Thursday, June 25, 2015

ಜಿಹ್ವಾಚಾಪಲ್ಯ ವೃದ್ಧಿಸುವ ರುಚಿವರ್ಧಕ

               ಬಸ್ಸಿನ ಮುಂದಿನ ಆಸನದಲ್ಲಿದ್ದ ಅಡುಗೆ ವಿಶೇಷಜ್ಞರ ಮಾತಿಗೆ ಕಿವಿಯೊಡ್ಡಬೇಕಾದ ಪ್ರಮೇಯ ಬಂತು. ಅವರಿಬ್ಬರು ದೊಡ್ಡ ಸಮಾರಂಭಗಳ ಅಡುಗೆಯ ಜವಾಬ್ದಾರಿಯನ್ನು ನಿಭಾಯಿಸಿದ ಅನುಭವಿಗಳೆಂದು ಅರಿತುಕೊಂಡೆ. ಒಬ್ಬರೆಂದರು, "ಮೊನ್ನೆ ಎರಡು ಸಾವಿರ ಮಂದಿಯ ಅಡುಗೆಗೆ ಶಹಬ್ಬಾಸ್ ಸಿಕ್ಕಿದ್ದೇ ಸಿಕ್ಕಿದ್ದು. ಯಾವಾಗಲೂ ಹಾಕುವುದಕ್ಕಿಂತ ಸ್ವಲ್ಪ ಹೆಚ್ಚೇ ಟೇಸ್ಟ್ ಮೇಕರ್ ಹಾಕಿದ್ದೆ", ಎಂದಾಗ ಇನ್ನೊಬ್ಬರು ದನಿ ಸೇರಿಸಿದರು, "ಅಂಗಡಿಯಲ್ಲಿ ಟೇಸ್ಟ್ ಮೇಕರ್ ಅಂತ ಕೇಳಿದ್ರೆ ಆಯಿತು, ಏನೋ ಬಿಳಿ ಪುಡಿ ಕೊಡ್ತಾರೆ. ಅದು ಎಂತಾದ್ದು ಅಂತ ಗೊತ್ತಿಲ್ಲ. ಈಚೆಗೆ ಎಲ್ಲರೂ ಹಾಕ್ತಾರೆ, ನಾನ್ಯಾಕೆ ಹಾಕಬಾರ್ದು? ಆ ಪುಡಿ ಹಾಕಿದರೆ ಸಾರು, ಸಾಂಬಾರಿನ ರುಚಿಯೇ ಬೇರೆ. ಯಾರಿಗೂ ಗೊತ್ತಾಗಬಾರದಷ್ಟೇ."
                ದಂಗಾಗುವ ಸರದಿ ನನ್ನದು. ಹೋಟೆಲ್, ಉದ್ಯಮಗಳಲ್ಲಿ ರುಚಿವರ್ಧಕಯೆನ್ನುವ ರಾಸಾಯನಿಕ  ಬಳಸುವುದನ್ನು ಕಿವುಡಾಗಿ, ಕುರುಡಾಗಿ ಒಪ್ಪಿಕೊಂಡಾಗಿದೆ. ಸಮಾರಂಭಗಳಿಗೆ ಉಣಿಸುವ ಅಡುಗೆ ಸೂಪಜ್ಞರು ಕೂಡಾ ಬಳಸುತ್ತಾರೆನ್ನುವುದು (ಎಲ್ಲರೂ ಅಲ್ಲ) ಇಂದಷ್ಟೇ ತಿಳಿಯಿತು. ಸಮಾರಂಭಗಳು ಅಧಿಕವಾಗುತ್ತಾ ಬಂದ ಹಾಗೆ ಸೂಪಜ್ಞರಲ್ಲೂ ತಮ್ಮದೇ ಕೈರುಚಿ ಮೇಲುಗೈಯಾಗಬೇಕೆನ್ನುವ ಪೈಪೋಟಿ. ಒಂದು ಸಮಾರಂಭದಲ್ಲಿ ಅಡುಗೆ ಸೈ ಎನಿಸಿದರೆ ಮತ್ತೊಂದು ಅಡುಗೆ ಹುಡುಕಿಕೊಂಡು ಬರುತ್ತದೆ. ಇದಕ್ಕಾಗಿ ಸೂಪಜ್ಞರು ಪಾಲಿಸುವ ಉಪಾಯ - ಅಡುಗೆಗೆ ಟೇಸ್ಟ್ ಮೇಕರ್ ಬಳಕೆ.  ಈ ರುಚಿವರ್ಧಕವನ್ನು ಮನೆಯ ಯಜಮಾನನ ಗಮನಕ್ಕೆ ತಾರದೇ ಸ್ವತಃ ಒಯ್ಯುತ್ತಾರೆ. ಬಳಸುತ್ತಾರೆ.
                ಸಮಾರಂಭಗಳಲ್ಲಿ ಐನೂರು, ಸಾವಿರ, ಎರಡು ಸಾವಿರ ಮಂದಿಗೆ ಅಡುಗೆ ಮಾಡಬೇಕೆಂಬಾಗ ತರಕಾರಿ, ಜೀನಸುಗಳಿಗೆ ಸಹಜವಾಗಿ ಮಾರುಕಟ್ಟೆಯನ್ನು ಅವಲಂಬಿಸಬೇಕು. ಮಾರುಕಟ್ಟೆಯ ತರಕಾರಿ ಅಂದಾಗ ಅದು ರಾಸಾಯನಿಕದಲ್ಲಿ ಮಿಂದೆದ್ದು ಬಂದವುಗಳೆಂದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಅಕ್ಕಿಯಿಂದ ಉಪ್ಪಿನ ತನಕ ಸಾಚಾತನಕ್ಕೆ ಪ್ರತ್ಯೇಕ ಪರೀಕ್ಷೆ ಬೇಕಾಗುವ ಕಾಲಮಾನ. ಇವುಗಳೊಂದಿಗೆ ಉದರಕ್ಕಿಳಿಯುವ ಖಾದ್ಯಗಳಿಗೂ ಈಗ ರುಚಿವರ್ಧಕದ ಸ್ಪರ್ಶ!  ಕಾರ್ಬ್ಯೆೈಡ್ ಹಾಕಿ ದಿಢೀರ್ ಹಣ್ಣು ಮಾಡಿದ ಬಾಳೆಹಣ್ಣುಗಳು ಭೋಜನದೊಂದಿಗೆ ಬೋನಸ್. ಉಚಿತವಾಗಿ ಕೊಡುವ ಐಸ್ಕ್ರೀಂನಲ್ಲಿ ಇನ್ನು ಏನೆಲ್ಲಾ ಇವೆಯೋ ಗೊತ್ತಿಲ್ಲ. ಹಾಗೆಂತ ರುಚಿವರ್ಧಕ ಬಳಸದೆ ತಮ್ಮ ಅನುಭವ ಮತ್ತು ಕೈಗುಣದಿಂದ ಶುಚಿರುಚಿಯಾದ ಭೋಜನವನ್ನು ಸಿದ್ಧಪಡಿಸುವ ಸೂಪಜ್ಞರು ಎಷ್ಟು ಮಂದಿ ಇಲ್ಲ.
                ಮ್ಯಾಗಿ ನಿಷೇಧದ ಕಾವು ದೇಶವಲ್ಲ, ವಿಶ್ವಾದ್ಯಂತ ಕಂಪನ ಮೂಡಿಸಿದೆ. ಅದರಲ್ಲಿ ಅಗತ್ಯಕ್ಕಿಂತ ಹೆಚ್ಚಿರುವ ಸೀಸ, ರುಚಿವರ್ಧಕವು ಉದ್ಯಮದ ಅಡಿಗಟ್ಟನ್ನು ಅಲ್ಲಾಡಿಸಿದೆ. ಕೋಟಿಗಟ್ಟಲೆ ಉತ್ಪನ್ನ ಬೆಂಕಿಗಾಹುತಿಯಾಗಿದೆ.  ಜಾಹೀರಾತುಗಳ ಮೂಲಕ ನಂಬಿಸಿದ ಸಂಸ್ಥೆಯು ವಿಶ್ವಾಸ ಕಳೆದುಕೊಂಡಿದೆ. ತಿನ್ನುವ ಎಲ್ಲಾ ವಸ್ತುಗಳನ್ನು ಸಂಶಯ ದೃಷ್ಟಿಯಿಂದ ನೋಡುವ ಸ್ಥಿತಿ ರೂಪುಗೊಂಡಿದೆ. ಸೇಬು- ದ್ರಾಕ್ಷಿಯೊಳಗಿರುವ ರಾಸಾಯನಿಕ, ಹಾರ್ಮೋನುಗಳ ಕುರಿತು, ಕಲ್ಲಂಗಡಿಗೆ ಇಂಜೆಕ್ಟ್ ಮಾಡುವ ವಿವಿಧ ಮುಖಗಳನ್ನು ವಾಹಿನಿಗಳು ಪ್ರಸಾರ ಮಾಡುತ್ತಲೇ ಇವೆ. ರಾಸಾಯನಿಕ ಸಿಂಪಡಣೆಗಳ ಕರಾಳ ಮುಖಗಳತ್ತ ವಿವಿಧ ಮಾಧ್ಯಮಗಳು ಬೊಬ್ಬಿಡುತ್ತಿವೆ.  ಮ್ಯಾಗಿಯಲ್ಲಿರುವ ಅಕರಾಳ ವಿಕಾರಳ ಮುಖದ ದರ್ಶನವಾದಾಗ ಈ ಎಲ್ಲಾ ವಿಚಾರಗಳತ್ತ ತಿಳಿಯಲು ಈಗಲಾದರೂ ಮೈಕೊಡವಿ ಎದ್ದೇವಲ್ಲಾ!
                   ತಮಿಳುನಾಡಿನಿಂದ ಬರುವ ತರಕಾರಿಗಳಿಗೆ ಕೇರಳ ರಾಜ್ಯವು ಅವಲಂಬಿತ. ನಿರ್ವಿಷ ಆಹಾರದ ಕುರಿತು ಕೇರಳದಲ್ಲಿ ವ್ಯಾಪಕವಾಗಿ ಅರಿವು ಮೂಡಿಸುವ ಕೆಲಸವನ್ನು ಸರಕಾರ ಮತ್ತು ಖಾಸಗಿ ಸಂಸ್ಥೆಗಳು ಮಾಡುತ್ತಾ ಇವೆ. ಆರೋಗ್ಯ ಕಾಳಜಿಯಿದ್ದ  ಮಂದಿ ಸಾವಯವಕ್ಕೆ ಬದಲಾಗುತ್ತಿದ್ದಾರೆ. ಸ್ವಾವಲಂಬನೆಯತ್ತ ಹೊರಳುತ್ತಿದ್ದಾರೆ. ಕೈತೋಟಗಳನ್ನು ಎಬ್ಬಿಸುವ ಮನಃಸ್ಥಿತಿ ನಿರ್ಮಾಣವಾಗುತ್ತಿದೆ. ಮಾವು, ಹಲಸು, ಗೆಡ್ಡೆ, ಎಲೆಗಳು ತರಕಾರಿಯಾಗಿ ಉದರ ಸೇರುತ್ತಿದೆ. "ರಾಸಾಯನಿಕದ ಪರಿಣಾಮ ಜನರ ಮೇಲೆ ಎಷ್ಟು ಪರಿಣಾಮ ಬೀರಿದೆ ಎಂದರೆ, ಹೊರ ರಾಜ್ಯಗಳಿಂದ ತರಕಾರಿಯನ್ನು ತರಿಸದೇ ಇರಲು ಕೆಲವು ವ್ಯಾಪಾರಿಗಳು ನಿರ್ಧರಿಸಿದ್ದಾರೆ," ಎನ್ನುತ್ತಾರೆ ಕಾಸರಗೋಡಿನ ಕೃಷಿಕ ಗೋಪಾಲ ರಾವ್.
                     ಮುಖ್ಯವಾಗಿ ಟೊಮೆಟೋ, ದೊಣ್ಣೆಮೆಣಸು, ಕ್ಯಾಬೇಜ್, ಹೂಕೋಸುಗಳಿಗೆ ಸುಮಾರು ಹತ್ತಕ್ಕೂ ಹೆಚ್ಚು ಬಾರಿ ರಾಸಾಯನಿಕಗಳನ್ನು ಸಿಂಪಡಿಸಲಾಗುತ್ತದೆ ಎಂದು ಕೃಷಿಕ ಮಿತ್ರರನೇಕರು ಹೇಳಿಕೊಂಡಿದ್ದಾರೆ. ಯಾವ್ಯಾವ ಕೃಷಿಗೆ ಎಂತಹ ವಿಷವನ್ನು ಸಿಂಪಡಣೆ ಮಾಡಬೇಕೆಂದು ಅಂಗಡಿಯಾತನೇ ಬೋಧನೆ ಮಾಡುತ್ತಾನೆ. ಕೊನೆಗೆ ಎಷ್ಟು ಪ್ರಮಾಣದಲ್ಲಿ ಸಿಂಪಡಣೆ ಮಾಡಬೇಕೆಂಬ ಡೋಸೇಜನ್ನೂ ಹೇಳುತ್ತಾರೆ. ಇಂತಹ ವ್ಯವಹಾರವನ್ನು ಕಣ್ಣಾರೆ ನೋಡಿದ ಬಳಿಕ ಈ ನಾಲ್ಕು ಉಗ್ರರಿಗೆ ನಾನಂತೂ ವಿದಾಯ ಹೇಳಿದ್ದೇನೆ!
                  ಕನ್ನಾಡಿನಲ್ಲಿ ಸಾವಯವದ ಅರಿವು ಈಗಲ್ಲ ದಶಕದೀಚೆಗೆ ಪ್ರಚಾರವಾಗುತ್ತದಷ್ಟೇ ಹೊರತು ಅದು ಮನಸ್ಸಿಗೆ ಇಳಿದಿರುವುದು ತೀರಾ ಕಡಿಮೆ. ಆಹಾರದಲ್ಲಿ ವಿಷದ ಪ್ರಮಾಣಗಳು ಪತ್ತೆಯಾಗುತ್ತಲೇ ಇದ್ದಂತೆ ನಿರ್ವಿಷ ಆಹಾರಗಳ ಹುಡುಕಾಟದತ್ತ, ಬೆಳೆಯುವತ್ತ ಯೋಜನೆ, ಯೋಚನೆಗಳು ಹೆಜ್ಜೆಯೂರಿವೆ. ಸಮಾನಾಸಕ್ತ ಸಂಘಟನೆಗಳು ನಗರಗಳಲ್ಲಿ ಸಾವಯವದ ಮಹತ್ವ, ನಿರ್ವಿಷ ಆಹಾರದ ಅಪಾಯಗಳತ್ತ ಅರಿವು ಚೆಲ್ಲುವ ಕೆಲಸವನ್ನು ಸದ್ದಿಲ್ಲದೆ ಮಾಡುತ್ತಿದ್ದಾರೆ. ಪಾಲಿಶ್ ಮಾಡದ ಅಕ್ಕಿಯನ್ನು ಅರಸಿ ಬರುವ, ವಿಳಾಸ ಕೇಳುವ ಅಮ್ಮಂದಿರು ಎಚ್ಚರವಾಗಿದ್ದಾರೆ. ಮ್ಯಾಗಿ ನಿಷೇಧದ ಬಳಿಕವಂತೂ ಇಂತಹ ಪ್ರಕ್ರಿಯೆ ತೀವ್ರವಾಗಿದೆ.
                    ಮೂಲಿಕಾ ತಜ್ಞ ಪಾಣಾಜೆಯ ವೆಂಕಟ್ರಾಮ ದೈತೋಟ ಎಚ್ಚರಿಸುತ್ತಾರೆ, "ನಿರ್ವಿಷ ಆಹಾರದ ಕಾಳಜಿ ಎಲ್ಲಿಯವರೆಗೆ ನಮಗೆ ಬರುವುದಿಲ್ಲವೋ ಅಲ್ಲಿಯವರೆಗೆ ಖಾಯಿಲೆಗಳು ತಪ್ಪಿದಲ್ಲ. ಆಹಾರವೇ ಔಷಧಿಯಾಗಬೇಕು. ಈಗೆಲ್ಲವೂ ತಿರುಗುಮುರುಗು. ರಾಸಾಯನಿಕ ರಹಿತವಾದ ಆಹಾರದ ಸೇವನೆಯಿಂದ ಕಾಯಿಲೆಗಳನ್ನು ದೂರವಿಡಬಹುದು." ವೆಂಕಟ್ರಾಮದ ಕಿವಿಮಾತಿಗೆ ನಮ್ಮ ಹಿರಿಯರ ಬದುಕು ಆದರ್ಶವಾಗಿತ್ತು.
                ವಿವಿಧ ರೂಪಗಳಲ್ಲಿ ರಾಸಾಯನಿಕಗಳನ್ನು ಗೊತ್ತಿಲ್ಲದೆ ಬದುಕಿನಂಗವಾಗಿ ಸ್ವೀಕರಿಸಿದ್ದೇವೆ. ಗೊತ್ತಾದ ಬಳಿಕ ದೂರವಿರುವುದರಲ್ಲಿ ಆರೋಗ್ಯ ಭಾಗ್ಯ. ತಕ್ಷಣ ಎಲ್ಲವನ್ನೂ ವಜ್ರ್ಯ ಮಾಡಲಸಾಧ್ಯ. ಹಂತ ಹಂತವಾಗಿ ಪ್ರಮಾಣವನ್ನು ಕಡಿಮೆಗೊಳಿಸುವುದರಿಂದ ಒಂದಷ್ಟು ದಿವಸ ಹೆಚ್ಚು ಬಾಳಬಹುದೇನೋ? ನಿರ್ವಿಷವಾಗಿ ಕೃಷಿ ಉತ್ಪನ್ನಗಳನ್ನು ಬೆಳೆದುಕೊಡುವ ಕೃಷಿಕರನ್ನು ಪ್ರೋತ್ಸಾಹಿಸೋಣ.

Friday, June 12, 2015

'ನಿಷೇಧ ಗುಮ್ಮ'ನಿಂದ ಮತಿಯ ಮಸೆತದ ಹರಿತ!

              ಅಬ್ಬಾ, ಎಷ್ಟೊಂದು ತಳಮಳ. ಅಡುಗೆ ಮನೆಗಳಲ್ಲಿ ವಿಷಾದದ ರಾಗ. ಊಟದ ಬಟ್ಟಲು ಬರಿದು. ಕಂದಮ್ಮಗಳು ಉಪವಾಸ. ಮುಂದಿನ ಹಾದಿ ಶೂನ್ಯ. ಅಮ್ಮಂದಿನ ಮುಖದಲ್ಲಿ ನಗುವಿಲ್ಲ. ಆಗಸವೇ ತಲೆಮೇಲೆ ಬಿದ್ದ ಅನುಭವ.
ಮ್ಯಾಗಿ ನಿಷೇಧದ  ರಾದ್ದಾಂತವಿದು. ತಿಂಗಳುಗಳಿಂದ ಮ್ಯಾಗಿಯದೇ ಗುಮ್ಮ. ನಿಷೇಧಗಳ ಸರಮಾಲೆ. ರೋಚಕ ಸುದ್ದಿಗಳ ಗೊಂಚಲುಗಳು. ಮನದ ಮೂಲೆಯಲ್ಲಿ ಚಿಗುರೊಡೆದ ಅನಾರೋಗ್ಯದ ಭೀತಿ. ಕಳಚಿಕೊಳ್ಳಲಾಗದ ನಂಟು. ಯಾವುದೋ ಒಂದು ಬ್ಯಾಚಿನಲ್ಲಿ ಇತ್ತೂಂತ ಎಲ್ಲವನ್ನೂ ನಿಷೇಧಿಸಬೇಕೇ ಎಂಬ ಗೊಣಗಾಟ. ಮ್ಯಾಗಿಗೆ ಹೊಂದಿಕೊಂಡ ಕಂದನಿಗೆ ಬೇರೆ ಆಹಾರ ಹೊಂದಿಸಲಾಗದ ಒದ್ದಾಟ.
           ಮ್ಯಾಗಿಯಲ್ಲಿ ಸೀಸ ಮತ್ತು ರುಚಿವರ್ಧಕದ ಅಂಶಗಳು ಮಿತಿಗಿಂತ ಹೆಚ್ಚಿವೆ ಎನ್ನುವುದು ನಿಷೇಧಕ್ಕೆ ಕಾರಣ. ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟಗಳ ಪ್ರಾಧಿಕಾರವು ಉತ್ಪನ್ನವನ್ನು ಪರೀಕ್ಷೆಗೆ ಒಳಪಡಿಸಲು ಆದೇಶಿಸಿತ್ತು.  ಪರೀಕ್ಷಾ ಫಲಿತಾಂಶ ಬರುತ್ತಲಿದೆ. 'ಯಾವುದೇ ಹಾನಿಕಾರಕ ಅಂಶಗಳಿಲ್ಲ, ಧಾರಾಳವಾಗಿ ಬಳಸಬಹುದು' ಎಂಬ ವರದಿ ಬಂದರೂ ಆಶ್ಚರ್ಯವಿಲ್ಲ. ಒಂದು ವೇಳೆ ಸಾರ್ವತ್ರಿಕವಾಗಿ ನಿಷೇಧಕ್ಕೆ ಒಳಗಾಯಿತೆನ್ನಿ, ತಿಂಗಳೊಳಗೆ ಹೊಸ ಅವತಾರದ ಉತ್ಪನ್ನಗಳು ವಿವಿಧ ಬಣ್ಣದ ಪ್ಯಾಕ್ಗಳಲ್ಲಿ ಗೋಚರ. ರತ್ನಗಂಬಳಿಯ ಸ್ವಾಗತ. 
             ಉತ್ಪನ್ನದಲ್ಲಿ ಶರೀರಕ್ಕೆ ಬೇಡದ ರಾಸಾಯನಿಕಗಳು ಸೇರಿವೆ - ನಿಷೇಧದಿಂದ ಸ್ಪಷ್ಟವಾಗಿ ಜನರಲ್ಲಿ ಅರಿವು ಮೂಡಿದ ಅಂಶ. ಬೇರೆ ಬೇರೆ ಮೂಲಗಳಲ್ಲಿ ಹಿಂದೆ ಪ್ರಚುರವಾಗುತ್ತಿದ್ದಾರೂ ದೈತ್ಯ ಕಂಪೆನಿಯ ದೊಡ್ಡ ಸ್ವರದ ಮುಂದೆ ಈ ಕ್ಷೀಣ ಸ್ವರ ಕೇಳಿಸುವಿದಿಲ್ಲ. ಒಂದತೂ ಸ್ಪಷ್ಟ. ನಿಷೇಧ ಹಿಂತೆಗೆಯಲ್ಪಟ್ಟಿತು ಎನ್ನೋಣ.  ಮೊದಲಿನಂತೆ ಪ್ರೀತಿಯಿಂದ ಸ್ವಾಗತಿಸುವವರ ಸಂಖ್ಯೆ ಕಡಿಮೆಯಾದೀತು ಮತ್ತು ಬಳಸುವಾಗ ಹತ್ತಾರು ಬಾರಿ ಯೋಚಿಸುವ ಮನಃಸ್ಥಿತಿ ಬರಬಹುದು.
           1983ರಲ್ಲಿ '2 ನಿಮಿಷದ ಮ್ಯಾಗಿ' ಅಡುಗೆ ಮನೆ ಹೊಕ್ಕಿತು. ಕಂಪೆನಿಗೆ ಉದ್ಯೋಗಸ್ಥ ಯುವ ಮನಸ್ಸುಗಳ ಟಾರ್ಗೆಟ್.  ಬೆಳಗ್ಗಿನ ಒತ್ತಡಕ್ಕೆ ದೇವರೇ ಕೊಟ್ಟ ವರ! ಎರಡು ನಿಮಿಷದಲ್ಲಿ ತಿಂಡಿ ಸಿದ್ಧವಾಗುತ್ತದೆ ಎಂದರೆ ಯಾರಿಗೆ ಬೇಡ ಹೇಳಿ. ಆರ್ಥಿಕ ಉದಾರಿಕರಣದ ಬಳಿಕ ಉದ್ದಿಮೆಯ ಹೆಜ್ಜೆ ದೊಡ್ಡದಾಯಿತು. ಮಕ್ಕಳನ್ನು ಟಾರ್ಗೆಟ್  ಮಾಡಲು ಶುರು ಮಾಡಿತು. 'ಆರೋಗ್ಯಯುತ ಉತ್ಪನ್ನ' ಎಂದು ಬಿಂಬಿಸಿತು. ಒಂದು ಅಂಕಿ ಅಂಶದ ಪ್ರಕಾರ ಭಾರತವೊಂದರಲ್ಲೇ ಮ್ಯಾಗಿಯು ಕಂಪೆನಿಗೆ 390 ಮಿಲಿಯನ್ ಡಾಲರ್ ಆದಾಯ!
             ಖ್ಯಾತ ಅಂಕಣಕಾರ ಅಜಿತ್ ಪಿಳ್ಳೈ ಹೇಳುತ್ತಾರೆ, "ಯಾವಾಗ ನೆಸ್ಲೆ ಕಂಪೆನಿ ಮ್ಯಾಗಿಯುನ್ನು ಆರೋಗ್ಯಯುತ ಉತ್ಪನ್ನವೆಂದು ವ್ಯಾಪಾರ ಮಾಡತೊಡಗಿತೋ ಆಗ ಮ್ಯಾಗಿಯ ಅಗಾಧ ವಿಶ್ವ ಸೃಷ್ಟಿಯಾಯಿತು. ಇದಕ್ಕೆ ಹೊಂದಿಕೆಯಾಗುವಂತೆ ಕಂಪೆನಿಯು 2005ರಲ್ಲಿ ಆಟಾ (ಹೆಲ್ತ್) ನೂಡಲ್ಸ್ ಪರಿಚಯಿಸಿತು. ಜಾಹೀರಾತಿನಲ್ಲಿ ಆರೋಗ್ಯಕರ, ಪ್ರೋಟೀನ್, ವಿಟಮಿನ್, ಫೈಬರ್, ಪೌಷ್ಟಿಕಾಂಶಗಳಿರುವ ಉತ್ಪನ್ನವೆಂದು ಬಿಂಬಿಸುತ್ತಾ ಬಂತು."
              ಹಾನಿಕಾರಕ ಅಂಶಗಳು ಪತ್ತೆಯಾದ ತಕ್ಷಣ ಸರಕಾರ ಭರವಸೆಯ ಹೆಜ್ಜೆಯೇನೋ ಇಟ್ಟಿದೆ. ಕನ್ನಾಡಿನ ಆರೋಗ್ಯ ಮಂತ್ರಿಗಳು 'ಸುಮ್ಮನೆ ಬಿಡುವುದಿಲ್ಲ' ಎಂಬ ಎಚ್ಚರಿಕೆಯನ್ನೂ ನೀಡಿದ್ದಾರೆ. ಎಲ್ಲವೂ ಸರಿ. ನೆಸ್ಲೆಯಂತಹ ದೊಡ್ಡ ಕಂಪೆನಿಗಳಿಗೆ ಇದೆಲ್ಲಾ ಮಾಮೂಲಿ! ಬಹುಶಃ ಇಷ್ಟು ದೊಡ್ಡ ಪ್ರಮಾಣದಲ್ಲಿ ಹೊಡೆತ ಬೀಳಬಹುದೆಂದು ಕಂಪೆನಿ ಊಹಿಸಿರಲಿಲ್ಲ. ಗೊತ್ತಾಗುತ್ತಿದ್ದರೆ ಅಲ್ಲಿಂದಲ್ಲಿಗೆ ಹೊಂದಾಣಿಸುತ್ತಿತ್ತೋ ಏನೋ?  ಸಾಮಾನ್ಯರಿಗೆ ಗೊತ್ತಾಗದ, ಅರ್ಥವಾಗದ ಪ್ರಬಲವಾದ ಲಾಬಿಗಳು ಸರಕಾರದ ವ್ಯವಸ್ಥೆಯನ್ನು ಮಣಿಸುವಷ್ಟು ಸಶಕ್ತವಾಗಿದೆ. ಈ ಜಾಲದಿಂದ ಹೊರಬಂದು ನ್ಯಾಯ ಒದಗಿಸಿಕೊಡುವುದೇ ನಿಜವಾದ ಪ್ರಜಾ ಆಡಳಿತ. ಎಷ್ಟು ಸಾಧ್ಯವಾಗುತ್ತೋ ಗೊತ್ತಿಲ್ಲ.
                ಮ್ಯಾಗಿ ಬೇಯುತ್ತಾ ಇದ್ದಂತೆ, ಮಾವು ಸುದ್ದಿ ಮಾಡಲು ಹೊರಟಿತು. ಮೈಸೂರಿನಲ್ಲಿರುವ ಒಂಭತ್ತು ಗೋದಾಮುಗಳಲ್ಲಿರುವ ಮಾವಿನ ಹಣ್ಣುಗಳನ್ನು ನಾಶಮಾಡಲಾಯಿತು.  ಕ್ಯಾಲ್ಸಿಯಂ ಕಾರ್ಬ್ಯ್ ಡ್ ಹರಳು ಬಳಸಿ ಕೃತಕವಾಗಿ ಹಣ್ಣು ಮಾಡಿದ್ದಾರೆ ಎನ್ನುವ ಕಾರಣ. ಹೀಗೆ ಮಾಡಿದರೆ ಹಣ್ಣುಗಳು ತಾಜಾ ಆಗಿ ಕಾಣುವುದಲ್ಲದೆ, ಬೇಕಾದ ಸಮಯಕ್ಕೆ ಹಣ್ಣುಗಳು ಲಭ್ಯವಾಗುವಂತೆ ಮಾಡುವ ಜಾಣ್ಮೆಯಿದು. ವ್ಯಾವಹಾರಿಕ  ಒತ್ತಡದಲ್ಲಿ ಮಿತಿಗಿಂತ ಹೆಚ್ಚು ಕಾರ್ಬ್ಯ್ ಡ್  ಬಳಸುವ ವಿಚಾರ ಸಾಮಾನ್ಯರಿಗೂ ಗೊತ್ತು. ನಮ್ಮ ನಡುವೆ ನಡೆಯುವ ವಿದ್ಯಮಾನಗಳನ್ನು ಕಣ್ಣು ಮುಚ್ಚಿ ಸ್ವೀಕರಿಸಿದ್ದೇವೆ.
               ಬೆಂಗಳೂರಿನ ದೇಸಾಯಿ ಆಸ್ಪತ್ರೆಯ ಡಾ.ನಳಿನಿ ಅವರು ಕಾರ್ಬ್ಯ್ ಡ್  ಬಳಕೆಯ ದುಷ್ಪರಿಣಾಮ ಹೇಳುತ್ತಾರೆ, ಕಾರ್ಬ್ಯ್ ಡ್ ನಲ್ಲಿರುವ ಸೋಡಿಯಂ ಹಾಗೂ ಕಾರ್ಬೋನಿಕ್  ಆಸಿಡ್ ಕ್ರಮೇಣ ದೇಹಕ್ಕೆ ಸೇರಿ ಮೆದುಳು, ನರಗಳು, ಶ್ವಾಸಕೋಶ, ಕಿಡ್ನಿ ವೈಫಲ್ಯ ಹಾಗೂ ನಿರಂತರ ಬಳಕೆಯಿಂದ ಕ್ಯಾನ್ಸರಿನಂತಹ ಮಾರಕ ರೋಗಗಳಿಗೆ ದಾರಿ ಮಾಡಿ ಕೊಡಬಲ್ಲುದು. ಬಾಳೆಕಾಯಿ, ಪಪ್ಪಾಯಿ, ಮಾವುಗಳನ್ನು ಮಾಗಿಸಲು ಬಳಸುವ ತಂತ್ರದಿಂದ ವ್ಯಾಪಾರಿ ಬಚಾವ್. ಆದರೆ ಗ್ರಾಹಕ? ಒಂದೆರಡು ದಿವಸ ಇಂತಹ ಹಣ್ಣುಗಳನ್ನು ತಿಂದರೆ ಆರೋಗ್ಯ ಕೆಡದು. ನಿರಂತರ ಬಳಕೆಯಿಂದ ಹಾನಿಯಂತೂ ಖಂಡಿತ.
               ನಾಳೆ ನಮಗೆ ಬಾಳೆಹಣ್ಣು ಬೇಕು - ಎಂದಾದರೆ ಅಂಗಡಿಯಾತನಿಗೆ ಇಂದು ಸಂಜೆ ಹೇಳಿದರೆ ಆಯಿತು, ಒಂದು ರಾತ್ರಿಯಲ್ಲಿ ಹಣ್ಣು ಮಾಡಿಕೊಡುವ ವ್ಯವಸ್ಥೆ. ಬಳಸುವವರಿಗೆ ಕಾರ್ಬ್ಯ್ ಡ್  ರಾಸಾಯನಿಕ ಮತ್ತು ಅರೋಗ್ಯದ ಹಾನಿಯ ಅರಿವು ಇರುವುದಿಲ್ಲ. ಹದಿನೈದಕ್ಕೂ ಹೆಚ್ಚು ಕೀಟನಾಶಕ ಸಿಂಪಡಣೆಯಿಂದ ತೋಯ್ದ, ಲಕಲಕ ಹೊಳೆಯುವ ಟೊಮೆಟೋ, ಹೂಕೋಸು, ಕ್ಯಾಬೇಜು, ದೊಣ್ಣೆಮೆಣಸುಗಳನ್ನು ಒಪ್ಪಿಕೊಂಡಂತೆ ಬಾಳೆಹಣ್ಣನ್ನೂ ಒಪ್ಪಿದ್ದೇವೆ, ಅಪ್ಪಿದ್ದೇವೆ. ನಿಷೇಧದ ಗುಮ್ಮ ಅಬ್ಬರಿಸಿದಾಗ ಬಣ್ಣ ಬಯಲಾಗುತ್ತದಷ್ಟೇ.
              ಇನ್ನು ಅಡಿಕೆಯತ್ತ ಹೊರಳಿ. ಆಗಾಗ್ಗೆ ಗುಟ್ಕಾ ನಿಷೇಧದ ಗುಮ್ಮನ ಅವತಾರ. ಲಕ್ಷಾಂತರ ಮಂದಿಯ ಅನ್ನದ ಬಟ್ಟಲು ಕಂಪಿಸಿವೆ. ಗುಟ್ಕಾದ ಮುಖ್ಯ ಕಚ್ಚಾವಸ್ತು ಅಡಿಕೆ. ಇದರೊಂದಿಗೆ ರಾಸಾಯನಿಕ ಒಳಸುರಿಗಳು ಸೇರಿದಾಗ ಗುಟ್ಕಾ ಆಗುತ್ತದೆ. ಮೈಸೂರಿನ 'ಆಹಾರ ತಂತ್ರಜ್ಞಾನ ಸಂಶೋಧನಾ ಕೇಂದ್ರ' ವರದಿ ಪ್ರಕಾರ ಅಡಿಕೆಯಲ್ಲಿ ಶೇ.46 ಶರ್ಕರಪಿಷ್ಠ, 4.2 ಪ್ರೊಟಿನ್, 8-12 ರಷ್ಟು ಕೊಬ್ಬು, ಜತೆಗೆ ಕಬ್ಬಿಣ, ಕ್ಯಾಲ್ಸಿಯಂನಂತರ ಲವಣಗಳು, ಜೀವಸತ್ವಗಳಿವೆ. ಇದನ್ನು 'ಶ್ರೇಷ್ಠ ನೈಸರ್ಗಿಕ ಸುಗಂಧ ದ್ರವ್ಯ' ಎಂದು ಪುರಾಣಗಳು ಉಲ್ಲೇಖಿಸಿವೆ. ಪಾಶ್ಚಾತ್ಯರಲ್ಲಿ ಅಧಿಕವಾಗುತ್ತಿರುವ 'ಮುಪ್ಪಿನ ಮರೆವು' ಕಾಯಿಲೆಗೂ ಅಡಿಕೆ ಔಷಧವಾಗಿ ಒಳಸುರಿ.
             ಗುಟ್ಕಾ, ಪಾನ್ ಪರಾಗ್, ಪಾನ್ ಮಸಾಲ ನಿಷೇಧ ಎಂದಾಗ ಅಡಿಕೆಯೂ ನಿಷೇಧಕ್ಕೆ ಒಳಪಡುತ್ತದೆ. ಇದರ ಬದಲು ಅಡಿಕೆಯೊಂದಿಗೆ ಮಿಶ್ರಣ ಮಾಡುವ ದೇಹದ ಅರೋಗ್ಯಕ್ಕೆ ಮಾರಕವಾಗಿರುವ ರಾಸಾಯನಿಕ ಅಂಶಗಳನ್ನು ಮಾತ್ರ ನಿಷೇಧಿಸಬೇಕೆಂದು ಯಾಕೆ ತೋರುತ್ತಿಲ್ಲ? ಇದನ್ನು ಸರಕಾರಕ್ಕೆ ಹಲವಾರು ಸಂಘಟನೆಗಳು ಮನದಟ್ಟು ಮಾಡಲು ಶ್ರಮಿಸಿವೆ, ಶ್ರಮಿಸುತ್ತಿವೆ. ಆಡಳಿತ ವ್ಯವಸ್ಥೆಗಳ ಹಿಂದೆ ಜಾಣ ಕುರುಡು, ಕಿವುಡು ಮತ್ತು  ಅಡಿಕೆಯ ಹಿಂದಿನ ವ್ಯವಸ್ಥಿತ ಲಾಬಿ, ಪಿತೂರಿಗಳ ಕೊಂಡಿಗಳು ಬಲವಾಗಿರುವುದು ನಮ್ಮ ಕಣ್ಣಿಗೆ ಕಾಣುತ್ತಿಲ್ಲ. ಗುಟ್ಕಾ ಮೇಲಿನ ಆಪಾದನೆಗಳು ನ್ಯಾಯಾಲಯದ ಮೆಟ್ಟಲೇರಿದೆ. ಆರೋಗ್ಯದ ಮೇಲೆ ಬೀರುವ ಪರಿಣಾಮಗಳ ಬಗೆಗಿನ ವರದಿ ಕಾನೂನು ಮೇಜಿನಲ್ಲಿದೆ.
               ಕಳೆದ ವರುಷ ಐರೋಪ್ಯ ರಾಷ್ಟ್ರಗಳ ಒಕ್ಕೂಟವು ಭಾರತದಿಂದ ತರಿಸಿಕೊಳ್ಳುವ ಅಲ್ಫಾನ್ಸೋ ಮಾವು ಹಾಗೂ ಕೆಲವು ತರಕಾರಿಗಳನ್ನು ನಿಷೇಧಿಸಿತ್ತು. ಭಾರತದಿಂದ ರಫ್ತಾಗುವ ಒಟ್ಟು ಹಣ್ಣು, ತರಕಾರಿಗಳಲ್ಲಿ ಶೇ.50ರಷ್ಟು ಐರೋಪ್ಯ ರಾಷ್ಟ್ರಗಳಿಗೆ ಮೀಸಲು. ನಿಷೇಧದ ಗುಮ್ಮದಿಂದಾಗಿ ರಾಷ್ಟ್ರೀಯತೆ ಮತ್ತು ರಾಷ್ಟ್ರೀಯ ಆದಾಯದ ಹಳಿಗಳು ಅಲ್ಲಾಡಿದುವು. ಗುಣಮಟ್ಟ ನಿಯಂತ್ರಣ ಸುಧಾರಿಸಿದೆ ಎನ್ನುವ ಕಾರಣದಿಂದ ಈಗಂತೂ ನಿಷೇಧದ ಉರುಳು ಸಡಿಲವಾಗಿದೆ.
ಗೋಬಿ ಮಂಚೂರಿಯನ್, ತರಕಾರಿ, ಸಿದ್ಧ ಪೇಯಗಳು, ಜೀನಸು... ಹೀಗೆ ಬದುಕಿನಲ್ಲಿ ಬಳಕೆಯಾಗುವ ಬಹುತೇಕ ಎಲ್ಲದರಲ್ಲಿಯೂ ರಾಸಾಯನಿಕಗಳ ಮೇಲಾಟ. ದೇಹಕ್ಕೆ ಮಾರಕವಾಗಿವ ಅಂಶಗಳಿರುವ ಉತ್ಪನ್ನಗಳನ್ನು ವೈಭವೀಕರಿಸುವುದು ನಮಗೆ ಹೆಮ್ಮೆ!  ಎಲ್.ಕೆ.ಜಿ., ಯು.ಕೆ.ಜಿ. ಚಿಣ್ಣರ ಬುತ್ತಿಪಾತ್ರೆ ಬಿಡಿಸಿ ನೋಡಿ - ಬಣ್ಣ ಬಣ್ಣದ ಸಿದ್ಧ ಆಹಾರಗಳ ಕಲರವ. ಬೆಣ್ಣೆ, ಸಾಸ್, ಹಾಲಿನ ವಿಷಕಾರಕ ಅಂಶಗಳನ್ನು ವಾಹಿನಿಗಳು ಕಿವಿಗೆ ಹೊಗ್ಗಿಸುತ್ತಲೇ ಇವೆ. ಅದಕ್ಕೂ, ನಮಗೂ ಸಂಬಂಧವಿಲ್ಲವೆಂಬತೆ ವರ್ತಿಸುತ್ತೇವೆ. ಹಾನಿಕಾರಕ ಅಂಶಗಳ ಉತ್ಪನ್ನಗಳನ್ನು ಕಡಿಮೆ ಮಾಡಿದಷ್ಟೂ ಆರೋಗ್ಯ-ಭಾಗ್ಯ. ಗ್ರಾಹಕ ಎಲ್ಲಿಯವರೆಗೆ ಆಕಳಿಸುತ್ತಾನೋ ಅಲ್ಲಿಯ ವರೆಗೆ ರಾಸಾಯನಿಕ, ವಿಷಕಾರಿ ಉತ್ಪನ್ನಗಳು ಅಡುಗೆ ಮನೆಗೆ ನುಗ್ಗುತ್ತಲೇ ಇರುತ್ತವೆ. ನಿಷೇಧ ಗುಮ್ಮ ತಟ್ಟಿದಾಗ ಕೊಡವಿ ಎಚ್ಚರವಾಗುತ್ತೇವೆ. ಆಗಷ್ಟೇ ಅರಿವಿನ ಮಸೆತಕ್ಕೆ ಶ್ರೀಕಾರ.

(ಉದಯವಾಣಿಯ ನೆಲದ ನಾಡಿ ಅಂಕಣ/11-6-2015/ ಪ್ರಕಟ)
ಚಿತ್ರ ಕೃಪೆ : ನೆಟ್


ಪಿಲಿಕುಳದಲ್ಲಿ ವಸಂತೋತ್ಸವದ ಖುಷಿ



               ಮಂಗಳೂರಿನ ಪಿಲಿಕುಳ ನಿಸರ್ಗಧಾಮದಲ್ಲಿ ಮೇ ಕೊನೆಗೆ ವಸಂತ ಋತುವಿನ ಖುಷಿ  ಆಚರಣೆ. ವನರಾಜಿ ಸಂಭ್ರಮಿಸುವ ಮಾಸದಲ್ಲಿ ಮನಕ್ಕೆ ಪುಳಕವೀಯುವ ವಾತಾವರಣ. ನಗರದ ನಿತ್ಯ ಜಂಜಾಟದ ಮಧ್ಯೆ ಒಂದು ಹೊತ್ತು ಖುಷಿ ಅನುಭವಿಸುವ ಅವಕಾಶ. ಹಳ್ಳಿ ಬದುಕಿನ ಪ್ರತಿಫಲನ. ಹಳ್ಳಿ ತಿಂಡಿಗಳ ಮರು ನೆನವರಿಕೆ. ಬದುಕಿನಿಂದ ಮರೆಯಾದ ರುಚಿಗಳನ್ನು ಮತ್ತೆ ಪಡೆದ ಸಂತಸ.
                 ಸುಮಾರು ಅರುವತ್ತು ಮಳಿಗೆಗಳು. ನಲವತ್ತಕ್ಕೂ ಮಿಕ್ಕಿದ ಮಳಿಗೆಗಳಲ್ಲಿ ಕೃಷಿಯ ಟಚ್. ಗಿಡಗಳ ಮಾರಾಟದಿಂದ ಮೌಲ್ಯವರ್ಧನೆಯ ತನಕ. ಸಾವಯವ ಉತ್ಪನ್ನಗಳಿಗೆ ಆದ್ಯತೆ. ಬೆಳಗ್ಗಿನಿಂದ ಸಂಜೆ ತನಕ ಮುಗಿಬೀಳುವ ಕೊಳ್ಳುಗರು. ನಗರದಲ್ಲಿ ಬದುಕನ್ನು ಕಟ್ಟಿಕೊಂಡವರು, ನಗರದ ಸುತ್ತಮುತ್ತ ಇರುವ ಹಳ್ಳಿಗರೂ ಕೂಡಾ ಮಳಿಗೆಗಳಿಗೆ ಭೇಟಿ ನೀಡಿದ್ದರು. ತಮಗೆ ಬೇಕಾದ ಉತ್ಪನ್ನಗಳನ್ನು ಮನಸಾ ತಿಂದರು. ಮನೆಗೂ ಒಯ್ದರು.
                ಇದರಲ್ಲೇನು ವಿಶೇಷ? ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಇಬ್ರಾಹಿಂ ಹೇಳುತ್ತಾರೆ, "ಹಳ್ಳಿ ಸೊಗಸಿನ ಆಹಾರ ವೈವಿಧ್ಯಗಳನ್ನು ಪಟ್ಟಣಿಗರೂ ಸವಿಯಬೇಕು. ಉತ್ಪನ್ನಗಳಿಗೆ ನಗರದಲ್ಲಿ ಕೊಳ್ಳುಗರು ರೂಪುಗೊಳ್ಳಬೇಕು. ಆಗ ಹಳ್ಳಿ-ಪಟ್ಟಣದ ಕೊಂಡಿ ಬೆಸೆಯುತ್ತದೆ. ಬದುಕಿನ ಧಾವಂತದಲ್ಲಿ ಎಷ್ಟೋ ಗ್ರಾಮೀಣ ವಿಚಾರಗಳು ಮರೆತುಹೋಗಿದೆ. ಅದನ್ನು ಮತ್ತೊಮ್ಮೆ ನೆನಪಿಸುವ ಉದ್ದೇಶವೇ ವಸಂತೋತ್ಸವ."
                   ಬಂಟ್ವಾಳದ 'ಹಲಸು ಪ್ರೇಮಿ ಕೂಟ'ವು ಸ್ಥಳದಲ್ಲೇ ಹಲಸಿನ ತಿಂಡಿಗಳನ್ನು ಸಿದ್ಧಪಡಿಸುತ್ತಿದ್ದರು. ತಿಂಡಿಗಳನ್ನು ಖರೀದಿಸಲು ಕ್ಯೂ! ಒಂದೊಂದು ಐಟಂ ಸಿದ್ಧವಾಗುವುದೇ ತಡ, ಹತ್ತು ನಿಮಿಷದಲ್ಲಿ ಖಾಲಿ ಖಾಲಿ. "ಮಾಂಸದಲ್ಲಿ ಸಿದ್ಧಪಡಿಸುವ 'ಕಬಾಬ್' ಎಲ್ಲರಿಗೂ ಗೊತ್ತು. ಹಲಸಿನಿಂದ ಕಬಾಬನ್ನು ತಯಾರಿಸಲು ಸಾಧ್ಯವೆಂಬುದನ್ನು ಕೂಟವು ತೋರಿಸಿದೆ. ಸಸ್ಯಾಹಾರಿಗಳಿಗೆ ಮಾಂಸದ ಕಬಾಬ್ ವಜ್ರ್ಯ. ಅದರ ರುಚಿ ಹೇಗಿರಬಹುದು ಎನ್ನುವ ಕುತೂಹಲಿಗರ ಉತ್ಸಾಹವನ್ನು ಹಲಸಿನ ಕಬಾಬ್ ತಣಿಸಿದೆ. ಮಾಡಿದಷ್ಟೂ ಮುಗಿಯುವ ಕಬಾಬಿಗೆ ಗ್ರಾಹಕರು ಹೆಚ್ಚಿದ್ದರು," ಎನ್ನುತ್ತಾರೆ ಕೂಟದ ಸಾರಥ್ಯ ವಹಿಸಿದ ಮೌನೀಶ್ ಮಲ್ಯ.
               ಮಲ್ಯರು ತಮ್ಮ ಮಳಿಗೆಯಲ್ಲಿ ಇಪ್ಪತ್ತೇಳು ಹಲಸಿನ ಖಾದ್ಯಗಳನ್ನು ಸಿದ್ಧಪಡಿಸಿದ್ದರು. ಹಲಸಿನ ಹಣ್ಣಿನ ಪಾಯಸ, ಜಿಲೇಬಿ. ಕೇಕ್, ಲಾಲಿ, ಹಪ್ಪಳ, ಚಿಪ್ಸ್, ಹಲ್ವ.... ಮೊದಲಾದ ಉತ್ಪನ್ನಗಳಿಗೆ ಎಷ್ಟೊಂದು ಬೇಡಿಕೆ? ಸಿದ್ಧಾಹಾರದ ರಿಂಗಣದ ಮಧ್ಯೆ ಹಳ್ಳಿರುಚಿಗೂ ಸ್ಥಾನ-ಮಾನ. ಅಮ್ಮಂದಿರ ಒಲವು ಹೆಚ್ಚು. ಸ್ಥಳದಲ್ಲೇ ಉದರಕ್ಕಿಳಿಸುವುದರೊಂದಿಗೆ ಮನೆಗೂ ಕಟ್ಟಿಕೊಂಡು ಒಯ್ಯುವಷ್ಟು ಹಲಸಿನ ನಂಟು.
                ಕೇಪು 'ಹಲಸು ಸ್ನೇಹಿ ಕೂಟ'ದ ಮಳಿಗೆಯು ಪಪ್ಪಾಯಿ, ಮಾವು ಹಲಸಿನ ಹಣ್ಣಿನ ಮಾರಾಟದಲ್ಲಿ ತೊಡಗಿತ್ತು. ಇಡೀ ಹಣ್ಣು, ಹಣ್ಣಿನ ಅರ್ಧ ಭಾಗ, ಸೊಳೆಗಳನ್ನು ಖರೀದಿಸುವ ಗ್ರಾಹಕರ ಮೊಗದಲ್ಲಿ ಸಂತಸ. ಇಡೀ ಹಣ್ಣಿಗಿಂತ ಅರ್ಧ ಹಣ್ಣನ್ನು ಅಪೇಕ್ಷಿಸುವ ಗ್ರಾಹಕರ ಸಂಖ್ಯೆ ದೊಡ್ಡದು. ಸಣ್ಣ ಕುಟುಂಬದಲ್ಲಿ ಮೂರ್ನಾಾಲ್ಕು ಜನರಿಗೆ ದೊಡ್ಡ ಗಾತ್ರದ ಹಲಸಿನ ಹಣ್ಣು ಮಿಕ್ಕುತ್ತದೆ. ಅರ್ಧ ಆದ್ರೆ ಓಕೆ. ಹಲಸಿನ ಹಣ್ಣನ್ನು ಕೊಯ್ದು, ಸೊಳೆ ಎಬ್ಬಿಸುವುದೇ ತ್ರಾಸದ ಕೆಲಸ. ಅಂತಹವರಿಗೆ ಆರ್ಧ ಭಾಗ ಹಣ್ಣು  ಲಭ್ಯವಾಗಬೇಕು, ಎನ್ನುತ್ತಾರೆ ಕೂಟದ ಕಡಂಬಿಲ ಕೃಷ್ಣಪ್ರಸಾದ್. ಮಾವಿನಹಣ್ಣಿನ ಸಾಟ್ ಯಾ ಮಾಂಬಳಕ್ಕೆ ಬೇಡಿಕೆಯಿದ್ದರೂ ಉತ್ಪನ್ನವಿರಲಿಲ್ಲ.
                 ಮಂಗಳೂರಿನ ಸಾವಯವ ಕೃಷಿಕ-ಗ್ರಾಹಕ ಬಳಗದ ನಲವತ್ತೆಂಟು ಮಂದಿ ಸಾವಯವ ಉತ್ಪನ್ನಗಳನ್ನು ಪ್ರದರ್ಶನಕ್ಕಿಟ್ಟಿದ್ದರು.  ನಾವು ತಿನ್ನುವ ಆಹಾರ ಬಹುತೇಕ ವಿಷಮಯ. ಸಿಂಪಡಣೆ ಇಲ್ಲದೆ ಆಹಾರ ಬೆಳೆಯಲು ಸಾಧ್ಯವೇ ಇಲ್ಲ ಎನ್ನುವ ಮನಃಸ್ಥಿತಿ. ನಿಧಾನ ವಿಷ ಸೇವನೆಯ ಪರಿಣಾಮವಾಗಿ ಆರೋಗ್ಯ ಕೈಕೊಡುತ್ತಿದೆ ಎನ್ನುವ ಅರಿವು ಜನರಲ್ಲಿ ಮೂಡುತ್ತಿದೆ. ಈ ಹಿನ್ನೆಲೆಯಲ್ಲಿ ಸಾವಯವ ಮಳಿಗೆಗಳಲ್ಲಿ ರಶ್. ಅಕ್ಕಿ, ಬೆಲ್ಲ, ಸಂಬಾರದಿಂದ ತೊಡಗಿ ಹಣ್ಣುಗಳ ತನಕ ಜನರೊಲವು.
             ಈಚೆಗೆ ಮಂಗಳೂರಿನಲ್ಲಿ ಸಾವಯವದ ಅರಿವು ನಿಧಾನಕ್ಕೆ ತೆರೆದುಕೊಳ್ಳುತ್ತಿದೆ. ಜನರ ಆಸಕ್ತಿ ಸಾವಯವದತ್ತ ವಾಲುತ್ತಿದೆ. ಆರೋಗ್ಯವಂತರಾಗಿರಲು ಸಾವಯವ ಉತ್ಪನ್ನಗಳನ್ನು ಬಳಸದೆ ವಿಧಿಯಿಲ್ಲ ಎನ್ನುವ ನಿರ್ಧಾರಗಳು ಸುಶಿಕ್ಷಿತರಲ್ಲಿ ಮೂಡುತ್ತಿದೆ. ಕಳೆದೊಂದು ವರುಷದಿಂದ ನಿರಂತರವಾಗಿ ನಡೆಯುತ್ತಿದ್ದ ಸಾವಯವ ಸಂತೆಯ ಯಶೋಗಾಥೆ ಇದಕ್ಕೆ ಸಾಕ್ಷಿ, ಎನ್ನುತ್ತಾರೆ ಅಡ್ಡೂರು ಕೃಷ್ಣ ರಾವ್.
               ಮಾವು, ಹಲಸಿನ ಕಸಿಗಿಡಗಳು, ವಿವಿಧ ಮಾವಿನ ಹಣ್ಣುಗಳ ಪ್ರದರ್ಶನ, ವಿಟ್ಲದ ವಿಶಾಲ್ ಐಸ್ಕ್ರೀಂನವರ ಹಲಸು-ಮಾವಿನ ತಾಜಾ ಐಸ್ಕ್ರಿಂ, ಮತ್ಸ್ಯಾಹಾರ....ಹೀಗೆ ವಸಂತೋತ್ಸವದಲ್ಲಿ ವಿವಿಧ ವೈವಿಧ್ಯ ಆಹಾರಗಳ ಕಲರವ. ಪಿಲಿಕುಲ ನಿಸರ್ಗಧಾಮದ ಆಡಳಿತ ಮಂಡಳಿಯ ಡಾ.ಡಿ.ಸಿ.ಚೌಟರ ಕನಸಿನ ವಸಂತೋತ್ಸವಕ್ಕೆ ಜಿಲ್ಲಾಡಳಿತ ಸಾಥ್ ನೀಡಿತ್ತು. ಜಿಲ್ಲಾಧಿಕಾರಿಗಳಂತೂ ಫುಲ್ ಖುಷ್!
              ಸಂತೆಗಳು ವ್ಯಾಪಾರ ಕೇಂದ್ರಗಳು. ಹಳ್ಳಿ ಉತ್ಪನ್ನಗಳಿಗಿಂದು ಎಲ್ಲೆಡೆಯೂ ಬೇಡಿಕೆಯಿದೆ. ಸಾವಯವ ಉತ್ಪನ್ನಗಳ ಮಾರಾಟಕ್ಕೆ ಕಷ್ಟ ಪಡಬೇಕಾಗಿಲ್ಲ. ಜನರಲ್ಲಿ ಕೊಳ್ಳುವ ಸಾಮಥ್ರ್ಯವೂ ಯಥೇಷ್ಟವಿದೆ. ಹಣವಿದ್ದರೆ ಏನನ್ನೂ ಸಾಧಿಸಬಹುದೆನ್ನುವ ಕಾಲಮಾನದಲ್ಲಿದ್ದೇವೆ. ಸಾವಯವ ಉತ್ಪನ್ನಗಳನ್ನು ಖರೀದಿಸಿ, ಅನ್ನದ ಬಟ್ಟಲನ್ನು ತುಂಬಿದರೆ ಸಾಕೆ? ಜತೆಯಲ್ಲಿ ಸಾವಯವ ಮನಸ್ಸೂ ರೂಪುಗೊಳ್ಳಬೇಡವೇ? ಸಂತೆಗಳು ಇಂತಹ ಮನಸ್ಸುಗಳ ರೂಪೀಕರಣಕ್ಕೆ ಉಪಾಧಿ.
ಮಂಗಳೂರಿನ ಸಾವಯವ ಆಂದೋಳನ, ಹಲಸು ಪ್ರೇಮಿ ಕೂಟ, ಹಲಸು ಸ್ನೇಹಿ ಕೂಟ... ಮೊದಲಾದ ಕೃಷಿಕ ತಂಡಗಳು ವಸಂತೋತ್ಸವದಲ್ಲಿ ಭಾಗವಹಿಸಿದ್ದುವು.  ಈ ತಂಡದ ಸದಸ್ಯರಲ್ಲಿ ಸಾವಯವ ಮನಸ್ಸು ರೂಪುಗೊಂಡ ಪರಿಣಾಮವಾಗಿ ಅವುಗಳ ಬತ್ತಳಿಕೆಯಲ್ಲಿ ಯಶೋಗಾಥೆಗಳ ರಾಶಿಗಳಿವೆ. ಇವುಗಳೆಲ್ಲದರ ಉದ್ದೇಶ ಉತ್ಪನ್ನಗಳ ಮಾರಾಟ ಮಾಡಿ ಲಾಭ ಗಳಿಸುವುದಲ್ಲ. ಉತ್ಪನ್ನಗಳೊಂದಿಗೆ ಸಾವಯವ ಮನಸ್ಸು ರೂಪುಗೊಳ್ಳಬೇಕು ಎನ್ನುವ ಉದ್ದೇಶ. ನಾಡಿನಾದ್ಯಂತ ಇಂತಹ ಮನಸ್ಸುಗಳು ಸೃಷ್ಟಿಯಾದುದರ ಪರಿಣಾಮವಾಗಿ ನಿರ್ವಿಷ ಆಹಾರದ ಕಲ್ಪನೆ ಸಾಕಾರಗೊಳ್ಳುತ್ತಿವೆ.

Tuesday, June 2, 2015

ಜೂನ್ 14 - ಹಲಸಿನ ಸವಿಯೂಟ