Wednesday, February 25, 2015

ಕೊಬ್ಬರಿ ಎಣ್ಣ

             'ಭಾರತೀಯ ತೆಂಗು ಪತ್ರಿಕೆ' - ಅಕ್ಟೋಬರ-ದಶಂಬರ 2014ರ ಸಂಚಿಕೆಯಲ್ಲಿ ಪ್ರಕಟಿತ ಬರೆಹದ ತುಣುಕು.

Wednesday, February 18, 2015

ಬೆದರು ದನಿಗೆ ಮಂಗಗಳೇ 'ಮಂಗಮಾಯ'


               ಅಡಿಕೆಗೆ ರೋಗ ಬಂದಿದೆಯೇ? ಸಿಂಗಾರ ಬಿಟ್ಟಿದೆಯೇ? ತೆಂಗನ್ನು ಕುರುವಾಯಿಯಂತಹ ಕೀಟಗಳು ಹಾಳುಮಾಡಿವೆಯೇ? ತೆಂಗು ಎಳೆಯದೇ, ಬಲಿತಿದೆಯೇ? - ತಲೆಬಿಸಿ ಮಾಡಬೇಡಿ. ನೀವಂತೂ ಮರ ಏರದಿರಿ. ಅವಸರದಲ್ಲಿ ಮರವೇರುವ ತಜ್ಞರನ್ನೂ ಆಹ್ವಾನಿಸಬೇಡಿ. ತೋಟದಲ್ಲಿ ಸುತ್ತುವ 'ಹಾರಾಡುವ ತಟ್ಟೆ' ಕಣ್ಣೆವೆ ಮುಚ್ಚುವುದರೊಳಗೆ ಈ ಪ್ರಶ್ನೆಗಳಿಗೆ ಉತ್ತರ ನೀಡುತ್ತದೆ! ಅದು ರಿಮೋಟ್ನಿಂದ ನಿಯಂತ್ರಿತ. ಕಂಪ್ಯೂನಲ್ಲಿ ಅದರ ಚಲನವಲನಗಳ ದಾಖಲಾತಿ. ಅಡಿಕೆಗೆ ರೋಗ ತಗುಲಿದೆ ಅಂತ ಗೊತ್ತಾದರೆ ಬೋರ್ಡೋ ದ್ರಾವಣ ಸಿಂಪಡಿಸುವ ವ್ಯವಸ್ಥೆಗೆ ಯಜಮಾನ ಅಣಿಯಾಗಬಹುದು. ಮನೆಯ ಜಗಲಿಯಲ್ಲಿ ಕುಳಿತು ತೋಟದ ಡಾಟಾಗಳನ್ನು ಸೇವ್ ಮಾಡಿಡುವ ವ್ಯವಸ್ಥೆ.
              ಪುತ್ತೂರಿನಲ್ಲಿ ಜರುಗಿದ ಕೃಷಿ ಯಂತ್ರಮೇಳದಲ್ಲಿ ಕುಂದಾಪುರ ಮೂಲದ ಇಂಜಿನಿಯರ್ ಭರತ್ಕುಮಾರ್ ಶೆಟ್ಟಿ ತನ್ನ ನೂತನ ಆವಿಷ್ಕಾರದ ಗುಟ್ಟನ್ನು ರಟ್ಟು ಮಾಡಿದರು. ಅವರ ಬತ್ತಳಿಕೆಯಲ್ಲಿ ಮತ್ತೊಂದು ಯೋಜನೆಯ ಕಡತದ ಮೊದಲ ಹಾಳೆಯೂ ಜತೆಯಲ್ಲಿ ತೆರೆದುಕೊಂಡಿದೆ. ಕಾಡುಪ್ರಾಣಿಗಳ ಪಲಾಯನಕ್ಕಿರುವ 'ಕೆಣಿ'ಯಿದು. ತೋಟದ ವಿವಿದೆಡೆ ಕೋವಿಗಳ ಸ್ಥಾಪನೆ. ಅವುಗಳ ನಳಿಗೆಗಳಲ್ಲಿ ಗನ್ಪೌಡರ್. ಕಾಡುಪ್ರಾಣಿಗಳು ತೋಟಕ್ಕೆ ಧಾಳಿ ಮಾಡಿವೆ ಅಂದಿಟ್ಟುಕೊಳ್ಳಿ. ಒಂದು ನಿದರ್ಿಷ್ಟ ಸಮಯದಲ್ಲಿ ಟ್ರಿಗರ್ ಚಾಲೂ ಆಗಿ ಸಿಡಿಯುವಂತೆ ಮಾಡುವ 'ಮಂಕಿ ಫಿರಂಗಿ'. 
           ಭರತ್ಕುಮಾರ್ ಶೆಟ್ಟರು ಐದು ವರುಷಗಳ ಹಿಂದೆ ಕಾಡುಪ್ರಾಣಿಗಳನ್ನು ಓಡಿಸುವ 'ಸೈರನ್' ರೂಪಿಸಿದ್ದರು. ವಿವಿಧ ದನಿಗಳನ್ನು ಉಪಕರಣದ ಮೂಲಕ ದಾಖಲಿಸಿಟ್ಟು ಅವುಗಳನ್ನು ತೋಟದಲ್ಲಿ ಧ್ವನಿವರ್ಧಕದ ಮೂಲಕ ಕೇಳಿಸುವ ವ್ಯವಸ್ಥೆ. ಇದರಿಂದಾಗಿ ಮಂಗ, ಹಂದಿ ಕಾಟದಿಂದ ಗಣನೀಯವಾಗಿ ಸುಧಾರಿಸಿಕೊಂಡ ಕೃಷಿಕರ ಯಶೋಗಾಥೆಗಳು ಅವರಲ್ಲಿವೆ. ಯಾವ ಸ್ವರಕ್ಕೆ ಮಂಗಗಳು, ಹಂದಿಗಳು ಓಡುತ್ತವೆ ಎನ್ನುವ ಅನ್ವೇಷಣೆ ಅವರವರ ತೋಟದಲ್ಲಷ್ಟೇ ಅಗಬೇಕು.
ಉ.ಕ.ಜಿಲ್ಲೆಯ ಹೊನ್ನಾವರದ ಉಪ್ಪೋಣಿಯ ಕೃಷಿಕ ಪಿ.ಎಸ್.ಭಟ್ಟರು ಮಂಗಗಳ ಬಾಧೆಯಿಂದ ಹೈರಾಣ ಆಗಿದ್ದರು. ಕೃಷಿ ಉತ್ಪನ್ನಗಳು ನಾಶವಾಗಿ ತಲೆಮೇಲೆ ಕೈಹೊತ್ತು ಕುಳಿತಾಗ ಮಾಧ್ಯಮದಲ್ಲಿ ಭರತ್ ಕುಮಾರ್ ಶೆಟ್ಟರ 'ಕಾಡು ಪ್ರಾಣಿ ಓಡಿಸುವ ಸೈರನ್' ದನಿ ಕೇಳಿಸಿತು. ಮಂಗಗಳ ಉಪದ್ರವನ್ನು ಮನದಟ್ಟು ಮಾಡಿಕೊಟ್ಟು ಸೈರನ್ ರೂಪಿಸುವಂತೆ ವಿನಂತಿಸಿದರು. ಕಾಡುಪ್ರಾಣಿಗಳು ಬೆದರುವ 'ಬೆದರು ದನಿ'ಯ ಅನ್ವೇಷಣೆಗೆ ತಾನೂ ಮುಂದಾದರು. ಪ್ರಸ್ತುತ ಬೆದರು ದನಿಯ ಕಾಟಕ್ಕೆ ವಾನರ ಸೇನೆ ಬೆದರಿದೆ. ಕಾಡು ಹಂದಿಗಳು ಭೀತವಾಗಿವೆ.
           ಪಿ.ಎಸ್.ಭಟ್ಟರ ಮುಖ್ಯ ಕೃಷಿ ಅಡಿಕೆ, ತೆಂಗು. ನಿರಂತರವಾಗಿ ಕೃಷಿ ಉತ್ಪನ್ನಗಳು ವಾನರ ಸೇನೆಗೆ ಬಲಿಯಾಗಿ ಲಕ್ಷಗಟ್ಟಲೆ ನಾಶನಷ್ಟ. ಎಳೆ ಅಡಿಕೆಯ ರಸ ಹೀರಿ ಉಗುಳುವುದು ಅವುಗಳಿಗೆ ಆಟ. ಎಳೆ ತೆಂಗಿನಕಾಯಿಗಳ ನಿರಂತರ ಆಪೋಶನ. ನಾಲ್ಕು ನೂರು ತೆಂಗಿನಮರದಿಂದ ಐದು ಸಾವಿರ ಕಾಯಿ ಸಿಕ್ಕರೆ ಪುಣ್ಯ! ಬುಡಕ್ಕೆ ಹಾಕಿದ ಗೊಬ್ಬರಕ್ಕೆ ಹೊಂಚುಹಾಕುವ ಕಾಡುಹಂದಿ. 'ಒಂದು ಹಂತದಲ್ಲಿ ಕೃಷಿಯೇ ಬೇಡ. ಮಾರಿ ಹೋಗೋಣ' ಎನ್ನುವ ನಿರ್ಧಾಾರಕ್ಕೂ ಬಂದಿದ್ದರು.
            ಕತ್ತಲ ಬದುಕಿನ ಅನುಭವ, ಹೆಜ್ಜೆಯೂರಲಾಗದ ಅಸಹಾಯಕತೆ. ಶೆಟ್ಟರ ಸೈರನ್ ದನಿ ಬದುಕಿನಲ್ಲಿ ಬೆಳಕಿನ ಎಳೆಯನ್ನು ತೋರಿಸಿತು.  'ಜೆಸಿಬಿ ಚಾಲೂ ಆದಾಗ ಶಬ್ದ ಬರುತ್ತದಲ್ಲಾ, ಆ ಸದ್ದಿಗೆ ಮಂಗಗಳು ಓಡುತ್ತವೆ,' ಆಪ್ತರೊಬ್ಬರು ಹೇಳಿದರು. 'ಕೆಂಪು ಕಲ್ಲು ಕಡಿಯುವ ಯಂತ್ರದ ಕರ್ಕಶ ಸದ್ದಿನಿಂದ ಮಂಗಗಳು ಪಲಾಯನ ಮಾಡುತ್ತವೆ', ಮತ್ತೊಂದು ಸುದ್ದಿ. ಸೋಲಿನ ನೆರೆಯಿಂದ ಕೊಚ್ಚಿಹೋಗುತ್ತಿದ್ದ ಭಟ್ಟರು ಇಂತಹ ಸುದ್ದಿಗಳಿಗೆ ಕಿವಿಯಾದರು. ಸದ್ದುಗಳನ್ನು ದಾಖಲಿಸಿಕೊಂಡು ಶೆಟ್ಟರಿಗೆ ನೀಡಿದರು. ಉಪಕರಣಕ್ಕೆ ದನಿಗಳನ್ನು ಅಳವಡಿಸಿ ತೋಟದಲ್ಲಿ ಮೊಳಗಿಸಿದರು. ಹೀಗೆ ಜಾಗಟೆ, ಜೇನು ಹುಳುಗಳ ಸದ್ದು, ಪವರ್ ಟಿಲ್ಲರ್ ಸದ್ದು, ಯಕ್ಷಗಾನದ ಚೆಂಡೆ... ಪ್ರಯೋಗಗಳು ಮಂಗಗಳಿಗೆ ದುಃಸ್ವಪ್ನವಾದುವು. ತೋಟಕ್ಕೆ ಹಾಕಿದ ಗೊಬ್ಬರ, ಎರೆಹುಳುಗಳನ್ನು ಮುಕ್ಕುವ ಕಾಡುಹಂದಿಗಳಿಗೂ ಇಂತಹುದೇ ಪ್ರಯೋಗ. ಗೂಬೆಯ ದನಿ ಇನ್ನೂ ಸಿಕ್ಕಿಲ್ಲವಂತೆ.
            ಎಲ್ಲಾ ಪ್ರಯೋಗಗಳು ಭಟ್ಟರ ನಗರಮುಖಿ ವಾಸದ ಯೋಚನೆಗೆ  ತಡೆ ಹಾಕಿವೆ. ಕೃಷಿ ಉತ್ಪನ್ನಗಳು ಅಂಗಳಕ್ಕೆ ಬಂದುವು. ತನ್ನ ಪ್ರಯತ್ನಗಳನ್ನು ಇತರ ಕೃಷಿಕರಲ್ಲೂ ಹಂಚಿಕೊಂಡರು. ತಂತಮ್ಮ ತೋಟದಲ್ಲಿ ಯಾವ್ಯಾವ ಸ್ವರ, ಉಪಾಯಗಳಿಗೆ ಮಂಗಗಳು ಓಡುತ್ತವೆ ಎನ್ನುವ ಅನ್ವೇಷಣೆಯನ್ನು ನಾವೇ ಮಾಡಬೇಕು. ಶ್ರಮ ಪಟ್ಟರೆ ಕಷ್ಟವಲ್ಲ. "ಸಬ್ಸಿಡಿಯ ಹಿಂದೆ ಓಡಲು ನಮಗೆಲ್ಲಾ ಖುಷಿ. ಪರಿಹಾರ ಸಿಗುತ್ತದೆ ಅಂದ್ರೆ ಮೈಲುಗಟ್ಟಲೆ ಕ್ಯೂ ನಿಲ್ಲಲು ಬೇಸರವಾಗುವುದಿಲ್ಲ. ಆದರೆ ನಮ್ಮ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಪುರುಸೊತ್ತೇ ಇರುವುದಿಲ್ಲ", ಭಟ್ಟರು ಕೃಷಿಲೋಕದ ವಾಸ್ತವ ಸ್ಥಿತಿಯನ್ನು ಹೇಳುತ್ತಾರೆ.
           ಮರಗಳು ನಾಶವಾಗುತ್ತಿವೆ. ಆಹಾರಕ್ಕಾಗಿ ಹಂದಿ, ಮಂಗ, ಆನೆಗಳು ನಾಡಿಗೆ ನುಗ್ಗುತ್ತಿವೆ. ತೋಟದಲ್ಲಿ ವಸತಿ, ವಸಾಹತು ಗಟ್ಟಿಮಾಡಿಕೊಳ್ಳುತ್ತಿವೆ.. ಅತ್ತಿ, ಆಲ, ಆಶ್ವತ್ಥ, ಕಾಡು ಸಂಪಿಗೆ, ಕಾಡುಮುರುಗಲು, ಮಾವು, ಹಲಸು... ಮೊದಲಾದ ಮರಗಳು ಕೊಡಲಿಗೆ ಆಹುತಿಯಾಗಿವೆ. ಪ್ರಾಣಿ/ಪಕ್ಷಿಗಳ ಆಹಾರದ ಉದ್ದೇಶಕ್ಕಾದರೂ ನೆಟ್ಟು ಬೆಳೆಸಲು ಇಲಾಖೆಯೊಂದಿಗೆ ಕೈಜೋಡಿಸಬೇಕು. ಮೊದಲೆಲ್ಲಾ ತೆಂಗಿನಮರಗಳಲ್ಲಿ ಗುಬ್ಬಚ್ಚಿಗಳು ಗೂಡು ಕಟ್ಟುತ್ತಿದ್ದುವು. ಜೇನು ಗೂಡುಗಳು ಅಲ್ಲಿಲ್ಲಿ ಇರುತ್ತಿದ್ದುವು. ಅವೆಲ್ಲಾ ವಾನರ ಸೈನ್ಯಕ್ಕೆ ತಡೆಯಾಗಿದ್ದುವು. ಸೈರನ್ನಿಂದ ಶಾಶ್ವತ ಪರಿಹಾರ ಸಿಗದಿದ್ದರೂ ತಕ್ಷಣಕ್ಕೆ  ರಕ್ಷಣೆ ಸಿಕ್ಕಿದೆ.
           ಪಿ.ಎಸ್.ಭಟ್ಟರ ಹೊಸ ಯೋಚನೆಯೊಂದು ಚಿಂತನಗ್ರಾಹ್ಯ, ನಾಡಿಗೆ ಬಂದ ಕಾಡುಕೋಳಿಯನ್ನು ಕೊಂದರೆ ಅಪರಾಧ. ಸಾಕುಪ್ರಾಣಿಗಳಾದ ಕೋಳಿ, ಹಂದಿಯನ್ನು ಕೊಂದು ತಿನ್ನಬಹುದು. ಮಂಗನನ್ನು ಕೂಡ ಸಾಕು ಪ್ರಾಣಿ ಎಂದು ಯಾಕೆ ಪರಿಗಣಿಸಬಾರದು! ಗುಡ್ಡಗಾಡು ಪ್ರದೇಶಗಳಲ್ಲಿ ಮಂಗಗಳನ್ನು ತಿನ್ನುವ ವರ್ಗಗಳನ್ನು ಕಾಣುತ್ತೇವೆ. ಅವುಗಳ ರಕ್ತ, ಮಾಂಸಗಳಲ್ಲಿರುವ ಪೌಷ್ಟಿಕತೆಯನ್ನು ವೈಜ್ಞಾನಿಕ ಅಧ್ಯಯನ ಮಾಡಿ, ಅವುಗಳ ಔಷಧೀಯ, ಆಹಾರ ಗುಣಗಳನ್ನು ತಿಳಿಸುವ ಕೆಲಸಗಳನ್ನು ಸಂಶೋಧನಾ ಸಂಸ್ಥೆಗಳು ಮಾಡುವ  ಕಾಲ ಸನ್ನಿಹಿತವಾಗಿದೆ.
           ಬೆಂಗಳೂರಿನ 'ಗ್ರಸ್ ಇಕೋಸೈಯನ್ಸಸ್' ಸಂಸ್ಥೆಯ ಮುಖ್ಯಸ್ಥ ಮಹೇಶ್ ಅಯ್ಯರ್ ಹಕ್ಕಿ, ಪ್ರಾಣಿಗಳ ಗಡಿಪಾರಿಗೆ ಆಯಾಯ ಪ್ರಾಣಿಗಳ ಆರ್ತನಾದದ ದನಿಗಳನ್ನು ಬಳಸಿ ಯಶ ಕಂಡಿದ್ದಾರೆ. ಒಂಭತ್ತು ವಿವಿಧ ಪ್ರಾಣಿಗಳ ಕನಸನ್ನು ನುಚ್ಚುನೂರು ಮಾಡುವ ಶಬ್ದಯಂತ್ರಗಳನ್ನು ಅಭಿವೃದ್ಧಿಗೊಳಿಸಿದ್ದಾರೆ. ಆಯಾ ಪ್ರದೇಶಗಳ ವಿದ್ಯಮಾನ, ವಿಶ್ಲೇಷಣೆ ಮಾಡಿಕೊಂಡು, ಧ್ವನಿಗಳನ್ನು ಸಿದ್ಧಪಡಿಸಿ ವಾನರಬಾಧೆಯನ್ನು ತಡೆಯಬಹುದು ಎಂದು ಕಂಡುಕೊಂಡಿದ್ದಾರೆ. ಕಾಡುಪ್ರಾಣಿ ನಿಯಂತ್ರಣಕ್ಕಾಗಿ ಜೈವಶಬ್ದತರಂಗ ಯಂತ್ರ ತಯಾರಿಸುವ ಏಕೈಕ ಸಂಸ್ಥೆಯಿದು ಎಂದರೂ ತಪ್ಪಾಗಲಾರದು.
           ಬೆಂಗಳೂರು ಪೆಸ್ಟ್ ಕಂಟ್ರೋಲ್ ಸಂಸ್ಥೆಯ ಡಾ.ಪ್ರಭಾಕರರಿಂದ ಸಸ್ಯಾಧಾರಿತ 'ನೀಲ್ಬೋ' ದ್ರಾವಣದ ಕ್ಷಮತೆಯ ಪ್ರಸ್ತುತಿ. ಇದರ ಸಿಂಪಡಣೆಯಿಂದ ಉಂಟಾಗುವ ಗಾಢ ವಾಸನೆಯನ್ನು ಕಾಡುಪ್ರಾಣಿಗಳಿಗೆ ತಾಳಿಕೊಳ್ಳಲು ಕಷ್ಟ. ಮನುಷ್ಯರಿಗೆ ಅಡ್ಡಪರಿಣಾಮ ಕೊಡದ ಈ ದ್ರಾವಣವನ್ನು ಕಳೆದೆರಡು ತಿಂಗಳುಗಳಿಂದ ಪ್ರಾಯೋಗಿಕವಾಗಿ ರಾಜ್ಯದ ಕೆಲವೆಡೆ ಬಳಸುತ್ತಿದ್ದಾರೆ. ಗೋವಾದ ನೀಲೇಶ್ ಪ್ರಭು ವೆಲ್ಗಾಂವ್ಕರ್ ಕೃತಕವಾಗಿ ತಯಾರಿಸಿದ ವಿವಿಧ ತರಂಗಾಂತರಗಳ ಶಬ್ದಗಳ ಮೂಲಕ ಪ್ರಾಣಿ, ಪಕ್ಷಿಗಳ ಉಪಟಳಕ್ಕೆ ಪ್ರಾಯೋಗಿಕವಾಗಿ ಪರಿಹಾರ ಕಂಡುಕೊಂಡ ಅಡಿಕೆ ಕೃಷಿಕ.
           ಹೈದರಾಬಾದಿನ ಸಂಸ್ಥೆಯೊಂದು ಮಾರುಕಟ್ಟೆಗಿಳಿಸಿದ ಕಾಡುಹಂದಿಯನ್ನು ದೂರವಿಡುವ 'ಇಕೋಡಾನ್' ದ್ರಾವಣ ಕೇರಳದಲ್ಲಿ ಯಶಕಾಣುತ್ತಿದೆ. ಒಮ್ಮೆ ಇದನ್ನು ಬಳಸಿದರೆ ಒಂದು ತಿಂಗಳ ಕಾಲ ರಕ್ಷಣೆ ಖಚಿತ. ದ್ರಾವಣ ಅದ್ದಿದ ಸೆಣಬಿನ ಹಗ್ಗವನ್ನು ಹೊಲದ ಸುತ್ತಲೂ ಕಟ್ಟುವ ಪ್ರಯೋಗವಿದು. ಹದಿನೈದು ದಿನಕ್ಕೊಮ್ಮೆ ಹಗ್ಗಕ್ಕೆ ದ್ರಾವಣದ ಮರು ಸಿಂಪಡಣೆ. ಕಾಡು ಹಂದಿ ಮಾತ್ರವಲ್ಲ ಇಲಿ, ಹೆಗ್ಗಣಗಳೂ ವಾಸನೆಗೆ ಪರಾರಿ. ತೆಲಂಗಾಣ, ನಾಗಾಲ್ಯಾಂಡ್, ಸಿಕ್ಕಿಮ್, ಅಸ್ಸಾಂ ರಾಜ್ಯಗಳಲ್ಲಿ ಹೆಚ್ಚು ಜನಪ್ರಿಯವಾಗಿರುವ ಇಕೋಡಾನ್ ಕನ್ನಾಡಿಗೆ ಬಹುಶಃ ಈಗಷ್ಟೇ ಹೆಜ್ಜೆಯೂರಿರಬೇಕು.
          ದೇಶದಲ್ಲಿ ಕೋತಿಯಿಂದಾಗಿ ಗರಿಷ್ಠ ನಾಶ-ನಷ್ಟಗಳಾಗುವ ರಾಜ್ಯ ಹಿಮಾಚಲ ಪ್ರದೇಶ.  ಒಂದು ಅಂಕಿಅಂಶದ ಪ್ರಕಾರ ಪ್ರತಿವರುಷ ಎರಡು ಸಾವಿರ ಕೋಟಿ ರೂಪಾಯಿಗಳ ಬೆಳೆ ಅಲ್ಲಿ ನಾಶವಾಗುತ್ತಿದೆ. ಒಂದು ರಾಜ್ಯದಲ್ಲೇ ಇಷ್ಟಾಯಿತೆಂದರೆ ದೇಶಮಟ್ಟದಲ್ಲಿ ಎಷ್ಟಾಗಬಹುದು?
             ನಮ್ಮ ವಿಮಾನಯಾನ ಸಚಿವಾಲಯದ 'ರಾಷ್ಟ್ರೀಯ ಹಕ್ಕಿ ನಿಯಂತ್ರಣ ಸಮಿತಿ'ಯ ಒಂದು ಲೆಕ್ಕಾಚಾರದಂತೆ ಹಕ್ಕಿಗಳು ವಿಮಾನಕ್ಕೆ ಢಿಕ್ಕಿಯಾಗಿ ಪ್ರತಿವರುಷ ನಮ್ಮಲ್ಲಿ ಮೂರು ಸಾವಿರ ಕೋಟಿ ರೂಪಾಯಿಗೂ ಮಿಕ್ಕಿ ನಷ್ಟ ಆಗುತ್ತಿದೆಯಂತೆ! ಈ ಹಿನ್ನೆಲೆಯಲ್ಲಿ ದೇಶಕ್ಕೆ ಅನ್ನ ಕೊಡುವ ಕೃಷಿ ಕ್ಷೇತ್ರಕ್ಕೊಂದು 'ರಾಷ್ಟ್ರೀಯ ಕಾಡು ಪ್ರಾಣಿ ನಿಯಂತ್ರಣ ಸಮಿತಿ'ಯೊಂದನ್ನು ಯಾಕೆ ರೂಪಿಸಬಾರದು?
(pubished in udayavani/Nelada Nadi Coloum/14-2-2015)


Monday, February 16, 2015

ಚಳ್ಳಿಸೇವು ಮೊರಬ್ಬ

'ಚಳ್ಳಿ ಸೇವು' ತುರಿಸದ ಕೆಸುವಿನ ಪ್ರಬೇಧ. ಇದರ ದಂಡನ್ನು ಒಂದಿಂಚಿನಷ್ಟು ತುಂಡರಿಸಿ. ಮೇಲಿನ ನಾರನ್ನು ತೆಗೆಯಿರಿ. ಕುದಿಯುವ ಸಕ್ಕರೆ ಪಾಕಕ್ಕೆ ಹಾಕಿ. ರುಚಿಗೆ ನಿಂಬೆರಸ ಹಿಂಡಿ. ತಣಿದಾಗ ದಂಡು ರಸ ಹೀರಿಕೊಂಡಿರುತ್ತದೆ. ತುರಿಕೆಯ ಅಂಶವನ್ನು ನಿಂಬೆ ರಸ ಶಮನಿಸುತ್ತದೆ. ಸಿಹಿ ಮೊರಬ್ಬ ಸಿದ್ಧ. ಜನವರಿ ತಿಂಗಳಲ್ಲಿ ಜರುಗಿದ ಸೊಪ್ಪು ತರಕಾರಿ ಮೇಳದಲ್ಲಿ ಮೊರಬ್ಬವನ್ನು ಎಲ್ಲರಿಗೂ ಹಂಚಿ ಉದ್ಘಾಟನೆ ಮಾಡಲಾಗಿತ್ತು.