Friday, December 14, 2012

ಕುಲವೃತ್ತಿಯಿಲ್ಲಿ ಹೀನವಲ್ಲ, ಮಾನ

           ಧಾರ್ಮಿಕ, ಸಾಮಾಜಿಕ, ಕೃಷಿ ಆಗುಹೋಗುಗಳನ್ನು ಚಿಂತನೆ ಮಾಡುವಾಗಲೆಲ್ಲಾ 'ಕೂಡುಕುಟುಂಬ'ದ ವ್ಯವಸ್ಥೆಗಳನ್ನು ಜ್ಞಾಪಿಸುತ್ತೇವೆ. ಬದುಕಿ ಬಾಳಿದ ಹಿರಿಯರ ಕೊಡುಗೆಗಳಿಗೆ ದಂತಕಥೆಗಳ ಸ್ಪರ್ಶ ನೀಡುತ್ತೇವೆ. ನೆನಪಿನ ಬುತ್ತಿಯಿಂದ ರೋಚಕಗಳು ಧಾರೆಧಾರೆಯಾಗಿ ಇಳಿಯುತ್ತದೆ.  'ಕೂಡುಕುಟುಂಬ ಇದ್ದಾಗ ಎಲ್ಲವೂ ಚೆನ್ನಾಗಿತ್ತು. ಈಗ ಬಿಡಿಬಿಡಿಯಾದ ಬದುಕು ಗೊಂದಲವಾಗಿದೆ' ಎಂಬ ಕೊನೆಬಿಂದುವಿನೊಂದಿಗೆ ಮಾತುಕತೆಗೆ ತೆರೆ.  

           ಮಾತುಕತೆಯಿಂದ ಸಂವಹನ. ಅದರ ಮೂಲ ಮನೆಯ ಜಗಲಿ.  ಈಗ ಜಗಲಿ ಇದೆ. ಮಾತನಾಡುವ ಮಂದಿಗೆ ಪುರುಸೊತ್ತು ಇಲ್ಲ! ಅಪ್ಪಾಮ್ಮ ಬ್ಯುಸಿ. ಮಕ್ಕಳಿಗೆ ಶಾಲಾ ಕಲಿಕೆ. ಜತೆಗೆ ಟ್ಯೂಶನ್ನಿನ ಬಲೆ. ಬಲೆಯಿಂದ ಬಿಡಿಸಲಾಗದ ಒದ್ದಾಟ. ಭಾವನೆಗಳಿಗೆ ಮೌನದ ಬಂಧನ.  ಗೋಚರವಾಗದ ಬದುಕಿನ ಚಿತ್ತಾರಗಳು. ಅಡುಗೆ ಮನೆಯಲ್ಲಿ ಬೆಳಿಗ್ಗೆ ಒಮ್ಮೆ ಒಲೆ (ಸ್ಟೌ) ಉರಿದರೆ ಆಯಿತು, ಮುಂದಿನ ಪಾಳಿ ಮರುದಿವಸದ ಮುಂಜಾನೆ!

           ಈಚೆಗೆ ಸಾಹಿತ್ಯ ನಗರಿಗೆ ಹೋಗಿದ್ದೆ. ಆಗ ಗಣೇಶೋತ್ಸವದ ಸಂಭ್ರಮ. ಬಹುತೇಕ ಮನೆಗಳಲ್ಲಿ ನೆಂಟರಿಷ್ಟರು, ಆಪ್ತರ ಜಮಾವಣೆ. ಸಿಹಿ ಖುಷಿ ದಿವಸಗಳು. 'ಇಲ್ಲೆಲ್ಲಾ ಕೂಡುಕುಟುಂಬಗಳು ಸಾಕಷ್ಟಿವೆ. ಒಟ್ಟಾಗಿ ಜೀವಿಸುವುದೇ ಸಂಸ್ಕೃತಿ. ಅಲ್ಲೋ ಇಲ್ಲೋ ಮಾತ್ರ ಹರಿದು ಹಂಚಾಗಿ ಮನೆ ಬೇರೆಯಾದರೂ, ಹಬ್ಬಗಳಲ್ಲಿ ಒಂದಾಗುತ್ತಾರೆ,' ಎನ್ನುವ ವಾಸ್ತವ ಚಿತ್ರವನ್ನು ಕಟ್ಟಿಕೊಟ್ಟರು, ಕೃಷಿಕ ಹನುಮಂತಪ್ಪ ನಾರಪ್ಪ ಸುಡಕೆನವರ.

             ಕಣ್ಣಾರೆ ನೋಡಬೇಕೆನ್ನುವ ತುಡಿತ. ಸಂಸ್ಕೃತಿಯನ್ನು ಹತ್ತಿರದಿಂದ ನೋಡುವ ಕಾತರ. ಬದುಕು ಬದಲಾದ ಕಾಲಘಟ್ಟದಲ್ಲೂ ಏಕಮನಸ್ಸುಗಳ ರೂಪೀಕರಣ ಸಾಧ್ಯವೇ? ಒಂದೊಂದು ರೂಪಾಯಿಗೂ ಬಡಿದಾಡಿಕೊಳ್ಳುವ ಸಹೋದರರು, ಸ್ನೇಹಿತರು ಎಷ್ಟಿಲ್ಲ? ಮುಖವಾಡವನ್ನು ಬದಲಾಯಿಸುತ್ತಿರುವ ಆಪ್ತರು ಎಷ್ಟು ಬೇಕು? ಹೀಗಿರುತ್ತಾ ಕೂಡುಕುಟುಂಬ ಹೇಗಿರುತ್ತೆ. ಒಂದು ಕಾಲಘಟ್ಟದಲ್ಲಿ ಕೂಡುಕುಟುಂಬದ ಶ್ರೀಮಂತಿಕೆ ಕರಾವಳಿಯಲ್ಲಿತ್ತು. ಈಗದು ಹಿರಿಯರ ಮನಸ್ಸಿನಲ್ಲಿ, ದಾಖಲೆಪತ್ರಗಳಲ್ಲಿ ಭದ್ರವಾಗಿವೆ.

               ಹುಬ್ಬಳ್ಳಿ ಕಾರವಾರ ರಸ್ತೆಯಲ್ಲಿರುವ ಅಂಚಟಗೇರಿಯ ನಾಗಪ್ಪ ಮಹಾದೇವಪ್ಪ ಬಡಿಗೇರರ ಮನೆಯ ಜಗಲಿಯೇರಿದಾಗ 'ಬನ್ರಿ..' ಎನ್ನುತ್ತಾ ಐದಾರು ಮಂದಿ ಇದಿರುಗೊಂಡರು. ಚಾಪೆ ಹಾಸಿದರು. ತಂಪಗಿನ ನೀರು, ಬೆಲ್ಲ ದಣಿವಾರಿಸಿದತು. ಮೊದಲ ಆತಿಥ್ಯದಲ್ಲೇ ಕೂಡುಕುಟುಂಬದ ಆಪ್ತತೆಯ ಪರಿಚಯ.

              ಮೂವತ್ತಮೂರು ಮಂದಿ ಸದಸ್ಯರ ನಾಗಪ್ಪ ಕುಟುಂಬ. ಹಾಲು ಮತ್ತು ಗೋಅನಿಲಕ್ಕಾಗಿ ಒಂದೊಂದು ಎಮ್ಮೆ ಮತ್ತು ಆಕಳು. ಕಟ್ಟಿಗೆ ಒಲೆಯಲ್ಲೇ ಅಡುಗೆ. ಮನೆಯೊಳಗೆ ಮೂರು, ಹೊರಭಾಗದಲ್ಲಿ ಎರಡು ಒಲೆಗಳು. ಅಗತ್ಯಬಿದ್ದಾಗ ಮಾತ್ರ ಗೋಅನಿಲ ಬಳಕೆ. ಅನಿಲ ಜಾಡಿಗಾಗಿ ಬುಕ್ ಮಾಡಬೇಕಾದ ಪ್ರಮೇಯ ಇವರಿಗಿಲ್ಲ, ಅಗತ್ಯವೂ ಇಲ್ಲ.

               'ಒಂದು ವಾರಕ್ಕೆ ಮೂವತ್ತು ಕಿಲೋ ಜೋಳ ಮತ್ತು ಮೂವತ್ತು ಕಿಲೋ ಅಕ್ಕಿ ಅಡುಗೆಗೆ ಬೇಕು ಸಾರ್' ಎಂದು ನಕ್ಕರು ನಾಗಪ್ಪ. ಇವರದು ಬಡಿಗೇರ ಕುಟುಂಬ. ಕೃಷಿ ಉಪಕರಣಗಳನ್ನು ತಯಾರಿಸುವುದರಲ್ಲಿ ನಿಪುಣರು. ಕುಟುಂಬದ ಎಲ್ಲಾ ಸದಸ್ಯರೂ ಕುಲವೃತ್ತಿಯನ್ನೇ ಮುಂದುವರಿಸುತ್ತಿದ್ದಾರೆ. 'ಕುಲವೃತ್ತಿಯನ್ನು ಗೌರವಿಸಬೇಕು, ಮರೆಯಬಾರದು. ಅದರಲ್ಲಿ ಖುಷಿಯಿದೆ. ಸಂತೃಪ್ತಿಯಿದೆ. ಈ ಕೆಲಸಕ್ಕೆ ಡಿಮ್ಯಾಂಡ್ ಇದೆ. ವರ್ಕ್ ಮಾಡೋರು ಇಲ್ಲ' ಎಂದು ಮಾತು ಮುಂದುವರಿಸುತ್ತಾರೆ.

           ಸುಮಾರು ನಾಲ್ಕು ತಲೆಮಾರಿನಿಂದ ಜತೆಯಾಗಿ ಜೀವಿಸುತ್ತಾರೆ. ಒಟ್ಟಾಗಿ ದುಡಿಯುತ್ತಾರೆ. ಕಟ್ಟಿಗೆ ರಥ ತಯಾರಿಸುವುದರಲ್ಲಿ ನಾಗಪ್ಪ ಕುಟುಂಬ ನಿಷ್ಣಾತಿ ಪಡೆದಿದೆ.  'ಮೊದಲೆಲ್ಲಾ ಒಂದು ರಥ ಸಿದ್ಧವಾಗಲು ಒಂದು ವರುಷ ಬೇಕಿತ್ತು. ತಂತ್ರಜ್ಞಾನವನ್ನು ಅಳವಡಿಸಿದ್ದರಿಂದ ಈಗ ವರುಷಕ್ಕೆ ನಾಲ್ಕು ರಥ ಸಿದ್ಧಪಡಿಸಿಬಹುದು. ಕೈಚಾಲಿತ ಕೆಲಸಗಳ ಜಾಗಕ್ಕೆ ಯಂತ್ರಗಳು ಬಂದಿವೆ,' ಆಧುನಿಕ ತಂತ್ರಜ್ಞಾನಕ್ಕೆ ಟ್ಯೂನ್ ಆಗಿದ್ದಾರೆ, ಎಪ್ಪತ್ತೊಂದರ ನಾಗಪ್ಪ. ಬಾಗಿಲು, ಫರ್ನಿಚರ್.. ಮೊದಲಾದವುಗಳಲ್ಲಿ ಡಿಸೈನ್ ಕೆಲಸಗಳಿಗೆ ಬೇಡಿಕೆ.

               ಅಮಾವಾಸ್ಯೆಯಂದು ತಿಂಗಳ ರಜೆ. ಅಂದು ಉಳಿ, ಸುತ್ತಿಗೆ ಮೊದಲಾದ ವೃತ್ತಿ ಸಲಕರಣೆಗಳಿಗೆ ಎಣ್ಣೆಯ ಸ್ನಾನ. ಪ್ರತೀ ತಿಂಗಳೂ ಆಯುಧ ಪೂಜೆ. ಎಲ್ಲಾ ಸದಸ್ಯರ ಹಾಜರಿ. ಯಾವುದೇ ಕಾರ್ಯಕ್ರಮವಿರಲಿ, ಸಮಾರಂಭವಿರಲಿ - ಇವರ ಕುಟುಂಬ ಮಾತ್ರ ಅಮಾವಾಸ್ಯೆಯಂದು ಮನೆಯ ಹೊರಗೆ ಹೋಗರು. ಮಧ್ಯಾಹ್ನ ಸಿಹಿ ಭೋಜನ. ಯಾವ್ಯಾವ ಖಾದ್ಯವೆಂಬುದನ್ನು ಎಲ್ಲರೂ ಸೇರಿ ನಿರ್ಧಾರಕ್ಕೆ ಬರುತ್ತಾರೆ. ವಿಚಾರದಲ್ಲಿ ಗೊಂದಲ ಬಂದಾಗ ನಾಗಪ್ಪರದು ಅಂತಿಮ ತೀರ್ಪು.

             ಗಣೇಶ ಚತುರ್ಥಿಯ ಪೂಜೆ ವಿಶೇಷ. ಪ್ರತೀ ವರುಷ ಮಣ್ಣಿನ ಗಣೇಶನ ಮೂರ್ತಿ ಸ್ಥಾಪನೆ. ಈ ವರುಷ ಸ್ಥಾಪಿಸಿದ ಗಣೇಶನಿಗೆ ಮುಂದಿನ ವರುಷ ಜಲಸ್ಥಂಭನದ ಭಾಗ್ಯ. ಅಲ್ಲಿಯ ವರೆಗೆ ನಿತ್ಯ ಆರಾಧನೆ. ಕಳೆದ ವರುಷದ ಗಣೇಶನಿಗೆ ಈ ವರುಷ ಜಲಾಧಿವಾಸ. ಹೀಗೆ ಪ್ರತೀ ದಿನ ಪೂಜೆ-ಪುರಸ್ಕಾರ. ಉಂಡೆ, ಚಕ್ಕುಲಿ, ಮೋದಕಗಳ ಸಮರ್ಪಣೆ.

              ಮೂವತ್ತಕ್ಕೂ ಮಿಕ್ಕಿ ಸದಸ್ಯರಿಂದ ಮನೆಯಲ್ಲಿ ಗೊಂದಲ, ಮನಸ್ತಾಪಗಳು ಬರುವುದಿಲ್ಲವೇ? ಚೋದ್ಯದ ಪ್ರಶ್ನೆಗೆ ನನ್ನನ್ನು ಪೆಚ್ಚಾಗಿ ನೋಡಿದರು! 'ಬಹಳ ಸೂಕ್ಷ್ಮವಾದ ವಿಚಾರ. ಮುಖಂಡರಿಗೆ ತಾಳಿಕೊಳ್ಳುವ ಶಕ್ತಿ ಬೇಕು. ಸ್ವ ನಿಯಂತ್ರಣ ಬೇಕು. ಎಲ್ಲರ ಅಭಿಪ್ರಾಯ ತೆಗೆದುಕೊಂಡೇ ನಿರ್ಧಾರ. ಈ ವ್ಯವಸ್ಥೆ ಎಲ್ಲರಿಗೂ ಸಮ್ಮತವಿದೆ' ಎನ್ನುತ್ತಾರೆ ನಾಗಪ್ಪ.

               ಮನೆಯೊಳಗೆ ಒಂದೇ ರಾಜಕೀಯ. ತಮ್ಮ ಕ್ಷೇತ್ರದಲ್ಲಿ ಸ್ಪರ್ಧಿಸುವ ಪ್ರಾಮಾಣಿಕರಿಗೆ (!?) ಮತದಾನ. ಯಾರಿಗೆ ಮತ ಹಾಗಬೇಕೆಂದು ಮನೆಯೊಳಗೇ ನಿರ್ಧಾರವಾಗುತ್ತದೆ. ಪಕ್ಷ ಯಾವುದೇ ಇರಲಿ, ಇವರಿಗೆ ಚುನಾವಣೆಗೆ ಸ್ಪರ್ಧಿಸುವ ವ್ಯಕ್ತಿಯ ಚಾರಿತ್ರ್ಯ ಪ್ರಾಮಾಣಿಕ ನಿಲುವು  ಮುಖ್ಯ. ಚುನಾವಣೆ ಸಮಯದಲ್ಲಿ ರಾಜಕೀಯ ಮುಖಂಡರ ಗಡಣವೇ ಮನೆಗೆ ಮುತ್ತಿಕೊಳ್ಳುತ್ತವಂತೆ. ಯಾಕೆಂದರೆ ಇಪ್ಪತ್ತಕ್ಕೂ ಮಿಕ್ಕಿ ಓಟು ಒಂದೇ ಮನೆಯಲ್ಲಿದೆಯಲ್ವಾ..!

              ನಾಗಪ್ಪ ಮಹಾದೇವಪ್ಪ ಅವರ ಮನೆಗೆ ರಜತದ ಸಂಭ್ರಮ. ಆಧುನಿಕ ಟಚ್ಚಿನ ಹಳೆ ಮನೆ. ವರಾಂಡ ಹೊರತು ಪಡಿಸಿ ಎಂಟು ಖಾಸಗಿ ಕೋಣೆಗಳಿವೆ. ಮಾಳಿಗೆಯಲ್ಲೂ ಕೋಣೆಗಳು. ಸೂಚನೆ ನೀಡದೆ ನೆಂಟರು ಬಂದರೆ ಇವರಿಗೆ ಬೇಸರವಾಗುವುದಿಲ್ಲ. ಒತ್ತಡವಾಗುವುದಿಲ್ಲ. ಪಾರಂಪರಿಕವಾಗಿ ಬಂದ ಹತ್ತೆಕ್ರೆ ಜಮೀನು. ಕುಟುಂಬದ ಸ್ವ-ದುಡಿಮೆಯಿಂದ  ಹತ್ತು ಪಟ್ಟಾಗಿದೆ! 'ದ್ರಾಕ್ಷೆ, ದಾಳಿಂಬೆ ಬಿಟ್ಟು ಮಿಕ್ಕಿದ್ದೆಲ್ಲಾ ಇಲ್ಲಿ ಬೆಳೆಯಬಹುದು, ಮಣ್ಣಿನಲ್ಲಿ ಅಷ್ಟೊಂದು ಫಲವತ್ತತೆಯಿದೆ' ಎನ್ನುತ್ತಾರೆ.

               ಒಬ್ಬೊಬ್ಬ ಸಹೋದರರಿಗೆ ಒಂದೊಂದು ಖಾತೆ. ಎಲ್ಲವೂ ಸಲೀಸಾಗಿ ನಡೆಯುತ್ತದೆ. ಜರ್ದಾ, ಬೀಡಿ, ಸಿಗರೇಟು, ಸ್ಫೂರ್ತಿರಸಾಯನ.. ಮೊದಲಾದ ಹವ್ಯಾಸಗಳು ಕುಟುಂಬದ ಸದಸ್ಯರಿಗೆ ಅಂಟಿಲ್ಲವೆನ್ನುವುದು ಗಮನಿಸಬೇಕಾದ ವಿಚಾರ. ನಾಗಪ್ಪರ ನಿರ್ಧಾರದ ಮುಂದೆ ಯುವಕರ ಬಿಸಿರಕ್ತವೂ ತಣ್ಣಗಾಗುತ್ತದೆ! ಮನಸ್ತಾಪಗಳು ದೂರವಾಗುತ್ತದೆ. 'ನಾವು ಬದುಕಿರುವಾಗ ಅದರ್ಶವಾಗಿರಬೇಕು' ಎನ್ನುವುದು ಅವರ ಬದುಕಿನ ಸುಭಗತನ.

                 ಅರ್ಧ ಹೊತ್ತು ನಾಗಪ್ಪ ಮಹಾದೇವಪ್ಪ ಅವರ ಜತೆಯಲ್ಲಿದ್ದೆ. ಮಿತ್ರ ಜಯಶಂಕರ ಶರ್ಮ ಸಾಥ್ ನೀಡಿದ್ದರು.  ಬದುಕಿನ ಕುರಿತು ಋಣಾತ್ಮಕ ಚಿಂತನೆಯಿಲ್ಲ. ಕುಟುಂಬ ಸದಸ್ಯರ ಕುರಿತು ಪಿಸುಮಾತಿಲ್ಲ. ಬದುಕು ವೇಗವಾಗಿದೆ ಅಂತ ಹೇಳ್ತೇವೆ. ಆದರೆ ನಾಗಪ್ಪರ ಮನೆಯಲ್ಲಿ ಬದುಕಿಗೆ ವೇಗವಿಲ್ಲ. ಮುಷ್ಠಿಗೆ ಸಿಗುವಂತಹ ಬದುಕು. ಅನುಭವಿಸುವ ಅಪ್ಡೇಟ್ ಬದುಕು. ವಿನಿಮಯ ಮಾಡಿಕೊಳ್ಳುವ ಬದುಕು.

                ಅಲ್ಲಿಂದ ಮರಳಿದಾಗ ವೇಗದ ಬದುಕಿನ ಪುಟಗಳು ಪಟಪಟನೆ ತೆರೆದುಕೊಂಡಿತು. ಅದರಲ್ಲಿ ನಾಗಪ್ಪ ಮಹಾದೇವಪ್ಪ ಬಡಿಗೇರರನ್ನು ಕಂಡಿಲ್ಲ! ಕಾರಣ, 'ಕೂಡು ಕುಟುಂಬದಲ್ಲಿ ಭಾವನೆಗಳು ಚೆನ್ನಾಗಿರುತ್ತವೆ, ಮನಸ್ಸು ಚೆನ್ನಾಗಿರುತ್ತವೆ' ಎಂಬ ಅವರ ನಂಬಿಕೆ ಮತ್ತು ಅದರ ಅನುಷ್ಠಾನ.

                 ಅವರಲ್ಲಿ ಟಿವಿ ಇದೆ, ಮೊಬೈಲ್ ಇದೆ, ರೇಡಿಯೋ ಇದೆ. ಎಲ್ಲವೂ ಎಷ್ಟು ಬೇಕೋ ಅಷ್ಟು. ಸಮಯವನ್ನು ಕೊಲ್ಲುವ, ದುಡಿಮೆಗೆ ಕಡಿವಾಣ ಹಾಕುವ, ಮನಸ್ಸನ್ನು ಕೆರಳಿಸುವ ವಿಚಾರಗಳಿಂದ ದೂರ ಇದ್ದಷ್ಟೂ ಕ್ಷೇಮ ಮತ್ತು ನೆಮ್ಮದಿ ಅಲ್ವಾ..! ಅಂದಾಗ ಆಶ್ಚರ್ಯವಾಯಿತು.

               ನಗರಕ್ಕೆ ಸಂಪರ್ಕವೀಯುವ ವಾಹನಗಳು ಆಗಾಗ್ಗೆ ಬಂದು ಹೋಗುತ್ತವೆ. ದ್ವಿಚಕ್ರಿಗಳು ಸಾಕಷ್ಟಿದ್ದಾರೆ. ಯುವಕರನ್ನು ನಗರಕ್ಕೆ ಸೆಳೆಯುವ ಎಲ್ಲಾ ವ್ಯವಸ್ಥೆಗಳು ಮನೆಮುಂದಿನ ರಸ್ತೆಯಲ್ಲಿ ಕಾದಿವೆ! ಆದರೆ ನಾಗಪ್ಪ ಕುಟುಂಬದ ಯುವಕರು ನಗರ ಸೇರಿಲ್ಲ. ಎಲ್ಲಾ ಅಕರ್ಷಣೆಗಳಿದ್ದರೂ ಅದಕ್ಕೆ ಸ್ವ-ನಿಯಂತ್ರಣ. ಕುಲವೃತ್ತಿಯನ್ನು ಮುಂದುವರಿಸುತ್ತಿದ್ದಾರೆ.

0 comments:

Post a Comment