Tuesday, February 16, 2010

'ರೈತರ ಭಾಷೆಯಲ್ಲೇ ಮಾತಾಡಿ, ಅರ್ಥವಾಗುತ್ತೆ'

ಹಾಸನದ ಆಲೂರು ಸನಿಹದ 'ಪುಣ್ಯಭೂಮಿ'ಯಲ್ಲಿ ಜನವರಿ ಕೊನೆಯಲ್ಲಿ ಎರಡು ದಿವಸಗಳ ಜೈವಿಕ ಮೇಳ. ಮುನ್ನೂರಕ್ಕೂ ಮಿಕ್ಕಿ 'ಮಣ್ಣು ಮುಟ್ಟಿ ದುಡಿವ ರೈತರ' ಉಪಸ್ಥಿತಿ. 79ರ ಹಿರಿಯ ಗಂಗಯ್ಯ ರೆಡ್ಡಿ ಮಾತನಾಡುತ್ತಾ, 'ರೈತರು ಸಮಾಜದ ಜೀತದಾಳು. ಆತ ಎಷ್ಟು ಬೆಳೆದು ಸಮಾಜಕ್ಕೆ ಕೊಟ್ಟರೂ ತೃಪ್ತಿಯಿಲ್ಲ, ಪ್ರಶಂಸೆಯಿಲ್ಲ, ಗೌರವವಿಲ್ಲ' ಎಂದರು.

ಈ ಮಾತು ಬ್ಯಾಡರಹಳ್ಳಿಯ ರೈತ ರವಿಶಂಕರ್ರಿಗೆ ಪಥ್ಯವಾಗಲಿಲ್ಲ. 'ರೈತ ಹೇಂಗೆ ಜೀತದಾಳಾಗ್ತಾನೆ. ಅವ ದುಡಿಯೋದು ಅವನ ಹೊಟ್ಟೆಗಾಗಿ. ಸಮಾಜದ ಉದ್ದಾರಕ್ಕಲ್ಲ. ಹೀಂಗೆಲ್ಲಾ ಮಾತನಾಡಬಾರ್ದು' ಅಸಹನೆ ವ್ಯಕ್ತಪಡಿಸಿದರು. 'ನೀವು ನನ್ನಲ್ಲಿ ಹೇಳಿ ಪ್ರಯೋಜನವಿಲ್ಲ. ದಯವಿಟ್ಟು ವೇದಿಕೆಯಲ್ಲಿ ನಿಮ್ಮ ಭಾವನೆಯನ್ನು ಪ್ರಕಟಪಡಿಸಿ' ಎಂದಾಗ ಜಾಗ ಖಾಲಿ ಮಾಡಿದರು!

ಗಂಗಯ್ಯ ರೆಡ್ಡಿಯವರ ಮಾತಿನಲ್ಲಿ ಅರ್ಥವಿಲ್ವೇ? ಸಮಾಜವಿಂದು 'ರೈತರು ಬೆಳೆಯನ್ನು ಬೆಳೆದು ನಮಗೆ ಕೊಡಬೇಕು' ಅಂತ ಬಯಸುತ್ತದೆ. ಸರಿ, ಆದರೆ ಬೆಳೆದ ಬೆಳೆಗೆ ದರದ ವಿಚಾರ ಬಂದಾಗ, 'ಛೇ ಅಷ್ಟೊಂದು ಇದೆಯಾ, ಜಾಸ್ತಿಯಾಯಿತು. ಇಷ್ಟಕ್ಕೆ ಕೊಡು' ಅಂತ ವಶೀಲಿ. ಕೊನೆಗೆ 'ಮೂರು ಮುಕ್ಕಾಲು' ದರಕ್ಕೆ ಬೆಳೆಯ ಮಾರಾಟ.

ಪುಣ್ಯಭೂಮಿ ರೈತರಿಂದಲೇ ರೂಪಿತವಾದ ಸಂಸ್ಥೆ. ಇದರ ನಿರ್ದೇಶಕ ಡಾ.ವಿಜಯ ಅಂಗಡಿ. ಐದು ವರುಷಗಳಿಂದ ಜೈವಿಕ ಮೇಳವನ್ನು ಇತರ ಕೃಷಿಮೇಳಗಳಿಗಿಂತ ತುಸು ಭಿನ್ನವಾಗಿ ನಡೆಸುತ್ತಿದ್ದಾರೆ. ಇಲ್ಲಿ ರೈತರ ಭಾವನೆಗಳನ್ನು ತೆರೆದಿಡಲು ಮುಕ್ತ ಅವಕಾಶ. ಮಾಡಿದ ಕೃಷಿ ಸಾಧನೆಗಳನ್ನು ಹಂಚಿಕೊಳ್ಳಲು ವೇದಿಕೆ ಕಲ್ಪಿಸಿದೆ.

ರವಿಶಂಕರ್, ರೆಡ್ಡಿಯಂತಹ ಅನುಭವಿ ಕೃಷಿಕರಿಗೆ ಇಲ್ಲಿ ಮಣೆ. 'ಬೇಕು-ಬೇಡ'ಗಳ ಕುರಿತ ಮಾತುಕತೆಯಲ್ಲಿ ಪುಣ್ಯಭೂಮಿ ಹೆಚ್ಚು ಆಸಕ್ತಿ. ಇಲ್ಲಿ ಯಾವುದೇ ಮೆರವಣಿಗೆಯಿಲ್ಲ, ತಾಸುಗಟ್ಟಲೆ ಉದ್ಘಾಟನಾ ಸಮಾರಂಭವಿಲ್ಲ. ಸಮಾರೋಪ ಭಾಷಣವಿಲ್ಲ, ಪ್ರಬಂಧ ಮಂಡನೆಯಿಲ್ಲ.

ಒಮ್ಮೆ ಸಮಾರಂಭ ಶುರುವಾಯಿತೆಂದರೆ, ಮುಗಿಯುವುದು ಸೂರ್ಯಾಸ್ತಕ್ಕೆ! ಮಧ್ಯದಲ್ಲೆಲ್ಲೂ ಬ್ರೇಕ್ ಇಲ್ಲ. ನಿರಂತರ ಏಳೆಂಟು ಗಂಟೆ ಮಾಹಿತಿ ವಿನಿಮಯ. ಒಬ್ಬರು ಮಾತನಾಡಿದ ಬಳಿಕ ಅವರು ನಿರ್ಗಮಿಸುತ್ತಾರೆ. ಆ ಸ್ಥಾನ ಇನ್ನೊಬ್ಬ ಸಂಪನ್ಮೂಲ ವ್ಯಕ್ತಿಗೆ! ಭೋಜನಕ್ಕೆ ಪ್ರತ್ಯೇಕ ಸಮಯವಿಲ್ಲ. ಸಭಾಭವನ ಖಾಲಿಯಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ಪ್ರೇಕ್ಷಕರದ್ದು.
ಮೇಳಕ್ಕೆ ಇಲಾಖೆಗಳು ಕೈಜೋಡಿಸಿವೆ. ಹಾಗಾಗಿ ಅವುಗಳಿಗೆ ಸ್ವಲ್ಪ ವಿಶೇಷ ಆತಿಥ್ಯ, ಗೌರವ! 'ಎಂ ವಿಟಾಮಿನ್' ಬೇಕಲ್ವಾ ನಗೆಯಾಡುತ್ತಾರೆ ಅಂಗಡಿ.

ಸಮಾರಂಭ ಪೂರ್ತಿ ಆವರಿಸುವಷ್ಟು ಅಂಗಡಿಯವರ ನಿರ್ವಹಣೆ! ರೈತರೂ ಒಪ್ಪಿದ್ದಾರೆ ಬಿಡಿ. ಕಲಾಪದ ಮಧ್ಯೆ ಕ್ವಿಜ್, ಪುಣ್ಯಭೂಮಿಯ ಕೆಲಸ, ರೈತರು ಬೆಳೆದ ರೀತಿ, ಅವರ ಬದುಕಿನ ರೀತಿಗಳು ಬಿತ್ತರ.

ಮೇಳದಲ್ಲಿ ರೈತ ಸಾಧಕರಿಗೆ ಸಂಮಾನ, ಪರಿಸರ ಪ್ರಶಸ್ತಿ ಪ್ರದಾನ ಹೆಚ್ಚು ಆಕರ್ಷಕ. ಪ್ರಶಸ್ತಿ ಪುರಸ್ಕೃತರ ಮನೆಯ ಎಲ್ಲಾ ಸದಸ್ಯರ ಉಪಸ್ಥಿತಿ ಕಡ್ಡಾಯ. ಸಂಮಾನದ ಸಮಯದಲ್ಲಿ ಅವರ ಸಾಧನೆಯನ್ನು ಸ್ವಾರಸ್ಯವಾಗಿ ವಿಜಯ ಅಂಗಡಿಯವರೇ ವಿವರಿಸುತ್ತಾರೆ. ಕುಟುಂಬದ ಎಲ್ಲಾ ಸದಸ್ಯರ ಪರಿಚಯದೊಂದಿಗೆ ಸಂಮಾನ. ಇವೆಲ್ಲಾ ನಡೆಯುವುದು ವೇದಿಕೆಯ ಮುಂಭಾಗದಲ್ಲಿ. ಸಂಮಾನದ ಹೊತ್ತಿಗೆ ವೇದಿಕೆಯಿಂದ ಗಣ್ಯರು ಕೆಳಗಿಳಿದು ಸಂಮಾನ ಮಾಡುತ್ತಾರೆ.

ಗಂಧದ ಹಾರವೆಂದು ಯಾವುದೋ ಮರದ ಕೆತ್ತೆಯಿಂದ ತಯಾರಿಸಿದ ಹಾರಗಳು ಇಲ್ಲಿ ವಜ್ರ್ಯ. ಬಿಸಿಲಿಗೆ ಬಾಡದ, ಮಳೆಗೆ ಒದ್ದೆಯಾಗದ ರೇಷ್ಮೆ ಗೂಡಿನ ಹಾರದ ಬಳಕೆ. ಸ್ಮರಣಿಕೆ ಏನು ಗೊತ್ತೇ? ಮನೆ ಬಳಕೆಯ ಅರಶಿನ, ಏಲಕ್ಕಿ, ಚಕ್ಕೆ, ದಾಲ್ಚಿನ್ನಿ ಇವುಗಳ ಸುಂದರ ಪೊಟ್ಟಣ. 'ಇಲ್ಲಿ ಕೊಡುವ ವಸ್ತುಗಳು ಮನೆಬಳಕೆಗೆ ಪೂರಕವಾಗಿರಬೇಕು. ಅಡುಗೆ ಮನೆ ಸೇರಬೇಕು. ಸಂಮಾನಿತರಿಗೆ ಒಯ್ಯಲು ಭಾರವಾಗಿಬಾರದು' ಎನ್ನುತ್ತಾರೆ ಅಂಗಡಿ.

ಡಾ.ಅಂಗಡಿಯವರು ಹಾಸನ ಆಕಾಶವಾಣಿಯಲ್ಲಿ ಕೃಷಿರಂಗ ನಿರ್ವಾಹಕರು. ಬಹುತೇಕ ರೈತರನ್ನು ಆಕಾಶವಾಣಿಯ ತೆಕ್ಕೆಗೆ ಕರೆಸಿಕೊಂಡವರು. ಈ ಭಾಗದಲ್ಲಿ ರೇಡಿಯೋ ಕೇಳುಗರೇ ಸೃಷ್ಟಿಯಾಗಿದ್ದಾರೆ. 'ರಾಷ್ಟ್ರಗೀತೆಯನ್ನು ನಾನು ಎಷ್ಟು ಗೌರವಿಸುತ್ತೇನೋ, ರೇಡಿಯೋವನ್ನೂ ಅಷ್ಟೇ ಗೌರವಿಸುತ್ತೇನೆ' ಎನ್ನುವ ಬೈರಾಪುರದ ಕೃಷಿಕ ಹರಿಂಜಯರ ಮಾತು ರೇಡಿಯೋ ಬಳಕೆಯ ಗಾಢತೆಯನ್ನು ಸಾರುತ್ತದೆ.

'ನೋಡ್ರಿ. ಬೆಳಗ್ಗೆ, ಸಂಜೆ ಕೃಷಿ ಕಾರ್ಯಕ್ರಮ ಕೇಳಿಯೇ ಮಿಕ್ಕುಳಿದ ಕೆಲಸ' ಹೊಳೆನರಸಿಪುರದ ಪುಟ್ಟಪ್ಪರೂ ದನಿಸೇರಿಸುತ್ತಾರೆ. ಹೀಗೆ ಪುಣ್ಯಭೂಮಿಯ ಹಿಂದೆ ರೇಡಿಯೋ ಸಾಕಷ್ಟು ಕೆಲಸ ಮಾಡಿದೆ. ಸಂಪನ್ಮೂಲ ವ್ಯಕ್ತಿಗಳು ರೂಪಿತಗೊಂಡಿದ್ದಾರೆ.
ಜೈವಿಕ ಮೇಳಕ್ಕೆ ನೂರು ರೂಪಾಯಿ ಪ್ರವೇಶ ಶುಲ್ಕ. ಇದರಲ್ಲಿ ಐವತ್ತು ರೂಪಾಯಿಯ ವಸ್ತುಗಳನ್ನು ಉಚಿತವಾಗಿ ಖರೀದಿಸುವ ಸೌಲಭ್ಯ. ಸಾವಯವ ಅಕ್ಕಿ, ಬೆಲ್ಲ.. ಹೀಗೆ. ಮಿಕ್ಕುಳಿದ ಐವತ್ತು ರೂಪಾಯಿ ಮೇಳದ ವೆಚ್ಚಕ್ಕೆ. ಅಂಗಡಿಯವರ 'ಜಾಣ್ಮೆ' ಲೆಕ್ಕಾಚಾರಕ್ಕೆ ಭಲೇ!

ಬೈರಾಪುರದ ಬಿ.ಎಂ.ಹರಿಂಜಯ ರಾಗಿಕಲ್ಲಿಗೆ ಮರುಜೀವ ನೀಡಿದ್ದಾರೆ. ರಾಗಿ ಬೀಸುವ ಕಲ್ಲುಗಳು ಮೂಲೆ ಸೇರಿವೆ. ಕಲ್ಲನ್ನು ತಿರುಗಿಸಲು ಸುಲಭವಾಗುವಂತೆ ಬೇರಿಂಗ್ ಬಳಸಿದ್ದಾರೆ. ಇದರಿಂದಾಗಿ ರಟ್ಟೆ ನೋವಾಗದು. ಈ ಚಿಕ್ಕ ಆವಿಷ್ಕಾರದಿಂದಾಗಿ ಈ ಭಾಗದಲ್ಲಿ ರಾಗಿಕಲ್ಲು ತಿರುಗಲು ಶುರುವಾಗಿದೆಯಂತೆ!

'ಮೂವತ್ತು ವರುಷದಿಂದ ನಮ್ಮಲ್ಲಿ ರಾಜಮುಡಿ ಭತ್ತ ಮರುಬಳಕೆಯಾಗುತ್ತಲೇ ಇದೆ. ಈಗಲೂ ನಮ್ಮ ಮನೆಯಲ್ಲಿ ಮಣ್ಣಿನ ಪಾತ್ರೆಯಲ್ಲೇ ಅಡುಗೆ. ಇದರಲ್ಲಿ ಉಂಡ ನನಗೆ ಬೇರೆ ಪಾತ್ರೆಯಲ್ಲಿ ಬೇಯಿಸಿದ ಅನ್ನ ರುಚಿಸುವುದಿಲ್ಲ' ಎನ್ನುವ ಬ್ಯಾಡರಹಳ್ಳಿ ರವಿಶಂಕರ್; 'ನಮ್ಮ ಹೊಲಗಳು ಸಾವಯವವಾಗಿದೆ. ಆದರೆ ಅಡುಗೆ ಮನೆಗಳು ಆಗಿಲ್ಲ' ಎನ್ನುತ್ತಾರೆ ಸವಣೂರಿನ ರಾಜಶೇಖರ ಸಿಂಧೂರು.

ದೊಡ್ಡ ದೊಡ್ಡ ಗೋಷ್ಠಿಗಳು ರೈತರನ್ನು ತಲಪುವುದಿಲ್ಲ. 'ರೈತರ ಭಾಷೆಯಲ್ಲೇ ಮಾತನಾಡಿ. ಅವರಿಗೆ ಅರ್ಥವಾಗುತ್ತದೆ' ಸಾವಯವ ಪ್ರತಿಪಾದಕ ನಾರಾಯಣ ರೆಡ್ಡಿಯವರ ಮಾತು - ಎರಡೂ ದಿವಸದ ಜೈವಿಕ ಮೇಳದಲ್ಲಿ ಅನಾವರಣಗೊಂಡಿದೆ.

ಪುಣ್ಯಭೂಮಿಯು ಪರಿಸರಕ್ಕೆ ಒತ್ತು ಕೊಡುವುದರಿಂದ, ಪ್ಲಾಸ್ಟಿಕ್ ಬಳಕೆಯನ್ನು ಸಾಧ್ಯವಾದಷ್ಟೂ ಕಡಿಮೆಗೊಳಿಸಬಹುದು. ಜವಾಬ್ದಾರಿಗಳನ್ನು ಇನ್ನಷ್ಟು ಹಂಚಿಕೊಂಡರೆ ನಿರ್ದೇಶಕರ ಭಾರ ಹಗುರ. ಸಾಧ್ಯವಾದಷ್ಟೂ ರೈತರ ಮಾತುಗಳಿಗೆ ಅವಕಾಶ ಕೊಡುವುದೊಳ್ಳಿತು.

0 comments:

Post a Comment