ಹಲಸಿನ ಹಣ್ಣಿನ ಪಲ್ಪಿಂಗ್
ಪಲ್ಪ್ ಸಕ್ಕರೆ, ತುಪ್ಪದೊಂದಿಗೆ ಮಿಳಿತ
ತಿನ್ನಲು ಸಿದ್ಧ 'ಹಲಸಿನ ಹಣ್ಣಿನ ಹಲ್ವ'
2014 ಜೂನ್ 22ರಂದು ಪುಣಚ (ದ.ಕ.)ದಲ್ಲಿ ಹಲಸಿನ ಹಬ್ಬ ಜರುಗಿತು. ಹಬ್ಬದಲ್ಲೊಂದು 'ಹಲಸು ಸ್ನೇಹಿ ಕೂಟ'ದ ಮಳಿಗೆ. ಅದರಲ್ಲಿ ಹಲಸಿನ ಹಣ್ಣಿನ (ಹಹ) ಹಲ್ವದ ಪ್ರದರ್ಶನ. 'ಹಲಸಿನ ಹಣ್ಣಿನಿಂದಲೂ ಇಷ್ಟೊಂದು ಸ್ವಾದಭರಿತ ಹಲ್ವ ಮಾಡಲು ಆಗುತ್ತಾ' ಚಿಕ್ಕಮಗಳೂರಿನಿಂದ ಆಗಮಿಸಿದ ದಂಪತಿಗಳ ಸೋಜಿಗ. ಅವರ ಆಸಕ್ತಿಯನ್ನು ಗಮನಿಸಿದ ಮುಳಿಯ ವೆಂಕಟಕೃಷ್ಣ ಶರ್ಮರಿಂದ ರೆಸಿಪಿ ಪ್ರಸ್ತುತಿ.
ಹಲಸಿನ ಹಣ್ಣಿನ ಹೊರಮೈ ಶುಚಿಗೊಳಿಸಿ. ಹಣ್ಣನ್ನು ಬಿಡಿಸಿ ಸೊಳೆ ಪ್ರತ್ಯೇಕಿಸಿ. ನೀರು ಹಾಕದೆ ಸೊಳೆಯನ್ನು ಮಿಕ್ಸಿಯಲ್ಲಿ ರುಬ್ಬಿ. ಪಲ್ಪ್ ರೆಡಿ. ಕಂಚಿನ ಉರುಳಿಯಲ್ಲಿ ಪಲ್ಪನ್ನು ತುಪ್ಪದೊಂದಿಗೆ ಬೇಯಿಸಿ. ಸುಮಾರು ಮುಕ್ಕಾಲು ಗಂಟೆ ತಳಹಿಡಿಯದಂತೆ ಸೌಟಿಯಲ್ಲಿ ತಿರುವಬೇಕು. ಕಂದು ವರ್ಣಕ್ಕೆ ಪಲ್ಪ್ ಬದಲಾದಾಗ ಸಕ್ಕರೆ ಹಾಕಿ. ಸಕ್ಕರೆಯ ತೇವಾಂಶ ಆರುವ ತನಕ ಅಂದರೆ ಸುಮಾರು ಮುಕ್ಕಾಲು ಗಂಟೆ ತಿರುವಿ. ತುಂಡು ಮಾಡಿಟ್ಟ ಗೇರುಬೀಜ ಸೇರಿಸಿ. ಪಾಕ ಅಂತಿಮವಾಗುತ್ತಿದ್ದಂತೆ ಮೊದಲು ಪಲ್ಪ್ ಎಳೆದುಕೊಂಡ ತುಪ್ಪವನ್ನು ಬಿಟ್ಟುಕೊಡಲು ಆರಂಭಿಸುತ್ತದೆ. ಹತ್ತು ನಿಮಿಷ ತಿರುವಿ ಉರುಳಿಯನ್ನು ಒಲೆಯಿಂದ ಇಳಿಸಿ. ಗಾಢ ಕಂದು ಬಣ್ಣದ ಹಲ್ವವನ್ನು ದೊಡ್ಡ ಬಟ್ಟಲಿಗೆ ಹಾಕಿ. ತಣ್ಣಗಾದ ಮೇಲೆ ಬೇಕಾದ ಆಕಾರಕ್ಕೆ ಚಾಕುವಿನಿಂದ ತುಂಡು ಮಾಡಿ. ಒಂದು ಕಿಲೋ ಸೊಳೆಗೆ ಅರುವತ್ತು ಎಂ.ಎಲ್. ತುಪ್ಪ, ಮೂನ್ನೂರೈವತ್ತು ಗ್ರಾಮ್ ಸಕ್ಕರೆ ಸಾಕು.
ಹಲ್ವ ಮಾಡುವ ವಿದ್ಯೆ ಬಹುತೇಕ ಅಮ್ಮಂದಿರಿಗೆ ಗೊತ್ತು. ಮುಳಿಯದ ವೆಂಕಟಕೃಷ್ಣ ಶರ್ಮರು ಸ್ವತಃ ಮಾಡುವ ಹಲ್ವದ ರುಚಿಯೇ ಬೇರೆ. ಮಾರುಕಟ್ಟೆಯಲ್ಲಿ ಸಿಗುವ ಹಲ್ವದಲ್ಲಿ ಸಕ್ಕರೆಯ ಪ್ರಮಾಣ ಹೆಚ್ಚು. ಸಹಜವಾಗಿ ತೂಕವೂ ಅಧಿಕ. ಸುಮಾರು ಒಂದೂವರೆಯಿಂದ ಎರಡು ಗಂಟೆ ಕಾಲ ಉರುಳಿಯಲ್ಲಿ ಬೆಂದರೆ ಮಾತ್ರ ಹಲ್ವಕ್ಕೆ ನಿಜ ರುಚಿ, ಎನ್ನುತ್ತಾರೆ. ಹಲ್ವಕ್ಕೆ ಹದಿನೈದು ದಿವಸ ತಾಳಿಕೆ. ತಂಪುಪೆಟ್ಟಿಗೆಯಲ್ಲಿ ಮುಗಿಯುವ ವರೆಗೆ ಕಾಪಿಟ್ಟು ಬಳಸಲಡ್ಡಿಯಿಲ್ಲ.
2013ರಲ್ಲಿ ಅಡ್ಯನಡ್ಕದಲ್ಲಿ ಹಲಸು ಮೇಳ ನಡೆದಾಗ ಶರ್ಮ ಬಳಗ ಸುಮಾರು ನಲವತ್ತು ಕಿಲೋ ಹಲ್ವ ತಯಾರಿಸಿದ್ದರು. ಬಹುತೇಕ ಮಾರಾಟ. ಜತೆಗೆ ಮನೆಗೆ ಬಂದ ಅತಿಥಿಗಳಿಗೆ, ಹಲಸಿನ ಖಾದ್ಯಗಳ ಪರಿಚಯ ಇಲ್ಲದವರಿಗೆ, ಹಲಸನ್ನು ಹೊಸತಾಗಿ ನೋಡಿದವರಿಗೆ ಉಚಿತವಾಗಿ ಕೊಟ್ಟು ರುಚಿ ಹಿಡಿಸಿದ್ದಾರೆ. ಹಲಸಿನ ಹಣ್ಣಿನ ಸವಿಯನ್ನು ಒಮ್ಮೆ ಅನುಭವಿಸಿದರೆ ಮತ್ತೆ ತಪ್ಪಿಸುವಂತಿಲ್ಲ. ಮೌಲ್ಯವರ್ಧಿಸಿದರೆ ಯಾವತ್ತೂ ಬೇಡಿಕೆಯಿದೆ' ಎನ್ನುವುದು ಅನುಭವ.
ಕಳೆದ ವರುಷ ಹಿರಿಯ ಪತ್ರಕರ್ತ ಶ್ರೀ ಪಡ್ರೆಯವರು ಹಲಸಿನ ಅಧ್ಯಯನಕ್ಕೆ ವಿದರ್ಭಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಶರ್ಮರು ನೀಡಿದ ಹಲ್ವವನ್ನು ಒಯ್ದಿದ್ದರು. ಅಲ್ಲಿನ ಹಲಸು ಸ್ನೇಹಿಗಳ ಬಾಯಿ ಸಿಹಿ ಮಾಡಿದ್ದರು. ತಿಂದ ಅನೇಕರು ರೆಸಿಪಿ ಕೊಡುವಂತೆ ಆಗ್ರಹಿಸಿದ್ದರಂತೆ! ವಿದರ್ಭದಲ್ಲಿ ಹಲಸಿನ ಹಣ್ಣಿನ ಹಲ್ವ ಅಪರೂಪ. ಬಹುತೇಕರಿಗೆ ಗೊತ್ತಿಲ್ಲ. ರುಚಿ ನೋಡಿದ ಅನೇಕರು 'ಇಲ್ಲಿ ಮಾರಾಟಕ್ಕೆ ಅವಕಾಶವಿದೆ' ಎಂದರಂತೆ.
ಬೆಂಗಳೂರು ಕೃಷಿ ವಿವಿಯ ಸಹಪ್ರಾಧ್ಯಾಪಕಿ ಡಾ.ಶ್ಯಾಮಲಮ್ಮ ಹಲಸಿನ ಹಬ್ಬಕ್ಕೆ ಎರಡು ವರುಷವೂ ಆಗಮಿಸಿದ್ದರು. ಇವರಿಗೆ ಉಡುಗೊರೆಯಾಗಿ ನೀಡಿದ್ದ ಹಲ್ವ ವಿವಿಯ ಮುಖ್ಯಸ್ಥರಿಗೆ ತಲುಪಿತು. 'ಹಲಸಿನ ಹಣ್ಣಿನಿಂದ ಇಷ್ಟು ರುಚಿಯ ಹಲ್ವ ಮಾಡಲು ಆಗುತ್ತೆ ಅಂತ ಇಂದೇ ಗೊತ್ತಾಯಿತು' ಎಂದು ಉದ್ಗರಿಸಿದ್ದರಂತೆ.
ಹಲ್ವಕ್ಕೆ ಎಲ್ಲಾ ಹಣ್ಣು ಆಗದು. ಸೊಳೆಯ ಪರಿಮಳ, ಬಣ್ಣ, ರುಚಿ, ಮಿಕ್ಸಿಗೆ ಹಾಕುವಾಗ ಸುಲಭವಾಗಿ ರುಬ್ಬುವ ಗುಣವಿರುವಂತಹ ಹಣ್ಣು ಓಕೆ. ಹೆಚ್ಚು ನಾರು ಇರಬಾರದು. ಎರಡು ವರುಷದಿಂದ ಬೇರೆ ಬೇರೆ ತಳಿಗಳ ಹಲಸಿನ ಹಲ್ವ ಮಾಡಿದ್ದೆ. ತೃಪ್ತಿ ತರಲಿಲ್ಲ. ಈ ವರುಷ ಉಬರಿನ 'ಗೆನಹಣು' ಮತ್ತು ಬಾಯಾರು ಕೆರೆಕ್ಕೋಡಿಯ 'ಕ್ರೀಮ್ ಜಾಕ್' ಎಂಬೆರಡು ತಳಿಗಳು ಹಲ್ವಕ್ಕೆ ಉತ್ಕೃಷ್ಟವಾಗುತ್ತದೆ ಎನ್ನಲು ಮರೆಯಲಿಲ್ಲ.
ಹಲ್ವ ತಯಾರಿಗೆ ಕಂಚಿನ ಉರುಳಿಯೇ ಯಾಕಾಗಬೇಕು ಎಂಬ ಪ್ರಶ್ನೆಗೆ ಹಲಸು ಸ್ನೇಹಿ ಕೂಟದ ಉಬರು ರಾಜಗೋಪಾಲ ಭಟ್ ಹೇಳುತ್ತಾರೆ, 'ಕಂಚಿನ ಉರುಳಿಯಲ್ಲಿ ಮಾಡಿದ ಹಲ್ವಕ್ಕೆ ಹೊಳಪು ಹೆಚ್ಚು. ಉತ್ತಮ ನೋಟ.
ಶರ್ಮರಿಗಿಂತ ಇನ್ನೂ ರುಚಿಯಾಗಿ ಹಲ್ವ ತಯಾರಿಸುವ ಜಾಣ್ಮೆ ಹಲವರಲ್ಲಿದೆ. ಕೆಲವು ಉದ್ಯಮಗಳು ಪೇಟೆಂಟ್ ಪಡೆದಿರಬಹುದು. ಆದರೆ ಶರ್ಮರು ಹಲಸಿನ ಅರಿವನ್ನು ಮೂಡಿಸುವ ಮಾಧ್ಯಮವಾಗಿ ಹಲ್ವದ ತಯಾರಿಗೆ ಹೊರಟಿದ್ದರಷ್ಟೇ. ಮಾರಾಟ ಉದ್ದೇಶವಲ್ಲ. ಹಲಸಿನ ಮೌಲ್ಯವರ್ಧಿತ ಉತ್ಪನ್ನಗಳು ಮನೆಮಟ್ಟದಲ್ಲಾದರೂ ಆರಂಭವಾಗಲಿ ಎನ್ನುವ ಆಶಯ.
ಅಡಿಕೆ ಪತ್ರಿಕೆ ಹುಟ್ಟು ಹಾಕಿದ ಹಲಸಿನ ಆಂದೋಳನದ ಹೆಜ್ಜೆಯಾಗಿ ಶರ್ಮರು ಹಲ್ವದಂತಹ ಸಿಹಿ ತಿಂಡಿಯನ್ನು ಆರಿಸಿಕೊಂಡಿದ್ದರು. ಅದು ಕ್ಲಿಕ್ ಆಯಿತು. ಈ ಯೋಜನೆಗೆ 'ಹಲಸು ಸ್ನೇಹಿ ಕೂಟ'ವು ಸಾಥ್ ನೀಡಿತ್ತು. ಕಡಂಬಿಲ ಕೃಷ್ಣಪ್ರಸಾದ್, ಶಿರಂಕಲ್ಲು ನಾರಾಯಣ ಭಟ್ ಸಾಥ್. ಹಲ್ವದಂತಹ ಸಿಹಿ ತಿಂಡಿಯು ಹಲಸು ಸ್ನೇಹಿ ಕೂಟಕ್ಕೆ ಹೊಸ ಸ್ನೇಹಿತರನ್ನು ಬೆಸೆದು ಕೊಟ್ಟಿದೆ. ಎಲ್ಲವೂ ಗ್ರಹಿಸಿದಂತೆ ಸಾಗಿದರೆ ಹಲಸು ಸ್ನೇಹಿ ಕೂಟದ 'ಬ್ರಾಂಡೆಡ್ ಹಲ್ವ' ನಿಕಟ ಭವಿಷ್ಯದಲ್ಲಿ ರೂಪುಗೊಳ್ಳುವ ಸಾಧ್ಯತೆಯಿದೆ
(ಶರ್ಮ : 9480200832)
0 comments:
Post a Comment