Friday, June 12, 2015

'ನಿಷೇಧ ಗುಮ್ಮ'ನಿಂದ ಮತಿಯ ಮಸೆತದ ಹರಿತ!

              ಅಬ್ಬಾ, ಎಷ್ಟೊಂದು ತಳಮಳ. ಅಡುಗೆ ಮನೆಗಳಲ್ಲಿ ವಿಷಾದದ ರಾಗ. ಊಟದ ಬಟ್ಟಲು ಬರಿದು. ಕಂದಮ್ಮಗಳು ಉಪವಾಸ. ಮುಂದಿನ ಹಾದಿ ಶೂನ್ಯ. ಅಮ್ಮಂದಿನ ಮುಖದಲ್ಲಿ ನಗುವಿಲ್ಲ. ಆಗಸವೇ ತಲೆಮೇಲೆ ಬಿದ್ದ ಅನುಭವ.
ಮ್ಯಾಗಿ ನಿಷೇಧದ  ರಾದ್ದಾಂತವಿದು. ತಿಂಗಳುಗಳಿಂದ ಮ್ಯಾಗಿಯದೇ ಗುಮ್ಮ. ನಿಷೇಧಗಳ ಸರಮಾಲೆ. ರೋಚಕ ಸುದ್ದಿಗಳ ಗೊಂಚಲುಗಳು. ಮನದ ಮೂಲೆಯಲ್ಲಿ ಚಿಗುರೊಡೆದ ಅನಾರೋಗ್ಯದ ಭೀತಿ. ಕಳಚಿಕೊಳ್ಳಲಾಗದ ನಂಟು. ಯಾವುದೋ ಒಂದು ಬ್ಯಾಚಿನಲ್ಲಿ ಇತ್ತೂಂತ ಎಲ್ಲವನ್ನೂ ನಿಷೇಧಿಸಬೇಕೇ ಎಂಬ ಗೊಣಗಾಟ. ಮ್ಯಾಗಿಗೆ ಹೊಂದಿಕೊಂಡ ಕಂದನಿಗೆ ಬೇರೆ ಆಹಾರ ಹೊಂದಿಸಲಾಗದ ಒದ್ದಾಟ.
           ಮ್ಯಾಗಿಯಲ್ಲಿ ಸೀಸ ಮತ್ತು ರುಚಿವರ್ಧಕದ ಅಂಶಗಳು ಮಿತಿಗಿಂತ ಹೆಚ್ಚಿವೆ ಎನ್ನುವುದು ನಿಷೇಧಕ್ಕೆ ಕಾರಣ. ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟಗಳ ಪ್ರಾಧಿಕಾರವು ಉತ್ಪನ್ನವನ್ನು ಪರೀಕ್ಷೆಗೆ ಒಳಪಡಿಸಲು ಆದೇಶಿಸಿತ್ತು.  ಪರೀಕ್ಷಾ ಫಲಿತಾಂಶ ಬರುತ್ತಲಿದೆ. 'ಯಾವುದೇ ಹಾನಿಕಾರಕ ಅಂಶಗಳಿಲ್ಲ, ಧಾರಾಳವಾಗಿ ಬಳಸಬಹುದು' ಎಂಬ ವರದಿ ಬಂದರೂ ಆಶ್ಚರ್ಯವಿಲ್ಲ. ಒಂದು ವೇಳೆ ಸಾರ್ವತ್ರಿಕವಾಗಿ ನಿಷೇಧಕ್ಕೆ ಒಳಗಾಯಿತೆನ್ನಿ, ತಿಂಗಳೊಳಗೆ ಹೊಸ ಅವತಾರದ ಉತ್ಪನ್ನಗಳು ವಿವಿಧ ಬಣ್ಣದ ಪ್ಯಾಕ್ಗಳಲ್ಲಿ ಗೋಚರ. ರತ್ನಗಂಬಳಿಯ ಸ್ವಾಗತ. 
             ಉತ್ಪನ್ನದಲ್ಲಿ ಶರೀರಕ್ಕೆ ಬೇಡದ ರಾಸಾಯನಿಕಗಳು ಸೇರಿವೆ - ನಿಷೇಧದಿಂದ ಸ್ಪಷ್ಟವಾಗಿ ಜನರಲ್ಲಿ ಅರಿವು ಮೂಡಿದ ಅಂಶ. ಬೇರೆ ಬೇರೆ ಮೂಲಗಳಲ್ಲಿ ಹಿಂದೆ ಪ್ರಚುರವಾಗುತ್ತಿದ್ದಾರೂ ದೈತ್ಯ ಕಂಪೆನಿಯ ದೊಡ್ಡ ಸ್ವರದ ಮುಂದೆ ಈ ಕ್ಷೀಣ ಸ್ವರ ಕೇಳಿಸುವಿದಿಲ್ಲ. ಒಂದತೂ ಸ್ಪಷ್ಟ. ನಿಷೇಧ ಹಿಂತೆಗೆಯಲ್ಪಟ್ಟಿತು ಎನ್ನೋಣ.  ಮೊದಲಿನಂತೆ ಪ್ರೀತಿಯಿಂದ ಸ್ವಾಗತಿಸುವವರ ಸಂಖ್ಯೆ ಕಡಿಮೆಯಾದೀತು ಮತ್ತು ಬಳಸುವಾಗ ಹತ್ತಾರು ಬಾರಿ ಯೋಚಿಸುವ ಮನಃಸ್ಥಿತಿ ಬರಬಹುದು.
           1983ರಲ್ಲಿ '2 ನಿಮಿಷದ ಮ್ಯಾಗಿ' ಅಡುಗೆ ಮನೆ ಹೊಕ್ಕಿತು. ಕಂಪೆನಿಗೆ ಉದ್ಯೋಗಸ್ಥ ಯುವ ಮನಸ್ಸುಗಳ ಟಾರ್ಗೆಟ್.  ಬೆಳಗ್ಗಿನ ಒತ್ತಡಕ್ಕೆ ದೇವರೇ ಕೊಟ್ಟ ವರ! ಎರಡು ನಿಮಿಷದಲ್ಲಿ ತಿಂಡಿ ಸಿದ್ಧವಾಗುತ್ತದೆ ಎಂದರೆ ಯಾರಿಗೆ ಬೇಡ ಹೇಳಿ. ಆರ್ಥಿಕ ಉದಾರಿಕರಣದ ಬಳಿಕ ಉದ್ದಿಮೆಯ ಹೆಜ್ಜೆ ದೊಡ್ಡದಾಯಿತು. ಮಕ್ಕಳನ್ನು ಟಾರ್ಗೆಟ್  ಮಾಡಲು ಶುರು ಮಾಡಿತು. 'ಆರೋಗ್ಯಯುತ ಉತ್ಪನ್ನ' ಎಂದು ಬಿಂಬಿಸಿತು. ಒಂದು ಅಂಕಿ ಅಂಶದ ಪ್ರಕಾರ ಭಾರತವೊಂದರಲ್ಲೇ ಮ್ಯಾಗಿಯು ಕಂಪೆನಿಗೆ 390 ಮಿಲಿಯನ್ ಡಾಲರ್ ಆದಾಯ!
             ಖ್ಯಾತ ಅಂಕಣಕಾರ ಅಜಿತ್ ಪಿಳ್ಳೈ ಹೇಳುತ್ತಾರೆ, "ಯಾವಾಗ ನೆಸ್ಲೆ ಕಂಪೆನಿ ಮ್ಯಾಗಿಯುನ್ನು ಆರೋಗ್ಯಯುತ ಉತ್ಪನ್ನವೆಂದು ವ್ಯಾಪಾರ ಮಾಡತೊಡಗಿತೋ ಆಗ ಮ್ಯಾಗಿಯ ಅಗಾಧ ವಿಶ್ವ ಸೃಷ್ಟಿಯಾಯಿತು. ಇದಕ್ಕೆ ಹೊಂದಿಕೆಯಾಗುವಂತೆ ಕಂಪೆನಿಯು 2005ರಲ್ಲಿ ಆಟಾ (ಹೆಲ್ತ್) ನೂಡಲ್ಸ್ ಪರಿಚಯಿಸಿತು. ಜಾಹೀರಾತಿನಲ್ಲಿ ಆರೋಗ್ಯಕರ, ಪ್ರೋಟೀನ್, ವಿಟಮಿನ್, ಫೈಬರ್, ಪೌಷ್ಟಿಕಾಂಶಗಳಿರುವ ಉತ್ಪನ್ನವೆಂದು ಬಿಂಬಿಸುತ್ತಾ ಬಂತು."
              ಹಾನಿಕಾರಕ ಅಂಶಗಳು ಪತ್ತೆಯಾದ ತಕ್ಷಣ ಸರಕಾರ ಭರವಸೆಯ ಹೆಜ್ಜೆಯೇನೋ ಇಟ್ಟಿದೆ. ಕನ್ನಾಡಿನ ಆರೋಗ್ಯ ಮಂತ್ರಿಗಳು 'ಸುಮ್ಮನೆ ಬಿಡುವುದಿಲ್ಲ' ಎಂಬ ಎಚ್ಚರಿಕೆಯನ್ನೂ ನೀಡಿದ್ದಾರೆ. ಎಲ್ಲವೂ ಸರಿ. ನೆಸ್ಲೆಯಂತಹ ದೊಡ್ಡ ಕಂಪೆನಿಗಳಿಗೆ ಇದೆಲ್ಲಾ ಮಾಮೂಲಿ! ಬಹುಶಃ ಇಷ್ಟು ದೊಡ್ಡ ಪ್ರಮಾಣದಲ್ಲಿ ಹೊಡೆತ ಬೀಳಬಹುದೆಂದು ಕಂಪೆನಿ ಊಹಿಸಿರಲಿಲ್ಲ. ಗೊತ್ತಾಗುತ್ತಿದ್ದರೆ ಅಲ್ಲಿಂದಲ್ಲಿಗೆ ಹೊಂದಾಣಿಸುತ್ತಿತ್ತೋ ಏನೋ?  ಸಾಮಾನ್ಯರಿಗೆ ಗೊತ್ತಾಗದ, ಅರ್ಥವಾಗದ ಪ್ರಬಲವಾದ ಲಾಬಿಗಳು ಸರಕಾರದ ವ್ಯವಸ್ಥೆಯನ್ನು ಮಣಿಸುವಷ್ಟು ಸಶಕ್ತವಾಗಿದೆ. ಈ ಜಾಲದಿಂದ ಹೊರಬಂದು ನ್ಯಾಯ ಒದಗಿಸಿಕೊಡುವುದೇ ನಿಜವಾದ ಪ್ರಜಾ ಆಡಳಿತ. ಎಷ್ಟು ಸಾಧ್ಯವಾಗುತ್ತೋ ಗೊತ್ತಿಲ್ಲ.
                ಮ್ಯಾಗಿ ಬೇಯುತ್ತಾ ಇದ್ದಂತೆ, ಮಾವು ಸುದ್ದಿ ಮಾಡಲು ಹೊರಟಿತು. ಮೈಸೂರಿನಲ್ಲಿರುವ ಒಂಭತ್ತು ಗೋದಾಮುಗಳಲ್ಲಿರುವ ಮಾವಿನ ಹಣ್ಣುಗಳನ್ನು ನಾಶಮಾಡಲಾಯಿತು.  ಕ್ಯಾಲ್ಸಿಯಂ ಕಾರ್ಬ್ಯ್ ಡ್ ಹರಳು ಬಳಸಿ ಕೃತಕವಾಗಿ ಹಣ್ಣು ಮಾಡಿದ್ದಾರೆ ಎನ್ನುವ ಕಾರಣ. ಹೀಗೆ ಮಾಡಿದರೆ ಹಣ್ಣುಗಳು ತಾಜಾ ಆಗಿ ಕಾಣುವುದಲ್ಲದೆ, ಬೇಕಾದ ಸಮಯಕ್ಕೆ ಹಣ್ಣುಗಳು ಲಭ್ಯವಾಗುವಂತೆ ಮಾಡುವ ಜಾಣ್ಮೆಯಿದು. ವ್ಯಾವಹಾರಿಕ  ಒತ್ತಡದಲ್ಲಿ ಮಿತಿಗಿಂತ ಹೆಚ್ಚು ಕಾರ್ಬ್ಯ್ ಡ್  ಬಳಸುವ ವಿಚಾರ ಸಾಮಾನ್ಯರಿಗೂ ಗೊತ್ತು. ನಮ್ಮ ನಡುವೆ ನಡೆಯುವ ವಿದ್ಯಮಾನಗಳನ್ನು ಕಣ್ಣು ಮುಚ್ಚಿ ಸ್ವೀಕರಿಸಿದ್ದೇವೆ.
               ಬೆಂಗಳೂರಿನ ದೇಸಾಯಿ ಆಸ್ಪತ್ರೆಯ ಡಾ.ನಳಿನಿ ಅವರು ಕಾರ್ಬ್ಯ್ ಡ್  ಬಳಕೆಯ ದುಷ್ಪರಿಣಾಮ ಹೇಳುತ್ತಾರೆ, ಕಾರ್ಬ್ಯ್ ಡ್ ನಲ್ಲಿರುವ ಸೋಡಿಯಂ ಹಾಗೂ ಕಾರ್ಬೋನಿಕ್  ಆಸಿಡ್ ಕ್ರಮೇಣ ದೇಹಕ್ಕೆ ಸೇರಿ ಮೆದುಳು, ನರಗಳು, ಶ್ವಾಸಕೋಶ, ಕಿಡ್ನಿ ವೈಫಲ್ಯ ಹಾಗೂ ನಿರಂತರ ಬಳಕೆಯಿಂದ ಕ್ಯಾನ್ಸರಿನಂತಹ ಮಾರಕ ರೋಗಗಳಿಗೆ ದಾರಿ ಮಾಡಿ ಕೊಡಬಲ್ಲುದು. ಬಾಳೆಕಾಯಿ, ಪಪ್ಪಾಯಿ, ಮಾವುಗಳನ್ನು ಮಾಗಿಸಲು ಬಳಸುವ ತಂತ್ರದಿಂದ ವ್ಯಾಪಾರಿ ಬಚಾವ್. ಆದರೆ ಗ್ರಾಹಕ? ಒಂದೆರಡು ದಿವಸ ಇಂತಹ ಹಣ್ಣುಗಳನ್ನು ತಿಂದರೆ ಆರೋಗ್ಯ ಕೆಡದು. ನಿರಂತರ ಬಳಕೆಯಿಂದ ಹಾನಿಯಂತೂ ಖಂಡಿತ.
               ನಾಳೆ ನಮಗೆ ಬಾಳೆಹಣ್ಣು ಬೇಕು - ಎಂದಾದರೆ ಅಂಗಡಿಯಾತನಿಗೆ ಇಂದು ಸಂಜೆ ಹೇಳಿದರೆ ಆಯಿತು, ಒಂದು ರಾತ್ರಿಯಲ್ಲಿ ಹಣ್ಣು ಮಾಡಿಕೊಡುವ ವ್ಯವಸ್ಥೆ. ಬಳಸುವವರಿಗೆ ಕಾರ್ಬ್ಯ್ ಡ್  ರಾಸಾಯನಿಕ ಮತ್ತು ಅರೋಗ್ಯದ ಹಾನಿಯ ಅರಿವು ಇರುವುದಿಲ್ಲ. ಹದಿನೈದಕ್ಕೂ ಹೆಚ್ಚು ಕೀಟನಾಶಕ ಸಿಂಪಡಣೆಯಿಂದ ತೋಯ್ದ, ಲಕಲಕ ಹೊಳೆಯುವ ಟೊಮೆಟೋ, ಹೂಕೋಸು, ಕ್ಯಾಬೇಜು, ದೊಣ್ಣೆಮೆಣಸುಗಳನ್ನು ಒಪ್ಪಿಕೊಂಡಂತೆ ಬಾಳೆಹಣ್ಣನ್ನೂ ಒಪ್ಪಿದ್ದೇವೆ, ಅಪ್ಪಿದ್ದೇವೆ. ನಿಷೇಧದ ಗುಮ್ಮ ಅಬ್ಬರಿಸಿದಾಗ ಬಣ್ಣ ಬಯಲಾಗುತ್ತದಷ್ಟೇ.
              ಇನ್ನು ಅಡಿಕೆಯತ್ತ ಹೊರಳಿ. ಆಗಾಗ್ಗೆ ಗುಟ್ಕಾ ನಿಷೇಧದ ಗುಮ್ಮನ ಅವತಾರ. ಲಕ್ಷಾಂತರ ಮಂದಿಯ ಅನ್ನದ ಬಟ್ಟಲು ಕಂಪಿಸಿವೆ. ಗುಟ್ಕಾದ ಮುಖ್ಯ ಕಚ್ಚಾವಸ್ತು ಅಡಿಕೆ. ಇದರೊಂದಿಗೆ ರಾಸಾಯನಿಕ ಒಳಸುರಿಗಳು ಸೇರಿದಾಗ ಗುಟ್ಕಾ ಆಗುತ್ತದೆ. ಮೈಸೂರಿನ 'ಆಹಾರ ತಂತ್ರಜ್ಞಾನ ಸಂಶೋಧನಾ ಕೇಂದ್ರ' ವರದಿ ಪ್ರಕಾರ ಅಡಿಕೆಯಲ್ಲಿ ಶೇ.46 ಶರ್ಕರಪಿಷ್ಠ, 4.2 ಪ್ರೊಟಿನ್, 8-12 ರಷ್ಟು ಕೊಬ್ಬು, ಜತೆಗೆ ಕಬ್ಬಿಣ, ಕ್ಯಾಲ್ಸಿಯಂನಂತರ ಲವಣಗಳು, ಜೀವಸತ್ವಗಳಿವೆ. ಇದನ್ನು 'ಶ್ರೇಷ್ಠ ನೈಸರ್ಗಿಕ ಸುಗಂಧ ದ್ರವ್ಯ' ಎಂದು ಪುರಾಣಗಳು ಉಲ್ಲೇಖಿಸಿವೆ. ಪಾಶ್ಚಾತ್ಯರಲ್ಲಿ ಅಧಿಕವಾಗುತ್ತಿರುವ 'ಮುಪ್ಪಿನ ಮರೆವು' ಕಾಯಿಲೆಗೂ ಅಡಿಕೆ ಔಷಧವಾಗಿ ಒಳಸುರಿ.
             ಗುಟ್ಕಾ, ಪಾನ್ ಪರಾಗ್, ಪಾನ್ ಮಸಾಲ ನಿಷೇಧ ಎಂದಾಗ ಅಡಿಕೆಯೂ ನಿಷೇಧಕ್ಕೆ ಒಳಪಡುತ್ತದೆ. ಇದರ ಬದಲು ಅಡಿಕೆಯೊಂದಿಗೆ ಮಿಶ್ರಣ ಮಾಡುವ ದೇಹದ ಅರೋಗ್ಯಕ್ಕೆ ಮಾರಕವಾಗಿರುವ ರಾಸಾಯನಿಕ ಅಂಶಗಳನ್ನು ಮಾತ್ರ ನಿಷೇಧಿಸಬೇಕೆಂದು ಯಾಕೆ ತೋರುತ್ತಿಲ್ಲ? ಇದನ್ನು ಸರಕಾರಕ್ಕೆ ಹಲವಾರು ಸಂಘಟನೆಗಳು ಮನದಟ್ಟು ಮಾಡಲು ಶ್ರಮಿಸಿವೆ, ಶ್ರಮಿಸುತ್ತಿವೆ. ಆಡಳಿತ ವ್ಯವಸ್ಥೆಗಳ ಹಿಂದೆ ಜಾಣ ಕುರುಡು, ಕಿವುಡು ಮತ್ತು  ಅಡಿಕೆಯ ಹಿಂದಿನ ವ್ಯವಸ್ಥಿತ ಲಾಬಿ, ಪಿತೂರಿಗಳ ಕೊಂಡಿಗಳು ಬಲವಾಗಿರುವುದು ನಮ್ಮ ಕಣ್ಣಿಗೆ ಕಾಣುತ್ತಿಲ್ಲ. ಗುಟ್ಕಾ ಮೇಲಿನ ಆಪಾದನೆಗಳು ನ್ಯಾಯಾಲಯದ ಮೆಟ್ಟಲೇರಿದೆ. ಆರೋಗ್ಯದ ಮೇಲೆ ಬೀರುವ ಪರಿಣಾಮಗಳ ಬಗೆಗಿನ ವರದಿ ಕಾನೂನು ಮೇಜಿನಲ್ಲಿದೆ.
               ಕಳೆದ ವರುಷ ಐರೋಪ್ಯ ರಾಷ್ಟ್ರಗಳ ಒಕ್ಕೂಟವು ಭಾರತದಿಂದ ತರಿಸಿಕೊಳ್ಳುವ ಅಲ್ಫಾನ್ಸೋ ಮಾವು ಹಾಗೂ ಕೆಲವು ತರಕಾರಿಗಳನ್ನು ನಿಷೇಧಿಸಿತ್ತು. ಭಾರತದಿಂದ ರಫ್ತಾಗುವ ಒಟ್ಟು ಹಣ್ಣು, ತರಕಾರಿಗಳಲ್ಲಿ ಶೇ.50ರಷ್ಟು ಐರೋಪ್ಯ ರಾಷ್ಟ್ರಗಳಿಗೆ ಮೀಸಲು. ನಿಷೇಧದ ಗುಮ್ಮದಿಂದಾಗಿ ರಾಷ್ಟ್ರೀಯತೆ ಮತ್ತು ರಾಷ್ಟ್ರೀಯ ಆದಾಯದ ಹಳಿಗಳು ಅಲ್ಲಾಡಿದುವು. ಗುಣಮಟ್ಟ ನಿಯಂತ್ರಣ ಸುಧಾರಿಸಿದೆ ಎನ್ನುವ ಕಾರಣದಿಂದ ಈಗಂತೂ ನಿಷೇಧದ ಉರುಳು ಸಡಿಲವಾಗಿದೆ.
ಗೋಬಿ ಮಂಚೂರಿಯನ್, ತರಕಾರಿ, ಸಿದ್ಧ ಪೇಯಗಳು, ಜೀನಸು... ಹೀಗೆ ಬದುಕಿನಲ್ಲಿ ಬಳಕೆಯಾಗುವ ಬಹುತೇಕ ಎಲ್ಲದರಲ್ಲಿಯೂ ರಾಸಾಯನಿಕಗಳ ಮೇಲಾಟ. ದೇಹಕ್ಕೆ ಮಾರಕವಾಗಿವ ಅಂಶಗಳಿರುವ ಉತ್ಪನ್ನಗಳನ್ನು ವೈಭವೀಕರಿಸುವುದು ನಮಗೆ ಹೆಮ್ಮೆ!  ಎಲ್.ಕೆ.ಜಿ., ಯು.ಕೆ.ಜಿ. ಚಿಣ್ಣರ ಬುತ್ತಿಪಾತ್ರೆ ಬಿಡಿಸಿ ನೋಡಿ - ಬಣ್ಣ ಬಣ್ಣದ ಸಿದ್ಧ ಆಹಾರಗಳ ಕಲರವ. ಬೆಣ್ಣೆ, ಸಾಸ್, ಹಾಲಿನ ವಿಷಕಾರಕ ಅಂಶಗಳನ್ನು ವಾಹಿನಿಗಳು ಕಿವಿಗೆ ಹೊಗ್ಗಿಸುತ್ತಲೇ ಇವೆ. ಅದಕ್ಕೂ, ನಮಗೂ ಸಂಬಂಧವಿಲ್ಲವೆಂಬತೆ ವರ್ತಿಸುತ್ತೇವೆ. ಹಾನಿಕಾರಕ ಅಂಶಗಳ ಉತ್ಪನ್ನಗಳನ್ನು ಕಡಿಮೆ ಮಾಡಿದಷ್ಟೂ ಆರೋಗ್ಯ-ಭಾಗ್ಯ. ಗ್ರಾಹಕ ಎಲ್ಲಿಯವರೆಗೆ ಆಕಳಿಸುತ್ತಾನೋ ಅಲ್ಲಿಯ ವರೆಗೆ ರಾಸಾಯನಿಕ, ವಿಷಕಾರಿ ಉತ್ಪನ್ನಗಳು ಅಡುಗೆ ಮನೆಗೆ ನುಗ್ಗುತ್ತಲೇ ಇರುತ್ತವೆ. ನಿಷೇಧ ಗುಮ್ಮ ತಟ್ಟಿದಾಗ ಕೊಡವಿ ಎಚ್ಚರವಾಗುತ್ತೇವೆ. ಆಗಷ್ಟೇ ಅರಿವಿನ ಮಸೆತಕ್ಕೆ ಶ್ರೀಕಾರ.

(ಉದಯವಾಣಿಯ ನೆಲದ ನಾಡಿ ಅಂಕಣ/11-6-2015/ ಪ್ರಕಟ)
ಚಿತ್ರ ಕೃಪೆ : ನೆಟ್


0 comments:

Post a Comment