Tuesday, February 23, 2016

ಪಾರಂಪರಿಕ ಜ್ಞಾನಕ್ಕೆ ಸವಾಲಾದ ಮೂಲಿಕೆಗಳ ಆಧುನೀಕರಣ

                  ಸಮುದ್ರದ ಉಪ್ಪು ನೀರನ್ನು ಬಳಸಲು ತೊಡಕಿಲ್ಲ. ಇದರಿಂದ ತಯಾರಿಸಿದ ಉಪ್ಪನ್ನು ನೇರವಾಗಿ ಉಪಯೋಗಿಸುವಂತಿಲ್ಲ. ಹೆಚ್ಚು ಖನಿಜಾಂಶವಿರುವ ಉಪ್ಪಲ್ಲಿ 'ಅಯೋಡಿನ್ ಇಲ್ಲ' ಎಂಬ ಕಪ್ಪು ಹಣೆ ಪಟ್ಟಿಯನ್ನು ಆದೇಶದಡಿ ಅಂಟಿಸಲಾಗಿದೆ. ಉಪ್ಪನ್ನು ಶ್ವೇತಗೊಳಿಸಿದಾಗ ಸಹಜವಾಗಿ ಅಯೋಡಿನ್, ಖನಿಜಾಂಶಗಳನ್ನು ನಷ್ಟವಾಗುತ್ತವೆ. ನಂತರ ಕೃತಕವಾಗಿ ಅಯೋಡಿನ್ ಸೇರಿಸಿ, 'ಇದು ಆರೋಗ್ಯಕ್ಕೆ ಪೂರಕ, ಇದನ್ನೇ ಬಳಸಿ' ಎಂದು ಬಿಂಬಿಸಿ ಪ್ರಚಾರ ಮಾಡುತ್ತಾರೆ. ಸಹಜತೆಯನ್ನು ನಾಶ ಮಾಡಿ ಕೃತಕ ಅಯೋಡಿನನ್ನು ಬಲವಂತದಿಂದ ಉದರಕ್ಕೆ ತಳ್ಳಲಾಗುತ್ತದೆ!
                'ಆರೋಗ್ಯಕ್ಕೆ ಕೆಡುಕು' ಅಂದಾಗ ನಂಬಲೇ ಬೇಕಲ್ಲ. ಅಯೋಡಿನ್ಯುಕ್ತ ಸಹಜ ಉಪ್ಪನ್ನು ಬಳಸಿ ಯಾರ ಜೀವಕ್ಕಾದರೂ ತೊಂದರೆಯಾಗಿದೆಯೇ? ಮನುಷ್ಯರಿಗೆ ಅಯೋಡಿನ್ ಸಮಸ್ಯೆ ಇಲ್ಲ ಎನ್ನುವಂತಿಲ್ಲ. ಇದ್ದರೂ ಭಾರತದ ಜನಸಂಖ್ಯೆಗೆ ಹೋಲಿಸಿದರೆ ಎಷ್ಟು ಪ್ರತಿಶತ ಇರಬಹುದು? ಆರಂಕೆ ಮೀರದು. ಉಳಿದ ಆರೋಗ್ಯವಂತರಿಗೆ ಬಲವಂತದಿಂದ ತಿನ್ನಿಸಿದಂತಾಗುತ್ತದೆ. ಇದು ಆರೋಗ್ಯಕ್ಕೆ ಪೂರಕವೇ? ಪ್ರಕೃತಿಯ ಸಹಜ ವಸ್ತುವನ್ನು ಸಂಸ್ಕರಿಸಿ, ಅದನ್ನು ರಾಸಾಯನಿಕಗೊಳಿಸುವುದು ಈಗ ಉದ್ಯಮವಾಗಿದ್ದು ಅಂತಾರಾಷ್ಟ್ರೀಯವಾಗಿ ಬೆಳೆದು ನಿಂತಿದೆ.
                ಮೂಲಿಕಾ ತಜ್ಞ ಪಾಣಾಜೆಯ ಪಿ.ಎಸ್.ವೆಂಕಟರಾಮ ದೈತೋಟರು ಆರೋಗ್ಯದ ಸೂಕ್ಷ್ಮ ಸಂಗತಿಗಳನ್ನು   ಪೋಸ್ಟ್ಮಾರ್ಟಂ ಮಾಡುತ್ತಾರೆ - ಹಂತಹಂತವಾಗಿ ಅರೋಗ್ಯಕ್ಕೆ ಕೇಡಾಗಿ ಪರಿಣಮಿಸುವ ಇಂತಹ ವಿಚಾರಗಳು 'ಮಾರಕ'ವೆಂದು ಗೊತ್ತಿದ್ದೂ ಪ್ರಚಾರ ಮಾಡಲಾಗುತ್ತದೆ. ಜತೆಗೆ ಆಧುನಿಕ ವಿಜ್ಞಾನವು 'ಸಂಶೋಧನಾ ವರದಿ'ಗಳನ್ನು ಥಳುಕು ಹಾಕುತ್ತದೆ. ಸಂಶೋಧಕರ ಮಾತಿಗೆ ಮನ್ನಣೆ ಸಿಗುತ್ತದೆ. ಸಂಶೋಧಕರಿಗೆ ಮಾನ-ಸಂಮಾನ-ಬಹುಮಾನ. ಅವರ ನಿವೃತ್ತಿಯ ನಂತರವಷ್ಟೇ ವರದಿಯ ಸತ್ಯದರ್ಶನ ಪ್ರಕಟವಾಗುತ್ತದೆ!
                   'ಹಳತನ್ನೆಲ್ಲಾ ನಂಬಬೇಡಿ'-ಆಧುನಿಕ ವಿಜ್ಞಾನ ಪರೋಕ್ಷವಾಗಿ ಸಾರುತ್ತದೆ. ಈ ಹೂರಣದಲ್ಲೇ ಶೈಕ್ಷಣಿಕವಾದ ಪಠ್ಯಗಳು ಸಿದ್ಧವಾಗಿ ವಿದ್ಯಾರ್ಥಿಗಳಿಗೆ ಬೋಧಿಸಲಾಗುತ್ತದೆ. ಯಾವಾಗ ಇಂತಹ ಶಿಕ್ಷಣ ಮತಿಯೊಳಗೆ ಹೊಕ್ಕಿತೋ ಆಗ 'ಕಲ್ಚರ್' ಬದಲಾಗಲೇ ಬೇಕು ತಾನೆ. 'ಒರಿಜಿನಲ್' ಮರೆಗೆ ಸರಿಯುತ್ತದೆ. ಇಂತಹ ಶಿಕ್ಷಣವು 'ಜ್ಞಾನ'ವಾಗದೇ ಇರುವುದೇ ಆಧುನಿಕ ವಿಜ್ಞಾನದ ಹಿಂಬೀಳಿಕೆ. ಮೂಲಿಕಾ ಜ್ಞಾನವು ಸನಾತನೀಯವಾಗಿ ಹರಿದು ಬಂದಿದೆ. ಒಂದೆಡೆ ಅಪಪ್ರಚಾರ. ಮತ್ತೊಂದೆಡೆ ಪಾರಂಪರಿಕ ಜ್ಞಾನವನ್ನು ಪ್ರಶ್ನಿಸುವ ಆಧುನಿಕ ವಿಜ್ಞಾನ. ಇವೆರಡೆ ಮಧ್ಯೆ ಪಾರಂಪರಿಕ ಮೂಲಿಕಾ ವೈದ್ಯ ಪದ್ಧತಿಯು ನಲುಗುತ್ತಿದೆ.
                     ಭಾರತವು ಮೂಲಿಕೆಗಳ ತವರೂರು. ಶಾಲಾ ಮಟ್ಟದಲ್ಲಿ ಗಮನಿಸಿ. ವಿದೇಶಿ ಸಂಸ್ಥೆಗಳು ವಿದ್ಯಾರ್ಥಿಗಳನ್ನು 'ಪ್ರಾಜೆಕ್ಟ್' ಮೂಲಕ ಟಾರ್ಗೆಟ್ ಮಾಡುತ್ತಿರುವುದಕ್ಕೆ ದೂರ ಹೋಗಬೇಕಾಗಿಲ್ಲ. ಪ್ರತೀ ವರುಷ ವಿದ್ಯಾರ್ಥಿಗಳು ಪಾರಂಪರಿಕ ಗಿಡಮೂಲಿಕೆ, ಔಷಧಿ, ಯಂತ್ರ-ತಂತ್ರಗಳ ಕುರಿತು ಪ್ರಾಜೆಕ್ಟ್ ತಯಾರಿಸಿ ಸಲ್ಲಿಸಿದರಾಯಿತು. ಇದಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧೆಗಳ ಆಯೋಜನೆ. ವಿದ್ಯಾರ್ಥಿಗಳಿಗೆ ವಿಮಾನಯಾನದ ಸುಖ. ವಿದ್ಯಾರ್ಥಿಗೆ ಬಹುಮಾನಗಳ ಸುರಿಮಳೆಯ ಪುಳಕ. ಹೆತ್ತವರು, ಅಧ್ಯಾಪಕರಿಗೆ ಖುಷಿ-ಸಂತೃಪ್ತಿ.  ಈ ಸ್ಪರ್ಧೆಯ ಹಿಂದೆ ವ್ಯವಸ್ಥಿತವಾದ ಹುನ್ನಾರಗಳಿವೆ ಎಂದು ಫಕ್ಕನೆ ಅನ್ನಿಸುವುದಿಲ್ಲ.
                 ವಿದ್ಯಾರ್ಥಿ ಒಂದು ಗಿಡಮೂಲಿಕೆಯ ಪ್ರಾಜೆಕ್ಟ್ ಸಿದ್ಧಪಡಿಸಿ ನೀಡಿದ ಎಂದಾದರೆ ಅದನ್ನು ಮತ್ತೆ ಪ್ರಶ್ನಿಸುವಂತಿಲ್ಲ! ಅದರಲ್ಲೂ ಬಹುಮಾನ ಬಂದವುಗಳಾದರೆ ಮುಗಿಯಿತು! ಅದರ ಪೂರ್ತಿ ಸ್ವಾಮ್ಯವನ್ನು ಆಯೋಜನೆ ಮಾಡಿದ ಸಂಸ್ಥೆಗಳು ಇಟ್ಟುಕೊಳ್ಳುತ್ತವೆ. ಮತ್ತೆ ಅವೆಲ್ಲಾ 'ಹಿಡನ್ ಅಜೆಂಡಾ'ದೊಳಗೆ ತೂರಿ ಕಚೇರಿಗಳನ್ನು ಸುತ್ತುತ್ತಿರುತ್ತವೆ. ಇಂದಲ್ಲ ನಾಳೆ ನಮ್ಮ ಗಿಡಮೂಲಿಕೆಗಳ ಒಂದೊಂದೇ ಹಕ್ಕು ವಿದೇಶಿ ಸಂಸ್ಥೆಯ ಪಾಲಾದರೂ ಆಶ್ಚರ್ಯಪಡಬೇಕಾಗಿಲ್ಲ. ಭಾರತದಲ್ಲಿ ಇಂತಹ ವ್ಯವಸ್ಥಿತ, ಆಕರ್ಷಕ ಸ್ಪರ್ಧೆಗಳು ಎಷ್ಟಿಲ್ಲ?
                 ಮೂಲಿಕಾ ಜ್ಞಾನವು ಅಪಕ್ವ ಜ್ಞಾನವುಳ್ಳವರ ಯಾ ಕೃತಕ ವೈದ್ಯರ ಕೈಯಲ್ಲಿ ಹಗುರವಾಗುತ್ತದೆ ಎನ್ನುತ್ತಾರೆ ದೈತೋಟ.  ಮೂಲಿಕಾ ವೈದ್ಯರೊಬ್ಬರು ಒಂದು ಮೂಲಿಕೆಯನ್ನು ಬಳಸಿ ಔಷಧವನ್ನು ಸೂಚಿಸುತ್ತಾರೆ ಎಂದಿಟ್ಟುಕೊಳ್ಳಿ. ಆ ಮೂಲಿಕೆಯು ಔಷಧವಾಗಲು ಕೆಲವೊಂದು ಸಂಸ್ಕರಣೆಗಳು ಅಗತ್ಯ. ಆಗ ಮಾತ್ರ ರೋಗಿಯ ಮೇಲೆ ಪರಿಣಾಮ. ವೈದ್ಯರು ಯಾವ ಮೂಲಿಕೆಯನ್ನು ಬಳಸುತ್ತಾರೆ ಎಂಬುದಷ್ಟನ್ನೇ ಗ್ರಹಿಸಿದ ಕೃತಕ ವೈದ್ಯರಿಗೆ ಸಂಸ್ಕರಣೆ ಮಾಡಿ ಬಳಸುವ ಜ್ಞಾನವಿರುವುದಿಲ್ಲ. ಇದು ಅಪಾಯ.
                 ಮೂಲಿಕೆಯೇ ಮದ್ದು. ಅದು ಹೆಚ್ಚು ಸಂಸ್ಕರಣಗೊಂಡರೆ ಕೆಮಿಕಲ್. ಈಗ ಎಲ್ಲವೂ ಪ್ಯಾಕ್ಟರಿಗಳಲ್ಲಿ ವಿಪರೀತ ಸಂಸ್ಕರಣಗೊಂಡು 'ಕೆಮಿಕಲ್ ಆಗಿ' ಮಾರುಕಟ್ಟೆಗೆ ಬರುತ್ತದೆ. ಮೂಲಿಕೆಯೊಂದರ ಹಿಂದೆ ಪಾರಂಪರಿಕ ಜ್ಞಾನ ಕೆಲಸ ಮಾಡಿಲ್ಲ. ನೋಡಿ ತಿಳಿದ ವಿಚಾರಗಳಷ್ಟೇ ಔಷಧ ರೂಪದಲ್ಲಿ ಹೊರಬರುತ್ತದೆ. ಜನ ನಂಬುತ್ತಾರೆ. ಮೂಲಿಕಾ ವೈದ್ಯ ಎಂದರೆ 'ಸಸ್ಯಗಳಿಂದ ಮದ್ದು' ಎಂದರ್ಥ. ಇದು ಅಪಾರ್ಥವಾಗಿ ಅರ್ಥಾರ್ಥ ಸಂಬಂಧವನ್ನೇ ಕಳೆದುಕೊಳ್ಳುತ್ತಿದೆ.
                ವೆಂಕಟರಾಮ ದೈತೋಟರು ಆಧುನಿಕ ಶಿಕ್ಷಣವು ಹುಟ್ಟುಹಾಕುವ ಆರೋಗ್ಯಕ್ಕೆ ದುಷ್ಪರಿಣಾಮವಾಗಬಲ್ಲ ವಿಚಾರಗಳನ್ನು  ಅಧ್ಯಯನಾಧಾರಿತವಾಗಿ ಹೇಳುತ್ತಾರೆ. ಬದಲಾದ ಕಾಲಘಟ್ಟದಲ್ಲಿ ಮೂಲಿಕೆಗಳು ಆಧುನೀಕರಣಗೊಳ್ಳುತ್ತಿವೆ. ವ್ಯಾಪಾರವೇ ಆಶಯವಾಗಿದೆ. ದೊಡ್ಡ ದೊಡ್ಡ ಉದ್ಯಮಗಳು ತಲೆಎತ್ತಿವೆ. ಆಡಳಿತಗಳು ಬೆಂಬಲಿಸುತ್ತವೆ. ಕಾನೂನು ಕೂಡಾ ಪ್ರೋತ್ಸಾಹ ನೀಡುತ್ತಿದೆ. ಇದರಿಂದಾಗಿ ಹಿರಿಯರಿಂದ ಬಂದ ಜ್ಞಾನ ಪ್ರವಾಹವು ಹರಿಯುವುದಿಲ್ಲ, ಎಂದು ವಿಷಾದಿಸುತ್ತಾರೆ.
                 ದೈತೋಟರಿಗೆ ಆಯುರ್ವೇದ ಜ್ಞಾನವು ಪಾರಂಪರಿಕ. ಇವರ ಅಜ್ಜ ವೈದ್ಯ ಶಂಕರನಾರಾಯಣ ಭಟ್. ತಂದೆ ಪಂಡಿತ ಶಂಕರನಾರಾಯಣ ಭಟ್. 'ಪಾಣಾಜೆ ಪಂಡಿತ'ರೆಂದೇ ಖ್ಯಾತಿ. ವೆಂಕಟರಾಮರಿಗೆ ಬಾಲ್ಯದಿಂದಲೇ ಮೂಲಿಕಾಸಕ್ತಿ. ತಂದೆಯೊಂದಿಗಿದ್ದು ಕಲಿತ ಜ್ಞಾನ. ಚಿಕಿತ್ಸಾ ವಿಧಾನವನ್ನು ನೋಡಿದ ತಿಳಿದ ಅನುಭವ. ಆಯುರ್ವೇದ ಗ್ರಂಥಗಳ ಅಧ್ಯಯನ. ಅನುಭವಿಗಳೊಡನೆ ನಿರಂತರ ಸಂಪರ್ಕ. ನಾಲ್ಕು ದಶಕದೀಚೆಗೆ ಮೂಲಿಕಾ ಚಿಕಿತ್ಸೆ ನೀಡುತ್ತಿದ್ದಾರೆ.  'ಎಲ್ಲಾ ಕಡೆ ರಿಜೆಕ್ಟ್ ಆದ' ಕೆಲವು ರೋಗಗಳನ್ನು ಗುಣಪಡಿಸಿದ ಖ್ಯಾತಿ ದೈತೋಟರದ್ದು.
                  ಪ್ರಾಕೃತಿಕ ಆಹಾರಕ್ಕೆ ಒತ್ತು ನೀಡುವ ವೆಂಕಟರಾಮರು ರೋಗಗಳೆಲ್ಲಾ ನಮ್ಮ ಆಹಾರ ವಿಧಾನದಿಂದ ಬರುತ್ತವೆ. ಇಂದು ಲಭ್ಯವಿರುವ ಎಲ್ಲಾ ಆಹಾರ ವಸ್ತುಗಳೂ ವಿಷಮಯ. ನಮ್ಮ ಆಹಾರ ವಿಧಾನ ಬದಲಾಗಲೇ ಬೇಕು. ಮನುಷ್ಯ ಮತ್ತು ಪ್ರಕೃತಿಯ ಸಂಬಂಧ ದೂರವಾದುದೇ ರೋಗಗಳಿಗೆ ಮೂಲ ಕಾರಣ.' ಎನ್ನುತ್ತಾರೆ. ಇವರ ಪತ್ನಿ ಜಯಲಕ್ಷ್ಮೀ. ವೈದ್ಯ ಹಿನ್ನೆಲೆಯ ಉತ್ತರ ಕನ್ನಡ ಜಿಲ್ಲೆಯ ಸಾಗರದ ಮುಂಡಿಗೇಸರದವರು. ಇವರ ಅಜ್ಜಿ ನಾಟಿ ವೈದ್ಯರು. ಪ್ರಾಕೃತಿಕ ಆಹಾರ ಪದ್ಧತಿಯಲ್ಲಿ ನಿಜಾರ್ಥದಲ್ಲಿ ಇವರು ತಾಯಿ. ಎಲೆ, ಗಿಡ, ಬಳ್ಳಿ, ಕಾಂಡ, ಹೂ, ಮೊಗ್ಗು.. ಇವೆಲ್ಲವೂ ಜಯಲಕ್ಷ್ಮೀಯವರ ಕೈಯಲ್ಲಿ ಆಹಾರವಾಗಿ, ಔಷಧವಾಗಿ ಬದಲಾಗುತ್ತದೆ.
                  ಕೃಷಿ ಮಾಸಿಕ ಅಡಿಕೆ ಪತ್ರಿಕೆಯಲ್ಲಿ ಇಪ್ಪತ್ತೇಳು ವರುಷದಿಂದ ಪ್ರಕಟವಾಗುವ 'ಮನೆಮದ್ದು' ಅಂಕಣ ಜನಪ್ರಿಯ. ಮೂಲಿಕೆಯೊಂದನ್ನು ಸುಲಭದಲ್ಲಿ ಎಲ್ಲರಿಗೂ ಅರ್ಥವಾಗುವ ಹಾಗೆ ಪರಿಚಯಿಸಿ, ಅದರ ಔಷಧೀಯ ಗುಣಗಳನ್ನು ತಿಳಿಸಿಕೊಡುವ ಅಪೂರ್ವ ಅಂಕಣ. ಚುಟುಕು ವಾಕ್ಯಗಳಲ್ಲಿ ಅನುಭವಸತ್ಯ.  'ವಿಷಗುಣದ್ದಾಗಿರಬಾರದು, ಸುಲಭದಲ್ಲಿ-ಎಲ್ಲೆಡೆ ಸಿಗುವಂತಿರಬೇಕು. ಎಲ್ಲಾ ಋತುಗಳಲ್ಲೂ ಸಿಗಬೇಕು, ಔಷಧಿ ತಯಾರಿ ಸುಲಭವಾಗಿರಬೇಕು'-ಇದು ಬರೆಹದ ಮಾನದಂಡಗಳು.
                 ಹೊಸ ಮೂಲಿಕೆಗಳ ಗುಣಗಳು ಪರೀಕ್ಷೆಯಲ್ಲಿ ಉತ್ತೀರ್ಣವಾದಾಗಲೇ ದೈತೋಟರಿಂದ ಅಂಕ.  ಇದಕ್ಕೆ ವರುಷಗಟ್ಟಲೆ ಕಾಯುವಿಕೆ ಬೇಕು. ಯಾವುದೇ ಮೂಲಿಕೆಯ ಮದ್ದಿನ ಗುಣ ಖಚಿತವಾಗದೆ ದೈತೋಟರು ಜನರ ಮುಂದಿಡರು.  ಇನ್ನೂರೈವತ್ತಕ್ಕೂ ಮಿಕ್ಕಿದ ಮೂಲಿಕೆಗಳ ಪರಿಚಯ 'ಔಷಧೀಯ ಸಸ್ಯ ಸಂಪತ್ತು' ಪುಸ್ತಕವು ಈಚೆಗೆ ಬಿಡುಗಡೆಗೊಂಡ ಕೃತಿ. ಇದರ ಪುಟಪುಟಗಳಲ್ಲಿ ವೆಂಕಟ್ರಾಮರ ತಪಸ್ಸಿದೆ. ಪಾರಂಪರಿಕ ಜ್ಞಾನವಿದೆ. ಅನುಭವಗಳ ಸೆಲೆಯಿದೆ. ಕೃತಿಯನ್ನು ಪುತ್ತೂರಿನ ವಿವೇಕಾನಂದ ಸಂಶೋಧನಾ ಕೇಂದ್ರವು ಪ್ರಕಾಶಿಸಿದೆ.
              ದೈತೋಟರ 'ಔಷಧೀಯ ಸಸ್ಯ ಸಂಪತ್ತು' ನಿಜಾರ್ಥದಲ್ಲಿ ವೈದ್ಯ ಸ್ನೇಹಿತ. ಪಾರಂಪರಿಕ ಜ್ಞಾನದ ಭಂಡಾರ. ಎದುರು ಪುಸ್ತಕವನ್ನಿಟ್ಟು ಪುಟ ತಿರುವುತ್ತಿದ್ದಾಗ ದೈತೋಟರು ಆಗಾಗ್ಗೆ ಹೇಳುವ ಮಾತು ನೆನಪಾಗುತ್ತದೆ,  ಮೂಲಿಕಾ ಜ್ಞಾನ, ಆಯುರ್ವೇದಗಳ ಕುರಿತು ಮಾತನಾಡಬೇಕಾದರೆ ಅಧ್ಯಯನ ಮುಖ್ಯ. ಇದರಲ್ಲಿ ಸಂಶೋಧನೆ ಪ್ರಧಾನ. ಜ್ಞಾನ ಹೆಚ್ಚಿದಂತೆ ಶಾಸ್ತ್ರ ಗಟ್ಟಿಯಾಗುತ್ತದೆ. ಅವಸರ ಸಲ್ಲದು. ದಿಢೀರ್ ವೈದ್ಯರಾಗಲು ಸಾಧ್ಯವಿಲ್ಲ. ಕೆಲವರು ಅರ್ಧಂಬರ್ಧ ಕಲಿತು ಔಷಧಿ ಕೊಟ್ಟು ಏನಕ್ಕೇನೋ ಆದುದಿದೆ. ಪಾರಂಪರಿಕ ಔಷಧಿಗಳು ಈಗಲೂ ಪ್ರಸ್ತುತ.
              ಗಿಡಮೂಲಿಕೆಗಳನ್ನು ಬಳಸಿ ಬಲ್ಲ ಜ್ಞಾನದ ಮೂಲಕ ಸಸ್ಯ ವಿಜ್ಞಾನದ ಪಾಠ ಹೇಳುವ ಹಸುರು ಹಿತೈಷಿ. ಎಲ್ಲಾ ಮೂಲಿಕೆಗಳ ಸಸ್ಯಶಾಸ್ತ್ರೀಯ ಮಾಹಿತಿಯನ್ನು ಬಲ್ಲ ಅಪರೂಪದ ಜ್ಞಾನಿ. ಈ ಜ್ಞಾನಗಳು ದಾಖಲಾಗಬೇಕಾದುದು ಭವಿಷ್ಯದ ಆರೋಗ್ಯ ಬದುಕಿಗೆ ಅನಿವಾರ್ಯತೆ.


0 comments:

Post a Comment