Wednesday, September 11, 2013

ಗಂಗವ್ವ ದಂಪತಿಗೆ ಕೃಷಿ-ಖುಷಿಯಲ್ಲಿ ಆತ್ಮಾಭಿಮಾನ



             "ಹೈನುಗಾರಿಕೆಯಿಂದಲೇ ಮಗನನ್ನು ಇಂಜಿನಿಯರಿಂಗ್ ವರೆಗೆ ಓದಿಸಿದ್ದೇವೆ. ಈಗ ಅವನು ನೌಕರಿಯಲ್ಲಿದ್ದಾನೆ," ಎನ್ನುವಾಗ ಧಾರವಾಡ ಎರಿಕೊಪ್ಪದ ಗಂಗವ್ವ ಮುಖ ಅರಳುತ್ತದೆ. ಕೃಷಿಯಿಂದ ಕೃಷಿಕರು ವಿಮುಖವಾಗುತ್ತಿರುವ ಕಾಲಮಾನದಲ್ಲಿ ಗಂಗವ್ವ ಅವರ ಮಾತಿನ ಹಿಂದೆ ಕಾಯಕಷ್ಟದ ದಿನಗಳಿವೆ. ಕೃಷಿಯಲ್ಲಿ ಖುಷಿ ಕಂಡ ದಿನಗಳಿವೆ.

             ಹಟ್ಟಿತುಂಬಾ ಆಕಳು, ಎಮ್ಮೆಗಳಿದ್ದ ದಿವಸಗಳನ್ನು ಜ್ಞಾಪಿಸಿಕೊಳ್ಳುತ್ತಾರೆ. ನಿರ್ವಹಣೆಯ ಅನುಕೂಲಕ್ಕಾಗಿ ಈಗ ಎರಡೆರಡು ಎಮ್ಮೆ, ಆಕಳುಗಳಿವೆ. ಗಂಗವ್ವರ ಪತಿ ಶ್ರೀಕಾಂತ. ಕಾಲು ಶತಮಾನದಿಂದ ಎರಿಕೊಪ್ಪದಿಂದ ಹತ್ತು ಕಿಲೋಮೀಟರ್ ದೂರದ ಹುಬ್ಬಳ್ಳಿಗೆ ನಿತ್ಯ ಹಾಲು ಸರಬರಾಜು ಮಾಡುವುದು ಬದುಕಿನಂಗ.

            ಎರಿಕೊಪ್ಪ ಸುತ್ತಲಿನ ಸುಮಾರು ಇಪ್ಪತ್ತರಿಂದ ಮೂವತ್ತು ಮನೆಗಳಿಂದ ಹಾಲು ಖರೀದಿ. ಬೆಳಿಗ್ಗೆ ಆರು ಗಂಟೆಗೆ ಹೊರಟರೆ ಎಲ್ಲಾ ಕೆಲಸ ಮುಗಿಸಿ ಹನ್ನೆರಡು ಗಂಟೆ ಹೊತ್ತಿಗೆ ಮರಳುತ್ತಾರೆ. ಸೈಕಲಿನಲ್ಲಿ ಐದಾರು ಕ್ಯಾನ್ ಪೇರಿಸಿ ಹೊರಡುವ ಶ್ರೀಕಾಂತರು ತರುವ ಹಾಲನ್ನು ಕಾಯುವ ನಲವತ್ತು ಕುಟುಂಬಗಳಿವೆ. ಇವರೆಲ್ಲಾ ಬೇರೆ ಬೇರೆ ಕಚೇರಿಗಳಲ್ಲಿ ಉದ್ಯೋಗಿಗಳು.
ಒಂದು ಲೀಟರಿಗೆ ಇಪ್ಪತ್ತೈದು ರೂಪಾಯಿಯಂತೆ ಹಾಲು ಖರೀದಿ. ಮೂವತ್ತು ರೂಪಾಯಿಗೆ ಮಾರಾಟ. ಆಕಳಿನದೇ ಬೇಕೆಂದು ಬೇಡಿಕೆ ಮುಂದಿಡುವ ಗ್ರಾಹಕರಿದ್ದಾರೆ.

            ಆಕಳಿನ ಹಾಲಿಗೆ ಐದು ರೂಪಾಯಿ ಅಧಿಕ. ಮನೆಯಲ್ಲೇ ಸಿದ್ಧಪಡಿಸಿದ ಬೆಣ್ಣೆಗೂ ಖಾಯಂ ಗಿರಾಕಿಗಳು. ತಿಂಗಳಿಗೆ ಸುಮಾರು ಹತ್ತು ಕಿಲೋ ಬೆಣ್ಣೆ ಮಾರಾಟ. ಕಿಲೋಗೆ ಮುನ್ನೂರು ರೂಪಾಯಿ ದರ.

               "ಹುಬ್ಬಳ್ಳಿಯಲ್ಲಿ ಕೆ.ಎಂ.ಎಫ್. ಡೈರಿ ಘಟಕ ಆರಂಭವಾಗಿದೆ. ಹಾಗಾಗಿ ಸ್ವಲ್ಪಮಟ್ಟಿಗೆ ವ್ಯಾಪಾರ ಕಡಿಮೆ. ಆದರೂ ನಾನು ತರುವ ಹಾಲನ್ನೇ ಇಚ್ಛೆಪಡುವ, ಅದಕ್ಕಾಗಿ ಕಾಯುವ ಗ್ರಾಹಕರಿದ್ದಾರೆ. ಅವರಿಗೆ ತೊಂದರೆಯಾಗಬಾರದು," ಎನ್ನುವ ಪ್ರಾಮಾಣಿಕ ಕಾಳಜಿ ಶ್ರೀಕಾಂತರದು.

                ಪತಿ ಹಾಲು ವ್ಯಾಪಾರ ಮಾಡಿದರೆ, ಕಾಕಡ ಕೃಷಿಯು ಗಂಗವ್ವರ ಸುಪರ್ದಿ. ಮನೆಮುಂದೆ ಇಪ್ಪತ್ತು ಗುಂಟೆ ಜಾಗದಲ್ಲಿ ಐವತ್ತು ಕಾಕಡ ಗಿಡಗಳಿವೆ. ಎಲ್ಲವೂ ಎರಡು ವರುಷದ ಗಿಡಗಳು. ದಶಂಬರಿಂದ ಮೇ ತನಕ ದಿನಕ್ಕೆ 50-60 ಮಾರು ಹೂ ಮಾರಾಟ. ಸೀಸನ್ನಿನಲ್ಲಿ ಬೆಳಿಗ್ಗೆ ನಾಲ್ಕು ಗಂಟೆಗೆ ದಿನಚರಿ ಆರಂಭವಾದರೆ ರಾತ್ರಿ ಹನ್ನೆರಡಾದರೂ ಹೂವಿನ ಕೆಲಸ ಮುಗಿಯುವುದಿಲ್ಲ. ಇಂತಹ ಸಂದರ್ಭಗಳಲ್ಲಿ ಮನೆಮಂದಿಯಲ್ಲದೆ ನೆರೆಕರೆಯ ಸಹಾಯಕರನ್ನು ಅವಲಂಬಿಸುತ್ತಾರೆ.
ಏನಿಲ್ಲವೆಂದರೂ ಕಾಕಡ ಹೂವಿನಿಂದ ದಿವಸಕ್ಕೆ ಸರಾಸರಿ ಐನೂರು ರೂಪಾಯಿ ರೊಕ್ಕ ಬರುತ್ತೆ. ಒಂದು ಸಾವಿರ ಬಂದುದೂ ಇದೆ ಎನ್ನುತ್ತಾರೆ ಗಂಗವ್ವ. ಗಿಡದಿಂದ ಆಯ್ದ ಮೊಗ್ಗನ್ನು ಕಟ್ಟಿ ಮಾಲೆ ಮಾಡುವುದು ತ್ರಾಸದ ಕೆಲಸ. ಜೂನಿನಿಂದ ಸೆಪ್ಟೆಂಬರ್ ತನಕ ಹೂ ಕಡಿಮೆ.

              ಗಿಡ ನೆಟ್ಟು ಆರು ತಿಂಗಳಲ್ಲಿ ಹೂ ಬಿಡಲು ಆರಂಭ. ಹಟ್ಟಿಗೊಬ್ಬರ ಉಣಿಕೆ. ಕೊಳವೆ ಬಾವಿಯ ನೀರಿನಿಂದ ನೀರಾವರಿ. ಗಿಡಗಳಿಗೆ ಧಾಳಿಯಿಡುವ ಕೀಟಗಳ ನಿಯಂತ್ರಣಕ್ಕೆ ವಾರಕ್ಕೆ ಎರಡು ಬಾರಿ ರಾಸಾಯನಿಕ ಸಿಂಪಡಣೆ. ಈ ಭಾಗದಲ್ಲಿ ರಾಸಾಯನಿಕ ಬಳಕೆ ಹೆಚ್ಚು. ಸಾವಯವ ಗೊತ್ತಿಲ್ಲ. ರಾಸಾಯನಿಕದ ಬದಲಿಗೆ ವಿಷರಹಿತ ಸಿಂಪಡಣೆಯನ್ನು ಪರಿಚಯಿಸಬೇಕಾಗಿದೆ ಎನ್ನುತ್ತಾರೆ, ಜತೆಗಿದ್ದ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ನಿರ್ದೇಶಕ ಎಸ್.ಸೀತಾರಾಮ ಶೆಟ್ಟಿ. ಮಲ್ಲಿಗೆ ಕೃಷಿಯ ನಿರ್ವಹಣೆಗಾಗಿ ಯೋಜನೆಯ ವತಿಯಿಂದ ನೀಡಿದ ಸಾಲವು ಗಂಗವ್ವರಿಗೆ ನೆರವಾಗಿದೆ.

               ಈ ಭಾಗದಲ್ಲಿ ಕಾಕಡ ಹೂವಿನ ಕೃಷಿ ಅಂದರೆ ಅಸಡ್ಡೆ. ಶ್ರಮವಹಿಸಿ ದುಡಿದರೆ ರೊಕ್ಕ ಬರುತ್ತೆ ಎನ್ನುವ ಅನುಭವ ಇವರದು. ಶ್ರೀಕಾಂತರು ಹಾಲಿನೊಂದಿಗೆ ಗಂಗವ್ವ ಮಾಲೆ ಕಟ್ಟಿ ನೀಡಿದ ಮಲ್ಲಿಗೆಯ ಮಾಲೆಯನ್ನೂ ಒಯ್ಯುತ್ತಾರೆ. ಇದಕ್ಕೂ ನಿಶ್ಚಿತ ಗಿರಾಕಿಗಳಿದ್ದಾರೆ. ಮಾರುಕಟ್ಟೆಯಲ್ಲಿ ಹಾಲಿಗೆ ಮತ್ತು ಮಲ್ಲಿಗೆಗೆ ಎಷ್ಟೇ ದರದ ಏರಿಳಿತವಿದ್ದರೂ ಶ್ರೀಕಾಂತರ ಹಾಲು ಮತ್ತು ಮಲ್ಲಿಗೆಗೆ ವರುಷಪೂರ್ತಿ ಒಂದೇ ದರ. ಒಂದೇ ಗುಣಮಟ್ಟ. ಇದು ಅವರ ಶಿಸ್ತಿನ ಜೀವನ ಶೈಲಿ.

                 ಶ್ರೀಕಾಂತರು ಕಸಿ ಪ್ರವೀಣ. ಮಾವು ಕಸಿ ಗಿಡಗಳನ್ನು ತಯಾರಿಸುತ್ತಾರೆ. ಚಿಕ್ಕ ನರ್ಸರಿ ಹೊಂದಿದ್ದಾರೆ. 2-3 ವರುಷಗಳಿಂದ ಕಸಿ ಗಿಡಗಳಿಗೆ ಜನರು ಒಲವು ಹೆಚ್ಚಾಗುತ್ತಿದೆ. ಗಿಡಗಳನ್ನು ಹುಡುಕಿ ಬರುವವರು ಇದ್ದಾರೆ. ಇವರಿಗೆ ಹತ್ತೆಕ್ರೆ ಗದ್ದೆಯಿದೆ. ಮಲ್ಲಿಗೆಯ ಆಸಕ್ತಿ ಶುರುವಾದ ಬಳಿಕ ಭತ್ತದ ಕೃಷಿ ಹಿಂದೆ ಬಿದ್ದಿದೆ.

                   ಎರಿಕೊಪ್ಪದಲ್ಲಿ ಕೃಷಿಯಲ್ಲಿದ್ದುಕೊಂಡು, ಸಂಪಾದನೆಯಲ್ಲಿ ನಗರದಲ್ಲಿ ದುಡಿಯುವವರಿಗೆ ಸಮದಂಡಿಯಾಗಿರುವ ಗಂಗವ್ವ ಶ್ರೀಕಾಂತ ದಂಪತಿಗಳ ಕೃಷಿ ಬದುಕಿನಲ್ಲಿ ಸ್ವಾವಲಂಬಿ ಪಾಠವಿದೆ. ನೆಮ್ಮದಿಯ ಸೆಳೆಯಿದೆ. ತಮ್ಮ ಮಕ್ಕಳ ವಿದ್ಯಾಭ್ಯಾಸಕ್ಕೆ ಕೃಷಿ ನೆರವಾಗಿದೆ ಎನ್ನುವ ಆತ್ಮಾಭಿಮಾನವಿದೆ.