್ನಾಣದ ನುಡಿಗಳಲ್ಲಿ ಆತನನ್ನು ಕಟ್ಟಿ, ಕಣ್ಣೀರೊರೆಸುವ ಪ್ರಹಸನ. ಹುನ್ನಾರಗಳ ಜಾಡಿನಲ್ಲಿ ಸಾಗುವ ಆಡಳಿತ ಯಂತ್ರಕ್ಕೆ ರೈತನ ಜೀವವೆಂಬುದು ದಾಳ.
ಮಾತೆತ್ತಿದರೆ ಕೋಟಿಗಟ್ಟಲೆ ಅಂಕಿಅಂಶಗಳನ್ನು ತೋರಿಸುವ ತಃಖ್ತೆಗಳು ಇಲಾಖೆಗಳ ಕಡತದಲ್ಲಿರುತ್ತದೆ. ಇದರೊಳಗೆ ಇಣುಕಿದರೆ 'ರೈತನ ಬದುಕು' ಸಮೃದ್ಧವಾಗಿದೆ! ಕೋಟಿ ಕೋಟಿಗಳ ಬ್ಯಾಲೆನ್ಸ್ಶೀಟ್ 'ಟ್ಯಾಲಿ'ಯಾಗಿರುತ್ತವೆ!
ದ.ಕ.ಜಿಲ್ಲೆಯ ಕೋಡಪದವಿನ ನಿಟಿಲೆ ಮಹಾಬಲೇಶ್ವರ ಭಟ್ಟರಲ್ಲಿಗೆ ಹೋಗಿದ್ದೆ. ಅವರ ತೋಟದಲ್ಲಿ ಪಿವಿಸಿ ಪೈಪ್ಗಳನ್ನು ಪೇರಿಸಿದ್ದರು. 'ಇದು ಕೃಷಿ ಇಲಾಖೆಯಿಂದ ಸಬ್ಸಿಡಿಯಲ್ಲಿ ಸಿಕ್ಕಿದ್ದು' ಎಂದರು. ನಮ್ಮ ಇಲಾಖೆಯಲ್ಲಿ ರೈತರಿಗೆ ಉಪಯೋಗವಾಗುವ ಎಷ್ಟೊಂದು ವ್ಯವಸ್ಥೆಗಳಿವೆ. ಎಷ್ಟು ಮಂದಿ ಬಳಸಿಕೊಳ್ಳುತ್ತಾರೆ? ಇಲಾಖೆಗಳ ಸಂಪರ್ಕವಿಟ್ಟುಕೊಂಡ ರೈತರಿಂದ ಕರ್ಣಾಕರ್ಣಿಕೆಯಾಗಿ ಸುದ್ದಿಗಳು ಹರಡಬೇಕೇ ವಿನಾ ಇಲಾಖೆಗಳು ಇದನ್ನು ತಿಳಿಸುವತ್ತ ಯಾಕೋ ಜಡವಾಗಿದೆ, ಬಡವಾಗಿದೆ.
ಕಚೇರಿಗಳಿಗೆ ರೈತ ಪ್ರವೇಶಿಸಿದರೆ ಸಾಕು, - 'ನಾಳೆ ಬಾ' ಸಂಸ್ಕೃತಿ ಎದುರಾಗುತ್ತದೆ. ದುಡಿದ ಹಣವೆಲ್ಲಾ ಬಸ್ಸಿಗೋ, ಕಾಣದ ಕೈಗೊ? ತಿಂಗಳುಗಟ್ಟಲೆ ಕಾದರೂ, ಕೆಲಸವನ್ನು ಪೂರೈಸಲಾಗದ ಅಸಹಾಯಕತೆ. ಹಾಗೆಂತ ಕೃಷಿಕನ ನಾಡೀಮಿಡಿತವನ್ನು ಅರಿತು, ರೈತರೊಂದಿಗೆ ವ್ಯವಹರಿಸುವ ಅಧಿಕಾರಿಗಳೂ ಇದ್ದಾರೆನ್ನಿ. ಇಂತವರ ಸೇವೆ ಎಲ್ಲೂ ದಾಖಲಾಗುವುದಿಲ್ಲ, ಪ್ರಕಟವಾಗುವುದೂ ಇಲ್ಲ.
ಒಂದು ದಿವಸ ಹಳ್ಳಿಯಿಂದ ಕೊತ್ತಂಬರಿ ಸೊಪ್ಪಾಗಲೀ, ಟೊಮೆಟೋ, ಆಲೂಗೆಡ್ಡೆ ಬಾರದಿದ್ದರೆ ಹೋಟೇಲುಗಳು, ಅಡುಗೆ ಮನೆಗಳ ಒಲೆ ಉರಿಯುವುದಿಲ್ಲ. ಭತ್ತ, ರಾಗಿಗಳು ನಗರ ಪ್ರವೇಶಿಸದಿದ್ದರೆ ಹಸಿದ ಹೊಟ್ಟೆಗೆ ತಂಪು ಬಟ್ಟೆಯೇ ಗತಿ.
ಇದನ್ನೆಲ್ಲಾ ಚಿಂತಿಸಿದರೆ ಆರಂಭದಲ್ಲಿ ಉಲ್ಲೇಖಿಸಿದ ಹೆಗ್ಡೆಯವರ 'ರೈತ ಜೀತದಾಳು' ಎಂಬ ಮಾತು ಹೆಚ್ಚು ಮಹತ್ವ ಪಡೆದುಕೊಳ್ಳುತ್ತದೆ. ರೈತ ಬೆಳೆಯುತ್ತಿರಲೇ ಬೇಕು, ಸಮಾಜಕ್ಕೆ ಪೂರೈಸುತ್ತಿರಲೇ ಬೇಕು. ಬೆಲೆ ಮಾತ್ರ ಹೆಚ್ಚು ಕೊಡಿ ಅಂತ ಕೇಳಬಾರದು. ಹಾಗಿದ್ದಾಗ ಮಾತ್ರ ಆತ ದೇಶದ ಬೆನ್ನೆಲುಬು!
ಅಡಿಕೆ, ತೆಂಗು, ಕಬ್ಬು.. ರೈತನನ್ನು ಸಾಕುವ ಬೆಳೆಗಳಿಗೆ ಉತ್ತಮ ಬೆಲೆ ಕೊಡಿ - ಇದು ರೈತನ ಬೇಡಿಕೆ. ಆದರೆ ದುರಂತ ನೋಡಿ, ಕೇಳಿದ್ದನ್ನು ನಮ್ಮ ದೊರೆಗಳು ಕೊಡರು, ಕೇಳದೇ ಇದ್ದಂತಹ 'ಬಿಟಿ ಬದನೆ'ಯನ್ನು ಬಲವಂತದಿಂದ ಕಿಟಕಿಯೊಳಗೆ ಹಾಕಿಯಾರು!
ವಿಜ್ಞಾನಿಗಳು ಸಂಶೋಧನೆ ಮಾಡಿದ್ದಾರಲ್ಲಾ. ಮತ್ಯಾಕೆ ವಿರೋಧ - ಫಕ್ಕನೆ ಮೂಡುವ ಪ್ರಶ್ನೆ. ನಮ್ಮ ಸಂಶೋಧನೆಗಳೆಲ್ಲಾ ಹೀಗೇನೆ. ಲ್ಯಾಬ್ ಟು ಲ್ಯಾಂಡ್ ಆಗುವುದೇ ಇಲ್ಲ. ರೈತರ ಹೊಲದಲ್ಲೇ ಪ್ರಾತ್ಯಕ್ಷಿಕೆ ನಡೆಯಲಿ. ವ್ಯವಹಾರಗಳೆಲ್ಲವೂ ಪಾರದರ್ಶಕವಾಗಿರಲಿ. ಆಗ ರೈತರಿಗೂ ನಂಬುಗೆ ಬರುತ್ತದೆ. ಆಗ ಬದನೆಯ ನಂಟು ಕಗ್ಗಂಟಾಗದು.
ರೈತ ಕೇಳುವುದಿಷ್ಟೇ - ನಮ್ಮ ಮಟ್ಟಿಗೆ ನಾವು ನೆಮ್ಮದಿಯಾಗಿದ್ದೇವೆ. ಭಯ ಹುಟ್ಟಿಸುವ ಯಾವುದೇ 'ಗುಮ್ಮ'ಗಳು ನಮ್ಮ ಅಂಗಳ ಪ್ರವೇಶಿಸದಂತೆ ನೋಡಿಕೊಂಡರೆ ಸಾಕು. ಇದು ನಾವು ಕೇಳುವ ಏಕೈಕ ಬೇಡಿಕೆ! ಹಾಗೆಂತ ನಾವೇನೂ ಅಭಿವೃದ್ಧಿಯ ವಿರೋಧಿಗಳಲ್ಲ.
Home › Unlabelled › ರೈತನು ಸಮಾಜದ ಜೀತದಾಳೇ!
0 comments:
Post a Comment