ಕುಂದನಗರಿಯಲ್ಲಿ ಕೃಷಿಕರೊಬ್ಬರ ಮನೆಯಲ್ಲಿ ಉಳಕೊಂಡಿದ್ದೆ. ಉತ್ತರ ಕರ್ನಾಟಕದ ಖಾದ್ಯವೈವಿಧ್ಯವನ್ನು ಸವಿದಿದ್ದೆ. ಮಾತಿನ ಮಧ್ಯೆ ಖಾದ್ಯಗಳಲ್ಲಿ 'ಕಪ್ಪು ಹೆಸರುಕಾಳು' ಬಳಕೆಯು ಹಿರಿಯರ ಕಾಲದಿಂದಲೂ ನಮ್ಮ ಮನೆಯಲ್ಲಿತ್ತು. ಈಗ ಕಪ್ಪು ಹೆಸರಿನ ಕೃಷಿಯೇ ಅಪರೂಪವಾಗುತ್ತಿದೆ. ಮಾರುಕಟ್ಟೆಯಲ್ಲಿ ಬೇಕಾದಷ್ಟು ಸಿಗುತ್ತಿದೆ. ಎಲ್ಲಿಂದ ಬರುತ್ತದೆ ಎನ್ನುವುದು ಗೊತ್ತಿಲ್ಲ ಅಂದಿದ್ದರು. ಊರಿಗೆ ಮರಳುವಾಗ ಒಯ್ಯಬೇಕೆಂದುಕೊಂಡರೂ ಹಾಳು ಮರೆವು!
ಹಸಿರು ವರ್ಣದ ಹೆಸರುಕಾಳು ಉಪಾಹಾರದಲ್ಲಿ, ಅಡುಗೆಯಲ್ಲಿ ಕರಾವಳಿಯಲ್ಲಿ ಬಳಕೆಯಿದೆ. ಆದರೆ ಕಪ್ಪುಹೆಸರು? ಹುಬ್ಬಳ್ಳಿಯ ಸ್ನೇಹಿತ ಮುಳಿಯ ಜಯಶಂಕರ ಶರ್ಮ ಅವರಲ್ಲಿ ವಿನಂತಿಸಿದೆ. ಕೋರಿಯರಿನಲ್ಲಿ ಕಳುಹಿಸಿಕೊಟ್ಟರು. ಕುಂದನಗರದ ಕೃಷಿಕರೆಂದಂತೆ ಆಕಾರದಲ್ಲಿ ಹಸಿರು ಹೆಸರು ಹೋಲುತ್ತದೆ. ವರ್ಣದಲ್ಲಿ ಮಾತ್ರ ಕಪ್ಪು. ಹೊಸ ನೆಂಟನ ಆಗಮನಕ್ಕೆ ಅಡುಗೆ ಮನೆ ಸಜ್ಜಾಯಿತು.
ಮೊದಲಿಗೆ ಕಾಳಿಗೆ ಸ್ನಾನ. ನೀರಲ್ಲಿ ಕಾಳನ್ನು ಹಿಚುಕಿದ್ದೇ ತಡ, ನೀರು ಕಪ್ಪು ವರ್ಣಕ್ಕೆ ತಿರುಗಿತು. ಹಿಚುಕುತ್ತಾ ಹೋದಂತೆ ಕಾಳಿಗೆ ಅಂಟಿದ್ದ ಕಪ್ಪು ಬಣ್ಣ ಬಿಟ್ಟುಕೊಡುತ್ತಾ ಬಂತು. ನೀರಿನ ಬಣ್ಣ ಹೇಗಿತ್ತೆಂದರೆ ಗಟಾರ ನೀರನ್ನು ನೆನಪಿಸುವಂತಿತ್ತು. ಗಾಢ ಕಪ್ಪು. ಕಮಟು ವಾಸನೆ. ಕಾಳನ್ನು ನೀರಲ್ಲಿ ಹಾಕಿ ಒಂದೆರಡು ಗಂಟೆ ಕಳೆದ ಬಳಿಕ ಪುನಃ ಹಿಚುಕಿದಾಗ ಕಪ್ಪು ಬಣ್ಣಕ್ಕೆ ಕಾಳು ವಿಚ್ಛೇದನ ನೀಡಿತ್ತು! ಕಪ್ಪಾಗಿದ್ದ 'ಕಪ್ಪು ಹೆಸರು' ಹಸಿರು ಕಾಳಾಗಿ ಪರಿವರ್ತನೆಯಾಯಿತು!
ಅನ್ನದ ಬಟ್ಟಲಿಗೆ ಸೇರುವ ಆಹಾರಕ್ಕೂ ಕಲಬೆರಕೆಯ ಯೋಗ. ಹಸಿರು ಹೆಸರು ಕಾಳಿಗೆ ಬಣ್ಣ, ಕೆಮಿಕಲ್ಗಳನ್ನು ಲೇಪಿಸಿ ಕಪ್ಪು ಕಾಳೆಂದು ಹೆಚ್ಚು ದರಕ್ಕೆ ಮಾರಾಟ ಮಾಡುವ ವ್ಯಾಪಾರಿ ಹುನ್ನಾರ. ಮಾರ್ಕೆಟಿನಲ್ಲಿ ಸಿಗುವ ಕಪ್ಪು ಕಡಲೆಯ ಕತೆಯೂ ಹೀಗಿರಬೇಕು, ಪರೀಕ್ಷಿಸುತ್ತೇನೆ, ಎಂದರು ಅತ್ತ ಕಡೆಯಿಂದ ಜಯಶಂಕರ್.
ಆಹಾರದಲ್ಲಿ ಕಲಬೆರಕೆ ಹೊಸ ವಿಷಯವಲ್ಲ. ರಾಜಾರೋಷವಾಗಿ ನಡೆಯುವ ವ್ಯವಸ್ಥಿತ ವ್ಯವಹಾರ. ಸರಕಾರದ ವರಿಷ್ಠರಿಂದ ಅಂಗಡಿ ಮಾಲಕನ ತನಕ ಹಲವು ಕೈಗಳ ಕೈವಾಡ. ಅಕ್ಕಿಗೆ ಬಣ್ಣ, ಹಾಲಿಗೆ ಬಿಳಿ ವರ್ಣದ ಇನ್ನೇನೋ, ಸಕ್ಕರೆಯೊಂದಿಗೆ ಮಿಳಿತವಾಗುವ ಅದಾವುದೋ ಹರಳು.. ಹೀಗೆ ಗುರುತು ಹಿಡಿಯದಷ್ಟು ಜಾಣ್ಮೆಯಲ್ಲಿ ಕಲಬೆರಕೆ ಆಹಾರದಲ್ಲಿ ಸೇರುತ್ತವೆ. ಉದರಕ್ಕಿಳಿಯುತ್ತದೆ.
ಗದಗ ಸಮೀಪದ ಹೋಟೆಲಿನಲ್ಲಿ ಊಟದ ಹೊತ್ತು. ತಟ್ಟೆ ತುಂಬಾ ವಿವಿಧ ಐಟಂಗಳು. ಅದರಲ್ಲಿ ಹಸಿಯಾಗಿ ಕತ್ತರಿಸಿದ ಕ್ಯಾಬೇಜ್ ಚೂರುಗಳು. 'ಸರ್, ಈಗಷ್ಟೇ ಹೊಲದಿಂದ ಬಂದ ಕ್ಯಾಬೇಜ್ಗಳು ಸಾರ್,' ಎಂದು ಕಚಕಚನೆ ತುಂಡು ಮಾಡಿ ಬಟ್ಟಲಿಗೆ ಹಾಕುತ್ತಾ ಸಪ್ಲೈಯರ್ ಬರಬೇಕೇ? ಹೋಟೆಲಿನ ಕಿಟಕಿಯಾಚೆಗಿನ ಹೊಲದಲ್ಲಿ ಕ್ಯಾಬೇಜ್ ಕಟಾವಿನ ಕ್ಷಣಕ್ಕಾಗಿ ನಗುತ್ತಿತ್ತು. ಕಣ್ಣೆದಿರುಗೆ ವಿಷ ಸಿಂಪಡಣೆ ಮಾಡುತ್ತಿರುವ ದೃಶ್ಯವನ್ನು ನೋಡಿ ನಿಜಕ್ಕೂ ಕೈ ನಡುಗಿತು.
ಟೊಮೆಟೊ ಮೊದಲಾದ ವಿವಿಧ ಸಾಸ್ಗಳು, ಬಣ್ಣ ಬಣ್ಣದ ಐಸ್ಕ್ರೀಂಗಳು, ಚಹಾ ಪುಡಿ, ಸಿಂಥೆಟಿಕ್ ಹಾಲು-ಮೊಸರು-ಬೆಣ್ಣೆ.. ಹೀಗೆ ಒಂದೊಂದು ಆಹಾರದ ಅಕರಾಳ ಮುಖಗಳನ್ನು ಈಚೆಗೆ ವಾಹಿನಿಗಳು ಪ್ರಸಾರ ಮಾಡುತ್ತಲೇ ಇವೆ. ವೈದ್ಯಕೀಯ ವರದಿಯು 'ಆರೋಗ್ಯಕ್ಕೆ ಹಾನಿಕರ, ಕ್ಯಾನ್ಸರ್ಕಾರಕ..' ಎನ್ನುವ ಎಚ್ಚರಿಕೆ ನೀಡಿದರೂ ಕಾಣದ ಕೈಗಳ ಕೈವಾಡ ಸಾರ್ವಜನಿಕರಿಗೆ ಕಾಣುವುದಿಲ್ಲ.
ಕಲಬೆರಕೆಯಲ್ಲಿ ಬಳಸುವ ಕೆಮಿಕಲ್ಗಳು ವಿಷಕಾರಕ. ಕೃಷಿಯಲ್ಲಿ ಕೀಟನಾಶಕಗಳ ಎಗ್ಗಿಲ್ಲದ ಬಳಕೆ. ನಮ್ಮ ಶರೀರ ಹೆಸರು ಹೇಳಲು ಭಯವಾಗುವ ವಿವಿಧ ಕಾಯಿಲೆಗಳ ಗೂಡಾಗುತ್ತಿವೆ. ನಿತ್ಯ ಟಾನಿಕ್, ಗುಳಿಗೆಗಳನ್ನು ನುಂಗುವುದು ಬದುಕಿನಂಗವಾಗಿದೆ.
ಆಹಾರ ಕ್ರಮ, ಜೀವನ ಶೈಲಿಯಲ್ಲಿ ಮಾರ್ಪಾಡು ಮಾಡುವ ಬದಲು, 'ಏನು ಮಾಡುವುದು, ತಿನ್ನಬೇಕಲ್ಲಾ. ಬೇರೆ ದಾರಿ ಇಲ್ವಲ್ಲಾ,' ಎಂದು ವಿಷವನ್ನು ನಿತ್ಯ ತಿನ್ನುತ್ತಾ ಇರುವ ನಮಗೆ ಮೆಡಿಕಲ್ ಶಾಪ್ಗಳ ಮುಂದೆ ಕ್ಯೂ ನಿಲ್ಲುವುದೆಂದರೆ ಖುಷಿ! ಎಲ್ಲಿಯ ವರೆಗೆ ಆಹಾರದ ಕುರಿತು ನಿರ್ಲಿಪ್ತತೆ ನಮ್ಮಲ್ಲಿ ಇರುತ್ತದೋ ಅಲ್ಲಿಯ ವರೆಗೆ ಕಲಬೆರಕೆ ಮಾಡುವವರು ನಮ್ಮ ಮಗ್ಗುಲಲ್ಲೇ ಇರುತ್ತಾರೆ. ವಿಷ ಹಾಕುವವರು ನೆರೆಮನೆಯಲ್ಲೇ ಇರುತ್ತಾರೆ.
0 comments:
Post a Comment