Wednesday, April 30, 2014

"ಅಡುಗೆ ಮನೆಯಲ್ಲಿದೆ ನಮ್ಮ ಆರೋಗ್ಯ" - ಸಿರಿಧಾನ್ಯ ಹಬ್ಬದಲ್ಲಿ ಡಾ.ಕೆ.ಸಿ.ರಘು






            "ಸಿರಿಧಾನ್ಯಗಳ ಸಮೃದ್ಧಿಯ ಹಿಂದೆ ಹದಿನೈದು ಸಾವಿರ ವರುಷಗಳ ಹಿರಿಯರ ಬೆವರಿದೆ. ನಾವದನ್ನು ಕಳಕೊಳ್ಳುತ್ತಿದ್ದೇವೆ. 1940ರಲ್ಲೆ ಬೆಂಗಳೂರು ಸುತ್ತಮುತ್ತ ಹಾರಕವನ್ನು ಯಥೇಷ್ಟವಾಗಿ ಬೆಳೆಯುತ್ತಿದ್ದೆ. ಈಗದನ್ನು ಹುಡುಕುವ ಸ್ಥಿತಿಗೆ ಬಂದಿದ್ದೇವೆ. ಉಣ್ಣುವ ಆಹಾರಗಳ ಔಷಧೀಯ ಗುಣಗಳ ಕುರಿತು ಅರಿವಿಲ್ಲ. ಆಹಾರವನ್ನು ತಿನ್ನುವುದಕ್ಕೆ ಕಷ್ಟ ಪಡುತ್ತಿದ್ದೇವೆ. ಆಹಾರಕ್ಕಿಂತ ಹೆಚ್ಚು ಔಷಧಗಳನ್ನು ಸೇವಿಸುವುದಕ್ಕೆ ನಮಗೆ ಖುಷಿ. ಯಾಕೆಂದರೆ ಆರೋಗ್ಯವನ್ನು ವೈದ್ಯಕೀಯಗೊಳಿಸುವ ಎಲ್ಲಾ ವ್ಯವಸ್ಥೆಗಳು ಆ ರಂಗದಲ್ಲಿದೆ," ಎಂದು ಅಂಕಣಕಾರ ಡಾ.ಕೆ.ಎಸ್.ರಘು ಹೇಳಿದರು.

             ಅವರು ರವಿವಾರ (೨೭-೪-೨೦೧೪) ಮುಳಿಯ ತಿಮ್ಮಪ್ಪಯ್ಯ ಸ್ಮಾರಕ ಪ್ರೌಢ ಶಾಲೆಯಲ್ಲಿ ಜರುಗಿದ 'ಮನೆಮನೆಗೆ ಸಿರಿಧಾನ್ಯದಡುಗೆ' ಕಾರ್ಯಕ್ರಮದ ಸಮಾರೋಪದಲ್ಲಿ ಮಾತನಾಡುತ್ತಾ, ’ನಮ್ಮ ಆರೋಗ್ಯವು ನಮ್ಮ ಅಡುಗೆ ಮನೆಯಲ್ಲಿದೆ. ಎಲ್ಲೆಲ್ಲೋ ಹುಡುಕಬೇಕಾಗಿಲ್ಲ. ಕಾಯಿಲೆಯ ಕನ್ನಡಕ ಹಾಕಿಕೊಂಡು ಆಹಾರವನ್ನು ನೋಡುವುದಕ್ಕೆ ಯಾವಾಗ ಆರಂಭಿಸಿದೆವೋ ಅಲ್ಲಿಂದ ನಮ್ಮ ದೇಹವು ಹಲವು ಕಾಯಿಲೆಗಳ ಮೂಟೆಯಾಗಿದೆ” ಎಂದರು.

           ಅಡಿಕೆ ಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕ ಶ್ರೀ ಪಡ್ರೆಯವರು ಸಮಾರೋಪ ಭಾಷಣ ಮಾಡುತ್ತಾ, ಸಿರಿಧಾನ್ಯಗಳನ್ನು ಬಳಸಿದಾಗ ಅದು ಉಳಿಯುತ್ತದೆ. ಕರಾವಳಿಗೆ ಹೊಸತಾದ ಸಿರಿಧಾನ್ಯವನ್ನು ಒಗ್ಗಿಸಿಕೊಳ್ಳುವುದು ಸೂಕ್ತ ಮತ್ತು ಅನಿವಾರ್ಯ’ ಎಂದರು.

            ಡಾ.ಮನೋಹರ ಉಪಾಧ್ಯ ಉಪಸ್ಥಿತರಿದ್ದರು. ಸಿರಿಧಾನ್ಯಗಳ ಆಹಾರ ಮತ್ತು ಔಷಧೀಯ ಗುಣಗಳ ಕುರಿತು ಜರುಗಿದ ಮಾಹಿತಿ ಪ್ರಸ್ತುತಿಯ ಬಳಿಕ ಸಂವಾದ ಜರುಗಿತು. ಮಂಗಳೂರಿನ ಗೃಹಿಣಿ ಶ್ರೀಮತಿ ಸರೋಜ ಪ್ರಕಾಶ್ ಅನುಭವ ಹಂಚಿಕೊಂಡರು. ಕರಾವಳಿ ಭಾಗಕ್ಕೆ ಹೊಸತಾದ ಸಿರಿಧಾನ್ಯಗಳ ರುಚಿರುಚಿಯಾದ ಅಡುಗೆ ಮಾಡಿದ ಚಂದ್ರಶೇಖರ ಭಟ್ ಮತ್ತು ಶಿವರಾಮ ಭಟ್ಟರನ್ನು ಈ ಸಂದರ್ಭದಲ್ಲಿ ಗೌರವಿಸಲಾಯಿತು.

             ದಕ್ಷಿಣ ಕನ್ನಡ ಜಿಲ್ಲೆಗೆ ಕಿರುಧಾನ್ಯಗಳನ್ನು (ಮಿಲ್ಲೆಟ್) ಪರಿಚಯಿಸುವ ಯತ್ನದ ಈ ಕಾರ್ಯಕ್ರಮವನ್ನು ಉಬರು-ಕೇಪು ಹಲಸು ಸ್ನೇಹಿ ಕೂಟ ಆಯೋಜಿಸಿತ್ತು. ಮುಳಿಯ ವೆಂಕಟಕೃಷ್ಣ ಶರ್ಮ ವಂದಿಸಿದರು. ಪತ್ರಕರ್ತ ನಾ. ಕಾರಂತ ಪೆರಾಜೆ ನಿರ್ವಹಿಸಿದರು.

1 comments:

SADASHIVA said...

ಉತ್ತಮ ಕಾರ್ಯಕ್ರಮ ಇದನ್ನು ಸಂಘಟಿಸಿದ ಹಲಸು ಸ್ನೇಹೀ ಕೂಟ ದವರನ್ನು ಮೆಚ್ಚಬೇಕು ಮತ್ತು ಎಲ್ಲರಿಗೆ ಅಭಿನಂದನಗಳು . ಸಿರಿಧಾನ್ಯದ ಬಳಕೆಯ ಬಗ್ಗೆ ಉತ್ತಮ ಮಾಹಿತಿ ಮತ್ತು ಅದರ ಉಪಯುಕ್ತತೆಯ ಬಗ್ಗೆ ತಜ್ಞರ ಅಭಿಪ್ರಾಯ ಗಳು ನಮ್ಮೆಲ್ಲರನ್ನೂ ಎಚ್ಚರಿಸಬಹುದು ಮತ್ತು ನಮ್ಮೆ ಹೊರದೇಶದ ತರಕಾರಿ, ಧಾನ್ಯ,ಇಂತಾದವುಗಳ ವ್ಯಾಮೋಹಕ್ಕೆ ಒಂದು ಕಡಿವಾಣ ಹಾಕುವಲ್ಲಿ ಸಫಲವಾಗಬಹುದೇನೋ ..

Post a Comment