Tuesday, February 23, 2016

ಪಾರಂಪರಿಕ ಜ್ಞಾನಕ್ಕೆ ಸವಾಲಾದ ಮೂಲಿಕೆಗಳ ಆಧುನೀಕರಣ

                  ಸಮುದ್ರದ ಉಪ್ಪು ನೀರನ್ನು ಬಳಸಲು ತೊಡಕಿಲ್ಲ. ಇದರಿಂದ ತಯಾರಿಸಿದ ಉಪ್ಪನ್ನು ನೇರವಾಗಿ ಉಪಯೋಗಿಸುವಂತಿಲ್ಲ. ಹೆಚ್ಚು ಖನಿಜಾಂಶವಿರುವ ಉಪ್ಪಲ್ಲಿ 'ಅಯೋಡಿನ್ ಇಲ್ಲ' ಎಂಬ ಕಪ್ಪು ಹಣೆ ಪಟ್ಟಿಯನ್ನು ಆದೇಶದಡಿ ಅಂಟಿಸಲಾಗಿದೆ. ಉಪ್ಪನ್ನು ಶ್ವೇತಗೊಳಿಸಿದಾಗ ಸಹಜವಾಗಿ ಅಯೋಡಿನ್, ಖನಿಜಾಂಶಗಳನ್ನು ನಷ್ಟವಾಗುತ್ತವೆ. ನಂತರ ಕೃತಕವಾಗಿ ಅಯೋಡಿನ್ ಸೇರಿಸಿ, 'ಇದು ಆರೋಗ್ಯಕ್ಕೆ ಪೂರಕ, ಇದನ್ನೇ ಬಳಸಿ' ಎಂದು ಬಿಂಬಿಸಿ ಪ್ರಚಾರ ಮಾಡುತ್ತಾರೆ. ಸಹಜತೆಯನ್ನು ನಾಶ ಮಾಡಿ ಕೃತಕ ಅಯೋಡಿನನ್ನು ಬಲವಂತದಿಂದ ಉದರಕ್ಕೆ ತಳ್ಳಲಾಗುತ್ತದೆ!
                'ಆರೋಗ್ಯಕ್ಕೆ ಕೆಡುಕು' ಅಂದಾಗ ನಂಬಲೇ ಬೇಕಲ್ಲ. ಅಯೋಡಿನ್ಯುಕ್ತ ಸಹಜ ಉಪ್ಪನ್ನು ಬಳಸಿ ಯಾರ ಜೀವಕ್ಕಾದರೂ ತೊಂದರೆಯಾಗಿದೆಯೇ? ಮನುಷ್ಯರಿಗೆ ಅಯೋಡಿನ್ ಸಮಸ್ಯೆ ಇಲ್ಲ ಎನ್ನುವಂತಿಲ್ಲ. ಇದ್ದರೂ ಭಾರತದ ಜನಸಂಖ್ಯೆಗೆ ಹೋಲಿಸಿದರೆ ಎಷ್ಟು ಪ್ರತಿಶತ ಇರಬಹುದು? ಆರಂಕೆ ಮೀರದು. ಉಳಿದ ಆರೋಗ್ಯವಂತರಿಗೆ ಬಲವಂತದಿಂದ ತಿನ್ನಿಸಿದಂತಾಗುತ್ತದೆ. ಇದು ಆರೋಗ್ಯಕ್ಕೆ ಪೂರಕವೇ? ಪ್ರಕೃತಿಯ ಸಹಜ ವಸ್ತುವನ್ನು ಸಂಸ್ಕರಿಸಿ, ಅದನ್ನು ರಾಸಾಯನಿಕಗೊಳಿಸುವುದು ಈಗ ಉದ್ಯಮವಾಗಿದ್ದು ಅಂತಾರಾಷ್ಟ್ರೀಯವಾಗಿ ಬೆಳೆದು ನಿಂತಿದೆ.
                ಮೂಲಿಕಾ ತಜ್ಞ ಪಾಣಾಜೆಯ ಪಿ.ಎಸ್.ವೆಂಕಟರಾಮ ದೈತೋಟರು ಆರೋಗ್ಯದ ಸೂಕ್ಷ್ಮ ಸಂಗತಿಗಳನ್ನು   ಪೋಸ್ಟ್ಮಾರ್ಟಂ ಮಾಡುತ್ತಾರೆ - ಹಂತಹಂತವಾಗಿ ಅರೋಗ್ಯಕ್ಕೆ ಕೇಡಾಗಿ ಪರಿಣಮಿಸುವ ಇಂತಹ ವಿಚಾರಗಳು 'ಮಾರಕ'ವೆಂದು ಗೊತ್ತಿದ್ದೂ ಪ್ರಚಾರ ಮಾಡಲಾಗುತ್ತದೆ. ಜತೆಗೆ ಆಧುನಿಕ ವಿಜ್ಞಾನವು 'ಸಂಶೋಧನಾ ವರದಿ'ಗಳನ್ನು ಥಳುಕು ಹಾಕುತ್ತದೆ. ಸಂಶೋಧಕರ ಮಾತಿಗೆ ಮನ್ನಣೆ ಸಿಗುತ್ತದೆ. ಸಂಶೋಧಕರಿಗೆ ಮಾನ-ಸಂಮಾನ-ಬಹುಮಾನ. ಅವರ ನಿವೃತ್ತಿಯ ನಂತರವಷ್ಟೇ ವರದಿಯ ಸತ್ಯದರ್ಶನ ಪ್ರಕಟವಾಗುತ್ತದೆ!
                   'ಹಳತನ್ನೆಲ್ಲಾ ನಂಬಬೇಡಿ'-ಆಧುನಿಕ ವಿಜ್ಞಾನ ಪರೋಕ್ಷವಾಗಿ ಸಾರುತ್ತದೆ. ಈ ಹೂರಣದಲ್ಲೇ ಶೈಕ್ಷಣಿಕವಾದ ಪಠ್ಯಗಳು ಸಿದ್ಧವಾಗಿ ವಿದ್ಯಾರ್ಥಿಗಳಿಗೆ ಬೋಧಿಸಲಾಗುತ್ತದೆ. ಯಾವಾಗ ಇಂತಹ ಶಿಕ್ಷಣ ಮತಿಯೊಳಗೆ ಹೊಕ್ಕಿತೋ ಆಗ 'ಕಲ್ಚರ್' ಬದಲಾಗಲೇ ಬೇಕು ತಾನೆ. 'ಒರಿಜಿನಲ್' ಮರೆಗೆ ಸರಿಯುತ್ತದೆ. ಇಂತಹ ಶಿಕ್ಷಣವು 'ಜ್ಞಾನ'ವಾಗದೇ ಇರುವುದೇ ಆಧುನಿಕ ವಿಜ್ಞಾನದ ಹಿಂಬೀಳಿಕೆ. ಮೂಲಿಕಾ ಜ್ಞಾನವು ಸನಾತನೀಯವಾಗಿ ಹರಿದು ಬಂದಿದೆ. ಒಂದೆಡೆ ಅಪಪ್ರಚಾರ. ಮತ್ತೊಂದೆಡೆ ಪಾರಂಪರಿಕ ಜ್ಞಾನವನ್ನು ಪ್ರಶ್ನಿಸುವ ಆಧುನಿಕ ವಿಜ್ಞಾನ. ಇವೆರಡೆ ಮಧ್ಯೆ ಪಾರಂಪರಿಕ ಮೂಲಿಕಾ ವೈದ್ಯ ಪದ್ಧತಿಯು ನಲುಗುತ್ತಿದೆ.
                     ಭಾರತವು ಮೂಲಿಕೆಗಳ ತವರೂರು. ಶಾಲಾ ಮಟ್ಟದಲ್ಲಿ ಗಮನಿಸಿ. ವಿದೇಶಿ ಸಂಸ್ಥೆಗಳು ವಿದ್ಯಾರ್ಥಿಗಳನ್ನು 'ಪ್ರಾಜೆಕ್ಟ್' ಮೂಲಕ ಟಾರ್ಗೆಟ್ ಮಾಡುತ್ತಿರುವುದಕ್ಕೆ ದೂರ ಹೋಗಬೇಕಾಗಿಲ್ಲ. ಪ್ರತೀ ವರುಷ ವಿದ್ಯಾರ್ಥಿಗಳು ಪಾರಂಪರಿಕ ಗಿಡಮೂಲಿಕೆ, ಔಷಧಿ, ಯಂತ್ರ-ತಂತ್ರಗಳ ಕುರಿತು ಪ್ರಾಜೆಕ್ಟ್ ತಯಾರಿಸಿ ಸಲ್ಲಿಸಿದರಾಯಿತು. ಇದಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧೆಗಳ ಆಯೋಜನೆ. ವಿದ್ಯಾರ್ಥಿಗಳಿಗೆ ವಿಮಾನಯಾನದ ಸುಖ. ವಿದ್ಯಾರ್ಥಿಗೆ ಬಹುಮಾನಗಳ ಸುರಿಮಳೆಯ ಪುಳಕ. ಹೆತ್ತವರು, ಅಧ್ಯಾಪಕರಿಗೆ ಖುಷಿ-ಸಂತೃಪ್ತಿ.  ಈ ಸ್ಪರ್ಧೆಯ ಹಿಂದೆ ವ್ಯವಸ್ಥಿತವಾದ ಹುನ್ನಾರಗಳಿವೆ ಎಂದು ಫಕ್ಕನೆ ಅನ್ನಿಸುವುದಿಲ್ಲ.
                 ವಿದ್ಯಾರ್ಥಿ ಒಂದು ಗಿಡಮೂಲಿಕೆಯ ಪ್ರಾಜೆಕ್ಟ್ ಸಿದ್ಧಪಡಿಸಿ ನೀಡಿದ ಎಂದಾದರೆ ಅದನ್ನು ಮತ್ತೆ ಪ್ರಶ್ನಿಸುವಂತಿಲ್ಲ! ಅದರಲ್ಲೂ ಬಹುಮಾನ ಬಂದವುಗಳಾದರೆ ಮುಗಿಯಿತು! ಅದರ ಪೂರ್ತಿ ಸ್ವಾಮ್ಯವನ್ನು ಆಯೋಜನೆ ಮಾಡಿದ ಸಂಸ್ಥೆಗಳು ಇಟ್ಟುಕೊಳ್ಳುತ್ತವೆ. ಮತ್ತೆ ಅವೆಲ್ಲಾ 'ಹಿಡನ್ ಅಜೆಂಡಾ'ದೊಳಗೆ ತೂರಿ ಕಚೇರಿಗಳನ್ನು ಸುತ್ತುತ್ತಿರುತ್ತವೆ. ಇಂದಲ್ಲ ನಾಳೆ ನಮ್ಮ ಗಿಡಮೂಲಿಕೆಗಳ ಒಂದೊಂದೇ ಹಕ್ಕು ವಿದೇಶಿ ಸಂಸ್ಥೆಯ ಪಾಲಾದರೂ ಆಶ್ಚರ್ಯಪಡಬೇಕಾಗಿಲ್ಲ. ಭಾರತದಲ್ಲಿ ಇಂತಹ ವ್ಯವಸ್ಥಿತ, ಆಕರ್ಷಕ ಸ್ಪರ್ಧೆಗಳು ಎಷ್ಟಿಲ್ಲ?
                 ಮೂಲಿಕಾ ಜ್ಞಾನವು ಅಪಕ್ವ ಜ್ಞಾನವುಳ್ಳವರ ಯಾ ಕೃತಕ ವೈದ್ಯರ ಕೈಯಲ್ಲಿ ಹಗುರವಾಗುತ್ತದೆ ಎನ್ನುತ್ತಾರೆ ದೈತೋಟ.  ಮೂಲಿಕಾ ವೈದ್ಯರೊಬ್ಬರು ಒಂದು ಮೂಲಿಕೆಯನ್ನು ಬಳಸಿ ಔಷಧವನ್ನು ಸೂಚಿಸುತ್ತಾರೆ ಎಂದಿಟ್ಟುಕೊಳ್ಳಿ. ಆ ಮೂಲಿಕೆಯು ಔಷಧವಾಗಲು ಕೆಲವೊಂದು ಸಂಸ್ಕರಣೆಗಳು ಅಗತ್ಯ. ಆಗ ಮಾತ್ರ ರೋಗಿಯ ಮೇಲೆ ಪರಿಣಾಮ. ವೈದ್ಯರು ಯಾವ ಮೂಲಿಕೆಯನ್ನು ಬಳಸುತ್ತಾರೆ ಎಂಬುದಷ್ಟನ್ನೇ ಗ್ರಹಿಸಿದ ಕೃತಕ ವೈದ್ಯರಿಗೆ ಸಂಸ್ಕರಣೆ ಮಾಡಿ ಬಳಸುವ ಜ್ಞಾನವಿರುವುದಿಲ್ಲ. ಇದು ಅಪಾಯ.
                 ಮೂಲಿಕೆಯೇ ಮದ್ದು. ಅದು ಹೆಚ್ಚು ಸಂಸ್ಕರಣಗೊಂಡರೆ ಕೆಮಿಕಲ್. ಈಗ ಎಲ್ಲವೂ ಪ್ಯಾಕ್ಟರಿಗಳಲ್ಲಿ ವಿಪರೀತ ಸಂಸ್ಕರಣಗೊಂಡು 'ಕೆಮಿಕಲ್ ಆಗಿ' ಮಾರುಕಟ್ಟೆಗೆ ಬರುತ್ತದೆ. ಮೂಲಿಕೆಯೊಂದರ ಹಿಂದೆ ಪಾರಂಪರಿಕ ಜ್ಞಾನ ಕೆಲಸ ಮಾಡಿಲ್ಲ. ನೋಡಿ ತಿಳಿದ ವಿಚಾರಗಳಷ್ಟೇ ಔಷಧ ರೂಪದಲ್ಲಿ ಹೊರಬರುತ್ತದೆ. ಜನ ನಂಬುತ್ತಾರೆ. ಮೂಲಿಕಾ ವೈದ್ಯ ಎಂದರೆ 'ಸಸ್ಯಗಳಿಂದ ಮದ್ದು' ಎಂದರ್ಥ. ಇದು ಅಪಾರ್ಥವಾಗಿ ಅರ್ಥಾರ್ಥ ಸಂಬಂಧವನ್ನೇ ಕಳೆದುಕೊಳ್ಳುತ್ತಿದೆ.
                ವೆಂಕಟರಾಮ ದೈತೋಟರು ಆಧುನಿಕ ಶಿಕ್ಷಣವು ಹುಟ್ಟುಹಾಕುವ ಆರೋಗ್ಯಕ್ಕೆ ದುಷ್ಪರಿಣಾಮವಾಗಬಲ್ಲ ವಿಚಾರಗಳನ್ನು  ಅಧ್ಯಯನಾಧಾರಿತವಾಗಿ ಹೇಳುತ್ತಾರೆ. ಬದಲಾದ ಕಾಲಘಟ್ಟದಲ್ಲಿ ಮೂಲಿಕೆಗಳು ಆಧುನೀಕರಣಗೊಳ್ಳುತ್ತಿವೆ. ವ್ಯಾಪಾರವೇ ಆಶಯವಾಗಿದೆ. ದೊಡ್ಡ ದೊಡ್ಡ ಉದ್ಯಮಗಳು ತಲೆಎತ್ತಿವೆ. ಆಡಳಿತಗಳು ಬೆಂಬಲಿಸುತ್ತವೆ. ಕಾನೂನು ಕೂಡಾ ಪ್ರೋತ್ಸಾಹ ನೀಡುತ್ತಿದೆ. ಇದರಿಂದಾಗಿ ಹಿರಿಯರಿಂದ ಬಂದ ಜ್ಞಾನ ಪ್ರವಾಹವು ಹರಿಯುವುದಿಲ್ಲ, ಎಂದು ವಿಷಾದಿಸುತ್ತಾರೆ.
                 ದೈತೋಟರಿಗೆ ಆಯುರ್ವೇದ ಜ್ಞಾನವು ಪಾರಂಪರಿಕ. ಇವರ ಅಜ್ಜ ವೈದ್ಯ ಶಂಕರನಾರಾಯಣ ಭಟ್. ತಂದೆ ಪಂಡಿತ ಶಂಕರನಾರಾಯಣ ಭಟ್. 'ಪಾಣಾಜೆ ಪಂಡಿತ'ರೆಂದೇ ಖ್ಯಾತಿ. ವೆಂಕಟರಾಮರಿಗೆ ಬಾಲ್ಯದಿಂದಲೇ ಮೂಲಿಕಾಸಕ್ತಿ. ತಂದೆಯೊಂದಿಗಿದ್ದು ಕಲಿತ ಜ್ಞಾನ. ಚಿಕಿತ್ಸಾ ವಿಧಾನವನ್ನು ನೋಡಿದ ತಿಳಿದ ಅನುಭವ. ಆಯುರ್ವೇದ ಗ್ರಂಥಗಳ ಅಧ್ಯಯನ. ಅನುಭವಿಗಳೊಡನೆ ನಿರಂತರ ಸಂಪರ್ಕ. ನಾಲ್ಕು ದಶಕದೀಚೆಗೆ ಮೂಲಿಕಾ ಚಿಕಿತ್ಸೆ ನೀಡುತ್ತಿದ್ದಾರೆ.  'ಎಲ್ಲಾ ಕಡೆ ರಿಜೆಕ್ಟ್ ಆದ' ಕೆಲವು ರೋಗಗಳನ್ನು ಗುಣಪಡಿಸಿದ ಖ್ಯಾತಿ ದೈತೋಟರದ್ದು.
                  ಪ್ರಾಕೃತಿಕ ಆಹಾರಕ್ಕೆ ಒತ್ತು ನೀಡುವ ವೆಂಕಟರಾಮರು ರೋಗಗಳೆಲ್ಲಾ ನಮ್ಮ ಆಹಾರ ವಿಧಾನದಿಂದ ಬರುತ್ತವೆ. ಇಂದು ಲಭ್ಯವಿರುವ ಎಲ್ಲಾ ಆಹಾರ ವಸ್ತುಗಳೂ ವಿಷಮಯ. ನಮ್ಮ ಆಹಾರ ವಿಧಾನ ಬದಲಾಗಲೇ ಬೇಕು. ಮನುಷ್ಯ ಮತ್ತು ಪ್ರಕೃತಿಯ ಸಂಬಂಧ ದೂರವಾದುದೇ ರೋಗಗಳಿಗೆ ಮೂಲ ಕಾರಣ.' ಎನ್ನುತ್ತಾರೆ. ಇವರ ಪತ್ನಿ ಜಯಲಕ್ಷ್ಮೀ. ವೈದ್ಯ ಹಿನ್ನೆಲೆಯ ಉತ್ತರ ಕನ್ನಡ ಜಿಲ್ಲೆಯ ಸಾಗರದ ಮುಂಡಿಗೇಸರದವರು. ಇವರ ಅಜ್ಜಿ ನಾಟಿ ವೈದ್ಯರು. ಪ್ರಾಕೃತಿಕ ಆಹಾರ ಪದ್ಧತಿಯಲ್ಲಿ ನಿಜಾರ್ಥದಲ್ಲಿ ಇವರು ತಾಯಿ. ಎಲೆ, ಗಿಡ, ಬಳ್ಳಿ, ಕಾಂಡ, ಹೂ, ಮೊಗ್ಗು.. ಇವೆಲ್ಲವೂ ಜಯಲಕ್ಷ್ಮೀಯವರ ಕೈಯಲ್ಲಿ ಆಹಾರವಾಗಿ, ಔಷಧವಾಗಿ ಬದಲಾಗುತ್ತದೆ.
                  ಕೃಷಿ ಮಾಸಿಕ ಅಡಿಕೆ ಪತ್ರಿಕೆಯಲ್ಲಿ ಇಪ್ಪತ್ತೇಳು ವರುಷದಿಂದ ಪ್ರಕಟವಾಗುವ 'ಮನೆಮದ್ದು' ಅಂಕಣ ಜನಪ್ರಿಯ. ಮೂಲಿಕೆಯೊಂದನ್ನು ಸುಲಭದಲ್ಲಿ ಎಲ್ಲರಿಗೂ ಅರ್ಥವಾಗುವ ಹಾಗೆ ಪರಿಚಯಿಸಿ, ಅದರ ಔಷಧೀಯ ಗುಣಗಳನ್ನು ತಿಳಿಸಿಕೊಡುವ ಅಪೂರ್ವ ಅಂಕಣ. ಚುಟುಕು ವಾಕ್ಯಗಳಲ್ಲಿ ಅನುಭವಸತ್ಯ.  'ವಿಷಗುಣದ್ದಾಗಿರಬಾರದು, ಸುಲಭದಲ್ಲಿ-ಎಲ್ಲೆಡೆ ಸಿಗುವಂತಿರಬೇಕು. ಎಲ್ಲಾ ಋತುಗಳಲ್ಲೂ ಸಿಗಬೇಕು, ಔಷಧಿ ತಯಾರಿ ಸುಲಭವಾಗಿರಬೇಕು'-ಇದು ಬರೆಹದ ಮಾನದಂಡಗಳು.
                 ಹೊಸ ಮೂಲಿಕೆಗಳ ಗುಣಗಳು ಪರೀಕ್ಷೆಯಲ್ಲಿ ಉತ್ತೀರ್ಣವಾದಾಗಲೇ ದೈತೋಟರಿಂದ ಅಂಕ.  ಇದಕ್ಕೆ ವರುಷಗಟ್ಟಲೆ ಕಾಯುವಿಕೆ ಬೇಕು. ಯಾವುದೇ ಮೂಲಿಕೆಯ ಮದ್ದಿನ ಗುಣ ಖಚಿತವಾಗದೆ ದೈತೋಟರು ಜನರ ಮುಂದಿಡರು.  ಇನ್ನೂರೈವತ್ತಕ್ಕೂ ಮಿಕ್ಕಿದ ಮೂಲಿಕೆಗಳ ಪರಿಚಯ 'ಔಷಧೀಯ ಸಸ್ಯ ಸಂಪತ್ತು' ಪುಸ್ತಕವು ಈಚೆಗೆ ಬಿಡುಗಡೆಗೊಂಡ ಕೃತಿ. ಇದರ ಪುಟಪುಟಗಳಲ್ಲಿ ವೆಂಕಟ್ರಾಮರ ತಪಸ್ಸಿದೆ. ಪಾರಂಪರಿಕ ಜ್ಞಾನವಿದೆ. ಅನುಭವಗಳ ಸೆಲೆಯಿದೆ. ಕೃತಿಯನ್ನು ಪುತ್ತೂರಿನ ವಿವೇಕಾನಂದ ಸಂಶೋಧನಾ ಕೇಂದ್ರವು ಪ್ರಕಾಶಿಸಿದೆ.
              ದೈತೋಟರ 'ಔಷಧೀಯ ಸಸ್ಯ ಸಂಪತ್ತು' ನಿಜಾರ್ಥದಲ್ಲಿ ವೈದ್ಯ ಸ್ನೇಹಿತ. ಪಾರಂಪರಿಕ ಜ್ಞಾನದ ಭಂಡಾರ. ಎದುರು ಪುಸ್ತಕವನ್ನಿಟ್ಟು ಪುಟ ತಿರುವುತ್ತಿದ್ದಾಗ ದೈತೋಟರು ಆಗಾಗ್ಗೆ ಹೇಳುವ ಮಾತು ನೆನಪಾಗುತ್ತದೆ,  ಮೂಲಿಕಾ ಜ್ಞಾನ, ಆಯುರ್ವೇದಗಳ ಕುರಿತು ಮಾತನಾಡಬೇಕಾದರೆ ಅಧ್ಯಯನ ಮುಖ್ಯ. ಇದರಲ್ಲಿ ಸಂಶೋಧನೆ ಪ್ರಧಾನ. ಜ್ಞಾನ ಹೆಚ್ಚಿದಂತೆ ಶಾಸ್ತ್ರ ಗಟ್ಟಿಯಾಗುತ್ತದೆ. ಅವಸರ ಸಲ್ಲದು. ದಿಢೀರ್ ವೈದ್ಯರಾಗಲು ಸಾಧ್ಯವಿಲ್ಲ. ಕೆಲವರು ಅರ್ಧಂಬರ್ಧ ಕಲಿತು ಔಷಧಿ ಕೊಟ್ಟು ಏನಕ್ಕೇನೋ ಆದುದಿದೆ. ಪಾರಂಪರಿಕ ಔಷಧಿಗಳು ಈಗಲೂ ಪ್ರಸ್ತುತ.
              ಗಿಡಮೂಲಿಕೆಗಳನ್ನು ಬಳಸಿ ಬಲ್ಲ ಜ್ಞಾನದ ಮೂಲಕ ಸಸ್ಯ ವಿಜ್ಞಾನದ ಪಾಠ ಹೇಳುವ ಹಸುರು ಹಿತೈಷಿ. ಎಲ್ಲಾ ಮೂಲಿಕೆಗಳ ಸಸ್ಯಶಾಸ್ತ್ರೀಯ ಮಾಹಿತಿಯನ್ನು ಬಲ್ಲ ಅಪರೂಪದ ಜ್ಞಾನಿ. ಈ ಜ್ಞಾನಗಳು ದಾಖಲಾಗಬೇಕಾದುದು ಭವಿಷ್ಯದ ಆರೋಗ್ಯ ಬದುಕಿಗೆ ಅನಿವಾರ್ಯತೆ.


Sunday, February 14, 2016

ಮಣ್ಣಿನ ನರಜಾಲ ಇಳಿಯಬಿಟ್ಟ ದಿನದರ್ಶಿನಿ ಹಾಳೆಗಳು

              ವರ್ಷದ ಕೊನೆಗೆ ದಿನದರ್ಶಿನಿಗಳಿಗಾಗಿ ಹುಡುಕಾಟ. ಗೋಡೆಗೆ ತೂಗುಹಾಕಿದ ಬಳಿಕವೇ ವರ್ಶಾರಂಭಕ್ಕೆ ಮುನ್ನುಡಿ. ಉದ್ಯಮ, ಸಂಸ್ಥೆಗಳು ದಿನದರ್ಶಿನಿ- ಕ್ಯಾಲೆಂಡರ್- ಗಳನ್ನು ಮುದ್ರಿಸುತ್ತಿವೆ. ಆಕರ್ಷಕ ವಿನ್ಯಾಸದ, ಬಗೆಬಗೆಯ ನೋಟದ ಹಾಳೆಗಳನ್ನು ಕಣ್ತುಂಬಿಕೊಳ್ಳುವುದು ಆನಂದ. ಅವುಗಳನ್ನು ಪಡೆಯುವುದೂ ಪ್ರತಿಷ್ಠೆ! ಕೆಲವೊಮ್ಮೆ ಪಡಕೊಳ್ಳಲು ಅಂತಸ್ತು ಮಾನದಂಡವಾಗುವುದಿದೆ. ಈಗ ಹಾಗಿಲ್ಲ ಬಿಡಿ.
                ತಾರೀಕು, ದಿನ, ವಾರ, ತಿಥಿ, ಕರಣ ಮತ್ತು ಧಾರ್ಮಿಕ ವಿವರಗಳು ಕೂಡಿದ ವಿಚಾರಗಳು ದಿನದರ್ಶಿನಿಯ ಹೂರಣ. ಸಿದ್ಧಸ್ವರೂಪಕ್ಕಿಂತ ಹೊರತಾಗಿ ಮಾಹಿತಿಯನ್ನು ನೀಡುವ, ಬುದ್ಧಿಗೆ ಮೇವನ್ನು ಉಣಬಡಿಸುವ ಕ್ಯಾಲೆಂಡರ್ಗಳು ಕಾಲೂರುತ್ತಿವೆ. ಜನರ ಒಲವು ಗಳಿಸಹತ್ತಿವೆ. ಖಾಸಗಿ ಸಂಸ್ಥೆಗಳು ನಿಶ್ಚಿತ ಆಶಯದ ಪರೀಧಿಯೊಳಗೆ ತಂತಮ್ಮ ಆರ್ಥಿಕ ಬಲದಂತೆ ಪ್ರಕಟಿಸುತ್ತಿವೆ. ಸೀಮಿತ ಸಂಖ್ಯೆಯ ಗ್ರಾಹಕ ಬಲ, ಒಂದು ವಲಯದ ಆಸಕ್ತರಿಗೆ ತೃಪ್ತಿ ನೀಡುವ ಹೂರಣ. ಸುಲಭದಲ್ಲಿ ಸಿಗದ ಮಾಹಿತಿಗಳಿರುವುದರಿಂದ  ವಿಷಯಾಸಕ್ತ ಮಂದಿ ಜತನದಿಂದ ಕಾಪಿಟ್ಟುಕೊಳ್ಳುತ್ತಿದ್ದಾರೆ.
                  ಬೆಂಗಳೂರಿನ 'ಸಹಜ ಸಮೃದ್ದವು ಭತ್ತ-ಸಿರಿಧಾನ್ಯಗಳ ಕೃಷಿ, ಬಳಕೆ, ಉಳಿಕೆಯ ಬಹುದೊಡ್ಡ ಆಂದೋಳನವನ್ನು ಮಾಡುತ್ತಿದೆ. ಸಿರಿಧಾನ್ಯಗಳ ಸಂರಕ್ಷಣೆ, ಅಭಿವೃದ್ಧಿಯನ್ನು ಯೋಜಿತವಾಗಿ ಮಾಡುತ್ತಿದೆ. ಸಾವಯವ ಕೃಷಿಯ ವಿಸ್ತಾರವನ್ನು ಹೊತ್ತು ನಾಡಿನಾದ್ಯಂತ ಕಾರ್ಯನರವನ್ನು ವಿಸ್ತೃತಗೊಳಿಸುತ್ತಿದೆ. ಭತ್ತದ ಸಂರಕ್ಷಕರನ್ನು ಪ್ರೋತ್ಸಾಹಿಸುತ್ತಿದೆ. ಹೊಸ ತಳಿಯನ್ನು ಅಭಿವೃದ್ಧಿಪಡಿಸುತ್ತಿದೆ. ಸಾವಯವ ಆಹಾರ ಉತ್ಪನ್ನಗಳಿಗೆ ಮಾರುಕಟ್ಟೆಯ ಜಾಲ ರೂಪಿಸಲು ಯತ್ನಿಸುತ್ತಿದೆ. ಈ ವರುಷ 'ಸಿರಿಧಾನ್ಯ'ಕ್ಕೆ ಹೆಚ್ಚು ಬೆಳಕು ಹಾಕುವ ದಿನದರ್ಶಿನಿಯನ್ನು ಹೊರತಂದಿದೆ.
               ಸಿರಿಧಾನ್ಯಗಳು 'ಬರಗಾಲದ ಮಿತ್ರ'. ಗಾತ್ರದಲ್ಲಿ ಕಿರಿದು. ಪೌಷ್ಟಿಕಾಂಶ ಭರಿತ. ಇತರ ಯಾವ ಧಾನ್ಯಗಳೂ ಸಾಟಿಯಾಗಲಾರದ ಗುಣ. ಎಲ್ಲಾ ಹವಾಮಾನಕ್ಕೂ ಹೊಂದಿಕೊಂಡು ಬೆಳೆಯುವ ಸಾಮಥ್ರ್ಯ.  ರೋಗಬಾಧೆಯಿಲ್ಲ. ರಾಸಾಯನಿಕ ಮುಕ್ತವಾಗಿ ಬೆಳೆಯಬಹುದು. ಆಹಾರ ತಜ್ಞರ ಪ್ರಕಾರ ಸಿರಿಧಾನ್ಯಗಳು, ಅಕ್ಕಿ ಮತ್ತು ಗೋಧಿಗಿಂತ ಐದು ಪಟ್ಟು ಹೆಚ್ಚಿನ ಪ್ರಮಾಣದಲ್ಲಿ ಪ್ರೋಟಿನ್, ವಿಟಮಿನ್, ಖನಿಜಗಳನ್ನು ಹೊಂದಿವೆ. ಕೃಷಿಕ ಮತ್ತು ಗ್ರಾಹಕ ಇವರಿಬ್ಬರನ್ನೂ ಮನಸ್ಸಿನಲ್ಲಿಟ್ಟುಕೊಂಡು ದಿನದರ್ಶಿನಿಯ ಪುಟಗಳನ್ನು ಹೆಣೆಯಲಾಗಿದೆ.
                  ಸಹಜ ಸಮೃದ್ಧದ ಕೃಷ್ಣಪ್ರಸಾದ್ ಮುಖ್ಯವಾಗಿ ನಗರದ ಅಡುಗೆಮನೆಯತ್ತ ಕಣ್ಣೋಟ ಬೀರುತ್ತಾರೆ,  ಕಂಪನಿಗಳ ಬಣ್ಣದ ಜಾಹಿರಾತಿನ ಮೋಡಿಗೆ ಮರುಳಾಗಿ ಆಕರ್ಷಕ ಪ್ಯಾಕೆಟ್ನಲ್ಲಿ ತುಂಬಿಸಿಟ್ಟ ನೂಡಲ್ಸ್, ಪಿಜ್ಜಾ, ಬರ್ಗರ್ಸ್, ಪ್ಲೇಕ್ಸ್, ಚಿಪ್ಸ್ನಂತಹ ಅಪೌಷ್ಠಿಕ ತಿನಿಸುಗಳನ್ನು ತಿಂದು ಅನಾರೋಗ್ಯವನ್ನು ಅಂಟಿಸಿಕೊಳ್ಳುತ್ತಿದ್ದಾರೆ. ಇಂದು ನಮ್ಮ ಆಹಾರದ ವೆಚ್ಚಕ್ಕಿಂತ ಔಷಧೀಯ ಖರ್ಚುು ಹೆಚ್ಚಾಗುತ್ತಿದೆ. ಸಿರಿಧಾನ್ಯಗಳನ್ನು ಪ್ರತಿನಿತ್ಯ ಬಳಕೆ ಮಾಡುವುದರಿಂದ ಮಧುಮೇಹ, ಮಲಬದ್ಧತೆ, ಹೃದಯಾಘಾತ, ಕ್ಯಾನ್ಸರ್, ಅಲರ್ಜಿ, ಬೊಜ್ಜಿನಂತಹ ಕಾಯಿಲೆಗಳಿಂದ ಮುಕ್ತರಾಗಬಹುದು.
                   'ಊದಲು' ಸಿರಿಧಾನ್ಯದ ಮಾಹಿತಿ ನೋಡಿ : ಊದಲಿಗೆ ಸಾವಿರಾರು ವರುಷದ ಇತಿಹಾಸವಿದೆ. ಈಜಿಪ್ಟಿನ ಪಿರಮಿಡ್ಗಳ ಮಮ್ಮಿಗಳ ಕರುಳಿನಲ್ಲಿ ಕಂಡುಬಂದಿದೆ. ಭಾರತದ ಗುಡ್ಡಗಾಡು ಮತ್ತು ಗಿರಿಜನರ ವಾಸ ಪ್ರದೇಶದಲ್ಲಿ ಊದಲಿನ ಕೃಷಿ ಜೀವಂತವಾಗಿದೆ. ಗೋಧಿಗಿಂತ ಹತ್ತು ಪಟ್ಟು ಹೆಚ್ಚು ನಾರಿನಾಂಶವಿದೆ. ಸಕ್ಕರೆ ರೋಗಿಗಳಿಗೆ ಇದು ಸಂಪೂರ್ಣ ಆಹಾರ.  ಪಿಷ್ಟ, ಕೊಬ್ಬು, ಕ್ಯಾಲ್ಸಿಯಂ, ರಂಜಕಗಳಿಂದ ಸಮೃದ್ಧ, ದೇಹದ ಉಷ್ಣತೆಯನ್ನು ನಿಯಂತ್ರಿಸುತ್ತದೆ ಮತ್ತು ರೋಗ-ರುಜಿನಗಳಿಂದ ದೇಹವನ್ನು ರಕ್ಷಿಸುತ್ತದೆ. ಪಾಲಿಷ್ ಮಾಡದ ಊದಲಿನ ಅಕ್ಕಿಯಲ್ಲಿ ವಿಟಮಿನ್ 'ಬಿ' ಹೆಚ್ಚು. ದೇಹದಲ್ಲಿ ಕೆಂಪು ರಕ್ತಕಣಗಳನ್ನು ವೃದ್ಧಿಸುತ್ತದೆ.
                    'ಜಲಸಿರಿ ಕ್ಯಾಲೆಂಡರ್' : 'ಹವಾಮಾನ ಬದಲಾವಣೆ ಹಾಗೂ ಭತ್ತದ ಕೃಷಿ' - ಆಶಯದಿಂದ ಸಹಜ ಸಮೃದ್ಧವು ಕ್ಯಾಲೆಂಡರನ್ನು ಹೊರತಂದಿದೆ. ನೀರು ಹಾಗೂ ಕೃಷಿ ವಿಷಯಗಳ ಅರಿವು ಮೂಡಿಸುವ ಆಶಯವೂ ಇನ್ನೊಂದು. ಆರು ವರುಷದಿಂದ ಜಲಸಿರಿ ಪ್ರಕಟವಾಗುತ್ತದೆ. ತುಮಕೂರಿನ 'ಧಾನ್ಯ' ಸಂಸ್ಥೆಯ ಹೆಗಲೆಣೆ. ಭತ್ತದ ಗದ್ದೆಗಳ ಸುಸ್ಥಿರತೆ, ಶ್ರೀ ಪದ್ಧತಿ, ಭತ್ತದಲ್ಲಿ ಮಿಶ್ರಕೃಷಿ, ನೆರೆನಿರೋಧಕ ತಳಿಗಳ ವೈಶಿಷ್ಟ್ಯ, ಭತ್ತ ಮತ್ತು ಸಂಸ್ಕೃತಿ, ಮಕ್ಕಳ ಮೂಲಕ ದೇಸೀ ಭತ್ತದ ಜ್ಞಾನದ ವಿಸ್ತರಣೆ, ಭತ್ತದ ತಾಕುಗಳಲ್ಲಿ ಕೃಷಿ ಹೊಂಡಗಳ ಅಗತ್ಯ... ಹೀಗೆ ಸರಳ ವಿಧಾನಗಳ ಪ್ರಸ್ತುತಿಗಳಿವೆ.
                  ಒಂದು ಕುತೂಹಲದ ಮಾಹಿತಿ. ಹವಾಮಾನ ವೈಪರೀತ್ಯಕ್ಕೆ ಕಾರಣವಾಗುವ ಹಲವು ಅಂಶಗಳಲ್ಲಿ ಮಿಥೇನ್ ಅನಿಲ ಸಹ ಒಂದು. ಇದು ಏಷ್ಯಾದ ಭತ್ತದ ತಾಕುಗಳಿಂದ ಹೆಚ್ಚು ಉತ್ಪತ್ತಿಯಾಗುತ್ತಿದೆ ಎನ್ನುವ ತಕರಾರಿದೆ. ಹೇರಳ ನೀರು ನಿಲ್ಲಿಸಿ, ಭತ್ತ ಬೆಳೆಯುವುದರಿಂದ ಗದ್ದೆಗಳಲ್ಲಿ ಕೊಳೆಯುವ ನಿರಂತರ ಕ್ರಿಯೆ ಉಂಟಾಗಿ ವಾತಾವರಣಕ್ಕೆ ಮಿಥೇನ್ ಬಿಡುಗಡೆಯಾಗುತ್ತದೆ. ಹಾಗಾಗಿ ಭತ್ತದ ಕೃಷಿಗೆ ಕಡಿವಾಣ ಹಾಕಬೇಕೆಂಬ ಕೂಗು ವಿಶ್ವಮಟ್ಟದಲ್ಲಿ ಕೇಳಿ ಬರುತ್ತಿದೆ!
ಮಿಥೇನ್ ಬಿಡುಗಡೆಯ ಕಡಿವಾಣದ ಜತೆಗೆ ಭತ್ತದ ಕೃಷಿಯ ಮುಂದುವರಿಕೆ ಹೇಗೆ? ಅದಕ್ಕಾಗಿ 'ಶ್ರೀ' ಪದ್ಧತಿಯಲ್ಲಿ ಭತ್ತ ಬೆಳೆಯುವುದು ಇದಕ್ಕಿರುವ ಸರಳ ಮಾರ್ಗೋಪಾಯ. ಈ ಪದ್ಧತಿಯಲ್ಲಿ ತೇವಾಂಶ ಸಾಕಾಗುವುದರಿಂದ ನೀರು ನಿಲ್ಲಿಸುವ ರಗಳೆಗಳಿಲ್ಲ. ಹಾಗಾಗಿ ಮಿಥೇನ್ ಉತ್ಪತ್ತಿಯಾಗುವ ಪ್ರಮೇಯವೂ ಕಡಿಮೆ. ಈ ಪದ್ಧತಿಯಿಂದ ಎರಡು ರೀತಿಯ ಉಪಯೋಗ. ಒಂದು ಹವಾಮಾನ ವೈಪರೀತ್ಯದಿಂದ ಭತ್ತದ ಉತ್ಪಾದಕತೆಯಲ್ಲಾಗುತ್ತಿರುವ ಕುಸಿತ, ಇನ್ನೊಂದು ಭತ್ತದ ಕೃಷಿಯಿಂದಲೇ ಹವಾಮಾನ ವೈಪರೀತ್ಯ ಹೆಚ್ಚಾಗುತ್ತದೆ ಎನ್ನುವ ಅಪವಾದವನ್ನು ತಪ್ಪಿಸಿದಂತಾಗುತ್ತದೆ. ಇಂತಹ ಫಕ್ಕನೆ ಸಿಕ್ಕದ ಮಾಹಿತಿಗಳು ದಿನದರ್ಶಿನಿಯಲ್ಲಿ ತುಂಬಿವೆ.
             ದಿನದರ್ಶಿನಿಗಳ ಗುಚ್ಚಕ್ಕೆ 'ನಮ್ಮ ತೆಂಗು' ಎನ್ನುವ ತೆಂಗು ಕೃಷಿ ಕುರಿತ ಕ್ಯಾಲೆಂಡರ್ ಹೊಸ ಸೇರ್ಪಡೆ. ತುಮಕೂರು ನವಿಲೆಯ ಬೆವರು ಪ್ರಕಾಶನದ ವಿಶ್ವನಾಥ ಅಣೆಕಟ್ಟೆಯವರ ಪರಿಕಲ್ಪನೆ ಮತ್ತು ಬೆವರ ಶ್ರಮ. ಭೂಮಿ ಸುಸ್ಥಿರ ಅಭಿವೃದ್ಧಿ ಸಂಸ್ಥೆಯ ಜಯಪ್ರಸಾದ್ ಬಳ್ಳಕೆರೆ ಸಾಥ್. ಕಾಯಕಲ್ಪ ತೆಂಗು ಉತ್ಪಾದಕ ಮಂಡಳಿಯ ಹೆಗಲೆಣೆ. ಕೃಷಿಕರು ಒಂದಿಲ್ಲೊಂದು ಕಾರಣಕ್ಕೆ ನಿತ್ಯವೂ ಕ್ಯಾಲೆಂಡರ್ ನೋಡುತ್ತಾರೆ. ಇಂತಹ ಸಂದರ್ಭದಲ್ಲಿ ತೆಂಗು ಬೆಳೆಗಾರರ ಹಿತದೃಷ್ಟಿಯಿಂದ ತೆಂಗಿನ ಮಾಹಿತಿಯೂ ಸೇರಿಬಿಟ್ಟರೆ ನಿತ್ಯ ನೋಡುತ್ತಾರೆ, ಓದುತ್ತಾರೆ. ಇದರಿಂದಾಗಿ ಮಾಹಿತಿ ವಿನಿಮಯ ಆದಂತಾಗುತ್ತದೆ, ಎನ್ನುತ್ತಾರೆ ವಿಶ್ವನಾಥ್.
             ತೆಂತಾ ಎಣ್ಣೆ (ತೆಂಗಿನ ತಾಜಾ ಎಣ್ಣೆ) - ವರ್ಜಿನಲ್ ಕೊಕೊನಟ್ ಆಯಿಲ್ - ಬಳಕೆಯಿಂದಾಗುವ ಪರಿಣಾಮವನ್ನು ಚೆನ್ನಾಗಿ ವಿವರಿಸಿದ್ದಾರೆ : ಬಲಿತ ಹಸಿತೆಂಗಿನ ಕಾಯಿಯನ್ನು ತುರಿದು ತೆಗೆಯುವ ಎಣ್ಣೆಗೆ ತೆಂತಾ ಎಣ್ಣೆ ಎನ್ನುತ್ತಾರೆ. ಇದರಲ್ಲಿ ಶೇ.50ರಷ್ಟು ಲಾರಿಕ್ ಆಮ್ಲವಿದೆ. ತಾಯಿಯ ಎದೆ ಹಾಲನ್ನು ಬಿಟ್ಟರೆ ಇಷ್ಟೊಂದು ಪ್ರಮಾಣದಲ್ಲಿ ಸಿಗುವುದು ತೆಂತಾದಲ್ಲಿ ಮಾತ್ರ. ಇದರಲ್ಲಿ ಕೊಲೆಸ್ಟರಾಲ್ ಇಲ್ಲ. ಲಾರಿಕ್ ಆಸಿಡ್ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿ ರೋಗಕ್ಕೆ ಕಾರಣವಾಗವ ಎಲ್ಲಾ ರೀತಿಯ ಬ್ಯಾಕ್ಟೀರಿಯಾ, ವೈರಸ್ಗಳನ್ನು ಕೊಲ್ಲುತ್ತದೆ. ರಕ್ತದೊತ್ತಡ, ಸಕ್ಕರೆ ಕಾಯಿಲೆ, ಅತಿತೂಕ, ಬೊಜ್ಜು, ಥೈರಾಯಿಡ್ ಸಮಸ್ಯೆ, ಹಲ್ಲುನೋವು.. ಕಾಯಿಲೆಗಳಿಗೆ ಔಷಧಿ.
              ಕನ್ನಾಡು ಬರ ಅನುಭವಿಸುತ್ತಿದೆ. ಕೃಷಿ ಉತ್ಪಾದನೆ, ಕುಡಿಯುವ ನೀರು, ಜಾನುವಾರು ಸಾಕಣೆ ದೊಡ್ಡ ಸಮಸ್ಯೆಯಾಗಿದೆ. ಬರ ಬಂದಾಗ ಸಂಕಷ್ಟ ಅನುಭವಿಸುವ ಬದಲು ಭವಿಷ್ಯದ ಜಾಗೃತಿಯಲ್ಲಿ ಭೂಮಿಯನ್ನು ಬರನಿರೋಧಕಗೊಳಿಸಿದರೆ ನಾಡಿನ ನೆಮ್ಮದಿ ಸಾಧ್ಯವಿದೆ. ಬಳ್ಳಾರಿಯಲ್ಲಿ ಕೇಂದ್ರ ಕಚೇರಿಯನ್ನು ಹೊಂದಿರುವ ಸುಕೋ ಬ್ಯಾಂಕ್ ಜನರಲ್ಲಿ ಬರ ಗೆಲ್ಲುವ ದಾರಿಗಳ ಕುರಿತು ಜಾಗೃತಿ ಮೂಡಿಸಲು ಸಚಿತ್ರ ಮಾಹಿತಿಯ ಕ್ಯಾಲೆಂಡರ್ ಪ್ರಕಟಿಸಿದೆ. ಕೃಷಿ ಪರಿಸರ ಬರಹಗಾರ ಶಿವಾನಂದ ಕಳವೆ ಪರಿಕಲ್ಪನೆಯಲ್ಲಿ ಬರನಿರೋಧಕ ಬದುಕಿನ ಚಿತ್ರ ದರ್ಶನದ ಕ್ಯಾಲೆಂಡರ್ ರೂಪುಗೊಂಡಿದೆ. ಈ ಕ್ಯಾಲೆಂಡರ್ನಲ್ಲಿ ಪ್ರತಿ ತಿಂಗಳಿಗೊಂದು ಕ್ಷಾಮ ಗೆಲ್ಲುವ ತಂತ್ರಗಳನ್ನು ಪರಿಚಯಿಸಲಾಗಿದೆ. ಬರದ ಭವಣೆ ಅನುಭವಿಸುತ್ತಿರುವ ರೈತರಿಗೆ ನೆಲ ಜಲ ಸಂರಕ್ಷಣೆಯ ಮೂಲಕ ಕೃಷಿ ಸಾಧನೆಯ ಸಾಧ್ಯತೆಗಳನ್ನು ಪರಿಣಾಮಕಾರಿಯಾಗಿ ಸುಕೋ ಬ್ಯಾಂಕ್ ಕ್ಯಾಲೆಂಡರ್ ಹೇಳುತ್ತಿದೆ.
               ಮಾಹಿತಿಯನ್ನು ಆಪೋಶನ ಮಾಡುವ ತಂತ್ರಜ್ಞಾನಗಳು ಅಂಗೈಯಲ್ಲಿವೆ. ಆದರೆ ಎಷ್ಟು ಮಂದಿಗೆ ಮಾಹಿತಿಯ ದಾಹವಿದೆ? ಸಿಕ್ಕ ಮಾಹಿತಿಗಳನ್ನು ಜ್ಞಾನವನ್ನಾಗಿ ಪರಿವರ್ತಿಸಿಕೊಳ್ಳುವಲ್ಲಿ ಎಷ್ಟು ಮಂದಿ ಉತ್ಸುಕರಾಗಿದ್ದಾರೆ? ಕೇವಲ ಮೆಸ್ಸೇಜ್ಗಳಲ್ಲಿ ಬದುಕು ನರಳುತ್ತಿದೆ. ಈ ಹಿನ್ನೆಲೆಯಲ್ಲಿ ಅನ್ಯಾನ್ಯ ಸಂಸ್ಥೆಗಳು ಪ್ರಕಾಶಿಸುತ್ತಿರುವ ದಿನದರ್ಶಿನಿಗಳು ಸಾರುವ ಕನಿಷ್ಟ ಕೃಷಿ ಸಂದೇಶಗಳು ಜ್ಞಾನವೃದ್ಧಿಗೆ ಪೂರಕ. ನಿಜಾರ್ಥದಲ್ಲಿ ಇವುಗಳೆಲ್ಲಾ ಕೃಷಿದರ್ಶಿನಿಗಳು.
(Udayavani/nelada_nadi/4-2-2016)
Monday, February 8, 2016

ಗ್ರಾಮೀಣ ಬದುಕು ಸಂವಹನವಿಲ್ಲದ ಸಂಕಟದಲ್ಲಿದೆ


                 "ಗ್ರಾಮೀಣ ಬದುಕು ಅರಳಿಕಟ್ಟೆ, ದೇಗುಲ, ಕೆರೆ, ನದಿಗಳ ದಡದಲ್ಲಿ ಸಂವಹನದ ಕೇಂದ್ರವಾಗಿ ಬದುಕು ಕಟ್ಟಿದೆ. ಊರಿಗೆ ಬಂದ ಹೊಸ ಸೊಸೆ ಬಾವಿಕಟ್ಟೆಯಲ್ಲಿ ಮನದ  ದುಃಖ ಹಂಚಿಕೊಂಡು ಎದೆಯ ಭಾರ ಇಳಿಸಿಕೊಳ್ಳುತ್ತಿದ್ದಳು. ಇಂದು ಮನೆಯಲ್ಲಿಯೂ ಸಂವಹನ ನಡೆಯುತ್ತಿಲ್ಲ, ಗಂಡ ಒಂದು ಚಾನಲ್ ನೋಡಿದರೆ ಹೆಂಡತಿ ಇನ್ನೊಂದು ಕೋಣೆಯಲ್ಲಿ ಕುಳಿತು ಬೇರೆ ಚಾನಲ್ ನೋಡುತ್ತಿರುತ್ತಾಳೆ, ಮಕ್ಕಳು ಮೊಬೈಲ್ನಲ್ಲಿ ಆಟವಾಡುತ್ತ ದಿನ ಕಳೆಯುತ್ತಾರೆ. ಆಧುನಿಕ ಜೀವನಶೈಲಿಯಿಂದಾಗಿ ಮನೆ ಮನುಷ್ಯರಲ್ಲಿಯೇ ಪರಸ್ಪರ ಸಂವಹನ ಸಂಪರ್ಕ ಕಳೆದುಕೊಂಡ ವಿಚಿತ್ರ ಸಂಕಟದಲ್ಲಿ ಸಿಲುಕಿದ್ದೇವೆ," ಎಂದು ಹಿರಿಯ ಪತ್ರಕರ್ತ, ಉದಯ ಟಿವಿಯ ಉತ್ತರ ಕರ್ನಾಟಕದ ಮುಖ್ಯಸ್ಥ ಡಾ.ಜಗದೀಶ್ ಕೊಪ್ಪ ಹೇಳಿದ್ದಾರೆ. ಶಿರಸಿಯ ಮಾಧ್ಯಮ ಸಂಸ್ಕೃತಿ ಅಭಿವೃದ್ಧಿ ಕೇಂದ್ರವು ಉತ್ತರ ಕನ್ನಡದ ಕಳವೆ ಕಾನ್ಮನೆ ನಿಸರ್ಗ ಜ್ಞಾನ ಕೇಂದ್ರಲ್ಲಿ ಕೃಷಿ, ಪರಿಸರ ಪತ್ರಿಕೋದ್ಯಮ ಶಿಬಿರ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
               ಸರಕಾರ-ಸಮಾಜದ ನಡುವೆ ಸಂವಹನದ ರಂಗವಾಗಿ ಉದಯಿಸಿದ ಪತ್ರಿಕಾರಂಗ ಇಂದು ಉದ್ಯಮವಾಗಿ ಬೆಳೆದಿದೆ. ಆಧುನಿಕತೆಯ ಅವಸರದಲ್ಲಿ ಇಂದು ಮನಸ್ಸು ಮನಸ್ಸುಗಳ ನಡುವೆ ಮಾತುಕತೆ ಕಳೆದು ಹೋಗುತ್ತಿದೆಯೆಂದು ವಿಷಾದಿಸಿದರು. "ಇಂದಿಗೆ 50 ವರ್ಷ ಹಿಂದೆ ಹುಟ್ಟಿ ಬೆಳೆದ ತಲೆಮಾರು ಅಜ್ಜಿ ರಾಗಿ ಬೀಸುವುದನ್ನೂ ಕಂಡಿದೆ, ಇಂದು ಮಿಕ್ಸಿ ಬಳಕೆಯನ್ನೂ ನೋಡುತ್ತಿದೆ. ಮಣ್ಣಿನ ಗಡಿಗೆಯಲ್ಲಿ ಅಡುಗೆ ತಯಾರಿಸುವ ಸಂಯಮ ಕಂಡ ನಾವು ಇಂದು ಅವಸರದ ಊಟ ಮಾಡುತ್ತಿದ್ದೇವೆ. ಸತ್ವಯುತ ದೇಸಿ ತಳಿಗಳು ಕಣ್ಮರೆಯಾಗುತ್ತಿವೆ. ನಮ್ಮ ಮೌಲ್ಯಯುತ ಬದುಕಿನ ಸತ್ವ ಪರಿಚಯಿಸುವ ಮೂಲಕ ಸಮಾಜದ ಮನಸ್ಸು ಅರಳಿಸಿ ಚೆಂದದ ಭವಿಷ್ಯ ರೂಪಿಸುವ ಕೆಲಸ ಮಾಧ್ಯಮಗಳಿಂದ ನಡೆಯಬೇಕಾಗಿದೆ" ಎಂದರು.
               "ವೃತ್ತಿನಿರತ ಪತ್ರಕರ್ತರು ಗಮನಿಸಿದ ಸಂಗತಿಗಳನ್ನು ಹಳ್ಳಿಗಳಲ್ಲಿ ಹುಡುಕಿ ಆಧ್ಯಯನ ಬರಹಗಳನ್ನು ಬರೆಯುವ ಅವಕಾಶ ಹವ್ಯಾಸಿ ಪತ್ರಕರ್ತರಿಗೆ ಇದೆ. ಕೃಷಿ, ಪರಿಸರ ಪತ್ರಿಕೋದ್ಯಮದಲ್ಲಿ ಇಂಥ ವೃತ್ತಿಪರತೆಯನ್ನು ಬೆಳೆಸುವ ನಿಟ್ಟಿನಲ್ಲಿ ಮಾಧ್ಯಮ ಸಂಸ್ಕೃತಿ ಅಭಿವೃದ್ಧಿ ಕೇಂದ್ರ ಕಾರ್ಯನಿರ್ವಹಿಸುತ್ತಿದೆ. ಗ್ರಾಮೀಣ, ಕೃಷಿ ಪರಿಸರದ ಆಗುಹೋಗುಗಳನ್ನು ವಸ್ತನಿಷ್ಠವಾಗಿ ಬರೆಯಲು ಯುವ ಬರಹಗಾರರಿಗೆ ತರಬೇತಿ ನೀಡುವ ಕಾರ್ಯವನ್ನು ನಾವು ನಡೆಸುತ್ತಿದ್ದೇವೆ," ಎಂದು ಶಿಬಿರ ನಿರ್ದೇಶಕ, ಮೈಸೂರು ವಿಶ್ವವಿದ್ಯಾಲಯದ ಕೇಂದ್ರದ ನಿರ್ದೇಶಕ ಡಾ. ನಿರಂಜನ ವಾನಳ್ಳಿ ಹೇಳಿದರು.
                ಮಾಧ್ಯಮ ಕೇಂದ್ರದ ಸಂಚಾಲಕ ಶಿವಾನಂದ ಕಳವೆ ಕೇಂದ್ರದ ಚಟುವಟಿಕೆ ಪರಿಚಯಿಸಿದರು. "ಪತ್ರಕರ್ತ ಸರ್ವಜ್ಞ ಅಲ್ಲ, ನಮಗೆ ಎಲ್ಲ ವಿಷಯಗಳೂ ಗೊತ್ತಿರಬೇಕಾಗಿಲ್ಲ, ಆದರೆ ನಾಡಿನಲ್ಲಿ ವಿವಿಧ ವಿಷಯ ತಜ್ಞರು ಯಾರಿದ್ದಾರೆಂದು ತಿಳಿದು ಅವರೆಲ್ಲರ ಸ್ನೇಹ, ಸಂಪರ್ಕ ಉಳಿಸಿಕೊಂಡಾಗ ಉತ್ತಮ ಬರಹಗಾರರಾಗಿ ಬೆಳೆಯಬಹುದು," ಎಂದರು.  ಮಾಧ್ಯಮ ಕ್ಷೇತ್ರದಲ್ಲಿ ರಚನಾತ್ಮಕ ಚಿಂತನೆ ಮೂಡಿಸಿ ಗುಣಾತ್ಮಕ ಬದಲಾವಣೆ ತರುವ ಪುಟ್ಟ ಪ್ರಯತ್ನ ನಮ್ಮದು. ಯುವ ಪತ್ರಕರ್ತರಿಗೆ 16 ವರ್ಷಗಳಿಂದ ನಿರಂತರವಾಗಿ ಶಿಬಿರಗಳನ್ನು ನಡೆಸುತ್ತಿದ್ದೇವೆ. ಈವರೆಗೆ 36 ಶಿಬಿರ ನಡೆಸಲಾಗಿದ್ದು, 621 ಯುವ ಪತ್ರಕರ್ತರು ಭಾಗವಹಿಸಿದ್ದಾರೆಂದರು.
                 ಮಾಧ್ಯಮ ವಿದ್ಯಾರ್ಥಿಗಳಿಗೆ ಮಾಹಿತಿ ಸಂಗ್ರಹ, ಛಾಯಾಗ್ರಹಣ, ಸಂದರ್ಶನದ ಕ್ಷೇತ್ರ ತರಬೇತಿಗಾಗಿ ವಿವಿಧ ಪ್ರದೇಶಗಳಿಗೆ ಪ್ರವಾಸಕ್ಕೆ ಕರೆದೊಯ್ಯಲಾಯಿತು.  ಯಲ್ಲಾಪುರ ತರಕಾರಿ ಮಾರುಕಟ್ಟೆ, ಬೇಡ್ತಿ ಕುಡಿವ ನೀರಿನ ಯೋಜನೆ, ಕಿರವತ್ತಿ ನಾಟಾ ಸಂಗ್ರಹಾಲಯ ವೀಕ್ಷಿಸಿ ಮಾಹಿತಿ ಸಂಗ್ರಹಿಸಲಾಯಿತು. ವನವಾಸಿ ಬದುಕು ಹಾಗೂ ಅಭಿವೃದ್ಧಿಯ ಅಧ್ಯಯನಕ್ಕೆ ಯಲ್ಲಾಪುರದ  ಹೊಸಳ್ಳಿ ಮತ್ತು ಕ್ವಾಣಮಡ್ಡಿಯ ಗೌಳಿ ವಾಡಾಗಳಿಗೆ ತಂಡ ಭೇಟಿ ನೀಡಿತು. ಫೆಬ್ರವರಿ 6ರಿಂದ 8ರವರೆಗೆ ಸತತ ಮೂರು ದಿನಗಳ ಕಾಲ ನಡೆದ ಶಿಬಿರದಲ್ಲಿ ರಾಜ್ಯದ ವಿವಿಧ ಪತ್ರಿಕೋದ್ಯಮ ಕಾಲೇಜು ವಿದ್ಯಾರ್ಥಿಗಳು, ಹವ್ಯಾಸಿ ಬರಹಗಾರರು ಸೇರಿದಂತೆ 21 ಜನ ಭಾಗವಹಿಸಿದ್ದರು. ಡಾ.ನಿರಂಜನ ವಾನಳ್ಳಿ, ಡಾ.ಜಗದೀಶ್ ಕೊಪ್ಪ, ಅಡ್ಡೂರು ಕೃಷ್ಣರಾವ್, ಪೂರ್ಣಪ್ರಜ್ಞ ಬೇಳೂರು, ಶಿವಾನಂದ ಕಳವೆ ಸಂಪನ್ಮೂಲವ್ಯಕ್ತಿಗಳಾಗಿ ಕಾರ್ಯನಿರ್ವಹಿಸಿದರು.


Sunday, February 7, 2016

ಪಿ.ಎಸ್.ವೆಂಕಟರಾಮ ದೈತೋಟ, ಪಾಣಾಜೆ ಇವರಿಗೆ 'ಸ್ವಾಸ್ಥ್ಯ ಸೇವಾ ರತ್ನ' ಪ್ರಶಸ್ತಿ ಪ್ರದಾನ.

ಪುತ್ತೂರು ವಿವೇಕಾನಂದ ಕಾಲೇಜಿನಲ್ಲಿ ಜರುಗಿದ
'ಸಾಂಪ್ರದಾಯಿಕ ಔಷಧಿ ಪದ್ಧತಿ' ಕುರಿತು ವಿಚಾರ ಸಂಕಿರಣದ (ಫೆಬ್ರವರಿ 6)
ಸಂದರ್ಭದಲ್ಲಿ ಮೂಲಿಕಾ ತಜ್ಞ ಪಿ.ಎಸ್.ವೆಂಕಟರಾಮ ದೈತೋಟ, ಪಾಣಾಜೆ
ಇವರಿಗೆ 'ಸ್ವಾಸ್ಥ್ಯ ಸೇವಾ ರತ್ನ' ಪ್ರಶಸ್ತಿ ಪ್ರದಾನ.

Friday, February 5, 2016

ವೆಂಕಟರಾಮ ದೈತೋಟರಿಗೆ 'ಸ್ವಾಸ್ಥ್ಯ ಸೇವಾ ರತ್ನ' ಪ್ರಶಸ್ತಿ

ನಾಳೆಯಿಂದ ಮೂರು ದಿನ (6, 7, 8-ಫೆಬ್ರವರಿ 2016)
ಪುತ್ತೂರಿನ ವಿವೇಕಾನಂದ ಕಾಲೇಜು ಸಭಾಭವನದಲ್ಲಿ
'ಸಾಂಪ್ರದಾಯಿಕ ಔಷಧಿ ಪದ್ಧತಿ' ಕುರಿತು ವಿಚಾರ ಸಂಕಿರಣ.
ಬೆಳಿಗ್ಗೆ 10 ಗಂಟೆಗೆ ಉದ್ಘಾಟನಾ ಸಮಾರಂಭ.

ಈ ಸಮಾರಂಭದಲ್ಲಿ ಮೂಲಿಕಾ ತಜ್ಞ ಪಿ.ಎಸ್.ವೆಂಕಟರಾಮ ದೈತೋಟ, ಪಾಣಾಜೆ
ಇವರಿಗೆ 'ಸ್ವಾಸ್ಥ್ಯ ಸೇವಾ ರತ್ನ' ಪ್ರಶಸ್ತಿ ಪ್ರದಾನ.

ಕಳೆದ 27 ವರುಷಗಳಿಂದ ನಾಡಿನ ಹೆಮ್ಮೆಯ ಕೃಷಿ ಪತ್ರಿಕೆ - 'ಅಡಿಕೆ ಪತ್ರಿಕೆ'ಯಲ್ಲಿ ದೈತೋಟರ 'ಮನೆಮದ್ದು' ಅಂಕಣ ಜನಪ್ರಿಯ. ಈ ಅಂಕಣಗಳ ಸಂಕಲನ 'ಔಷಧೀಯ ಸಸ್ಯ ಸಂಪತ್ತು' ಬಿಡುಗಡೆ. ವಿವೇಕಾನಂದ ಸಂಶೋಧನಾ ಕೇಂದ್ರದ ಪ್ರಕಟಣೆ.

ಪ್ರಶಸ್ತಿ ಪುರಸ್ಕೃತ ದೈತೋಟರಿಗೆ ಅಭಿನಂದನೆಗಳು.

Monday, February 1, 2016

jack fest