Saturday, December 5, 2009

ಸುಭಗತೆಗೆ ಅಲಿಖಿತ 'ಪೇಟೆಂಟ್'!

ಧಾರವಾಡದ ಕೃಷಿ ಮೇಳದಲ್ಲಿ ಕೃಷಿ ಸಲಕರಣೆಗಳ ಮಳಿಗೆಯೊಂದಿತ್ತು. ಕತ್ತಿ, ಚೂರಿ, ಮಚ್ಚು...ಗಳು ಸಾಲಾಗಿ ಜೋಡಿಸಿದ್ದುವು. ಇವುಗಳ ವಿಶೇಷವಿರುವುದು ಅವುಗಳ 'ಹಿಡಿ'ಯ ನೋಟದಲ್ಲಿ! ಅವು ಪೈಬರ್ನಿಂದ ತಯಾರಿಸಿದವುಗಳು. ಬಹಳ ಆಕರ್ಷಕವಾದ ನೋಟ. ಅಷ್ಟೇ ಹರಿತ. ಎಲ್ಲವೂ ಕಂಪೆನಿ ತಯಾರಿಗಳು. ಮುಂದಿನ ದಿನಗಳಲ್ಲಿ ಇವಕ್ಕೆ ಪೇಟೆಂಟ್ ಸಿಕ್ಕರೂ ಆಶ್ಚರ್ಯವಿಲ್ಲ.
ಆದರೆ ಇಲ್ಲಿ ವಿಷಯ ಮುಖ್ಯವಾಗುವುದು ಪೇಟೆಂಟ್ ಕುರಿತಾಗಿ ಅಲ್ಲ. ಮಳಿಗೆಯಲ್ಲಿ ಆಕರ್ಷಕವಾಗಿ ಕಾಣುವ 'ನೋಟ' (ಫಿನಿಶಿಂಗ್) - ಅದರ ಯಶಸ್ಸು. ಇಂತಹ 'ಕಾಣುವ ನೋಟ'ದ ಹೊರತಾಗಿ, ಅದರ ಗುಣಮಟ್ಟದಲ್ಲಿ ನೋಟವನ್ನು ಕೊಡುವ ಜಾಣರು ನಮ್ಮ ಹಳ್ಳಿಗಳಲ್ಲಿ ಈಗಲೂ ಇದ್ದಾರೆ.

ಫೈಬರ್ ಹಿಡಿಯನ್ನು ಕಂಡಾಗ, ನನ್ನೂರಿನ ಅಪ್ಪಣ್ಣ ಆಚಾರ್ಯರು ನೆನಪಾದರು. ಇಡೀ ಗ್ರಾಮದಲ್ಲಿ ಕತ್ತಿ, ಮಚ್ಚು, ಗರಗಸಗಳ ಅಲಗು ತುಂಡಾದರೆ, ಹರಿತ ಕಡಿಮೆಯಾದರೆ ಪರಿಕರದೊಂದಿಗೆ ಆಚಾರ್ಯರ ಮನೆಮುಂದೆ ಪ್ರತ್ಯಕ್ಷರಾಗುವ ಮಂದಿ! ಅವರು ಕತ್ತಿ, ಮುಟ್ಟಿಯನ್ನು ಒಮ್ಮೆ ಕುಲುಮೆಯಲ್ಲಿಟ್ಟು, ನೀರಲ್ಲಿ ಅದ್ದಿ, ಮುಟ್ಟಿಯಿಂದ ನಾಲ್ಕೈದು ಪೆಟ್ಟು ಬಡಿದರೆ ಸಾಕು, ಮತ್ತೆ ಆರು ತಿಂಗಳಿಗೆ ಇವರ ಕುಟೀರಕ್ಕೆ ಬರುವುದೇ ಬೇಡ. ಅಷ್ಟು ಹಿಡಿತ, ನೋಟ. ಜತೆಗೆ ಕೈಗುಣವೂ! ಹೀಗಾಗಿ ಇವರ ತಯಾರಿ ಕುಟೀರದ ಮುಂದೆ ಜನಸಂದಣಿಯಿರುತ್ತಿತ್ತು.

ಇನ್ನೊಬ್ಬರು ಆನಂದ ಆಚಾರ್ಯರು. ಇವರು ಯಕ್ಷಗಾನ ಅರ್ಥಧಾರಿಗಳು. ಕತ್ತಿಯ ಅಲಗಿಗೆ ಕಾಯಕಲ್ಪ ಕೊಡುವಲ್ಲಿ ಎತ್ತಿದ ಕೈ. ಯಕ್ಷಗಾನದ ಸುದ್ದಿ ಮಾತನಾಡುತ್ತಾ, ಕುಲುಮೆಯ ಚಕ್ರವನ್ನು ನಾವೇ ತಿರುಗಿಸಿ ಸಹಕರಿಸಿದರೆ ಒಂದಿಪ್ಪತ್ತು ನಿಮಿಷದಲ್ಲಿ ಕತ್ತಿ ಹರಿತವಾಗಿ ನಿಮ್ಮ ಕೈಗೆ. ಕುಲುಮೆ ಕಾಯಕ ಅವರಿಗೆ ಹೊಟ್ಟೆಪಾಡು. ಆದರೆ ಅದರಲ್ಲಿರುವ ಪ್ರೀತಿ ಮತ್ತು ಫಿನಿಶಿಂಗ್ ಕಂಡಾಗ ಕಂಪೆನಿಗಳೂ ನಾಚಬೇಕು.

ಇನ್ನೊಬ್ಬರು ದೇರಪ್ಪ ಆಚಾರ್ಯ. ಇವರು ವರುಷಪೂರ್ತಿ ಬ್ಯುಸಿ! ಮನೆಯ ಸೂರನ್ನು ನಿರ್ಮಿಸುವುದರಲ್ಲಿ ಪರಿಣತ. ಮನೆಯ ಆಯ - ಉದ್ದಗಲದ ಅಳತೆ ಕೊಟ್ಟರೂ ಸಾಕು. ಒಂದೈದು ನಿಮಿಷದಲ್ಲಿ 'ಕ್ಯಾಲಿಕ್ಯುಲೇಟರ್ ಇಲ್ಲದೆ' ನಿರ್ಮಿಸಲುದ್ದೇಶಿಸಿದ ಮನೆಗೆ ಎಷ್ಟು ಮರ ಬೇಕು, ಎಷ್ಟು ಹಂಚು ಬೇಕು, ಎಷ್ಟು ಆಣಿ ಬೇಕು.. ಎಂಬ ಲೆಕ್ಕಾಚಾರ ಮುಂದಿಡುತ್ತಾರೆ.

ಮನೆಯ ಸೂರಿನ ಮರದ ಕೆಲಸಗಳು ಬಹಳ ಸೂಕ್ಷ್ಮ ಮತ್ತು ಜಾಣ್ಮೆ ಬೇಡುವಂತಹುದು. ಇವರು ಉಳಿ-ಗೀಸುಳಿಯೊಂದಿಗೆ ಮರವನ್ನು ಮುಟ್ಟಿದರೆ ಸಾಕು, ಬೇಕಾದಂತೆ ಬಾಗುತ್ತದೆ-ಬಳುಕುತ್ತದೆ! ಅವರ ಕೈಯಲ್ಲಿ ಒಂಚೂರು ಮರವೂ ವ್ಯರ್ಥವಾಗುವುದಿಲ್ಲ.
ಸೂರಿಗೆ ಬೇಕಾದ ಎಲ್ಲಾ ಮರಗಳು ವಿನ್ಯಾಸವಾದ ಬಳಿಕ ಮಾಡಿಗೆ ಏರಿ ಪಕ್ಕಾಸುಗಳನ್ನೆಲ್ಲಾ ಸಿಕ್ಕಿಸಿ, ಹಂಚು ಜೋಡಿಸಿ ಕೆಳಗಿಳಿದಾಗಲೇ ಆಚಾರ್ಯರ ಕೆಲಸ ಮುಗಿಯುವುದು! ಇವರ ಕೆಲಸದಲ್ಲಿನ ನೂಜೂಕು ಇದೆಯಲ್ಲಾ - ನಮ್ಮ ಯಾವ ತಾಂತ್ರಿಕ ಪಠ್ಯದಲ್ಲೂ ಇಲ್ಲದಂತಹ ಸಂಗತಿ.

ಇತ್ತೀಚೆಗೆ ಒಬ್ಬರು ಹೇಳಿದರು 'ಎಂತಹ ಕೆಲಸವನ್ನೂ ಮಾಡಬಹುದು, ಏನಂತೆ'! ಇದು ಉಡಾಫೆಯಂತೆ ಕಂಡರೂ, ನಮ್ಮಲ್ಲಿ ಉತ್ತರ ಕರ್ನಾಟಕದಿಂದ ಬಂದ ಶ್ರಮಿಕರು ತೋಟದ ಕೆಲಸ ಮಾಡಿಲ್ಲವೇ? ಆದರೆ ಮಾಡಿದ ಕೆಲಸದಲ್ಲಿರುವ ಫಿನಿಶಿಂಗ್ - ಇದಕ್ಕೆ ಅನುಭವ ಮತ್ತು ಕೆಲಸದಲ್ಲಿನ ಪ್ರೀತಿ ಮಾನದಂಡ. ಜತೆಗೆ ಅದೃಷ್ಟವೂ! ಇದು ಎಲ್ಲರಿಗೂ ಬರುವುದಿಲ್ಲ.

ನನ್ನಜ್ಜಿ ಮನೆಯಲ್ಲಿ ಎತ್ತುಗಳ ಮೂಲಕ ಗದ್ದೆ ಬೇಸಾಯ. ಗದ್ದೆ ಉಳುವಲ್ಲಿ ಮುಂಡಪ್ಪ ಮೂಲ್ಯ ಎಂಬವರು ಸ್ಪೆಷಲಿಸ್ಟ್. ಎಂತಹ ರಂಪಾಟ ಮಾಡುವ ಎತ್ತುಗಳೇ ಆಗಲಿ, ಅವನ್ನು ಗದ್ದೆಗೆ ಇಳಿಸಿ ನೊಗವಿರಿಸಿ, ನೇಗಿಲು ಹಿಡಿದು 'ಹೂಂ..ಪಡ..ಪಡ..' ಅಂತ 'ಹೂಟೆಭಾಷೆ'ಯಲ್ಲಿ ಮಾತನಾಡಿದರೆ ಸಾಕು, ಅವರು ಹೇಳಿದಂತೆ ಕೇಳುತ್ತವೆ!

'ಮುಂಡಪ್ಪರು ಗದ್ದೆಗಳಿದರೆ ಮತ್ತೆ ಅತ್ತ ಕಡೆ ಮನೆಯಜಮಾನ ಹೋಗಬೇಕಿಲ್ಲ' ಎಂಬ ಪ್ರತೀತಿಯೂ ಇತ್ತು. ಗದ್ದೆ ಉತ್ತು, ಎತ್ತುಗಳನ್ನು ಮೀಯಿಸಿ, ಮೇಯಿಸಿ; ನೊಗ, ನೇಗಿಲನ್ನು ಶುಚಿಗೊಳಿಸಿ, ಯಥಾಸ್ಥಾನದಲ್ಲಿಟ್ಟು, ತಾನೂ ಶುಚಿಯಾಗಿ ಜಗಲಿಯಲ್ಲಿ ಜಪ್ಪನೆ ಕೂರಿ, 'ಅಜ್ಜಮ್ಮಾ.. ಯಾನ್ ಬತ್ತೆ' ಎಂದಾಗ ನನ್ನ ಪದ್ದಜ್ಜಿ ಏಳೆಂಟು ದೋಸೆ, ದೊಡ್ಡ ಚೆಂಬಲ್ಲಿ ಕಾಪಿ ಜತೆಗೆ ವೀಳ್ಯದ ಹರಿವಾಣ ತಂದಿಡುವ ದೃಶ್ಯ ಕಣ್ಣೆದುರು ಬರುತ್ತದೆ.

ಇಂತಹ 'ಫಿನಿಶಿಂಗ್' ಇರುವ ಎಷ್ಟು ಮಂದಿ ನಮ್ಮ ನಡುವೆ ಇಲ್ಲ. ಅಂತಹವರನ್ನು ಮಾತನಾಡಿಸುವುದು ಬಿಡಿ, ಅವರ ಕೆಲಸದ ಚಂದವನ್ನೂ ನೋಡುವ ಮನಸ್ಸು ನಮಗಿರುವುದಿಲ್ಲ.

ಧಾರವಾಡದ ಶಿವರಾಂ ಪೈಲೂರು ಅವರ ಮನೆಗೊಮ್ಮೆ ಹೋಗಿ. ಅಲ್ಲಿನ ಪ್ರತೀಯೊಂದು ವಸ್ತುವೂ ಒಪ್ಪ ಓರಣವಾಗಿರುವುದು. ಅವರು ಬರೆವ ಕಾಗದ, ಅದನ್ನು ಕವರಿಗೆ ತುಂಬಿಸುವ ರೀತಿ, ವಿಳಾಸ ಬರೆವ ಪರಿ, ಅಂಚೆ ಚೀಟಿ ಅಂಟಿಸುವ ತನಕದ ಸುಭಗತೆ. ಚಿತ್ರ ಕಲಾವಿದ ಶಿವರಾಮ್ ಅವರನ್ನೊಮ್ಮೆ ನೋಡಿ. ಅವರಲ್ಲಿರುವ ಪುಸ್ತಕಗಳ ಅಂಚುಗಳು ಒಂಚೂರೂ ಮಡಚಿರುವುದಿಲ್ಲ. ಹತ್ತು ವರುಷದ ಹಿಂದಿನ ಕೆಲವು ಪುಸ್ತಕಗಳು ಹೊಸತರಂತೆ ಇವೆ. ಪ್ರತೀಯೊಂದು ಅಕ್ಷರ ಬರೆವಾಗಲೂ ಕೊಡುತ್ತಾರೆ- 'ಫಿನಿಶಿಂಗ್'! ಈ ಅಕ್ಷರಗಳ ಮುಂದೆ ನಮ್ಮ ಕಂಪ್ಯೂಟರಿನ 'ಫಾಂಟ್'ಗಳು ನಾಚಬೇಕು.

ಇಂತಹ ನೋಟ ಯಾ ಫಿನಿಶಿಂಗ್ ಇದೆಯಲ್ಲಾ - ಇವೆಲ್ಲಾ ಕಲಿತು ಬರುವುದಲ್ಲ. ಕೆಲಸಗಳಲ್ಲಿ 'ಫಿನಿಶಿಂಗ್' ಇರುವ ಅಪ್ಪಣ್ಣರಂತಹ, ದೇರಪ್ಪರಂತಹ, ಮುಂಡಪ್ಪರಂತಹ ಹಿರಿಯರ ಕೆಲಸಗಳೆಲ್ಲಾ ಕಾಲದ ಅಲಿಖಿತ ದಾಖಲೆಗಳು. ಇವರ ಕೆಲಸಗಳಿಗೆ ಜನರೇ ಅಂದು ಹಾರ್ದಿಕವಾಗಿ ಕೊಟ್ಟ ಗೌರವ ಇದೆಯಲ್ಲಾ - ಅದುವೇ ನಿಜವಾದ ಅಲಿಖಿತ ಪೇಟೆಂಟ್!

0 comments:

Post a Comment