Thursday, July 31, 2014

ಹಲಸು ಉದ್ದಿಮೆ : ಯಂತ್ರಸಂಸ್ಥೆಗಳೊಂದಿಗೆ ಕೊಂಡಿ

 ಹಲಸಿನ ಹಣ್ಣನ ಪಲ್ಪಿಂಗ್ ಈ ಯಂತ್ರದಲ್ಲಿ ಸುಲಭ
 ಪೆರ್ಡೂೂರಿನ 'ಅರುಣೋದಯ ಇಂಡಸ್ಟ್ರೀಸಿನಲ್ಲಿ ವಿಜ್ಞಾನಿಗಳ ತಂಡ

               ಮೂರ್ನಾಲ್ಕು ವರುಷಗಳಿಂದ ಕರಾವಳಿಯಲ್ಲಿ ಹಲಸಿನ ಅಲೆ ಎದ್ದಿದೆ. ಮೌಲ್ಯವರ್ಧಿತ ಉತ್ಪನ್ನ ತಯಾರಿಯತ್ತ ಒಲವು ಮೂಡುತ್ತಿದೆ. ಹಲಸಿನ ಹಪ್ಪಳ, ಚಿಪ್ಸ್, ಹಲ್ವ.. ಮೊದಲಾದ ಮನೆಉತ್ಪನ್ನಗಳಿಗೆ ಕೊಳ್ಳುಗರ ಕೊರತೆಯಿಲ್ಲ. ಹಲಸಿನ ಹಪ್ಪಳ ತಯಾರಿಯು ಶ್ರಮ ಬೇಡುವ ಕೆಲಸ. ಶ್ರಮ ಹಗುರ ಮಾಡುವ ಯಂತ್ರಗಳು ಬಂದುಬಿಟ್ಟರೆ ಉತ್ಪಾದನೆ ಹೆಚ್ಚು ಮಾಡಬಹುದು.
                ಕೃಷಿ, ಕೃಷಿ ಆಗ್ರೋ ಉದ್ಯಮ, ಮೌಲ್ಯವರ್ಧಿತ ಉತ್ಪನ್ನಗಳ ತಯಾರಿಗಳಿಗೆ ಯಂತ್ರಗಳನ್ನು ಆವಿಷ್ಕರಿಸುವ ಕೊಯಂಬತ್ತೂರಿನ ಪೊನ್ಮಣಿ ಇಂಡಸ್ಟ್ರೀಸಿನ ಎನ್.ಆರ್.ನಟರಾಜನ್, ಭೂಪಾಲ್ ಕೇಂದ್ರವಾಗಿರುವ ಕೊಯಂಬತ್ತೂರು ಉಪಕೇಂದ್ರವಾದ ಕೇಂದ್ರ ಕೃಷಿ ಇಂಜಿನಿಯರಿಂಗ್ ಸಂಸ್ಥೆಯ ಮುಖ್ಯಸ್ಥ ಡಾ.ಎಸ್.ಜೇಕಬ್ ಕೆ.ಅಣ್ಣಾಮಲೈ ಮತ್ತು ಹಿರಿಯ ವಿಜ್ಞಾನಿ ಡಾ.ರವೀಂದ್ರ ನಾಯಕ್ ಜೂನ್ 21, 22ರಂದು ಕರಾವಳಿಗೆ ಆಗಮಿಸಿದ್ದರು.
                ಹಲಸಿನ ಹಪ್ಪಳದ ಉದ್ದಿಮೆದಾರರು ಸಂಘಟಿತರಾಗಿಲ್ಲ. ಅವರಿಗೆ ಪರಸ್ಪರರ ಪರಿಚಯವಿಲ್ಲ, ಸಂವಹನವಿಲ್ಲ. ಇವರು ಮತ್ತು ವಿಜ್ಞಾನಿಗಳ ನಡುವಿನ ಕೊಂಡಿಯಾಗಿ ಕೆಲಸ ಮಾಡಿದ್ದು ಹಲಸು ಅಭಿವೃದ್ಧಿಗಾಗಿ ಶ್ರಮಿಸುತ್ತಿರುವ ಅಡಿಕೆ ಪತ್ರಿಕೆ. ಆರಂಭದ ದಿವಸ ಕ್ಯಾಂಪ್ಕೋ ವರಿಷ್ಠರು, ಅಡಿಕೆ ಕೃಷಿಕರು ಮತ್ತು ಕೇಂದ್ರ ಕೃಷಿ ಇಂಜಿನಿಯರಿಂಗ್ ಸಂಸ್ಥೆಯನ್ನು ಮುಖಾಮುಖಿಯ ಮೇಜಿಗೆ ತಂದದ್ದೂ ಇದೇ ಪತ್ರಿಕೆ. ಈ ಸಂಸ್ಥೆ ಮತ್ತು  ಕನ್ನಾಡಿನ ಅಡಿಕೆ ಕೃಷಿಕ ಸಮುದಾಯಕ್ಕೆ ಈ ವರೆಗೆ ಸಂಪರ್ಕವೇ ಇದ್ದಿರಲಿಲ್ಲ.
                ಜೂನ್ 22ರಂದು ಪೆರ್ಡೂೂರಿನ 'ಅರುಣೋದಯ ಇಂಡಸ್ಟ್ರೀಸ್'ನ ವಸಂತ ನಾಯಕರ ಹಪ್ಪಳ ತಯಾರಿ ಕೇಂದ್ರಕ್ಕೆ ಭೇಟಿ. ಇವರದು ಹಲಸಿನ ಹಪ್ಪಳದ ಉದ್ದಿಮೆಯಲ್ಲೇ ಗರಿಷ್ಠ ಉತ್ಪಾದನೆ ಮಾಡುತ್ತಿರುವ ಸಾಧಕ ಸಂಸ್ಥೆ. ದಿನಕ್ಕೆ ಆರುನೂರು ಹಲಸು ನಾಲ್ಕು ಡಜನ್ ಕೈಗಳ ಮೂಲಕ ಇಲ್ಲಿ ಸಾವಿರಸಾವಿರ ಹಪ್ಪಳಗಳಾಗುತ್ತದೆ. ಹಪ್ಪಳ ತಯಾರಿಯಲ್ಲಿ ಹಲಸಿನ ಸೊಳೆ ರುಬ್ಬುವುದು, ಅದನ್ನು ಉಂಡೆ ಮಾಡುವುದು, ಉಂಡೆ ಒತ್ತುವುದು ಮುಖ್ಯ ಶ್ರಮದ ಕೆಲಸ. ಸದ್ಯ ಉಂಡೆಯನ್ನು ಎರಡು ಪ್ಲಾಸ್ಟಿಕ್ ಹಾಳೆ ಮೇಲಿಟ್ಟು ಅದರ ಮೇಲೆ ಮರದ ಒಂದು ಉರುಟು ಮಣೆ ಇಟ್ಟು ಒತ್ತುತ್ತಾರೆ.
               ಇದನ್ನು ಗಮನಿಸಿದ ನಟರಾಜನ್ ’ಕೈಯಲ್ಲಿ ಉಂಡೆ ಮಾಡುವಾಗ ಸಹಜವಾಗಿ ಆಕಾರ, ಗಾತ್ರ ವ್ಯತ್ಯಾಸವಾಗುತ್ತದೆ. ಉಂಡೆ ಮಾಡಲೆಂದೇ ಒಂದು ಯಂತ್ರ ಅಭಿವೃದ್ಧಿಗೊಳಿಸಬಹುದು. ಆಗ ಸಮಾನ ತೂಕ, ಗಾತ್ರದ ಹಪ್ಪಳ ತಯಾರಿಸಬಹುದ” ಎನ್ನುತ್ತಾರೆ.”ಹಪ್ಪಳ ಒತ್ತಲು ಅರೆ ಅಟೋಮ್ಯಾಟಿಕ್ ಯಂತ್ರ ಸಾಕು. ಏಕೆಂದರೆ ಇದು ಮೂರು-ನಾಲ್ಕು ತಿಂಗಳ ಉತ್ಪಾದನಾ ಕೆಲಸ. ಈ ನಿಟ್ಟಿನಲ್ಲಿ ನಾವು  ಯತ್ನಿಸುತ್ತೇವೆ’ ಎಂದು ಈ ವಿಜ್ಞಾನಿ ತಂಡ ಭರವಸೆ ಕೊಟ್ಟಿದೆ.
              ವಸಂತ ನಾಯಕರ ಹಪ್ಪಳ ಒಣಗಿಸುವ ಒಂದು ಶಾಖಪೆಟ್ಟಿಗೆ ಹೆಚ್ಚು ಕಟ್ಟಿಗೆ ಬೇಡುತ್ತಿದೆ. ಮುಂದಿನ ಘಟ್ಟದಲ್ಲಿ ಇದರ ಕ್ಷಮತೆ ಹೆಚ್ಚಿಸಿ ಕಟ್ಟಿಗೆಯ ಅವಶ್ಯಕತೆ ಕುಗ್ಗಿಸುವ ಯೋಚನೆ ಮಾಡಬಹುದು ಎನ್ನುತ್ತಾರೆ ಡಾ.ಅಣ್ಣಾಮಲೈ.
                ಬಿ.ಸಿ.ರೋಡಿನ ಹಲಸು ಪ್ರೇಮಿ ಮೌನೀಶ್ ಮಲ್ಯರ ಮನೆಗೆ ತಂಡ ಭೇಟಿ ನೀಡಿ ಅವರ ಉತ್ಪನ್ನಗಳು, ಅದಕ್ಕೆ ಸಂಬಂಧಪಟ್ಟ ಯಂತ್ರಗಳನ್ನು ವೀಕ್ಷಿಸಿತು. ಮನೆಮಟ್ಟದ ಹಲಸು ಮೌಲ್ಯವರ್ಧನೆ ಮಾಡುವ ಒಂದು ಪುಟ್ಟ ಗುಂಪೇ ಅಲ್ಲಿಗೆ ಬಂದಿತ್ತು.  ಇವರ ಯಂತ್ರಾವಶ್ಯಕತೆಯ ಬಗ್ಗೆ ಸವಿವರವಾಗಿ ಕೇಳಿಕೊಂಡ ತಂಡ ’ಕೊಯಂಬತ್ತೂರಿಗೆ ಮುಂದಾಗಿ ತಿಳಿಸಿ ಬನ್ನಿ. ಹಲಸಿನ ಉತ್ಪನ್ನಗಳಿಗೆ ಬೇಕಾಗುವ ಯಂತ್ರವನ್ನು ರೂಪಿಸೋಣ’ ಎಂದಿದೆ.
                  ಹಲಸು ಇಷ್ಟ್ಟೊಂದು ಆದಾಯ ತರಬಲ್ಲುದು ಮತ್ತು ಇದರಿಂದ ಅದೆಷ್ಟೋ ಉತ್ಪನ್ನ ತಯಾರಿ ಸಾಧ್ಯ ಎನ್ನುವುದು ತಂಡಕ್ಕೆ ದೊಡ್ಡ ಅಚ್ಚರಿ ಕೊಟ್ಟ ವಿಚಾರ. ಅಡಿಗೆಯ ಮಿಕ್ಸಿಯಲ್ಲಿ ಹಲಸಿನ ಹಣ್ಣಿನ ಪಲ್ಪ್ ಮಾಡುವುದು ಮೌನೀಶರಿಗೆ ತ್ರಾಸದಾಯಕವಾಗಿತ್ತು. ಇದಕ್ಕೆ ಈಗಾಗಲೇ ನಮ್ಮಲ್ಲಿರುವ ಗಟ್ಟಿಮುಟ್ಟಾದ ನಾಲ್ಕು ಕಿಲೋ ಒಳಸುರಿ ಹಾಕಬಲ್ಲ ಮಿಕ್ಸಿ ಆಗಬಹುದು ಎಂದರು ನಟರಾಜನ್.
                 ಕೊಯಂಬತ್ತೂರಿಗೆ ಮರಳಿದ ದಿನವೇ ನಟರಾಜನ್ ಮತ್ತು ಉಳಿದ ವಿಜ್ಞಾನಿಗಳು ಹಲಸಿನ ಹಣ್ಣು ಕೊಯ್ಯಿಸಿ ಈ ದೊಡ್ಡ ಮಿಕ್ಸಿಯಲ್ಲಿ ಹಾಕಿ ಪಲ್ಪ್ ಮಾಡಿ ನೋಡಿದ್ದಾರೆ. ಅದು ಯಶಸ್ವಿ ಎಂದು ತೋರಿಸುವ ಫೋಟೋಗಳನ್ನು ಕಳಿಸಿದ್ದಾರೆ. ಕರಾವಳಿಯ ಹಪ್ಪಳದ ಮತ್ತು ಚಿಕ್ಕಚಿಕ್ಕ ಗೃಹ ಉದ್ದಿಮೆ ಮಾಡುವ ಒಂದಷ್ಟು ಕೃಷಿಕರು, ಉದ್ಯಮಶೀಲರು ಕೊಯಂಬತ್ತೂರಿಗೆ ಟಿಕೆಟ್ ಬುಕ್ ಮಾಡಹೊರಟಿದ್ದಾರೆ.
                  "ಇದೊಂದು ಮೊದಲ ಹೆಜ್ಜೆಯಷ್ಟೇ. ಈ ಭಾಗದ ಕೃಷಿಕರು, ಉದ್ದಿಮೆದಾರರು ಮತ್ತು ವಿಜ್ಞಾನಿಗಳ ನಡುವೆ ನೇರ ಪರಿಚಯವಾಗಿದೆೆ. ಮುಂದಿನ ದಿನಗಳಲ್ಲಿ ಪರಸ್ಪರ ಸಂಪರ್ಕ ಇರಿಸಿಕೊಂಡರೆ ಎಷ್ಟೋ ಸಮಸ್ಯೆ ಪರಿಹರಿಸಿಕೊಳ್ಳಲು ಸಾಧ್ಯ. ಇಲ್ಲಿಗೆ ಮಾಧ್ಯಮದ ಕೆಲಸ ಬಹುತೇಕ ಮುಗಿದಂತೆ, ಮುಂದೆ ಏನಿದ್ದರೂ ನಮ್ಮದು ಪ್ರೇರೇಪಣೆ ಮತ್ತು ವರದಿಗಾರಿಕೆ ಮಾತ್ರ", ಎನ್ನುತ್ತಾರೆ  ಅಡಿಕೆ ಪತ್ರಿಕೆ ಸಂಪಾದಕ ಶ್ರೀ ಪಡ್ರೆ.


Sunday, July 27, 2014

ಕೃಷಿ ತಿರುಗಾಟದಿಂದ ಜ್ಞಾನವೃದ್ಧಿ


           'ಕೃಷಿಕ ತೋಟದಲ್ಲೇ ಇರಬೇಕು, ಅವನು ತಿರುಗಾಡಬಾರದು,' ಕೃಷಿಯ ಪಾರಂಪರಿಕ ಮಾತುಕತೆಗಳಲ್ಲಿ ಹಾದುಹೋಗುವ ಸೊಲ್ಲಿದು. ಕೃಷಿ ತಿರುಗಾಟದಿಂದ ಜ್ಞಾನವೃದ್ಧಿಯಾಗುತ್ತದೆ. ಆಗುಹೋಗುಗಳು ಅಪ್ಡೇಟ್ ಆಗುತ್ತಿರುತ್ತದೆ,’ ಕೃಷಿಯಲ್ಲಿ ಪೂರ್ಣಪ್ರಮಾಣದಲ್ಲಿ ತೊಡಗಿಸಿಕೊಂಡ ಪುತ್ತೂರು (ದ.ಕ.) ಬೆಟ್ಟಂಪಾಡಿಯ ಅರುಣ್ ಕುಮಾರ್ ರೈ ಆನಾಜೆಯವರ ಅನುಭವ.
            ಅರುಣ್ ದೇಶ ಸುತ್ತಿದ್ದಾರೆ, ಸುತ್ತುತ್ತಾರೆ. ಅಂತಹ ಸಂದರ್ಭಗಳಲ್ಲಿ - ಕೃಷಿ ಸಂಬಂಧಿ ಮೇಳಗಳಿಗೆ ಬೇಟಿ. ಯಂತ್ರ-ತಂತ್ರ ಮಾಹಿತಿಗಳ ಬೆನ್ನೇರಿ ಪ್ರವಾಸ. ಹೊಸ ಬೆಳೆಗಳತ್ತ ಆಸಕ್ತಿ. ಕೃಷಿಕರಲ್ಲಿಗೆ ಭೇಟಿ. ಬೀಜ-ಗಿಡಗಳ ವಿನಿಮಯ. ಮಾಹಿತಿ ಹಂಚಿಕೆ - ಹೀಗೆ ಅರುಣ್ ಸಕ್ರಿಯ. ಮಿತಭಾಷಿಯಾದ ಇವರನ್ನು ಮಾತನಾಡಿಸಿದರೆ ಕೃಷಿ ಲೋಕದ ಅಪ್ಡೇಟ್ ಗೊತ್ತಾಗಿಬಿಡುತ್ತದೆ.
            ಈಚೆಗೆ ಹಾಂಗ್ ಕಾಂಗ್, ಮಕಾವೋ, ಥೈಲಾಂಡ್ ಪ್ರವಾಸ ಕೈಗೊಂಡಿದ್ದರು. ಸೀಮಿತ ಅವಧಿಯ ಭೇಟಿಯಾದರೂ ಅವರ ಕಣ್ಣೆಲ್ಲಾ ಕೃಷಿಯ ಸುತ್ತಮುತ್ತ ಗಿರಕಿ ಹೊಡೆಯುತ್ತಿತ್ತು. "ಮಾಲ್ಗಳಲ್ಲಿ ಕೃಷಿ ಉತ್ಪನ್ನಗಳನ್ನು ಆಕರ್ಷಕವಾಗಿ ಜೋಡಿಸಿಡುವ ವಿನ್ಯಾಸ ಮೋಡಿ ಮಾಡಿತ್ತು.
          ವಿವಿಧ ವೈವಿಧ್ಯ ಹಣ್ಣುಗಳ ಜೋಡಣಾ ವಿನ್ಯಾಸದ ನೋಟ ಕಣ್ಸೆಳೆಯುವಂತಿತ್ತು. ಗ್ರಾಹಕರನ್ನು ಸೆಳೆಯುವ ಮಾರುಕಟ್ಟೆ ತಂತ್ರ ನಿಜಕ್ಕೂ ಬೆರಗು. ಭಾರತದಲ್ಲಿ ಮಾರುಕಟ್ಟೆಯಿಲ್ಲ, ಮಾರಾಟವಿಲ್ಲ ಅಂತ ಕೂಗುತ್ತೇವೆ. ನಿಜಕ್ಕೂ ಮಾರುಕಟ್ಟೆಯ ಅಧ್ಯಯನದಲ್ಲಿ ನಾವು ಹಿಂದಿದ್ದೇವೆ ಅನ್ನಿಸುತ್ತದೆ. ಉತ್ಪನ್ನಗಳನ್ನು ಗ್ರಾಹಕ ಸ್ವೀಕೃತಿಯಾಗಿ ಕೊಡುವಲ್ಲಿ ಇನ್ನೂ ಮುಂದೆ ಸಾಗಬೇಕಿದೆ," ಎಂದರು.
               ಅರುಣ್ ಮರಳುವಾಗ ತೆಂಗಿನ ನಿರ್ಜಲೀಕೃತ (ಡಿಹೈಡ್ರೇಟೆಡ್) ಉತ್ಪನ್ನವನ್ನು ತಂದಿದ್ದರು. ಅದರ ಪ್ಯಾಕೆಟ್ ಹೇಗಿತ್ತೆಂದರೆ ತೆಂಗಿನದ್ದೇ ಆಕಾರದ ಪ್ಯಾಕಿಂಗ್. ತೆಂಗಿನ ಉತ್ಪನ್ನ ಎಂದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಪ್ಯಾಕೆಟಿನ ವಿನ್ಯಾಸವೇ ಅದು ಯಾವ ಉತ್ಪನ್ನ ಎನ್ನುವುದನ್ನು ಮನಸ್ಸಿನಲ್ಲಿ ರಿಜಸ್ತ್ರಿ ಮಾಡಿಸಿ ಬಿಡುತ್ತವೆ. ಪ್ರತೀಯೊಂದು ಹಣ್ಣಿಗೂ ಆ ಹಣ್ಣನ್ನೇ ಹೋಲುವ ಪೌಚ್ ತಯಾರಿಸಿರುವುದು ಮಾರಾಟ ಜಾಣ್ಮೆ. ಹಲಸು, ಪಪ್ಪಾಯಿಯಂತಿರುವ ಪೌಚ್ ಅರುಣರನ್ನು ಸೆಳೆದಿತ್ತು.
             ಹಣ್ಣಿನ ಋತುವಿನಲ್ಲಿ ಯಥೇಷ್ಟ ಹಣ್ಣು ಸಿಕ್ಕಿದಾಗ ಬೆಲೆಯೂ ಕಡಿಮೆ. ಬಿಸಾಕು ಕ್ರಯಕ್ಕೆ ಮಾರುವ ಪ್ರಮೇಯ ಕೃಷಿಕರದ್ದು. ಥೈಲ್ಯಾಂಡಿನಂತೆ ಹಣ್ಣುಗಳನ್ನು ಸೀಸನ್ನಿನಲ್ಲಿ ನಿರ್ಜಲಗೊಳಿಸಿ ಅಕಾಲದಲ್ಲಿ ಉತ್ಪನ್ನವನ್ನು ನೀಡುವ ಜ್ಞಾನ ನಮ್ಮಲ್ಲೂ ಸಾಧ್ಯವಿದೆ. ಅದರ ಅನುಷ್ಠಾನ ಎಲ್ಲಿಂದ ಶುರುವಾಗಬೇಕು, ಯಾರು ಮಾಡಬೇಕು? ಸರಕಾರ ಮಾಡಲಿ ಎಂದು ಕೃಷಿಕ, ಕೃಷಿಕರೇ ಮಾಡಿಕೊಂಡರೆ ಸಪೋರ್ಟ್ ಮಾಡುತ್ತೇವೆ ಎನ್ನುವ ಹುಸಿ ಆಶ್ವಾಸನೆ ಸರಕಾರದಿಂದ. ಹಾಗಾಗಿ ನಮ್ಮಲ್ಲಿ ಕೃಷಿ ವ್ಯವಸ್ಥೆಗಳು ಮುಂದೆ ಹೋಗಿಲ್ಲ," ಎನ್ನುತ್ತಾರೆ.
              ರಸ್ತೆಬದಿಗಳಲ್ಲಿರುವ ಸೀಯಾಳ ಮಾರಾಟಕ್ಕೂ ಹೈಟೆಕ್ ಟಚ್. ಸೀಯಾಳದ ಮೇಲ್ಬದಿ, ಕೆಳಬದಿ ಕೆತ್ತಿ ತಂಪುಪೆಟ್ಟಿಗೆಯಲ್ಲಿಡುತ್ತಾರೆ. ಇದನ್ನು ಗ್ರಾಹಕರು ಹೆಚ್ಚು ಇಷ್ಟಪಡುತ್ತಾರೆ. ಮಾಲ್ಗಳಲ್ಲಿ ಸೀಯಾಳವನ್ನು ಅಂದವಾಗಿ ಕೆತ್ತಿ, ಕ್ಲಿಂಗ್ಪಿಲ್ಮ್  ಪ್ಯಾಕ್  ಮಾಡಿ, ಲೇಬಲ್ ಅಂಟಿಸಿದಾಗಲೇ ಗುಣಮಟ್ಟ! ಈ ರೀತಿ ಇದ್ದಾಗ ಮಾತ್ರ ಗ್ರಾಹಕರೂ ಸ್ವೀಕರಿಸುತ್ತಾರಂತೆ.
             ರಂಬುಟಾನ್ ತುಂಬಾ ಮಾರಿಹೋಗುವ ಹಣ್ಣು. ಧರ್ಮಾಕೋಲ್ ಪ್ಲೇಟಿನೊಳಗೆ ಕ್ಲಿಂಗ್ಫಿಲ್ಮ್ ಸುತ್ತಿದ ಪ್ಯಾಕೆಟ್ ಆಕರ್ಷಕ. ಹಣ್ಣಿನ ಹೊರಮೈ ತುಂಬಾ ಗಟ್ಟಿ. ರಂಬುಟಾನ್ ಹಣ್ಣಿನ ಮೇಲ್ಬದಿ, ಕೆಳಬದಿಯನ್ನು ಒಳಗಿನ ಗುಳ ಸ್ವಲ್ಪ ಕಾಣುವಂತೆ ಕೆತ್ತಿಡುತ್ತಾರೆ. ತಿನ್ನುವವನಿಗೆ ಸುಲಭ, ಹಣ್ಣನ್ನು ತಿಂದ ಅರುಣ್ ಅನುಭವ.
            ಐದು ವರುಷದ ಹಿಂದೆ ದುಬೈಗೆ ಹೋಗಿದ್ದರು. ದೊಡ್ಡ ಪ್ರಮಾಣದಲ್ಲಿ ಕೃಷಿ ಮಾಡುವ ಯೋಚನೆಯಿತ್ತು.  ಅಲ್ಲಿನ ಕೃಷಿ ಕ್ರಮಗಳನ್ನು ಅಧ್ಯಯನ ಮಾಡಿದ್ದರು. ಶ್ರೀಮಂತ ಹೋಟೆಲುಗಳಲ್ಲಿ ಉತ್ತಮ ಬೇಡಿಕೆಯಿದ್ದ ತರಕಾರಿ 'ಕೂಸಾ', 'ಕಾರ್ಗೆಟ್'  ಸೆಳೆದಿತ್ತು. ಎಳೆಯ ಕೂಸಾವನ್ನು ತೊಟ್ಟಿನ ಜಾಗದಲ್ಲಿ ತುಂಡರಿಸಿ, ಒಳಗಿನ ಹೂರಣವನ್ನು ತೆಗೆಯುತ್ತಾರೆ. ಇದರೊಳಗೆ ಮಿಶ್ರ ಮಾಡಿದ ಅನ್ನ ಮತ್ತು ಮಾಂಸವನ್ನು ಸೇರಿಸಿ ಹಬೆಯಲ್ಲಿ ಬೇಯಿಸುತ್ತಾರೆ. ಇದು ಸಾಂಬಾರಿನೊಂದಿಗೆ ಮುಳುಗಿ ಊಟದ ಟೇಬಲ್ ಸೇರುತ್ತದೆ. ಒಂದು ಕಪ್ ಸಾಂಬಾರಿನಲ್ಲಿ ಒಂದು ಕೂಸಾ! ಇದು ಅರೇಬಿಯನ್ ರಾಷ್ಟ್ರದಲ್ಲಿ ಶ್ರೀಮಂತ ತಿಂಡಿ, ಹೊಸ ಖಾದ್ಯವೊಂದನ್ನು ಪರಿಚಯಿಸುತ್ತಾರೆ ಅರುಣ್.
            ಚೀನಾ ದೇಶಕ್ಕೆ ಹೋಗಿದ್ದಾಗ ಭತ್ತ, ಗೋಧಿ ಕೃಷಿಯತ್ತ ಚಿತ್ತ. ಅದಕ್ಕೆ ಬಳಸುವ ಯಂತ್ರೋಪಕರಣವನ್ನು ನೋಡಿ ಬೆರಗು. ಎಲ್ಲವೂ ಯಂತ್ರಾವಲಂಬಿತ. ಇಲ್ಲಿನ ಕೃಷಿ ಕೆಲಸಗಳು ನಿಜಕ್ಕೂ ಅಚ್ಚರಿ. ಚಿಕ್ಕ ಯಂತ್ರದಿಂದ ತೊಡಗಿ ದೊಡ್ಡ ದೊಡ್ಡ ಯಂತ್ರಗಳ ನಿರ್ವಹಣೆ. ಆಹಾರ ಉತ್ಪಾದನೆಯಲ್ಲಿ ಇಂತಹ ವ್ಯವಸ್ಥೆಗಳು ಅನಿವಾರ್ಯ, ಎನ್ನುತ್ತಾರೆ.
            ಹಳ್ಳಿಗಳಲ್ಲಿ ಯಾವ ಬೆಳೆ ಬೆಳೆಯುತ್ತಾರೋ ಅದು ಅಲ್ಲಲ್ಲಿ ಸಂಸ್ಕರಣೆಗೊಂಡೇ ನಗರದ ಮಾರುಕಟ್ಟೆ ಸೇರುತ್ತದೆ. ಅದಕ್ಕೆಂದೇ ಪ್ರತ್ಯೇಕವಾದ ಜಾಲವನ್ನು ಸರಕಾರವೇ ರೂಪಿಸಿದೆ. ಕೃಷಿಕರಿಗೆ ಬಾಡಿಗೆ ನೆಲೆಯಲ್ಲಿ ಯಂತ್ರಗಳನ್ನು ನೀಡಲು ಸೊಸೈಟಿಗಳಂತಹ ಸಂಸ್ಥೆಗಳ ಸ್ಥಾಪನೆ. ಸಣ್ಣ, ಮಧ್ಯಮ ವರ್ಗದ ಕೃಷಿಕರಿಗಿದು ಅನುಕೂಲ.
              "ಗಿಡ ನೆಡುವಲ್ಲಿಂದ ಮಾರುಕಟ್ಟೆ ತನಕದ ವಿವಿಧ ಹಂತಗಳ ಜ್ಞಾನವು ಪ್ರವಾಸದಿಂದ ತಿಳಿಯುತ್ತದೆ. ಆಯಾಯ ಪ್ರದೇಶದ ಪದ್ಧತಿಗಳು, ಕೆಣಿಗಳನ್ನು ಹತ್ತಿರದಿಂದ ನೋಡಲು ಅನುಕೂಲ. ಹೊಸ ಹಣ್ಣುಗಳ ಪರಿಚಯ. ಅಡಿಕೆಯೊಂದಿಗೆ ಬೇರೆ ಯಾವ ಬೆಳೆಗಳನ್ನು ಬೆಳೆಸಬಹುದೆಂಬುದಕ್ಕೆ ನನಗೆ ಪ್ರವಾಸ ಹೆಚ್ಚು ಪುಷ್ಟಿ ಕೊಟ್ಟಿದೆ," ಎನ್ನುತ್ತಾರೆ. ಅರುಣ್ ಪ್ರವಾಸ ಹೋದಾಗಲೆಲ್ಲಾ ಕೃಷಿಯ ವಿಚಾರಗಳನ್ನು ಆಸಕ್ತಿಯಿಂದ ಗಮನಿಸುತ್ತಾರೆ. ದಾಖಲೆ ಮಾಡಿಟ್ಟುಕೊಳ್ಳುತ್ತಾರೆ. ಪುತ್ತೂರಿನ ಗಿಡಗೆಳೆತನ ಸಂಘ 'ಸಮೃದ್ಧಿ'ಯಲ್ಲಿ ವಿವಿಧ ಜವಾಬ್ದಾರಿಗಳನ್ನು ನಿಭಾಯಿಸಿದ್ದರು


Monday, July 14, 2014

ಕಪ್ಪು ಸುಂದರಿಯ ಹಸಿರು ಒಡಲು!
             ಕುಂದನಗರಿಯಲ್ಲಿ ಕೃಷಿಕರೊಬ್ಬರ ಮನೆಯಲ್ಲಿ ಉಳಕೊಂಡಿದ್ದೆ. ಉತ್ತರ ಕರ್ನಾಟಕದ ಖಾದ್ಯವೈವಿಧ್ಯವನ್ನು ಸವಿದಿದ್ದೆ. ಮಾತಿನ ಮಧ್ಯೆ ಖಾದ್ಯಗಳಲ್ಲಿ 'ಕಪ್ಪು ಹೆಸರುಕಾಳು' ಬಳಕೆಯು ಹಿರಿಯರ ಕಾಲದಿಂದಲೂ ನಮ್ಮ ಮನೆಯಲ್ಲಿತ್ತು. ಈಗ ಕಪ್ಪು ಹೆಸರಿನ ಕೃಷಿಯೇ ಅಪರೂಪವಾಗುತ್ತಿದೆ. ಮಾರುಕಟ್ಟೆಯಲ್ಲಿ ಬೇಕಾದಷ್ಟು ಸಿಗುತ್ತಿದೆ. ಎಲ್ಲಿಂದ ಬರುತ್ತದೆ ಎನ್ನುವುದು ಗೊತ್ತಿಲ್ಲ ಅಂದಿದ್ದರು. ಊರಿಗೆ ಮರಳುವಾಗ ಒಯ್ಯಬೇಕೆಂದುಕೊಂಡರೂ ಹಾಳು ಮರೆವು!
              ಹಸಿರು ವರ್ಣದ ಹೆಸರುಕಾಳು ಉಪಾಹಾರದಲ್ಲಿ, ಅಡುಗೆಯಲ್ಲಿ ಕರಾವಳಿಯಲ್ಲಿ ಬಳಕೆಯಿದೆ. ಆದರೆ ಕಪ್ಪುಹೆಸರು? ಹುಬ್ಬಳ್ಳಿಯ ಸ್ನೇಹಿತ ಮುಳಿಯ ಜಯಶಂಕರ ಶರ್ಮ ಅವರಲ್ಲಿ ವಿನಂತಿಸಿದೆ. ಕೋರಿಯರಿನಲ್ಲಿ ಕಳುಹಿಸಿಕೊಟ್ಟರು. ಕುಂದನಗರದ ಕೃಷಿಕರೆಂದಂತೆ ಆಕಾರದಲ್ಲಿ ಹಸಿರು ಹೆಸರು ಹೋಲುತ್ತದೆ. ವರ್ಣದಲ್ಲಿ ಮಾತ್ರ ಕಪ್ಪು. ಹೊಸ ನೆಂಟನ ಆಗಮನಕ್ಕೆ ಅಡುಗೆ ಮನೆ ಸಜ್ಜಾಯಿತು.
              ಮೊದಲಿಗೆ ಕಾಳಿಗೆ ಸ್ನಾನ. ನೀರಲ್ಲಿ ಕಾಳನ್ನು ಹಿಚುಕಿದ್ದೇ ತಡ, ನೀರು ಕಪ್ಪು ವರ್ಣಕ್ಕೆ ತಿರುಗಿತು. ಹಿಚುಕುತ್ತಾ ಹೋದಂತೆ ಕಾಳಿಗೆ ಅಂಟಿದ್ದ ಕಪ್ಪು ಬಣ್ಣ ಬಿಟ್ಟುಕೊಡುತ್ತಾ ಬಂತು. ನೀರಿನ ಬಣ್ಣ ಹೇಗಿತ್ತೆಂದರೆ ಗಟಾರ ನೀರನ್ನು ನೆನಪಿಸುವಂತಿತ್ತು. ಗಾಢ ಕಪ್ಪು. ಕಮಟು ವಾಸನೆ. ಕಾಳನ್ನು ನೀರಲ್ಲಿ ಹಾಕಿ ಒಂದೆರಡು ಗಂಟೆ ಕಳೆದ ಬಳಿಕ ಪುನಃ ಹಿಚುಕಿದಾಗ ಕಪ್ಪು ಬಣ್ಣಕ್ಕೆ ಕಾಳು ವಿಚ್ಛೇದನ ನೀಡಿತ್ತು! ಕಪ್ಪಾಗಿದ್ದ 'ಕಪ್ಪು ಹೆಸರು' ಹಸಿರು ಕಾಳಾಗಿ ಪರಿವರ್ತನೆಯಾಯಿತು!
           ಅನ್ನದ ಬಟ್ಟಲಿಗೆ ಸೇರುವ ಆಹಾರಕ್ಕೂ ಕಲಬೆರಕೆಯ ಯೋಗ. ಹಸಿರು ಹೆಸರು ಕಾಳಿಗೆ ಬಣ್ಣ, ಕೆಮಿಕಲ್ಗಳನ್ನು ಲೇಪಿಸಿ ಕಪ್ಪು ಕಾಳೆಂದು ಹೆಚ್ಚು ದರಕ್ಕೆ ಮಾರಾಟ ಮಾಡುವ ವ್ಯಾಪಾರಿ ಹುನ್ನಾರ. ಮಾರ್ಕೆಟಿನಲ್ಲಿ ಸಿಗುವ ಕಪ್ಪು ಕಡಲೆಯ ಕತೆಯೂ ಹೀಗಿರಬೇಕು, ಪರೀಕ್ಷಿಸುತ್ತೇನೆ, ಎಂದರು ಅತ್ತ ಕಡೆಯಿಂದ ಜಯಶಂಕರ್.
             ಆಹಾರದಲ್ಲಿ ಕಲಬೆರಕೆ ಹೊಸ ವಿಷಯವಲ್ಲ. ರಾಜಾರೋಷವಾಗಿ ನಡೆಯುವ ವ್ಯವಸ್ಥಿತ ವ್ಯವಹಾರ. ಸರಕಾರದ ವರಿಷ್ಠರಿಂದ ಅಂಗಡಿ ಮಾಲಕನ ತನಕ ಹಲವು ಕೈಗಳ ಕೈವಾಡ. ಅಕ್ಕಿಗೆ ಬಣ್ಣ, ಹಾಲಿಗೆ ಬಿಳಿ ವರ್ಣದ ಇನ್ನೇನೋ, ಸಕ್ಕರೆಯೊಂದಿಗೆ ಮಿಳಿತವಾಗುವ ಅದಾವುದೋ ಹರಳು.. ಹೀಗೆ ಗುರುತು ಹಿಡಿಯದಷ್ಟು ಜಾಣ್ಮೆಯಲ್ಲಿ ಕಲಬೆರಕೆ ಆಹಾರದಲ್ಲಿ ಸೇರುತ್ತವೆ. ಉದರಕ್ಕಿಳಿಯುತ್ತದೆ.
              ಗದಗ ಸಮೀಪದ ಹೋಟೆಲಿನಲ್ಲಿ ಊಟದ ಹೊತ್ತು. ತಟ್ಟೆ ತುಂಬಾ ವಿವಿಧ ಐಟಂಗಳು. ಅದರಲ್ಲಿ ಹಸಿಯಾಗಿ ಕತ್ತರಿಸಿದ ಕ್ಯಾಬೇಜ್ ಚೂರುಗಳು. 'ಸರ್, ಈಗಷ್ಟೇ ಹೊಲದಿಂದ ಬಂದ ಕ್ಯಾಬೇಜ್ಗಳು ಸಾರ್,' ಎಂದು ಕಚಕಚನೆ ತುಂಡು ಮಾಡಿ ಬಟ್ಟಲಿಗೆ ಹಾಕುತ್ತಾ ಸಪ್ಲೈಯರ್ ಬರಬೇಕೇ? ಹೋಟೆಲಿನ ಕಿಟಕಿಯಾಚೆಗಿನ  ಹೊಲದಲ್ಲಿ ಕ್ಯಾಬೇಜ್ ಕಟಾವಿನ ಕ್ಷಣಕ್ಕಾಗಿ ನಗುತ್ತಿತ್ತು. ಕಣ್ಣೆದಿರುಗೆ ವಿಷ ಸಿಂಪಡಣೆ  ಮಾಡುತ್ತಿರುವ ದೃಶ್ಯವನ್ನು ನೋಡಿ ನಿಜಕ್ಕೂ ಕೈ ನಡುಗಿತು.
             ಟೊಮೆಟೊ ಮೊದಲಾದ ವಿವಿಧ ಸಾಸ್ಗಳು, ಬಣ್ಣ ಬಣ್ಣದ ಐಸ್ಕ್ರೀಂಗಳು, ಚಹಾ ಪುಡಿ, ಸಿಂಥೆಟಿಕ್ ಹಾಲು-ಮೊಸರು-ಬೆಣ್ಣೆ.. ಹೀಗೆ ಒಂದೊಂದು ಆಹಾರದ ಅಕರಾಳ ಮುಖಗಳನ್ನು ಈಚೆಗೆ ವಾಹಿನಿಗಳು ಪ್ರಸಾರ ಮಾಡುತ್ತಲೇ ಇವೆ. ವೈದ್ಯಕೀಯ ವರದಿಯು 'ಆರೋಗ್ಯಕ್ಕೆ ಹಾನಿಕರ, ಕ್ಯಾನ್ಸರ್ಕಾರಕ..' ಎನ್ನುವ ಎಚ್ಚರಿಕೆ ನೀಡಿದರೂ ಕಾಣದ ಕೈಗಳ ಕೈವಾಡ ಸಾರ್ವಜನಿಕರಿಗೆ ಕಾಣುವುದಿಲ್ಲ.
             ಕಲಬೆರಕೆಯಲ್ಲಿ ಬಳಸುವ ಕೆಮಿಕಲ್ಗಳು ವಿಷಕಾರಕ. ಕೃಷಿಯಲ್ಲಿ ಕೀಟನಾಶಕಗಳ ಎಗ್ಗಿಲ್ಲದ ಬಳಕೆ.  ನಮ್ಮ ಶರೀರ ಹೆಸರು ಹೇಳಲು ಭಯವಾಗುವ ವಿವಿಧ ಕಾಯಿಲೆಗಳ ಗೂಡಾಗುತ್ತಿವೆ. ನಿತ್ಯ ಟಾನಿಕ್, ಗುಳಿಗೆಗಳನ್ನು ನುಂಗುವುದು ಬದುಕಿನಂಗವಾಗಿದೆ.
            ಆಹಾರ ಕ್ರಮ, ಜೀವನ ಶೈಲಿಯಲ್ಲಿ ಮಾರ್ಪಾಡು ಮಾಡುವ ಬದಲು, 'ಏನು ಮಾಡುವುದು, ತಿನ್ನಬೇಕಲ್ಲಾ. ಬೇರೆ ದಾರಿ ಇಲ್ವಲ್ಲಾ,' ಎಂದು ವಿಷವನ್ನು ನಿತ್ಯ ತಿನ್ನುತ್ತಾ ಇರುವ ನಮಗೆ ಮೆಡಿಕಲ್ ಶಾಪ್ಗಳ ಮುಂದೆ ಕ್ಯೂ ನಿಲ್ಲುವುದೆಂದರೆ ಖುಷಿ! ಎಲ್ಲಿಯ ವರೆಗೆ ಆಹಾರದ ಕುರಿತು ನಿರ್ಲಿಪ್ತತೆ ನಮ್ಮಲ್ಲಿ ಇರುತ್ತದೋ ಅಲ್ಲಿಯ ವರೆಗೆ ಕಲಬೆರಕೆ ಮಾಡುವವರು ನಮ್ಮ ಮಗ್ಗುಲಲ್ಲೇ ಇರುತ್ತಾರೆ. ವಿಷ ಹಾಕುವವರು ನೆರೆಮನೆಯಲ್ಲೇ ಇರುತ್ತಾರೆ.

Sunday, July 6, 2014

ಬಾಯಿಸಿಹಿ ಮಾಡಿದ ಹಲ್ವ : ಹೀಗೂ ಹಲಸು ಚಳುವಳಿ

ಹಲಸಿನ ಹಣ್ಣಿನ ಪಲ್ಪಿಂಗ್
 ಪಲ್ಪ್ ಸಕ್ಕರೆ, ತುಪ್ಪದೊಂದಿಗೆ ಮಿಳಿತ

               ತಿನ್ನಲು ಸಿದ್ಧ 'ಹಲಸಿನ ಹಣ್ಣಿನ ಹಲ್ವ'

               2014 ಜೂನ್ 22ರಂದು ಪುಣಚ (ದ.ಕ.)ದಲ್ಲಿ ಹಲಸಿನ ಹಬ್ಬ ಜರುಗಿತು. ಹಬ್ಬದಲ್ಲೊಂದು  'ಹಲಸು ಸ್ನೇಹಿ ಕೂಟ'ದ ಮಳಿಗೆ. ಅದರಲ್ಲಿ ಹಲಸಿನ ಹಣ್ಣಿನ (ಹಹ) ಹಲ್ವದ ಪ್ರದರ್ಶನ.  'ಹಲಸಿನ ಹಣ್ಣಿನಿಂದಲೂ ಇಷ್ಟೊಂದು ಸ್ವಾದಭರಿತ ಹಲ್ವ ಮಾಡಲು ಆಗುತ್ತಾ' ಚಿಕ್ಕಮಗಳೂರಿನಿಂದ ಆಗಮಿಸಿದ ದಂಪತಿಗಳ ಸೋಜಿಗ. ಅವರ ಆಸಕ್ತಿಯನ್ನು ಗಮನಿಸಿದ ಮುಳಿಯ ವೆಂಕಟಕೃಷ್ಣ ಶರ್ಮರಿಂದ ರೆಸಿಪಿ ಪ್ರಸ್ತುತಿ.
                ಹಲಸಿನ ಹಣ್ಣಿನ ಹೊರಮೈ ಶುಚಿಗೊಳಿಸಿ. ಹಣ್ಣನ್ನು ಬಿಡಿಸಿ ಸೊಳೆ ಪ್ರತ್ಯೇಕಿಸಿ. ನೀರು ಹಾಕದೆ ಸೊಳೆಯನ್ನು ಮಿಕ್ಸಿಯಲ್ಲಿ ರುಬ್ಬಿ. ಪಲ್ಪ್ ರೆಡಿ. ಕಂಚಿನ ಉರುಳಿಯಲ್ಲಿ ಪಲ್ಪನ್ನು ತುಪ್ಪದೊಂದಿಗೆ ಬೇಯಿಸಿ. ಸುಮಾರು ಮುಕ್ಕಾಲು ಗಂಟೆ ತಳಹಿಡಿಯದಂತೆ ಸೌಟಿಯಲ್ಲಿ ತಿರುವಬೇಕು. ಕಂದು ವರ್ಣಕ್ಕೆ ಪಲ್ಪ್ ಬದಲಾದಾಗ ಸಕ್ಕರೆ ಹಾಕಿ. ಸಕ್ಕರೆಯ ತೇವಾಂಶ ಆರುವ ತನಕ ಅಂದರೆ ಸುಮಾರು ಮುಕ್ಕಾಲು ಗಂಟೆ ತಿರುವಿ. ತುಂಡು ಮಾಡಿಟ್ಟ ಗೇರುಬೀಜ ಸೇರಿಸಿ. ಪಾಕ ಅಂತಿಮವಾಗುತ್ತಿದ್ದಂತೆ ಮೊದಲು ಪಲ್ಪ್ ಎಳೆದುಕೊಂಡ ತುಪ್ಪವನ್ನು ಬಿಟ್ಟುಕೊಡಲು ಆರಂಭಿಸುತ್ತದೆ. ಹತ್ತು ನಿಮಿಷ ತಿರುವಿ ಉರುಳಿಯನ್ನು ಒಲೆಯಿಂದ ಇಳಿಸಿ. ಗಾಢ ಕಂದು ಬಣ್ಣದ ಹಲ್ವವನ್ನು ದೊಡ್ಡ ಬಟ್ಟಲಿಗೆ ಹಾಕಿ. ತಣ್ಣಗಾದ ಮೇಲೆ ಬೇಕಾದ ಆಕಾರಕ್ಕೆ ಚಾಕುವಿನಿಂದ ತುಂಡು ಮಾಡಿ. ಒಂದು ಕಿಲೋ ಸೊಳೆಗೆ ಅರುವತ್ತು ಎಂ.ಎಲ್. ತುಪ್ಪ, ಮೂನ್ನೂರೈವತ್ತು ಗ್ರಾಮ್ ಸಕ್ಕರೆ ಸಾಕು.
                  ಹಲ್ವ ಮಾಡುವ ವಿದ್ಯೆ ಬಹುತೇಕ ಅಮ್ಮಂದಿರಿಗೆ ಗೊತ್ತು. ಮುಳಿಯದ ವೆಂಕಟಕೃಷ್ಣ ಶರ್ಮರು ಸ್ವತಃ ಮಾಡುವ ಹಲ್ವದ ರುಚಿಯೇ ಬೇರೆ. ಮಾರುಕಟ್ಟೆಯಲ್ಲಿ ಸಿಗುವ ಹಲ್ವದಲ್ಲಿ ಸಕ್ಕರೆಯ ಪ್ರಮಾಣ ಹೆಚ್ಚು. ಸಹಜವಾಗಿ ತೂಕವೂ ಅಧಿಕ. ಸುಮಾರು ಒಂದೂವರೆಯಿಂದ ಎರಡು ಗಂಟೆ ಕಾಲ ಉರುಳಿಯಲ್ಲಿ ಬೆಂದರೆ ಮಾತ್ರ ಹಲ್ವಕ್ಕೆ ನಿಜ ರುಚಿ, ಎನ್ನುತ್ತಾರೆ. ಹಲ್ವಕ್ಕೆ ಹದಿನೈದು ದಿವಸ ತಾಳಿಕೆ. ತಂಪುಪೆಟ್ಟಿಗೆಯಲ್ಲಿ ಮುಗಿಯುವ ವರೆಗೆ ಕಾಪಿಟ್ಟು ಬಳಸಲಡ್ಡಿಯಿಲ್ಲ.
                    2013ರಲ್ಲಿ ಅಡ್ಯನಡ್ಕದಲ್ಲಿ ಹಲಸು ಮೇಳ ನಡೆದಾಗ ಶರ್ಮ ಬಳಗ ಸುಮಾರು ನಲವತ್ತು ಕಿಲೋ ಹಲ್ವ ತಯಾರಿಸಿದ್ದರು. ಬಹುತೇಕ ಮಾರಾಟ.  ಜತೆಗೆ ಮನೆಗೆ ಬಂದ ಅತಿಥಿಗಳಿಗೆ, ಹಲಸಿನ ಖಾದ್ಯಗಳ ಪರಿಚಯ ಇಲ್ಲದವರಿಗೆ, ಹಲಸನ್ನು ಹೊಸತಾಗಿ ನೋಡಿದವರಿಗೆ ಉಚಿತವಾಗಿ ಕೊಟ್ಟು ರುಚಿ ಹಿಡಿಸಿದ್ದಾರೆ. ಹಲಸಿನ ಹಣ್ಣಿನ ಸವಿಯನ್ನು ಒಮ್ಮೆ ಅನುಭವಿಸಿದರೆ ಮತ್ತೆ ತಪ್ಪಿಸುವಂತಿಲ್ಲ. ಮೌಲ್ಯವರ್ಧಿಸಿದರೆ ಯಾವತ್ತೂ ಬೇಡಿಕೆಯಿದೆ' ಎನ್ನುವುದು ಅನುಭವ.
                   ಕಳೆದ ವರುಷ ಹಿರಿಯ ಪತ್ರಕರ್ತ ಶ್ರೀ ಪಡ್ರೆಯವರು ಹಲಸಿನ ಅಧ್ಯಯನಕ್ಕೆ ವಿದರ್ಭಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಶರ್ಮರು ನೀಡಿದ ಹಲ್ವವನ್ನು ಒಯ್ದಿದ್ದರು. ಅಲ್ಲಿನ ಹಲಸು ಸ್ನೇಹಿಗಳ ಬಾಯಿ ಸಿಹಿ ಮಾಡಿದ್ದರು. ತಿಂದ ಅನೇಕರು ರೆಸಿಪಿ ಕೊಡುವಂತೆ ಆಗ್ರಹಿಸಿದ್ದರಂತೆ!  ವಿದರ್ಭದಲ್ಲಿ ಹಲಸಿನ ಹಣ್ಣಿನ ಹಲ್ವ ಅಪರೂಪ. ಬಹುತೇಕರಿಗೆ ಗೊತ್ತಿಲ್ಲ. ರುಚಿ ನೋಡಿದ ಅನೇಕರು 'ಇಲ್ಲಿ ಮಾರಾಟಕ್ಕೆ ಅವಕಾಶವಿದೆ' ಎಂದರಂತೆ.
                  ಬೆಂಗಳೂರು ಕೃಷಿ ವಿವಿಯ ಸಹಪ್ರಾಧ್ಯಾಪಕಿ ಡಾ.ಶ್ಯಾಮಲಮ್ಮ ಹಲಸಿನ ಹಬ್ಬಕ್ಕೆ ಎರಡು ವರುಷವೂ ಆಗಮಿಸಿದ್ದರು. ಇವರಿಗೆ ಉಡುಗೊರೆಯಾಗಿ ನೀಡಿದ್ದ ಹಲ್ವ ವಿವಿಯ ಮುಖ್ಯಸ್ಥರಿಗೆ ತಲುಪಿತು. 'ಹಲಸಿನ ಹಣ್ಣಿನಿಂದ ಇಷ್ಟು ರುಚಿಯ ಹಲ್ವ ಮಾಡಲು ಆಗುತ್ತೆ ಅಂತ ಇಂದೇ ಗೊತ್ತಾಯಿತು' ಎಂದು ಉದ್ಗರಿಸಿದ್ದರಂತೆ.
                 ಹಲ್ವಕ್ಕೆ ಎಲ್ಲಾ ಹಣ್ಣು ಆಗದು. ಸೊಳೆಯ ಪರಿಮಳ, ಬಣ್ಣ, ರುಚಿ, ಮಿಕ್ಸಿಗೆ ಹಾಕುವಾಗ ಸುಲಭವಾಗಿ ರುಬ್ಬುವ ಗುಣವಿರುವಂತಹ ಹಣ್ಣು ಓಕೆ. ಹೆಚ್ಚು ನಾರು ಇರಬಾರದು. ಎರಡು ವರುಷದಿಂದ ಬೇರೆ ಬೇರೆ ತಳಿಗಳ ಹಲಸಿನ ಹಲ್ವ ಮಾಡಿದ್ದೆ. ತೃಪ್ತಿ ತರಲಿಲ್ಲ. ಈ ವರುಷ ಉಬರಿನ 'ಗೆನಹಣು' ಮತ್ತು ಬಾಯಾರು ಕೆರೆಕ್ಕೋಡಿಯ 'ಕ್ರೀಮ್ ಜಾಕ್' ಎಂಬೆರಡು ತಳಿಗಳು ಹಲ್ವಕ್ಕೆ ಉತ್ಕೃಷ್ಟವಾಗುತ್ತದೆ ಎನ್ನಲು ಮರೆಯಲಿಲ್ಲ.
               ಹಲ್ವ ತಯಾರಿಗೆ ಕಂಚಿನ ಉರುಳಿಯೇ ಯಾಕಾಗಬೇಕು ಎಂಬ ಪ್ರಶ್ನೆಗೆ ಹಲಸು ಸ್ನೇಹಿ ಕೂಟದ ಉಬರು ರಾಜಗೋಪಾಲ ಭಟ್ ಹೇಳುತ್ತಾರೆ, 'ಕಂಚಿನ ಉರುಳಿಯಲ್ಲಿ ಮಾಡಿದ ಹಲ್ವಕ್ಕೆ ಹೊಳಪು ಹೆಚ್ಚು. ಉತ್ತಮ ನೋಟ.
ಶರ್ಮರಿಗಿಂತ ಇನ್ನೂ ರುಚಿಯಾಗಿ ಹಲ್ವ ತಯಾರಿಸುವ ಜಾಣ್ಮೆ ಹಲವರಲ್ಲಿದೆ. ಕೆಲವು ಉದ್ಯಮಗಳು ಪೇಟೆಂಟ್ ಪಡೆದಿರಬಹುದು. ಆದರೆ ಶರ್ಮರು ಹಲಸಿನ ಅರಿವನ್ನು ಮೂಡಿಸುವ ಮಾಧ್ಯಮವಾಗಿ ಹಲ್ವದ ತಯಾರಿಗೆ ಹೊರಟಿದ್ದರಷ್ಟೇ. ಮಾರಾಟ ಉದ್ದೇಶವಲ್ಲ. ಹಲಸಿನ ಮೌಲ್ಯವರ್ಧಿತ ಉತ್ಪನ್ನಗಳು ಮನೆಮಟ್ಟದಲ್ಲಾದರೂ ಆರಂಭವಾಗಲಿ ಎನ್ನುವ ಆಶಯ.
             ಅಡಿಕೆ ಪತ್ರಿಕೆ ಹುಟ್ಟು ಹಾಕಿದ ಹಲಸಿನ ಆಂದೋಳನದ ಹೆಜ್ಜೆಯಾಗಿ ಶರ್ಮರು ಹಲ್ವದಂತಹ ಸಿಹಿ ತಿಂಡಿಯನ್ನು ಆರಿಸಿಕೊಂಡಿದ್ದರು. ಅದು ಕ್ಲಿಕ್ ಆಯಿತು. ಈ ಯೋಜನೆಗೆ 'ಹಲಸು ಸ್ನೇಹಿ ಕೂಟ'ವು ಸಾಥ್ ನೀಡಿತ್ತು. ಕಡಂಬಿಲ ಕೃಷ್ಣಪ್ರಸಾದ್, ಶಿರಂಕಲ್ಲು ನಾರಾಯಣ ಭಟ್ ಸಾಥ್. ಹಲ್ವದಂತಹ ಸಿಹಿ ತಿಂಡಿಯು ಹಲಸು ಸ್ನೇಹಿ ಕೂಟಕ್ಕೆ ಹೊಸ ಸ್ನೇಹಿತರನ್ನು ಬೆಸೆದು ಕೊಟ್ಟಿದೆ. ಎಲ್ಲವೂ ಗ್ರಹಿಸಿದಂತೆ ಸಾಗಿದರೆ ಹಲಸು ಸ್ನೇಹಿ ಕೂಟದ 'ಬ್ರಾಂಡೆಡ್ ಹಲ್ವ' ನಿಕಟ ಭವಿಷ್ಯದಲ್ಲಿ ರೂಪುಗೊಳ್ಳುವ ಸಾಧ್ಯತೆಯಿದೆ
 (ಶರ್ಮ : 9480200832)


Tuesday, July 1, 2014

ಹಲಸು ಸ್ನೇಹಿಗಳ ಸಮ್ಮಿಲನ

                                                               'sadananda' jack bulb
                                                        'Bhairachandra' jack bulb


                                                                      jackfruit cake

jack lowers group
             
 ಪುಣಚ(ದ.ಕ.)ದಲ್ಲಿ ಜೂನ್ 22ರಂದು ಅಳಿಕೆ ಸನಿಹದ ಮುಳಿಯ ವೆಂಕಟಕೃಷ್ಣ ಶರ್ಮರ ನಿವಾಸದಲ್ಲಿ ಜರುಗಿದ ಹಲಸಿನ ಹಬ್ಬದ ಕುರಿತು ವಿಚಾರ-ವಿಮರ್ಶೆ ಜರುಗಿತು. ಹಬ್ಬವನ್ನು ಉದ್ಘಾಟಿಸಿದ್ದ ಮಂಗಳೂರಿನ ನಿವೃತ್ತ ಅರಣ್ಯಾಧಿಕಾರಿ, ಹಲಸು ಪ್ರಿಯ ಗೇಬ್ರಿಯಲ್ ಪಿ.ಎಸ್.ವೇಗಸ್ ಹಲಸಿನ ಹಣ್ಣಿನ (ಹಹ) ಕೇಕನ್ನು ಕಟ್ ಮಾಡುವ ಮೂಲಕ ಕಲಾಪವನ್ನು ಉದ್ಘಾಟಿಸಿದರು. ಹಹ ಕೇಕನ್ನು ವೆಂಕಟಕೃಷ್ಣ ಶರ್ಮರ ಬಾಯಿಗಿಟ್ಟು ಖುಷಿ ಹಂಚಿಕೊಂಡರು. ಪೆರ್ಲದ ಶೈಲಜಾ ಶಿವಪ್ರಸಾದ್ ವರ್ಮುಡಿಯವರ ಅಡುಗೆಮನೆಯಲ್ಲಿ ಕೇಕ್ ಸಿದ್ಧವಾಗಿ ಮುಳಿಯಕ್ಕೆ ಬಂದಿತ್ತು. ಕೇಕ್ ಹಹ ಹಬ್ಬದಲ್ಲಿ ನಡೆದ ಸ್ಪರ್ಧೆಯಲ್ಲೂ ಬಹುಮಾನ ಬಂದಿತ್ತು. ಮುಖ್ಯ ಅತಿಥಿಗಳಾಗಿ ಕಸಿತಜ್ಞ ಗುರುರಾಜ ಬಾಳ್ತಿಲ್ಲಾಯ, ಹಲಸಿನ ಮೌಲ್ಯವರ್ಧಕ ಮೌನೀಶ ಮಲ್ಯರು ಉಪಸ್ಥಿತರಿದ್ದರು.
               ಶರ್ಮರ ಮನೆಯ ಹಿತ್ತಿಲಲ್ಲಿ ಚೊಚ್ಚಲ ಹೆರಿಗೆ ಮಾಡಿದ 'ಸದಾನಂದ ಹಲಸು' ಮತ್ತು ರಾಮಕುಂಜದ ಕೃಷ್ಣ ಕೆದಿಲಾಯರ ತೋಟದಲ್ಲಿ ಪ್ರಸವಿಸಿದ 'ಬೈರಚಂದ್ರ ಹಲಸು' ಹಣ್ಣುಗಳನ್ನು ಸರ್ಜರಿಗೆ ಒಳಪಡಿಸಲಾಯಿತು. ಈ ಎರಡು ತಳಿಗಳು ಕರಾವಳಿಗೆ ಹೊಸತು. ಅಡಿಕೆ ಪತ್ರಿಕೆಯು ಈ ಮೊದಲೇ ತಳಿಗಳ ಕುರಿತು ಬೆಳಕು ಚೆಲ್ಲಿತ್ತು. ಮುಂದಿನ ಮಾರ್ಚ್-ಎಪ್ರಿಲ್ ತಿಂಗಳಿನಲ್ಲಿ ಬಂಟ್ವಾಳದಲ್ಲಿ 'ಹಹ ಹಬ್ಬ'ವನ್ನು ಮಾಡುವ ಇಂಗಿತ ಮೌನೀಶ ಮಲ್ಯರದ್ದು.
               ವಾಣಿ ಶರ್ಮರ ಕೈರುಚಿಯ ಹಲಸಿನ ಹಲ್ವ, ಚಂಗುಳಿ ಉದರ ಸೇರುವುದರೊಳಗೆ; ಕಾರ್ಕಳ ಹಲಸು ಮೇಳದಲ್ಲಿ ಖರೀದಿಸಿದ ಕುಮಂದ್ರ, ಜ್ಯಾಕ್ ಪಾಟ್ ವಿತರಣೆ. ಹಹ ಸಕ್ಕರೆಬೆರಟ್ಟಿ, ಹ ಬೋಂಡ, ಸೊಳೆಗಳು ಸಾಥ್ ನೀಡಿದ್ದುವು. ಹಲಸು ಸ್ನೇಹಿ ಕೂಟದ ಎಲ್ಲಾ ಸದಸ್ಯರ ಉಪಸ್ಥಿತಿ.
              'ನಿರಗ್ನಿ ಮೇಳ'ವೊಂದನ್ನು ನಿಕಟಭವಿಷ್ಯದಲ್ಲಿ ಹಮ್ಮಿಕೊಳ್ಳುವ ಇರಾದೆ ವ್ಯಕ್ತಪಡಿಸಿದರು, ವೆಂಕಟಕೃಷ್ಣ ಶರ್ಮರು. 'ನಿರಗ್ನಿಯೊಂದಿಗೆ ನಿರ್ಜಲವೂ ಸೇರಿದರೆ ಹೇಗೆ?' ರಾಧಾ ಮುಳಿಯರ ಕೀಟಲೆ ಪ್ರಶ್ನೆ! ಕೊನೆಯಲ್ಲಿ ಶರ್ಮರ ಹಲಸು ತೋಟದ ವೀಕ್ಷಣೆ.
               'ಒಂದೊಂದು ಖಾದ್ಯಕ್ಕೆ ಹೊಂದುವಂತಹ ತಳಿಗಳನ್ನು ಬೆಳೆಸಿದರೆ ಭವಿಷ್ಯಕ್ಕೆ ಒಳ್ಳೆಯದು, ಗೇಬ್ರಿಯಲ್ ಸಲಹೆ ನೀಡಿದರು. ಪುಣಚ ಹಲಸು ಮೇಳದ ಯಶಸ್ಸಿನ ರೂವಾರಿಗಳಾದ ಮಲ್ಯ ಶಂಕರ ಭಟ್ ಮತ್ತು ಕೃಷ್ಣಪ್ರಸಾದ್ ಕೊಪ್ಪರತೊಟ್ಟು ಇವರನ್ನು ಅಭಿನಂದಿಸಲಾಯಿತು. ಉಬರು ರಾಜಗೋಪಾಲ ಭಟ್ ವಂದಿಸಿದರು.