ಮಂಗಳೂರಿನ ಪಿಲಿಕುಳ ನಿಸರ್ಗಧಾಮದಲ್ಲಿ ಮೇ ಕೊನೆಗೆ ವಸಂತ ಋತುವಿನ ಖುಷಿ ಆಚರಣೆ. ವನರಾಜಿ ಸಂಭ್ರಮಿಸುವ ಮಾಸದಲ್ಲಿ ಮನಕ್ಕೆ ಪುಳಕವೀಯುವ ವಾತಾವರಣ. ನಗರದ ನಿತ್ಯ ಜಂಜಾಟದ ಮಧ್ಯೆ ಒಂದು ಹೊತ್ತು ಖುಷಿ ಅನುಭವಿಸುವ ಅವಕಾಶ. ಹಳ್ಳಿ ಬದುಕಿನ ಪ್ರತಿಫಲನ. ಹಳ್ಳಿ ತಿಂಡಿಗಳ ಮರು ನೆನವರಿಕೆ. ಬದುಕಿನಿಂದ ಮರೆಯಾದ ರುಚಿಗಳನ್ನು ಮತ್ತೆ ಪಡೆದ ಸಂತಸ.
ಸುಮಾರು ಅರುವತ್ತು ಮಳಿಗೆಗಳು. ನಲವತ್ತಕ್ಕೂ ಮಿಕ್ಕಿದ ಮಳಿಗೆಗಳಲ್ಲಿ ಕೃಷಿಯ ಟಚ್. ಗಿಡಗಳ ಮಾರಾಟದಿಂದ ಮೌಲ್ಯವರ್ಧನೆಯ ತನಕ. ಸಾವಯವ ಉತ್ಪನ್ನಗಳಿಗೆ ಆದ್ಯತೆ. ಬೆಳಗ್ಗಿನಿಂದ ಸಂಜೆ ತನಕ ಮುಗಿಬೀಳುವ ಕೊಳ್ಳುಗರು. ನಗರದಲ್ಲಿ ಬದುಕನ್ನು ಕಟ್ಟಿಕೊಂಡವರು, ನಗರದ ಸುತ್ತಮುತ್ತ ಇರುವ ಹಳ್ಳಿಗರೂ ಕೂಡಾ ಮಳಿಗೆಗಳಿಗೆ ಭೇಟಿ ನೀಡಿದ್ದರು. ತಮಗೆ ಬೇಕಾದ ಉತ್ಪನ್ನಗಳನ್ನು ಮನಸಾ ತಿಂದರು. ಮನೆಗೂ ಒಯ್ದರು.
ಇದರಲ್ಲೇನು ವಿಶೇಷ? ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಇಬ್ರಾಹಿಂ ಹೇಳುತ್ತಾರೆ, "ಹಳ್ಳಿ ಸೊಗಸಿನ ಆಹಾರ ವೈವಿಧ್ಯಗಳನ್ನು ಪಟ್ಟಣಿಗರೂ ಸವಿಯಬೇಕು. ಉತ್ಪನ್ನಗಳಿಗೆ ನಗರದಲ್ಲಿ ಕೊಳ್ಳುಗರು ರೂಪುಗೊಳ್ಳಬೇಕು. ಆಗ ಹಳ್ಳಿ-ಪಟ್ಟಣದ ಕೊಂಡಿ ಬೆಸೆಯುತ್ತದೆ. ಬದುಕಿನ ಧಾವಂತದಲ್ಲಿ ಎಷ್ಟೋ ಗ್ರಾಮೀಣ ವಿಚಾರಗಳು ಮರೆತುಹೋಗಿದೆ. ಅದನ್ನು ಮತ್ತೊಮ್ಮೆ ನೆನಪಿಸುವ ಉದ್ದೇಶವೇ ವಸಂತೋತ್ಸವ."
ಬಂಟ್ವಾಳದ 'ಹಲಸು ಪ್ರೇಮಿ ಕೂಟ'ವು ಸ್ಥಳದಲ್ಲೇ ಹಲಸಿನ ತಿಂಡಿಗಳನ್ನು ಸಿದ್ಧಪಡಿಸುತ್ತಿದ್ದರು. ತಿಂಡಿಗಳನ್ನು ಖರೀದಿಸಲು ಕ್ಯೂ! ಒಂದೊಂದು ಐಟಂ ಸಿದ್ಧವಾಗುವುದೇ ತಡ, ಹತ್ತು ನಿಮಿಷದಲ್ಲಿ ಖಾಲಿ ಖಾಲಿ. "ಮಾಂಸದಲ್ಲಿ ಸಿದ್ಧಪಡಿಸುವ 'ಕಬಾಬ್' ಎಲ್ಲರಿಗೂ ಗೊತ್ತು. ಹಲಸಿನಿಂದ ಕಬಾಬನ್ನು ತಯಾರಿಸಲು ಸಾಧ್ಯವೆಂಬುದನ್ನು ಕೂಟವು ತೋರಿಸಿದೆ. ಸಸ್ಯಾಹಾರಿಗಳಿಗೆ ಮಾಂಸದ ಕಬಾಬ್ ವಜ್ರ್ಯ. ಅದರ ರುಚಿ ಹೇಗಿರಬಹುದು ಎನ್ನುವ ಕುತೂಹಲಿಗರ ಉತ್ಸಾಹವನ್ನು ಹಲಸಿನ ಕಬಾಬ್ ತಣಿಸಿದೆ. ಮಾಡಿದಷ್ಟೂ ಮುಗಿಯುವ ಕಬಾಬಿಗೆ ಗ್ರಾಹಕರು ಹೆಚ್ಚಿದ್ದರು," ಎನ್ನುತ್ತಾರೆ ಕೂಟದ ಸಾರಥ್ಯ ವಹಿಸಿದ ಮೌನೀಶ್ ಮಲ್ಯ.
ಮಲ್ಯರು ತಮ್ಮ ಮಳಿಗೆಯಲ್ಲಿ ಇಪ್ಪತ್ತೇಳು ಹಲಸಿನ ಖಾದ್ಯಗಳನ್ನು ಸಿದ್ಧಪಡಿಸಿದ್ದರು. ಹಲಸಿನ ಹಣ್ಣಿನ ಪಾಯಸ, ಜಿಲೇಬಿ. ಕೇಕ್, ಲಾಲಿ, ಹಪ್ಪಳ, ಚಿಪ್ಸ್, ಹಲ್ವ.... ಮೊದಲಾದ ಉತ್ಪನ್ನಗಳಿಗೆ ಎಷ್ಟೊಂದು ಬೇಡಿಕೆ? ಸಿದ್ಧಾಹಾರದ ರಿಂಗಣದ ಮಧ್ಯೆ ಹಳ್ಳಿರುಚಿಗೂ ಸ್ಥಾನ-ಮಾನ. ಅಮ್ಮಂದಿರ ಒಲವು ಹೆಚ್ಚು. ಸ್ಥಳದಲ್ಲೇ ಉದರಕ್ಕಿಳಿಸುವುದರೊಂದಿಗೆ ಮನೆಗೂ ಕಟ್ಟಿಕೊಂಡು ಒಯ್ಯುವಷ್ಟು ಹಲಸಿನ ನಂಟು.
ಕೇಪು 'ಹಲಸು ಸ್ನೇಹಿ ಕೂಟ'ದ ಮಳಿಗೆಯು ಪಪ್ಪಾಯಿ, ಮಾವು ಹಲಸಿನ ಹಣ್ಣಿನ ಮಾರಾಟದಲ್ಲಿ ತೊಡಗಿತ್ತು. ಇಡೀ ಹಣ್ಣು, ಹಣ್ಣಿನ ಅರ್ಧ ಭಾಗ, ಸೊಳೆಗಳನ್ನು ಖರೀದಿಸುವ ಗ್ರಾಹಕರ ಮೊಗದಲ್ಲಿ ಸಂತಸ. ಇಡೀ ಹಣ್ಣಿಗಿಂತ ಅರ್ಧ ಹಣ್ಣನ್ನು ಅಪೇಕ್ಷಿಸುವ ಗ್ರಾಹಕರ ಸಂಖ್ಯೆ ದೊಡ್ಡದು. ಸಣ್ಣ ಕುಟುಂಬದಲ್ಲಿ ಮೂರ್ನಾಾಲ್ಕು ಜನರಿಗೆ ದೊಡ್ಡ ಗಾತ್ರದ ಹಲಸಿನ ಹಣ್ಣು ಮಿಕ್ಕುತ್ತದೆ. ಅರ್ಧ ಆದ್ರೆ ಓಕೆ. ಹಲಸಿನ ಹಣ್ಣನ್ನು ಕೊಯ್ದು, ಸೊಳೆ ಎಬ್ಬಿಸುವುದೇ ತ್ರಾಸದ ಕೆಲಸ. ಅಂತಹವರಿಗೆ ಆರ್ಧ ಭಾಗ ಹಣ್ಣು ಲಭ್ಯವಾಗಬೇಕು, ಎನ್ನುತ್ತಾರೆ ಕೂಟದ ಕಡಂಬಿಲ ಕೃಷ್ಣಪ್ರಸಾದ್. ಮಾವಿನಹಣ್ಣಿನ ಸಾಟ್ ಯಾ ಮಾಂಬಳಕ್ಕೆ ಬೇಡಿಕೆಯಿದ್ದರೂ ಉತ್ಪನ್ನವಿರಲಿಲ್ಲ.
ಮಂಗಳೂರಿನ ಸಾವಯವ ಕೃಷಿಕ-ಗ್ರಾಹಕ ಬಳಗದ ನಲವತ್ತೆಂಟು ಮಂದಿ ಸಾವಯವ ಉತ್ಪನ್ನಗಳನ್ನು ಪ್ರದರ್ಶನಕ್ಕಿಟ್ಟಿದ್ದರು. ನಾವು ತಿನ್ನುವ ಆಹಾರ ಬಹುತೇಕ ವಿಷಮಯ. ಸಿಂಪಡಣೆ ಇಲ್ಲದೆ ಆಹಾರ ಬೆಳೆಯಲು ಸಾಧ್ಯವೇ ಇಲ್ಲ ಎನ್ನುವ ಮನಃಸ್ಥಿತಿ. ನಿಧಾನ ವಿಷ ಸೇವನೆಯ ಪರಿಣಾಮವಾಗಿ ಆರೋಗ್ಯ ಕೈಕೊಡುತ್ತಿದೆ ಎನ್ನುವ ಅರಿವು ಜನರಲ್ಲಿ ಮೂಡುತ್ತಿದೆ. ಈ ಹಿನ್ನೆಲೆಯಲ್ಲಿ ಸಾವಯವ ಮಳಿಗೆಗಳಲ್ಲಿ ರಶ್. ಅಕ್ಕಿ, ಬೆಲ್ಲ, ಸಂಬಾರದಿಂದ ತೊಡಗಿ ಹಣ್ಣುಗಳ ತನಕ ಜನರೊಲವು.
ಈಚೆಗೆ ಮಂಗಳೂರಿನಲ್ಲಿ ಸಾವಯವದ ಅರಿವು ನಿಧಾನಕ್ಕೆ ತೆರೆದುಕೊಳ್ಳುತ್ತಿದೆ. ಜನರ ಆಸಕ್ತಿ ಸಾವಯವದತ್ತ ವಾಲುತ್ತಿದೆ. ಆರೋಗ್ಯವಂತರಾಗಿರಲು ಸಾವಯವ ಉತ್ಪನ್ನಗಳನ್ನು ಬಳಸದೆ ವಿಧಿಯಿಲ್ಲ ಎನ್ನುವ ನಿರ್ಧಾರಗಳು ಸುಶಿಕ್ಷಿತರಲ್ಲಿ ಮೂಡುತ್ತಿದೆ. ಕಳೆದೊಂದು ವರುಷದಿಂದ ನಿರಂತರವಾಗಿ ನಡೆಯುತ್ತಿದ್ದ ಸಾವಯವ ಸಂತೆಯ ಯಶೋಗಾಥೆ ಇದಕ್ಕೆ ಸಾಕ್ಷಿ, ಎನ್ನುತ್ತಾರೆ ಅಡ್ಡೂರು ಕೃಷ್ಣ ರಾವ್.
ಮಾವು, ಹಲಸಿನ ಕಸಿಗಿಡಗಳು, ವಿವಿಧ ಮಾವಿನ ಹಣ್ಣುಗಳ ಪ್ರದರ್ಶನ, ವಿಟ್ಲದ ವಿಶಾಲ್ ಐಸ್ಕ್ರೀಂನವರ ಹಲಸು-ಮಾವಿನ ತಾಜಾ ಐಸ್ಕ್ರಿಂ, ಮತ್ಸ್ಯಾಹಾರ....ಹೀಗೆ ವಸಂತೋತ್ಸವದಲ್ಲಿ ವಿವಿಧ ವೈವಿಧ್ಯ ಆಹಾರಗಳ ಕಲರವ. ಪಿಲಿಕುಲ ನಿಸರ್ಗಧಾಮದ ಆಡಳಿತ ಮಂಡಳಿಯ ಡಾ.ಡಿ.ಸಿ.ಚೌಟರ ಕನಸಿನ ವಸಂತೋತ್ಸವಕ್ಕೆ ಜಿಲ್ಲಾಡಳಿತ ಸಾಥ್ ನೀಡಿತ್ತು. ಜಿಲ್ಲಾಧಿಕಾರಿಗಳಂತೂ ಫುಲ್ ಖುಷ್!
ಸಂತೆಗಳು ವ್ಯಾಪಾರ ಕೇಂದ್ರಗಳು. ಹಳ್ಳಿ ಉತ್ಪನ್ನಗಳಿಗಿಂದು ಎಲ್ಲೆಡೆಯೂ ಬೇಡಿಕೆಯಿದೆ. ಸಾವಯವ ಉತ್ಪನ್ನಗಳ ಮಾರಾಟಕ್ಕೆ ಕಷ್ಟ ಪಡಬೇಕಾಗಿಲ್ಲ. ಜನರಲ್ಲಿ ಕೊಳ್ಳುವ ಸಾಮಥ್ರ್ಯವೂ ಯಥೇಷ್ಟವಿದೆ. ಹಣವಿದ್ದರೆ ಏನನ್ನೂ ಸಾಧಿಸಬಹುದೆನ್ನುವ ಕಾಲಮಾನದಲ್ಲಿದ್ದೇವೆ. ಸಾವಯವ ಉತ್ಪನ್ನಗಳನ್ನು ಖರೀದಿಸಿ, ಅನ್ನದ ಬಟ್ಟಲನ್ನು ತುಂಬಿದರೆ ಸಾಕೆ? ಜತೆಯಲ್ಲಿ ಸಾವಯವ ಮನಸ್ಸೂ ರೂಪುಗೊಳ್ಳಬೇಡವೇ? ಸಂತೆಗಳು ಇಂತಹ ಮನಸ್ಸುಗಳ ರೂಪೀಕರಣಕ್ಕೆ ಉಪಾಧಿ.
ಮಂಗಳೂರಿನ ಸಾವಯವ ಆಂದೋಳನ, ಹಲಸು ಪ್ರೇಮಿ ಕೂಟ, ಹಲಸು ಸ್ನೇಹಿ ಕೂಟ... ಮೊದಲಾದ ಕೃಷಿಕ ತಂಡಗಳು ವಸಂತೋತ್ಸವದಲ್ಲಿ ಭಾಗವಹಿಸಿದ್ದುವು. ಈ ತಂಡದ ಸದಸ್ಯರಲ್ಲಿ ಸಾವಯವ ಮನಸ್ಸು ರೂಪುಗೊಂಡ ಪರಿಣಾಮವಾಗಿ ಅವುಗಳ ಬತ್ತಳಿಕೆಯಲ್ಲಿ ಯಶೋಗಾಥೆಗಳ ರಾಶಿಗಳಿವೆ. ಇವುಗಳೆಲ್ಲದರ ಉದ್ದೇಶ ಉತ್ಪನ್ನಗಳ ಮಾರಾಟ ಮಾಡಿ ಲಾಭ ಗಳಿಸುವುದಲ್ಲ. ಉತ್ಪನ್ನಗಳೊಂದಿಗೆ ಸಾವಯವ ಮನಸ್ಸು ರೂಪುಗೊಳ್ಳಬೇಕು ಎನ್ನುವ ಉದ್ದೇಶ. ನಾಡಿನಾದ್ಯಂತ ಇಂತಹ ಮನಸ್ಸುಗಳು ಸೃಷ್ಟಿಯಾದುದರ ಪರಿಣಾಮವಾಗಿ ನಿರ್ವಿಷ ಆಹಾರದ ಕಲ್ಪನೆ ಸಾಕಾರಗೊಳ್ಳುತ್ತಿವೆ.
0 comments:
Post a Comment