Tuesday, December 29, 2009

'ಶ್ರೀ' ಪಡ್ರೆಯವರಿಗೆ 'ವಿಲ್ ಗ್ರೋ' ಪ್ರಶಸ್ತಿ

ಹಿರಿಯ ಪತ್ರಕರ್ತ, ಅಡಿಕೆ ಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕ 'ಶ್ರೀ' ಪಡ್ರೆಯವರಿಗೆ ಪ್ರತಿಷ್ಠಿತ 'ವಿಲ್ ಗ್ರೋ' ಪ್ರಶಸ್ತಿ ಸಂದಿದೆ. ಚೆನ್ನೈಯ ವಿಲ್ಗ್ರೋ ಸಂಸ್ಥೆ (ಹಿಂದೆ ರೂರಲ್ ಇನೊವೇಶನ್ ನೆಟ್ವರ್ಕ್) ಪತ್ರಕರ್ತ ವಿಭಾಗದಲ್ಲಿ ಪಡ್ರೆಯವರನ್ನು ಪ್ರಶಸ್ತಿಗೆ ಆಯ್ಕೆ ಮಾಡಿದೆ. ಪ್ರಶಸ್ತಿಯು ಐವತ್ತು ಸಾವಿರ ರೂಪಾಯಿ ಮತ್ತು ಫಲಕಗಳನ್ನೊಳಗೊಂಡಿದೆ.
ಆರು ಮಂದಿ ಪತ್ರಕರ್ತರ ಪೈಕಿ ಅಡಿಕೆ ಪತ್ರಿಕೆಯಲ್ಲಿ ಅನುಶೋಧನೆಗಳಿಗೆ ಕೊಟ್ಟ ಆದ್ಯತೆಗಳಿಗಾಗಿ ಶ್ರೀ ಪಡ್ರೆಯವರಿಗೆ ಈ ಪ್ರಶಸ್ತಿ ಕೊಡಲಾಗಿದೆ. ತೀರ್ಪುಗಾರರ ಮಂಡಳಿಯ ತೀರ್ಮಾನ ಮತ್ತು ಎಸ್ಎಂಎಸ್ - ಹೀಗೆ ಎರಡು ವಿಧಾನಗಳ ಮೂಲಕ ಒಟ್ಟಾರೆಯಾಗಿ ಈ ಆಯ್ಕೆ ನಡೆದಿದೆ.

'ಶ್ರೀ' ಪಡ್ರೆ ಕೇರಳದ ಕಾಸರಗೋಡು ಜಿಲ್ಲೆಯ ವಾಣಿನಗರದ ಕೃಷಿಕ. ಪ್ರವೃತ್ತಿಯಲ್ಲಿ ಕೃಷಿ ಪತ್ರಕರ್ತ. ಅಡಿಕೆ ಪತ್ರಿಕೆಯ ಸ್ಥಾಪಕ ಸಂಪಾದಕ. ಜಲಕೂಟ ಮತ್ತು ಅಡಿಕೆ ಪತ್ರಿಕೆಯ ಆಶ್ರಯದಲ್ಲಿ ದಶಕಕ್ಕೂ ಮಿಕ್ಕಿ ಮಳೆಕೊಯ್ಲಿನ ಬಗ್ಗೆ ಆಧ್ಯಯನ, ಬರವಣಿಗೆ, ದೇಶ-ವಿದೇಶಗಳಲ್ಲಿ ಮಳೆಕೊಯ್ಲಿನ ವಿವರಗಳನ್ನು ಸಂಗ್ರಹಿಸಿ, ಜನರಿಗೆ ಹಂಚುವ ಕೆಲಸ ಮಾಡುತ್ತಿದ್ದಾರೆ. ಇಂಗ್ಲಿಷಿನಲ್ಲೂ ಅಭ್ಯುದಯ ನುಡಿಚಿತ್ರ್ರ ಬರೆಯುತ್ತಾರೆ.
ಕಾಸರಗೋಡಿನ ಎಂಡೋಸಲ್ಫಾನ್ ದುರಂತವನ್ನು ಹೊರಜಗತ್ತಿಗೆ ತಿಳಿಸಿ ಅದನ್ನು ತಡೆಯುವ ಹೋರಾಟದಲ್ಲಿ ಭಾಗಿ. ನೆಲ-ಜಲ ಉಳಿಸಿ, ಹನಿಗೂಡಿಸುವ ಹಾದಿಯಲ್ಲಿ, ಮತ್ತೆ ರೂಪಾರೆಲ್ ಬತ್ತಲಿಲ್ಲ, ಬಾನಿಗೊಂದು ಆಲಿಕೆ, ಗುಜರಾತಿನ ನೀರ ತಿಜೋರಿ ಟಾಂಕಾ, ನೀರ ನೆಮ್ಮದಿಗೆ ನೂರಾರು ದಾರಿ, ನೀರ ಸಮಸ್ಯೆಗೆ ಇಲ್ಲಿವೆ ಪರಿಹಾರ, ಓಡಲು ಬಿಡದಿರಿ ಮಳೆನೀರ, ರೈನ್ ವಾಟರ್ ಹಾರ್ವೆಸ್ಟಿಂಗ್, ಮಣ್ಣು-ನೀರು ಇತ್ಯಾದಿ ಇವರ ಪ್ರಕಟಿತ ಕೃತಿಗಳು.

'ಗುಡ್ ನ್ಯೂಸ್ ಇಂಡಿಯಾ ಡಾಟ್ ಕಾಂ' ಎಂಬ ಜಾಲತಾಣ ಇವರನ್ನು 'ದ ರೈನ್ ಮ್ಯಾನ ಆಫ್ ಕೆನರಾ ಕೋಸ್ಟ್' ಎಂದು ಬಣ್ಣಿಸಿದೆ. ಅಶೋಕ ಫೆಲೋ ಕೂಡಾ ಆಗಿರುವ ಇವರಿಗೆ ಸಿಕ್ಕಿರುವ ಹತ್ತಾರು ಪ್ರಶಸ್ತಿಗಳಲ್ಲಿ ಗ್ರಾಮೀಣ ವರದಿಗಾಗಿ ಇರುವ ಸ್ಟೇಟ್ಸ್ಮೆನ್ ರಾಷ್ಟ್ರೀಯ ಪ್ರಶಸ್ತಿ, ಪಾವನಾ ಪರಿಸರ ಪ್ರಶಸ್ತಿ, ಕರ್ನಾಟಕ ಸರಕಾರದ ಪರಿಸರ ಪತ್ರಿಕೋದ್ಯಮ ಪ್ರಶಸ್ತಿ, ಚರಕ ಪತ್ರಿಕೋದ್ಯಮ ಗುರು ಪ್ರಶಸ್ತಿ ಮುಖ್ಯವಾದುವು.

ಅಭಿವೃದ್ಧಿ- ಪರಿಸರ ಪತ್ರಿಕೋದ್ಯಮ ಪ್ರಶಸ್ತಿ

(ಚಿತ್ರದಲ್ಲಿ - ಅನಿತಾ ಪೈಲೂರು, ರಾಧಾಕೃಷ್ಣ ಎಸ್.ಭಡ್ತಿ, ಜಿ.ಕೃಷ್ಣಪ್ರಸಾದ್)
ರಾಜ್ಯ ಸರಕಾರವು ಕಳೆದ ಮೂರು ವರುಷಗಳ 'ಅಭಿವೃದ್ಧಿ ಪತ್ರಿಕೋದ್ಯಮ ಮತ್ತು ಪರಿಸರ ಪ್ರಶಸ್ತಿ'ಗಳನ್ನು ಪ್ರಕಟಿಸಿದೆ. ಪ್ರಶಸ್ತಿಯು ತಲಾ ಐವತ್ತು ಸಾವಿರ ರೂಪಾಯಿ ಮತ್ತು ಪ್ರಶಸ್ತಿ ಫಲಕವನ್ನೊಳಗೊಂಡಿದೆ.
ಪ್ರಶಸ್ತಿ ಪುರಸ್ಕೃತರು
ಅಭಿವೃದ್ಧಿ ಪತ್ರಿಕೋದ್ಯಮ ಪ್ರಶಸ್ತಿ : ಟೈಮ್ಸ್ ಆಫ್ ಇಂಡಿಯಾ ಕನ್ನಡ ಆವೃತ್ತಿಯ ಸಂಪಾದಕ ಈಶ್ವರ ದೈತೋಟ (2007), ಧಾರವಾಡ ಆಕಾಶವಾಣಿ ಕೇಂದ್ರದ ಸಹಾಯಕ ನಿಲಯ ನಿರ್ದೆಶಕ ಸಿ.ಯು.ಬೆಳ್ಳಕ್ಕಿ (2008), ಧಾರವಾಡ ಕೃಷಿ ಮಾಧ್ಯಮ ಕೇಂದ್ರದ ಅನಿತಾ ಪೈಲೂರು (2009).

ಪರಿಸರ ಪತ್ರಿಕೋದ್ಯಮ ಪ್ರಶಸ್ತಿ : ಸಹಜ ಸಮೃದ್ಧದ ಮುಖ್ಯಸ್ಥ ಜಿ.ಕೃಷ್ಣಪ್ರಸಾದ್ (2007), ಹಿರಿಯ ಪತ್ರಕರ್ತ ಟಿ.ಆರ್.ಅನಂತರಾಮ (2008), ವಿಜಯಕರ್ನಾಟಕದ ಮುಖ್ಯ ಉಪಸಂಪಾದಕ ರಾಧಾಕೃಷ್ಣ ಎಸ್.ಭಡ್ತಿ (2009)

ವಾರ್ತಾ ಇಲಾಖೆಯ ನಿರ್ದೇಶಕ ಎನ್.ಆರ್.ವಿಶುಕುಮಾರ್ ಅಧ್ಯಕ್ಷರಾಗಿದ್ದ ಆಯ್ಕೆ ಸಮಿತಿಯಲ್ಲಿ - ಡಾ.ಎ.ಎನ್.ಯಲ್ಲಪ್ಪ ರೆಡ್ಡಿ, ಡಾ.ಎಚ್.ಆರ್.ಕೃಷ್ಣಮೂರ್ತಿ, ದು.ಗು.ಲಕ್ಷ್ಮಣ - ಸದಸ್ಯರು.

ಪ್ರಶಸ್ತಿ ಪುರಸ್ಕೃತರಿಗೆ ಹಾರ್ದಿಕ ಅಭಿನಂದನೆಗಳು.

Monday, December 28, 2009

ಸಾವಯವ ಸೂರು 'ನೇಸರ'

ಸಾವಯವ ಕೃಷಿ - ಕಾಲದ ಅನಿವಾರ್ಯತೆ. ಅರೋಗ್ಯ ಉಳಿಸಲು, ಉಳಿಯಲು ಇದೊಂದೇ ಮಾರ್ಗ. ಬೆಳೆಸಿದರೆ ಸಾಕೆ, ವ್ಯವಸ್ಥಿತವಾದ ಮಾರುಕಟ್ಟೆ ಸೃಷ್ಟಿಯಾಗಬೇಡ್ವೇ?

ಮೈಸೂರಿನ ಗೀತಾರಸ್ತೆಯಲ್ಲಿರುವ 'ನೇಸರ' ಸಾವಯವ ವಸ್ತುಗಳ ಮಾರಾಟಕ್ಕಾಗಿ ರೂಪುಗೊಂಡ ಸಂಸ್ಥೆ. ಸಾವಯವ ಕೃಷಿಕರನ್ನು ಗುರುತಿಸುವುದು, ಉತ್ಪಾದಕ ಮತ್ತು ಗೃಹಕರ ನಡುವಿನ ಕೊಂಡಿಯಾಗುವುದು, ಸಾವಯವ ಕೃಷಿ ಕೂಟಗಳನ್ನು ಏರ್ಪಡಿಸುವುದು, ಪ್ರವಾಸ, ಪತ್ರಿಕೆ, ನಾಟಿ ಬೀಜ ಸಂರಕ್ಷಣೆ, ಗ್ರಂಥಾಲಯ, ಸಾವಯವ ಅಡುಗೆ....ಇವು ನೇಸರದ ಉದ್ದೇಶಗಳು.

25 ಮಂದಿ ನೋಂದಾಯಿತ ಕೃಷಿಕರಿದ್ದಾರೆ. ನೋಂದಣಿ ಅಂದರೆ ಯಾವುದೇ ಪ್ರಮಾಣೀಕೃತ ಸಂಸ್ಥೆಗಳಿಂದ ದೃಢೀಕರಣವಲ್ಲ. ತಾನೇ ಹಾಕಿಕೊಂಡ ಕೆಲವು 'ಬಿಗಿ' ನಿಯಮಗಳಿಗನುಸಾರವಾಗಿ `ಅಪ್ಪಟ ಸಾವಯವ ಕೃಷಿಕ'ರನ್ನು ಗೊತ್ತುಮಾಡುತ್ತದೆ.

ಸಾವಯವ ದೃಢೀಕರಣಕ್ಕಾಗಿ ಪ್ರಶ್ನೆಗಳನ್ನು ಮುದ್ರಿಸಿದೆ. ಇದಕ್ಕೆ ತೋಟದ ಮಾಲಿಕ ಉತ್ತರಿಸಬೇಕಾಗುತ್ತದೆ. ನಂತರ ಮೂರ್ನಾಲ್ಕು ಮಂದಿಯ ಪರೀಕ್ಷಾ ತಂಡ ತೋಟಕ್ಕೆ ಭೇಟಿ ನೀಡಿ ಪರೀಕ್ಷಿಸುತ್ತದೆ. ''ಹೀಗೆ ಕೃಷಿಕರಲ್ಲಿಗೆ ಭೇಟಿನೀಡುವಾಗ ಅವರ ಸ್ವಭಾವ ಮತ್ತು ಮಾತಿನಿಂದಲೇ ಗೊತ್ತಾಗಿಬಿಡುತ್ತದೆ. ಸಾವಯವದ ಕುರಿತು ಮಾನಸಿಕ ದೃಢತೆಯೂ ತಿಳಿಯುತ್ತದೆ ನೇಸರದ ಮುಖ್ಯ ಸಂಪನ್ಮೂಲ ಕೃಷಿಕ ಎ.ಪಿ.ಚಂದ್ರಶೇಖರ್ ಹೇಳುತ್ತಾರೆ.

ಕೆಲವರು ಹೇಳುವುದಿದೆ. 'ನಮ್ಮ ತೋಟ ಶುದ್ಧ ಸಾವಯವ. ಆದರೆ ರಸಬಾಳೆಗೆ ಫ್ಲುರಿಡಾನ್ ಸ್ವಲ್ಪ ಹಾಕಿದ್ದೇನೆ' ಇದಕ್ಕೇನನ್ನೋಣ? ಇಂತಹವರಿಗೆ ತಿಳಿ ಹೇಳುವ ಕೆಲಸ ಮತ್ತು ಪರ್ಯಾಯ ದಾರಿಗಳನ್ನು ನೇಸರ ಹೇಳುತ್ತದೆ.

ಸಾವಯವ ಪರೀಕ್ಷೆಯಲ್ಲಿ ಗೆದ್ದ ಕೃಷಿಕರ ತೋಟದ ಉತ್ಪನ್ನಗಳಿಗೆ ನೇಸರದಲ್ಲಿ ಪ್ರಥಮಾದ್ಯತೆ. ಆರಂಭದಲ್ಲಿ ಇಪ್ಪತ್ತೈದು ಮಂದಿಯೂ ಉತ್ಪನ್ನಗಳನ್ನು ನೇಸರದಲ್ಲಿ ಇಡುತ್ತಿದ್ದರು. ಈಗ ಹನ್ನೆರಡು ಮಂದಿ ಮಾತ್ರ. ಕಾರಣ, ಒಬ್ಬೊಬ್ಬರ ತೋಟವಿರುವುದು ಪೇಟೆಯಿಂದ ಬಹಳಷ್ಟು ದೂರ. ದಿನನಿತ್ಯ ಸಿಗುವ ಪೇರಳವೋ, ನಿಂಬೆಯೋ ನೇಸರಕ್ಕೆ ಸಮಯಕ್ಕೆ ಸರಿಯಾಗಿ ತಲಪಿಸುವುದು ತ್ರಾಸ. ಸಿಗುವ ಮೊತ್ತ ಪ್ರಯಾಣ ವೆಚ್ಚಕ್ಕೆ ಸರಿಸಮ. ಹಾಗಾಗಿ ಪೇಟೆಯ ಸುತ್ತಮುತ್ತ ಇರುವ, ದಿನಕ್ಕೊಮ್ಮೆ ಪೇಟೆಗೆ ಬರುವ ಕೃಷಿಕರ ವಸ್ತುಗಳು ಮಾತ್ರ ನೇಸರದಲ್ಲಿವೆ.

'ಕೃಷಿಕರೇ ತಮ್ಮ ವಸ್ತುಗಳಿಗೆ ದರ ನಿಗದಿ ಮಾಡುತ್ತಾರೆ. ಅವರ ದರಕ್ಕೆ ಶೇ.20ನ್ನು ಸೇರಿಸಿ ನೇಸರದಲ್ಲಿ ಮಾರಾಟ. ಆದರೆ ಕೃಷಿಕರು ತಂದ ತಕ್ಷಣ ಹಣ ನೀಡುವ ವ್ಯವಸ್ಥೆ ಇಲ್ಲ. ಮಾರಾಟವಾದ ಸರಕಿಗೆ ಮಾತ್ರ ಹಣ ಪಾವತಿ'.

ಒಂದೇ ಜಾತಿಯ ನಿಂಬೆ ಬೇರೆ ಬೇರೆ ದರದಲ್ಲಿ ಬಂದಿರುತ್ತವೆ. ಆಗದು ಇಂತಹವರ ತೋಟದ್ದು ಎಂಬ `ಬ್ರಾಂಡ್' ಮೇಲೆ ವ್ಯಾಪಾರವಾಗುತ್ತದೆ. ಒಂದು ವೇಳೆ ಉತ್ಪನ್ನ ಉಳಿದರೆ? ಅದಕ್ಕೆ ಕೃಷಿಕರೇ ಹೊಣೆ. ಉಳಿದ ಮಾರುಕಟ್ಟೆಗಿಂತ ಶೇ.25 ಸಾವಯವ ಉತ್ಪನ್ನಗಳಿಗೆ ಹೆಚ್ಚು. 'ವಿಷ ತಿನ್ನುವುದೇ ಬೇಡ ಎಂಬವರು ಬಂದೇ ಬರುತ್ತಾರೆ'

ಶುಕ್ರವಾರ ದೊಡ್ಡ ಸಂತೆ. ಆಗ ನೇಸರದ ಒಳಗಿನ ವಸ್ತುಗಳೆಲ್ಲವೂ ಹೊರಗಿನಂಗಳಕ್ಕೆ. ಕೊತ್ತಂಬರಿ ಸೊಪ್ಪು, ಶ್ರೀಗಂಧದ ಸೊಪ್ಪು.....ಹೀಗೆ ಸೊಪ್ಪು ತರಕಾರಿಗಳಿಗೆ ಡಿಮಾಂಡ್. ಬಾಳೆದಿಂಡಿಗೆ ಬೇಡಿಕೆ ಹೆಚ್ಚು! 'ನಮ್ಮಲ್ಲಿ ಬೀಜರಹಿತ ಚಿಕ್ಕು ಇದೆ. ಇದರ ಹಣ್ಣಿಗೆ ಮುಂಗಡ ಬುಕ್ಕಿಂಗ್ ಇದೆ' ನಿರ್ಮಲ ಎ.ಪಿ. ಮಾತಿನ ಮಧ್ಯೆ ಹೇಳಿದರು.

ಸಂತೆಗೆ ಜನ ಮುಗಿಬೀಳುವ ಕಾರಣ, ಟೋಕನ್ ವ್ಯವಸ್ಥೆ. ಒಟ್ಟು ಬಂದು ಖರೀದಿಸುವ ಹಾಗಿಲ್ಲ. ಇದರಲ್ಲಿ ನೇಸರದ ಸದಸ್ಯರಿಗೆ ಟೋಕನ್ನಿಂದ ವಿನಾಯಿತಿ. ಯಾವುದೇ ಸರತಿ ಸಾಲಿರಲಿ, ಇವರಿಗೆ ಲಗಾವಿಲ್ಲ.

ತಿಂಗಳಿಗೆ ಏನಿಲ್ಲವೆಂದರೂ 50,000 ರೂ. ವ್ಯಾಪಾರ. ಅದರಲ್ಲಿ ಮೂರನೇ ಒಂದು ಪಾಲು ಇಂದ್ರಪ್ರಸ್ಥದ ಸುಮಾರು ನೂರಕ್ಕೂ ಮಿಕ್ಕಿದ ಮೌಲ್ಯವರ್ಧಿತ ಉತ್ಪನ್ನಗಳೇ! ಶರಬತ್ತು, ಉಪ್ಪಿನಕಾಯಿ, ಜ್ಯಾಂಗಳು, ಒಣಗಿಸಿದ ಹಣ್ಣುಗಳು, ಒಣಗಿಸಿದ ಸಿಪ್ಪೆಗಳು, ಹಪ್ಪಳ, ಸೆಂಡಿಗೆ, ಬಾಳಕ, ಚಟ್ನಿಪುಡಿಗಳು, ಕಷಾಯಗಳು, ಮಸಾಲೆಗಳು, ಔಷಧೀಯ ಐಟಂಗಳು, ಮಾರ್ಜಕಗಳು, ಹಸಿರು ಉತ್ಪನ್ನಗಳು.....ಹೀಗೆ ಒಂದೇ ಎರಡೇ....

ಅಕ್ಕಿ, ಬೆಲ್ಲ, ತುಪ್ಪ, ಜೋಳ ವಸ್ತುಗಳಿಗೆ ನಿಶ್ಚಿತ ಗ್ರಾಹಕರು. ಅಕ್ಕಿಯನ್ನು ಹಾಸನದಿಂದ ತರಿಸಿ ವಿತರಿಸುತ್ತಾರೆ. ಮೊದಲು ನೇಸರದಲ್ಲಿ ಸಕ್ರ್ರಿಯವಾಗಿದ್ದ ಕೃಷಿಕರೊಬ್ಬರು ಹೈದರಾಬಾದ್ನಲ್ಲಿದ್ದಾರೆ. ಅವರು ತೊಗರಿ ಒದಗಿಸುತ್ತಾರೆ. ಶಿವಮೊಗ್ಗದಿಂದ ಒಂದಷ್ಟು ವಸ್ತುಗಳು.

ನೇಸರದ ಗ್ರಾಹಕರು - ಉತ್ಪನ್ನಗಳನ್ನು 'ಬಳಸಿ ನೋಡಿದ ಗ್ರಾಹಕರು.' ಅವರಿಂದಲೇ ಪ್ರಚಾರ. ಹೊಸಹೊಸ ಗ್ರಾಹಕರು ಬರುತ್ತಾರೆ. ಪ್ಲಾಸ್ಟಿಕ್ ಬಳಸಬಾರದು - ನೇಸರದ ತತ್ವ. ಆದರೆ ವಸ್ತುಗಳನ್ನು ಕಾಪಾಡಲು ಪ್ಲಾಸ್ಟಿಕ್ ಅನಿವಾರ್ಯ. ಪ್ಲಾಸ್ಟಿಕ್ ಬಳಸದಿದ್ದರೆ, ಒಯ್ಯುವವರೇ ಇಲ್ಲ! ಜ್ಯೂಸ್ ಬಾಟಲ್ಗಳ ಲೇಬಲ್ನ್ನು ಆಗಾಗ ಬದಲಿಸುತ್ತಲೇ ಹಾಗಿದ್ದರೆ ವ್ಯಾಪಾರ ಜಾಸ್ತಿ - ಎಪಿಯವರು ವ್ಯಾಪಾರದ ಸೂಕ್ಷ್ಮಗಳನ್ನು ಹೇಳುತ್ತಾರೆ.

ಸಾವಯವ ಉತ್ಪನ್ನಗಳಿಗೆ ಉಳಿದ ಮಾರುಕಟ್ಟೆಗಿಂತ ದರ ಜಾಸ್ತಿ. ಹಾಗಿದ್ದರೂ ಸ್ವಚ್ಚ ಆಹಾರವನ್ನು ಬಯಸುವ ಗ್ರಾಹಕರಿದ್ದಾರೆ. ನೇಸರವು ಬದುಕಿನ 'ಬೇಕು'ಗಳನ್ನು ಒದಗಿಸುತ್ತದೆ. ವಿಷ ತಿಂದು 'ವಿಷಕಂಠ'ರಾದ ನಮ್ಮ ಮನಸ್ಸು ಸಾವಯವಕ್ಕೆ ಸಜ್ಜಾಗಬೇಕು, ಅಷ್ಟೇ.

Monday, December 21, 2009

ಕಾಮ್ ಪರಿಕಲ್ಪನೆ - 'ರೈತಸ್ನೇಹಿ ಮಾಧ್ಯಮ'ಶಿರಸಿ ಸನಿಹದ ಹಳ್ಳಿ ಬೆಂಗಳಿಯ ಪ್ರಸನ್ನ ಹೆಗಡೆಯವರ ಮನೆಯಂಗಳದಲ್ಲಂದು ಕೃಷಿ ಮಾತುಕತೆ! ಒಂದೆಡೆ ಊರಿನ ರೈತರು. ಮತ್ತೊಂದೆಡೆ ಬರವಣಿಗೆಯಲ್ಲಿ 'ರೈತಸ್ನೇಹ' ಅಂದರೇನೆಂದು ಆಗಲಷ್ಟೇ ಇಣುಕತೊಡಗಿದ ಹವ್ಯಾಸಿ ಪತ್ರಕರ್ತರು.

'ಒಂದು ಕಾಲಘಟ್ಟದಲ್ಲಿ - ಹೆಚ್ಚು ಇಳುವರಿಗಾಗಿ ರಾಸಾಯನಿಕ ಬಳಸಿ ಅಂತ ಅಧಿಕಾರಿಗಳು ಪ್ರಚಾರ ಮಾಡಿದರು. ನೀವು (ಮಾಧ್ಯಮದವರು) ಇನ್ನಷ್ಟು ಬೆನ್ನು ತಟ್ಟಿದಿರಿ. ಈಗ ತಕ್ಷಣ ರಾಸಾಯನಿಕ ಬಿಡಿ ಅಂದ್ರೆ ಹೇಗೆ' ರೈತರ ಮೊನಚು ಪ್ರಶ್ನೆಗೆ ಮೌನವೇ ಉತ್ತರ.

'ಹಳ್ಳಿಯ ಯುವಜನ ನಗರಕ್ಕೆ ಹೋಗ್ತಾರಲ್ಲಾ. ಅಸಹಾಯಕರಾಗಿ ಹೋಗ್ತಿಲ್ಲ. ಹಳ್ಳಿಯಲ್ಲಿ ಕೃಷಿಗೆ ಗೌರವವಿಲ್ಲದ ಕಾರಣ, ಅದನ್ನರಸಿ ಹೋಗ್ತಾರೆ' ಪತ್ರಕರ್ತರೊಬ್ಬರ ಚೋದ್ಯಕ್ಕೆ ಕೃಷಿಕ ಸುಧಾಕರ ಹೇಮಾದ್ರಿಯವರ ಉತ್ತರ.

'ರೈತ ಮುಗ್ಧ. ಆತನಿಗೆ ಹೈಟೆಕ್ ಗೊತ್ತಿಲ್ಲ. ಅವನನ್ನು ಶೋಷಿಸಬೇಡಿ' - ಮಾಧ್ಯಮಕ್ಕೆ ಕೃಷಿಕರ ಮನವಿ. ಒಟ್ಟಿನಲ್ಲಿ 'ಜವಾಬ್ದಾರಿಯುತ ಕೃಷಿಮಾಧ್ಯಮ' ಬೇಕೆಂಬ ಆಗ್ರಹವಿತ್ತು. ಬೆಂಗಳಿಯಲ್ಲಿ ಮೂಡಿದ ಈ ಹಕ್ಕೊತ್ತಾಯವನ್ನು ಒಂಭತ್ತು ವರುಷದ ಹಿಂದೆಯೇ 'ಕೃಷಿ ಮಾಧ್ಯಮ ಕೇಂದ್ರ' ಮನಗಂಡಿದೆ. ಧಾರವಾಡ ಕೇಂದ್ರವಾಗಿ ಈ ಸಂಸ್ಥೆ ಹುಟ್ಟಿದುದರ ಉದ್ದೇಶವೂ ಇದುವೇ!

ಕೃಷಿಕಪರ ಪತ್ರಿಕೋದ್ಯಮ - ಎರಡು ದಶಕದ ಈಚೆಗಿನ ಎದ್ದು ಕಾಣಿಸತೊಡಗಿದ ಪರಿಕಲ್ಪನೆ. ಕೃಷಿಯ ಕುರಿತು ವಿಜ್ಞಾನಿಗಳೇ ಬರೆಯಬೇಕು ಎಂದಿದ್ದ ಸ್ಥಿತಿಯನ್ನು ಬದಲಿಸಿ, ರೈತರೂ ತಮ್ಮ ಅನುಭವದ ಮೂಸೆಯಿಂದ ಬರೆಯಬಹುದೆಂದು ಅಡಿಕೆ ಪತ್ರಿಕೆ ತೋರಿಕೊಟ್ಟಿತು. ಈ ಹಾದಿಯಲ್ಲೀಗ ಕೃಷಿ ಮಾಧ್ಯಮ ಕೇಂದ್ರ ದೊಡ್ಡ ಹೆಜ್ಜೆ ಇಟ್ಟಿದೆ. ಮುಖ್ಯವಾಹಿನಿ ಪತ್ರಿಕೆಗಳಿಗೆ 'ಸೆಡ್ಡು ಹೊಡೆಯದೆ' ರೈತರ ದನಿಯಾಗಿ ಪತ್ರಕರ್ತರನ್ನು ರೂಪಿಸುತ್ತಿದೆ.

ಕೇಂದ್ರದ ಕೃಷಿ ಪತ್ರಿಕೋದ್ಯಮ ತರಬೇತಿ ರಾಜ್ಯ ಮಾತ್ರವಲ್ಲ, ದೇಶದಲ್ಲೇ ಅನನ್ಯ. ಇಲ್ಲಿ ಸಿದ್ಧ 'ಅಕಾಡೆಮಿಕ್' ಪಠ್ಯಗಳಿಲ್ಲ. ವಿದ್ಯಾರ್ಠಿ ನಾಲ್ಕು ಗೋಡೆಯ ಮಧ್ಯೆ ಬಂಧಿಯಾಗಬೇಕಿಲ್ಲ. ಅಂಕಪಟ್ಟಿಯಿಲ್ಲ. ವಯಸ್ಸಿನ ಕಟ್ಟುಪಾಡುಗಳಿಲ್ಲ. ಕೇಂದ್ರದ ನಿರ್ದೇಶನಗಳನ್ನು ಅಕ್ಷರಶಃ ಪಾಲಿಸಿದರೆ - 'ಸಚಿವರು ಉತ್ಪಾದನಾ ವೆಚ್ಚ ತಗ್ಗಿಸಲು ಕರೆ ಕೊಟ್ಟರು' ಎಂದು ಬರೆವ 'ಮಾಮೂಲಿ ಪತ್ರಕರ್ತ'ರಿಗಿಂತ ಭಿನ್ನವಾಗಿ ಬರೆಯಬಲ್ಲ ಗಟ್ಟಿತನ ಬಂದುಬಿಡುತ್ತದೆ!

ತರಬೇತಿಗೆ ಮೊದಲು ಆಯ್ಕೆಯ ಪ್ರಕ್ರಿಯೆಯಿದೆ. ಇದಕ್ಕಾಗಿ ವಿದ್ಯಾರ್ಥಿ ಕೃಷಿ/ಗ್ರಾಮೀಣ ಕುರಿತಾದ ಬರೆಹ ಬರೆಯಬೇಕು. ಅದರ ಆಳ-ಎತ್ತರ ಹೊಂದಿ ಆಯ್ಕೆ. ವಶೀಲಿ, ಒತ್ತಡ ತಂತ್ರಗಳಿಗೆ ಎಡೆಯಿಲ್ಲ. ವೆಚ್ಚವನ್ನು ಸರಿದೂಗಿಸಲಷ್ಟೇ ಶುಲ್ಕ. ಒಂದು ವರುಷಕ್ಕೆ ಗರಿಷ್ಠ ಅಂದರೆ ಮೂವತ್ತು ವಿದ್ಯಾರ್ಥಿಗಳು. ಮೆಟ್ರಿಕ್ನಿಂದ ಶುರುವಾಗಿ ಪಿಎಚ್.ಡಿ. ತನಕದ ವಿದ್ಯಾಭ್ಯಾಸ ಹೊಂದಿದ; ಹಾರೆ ಹಿಡಿದು ಕೃಷಿ ಮಾಡುವಲ್ಲಿಂದ ಕೃಷಿರಂಗದಲ್ಲೇ ಪೂರ್ತಿಯಾಗಿ ಇದ್ದೂ ಈ ವರೆಗೆ ಲೇಖನ ಬರೆಯದ ಕೃಷಿ ಅಧಿಕಾರಿಗಳೂ ವಿದ್ಯಾರ್ಥಿಗಳು!

ತರಬೇತಿಯ ಆರಂಭ ನಾಲ್ಕು ದಿವಸಗಳ ಕಾರ್ಯಾಗಾರದ ಮೂಲಕ. ನಿಮಿಷ ನಿಮಿಷಕ್ಕೂ ಲೆಕ್ಕಣಿಕೆಗೆ ಕೆಲಸ. ಕೃಷಿ/ಗ್ರಾಮೀಣ ಪತ್ರಿಕೋದ್ಯಮದ ಮಹತ್ವ-ಸ್ವರೂಪ, ಬರವಣಿಗೆಯ ತಂತ್ರಗಾರಿಕೆ, ಛಾಯಾ ಪತ್ರಿಕೋದ್ಯಮ, ಕ್ಷೇತ್ರ ಭೇಟಿ, ರೈತರನ್ನು ಸಂದರ್ಶಿಸುವಾಗ ವಹಿಸಬೇಕಾದ ಎಚ್ಚರ ಮೊದಲಾದ ವಿಚಾರಗಳಲ್ಲಿ ಅನುಭವಿಗಳಿಂದ ತಿಳಿವಳಿಕೆ. ಸ್ನೇಹಪೂರ್ಣ ಆದರೆ ಗಂಭೀರ ವಾತಾವರಣ. ಕ್ಲಾಸಿನ ನಂತರವೂ ತರಬೇತಿಯುದ್ದಕ್ಕೂ 'ಮಾತುಕತೆಗೆ ಸಿಗುವ' ಸಂಪನ್ಮೂಲ ವ್ಯಕ್ತಿಗಳು. ಇವರೆಲ್ಲರೂ ಕೃಷಿ ಪತ್ರಿಕೋದ್ಯಮದಲ್ಲಿ ಎದ್ದು ಕಾಣುವ ಹೆಸರುಗಳೇ.

ಸ್ವ-ಮೌಲ್ಯಮಾಪನ

ಎರಡು ದಿವಸ ಕ್ಷೇತ್ರ ಭೇಟಿ. ಅದಕ್ಕೆ ಮುನ್ನ ಭೇಟಿಯಲ್ಲಿ ವಹಿಸಬೇಕಾದ ಎಚ್ಚರದ ಕುರಿತು ಪಾಠ. ಕ್ಷೇತ್ರ ಭೇಟಿಯ ನಂತರ ಲೇಖನ ಬರೆದು ಮರುದಿವಸದ ಸೆಶನ್ ಶುರುವಾಗುವುದರೊಳಗೆ ಒಪ್ಪಿಸಲೇಬೇಕು. ಸಂಪನ್ಮೂಲ ವ್ಯಕ್ತಿಗಳಿಂದ ಮೌಲ್ಯಮಾಪನ.
ಶಿಕ್ಷಣ ಸಂಸ್ಥೆಗಳಲ್ಲಿ ಇದ್ದಂತೆ ಕೆಂಪು ಶಾಯಿಯ ಗುರುತು ಹಾಕಿ, ಅಂಕ ಕೊಡುವ ಕ್ರಮವಿಲ್ಲ. ಇದಕ್ಕಾಗಿ ಗುಂಪು ಚರ್ಚೆ. ತಮ್ಮ ಲೇಖನವನ್ನು ತಾವೇ ಓದಿದ ನಂತರ, ಲೇಖನ ಪುಷ್ಟಿಗೊಳಿಸಲು ಬೇಕಾದ ಅಂಶಗಳ ಬಗ್ಗೆ ಇತರ ವಿದ್ಯಾರ್ಥಿ, ಸಂಪನ್ಮೂಲ ವ್ಯಕ್ತಿಗಳಿಂದ ಸಲಹೆ. ಕೊನೆಗೆ 'ಲೇಖನ ಹೀಗಿರಬೇಕಿತ್ತು' ಎಂಬಲ್ಲಿಗೆ ಮೌಲ್ಯಮಾಪನ ಮುಕ್ತಾಯ.
'ಮೌಲ್ಯಮಾಪನದ ಎರಡನೆ ದಿನಕ್ಕಾಗುವಾಗ ಮೊದಲ ದಿವಸದ ತಪ್ಪುಗಳನ್ನು ಸರಿಪಡಿಸಿಕೊಳ್ಳಲು ಸಹಕಾರಿಯಾಯಿತು' ಎನ್ನುತ್ತಾರೆ ಈ ವರುಷದ ವಿದ್ಯಾರ್ಥಿ ಉಡುಪಿಯ ಶಶಿಧರ ಹೆಮ್ಮಣ್ಣ.

ಮೂರು ದಿವಸದ ತರಬೇತಿಯ ನಂತರ, ಅಭ್ಯರ್ಥಿಗಳು ಪ್ರತಿ ತಿಂಗಳು ಒಂದೊಂದು ವಿಚಾರದ ಬಗ್ಗೆ ಲೇಖನ ಬರೆಯಬೇಕು. ಅಂಚೆ ಅಥವಾ ಮಿಂಚಂಚೆ ಮೂಲಕ ರವಾನೆ. ಇದನ್ನು ಕೇಂದ್ರವೇ ಮೌಲ್ಯಮಾಪನ ಮಾಡಿ, ಏನು ಪೂರಕ ಮಾಹಿತಿ ಬೇಕಿತ್ತು, ಎಲ್ಲೆಲ್ಲಿ ತಪ್ಪಿತು, ವಿಷಯದ ಯಾವ ಭಾಗ ಸುಧಾರಣೆಯಾಗಬೇಕು.. ಹೀಗೆ ಲೇಖನದಲ್ಲೇ ತಿದ್ದಿ ವಿದ್ಯಾರ್ಥಿಗೆ ಮರಳಿಸುತ್ತದೆ. ಸತತ ಎರಡು ತಿಂಗಳು ಅಸೈನ್ಮೆಂಟ್ ಕಳಿಸದ ವಿದ್ಯಾರ್ಥಿಗಳ ನೊಂದಾವಣೆ ರದ್ದು.

ಸ್ಪೂನ್ ಫೀಡಿಂಗ್!

ಕಾರ್ಯಾಗಾರಕ್ಕೂ ಮೊದಲೇ ವರ್ಷದುದ್ದಕ್ಕೂ ವಹಿಸಬೇಕಾದ ಎಚ್ಚರಗಳನ್ನು ಕಿಟ್ ರೂಪದಲ್ಲಿ ವಿದ್ಯಾರ್ಥಿಗೆ ನೀಡಲಾಗುತ್ತದೆ. ಪರಿಣಾಮಕಾರಿ ಕೃಷಿಕಪರ ಲೇಖನ ಬರೆಯಲು ಏನೇನು ವಿಚಾರ ಗಮನಿಸಬೇಕು, ಏನು ಮಾಡಬಾರದು, ಲೇಖನ ಬರೆಯುವಾಗ ಮಾರ್ಜಿನ್ ಎಷ್ಟು ಬೇಕು, ಲೇಖನದಲ್ಲಿ ಬರಹಗಾರರ ವಿಳಾಸ ಎಲ್ಲಿರಬೇಕು, ಫೋಟೋದ ಹಿಂದೆ ವಿವರಗಳನ್ನು ಹೇಗೆ ಬರೆಯುವುದು, ಲೇಖನಗಳನ್ನು ಅಂಚೆಗೆ ಹಾಕುವ ಮುನ್ನ ಕವರಿಗೆ ವಿಳಾಸ ಬರೆಯುವುದು ಹೇಗೆ, ಸ್ಟಾಂಪ್ ಎಲ್ಲಿ ಹಚ್ಚಬೇಕು, 'ಇಂದ' ವಿಳಾಸ ಎಲ್ಲಿ ಬರೆಯುವುದು. ಲೇಖನ ಮೂರ್ನಾಲ್ಕು ಪುಟಗಳಿದ್ದರೆ ಅದನ್ನೆಲ್ಲಾ ಜೋಡಿಸುವ ಕುರಿತು ಮಾಹಿತಿಯಿದೆ. ಕಿಟ್ನೊಂದಿಗೆ ಮಾದರಿ ರೂಪದಲ್ಲಿ ಸೂಕ್ತ ಜೆಮ್ ಕ್ಲಿಪ್, ಅಂಟು ಇತ್ಯಾದಿ ಸಾಮಗ್ರಿಗಳನ್ನೂ ಅಭ್ಯರ್ಥಿಗಳಿಗೆ ನೀಡುವಲ್ಲಿಯ ತನಕದ ಕಾಳಜಿ ಕೇಂದ್ರದ್ದು. ಕಿಟ್ನ ಜತೆಗೆ ಮುಖ್ಯವಾಹಿನಿ ಪತ್ರಿಕೆಗಳಲ್ಲಿ ಬಂದ ಉತ್ತಮ ಕೃಷಿ-ಗ್ರಾಮೀಣ ಲೇಖನಗಳನ್ನೂ ಪರಾಮರ್ಶೆಗಾಗಿ ಕೊಡುತ್ತಾರೆ. ಈ ರೀತಿಯ 'ಸ್ಪೂನ್ ಫೀಡಿಂಗ್' ಪತ್ರಿಕೋದ್ಯಮ ಶಿಕ್ಷಣ ಕ್ಷೇತ್ರದಲ್ಲೇ ಅನನ್ಯ!

'ಇಷ್ಟೆಲ್ಲಾ ವಿವರ ಕೊಟ್ಟರೂ ಹೆಚ್ಚಿನವರೂ ಅದನ್ನು ಓದಿಕೊಂಡು ಬರುವುದಿಲ್ಲ. ಪತ್ರಕರ್ತನಿಗೆ ಓದು ಮುಖ್ಯ' ಎನ್ನುತ್ತಾರೆ ಸಂಪನ್ಮೂಲ ವ್ಯಕ್ತಿಗಳಲ್ಲಿ ಒಬ್ಬರಾದ ಅಡ್ಡೂರು ಕೃಷ್ಣರಾವ್.

ಕೇಂದ್ರ ನೀಡಿದ್ದ ಸೂಚನೆಯನ್ನು ವಿದ್ಯಾರ್ಥಿ ಎಷ್ಟು ಪಾಲಿಸಿದ್ದಾರೆ, ಬರೆಹ ಎಷ್ಟು ಸುಧಾರಿಸಿದೆ ಎಂಬ ಮಾನದಂಡದಂತೆ 'ಉತ್ತಮ ವಿದ್ಯಾರ್ಥಿ' ಎಂಬ ಆಯ್ಕೆ. ಇವರಿಗೆ 'ಕಾಮ್ ಫೆಲೋ' ಎಂಬ ಬಿರುದು. ತರಬೇತಿಯ ಕೊನೆಗೆ ಕೆಂದ್ರದ ವಾರ್ಷಿಕೋತ್ಸವ. ಅದರಲ್ಲಿ ಬಿರುದು ಪ್ರದಾನ.

ನಾಗೇಶ ಹೆಗಡೆ, ಹೆಚ್.ಎನ್.ಆನಂದ, ಶ್ರೀ ಪಡ್ರೆ, ಅಡ್ಡೂರು ಕೃಷ್ಣ ರಾವ್, ಜಿ. ಕೃಷ್ಣಪ್ರಸಾದ್, ಶಿವಾನಂದ ಕಳವೆ, ಮಲ್ಲಿಕಾರ್ಜುನ ಹೊಸಪಾಳ್ಯ, ಆನಂದತೀರ್ಥ ಪ್ಯಾಟಿ, ಗಾಣದಾಳು ಶ್ರೀಕಂಠ, ಪುರ್ಣಪ್ರಜ್ಞ ಬೇಳೂರು...ಹೀಗೆ ಕನ್ನಾಡಿನ ಪ್ರಮುಖ ಅಭ್ಯುದಯ ಪತ್ರಕರ್ತರು ಕೇಂದ್ರದ ಸಂಪನ್ಮೂಲ ವ್ಯಕ್ತಿಗಳು. ಅಕಡೆಮಿಕ್ ಶಿಬಿರಗಳಲ್ಲಿ ತಂತಮ್ಮ 'ಲೆಕ್ಚರ್' ಆದ ನಂತರ ಸಂಪನ್ಮೂಲ ವ್ಯಕ್ತಿಗಳು ತಮ್ಮಷ್ಟಕ್ಕೆ ತೆರಳುತ್ತಾರೆ. ಇಲ್ಲ ಹಾಗಲ್ಲ. ಮೂರೂ ದಿವಸವೂ ವಿದ್ಯಾರ್ಥಿಗಳೊಂದಿಗೆ ಇರುತ್ತಾರೆ. ಊಟ-ವಸತಿ ಅವರೊಂದಿಗೆ. ಹೀಗಾಗಿ ಪತ್ರಿಕೋದ್ಯಮದ ಕುರಿತಾದ ವಿಚಾರಗಳನ್ನು ತಿಳಿದುಕೊಳ್ಳಲು ಉತ್ತಮ ಅವಕಾಶ. ಸಂಪನ್ಮೂಲ ವ್ಯಕ್ತಿಗಳು ಮತ್ತು ಅಭ್ಯರ್ಥಿಗಳ ಮಧ್ಯೆ ಯಾವುದೇ ಅಂತರವಿಲ್ಲ, ಗತ್ತು-ಗೈರತ್ತುಗಳಿಲ್ಲ.

ಕಾಮ್ ಫೆಲೋ!

ಎಪ್ಪತ್ತಕ್ಕೂ ಮಿಕ್ಕಿ 'ಕಾಮ್ ಫೆಲೋ'ಗಳು ಕೃಷಿ ಮಾಧ್ಯಮ ಕೇಂದ್ರದ ದೊಡ್ಡ ಆಸ್ತಿ. ಮುಖ್ಯವಾಹಿನಿಯ ಕೃಷಿ ಪುಟಗಳಲ್ಲಿ ಕೆಲವೊಂದು ಸಲ ಫೆಲೋಗಳ ಬರೆಹಗಳೇ ತುಂಬಿರುವುದು ಯಶಸ್ವೀ ತರಬೇತಿಯ ಫಲ. ಅಡಿಕೆ ಪತ್ರಿಕೆ ಕಾಮ್ ವಿದ್ಯಾರ್ಥಿಗಳ ಬರೆಹದ ಬೈಲೈನ್ ಜತೆ 'ಕಾಮ್ ಫೆಲೋ' ಅಂತ ಉಲ್ಲೇಖಿಸುವ ಪರಿಪಾಠ ಶುರುಮಾಡಿದೆ. 'ಇದರಿಂದಾಗಿ ಇನ್ನಷ್ಟು ಸ್ಪೂರ್ತಿ ಸಿಗುತ್ತದೆ' ಎನ್ನುತ್ತಾರೆ ಈ ಸಾಲಿನ ಕಾಮ್ ಫೆಲೋ ಪಡೆದ ಬೆಳಗಾವಿಯ ಕೃಷಿ ಅಧಿಕಾರಿ ಲೀಲಾ ಕೌಜಗೇರಿ. 'ಯಾಕೆ ಬರೆಯಬೇಕು, ಯಾರಿಗಾಗಿ ಬರೆಯಬೇಕು ಎಂಬುದನ್ನು ಕಾಮ್ ಕಲಿಸಿಕೊಟ್ಟಿದೆ' ಎಂಬ ಅನುಭವ ಅರುವತ್ತರ ಯೌವನೆ ಅನುಸೂಯಾ ಶರ್ಮಾ ಅವರದು.

ರಾಜ್ಯಮಟ್ಟದ ಪ್ರಷಸ್ತಿ

ಅರ್ಥಪೂರ್ಣ ಕೃಷಿ-ಗ್ರಾಮೀಣ ಪತ್ರಿಕೋದ್ಯಮಕ್ಕೆ ಉತ್ತೇಜನ ನೀಡುವ ಉದ್ದೇಶದೊಂದಿಗೆ ಕೇಂದ್ರವು ಪ್ರತೀವರುಷ ರಾಜ್ಯ ಮಟ್ಟದ ಪ್ರಶಸ್ತಿ ನೀಡುತ್ತಿದೆ. 'ಕೃಷಿಕರ ಅಗತ್ಯಗಳನ್ನಾಧರಿಸಿದ, ಅವರ ನೋವು ನಲಿವುಗಳ ಮೇಲೆ ಬೆಳಕು ಚೆಲ್ಲುವ, ಅವರ ಸಮಸ್ಯೆಗಳ ಬಗ್ಗೆ ಜನಾಭಿಪ್ರಾಯ ಮೂಡಿಸುವ ವಸ್ತುನಿಷ್ಠ ಹಾಗೂ ವಿಚಾರಪೂರ್ಣ ಬರೆಹಗಳು ಕೃಷಿ ಪತ್ರಿಕೋದ್ಯಮವನ್ನು ಸದೃಢಗೊಳಿಸಬೇಕೆಂಬ ಆಶಯದೊಂದಿಗೆ ಪ್ರಶಸ್ತಿ ನೀಡಲಾಗುತ್ತದೆ' ಎನ್ನುತ್ತಾರೆ ಕೃಷಿ ಮಾಧ್ಯಮ ಕೇಂದ್ರದ ಅಧ್ಯಕ್ಷೆ ಅನಿತಾ ಪೈಲೂರು.

ಇದೀಗ ದೇಶಪಾಂಡೆ ಪೌಂಡೇಶನ್ ನೆರವಿನೊಂದಿಗೆ ಕೇಂದ್ರ ತನ್ನ ಚಟುವಟಿಕೆಗಳನ್ನು ಇನ್ನಷ್ಟು ವಿಸ್ತರಿಸಿದೆ.. 'ಕೃಷಿ-ಗ್ರಾಮೀಣ ಪತ್ರಿಕೋದ್ಯಮ ಕಾರ್ಯಾಗಾರ ಸರಣಿ'ಗೆ ಚಾಲನೆ. ವಿವಿಧ ಪತ್ರಿಕೋದ್ಯಮ ವಿಭಾಗಗಳು, ಕೃಷಿ ಸಂಬಂಧಿ ವಿದ್ಯಾಲಯಗಳಲ್ಲಿ ಕಾರ್ಯಾಗಾರ ನಡೆಸುವ ಮೂಲಕ ಕೃಷಿ-ಗ್ರಾಮೀಣ ಪತ್ರಿಕೋದ್ಯಮ ಕುರಿತು ಪ್ರಾಥಮಿಕ ಮಾಹಿತಿ ನೀಡುವುದು ಉದ್ದೇಶ.
ಕೃಷಿ-ಗ್ರಾಮೀಣ ಪತ್ರಿಕೆಗಳು ಹಾಗೂ ಸರಕಾರದ ನಡುವೆ ಅರ್ಥಪೂರ್ಣ ಕೊಂಡಿ ಕಲ್ಪಿಸುವ ಉದ್ದೇಶದಿಂದ ಮತ್ತು ಪತ್ರಿಕೆಗಳ ಬಲವರ್ಧನೆಯ ದೃಷ್ಟಿಯಿಂದ 'ಕೃಷಿ ಸಂಪಾದಕರ ಪರಿಷದ್' ಅಸ್ತಿತ್ವಕ್ಕೆ ಬಂದಿದೆ.
ಹತಾಶೆ ಕವಿದಿರುವ ಒಕ್ಕಲುತನದಲ್ಲಿ ಸ್ಪೂರ್ತಿಯ ಚಿಲುಮೆಗಳಂತಿರುವ ಮೌನ ಸಾಧಕರ ಯಶೋಗಾಥೆಗಳನ್ನು ಪುಸ್ತಕ ರೂಪದಲ್ಲಿ - ಅದರಲ್ಲೂ ಸುಲಭವಾಗಿ ಕೈಗೆಟಕುವ ದರದಲ್ಲಿ ಮುದ್ರಿಸಿ ರೈತರ ಕೈಗಿಡುವತ್ತ ಹೊಸ ಹೆಜ್ಜೆ ಇಟ್ಟಿದೆ. ಗುಡ್ಡದ ಮೇಲಿನ ಏಕವ್ಯಕ್ತಿ ಸೈನ್ಯ, ಕಲ್ಲು ಹಾಸಿನ ಮೇಲೆ ಹಸಿರು ಹೊದಿಕೆ, ಸಾವಯವದ ಹಾದಿ.. ಹೀಗೆ ಚಿಕ್ಕ ಚೊಕ್ಕ ಪುಸ್ತಕ. ಅಲ್ಲದೆ ಕಾಕೋಳದ ಯಶೋಗಾಥೆ, ನಂದಿ ಹಳ್ಳಿಯ ಉದ್ಯಮಶೀಲ ದಂಪತಿ, ಸಾವಯವ ತಾರಸಿ ತೋಟ, ಜಲನೆಮ್ಮದಿಯತ್ತ ಕಾಕೋಳ ಇತರ ಪ್ರಕಟಣೆಗಳು.

ಕಾಮ್ ಚಟುವಟಿಕೆಗಳ ಮುಖವಾಣಿ 'ಕಾಮ್ ನ್ಯೂಸ್' ಮಾಸಿಕ ಪ್ರಕಟಣೆ. ದಾನಿಗಳ ಸಹಯೋಗ. ಅದರಲ್ಲಿ ಕಾಮ್ ವಿದ್ಯಾರ್ಥಿಗಳ, ಫೆಲೋಗಳ ಮತ್ತು ಚಟುವಟಿಕೆಗಳ ವರದಿ.

ಪತ್ರಿಕೋದ್ಯಮ ತರಬೇತಿಗೆ ನೂರೈವತ್ತಕ್ಕೂ ಮಿಕ್ಕಿ ಪ್ರವೇಶಗಳು ಬರುತ್ತಿವೆ. 'ಬಂದ ಅರ್ಜಿಗಳಲ್ಲಿ 25-30ನ್ನು ಹಿಂಡಿ ತೆಗೆದರೂ ಕೊನೆಯಲ್ಲಿ ಉಳಿಯುವವರು 10-15 ಮಂದಿ ಮಾತ್ರ.'!

ಕೇಂದ್ರದ ಕೇಂದ್ರಸ್ಥಳ ಧಾರವಾಡ. ಮಾಧ್ಯಮ ಕೇಂದ್ರದ ಸಾರಥ್ಯ ಅನಿತಾ ಪೈಲೂರು. ಆರಂಭದಲ್ಲಿ ಪರ್ಯಾಯ ಕೃಷಿ ಮಾಧ್ಯಮ ಕೇಂದ್ರ ಎಂದಿತ್ತು. ಇತ್ತೀಚೆಗೆ ಹೆಸರು ಹೃಸ್ವವಾಗಿದೆ.

ಕೇಂದ್ರದ ಎಲ್ಲಾ ಚಟುವಟಿಕೆಗಳಲ್ಲಿ ಸಂಘಟಕರು ಎದುರು ಕಾಣಿಸಿಕೊಳ್ಳುವುದೇ ಇಲ್ಲ! ನೇಪಥ್ಯದಲ್ಲಿರುತ್ತಾರೆ. ಸಂಸ್ಥೆ ಈಗ ಹತ್ತರ ಹೊಸ್ತಿಲಲ್ಲಿದೆ. ಒಂದಷ್ಟು ಕಾರ್ಯ ಹೂರಣಗಳು ಬಗಲಲ್ಲಿವೆ.

'ಕಾಮ್' ಅಜೆಂಡಾದಲ್ಲಿ ಅಮೂರ್ತವಾಗಿರುವ ಕೃಷಿ-ಗ್ರಾಮೀಣ ವಿಚಾರಗಳ ಕುರಿತಾದ ಮನೋಪ್ಯಾಕೇಜ್ನ ಮೂರ್ತತೆಗೆ ಇನ್ನಷ್ಟು ಹೆಗಲುಗಳು ಬೇಕಾಗಿವೆ. ನಮ್ಮ ಪತ್ರಿಕಾ ಸಂಸ್ಥೆಗಳೂ ಈ ಕೆಲಸಕ್ಕೆ ಸಹಕಾರ ಕೊಟ್ಟರೆ ಇನ್ನಷ್ಟು 'ಸಾಮಥ್ರ್ಯವರ್ಧನೆ' ಸಾಧ್ಯವಾಗಬಹುದು.

(ದಿನಾಂಕ ೨೧-೧೨-೨೦೦೯, ಸೋಮವಾದ ವಿಜಯಕರ್ನಾಟಕದ ’ಲವಲವಿಕೆ’ಯ ಕೃಷಿ ಪುಟದಲ್ಲಿ ಈ ಬರೆಹ ಪ್ರಕಟವಾಗಿದೆ. ಸಂಪಾದಕರಿಗೆ ಧನ್ಯವಾದಗಳು. ಲೇಖನದ ಪೂರ್ತಿ ಭಾಗ ಇಲ್ಲಿದೆ)

Sunday, December 20, 2009

ಮಾಣಿಯಲ್ಲಿ 'ಕೃಷಿ ಉತ್ಸವ'


ಬಂಟ್ವಾಳದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬಂಟ್ವಾಳ ತಾಲೂಕಿನ 'ಕೃಷಿ ಉತ್ಸವ'ವು ಮಾಣಿಯಲ್ಲಿಂದು ಜರುಗಿತು. ಸಂಸದ ಶ್ರೀ ನಳಿನ್ ಕುಮಾರ್ ಕಟೀಲು ದೀಪ ಬೆಳಗಿಸಿ, ವೇದಿಕೆಯಲ್ಲಿ ಮುಂಭಾಗದಲ್ಲಿ ರೂಪಿಸಲಾಗಿದ್ದ 'ಬಾಕಿಮಾರು ಗದ್ದೆ'ಗೆ ಹಾಲೆರೆದು, ವೇದಿಕೆಯಲ್ಲಿದ್ದ ತುಳಸಿ ಕಟ್ಟೆಗೆ ದೀಪ ಜ್ವಲಿಸಿ ಉತ್ಸವಕ್ಕೆ ಚಾಲನೆ ಕೊಟ್ಟರು. ಶಾಸಕ ಶ್ರೀ ರಮಾನಾಥ ರೈ, ಹಿರಿಯರಾದ ಶ್ರೀ ಸಂಕಪ್ಪ ರೈ ವೇದಿಕೆಯಲ್ಲಿ ಉಪಸ್ಥಿತಿ.

ನಂತರ ವಿಚಾರ ಗೋಷ್ಠಿಗಳು. ವಿವಿಧ ವಿಚಾರಗಳ ಮಂಡನೆ. ಶ್ರೀ ಬಡೆಕ್ಕಿಲ ಶ್ಯಾಮಪ್ರಸಾದ್ ಶಾಸ್ತ್ರಿಯವರು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದೊಡ್ಡ ಪ್ರಮಾಣದಲ್ಲಿ ಗಂಧ ಬೆಳೆದ ಕೃಷಿಕ. ಅವರ ಅನುಭವ ಕಥನ - ಇಡೀ ಕೃಷಿ ಉತ್ಸವದ ಹೈಲೈಟ್! ಪವರ್ ಪಾಯಿಂಟ್ ಮೂಲಕ ವಿಚಾರದ ಪ್ರಸ್ತುತಿ.

ನಲವತ್ತಕ್ಕೂ ಮಿಕ್ಕಿದ ಮಳಿಗೆಗಳು. ಕಬ್ಬಿನ ಹಾಲಿನಿಂದ ಸ್ಪ್ರೇಯರ್ ತನಕ! ತರಕಾರಿ ಬೀಜಗಳಿಗೆ ಸ್ವಲ್ಪ ಮಟ್ಟಿನ ಆಸಕ್ತಿ. ಮಹಿಳೆಯರ ಒಲವು ನರ್ಸರಿಗಳತ್ತ - ಹೂ ಗಿಡಗಳತ್ತ!

'ಇಂತಹ ಕೃಷಿ ಉತ್ಸವಗಳಿಂದ ಕೃಷಿಯತ್ತ ಹೆಚ್ಚು ಆಸಕ್ತಿ ಹುಟ್ಟಿಸುವ ಮತ್ತು ಕೃಷ್ಯುತ್ಪನ್ನಗಳಿಗೆ ಗ್ರಾಹಕರನ್ನು ಸೆಳೆಯುವ ಅಜ್ಞಾತ ಕೆಲಸವಾಗುತ್ತಿದೆ. ಇದೊಂದು ಖುಷಿ ಉತ್ಸವ' - ಒಂದೇ ವಾಕ್ಯದಲ್ಲಿ ಮೇಳದ ಆಶಯವನ್ನು ಕಟ್ಟಿಕೊಟ್ಟರು ನಳಿನ್ ಕುಮಾರ್ ಕಟೀಲ್.

ಒಟ್ಟೂ ವ್ಯವಸ್ಥೆಯಲ್ಲಿ ಅಚ್ಚುಕಟ್ಟು-ಶಿಸ್ತು ಉತ್ಸವದ ಧನಾಂಶ.


Tuesday, December 15, 2009

ಮನೆಬಾಗಿಲಿಗೆ ವಿಷರಹಿತ ತರಕಾರಿ!

ಮೂಡಬಿದಿರೆಯ ವಿಶಾಲನಗರ ಐನೂರು ಮನೆಗಳಿರುವ ಬಡಾವಣೆ. ಲ್ಯಾನ್ಸಿ ಕ್ರಾಸ್ತಾರ ತರಕಾರಿ ಬೈಕ್ ಬಾರದಿದ್ದರೆ ಇಲ್ಲಿನ ಕೆಲವು ಮನೆಗಳಲ್ಲಿ ಅಡುಗೆಯೇ ಆಗುವುದಿಲ್ಲ!

ಮಾರ್ಕೆಟ್ನಲ್ಲಿ ತಾಜಾ ಹೊಳಪುಳ್ಳ ತರಕಾರಿಗಳೇನೋ ಲಭ್ಯ. ಆದರೆ ಲ್ಯಾನ್ಸಿ ತರುವ ವಿಷರಹಿತ ತರಕಾರಿಗಳನ್ನು ತಿಂದವರಿಗೆ ಅದು ಬೇಡ. ಇವು ಸಿಗುವಷ್ಟು ಕಾಲ ಅವರು ಮಾರ್ಕೆಟ್ ಕಡೆಗೆ ಸುಳಿಯುವುದೇ ಇಲ್ಲ.

ಲ್ಯಾನ್ಸಿಯವರ ತರಕಾರಿ ಕೃಷಿಗೀಗ ಹದಿಮೂರು ವರುಷ. 'ಸಾವಯವ ತರಕಾರಿ ಎಷ್ಟು ಒಯ್ದರೂ ಮಾರ್ಕೆಟ್ ಇದೆ. ನನ್ನ ಬೆಳೆಯನ್ನು ನಾನೇ ಮಾರ್ಕೆಟ್ ಮಾಡುತ್ತೇನೆ.' ಲ್ಯಾನ್ಸಿಯವರ ಈ ಸಾಧನೆಯ ಹಿಂದೊಂದು ಕತೆಯಿದೆ.

ಪೈಸೆಪೈಸೆಗೂ ತತ್ವಾರವಿದ್ದ ಅಂದು ಇವರಮ್ಮ ಸೆಲಿನ್ ಕ್ರಾಸ್ತಾ ಬಸಳೆ ಬೆಳೆದು ಕಟ್ಟು ಮಾಡಿ 'ಮಾರಿ ಬಾ' ಎಂದು ಕೈಗಿತ್ತರು. ಮಾರುಕಟ್ಟೆ ನೋಡಿ ಗೊತ್ತಿತ್ತೇ ವಿನಃ ಮಾರಾಟದ ಅನುಭವವಿರಲಿಲ್ಲ. ಕಟ್ಟಿಗೆ ಮೂರು ರೂಪಾಯಿಯಂತೆ ಕೊಟ್ಟದ್ದಾಂಯಿತು. ಇನ್ನೇನು ಸ್ಥಳ ಬಿಡಬೇಕು ಎನ್ನುವಾಗ ಅಂಗಡಿಯವ ಅದನ್ನೇ ಐದು ರೂಪಾಯಿಗೆ ಮಾರಿದ. ಲ್ಯಾನ್ಸಿಗೆ ಆಘಾತ. ಅಂದೇ, ಅಲ್ಲೇ 'ಮುಂದೆ ನಾನೇ ಮಾರುತ್ತೇನೆ' ಎಂಬ ಶಪಥ ಮಾಡಿದರು.

ಅದು ಒಂದೆಡೆ ಕುಳಿತು ಮಾಡುವ ವ್ಯಾಪಾರ. ನಗರಗಳಲ್ಲಿ ಗಾಡಿಗಳಲ್ಲಿ ಮಾರುವುದಿದೆ. ಇದೇ ದಾರಿ ತುಳಿದ ಲ್ಯಾನ್ಸಿ ಜನ ವಸತಿಯಿರುವಲ್ಲಿ 'ಬಸಳೆ..ಬಸಳೆ' ಎಂದು ಕೂಗಿದರು. ಒಂದೆರಡು ಗಂಟೆಯಲ್ಲೇ ಕೈಯಲ್ಲಿದ್ದ ಮ್ಹಾಲು ಖಾಲಿ. ಇವರಿಗೂ ಐದು ರೂಪಾಯಿ ಸಿಕ್ಕಿತು. ಮಧ್ಯವರ್ತಿಗಳಿಲ್ಲದ ವ್ಯಾಪಾರಕ್ಕೆ ನಾಂದಿ.

ತೊಂಡೆ, ಬೆಂಡೆ, ಅಲಸಂಡೆ, ಹರಿವೆ, ಹೀರೆ - ಹೀಗೆ ತರಕಾರಿಗಳ ಸಾಲು. ವಾರಕ್ಕೆ ಮೂರು ಸಲ ಸರಬರಾಜು. ನಿಶ್ಚಿತ ಗಿರಾಕಿಗಳು. ಸ್ಟಾಂಡರ್ ದರ. ನಗದು ವ್ಯವಹಾರ. 'ತರಕಾರಿ ಮಾರಿ ಹಿಂದಿರುಗುವಾಗ ಇವರ ಕಿಸೆ ನೋಡಬೇಕು' ಎಂದು ನೆರೆಯ ಕೃಷಿಕ ಎಡ್ವರ್ಡ್ ರೆಬೆಲ್ಲೋ ತಮಾಷೆ ಮಾಡುತ್ತಾರೆ!

ತೊಂಡೆಕಾಯಿಗೆ ಮಾರುಕಟ್ಟೆಯಲ್ಲಿ ಕಿಲೋಗೆ ಇಪ್ಪತ್ತು ರೂಪಾಯಿ ಇದ್ದರೆ ಲ್ಯಾನ್ಸಿ ಮಾರುಕಟ್ಟೆ ದರದ ಸರಾಸರಿ ಬೆಲೆ ನಿಗದಿ ಮಾಡುತ್ತಾರೆ. ಮಾರುಕಟ್ಟೆ ದರ ಏರಿದರೂ, ಇವರದು ಫಿಕ್ಸೆಡ್. ಅಲ್ಲಿ ಇಳಿದರೂ, ಇವರದು ಇಳಿಯುವುದಿಲ್ಲ!

ಬೆಳಿಗ್ಗೆ ವಿತರಣೆಗೆ ಹಿಂದಿನ ರಾತ್ರಿಯೇ ಸಿದ್ಧತೆ. ಅರ್ಧ, ಒಂದು ಕಿಲೋದ ಪೂರ್ವಪ್ಯಾಕಿಂಗ್. ಮನೆಮಂದಿಯ ಸಮಷ್ಠಿ ಕೆಲಸ. ಬೈಕ್ನ ಹಿಂದೆ ಕಳಚಿ ಜೋಡಿಸಬಲ್ಲ (ಡಿಟೇಚೇಬಲ್) ಸ್ಟಾಂಡ್ ಮಾಡಿಸಿದ್ದಾರೆ. ಜಾಗವಿರುವಲ್ಲೆಲ್ಲಾ ತರಕಾರಿ ಚೀಲ ಇಳಿಬಿಡುತ್ತಾರೆ. ಇದನ್ನು 'ತರಕಾರಿ ಬೈಕ್' ಅನ್ನೋಣ.

'ನನ್ನನ್ನು ಕಾಯುವ ಐವತ್ತು ಮನೆಗಳಿಗೆ ಬೆಳಿಗ್ಗೆ 9 - 10 ರೊಳಗೆ ತರಕಾರಿ ಕೊಡಬೇಕು. ನಂತರ ಹೆಚ್ಚಿನವರೂ ಡ್ಯೂಟಿಗೆ ಹೋಗುತ್ತಾರೆ. ನಂಬಿದ ಮನೆಯವರಿಗೆ ತೊಂದರೆಯಾಗಬಾರದಲ್ಲಾ' ಎನ್ನುವ ಕಾಳಜಿ. ಒಂದು ದಿನವೂ ಮಾರಾಟವಾಗಿಲ್ಲ ಎಂದು ಪುನಃ ತಂದುದಿಲ್ಲವಂತೆ.

ಶಿಕ್ಷಕರು, ವ್ಯಾಪಾರಸ್ಥರು, ಕಚೇರಿಗೆ ಹೋಗುವ ವಿವಿಧ ಕುಟುಂಬಗಳ ಸಂಪರ್ಕ. 'ಐವತ್ತಲ್ಲ, ನೂರು ಮನೆಗಳಿಗೂ ಕೊಡುವಷ್ಟು ಬೇಡಿಕೆಯಿದೆ. ಆದರೆ ಪೂರೈಸಲು ಕಷ್ಟ.' ಇವರ ಮಾರಾಟತಂತ್ರವನ್ನು ಇನ್ನೂ ಕೆಲವರು ಅನುಸರಿಸಿದರಂತೆ. ಇವರಿಗಿಂತ ಮೊದಲೇ ತಲಪಿ ಮಾರಿ ಪೈಪೋಟಿ ಕೊಡಲು ಯತ್ನಿಸಿದರಂತೆ. ಆದರೆ ಕಡಿಮೆ ಗುಣಮಟ್ಟ ಮತ್ತು ಅಸಮರ್ಪಕ ಪೂರೈಕೆಯ ಕಾರಣ ಈ ಗಿರಾಕಿಗಳೇ ಅವರನ್ನು ತಿರಸ್ಕರಿಸಿಬಿಟ್ಟರು.

ತಾಜಾ ತರಕಾರಿಯನ್ನೇ ಕೊಡುತ್ತಾರೆ. ಅಕಸ್ಮಾತ್ ಕೆಲವೊಮ್ಮೆ ಸ್ವಲ್ಪ ಬಾಡಿದ್ದರೆ, ಹುಳು ಹಿಡಿದಿದ್ದರೆ, 'ಇದು ಅಷ್ಟು ಚೆನ್ನಾಗಿಲ್ಲ' ಅಂತ ಹೇಳುತ್ತಾರೆ. ದರದಲ್ಲಿ ಹೊಂದಾಣಿಕೆ. ಈ ಪಾರದರ್ಶಕತೆ ವಿಶಾಲನಗರದಲ್ಲಿ ಇವರಿಗೆ ಹೆಸರು ತಂದಿದೆ.
ಮದುವೆ, ಹಬ್ಬಗಳಂದು ಕೆಲವರು ಮುಂದಾಗಿ ಕಾದಿರಿಸುತ್ತಾರೆ. ಮನೆಗೆ ಬಂದು ಒಯ್ಯುವವರೂ ಇದ್ದಾರೆ. ಮನೆಯಿಂದ ಹಿರಡುವ ತರಕಾರಿ ಬೈಕಿಗೆ ದಾರಿಯ ಮಧ್ಯೆ ಕೆಲವು ನಿಲುಗಡೆ.

ದಶಂಬರದಿಂದ ಮೇ ತನಕ ತರಕಾರಿ ಋತು. 'ಆರು ತಿಂಗಳು ನಮ್ಮನ್ನು ತರಕಾರಿ ಸಾಕುತ್ತದೆ', ಲ್ಯಾನ್ಸಿಯವರ ತಂದೆ ರಾಬರ್ಟ್ ಕ್ರಾಸ್ತಾ ಹೇಳುತ್ತಾರೆ. ಅಷ್ಟು ಕಾಲ ಇವರ ವಿಷರಹಿತ ತರಕಾರಿಯ ರುಚಿಯುಂಡ ಗ್ರಾಹಕರು, ಉಳಿಗಾಲದಲ್ಲಿ ಮಾರ್ಕೆಟನ್ನು ಆಶ್ರಯಿಸಬೇಕು. ಆಗ ರುಚಿ ವ್ಯತ್ಯಾಸ ಗೊತ್ತಾಗುತ್ತದೆ. ಜನ 'ನಿಮ್ಮದು ಎಂತಹ ರುಚಿ ಮಾರಾಯ್ರೆ' ಅಂತ ಪ್ರತಿಕ್ರಿಯಿಸುತ್ತಾರೆ. ಈ ಅಭಿಪ್ರಾಯ ಇವರ ಉತ್ಪನ್ನಕ್ಕೆ ಬೇಡಿಕೆ ಹೆಚ್ಚಿಸುತ್ತದೆ.

ಎರಡು ವರುಷದ ಹಿಂದೆ ಬಂಪರ್. ಬೆಲೆಯೂ, ಬೆಳೆಯೂ. ಆಗ ವಾರಕ್ಕೆ ಮೂರ್ನಾಲ್ಕು ಸಲ 'ತರಕಾರಿ ಬೈಕಿ'ಗೆ ಕೆಲಸ. ಈ ವರುಷ ಕಡಿಮೆ. ವಾರಕ್ಕೆ ಎರಡೇ ಸಲ. ಸರ್ತಿಗೆ ಐನೂರರಿಂದ ಸಾವಿರದ ಸಂಪಾದನೆ.

ನಾಲ್ಕು ವರುಷದ ಹಿಂದಿನ ವರೆಗೆ ರಿಕ್ಷಾ ಇತ್ತು. ತರಕಾರಿ ಕೊಟ್ಟು ಮರಳುವಾಗ ದಾರಿಗುಂಟ ಬಿದ್ದಿರುವ ಸೆಗಣಿ ಹೆಕ್ಕಿ ತರುತ್ತಿದ್ದರು. ಕೆಲವರು ಗೇಲಿ ಮಾಡುತ್ತಿದ್ದರಂತೆ! 'ರಿಕ್ಷಾದಲ್ಲಿ ತರಕಾರಿ ಕೊಂಡೊಯ್ಯಲು ಸುಲಭ. ಕ್ರಮೇಣ ಬಾಡಿಗೆಗೆ ರಿಕ್ಷಾ ಅಪೇಕ್ಷಿಸಿ ಬರುವವರ ಸಂಖ್ಯೆ ಹೆಚ್ಚಾಗಿ, ಕೃಷಿಯತ್ತ ಗಮನ ಕಡಿಮೆಯಾಗತೊಡಗಿತು. ಹೊತ್ತಿಲ್ಲ, ಗೊತ್ತಿಲ್ಲ! ಹಾಗಾಗಿ ರಿಕ್ಷಾ ಮಾರಿದೆ. ಬೈಕ್ ತೆಕ್ಕೊಂಡೆ' ಎನ್ನುತ್ತಾರೆ.

ಒಟ್ಟು ಮೂರೂವರೆ ಎಕರೆ ಜಮೀನು. ಅದರಲ್ಲಿ ಒಂದೂವರೆ ಎಕರೆ ಹುಲ್ಲು. ಇಪ್ಪತ್ತು ಸೆಂಟ್ಸ್ನಲ್ಲಿ ತರಕಾರಿ. ಉಳಿದಂತೆ ಅಡಿಕೆ ಕೃಷಿ. ಜತೆಗೆ ಹೈನುಗಾರಿಕೆ. ಪತ್ನಿ ಸೆವೆರಿನ್ ಕ್ರಾಸ್ತಾರ ಉಸ್ತುವಾರಿಕೆ.

ತರಕಾರಿ ಕೃಷಿಯನ್ನು ಇನ್ನಷ್ಟು ವಿಸ್ತರಿಸಬಹುದಲ್ಲಾ? 'ಬೇಡಿಕೆ ಉಂಟೆಂದು ತರಕಾರಿ ಹೆಚ್ಚು ಮಾಡಿದರೆ ನಿರ್ವಹಣೆ ಕಷ್ಟ. ನನ್ನ ಈಗಿನ ವ್ಯವಸ್ಥೆಗೆ ಇಷ್ಟು ತರಕಾರಿ ಕೈತುಂಬಾ ಕೆಲಸ ಕೊಡುತ್ತದೆ.'

Sunday, December 13, 2009

ಡಿಸೆಂಬರಿನಲ್ಲಿ ಮಾವು!

ಜಾಗತಿಕ ತಾಪಮಾನದ ಕುರಿತು ಒಂದೆಡೆ ಕೊಪನ್ ಹೆಗನ್ ನಲ್ಲಿ ಒಂದೆಡೆ ಬಿಸಿಬಿಸಿ ಚರ್ಚೆ ನಡೆಯುತ್ತಿದ್ದರೆ, ಇನ್ನೊಂದೆಡೆ ಜುನಾಗಢದ ರೈತರ ಮುಖದಲ್ಲಿ ಅದು ಮಂದಹಾಸ ಸೃಷ್ಟಿಸಿದೆ. ಬಿರು ಬೇಸಗೆಯಲ್ಲಿ ಕಟಾವಿಗೆ ಬರಬೇಕಿದ್ದ ಮಾವಿನ ಹಣ್ಣು ಈ ಬಾರಿ ಚಳಿಗಾಲದ ನಡುವೆಯೆ ಬೆಳೆದು ನಿಂತಿರುವುದು ರೈತರಲ್ಲಿ ಸಂತಸವುಂಟುಮಾಡಿದೆ.

'ಇದೊಂದು ಅದ್ಭುತ. ಇದಕ್ಕೂ ಮುನ್ನ ಡಿಸೆಂಬರಿನಲ್ಲಿ ಮಾವಿನ ಬೆಳೆಯನ್ನು ನೋಡಿಯೇ ಇಲ್ಲ. 2009ರಲ್ಲಿ ಮೊದಲ ಬಾರಿಗೆ ಮಾವಿನ ಕೊಯಿಲು ನಡೆಯುತ್ತಿದೆ' ಎಂದು ವಿಶೇಷ ಕೇಸರ್ ಜಾತಿಯ ಮಾವು ಕೃಷಿ ಕೈಗೊಂಡಿರುವ ಚಂದೂಬಾಯ್ ಘೆಸಾಡಿಯಾ ಹೇಳಿದ್ದಾರೆ.

'ವಾಸ್ತವವಾಗಿ ಮಾವಿನ ಹಣ್ಣು ಮೇ ಇಲ್ಲವೇ ಜೂನ್ ತಿಂಗಳಲ್ಲಿ ಕೊಯಿಲಿಗೆ ಸಿದ್ಧವಾಗಿರುತ್ತದೆ. ಆದರೆ ಈ ಬಾರಿ ಡಿಸೆಂಬರ್ ತಿಂಗಳಲ್ಲಿ ಮಾವಿನಹಣ್ಣು ಸಿಗುತ್ತಿರುವುದು ಆಶ್ಚರ್ಯವುಂಟುಮಾಡುತ್ತಿದೆ' ಎಂದು ಮತ್ತೋರ್ವ ರೈತ ಬಿಫುಲ್ ಬಾಯ್ ಅಕ್ಬಾರಿ ಹೇಳಿದ್ದಾರೆ.

ಗುಜರಾತಿನ ಒಂದು ಲಕ್ಷದ ಹತ್ತು ಸಾವಿರ ಎಕರೆ ಪ್ರದೇಶದಲ್ಲಿ ಕೇಸರ್ ತಳಿಯ ಮಾವಿನ ಹಣ್ಣನ್ನು ಬೆಳೆಯಲಾಗುತ್ತಿದೆ. ಆದರೆ ಹವಾಮಾನ ಬದಲಾವಣೆ ಮಾವಿನ ಕೃಷಿಯ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ. ಡಿಸೆಂಬರಿನಲ್ಲಿ ಮಾವು ಕೊಯ್ಲಿಗೆ ಬಂದಿರುವುದು ಅಪಾಯಕಾರಿ ಬೆಳವಣಿಗೆ ಎಂದು ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ.

(ಕೃಪೆ: ಉದಯವಾಣಿ: 13-12-2009, ಪುಟ 5)

Saturday, December 12, 2009

ಸಾವಯವದ ದೊಡ್ಡ ಹೆಜ್ಜೆ : 'ಎರಾ'

ಬೆಂಗಳೂರಿನ ಹೆಬ್ಬಾಳದ ಜಿಕೆವಿಕೆಯಲ್ಲಿ ಕೃಷಿ ಮೇಳ ನಡೆಯಿತು. ಬರೋಬ್ಬರಿ ಮಳಿಗೆಗಳು. ಚರುಮುರಿಯಿಂದ ಟ್ರಾಕ್ಟರ್ ತನಕ! ಆರುನೂರು ಮಳಿಗೆ ಸುತ್ತು ಹಾಕಿ ನಿಂತಾಗ ಸಾಕೋ ಸಾಕು! ಈ ಮಧ್ಯೆ ರೈತ ಮಟ್ಟದಲ್ಲಿ ಸಾವಯವದ ಕಾಳಜಿ ಹೊತ್ತ ಅದನ್ನು ವೃತದಂತೆ ನಿಭಾಯಿಸುವ ಕೆಲವೇ ಕೆಲವು ರೈತರ ಮಳಿಗೆಗಳು ಹೆಚ್ಚು ಗಮನ ಸೆಳೆದುವು. ಬೆಂಗಳೂರಿನ 'ಎರಾ ಆರ್ಗಾನಿಕ್’ ಇಂತಹ ಮಳಿಗೆಗಳಲ್ಲಿ ಒಂದು.

ಎರಾದ ರೂವಾರಿ ಜಯರಾಮ್. ಸಂಸ್ಥೆ ಹುಟ್ಟಿಗೆ ದಿಕ್ಕು ತೋರಿದ್ದು ಜರ್ಮನಿಯ ಸಾವಯವ ಸಮ್ಮೇಳನ. ಅಲ್ಲಿ ಸಾಮಾನ್ಯ ಗ್ರಾಹಕನೂ (ರೈತ) ಮಾರುಕಟ್ಟೆ ಹಿಡಿವ ರೀತಿ. ಈ ಕುರಿತು ಮಾಹಿತಿ ಸಂಗ್ರಹ. ಆರಂಭ2007 ಎಪ್ರಿಲ್ನಲ್ಲಿ. ಜೀವನಾವಶ್ಯಕ ವಸ್ತುಗಳೆಲ್ಲಾ ಇಲ್ಲಿ ಲಭ್ಯ. ತರಕಾರಿ, ಧಾನ್ಯಗಳಿಂದ ತೊಡಗಿ ಅಂಗಿ-ಬನಿಯನ್ ತನಕ!

ಆಂಧ್ರದ ಸಾವಯವ ಹತ್ತಿ ಬಟ್ಟೆಯ ಅಂಗಿ; ಪಾಂಡಿಚೇರಿಯ ಸಿದ್ಧ ಉಡುಪುಗಳು, ಚೆನ್ನೈಯ ಕಡ್ಲೆಕಾಯಿ ಎಣ್ಣೆ, ಗಾಣ ಎಣ್ಣೆ, ಅಕ್ಕಿ, ಬೆಲ್ಲ; ಕೇರಳದ ಸಂಬಾರವಸ್ತು, ಕೆಂಪಕ್ಕಿ, ಗೇರುಬೀಜ, ಕರಕುಶಲವಸ್ತು; ಕೊಡೈಕನಾಲ್ನಿಂದ ಕ್ಯಾರೆಟ್, ತರಕಾರಿ, ಹಲಸಿನಹಣ್ಣು; ಊಟಿಯ ಚಹ; ಹಿಮಾಚಲ ಪ್ರದೇಶದಿಂದ ಸೇಬು; ಮೈಸೂರಿನಿಂದ ಜ್ಯಾಂ, ಉಪ್ಪಿನಕಾಯಿ; ಬೆಳಗಾಂನಿಂದ ಬೆಲ್ಲ, ಈರುಳ್ಳಿ; ಗದಗದಿಂದ ಗೋಧಿ, ಹಸಿ ಕಡ್ಲೆ; ಧಾರವಾಡ-ಮಂಡ್ಯಗಳಿಂದ ಬೆಲ್ಲ, ಕೊಡಗಿನ ಕಿತ್ತಳೆ - ಹೀಗೆ ಇಲ್ಲಿನ 'ವಿಶೇಷ'ಗಳ ಪಟ್ಟಿ ದೊಡ್ಡದು.
'ಎರಾ ಆರ್ಗಾನಿಕ್’ ಸ್ವಿಜéರ್ಲ್ಯಾಂಡ್ ಮೂಲದ ಅಂತಾರಾಷ್ಟ್ರೀಯ ಸಂಸ್ಥೆ ಐಎಂಒದಲ್ಲಿ ನೋಂದಣಿ. ಇದರಲ್ಲಿ ದೃಢೀಕರಣಗೊಂಡ ರೈತರು, ಸಂಸ್ಥೆಗಳು ದೇಶದುದ್ದಕ್ಕೂ ಬಹಳಷ್ಟಿದ್ದಾರೆ. ಇವರಿಂದ ಉತ್ಪನ್ನ ಖರೀದಿ. ಇದಕ್ಕಾಗಿ ಜಯರಾಮ್ ಎಲ್ಲಾ ರಾಜ್ಯಗಳ ಸಾವಯವ ಮಾರಾಟ ಸಂಸ್ಥೆಗಳಿಗೆ ಭೇಟಿ ನೀಡಿದ್ದಾರೆ.

ಖರೀದಿಸುವ ಉತ್ಪನ್ನಗಳಿಗೆ ಎರಾ ದರ ನಿಗದಿ ಮಾಡುವುದಿಲ್ಲ. ರೈತರ ದರಕ್ಕೆ ಶೇ.20-30 ಸೇರಿಸಿ ಮಾರಾಟ. ಬೇಗ ಕೆಡುವ ತರಕಾರಿ, ಹಣ್ಣುಗಳಂತಹ ವಸ್ತುಗಳಿಗೆ ಶೇ.40ರ ತನಕ ಹೆಚ್ಚು. 'ಸಾವಯವ ತರಕಾರಿ, ಸೊಪ್ಪುಗಳಂತಹ ವಸ್ತುಗಳ ಲಭ್ಯತೆ ಬೆಂಗಳೂರು ಸುತ್ತಮುತ್ತ ಸೀಮಿತ. ದೂರದೂರಿಂದ ಬರುವ ವಸ್ತುವಿಗೆ ದರ ಏರಿಕೆ ಅನಿವಾರ್ಯ'.

ಸಿಗುವ ತರಕಾರಿಗಳು ಸ್ಥಳೀಯ. ಬೇಡಿಕೆಯಷ್ಟು ಸಿಗುತ್ತಿಲ್ಲ. ಸಿಕ್ಕರೂ ಸಾವಯವವಲ್ಲ! ಸಮಯಕ್ಕೆ ಸರಿಯಾಗಿ ಸಿಗದಿದ್ದಾಗ 'ಸಾತ್ವಿಕ ಜಗಳ ಆಡುವ' ಗ್ರಾಹಕರೂ ಇದ್ದಾರೆ! ಇದನ್ನರಿತ ಜಯರಾಂ ತನ್ನ ತೋಟದಲ್ಲಿ ಸೊಪ್ಪುತರಕಾರಿ, ಹಣ್ಣುಗಳನ್ನು ಬೆಳೆಯುತ್ತಿದ್ದಾರೆ. 'ಗಿರಾಕಿಗಳಿಗೆ ಉತ್ಪನ್ನಗಳನ್ನು ಪ್ಯಾಕ್, ಸೀಲ್ ಮಾಡಿದರಷ್ಟೇ ಖುಷಿ. ಇಲ್ಲದಿದ್ದರೆ ಒಯ್ಯುವುದೇ ಇಲ್ಲ. ಪ್ಯಾಕಿಂಗ್ ಫಸ್ಟ್ - ಪ್ರಾಡಕ್ಟ್ ನೆಕ್ಸ್ಟ್!

'ಎರಾ'ಕ್ಕೆ ಜಯರಾಮ್ ಸಾಂಸ್ಥಿಕ ರೂಪ ನೀಡಿದ್ದಾರೆ. ಗ್ರಾಹಕರೇ ಸದಸ್ಯರು. ಐವರು ಸಿಬ್ಬಂದಿ. ಎಲ್ಲರಿಗೂ ಸಮವಸ್ತ್ರ. ವ್ಯವಹಾರದ ಅವಧಿ ಬೆಳಿಗ್ಗೆ 10 ಗಂಟೆಯಿಂದ ರಾತ್ರಿ 9.30. ಆರು ತಿಂಗಳಲ್ಲಿ ಮಣ್ಣಾಗುವ ಬಯೋಡಿಗ್ರೇಡೇಬಲ್ ಪ್ಲಾಸ್ಟಿಕ್ ಬಳಕೆ. ಬಟ್ಟೆಯ ಚೀಲ ತಂದವರಿಗೆ ಬಿಲ್ಲಿನಲ್ಲಿ ಒಂದು ರೂಪಾಯಿ ಕಡಿತ!

ಮಳಿಗೆ ಪೂರ್ತಿ ಪರಿಸ್ನೇಹಿ. ಗೋಡೆ ತುಂಬಾ ಹಸೆ ಚಿತ್ರ. ಕಲ್ಲು, ಮರ, ಬೇರು ಬಳಸಿದ ರ್ಯಾಕ್ಗಳು. ವ್ಯವಸ್ಥಿತವಾಗಿ ಪೇರಿಸಿಟ್ಟ ಸಾವಯವ ಉತ್ಪನ್ನಗಳು. ಮಹಡಿಯಲ್ಲಿ ಸಭಾಭವನ. ಕಿಟಕಿಗೆ ಲಾವಂಚದ ಪರದೆ. ಸೌರವಿದ್ಯುತ್. ಜಲಮರುಪೂರಣ. ಗೋಡೆಗಳಲ್ಲಿ ಪಾರಂಪರಿಕ ಹಸೆಚಿತ್ತಾರ. ಮಹಾರಾಷ್ಟ್ರದ 'ವರ್ಲಿ' ವರ್ಣಚಿತ್ರಗಳು.

ಗ್ರಾಹಕರ ವಿಳಾಸ ದಾಖಲೆ. ಬಹುತೇಕ ಕೊಳ್ಳುಗರು ಪಟ್ಟಣಿಗರಾದ್ದರಿಂದ, 'ಸಾವಯವ ಕೃಷಿ' ನೋಡಿದ ಅನುಭವವಿರುವುದಿಲ್ಲ. ಆಸಕ್ತ ಗ್ರಾಹಕರಿಗೆ ಪ್ರತಿ ತಿಂಗಳು ತೋಟ ಭೇಟಿ ಮೂಲಕ ಸಾವಯವ ಕೃಷಿಯನ್ನು ಪರಿಚಯ. ಜತೆಗೆ ತಿಂಗಳೊಂದು ಮುಖಾಮುಖಿ ಕಾರ್ಯಕ್ರಮ.

ಬೇರೆ ಪ್ರಮಾಣೀಕೃತ ಸಂಸ್ಥೆಗಳು ಅಂಗೀಕರಿಸಿದ ಉತ್ಪನ್ನಗಳನ್ನು ಇವರು ಖರೀದಿಸುತ್ತಾರೆಯೇ? 'ದೃಢೀಕರಣ ಕೊಟ್ಟ ಕಂಪೆನಿ ಐಎಂಒಗೆ ಸುದ್ದಿ ತಿಳಿಸುತ್ತಿರುತ್ತದೆ. ಐಎಂಒ ನಮಗೆ. ನಮ್ಮ ಪಟ್ಟಿಗೆ ಹೆಸರು ಸೇರಿದಾಕ್ಷಣ ಉತ್ಪನ್ನಗಳನ್ನು ಎರಾಕ್ಕೆ ತರಬಹುದು.'
ರೈತರ ತೋಟಗಳ 'ಗುಂಪು ದೃಢೀಕರಣ'ಕ್ಕೂ ಮಾಡುವ ಎರಾ ವ್ಯವಸ್ಥೆ ಮಾಡುತ್ತದೆ. ಇದಕ್ಕೆ ಐಎಂಓದ ಕೆಲವೊಂದು ನಿಯಮಗಳಿವೆ. ಸಂಬಂಧಪಟ್ಟ ಅಧಿಕಾರಿಗಳು ತೋಟಕ್ಕೆ ಬಂದು ಪರೀಕ್ಷಿಸಿ ತ್ರೃಪ್ತಿಯಾಗಬೇಕು. ಬೆಂಗಳೂರು ಸುತ್ತಮುತ್ತ ಅರುವತ್ತೈದಕ್ಕೂ ಹೆಚ್ಚು ತೋಟಗಳು ಈಗಾಗಲೇ ದೃಢೀಕರಣಗೊಂಡಿವೆ; ಇನ್ನಷ್ಟು ಯತ್ನ ನಡೆದಿದೆ.

ಜಯರಾಂ ನ್ಯಾಯವಾದಿ. ನಲವತ್ತೆರಡು ಎಕ್ರೆಯಲ್ಲಿ ಸಾವಯವ ಕೃಷಿಯನ್ನೂ ಮಾಡುತ್ತಾರೆ. ''ಬದುಕಿಗೆ ಸಾಕಷ್ಟು ಸಂಪಾದನೆಯಿದೆ. ವೃತ್ತಿಗೆ ತೊಂದರೆಯೆಂಬುದನ್ನು ತಿಳಕೊಂಡೇ ಈ ಚಳುವಳಿಗೆ ಧುಮುಕಿದ್ದೇನೆ. ಇದರಲ್ಲಿ ಖುಷಿಯಿದೆ. ಕೃಷ್ಯುತ್ಪನ್ನವನ್ನು ಕೊಳ್ಳುವವರಿಲ್ಲ. ಪಟ್ಟಭದ್ರ್ರರ ಹಿಡಿತದಲ್ಲಿರುವ ಮಾರುಕಟ್ಟೆಗೆ ಒಯ್ದರೂ, ಕೀಳಾಗಿ ಕಾಣುವ ಪ್ರವೃತ್ತಿ. ಎರಾ ಸ್ಥಾಪನೆಗೆ ಇದೂ ಒಂದು ಕಾರಣ.

(ಎರಾ ಆರ್ಗಾನಿಕ್ #348, ಡಾಲರ್ಸ್ ಕಾಲನಿ, ಆರ್.ಎಮ್.ವಿ.ಕ್ಲಬ್ ಡಬಲ್ ರೋಡ್, ಆರ್.ಎಮ್.ವಿ. ಎರಡನೇ ಹಂತ, ಬೆಂಗಳೂರು - 560 094 ದೂರವಾಣಿ: 080-32007273, 99005 43881)

Saturday, December 5, 2009

ಸುಭಗತೆಗೆ ಅಲಿಖಿತ 'ಪೇಟೆಂಟ್'!

ಧಾರವಾಡದ ಕೃಷಿ ಮೇಳದಲ್ಲಿ ಕೃಷಿ ಸಲಕರಣೆಗಳ ಮಳಿಗೆಯೊಂದಿತ್ತು. ಕತ್ತಿ, ಚೂರಿ, ಮಚ್ಚು...ಗಳು ಸಾಲಾಗಿ ಜೋಡಿಸಿದ್ದುವು. ಇವುಗಳ ವಿಶೇಷವಿರುವುದು ಅವುಗಳ 'ಹಿಡಿ'ಯ ನೋಟದಲ್ಲಿ! ಅವು ಪೈಬರ್ನಿಂದ ತಯಾರಿಸಿದವುಗಳು. ಬಹಳ ಆಕರ್ಷಕವಾದ ನೋಟ. ಅಷ್ಟೇ ಹರಿತ. ಎಲ್ಲವೂ ಕಂಪೆನಿ ತಯಾರಿಗಳು. ಮುಂದಿನ ದಿನಗಳಲ್ಲಿ ಇವಕ್ಕೆ ಪೇಟೆಂಟ್ ಸಿಕ್ಕರೂ ಆಶ್ಚರ್ಯವಿಲ್ಲ.
ಆದರೆ ಇಲ್ಲಿ ವಿಷಯ ಮುಖ್ಯವಾಗುವುದು ಪೇಟೆಂಟ್ ಕುರಿತಾಗಿ ಅಲ್ಲ. ಮಳಿಗೆಯಲ್ಲಿ ಆಕರ್ಷಕವಾಗಿ ಕಾಣುವ 'ನೋಟ' (ಫಿನಿಶಿಂಗ್) - ಅದರ ಯಶಸ್ಸು. ಇಂತಹ 'ಕಾಣುವ ನೋಟ'ದ ಹೊರತಾಗಿ, ಅದರ ಗುಣಮಟ್ಟದಲ್ಲಿ ನೋಟವನ್ನು ಕೊಡುವ ಜಾಣರು ನಮ್ಮ ಹಳ್ಳಿಗಳಲ್ಲಿ ಈಗಲೂ ಇದ್ದಾರೆ.

ಫೈಬರ್ ಹಿಡಿಯನ್ನು ಕಂಡಾಗ, ನನ್ನೂರಿನ ಅಪ್ಪಣ್ಣ ಆಚಾರ್ಯರು ನೆನಪಾದರು. ಇಡೀ ಗ್ರಾಮದಲ್ಲಿ ಕತ್ತಿ, ಮಚ್ಚು, ಗರಗಸಗಳ ಅಲಗು ತುಂಡಾದರೆ, ಹರಿತ ಕಡಿಮೆಯಾದರೆ ಪರಿಕರದೊಂದಿಗೆ ಆಚಾರ್ಯರ ಮನೆಮುಂದೆ ಪ್ರತ್ಯಕ್ಷರಾಗುವ ಮಂದಿ! ಅವರು ಕತ್ತಿ, ಮುಟ್ಟಿಯನ್ನು ಒಮ್ಮೆ ಕುಲುಮೆಯಲ್ಲಿಟ್ಟು, ನೀರಲ್ಲಿ ಅದ್ದಿ, ಮುಟ್ಟಿಯಿಂದ ನಾಲ್ಕೈದು ಪೆಟ್ಟು ಬಡಿದರೆ ಸಾಕು, ಮತ್ತೆ ಆರು ತಿಂಗಳಿಗೆ ಇವರ ಕುಟೀರಕ್ಕೆ ಬರುವುದೇ ಬೇಡ. ಅಷ್ಟು ಹಿಡಿತ, ನೋಟ. ಜತೆಗೆ ಕೈಗುಣವೂ! ಹೀಗಾಗಿ ಇವರ ತಯಾರಿ ಕುಟೀರದ ಮುಂದೆ ಜನಸಂದಣಿಯಿರುತ್ತಿತ್ತು.

ಇನ್ನೊಬ್ಬರು ಆನಂದ ಆಚಾರ್ಯರು. ಇವರು ಯಕ್ಷಗಾನ ಅರ್ಥಧಾರಿಗಳು. ಕತ್ತಿಯ ಅಲಗಿಗೆ ಕಾಯಕಲ್ಪ ಕೊಡುವಲ್ಲಿ ಎತ್ತಿದ ಕೈ. ಯಕ್ಷಗಾನದ ಸುದ್ದಿ ಮಾತನಾಡುತ್ತಾ, ಕುಲುಮೆಯ ಚಕ್ರವನ್ನು ನಾವೇ ತಿರುಗಿಸಿ ಸಹಕರಿಸಿದರೆ ಒಂದಿಪ್ಪತ್ತು ನಿಮಿಷದಲ್ಲಿ ಕತ್ತಿ ಹರಿತವಾಗಿ ನಿಮ್ಮ ಕೈಗೆ. ಕುಲುಮೆ ಕಾಯಕ ಅವರಿಗೆ ಹೊಟ್ಟೆಪಾಡು. ಆದರೆ ಅದರಲ್ಲಿರುವ ಪ್ರೀತಿ ಮತ್ತು ಫಿನಿಶಿಂಗ್ ಕಂಡಾಗ ಕಂಪೆನಿಗಳೂ ನಾಚಬೇಕು.

ಇನ್ನೊಬ್ಬರು ದೇರಪ್ಪ ಆಚಾರ್ಯ. ಇವರು ವರುಷಪೂರ್ತಿ ಬ್ಯುಸಿ! ಮನೆಯ ಸೂರನ್ನು ನಿರ್ಮಿಸುವುದರಲ್ಲಿ ಪರಿಣತ. ಮನೆಯ ಆಯ - ಉದ್ದಗಲದ ಅಳತೆ ಕೊಟ್ಟರೂ ಸಾಕು. ಒಂದೈದು ನಿಮಿಷದಲ್ಲಿ 'ಕ್ಯಾಲಿಕ್ಯುಲೇಟರ್ ಇಲ್ಲದೆ' ನಿರ್ಮಿಸಲುದ್ದೇಶಿಸಿದ ಮನೆಗೆ ಎಷ್ಟು ಮರ ಬೇಕು, ಎಷ್ಟು ಹಂಚು ಬೇಕು, ಎಷ್ಟು ಆಣಿ ಬೇಕು.. ಎಂಬ ಲೆಕ್ಕಾಚಾರ ಮುಂದಿಡುತ್ತಾರೆ.

ಮನೆಯ ಸೂರಿನ ಮರದ ಕೆಲಸಗಳು ಬಹಳ ಸೂಕ್ಷ್ಮ ಮತ್ತು ಜಾಣ್ಮೆ ಬೇಡುವಂತಹುದು. ಇವರು ಉಳಿ-ಗೀಸುಳಿಯೊಂದಿಗೆ ಮರವನ್ನು ಮುಟ್ಟಿದರೆ ಸಾಕು, ಬೇಕಾದಂತೆ ಬಾಗುತ್ತದೆ-ಬಳುಕುತ್ತದೆ! ಅವರ ಕೈಯಲ್ಲಿ ಒಂಚೂರು ಮರವೂ ವ್ಯರ್ಥವಾಗುವುದಿಲ್ಲ.
ಸೂರಿಗೆ ಬೇಕಾದ ಎಲ್ಲಾ ಮರಗಳು ವಿನ್ಯಾಸವಾದ ಬಳಿಕ ಮಾಡಿಗೆ ಏರಿ ಪಕ್ಕಾಸುಗಳನ್ನೆಲ್ಲಾ ಸಿಕ್ಕಿಸಿ, ಹಂಚು ಜೋಡಿಸಿ ಕೆಳಗಿಳಿದಾಗಲೇ ಆಚಾರ್ಯರ ಕೆಲಸ ಮುಗಿಯುವುದು! ಇವರ ಕೆಲಸದಲ್ಲಿನ ನೂಜೂಕು ಇದೆಯಲ್ಲಾ - ನಮ್ಮ ಯಾವ ತಾಂತ್ರಿಕ ಪಠ್ಯದಲ್ಲೂ ಇಲ್ಲದಂತಹ ಸಂಗತಿ.

ಇತ್ತೀಚೆಗೆ ಒಬ್ಬರು ಹೇಳಿದರು 'ಎಂತಹ ಕೆಲಸವನ್ನೂ ಮಾಡಬಹುದು, ಏನಂತೆ'! ಇದು ಉಡಾಫೆಯಂತೆ ಕಂಡರೂ, ನಮ್ಮಲ್ಲಿ ಉತ್ತರ ಕರ್ನಾಟಕದಿಂದ ಬಂದ ಶ್ರಮಿಕರು ತೋಟದ ಕೆಲಸ ಮಾಡಿಲ್ಲವೇ? ಆದರೆ ಮಾಡಿದ ಕೆಲಸದಲ್ಲಿರುವ ಫಿನಿಶಿಂಗ್ - ಇದಕ್ಕೆ ಅನುಭವ ಮತ್ತು ಕೆಲಸದಲ್ಲಿನ ಪ್ರೀತಿ ಮಾನದಂಡ. ಜತೆಗೆ ಅದೃಷ್ಟವೂ! ಇದು ಎಲ್ಲರಿಗೂ ಬರುವುದಿಲ್ಲ.

ನನ್ನಜ್ಜಿ ಮನೆಯಲ್ಲಿ ಎತ್ತುಗಳ ಮೂಲಕ ಗದ್ದೆ ಬೇಸಾಯ. ಗದ್ದೆ ಉಳುವಲ್ಲಿ ಮುಂಡಪ್ಪ ಮೂಲ್ಯ ಎಂಬವರು ಸ್ಪೆಷಲಿಸ್ಟ್. ಎಂತಹ ರಂಪಾಟ ಮಾಡುವ ಎತ್ತುಗಳೇ ಆಗಲಿ, ಅವನ್ನು ಗದ್ದೆಗೆ ಇಳಿಸಿ ನೊಗವಿರಿಸಿ, ನೇಗಿಲು ಹಿಡಿದು 'ಹೂಂ..ಪಡ..ಪಡ..' ಅಂತ 'ಹೂಟೆಭಾಷೆ'ಯಲ್ಲಿ ಮಾತನಾಡಿದರೆ ಸಾಕು, ಅವರು ಹೇಳಿದಂತೆ ಕೇಳುತ್ತವೆ!

'ಮುಂಡಪ್ಪರು ಗದ್ದೆಗಳಿದರೆ ಮತ್ತೆ ಅತ್ತ ಕಡೆ ಮನೆಯಜಮಾನ ಹೋಗಬೇಕಿಲ್ಲ' ಎಂಬ ಪ್ರತೀತಿಯೂ ಇತ್ತು. ಗದ್ದೆ ಉತ್ತು, ಎತ್ತುಗಳನ್ನು ಮೀಯಿಸಿ, ಮೇಯಿಸಿ; ನೊಗ, ನೇಗಿಲನ್ನು ಶುಚಿಗೊಳಿಸಿ, ಯಥಾಸ್ಥಾನದಲ್ಲಿಟ್ಟು, ತಾನೂ ಶುಚಿಯಾಗಿ ಜಗಲಿಯಲ್ಲಿ ಜಪ್ಪನೆ ಕೂರಿ, 'ಅಜ್ಜಮ್ಮಾ.. ಯಾನ್ ಬತ್ತೆ' ಎಂದಾಗ ನನ್ನ ಪದ್ದಜ್ಜಿ ಏಳೆಂಟು ದೋಸೆ, ದೊಡ್ಡ ಚೆಂಬಲ್ಲಿ ಕಾಪಿ ಜತೆಗೆ ವೀಳ್ಯದ ಹರಿವಾಣ ತಂದಿಡುವ ದೃಶ್ಯ ಕಣ್ಣೆದುರು ಬರುತ್ತದೆ.

ಇಂತಹ 'ಫಿನಿಶಿಂಗ್' ಇರುವ ಎಷ್ಟು ಮಂದಿ ನಮ್ಮ ನಡುವೆ ಇಲ್ಲ. ಅಂತಹವರನ್ನು ಮಾತನಾಡಿಸುವುದು ಬಿಡಿ, ಅವರ ಕೆಲಸದ ಚಂದವನ್ನೂ ನೋಡುವ ಮನಸ್ಸು ನಮಗಿರುವುದಿಲ್ಲ.

ಧಾರವಾಡದ ಶಿವರಾಂ ಪೈಲೂರು ಅವರ ಮನೆಗೊಮ್ಮೆ ಹೋಗಿ. ಅಲ್ಲಿನ ಪ್ರತೀಯೊಂದು ವಸ್ತುವೂ ಒಪ್ಪ ಓರಣವಾಗಿರುವುದು. ಅವರು ಬರೆವ ಕಾಗದ, ಅದನ್ನು ಕವರಿಗೆ ತುಂಬಿಸುವ ರೀತಿ, ವಿಳಾಸ ಬರೆವ ಪರಿ, ಅಂಚೆ ಚೀಟಿ ಅಂಟಿಸುವ ತನಕದ ಸುಭಗತೆ. ಚಿತ್ರ ಕಲಾವಿದ ಶಿವರಾಮ್ ಅವರನ್ನೊಮ್ಮೆ ನೋಡಿ. ಅವರಲ್ಲಿರುವ ಪುಸ್ತಕಗಳ ಅಂಚುಗಳು ಒಂಚೂರೂ ಮಡಚಿರುವುದಿಲ್ಲ. ಹತ್ತು ವರುಷದ ಹಿಂದಿನ ಕೆಲವು ಪುಸ್ತಕಗಳು ಹೊಸತರಂತೆ ಇವೆ. ಪ್ರತೀಯೊಂದು ಅಕ್ಷರ ಬರೆವಾಗಲೂ ಕೊಡುತ್ತಾರೆ- 'ಫಿನಿಶಿಂಗ್'! ಈ ಅಕ್ಷರಗಳ ಮುಂದೆ ನಮ್ಮ ಕಂಪ್ಯೂಟರಿನ 'ಫಾಂಟ್'ಗಳು ನಾಚಬೇಕು.

ಇಂತಹ ನೋಟ ಯಾ ಫಿನಿಶಿಂಗ್ ಇದೆಯಲ್ಲಾ - ಇವೆಲ್ಲಾ ಕಲಿತು ಬರುವುದಲ್ಲ. ಕೆಲಸಗಳಲ್ಲಿ 'ಫಿನಿಶಿಂಗ್' ಇರುವ ಅಪ್ಪಣ್ಣರಂತಹ, ದೇರಪ್ಪರಂತಹ, ಮುಂಡಪ್ಪರಂತಹ ಹಿರಿಯರ ಕೆಲಸಗಳೆಲ್ಲಾ ಕಾಲದ ಅಲಿಖಿತ ದಾಖಲೆಗಳು. ಇವರ ಕೆಲಸಗಳಿಗೆ ಜನರೇ ಅಂದು ಹಾರ್ದಿಕವಾಗಿ ಕೊಟ್ಟ ಗೌರವ ಇದೆಯಲ್ಲಾ - ಅದುವೇ ನಿಜವಾದ ಅಲಿಖಿತ ಪೇಟೆಂಟ್!

Tuesday, December 1, 2009

ಹಸಿರು ಪ್ರೀತಿಯ ಏಜಿಯಂ!

ಮಂಗಳೂರಿನ ಭಾರತೀಯ ಸ್ಟೇಟ್ ಬ್ಯಾಂಕಿನ ಏಜಿಯೆಂ (ಅಸಿಸ್ಟಾಂಟ್ ಜನರಲ್ ಮ್ಯಾನೇಜರ್, ಸಹಾಯಕ ವ್ಯವಸ್ಥಾಪಕ) ಚೈತನ್ಯ ಎಂ.ತಲ್ಲೂರು. ಎಲ್ಲಾ ಏಜಿಯೆಂಗಳಿಗಿರುವಂತೆ ಸವಲತ್ತಿದೆ. ಸ್ಟೇಟಸ್ ಇದೆ. ಆದರೆ ಇವರೆಂದೂ 'ಮಗುಮ್ಮಾಗಿ'ರುವುದಿಲ್ಲ. ಇವರಿಗೆ 'ಮಾತೇ ಮಾಣಿಕ್ಯ'. ಕೃಷಿಯ ಸುದ್ದಿ ಬಂದಾಗ ಇವರ ಮೈಯೆಲ್ಲಾ ಕಣ್ಣಾಗುತ್ತದೆ!

ವಾಸ್ತವ್ಯದ ಮನೆ? ದುಬಾರಿ ಕ್ರೋಟಾನ್, ಗುಲಾಬಿ, ಲಾನಿನ ಹುಲ್ಲಿನಿಂದ ಅಂದವರ್ಧನೆ. ಇದಕ್ಕೊಬ್ಬ ಮಾಲಿ. ನಿತ್ಯ ನೀರೆರೆಯುವ 'ದೊಡ್ಡ' ಕೆಲಸ. ಗಿಡಗಳು ನೆಲಕಚ್ಚಿದಾಗ ಮತ್ತೆ ಪುನಃ ತಂದು ನೆಡುವುದು. ನೀರು ಹಾಕುವುದು, ಆರೈಕೆ ಮಾಡುವುದು - ಇಷ್ಟು ಕೆಲಸ. ಅನಾವಶ್ಯಕವಾದ ಈ 'ಸಾಂಪ್ರದಾಯಿಕ' ಕೆಲಸಕ್ಕೆ ತಲ್ಲೂರು ತಡೆಯಾಜ್ಞೆ! ಅಲ್ಲೆಲ್ಲಾ ತರಕಾರಿ ಕೃಷಿ. ಮಾಲಿ ಅದಕ್ಕೆ ಹೊಂದಿಕೊಂಡಿದ್ದಾರೆ.

ತಲ್ಲೂರು ತರಕಾರಿ ಬೆಳೆಯಬೇಕಾಗಿಲ್ಲ. ತಿಂಗಳ ಕೊನೆಗೆ ಗರಿಗರಿ ಎಣಿಸುವ ಹುದ್ದೆ. ಎಡಗೈಗೆ, ಬಲಗೈಗೆ ಸಹಾಯಕರು. ಓಡಲು ಕಾರು - ಎಲ್ಲವೂ ಇದೆ. 'ಸಹಜವಾಗಿ ಬದುಕಬೇಕು' ಎನ್ನುವುದು ಜಾಯಮಾನ. 'ವಿಷರಹಿತವಾಗಿ ಒಂದಾರು ತಿಂಗಳಾದರೂ ತರಕಾರಿ ತಿನ್ನಬಹುದಲ್ಲಾ' ಎನ್ನುತ್ತಾರೆ.

ಕಳೆದ ವರುಷ ಮೆಣಸು, ಮೂಲಂಗಿ, ಬದನೆ, ಅಲಸಂಡೆ, ನಾಲ್ಕು ವಿಧದ ಬೀನ್ಸ್ ಬರೋಬ್ಬರಿ. ಈ ವರುಷ ಬದನೆ, ಅಲಸಂಡೆ, ಅವರೆಯ ಸರದಿ. ಟೊಮ್ಯಾಟೋ ಗಿಡಗಳದ್ದೇ ಸಿಂಹಪಾಲು. 'ದಿನಂಪ್ರತಿ ಎಂಟ್ಹತ್ತು ಟೊಮೆಟೋ ಸಿಕ್ಕೇ ಸಿಕ್ತದೆ. ಅದರ ಸಲಾಡ್, ಸಾಸ್ ಇಲ್ಲದೆ ಊಟವಿಲ್ಲ'. ಕುಂಡಗಳಲ್ಲಿ ಬ್ರಾಹ್ಮಿ, ಒಂದೆಲಗ. ಈಗ 'ಯಾಮ್ ಬೀನ್' ಎಂಬ ಗೆಡ್ಡೆತರಕಾರಿ ಅವರ ತೋಟದ ಹೊಸ ಅತಿಥಿ!

ಒಂದು ಕೊತ್ತಂಬರಿ ಸೊಪ್ಪಿನ ಕಟ್ಟು, ಶುಂಠಿಯ ತುಂಡು ಬೇಕೆಂದರೂ, ಬೈಕ್ ಚಾಲೂ ಮಾಡಿ ಮಾರುಕಟ್ಟೆಗೆ ಹೋಗಬೇಕು. ಟ್ರಾಫಿಕ್ ಜಾಂ ಬೇರೆ. ವಾಹನ ನಿಲುಗಡೆಗೆ ಮೊದಲೇ ಸ್ಥಳವಿಲ್ಲ. ಯಾರ್ಯಾರದ್ದೋ ಪಿರಿಪಿರಿ! ಒಂದಷ್ಟು ಮಾಲಿನ್ಯ ಸೇವನೆ. ಜತೆಗೆ ಟೆನ್ಶನ್. ಇದನ್ನೆಲ್ಲಾ ಅನುಭವಿಸಿ ಮನೆ ಸೇರಿದಾಗ ಕೊತ್ತಂಬರಿ ಸೊಪ್ಪು ಬಾಡಿರುತ್ತದೆ! ಪೇಟೆಯ ಜೀವನವನ್ನು ತಲ್ಲೂರು ಕಣ್ಣಿಗೆ ಕಟ್ಟುವಂತೆ ಹೇಳುತ್ತಾರೆ.

ಮಾತನಾಡುತ್ತಿದ್ದಂತೆ - 'ಶುಂಠಿ ನಮ್ಮ ನಿರಖು ಠೇವಣಿ. ಇಷ್ಟದ ದಾಲ್ ತೊವ್ವೆಗೆ ಇದಿಲ್ಲದೆ ರುಚಿಯೇ ಇಲ್ಲ. ಹಿತ್ತಿಲಿನಲ್ಲಿದೆ, ಬೇಕಾದಾಗ ಠೇವಣಿ ಮುರಿದರಾಯಿತು' ಮನೆಯೊಡತಿ ಅನಿತಾ ದನಿಸೇರಿಸಿದರು.

'ಮಂಗಳೂರಿಗೆ ಒಂದು ದಿವಸ ತರಕಾರಿಯ ಲಾರಿ ಬಾರದಿದ್ದರೆ ಇಲ್ಲಿನ ಅಡುಗೆ ಮನೆಗಳಲ್ಲಿ ಸಾಂಬಾರು ಆಗುವುದೇ ಇಲ್ಲ'! ಹತ್ತು ರೂಪಾಯಿಯ ತರಕಾರಿಗೆ ನೂರು ರೂಪಾಯಿ ಆಗುತ್ತದೆ - ವಾಸ್ತವದತ್ತ ಬೆಳಕು ಚೆಲ್ಲುತ್ತಾರೆ.

ನಿತ್ಯ ಬೆಳಿಗ್ಗೆ ಒಂದಷ್ಟು ಹೊತ್ತು ಗಿಡಗಳ ಜತೆ. 'ಇದೆಲ್ಲಾ ಸಹಾಯಕರನ್ನು ನಂಬಿ ಮಾಡುವ ಕೆಲಸವಲ್ಲ. ಸ್ವತಃ ಮಾಡಿದಾಗ ತರಕಾರಿಯ ರುಚಿಯೇ ಬೇರೆ'. 'ತನ್ನ ಮಕ್ಕಳಿಗಿಂತ ಹೆಚ್ಚು ಗಿಡಗಳನ್ನು ಪ್ರೀತಿಸುತ್ತಾರೆ. ಒಂದು ಗಿಡಕ್ಕೆ ಏಟಾದರೂ ಅವರು ಸಹಿಸುವುದಿಲ್ಲ.' ಗಂಡನ ಕೆಲಸಕ್ಕೆ ಅನಿತಾ ಸಹಮತ.

ಸರಿ, ತರಕಾರಿ ಬೆಳೆಯುತ್ತಾರೆ. ಇಬ್ಬರು ಮಕ್ಕಳು ಸೇರಿದಂತೆ ಒಟ್ಟು ನಾಲ್ಕು ಮಂದಿ. ಇಷ್ಟು ಮಂದಿಗೆ ಇಷ್ಟೊಂದು ತರಕಾರಿ ಬೇಕಾ? ಪ್ರಶ್ನೆ ಸಹಜವಾಗಿ ಮೂಡುತ್ತದೆ. 'ಬ್ಯಾಂಕಿನ ಕ್ಯಾಂಟಿನ್ಗೆ ಈ ತರಕಾರಿ. ಸಾಂಬಾರಿಗೂ ಇದೇ. ಬ್ಯಾಂಕಿನಲ್ಲಿ ನನ್ನ ತರಕಾರಿಗೆ ಗಿರಾಕಿಗಳಿದ್ದಾರೆ. ಹಣಕ್ಕಾಗಿ ಅಲ್ಲ. ಇನ್ನೂ ಹೆಚ್ಚು ಉಳಿದರೆ ಗಣಕಯಂತ್ರದಲ್ಲಿ 'ತಾಜಾ ತರಕಾರಿ ಕ್ಯಾಂಟಿನ್ನಲ್ಲಿ ಲಭ್ಯ' ಅಂತ ಬರೆದುಬಿಡುತ್ತೇನೆ. ಪ್ರತೀ ಟೇಬಲ್ಗೂ ಗಣಕಯಂತ್ರವಿದೆ. ತೆರೆದಾಕ್ಷಣ ತರಕಾರಿ ಕತೆ ಬಂದುಬಿಡುತ್ತದೆ'. ನಿರ್ವಿಷ ತರಕಾರಿ ಹಂಚುವ ತಲ್ಲೂರು ತಂತ್ರವಿದು.

ಬಸವರಾಜ್ ಮಾಲಿ. ಜನರೇಟರ್ ಉಸ್ತುವಾರಿಯ ಮಹೇಶ್ - ಇವರಿಬ್ಬರು ತಲ್ಲೂರು ತರಕಾರಿ ಕೃಷಿಯಲ್ಲಿ ಸಹಕರಿಸುವವರು. ಹಗಲುಹೊತ್ತು ಗಿಡಗಳ ಉಸ್ತುವಾರಿ ಇವರದ್ದೇ. 'ಸಾಹೇಬ್ರು ಏನೋ ಮಾಡ್ತಾರೆ' ಅಂತ ಗೊತ್ತಿದೆ. 'ಮೇಲಧಿಕಾರಿ ಅಲ್ವಾ' ಅಂತ ಸ್ಪಂದಿಸುತ್ತಾರೆ. ಈಗಂತೂ ತರಕಾರಿ ಕೃಷಿಯಲ್ಲಿ ಅವರು ಸ್ಪೆಷಲಿಸ್ಟ್

ತರಕಾರಿ ಕೃಷಿಗೆ ಯಾವುದೇ ರಾಸಾಯನಿಕ ಇದುವರೆಗೆ ಬಳಸಿಲ್ಲ. ನೈಸರ್ಗಿಕವಾಗಿ ಬೆಳೆದಾಗ ತರಕಾರಿ ರುಚಿ. ಕೆಲವೊಂದು ಕೀಟಗಳು ಬಾಧೆ ಕೊಡುತ್ತಿವೆ. ವಿಷರಹಿತ ಚಿಕಿತ್ಸೆಯ ಹುಡುಕಾಟದಲ್ಲಿದ್ದಾರೆ.

ತಲ್ಲೂರು ಕೃಷಿಕ ಅಲ್ಲ! ಮೂಡಿಗೆರೆಯಲ್ಲಿ ಬ್ಯಾಂಕಿನ ಕೃಷಿ ವಿಭಾಗದ ಕ್ಷೇತ್ರಾಧಿಕಾರಿಯಾಗಿದ್ದರು. ಕೃಷಿಕರೊಂದಿಗೆ ಬೆರೆಯುವ ಅವಕಾಶ ಪ್ರಾಪ್ತವಾದುದರಿಂದ, 'ನಾನೂ ಕೃಷಿ ಮಾಡಬೇಕು' ಎಂಬು ತುಡಿತ ಶುರುವಾಗಿತ್ತು. ಅದು ಅನುಷ್ಠಾನಕ್ಕೆ ಬಂದುದು ಮಂಗಳೂರಿನಲ್ಲಿ.

ಮನೆಸುತ್ತ ತರಕಾರಿ ಗಿಡಗಳು ತುಂಬಿವೆ. 'ಜಾಗವಿಲ್ಲವಲ್ಲಾ' ಕೊರಗು. ತಾರಸಿಯಲ್ಲಿ ಬೆಳೆಸಿದರೆ ಹೇಗೆ? ಆಲೋಚನೆಯಲ್ಲಿದ್ದಾರೆ ಏಜಿಯಂ. ತಲ್ಲೂರು ದಂಪತಿಗಳ 'ತರಕಾರಿ ಬ್ಯಾಂಕಿಂಗ್'ನಲ್ಲಿ ನೋಡುವಂತಹ, ತಿಳಿದುಕೊಳ್ಳುವಂತಹ ವಿಚಾರ ಇಲ್ಲದಿರಬಹುದು. ಆದರೆ ಕುತೂಹಲ. ಪ್ರಯತ್ನ ಮತ್ತು ಪ್ರಯೋಗ ಸೇರಿದೆ.

Sunday, November 29, 2009

ಎಳನೀರ ಕಣ್ಣೀರಿಗೆ ಶಾಪಮೋಕ್ಷ!

ತುಮಕೂರು ಜಿಲ್ಲೆಯ ಬಿಳಿಗೆರೆಯ 'ಎಳನೀರು ಮೇಳ'ಕ್ಕೆ ಹೋಗುತ್ತಿದ್ದಾಗ ಮಾರ್ಗ ಮಧ್ಯದಲ್ಲಿ ಬಸ್ಸಿಗೆ ವಿರಾಮವಿತ್ತು. ನಮ್ಮ ಸರಕಾರಿ ಬಸ್ಸೇ ಹಾಗಲ್ವಾ.. 'ಅವರಿಗಿಷ್ಟ ಬಂದಲ್ಲಿ ನಿಲುಗಡೆ, ಊಟ-ತಿಂಡಿ'! 'ಬನ್ರಿ..ಎಳನೀರು ಕುಡೀರಿ..ಇದು ಊರಿದ್ದು..ಹದಿನಾರು ರೂಪಾಯಿ. ಇದು ಹಾಸನ ಕಡೆಯವು..ಹತ್ತೇ ರೂಪಾಯಿ..' ಎಳನೀರನ್ನು ಪೇರಿಸಿಟ್ಟ ಗಾಡಿವಾಲಾನಿಂದ ನಾನ್ಸ್ಟಾಪ್ ಉವಾಚ!

'ಎಳನೀರಿಗೆ ಹದಿನಾರು ರೂಪಾಯಿ'! 'ಗೆಂದಾಳಿ'ಗೆ ಇಪ್ಪತ್ತಂತೆ! ಇದೇ ಗುಂಗಿನಲ್ಲಿ ಬಿಳಿಗೆರೆ ಎಳನೀರು ಮೇಳ ತಲುಪಿದಾಗ, 'ಬನ್ರಿ ಕೇವಲ ಐದು ರೂಪಾಯಿ.. ಮೇಳದ ಆಫರ್.. ಮತ್ತದೇ ಕೂಗು! ಮತ್ತೆ ತಿಳಿಯಿತು - 'ಇಲ್ಲಿ ಎಳನೀರು ಬಳಕೆಯೇ ಇಲ್ಲ.' ದಶಕಕ್ಕಿಂತಲೂ ಹಿಂದೆ ತೆಂಗಿನಕಾಯಿಯನ್ನು ಕೇಳುವವರು ಇಲ್ಲದೇ ಇದ್ದ ಹೊತ್ತಲ್ಲಿ ದಕ್ಷಿಣ ಕನ್ನಡದಲ್ಲಿ 'ಬೊಂಡ ಮೇಳ' ಯಶಸ್ವಿಯಾಗಿತ್ತು.

'ಸರ್.. ಇಲ್ಲಿ ಎಳ್ನೀರ್ ಕುಡಿಯೋರಿಲ್ಲ. ಎಳ್ನೀರ್ ಕೀಳೋದು ಬದುಕಿನಲ್ಲಿ ದಟ್ಟ ದರಿದ್ರ ಸ್ಥಿತಿ ತಲುಪಿರೋರು ಮಾತ್ರ ಎಂಬ ಭಾವನೆ ಇದೆ. ಒಂದು ವೇಳೆ ಕುಡಿಯುವುದಿದ್ದರೂ ಮರದಿಂದ ಬಿದ್ದವನ್ನು ಮಾತ್ರ ಕುಡಿಯೋದು' ಮೇಳದ ಸಂಘಟಕ ಬಿಳಿಗೆರೆ ಕೃಷ್ಣಮೂರ್ತಿ ಆಶಯವನ್ನು ಕಟ್ಟಿಕೊಟ್ಟರು.

ತುಮಕೂರು ಜಿಲ್ಲೆಯಲ್ಲಿ ತೆಂಗನ್ನು ಕೊಬ್ಬರಿ ಮಾಡಿ ಮಾರುವ ಪಾರಂಪರಿಕ ಪದ್ಧತಿಗೆ ಜನ ಒಗ್ಗಿಹೋಗಿದ್ದಾರೆ. ಆರ್ಥಿಕವಾಗಿ ಕೃಷಿಕರಿಗಿದು ಆಧಾರ. ಇಲ್ಲಿನ ಬಹುಪಾಲು ಕೊಬ್ಬರಿಗೆ ಉತ್ತರ ಭಾರತ ಮಾರುಕಟ್ಟೆ. ತುಮಕೂರು, ಪಕ್ಕದ ಹಾಸನ ಜಿಲ್ಲೆಯವರೆಗಿನ ಕೊಬ್ಬರಿಗಳೆಲ್ಲಾ 'ತುಮಕೂರು ಕೊಬ್ಬರಿ' ಅಂತಲೇ ಪ್ರಸಿದ್ಧ.

ದರದಲ್ಲಿ ಸ್ಥಿರತೆಯಿಲ್ಲ. ಈ ವರುಷ ಬಂಪರ್ ಬೆಲೆಯಾದರೆ ಮುಂದಿನ ವರುಷ ಕಣ್ಣೀರು! ಎಲ್ಲವೂ ಉದ್ದಿಮೆಗಳ ಮತ್ತು ವ್ಯಾಪಾರಿಗಳ ಮುಷ್ಠಿಯೊಳಗೆ! 'ಕೊಬ್ಬರಿ ಕ್ವಿಂಟಾಲಿಗೆ ಎರಡೂವರೆ ಸಾವಿರ ಆದುದೂ ಇದೆ. ಕನಿಷ್ಠ ಆರು ಸಾವಿರವಾದರೂ ಸಿಗಲೇ ಬೇಕು. ಪ್ರಸ್ತುತ ನಾಲ್ಕೂವರೆ ಸಾವಿರದ ಹತ್ತಿರ ದರವಿದೆ' ಅಂಕಿಅಂಶ ಮುಂದಿಡುತ್ತಾರೆ ಬಿಳಿಗೆರೆಯ ಕೃಷಿಕ ಮುಹಾಲಿಂಗಯ್ಯ.

ಹತ್ತಿರದಲ್ಲೇ ಹೆದ್ದಾರಿಯಿದ್ದರೂ ಎಳನೀರು ಮಾರಾಟದ ಒಂದೇ ಒಂದು 'ಗಾಡಿ' ಕಾಣ ಸಿಗುವುದಿಲ್ಲ. 'ಎಳನೀರಿನಲ್ಲಿ ನಷ್ಟ - ಕೊಬ್ಬರಿಯಲ್ಲಿ ಲಾಭ' ಎನ್ನುವ ಭಾವನೆ. ಎಳನೀರಿನಿಂದ ಕಾಯಿ ಆಗಲು ಏಳೆಂಟು ತಿಂಗಳು ಬೇಕು. ಕಿತ್ತ ಕಾಯಿಗೆ ಮತ್ತೆ ಅಷ್ಟೇ ತಿಂಗಳು ಗೃಹಬಂಧನ. ಸುಮಾರು ಒಂದೂವರೆ ವರುಷದ ಪ್ರಕ್ರಿಯೆ. ನಂತರವಷ್ಟೇ ಇಳಿಸಿ ಸಿಪ್ಪಿ ಬಿಚ್ಚಿ, ಗೆರಟೆ ಕಳಚಿದ ಕೊಬ್ಬರಿ ಮಾರುಕಟ್ಟೆಗೆ.

ಮೇಳದಲ್ಲಿ ಭಾಗವಹಿಸಿದ ಮೀಯಪದವಿಯ ಡಾ.ಡಿ.ಕೆ.ಚೌಟ ಅವರು ಮುಂದಿಟ್ಟ ಸೂಕ್ಷ್ಮ ಲೆಕ್ಕಾಚಾರವು ಮೇಳ ಮುಗಿದ ನಂತರವೂ ಮಾತಿನ ವಿಷಯವಾಗಿತ್ತು - 'ಕೊಬ್ಬರಿಗಿಂತ ಎಳನೀರು ಮಾರಾಟ ಮಾಡಿದರೆ ಒಂದೂವರೆ ವರುಷ ಮೊದಲೇ ಹಣ ಸಿಗುತ್ತದೆ. ಕೊಬ್ಬರಿ ಮಾಡಿಯೇ ಮಾರಾಟ ಮಾಡಬೇಕೆಂದರೆ ಕಾಯಬೇಕು. ನಿರೀಕ್ಷಿತ ದರ ಸಿಕ್ಕರೆ ಓಕೆ. ಇಲ್ಲದಿದ್ದರೆ ಅದೃಷ್ಟವನ್ನು ಯಾಕೆ ಹಳಿಯಬೇಕು? ಎಳನೀರಿಗೆ ಆರು ರೂಪಾಯಿ ಸಿಕ್ಕರೆ, ಕೊಬ್ಬರಿಗೆ ಏಳು ಸಿಗಲೇ ಬೇಕಲ್ವಾ.. ಅಷ್ಟು ಸಿಗುತ್ತಾ? ನನ್ನ ಅನುಭವದಂತೆ ಎಳನೀರು ಕಿತ್ತರೆ ಮುಂದಿನ ಋತುವಿನಲ್ಲಿ ಹೆಚ್ಚು ಕಾಯಿ ಹಿಡಿವ ಕ್ಷಮತೆಯನ್ನು ಮರವೇ ವೃದ್ಧಿಸಿಕೊಳ್ಳುತ್ತದೆ. ತೆಂಗು ಮಾಗುವ ತನಕದ ನೀರು-ಗೊಬ್ಬರ ಪರೋಕ್ಷ ಉಳಿತಾಯವಲ್ವಾ'.

ಇಲ್ಲಿ ಎಳನೀರು ಮಾರಲು ಕೆಲವು ಪ್ರಾಕ್ಟಿಕಲ್ ಸಮಸ್ಯೆಯಿದೆ. ಮರವೇರಲು ಜನ ಸಿಕ್ಕದೇ ಇರುವುದು ಒಂದಾದರೆ, ಎಳನೀರು ಮಾರುವವ ದರಿದ್ರ ಸ್ಥಿತಿಗೆ ತಲುಪಿದವ ಎಂಬ ಮಾನಸಿಕ ತಡೆ! (ಮೆಂಟಲ್ ಬ್ಲಾಕ್) ಈ ಸ್ಥಿತಿಯನ್ನು ಮೇಳದ ಸಾರಥ್ಯ ವಹಿಸಿದ ಕೃಷ್ಣ ಮೂರ್ತಿ, ವಿಶ್ವನಾಥ್ ಮತ್ತು ಸಮಾನಾಸಕ್ತರು ಬದಲಾಯಿಸುವ ನಿರ್ಧಾರ ಮಾಡಿದರು. ಬಿಳಿಗೆರೆಯಲ್ಲೇ 'ಎಳನೀರ್ ಊರ್' ಎಂಬ ಮಾರಾಟ ಮಳಿಗೆ ಆರಂಭ. 'ಎಳನೀರು ಕುಡಿಯಿರಿ - ಆರೋಗ್ಯ ವೃದ್ಧಿಸಿಕೊಳ್ಳಿ' ಅಂತ ಪ್ರಚಾರ ಫಲಕಗಳು. 'ಕೆಲವರು ಗೇಲಿ ಮಾಡಿದರು - ಇನ್ನೂ ಕೆಲವರು ಮುಖ ತಿರುಗಿಸಿದರು' ನೆನಪಿಸುತ್ತಾರೆ ಕೃಷ್ಣ ಮೂರ್ತಿ.

ಮಾರಾಟ ವ್ಯವಸ್ಥೆಗಾಗಿ 'ಸೌಹಾರ್ದ ಸಹಕಾರಿ ಸಂಘ' ಸ್ಥಾಪನೆ. ಸದಸ್ಯತನಕ್ಕೆ ಮುನ್ನೂರೈವತ್ತು ರೂಪಾಯಿ. ಈಗಾಗಲೇ ಸಂಘಕ್ಕೆ ನಲವತ್ತು ಮಂದಿ (ಸದಸ್ಯರು) ಎಳನೀರು ನೀಡಲು ಮುಂದಾಗಿದ್ದಾರೆ! ಎಳನೀರು ಕೊಯ್ಲಿಗೆ ಸಂಘದಿಂದ ನಿಯುಕ್ತಿ ಹೊಂದಿದ ಸಿಬ್ಬಂದಿ. ಕೀಳಲು ಒಂದು ರೂಪಾಯಿ. ಕೆತ್ತಿ ಕೊಡಲು ಪುನಃ ಒಂದು ರೂಪಾಯಿ. ಒಂಭತ್ತು ರೂಪಾಯಿಗೆ ಮಾರಾಟ. ದಿನಕ್ಕೆ ಏನಿಲ್ಲವೆಂದರೂ ನೂರಕ್ಕೂ ಮಿಕ್ಕಿ ಮಾರಾಟ.

'ರೊಕ್ಕ ತಕ್ಷಣ ಸಿಗುತ್ತದಲ್ವಾ. ಹಾಗಾಗಿ ಎಳನೀರು ತಂದು ಕೊಡುವಷ್ಟು ಕೆಲವು ಕೃಷಿಕರು ತಯಾರಾಗಿದ್ದಾರೆ. ಇನ್ನಷ್ಟು ಸಿದ್ಧರಾಗುತ್ತಿದ್ದಾರೆ' ಎನ್ನುತ್ತಾರೆ ಸಂಘದ ಅಧ್ಯಕ್ಷ ಶಿವಶಂಕರಪ್ಪ. ಎಳನೀರು ಒದಗಿಸುವ ರೈತರ ಸಂಖ್ಯೆ ಹೆಚ್ಚಾದರೆ ತುಮಕೂರಿನಲ್ಲೂ ಮಳಿಗೆಯೊಂದನ್ನು ತೆರೆಯುವ ಆಸೆ ಇವರಿಗಿದೆ. ಹೆದ್ದಾರಿಯಲ್ಲಿ ಮೂರ್ನಾಲ್ಕು ಕಡೆಗಳಲ್ಲಿ ಮಳಿಗೆ ತೆರೆಯುವುದು ಸಂಘದ ನಿಕಟ ಭವಿಷ್ಯದ ಯೋಜನೆ-ಯೋಚನೆ.

ಎಳನೀರು ಕುಡಿಯುವವರ ಸಂಖ್ಯೆ ಹೆಚ್ಚಾಗುತ್ತಿದೆಯಂತೆ. ಬೆಳೆದ ಎಲ್ಲವನ್ನೂ ಕೊಬ್ಬರಿ ಮಾಡಿದರೆ ಉಳಿಗಾಲವಿಲ್ಲ ಎಂಬ ಸತ್ಯ ಕೆಲವು ಕೃಷಿಕರಿಗೆ ಮನವರಿಕೆಯಾಗಿದೆ. ಬೆಳೆದ ಅರ್ಧದಷ್ಟಾದರೂ ಎಳನೀರು ಮಾರಾಟ, ಮೌಲ್ಯವರ್ಧನೆ ಮಾಡುವ ಮೂಲಕವೋ ಮಾರುಕಟ್ಟೆ ಮಾಡಲೇಬೇಕು - ಎಂಬ ವಿಚಾರ ತಲೆಯೊಳಗೆ ಹೊಕ್ಕಿರುವುದು ಸಂತೋಷ ಸುದ್ದಿ.

ಇದೆಲ್ಲಾ ಒಬ್ಬಿಬ್ಬರು ಮಾಡುವಂತಹುದಲ್ಲ. ಸಮಷ್ಠಿ ಕೆಲಸ. ಆಗಲೇ ಸಮಸ್ಯೆಗೆ ಪರಿಹಾರ. ಎಳನೀರು ಮಾರಾಟ ಸಾಧ್ಯವೇ ಇಲ್ಲ ಎನ್ನುವ ಬಿಳಿಗೆರೆಯಲ್ಲಿ 'ಎಳನೀರು ಸ್ಟಾಲ್' ಶುರುವಾದುದು ಇತಿಹಾಸ. ಮೀಯಪದವಿನ ಡಾ.ಚೌಟರು ತಮ್ಮೂರಿನಲ್ಲಿ ಎಳನೀರಿಗೆ ಮಾರುಕಟ್ಟೆಯನ್ನು ರೂಪಿಸಿರುವ ಯಶೋಗಾಥೆ ಮುಂದಿದೆ. ಇಲ್ಲಿ ಎಳನೀರು ಕುಡಿಯುವವರು ಯಾರು ಗೊತ್ತಾ - ಕೂಲಿ ಕಾರ್ಮಿಕರು, ಮಧ್ಯಮ ವರ್ಗದ ಜನರು!

'ನಾವೂ ಮೀಯಪದವಿನಂತೆ ಮಾರುಕಟ್ಟೆ ಹಿಡಿದು ಬದುಕಿನ ನರಳಾಟವನ್ನು ಯಾಕೆ ಕಡಿಮೆಗೊಳಿಸಬಾರದು' ಮೇಳದಲ್ಲಿ ಭಾಗವಹಿಸಿದ್ದ ಹಿರಿಯ ಸಾಹಿತಿಗಳಾದ ಲಿಂಗದೇವರು ಹಳೆಮನೆ ರೈತರಿಗೆ ವಿಶ್ವಾಸ ತುಂಬುತ್ತಾ, 'ತೆಂಗು, ಕೊಬ್ಬರಿ ಅಂತ ವ್ಯಾಪಾರಿಗಳಲ್ಲಿ ಮುಂಗಡ ತೆಕ್ಕೊಂಡು, ಸಾಲ ಮಾಡಿ, ಅದರ ಬಡ್ಡಿ ಕಟ್ಟಲೂ ಹರ ಸಾಹಸ ಪಡುತ್ತಾ ಜೀವಿಸೋದಕ್ಕಿಂತ ಸುಲಭದಲ್ಲಿ ರೊಕ್ಕ ಬರುವ ಎಳನೀರನ್ನು ಮಾರ್ರಿ. ಮೌಢ್ಯವನ್ನು ಕಟ್ಟಿಡಿ' ಎಂದರು. ಮುಂದಿನ ಬದಲಾವಣೆ ಕಣ್ಣ ಮುಂದಿದೆ.
ಇಷ್ಟೆಲ್ಲಾ ಮಾಡಿದರೂ, 'ವಾರಕ್ಕೆ ಕನಿಷ್ಠ ಹತ್ತು ಸಾವಿರ ಎಳನೀರಿಗೆ ಬೇರೆಡೆಯಿಂದ ಬೇಡಿಕೆಯಿದೆ. ಎಳನೀರೂ ಮರದಲ್ಲಿದೆ. ಆದರೆ ರೈತರು ಕೊಡೊಲ್ಲ' ರೈತರ ಮನೋಸ್ಥಿತಿಗೆ ವಿಷಾದಿಸುತ್ತಾರೆ ಬಿಳಿಗೆರೆ ಕೃಷ್ಣ ಮೂರ್ತಿ..

Wednesday, November 25, 2009

ಸಾವಯವದ ಹಾದಿಯಲ್ಲಿ - ಪುಸ್ತಕ

'ಬರೆಯುವವರು ಬೆಳೆಯುವುದಿಲ್ಲ. ಬೆಳೆಯುವವರು ಬರೆಯುವುದಿಲ್ಲ' ಎಂಬ ಮಾತಿಗೆ ಬೆಳಗಾವಿಯ ಈರಯ್ಯ ಕಿಲ್ಲೇದಾರ್ ಒಂದು ಅಪವಾದ. ಸಾವಯವ ಕೃಷಿ ಅಂದರೆ ಜೀವನಧರ್ಮ ಎನ್ನುವುದು ಅವನ ನಂಬಿಕೆ. ಕಳೆದ ಎರಡು ದಶಕಗಳಿಂದ ಒಂದೂವರೆ ಎಕರೆ ಹಾಗೂ ತಮ್ಮ ಬದುಕು-ಚಿಂತನಾಕ್ರಮದಲ್ಲಿ ಕಿಲ್ಲೇದಾಎದ ನಡೆಸುತ್ತಿರುವ ಸಾವಯವ ಪ್ರಯೋಗಗಳು ಅವರಿಗೆ ಖುಷಿ-ನೆಮ್ಮದಿ. ಈ ಹೂರಣವೇ ಪುಸ್ತಕದ ಗಟ್ಟಿತನ. ಕಾಲೇಜು ವ್ಯಾಸಂಗದ ಬಳಿಕ ಒಕ್ಕಲುತನದ ಮೇಲಿನ ಒಲುಮೆಯಿಂದ ಹಳ್ಳಿಗೆ ಮರಳಿದ ಅವರು ಸಾವಯವ ಚಿಂತನೆಗಳಿಂದ ಪ್ರಭಾವಿತರಾದರು. ಸಾವಯವ ಕೃಷಿ ಕೇವಲ ಹೊಲಕ್ಕಷ್ಟೇ ಸೀಮಿತವಾಗಿರಬಾರದು, ಅದು ನಾವು ಯೋಚಿಸುವ ಕ್ರಮ ಹಾಗೂ ನಾವು ಬದುಕುವ ರೀತಿಗೂ ಅನ್ವಯಿಸಬೇಕು ಎಂಬುದು ಅವರ ನಿಲುವು.

ಧಾರವಾಡದ ಕೃಷಿ ಮಾಧ್ಯಮ ಕೇಂದ್ರದ ಪ್ರಕಟಣೆಯಿದು. ವಿಷಯುಕ್ತ ಒಕ್ಕಲುತನ ಮಾಡುತ್ತಾ ಹೊಸ ಹೊಸ ಪ್ರಯೋಗಗಳಲ್ಲಿ ತೊಡಗಿ ನೆಮ್ಮದಿಯ ಬದುಕು ಸಾಕಾರಗೊಳಿಸಿಕೊಂಡವರ ಅನುಭವ-ಚಿಂತನೆಯ ಮೇಲೆ ಬೆಳಕು ಚೆಲ್ಲುವುದು - ಪ್ರಕಟಣಾ ಹಿಂದಿನ ಕೇಂದ್ರದ ಉದ್ದೇಶ. ಹತಾಶೆ ಕವಿದಿರುವ ಒಕ್ಕಲುತನದಲ್ಲಿ ಸ್ಫೂರ್ತಿಯ ಚಿಲುಮೆಗಳಂತಿರುವ ಮೌನ ಸಾಧಕರ ಕುರಿತಾದ ಪುಸ್ತಕ ಸರಣಿಯಲ್ಲಿ ಇದು ಮೂರನೇ ಪುಸ್ತಕ. ಈ ಹಿಂದೆ 'ಕಲ್ಲು ಹಾಸಿನ ಮೇಲೆ ಹಸಿರು ಹೊದಿಕೆ' ಮತ್ತು 'ಗುಡ್ಡದ ಮೇಲಿನ ಏಕ ವ್ಯಕ್ತಿ ಸೈನ್ಯ' ಎಂಬೆರಡು ಪುಸ್ತಕಗಳು ಈ ಸರಣಿಯಲ್ಲಿ ಬೆಳಕು ಕಂಡಿವೆ.

'ಸಾವಯವದ ಹಾದಿಯಲ್ಲಿ' ಪುಸ್ತಕದ ಬೆಲೆ ರೂ.20. ಪುಟ 28.

ನೀವೇನು ಮಾಡಬಹುದು:
* ಕೃಷಿ ಮಾಧ್ಯಮ ಕೇಂದ್ರದ ಈ ವಿಶಿಷ್ಟ ಪುಸ್ತಕ ಸರಣಿಯ ಪ್ರಕಟಣೆಗೆ ಪ್ರಾಯೋಜಿಸಬಹುದು * ಗ್ರಾಮೀಣ ಭಾಗದಲ್ಲಿ ಎಲೆಮರೆಯ ಕಾಯಂತಿರುವ ಸಾಧಕರನ್ನು ಕೇಂದ್ರಕ್ಕೆ ತಿಳಿಸಬಹುದು.

ವಿಳಾಸ: ಮಾಧ್ಯಮ ಕೇಂದ್ರ, 119, 1ನೇ ಮುಖ್ಯರಸ್ತೆ, 4ನೇ ಅಡ್ಡರಸ್ತೆ, ನಾರಾಯಣಪುರ, ಧಾರವಾಡ - 580 008, ದೂರವಾಣಿ : 0836-೨೪೪೪೭೩೬
agriculturalmedia@gmail.com - www.farmedia.com

Thursday, November 12, 2009

ಕಾಡು ಮಾವು' ಅನಾವರಣ

ಚಿತ್ರ ವಿವರ: ಹಿರಿಯ ಪತ್ರಕರ್ತ ನಾಗೇಶ ಹೆಗಡೆಯವರಿಂದ 'ಕಾಡು ಮಾವು' ಪುಸ್ತಕದ ಅನಾವರಣ. ಚಿತ್ರದಲ್ಲಿ ನಾ. ಕಾರಂತ ಪೆರಾಜೆ, ಈರಯ್ಯ ಕಿಲ್ಲೇದಾರ್, ಶ್ರೀ ಪಡ್ರೆ, ವಾಸುದೇವ ಎಂ. ಹೆಗಡೆ, ನಾಗೇಶ ಹೆಗಡೆ ಮತ್ತು ನಾಗೇಂದ್ರ ಸಾಗರ್ ಇವರನ್ನು ಕಾಣಬಹುದು.)
ನಾ. ಕಾರಂತ ಪೆರಾಜೆಯವರ ಕೃಷಿ ಯಶೋಗಾಥೆಗಳ ಸಂಕಲನ 'ಕಾಡು ಮಾವು' ಕೃತಿಯು ಇತ್ತೀಚೆಗೆ ಶಿರಸಿ ಸನಿಹದ ಬೆಂಗಳಿಯಲ್ಲಿ ಅನಾವರಣಗೊಂಡಿತು. ಧಾರವಾಡದ ಕೃಷಿ ಮಾಧ್ಯಮ ಕೇಂದ್ರದ ಒಂಭತ್ತನೇ ವಾರ್ಷಿಕ ಸಮಾರಂಭದಲ್ಲಿ ಖ್ಯಾತ ಪತ್ರಕರ್ತ ನಾಗೇಶ ಹೆಗಡೆ ಬಿಡುಗಡೆಗೊಳಿಸಿದರು.
ಹಿರಿಯ ಕೃಷಿಕರಾದ ವಾಸುದೇವ ಎಂ. ಹೆಗಡೆ ಇವರ ಗೌರವಾಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಜಲತಜ್ಞ ಶ್ರೀ ಪಡ್ರೆ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಈರಯ್ಯ ಕಿಲ್ಲೇದಾರ್ ಅವರ 'ಸಾವಯವದ ಹಾದಿ' ಪುಸ್ತಕವೂ ಅನಾವರಣಗೊಂಡಿತು.
ಸಮಾರಂಭದಲ್ಲಿ ಕೃಷಿ ಮಾಧ್ಯಮ ಕೇಂದ್ರದ ಈ ಸಾಲಿನ 'ಕೃಷಿ ಪತ್ರಿಕೋದ್ಯಮ ಪ್ರಶಸ್ತಿ'ಯನ್ನು ಸಾಗರದ ನಾಗೇಂದ್ರ ಸಾಗರ್ ಅವರಿಗೆ ಪ್ರದಾನಿಸಲಾಯಿತು. ಅಡಿಕೆ ಪತ್ರಿಕೆಯಲ್ಲಿ ಪ್ರಕಟವಾದ 'ವರಿಯಿಲ್ಲದ ರಸಾವರಿ' ಲೇಖನಕ್ಕೆ ಈ ಪ್ರಶಸ್ತಿ ಲಭಿಸಿದೆ. ಕಾಮ್ ಫೆಲೋ ಸರ್ಟಿಫಿಕೇಟ್ ಪ್ರದಾನ, ಅಡಿಕೆ ಪತ್ರಿಕೆಯಲ್ಲಿ ಪ್ರಕಟವಾದ ಕಾಮ್ ಅಭ್ಯರ್ಥಿಗಳ ಅತ್ಯುತ್ತಮ ಬರೆಹಗಳಿಗೆ ಬಹುಮಾನ ವಿತರಿಸಲಾಯಿತು.
ಕೃಷಿ ಮಾಧ್ಯಮ ಕೇಂದ್ರದ ಅಧ್ಯಕ್ಷೆ ಅನಿತಾ ಪೈಲೂರು ಸ್ವಾಗತಿಸಿದರು. ಪತ್ರಕರ್ತ ಪೂರ್ಣಪ್ರಜ್ಞ ಬೇಳೂರು ವಂದಿಸಿದರು. ಪತ್ರಕರ್ತೆ ಅನುಸೂಯಾ ಶರ್ಮಾ ನಿರ್ವಹಿಸಿದರು.

Wednesday, November 11, 2009

ಮಕ್ಕಳಿಗೂ ಒಂದು ಮನಸ್ಸಿದೆ!

'ಮಕ್ಕಳೇ.. ಮಹಾತ್ಮ ಗಾಂಧೀಜಿ ಭಾರತಕ್ಕೆ ಸ್ವಾತಂತ್ರ್ಯ ತಂದು ಕೊಟ್ಟರು ಚಾಚಾ ನೆಹರು ಗೊತ್ತಲ್ಲಾ.. ಇಂದು ಅವರ ಜನ್ಮ ದಿನಾಚರಣೆ.. ಅವರು ಮಕ್ಕಳನ್ನು ಪ್ರೀತಿಸುತ್ತಿದ್ದರು.. ಹಾಗಾಗಿ ಇಂದು ಮಕ್ಕಳ ದಿನಾಚರಣೆ' ತರಗತಿಯಲ್ಲಿ ಟೀಚರ್ ಹೇಳುತ್ತಾ ಇದ್ದಂತೆ ಬೆರಗು ಕಂಗಳಿಂದ ಕೇಳಿಸಿಕೊಳ್ಳುವ ಪುಟ್ಟ ಕಂದಮ್ಮಗಳು. ಟೀಚರ್ ಹೇಳಿದ್ದನ್ನೇ ಮನೆಯಲ್ಲಿ ಉರುಹೊಡೆವ ಎಳೆ ಮನಸ್ಸುಗಳು. ನಮ್ಮ ಬಹುತೇಕ ಪ್ರಾಥಮಿಕ ಶಾಲೆಗಳ ಮಕ್ಕಳ ದಿನಾಚರಣೆ ಇಲ್ಲಿಗೆ ಮುಗಿಯುತ್ತದೆ!

ನೆಹರೂರವರ ಕಪ್ಪು ಕೋಟಿನ ಜೇಬಿಗೆ ಗುಲಾಬಿ ಸಿಕ್ಕಿಸಿದ ಚಿತ್ರವನ್ನು ಮಕ್ಕಳ ಮುಂದೆ ಈಗಲೂ ಬಿಂಬಿಸಲಾಗುತ್ತದೆ. ಗುಲಾಬಿ ಮುದುಡಿದಾಗ ಒಂದು ಸೌಂದರ್ಯ, ಅರಳಿದಾಗ ಮತ್ತೊಂದು ಸೌಂದರ್ಯ. ಇನ್ನೇನು ಕ್ಷಣಗಳ ಲೆಕ್ಕಣಿಗೆ ಮುಂದೊತ್ತುತ್ತಿದ್ದಂತೆ ಅರಳಿದ ಹೂಗಳ ಪಕಳೆಗಳು ಬೇರ್ಪಡಲು ಹವಣಿಸುತ್ತವೆ. ಇದನ್ನೇ ಮಕ್ಕಳಿಗೆ ಹೋಲಿಸಿ. ಮಕ್ಕಳ ಮನಸ್ಸು ಮುದುಡಿದ ಗುಲಾಬಿಯಂತೆ. ಅದನ್ನು ಬೌದ್ಧಿಕ ಜ್ಞಾನದಿಂದ ಅರಳಿಸುವ ಕೆಲಸ ಮಾಡಿದಾಗ, ಮುಂದದು ಮಾಗಿ ಹಲವು ಪ್ರತಿಭೆಗಳ ಪಕಳೆಗಳಾಗಿ ಅನಾವರಣಗೊಳ್ಳುತ್ತವೆ. ಗುಲಾಬಿಯ ಈ ಉಪಮೆ ನಮ್ಮ ಎಷ್ಟು ಶಾಲೆಗಳಲ್ಲಿ ಅನುಷ್ಠಾನಗೊಳ್ಳುತ್ತವೆ. ಎಷ್ಟು ಮನೆಗಳಲ್ಲಿ ಮಕ್ಕಳ ಮನಸ್ಸನ್ನು ಅರಳಿಸುವ ಕೆಲಸ ನಡೆಯುತ್ತವೆ?

ಮಗುವಿನ ಮನಸ್ಸು 'ಮಣ್ಣಿನ ಮುದ್ದೆ'! ಅದಕ್ಕೆ ಆಕಾರವನ್ನು ಕೊಡುವ ಮೊದಲ ಕೆಲಸ ಮನೆಯಿಂದಾಗಬೇಕು. ಅದು ಒಪ್ಪ-ಓರಣಗೊಳ್ಳುವುದು ಶಾಲಾ ತರಗತಿಗಳಲ್ಲಿ. ಮಕ್ಕಳು ಐದರ ತನಕ ಮುದ್ದುಮುದ್ದಾಗಿ ಕಲಿಯುತ್ತವೆ. ನಂತರ ಶುರುವಾಯಿತು ನೋಡಿ - ಭರತನಾಟ್ಯ, ಸಂಗೀತ, ಡ್ಯಾನ್ಸ್ ಇನ್ನೂ ಏನೇನೋ. ಶಾಲಾಭ್ಯಾಸದೊಂದಿಗೆ ಮತ್ತಷ್ಟು ಹೊರೆ.

ತನ್ನ ಮಗುವಿಗೆ ಸಂಗೀತಕ್ಕೆ ಬೇಕಾದ ಸ್ವರ ಇದೆಯೋ? ಅದಕ್ಕಿಂತ ಮುಖ್ಯವಾಗಿ ನಮಗೆ ಸಂಗೀತ ಜ್ಞಾನ ಏನಾದರೂ ಇದೆಯೋ ಅಥವಾ ಸಂಗೀತವನ್ನು ಹಾರ್ದಿಕವಾಗಿ ಗೌರವಿಸುವ ಮನಸ್ಸಾದರೂ ನಮಗಿದೆಯೇ? ಈ ಯಾವ ಪ್ರಶ್ನೆಗೆ ಉತ್ತರವನ್ನು ಕಂಡುಕೊಳ್ಳದೆ 'ನನ್ನ ಮಗು ಸಂಗೀತ ಕಲಿಯಬೇಕು' ಎಂದರೆ ಕಲಿಸುವ ಗುರುಗಳಿಗೊಂದು ಶಿಕ್ಷೆ. ಮಗುವಿನ ಧಾರಣ ಶಕ್ತಿಯನ್ನು ಎಷ್ಟು ಮಂದಿ ಹೆತ್ತವರು ಅರ್ಥಮಾಡಿಕೊಂಡಿದ್ದಾರೆ? ಆದರೆ ಈ ಹಿನ್ನೆಲೆಯಿರುವ ಕೆಲವು ಮಕ್ಕಳು ಯಶಸ್ಸಾಗುತ್ತಾರೆ. ಮಗುವಿನ ತುಡಿತವನ್ನು ಅರ್ಥಮಾಡಿಕೊಂಡು ಪೋಷಿಸಿದರೆ ಉತ್ತಮ ಬೆಳೆ ಖಂಡಿತ.

ಚೆನ್ನರಾಯಪಟ್ನದ ಸ್ನೇಹಿತರ ಮನೆಯಲ್ಲಿ ಒಂದು ದಿವಸ ಉಳಕೊಳ್ಳಬೇಕಾದ ಸಂದರ್ಭ ಬಂದಿತ್ತು. ಮನೆಯವರೆಲ್ಲರೂ ಪ್ರತಿಭಾವಂತರು. ಚೇತನ್ ನಾಲ್ಕರ ಹುಡುಗ. ಅಪ್ಪ ಯಕ್ಷಗಾನ ಕಲಾವಿದ. ಅಮ್ಮನಿಗೆ ಭರತನಾಟ್ಯವೆಂದರೆ ಪ್ರಾಣ. ಅಜ್ಜ ಸಂಗೀತಪ್ರಿಯ. ಅಂದು ಶಾಲೆಯಿಂದ ಬಂದವನೇ 'ಟ್ಯೂಶನ್'ಗೆ ಹೋಗುವ ಸಿದ್ಧತೆಯಲ್ಲಿದ್ದ. ಅಮ್ಮ ಒಂದಿಷ್ಟು ಆಹಾರವನ್ನು ಬಾಯಿಗೆ ತುರುಕಿದರು. ಸರಿ, ಟ್ಯೂಶನ್ ಮುಗಿಸಿ ಚೇತನ್ ಮನೆಗೆ ಹೊಕ್ಕಿದ್ದಷ್ಟೇ. ಯಕ್ಷಗಾನ ತರಗತಿಗೆ ಕರೆದೊಯ್ಯಲು ಅಪ್ಪ ರೆಡಿ. ಎಲ್ಲಾ ಮುಗಿಸಿ ಚೇತನ್ ಮನೆ ತಲುಪುವಾಗ ಒಂಭತ್ತೂವರೆ ದಾಟಿತ್ತು. ಮತ್ತೆ ಗೊತ್ತಾಯಿತು, ಆತ ಯಕ್ಷಗಾನ ತರಗತಿ ಮುಗಿಸಿ, ಜೊತೆಗೆ ಭರತನಾಟ್ಯ ತರಗತಿಯನ್ನು ಅಭ್ಯಸಿಸಿ ಮನೆಗೆ ಬಂದಾಗ ಪಾಪ, ಆ ಮಗುವಿನ ಮುಖ ನೋಡಬೇಕಿತ್ತು. ಇಷ್ಟು ಹೊರೆ ಬೇಕಿತ್ತಾ? ಅಪ್ಪಾಮ್ಮಂದಿರ ಆಸಕ್ತಿಯ ಭಾರವನ್ನು ಚೇತನ್ ಯಾಕೆ ಹೊರಬೇಕು?

ಇದು ಚೇತನ್ ಒಬ್ಬನ ಅವಸ್ತೆಯಲ್ಲ, ನಮ್ಮಲ್ಲೂ ಪರೋಕ್ಷವಾಗಿ ಮತ್ತೊಬ್ಬ ಚೇತನ್ ಇದ್ದಾನೆ! ಹಾಗಿದ್ದರೆ ಮಕ್ಕಳು ಕಲಿಯಬೇಡ್ವಾ ಈ ವಯಸ್ಸಿನಲ್ಲಲ್ಲದೆ ಬೇರ್ಯಾವಾಗ ಕಲಿಯುವುದು' ಪ್ರಶ್ನೆ ಬರುವುದು ಸಹಜ. ಕಲಿಯಲಿ, ಅದಕ್ಕೂ ಮಿತಿ ಇರಲಿ.ಬಾಲ್ಯಶಿಕ್ಷಣ ಭವಿಷ್ಯದ ಊರುಗೋಲುಬಾಲ್ಯಶಿಕ್ಷಣ ಮಾತೃಭಾಷೆಯಲ್ಲಿಯೇ ಇರಬೇಕು. ಈ ಸಂಸ್ಕೃತಿಯಲ್ಲಿ ಬೆಳೆದ ಮಗು, ಮುಂದೆ ಇತರ ಭಾಷೆಗಳನ್ನು ಚೆನ್ನಾಗಿ ಕಲಿಯುತ್ತದೆ. ಎಷ್ಟು ಮನೆಗಳಲ್ಲಿ ಇಂದು ಕನ್ನಡ ಮಾತುಕತೆಯಿದೆ?

ಪ್ರಾಥಮಿಕ ಶಾಲೆಯ ಅಧ್ಯಾಪಕರನ್ನೊಮ್ಮೆ ಜ್ಞಾಪಿಸಿಕೊಂಡರೆ ನೆನಪಾಗುತ್ತದೆ - ಅವರ ಮನೆಗಳಲ್ಲಿ ಚಿಕ್ಕ ಕನ್ನಡ ಗ್ರಂಥಾಲಯವಿರುತ್ತಿತ್ತು. ಅವರು ಶಾಲೆಗೆ ಬರುವಾಗ ಯಾವುದಾದರೊಂದು ಪುಸ್ತಕ ಕೈಯಲ್ಲಿರುತ್ತಿತ್ತು. ನನ್ನ ಬಾಲ್ಯದ ಉಪಾಧ್ಯಾಯರಾದ ನಾರಾಯಣ ಪಂಡಿತರು, ಕೃಷ್ಣಪ್ಪ ಉಪಾಧ್ಯಾಯರು ಕನ್ನಡದ ಉಚ್ಛಾರ ಸ್ವಲ್ಪ ತಪ್ಪಿದರೂ ಶಿಕ್ಷಿಸುತ್ತಿದ್ದರು. ತಪ್ಪಿದ ಉಚ್ಚಾರವನ್ನು ಅದು ಮತ್ತಷ್ಟು ಸರಿಪಡಿಸುತ್ತಿತ್ತು! ಈಗ 'ಶಿಕ್ಷೆ' ಬಿಡಿ, ಶಾಲಾಭ್ಯಾಸದಲ್ಲಿ ಮಗು ತಪ್ಪು ಬರೆದರೆ ತಿದ್ದುವಷ್ಟೂ ವ್ಯವಧಾನ ಇಲ್ಲ! ಎಷ್ಟು ಮಂದಿ ಅಧ್ಯಾಪಕರಲ್ಲಿ ನಿತ್ಯ ಓದು ಇದೆ - ಒಮ್ಮೆ ಪರಾಮರ್ಶಿಸಿ

ಹೀಗೆ ಹೇಳುವಾಗ ನಮ್ಮ ಪುಸ್ತಕ ಮಿತ್ರ ಪ್ರಕಾಶ್ ಕುಮಾರ್ ಹೇಳಿದ ಒಂದು ಮಾತು ನೆನಪಾಗುತ್ತದೆ - ಶಾಲೆಯೊಂದರಲ್ಲಿ ಇವರು ಪುಸ್ತಕದ ಪ್ರದರ್ಶನವೇರ್ಪಡಿಸಿದ್ದರು. 'ಸರ್.. ಇದು ಶಿವರಾಮ ಕಾರಂತರು ಬರೆದ ಪುಸ್ತಕ, ಚೆನ್ನಾಗಿದೆ' ಅಂತ ಉಪನ್ಯಾಸಕ ಮಹಾಶಯರೊಬ್ಬರಿಗೆ ಕೊಟ್ಟರಂತೆ. 'ಓ.. ಹೌದಾ.. ಶಿವರಾಮ ಕಾರಂತರು ಪುಸ್ತಕ ಬರೀತಾರಾ' ಅಂತ ಅಂದರಂತೆ!

ಇರಲಿ, ಪ್ರಪಂಚ ಅರಿಯುವ ಮುನ್ನ 'ಎಲ್ಕೆಜಿ'ಗೆ ಮಗುವನ್ನು ದೂಡುವ ಪ್ರವೃತ್ತಿ, ಕನ್ನಡದ ಉಚ್ಚಾರ ಮಾಡಿದಾಗ-ಮಾತನಾಡಿದಾಗ ಮಗುವನ್ನು ಭಯಪಡಿಸುವ ಸನ್ನಿವೇಶ, ಪುಸ್ತಕದಂಗಡಿಯಲ್ಲಿ ಮಗು ಕನ್ನಡ ಪುಸ್ತಕವನ್ನು ಆಯ್ದುಕೊಂಡಾಗ ಬೈದು-ಬಡಿವ ಸ್ಥಿತಿ - ಬಹುತೇಕ ಕಾಣುತ್ತೇವೆ. ಅಧ್ಯಾಪಕರು ಸ್ಲೇಟಿನಲ್ಲಿ ದೊಡ್ಡ ಅಕ್ಷರದಲ್ಲಿ ಬರೆದ ಅ, ಆ... ಮೇಲೆ ಬರೆದು ಬರೆದೇ ಕಲಿತ ಎಷ್ಟೋ ಮಂದಿ ಇಂದು ವಿದೇಶದಲ್ಲಿಲ್ವಾ. ಅವರೆಲ್ಲರೂ 'ಅಪ್ಪ-ಅಮ್ಮ' ಎನ್ನುತ್ತಾ ಬೆಳೆದವರೇ. ಮನೆಯಿಂದ ಶಾಲೆ ತನಕದ ಪ್ರತೀ ಕ್ಷಣವನ್ನು ಪೋಸ್ಟ್ಮಾರ್ಟಂ ಮಾಡಿದಾಗ ಎಲ್ಲೂ ಮಗುವಿನ ಮನಸ್ಸನ್ನರಿಯುವ ಉಪಾಧಿಗಳು ಸಿಗುತ್ತಿಲ್ಲ. 'ಕೋಳಿಯನ್ನು ಕೇಳಿ ಮಸಾಲೆ ಅರಿಯುವುದಿಲ್ಲ' - ನನ್ನ ಈ ವಿಚಾರಕ್ಕೆ ಓರ್ವ ತಾಯಿ ಪ್ರತಿಕ್ರಿಯಿಸಿದ ರೀತಿಯಿದು.

ಈ ಎಲ್ಲಾ ವಿಚಾರಗಳನ್ನಾದರೂ ಸಹಿಸಬಹುದು, ಆದರೆ ಮಕ್ಕಳ ಮನಸ್ಸನ್ನು ಅಣುಅಣುವಾಗಿ ಕೊಲ್ಲುವ 'ನಿಧಾನ ವಿಷ' - ನಮ್ಮ ವಾಹಿನಿಗಳ 'ರಿಯಾಲಿಟಿ ಶೋ'ಗಳು. ಇವುಗಳು ಯಾವಾಗ ಟೀವಿಯೊಳಗೆ ನುಸುಳಿದುವೋ, ಅಲ್ಲಿಂದ 'ಸಂಗೀತ, ಸಾಹಿತ್ಯ, ಮಾನ-ಮರ್ಯಾದಿ' ಎಲ್ಲಾ ದೂರವಾದುವು. 'ದಿಢೀರ್ ಸಂಗೀತ' ಕಲಿಯುವ ಶಾಲೆಗಳು ಶುರುವಾದುವು. ದಿಢೀರ್ ಗುರುಗಳು ಪ್ರತ್ಯಕ್ಷರಾದರು. ಸಂಗೀತವನ್ನೋ, ನೃತ್ಯವನ್ನು ಕಲಿಯಲು ಐದಾರು ವರುಷ ಬೇಡ. ಐದಾರು ವಾರ ಸಾಕು ಎಂಬ ಭಾವವನ್ನು ವಾಹಿನಿಗಳು ಬಿಂಬಿಸಿದುವು. ಹಾಗಾಗಿ ಅಲ್ಪಸ್ವಲ್ಪ ಹಾಡುತ್ತಿದ್ದ ಪ್ರತಿಭೆಗಳಿಗೆ ವೇದಿಕೆ ಸಿಕ್ತು. ಪದ್ಯಗಳ ಜೆರಾಕ್ಸ್ ಪ್ರತಿಗಳಾದರು. ಈ ಢಾಂಢೂಂಗಳ ಮಧ್ಯೆ ನಿಜ ಕಾಳಜಿಯಿದ-ಪ್ರೀತಿಯಿಂದ ಸಂಗೀತ ಕಲಿತ, ನೃತ್ಯ ಕಲಿತ ಪ್ರತಿಭಾವಂತರ ಪ್ರತಿಭೆಯು ಮಸುಕಾಯಿತು.

ಒಮ್ಮೆ ವಾಹಿನಿಯಲ್ಲಿ ಕಷ್ಟಪಟ್ಟು ಹಾಡಿದರೆ ಸಾಕು, ಪತ್ರಿಕೆಗಳಲ್ಲಿ ಫೋಟೋ ಹಾಕಿಸಿ ಸಂತೋಷಪಡುವಷ್ಟರ ತನಕ ಚಾಳಿ ಎಬ್ಬಿಸಿಬಿಟ್ಟಿದೆ. ಎಲ್ಲಾದರೂ ವಾಹಿನಿಯಲ್ಲಿ ಹಾಡಿ ಪ್ರಥಮ ಸ್ಥಾನ ಬಾರದಿದ್ದರೆ, 'ಭವಿಷ್ಯವೇ ಸರ್ವನಾಶ' ಎಂಬಂತೆ ವರ್ತಿಸುವ ಹೆತ್ತವರು, ಅದನ್ನು ಮಕ್ಕಳ ಮೇಲೆ ಹೇರಿ ಮುಗ್ಧ ಮನಸ್ಸಿಗೆ ಭಗ್ನ ತರುವ ನಿರೂಪಕರು, ಅಸಂಬದ್ದ ಪ್ರಶ್ನೆಗಳನ್ನು ಕೇಳಿ ಮಕ್ಕಳನ್ನು ಗೊಂದಲಕ್ಕೆ ಸಿಲುಕಿಸುವ ತೀರ್ಪುಗಾರರು, ಕೆಲವೊಂದು ಸಲ ತೀರ್ಪುಗಾರರ ಮೇಲೆ ಹೆತ್ತವರೇ ಕೈಮಾಡುವ ದಾರಿದ್ರ್ಯ ಸ್ಥಿತಿ..

ನಮ್ಮ ವಾಹಿನಿಗಳ ಉದ್ಘೋಷಕಿಯರು ಯಾಕೋ 'ವಸ್ತ್ರದ್ವೇಷಿ'ಗಳು! ಈ ಚಾಳಿ ಇತ್ತಿತ್ತ ಮಕ್ಕಳ ಮೇಲೂ ಪ್ರಯೋಗಿಸಲಾಗುತ್ತಿದೆ. ವಾಹಿನಿಯೊಂದರಲ್ಲಿ ಮಕ್ಕಳ ಡ್ಯಾನ್ಸ್ ಕಾರ್ಯಕ್ರಮವೊಂದರಲ್ಲಿ ಎಲ್ಲಾ ಮಕ್ಕಳಿಗೂ ಅಂಗಾಂಗ ಕಾಣುವಂತೆ ಕಡಿಮೆ ವಸ್ತವನ್ನು ತೊಡಿಸಲಾಗಿತ್ತು. ಪಾಪ, ಮಕ್ಕಳಿಗೆ ಏನು ತಿಳಿಯುತ್ತೆ ಹೇಳಿ. ಇದಕ್ಕೆ ಹೆತ್ತವರ ಪ್ರೋತ್ಸಾಹ. 'ಮಕ್ಕಳಲ್ಲಿ ಯಾಕೆ ಅಂತಹ ದೃಷ್ಟಿ' ಅಂತ ಪ್ರಶ್ನಿಸಬಹುದು. ಆದರೆ ಎಳವೆಯಲ್ಲೇ ಮಕ್ಕಳಲ್ಲಿ 'ವಸ್ತ್ರದ್ವೇಷ'ವನ್ನು ಯಾಕೆ ಸೃಷ್ಟಿಸಬೇಕು. 'ಈ ಕಾರ್ಯಕ್ರಮ ಬರುತ್ತಿದ್ದಂತೆ ನಾವು ಟಿವಿ ಆಫ್ ಮಾಡಿದೆವು' ಎನ್ನುತ್ತಾರೆ ಪುತ್ತೂರಿನ ಕಲಾವಿದ ಎಸ್. ಶಿವರಾಮ್.

ಸ್ಪರ್ಧಾ ತೀರ್ಪು ಘೋಷಣೆಯ ಸಂದರ್ಭವನ್ನೊಮ್ಮೆ ಜ್ಞಾಪಿಸಿಕೊಳ್ಳಿ. ಪುಟ್ಟ ಮಕ್ಕಳು ಮುಖ ಮುಖ ನೋಡುತ್ತಿರುತ್ತಾರೆ. ಹೆತ್ತವರು ಆಕಾಶವೇ ತಲೆಮೇಲೆ ಬಿದ್ದಂತೆ ಬಿಳುಚಿರುತ್ತಾರೆ. ಅದಕ್ಕೆ ಪೂರಕವೋ/ಮಾರಕವೋ ಎಂಬಂತೆ ಕೆಟ್ಟ ಹಿನ್ನೆಲೆ ಧ್ವನಿ. ಒತ್ತಡ ಹೆಚ್ಚಿಸುವ ಉದ್ಘೋಷಕರ ವರ್ತನೆ. ಇವೆಲ್ಲಾ ಯಾಕೆ ಬೇಕು? ನೇರ, ಸಹಜವಾಗಿರಲು ಬರುವುದಲ್ಲವೇನು? ಈ ಉದ್ಘೋಷಕರ ಕೆಟ್ಟ ಕನ್ನಡ ಇದೆಯಲ್ಲಾ ಅದು ಕನ್ನಾಡಿಗೆ ಬಡಿದ ಶಾಪ! ಅವರು ಉದುರಿಸುವ ವಾಕ್ಯಗಳಲ್ಲಿ ಕನ್ನಡವನ್ನು ಹುಡುಕಬೇಕು! ಅದೇ ಪರಿಪಾಠ ಮಕ್ಕಳಿಗೂ ವರ್ಗಾವಣೆಯಾಗಿರುತ್ತದೆ. ರಿಯಾಲಿಟಿ ಶೋಗಳಲ್ಲಿ ಮಾತನಾಡುವ ಮಕ್ಕಳಿಗೂ ಅದು ಅಂಟಿರುತ್ತದೆ!

ಪ್ರೌಢರಂತೆ ಮಕ್ಕಳ ಮೇಲೆ ಒತ್ತಡಗಳನ್ನು ಹಾಕುವುದರಿಂದ ಮನಸ್ಸು ಅರಳುವುದಿಲ್ಲ. ವರುಷದ ಹಿಂದೆ ಇದೇ ರಿಯಾಲಿಟಿ ಶೋದಲ್ಲಿ ಅವಮಾನಿತಳಾದ ಬಾಲಕಿಯೊಬ್ಬಳು ಆತ್ಮಹತ್ಯೆಗೆ ಶರಣಾದುದು ಇನ್ನೂ ಹಸಿಯಾಗಿಯೇ ಇದೆ.'ಡ್ಯಾಡಿ ನಂ.1' ಎಂಬ ಶೋ ಬಂತಲ್ಲಾ. ಅದಕ್ಕೆ 'ಪ್ರಸಿದ್ಧ' ಅಂತ ಹಣೆಪಟ್ಟಿ. ಸ್ಪರ್ಧೆಯಡಿ ಮಗುವಿನ ಅಪ್ಪನನ್ನು ಹಿಗ್ಗಾಮುಗ್ಗಾ ದುಡಿಸಿದ್ದೇ ಬಂತು. ಬಹುಮಾನ ಬಂದವರು ಸಂತಸ ಪಟ್ಟರು. ಬಹುಮಾನ ಸಿಗದ ಮಗುವಿಗೆ ಅಪ್ಪನ ಮೇಲೆ ಎಂತಹ ದೃಷ್ಟಿ ಇರಬಹುದು ಹೇಳಿ! 'ನನ್ನಪ್ಪ ದಡ್ಡ, ಪ್ರಯೋಜನವಿಲ್ಲ' ಅಂತ ಭಾವ ಎಳವೆಯಲ್ಲೇ ಮೂಡಿದರೆ ಭವಿಷ್ಯದ ಸ್ಥಿತಿ! ಮಗು ಶಾಲಾಭ್ಯಾಸವನ್ನು ಮಾಡುತ್ತಿರುವಾಗ ಹೆತ್ತವರಿಗೆ ಸೀರಿಯಲ್ ನೋಡದೆ ನಿದ್ದೆ ಬಾರದು. ಬದುಕಿನಲ್ಲಿ ಹೊಸ ಹೊಸ ಸಮಸ್ಯೆಯನ್ನು ಸೃಷ್ಟಿಸುತ್ತ, ಕುಟುಂಬವನ್ನು ಛಿದ್ರ ಛಿದ್ರವನ್ನಾಗಿಸುವ ಹೂರಣದ ಸೀರಿಯಲ್ಗಳನ್ನು ಹೆತ್ತವರೊಂದಿಗೆ ಮಕ್ಕಳೂ ನೋಡ್ತಾರೆ. ಅಲ್ಲಿನ ಕ್ರೌರ್ಯ, ದಾಂಪತ್ಯದ ತುಣುಕುಗಳಿಗೆ ಉತ್ತರ ಸಿಗದೆ ಮಗು ಒದ್ದಾಡುವುದನ್ನು ಎಷ್ಟು ಮಂದಿ ಹೆತ್ತವರು ಗಮನಿಸಿದ್ದೀರಿ?

ಹಾಗಿದ್ದರೆ 'ಮನಸ್ಸು' ಅಂದರೇನು? ಅದಕ್ಕೆ ಬೇರೆ ಅರ್ಥ ಬೇಡ. ಮಗುವಿನ ಬೆಳವಣಿಗೆಗೆ ಪೂರಕವಾಗುವ ಸರಕುಗಳು ಅಂತ ಭಾವಿಸಿದರೆ ಸಾಕು. ಈ ಸರಕುಗಳನ್ನು ಒದಗಿಸಲು ಹೆತ್ತವರ ತ್ಯಾಗ ಬೇಕು. ಅಧ್ಯಾಪಕರ ಕಾಳಜಿ ಬೇಕು. ಬದಲಾಗುತ್ತಿರುವ ಕಾಲಘಟ್ಟದಲ್ಲಿ ಬದುಕು-ಶಿಕ್ಷಣ ಬದಲಾಗುತ್ತಲೇ ಇದೆ. ಇದಕ್ಕಾಗಿ ಮಕ್ಕಳನ್ನ ಎಳವೆಯಿಂದಲೇ ಸಜ್ಜುಗೊಳಿಸಬೇಕಾದ ಅನಿವಾರ್ಯತೆ ಇದೆ. ಮಗುವಿನ ಧಾರಣಶಕ್ತಿ ಮತ್ತು ಮನಸ್ಸನ್ನು ಹೆತ್ತವರೇ ಅರ್ಥಮಾಡಿಕೊಳ್ಳಬೇಕು. ಅದಕ್ಕೆ ಬೇಕಾದ ವಾತಾವರಣ ಕಲ್ಪಿಸಿದರೆ ಸಾಕು, ಆ ಪರೀಧಿಯಲ್ಲಿ ಮಗು ಬೆಳೆಯುತ್ತದೆ. ಬಾಲ್ಯ ಶಿಕ್ಷಣ ಮನೆಯಿಂದಲೇ ಶುರುವಾಗಲಿ. ಅದೂ ಮಾತೃಭಾಷೆಯಲ್ಲೇ. ಉಳಿದೆಲ್ಲಾ ಭಾಷೆಗಳ ಕಲಿಕೆಗಳು 'ಆಯ್ಕೆ'ಯಾಗಿರಲಿ. ಕಾಲ ಬದಲಾಗುತ್ತಿದೆ ಅಂತ ಮಕ್ಕಳ ಮೇಲೆ ಶಿಕ್ಷಣವನ್ನು ಹೇರಿದರೆ, ಅಂತಹ ಮಕ್ಕಳಿಗೆ ಅಕ್ಷರಗಳೆಲ್ಲಾ 'ಮಯಮಯ'ವಾಗಿ ಕಂಡರೆ ಯಾರನ್ನೂ ದೂಶಿಸಬೇಕಿಲ್ಲ! ಆಯ್ಕೆ ನಮ್ಮ ಮುಂದಿದೆ. ನಮ್ಮ ಏಳ್ಗೆಗೆ ನಾವೇ ಶಿಲ್ಪಿಗಳು.

Monday, November 2, 2009

ಜಾಲತಾಣ ಪ್ರಪಂಚಕ್ಕೆ ಅಡಿಕೆ ಪತ್ರಿಕೆ

ದೂರದೂರಿನ, ಕಡಲಾಚೆಯ, ಹಿತೈಷಿಗಳ, ಕೃಷಿ ಕುಟುಂಬದ ಐಟಿ ಬಂಧುಗಳ ಬಹುಕಾಲದ ಬೇಡಿಕೆ ಈಗ ಈಡೇರುವ ದಾರಿಯಲ್ಲಿದೆ. ಅಡಿಕೆ ಪತ್ರಿಕೆಯ ಜಾಲತಾಣ www.adikepatrike.com ರಾಜ್ಯೋತ್ಸವದಂದು ಶುಭಾರಂಭಗೊಂಡಿದೆ.

ಹಿಂದಿನ ತಿಂಗಳುಗಳ ಸಂಚಿಕೆಗಳನ್ನು ಇಳಿಸಿಕೊಳ್ಳಲು ಅವಕಾಶ. ಆಸಕ್ತರು ಇಡೀ ಸಂಚಿಕೆಯ ಪಿಡಿಎಫ್ ಕಡತವನ್ನು ಇಳಿಸಿಕೊಂಡು ಸಾವಕಾಶವಾಗಿ ಓದಿಕೊಳ್ಳಬಹುದು. ಚಿತ್ರಗಳೆಲ್ಲವೂ ವರ್ಣಮಯವಾಗಿರುವುದು ವಿಶೇಷ.

ನಿಕಟ ಭವಿಷ್ಯದಲ್ಲಿ ಆಸಕ್ತರು ಆನ್ಲೈನ್ ಚಂದಾದಾರರಾಗುವ ಅವಕಾಶವೂ ತೆರೆದುಕೊಳ್ಳಲಿದೆ. ಅಡಿಕೆ ಪತ್ರಿಕೆಯನ್ನು ನೀವೂ ಓದಿ. ಹಾಗೆಯೇ ನಿಮ್ಮ ಸ್ನೇಹಿತ, ಬಂಧುಗಳಿಗೆ, ಅನಿವಾಸಿ ಸ್ನೇಹಿತರಿಗೆ, ಎಲ್ಲಾ ಆಸಕ್ತ ಕೃಷಿಸ್ನೇಹಿಗಳಿಗೆ ನಮ್ಮ ಜಾಲತಾಣದ ವಿಳಾಸ ತಿಳಿಸಿ. ಓದಿ ಅಭಿಪ್ರಾಯ ತಿಳಿಸಲು ಸಲಹೆ ಮಾಡಿ.

Sunday, November 1, 2009

ಅಡಿಕೆ ಯಂತ್ರ ಮೇಳಕ್ಕೆ ತೆರೆ

ಅಡಿಕೆ ಸಂಶೋಧನೆ ಮತ್ತು ಅಭಿವೃದ್ಧಿ ಪ್ರತಿಷ್ಠಾನ (ರಿ) ಸಾರಥ್ಯದಲ್ಲಿ ವಿವೇಕಾನಂದ ವಿದ್ಯಾವರ್ಧಕ ಸಂಘ, ಪುತ್ತೂರು ಮತ್ತು ಫಾರ್ಮರ್ ಫಸ್ಟ್ ಟ್ರಸ್ಟ್ ಪುತ್ತೂರು ಇವರ ಹೆಗಲೆಣೆಯೊಂದಿಗೆ ಅಕ್ಟೋಬರ್ 30, 31 ಮತ್ತು ನವೆಂಬರ್ 1ರಂದು ಪುತ್ತೂರಿನ ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನಲ್ಲಿ ನಡೆದ 'ಅಡಿಕೆ ಯಂತ್ರ ಮೇಳ'ಕ್ಕಿಂದು ತೆರೆ.
* ಸ್ವಾಗತ - ಶ್ರೀ ಪಡ್ರೆ, ಕಾರ್ಯನಿರ್ವಾಹಕ ಸಂಪಾದಕ, ಅಡಿಕೆ ಪತ್ರಿಕೆ
* ಸಮಾರೋಪ ಭಾಷಣ : ಪ್ರೊ: ಅನಿಲ್ ಕೆ.ಗುಪ್ತಾ, ಪ್ರೊಫೆಸರ್, ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್, ಅಹಮದಾಬಾದ್, ನ್ಯಾಶನಲ್ ಇನ್ನೋವೇಶನ್ ಪೌಂಡೇಶನ್ ಇದರ ಕಾರ್ಯಕಾರಿ ಉಪಾಧ್ಯಕ್ಷರು - "ಅಡಿಕೆ ಸಂಸ್ಕರಣೆ ಮತ್ತು ಸಿಂಪಡಣೆಯ ಸಂಶೋಧನೆಯಲ್ಲಿ ರೈತರೇ ಇಷ್ಟೊಂದು ಉತ್ಸಾಹದಿಂದ ಮುಂದೆ ಬಂದಿರುವುದು ನಿಜಕ್ಕೂ ಅದ್ಭುತ. ಕ್ಯಾಂಪ್ಕೋ, ವಿವೇಕಾನಂದ ಸಂಸ್ಥೆಗಳು, ಹಿರಿಯ ಸಂಶೋಧಕರು ಮತ್ತು ಇತರ ತಾಂತ್ರಿಕ ಅನುಭವವುಳ್ಳ ಹಿರಿಯರನ್ನೊಳಗೊಂಡ ಒಂದು ಸಲಹಾ ಸಮಿತಿ ರಚಿಸಿ, ಇದರಿಂದ ಸಂಶೋಧನೆಗೆ ಏನು ಅಗತ್ಯಗಳಿವೆ ಎಂಬುದನ್ನು ವಿಷದವಾಗಿ ವಿಶ್ಲೇಷಿಸಿ ನಮ್ಮ ನ್ಯಾಶನಲ್ ಇನೋವೇಶನ್ ಪೌಂಡೇಶನ್ ಸಂಸ್ಥೆಗೆ ಕಳುಹಿಸಿಕೊಟ್ಟರೆ ಸರ್ವಸಾಧ್ಯ ಸಹಕಾರವನ್ನು ನೀಡುತ್ತೇವೆ. ಇದರಲ್ಲಿ ಆರ್ಥಿಕ ಕೊಡುಗೆ ಹೆಚ್ಚು ಇರದು, ಆದರೆ ತಾಂತ್ರಿಕ ಮತ್ತಿತರ ಸಹಾಯವನ್ನು ನೀಡುವುದಲ್ಲದೆ, ಸಂಶೋಧಕರು ಬಯಸಿದರೆ ಅವರ ಸಂಶೋಧನೆಯು ಇನ್ನಷ್ಟು ಸುಧಾರಿಸುವಲ್ಲಿ ನಮ್ಮ ಸಹಾಯ ಹಸ್ತ ಇದೆ. ಎನ್.ಐ.ಫ್ ಪ್ರಯತ್ನದಿಂದ ಇದುವರೆಗೆ ಇನ್ನೂರ ಮೂವತ್ತೆಂಟು ಗ್ರಾಮೀಣ ಪೇಟೆಂಟ್ಗಳು ಸಿಕ್ಕಿವೆ. ಕಾಲೇಜುಗಳ ಮತ್ತು ಹೈಸ್ಕೂಲ್ಗಳಲ್ಲಿರುವ ವಿದ್ಯಾರ್ಥಿ ಶಕ್ತಿಯು ನಮ್ಮ ಅತಿ ದೊಡ್ಡ ಶಕ್ತಿ. ಬೆಳಕಿಗೆ ಬಾರದ ಗ್ರಾಮೀಣ ಪ್ರತಿಭೆಗಳು, ಸಂಶೋಧನೆ, ಅನುಶೋಧನೆಗಳನ್ನು ಹೊರತರುವ ಕೆಲಸಗಳಿಗೆ ಇವರನ್ನು ಹಚ್ಚಿ ದಯವಿಟ್ಟು ಪ್ರೇರೇಪಿಸಿ. ನಮ್ಮ ಇಂತಹ ಪ್ರಯತ್ನಗಳು ಬೇರೆಡೆ ಸಾಕಷ್ಟು ಫಲ ಕೊಟ್ಟಿದೆ.
ಶುಭಾಶಂಸನೆ : * ಕೆ.ಸಂತೋಷ್ ಕುಮಾರ್ ಭಂಡಾರಿ, ಅಧ್ಯಕ್ಷರು, ದ.ಕ.ಜಿಲ್ಲಾ ಪಂಚಾಯತ್ * ರಾಜೇಶ್ ಬನ್ನೂರು, ಪುರಸಭಾಧ್ಯಕ್ಷರು, ಪುತ್ತೂರು - ಇವರಿಂದ ಸಮಯೋಚಿತ ಮಾತು.
* ಸಂಶೋಧಕರಿಗೆ ಪ್ರಮಾಣ ಪತ್ರ ನೀಡಿದವರು - ಬಿ.ನಾಗರಾಜ ಶೆಟ್ಟಿ, ಅಧ್ಯಕ್ಷರು, ಕರಾವಳಿ ಅಭಿವೃದ್ಧಿ ಪ್ರಾಧಿಕಾರ * ಸಂಶೋಧಕರಾದ ಎನ್. ಶಿವಶಂಕರ ಭಟ್, ಅಗಸಿ ಟೆಕ್ನಾಲಜೀಸ್, ಬೆಂಗಳೂರು ಮತ್ತು ಶ್ರೀಮತಿ ಗೀತಾ, ದುರ್ಗಾ ಮೆಕ್ಯಾನಿಕಲ್ ವಕ್ಸ್ಸ್ರ, ಗೋವಾ. - ಇವರಿಂದ ಅನಿಸಿಕೆ.
* ಎಸ್.ಆರ್.ರಂಗಮೂರ್ತಿಯವರಿಂದ ವಿವಿಧ ವ್ಯವಸ್ಥಾ ವಿಭಾಗಗಳ ಸಂಘಟಕರಿಗೆ ನೆನಪಿನ ಕಾಣಿಕೆ ನೀಡಿಕೆ
* ಉಪಸಂಹಾರ : ಕ್ಯಾಂಪ್ಕೋ ಅಧ್ಯಕ್ಷ ಎಸ್.ಆರ್.ರಂಗಮೂರ್ತಿಯವರಿಂದ ಎಲ್ಲಾ ಸಂಶೋಧಕರನ್ನು ಒಂದೇ ಸೂರಿನಡಿಯಲ್ಲಿ ತಂದು, ರೈತರಿಗೆ ಮಾಹಿತಿ ನೀಡಲು ಅಡಿಕೆ ಯಂತ್ರ ಮೇಳವನ್ನು ಆಯೋಜಿಸಿದ್ದೇವೆ ಉದ್ದೇಶ ಸ್ಪಷ್ಟನೆ.
* ಅಧ್ಯಕ್ಷರ ಮಾತು : ಸಭಾಧ್ಯಕ್ಷ ಶ್ರೀ ನಾಗರಾಜ ಇತರ ದೇಶಗಳ ತಂತ್ರಜ್ಞಾನಗಳನ್ನು ಬಳಸಿಕೊಂಡು ವೈಜ್ಙಾನಿಕವಾಗಿ ಕೃಷಿ ಮಾಡಬೇಕು. ಅಡಿಕೆಯ ಪರ್ಯಾಯ ಬಳಕೆಯ ಬಗ್ಗೆ ಒತ್ತು ನೀಡಬೇಕಾದ ಅನಿವಾರ್ಯತೆ ಬಂದಿದೆ' ಎಂದರು.
* ಅತಿಥಿಗಳಿಗೆ ಸ್ಮರಣಿಕೆ - ಶ್ರೀನಿವಾಸ ಆಚಾರ್, ಅಧ್ಯಕ್ಷರು ಫಾರ್ಮರ್ ಫಸ್ಟ್ ಟ್ರಸ್ಟ್ ಮತ್ತು ಮಧುಸೂದನ ರಾವ್, ಆಡಳಿತ ನಿರ್ದೇಶಕರು , ಕ್ಯಾಂಪ್ಕೋ ಲಿ.,* ಧನ್ಯವಾದ - ಶ್ಯಾಮ ಭಟ್, ಮಹಾಪ್ರಬಂಧಕರು, ಕ್ಯಾಂಪ್ಕೋ ಲಿ., ಮಂಗಳೂರು ಮತ್ತು ಸಂಚಾಲಕರು, ಅಡಿಕೆ ಯಂತ್ರ ಮೇಳ-೦೯
* ನಿರ್ವಹಣೆ : ಉಪನ್ಯಾಸಕರಾದ ಡಾ.ಶ್ರೀಶಕುಮಾರ್. ಹರಿಪ್ರಸಾದ್
* ಸಮ್ಮೇಳನ ವಿಶೇಷ: ಮೂರೂ ದಿವಸಗಳಲ್ಲಿ ಸುಮಾರು ಮೂವತ್ತು ಸಾವಿರಕ್ಕೂ ಅಧಿಕ ಕೃಷಿಕರು ಭಾಗವಹಿಸಿದ್ದರು.
ಚಿತ್ರ : ಶಶಿ ಪುತ್ತೂರು

Saturday, October 31, 2009

ಅಡಿಕೆ ಯಂತ್ರ ಮೇಳ : ಚಿಂತನ-ಮಂಥನ

ಯಂತ್ರಮೇಳದಲ್ಲಿ ಮ್ಯಾಮ್ಕೋಸ್ ಅಧ್ಯಕ್ಷ ಕೆ.ನರಸಿಂಹ ನಾಯಕ್ ಅವರ ಅಧ್ಯಕ್ಷತೆಯಲ್ಲಿ ವಿಚಾರಗೋಷ್ಠಿ ಜರುಗಿತು. 'ಕೆಂಪಡಿಕೆ - ರೈತರ ಸಮಸ್ಯೆ ಮತ್ತು ಸಂಶೋಧನಾ ಆವಶ್ಯಕತೆ' ಕುರಿತು ತೀರ್ಥಹಳ್ಳಿಯ ಕೃಷಿಕ ಕೂಳೂರು ಸತ್ಯನಾರಾಯಣ, ಮಂಜೇಶ್ವರದ ಹಿರಿಯ ಕೃಷಿಕ ಡಾ.ಚಂದ್ರಶೇಖರ ಚೌಟರಿಂದ 'ಗೋಟಡಿಕೆ' ರೈತರ ಸಮಸ್ಯೆ ಮತ್ತು ಸಂಶೋಧನಾ ಆವಶ್ಯಕತೆ, ಸಾಗರದ ಮಥನ ಇಂಡಸ್ಟ್ರೀಸ್ನ ಉಮೇಶ್ ಬಿ.ಆರ್. ಮತ್ತು ತೀರ್ಥಹಳ್ಳಿಯ ವಿ-ಟೆಕ್ ಯಂತ್ರದ ಸಂಶೋಧಕ ಶ್ರೀ ವಿಶ್ವನಾಥ್ ಕುಂಟುವಳ್ಳಿಯವರಿಂದ 'ಯಂತ್ರಗಳ ಅಭಿವೃದ್ಧಿಯಲ್ಲಿ ತಮ್ಮ ಸ್ವಾನುಭವ', ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ ಕೊಯ್ಲೋತ್ತರ ತಂತ್ರಜ್ಞಾನ ವಿಭಾಗದ ಸಂಶೋಧನಾ ಇಂಜಿನಿಯರ್ ಡಾ. ಪಳನಿಮುತ್ತು ಅವರು ಅಡಿಕೆ ಸುಲಿತ ಮತ್ತು ಸಿಂಪಡಣೆಯ ಯಾಂತ್ರೀಕರಣದ ಸಾಧನೆ, ಸಾಧ್ಯತೆಗಳು ಹಾಗೂ ಸವಾಲುಗಳು ಮತ್ತು ಅಡಿಕೆ ಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕ 'ಶ್ರೀ' ಪಡ್ರೆಯವರು ಫಲಪ್ರದ ಯಾಂತ್ರೀಕರಣದ ದಾರಿಯಲ್ಲಿ ಮಾಧ್ಯಮಗಳ ಪಾತ್ರಗಳ ಕುರಿತು ವಿಚಾರ ಪ್ರವಾಹಗಳು. ಭಾಗವಹಿಸಿದ ಕೃಷಿಕರಿಂದ ಆಲಿಕೆ ಮತ್ತು ಪ್ರಶ್ನೋತ್ತರಗಳ ಮೂಲಕ ಸ್ಪಂದನ.

ಗೋಷ್ಠಿಯ ಅಧ್ಯಕ್ಷತೆಯನ್ನು ಮ್ಯಾಮ್ಕೋಸ್ ಉಪಾಧ್ಯಕ್ಷ ಕೆ. ನರಸಿಂಹ ನಾಯಕ್ ವಹಿಸಿದ್ದರು. ರೈತನು ತನ್ನ ಬೆಳೆಗೆ ತಾನೇ ಬೆಲೆ ನಿರ್ಧಾರ ಮಾಡುವ ಅಧಿಕಾರ ಬಂದಾಗ ನಿಜಕ್ಕೂ ದೇಶ ಸುಭಿಕ್ಷವಾಗುತ್ತದೆ. ಬೇರು ಹುಳ, ಹಳದಿ ಎಲೆ ರೋಗ..ಮುಂತಾದ ಪ್ರಾಕೃತಿಕ ತೊಂದರೆಗಳಿಂದ ಅಡಿಕೆ ಬೆಳೆಗಾರನ ಮುಖದಲ್ಲಿ ನಗುವಿಲ್ಲ! ಜತೆಗೆ ಬೆಳೆಗಾರರಲ್ಲಿ ಸಂಘಟನೆಯ ಕೊರತೆಯಿಲ್ಲ ಅಡಿಕೆ ಕೃಷಿ ಮತ್ತು ಕೃಷಿಕರಿಗಾಗಿ ರಾಷ್ಟ್ರ ಮಟ್ಟದಲ್ಲಿ 'ಲಾಬಿ' ವ್ಯವಸ್ಥೆ ಆರಂಭವಾಗಿವೆ. ನಮ್ಮಲ್ಲಿ ಅಡಿಕೆ ಬೆಳೆಗಾರ ಅಂದರೆ ಶ್ರೀಮಂತ ಎಂಬ ಭಾವನೆಯಿದೆ. ವಸ್ತುಸ್ಥಿತಿ ಹೀಗಿಲ್ಲ. ರಾಷ್ಟ್ರೀಕೃತ ಬ್ಯಾಂಕುಗಳಿಂದ ಅಡಿಕೆ ಶೇಖರಣಾ ಕೊಠಡಿ ನಿರ್ಮಿಸಲು ನೆರವು ಸಿಗುತ್ತದೆ. ಈ ಮೂಲಕ ಕೃಷಿಕರು ಏಕ ಸಮಯದಲ್ಲಿ ಅಡಿಕೆಯನ್ನು ಮಾರುಕಟ್ಟೆಗೆ ತರುವುದನ್ನು ತಡೆಯಬಹುದು' ಎಂಬ ಅಭಿಪ್ರಾಯ.
ಮೇಳದಲ್ಲಿ ಭಾಗವಿಸಿದ ಕೃಷಿಕರ ಅಭಿಪ್ರಾಯಗಳು
* ಮೇಳದಲ್ಲಿ ಹಸಿ ಅಡಿಕೆ ಸುಲಿ ಯಂತ್ರಗಳ ಸಂಖ್ಯೆ ಕಡಿಮೆ. ಸಿಂಪಡಣಾ ಉಪಕರಣಗಳು ಚೆನ್ನಾಗಿವೆ ಕೊಳ್ಳುವ ಯೋಚನೆಯಲ್ಲಿದ್ದೇವೆ - ಬಸವರಾಜಪ್ಪ, ದಾವಣಗೆರೆ.
* ಭತ್ತದ ಯಂತ್ರಗಳು ಮನುಷ್ಯನ ಸಾಮಥ್ರ್ಯಕ್ಕೆ ಸರಿಯಾಗಿವೆ. ಅಡಿಕೆ ಯಂತ್ರಗಳು ಇನ್ನೂ ಆ ಸ್ಥಿತಿಗೆ ತಲುಪಿಲ್ಲ. ದರವೂ ಜಾಸ್ತಿ. ಗುಣಮಟ್ಟ ಸುಧಾರಿಸಬೇಕಾಗಿದೆ. - ವಿಜಯಾನಂದ ಮಂಗಳೂರು
* ನಮ್ಮಲ್ಲಿ ಕಾರ್ಮಿಕರ ಕೊರತೆ ತುಂಬಾ ಇದ್ದು, ಯಂತ್ರಗಳ ಆವಶ್ಯಕತೆಯಿದೆ. ಯಂತ್ರ ಖರೀದಿಗಾಗಿಯೇ ಬಂದಿದ್ದೇವೆ - ಸಿದ್ಧಲಿಂಗಪ್ಪ, ಚಿಕ್ಕಮಗಳೂರು
* ಯಂತ್ರಗಳಲ್ಲಿ ಅಡಿಕೆ ಸುಲಿಯುವಾಗ ಅಡಿಕೆಗೆ ಪೆಟ್ಟಾಗುತ್ತದೆ. ಬೇಕಾದಲ್ಲಿಗೆ ಒಯ್ಯುಬಹುದಾದ ಯಂತ್ರಗಳು ಬೇಕು - ಯಾಕೂಬ್ ಮುಂಡೂರು
* ಸಣ್ಣ ಯಂತ್ರಗಳು ಚೆನ್ನಾಗಿವೆ. ಕಡಿಮೆ ಕ್ರಯದ, ಕೈ ಚಾಲಿತ ಅಡಿಕೆ ಸುಲಿ ಉಪಕರಣಗಳು ಕೃಷಿಕನಿಗೆ ಉಪಕಾರಿ. ಪ್ರಾಮಾಣಿಕ ಕೆಲಸದವರನ್ನು ಕಳೆದುಕೊಳ್ಳುವ ಭೀತಿಯಲ್ಲಿ ತೆಂಗಿನಂತೆ - ಚಾಲಿ ಅಡಿಕೆ ಸಿಪ್ಪೆ ತೆಗೆಯುವ ಯಂತ್ರ ಚೆನ್ನಾಗಿದೆ - ನಾಗೇಂದ್ರನಾಥ್, ತೀರ್ಥಹಳ್ಳಿ

Friday, October 30, 2009

ಚಾರಿತ್ರಿಕ 'ಅಡಿಕೆ ಯಂತ್ರ ಮೇಳ' ಶುಭಾರಂಭ


ಪುತ್ತೂರಿನ ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನಲ್ಲಿ ಪ್ರಪ್ರಥಮ 'ಅಡಿಕೆ ಯಂತ್ರ ಮೇಳ'ವು ಇಂದು ಸಂಜೆ ಗಂಟೆ 3-45ಕ್ಕೆ ಶುಭಾರಂಭಗೊಂಡಿತು. ಮೇಳಕ್ಕೆ ಅಡಿಕೆ ಸಂಶೋಧನೆ ಮತ್ತು ಅಭಿವೃದ್ಧಿ ಪ್ರತಿಷ್ಠಾನ (ರಿ) ಮಂಗಳೂರು ಇದರ ಸಾರಥ್ಯ. ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು ಮತ್ತು ಫಾರ್ಮರ್ ಫಸ್ಟ್ ಟ್ರಸ್ಟ್, ಪುತ್ತೂರು - ಇವುಗಳ ಜಂಟಿ ಸಹಯೋಗ.
ಉದ್ಘಾಟನೆ : ಮಂಗಳೂರು ಸಂಸದ ನಳಿನ್ಕುಮಾರ್ ಕಟೀಲು ಇವರಿಂದ ದೀಪಜ್ವಲನ ಮತ್ತು ಯಂತ್ರವೊಂದರ ಗುಂಡಿ ಒತ್ತುವುದರ ಮೂಲಕ ಯಂತ್ರ ಚಾಲೂ ಮಾಡಿ ಮೇಳಕ್ಕೆ ಶುಭಚಾಲನೆ. 'ಭಾರತೀಯರದು ಕೃಷಿ ಮತ್ತು ಋಷಿ ಪರಂಪರೆ. ಭಾರತದಲ್ಲಿ ಐಟಿ ಬಂದ್ ಆದರೆ ಇಲ್ಲಿನ ಕೃಷಿ ಕ್ಷೇತ್ರ ನಲುಗದು. ಕೃಷಿಗೆ ಪೂರಕವಾದ ಉದ್ಯಮಕ್ಕೆ ಸ್ವಾಗತ. ಆದರೆ ಅಭಿವೃದ್ಧಿಯ ಹೆಸರಿನಲ್ಲಿ ಕೃಷಿ ನಾಶಕ್ಕೆ ಮುಂದಾಗುವ ಯಾವುದೇ ಉದ್ಯಮಗಳನ್ನು ವಿರೋಧಿಸುತ್ತೇನೆ.' - ಸಂಸದರ ಮಾತು.
ದಿಕ್ಸೂಚಿ ಭಾಷಣ : ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ.ಪಿ.ಜಿ.ಚಂಗಪ್ಪ - ಇವರಿಂದ - ಉತ್ತಮ ಮಾರುಕಟ್ಟೆ ಸೃಷ್ಟಿಯಾಗಲು ಗುಜರಾತಿನಲ್ಲಿದ್ದಂತೆ 'ಫಾರ್ಮರ್ಸ್ ಕಂಪೆನಿ'ಗಳು ನಮ್ಮಲ್ಲೂ ಹುಟ್ಟಿಕೊಳ್ಳಬೇಕು. ದುರಂತವೆಂದರೆ ನಮ್ಮ ಸರಕಾರಗಳು ಅಡಿಕೆಯನ್ನು ತಂಬಾಕಿನ ಜತೆ ಥಳಕು ಹಾಕಿವೆ. ಇದರಿಂದ ಹೊರಗೆ ಬರಲು ಕಷ್ಟಸಾಧ್ಯ. ಈ ಹಿನ್ನೆಲೆಯಲ್ಲಿ ಅಡಿಕೆಯ ಮೌಲ್ಯವರ್ಧಿತ ಉತ್ಪನ್ನಗಳನ್ನು ಕಂಡುಹಿಡಿಯುವಂತಾಗಬೇಕು.
ಅತಿಥಿಗಳಿಂದ ಶುಭಾಶಂಸನೆ : ಕೆ. ರಾಮ ಭಟ್ ಗೌರವಾಧ್ಯಕ್ಷರು, ವಿವೇಕಾನಂದ ವಿದ್ಯಾವರ್ಧಕ ಸಂಘ, ಪುತ್ತೂರು; ಡಾ.ಶಿವಣ್ಣ ವಿಶೇಷಾಧಿಕಾರಿ, ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ, ಮೈಸೂರು ವಿಭಾಗ.
ಪದ್ಮಭೂಷಣ ಡಾ.ವೀರೇಂದ್ರ ಹೆಗ್ಗಡೆಯವರ ಸಭಾಧ್ಯಕ್ಷತೆ. 'ಸ್ವಿಡ್ಜರ್ಲ್ಯಾಂಡ್, ರಷ್ಯಾಗಳಲ್ಲಿ ಹುಲುಸಾಗಿ ಬೆಳೆದ ಪೈರು ನೋಡಲು ಸಿಗುತ್ತದೆ. ಆದರೆ ಅದರ ಮಧ್ಯೆ ರೈತ ಕಾಣುವುದಿಲ್ಲ! ಕಾರಣ ಪೈರು ಹುಲುಸಾಗಿ ಬೆಳೆಯಲು ಯಂತ್ರಗಳ ಬಳಕೆ ಗಣನೀಯವಾಗಿ ಹೆಚ್ಚಾಗಿದೆ. ಬದಲಾವಣೆಗಳು ಅನಿವಾರ್ಯವಾಗುವ ಈ ಕಾಲಘಟ್ಟದಲ್ಲಿ ಯಂತ್ರಾವಿಷ್ಕಾರಕ್ಕೆ ದೊಡ್ಡ ಸಂಸ್ಥೆಗಳು ಮುಂದೆ ಬರಬೇಕಾಗಿದೆ. ಕೃಷಿಕರೇ ಸಂಶೋಧಕರಾಗಿ ಮುಂದೆ ಬರುತ್ತಿರುವುದು ಸಂತೋಷದ ವಿಚಾರ' ಹೆಗ್ಗಡೆಯವರ ಆಶಯ. ಈ ಸಂದರ್ಭದಲ್ಲಿ ರೈತ ಸಂಶೋಧಕರನ್ನು ಡಾ. ವೀರೇಂದ್ರ ಹೆಗ್ಗಡೆಯವರು ಸಂಮಾನಿಸಿದರು.
ಆರಂಭದಲ್ಲಿ ಕು.ಶಿಲ್ಪಾ ಬಿ. ಮತ್ತು ಬಳಗದವರಿಂದ ಪ್ರಾರ್ಥನೆ. ಪ್ರಸ್ತಾವನೆ ಮತ್ತು ಸ್ವಾಗತ - ಎಸ್.ಆರ್.ರಂಗಮೂರ್ತಿ ಅಧ್ಯಕ್ಷರು, ಕ್ಯಾಂಪ್ಕೋ, ಮ್ಯಾನೇಜಿಂಗ್ ಟ್ರಸ್ಟಿ, ಅಡಿಕೆ ಸಂಶೋಧನೆ ಮತ್ತು ಅಭಿವೃದ್ಧಿ ಪ್ರತಿಷ್ಠಾನ. ಧನ್ಯವಾದ : ಪ್ರೊ. ಅಶೋಕ್ ಕುಮಾರ್. ನಿರ್ವಹಣೆ - ಉಪನ್ಯಾಸಕ ಡಾ.ಶ್ರೀಷಕುಮಾರ್, ಉಪನ್ಯಾಸಕ ರೋಹಿಣಾಕ್ಷ ಮತ್ತು ಶ್ರೀ ಪಡ್ರೆ
ವೇದಿಕೆಯಲ್ಲಿ - ಬಲರಾಮ ಆಚಾರ್ಯ, ಅಧ್ಯಕ್ಷರು, ವಿವೇಕಾನಂದ ಇಂಜಿನಿಯರಿಂಗ್ ಕಾಲೇಜು; ಶ್ರೀಕೃಷ್ಣ ಭಟ್, ಉಪಾಧ್ಯಕ್ಷರು, ಕ್ಯಾಂಪ್ಕೋ ಲಿ.,; ಶಾಂತಾರಾಮ ಹೆಗ್ಡೆ, ಅಧ್ಯಕ್ಷರು, ಟಿ.ಎಸ್.ಎಸ್.ಲಿ. ಶಿರಸಿ; ಕೆ.ನರಸಿಂಹ ನಾಯಕ್, ಉಪಾಧ್ಯಕ್ಷರು, ಮ್ಯಾಮ್ಕೋಸ್ ಲಿ., ಶಿವಮೊಗ್ಗ; ಶಂಕರ ಭಟ್, ಬದನಾಜೆ,ಆಯುರ್ವೇದ ಸಂಶೋಧಕರು; ಮಂಚಿ ಶ್ರೀನಿವಾಸ ಆಚಾರ್, ಅಧ್ಯಕ್ಷರು ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘ ಮತ್ತು ಫಾರ್ಮರ್ ಫಸ್ಟ್ ಟ್ರಸ್ಟ್, ಪುತ್ತೂರು ಮತ್ತು ಪಿ.ಮಧುಸೂಧನ ರಾವ್, ಮ್ಯಾನೇಜಿಂಗ್ ಡೈರೆಕ್ಟರ್, ಕ್ಯಾಂಪ್ಕೋ ಲಿ.,
ಮೇಳ ವಿಶೇಷ: * ಗ್ರಾಮೀಣ ಬದುಕಿನ ಹಿನ್ನೆಲೆಯುಳ್ಳ ಸಭಾವೇದಿಕೆ * ರೈತ ಸಂಶೋಧಕರಿಗೆ ಮನ್ನಣೆ - ಉತ್ತಮ ವ್ಯವಸ್ಥೆಯ ಮಳಿಗೆಗಳು * ಪೂರ್ಣಕುಂಭ ಸ್ವಾಗತ ಮತ್ತು ಚೆಂಡೆ ನಿನಾದದೊಂದಿಗೆ ಪರಮಪೂಜ್ಯ ಡಾ.ವೀರೇಂದ್ರ ಹೆಗ್ಗಡೆಯವರಿಗೆ ಸ್ವಾಗತ * ಸಮಾರಂಭದಲ್ಲಿ ರೈತ ಸಂಶೋಧಕರಿಗೆ ಗೌರವಾರ್ಪಣೆ * ಅಡಿಕೆಯಿಂದಲೇ ಸಿದ್ಧವಾದ ಪ್ರವೇಶ ದ್ವಾರ. * ರಾಜ್ಯ ರಾಜಕೀಯದ ವಿದ್ಯಮಾನಗಳ ಹಿನ್ನೆಲೆಯಲ್ಲಿ ರಾಜಕೀಯ ಧುರೀಣರ ಗೈರುಹಾಜರಿ.
ಚಿತ್ರ : ಕೃಷ್ಣ ಸ್ಟುಡಿಯೋ, ಪುತ್ತೂರು


Wednesday, October 28, 2009

ಪುತ್ತೂರಿನಲ್ಲಿ ತ್ರಿದಿನ ಅಡಿಕೆ ಯಂತ್ರ ಮೇಳ -2009
ಕೃಷಿಕರಿಗೆ ಎಲ್ಲಾ ಅಡಿಕೆ ಸುಲಿ ಯಂತ್ರಗಳನ್ನು ಒಂದೇ ಕಡೆ ಕಣ್ಣಾರೆ ಕಾಣುವ ಅವಕಾಶ ಕಲ್ಪಿಸಲು ಅಕ್ಟೋಬರ್ 30ರಿಂದ ಮೂರು ದಿನಗಳ ಕಾಲ ಪುತ್ತೂರಿನಲ್ಲಿ 'ಅಡಿಕೆ ಯಂತ್ರ ಮೇಳ - 2009' ನಡೆಯಲಿದೆ.
ಮಂಗಳೂರಿನ ಅಡಿಕೆ ಸಂಶೋಧನೆ ಮತ್ತು ಅಭಿವೃದ್ಧಿ ಪ್ರತಿಷ್ಠಾನ ವಿವೇಕಾನಂದ ವಿದ್ಯಾವರ್ಧಕ ಸಂಘದ ಸಹಯೋಗದಲ್ಲಿ ನಡೆಸುವ ಈ ಕಾರ್ಯಕ್ರಮಕ್ಕೆ ಫಾರ್ಮರ್ ಫಸ್ಟ್ ಟ್ರಸ್ಟ್ ಸಹಕಾರ ನೀಡಲಿದೆ.
ಪುತ್ತೂರು ನೆಹರುನಗರದ ವಿವೇಕಾನಂದ ಎಂಜಿನಿಯರಿಂಗ್ ಕಾಲೇಜಿನಲ್ಲಿ ಮೇಳ ನಡೆಯಲಿದೆ. ಕಾರ್ಯಕ್ರಮದಲ್ಲಿ ಹಸಿ ಮತ್ತು ಗೋಟಡಿಕೆ ಸುಲಿಯುವ ಯಂತ್ರ ಮತ್ತು ಅಡಿಕೆಗೆ ಬೋರ್ಡೋ ದ್ರಾವಣ ಸಿಂಪಡಿಸುವ ಉಪಕರಣಗಳ ಪ್ರಾತ್ಯಕ್ಷಿಕೆ ಇರುತ್ತದೆ.
ಈ ವರೆಗೆ ಅಭಿವೃದ್ಧಿಪಡಿಸಲಾಗಿರುವ 30 ಕ್ಕೂ ಹೆಚ್ಚು ಅಡಿಕೆ ಸುಲಿಯುವ ಮತ್ತು ಸಿಂಪಡಣ ಉಪಕರಣ / ಯಂತ್ರಗಳ ಪೈಕಿ ಬೆರಳೆಣಿಕೆಯವನ್ನು ಬಿಟ್ಟರೆ ಉಳಿದವನ್ನೆಲ್ಲಾ ಮೆಕ್ಯಾನಿಕಲ್ ಎಂಜಿನೀರಿಂಗ್ನಲ್ಲಿ ಔಪಚಾರಿಕ ಶಿಕ್ಷಣ ಇಲ್ಲದಿರುವ ಕೃಷಿಕರೇ ಅಭಿವೃದ್ಧಿಪಡಿಸಿರುವುದು ಗಮನಾರ್ಹ.

ಕೃಷಿಕರಿಗೆ ಈ ಯಂತ್ರಗಳ ಪರಿಚಯ ಮಾಡುವುದರ ಜತೆಗೆ ಸಂಶೋಧಕ/ತಯಾರಕರಿಗೆ ತಮ್ಮ ಯಂತ್ರಗಳನ್ನು ನಾಳಿನ ಬಳಕೆದಾರರಿಗೆ ತೋರಿಸಿಕೊಡುವ ಅಪೂರ್ವ ಅವಕಾಶವೂ ಇದಾಗಿದೆ. ಅಡಿಕೆ ಕೃಷಿರಂಗದಲ್ಲಿ ಇಂಥ ಕಾರ್ಯಕ್ರಮ ನಡೆಯುವುದು ಇದೇ ಮೊದಲು.
ಮೇಳದ ಅಂಗವಾಗಿ ವಿಚಾರ ಸಂಕಿರಣ, ಸಂಶೋಧಕರೊಂದಿಗೆ ಮುಖಾಮುಖಿಗಳ ಸಭಾ ಕಾರ್ಯಕ್ರಮವೂ ಇರುತ್ತದೆ. ಮೇಳದ ನಿರ್ವಹಣೆಗಾಗಿ ಸಂಘಟನಾ ಸಮಿತಿಯೊಂದನ್ನು ರೂಪಿಸಿದ್ದು ಅದು ಭರದಿಂದ ಸಿದ್ಧತೆ ನಡೆಸತೊಡಗಿದೆ.
ಈಗಾಗಲೇ ಹೆಚ್ಚಿನ ಯಂತ್ರೋಪಕರಣ ತಯಾರಕರನ್ನು ಆಹ್ವಾನಿಸಿದ್ದು, ಕರೆ ಬಾರದ ಅಡಿಕೆ ಸುಲಿ/ಸಿಂಪಡಣಾ ಯಂತ್ರೋಪಕರಣ ಸಂಶೋಧಕ/ತಯಾರಕರು ಮೇಳ ಸಮಿತಿಯ ಸಂಚಾಲಕ ಪಿ.ಶ್ಯಾಮ ಭಟ್ಟರನ್ನು (94481 22272) ಸಂಪರ್ಕಿಸಬಹುದು.

ಚಿತ್ತಕುಂಚದಲ್ಲಿ ಮಿಂದೆದ್ದ ಅಡಿಕೆಸಿಪ್ಪೆ ಚಿತ್ತಾರ


ಅಡಿಕೆ ಸಿಪ್ಪೆಯ ಈ ಚಿತ್ತಾರಗಳು ಕೇರಳದ ಅರಣ್ಮೂಲಾದ ಜಯಕೃಷ್ಣನ್ ಅವರ ಕೈಚಳಕ. ಮಣ್ಣಲ್ಲಿ ಮಣ್ಣಾಗಿ ಹೋಗುವ ಅಡಿಕೆ ಸಿಪ್ಪೆಗೆ ಅಂದವರ್ಧನೆ ಮಾಡುವುದರ ಮೂಲಕ ಮೌಲ್ಯವರ್ಧನೆ ಮಾಡಿದ್ದಾರೆ.
ಜಯಕೃಷ್ಣರಿಗೆ ಚಿತ್ರಕಲೆ ಬಾಲ್ಯಾಸಕ್ತಿ. ಇವರ ಕೈಯಿಂದ ಸ್ಕೆಚ್ ಪೆನ್ ತಪ್ಪುವುದೇ ಇಲ್ಲ! ಬಿಳಿ ಹಾಳೆ ಹಾಳೆಯಾಗಿಯೇ ಇರುವುದು ಇವರಿಗೆ ಇಷ್ಟವಾಗುವುದಿಲ್ಲ! ಅದರಲ್ಲಿ ಏನಾದರೊಂದನ್ನು ಬಿಡಿಸಿದರಷ್ಟೇ ಅವರಿಗೆ ಸಮಾಧಾನ. ಈ ಗೀಳು `ವಿಪರೀತ ಎನಿಸಿದರೂ, ಮಗನಲ್ಲಿದ್ದ ಅವ್ಯಕ್ತ ಕಲಾವಿದ ಅನಾವರಣಗೊಳ್ಳುತ್ತಿರುವುದನ್ನು ಕಂಡ ತಂದೆ-ತಾಯಿಯರಿಂದ ಪ್ರೋತ್ಸಾಹ.`
'ನನ್ನ ಅಜ್ಜನಿಗೆ ಬೀಡಾ ಅಂಗಡಿ ಇದೆ. ಏನಿಲ್ಲವೆಂದರೂ ವಾರಕ್ಕೆ ನೂರು ಅಡಿಕೆ ಬೀಡಾಕ್ಕೆ ಬೇಕು. ಒಮ್ಮೆ ಹೀಗಾಯಿತು - ಅಂಗಡಿಯ ಎದುರು ಅಡಿಕೆ ಸಿಪ್ಪೆ ಬಿಸಾಡಿದ್ದರು. ನನಗದು ಹಕ್ಕಿ ಬಾಲದಂತೆ ಕಂಡಿತು. ಇದನ್ಯಾಕೆ ಚಿತ್ತಾರ ಮಾಡಬಾರದು? ರಟ್ಟಿನಲ್ಲಿ ಹಕ್ಕಿಯಾಕಾರದ ಸ್ಕೆಚ್ ಸಿದ್ದವಾಯಿತು. ಅಡಿಕೆ ಸಿಪ್ಪೆಯನ್ನು ಅದಕ್ಕೆ ಅಂಟಿಸುತ್ತಾ ಜೀವಕಳೆ. ಧ್ಯೆರ್ಯ ಬಂತು. ಹಕ್ಕಿ ಕುಟುಂಬವೊಂದನ್ನು ಇದರಿಂದ ತಯಾರಿಸಿದೆ. ಅದುವೇ ನನ್ನ ಮೊದಲ ಅಡಿಕೆ ಸಿಪ್ಪೆ ಚಿತ್ತಾರ ಎನ್ನುತ್ತಾರೆ ಜಯಕೃಷ್ಣನ್.
ಕಳೆದೆರಡು ವರುಷದಲ್ಲಿ ಇಪ್ಪತ್ತೈದಕ್ಕೂ ಮಿಕ್ಕಿದ ಚಿತ್ತಾರಗಳ ಸೃಷ್ಟಿ. ಗಣಪತಿ, ರಾಷ್ಟ್ರಪಿತ ಗಾಂಧೀಜಿ, ಡಾ.ಅಬ್ದುಲ್ ಕಲಾಂ, ರಾಜಾ ರವಿವರ್ಮನ ವರ್ಣಕೃತಿ, ಹುಲಿಮುಖ, ಸಿಂಹಮುಖ, ಗೂಬೆ, ಒಂಟೆಕುಟುಂಬ, ಹದ್ದು, ಜಿಂಕೆಯನ್ನು ಬೇಟೆಯಾಡುವ ನರಿ, ಅಳಿಲು, ಹಾವಿನ ಬೇಟೆಯಲ್ಲಿರುವ ಹದ್ದು.....ಚಿತ್ತಾರಗಳು `ಅಡಿಕೆ ಸಪ್ಪೆಯ ರಚನೆಗಳೋ ಎಂದು ನಿಬ್ಬೆರಗಾಗಿಸುತ್ತವೆ! ಅಷ್ಟು ಆಕರ್ಷಕ ಮತ್ತು ಸಹಜ ಗುಣ.
ಕನಿಷ್ಟ ಆರು ತಿಂಗಳಾದರೂ ನೀರಿನಲ್ಲಿದ್ದ ಹಣ್ಣಡಿಕೆಯ (ನೀರಡಿಕೆ) ಸಿಪ್ಪೆಯನ್ನು ಚಿತ್ತಾರಕ್ಕೆ ಆಯ್ದುಕೊಳ್ಳುತ್ತಾರೆ. ಸಾಮಾನ್ಯವಾಗಿ ಬೀಡಾ ಅಂಗಡಿಗಳಲ್ಲಿ ಈ ರೀತಿಯ ಅಡಿಕೆಯನ್ನೇ ಬಳಸುತ್ತಾರೆ. (ಹಣ್ಣಡಿಕೆಯನ್ನೂ ಬಳಸುತ್ತಾರೆ) `ತನ್ನ ಅಜ್ಜನ ಬೀಡಾ ಅಂಗಡಿಯ ಅಡಿಕೆ ಸಿಪ್ಪೆ ಈಗ ತ್ಯಾಜ್ಯವಾಗುವುದಿಲ್ಲ ಎನ್ನುವ ಜಯಕೃಷ್ಣನ್, ಹತ್ತಿರದ ಚೆಂಗನೂರು ಪೇಟೆಯಲ್ಲಿ ಅವರ ಆವಶ್ಯಕತೆಗೆ ಬೇಕಾದ ಅಡಿಕೆ ಸಿಪ್ಪೆ ಸಿಗುತ್ತಿದೆ.
ತನ್ನೂರಿನಲ್ಲಿ ಜರುಗಿದ ಪ್ರದರ್ಶನವೊಂದರಲ್ಲಿ ಚಿತ್ತಾಕರ್ಷಕವಾದ ಇವರ ಚಿತ್ತಾರಗಳಿಗೆ ಮಾರುಹೋದವರು ಅಧಿಕ. `ಹಣಕೊಟ್ಟು ಪಡಕೊಳ್ಳಲು ಹಲವು ಮಂದಿ ಮುಂದಾದರು. ನನ್ನಲ್ಲಿ ಅಷ್ಟು ಪ್ರಮಾಣದಲ್ಲಿ ಚಿತ್ತಾರಗಳಿಲ್ಲ. ತಯಾರಿಸಲು ಸಮಯವೂ ಬೇಕು. ನನ್ನ ವಿದ್ಯಾಭ್ಯಾಸದ ಮಧ್ಯದಲ್ಲಿ ಈ ಕೆಲಸವಾಗಬೇಕು. ಹಾಗಾಗಿ ಪ್ರದರ್ಶನದಲ್ಲಿ ಯಾರಿಗೂ ಚಿತ್ತಾರವನ್ನು ಮಾರಾಟ ಮಾಡಿಲ್ಲ. ಪ್ರದರ್ಶನದ ಕೊನೆಗೆ `ಮಾರಾಟಕ್ಕಿಲ್ಲ, ಪ್ರದರ್ಶನ ಮಾತ್ರ ಅಂತ ಫಲಕ ಹಾಕಬೇಕಾಯಿತು ಎಂದು ನೆನಪಿಸಿಕೊಳ್ಳುತ್ತಾರೆ.
`ಪ್ರಸಿದ್ಧ ದೇವಸ್ಥಾನವೊಂದರಲ್ಲಿದ್ದ ರಾಮಾಯಣ-ಭಾಗವತದ ಭಿತ್ತಿ ಚಿತ್ರಗಳನ್ನು ನೋಡಿ ಅದರ ಕಥೆಯನ್ನು ಅಮ್ಮ ಹೇಳಿದರು. ಅದರಿಂದ ರೂಪುಗೊಂಡಿತು - ಪೂತನಾಸಂಹಾರ ಮತ್ತು ಸೀತಾಪಹಾರ ದೃಶ್ಯಗಳ ಜಲವರ್ಣಚಿತ್ರಗಳು ಜಯಕೃಷ್ಣ. ಅರಣ್ ಮೂಲಾದ ವಾಸ್ತುವಿದ್ಯಾ ಗುರುಕುಲದಲ್ಲಿ `ಭಿತ್ತಿಚಿತ್ರಗಳನ್ನು ಜಯಕೃಷ್ಣ ಅಭ್ಯಸಿಸುತ್ತಿದ್ದಾರೆ. ಕಲಿಕೆಯೊಂದಿಗೆ ಬಿಡುವು ಮಾಡಿಕೊಂಡು `ಅಡಿಕೆ ಸಿಪ್ಪೆ ಅರಸುತ್ತಾರೆ, ಚಿತ್ತಾರಕ್ಕಾಗಿ. ಹಲವು ಬಹುಮಾನಗಳು ಅರಸಿ ಬಂದಿವೆ.
ಚಿತ್ರ ಯಾರಿಗೂ ಬಿಡಿಸಬಹುದು(!) ಅಂತ ಸುಲಭದಲ್ಲಿ ಹೇಳಿಬಿಡಬಹುದು. ಆದರೆ ಹಾಳಾಗಿ ಹೋಗುವ ಯಾರೂ ಅಷ್ಟಾಗಿ ಗಮನಿಸದ ಅಡಿಕೆ ಸಿಪ್ಪೆಯು ಚಿತ್ತಾರದ ಮೂಲಕ ತನ್ನ ಅಂದವನ್ನು ವೃದ್ಧಿಸಿಕೊಳ್ಳುವುದು ಒಂದು ಎಕ್ಸ್ಕ್ಲೂಸಿವ್ ಅಲ್ವಾ. ನೋಡುವ ಒಳಕಣ್ಣಿದ್ದರೆ ಜಯಕೃಷ್ಣನ್ ಶ್ರಮ ಆರ್ಥವಾಗುತ್ತದೆ.

Saturday, October 17, 2009

'ಸುರಂಗ'ಗಳಿಂದ ನೀರ ನೆಮ್ಮದಿ!


ಬಂಟ್ವಾಳ ತಾಲೂಕು ಮಾಣಿಲದ ಮಾಣಿಮೂಲೆ ಅಚ್ಯುತ ಭಟ್ಟರ ಭೂಮಿ ಎಲ್ಲರಂತೆ ಸಮತಟ್ಟಲ್ಲ. ತೀರಾ ಗುಡ್ಡ. ಬಾವಿ ತೋಡುವಂತಿಲ್ಲ. ತೋಡಿದರೂ ನೀರು ಸಿಗಬಹುದೆಂಬ ವಿಶ್ವಾಸವಿಲ್ಲ. ಒಸರುವ ಒರತೆ ನೀರನ್ನು ಹಿಡಿದಿಡಬೇಕು. ಅದು ಬಿಟ್ಟರೆ ಬೇರೆ ನೀರಿನ ಮೂಲವಿಲ್ಲ.
ಕೃಷಿ ಜವಾಬ್ದಾರಿ ಹೆಗಲಿಗೆ ಬಂದಾಗ ತಂದೆಯವರು ಕೊರೆಸಿದ್ದ ಸುರಂಗವೊಂದರ ನೀರೇ ಆಧಾರ. ಅದರ ಕಿರು ಬೆರಳು ಗಾತ್ರದ ಹರಿನೀರನ್ನು ಸಂಗ್ರಹಿಸಿ ಬಳಕೆ. ತೀರಾ ಬೆಟ್ಟವಾದುದರಿಂದ ಅಲ್ಲಲ್ಲಿ ಸಮತಟ್ಟು ಮಾಡಿ ಮನೆ, ಕೃಷಿ. ತಟ್ಟು ಮಾಡಿದಲ್ಲೆಲ್ಲಾ ಅಚ್ಯುತ ಭಟ್ ಸುರಂಗ ಕೊರೆದರು ಈಗವರಲ್ಲಿ 22 ಸುರಂಗಗಳಿವೆ. ಅದರ ನೀರೇ ಆರೆಕ್ರೆ ಅಡಿಕೆ ತೋಟಕ್ಕೆ ಆಧಾರ.
ಸುರಂಗ - ನೆಲದಾಳದ ಹೊಂಡವಲ್ಲ. ಗುಡ್ಡದಡ್ಡಕ್ಕೆ ಕೊರೆದು ಮಾಡಿದ ರಚನೆ. ಆರುವರೆ ಅಡಿ ಎತ್ತರ, ಮೂರಡಿ ಅಗಲದಷ್ಟು - ಮನುಷ್ಯ ಹೋಗುವಷ್ಟು - ಗುಡ್ಡವನ್ನು ಅಡ್ಡಕ್ಕೆ ಕೊರೆಯುವುದು. ಕೃಷಿಯಲ್ಲಿ ಬಳಸುವಂತಹುದೇ, ಆದರೆ ಚಿಕ್ಕದಾದ ಪಿಕ್ಕಾಸಿ ಮುಖ್ಯ ಅಸ್ತ್ರ! ಒಬ್ಬ ಅಗೆಯಲು, ಮತ್ತೊಬ್ಬ ಮಣ್ಣು ತುಂಬಿಸಲು, ಇನ್ನೊಬ್ಬ ಮಣ್ಣನ್ನು ಹೊರ ಸಾಗಿಲು - ಹೀಗೆ ಮೂವರು ಬೇಕು.
ಅಚ್ಯುತ ಭಟ್ಟರ ಗುಡ್ಡದ ಮಣ್ಣು - ಜಂಬಿಟ್ಟಿಗೆ (ಮುರ). ಸುರಂಗ ಕೊರೆಯಲು ಸೂಕ್ತ ಮಣ್ಣು. ಜರಿಯುವುದಿಲ್ಲ, ಕುಸಿಯುವುದಿಲ್ಲ. ಸುರಂಗ ಕೊರೆತ ಎಚ್ಚರ ಬೇಡುವ ಕೆಲಸ. ಕೊರೆಯುತ್ತಾ ಮುಂದೆ ಹೋದಷ್ಟೂ ಬೆಳಕಿನ ಅಭಾವ. ಕ್ಯಾಂಡಲ್, ಲ್ಯಾಟನ್ ಬಳಸುತ್ತಾರೆ. ಕೆಲವೊಂದು ಸಲ ಆಮ್ಲಜನಕ ಅಭಾವವಾಗುತ್ತದೆ. ಆಗ ಒಮ್ಮೆ ಹೊರಗೆ ಬಂದು ಸ್ವಲ್ಪ ಹೊತ್ತು ಇದ್ದು ಪುನಃ ಕೆಲಸ ಆರಂಭ. ಮಣ್ಣಿನಲ್ಲಿ ನೀರಿನ ಪಸೆ ದೊರೆತರೆ 'ಮುಂದೆ ನೀರು ಸಿಗುತ್ತದೆ' ಎಂಬ ಸೂಚನೆ. 'ಕೊರೆದಷ್ಟೂ ನೀರಿನ ಪಸೆಯ ಸೂಚನೆ ಸಿಗದಿದ್ದರೆ ಸುರಂಗ ಕೊರೆವ ದಿಕ್ಕನ್ನು ಅಲ್ಲೇ ಸ್ವಲ್ಪ ಬದಲಿಸಿದರೆ ಆಯಿತು. ಅದೆಲ್ಲಾ ಅಲ್ಲಲ್ಲಿನ ನಿರ್ಧಾರ.' ಎನ್ನುತ್ತಾರೆ ಭಟ್.
ನೀರಿನ ಒರತೆ ಸಿಕ್ಕಿದಲ್ಲಿಗೆ ಕೊರೆತ ಬಂದ್. ಒರತೆಯ ಸೆಲೆ ಸಿಕ್ಕಿದಲ್ಲಿ ಮಣ್ಣಿನಿಂದ ಸಣ್ಣ ದಂಡೆ (ಕಟ್ಟ) ಮಾಡಿದರೆ ನೀರು ಅದರಲ್ಲಿ ತುಂಬಲು ಅನುಕೂಲ. ಸುರಂಗದುದ್ದಕ್ಕೂ ಚಿಕ್ಕ ಕಣಿಯನ್ನು ತೆಗದು ನೀರನ್ನು ಹೊರತರಬಹುದು. ಕಣಿಯ ಬದಲಿಗೆ ಅಡಿಕೆಯ ದಂಬೆ ಬಳಕೆ.ಒಳಭಾಗದಿಂದ ನೀರು ಹೊರಬರುವಾಗ, ತಾಪಕ್ಕೆ ನೀರು ಆರಿಹೋಗುತ್ತದೆ. ಇದಕ್ಕಾಗಿ ಪಿವಿಸಿ ಪೈಪನ್ನು ಬಳಸಿದ್ದಾರೆ. ನೀರಿನ ಮೂಲದಿಂದ ಪೈಪ್ ಜೋಡಣೆ. ಪೈಪಿನೊಳಗೆ ಬೇರುಗಳು ಮನೆ ಮಾಡುತ್ತವೆ. ಆಗ ನೀರಿನ ಹರಿವಿಗೆ ತೊಂದರೆ. ವರುಷಕ್ಕೊಮ್ಮೆ ಬೇರು ತೆಗೆದು ಪೈಪನ್ನು ಶುಚಿಗೊಳಿಸುವುದು ಅನಿವಾರ್ಯ.
ಸುರಂಗದೊಳಗೆ ಬಾವಲಿಗಳ ಬಿಡಾರ. ಅವುಗಳ ಹಿಕ್ಕೆಗಳು ನೀರಿನೊಂದಿಗೆ ಟ್ಯಾಂಕಿ ಸೇರುತ್ತವೆ. ತೋಟಕ್ಕೆ ಓಕೆ. ಆದರೆ ಕುಡಿನೀರಿಗೆ? ಒಂದು ಸುರಂಗಕ್ಕೆ ಬಾವಲಿಗಳು ಒಳ ಹೋಗದಂತೆ ಹೊರಮೈಗೆ ಬಲೆ ಹಾಕಿದ್ದಾರೆ. ಇದರ ನೀರು ಮನೆ ಸಮೀಪದಲ್ಲಿರುವ ಕುಡಿ ನೀರಿನ ಟ್ಯಾಂಕಿಯಲ್ಲಿ ಸಂಗ್ರಹವಾಗುತ್ತದೆ.
ಇಪ್ಪತ್ತೆರಡು ಸುರಂಗದಿಂದ ಬರುವ ನೀರು ನಾಲ್ಕು ಟ್ಯಾಂಕಿಗಳಲ್ಲಿ ಸಂಗ್ರಹ. ಒಂದೊಂದು ಟ್ಯಾಂಕಿಗೆ ನಾಲ್ಕೈದು ಸುರಂಗದ ಸಂಪರ್ಕ. ಟ್ಯಾಂಕಿಯಿಂದ ಟ್ಯಾಂಕಿಗೆ ಲಿಂಕ್. ಇಲ್ಲಿಂದ ನೇರ ತೋಟಕ್ಕೆ. ದೇವರ ಪೂಜೆಗೂ ಇದೇ ನೀರು. ಅಡುಗೆ ಮನೆಗೆ ನೇರ ಸಂಪರ್ಕ. ನಲ್ಲಿ ತಿರುತಿಸಿದರೆ ಆಯಿತು.
ಮಾಣಿಲದಲ್ಲಿ ಐನೂರ ಐವತ್ತು ಮನೆಗಳು. ಶೇ.65ರಷ್ಟು ಮನೆಗಳಲ್ಲಿ ಕುಡಿನೀರಿಗೆ 'ಸುರಂಗ'ವೇ ಆಧಾರ. ಅದರಲ್ಲೂ ಮಾಣಿಮೂಲೆಯ ಹದಿನೆಂಟು ಮನೆಗಳ ಬದುಕು - ಸುರಂಗದ ನೀರಿನಲ್ಲಿ! 'ನಮ್ಮೂರಿನಲ್ಲಿ ಸುರಂಗ ಕೊರೆಯಲು ಸ್ಥಳ ಸೂಚಿಸುವುದು ತಂದೆಯವರೇ. ಏನಿಲ್ಲವೆಂದರೂ ನೂರು ಆಗಿರಬಹುದು. ವಿಫಲವಾದುದೇ ಇಲ್ಲ' ಎನ್ನಲು ಗೋವಿಂದ ಭಟ್ಟರಿಗೆ ಹೆಮ್ಮೆ. 'ಇಂತಹ ಜಾಗದಲ್ಲಿ ಸುರಂಗ ಕೊರೆದರೆ ನೀರಿದೆ' ಎಂದು ಅಚ್ಯುತ ಭಟ್ಟರು ಖರಾರುವಾಕ್ಕಾಗಿ ಹೇಳಬಲ್ಲರು.
ಮಾಣಿಮೂಲೆಯಲ್ಲಿ ಸುರಂಗವೊಂದರ ರಚನೆಗೆ ಏನಿಲ್ಲವೆಂದರೂ ಹದಿನೈದರಿಂದ ಇಪ್ಪತ್ತು ಸಾವಿರ ವೆಚ್ಚ. ಒಮ್ಮೆ ಬಂಡವಾಳ ಹಾಕಿದರೆ ಆಯಿತು. ಇಂಧನ, ವಿದ್ಯುತ್, ಡೀಸೆಲ್, ಪೆಟ್ರೋಲ್, ಪಂಪ್..ರಗಳೆಯೇ ಇಲ್ಲ. ಪ್ರತಿ ವರುಷ ನಿರ್ವಹಣೆ ಮಾತ್ರ. ಗುಡ್ಡದಲ್ಲಿ ಗೇರು ಗಿಡಗಳನ್ನು ಬೆಳೆಸಿದ್ದಾರೆ. ಸಹಜವಾಗಿ ಇತರ ಗಿಡಗಳು ಬೆಳೆದಿವೆ. ಇದರಿಂದಾಗಿ ನೀರಿಂಗಲು ಅನುಕೂಲ. 'ಗುಡ್ಡದಲ್ಲಿ ಇಂಗುಗುಂಡಿಗಳನ್ನು ಮಾಡಿದರೆ ಮತ್ತೂ ಒಳ್ಳೆಯದು' ಭಟ್ಟರ ಅಭಿಪ್ರಾಯ

ಗಾಣದಾಳು ಶ್ರೀಕಂಠರಿಗೆ 'ಮುರುಘಾ ಶ್ರೀ'

ರಾಜ್ಯಮಟ್ಟದ 'ಮುರುಘಾ ಶ್ರೀ' ಅಭಿವೃದ್ಧಿ ಪತ್ರಿಕೋದ್ಯಮ ಪ್ರಶಸ್ತಿಯು ಈ ಬಾರಿ ಪ್ರಜಾವಾಣಿಯ ಗಾಣದಾಳು ಶ್ರೀಕಂಠರಿಗೆ ಒಲಿದಿದೆ.
ಒರಿಸ್ಸಾದ ನಟವರ ಸಾರಂಗಿಯವರ ಭತ್ತದ ಕೃಷಿಯ ಕುರಿತು ಅವರು ಸುಧಾದಲ್ಲಿ ಬರೆದ 'ದೇಸಿ ಭತ್ತ ಬ್ರಹ್ಮ' ಪ್ರಶಸ್ತಿ ತಂದುಕೊಟ್ಟ ಬರೆಹ.
ಮೈಸೂರಿನ ಕಾರ್ಯನಿರತ ಪತ್ರಕರ್ತರ ಸಂಘದ ಸಂಯೋಜನೆಯಲ್ಲಿ ಮುಂದಿನ ತಿಂಗಳು ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.
ಪ್ರಶಸ್ತಿ ಪುರಸ್ಕೃತ ಶ್ರೀಕಂಠರಿಗೆ ಅಭಿನಂದನೆಗಳು.

ನಾಗೇಂದ್ರ ಸಾಗರ್ ಅವರಿಗೆ 'ಕೃಷಿಪತ್ರಿಕೋದ್ಯಮ ಪ್ರಶಸ್ತಿ'

ಧಾರವಾಡದ ಕೃಷಿ ಮಾಧ್ಯಮ ಕೇಂದ್ರ ಸ್ಥಾಪಿಸಿರುವ ರಾಜ್ಯಮಟ್ಟದ ಕೃಷಿಪತ್ರಿಕೋದ್ಯಮ ಪ್ರಶಸ್ತಿಗೆ ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕು ಚಿಪ್ಪಳಿಯ ನಾಗೇಂದ್ರ ಸಾಗರ್ ಆಯ್ಕೆಯಾಗಿದ್ದಾರೆ.

ಕನ್ನಡದಲ್ಲಿ ಅರ್ಥಪೂರ್ಣ ಕೃಷಿಪತ್ರಿಕೋದ್ಯಮಕ್ಕೆ ಉತ್ತೇಜನ ನೀಡುವುದಕ್ಕಾಗಿ ಕೇಂದ್ರ ಕಳೆದ ಎಂಟು ವರ್ಷಗಳಿಂದ ಕೃಷಿಕರೇ ಬರೆದ ಲೇಖನ ಮತ್ತು ಮುಕ್ತ ವಿಭಾಗ ಹೀಗೆ ಎರಡು ವಿಭಾಗಗಳಲ್ಲಿ ಪ್ರಶಸ್ತಿ ನೀಡುತ್ತಿದೆ. ಈ ಬಾರಿ ಎರಡೂ ವಿಭಾಗಗಳನ್ನೂ ಸೇರಿಸಿ ಒಂದೇ ಪ್ರಶಸ್ತಿ. ನಾಗೇಂದ್ರ ಸಾಗರ್ ಬರೆದ 'ವರಿ ಇಳಿಸಿದ ರಸಾವರಿ' (ಅಡಿಕೆ ಪತ್ರಿಕೆ: ಜೂನ್, 2009) ಲೇಖನ ಕೃಷಿಪತ್ರಿಕೋದ್ಯಮ ಪ್ರಶಸ್ತಿಗಾಗಿ ಆಯ್ಕೆಯಾಗಿದೆ.

ಪ್ರಶಸ್ತಿ ಎರಡು ಸಾವಿರ ರೂಪಾಯಿ ನಗದು ಪುರಸ್ಕಾರ, ಪರಿಸರ ಶಿಲ್ಪ ಹಾಗೂ ಪ್ರಶಸ್ತಿ ಪತ್ರವನ್ನು ಒಳಗೊಂಡಿದೆ. ಅಕ್ಟೋಬರ್ 25, 2009ರಂದು ಉತ್ತರ ಕನ್ನಡ ಜಿಲ್ಲೆ ಶಿರಸಿ ತಾಲೂಕಿನ ಬೆಂಗಳಿ ಗ್ರಾಮದಲ್ಲಿ ನಡೆಯಲಿರುವ ಕೇಂದ್ರದ 9ನೇ ವಾರ್ಷಿಕೋತ್ಸವದಲ್ಲಿ ಪ್ರಶಸ್ತಿ ಪ್ರದಾನ.

ಕೃಷಿ ಮಾಧ್ಯಮ ಕೇಂದ್ರದ 'ನವಮ ಸಂಭ್ರಮ'

ಧಾರವಾಡದ ಕೃಷಿ ಮಾಧ್ಯಮ ಕೇಂದ್ರದ ಒಂಭತ್ತನೇ ವಾರ್ಷಿಕೋತ್ಸವವು ಶಿರಸಿ ಸನಿಹದ ಬೆಂಗಳಿಯಲ್ಲಿ ಅಕ್ಟೋಬರ್ 25ರಂದು ಪೂ. ಗಂಟೆ 11.15ಕ್ಕೆ ಜರುಗಲಿದೆ.

ಹಿರಿಯ ಕೃಷಿಕರಾದ ವಾಸುದೇವ. ವೆಂ. ಹೆಗಡೆ, ಹಿರಿಯ ಪತ್ರಕರ್ತರಾದ ನಾಗೇಶ ಹೆಗಡೆ ಮತ್ತು ಅಡಿಕೆ ಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕ ಶ್ರೀ ಪಡ್ರೆಯವರ ಉಪಸ್ಥಿತಿ.

ಸಮಾರಂಭದಲ್ಲಿ - ಕೃಷಿ ಪತ್ರಿಕೋದ್ಯಮ ಪ್ರಶಸ್ತಿ ಪ್ರದಾನ, 'ಕಾಮ್ ಫೆಲೋ' ಪ್ರಮಾಣ ಪತ್ರ ವಿತರಣೆ, 'ಸಾವಯವದ ಹಾದಿ' ಮತ್ತು 'ಕಾಡು ಮಾವು' ಕೃಷಿ ಪುಸ್ತಕಗಳ ಅನಾವರಣ ನಡೆಯಲಿದೆ.

(ಮಾಹಿತಿ : ಅನಿತಾ ಪೈಲೂರು, ಅಧ್ಯಕ್ಷೆ, ಕೃಷಿ ಮಾಧ್ಯಮ ಕೇಂದ್ರ)

'ನಮ್ಮ ಅಡುಗೆಗೆ ನಮ್ಮದೇ ತರಕಾರಿ'


ಸೆಪ್ಟೆಂಬರ್ ಕೊನೆ ವಾರ ನಾಲ್ಕು ದಿವಸ ಧಾರವಾಡ ಕೃಷಿ ವಿಶ್ವವಿದ್ಯಾಲಯದ 'ಕಾಲಾವಧಿ ಕೃಷಿಮೇಳ' ನಡೆಯಿತು. ಐದು ಲಕ್ಷಕ್ಕೂ ಮಿಕ್ಕಿ ರೈತರು ಬಂದಿದ್ದರು ಅಂತ ವಿವಿಗೆ ಸಂತಸ-ಹೆಮ್ಮೆ. ಈ ಸಂಭ್ರಮದ ಮಧ್ಯೆ 'ಮಹಾಮಳೆ'ಗೆ ಕೃಷಿಮೇಳವು ಕೊಚ್ಚಿಹೋದ ವಿಚಾರ ಸದ್ದಾಗಲೇ ಇಲ್ಲ! ಈಗಂತೂ ಈ ಮಧ್ಯೆ ಧಾರವಾಡ ವಿಕಾಸ ಗಾಮೀಣ ಬ್ಯಾಂಕಿನ ಸಾರ್ವಜನಿಕ ಸಂಪರ್ಕಾಧಿಕಾರಿ ಉಲ್ಲಾಸ ಗುನಗಾ ಸಿಕ್ಕರು. ಅವರು ಸಿಕ್ಕಾಗಲೆಲ್ಲಾ 'ನಮ್ಮಲ್ಲಿ ಈ ವರುಷ ಬರೋಬ್ಬರಿ ಟೊಮೆಟೋ ಆಯ್ತು, ಸಿಕ್ಕಾಪಟ್ಟೆ ಫ್ಯಾಷನ್ಫ್ರುಟ್ ಆಯ್ತು..' ಹೀಗೆ ಹೊಸ ಹೊಸ ಸುದ್ದಿ ಹೇಳುತ್ತಾ ಇರುತ್ತಾರೆ. ಈ ಸಲ ಅವರ 'ಪೇಟೆ ಕೃಷಿ' ನೋಡೇ ಬಿಡೋಣ ಅನ್ನುತ್ತಾ ನಿಂತದ್ದು 'ಕಲ್ಯಾಣಿ' ಮುಂದೆ.
ಗುನಗಾ ಅವರಿಗೆ 'ಕಲ್ಯಾಣಿ' ಎದ್ದು ನಿಂತಾಗ ಖುಷಿಯಾಗಲಿಲವಂತ್ಲೆ! ಕಾರಣ, ಹಸಿರೆಲ್ಲೆಬ್ಬಿಸಲಿ ಎಂಬ ಚಿಂತೆ. 1300 ಚದರಡಿ ಜಾಗದೊಳಗೆ ಬಂಧಿಯಾಗಿದ್ದಳು ಕಲ್ಯಾಣಿ. ಮನೆಸುತ್ತ ಓಡಾಡಲು ಮೂರಡಿ ಅಗಲದಷ್ಟು ಜಾಗ. ಕಲ್ಲುಹಾಸು. ಒಂಚೂರು ಮಣ್ಣಿಲ್ಲ. ಆವರಣಕ್ಕೆ ತಾಗಿಕೊಂಡಿರುವ ಕಲ್ಲುಹಾಸನ್ನು ಎರಡಡಿ ಅಗಲಕ್ಕೆ ಕತ್ತರಿಸಿ, ಅದಕ್ಕೆ ಮಣ್ಣನ್ನು ಪೇರಿಸಿದರು. ಸೊಪ್ಪು-ಬಳ್ಳಿ-ತರಕಾರಿ ಬೀಜಗಳನ್ನು ಹಾಕಿದರು. ಬಾಳೆ, ತೆಂಗು ಊರಿದರು. ಆರು ತಿಂಗಳಲ್ಲಿ ಹಸಿರೆದ್ದಾಗ ಖುಷಿಯೋ ಖುಷಿ. 'ನಾವೀಗ ಅಡುಗೆ ಮನೆಗೆ ಹೊರಗಿನಿಂದ ತರಕಾರಿ ತರುವುದೇ ಇಲ್ಲ' ಮನೆಯೊಡತಿ ಸುಮಾ.
ವಾರಕ್ಕೊಮ್ಮೆ ದಂಪತಿಗಳ ಸೆಗಣಿ ಬೇಟೆ! ರವಿವಾರ ಬೆಳ್ಳಂಬೆಳಗ್ಗೆ ಒಂದು ಗಂಟೆ ಸುತ್ತಾಟ. ಸೆಗಣಿ ಸಂಗ್ರಹ. 'ಈ ಬ್ಯಾಂಕ್ ಅಧಿಕಾರಿಗೆ ಕೈತುಂಬಾ ಸಂಬಳ ಸಿಗುತ್ತೆ. ಸೆಗಣಿಯಿಂದ ಕೈಯೆಲ್ಲಾ ಗಲೀಜು ಮಾಡ್ಕೋತಾರೆ. ಎಂತಾ ಮನುಷ್ಯರಪ್ಪಾ...' ಗೇಲಿ ಮಾಡ್ತಾರಂತೆ.
ಮನೆ ಕಟ್ಟುವಾಗಲೇ ಮಳೆಕೊಯ್ಲಿಗೆ ವ್ಯವಸ್ಥೆ. ಅಡುಗೆ ಮನೆ ನೀರು, ಸ್ನಾನದ ನೀರು ವ್ಯರ್ಥವಾಗದೆ ಗಿಡಗಳಿಗೆ ಉಣಿಕೆ. ಮನೆ ಹಿಂಭಾಗ ಚಿಕ್ಕ-ಚೊಕ್ಕ ಕಂಪೋಸ್ಟ್ ಹೊಂಡ. ಸೆಗಣಿಯೊಂದಿಗೆ ಅಡುಗೆ ತ್ಯಾಜ್ಯ, ಕಸ-ಕಡಿಗಳು ಗೊಬ್ಬರವಾಗುತ್ತವೆ. 'ಒಂದು ಬಕೆಟ್ ದ್ರವಸೆಗಣಿಗೆ ಒಂದು ಕಿಲೋ ಕಡ್ಲೆ ಹಿಟ್ಟನ್ನು ಬೆರೆಸಿ ಮೂರು ದಿವಸ ಇಟ್ಟು, ನಂತರ ಅದನ್ನು ತಿಳಿಗೊಳಿಸಿ ಎಲ್ಲಾ ಗಿಡಗಳಿಗೆ ಹಾಕಿದ್ದೇನೆ. ನಿರೀಕ್ಷೆಗಿಂತ ಮೀರಿ ಇಳುವರಿ ನೀಡುತ್ತಿದೆ. ಎರೆಹುಳ ಹೆಚ್ಚಾಗಿದೆ.' ಎನ್ನುತ್ತಾ ಸಿಹಿಗುಂಬಳ ಬಳ್ಳಿಯನ್ನು ತೋರಿಸುತ್ತಾರೆ ಗುನಗಾ.
ಒಂದೇ ಬಳ್ಳಿಯಲ್ಲಿ ಹತ್ತಕ್ಕೂ ಮಿಕ್ಕಿ ಕಾಯಿಗಳು. 'ಇದಕ್ಕಿಂತಲೂ ಹೆಚ್ಚು ಬೆಳೆಯಬಹುದು. ನನ್ನದೇನೂ ಮಹಾ ಅಲ್ಲ. ಆದರೆ ನಗರದ ಮಧ್ಯೆ ಹೇಳುವಂತಹ ಕೃಷಿ ಸಂಪನ್ಮೂಲಗಳ ಅಲಭ್ಯತೆಯಲ್ಲಿ ಇಷ್ಟು ಕಾಯಿ ಬಿಟ್ಟಿರೋದೇ ಹೆಚ್ಚು' ತಾರಸಿಯಲ್ಲಿ ಟೊಮೆಟೋ ಮಡಿ. ಬೇಕಾದಷ್ಟು ಪ್ರಮಾಣದ ಪ್ಲಾಸ್ಟಿಕ್ ಶೀಟನ್ನು ನೆಲಕ್ಕೆ ಹಾಸುತ್ತಾರೆ. ಅದರ ಸುತ್ತಲೂ ಹೋಮಕುಂಡದಂತೆ ಇಟ್ಟಿಗೆಗಳನ್ನು ಪೇರಿಸುತ್ತಾರೆ. ಮಣ್ಣು ಮತ್ತು ಸೆಗಣಿ ಮಿಶ್ರಣವನ್ನು ಮಧ್ಯಕ್ಕೆ ಹಾಕಿ, ಟೊಮೆಟೋ ಬೀಜ ಬಿತ್ತಿದ್ದಾರೆ. ಎರಡ್ಮೂರು ದಿವಸಗಳಿಗೊಮ್ಮೆ ಬುಡವನ್ನು ಕೆದಕಬೇಕು. 'ಟೊಮೆಟೊ ತಾವೂ ತಿಂದು, ಪಕ್ಕದ ಮನೆಯವರಿಗೂ ಕೊಟ್ಟು ಮತ್ತಷ್ಟು ಉಳಿಯುತ್ತದೆ' ಮಗಳು ಮಧುರಾ.
ಹಸಿರು ತರಕಾರಗೂ ಇಂತಹುದೇ ಮಡಿ. ಹಂಚಿ ತಿನ್ನುವ ಗುಣ ಇವರಿಗಿದ್ದುದರಿಂದ, ತರಕಾರಿ ಹೆಚ್ಚು ಫಲ ಕೊಟ್ಟಷ್ಟೂ ನೆರೆ-ಕರೆಯವರಿಗೆ ಖುಷಿ! ಬದನೆ, ಬೆಂಡೆ, ಅಲಸಂಡೆ, ಒಂದೆಲಗ, ಹರಿವೆ, ಟೊಮೆಟೋ, ಅವರೆ, ಫ್ಯಾಶನ್ಫ್ರುಟ್, ಗಾಂಧಾರಿ, ಬಾಳೆ, ಕೆಸು, ಕುಂಬಳಕಾಯಿ, ಪಪ್ಪಾಯಿ, ಮರಗೆಣಸು....ಒಂದೇ, ಎರಡೇ. 'ನಮ್ಮ ಅಡುಗೆಗೆ ನಮ್ಮದೇ ತರಕಾರಿ.' ಉಂಡಾದ ಬಳಿಕ ವೀಳ್ಯ ಹಾಕಲು ವೀಳ್ಯದೆಲೆ ಬಳ್ಳಿ!
ಗುನಗಾ ಕಸಿ ಅನುಭವಿ. ಕಾಡು ಬದನೆಗೆ ಟೊಮ್ಯಾಟೊ ಕಸಿ. ಒಂದೇ ಗಿಡದಲ್ಲಿ ಬದನೆ ಮತ್ತು ಟೊಮೆಟೋ. ಇನ್ನೊಂದರಲ್ಲ್ಲಿ ಟೊಮೆಟೋ ಮತ್ತು ಊರ ಬದನೆ. ತ್ರೀ ಇನ್ ವನ್! 'ಚಿಕ್ಕ ಜಾಗದ ಕೃಷಿಗೆ ಕಸಿ ಸೂಕ್ತ.' ಗುನಗಾ ಸಲಹೆ. 'ಕಲ್ಯಾಣಿ'ಗಿಂತ ಮೊದಲು ಉಲ್ಲಾಸರಿಗೆ ಬಾಡಿಗೆ ಮನೆ ವಾಸ. ಅಲ್ಲಿಯೂ ಕೃಷಿ, ಕಸಿ. ಸ್ವಂತ ಮನೆಗೆ ಬಂದಾಗ ಯಾವ ಗಿಡವನ್ನೂ ತಂದಿಲ್ಲ. ಎಲ್ಲವೂ ಹೊಸದೇ. ಇವರ ಮನೆಕೃಷಿಯಿಂದ ಒಂದಷ್ಟು ಮಂದಿ ಪ್ರೇರಿತರಾಗಿ ತಾವೂ ಗಿಡ ನೆಡುವ ಅಭ್ಯಾಸ ರೂಢಿಸಿಕೊಂಡಿದ್ದಾರೆ.
'ಪೇಟೆ ಮನೆಯ ಸುತ್ತ ಕ್ಲೀನ್ ಇರಬೇಕು. ಯಾವುದೇ ಗಿಡ ಇರಬಾರದು. ಗಿಡವಿದ್ದರೆ ಹಾವು ಬರುತ್ತದೆ, ಸೊಳ್ಳೆ ಹೆಚ್ಚಾಗುತ್ತದೆ ಎಂಬ ಒಣಭ್ರಮೆ ಕೆಲವರಿಗಿದೆ.' ಗುನಗಾ ವಿಷಾದ. 'ನನ್ನದು ನಿಜವಾದ ಶೂನ್ಯ ಕೃಷಿ! ಯಾಕೆಂದರೆ ಏನೂ ವೆಚ್ಚ ಮಾಡಿಲ್ಲ.' ಎನ್ನುತ್ತಾರೆ. 'ಮನೆಯಲ್ಲಿ ಜಾಗವಿಲ್ಲ, ನಮಗೆ ಪುರುಸೊತ್ತಿಲ್ಲ, ನೀರೆಲ್ಲಿದೆ....' ಎನ್ನುವ ಮಂದಿಗೆ ಗುನಗಾರ ಮನೆಕೃಷಿಯಲ್ಲಿ ಸಂದೇಶವಿದೆ. ಮನೆಯಲ್ಲಿ ಜಾಗ ಸಿಗಬೇಕಾದರೆ ಮನದಲ್ಲಿ ಜಾಗ ಕೊಡಿ!


Monday, September 28, 2009

ಮಾಸಿಕ 'ಆಯುಧ ಪೂಜೆ'


ನವರಾತ್ರಿ ಕೊನೆಗೆ ಆಯುಧಪೂಜೆಯ ಸಡಗರ. ವರುಷಕ್ಕೊಮ್ಮೆ ಬರುವ ಈ ಹಬ್ಬ ನಗರದಿಂದ ಗ್ರಾಮದ ಕೊನೇ ತನಕ ಆಚರಿಸಲ್ಪಡುತ್ತದೆ. ವಾಹನಗಳೆಲ್ಲಾ ಶುಚಿಗೊಂಡು, ಕೆಲವು ಕಾಯಕಲ್ಪಗೊಂಡು, ಶೃಂಗಾರಗೊಳ್ಳುತ್ತವೆ. ಇನ್ನೂ ಕೆಲವಕ್ಕೆ ತಳಿರು-ತೋರಣ. ಆಯುಧಪೂಜೆ ತಿಂಗಳಿಗೊಂದು ಇರುತ್ತಿದ್ದರೆ? ಒಂದಂತೂ ಲಾಭ! ನಮ್ಮ ಸರಕಾರಿ ಬಸ್ಸುಗಳು ಶುಚಿಯಾಗುತ್ತಿದ್ದುವೋ ಏನೋ?
ಉತ್ತರ ಕರ್ನಾಟಕದ ಕೆಲವು ಭಾಗಗಳಲ್ಲಿ ತಿಂಗಳಿಗೊಮ್ಮೆ ವಾಹನಗಳಿಗೆ ಪೂಜೆ ಸಲ್ಲುತ್ತದೆ. ಗದಗಿನ ಕೃಷಿ-ಪತ್ರಕರ್ತ ಮಿತ್ರ ಆರ್.ಎಸ್.ಪಾಟೀಲರ ಮನೆ ಸೇರಿದಾಗ ಬೆಳಗ್ಗಿನ ಎಂಟು ಗಂಟೆಯಾಗಿತ್ತು. ಮನೆಯಲ್ಲಿ ಯಾಕೋ ಸಂಭ್ರಮದ ಛಾಯೆ. ಅರೆ. ಇಂದು ಅಮಾವಾಸ್ಯೆಯಾಗಿಯೂ ಯಾಕೆ ಇಷ್ಟೊಂದು ಲವಲವಿಕೆ! ಬಹುಶಃ ಈ ಭಾಗದಲ್ಲಿ ಇಂತಹ ಪರಂಪರೆ ಇದೆಯೋ ಏನೋ. ಸುಮ್ಮನಾದೆ.
ಪಾಟೀಲರಲ್ಲಿರುವ ಮೂರು ದ್ವಿಚಕ್ರ ವಾಹನಗಳಂದು ಸ್ನಾನಸುಖ ಅನುಭವಿಸುತ್ತಿದ್ದುವು. ಪೂರ್ತಿ ಶುಚಿಯಾದ ನಂತರ ಅಂಗಳದಲ್ಲಿ ಸರತಿ ಸಾಲಿನಲ್ಲಿ ನಿಂತುವು. ಮನೆಯ ಹಿರಿಯರಾದ ಉಮಾಬಾಯಿಯವರು ತಾವೇ ಕೊಯಿದು ಕಟ್ಟಿದ ಮೂರು ಹಾರವನ್ನು ತಂದು ವಾಹನಕ್ಕೆ ಹಾಕಿದರು. ಅದರ ಬೆನ್ನಿಗೆ ಮನೆಯೊಡತಿ ಅರಸಿನ, ಕುಂಕುಮದ ಹರಿವಾಣದೊಂದಿಗೆ ಬಂದರು. ಎಲ್ಲಾ ವಾಹನಗಳಿಗೂ ಪ್ರಸಾದ ಸ್ಪರ್ಸಿಸಿದರು. ಪಾಟೀಲರು ಮೂರೂ ವಾಹನಗಳ ಚಕ್ರದ ಮುಂದೆ ನಿಂಬೆಹಣ್ಣನ್ನಿಟ್ಟು, ವಾಹನವನ್ನು ಮುಂದಕ್ಕೆ ಚಾಲೂ ಮಾಡಿ ನಿಂಬೆಯನ್ನು ಅಪ್ಪಚ್ಚಿ ಮಾಡಿದಲ್ಲಿಗೆ ಪೂಜೆ ಮುಕ್ತಾಯ. ಇದು ಪ್ರತೀ ಅಮವಾಸ್ಯೆಯಂದು ನಡೆಯುವ 'ವಾಹನ ಪೂಜೆ' ಯಾ 'ಆಯುಧ ಪೂಜೆ'.
ಗದಗ, ಧಾರವಾಡ, ಹುಬ್ಬಳ್ಳಿ..ಮೊದಲಾದ ಜಿಲ್ಲೆಗಳಲ್ಲಿ ಅಮವಾಸ್ಯೆಯಂದು ದ್ವಿಚಕ್ರದಿಂದ ತೊಡಗಿ ಚತುಶ್ಚಕ್ರದ ವಾಹನಗಳಿಗೆ ಸುಗ್ಗಿ! ತೀರಾ ಅಗತ್ಯವಿದ್ದರೆ ಮಾತ್ರ ವಾಹನ ಚಾಲೂ. ಸಣ್ಣಪುಟ್ಟ ರಿಪೇರಿ ಕೆಲಸಗಳಿಗೆ ಆ ದಿನ ಶುಭದಿನ. ರಿಪೇರಿ ಕೆಲಸವಾಗುವಾಗ ರಾತ್ರಿಯಾಯಿತು ಎಂದಟ್ಟುಕೊಳ್ಳೋಣ. 'ರಿಪೇರಿಮನೆ'ಯಲ್ಲೇ ಪೂಜೆ ಮುಗಿಸಿ ತರುವುದು ಸಂಪ್ರದಾಯ. ಬದುಕಿನಲ್ಲಿ ಅಂಟಿದ ಆಚರಣೆ.
ಇದು ಆಮದಿತ ಆಚರಣೆ! ಉತ್ತರಪ್ರದೇಶದಲ್ಲಿ ಬಹು ನಂಬಿಕೆಯ ಆರಾಧನೆ. ಪಾಟೀಲರು ಹೇಳುತ್ತಾರೆ - ಉತ್ತರಪ್ರದೇಶದಿಂದ ಸಾಮಗ್ರಿ ತುಂಬಿದ ಲಾರಿಗಳು ಗದಗ ದಾರಿಯಾಗಿ ಸಾಗುತ್ತವೆ. ಅಮವಾಸ್ಯೆಯಂದು ನೀರಿರುವ ಕೆರೆ ಸಮೀಪ ಲಾರಿಗಳನ್ನು ನಿಲ್ಲಿಸುತ್ತಾರೆ. ವಾಹನಗಳನ್ನು ಶುಚಿಗೊಳಿಸುತ್ತಾರೆ. ಹೂಗಳಿಂದ ಅಲಂಕರಿಸುತ್ತಾರೆ. ಹಸಿಮೆಣಸಿನಕಾಯಿ, ನಿಂಬೆಹಣ್ಣು ಮತ್ತು ಪೊರಕೆ ಕಡ್ಡಿಗಳನ್ನು ಪರಸ್ಪರ ಪೋಣಿಸಿ ಲಾರಿಯ ಮುಂಭಾಗಕ್ಕೆ ಬಿಗಿಯುತ್ತಾರೆ. ವಾಹನಕ್ಕೆ ಆರತಿ ಮಾಡ್ತಾರೆ. ಅಂದು ವೃತ್ತಿಗೆ ಬಿಡುವು. ವಾಹನ ಚಾಲೂ ಮಾಡುವುದಿಲ್ಲ. ಮರುದಿವಸ ಪ್ರಯಾಣ ಶುರು.
ವಾಹನದಲ್ಲಿ ದೂರ ಪ್ರಯಾಣ ಮಾಡುವುದರಿಂದ 'ಸುರಕ್ಷತೆ' ದೃಷ್ಟಿಯಿಂದ ಈ ಆಚರಣೆ ಬಂದಿದೆ. ಇದನ್ನು ನೋಡಿ ನಮ್ಮ ಭಾಗದ ಜನ ಅನುಸರಿಸಿದರು. ಎಲ್ಲಿಯವರೆಗೆ ಅಂದರೆ ಅದನ್ನು ಬಿಡಲಾಗದಷ್ಟು ಬದುಕಿನಲ್ಲಿ ಹಾಸುಹೊಕ್ಕಾಗಿದೆ ಎನ್ನುತ್ತಾರೆ ಹಿರಿಯರಾದ ಉಮಾಬಾಯಿಯವರು. ಇದು ವಾಹನದ ಮಾತಾಯಿತು. ಜಾನುವಾರುಗಳ ಸುರಕ್ಷತೆಗೂ ಅಮವಾಸ್ಯೆಯಂದು ಪೂಜೆ ಇಲ್ಲಿ ನಡೆಯುತ್ತದೆ.
ಹಟ್ಟಿಯಲ್ಲಿ ವಿಶೇಷವಾಗಿ ಒಂದು ಕಂಬವನ್ನು ಊರುತ್ತಾರೆ. ಇದು 'ಕರೆವ್ವ' ದೇವತೆಯ ಪ್ರತೀಕ. ಕಂಬಕ್ಕೆ ಅಲಂಕಾರ ಮಾಡಿ, ಪೂಜೆ ಮಾಡುತ್ತಾರೆ. ತೆಂಗಿನಕಾಯಿಯನ್ನು ಒಡೆದು ಸಮರ್ಪಣೆ. ದನಗಳು ಹಾಲು ಕರೆಯಲು ಬಿಡದೇ ಇದ್ದಾಗ, ಆಗಾಗ್ಗೆ ಕರು ಸಾಯುವಿಕೆ, ದನಗಳ ರೋಗಗಳು - ಇಂತಹ ಜಾನುವಾರು ರೋಗಗಳಿಗೆ ಕರೆವ್ವಳ ಆರಾಧನೆ ದಿವ್ಯ ಔಷಧಿ ಎಂಬುದು ನಂಬುಗೆ.
'ಜಾನುವಾರುಗಳಿಗೆ ಈ ರೀತಿಯ ರೋಗಗಳು ಬಂದಾಗ ರೈತ ಗಾಬರಿಯಾಗುತ್ತಾನೆ. ಗೊಂದಲಕ್ಕೀಡಾಗುತ್ತಾನೆ. ಈ ಗಾಬರಿ ಪರಿಹಾರಕ್ಕೆ ಒಂದು ದೇವರು - ಕರೆವ್ವಾ. ಇವಳು ಆಕಳ ದೇವತೆ. ನಮ್ಮ ಮನೆಯಲ್ಲೂ ಈ ಆರಾಧನೆ ಅಮವಾಸ್ಯೆಯನ್ನು ನಡೆಯುತ್ತದೆ. ಈಗಷ್ಟೇ ಮುಗಿಸಿ ಬಂದೆ' ಎನ್ನುವಾಗ ಉಮಾಬಾಯಿಯವರಲ್ಲಿ ಸಂತೃಪ್ತಿ. ಮನುಷ್ಯನ ಸಮಾಧಾನಕ್ಕೆ, ಸುಖಕ್ಕಾಗಿ 'ಕೈಮೀರಿದ ಶಕ್ತಿಗೆ ಶರಣು' ಬರುವುದಕ್ಕೆ ಇವೆಲ್ಲಾ ಉಪಾಧಿಗಳು.
ನಮ್ಮೆಲ್ಲಾ ಆಚರಣೆಗಳ ಹಿಂದಿನ ಆಶಯಗಳೂ ಹೀಗೇನೇ. ಎಪ್ಪತ್ತರ ಹಿರಿಯ ಜೀವ ಉಮಾಬಾಯಿಯವರು 'ಇಂತಹ ಸಂಪ್ರದಾಯಗಳನ್ನು ಬಿಡಬಾರದು. ಅದು ಬದುಕಿನ ಸೂತ್ರ. ಅದನ್ನು ಮೂಢನಂಬಿಕೆಯ ಪಾಶದಲ್ಲಿ ಬಂಧಿಸಬೇಡಿ. ಯಾರೋ ಒಬ್ಬನಿಗೆ ಸುಖ ಸಿಕ್ತದೆ ಅಂತಾದರೆ ಅದನ್ನು ಕಸಿಯುವ ಹಠ ಯಾಕೆ' ಎಂದು ಪ್ರಶ್ನಿಸುತ್ತಾರೆ. ಸರಿ, ಮೂಢನಂಬಿಕೆಯ ಸಾಲಿಗೆ ಬೇಕಾದರೆ ಸೇರಿಸಿ. ಆದರೆ ಅಮವಾಸ್ಯೆಯ ಹೆಸರಿನಲ್ಲಿ ವಾಹನಗಳಾದರೂ ಶುಚಿಯಾಗ್ತದಲ್ಲಾ! ಮನಸ್ಸು ಶುಚಿಯಾಗದಿದ್ದರೂ ತೊಂದರೆಯಿಲ್ಲ - ಆರ್.ಎಸ್.ಪಾಟೀಲರು ದನಿಗೂಡಿಸಿದರು.

Wednesday, September 23, 2009

ಮಳೆಗೆ ಕೊಚ್ಚಿಹೋದ 'ಕೃಷಿಮೇಳ'!

ಸೆಪ್ಟೆಂಬರ್ 19 ರಿಂದ 22ರ ತನಕ ಧಾರವಾಡ ಕೃಷಿ ವಿಶ್ವವಿದ್ಯಾಲಯದ ಕಾಲಾವಧಿ 'ಕೃಷಿಮೇಳ'ನಡೆಯಿತು. ಐದು ಲಕ್ಷಕ್ಕೂ ಮಿಕ್ಕಿ ರೈತರು ಭಾಗವಹಿಸಿದ್ದರು ಎನ್ನುವುದು ವರಿಷ್ಠರ ಅಂಕಿಅಂಶ. ಮೂರು ದಿವಸ ಅಪರಾಹ್ನ ಬೀಸಿದ ಮಳೆಗೆ 'ಕೃಷಿಮೇಳ'ವೇ ಕೊಚ್ಚಿಹೋಯಿತು ಎಂದರೆ 'ಯಾಕಪ್ಪಾ ನೆಗೆಟಿವ್' ಮಾತನಾಡುತ್ತಾರೆ ಅನ್ನಬಹುದು! ನಾಲ್ಕುನೂರಕ್ಕೂ ಮಿಕ್ಕಿದ ಮಳಿಗೆದಾರರನ್ನು ಮಾತನಾಡಿಸಿದರೆ ಇದೇ ಮಾತು.

ಕಾರಣ ಇಲ್ಲದಿಲ್ಲ. ಒಂದೆಡೆ ಬೆಳೆದುನಿಂತ ಪೈರಿನ ಹೊಲ. ಮತ್ತೊಂದೆಡೆ ಹೊಲದಲ್ಲಿ ತಲೆಯೆತ್ತಿದ ಮಳಿಗೆಗಳು. ಮಧ್ಯದಲ್ಲಿ ಸ್ವಲ್ಪ ಎತ್ತರದಲ್ಲಿ ರಸ್ತೆ. ಮಳೆನೀರು ಹರಿದು ಹೋಗದೆ ಮಳಿಗೆಗಳಿಗೆ ನುಗ್ಗಿ, ಅಚೀಚೆ ಹರಿದು ಕೊಚ್ಚೆಯನ್ನೇ ನಿರ್ಮಿಸಿಬಿಟ್ಟಿತು. ಈ ಕೊಚ್ಚೆ ಇಂಗುವುದು ಬಿಡಿ, ಬಿಸಿಲಿಗೂ ಒಣಗದಷ್ಟು ಅಂಟಟು. ಜನರು ಓಡಾಡಿ ಕೆಸರು ಎಷ್ಟು ಹದವಾಗಿತ್ತು ಅಂದರೆ, ಕಾಲಿಗಂಟಿದ ಮಣ್ಣು 'ಬಬ್ಲ್ಗಂ' ಆಗಿತ್ತು!

ಈ ರಾಡಿಯಲ್ಲಿ ಶೇ.25 ಮಂದಿ ಓಡಾಡಿರಬಹುದು. ಉಳಿದಂತೆ ರಸ್ತೆಯಲ್ಲಿ ಉದ್ದಕ್ಕೆ ಪಥಸಂಚಲನ ಮಾಡಿ, 'ನಾನೂ ಕೃಷಿ ಮೇಳಕ್ಕೆ ಹೋಗಿ ಬಂದೆ' ಎನ್ನಲಡ್ಡಿಯಿಲ್ಲ! 'ಇಲ್ಲಾರಿ, ನಮಗೆ ಇಂತಹ ರಾಡಿಯಲ್ಲಿ ಒಡಾಡಿ ರೂಢಿಯಿದೆ' ಕೆಲವರೆಂದರು. ಸಂಸಾರದೊಡನೆ ಬಂದಂತಹವರು 'ಎಂತಹ ಕೊಚ್ಚೆ ಮಾರಾಯ್ರೆ. ನಮ್ಮಿಂದಾಗದು' ಎನ್ನುತ್ತಾ ಹಾಗೆ ಸುತ್ತಾಡಿ ಹೋದವರೇ ಜಾಸ್ತಿ! ಕೊಚ್ಚೆಯಲ್ಲಿ ಜನರು ನಡೆದಾಡುವ ಜಾಗದಲ್ಲಿ ಒಂದಷ್ಟು ಜಲ್ಲಿ ಹಾಕಿ ವಿವಿ 'ಮಾನವೀಯತೆ' ಮೆರೆಯಿತು!

ಮಳಿಗೆಗಳಲ್ಲಿ (ಕ್ಷಮಿಸಿ, ಅಂಗಡಿಗಳು!) ವ್ಯಾಪಾರನೂ ಅಷ್ಟಕ್ಕಷ್ಟೇ. ಈ ಮಧ್ಯೆ ವಿವಿಯ ಮಾಮೂಲಿ ಮೇಳ ಕಲಾಪ ಮುಖ್ಯ ವೇದಿಕೆಯಲ್ಲಿ ನಡೆಯುತ್ತಿತ್ತು. ಮಳೆ, ಮಿಂಚು, ಗುಡುಗು..ಇದ್ಯಾವುದೂ ಕಲಾಪಕ್ಕೆ ಅಡ್ಡಿ ಬರಲಿಲ್ಲ. ಕಾರಣ - ಅಲ್ಲಿ ಸುರಕ್ಷತೆಯಿತ್ತು!ಅಕಾಲ ವರ್ಷಕ್ಕೆ (ಧಾರವಾಡದಲ್ಲಿ 2ನೇ ಮಳೆಗಾಲ) ವಿವಿಯಾದರೂ ಏನು ಮಾಡಬಹುದು? ಉತ್ತಮ ಟ್ರಾಫಿಕ್, ಆಸಕ್ತ ವಿಜ್ಞಾನಿಗಳು, ಅಧಿಕಾರಿಗಳು, ಸಿಬ್ಬಂದಿಗಳು ತೊಡಗಿಸಿಕೊಂಡಿದ್ದರು.

ಒಟ್ಟಿನಲ್ಲಿ ಎಲ್ಲರಲ್ಲೂ ಒಂದೇ ಮಾತು - 'ಒಂದು ತಿಂಗಳು ಬಿಟ್ಟು ಕೃಷಿಮೇಳ ಮಾಡಬಹುದಿತ್ತು'.

Wednesday, September 16, 2009

ಪುಳ್ಳಿ ಸಂಘ

ಹಿಡಿಯಗಲದ ಮೊಬೈಲ್ನಲ್ಲಿ ಪ್ರಪಂಚವನ್ನು ಕಾಣುವಷ್ಟು ಮುಂದುವರಿದಿದ್ದೇವೆ! ಈ ಓಟದಲ್ಲಿ 'ಓಡಲೇಬೇಕಾದ್ದು' ಅನಿವಾರ್ಯ. ಓಡುವ ವೇಗದಲ್ಲಿ ಸಂಬಂಧಗಳು, ಬಾಂಧವ್ಯಗಳು, ಕುಟುಂಬ ಅನ್ಯೋನ್ಯತೆಗಳು ಮಸುಕಾಗುತ್ತಿವೆ. ದೊಡ್ಡಪ್ಪನ ಮಕ್ಕಳು, ಚಿಕ್ಕಪ್ಪನ ಮಕ್ಕಳು ಯಾರೆಂದೇ ಗೊತ್ತಿರುವುದಿಲ್ಲ. 'ಗೊತ್ತಿರಬೇಕಾಗಿಲ್ಲ' ಎಂದು ವಾದಿಸುವವರೂ ಇಲ್ಲದಿಲ್ಲ!

ಕೌಟುಂಬಿಕ ವಾತಾವರಣವೂ ಮುಖ್ಯ ಕಾರಣ. ಉದಾ: ನನ್ನದೇ ಉದಾಹರಣೆ! ಹೊಟ್ಟೆಪಾಡಿಗಾಗಿ ಕೇರಳದ ಆ ತುದಿಯಿಂದ ಈ ತುದಿಗೆ ತಂದೆಯವರು ಬಂದಾಗ - ಬಂಧುಗಳು ಅಪರೂಪವಾದರು. ತಂದೆಯಣ್ಣ ತಿರುವನಂತಪುರದಲ್ಲಿ ವಾಸ. ಅವರ ಮಕ್ಕಳೆಲ್ಲರೂ ಅಲ್ಲೇ ಉದ್ಯೋಗ ಹಿಡಿದು 'ಸೆಟ್ಲ್' ಅಗಿದ್ದಾರೆ. ದೊಡ್ಡಪ್ಪನನ್ನು ಒಮ್ಮೆಯೂ ಕಂಡದ್ದಿಲ್ಲ. ಮತ್ತೆ ಅವರ ಮಕ್ಕಳ ಗುರುತು ಸಿಕ್ಕಿತೇ? ಅಪರೂಪಕ್ಕೆ ಭೇಟಿಯಾದಾಗ ಅಪರಿಚಿತರಂತೆ ಇರಬೇಕಾದ 'ಏಕಾಂತ'! ಮಾತಿಗೆಳೆದರೂ 'ಮಾತುಸಿಗದಷ್ಟು' ಅಂತರ. ಭಾಷಾ ಸಮಸ್ಯೆಯೂ ಇತ್ತು. ಅದು ದೊಡ್ಡದಲ್ಲ ಬಿಡಿ. ಭುಜಹಾರಿಸುತ್ತಾ, ಕೈಸನ್ನೆ ಮಾಡುತ್ತಾ, ಮುಖ ಕಿವುಚುತ್ತಾ ಮಾತನಾಡಬಹುದು. ಆದರೆ ವಿಷಯ ಬೇಕಲ್ಲಾ!

'ಒಲೆಯೊಂದು ಹತ್ತಾದಾಗ ಸಮಸ್ಯೆಯೂ ತಲೆ ಮೇಲೆ ಕೂರುತ್ತೆ' ಕೊಪ್ಪದ ವಸಂತ್ ತಮ್ಮ ಅನುಭವ ಹೇಳಿಕೊಳ್ಳುತ್ತಾರೆ. ಇದು ವಸಂತರ ಸಮಸ್ಯೆ ಮಾತ್ರವಲ್ಲ. ಮನೆಮನೆಯ ಸಮಸ್ಯೆ. ಎಲ್ಲರ ಸಮಸ್ಯೆ.ಇದರಿಂದ ಬಿಡುಗಡೆ ಹೇಗೆ? ಇದಕ್ಕೊಂದು ಸಂಘಟನೆ ಇದ್ದರೆ? ಒಂದೋ ಎಲ್ಲರೂ ಒಟ್ಟಾಗಲು ಅಥವಾ ದೂರವಿದ್ದೇ ಅರ್ಥಮಾಡಿಕೊಳ್ಳುವಂತಹ ವ್ಯವಸ್ಥೆ ಇದ್ದರೆ ಕೊನೇ ಪಕ್ಷ ಸಂವಹನವಾದರೂ ನಡೆದೀತು.

ಈ ಆಲೋಚನೆ ಗಿರಿಕಿಯಲ್ಲಿರುವಾಗಲೇ ಕೋಡಪದವಿನ ಕಿನಿಲ ಅಶೋಕರಲ್ಲಿಗೆ ಹೋಗಿದ್ದೆ. ಮಾತಿನ ಮಧ್ಯೆ ತಾನಿರುವ ಹಿರಿಮನೆಯ 'ಪುಳ್ಳಿ ಸಂಘ'ವನ್ನು ಜ್ಞಾಪಿಸಿಕೊಂಡರು. (ಪುಳ್ಳಿ ಅಂದರೆ ಮೊಮ್ಮಗ, ಮೊಮ್ಮಗಳು) ಅರೇ, ಸಹಕಾರ ಸಂಘವನ್ನು ಕೇಳಿದ್ದೇನೆ. ಇತರ ಕಲಾ ಸಂಘಗಳು ಗೊತ್ತು. ಜಾತಿ ಸಂಘಗಳನ್ನು ದೂರದಿಂದ ನೋಡಿದ್ದೇನೆ. ಆದರೆ 'ಪುಳ್ಳಿ ಸಂಘ'?

ಈ ಸಂಘಕ್ಕೆ ಕುಟುಂಬದ 'ದೊಡ್ಡಪುಳ್ಳಿ' ಅಧ್ಯಕ್ಷ. ಶುಭ ಸಮಾರಂಭಗಳಿಗೆ ಎಲ್ಲಾ ಸದಸ್ಯರು ಸೇರಿದಾಗ ಹಿರಿಯಜ್ಜನ ಉಸ್ತುವಾರಿಕೆಯಲ್ಲಿ ಸಂಘದಿಂದ ಸಾಂಸ್ಕೃತಿಕ ಕಾರ್ಯಕ್ರಮ. ಕೈಬರೆಹದ 'ಕಾಟಂಕೋಟಿ' ಎಂಬ ವಾರ್ತಾಪತ್ರ. ಅದಕ್ಕೊಬ್ಬ ಸಂಪಾದಕ. ಎರಡು ದಶಕಗಳ ಹಿಂದಿನವರೆಗೂ ಸುಮಾರು 40-45 ಪುಳ್ಳಿಗಳಿದ್ದ ಸಂಘ ನಮ್ಮ ಮನೆಯಲ್ಲಿತ್ತು - ಅಶೋಕರು ತಮ್ಮ ನೆನಪಿನಾಳದಿಂದ ಒಂದಷ್ಟನ್ನು ಮೊಗೆಯುತ್ತಾರೆ.

ಜತೆಯಲ್ಲಿದ್ದ ಮಂಚಿ ಶ್ರೀನಿವಾಸ ಆಚಾರ್ರಿಗೆ ಪುಳ್ಳಿ ಸಂಘ ಪ್ರೇರಣೆ ನೀಡಿತು. ಮಂಚಿ ಮನೆಯಲ್ಲಿ ತಮ್ಮ ತೀರ್ಥರೂಪರ ನೆನಪಿನಲ್ಲಿ 'ಮಂಚಿ ನಾರಾಯಣ ಆಚಾರ್ ಪುಳ್ಳಿ ಸಂಘ'ಕ್ಕೆ ಚಾಲನೆ ನೀಡಿದರು. ಮೊದಲ ಕಾರ್ಯ ವಾರ್ತಾಪತ್ರ ಪ್ರಕಟಣೆ. ಕುಟುಂಬದ ಸದಸ್ಯರೊಳಗೆ ಬಾಂಧವ್ಯ ಬೆಳೆಯುವಂತೆ ಹಾಗೂ ಬೇರೆಡೆ ನೆಲೆಸಿರುವವರಲ್ಲಿ ಸಂಪರ್ಕ, ಮಾಹಿತಿ ವಿನಿಮಯ ಹೂರಣ.

ಮಂಚಿ ನಾರಾಯಣ ಆಚಾರ್ರವರು ಸಾಮಾಜಿಕ ಕಾರ್ಯಕರ್ತರಾಗಿದ್ದರು. ಹಲವು ಪ್ರಥಮಗಳ ರೂವಾರಿ. ಹತ್ತು ಮಕ್ಕಳ ತಂದೆ. 24 ಮೊಮ್ಮಕ್ಕಳು, 23 ಮರಿಮಕ್ಕಳು, 15 ಸಂಗಾತಿಗಳು..ಹೀಗೆ ದೊಡ್ಡ ಸಂಸಾರ. ಇವರೆಲ್ಲರೂ ಈಗ ಪುಳ್ಳಿ ಸಂಘದ ಸದಸ್ಯರು!ಪ್ರಕಟಿತ ವಾರ್ತಾಪತ್ರದಲ್ಲಿ ಕುಟುಂಬ ವಂಶಾವಳಿ; ಮೊಮ್ಮಕ್ಕಳು, ಜೀವನಸಂಗಾತಿಗಳು, ಮರಿಮಕ್ಕಳ ವಿವರಗಳು, ಮೊಮ್ಮಕ್ಕಳ ಪ್ರಸ್ತುತ ವಿದ್ಯಾಭ್ಯಾಸ, ಉದ್ಯೋಗದ ವಿವರ, ರಸಪ್ರಶ್ನೆ, ನಿಕಟ ಭವಿಷ್ಯದ ಕೌಟುಂಬಿಕ ಕಾರ್ಯಕ್ರಮ...ಇವಿಷ್ಟು. ಇದು ಅನಿಯತಕಾಲಿಕ ಪ್ರಕಟಣೆ. ಮೊದಲ ಸಂಚಿಕೆಯನ್ನು 80ರ ಅಜ್ಜಿ (ಈಗ ದಿವಂಗತ) ಪದ್ಮಾವತಿಯವರಿಗೆ ಸಮರ್ಪಿಸಿದ್ದಾರೆ.

ಕಳೆದ್ಮೂರು ವರುಷದಲ್ಲಿ ಐದಾರು ವಾರ್ತಾಪತ್ರಗಳು ಪ್ರಕಟಗೊಂಡಿವೆ. ಹಿರಿಮನೆಯ ಆಗುಹೋಗುಗಳ ಕುರಿತು ಮಾಹಿತಿ ನೀಡಬಲ್ಲ ಇಂತಹ ಕೌಟುಂಬಿಕ ವಾರ್ತಾಪತ್ರವು ದೂರದೂರಿನ ಮನೆಬಂಧುಗಳಿಗೆ ಒಂದು ಮಾತನಾಡುವ ವೇದಿಕೆ. ಕುಟುಂಬವನ್ನು ಹತ್ತಿರದಿಂದ ನೋಡುವ ವ್ಯವಸ್ಥೆಯಿದು. ಮಂಚಿ ಶ್ರೀನಿವಾಸ ಆಚಾರ್, ಕಿನಿಲ ಅಶೋಕ....ತಮ್ಮ ಕುಟುಂಬದ ವಂಶಾವಳಿಯನ್ನು ತಯಾರಿಸಿ, ಅದನ್ನು ತಮ್ಮ ಕುಟುಂಬದ ಮಂದಿಗೆ ಹಂಚಿದ್ದಾರೆ. 'ಮೊದಲು ಕುಟುಂಬವನ್ನು ಅರಿಯೋಣ, ಮತ್ತೆ ಪ್ರಪಂಚವನ್ನು ಅರಿಯೋಣ' ಎಂಬ ಮಾತನ್ನು ಸಾಕಾರಗೊಳಿಸಿದ್ದಾರೆ.

ಪರಿಸ್ಥಿತಿಯ ಕೈಗೊಂಬೆಯಿಂದಾಗಿ ಚದುರಿದ್ದ ಕೌಟುಂಬಿಕರನ್ನು ಪುಳ್ಳಿಸಂಘವು ಒಟ್ಟು ಮಾಡುತ್ತದೆ. ಮನಸ್ಸು-ಮನಸ್ಸುಗಳನ್ನು ಬೆಸೆಯುತ್ತದೆ. ಅಜ್ಜ, ಮುತ್ತಜ್ಜ, ತಾತ...ಶಬ್ದದ ಉಚ್ಚಾರದ ಮೂಲಕ ಮತ್ತೊಮ್ಮೆ ಕುಟುಂಬ ಸಂತೋಷವನ್ನು ಅನುಭವಿಸುವಂತೆ ಮಾಡುತ್ತದೆ.ಈಚೆಗೆ 'ವಂಶಾವಳಿ'ಗಳ ಬಗ್ಗೆ ಆಸಕ್ತಿ ಮೂಡುತ್ತಿದೆ. ದಾಖಲಾತಿ ನಡೆಯುತ್ತಿದೆ. ಹಿರಿಯರನ್ನು ಜ್ಞಾಪಿಸುವ, ಬದುಕನ್ನು ಹಿಂತಿರುಗಿ ನೋಡುವ ಅಭ್ಯಾಸ ಶುರುವಾಗಿದೆ.

Tuesday, September 15, 2009

'ಎಂಚಿನ ಸಾವುದ ಬರ್ಸ..'!

ವರುಷ ಜೂನ್ ಪೂರ್ತಿ ಮಳೆ ಮುಷ್ಕರ ಹೂಡಿತ್ತು. 'ಛೇ ಮಳೆ ಬರ್ಲೇ ಇಲ್ಲ. ಎಂತಹ ಅವಸ್ಥೆ ಮಾರಾಯ್ರೆ' - ಸಿಕ್ಕಲ್ಲೆಲ್ಲಾ ಇದೇ ಮಾತು. 'ನಮ್ಮ ಕಾಲದಲ್ಲಿ ಹೀಗೆ ಆಗಿದ್ದಿಲ್ಲ. ಮೇ ಶುರುವಾಗಬೇಕಾದರೆ ಜಡಿಮಳೆ' ಹಿರಿಯರು ದನಿಸೇರಿಸುತ್ತಾರೆ.

ಇತ್ತ ನಮ್ಮ ಜಲಾಶಯಗಳು ಬತ್ತುವ ಆತಂಕ. ವಿದ್ಯುತ್ಗೆ ಕುತ್ತು. 'ಈಗಿರುವ ನೀರು ಒಂದೇ ವಾರಕ್ಕೆ ಸಾಕು' - ಮಂತ್ರಿ ಮಹೋದಯರು ಜನರಲ್ಲಿ ಇನ್ನಷ್ಟು ಆತಂಕದ ಬೀಜ ಬಿತ್ತಿದರು! ಎಲ್ಲೋ ಒಂದೆಡೆ 'ಮೋಡ ಬಿತ್ತನೆ' ಮಾಡಬಹುದೆನ್ನುವ ಸುದ್ದಿ. ಕೃಷಿ ವಲಯ ತತ್ತರ. 'ಮುಂದೇನು' ಪ್ರಶ್ನೆಯೊಂದಿಗೆ ಆಗಸದತ್ತ ದೃಷ್ಟಿ!

ಮಳೆ ಬರಲು ದೇವಾಲಯಗಳಲ್ಲಿ ಪೂಜೆ ಆರಂಭವಾಯಿತು. ಕಪ್ಪೆಗಳಿಗೆ ಮದುವೆಯಾಯಿತು. ಸೀಮಂತ ನಡೆಯಿತು. ಪುತ್ರೋತ್ಸವದ ಸುದ್ದಿ ಬಂದಿಲ್ಲ! ಅಂತೂ ಜುಲಾಯಿಯಲ್ಲಿ ಮಳೆ ಸುರುವಾಯಿತು. ಬಾಕಿಯಿದ್ದ ಎಲ್ಲವನ್ನೂ 'ಬಾಚಿ ಕೊಟ್ಟಂತೆ' ಸುರಿಯಿತು. ಮಧ್ಯದಲ್ಲಿ ಸ್ವಲ್ಪ ಬಿಡುವು ತೆಕ್ಕೊಂಡು ಮತ್ತೆ ಎಂದಿನಂತೆ ತನ್ನ ಪಾಡಿಗೆ ಸುರಿಯುತ್ತಿದೆ. ಜಲಾಶಯಗಳೆಲ್ಲಾ ಭರ್ತಿಯಾದುವು. ಮೊದಲು 'ನೀರು ಇಲ್ಲ' ಎಂಬ ಆತಂಕ. ಈಗ ಭರ್ತಿಯಾಗಿ ಹೆಚ್ಚಿನ ನೀರು ಬಿಟ್ಟರೆ ಕೆಳಗಿನ ಪ್ರದೇಶಕ್ಕೆ ನೀರು ನುಗ್ಗಿ ಒಂದಷ್ಟು ಅನಾಹುತ ಮಾಡಿಬಿಡುತ್ತದೆಂಬ ಆತಂಕ.

ಕಪ್ಪೆಗಳಿಗೆ ಮದುವೆ ಮಾಡಿದವರು 'ನೋಡಿ ಮದುವೆಯ ಪ್ರಭಾವ' ಅಂತ ಬೀಗಿದರೆ, ಸೀಮಂತ ಮಾಡಿದವರಿಗೆ ತಲೆಬಿಸಿ- 'ಛೇ... ಮೊದಲೇ ಮಾಡುತ್ತಿದ್ದರೆ ಬೇಗ ಮಳೆ ಬರುತ್ತಿತ್ತೇನೋ'!ಈ ಮಧ್ಯೆ ಗ್ರಹಣ ಬಂತು. 'ಇದು ದೇಶಕ್ಕೆ ಅನಿಷ್ಟ' ಎಂಬ ಭಾವನೆ ಬರುವಂತಹ ವಾತಾವರಣ ಸೃಷ್ಟಿಯಾಯಿತು. ಹೋಮ ಹವನಾದಿಗಳು ನಡೆದುವು. 'ಗ್ರಹಣದಿಂದ ನಮ್ಮ ಲೈಫಲ್ಲಿ ಏನೋಗುತ್ತೋ ಏನೋ' ಎಂಬ ಆತಂಕದಲ್ಲಿ ಕೆಲವರಿದ್ದರೆ, ಇನ್ನೂ ಕೆಲವರು 'ಛೇ..ಮೋಡ ಬಂದು ಗ್ರಹಣ ನೋಡಲು ಆಗಲೇ ಇಲ್ವಲ್ಲಾ' ಅಂತ ಕೈ ಹಿಚುಕಿಕೊಂಡರು.

ನಿನ್ನೆ ಮೊನ್ನೆ ದಿನವಿಡೀ ಮಳೆ. 'ಎಂಚಿನ ಸಾವುದ ಬರ್ಸಯಾ..ಉಂತುನಲಾ ಉಜ್ಜಿ..ನರಕ್ಕದ..' ಹತ್ತು ಬಾಯಿಗಳಿಂದ ಸಹಸ್ರನಾಮ! ಮಳೆ ಬಂದರೂ ಕಷ್ಟ, ಬಾರದಿದ್ದರೂ ಕಷ್ಟ! ಒಂದಷ್ಟು ನಾಶ-ನಷ್ಟಗಳು. ನಾಡದೊರೆಗಳ ಆಗಮನ. ಅಂತರಿಕ್ಷದಿಂದ ಸಮೀಕ್ಷೆ. ಪರಿಹಾರ ಘೋಷಣೆ ಮುಂತಾದ ಪ್ರಹಸನಗಳ ಸುದ್ದಿ ಕೇಳುವುದೇ ರೋಚಕ!

ಕಳೆದ ವಾರ ನಮ್ಮ ಚೇರ್ಕಾಡಿ ರಾಮಚಂದ್ರ ರಾಯರಲ್ಲಿಗೆ ಹೋಗಿದ್ದೆ. ಅವರಿಗೀಗ ತೊಂಭತ್ತು. ದೇಹ ಮಾಗಿದೆ. ಆದರೆ ಮನಸ್ಸು ಮಾಗಿಲ್ಲ! 'ಮಳೆ ಬರಲಿ. ಅದನ್ನು ಪ್ರಕೃತಿಯೇ ನಿಶ್ಚಯಮಾಡುತ್ತದೆ. ನನ್ನ ಬಾಲ್ಯ ನೆನಪಿದೆ. ಮೇ ತಿಂಗಳಲ್ಲಿ ಮಳೆ ಹೊಯ್ಯಲು ಶುರುಮಾಡಿದರೆ ಆಗಸ್ಟ್-ಸೆಪ್ಟೆಂಬರ್ ತಿಂಗಳ ತನಕವೂ ಹನಿಕಡಿಯುವುದಿಲ್ಲ' ಎಂದು ಜ್ಞಾಪಿಸಿಕೊಂಡರು.

ನಗರದ ಮಧ್ಯೆ ನಿಂತು 'ನಾನು ಮಳೆಯನ್ನು ಅನುಭವಿಸಿದೆ' ಎಂದರೆ ಹಾಸ್ಯಾಸ್ಪದ. ನಿಜಕ್ಕೂ ಹಳ್ಳಿ ಮನೆಯಲ್ಲಿದ್ದು 'ಮಳೆಗಾಲ'ವನ್ನು ಕಳೆಯಬೇಕು. ಏನಾಗುತ್ತೋ ಅಂತ ಕ್ಷಣಕ್ಷಣಕ್ಕೂ ಆತಂಕ, ಭಯ. ನೆರೆಪೀಡಿತ ಪ್ರದೇಶವಾದರಂತೂ

ಮುಗಿಯಿತುಬಹುಶಃ 25-30 ವರುಷಗಳ ಹಿಂದಿನ ಒಂದು ಆಟಿ ತಿಂಗಳು. ನಮ್ಮ ಮನೆ ಪಯಸ್ವಿನೀ ನದಿಯ ತೀರದಲ್ಲಿತ್ತು. ಮನೆಯ ಒಂದು ಪಾರ್ಶ್ವ ಹೊಳೆ, ಮತ್ತೊಂದು ಬದಿ ಗದ್ದೆ-ಬಯಲು. ಆಟಿಯ ಮಳೆಯೆಂದರೆ ಮನೆಯ ಹೊರಗೆ ಕಾಲಿಡಲೂ ಆಗದಂತಹ ಸ್ಥಿತಿ. ಆ ವರುಷ ಸುರಿದ ಮಳೆಗೆ ಹೊಳೆ ತುಂಬಿ ನೆರೆ ಬಯಲನ್ನೂ ಆಕ್ರಮಿಸಿತು. ನಮ್ಮದು ಮುಳಿಮಾಡು, ಮಣ್ಣಿನಗೋಡೆ. ಮನೆ ಆರ್ಧ ನೆರೆನೀರಲ್ಲಿ ಮುಳುಗಿದಾಗ, ನಾವು ಅಟ್ಟವನ್ನೇರಿದ್ದೆವು. ಊರಿನವರು ಬಿದಿರಿನಿಂದ ಮಾಡಿದ 'ಪಿಂಡಿ'ಯನ್ನು ಬಳಸಿ ನಮ್ಮ ಕುಟುಂಬವನ್ನು ರಕ್ಷಿಸಿದ ಅಂದಿನ ಘಟನೆಯನ್ನು ಅಮ್ಮ ಹೇಳಿದಾಗ ರೋಮಾಂಚನವಾಗುತ್ತದೆ. ಬಹುಶಃ ಅಂತಹ ಮಾರಿ ಮತ್ತೆ ನೋಡಿಲ್ಲ!

ಈ ರೀತಿಯ ಅನುಭವ ಹೊಳೆತೀರದಲ್ಲಿ ವಾಸ್ತವ್ಯವಿದ್ದ ಬಹುತೇಕರಿಗೆ ಆದ ಅನುಭವ. 'ಕಳೆದ ವರುಷ ಗುರುಪುರದ ಹತ್ತಿರದ ಒಂದು ಕುದ್ರುವಿಗೆ ಹೋಗಿದ್ದೆ. ಮಳೆಗಾಲದ ನಾಲ್ಕು ತಿಂಗಳು ಪೂರ್ತಿ ದ್ವೀಪ. ದೋಣಿ ಬದುಕು. ಕೃಷಿ ಮಾಡುವಂತಿಲ್ಲ. ಕೂಡಿಟ್ಟದ್ದು ಆಗ ಉಪಯೋಗಕ್ಕೆ ಬರುತ್ತದೆ. ಇಂತಹ ಕುದ್ರುಗಳು ಕರಾವಳಿ ಉದ್ದಗಲಕ್ಕೂ ಬೇಕಾದಷ್ಟಿವೆ. ಇಲ್ಲಿನ ಮಳೆಗಾಲದ ಅನುಭವವೇ ಬೇರೆ. ಇವರು ಎಲ್ಲಾದರೂ 'ಎಂಚಿನ ಸಾವುದ ಬರ್ಸ' ಅಂತ ಹೇಳಿದರೆ ಅದಕ್ಕೊಂದು ಅರ್ಥವಿದೆ!

ಗದ್ದೆಹುಣಿಯಲ್ಲಿ ಜಾರುತ್ತಾ-ಬೀಳುತ್ತಾ, ಹಳ್ಳಕ್ಕೆ ಅಡ್ಡವಾಗಿರುವ 'ಪಾಂಪು' (ಎರಡು ಮರವನ್ನು ಜೋಡಿಸಿ ನಿರ್ಮಿಸಿದ ದೇಸೀ ಸೇತುವೆ) ದಾಟಿ ಶಾಲೆ ಸೇರಿದಾಗ, 'ಕೋಣ..ಯಾಕೆ ತಡ ಮಾಡಿದಿ' ಎಂದು ಗುದ್ದು ಕೊಡುವ ಅಧ್ಯಾಪಕರು! ಅಡುಗೆ ಮನೆಯಲ್ಲಿ ಒದ್ದೆಯಾದ ಉಡುಪನ್ನು ಆರಲು ತೂಗಿಸಿ, ಮರುದಿನ ಅದೇ 'ಹೊಗೆವಾಸನೆ'ಯ ಉಡುಪನ್ನು ತೊಟ್ಟು ಶಾಲೆಗೆ ಹೋಗುವ ಆ ದಿನಗಳು - ನಿಜಕ್ಕೂ 'ಮಳೆಗಾಲದ ಅನುಭವದ' ದಿನಗಳು! 'ಬೇಸಿಗೆಯಲ್ಲಿ ಮಾಡಿಟ್ಟ ಹಪ್ಪಳ, ಸಾಂತಾಣಿಗೆ ರುಚಿ ಬರುವುದು ಆಟಿ ತಿಂಗಳಲ್ಲಿ! ಧೋ ಎಂದು ಮಳೆ ಸುರಿಯುತ್ತಿದ್ದಾಗ, ಒಲೆ ಮುಂದೆ ಬೆಚ್ಚಗೆ ಕುಳಿತು 'ಕಟುಕುಟುಂ' ಅಂತ ಜಗಿಯುತ್ತಿದ್ದಾಗ ಸಿಕ್ಕುವ ಆನಂದ ಬೇರೆಲ್ಲೂ ಸಿಗದು!

ಕಾಲ ಬದಲಾಗಿದೆ. ನಾವು ಬದಲಾಗಿದ್ದೇವೆ. ಅಭಿವೃದ್ಧಿಗೊಂಡಿದ್ದೇವೆ.' ಎಂಬ ಭ್ರಮೆ ನಮ್ಮಲ್ಲಿದೆಯಲ್ಲಾ. ಅಲ್ಲಿನ ತನಕ ಸುರಿವ ಮಳೆಯೂ 'ಎಂಚಿನ ಸಾವುದ ಬರ್ಸ'ವಾಗುತ್ತದೆ. ಬೇಸಿಗೆಯಲ್ಲಿ ನೀರಿಗೆ ಹಾಹಾಕಾರವಾಗುವಾಗ ಮತ್ತೆ 'ನೀರು, ಮಳೆಯ' ನೆನಪಾಗುತ್ತದೆ.