Tuesday, December 29, 2009

'ಶ್ರೀ' ಪಡ್ರೆಯವರಿಗೆ 'ವಿಲ್ ಗ್ರೋ' ಪ್ರಶಸ್ತಿ

ಹಿರಿಯ ಪತ್ರಕರ್ತ, ಅಡಿಕೆ ಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕ 'ಶ್ರೀ' ಪಡ್ರೆಯವರಿಗೆ ಪ್ರತಿಷ್ಠಿತ 'ವಿಲ್ ಗ್ರೋ' ಪ್ರಶಸ್ತಿ ಸಂದಿದೆ. ಚೆನ್ನೈಯ ವಿಲ್ಗ್ರೋ ಸಂಸ್ಥೆ (ಹಿಂದೆ ರೂರಲ್ ಇನೊವೇಶನ್ ನೆಟ್ವರ್ಕ್) ಪತ್ರಕರ್ತ ವಿಭಾಗದಲ್ಲಿ ಪಡ್ರೆಯವರನ್ನು ಪ್ರಶಸ್ತಿಗೆ ಆಯ್ಕೆ ಮಾಡಿದೆ. ಪ್ರಶಸ್ತಿಯು ಐವತ್ತು ಸಾವಿರ ರೂಪಾಯಿ ಮತ್ತು ಫಲಕಗಳನ್ನೊಳಗೊಂಡಿದೆ.
ಆರು ಮಂದಿ ಪತ್ರಕರ್ತರ ಪೈಕಿ ಅಡಿಕೆ ಪತ್ರಿಕೆಯಲ್ಲಿ ಅನುಶೋಧನೆಗಳಿಗೆ ಕೊಟ್ಟ ಆದ್ಯತೆಗಳಿಗಾಗಿ ಶ್ರೀ ಪಡ್ರೆಯವರಿಗೆ ಈ ಪ್ರಶಸ್ತಿ ಕೊಡಲಾಗಿದೆ. ತೀರ್ಪುಗಾರರ ಮಂಡಳಿಯ ತೀರ್ಮಾನ ಮತ್ತು ಎಸ್ಎಂಎಸ್ - ಹೀಗೆ ಎರಡು ವಿಧಾನಗಳ ಮೂಲಕ ಒಟ್ಟಾರೆಯಾಗಿ ಈ ಆಯ್ಕೆ ನಡೆದಿದೆ.

'ಶ್ರೀ' ಪಡ್ರೆ ಕೇರಳದ ಕಾಸರಗೋಡು ಜಿಲ್ಲೆಯ ವಾಣಿನಗರದ ಕೃಷಿಕ. ಪ್ರವೃತ್ತಿಯಲ್ಲಿ ಕೃಷಿ ಪತ್ರಕರ್ತ. ಅಡಿಕೆ ಪತ್ರಿಕೆಯ ಸ್ಥಾಪಕ ಸಂಪಾದಕ. ಜಲಕೂಟ ಮತ್ತು ಅಡಿಕೆ ಪತ್ರಿಕೆಯ ಆಶ್ರಯದಲ್ಲಿ ದಶಕಕ್ಕೂ ಮಿಕ್ಕಿ ಮಳೆಕೊಯ್ಲಿನ ಬಗ್ಗೆ ಆಧ್ಯಯನ, ಬರವಣಿಗೆ, ದೇಶ-ವಿದೇಶಗಳಲ್ಲಿ ಮಳೆಕೊಯ್ಲಿನ ವಿವರಗಳನ್ನು ಸಂಗ್ರಹಿಸಿ, ಜನರಿಗೆ ಹಂಚುವ ಕೆಲಸ ಮಾಡುತ್ತಿದ್ದಾರೆ. ಇಂಗ್ಲಿಷಿನಲ್ಲೂ ಅಭ್ಯುದಯ ನುಡಿಚಿತ್ರ್ರ ಬರೆಯುತ್ತಾರೆ.
ಕಾಸರಗೋಡಿನ ಎಂಡೋಸಲ್ಫಾನ್ ದುರಂತವನ್ನು ಹೊರಜಗತ್ತಿಗೆ ತಿಳಿಸಿ ಅದನ್ನು ತಡೆಯುವ ಹೋರಾಟದಲ್ಲಿ ಭಾಗಿ. ನೆಲ-ಜಲ ಉಳಿಸಿ, ಹನಿಗೂಡಿಸುವ ಹಾದಿಯಲ್ಲಿ, ಮತ್ತೆ ರೂಪಾರೆಲ್ ಬತ್ತಲಿಲ್ಲ, ಬಾನಿಗೊಂದು ಆಲಿಕೆ, ಗುಜರಾತಿನ ನೀರ ತಿಜೋರಿ ಟಾಂಕಾ, ನೀರ ನೆಮ್ಮದಿಗೆ ನೂರಾರು ದಾರಿ, ನೀರ ಸಮಸ್ಯೆಗೆ ಇಲ್ಲಿವೆ ಪರಿಹಾರ, ಓಡಲು ಬಿಡದಿರಿ ಮಳೆನೀರ, ರೈನ್ ವಾಟರ್ ಹಾರ್ವೆಸ್ಟಿಂಗ್, ಮಣ್ಣು-ನೀರು ಇತ್ಯಾದಿ ಇವರ ಪ್ರಕಟಿತ ಕೃತಿಗಳು.

'ಗುಡ್ ನ್ಯೂಸ್ ಇಂಡಿಯಾ ಡಾಟ್ ಕಾಂ' ಎಂಬ ಜಾಲತಾಣ ಇವರನ್ನು 'ದ ರೈನ್ ಮ್ಯಾನ ಆಫ್ ಕೆನರಾ ಕೋಸ್ಟ್' ಎಂದು ಬಣ್ಣಿಸಿದೆ. ಅಶೋಕ ಫೆಲೋ ಕೂಡಾ ಆಗಿರುವ ಇವರಿಗೆ ಸಿಕ್ಕಿರುವ ಹತ್ತಾರು ಪ್ರಶಸ್ತಿಗಳಲ್ಲಿ ಗ್ರಾಮೀಣ ವರದಿಗಾಗಿ ಇರುವ ಸ್ಟೇಟ್ಸ್ಮೆನ್ ರಾಷ್ಟ್ರೀಯ ಪ್ರಶಸ್ತಿ, ಪಾವನಾ ಪರಿಸರ ಪ್ರಶಸ್ತಿ, ಕರ್ನಾಟಕ ಸರಕಾರದ ಪರಿಸರ ಪತ್ರಿಕೋದ್ಯಮ ಪ್ರಶಸ್ತಿ, ಚರಕ ಪತ್ರಿಕೋದ್ಯಮ ಗುರು ಪ್ರಶಸ್ತಿ ಮುಖ್ಯವಾದುವು.

4 comments:

Vanya said...

ಪಡ್ರೆಯವರಿಗೆ ಪ್ರಶಸ್ತಿ ಬಂದಿರುವ ವಿಷಯ ತಿಳಿಸಿದ್ದಕ್ಕೆ ಧನ್ಯವಾದಗಳು. ಪಡ್ರೆಯವರಿಗೆ ಶುಭಾಶಯಗಳು.
ಕುಸುಮಾ ಸಾಯಿಮನೆ

ಕೇಶವ ಪ್ರಸಾದ್.ಬಿ.ಕಿದೂರು said...

sarala nade, nudiya shree padreyavarige award bandirodakke abhinandanegalu..

Venkatakrishna.K.K. said...

ಶ್ರೀಪಡ್ರೆ ಯವರು ಮಾಡಿದ,ಮತ್ತು ಮಾಡುತ್ತಿರುವ ಕೆಲಸ,ನೂರಾರು ಜನರಿಗೆ ಮಳೆಕೊಯ್ಲು,ಜಲ ಸ೦ರಕ್ಷಣೆ,ನೀರಿಂಗಿಸುವಿಕೆ,ಇತ್ಯಾದಿಗಳ ಬಗ್ಗೆ ಆಸಕ್ತಿಮೂಡಿಸಿದೆ.
ಮಾತ್ರವಲ್ಲ-
ಈನಿಟ್ಟಿನಲ್ಲಿ ಕಾರ್ಯಪ್ರವರ್ತರಾಗುವ೦ತೆ,ಪ್ರೇರಣೆ ನೀಡಿದೆ.

ಆಕಾಶಕ್ಕೆ ಲಗ್ಗೆಯಿಟ್ಟು,ಭೂಮಿಯ ಒಡಲು ತು೦ಬುವ ಕೆಲಸ,
ಮನುಕುಲಕ್ಕೆ,ಮು೦ದಿನ ತಲೆಮಾರಿಗೆ ನೀರುಳಿಸಿಕೊಡುವ ಕೆಲಸ,

ಮಾಡುತ್ತಿರುವವರನ್ನು ಗುರುತಿಸಿದ್ದು,ಸ೦ತಸದ ಸ೦ಗತಿ.
--------------------------------

subbanna said...

ಬಹು ಹಿ೦ದೆ ಸ್ಟೇಟ್ಸ್ ಮೆನ್ ಪ್ರಶಸ್ತಿ ಬ೦ದಿತ್ತು, ಬಳಿಕ ಇನ್ನೂ ಕೆಲವು ಬ೦ದಿರಬೇಕು, ಇದೀಗ ವಿಲ್ ಗ್ರೋ ಪ್ರಶಸ್ತಿ. ಇತ್ತೀಚಿನ ತುರಾಯಿಗಾಗಿ ಅಭಿನ೦ದನೆಗಳು. ಶಿವರುದ್ರಪ್ಪನವರ "ಎದೆ ತು೦ಬಿ ಹಾಡಿದೆನು" ಕವನದ೦ತಾ ಇ೦ಗಿತದ ಪಡ್ರೆಯವರಿಗೆ, ಇವು ಯಾವುವೂ ಇಲ್ಲದಿದ್ದರೂ, ಅಡಿಕೆ ಪತ್ರಿಕೆ ಮತ್ತು, ಹತ್ತಾರು ಅ೦ಕಣಗಳ ಖಾಯ೦ ಓದುಗರು, ಸ್ಫೂರ್ತಿ ಪಡೆದು ಪ್ರಯೋಗ ಮಾಡಿದವರು, ಯಶಸ್ವಿಯಾದ ಅನೇಕರು, ಇವರೆಲ್ಲರ ಶುಭ ಹಾರೈಕೆಗಳು ಖ೦ಡಿತ ಜೊತೆಗಿರುತ್ತವೆ. ವ೦ದನೆಗಳು. ಮರಿಕೆ ಸುಬ್ಬಣ್ಣ, ಪುತ್ತೂರು.

Post a Comment