Wednesday, April 30, 2014

ಕರಾವಳಿಗೆ ಅಪರೂಪದ್ದಾದ "ಸಿರಿಧಾನ್ಯಗಳ ಸಿರಿ"
              ಬಂಟ್ವಾಳ ತಾಲೂಕಿನ ಅಳಿಕೆ ಸನಿಹದ ಮುಳಿಯ ತಿಮ್ಮಪ್ಪಯ್ಯ ಸ್ಮಾರಕ ವಿದ್ಯಾಲಯದಲ್ಲಿ ಎಪ್ರಿಲ್ 27ರಂದು ಸಿರಿಧಾನ್ಯ(millet)ಗಳ ಹಬ್ಬ. ದಕ್ಷಿಣ ಕನ್ನಡ ಜಿಲ್ಲೆಗೆ ಸಿರಿಧಾನ್ಯಗಳನ್ನು ಪರಿಚಯಿಸುವ ಕಾರ್ಯಕ್ರಮ. ಜೋಳ, ರಾಗಿ, ಬರಗ, ಸಾಮೆ, ನವಣೆ, ಸಜ್ಜೆ, ಹಾರಕ, ಊದಲು - ಸಿರಿಧಾನ್ಯಗಳು. ಇವುಗಳಲ್ಲಿ ರಾಗಿಯ ಬಳಕೆ ಕರಾವಳಿಯಲ್ಲಿದೆ.

             ಭತ್ತವನ್ನು ಮಿಲ್ಲಲ್ಲಿ ಅಕ್ಕಿ ಮಾಡುತ್ತೇವೆ. ತೌಡನ್ನು ನಿರ್ದಾಕ್ಷಿಣ್ಯವಾಗಿ ತೆಗೆದು ಬಿಡುತ್ತೇವೆ. ಎಲ್ಲವನ್ನೂ ಕಳಕೊಂಡು ಸೊರಗಿದ ಅಕ್ಕಿಯ 'ಬಿಳಿಯ ಅನ್ನ' ಬಟ್ಟಲಿಗೆ ಬಿದ್ದಾಗ ಉಣ್ಣುತ್ತೇವೆ. ಪೌಷ್ಟಿಕಾಂಶವನ್ನು ಕಳಕೊಂಡ ಈ ಅನ್ನವು ಶರೀರಕ್ಕೆ ಎಷ್ಟರ ಮಟ್ಟಿಗೆ ಪೌಷ್ಟಿಕತೆಯನ್ನು ನೀಡಬಹುದು? ಆದರೆ ಗ್ರಾಮೀಣ ಭಾಗಗಳಲ್ಲಿ ಕುಚ್ಚಲಕ್ಕಿಯ ಬಳಕೆ ಈಗಲೂ ಜೀವಂತವಾಗಿರುವುದು ಸಮಾಧಾನ.

              ಈ ಹಿನ್ನೆಲೆಯಲ್ಲಿ ಸಿರಿಧಾನ್ಯಗಳನ್ನು ನೋಡಿದಾಗ ಇದು ಪೌಷ್ಟಿಕಾಂಶಗಳ ಆಗರ. ನಾರಿನಿಂದ ವಿಟಮಿನ್ ತನಕ ವಿವಿಧ ವೈವಿಧ್ಯ ಆರೋಗ್ಯದಂಶಗಳು. ಅವುಗಳ ಸಂಸ್ಕರಣೆಯಲ್ಲಿನ ತೊಂದರೆಗಳು, ಒಂದು ರೂಪಾಯಿಗೆ ಪಡಿತರದಲ್ಲಿ ಸಿಗುವ ಅಕ್ಕಿ, ಇಳುವರಿ ಕೇಂದ್ರಿತ ಬೆಳೆಗಳ ಅವಲಂಬನೆ.. ಹೀಗೆ ಮೊದಲಾದ ಅಂಶಗಳು ಸಿರಿಧಾನ್ಯಗಳ ಇಳಿಲೆಕ್ಕಕ್ಕೆ ಕಾರಣ.
ಬದುಕಿನಿಂದ ಮರೆಯಾದ ಸಿರಿಧಾನ್ಯಗಳನ್ನು ಮರಳಿ ಅಡುಗೆ ಮನೆಗೆ ತರುವ, ಕರಾವಳಿಗೆ ಪರಿಚಯಿಸುವ ಆಶಯದ ಕಲಾಪವನ್ನು ಕೇಪು 'ಹಲಸು ಸ್ನೇಹಿ ಕೂಟ' ಆಯೋಜಿಸಿತ್ತು. ನೂರಕ್ಕೂ ಅಧಿಕ ಭಾಗಿ. ಒಂದೆಡೆ ಸಿರಿಧಾನ್ಯಗಳ ಕುರಿತು ಥಿಯರಿ. ಮತ್ತೊಂದೆಡೆ ಖಾದ್ಯಗಳ ಮೂಲಕ ಪ್ರಾಕ್ಟಿಕಲ್. ಹಬ್ಬದಲ್ಲಿ ಇವೆರಡೂ ಮಿಳಿತವಾಗಿತ್ತು.

           ಹಬ್ಬದಲ್ಲಿ ಅಕ್ಕಿಯ ಅನ್ನ, ಸಾರು, ಸಾಂಬಾರು, ಪಲ್ಯಗಳಿರಲಿಲ್ಲ. ಸಿರಿಧಾನ್ಯಗಳ ಖಾದ್ಯಗಳನ್ನು ನಮ್ಮೂರಿನ ಅಡುಗೆ ಮನೆಗೆ ಒಗ್ಗುವಂತೆ ಮಾಡುವ ಆಶಯದಿಂದ ರೂಪುಗೊಂಡವುಗಳು. ಊದಲು ಚಿತ್ರಾನ್ನ, ನವಣೆ ಅನ್ನ, ಸಾವೆಯ ಪಾಯಸ, ಬರಗ ಕೇಸರಿಬಾತ್, ಸಾವೆ ಮೊಸರನ್ನ, ಜೋಳದ ರೊಟ್ಟಿ, ರಾಗಿ ಪಾನೀಯ, ರಾಗಿ ಹಾಲುಬಾಯಿ, ಹಾರಕ ಉಪ್ಪಿಟ್ಟು.
ನಳಿನಿ ಸದಾಶಿವ ರಾವ್ ಮಾಯಿಲಂಕೋಡಿ ಮತ್ತು ಶಿಲ್ಪಾ ಕಜೆ ಇವರಿಂದ ಅಡುಗೆಯ ಡೆಮೋ.  ರಾಗಿ ಶ್ಯಾವಿಗೆ, ನವಣೆ ಬಿಸಿಬೇಳೆ ಬಾತ್, ಸಜ್ಜೆ ದೋಸೆ, ಸಜ್ಜೆ ತಾಲಿಪಟ್ಟು, ಜೋಳ-ರಾಗಿ-ಸಜ್ಜೆಯ ಅರಳಿಟ್ಟು, ರಾಗಿ ಕೇಕ್, ನವಣೆ ಹಲ್ವ.. ಪ್ರಾತ್ಯಕ್ಷಿಕೆಯಲ್ಲಿ ಸಿದ್ಧಗೊಂಡ ಖಾದ್ಯಗಳು ಕ್ಷಣಮಾತ್ರದಲ್ಲಿ ಪ್ರತಿನಿಧಿಗಳ ಉದರ ಸೇರಿತು! ಮಂಚಿಯ ವಸಂತ ಕಜೆಯವರು ಹಬ್ಬಕ್ಕಾಗಿಯೇ ಸಿದ್ಧಪಡಿಸಿದ 'ರಾಗಿ ಐಸ್ಕ್ರೀಮ್'ನ ರೆಸಿಪಿಯನ್ನು ಕಾಗದಕ್ಕಿಳಿಸಿಕೊಂಡವರು ಅಧಿಕ. ಬೆಂಗಳೂರಿನ ಅನಿತಾ ಪೈಲೂರು ಸಿರಿಧಾನ್ಯಗಳಿಗೆ ದನಿಯಾದರು.

              ಸಿರಿಧಾನ್ಯ ಹಬ್ಬವು ಹಲಸು ಸ್ನೇಹಿ ಕೂಟದ ಮುಳಿಯ ವೆಂಕಟಕೃಷ್ಣ ಶರ್ಮ ಮತ್ತು ಕಡಂಬಿಲ ಕೃಷ್ಣಪ್ರಸಾದ್ ಇವರ ಮೆದುಳ ಮರಿ. ಉಬರು ರಾಜಗೋಪಾಲ ಭಟ್, ಶಿರಂಕಲ್ಲು ನಾರಾಯಣ ಭಟ್, ಮಲ್ಯ ಶಂಕರನಾರಾಯಣ ಭಟ್, ವರ್ಮುಡಿ ಶಿವಪ್ರಸಾದ್, ಬೈಂಕ್ರೋಡು ಗಿರೀಶ, ವೆಂಕಟಕೃಷ್ಣ ಬೈಂಕ್ರೋಡು... ಸಾಥ್. ಹಬ್ಬದಲ್ಲಿ ಕೂಟದ ಚಟುವಟಿಕೆಗಳ ವಾರ್ತಾಪತ್ರದ ಬಿಡುಗಡೆ.

            "ಎಲ್ಲಾ ಸಿರಿಧಾನ್ಯಗಳಲ್ಲಿ ಶೇ.16-20 ನಾರಿನ ಅಂಶವಿದೆ. ಪಾಲಿಶ್ ಮಾಡಿದ ಅಕ್ಕಿಯಲ್ಲಿ ಕೇವಲ ಶೇ.4-5 ಮಾತ್ರ. ಹಾಗಾಗಿ ಸಿರಿಧಾನ್ಯಗಳನ್ನು ಬಳಸುವ ರೂಢಿಯಾಗಬೇಕು. ಪಾಲಿಶ್ ಮಾಡದ ಅಕ್ಕಿಯನ್ನು ಸೇವಿಸುವ ಪದ್ಧತಿ ಮತ್ತೆ ರೂಢಿಸಿಕೊಂಡಾಗ ಆರೋಗ್ಯ", ಬೆಂಗಳೂರಿನ ಡಾ.ಕೆ.ಸಿ.ರಘು ಅವರಿಂದ ಆಹಾರಗಳ  ಜಾಗತಿಕ ಲಾಬಿಗಳ ಪ್ರಸ್ತುತಿ.

           ಮದುವೆ, ಉಪನಯನದಂತಹ ಸಮಾರಂಭದಲ್ಲಿ ಅಡುಗೆ ಮಾಡಿದ್ದೇವೆ. ಆದರೆ ಸಿರಿಧಾನ್ಯಗಳ ಖಾದ್ಯಗಳ ತಯಾರಿ ಇದೇ ಮೊದಲು, ಎಂದು ಖುಷಿ ಪಟ್ಟವರು ಅಂದಿನ ಸೂಪಜ್ಞರಾದ ಚಂದ್ರಶೇಖರ ಭಟ್ ಮತ್ತು ಶಿವರಾಮ ಭಟ್. ಮುಚ್ಚಿರ ಹಣ್ಣು, ಮ್ಯಾಂಗೋಸ್ಟಿನ್, ಸಿಂಧು ಮಾವು. ಮಾದೃ ಚಕ್ಕೋತ, ಪುರಿಕಾಯಿ ಹಣ್ಣು, ಬದನೆ - ತೊಂಡೆ ತಳಿಗಳು, ಬಳ್ಳಿ ಬಟಾಟೆ, ಜಾಂಜೀಬಾರ್ ಬಾಳೆ, ಬೆಣ್ಣೆಹಣ್ಣು... ಹೀಗೆ ವಿವಿಧ ವೈವಿಧ್ಯಗಳ ಹಣ್ಣುಗಳ ಪ್ರದರ್ಶನ.

          ’ನನ್ನ ಊಟದಲ್ಲಿ ದಿನಕ್ಕೆ ಒಂದಾದರೂ ಸಿರಿಧಾನ್ಯಗಳ ಐಟಂನ್ನು ಹೊಂದಿಸಬೇಕೆಂದಿದ್ದೇನೆ,’ ಮಡಿಕೇರಿಯ ಇಂಜಿನಿಯರ್ ಶಿವಕುಮಾರ್ ಅಭಿಪ್ರಾಯ ವ್ಯಕ್ತಪಡಿಸಿದರೆ, ’ಅಡುಗೆ ಮನೆಯ ಬಾಗಿಲನ್ನು ತಟ್ಟುವ ಇಂತಹ ಪ್ರಾಕ್ಟಿಕಲ್ ಕಾರ್ಯಕ್ರಮಗಳು ಕಾಲದ ಆವಶ್ಯಕತೆ” ಎಂದವರು ಮಂಗಳೂರಿನ ಪಶುವೈದ್ಯ ಡಾ.ಮನೋಹರ ಉಪಾಧ್ಯ.
ಆಹಾರದಲ್ಲಿ ಹೊಸ ಹಾದಿ ತೋರಿದ ಸಿರಿಧಾನ್ಯ ಹಬ್ಬವು ಅಡುಗೆ ಮನೆಗಳಿಗೆ ಸಂದೇಶ ರವಾನಿಸಿದೆ!


"ಅಡುಗೆ ಮನೆಯಲ್ಲಿದೆ ನಮ್ಮ ಆರೋಗ್ಯ" - ಸಿರಿಧಾನ್ಯ ಹಬ್ಬದಲ್ಲಿ ಡಾ.ಕೆ.ಸಿ.ರಘು


            "ಸಿರಿಧಾನ್ಯಗಳ ಸಮೃದ್ಧಿಯ ಹಿಂದೆ ಹದಿನೈದು ಸಾವಿರ ವರುಷಗಳ ಹಿರಿಯರ ಬೆವರಿದೆ. ನಾವದನ್ನು ಕಳಕೊಳ್ಳುತ್ತಿದ್ದೇವೆ. 1940ರಲ್ಲೆ ಬೆಂಗಳೂರು ಸುತ್ತಮುತ್ತ ಹಾರಕವನ್ನು ಯಥೇಷ್ಟವಾಗಿ ಬೆಳೆಯುತ್ತಿದ್ದೆ. ಈಗದನ್ನು ಹುಡುಕುವ ಸ್ಥಿತಿಗೆ ಬಂದಿದ್ದೇವೆ. ಉಣ್ಣುವ ಆಹಾರಗಳ ಔಷಧೀಯ ಗುಣಗಳ ಕುರಿತು ಅರಿವಿಲ್ಲ. ಆಹಾರವನ್ನು ತಿನ್ನುವುದಕ್ಕೆ ಕಷ್ಟ ಪಡುತ್ತಿದ್ದೇವೆ. ಆಹಾರಕ್ಕಿಂತ ಹೆಚ್ಚು ಔಷಧಗಳನ್ನು ಸೇವಿಸುವುದಕ್ಕೆ ನಮಗೆ ಖುಷಿ. ಯಾಕೆಂದರೆ ಆರೋಗ್ಯವನ್ನು ವೈದ್ಯಕೀಯಗೊಳಿಸುವ ಎಲ್ಲಾ ವ್ಯವಸ್ಥೆಗಳು ಆ ರಂಗದಲ್ಲಿದೆ," ಎಂದು ಅಂಕಣಕಾರ ಡಾ.ಕೆ.ಎಸ್.ರಘು ಹೇಳಿದರು.

             ಅವರು ರವಿವಾರ (೨೭-೪-೨೦೧೪) ಮುಳಿಯ ತಿಮ್ಮಪ್ಪಯ್ಯ ಸ್ಮಾರಕ ಪ್ರೌಢ ಶಾಲೆಯಲ್ಲಿ ಜರುಗಿದ 'ಮನೆಮನೆಗೆ ಸಿರಿಧಾನ್ಯದಡುಗೆ' ಕಾರ್ಯಕ್ರಮದ ಸಮಾರೋಪದಲ್ಲಿ ಮಾತನಾಡುತ್ತಾ, ’ನಮ್ಮ ಆರೋಗ್ಯವು ನಮ್ಮ ಅಡುಗೆ ಮನೆಯಲ್ಲಿದೆ. ಎಲ್ಲೆಲ್ಲೋ ಹುಡುಕಬೇಕಾಗಿಲ್ಲ. ಕಾಯಿಲೆಯ ಕನ್ನಡಕ ಹಾಕಿಕೊಂಡು ಆಹಾರವನ್ನು ನೋಡುವುದಕ್ಕೆ ಯಾವಾಗ ಆರಂಭಿಸಿದೆವೋ ಅಲ್ಲಿಂದ ನಮ್ಮ ದೇಹವು ಹಲವು ಕಾಯಿಲೆಗಳ ಮೂಟೆಯಾಗಿದೆ” ಎಂದರು.

           ಅಡಿಕೆ ಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕ ಶ್ರೀ ಪಡ್ರೆಯವರು ಸಮಾರೋಪ ಭಾಷಣ ಮಾಡುತ್ತಾ, ಸಿರಿಧಾನ್ಯಗಳನ್ನು ಬಳಸಿದಾಗ ಅದು ಉಳಿಯುತ್ತದೆ. ಕರಾವಳಿಗೆ ಹೊಸತಾದ ಸಿರಿಧಾನ್ಯವನ್ನು ಒಗ್ಗಿಸಿಕೊಳ್ಳುವುದು ಸೂಕ್ತ ಮತ್ತು ಅನಿವಾರ್ಯ’ ಎಂದರು.

            ಡಾ.ಮನೋಹರ ಉಪಾಧ್ಯ ಉಪಸ್ಥಿತರಿದ್ದರು. ಸಿರಿಧಾನ್ಯಗಳ ಆಹಾರ ಮತ್ತು ಔಷಧೀಯ ಗುಣಗಳ ಕುರಿತು ಜರುಗಿದ ಮಾಹಿತಿ ಪ್ರಸ್ತುತಿಯ ಬಳಿಕ ಸಂವಾದ ಜರುಗಿತು. ಮಂಗಳೂರಿನ ಗೃಹಿಣಿ ಶ್ರೀಮತಿ ಸರೋಜ ಪ್ರಕಾಶ್ ಅನುಭವ ಹಂಚಿಕೊಂಡರು. ಕರಾವಳಿ ಭಾಗಕ್ಕೆ ಹೊಸತಾದ ಸಿರಿಧಾನ್ಯಗಳ ರುಚಿರುಚಿಯಾದ ಅಡುಗೆ ಮಾಡಿದ ಚಂದ್ರಶೇಖರ ಭಟ್ ಮತ್ತು ಶಿವರಾಮ ಭಟ್ಟರನ್ನು ಈ ಸಂದರ್ಭದಲ್ಲಿ ಗೌರವಿಸಲಾಯಿತು.

             ದಕ್ಷಿಣ ಕನ್ನಡ ಜಿಲ್ಲೆಗೆ ಕಿರುಧಾನ್ಯಗಳನ್ನು (ಮಿಲ್ಲೆಟ್) ಪರಿಚಯಿಸುವ ಯತ್ನದ ಈ ಕಾರ್ಯಕ್ರಮವನ್ನು ಉಬರು-ಕೇಪು ಹಲಸು ಸ್ನೇಹಿ ಕೂಟ ಆಯೋಜಿಸಿತ್ತು. ಮುಳಿಯ ವೆಂಕಟಕೃಷ್ಣ ಶರ್ಮ ವಂದಿಸಿದರು. ಪತ್ರಕರ್ತ ನಾ. ಕಾರಂತ ಪೆರಾಜೆ ನಿರ್ವಹಿಸಿದರು.

'ಮನೆಮನೆಗೆ ಸಿರಿಧಾನ್ಯದಡುಗೆ'             "ಉತ್ತರ ಕರ್ನಾಟದಲ್ಲಿ ಬೆಳೆಯುವ ಸಿರಿಧಾನ್ಯಗಳ ಪರಿಚಯ ಕರಾವಳಿಯಲ್ಲಿ ತೀರಾ ಕಡಿಮೆ. ಸಿರಿಧಾನ್ಯಗಳ ಖಾದ್ಯವನ್ನುಂಡ ಹಿರಿಯರು ಆರೋಗ್ಯವಂತರಾಗಿ ಬಾಳಿದ್ದಾರೆ. ಸಿರಿಧಾನ್ಯಗಳನ್ನು ಬಡವರ ಆಹಾರ ಎಂದೇ ಬಿಂಬಿಸಲಾಗುತ್ತದೆ. ಆದರೆ ಬಡವರ ಆಹಾರದ ಪೌಷ್ಟಿಕಾಂಶಗಳ ಶ್ರೀಮಂತಿಕೆಯಲ್ಲಿ ಆರೋಗ್ಯದಾಯಕ ಬದುಕಿನ ಹಾದಿಯಿದೆ. ಸಿರಿಧಾನ್ಯಗಳನ್ನು ಬೆಳೆಸಿದಾಗಲೇ ಉಳಿಯುತ್ತದೆ. ಕರಾವಳಿ ಪ್ರದೇಶಕ್ಕೆ ಒಗ್ಗಬಹುದಾದ ಬೆಳೆಯಿದು," ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ 'ಸಿರಿ' ಗ್ರಾಮೋದ್ಯೋಗ ಸಂಸ್ಥೆಯ ನಿರ್ದೇಶಕಿ ಶ್ರೀಮತಿ ಮನೋರಮಾ ಭಟ್ ಅಭಿಪ್ರಾಯಪಟ್ಟರು.

           ಅವರು ಬಂಟ್ವಾಳ ತಾಲೂಕಿನ ಅಳಿಕೆ ಸನಿಹದ ಮುಳಿಯ ತಿಮ್ಮಪ್ಪಯ್ಯ ಸ್ಮಾರಕ ವಿದ್ಯಾಲಯದಲ್ಲಿ 'ಹಲಸು ಸ್ನೇಹಿ ಕೂಟ' ಏರ್ಪಡಿಸಿದ 'ಮನೆಮನೆಗೆ ಸಿರಿಧಾನ್ಯದಡುಗೆ' ಕಾರ್ಯಕ್ರಮವನ್ನು ದೀಪಜ್ವಲಿಸಿ ಉದ್ಘಾಟಿಸಿ ಮಾತನಾಡಿದರು. ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘದ ಅಧ್ಯಕ್ಷ ಮಂಚಿ ಶ್ರೀನಿವಾಸ ಆಚಾರ್ ಸಭಾಧ್ಯಕ್ಷತೆಯನ್ನು ವಹಿಸಿ, "ಕಳೆದ ಶತಮಾನದ ಮಧ್ಯಭಾಗದಲ್ಲಿ  ಕರಾವಳಿಯಲ್ಲಿ ರಾಗಿಯ ಬೆಳೆ ಮತ್ತು ಬಳಕೆ ಯಥೇಷ್ಟವಾಗಿತ್ತು. ಈಗದು ಅಪರೂವಾಗಿದೆ. ಕರ್ನಾಟಕದ ಎಲ್ಲಾ ಬೆಳೆಗಳ ಪರಿಚಯ ನಮಗಿರಬೇಕು," ಎಂದರು.

           ಹಲಸು ಸ್ನೇಹಿ ಕೂಟದ ನಾಲ್ಕನೇ ವಾರ್ತಾಪತ್ರವನ್ನು (ಸಂ: ನಾ. ಕಾರಂತ ಪೆರಾಜೆ) ಪ್ರಯೋಗಶೀಲ ಗೃಹಿಣಿ ಶ್ರೀಮತಿ ನಳಿನಿ ಸದಾಶಿವ ರಾವ್ ಬಿಡುಗಡೆಗೊಳಿಸಿ ಮಾತನಾಡುತ್ತಾ, ಕಿರುಧಾನ್ಯಗಳು ಸತ್ವಯುತವಾದ ಆಹಾರ. ಇದು ಆರೋಗ್ಯಕ್ಕೆ ಉತ್ತಮ. ಅಕ್ಕಿ, ಗೋಧಿಗಳಿಗೆ ಪರ್ಯಾಯವಾಗಿ ಹೊಂದಿಕೊಳ್ಳುವ ಸಾಮರ್ಥ್ಯವಿದೆ, ಎಂದರು. ವೇದಿಕೆಯಲ್ಲಿ ಮುಳಿಯ ವೆಂಕಟಕೃಷ್ಣ ಶರ್ಮ, ಉಬರು ರಾಜಗೋಪಾಲ ಭಟ್ ಉಪಸ್ಥಿತರಿದ್ದರು.

         ಕಡಂಬಿಲ ಕೃಷ್ಣಪ್ರಸಾದರ ಪ್ರಸ್ತಾವನೆಯೊಂದಿಗೆ ಸ್ವಾಗತ.  ನಾ. ಕಾರಂತ ಪೆರಾಜೆ ನಿರ್ವಹಣೆ. ಶಿರಂಕಲ್ಲು ನಾರಾಯಣ ಭಟ್ ವಂದನಾರ್ಪಣೆ. ಮಲ್ಯ ಶಂಕರನಾರಾಯಣ ಭಟ್, ಬೈಂಕ್ರೋಡು ಗಿರೀಶ, ಬೈಂಕ್ರೋಡು ವೆಂಕಟಕೃಷ್ಣ, ಅನಿಲ್ ಬಳೆಂಜ ವಿವಿಧ ಕಲಾಪವನ್ನು ನಿರ್ವಹಿಸಿದರು.

         ಪ್ರಾತ್ಯಕ್ಷಿಕೆ : ಸಿರಿಧಾನ್ಯಗಳ ಪರಿಚಯ ಮಾಡಿಕೊಟ್ಟವರು,  ಬೆಂಗಳೂರಿನ ಅನಿತಾ ಪೈಲೂರು. ನಳಿನಿ ಮಾಯಿಲಂಕೋಡಿ, ಶಿಲ್ಪಾ ಕಜೆ ಸಿರಿಧಾನ್ಯಗಳ ಖಾದ್ಯಗಳನ್ನು ಪ್ರಾತ್ಯಕ್ಷಿಕೆಯಲ್ಲಿ ತಯಾರಿಸಿದರು. ಎಲ್ಲಾ ಖಾದ್ಯಗಳ ರೆಸಿಪಿಯನ್ನು ಪ್ರತ್ಯೇಕವಾಗಿ ಬರೆದಿಟ್ಟು ಪ್ರದರ್ಶಿಸಿದರು.

ಡೆಮೋದಲ್ಲಿ ಸಿದ್ಧವಾದ ಖಾದ್ಯಗಳು : ರಾಗಿ ಶ್ಯಾವಿಗೆ, ನವಣೆ ಬಿಸಿಬೇಳೆ ಬಾತ್, ಸಜ್ಜೆ ದೋಸೆ, ಸಜ್ಜೆ ತಾಲಿಪಟ್ಟು, ಜೋಳ-ರಾಗಿ-ಸಜ್ಜೆಯ ಅರಳಿಟ್ಟು, ರಾಗಿ ಕೇಕ್, ನವಣೆ ಹಲ್ವ. ಮಂಚಿಯ ವಸಂತ ಕಜೆಯವರು ವಿಶೇಷವಾಗಿ ಕಾರ್ಯಕ್ರಮಕ್ಕೆಂದೇ 'ರಾಗಿ ಹಲ್ವ' ತಯಾರಿಸಿ ಸ್ವತಃ ವಿತರಿಸಿದ್ದರು. 

Sunday, April 20, 2014

ಅಡಿಕೆ ಮರವೇರಲು ಇನ್ನು ಸುಲಭ!

                 ಎರಡು ಸ್ಟೀಲ್ ಚೌಕಟ್ಟಿನ ಉಪಕರಣದ ಸಹಾಯದಿಂದ ಕಿರಣ್ ಸರಸರ ಅಡಿಕೆ ಮರ ಏರುತ್ತಿದ್ದಾರೆ. ಇನ್ನೂರಕ್ಕೂ ಅಧಿಕ ಕೃಷಿಕರು ಕಣ್ಣೆವೆ ಮುಚ್ಚದೆ ನೋಟಕರಾಗಿದ್ದಾರೆ. ಹದಿನೈದು ಅಡಿ ಏರಿದ ಕಿರಣ್ ಸಲಕರಣೆಯಲ್ಲೇ ಕುಳಿತು ಮಾತಿಗೆ ತೊಡಗಿದಾಗ ಕೃಷಿಕರಿಂದ ಕರತಾಡನದ ಗೌರವ. ಹುಡುಕುತ್ತಿದ್ದ ಬಳ್ಳಿ ಕಾಲಿಗೆ ಸಿಕ್ಕ ಅನುಭವ. ಅಭ್ಯಾಸವಾದರೆ ಕಷ್ಟವೇನಿಲ್ಲ, ಸುಲಭದಲ್ಲಿ ಮರ ಹತ್ತಬಹುದು.  ಟು ವೀಲರ್ ಕಲಿತ ಹಾಗೆ.. ಹೀಗೆ ಒಬ್ಬೊಬ್ಬರದು ಪರಸ್ಪರ ಮಾತುಕತೆ. ಒಂದಿಬ್ಬರು ಸಾಹಸದಿಂದ ಏರಿ ಇಳಿದಾಗ ಏನನ್ನೋ ಸಾಧಿಸಿದ ಖುಷಿ.

              ಸುಳ್ಯ-ಬೆಳ್ಳಾರೆಯಲ್ಲಿ ಜರುಗಿನ ಪ್ರಾತ್ಯಕ್ಷಿಕೆಯ ಒಂದು ನೋಟ. ಕಳೆದ ವರುಷದ ಮಳೆಯ ತೀವ್ರತೆಯ ಕರಾಳ ದಿನಗಳು ಇನ್ನೂ ಮಾಸಿಲ್ಲ. ಅಡಿಕೆ ಗೊನೆಗಳಿಗೆ ಬಾಧಿಸುವ ಮಹಾಳಿರೋಗ ನಿಯಂತ್ರಣಕ್ಕೆ ಬೋರ್ಡೋ ದ್ರಾವಣ ಸಿಂಪಡಿಸಲಾಗದಷ್ಟು ಹನಿ ಕಡಿಯದ ಮಳೆ. ಪರಿಣಾಮ, ಇಳುವರಿಯಲ್ಲಿ ಗಣನೀಯ ಇಳಿತ. ಮದ್ದು ಸಿಂಪಡಿಸುವ, ಗೊನೆ ಕೀಳುವ ಜಾಣ್ಮೆ ಕೆಲಸದವರ ಅಭಾವ. ಕೆಲಸಗಳು ಸಕಾಲಕ್ಕಾಗಿದೆ ನಾಶ ನಷ್ಟ. ಈ ಸಂಕಟಕ್ಕೆ ಪರಿಹಾರ ಬೇಕಿತ್ತು ಎನ್ನುವಾಗಲೇ ಕಿರಣರ ಮರವೇರುವ ಉಪಕರಣದ ಕ್ಷಮತೆ ಕತ್ತಲೆಯಲ್ಲಿ ಮಿಣುಕಿದ ಮಿಂಚುಳ್ಳಿ.

               ಕಿರಣರ 'ಅರೆಕಾ ಟ್ರೀ ಕ್ಲೈಂಬರ್' ಸಲಕರಣೆಯಲ್ಲಿ ಮರ ಏರುತ್ತಿದ್ದಾಗ ನನ್ನೂರಿನ ಸಂಕಪ್ಪ ಗೌಡ್ರು ನೆನಪಾದರು. ಅಡಿಕೆ ಋತುವಿನಲ್ಲಿ ಸುಮಾರು 20-30 ಅಡಿ ಉದ್ದದ ಬಿದಿರಿನ ದೋಟಿಯನ್ನು ಹೆಗಲಿಗೇರಿಸಿ, ಬೆವರೊರೆಸಿಕೊಂಡು ಸಾಗುವ ದೃಶ್ಯ ಮಾಸದ ನೆನಪು. ಇವರು ತಳೆ ಮೂಲಕ ಮರವೇರಿ ಅಡಿಕೆ ಕೊಯ್ಯುವ, ಮದ್ದು ಸಿಂಪಡಿಸುವ ಸ್ಪೆಶಲಿಸ್ಟ್. ಸಂಜೆ ಪುನಃ ಅದೇ ದಾರಿಯಲ್ಲಿ ಮರಳುವ ಸಂಕಪ್ಪರಲ್ಲಿ ಮುಂದಿನ ಕೆಲಸಗಳ 'ವೈಟಿಂಗ್ ಲಿಸ್ಟ್' ಒದ್ದೆಯಾಗಿ ಎದ್ದು ಕಾಣುತ್ತಿತ್ತು.  ಇದು ಒಂದು ಕಾಲಘಟ್ಟದ ಸ್ಥಿತಿ-ಗತಿ.

               ಕೃಷಿ ಕೆಲಸಗಳಲ್ಲಿ ಕುಶಲಿಗಳ ಸಂಖ್ಯೆ ಕ್ಷೀಣಿಸುತ್ತಿದೆ. ಮರವೇರಿ ದುಡಿಯುವ ತಾಕತ್ತಿದ್ದರೂ ನಗರವನ್ನು ಸಂಪರ್ಕಿಸುವ ಬಸ್ಸಿನ ಹಾರ್ನಿಗೆ ಕಿವಿಯರಳುತ್ತದೆ. ನಗರಕ್ಕೆ ಹೋಗಿ ಕೆಲಸ ಮಾಡುತ್ತಾರೋ, ಬಿಡ್ತಾರೋ ಬೇರೆ ಮಾತು. ಸಂಜೆಯ ಬಸ್ಸಿನಲ್ಲಿ ಪುನಃ ಹಳ್ಳಿಯಲ್ಲಿಳಿದಾಗ ಸಾಧಕನೋರ್ವನ ಭಾವ ಮಿಂಚಿ ಮರೆಯಾಗುತ್ತದೆ! ಸಂಕಪ್ಪಣ್ಣನಂತಹ  ಕುಶಲಿ ಕೆಲಸಗಾರರ ಸ್ಥಾನ ತುಂಬಲು ಈಗ ಜರೂರಾಗಿ ಜನ ಬೇಕಾಗಿದ್ದಾರೆ!

                ಕಿರಣ್ ಹೇಳುತ್ತಾರೆ, ಕಾಯುತ್ತಾ ಕೂರುವ ಕಾಲ ಇದಲ್ಲ. ನಮಗೆ ಬೇಕಾದರೆ ನಾವೇ ದುಡಿಯಬೇಕು. ದುಡಿಯುವ ಮನಸ್ಸುಳ್ಳವರಿಗೆ ಪರಿಹಾರ ಇಲ್ಲಿದೆ. ಸಲಕರಣೆ ಮೂಲಕ ಮರ ಏರಿ, ಅಡಿಕೆ ಕೆಲಸಗಳನ್ನು ಮುಗಿಸಿಕೊಳ್ಳಿ. ಅಭ್ಯಾಸವಾದರೆ ನಿಮಿಷದೊಳಗೆ ಇಪ್ಪತ್ತು ಅಡಿಗೂ ಹೆಚ್ಚು ಏರಬಹುದು ಅಂದಾದ 'ಸಂಕಪ್ಪ ಗೌಡರು ಈಗಿರುತ್ತಿದ್ದರೆ ಎಷ್ಟು ಖುಷಿ ಪಡುತ್ತಿದ್ದರು' ಎಂದೆನಿಸಿತ್ತು. .


              ಕಿರಣ್ ಡಿಪ್ಲೋಮಾ ಓದಿದ್ದಾರೆ. ತಂದೆ ಕೃಷಿಮೂರ್ತಿಯವರೊಂದಿಗೆ ಕೃಷಿ ಕಾಯಕ. ಅಡಿಕೆ ಕೃಷಿಯ ವಿವಿಧ ಹಂತದ ಸಮಸ್ಯೆಗಳ ಅರಿವಿದ್ದ ಕಿರಣ್, ಅವರಲ್ಲಿ ಮರವೇರುವ ಸಲಕರಣೆಗಳ ವಿವಿಧ ನೀಲನಕ್ಷೆಗಳು ಬದಲಾಗುತ್ತಲೇ ಇದ್ದುವು. ಮೂರು ವರುಷದಲ್ಲಿ ಮೂರ್ನಾಲ್ಕು ಮಾದರಿಯ ಬಳಿಕ ಅಂತಿಮ ಉತ್ಪನ್ನ ಹೊರಬಂದಿದೆ.


               ಸಲಕರಣೆಯ ಯಶದ ಹಿಂದೆ ಕೊಯಂಬತ್ತೂರಿನ ವೆಂಕಟ್ ದಾಮೋದರ ನಾಯ್ಡು ಸಹಕಾರ ದೊಡ್ಡದು. ಅವರು ತೆಂಗು, ತಾಳೆ ಮರವೇರುವ ಸಲಕರಣೆಯನ್ನು ತಯಾರಿಸಿ, ಪ್ರಶಸ್ತಿ ಪಡೆದವರು.  ಅವರ ನಿರ್ದೇಶನದಲ್ಲಿ ಅಡಿಕೆ ಮರ ಏರುವ ಸಲಕರಣೆ ಅಭಿವೃದ್ಧಿ. ಆರರಿಂದ ಏಳು ಕಿಲೋ ಭಾರದ ಎರಡು ಸ್ಟೀಲ್ ಚೌಕಟ್ಟುಗಳೇ ಸಲಕರಣೆಯ ಹೃದಯ. ಸೊಂಟದ ಎತ್ತರಕ್ಕೆ ಒಂದು, ಇದಕ್ಕಿಂತ ಎರಡಡಿ ಕೆಳಗೆ ಇನ್ನೊಂದು ಚೌಕಟ್ಟು. ಮೇಲಿನ ಚೌಕಟ್ಟಿನಲ್ಲಿ ಕುಳಿತು, ಕೆಳಗಿನ ಚೌಕಟ್ಟನ್ನು ಕಾಲಿನಲ್ಲಿ ಮೇಲೆಳೆದು ಕೊಂಡು ಏರುತ್ತಾ ಹೋಗಬಹುದು. ಚೌಕಟ್ಟಿನಲ್ಲಿರುವ ರಬ್ಬರ್ ಬ್ರಶ್ಗಳು ಮೇಲೇರಿನ ಚೌಕಟ್ಟುಗಳನ್ನು ಮರಕ್ಕೆ ಅಪ್ಪಿ ಹಿಡಿದುಕೊಳ್ಳುತ್ತದೆ. ಒಂದು ಸಲಕ್ಕೆ ಎರಡೂ ಎರಡೂವರೆ ಅಡಿಯಷ್ಟು ಏರುತ್ತಾ ಹೋಗಬಹುದು. ತಕ್ಷಣ ಸಲಕರಣೆಯನ್ನು ಕಳಚಿ ಇನ್ನೊಂದು ಮರಕ್ಕೆ ಜೋಡಿಸುವ ಸರಳತೆ.


                 ಕಿರಣ್ ಹೇಳುತ್ತಾರೆ, ಮರದ ಗಾತ್ರಕ್ಕೆ ಹೊಂದಿಸಿಕೊಳ್ಳುವಂತೆ ಮಾಡುವ ಸಿಸ್ಟಮ್ ಇದೆ. ಚೌಕಟ್ಟಿನ ಸ್ಟೀಲು ಪಟ್ಟಿಗಳು, ಸ್ಪ್ರಿಂಗುಗಳು, ಸೆಲ್ಫ್ ಲಾಕಿಂಗ್ ಫಿನ್ಗಳು, ರಬ್ಬರ್ ಬುಶ್ಗಳು ನೈಲಾನ್ ಪಟ್ಟಿ ಆಸನ, ನೈಲನ್ ಬೆಲ್ಟ್ಗಳು. ಈ ಕಚ್ಚಾವಸ್ತುಗಳಲ್ಲಿ ತಯಾರಾಗುವ ಉಪಕರಣದ ಗುಣಮಟ್ಟದೊಂದಿಗೆ ರಾಜಿಯಿಲ್ಲ. ಎನ್ನುವ ಕಿರಣ್, "ಬೆಲೆ ಹತ್ತುಸಾವಿರದೈನೂರು ರೂಪಾಯಿ ಅಂದಾಗ ಹೆಚ್ಚಾಯಿತು ಅನ್ನಿಸುತ್ತೆ. ಆದರೆ ಉಪಕರಣಕ್ಕೆ ಕಳಪೆ ಕಚ್ಚಾವಸ್ತು ಬಳಸಿ ದರ ಕಡಿಮೆ ಮಾಡಿದೆ ಎಂದಿಟ್ಟುಕೊಳ್ಳಿ.  ಮರ ಏರಿ ಇಳಿಯುವಷ್ಟರದ ತನಕ ಏರಿದವರ ಆಯುಷ್ಯಕ್ಕೆ ನಾನು ಜವಾಬ್ದಾರಿಯಲ್ವಾ. ಅದರೊಂದಿಗೆ ನಾನ್ಯಾಕೆ ಆಟವಾಡಲಿ?" ಎನ್ನುತ್ತಾರೆ. ಕಿರಣ್ ತೀರ್ಥಹಳ್ಳಿ  ತಾಲೂಕಿನ ಕೋಣಂದೂರು ಸನಿಹದ ಮಲ್ಲೇಸರದವರು. ಓದಿದ್ದು ಡಿಪ್ಲೋಮಾ. ಕೃಷಿಯಲ್ಲಿ ಹೊಸತನ್ನು ಹುಡುಕುವ ಜಾಯಮಾನ. ತನ್ನ ತೋಟದಲ್ಲೇ ಪ್ರಥಮ ಪ್ರಯೋಗ.


                  ಬೇಸಿಗೆಗೆ ಓಕೆ, ಮಳೆಗಾಲಕ್ಕೆ ಬಳಕೆ ಕಷ್ಟವಲ್ಲವೇ? ಬಹುತೇಕ ಕೃಷಿಕರ ಪ್ರಶ್ನೆ. ಮಳೆಗಾಲದಲ್ಲಿ ಮರ ಜಾರುತ್ತದೆ. ಚೌಕಟ್ಟಿನಲ್ಲಿರುವ ರಬ್ಬರ್ ಬುಶ್ ಸಲಕರಣೆಯ ಪ್ರಧಾನಾಂಶ. ಅದಕ್ಕೆ ಗೋಣಿ ನಾರನ್ನು ಸುತ್ತಿದರೆ ಸುಲಭದಲ್ಲಿ ಜಾರದು. ಹೆಚ್ಚು ಮಳೆ ಬೀಳುವ ನಮ್ಮೂರಿನ ಅಡಿಕೆ ಮರಗಳಿಗೆ ಮಳೆಗಾಲದಲ್ಲಿ ಏರಿದ್ದೇನೆ. ಹೇಳುವಂತಹ ಸಮಸ್ಯೆ ಬಂದಿಲ್ಲ. ಬೇಸಿಗೆಯಲ್ಲಿ ಸರಸರನೆ ಏರುವಂತಹ ಹುಮ್ಮನಸ್ಸು ಮಳೆಗಾಲದಲ್ಲಿ ಬೇಡ. ಸ್ವಲ್ಪ ಜಾಗ್ರತೆ ವಹಿಸಿದರೆ ಕಷ್ಟವಲ್ಲ. ರಬ್ಬರ್ ಬುಶ್ಶಿನ ಬದಲಿಗೆ ಮೆಟಲಿನದು ಮಾಡಬಹುದೇನೋ ಮೊದಲಾದ ಸೂಕ್ಷ್ಮ ವಿಚಾರಗಳನ್ನು ಮುಚ್ಚುಮರೆಯಿಲ್ಲದೆ ಹೇಳುತ್ತಾರೆ.

                 ಕೃಷಿ ಯಾಂತ್ರೀಕರಣದ ವಿಚಾರ ಬಂದಾಗಲೆಲ್ಲಾ ಸಬ್ಸಿಡಿಗಳ ಮಾತು ಬಾರದೆ ಮುಂದೆ ಹೋಗದು. ಈ ಸಲಕರಣೆಯೂ ಸಬ್ಸಿಡಿಗೆ ಸಿಗುವ ಹಾಗೆ ಮಾಡಬಹುದಲ್ಲಾ..? ಸಹಜ ಪ್ರಶ್ನೆ. ಉಪಕರಣದ ದರವನ್ನು ದುಪ್ಪಟ್ಟು ಮಾಡಿ, ಅದರಲ್ಲಿ ಐವತ್ತು ಶೇಕಡಾ ಸಬ್ಸಿಡಿ ಅಂತ ತೆಕ್ಕೊಳ್ಳುವ ಬದಲು, ಆ ಬೆಲೆಗೆ ನಾನೇ ಒದಗಿಸುತ್ತೇನಲ್ಲಾ! ಜತೆಗೆ ಸಬ್ಸಿಡಿ ಫೈಲುಗಳ ಹಿಂದೆ ಓಡುವ ಕೆಲಸವೂ ತಪ್ಪಿತು. ಇಲಾಖಾ ಮೇಜುಗಳ ಮುಂದೆ ಗಂಟೆಗಟ್ಟಲೆ ಸಮಯ ಕೊಲ್ಲುವ ಸಂದರ್ಭವೂ ಬರುವುದಿಲ್ಲ. ಸಬ್ಸಿಡಿ ಬೇಕೇ ಬೇಕು ಎಂದಾರೆ ಸಂಬಂಧ ಪಟ್ಟ ಅಧಿಕಾರಿಗಳಿಗೆ ಕೃಷಿಕರೇ ಒತ್ತಾಯಿಸಬೇಕು ಅಂದಾಗ ಸಬ್ಸಿಡಿಯ ಮಾತು ಮೌನವಾಯಿತು!


                  ಅಡಿಕೆ ಸಂಶೋಧನೆ ಮತ್ತು ಅಭಿವೃದ್ಧಿ ಪ್ರತಿಷ್ಠಾನದ ವತಿಯಿಂದ ವಿಟ್ಲದ cpcri ರ್ತೋಟದಲ್ಲಿ ಎಪ್ರಿಲ್ ಮೊದಲ ವಾರ, ಸುಳ್ಯ ತಾಲೂಕಿನ ಬೆಳ್ಳಾರೆಯಲ್ಲಿ ಎರಡನೇ ವಾರದ ಪ್ರಾತ್ಯಕ್ಷಿಕೆ. ಫೇಸ್ಬುಕ್ಕಿನ ಅಗ್ರಿಕಲ್ಚರಿಸ್ಟ್ ಗುಂಪು ಪ್ರಾತ್ಯಕ್ಷಿಕೆಯ ಹೊಣೆ ಹೊತ್ತಿತ್ತು. ಬೆಳ್ಳಾರೆ ಕೃಷಿಕರ ವೇದಿಕೆಯ ಹೆಗಲೆಣೆ.


               ಇನ್ನೂರೈವತ್ತಕ್ಕೂ ಮಿಕ್ಕಿದ ಅಸಕ್ತರಿಗೆ ಆಮಂತ್ರಣ ಪತ್ರ ನೀಡಿಲ್ಲ. ಜಾಹೀರಾತು ಪ್ರಕಟಿಸಿಲ್ಲ. ಅಗ್ರಿಕಲ್ಚರಿಸ್ಟ್ ಗುಂಪಿನೊಳಗೆ ಸಂವಹನಗೊಂಡ ವಿಚಾರ ಕೃಷಿಕರ ಮಧ್ಯೆ ಮಾಹಿತಿ ಹಂಚಿತ್ತು. ಹಾದಿ ತಪ್ಪಿಸುತ್ತಿದೆ ಎಂಬ ಆರೋಪವನ್ನಂಟಿಸಿಕೊಂಡ ಫೇಸ್ಬುಕ್ಕನ್ನು ಉತ್ತಮ ಉದ್ದೇಶಕ್ಕೆ ಬಳಸಿಕೊಂಡರೆ ನಿಜಕ್ಕೂ ಅದೊಂದು ಸಶಕ್ತ ಮಾಧ್ಯಮ. ಬರೇ ಲೈಕ್ಗಳಿಗೆ ಅಂಟಿಕೊಳ್ಳದೆ, ಕಮೆಂಟಿಗಾಗಿ ಕಮೆಂಟನ್ನು ಬರೆಯುವ ಚಾಳಿಯಿಂದ ದೂರವಿದ್ದ ಬಹುತೇಕರಿಗೆ ಗುಂಪಿನ ಚಟುವಟಿಕೆ ಆಪ್ತವಾಗಿದೆ.


               ಸೀಪಿಸಿಆರ್ಐ ಪ್ರಾತ್ಯಕ್ಷಿಕೆಯಲ್ಲಿ ಕ್ಯಾಂಪ್ಕೋ ಅಧ್ಯಕ್ಷ ಕೊಂಕೋಡಿ ಪದ್ಮನಾಭರು ಉಪಕರಣದ ಮೂಲಕ ತಾನೇ ಸ್ವತಃ ಅಡಿಕೆ ಮರವೇರಿ, ತನಗೆ ಅರುವತ್ತೆರಡು ವರುಷವಾಯಿತು ಎನ್ನುವುದನ್ನು ಮರೆತರು! ಸಲೀಸಾಗಿ ಏರುವ ಉಪಕರಣದ ಕ್ಷಮತೆಯನ್ನು ಶ್ಲಾಘಿಸಿದರು. ಅಡಿಕೆ ಸಂಸ್ಥೆಗಳು ಕನಿಷ್ಠ ಇಂತಹ ಪ್ರೋತ್ಸಾಹವನ್ನು ಕಿರಣರಿಗೆ ನೀಡಿದರೆ ಅವರ ಉಪಕರಣ ಕೃಷಿಕರ ಜಗಲಿಯೇರಬಹುದು. ಪ್ರಕೃತ ಅಡಿಕೆ ಮರವೇರುವ ಸರಳ ಸಾಧನೆಕ್ಕೆ ಕೃಷಿಕರಿಗೆ ಅಂಗೀಕಾರ ಸಿಕ್ಕಿದೆ.


              ತೆಂಗು ಅಭಿವೃದ್ಧಿ ಮಂಡಳಿಯು ಮೂರು ವರುಷದಿಂದ 'ಫ್ರೆಂಡ್ಸ್ ಆಫ್ ಕೊಕೊನಟ್ ಟ್ರೀಸ್' ಹೆಸರಿನ ಯೋಜನೆಯಡಿ ದೇಶದಾದ್ಯಂತ 21483 ಮಂದಿಗೆ ತೆಂಗು ಮರವೇರಲು ತರಬೇತಿ ನೀಡಿದೆ! ನಾವೂ ಚಿಕ್ಕ ರೀತಿಯಲ್ಲಾದರೂ ಅಡಿಕೆ ಮರ ಏರುವ ತರಬೇತಿಯನ್ನು ಯಾಕೆ ನಡೆಸಬಾರದು - ಎನ್ನುವ ಪ್ರಶ್ನೆಯನ್ನು ಅಡಿಕೆ ಪತ್ರಿಕೆಯ ಸಂಪಾದಕೀಯದಲ್ಲಿ ಶ್ರೀ ಪಡ್ರೆಯವರು ಮುಂದಿಟ್ಟಿದ್ದಾರೆ. ಇದನ್ನು ಸವಾಲಾಗಿ ಸ್ವೀಕರಿಸುವ ಅನಿವಾರ್ಯವಿದೆ.