Tuesday, December 25, 2012

ಕಜೆ ಮನೆಯಲ್ಲಿ 'ಬಲು ಉಪಕಾರಿ ಗಡ್ಡೆ ತರಕಾರಿ'             ಬಂಟ್ವಾಳ ತಾಲೂಕಿನ ಮಂಚಿಯ ಕಜೆ ರಾಮಕೃಷ್ಣ ಭಟ್, ಕುಂಭಕೋಡಿ ಇವರ ಮನೆಯಂಗಳದಲ್ಲಿ ದಶಂಬರ 25ರಂದು ಗಡ್ಡೆತರಕಾರಿ ಹಬ್ಬ. ಅಂಗಳವಿಡೀ ಗಡ್ಡೆಗಳ ಪ್ರದರ್ಶನ. ಮರೆತುಹೋದ, ಮರೆಯಾಗುತ್ತಿರುವ, ಬಳಕೆಯಲ್ಲಿಲ್ಲದ ಹಲವಾರು ಗಡ್ಡೆಗಳು ನೆಲದಿಂದ ಮೇಲೆದ್ದು ಬಂದಿದ್ದುವು! ಇನ್ನೂರಕ್ಕೂ ಮಿಕ್ಕಿ ಆಸಕ್ತ ಕೃಷಿಕರ ಉಪಸ್ಥಿತಿ. ಹಲಸು ಸ್ನೇಹಿ ಕೂಟದ ಆಯೋಜನೆ.

ಉದ್ಘಾಟನೆ :            ರೈತರಿರಲ್ಲಿ ಜಮೀನು, ನೀರು, ಉತ್ಸಾಹ ಇವಿಷ್ಟಿದ್ದರೆ ತರಕಾರಿಯಲ್ಲಿ ಹೇಗೆ ಸುರಕ್ಷತೆ ತಂದುಕೊಳ್ಳಬಹುದು, ಹೆಚ್ಚು ಶ್ರಮ ಹಾಕದೆ ಬೆಳೆಯವ ತರಕಾರಿಗಳ ಕೃಷಿ ಕ್ರಮ ಮತ್ತು ಕರಾವಳಿ ಭಾಗಕ್ಕೆ ಹೊಂದಿಕೊಳ್ಳುವ, ಸುಲಭವಾಗಿ ಬೆಳೆದುಕೊಳ್ಳಬಹುದಾದ ರೈತರ ಅನುಭವಾಧಾರದ ಕೃಷಿಕ್ರಮದ ಹಿನ್ನೆಲೆಯಲ್ಲಿ ರೈತರದ್ದೇ ಪ್ಯಾಕೇಜ್ ಆಫ್ ಪ್ರಾಕ್ಟೀಸ್ ರೂಪುಗೊಳ್ಳಬೇಕು ಎಂದು ಹಿರಿಯ ಪತ್ರಕರ್ತ ಶ್ರೀ ಪಡ್ರೆ ಹೇಳಿದರು.

            ಅವರು 'ಬಲು ಉಪಕಾರಿ ಗಡ್ಡೆ ತರಕಾರಿ' ಎಂಬ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ, 'ಅಂತರ್ಜಾಲವನ್ನು ಬಳಸುವಂತಹ ಅಭ್ಯಾಸ ಈಗೀಗ ಹೆಚ್ಚಾಗುತ್ತದೆ. ಕೃಷಿ, ಮಾರುಕಟ್ಟೆಯಂತಹ ವಿಚಾರಗಳಿಗೆ ಅಂತರ್ಜಾಲದ ಸಹಾಯ ಪಡೆಯುವಂತಹ ವ್ಯವಸ್ಥೆ ರೂಪಿತವಾಗಬೇಕು' ಎಂದು ಆಶಿಸಿದರು.

            ಸಮಾರಂಭದ ಅಧ್ಯಕ್ಷತೆಯನ್ನು ಹಿರಿಯ ಕೃಷಿಕ ಕೊಲ್ಲರಮಜಲು ಶಂಕರ ಭಟ್ ವಹಿಸಿ, 'ಮನೆ ನೆಮ್ಮದಿಯ ತಾಣವಾಗಬೇಕು. ಅದಕ್ಕೆ ಪೂರಕವಾದ ವಿಷ ರಹಿತ ಆಹಾರ ಸೇವನೆಯನ್ನು ಬದುಕಿನಲ್ಲಿ ರೂಢಿಸಿಕೊಳ್ಳಬೇಕು. ಅಸಡ್ಡೆಯಿಂದ ಗಡ್ಡೆ ಅಜ್ಞಾತವಾಗಿದೆ. ಅದನ್ನು ಮರಳಿ ಬಳಸುವಂತಾಗಬೇಕು' ಎಂದರು. ಈ ಸಂದರ್ಭದಲ್ಲಿ ಅಡಿಕೆ ಪತ್ರಿಕೆಯ ಬೆಳ್ಳಿವರ್ಷದ ಮೂರನೇ ಸಂಚಿಕೆಯನ್ನು ಅಶೋಕವರ್ಧನ ಅತ್ರಿ ಅನಾವರಣಗೊಳಿಸಿದರು. ಶ್ರೀಲತಾ ಎಪಿಸಿ ಅವರ ಪ್ರಾರ್ಥನೆಯೊಂದಿಗೆ ಆರಂಭಗೊಂಡ ಕಾರ್ಯಕ್ರಮವನ್ನು ಶಿಲ್ಪಾ ಕಜೆ ನಿರ್ವಹಿಸಿದರು. ಜಯಲಕ್ಷ್ಮೀ ಭಟ್ ಸ್ವಾಗತಿಸಿದರು. ಹಲಸು ಸ್ನೇಹಿ ಕೂಟದ ವೆಂಕಟಕೃಷ್ಣ ಶರ್ಮ ಮುಳಿಯ ಪ್ರಸ್ತಾವನೆ ಮಾಡಿದರು. ವೇದಿಕೆಯಲ್ಲಿ ರಾಮಕೃಷ್ಣ ಭಟ್ಟರು ಉಪಸ್ಥಿತರಿದ್ದರು.

ಮಾತುಕತೆ :             ಗಡ್ಡೆ ತರಕಾರಿ ಕೃಷಿಯ ಕುರಿತು ಅನಿಲ್ ಬಳೆಂಜ ಮತ್ತು ಶಿವಕುಮಾರ್ ಮಡಿಕೇರಿ ಅನುಭವ ಹಂಚಿಕೊಂಡರು. ಗಡ್ಡೆಗಳ ಬಳಕೆ ಮತ್ತು ಉಪಯೋಗದ ಕುರಿತು ಹಿರಿಯ ಕೃಷಿಕ ಡಾ.ಕೆ.ಎಸ್.ಕಾಮತ್ ಕರಿಂಗಾಣ ಮತ್ತು ಮೈಸೂರಿನ ಸಾವಯವ ಕೃಷಿಕ ಎ.ಪಿ.ಚಂದ್ರಶೇಖರ್ ಮಾತನಾಡಿದರು. ಗಡ್ಡೆಗಳ ಔಷಧೀಯ ಗುಣಗಳ ಕುರಿತು ಪಾಣಾಜೆಯ ವೆಂಕಟ್ರಾಮ ದೈತೋಟ ಮತ್ತು ಜಯಲಕ್ಷ್ಮೀ ವಿ ದೈತೋಟ ಸವಿವರವಾದ ಮಾಹಿತಿ ನೀಡಿದರು.

ಸಮಾರೋಪ            ಕೃಷಿಕ ರಾಮ್ ಕಿಶೋರ್ ಮಂಚಿ ಇವರಿಂದ ಸಮಾರೋಪ ಭಾಷಣ ಮಾಡುತ್ತಾ, ಗಡ್ಡೆಗಳ ಬಳಕೆ ನಮಗೆ ಮರೆತುಹೋಗಿದೆ. ವೈವಿಧ್ಯಮಯವಾದ ಅಡುಗೆ ತಯಾರಿಸಬಹುದೆನ್ನುವುದು ಹಬ್ಬದಿಂದ ವಿಶ್ವಾಸ ಮೂಡಿದೆ. ಪ್ರಕೃತಿಯೇ ಇಂತಹ ಕಾರ್ಯಕ್ರಮಗಳನ್ನು ಮಾಡಿಸುತ್ತಿದೆ ಎನ್ನುವುದು ಅತಿಶಯವಲ್ಲ ಎಂದರು.

           ನಳಿನಿ ಮಾಯಿಲಂಕೋಡಿಯವರು ಅನಿಸಿಕೆ ವ್ಯಕ್ತಪಡಿಸಿದರು. ನಾ. ಕಾರಂತ ಪೆರಾಜೆ ಇವರ ಗೌರವ ಸಂಪಾದಕತ್ವದ ಹಲಸು ಸ್ನೇಹಿ ಕೂಟದ ಮುಖವಾಣಿ ವಾರ್ತಾಪತ್ರವನ್ನು ಕೋನಡ್ಕ ಗೌರಿ ಕೆ.ಪಿ.ಭಟ್ ಅನಾವರಣಗೊಳಿಸಿದರು. ಅತಿಥೇಯರಾದ ವಸಂತ ಕಜೆ ವಂದಿಸಿದರು. ಮಧ್ಯಾಹ್ನ ಗಡ್ಡೆ ತರಕಾರಿಗಳಿಂದಲೇ ತಯಾರಿಸಿದ ಅಡುಗೆ ಹಬ್ಬದ ಔಚಿತ್ಯಕ್ಕೆ ಸಾಕ್ಷಿಯಾಯಿತು. ವಿವಿಧ ಗಡ್ಡೆಗಳ ಪ್ರದರ್ಶನವಿದ್ದುವು. ವರ್ಮುಡಿ ಶಿವಪ್ರಸಾದ್, ನಾರಾಯಣ ಕಾರಂತ ವಿವಿಧ ಕಲಾಪಗಳನ್ನು ನಿರ್ವಹಿಸಿದರು. ಹಳ್ಳಿ ಮನೆಯಂಗಳದಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ನೂರಾರು ಮಂದಿ ಭಾಗವಹಿಸಿದರುವುದು ಗಮನಾರ್ಹ.

Saturday, December 15, 2012

ಕಡಲಾಚೆಯಿಂದ ಬಂದರು, ಸುರಂಗ ಹೊಕ್ಕರು!

              ಸುರಂಗ - ನೆಲದಾಳದ ಹೊಂಡವಲ್ಲ. ಭೂಮಿಯನ್ನು ಪಾತಾಳಕ್ಕೆ ಕೊರೆದ ರಚನೆಯಲ್ಲ. ಇದು ಗುಡ್ಡಕ್ಕೆ ಕನ್ನ ಕೊರೆದು ನೀರಿಗಾಗಿ ಮಾಡಿಕೊಂಡ ರಚನೆ. ಅವಕ್ಕೆ ಶತಮಾನಗಳ ಇತಿಹಾಸ. ಬೆಟ್ಟಗಳ ಮಧ್ಯೆ ಮನೆ, ತೋಟ ಮಾಡಿಕೊಂಡವರಿಗೆ ಬಾವಿ, ಕೆರೆಗಳ ಸಂಪನ್ಮೂಲ ತ್ರಾಸ. ಗುಡ್ಡ ಕೊರೆದು ನೀರಿನ ನಿಧಿಯನ್ನು ಹುಡುಕುವುದೊಂದೇ ದಾರಿ.
ಕೊಂಕಣ ರೈಲು ಹಾಗೂ ಮಂಗಳೂರು-ಬೆಂಗಳೂರು ರೈಲಿನಲ್ಲಿ ಹಗಲು ಪ್ರಯಾಣಿಸಿದವರಿಗೆ  ಸುರಂಗ ಗೊತ್ತು! ಗುಡ್ಡವನ್ನು ಕೊರೆದು ಮಾಡಿದ ಮಾರ್ಗದಲ್ಲಿ ರೈಲು ಓಡುವಾಗ ಸಿಗುವ ಅನುಭವ. ಒಂದು ಕಡೆ ಹೊಕ್ಕು ಮತ್ತೊಂದು ಕಡೆ ಹೊರಬರಬಹುದು. ಆದರೆ ನೀರಿಗಾಗಿ ಮಾಡಿದ ಸುರಂಗದಲ್ಲಿ ಹೊಕ್ಕು ಹೊರ ಬರುವ ವ್ಯವಸ್ಥೆಯಿಲ್ಲ. ಹೊಕ್ಕ ದಾರಿಯಲ್ಲಿ ಮರುಪ್ರಯಾಣ!

               ಬಂಟ್ವಾಳ ತಾಲೂಕಿನ ಮಾಣಿಮೂಲೆ ಅಚ್ಯುತ ಭಟ್ಟರ ಭೂಮಿಯಲ್ಲಿ ಇಪ್ಪತ್ತು ಸುರಂಗಗಳಿವೆ. ಇವುಗಳ ನೀರು ಅವರ ಆರೆಕ್ರೆ ಭೂಮಿಗೆ ಜಲನಿಧಿ. ಕರಾವಳಿಯಿಂದ ಕೇರಳ ಕಾಞಂಗಾಡ್ ವರೆಗೆ ಏನಿಲ್ಲವೆಂದರೂ ಆರು ಸಾವಿರಕ್ಕೂ ಮಿಕ್ಕಿ ಸುರಂಗಗಳಿವೆ! ಕುಡಿನೀರು ಮತ್ತು ಕೃಷಿ ಬಳಕೆಗಾಗಿ.

               ಹಿರಿಯರು ನೀರಿಗಾಗಿ ಕಂಡುಕೊಂಡ ಜಾಣ್ಮೆಗಳಿವು. ಆಧುನಿಕ ವ್ಯವಸ್ಥೆಗಳು ಹೆಜ್ಜೆಯಿಡುವ ಮೊದಲೇ ಸುರಂಗಗಳು ಬೆವರಿನ ಶ್ರಮದಿಂದ ರಚನೆಯಾಗಿರುವುದು ಒಂದು ಕಾಲಘಟ್ಟದ ವೃತ್ತಿ ಸುಭಗತನ. ಮಣ್ಣುಮಾಂದಿ ಯಂತ್ರಗಳಿಲ್ಲ, ಹೊಂಡ ತೋಡಲು ಕೊರೆಯಂತ್ರಗಳಿಲ್ಲ. ಎಲ್ಲವೂ ಹಾರೆ, ಪಿಕ್ಕಾಸಿಗಳ ಅಗೆತ. ಕೊರೆಯುತ್ತಾ ಒಳಗೆ ಸರಿದಂತೆ ಮಣ್ಣನ್ನು ಹೊರಗೆ ಹಾಕುವ ಗ್ರಾಮೀಣ ಜಾಣ್ಮೆ. ಹಳೆಯ ಒಂದೊಂದು ಸುರಂಗಗಳ ಮುಂದೆ ನಮ್ಮ ಆಧುನಿಕ ವ್ಯವಸ್ಥೆಯು ನಾಚುತ್ತದೆ!

ಸುರಂಗ ತಪಾಸಣೆ!

          ಇಂಗ್ಲೆಂಡಿನ ಹೇಟ್ಫೋರ್ಡ ಶೈರ್ ಯೂನಿವರ್ಸಿಟಿಯ ಹಿರಿಯ ಉಪನ್ಯಾಸಕ ಡಾ.ಡಾರೆನ್ ಕ್ರೋಕ್ ಹಾಗೂ ಸ್ಕಾಟ್ಲೇಂಡಿನ ಉಪನ್ಯಾಸಕ ರಿಚರ್ಡ್  ಜೋನ್ಸ್ ಸುರಂಗಗಳ ಪರಿಶೀಲನೆಗಾಗಿ ಮಾಣಿಮೂಲೆಗೆ ಬಂದರು. ಒಂದು ವಾರ ಅಧ್ಯಯನ ಮಾಡಿದರು. ಪಡ್ರೆ, ಕರೋಪಾಡಿ, ಪುಣಚ, ಎಣ್ಮಕಜೆ, ಕೇಪು, ಬಾಯಾರು, ಅಳಿಕೆ, ಕಾಸರಗೋಡು, ಕಾಞಂಗಾಡು ಸೇರಿದಂತೆ ಮುನ್ನೂರು ಕೃಷಿಕರ ಕುಟುಂಬಗಳ ಭೂಮಿಯಲ್ಲಿರುವ ಸುರಂಗದ ಒಳಹೊಕ್ಕರು.
         
             ಒಳಗಿರುವ ನೀರು-ಮಣ್ಣಿನ ಗುಣಮಟ್ಟಗಳ ಪರೀಕ್ಷೆ, ಪರಿಸರದ ಮೇಲೆ ಪರಿಣಾಮ, ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ನೀರನ್ನು ಹೇಗೆ ಪಡೆಯಬಹುದು.. ಮುಂತಾದ ಕಾರ್ಯಹೂರಣವನ್ನಿಟ್ಟುಕೊಂಡ ತಂಡವು ಏನಿಲ್ಲವೆಂದರೂ ಒಂದು ಸಾವಿರಕ್ಕೂ ಮಿಕ್ಕಿ ಸುರಂಗಗಳನ್ನು ವೀಕ್ಷಿಸಿದ್ದಾರೆ. ಅಧ್ಯಯನ ಮಾಡಿದ್ದಾರೆ. 'ವಿದೇಶದಲ್ಲಿ ಈ ರೀತಿಯ ಸುರಂಗಗಳಿಲ್ಲ. ಇಲ್ಲಿನ ಸುರಂಗ ಜ್ಞಾನವನ್ನು ದಾಖಲಿಸುವುದೇ ಮುಖ್ಯ ಉದ್ದೇಶ' ಎನ್ನುತ್ತಾರೆ ಡಾ.ಡಾರೆನ್ ಕ್ರೋಕ್.

          ತಂಡವು ಪ್ರವಾಸ ಹೋದೆಡೆ ಹಲವು ದಶಕ ದಾಟಿದ ಸುರಂಗಗಳ ಪತ್ತೆ. ಬಾಯಾರು ಒಂದೆಡೆ ನೂರಡಿಗೂ ಮಿಕ್ಕಿದ ಸುರಂಗಗಳು. ಅದರೊಳಗೆ ಹೋದ ತಂಡಕ್ಕೆ ಗೋಚರವಾದುದು ನೂರು ಮಂದಿ ಕುಳಿತುಕೊಳ್ಳಬಹುದಾದಷ್ಟು ದೊಡ್ಡ ಗುಹೆ! ಆರಿಂಚು ನೀರು. ನೂರಡಿ ಕೊರೆದ ಬಳಿಕ ಸುರಂಗದ ಪಥವನ್ನು ಬದಲಿಸಲು ಗುಹೆಯ ರೀತಿಯಲ್ಲಿ ಹಿರಿಯರು ಕೊರೆದಿರಬಹುದು, ಸುರಂಗದ ರಚನೆಯಲ್ಲಿ ಹೇಳುವಂತಹ ವ್ಯತ್ಯಾಸವಿಲ್ಲ, ಕೆಲವೆಡೆ ಒಳಗೆ ಎರಡು ಮೂರು ಕವಲುಗಳ ಉಪಸುರಂಗಗಳೂ ಪತ್ತೆಯಾದುವು ಎನ್ನುತ್ತಾರೆ ಮಾಣಿಮೂಲೆ ಗೋವಿಂದ ಭಟ್ಟರು.

          ಪೆರ್ಲದ ಸಾಯ ರುಕ್ಮ ನಾಯಕರಲ್ಲಿರುವ ಸುಮಾರು ಮೂವತ್ತು ವರುಷದ ಸುರಂಗದ ನೀರು ಕುಡಿದರೆ ಸಾಕು, ವಾಂತಿ ಆಗುತ್ತದಂತೆ! ಬಹುಶಃ ನೀರಿನಲ್ಲಿ ಯಾವುದೋ ರಾಸಾಯನಿಕ ಅಂಶ ಪ್ರಬಲವಾಗಿರಬಹುದು ಎಂಬ ಊಹೆ. ಅಚ್ಯುತ ಭಟ್ಟರ ಅನುಭವ ನೋಡಿ. 'ಸುರಂಗದ ನೀರಿಗಿಂತ ಶ್ರೇಷ್ಠವಾದ ಮತ್ತು ಶುದ್ಧವಾದ ನೀರು ಬೇರೆಡೆ ಸಿಗಲು ಕಷ್ಟ. ಧೈರ್ಯವಾಗಿ ನೇರವಾಗಿ ಬಳಸಬಹುದು.'

          ಎರಡು ವರುಷದ ಹಿಂದೆ ಹೇಟ್ಫೋಡರ್ ಶೈರ್ ವಿವಿಯ ಎಂ.ಎಸ್. ವಿದ್ಯಾರ್ಥಿ ಸುಧೀರ್ಚಂದ್ರ ತ್ರಿಪಾಠಿ  'ನೀರು ಮತ್ತು ಪರಿಸರ' ಅಧ್ಯಯನಕ್ಕಾಗಿ ಸುರಂಗವನ್ನು ಆಯ್ಕೆ ಮಾಡಿಕೊಂಡಿದ್ದರು. ಇವರು ನೈನಿತಾಲಿನವರು.  ಹಿರಿಯ ಪತ್ರಕರ್ತ ಶ್ರೀ ಪಡ್ರೆಯವರ ಸುರಂಗದ ಬಗ್ಗೆ ಬರೆದ ಲೇಖನಗಳು ಜಾಲತಾಣದಲ್ಲಿ ಪತ್ತೆ. ಇದು ತ್ರಿಪಾಠಿಗೆ ಸ್ಫೂರ್ತಿಯಾಗಿತ್ತು. ಮಾಣಿಮೂಲೆ ಮನೆಯಲ್ಲಿದ್ದುಕೊಂಡು ಹಗಲು ಹೊತ್ತಲ್ಲಿ ಸುರಂಗದೊಳಗಿದ್ದು, ಅಧ್ಯಯನ ಕೈಗೊಂಡು ವರಿಷ್ಠರಿಗೆ ವರದಿ ಸಲ್ಲಿಸಿದ್ದರು.  'ಸುರಂಗದ ನೀರು ಮಿನರಲ್ ವಾಟರಿಗಿಂತಲೂ ವಿಶ್ವಾಸಾರ್ಹ. ಇದನ್ನು ನೇರವಾಗಿ ಬಾಟಲಿಯಲ್ಲಿ ತುಂಬಿ ಮಾರಬಹುದು!' ಎಂದಿದ್ದರು. ಅಧ್ಯಯನ ವರದಿಯ ಸತ್ಯಾಸತ್ಯತೆಗೆ ಉಪನ್ಯಾಸ ತಂಡವು ಕಡಲನ್ನು ಹಾರಿ ಕರಾವಳಿ-ಕೇರಳಕ್ಕೆ ಬರಬೇಕೆ!

          'ಸುರಂಗಗಳು ಒಂದಕ್ಕಿಂತ ಒಂದು ಭಿನ್ನ. ಇತಿಹಾಸವೂ ಕೂಡಾ ಭಿನ್ನವಾಗಿದೆ. ಭಾರತದ ಕೃಷಿ ಪದ್ಧತಿಯಲ್ಲಿ ಸುರಂಗದ ನೀರನ್ನು ಬಳಸುತ್ತಾರೆ ಎನ್ನುವುದು ಇಲ್ಲಿಗೆ ಬಂದ ಮೇಲೆ ಮನದಟ್ಟಾಯಿತು. ಇವೆಲ್ಲವುಗಳ ಕುರಿತು ದಾಖಲಾತಿ ಆಗಬೇಕಾಗಿದೆ. ಭವಿಷ್ಯದ ನೀರಿನ ನೆಮ್ಮದಿಗೆ ಇಂತಹ ದಾಖಲಾತಿಗಳು ಪೂರಕ' ಎನ್ನುವುದು ಡಾ. ಡಾರೆನ್ ಅಭಿಮತ.

ಸುರಂಗ ವಿಜ್ಞಾನಿ

          ಬಂಟ್ವಾಳ ತಾಲೂಕಿನ ಮಾಣಿಲ ಚಿಕ್ಕ ಗ್ರಾಮ. ಐನೂರರ ಆಚೀಚೆ ಮನೆಗಳು. ಶೇ.70ಕ್ಕೂ ಮಿಕ್ಕಿದ ಮನೆಗಳಲ್ಲಿ ಕುಡಿ, ಕೃಷಿಗೆ ಸುರಂಗದ ನೀರೇ ಆಧಾರ. ಅಚ್ಯುತ ಭಟ್ಟರು ಸುರಂಗ ವಿಜ್ಞಾನಿ. ಈಗವರಿಗೆ ಎಂಭತ್ತಮೂರು. ಬಾವಿ, ಕೊಳವೆ ಬಾವಿ ಕೊರೆಯಲು ನಿಗದಿತ ಸ್ಥಳ ಹೇಳುವ ಅನುಭವಿಗಳು ಇದ್ದಾರಲ್ಲಾ, ಹಾಗೆ ಅಚ್ಯುತ ಭಟ್ಟರು ಸುರಂಗ ಕೊರೆಯಲು ಸ್ಥಳವನ್ನು ಗುರುತು ಹಾಕುತ್ತಾರೆ. ಅವರು ಗುರುತು ಹಾಕಿದ ಸ್ಥಳದಲ್ಲಿ ಸುರಂಗ ಕೊರೆದಾಗ ಗಂಗೆ ಸಿಗದೇ ಭಣ ಭಣ ಎಂದ ಉದಾಹರಣೆಯಿಲ್ಲ.

          ಲಕ್ಷ ಸುರಿದು, ಭೂಮಿ ಕೊರೆದು, ಉಕ್ಕುವ ನೀರನ್ನು ನೋಡಿ, ಪಡುವ ಆನಂದ ಸುರಂಗದಲ್ಲಿಲ್ಲ! ಒಂದು ಸುರಂಗ ಕೊರೆಯಲು ಏನಿಲ್ಲವೆಂದರೂ ಕನಿಷ್ಠ ಎರಡು ತಿಂಗಳು ಬೇಕು. ಸಿಕ್ಕ ನೀರು ಕಿರುಬೆರಳಿನ ಗಾತ್ರವಾದರೂ ವರ್ಷಪೂರ್ತಿ ಹರಿವು. ಸುರಂಗ ರಚನೆಗೆ ಒಮ್ಮೆ ಬಂಡವಾಳ ಸಾಕು. ಇಂಧನ, ವಿದ್ಯುತ್, ಡೀಸೆಲ್, ಪೆಟ್ರೋಲ್, ಪಂಪ್..ಗಳ ರಗಳೆಗಳಿಲ್ಲ! ವರುಷವೂ ನಿರ್ವಹಣೆ ಮುಖ್ಯ.

          ಗುಡ್ಡದ ಕೆಳಬದಿಯಲ್ಲಿ ಅಚ್ಯುತ ಭಟ್ಟರ ತೋಟ. ಗುಡ್ಡವನ್ನು ಅಲ್ಲಲ್ಲಿ ಸಮತಟ್ಟು ಮಾಡಿ ಆರು ತಟ್ಟು ಮಾಡಿಕೊಂಡಿದ್ದಾರೆ. ಅಡಿಕೆಯದು ದೊಡ್ಡ ತಟ್ಟು. ತೀರಾ ಕೆಳಗೆ ತೆಂಗುಕೃಷಿ. ಅಲ್ಲಲ್ಲಿನ ಅಗತ್ಯ ನೋಡಿಕೊಂಡು ಹನಿ ನೀರಾವರಿ, ತುಂತುರು ನೀರಾವಾರಿ ವ್ಯವಸ್ಥೆ. ಕೊಡದಲ್ಲಿ ನೀರು ಹೊತ್ತು ಗಿಡಗಳಿಗೆ ಉಣಿಸಿದ ದಿನವಿನ್ನೂ ಅಚ್ಯುತ ಭಟ್ಟರಿಗೆ ಮರೆತಿಲ್ಲ.

          ತೋಟ ಎಬ್ಬಿಸುವಾಗ ನೀರಿನ ಮೂಲದ ಪತ್ತೆ ಮೊದಲಾಯ್ಕೆ. ಮಾಣಿಮೂಲೆಯಲ್ಲಿ ಭಿನ್ನ. ತೋಟಕ್ಕಗಿ ಸಮತಟ್ಟು ಮಾಡಿದ ಬಳಿಕವೇ ಸುರಂಗದ ಕೊರೆತ. ಲಭ್ಯ ನೀರಿಗನುಸಾರ 'ಯಾವ ಕೃಷಿ' ಎಂಬ ನಿರ್ಧಾರ. ಸುರಂಗದಿಂದ ಹರಿದು ಬಂದ ನೀರು ಮಣ್ಣಿನಿಂದ ತಯಾರಿಸಿದ ಟ್ಯಾಂಕಿಗಳಲ್ಲಿ ಸಂಗ್ರಹ. ಅಚ್ಯುತ ಭಟ್ಟರು ಸ್ವತಃ ತಯಾರಿಸಿದ ಟ್ಯಾಂಕಿಗಳಿವು. ಅಲ್ಲಿಂದ ಗುರುತ್ವಾಕರ್ಷಣಾ ಶಕ್ತಿಯ ಮೂಲಕ ಕೃಷಿಗೆ ಹರಿವು.

          ಕೆಲವು ವರುಷಗಳ ಹಿಂದೆ ತೋಟದ ಹಿಂದಿನ ಗುಡ್ಡ ನುಣುಪಾಗಿತ್ತು. ಗೇರು, ಮಾವುಗಳನ್ನು ನೆಟ್ಟರು. ಸಹಜವಾಗಿ ಇತರ ಗಿಡಗಳೂ ಬೆಳೆಯಿತು. ಇದರಿಂದಾಗಿ ನೀರಿಂಗಿತು. ಪರಿಣಾಮ ಹೇಳಬೇಕಾಗಿಲ್ಲ ತಾನೆ. ಎಲ್ಲವೂ ಶ್ರಮ ಬೇಡುವ ಕೆಲಸ. 'ಕಾಯಕವೇ ಕೈಲಾಸ' ಎನ್ನುವ ಬಸವಣ್ಣನವರ ವಚನ ಇಲ್ಲಿ ಸಾಕಾರಗೊಳ್ಳುತ್ತಿದೆ.

          ನೀರು ಪಡೆಯುವ ಅದ್ಭುತ ಪಾರಂಪರಿಕ ಜಾಣ್ಮೆಗಳಲ್ಲೊಂದು - ಸುರಂಗ. ಹನಿ ನೀರಾವರಿಗೆ, ಬಾವಿ ತೋಟಲು, ಕೊಳವೆ ಬಾವಿ ಕೊರೆತಕ್ಕೆ, ತೋಡು-ಹಳ್ಳ ರೂಪಿಸಲು ನಮ್ಮ ಬ್ಯಾಂಕುಗಳಲ್ಲಿ ಸಾಲ ವ್ಯವಸ್ಥೆಗಳಿವೆ. ಆದರೆ ಸುರಂಗ ತೋಡಲು ವ್ಯವಸ್ಥೆಗಳಿಲ್ಲ. ಕಾರಣ, ಅದು ನೈಸರ್ಗಿಕ ಮೂಲ! ಗೋವಿಂದ ಭಟ್ಟರು ವಾಸ್ತವದತ್ತ ಬೆರಳು ತೋರಿದಾಗ ಬಳ್ಳಾರಿಯ ಗಣಿಯ ಧೂಳು ಹಾರಿ ಬಂದು ಕುಳಿತ ಅನುಭವವಾಯಿತು.

          ಸುರಂಗ ವಿಚಾರದಲ್ಲಿ ಸಾಕಷ್ಟು ವಿಚಾರಗಳನ್ನು ಮೊಗೆಯುವ ಅಚ್ಯುತ ಭಟ್ಟರು ನಿಜವಾಗಿಯೂ 'ಜಲನಿಧಿ'. ವಿದೇಶದ ಅಧ್ಯಯನಕಾರರನ್ನು ಮಾಣಿಮೂಲೆ ಸೆಳೆದಿದೆ. ಇದಕ್ಕೆಂದೇ ವಿಮಾನವೇರಿ ಬಂದಿದ್ದಾರೆ. ಅಧ್ಯಯನ ಮಾಡಿದ್ದಾರೆ. ಸುರಂಗ ನೋಡಲೆಂದೇ ಬರುವ ತಂಡಗಳಿಗೆ ಅಚ್ಯುತ ಭಟ್ಟರದು ದಾಸೋಹ ಮನೆ. ಆದರೆ ಕನ್ನಾಡಿನ ಆಡಳಿತ ವ್ಯವಸ್ಥೆಗಳಿಗೆ ಇಂತಹ ಗ್ರಾಮೀಣ ಭಾರತದ ಸದ್ದಿಲ್ಲದ ಕೆಲಸ ಕಾಣದು.  

Friday, December 14, 2012

ಕುಲವೃತ್ತಿಯಿಲ್ಲಿ ಹೀನವಲ್ಲ, ಮಾನ

           ಧಾರ್ಮಿಕ, ಸಾಮಾಜಿಕ, ಕೃಷಿ ಆಗುಹೋಗುಗಳನ್ನು ಚಿಂತನೆ ಮಾಡುವಾಗಲೆಲ್ಲಾ 'ಕೂಡುಕುಟುಂಬ'ದ ವ್ಯವಸ್ಥೆಗಳನ್ನು ಜ್ಞಾಪಿಸುತ್ತೇವೆ. ಬದುಕಿ ಬಾಳಿದ ಹಿರಿಯರ ಕೊಡುಗೆಗಳಿಗೆ ದಂತಕಥೆಗಳ ಸ್ಪರ್ಶ ನೀಡುತ್ತೇವೆ. ನೆನಪಿನ ಬುತ್ತಿಯಿಂದ ರೋಚಕಗಳು ಧಾರೆಧಾರೆಯಾಗಿ ಇಳಿಯುತ್ತದೆ.  'ಕೂಡುಕುಟುಂಬ ಇದ್ದಾಗ ಎಲ್ಲವೂ ಚೆನ್ನಾಗಿತ್ತು. ಈಗ ಬಿಡಿಬಿಡಿಯಾದ ಬದುಕು ಗೊಂದಲವಾಗಿದೆ' ಎಂಬ ಕೊನೆಬಿಂದುವಿನೊಂದಿಗೆ ಮಾತುಕತೆಗೆ ತೆರೆ.  

           ಮಾತುಕತೆಯಿಂದ ಸಂವಹನ. ಅದರ ಮೂಲ ಮನೆಯ ಜಗಲಿ.  ಈಗ ಜಗಲಿ ಇದೆ. ಮಾತನಾಡುವ ಮಂದಿಗೆ ಪುರುಸೊತ್ತು ಇಲ್ಲ! ಅಪ್ಪಾಮ್ಮ ಬ್ಯುಸಿ. ಮಕ್ಕಳಿಗೆ ಶಾಲಾ ಕಲಿಕೆ. ಜತೆಗೆ ಟ್ಯೂಶನ್ನಿನ ಬಲೆ. ಬಲೆಯಿಂದ ಬಿಡಿಸಲಾಗದ ಒದ್ದಾಟ. ಭಾವನೆಗಳಿಗೆ ಮೌನದ ಬಂಧನ.  ಗೋಚರವಾಗದ ಬದುಕಿನ ಚಿತ್ತಾರಗಳು. ಅಡುಗೆ ಮನೆಯಲ್ಲಿ ಬೆಳಿಗ್ಗೆ ಒಮ್ಮೆ ಒಲೆ (ಸ್ಟೌ) ಉರಿದರೆ ಆಯಿತು, ಮುಂದಿನ ಪಾಳಿ ಮರುದಿವಸದ ಮುಂಜಾನೆ!

           ಈಚೆಗೆ ಸಾಹಿತ್ಯ ನಗರಿಗೆ ಹೋಗಿದ್ದೆ. ಆಗ ಗಣೇಶೋತ್ಸವದ ಸಂಭ್ರಮ. ಬಹುತೇಕ ಮನೆಗಳಲ್ಲಿ ನೆಂಟರಿಷ್ಟರು, ಆಪ್ತರ ಜಮಾವಣೆ. ಸಿಹಿ ಖುಷಿ ದಿವಸಗಳು. 'ಇಲ್ಲೆಲ್ಲಾ ಕೂಡುಕುಟುಂಬಗಳು ಸಾಕಷ್ಟಿವೆ. ಒಟ್ಟಾಗಿ ಜೀವಿಸುವುದೇ ಸಂಸ್ಕೃತಿ. ಅಲ್ಲೋ ಇಲ್ಲೋ ಮಾತ್ರ ಹರಿದು ಹಂಚಾಗಿ ಮನೆ ಬೇರೆಯಾದರೂ, ಹಬ್ಬಗಳಲ್ಲಿ ಒಂದಾಗುತ್ತಾರೆ,' ಎನ್ನುವ ವಾಸ್ತವ ಚಿತ್ರವನ್ನು ಕಟ್ಟಿಕೊಟ್ಟರು, ಕೃಷಿಕ ಹನುಮಂತಪ್ಪ ನಾರಪ್ಪ ಸುಡಕೆನವರ.

             ಕಣ್ಣಾರೆ ನೋಡಬೇಕೆನ್ನುವ ತುಡಿತ. ಸಂಸ್ಕೃತಿಯನ್ನು ಹತ್ತಿರದಿಂದ ನೋಡುವ ಕಾತರ. ಬದುಕು ಬದಲಾದ ಕಾಲಘಟ್ಟದಲ್ಲೂ ಏಕಮನಸ್ಸುಗಳ ರೂಪೀಕರಣ ಸಾಧ್ಯವೇ? ಒಂದೊಂದು ರೂಪಾಯಿಗೂ ಬಡಿದಾಡಿಕೊಳ್ಳುವ ಸಹೋದರರು, ಸ್ನೇಹಿತರು ಎಷ್ಟಿಲ್ಲ? ಮುಖವಾಡವನ್ನು ಬದಲಾಯಿಸುತ್ತಿರುವ ಆಪ್ತರು ಎಷ್ಟು ಬೇಕು? ಹೀಗಿರುತ್ತಾ ಕೂಡುಕುಟುಂಬ ಹೇಗಿರುತ್ತೆ. ಒಂದು ಕಾಲಘಟ್ಟದಲ್ಲಿ ಕೂಡುಕುಟುಂಬದ ಶ್ರೀಮಂತಿಕೆ ಕರಾವಳಿಯಲ್ಲಿತ್ತು. ಈಗದು ಹಿರಿಯರ ಮನಸ್ಸಿನಲ್ಲಿ, ದಾಖಲೆಪತ್ರಗಳಲ್ಲಿ ಭದ್ರವಾಗಿವೆ.

               ಹುಬ್ಬಳ್ಳಿ ಕಾರವಾರ ರಸ್ತೆಯಲ್ಲಿರುವ ಅಂಚಟಗೇರಿಯ ನಾಗಪ್ಪ ಮಹಾದೇವಪ್ಪ ಬಡಿಗೇರರ ಮನೆಯ ಜಗಲಿಯೇರಿದಾಗ 'ಬನ್ರಿ..' ಎನ್ನುತ್ತಾ ಐದಾರು ಮಂದಿ ಇದಿರುಗೊಂಡರು. ಚಾಪೆ ಹಾಸಿದರು. ತಂಪಗಿನ ನೀರು, ಬೆಲ್ಲ ದಣಿವಾರಿಸಿದತು. ಮೊದಲ ಆತಿಥ್ಯದಲ್ಲೇ ಕೂಡುಕುಟುಂಬದ ಆಪ್ತತೆಯ ಪರಿಚಯ.

              ಮೂವತ್ತಮೂರು ಮಂದಿ ಸದಸ್ಯರ ನಾಗಪ್ಪ ಕುಟುಂಬ. ಹಾಲು ಮತ್ತು ಗೋಅನಿಲಕ್ಕಾಗಿ ಒಂದೊಂದು ಎಮ್ಮೆ ಮತ್ತು ಆಕಳು. ಕಟ್ಟಿಗೆ ಒಲೆಯಲ್ಲೇ ಅಡುಗೆ. ಮನೆಯೊಳಗೆ ಮೂರು, ಹೊರಭಾಗದಲ್ಲಿ ಎರಡು ಒಲೆಗಳು. ಅಗತ್ಯಬಿದ್ದಾಗ ಮಾತ್ರ ಗೋಅನಿಲ ಬಳಕೆ. ಅನಿಲ ಜಾಡಿಗಾಗಿ ಬುಕ್ ಮಾಡಬೇಕಾದ ಪ್ರಮೇಯ ಇವರಿಗಿಲ್ಲ, ಅಗತ್ಯವೂ ಇಲ್ಲ.

               'ಒಂದು ವಾರಕ್ಕೆ ಮೂವತ್ತು ಕಿಲೋ ಜೋಳ ಮತ್ತು ಮೂವತ್ತು ಕಿಲೋ ಅಕ್ಕಿ ಅಡುಗೆಗೆ ಬೇಕು ಸಾರ್' ಎಂದು ನಕ್ಕರು ನಾಗಪ್ಪ. ಇವರದು ಬಡಿಗೇರ ಕುಟುಂಬ. ಕೃಷಿ ಉಪಕರಣಗಳನ್ನು ತಯಾರಿಸುವುದರಲ್ಲಿ ನಿಪುಣರು. ಕುಟುಂಬದ ಎಲ್ಲಾ ಸದಸ್ಯರೂ ಕುಲವೃತ್ತಿಯನ್ನೇ ಮುಂದುವರಿಸುತ್ತಿದ್ದಾರೆ. 'ಕುಲವೃತ್ತಿಯನ್ನು ಗೌರವಿಸಬೇಕು, ಮರೆಯಬಾರದು. ಅದರಲ್ಲಿ ಖುಷಿಯಿದೆ. ಸಂತೃಪ್ತಿಯಿದೆ. ಈ ಕೆಲಸಕ್ಕೆ ಡಿಮ್ಯಾಂಡ್ ಇದೆ. ವರ್ಕ್ ಮಾಡೋರು ಇಲ್ಲ' ಎಂದು ಮಾತು ಮುಂದುವರಿಸುತ್ತಾರೆ.

           ಸುಮಾರು ನಾಲ್ಕು ತಲೆಮಾರಿನಿಂದ ಜತೆಯಾಗಿ ಜೀವಿಸುತ್ತಾರೆ. ಒಟ್ಟಾಗಿ ದುಡಿಯುತ್ತಾರೆ. ಕಟ್ಟಿಗೆ ರಥ ತಯಾರಿಸುವುದರಲ್ಲಿ ನಾಗಪ್ಪ ಕುಟುಂಬ ನಿಷ್ಣಾತಿ ಪಡೆದಿದೆ.  'ಮೊದಲೆಲ್ಲಾ ಒಂದು ರಥ ಸಿದ್ಧವಾಗಲು ಒಂದು ವರುಷ ಬೇಕಿತ್ತು. ತಂತ್ರಜ್ಞಾನವನ್ನು ಅಳವಡಿಸಿದ್ದರಿಂದ ಈಗ ವರುಷಕ್ಕೆ ನಾಲ್ಕು ರಥ ಸಿದ್ಧಪಡಿಸಿಬಹುದು. ಕೈಚಾಲಿತ ಕೆಲಸಗಳ ಜಾಗಕ್ಕೆ ಯಂತ್ರಗಳು ಬಂದಿವೆ,' ಆಧುನಿಕ ತಂತ್ರಜ್ಞಾನಕ್ಕೆ ಟ್ಯೂನ್ ಆಗಿದ್ದಾರೆ, ಎಪ್ಪತ್ತೊಂದರ ನಾಗಪ್ಪ. ಬಾಗಿಲು, ಫರ್ನಿಚರ್.. ಮೊದಲಾದವುಗಳಲ್ಲಿ ಡಿಸೈನ್ ಕೆಲಸಗಳಿಗೆ ಬೇಡಿಕೆ.

               ಅಮಾವಾಸ್ಯೆಯಂದು ತಿಂಗಳ ರಜೆ. ಅಂದು ಉಳಿ, ಸುತ್ತಿಗೆ ಮೊದಲಾದ ವೃತ್ತಿ ಸಲಕರಣೆಗಳಿಗೆ ಎಣ್ಣೆಯ ಸ್ನಾನ. ಪ್ರತೀ ತಿಂಗಳೂ ಆಯುಧ ಪೂಜೆ. ಎಲ್ಲಾ ಸದಸ್ಯರ ಹಾಜರಿ. ಯಾವುದೇ ಕಾರ್ಯಕ್ರಮವಿರಲಿ, ಸಮಾರಂಭವಿರಲಿ - ಇವರ ಕುಟುಂಬ ಮಾತ್ರ ಅಮಾವಾಸ್ಯೆಯಂದು ಮನೆಯ ಹೊರಗೆ ಹೋಗರು. ಮಧ್ಯಾಹ್ನ ಸಿಹಿ ಭೋಜನ. ಯಾವ್ಯಾವ ಖಾದ್ಯವೆಂಬುದನ್ನು ಎಲ್ಲರೂ ಸೇರಿ ನಿರ್ಧಾರಕ್ಕೆ ಬರುತ್ತಾರೆ. ವಿಚಾರದಲ್ಲಿ ಗೊಂದಲ ಬಂದಾಗ ನಾಗಪ್ಪರದು ಅಂತಿಮ ತೀರ್ಪು.

             ಗಣೇಶ ಚತುರ್ಥಿಯ ಪೂಜೆ ವಿಶೇಷ. ಪ್ರತೀ ವರುಷ ಮಣ್ಣಿನ ಗಣೇಶನ ಮೂರ್ತಿ ಸ್ಥಾಪನೆ. ಈ ವರುಷ ಸ್ಥಾಪಿಸಿದ ಗಣೇಶನಿಗೆ ಮುಂದಿನ ವರುಷ ಜಲಸ್ಥಂಭನದ ಭಾಗ್ಯ. ಅಲ್ಲಿಯ ವರೆಗೆ ನಿತ್ಯ ಆರಾಧನೆ. ಕಳೆದ ವರುಷದ ಗಣೇಶನಿಗೆ ಈ ವರುಷ ಜಲಾಧಿವಾಸ. ಹೀಗೆ ಪ್ರತೀ ದಿನ ಪೂಜೆ-ಪುರಸ್ಕಾರ. ಉಂಡೆ, ಚಕ್ಕುಲಿ, ಮೋದಕಗಳ ಸಮರ್ಪಣೆ.

              ಮೂವತ್ತಕ್ಕೂ ಮಿಕ್ಕಿ ಸದಸ್ಯರಿಂದ ಮನೆಯಲ್ಲಿ ಗೊಂದಲ, ಮನಸ್ತಾಪಗಳು ಬರುವುದಿಲ್ಲವೇ? ಚೋದ್ಯದ ಪ್ರಶ್ನೆಗೆ ನನ್ನನ್ನು ಪೆಚ್ಚಾಗಿ ನೋಡಿದರು! 'ಬಹಳ ಸೂಕ್ಷ್ಮವಾದ ವಿಚಾರ. ಮುಖಂಡರಿಗೆ ತಾಳಿಕೊಳ್ಳುವ ಶಕ್ತಿ ಬೇಕು. ಸ್ವ ನಿಯಂತ್ರಣ ಬೇಕು. ಎಲ್ಲರ ಅಭಿಪ್ರಾಯ ತೆಗೆದುಕೊಂಡೇ ನಿರ್ಧಾರ. ಈ ವ್ಯವಸ್ಥೆ ಎಲ್ಲರಿಗೂ ಸಮ್ಮತವಿದೆ' ಎನ್ನುತ್ತಾರೆ ನಾಗಪ್ಪ.

               ಮನೆಯೊಳಗೆ ಒಂದೇ ರಾಜಕೀಯ. ತಮ್ಮ ಕ್ಷೇತ್ರದಲ್ಲಿ ಸ್ಪರ್ಧಿಸುವ ಪ್ರಾಮಾಣಿಕರಿಗೆ (!?) ಮತದಾನ. ಯಾರಿಗೆ ಮತ ಹಾಗಬೇಕೆಂದು ಮನೆಯೊಳಗೇ ನಿರ್ಧಾರವಾಗುತ್ತದೆ. ಪಕ್ಷ ಯಾವುದೇ ಇರಲಿ, ಇವರಿಗೆ ಚುನಾವಣೆಗೆ ಸ್ಪರ್ಧಿಸುವ ವ್ಯಕ್ತಿಯ ಚಾರಿತ್ರ್ಯ ಪ್ರಾಮಾಣಿಕ ನಿಲುವು  ಮುಖ್ಯ. ಚುನಾವಣೆ ಸಮಯದಲ್ಲಿ ರಾಜಕೀಯ ಮುಖಂಡರ ಗಡಣವೇ ಮನೆಗೆ ಮುತ್ತಿಕೊಳ್ಳುತ್ತವಂತೆ. ಯಾಕೆಂದರೆ ಇಪ್ಪತ್ತಕ್ಕೂ ಮಿಕ್ಕಿ ಓಟು ಒಂದೇ ಮನೆಯಲ್ಲಿದೆಯಲ್ವಾ..!

              ನಾಗಪ್ಪ ಮಹಾದೇವಪ್ಪ ಅವರ ಮನೆಗೆ ರಜತದ ಸಂಭ್ರಮ. ಆಧುನಿಕ ಟಚ್ಚಿನ ಹಳೆ ಮನೆ. ವರಾಂಡ ಹೊರತು ಪಡಿಸಿ ಎಂಟು ಖಾಸಗಿ ಕೋಣೆಗಳಿವೆ. ಮಾಳಿಗೆಯಲ್ಲೂ ಕೋಣೆಗಳು. ಸೂಚನೆ ನೀಡದೆ ನೆಂಟರು ಬಂದರೆ ಇವರಿಗೆ ಬೇಸರವಾಗುವುದಿಲ್ಲ. ಒತ್ತಡವಾಗುವುದಿಲ್ಲ. ಪಾರಂಪರಿಕವಾಗಿ ಬಂದ ಹತ್ತೆಕ್ರೆ ಜಮೀನು. ಕುಟುಂಬದ ಸ್ವ-ದುಡಿಮೆಯಿಂದ  ಹತ್ತು ಪಟ್ಟಾಗಿದೆ! 'ದ್ರಾಕ್ಷೆ, ದಾಳಿಂಬೆ ಬಿಟ್ಟು ಮಿಕ್ಕಿದ್ದೆಲ್ಲಾ ಇಲ್ಲಿ ಬೆಳೆಯಬಹುದು, ಮಣ್ಣಿನಲ್ಲಿ ಅಷ್ಟೊಂದು ಫಲವತ್ತತೆಯಿದೆ' ಎನ್ನುತ್ತಾರೆ.

               ಒಬ್ಬೊಬ್ಬ ಸಹೋದರರಿಗೆ ಒಂದೊಂದು ಖಾತೆ. ಎಲ್ಲವೂ ಸಲೀಸಾಗಿ ನಡೆಯುತ್ತದೆ. ಜರ್ದಾ, ಬೀಡಿ, ಸಿಗರೇಟು, ಸ್ಫೂರ್ತಿರಸಾಯನ.. ಮೊದಲಾದ ಹವ್ಯಾಸಗಳು ಕುಟುಂಬದ ಸದಸ್ಯರಿಗೆ ಅಂಟಿಲ್ಲವೆನ್ನುವುದು ಗಮನಿಸಬೇಕಾದ ವಿಚಾರ. ನಾಗಪ್ಪರ ನಿರ್ಧಾರದ ಮುಂದೆ ಯುವಕರ ಬಿಸಿರಕ್ತವೂ ತಣ್ಣಗಾಗುತ್ತದೆ! ಮನಸ್ತಾಪಗಳು ದೂರವಾಗುತ್ತದೆ. 'ನಾವು ಬದುಕಿರುವಾಗ ಅದರ್ಶವಾಗಿರಬೇಕು' ಎನ್ನುವುದು ಅವರ ಬದುಕಿನ ಸುಭಗತನ.

                 ಅರ್ಧ ಹೊತ್ತು ನಾಗಪ್ಪ ಮಹಾದೇವಪ್ಪ ಅವರ ಜತೆಯಲ್ಲಿದ್ದೆ. ಮಿತ್ರ ಜಯಶಂಕರ ಶರ್ಮ ಸಾಥ್ ನೀಡಿದ್ದರು.  ಬದುಕಿನ ಕುರಿತು ಋಣಾತ್ಮಕ ಚಿಂತನೆಯಿಲ್ಲ. ಕುಟುಂಬ ಸದಸ್ಯರ ಕುರಿತು ಪಿಸುಮಾತಿಲ್ಲ. ಬದುಕು ವೇಗವಾಗಿದೆ ಅಂತ ಹೇಳ್ತೇವೆ. ಆದರೆ ನಾಗಪ್ಪರ ಮನೆಯಲ್ಲಿ ಬದುಕಿಗೆ ವೇಗವಿಲ್ಲ. ಮುಷ್ಠಿಗೆ ಸಿಗುವಂತಹ ಬದುಕು. ಅನುಭವಿಸುವ ಅಪ್ಡೇಟ್ ಬದುಕು. ವಿನಿಮಯ ಮಾಡಿಕೊಳ್ಳುವ ಬದುಕು.

                ಅಲ್ಲಿಂದ ಮರಳಿದಾಗ ವೇಗದ ಬದುಕಿನ ಪುಟಗಳು ಪಟಪಟನೆ ತೆರೆದುಕೊಂಡಿತು. ಅದರಲ್ಲಿ ನಾಗಪ್ಪ ಮಹಾದೇವಪ್ಪ ಬಡಿಗೇರರನ್ನು ಕಂಡಿಲ್ಲ! ಕಾರಣ, 'ಕೂಡು ಕುಟುಂಬದಲ್ಲಿ ಭಾವನೆಗಳು ಚೆನ್ನಾಗಿರುತ್ತವೆ, ಮನಸ್ಸು ಚೆನ್ನಾಗಿರುತ್ತವೆ' ಎಂಬ ಅವರ ನಂಬಿಕೆ ಮತ್ತು ಅದರ ಅನುಷ್ಠಾನ.

                 ಅವರಲ್ಲಿ ಟಿವಿ ಇದೆ, ಮೊಬೈಲ್ ಇದೆ, ರೇಡಿಯೋ ಇದೆ. ಎಲ್ಲವೂ ಎಷ್ಟು ಬೇಕೋ ಅಷ್ಟು. ಸಮಯವನ್ನು ಕೊಲ್ಲುವ, ದುಡಿಮೆಗೆ ಕಡಿವಾಣ ಹಾಕುವ, ಮನಸ್ಸನ್ನು ಕೆರಳಿಸುವ ವಿಚಾರಗಳಿಂದ ದೂರ ಇದ್ದಷ್ಟೂ ಕ್ಷೇಮ ಮತ್ತು ನೆಮ್ಮದಿ ಅಲ್ವಾ..! ಅಂದಾಗ ಆಶ್ಚರ್ಯವಾಯಿತು.

               ನಗರಕ್ಕೆ ಸಂಪರ್ಕವೀಯುವ ವಾಹನಗಳು ಆಗಾಗ್ಗೆ ಬಂದು ಹೋಗುತ್ತವೆ. ದ್ವಿಚಕ್ರಿಗಳು ಸಾಕಷ್ಟಿದ್ದಾರೆ. ಯುವಕರನ್ನು ನಗರಕ್ಕೆ ಸೆಳೆಯುವ ಎಲ್ಲಾ ವ್ಯವಸ್ಥೆಗಳು ಮನೆಮುಂದಿನ ರಸ್ತೆಯಲ್ಲಿ ಕಾದಿವೆ! ಆದರೆ ನಾಗಪ್ಪ ಕುಟುಂಬದ ಯುವಕರು ನಗರ ಸೇರಿಲ್ಲ. ಎಲ್ಲಾ ಅಕರ್ಷಣೆಗಳಿದ್ದರೂ ಅದಕ್ಕೆ ಸ್ವ-ನಿಯಂತ್ರಣ. ಕುಲವೃತ್ತಿಯನ್ನು ಮುಂದುವರಿಸುತ್ತಿದ್ದಾರೆ.