Sunday, November 29, 2009

ಎಳನೀರ ಕಣ್ಣೀರಿಗೆ ಶಾಪಮೋಕ್ಷ!

ತುಮಕೂರು ಜಿಲ್ಲೆಯ ಬಿಳಿಗೆರೆಯ 'ಎಳನೀರು ಮೇಳ'ಕ್ಕೆ ಹೋಗುತ್ತಿದ್ದಾಗ ಮಾರ್ಗ ಮಧ್ಯದಲ್ಲಿ ಬಸ್ಸಿಗೆ ವಿರಾಮವಿತ್ತು. ನಮ್ಮ ಸರಕಾರಿ ಬಸ್ಸೇ ಹಾಗಲ್ವಾ.. 'ಅವರಿಗಿಷ್ಟ ಬಂದಲ್ಲಿ ನಿಲುಗಡೆ, ಊಟ-ತಿಂಡಿ'! 'ಬನ್ರಿ..ಎಳನೀರು ಕುಡೀರಿ..ಇದು ಊರಿದ್ದು..ಹದಿನಾರು ರೂಪಾಯಿ. ಇದು ಹಾಸನ ಕಡೆಯವು..ಹತ್ತೇ ರೂಪಾಯಿ..' ಎಳನೀರನ್ನು ಪೇರಿಸಿಟ್ಟ ಗಾಡಿವಾಲಾನಿಂದ ನಾನ್ಸ್ಟಾಪ್ ಉವಾಚ!

'ಎಳನೀರಿಗೆ ಹದಿನಾರು ರೂಪಾಯಿ'! 'ಗೆಂದಾಳಿ'ಗೆ ಇಪ್ಪತ್ತಂತೆ! ಇದೇ ಗುಂಗಿನಲ್ಲಿ ಬಿಳಿಗೆರೆ ಎಳನೀರು ಮೇಳ ತಲುಪಿದಾಗ, 'ಬನ್ರಿ ಕೇವಲ ಐದು ರೂಪಾಯಿ.. ಮೇಳದ ಆಫರ್.. ಮತ್ತದೇ ಕೂಗು! ಮತ್ತೆ ತಿಳಿಯಿತು - 'ಇಲ್ಲಿ ಎಳನೀರು ಬಳಕೆಯೇ ಇಲ್ಲ.' ದಶಕಕ್ಕಿಂತಲೂ ಹಿಂದೆ ತೆಂಗಿನಕಾಯಿಯನ್ನು ಕೇಳುವವರು ಇಲ್ಲದೇ ಇದ್ದ ಹೊತ್ತಲ್ಲಿ ದಕ್ಷಿಣ ಕನ್ನಡದಲ್ಲಿ 'ಬೊಂಡ ಮೇಳ' ಯಶಸ್ವಿಯಾಗಿತ್ತು.

'ಸರ್.. ಇಲ್ಲಿ ಎಳ್ನೀರ್ ಕುಡಿಯೋರಿಲ್ಲ. ಎಳ್ನೀರ್ ಕೀಳೋದು ಬದುಕಿನಲ್ಲಿ ದಟ್ಟ ದರಿದ್ರ ಸ್ಥಿತಿ ತಲುಪಿರೋರು ಮಾತ್ರ ಎಂಬ ಭಾವನೆ ಇದೆ. ಒಂದು ವೇಳೆ ಕುಡಿಯುವುದಿದ್ದರೂ ಮರದಿಂದ ಬಿದ್ದವನ್ನು ಮಾತ್ರ ಕುಡಿಯೋದು' ಮೇಳದ ಸಂಘಟಕ ಬಿಳಿಗೆರೆ ಕೃಷ್ಣಮೂರ್ತಿ ಆಶಯವನ್ನು ಕಟ್ಟಿಕೊಟ್ಟರು.

ತುಮಕೂರು ಜಿಲ್ಲೆಯಲ್ಲಿ ತೆಂಗನ್ನು ಕೊಬ್ಬರಿ ಮಾಡಿ ಮಾರುವ ಪಾರಂಪರಿಕ ಪದ್ಧತಿಗೆ ಜನ ಒಗ್ಗಿಹೋಗಿದ್ದಾರೆ. ಆರ್ಥಿಕವಾಗಿ ಕೃಷಿಕರಿಗಿದು ಆಧಾರ. ಇಲ್ಲಿನ ಬಹುಪಾಲು ಕೊಬ್ಬರಿಗೆ ಉತ್ತರ ಭಾರತ ಮಾರುಕಟ್ಟೆ. ತುಮಕೂರು, ಪಕ್ಕದ ಹಾಸನ ಜಿಲ್ಲೆಯವರೆಗಿನ ಕೊಬ್ಬರಿಗಳೆಲ್ಲಾ 'ತುಮಕೂರು ಕೊಬ್ಬರಿ' ಅಂತಲೇ ಪ್ರಸಿದ್ಧ.

ದರದಲ್ಲಿ ಸ್ಥಿರತೆಯಿಲ್ಲ. ಈ ವರುಷ ಬಂಪರ್ ಬೆಲೆಯಾದರೆ ಮುಂದಿನ ವರುಷ ಕಣ್ಣೀರು! ಎಲ್ಲವೂ ಉದ್ದಿಮೆಗಳ ಮತ್ತು ವ್ಯಾಪಾರಿಗಳ ಮುಷ್ಠಿಯೊಳಗೆ! 'ಕೊಬ್ಬರಿ ಕ್ವಿಂಟಾಲಿಗೆ ಎರಡೂವರೆ ಸಾವಿರ ಆದುದೂ ಇದೆ. ಕನಿಷ್ಠ ಆರು ಸಾವಿರವಾದರೂ ಸಿಗಲೇ ಬೇಕು. ಪ್ರಸ್ತುತ ನಾಲ್ಕೂವರೆ ಸಾವಿರದ ಹತ್ತಿರ ದರವಿದೆ' ಅಂಕಿಅಂಶ ಮುಂದಿಡುತ್ತಾರೆ ಬಿಳಿಗೆರೆಯ ಕೃಷಿಕ ಮುಹಾಲಿಂಗಯ್ಯ.

ಹತ್ತಿರದಲ್ಲೇ ಹೆದ್ದಾರಿಯಿದ್ದರೂ ಎಳನೀರು ಮಾರಾಟದ ಒಂದೇ ಒಂದು 'ಗಾಡಿ' ಕಾಣ ಸಿಗುವುದಿಲ್ಲ. 'ಎಳನೀರಿನಲ್ಲಿ ನಷ್ಟ - ಕೊಬ್ಬರಿಯಲ್ಲಿ ಲಾಭ' ಎನ್ನುವ ಭಾವನೆ. ಎಳನೀರಿನಿಂದ ಕಾಯಿ ಆಗಲು ಏಳೆಂಟು ತಿಂಗಳು ಬೇಕು. ಕಿತ್ತ ಕಾಯಿಗೆ ಮತ್ತೆ ಅಷ್ಟೇ ತಿಂಗಳು ಗೃಹಬಂಧನ. ಸುಮಾರು ಒಂದೂವರೆ ವರುಷದ ಪ್ರಕ್ರಿಯೆ. ನಂತರವಷ್ಟೇ ಇಳಿಸಿ ಸಿಪ್ಪಿ ಬಿಚ್ಚಿ, ಗೆರಟೆ ಕಳಚಿದ ಕೊಬ್ಬರಿ ಮಾರುಕಟ್ಟೆಗೆ.

ಮೇಳದಲ್ಲಿ ಭಾಗವಹಿಸಿದ ಮೀಯಪದವಿಯ ಡಾ.ಡಿ.ಕೆ.ಚೌಟ ಅವರು ಮುಂದಿಟ್ಟ ಸೂಕ್ಷ್ಮ ಲೆಕ್ಕಾಚಾರವು ಮೇಳ ಮುಗಿದ ನಂತರವೂ ಮಾತಿನ ವಿಷಯವಾಗಿತ್ತು - 'ಕೊಬ್ಬರಿಗಿಂತ ಎಳನೀರು ಮಾರಾಟ ಮಾಡಿದರೆ ಒಂದೂವರೆ ವರುಷ ಮೊದಲೇ ಹಣ ಸಿಗುತ್ತದೆ. ಕೊಬ್ಬರಿ ಮಾಡಿಯೇ ಮಾರಾಟ ಮಾಡಬೇಕೆಂದರೆ ಕಾಯಬೇಕು. ನಿರೀಕ್ಷಿತ ದರ ಸಿಕ್ಕರೆ ಓಕೆ. ಇಲ್ಲದಿದ್ದರೆ ಅದೃಷ್ಟವನ್ನು ಯಾಕೆ ಹಳಿಯಬೇಕು? ಎಳನೀರಿಗೆ ಆರು ರೂಪಾಯಿ ಸಿಕ್ಕರೆ, ಕೊಬ್ಬರಿಗೆ ಏಳು ಸಿಗಲೇ ಬೇಕಲ್ವಾ.. ಅಷ್ಟು ಸಿಗುತ್ತಾ? ನನ್ನ ಅನುಭವದಂತೆ ಎಳನೀರು ಕಿತ್ತರೆ ಮುಂದಿನ ಋತುವಿನಲ್ಲಿ ಹೆಚ್ಚು ಕಾಯಿ ಹಿಡಿವ ಕ್ಷಮತೆಯನ್ನು ಮರವೇ ವೃದ್ಧಿಸಿಕೊಳ್ಳುತ್ತದೆ. ತೆಂಗು ಮಾಗುವ ತನಕದ ನೀರು-ಗೊಬ್ಬರ ಪರೋಕ್ಷ ಉಳಿತಾಯವಲ್ವಾ'.

ಇಲ್ಲಿ ಎಳನೀರು ಮಾರಲು ಕೆಲವು ಪ್ರಾಕ್ಟಿಕಲ್ ಸಮಸ್ಯೆಯಿದೆ. ಮರವೇರಲು ಜನ ಸಿಕ್ಕದೇ ಇರುವುದು ಒಂದಾದರೆ, ಎಳನೀರು ಮಾರುವವ ದರಿದ್ರ ಸ್ಥಿತಿಗೆ ತಲುಪಿದವ ಎಂಬ ಮಾನಸಿಕ ತಡೆ! (ಮೆಂಟಲ್ ಬ್ಲಾಕ್) ಈ ಸ್ಥಿತಿಯನ್ನು ಮೇಳದ ಸಾರಥ್ಯ ವಹಿಸಿದ ಕೃಷ್ಣ ಮೂರ್ತಿ, ವಿಶ್ವನಾಥ್ ಮತ್ತು ಸಮಾನಾಸಕ್ತರು ಬದಲಾಯಿಸುವ ನಿರ್ಧಾರ ಮಾಡಿದರು. ಬಿಳಿಗೆರೆಯಲ್ಲೇ 'ಎಳನೀರ್ ಊರ್' ಎಂಬ ಮಾರಾಟ ಮಳಿಗೆ ಆರಂಭ. 'ಎಳನೀರು ಕುಡಿಯಿರಿ - ಆರೋಗ್ಯ ವೃದ್ಧಿಸಿಕೊಳ್ಳಿ' ಅಂತ ಪ್ರಚಾರ ಫಲಕಗಳು. 'ಕೆಲವರು ಗೇಲಿ ಮಾಡಿದರು - ಇನ್ನೂ ಕೆಲವರು ಮುಖ ತಿರುಗಿಸಿದರು' ನೆನಪಿಸುತ್ತಾರೆ ಕೃಷ್ಣ ಮೂರ್ತಿ.

ಮಾರಾಟ ವ್ಯವಸ್ಥೆಗಾಗಿ 'ಸೌಹಾರ್ದ ಸಹಕಾರಿ ಸಂಘ' ಸ್ಥಾಪನೆ. ಸದಸ್ಯತನಕ್ಕೆ ಮುನ್ನೂರೈವತ್ತು ರೂಪಾಯಿ. ಈಗಾಗಲೇ ಸಂಘಕ್ಕೆ ನಲವತ್ತು ಮಂದಿ (ಸದಸ್ಯರು) ಎಳನೀರು ನೀಡಲು ಮುಂದಾಗಿದ್ದಾರೆ! ಎಳನೀರು ಕೊಯ್ಲಿಗೆ ಸಂಘದಿಂದ ನಿಯುಕ್ತಿ ಹೊಂದಿದ ಸಿಬ್ಬಂದಿ. ಕೀಳಲು ಒಂದು ರೂಪಾಯಿ. ಕೆತ್ತಿ ಕೊಡಲು ಪುನಃ ಒಂದು ರೂಪಾಯಿ. ಒಂಭತ್ತು ರೂಪಾಯಿಗೆ ಮಾರಾಟ. ದಿನಕ್ಕೆ ಏನಿಲ್ಲವೆಂದರೂ ನೂರಕ್ಕೂ ಮಿಕ್ಕಿ ಮಾರಾಟ.

'ರೊಕ್ಕ ತಕ್ಷಣ ಸಿಗುತ್ತದಲ್ವಾ. ಹಾಗಾಗಿ ಎಳನೀರು ತಂದು ಕೊಡುವಷ್ಟು ಕೆಲವು ಕೃಷಿಕರು ತಯಾರಾಗಿದ್ದಾರೆ. ಇನ್ನಷ್ಟು ಸಿದ್ಧರಾಗುತ್ತಿದ್ದಾರೆ' ಎನ್ನುತ್ತಾರೆ ಸಂಘದ ಅಧ್ಯಕ್ಷ ಶಿವಶಂಕರಪ್ಪ. ಎಳನೀರು ಒದಗಿಸುವ ರೈತರ ಸಂಖ್ಯೆ ಹೆಚ್ಚಾದರೆ ತುಮಕೂರಿನಲ್ಲೂ ಮಳಿಗೆಯೊಂದನ್ನು ತೆರೆಯುವ ಆಸೆ ಇವರಿಗಿದೆ. ಹೆದ್ದಾರಿಯಲ್ಲಿ ಮೂರ್ನಾಲ್ಕು ಕಡೆಗಳಲ್ಲಿ ಮಳಿಗೆ ತೆರೆಯುವುದು ಸಂಘದ ನಿಕಟ ಭವಿಷ್ಯದ ಯೋಜನೆ-ಯೋಚನೆ.

ಎಳನೀರು ಕುಡಿಯುವವರ ಸಂಖ್ಯೆ ಹೆಚ್ಚಾಗುತ್ತಿದೆಯಂತೆ. ಬೆಳೆದ ಎಲ್ಲವನ್ನೂ ಕೊಬ್ಬರಿ ಮಾಡಿದರೆ ಉಳಿಗಾಲವಿಲ್ಲ ಎಂಬ ಸತ್ಯ ಕೆಲವು ಕೃಷಿಕರಿಗೆ ಮನವರಿಕೆಯಾಗಿದೆ. ಬೆಳೆದ ಅರ್ಧದಷ್ಟಾದರೂ ಎಳನೀರು ಮಾರಾಟ, ಮೌಲ್ಯವರ್ಧನೆ ಮಾಡುವ ಮೂಲಕವೋ ಮಾರುಕಟ್ಟೆ ಮಾಡಲೇಬೇಕು - ಎಂಬ ವಿಚಾರ ತಲೆಯೊಳಗೆ ಹೊಕ್ಕಿರುವುದು ಸಂತೋಷ ಸುದ್ದಿ.

ಇದೆಲ್ಲಾ ಒಬ್ಬಿಬ್ಬರು ಮಾಡುವಂತಹುದಲ್ಲ. ಸಮಷ್ಠಿ ಕೆಲಸ. ಆಗಲೇ ಸಮಸ್ಯೆಗೆ ಪರಿಹಾರ. ಎಳನೀರು ಮಾರಾಟ ಸಾಧ್ಯವೇ ಇಲ್ಲ ಎನ್ನುವ ಬಿಳಿಗೆರೆಯಲ್ಲಿ 'ಎಳನೀರು ಸ್ಟಾಲ್' ಶುರುವಾದುದು ಇತಿಹಾಸ. ಮೀಯಪದವಿನ ಡಾ.ಚೌಟರು ತಮ್ಮೂರಿನಲ್ಲಿ ಎಳನೀರಿಗೆ ಮಾರುಕಟ್ಟೆಯನ್ನು ರೂಪಿಸಿರುವ ಯಶೋಗಾಥೆ ಮುಂದಿದೆ. ಇಲ್ಲಿ ಎಳನೀರು ಕುಡಿಯುವವರು ಯಾರು ಗೊತ್ತಾ - ಕೂಲಿ ಕಾರ್ಮಿಕರು, ಮಧ್ಯಮ ವರ್ಗದ ಜನರು!

'ನಾವೂ ಮೀಯಪದವಿನಂತೆ ಮಾರುಕಟ್ಟೆ ಹಿಡಿದು ಬದುಕಿನ ನರಳಾಟವನ್ನು ಯಾಕೆ ಕಡಿಮೆಗೊಳಿಸಬಾರದು' ಮೇಳದಲ್ಲಿ ಭಾಗವಹಿಸಿದ್ದ ಹಿರಿಯ ಸಾಹಿತಿಗಳಾದ ಲಿಂಗದೇವರು ಹಳೆಮನೆ ರೈತರಿಗೆ ವಿಶ್ವಾಸ ತುಂಬುತ್ತಾ, 'ತೆಂಗು, ಕೊಬ್ಬರಿ ಅಂತ ವ್ಯಾಪಾರಿಗಳಲ್ಲಿ ಮುಂಗಡ ತೆಕ್ಕೊಂಡು, ಸಾಲ ಮಾಡಿ, ಅದರ ಬಡ್ಡಿ ಕಟ್ಟಲೂ ಹರ ಸಾಹಸ ಪಡುತ್ತಾ ಜೀವಿಸೋದಕ್ಕಿಂತ ಸುಲಭದಲ್ಲಿ ರೊಕ್ಕ ಬರುವ ಎಳನೀರನ್ನು ಮಾರ್ರಿ. ಮೌಢ್ಯವನ್ನು ಕಟ್ಟಿಡಿ' ಎಂದರು. ಮುಂದಿನ ಬದಲಾವಣೆ ಕಣ್ಣ ಮುಂದಿದೆ.
ಇಷ್ಟೆಲ್ಲಾ ಮಾಡಿದರೂ, 'ವಾರಕ್ಕೆ ಕನಿಷ್ಠ ಹತ್ತು ಸಾವಿರ ಎಳನೀರಿಗೆ ಬೇರೆಡೆಯಿಂದ ಬೇಡಿಕೆಯಿದೆ. ಎಳನೀರೂ ಮರದಲ್ಲಿದೆ. ಆದರೆ ರೈತರು ಕೊಡೊಲ್ಲ' ರೈತರ ಮನೋಸ್ಥಿತಿಗೆ ವಿಷಾದಿಸುತ್ತಾರೆ ಬಿಳಿಗೆರೆ ಕೃಷ್ಣ ಮೂರ್ತಿ..

Wednesday, November 25, 2009

ಸಾವಯವದ ಹಾದಿಯಲ್ಲಿ - ಪುಸ್ತಕ

'ಬರೆಯುವವರು ಬೆಳೆಯುವುದಿಲ್ಲ. ಬೆಳೆಯುವವರು ಬರೆಯುವುದಿಲ್ಲ' ಎಂಬ ಮಾತಿಗೆ ಬೆಳಗಾವಿಯ ಈರಯ್ಯ ಕಿಲ್ಲೇದಾರ್ ಒಂದು ಅಪವಾದ. ಸಾವಯವ ಕೃಷಿ ಅಂದರೆ ಜೀವನಧರ್ಮ ಎನ್ನುವುದು ಅವನ ನಂಬಿಕೆ. ಕಳೆದ ಎರಡು ದಶಕಗಳಿಂದ ಒಂದೂವರೆ ಎಕರೆ ಹಾಗೂ ತಮ್ಮ ಬದುಕು-ಚಿಂತನಾಕ್ರಮದಲ್ಲಿ ಕಿಲ್ಲೇದಾಎದ ನಡೆಸುತ್ತಿರುವ ಸಾವಯವ ಪ್ರಯೋಗಗಳು ಅವರಿಗೆ ಖುಷಿ-ನೆಮ್ಮದಿ. ಈ ಹೂರಣವೇ ಪುಸ್ತಕದ ಗಟ್ಟಿತನ. ಕಾಲೇಜು ವ್ಯಾಸಂಗದ ಬಳಿಕ ಒಕ್ಕಲುತನದ ಮೇಲಿನ ಒಲುಮೆಯಿಂದ ಹಳ್ಳಿಗೆ ಮರಳಿದ ಅವರು ಸಾವಯವ ಚಿಂತನೆಗಳಿಂದ ಪ್ರಭಾವಿತರಾದರು. ಸಾವಯವ ಕೃಷಿ ಕೇವಲ ಹೊಲಕ್ಕಷ್ಟೇ ಸೀಮಿತವಾಗಿರಬಾರದು, ಅದು ನಾವು ಯೋಚಿಸುವ ಕ್ರಮ ಹಾಗೂ ನಾವು ಬದುಕುವ ರೀತಿಗೂ ಅನ್ವಯಿಸಬೇಕು ಎಂಬುದು ಅವರ ನಿಲುವು.

ಧಾರವಾಡದ ಕೃಷಿ ಮಾಧ್ಯಮ ಕೇಂದ್ರದ ಪ್ರಕಟಣೆಯಿದು. ವಿಷಯುಕ್ತ ಒಕ್ಕಲುತನ ಮಾಡುತ್ತಾ ಹೊಸ ಹೊಸ ಪ್ರಯೋಗಗಳಲ್ಲಿ ತೊಡಗಿ ನೆಮ್ಮದಿಯ ಬದುಕು ಸಾಕಾರಗೊಳಿಸಿಕೊಂಡವರ ಅನುಭವ-ಚಿಂತನೆಯ ಮೇಲೆ ಬೆಳಕು ಚೆಲ್ಲುವುದು - ಪ್ರಕಟಣಾ ಹಿಂದಿನ ಕೇಂದ್ರದ ಉದ್ದೇಶ. ಹತಾಶೆ ಕವಿದಿರುವ ಒಕ್ಕಲುತನದಲ್ಲಿ ಸ್ಫೂರ್ತಿಯ ಚಿಲುಮೆಗಳಂತಿರುವ ಮೌನ ಸಾಧಕರ ಕುರಿತಾದ ಪುಸ್ತಕ ಸರಣಿಯಲ್ಲಿ ಇದು ಮೂರನೇ ಪುಸ್ತಕ. ಈ ಹಿಂದೆ 'ಕಲ್ಲು ಹಾಸಿನ ಮೇಲೆ ಹಸಿರು ಹೊದಿಕೆ' ಮತ್ತು 'ಗುಡ್ಡದ ಮೇಲಿನ ಏಕ ವ್ಯಕ್ತಿ ಸೈನ್ಯ' ಎಂಬೆರಡು ಪುಸ್ತಕಗಳು ಈ ಸರಣಿಯಲ್ಲಿ ಬೆಳಕು ಕಂಡಿವೆ.

'ಸಾವಯವದ ಹಾದಿಯಲ್ಲಿ' ಪುಸ್ತಕದ ಬೆಲೆ ರೂ.20. ಪುಟ 28.

ನೀವೇನು ಮಾಡಬಹುದು:
* ಕೃಷಿ ಮಾಧ್ಯಮ ಕೇಂದ್ರದ ಈ ವಿಶಿಷ್ಟ ಪುಸ್ತಕ ಸರಣಿಯ ಪ್ರಕಟಣೆಗೆ ಪ್ರಾಯೋಜಿಸಬಹುದು * ಗ್ರಾಮೀಣ ಭಾಗದಲ್ಲಿ ಎಲೆಮರೆಯ ಕಾಯಂತಿರುವ ಸಾಧಕರನ್ನು ಕೇಂದ್ರಕ್ಕೆ ತಿಳಿಸಬಹುದು.

ವಿಳಾಸ: ಮಾಧ್ಯಮ ಕೇಂದ್ರ, 119, 1ನೇ ಮುಖ್ಯರಸ್ತೆ, 4ನೇ ಅಡ್ಡರಸ್ತೆ, ನಾರಾಯಣಪುರ, ಧಾರವಾಡ - 580 008, ದೂರವಾಣಿ : 0836-೨೪೪೪೭೩೬
agriculturalmedia@gmail.com - www.farmedia.com

Thursday, November 12, 2009

ಕಾಡು ಮಾವು' ಅನಾವರಣ

ಚಿತ್ರ ವಿವರ: ಹಿರಿಯ ಪತ್ರಕರ್ತ ನಾಗೇಶ ಹೆಗಡೆಯವರಿಂದ 'ಕಾಡು ಮಾವು' ಪುಸ್ತಕದ ಅನಾವರಣ. ಚಿತ್ರದಲ್ಲಿ ನಾ. ಕಾರಂತ ಪೆರಾಜೆ, ಈರಯ್ಯ ಕಿಲ್ಲೇದಾರ್, ಶ್ರೀ ಪಡ್ರೆ, ವಾಸುದೇವ ಎಂ. ಹೆಗಡೆ, ನಾಗೇಶ ಹೆಗಡೆ ಮತ್ತು ನಾಗೇಂದ್ರ ಸಾಗರ್ ಇವರನ್ನು ಕಾಣಬಹುದು.)
ನಾ. ಕಾರಂತ ಪೆರಾಜೆಯವರ ಕೃಷಿ ಯಶೋಗಾಥೆಗಳ ಸಂಕಲನ 'ಕಾಡು ಮಾವು' ಕೃತಿಯು ಇತ್ತೀಚೆಗೆ ಶಿರಸಿ ಸನಿಹದ ಬೆಂಗಳಿಯಲ್ಲಿ ಅನಾವರಣಗೊಂಡಿತು. ಧಾರವಾಡದ ಕೃಷಿ ಮಾಧ್ಯಮ ಕೇಂದ್ರದ ಒಂಭತ್ತನೇ ವಾರ್ಷಿಕ ಸಮಾರಂಭದಲ್ಲಿ ಖ್ಯಾತ ಪತ್ರಕರ್ತ ನಾಗೇಶ ಹೆಗಡೆ ಬಿಡುಗಡೆಗೊಳಿಸಿದರು.
ಹಿರಿಯ ಕೃಷಿಕರಾದ ವಾಸುದೇವ ಎಂ. ಹೆಗಡೆ ಇವರ ಗೌರವಾಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಜಲತಜ್ಞ ಶ್ರೀ ಪಡ್ರೆ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಈರಯ್ಯ ಕಿಲ್ಲೇದಾರ್ ಅವರ 'ಸಾವಯವದ ಹಾದಿ' ಪುಸ್ತಕವೂ ಅನಾವರಣಗೊಂಡಿತು.
ಸಮಾರಂಭದಲ್ಲಿ ಕೃಷಿ ಮಾಧ್ಯಮ ಕೇಂದ್ರದ ಈ ಸಾಲಿನ 'ಕೃಷಿ ಪತ್ರಿಕೋದ್ಯಮ ಪ್ರಶಸ್ತಿ'ಯನ್ನು ಸಾಗರದ ನಾಗೇಂದ್ರ ಸಾಗರ್ ಅವರಿಗೆ ಪ್ರದಾನಿಸಲಾಯಿತು. ಅಡಿಕೆ ಪತ್ರಿಕೆಯಲ್ಲಿ ಪ್ರಕಟವಾದ 'ವರಿಯಿಲ್ಲದ ರಸಾವರಿ' ಲೇಖನಕ್ಕೆ ಈ ಪ್ರಶಸ್ತಿ ಲಭಿಸಿದೆ. ಕಾಮ್ ಫೆಲೋ ಸರ್ಟಿಫಿಕೇಟ್ ಪ್ರದಾನ, ಅಡಿಕೆ ಪತ್ರಿಕೆಯಲ್ಲಿ ಪ್ರಕಟವಾದ ಕಾಮ್ ಅಭ್ಯರ್ಥಿಗಳ ಅತ್ಯುತ್ತಮ ಬರೆಹಗಳಿಗೆ ಬಹುಮಾನ ವಿತರಿಸಲಾಯಿತು.
ಕೃಷಿ ಮಾಧ್ಯಮ ಕೇಂದ್ರದ ಅಧ್ಯಕ್ಷೆ ಅನಿತಾ ಪೈಲೂರು ಸ್ವಾಗತಿಸಿದರು. ಪತ್ರಕರ್ತ ಪೂರ್ಣಪ್ರಜ್ಞ ಬೇಳೂರು ವಂದಿಸಿದರು. ಪತ್ರಕರ್ತೆ ಅನುಸೂಯಾ ಶರ್ಮಾ ನಿರ್ವಹಿಸಿದರು.

Wednesday, November 11, 2009

ಮಕ್ಕಳಿಗೂ ಒಂದು ಮನಸ್ಸಿದೆ!

'ಮಕ್ಕಳೇ.. ಮಹಾತ್ಮ ಗಾಂಧೀಜಿ ಭಾರತಕ್ಕೆ ಸ್ವಾತಂತ್ರ್ಯ ತಂದು ಕೊಟ್ಟರು ಚಾಚಾ ನೆಹರು ಗೊತ್ತಲ್ಲಾ.. ಇಂದು ಅವರ ಜನ್ಮ ದಿನಾಚರಣೆ.. ಅವರು ಮಕ್ಕಳನ್ನು ಪ್ರೀತಿಸುತ್ತಿದ್ದರು.. ಹಾಗಾಗಿ ಇಂದು ಮಕ್ಕಳ ದಿನಾಚರಣೆ' ತರಗತಿಯಲ್ಲಿ ಟೀಚರ್ ಹೇಳುತ್ತಾ ಇದ್ದಂತೆ ಬೆರಗು ಕಂಗಳಿಂದ ಕೇಳಿಸಿಕೊಳ್ಳುವ ಪುಟ್ಟ ಕಂದಮ್ಮಗಳು. ಟೀಚರ್ ಹೇಳಿದ್ದನ್ನೇ ಮನೆಯಲ್ಲಿ ಉರುಹೊಡೆವ ಎಳೆ ಮನಸ್ಸುಗಳು. ನಮ್ಮ ಬಹುತೇಕ ಪ್ರಾಥಮಿಕ ಶಾಲೆಗಳ ಮಕ್ಕಳ ದಿನಾಚರಣೆ ಇಲ್ಲಿಗೆ ಮುಗಿಯುತ್ತದೆ!

ನೆಹರೂರವರ ಕಪ್ಪು ಕೋಟಿನ ಜೇಬಿಗೆ ಗುಲಾಬಿ ಸಿಕ್ಕಿಸಿದ ಚಿತ್ರವನ್ನು ಮಕ್ಕಳ ಮುಂದೆ ಈಗಲೂ ಬಿಂಬಿಸಲಾಗುತ್ತದೆ. ಗುಲಾಬಿ ಮುದುಡಿದಾಗ ಒಂದು ಸೌಂದರ್ಯ, ಅರಳಿದಾಗ ಮತ್ತೊಂದು ಸೌಂದರ್ಯ. ಇನ್ನೇನು ಕ್ಷಣಗಳ ಲೆಕ್ಕಣಿಗೆ ಮುಂದೊತ್ತುತ್ತಿದ್ದಂತೆ ಅರಳಿದ ಹೂಗಳ ಪಕಳೆಗಳು ಬೇರ್ಪಡಲು ಹವಣಿಸುತ್ತವೆ. ಇದನ್ನೇ ಮಕ್ಕಳಿಗೆ ಹೋಲಿಸಿ. ಮಕ್ಕಳ ಮನಸ್ಸು ಮುದುಡಿದ ಗುಲಾಬಿಯಂತೆ. ಅದನ್ನು ಬೌದ್ಧಿಕ ಜ್ಞಾನದಿಂದ ಅರಳಿಸುವ ಕೆಲಸ ಮಾಡಿದಾಗ, ಮುಂದದು ಮಾಗಿ ಹಲವು ಪ್ರತಿಭೆಗಳ ಪಕಳೆಗಳಾಗಿ ಅನಾವರಣಗೊಳ್ಳುತ್ತವೆ. ಗುಲಾಬಿಯ ಈ ಉಪಮೆ ನಮ್ಮ ಎಷ್ಟು ಶಾಲೆಗಳಲ್ಲಿ ಅನುಷ್ಠಾನಗೊಳ್ಳುತ್ತವೆ. ಎಷ್ಟು ಮನೆಗಳಲ್ಲಿ ಮಕ್ಕಳ ಮನಸ್ಸನ್ನು ಅರಳಿಸುವ ಕೆಲಸ ನಡೆಯುತ್ತವೆ?

ಮಗುವಿನ ಮನಸ್ಸು 'ಮಣ್ಣಿನ ಮುದ್ದೆ'! ಅದಕ್ಕೆ ಆಕಾರವನ್ನು ಕೊಡುವ ಮೊದಲ ಕೆಲಸ ಮನೆಯಿಂದಾಗಬೇಕು. ಅದು ಒಪ್ಪ-ಓರಣಗೊಳ್ಳುವುದು ಶಾಲಾ ತರಗತಿಗಳಲ್ಲಿ. ಮಕ್ಕಳು ಐದರ ತನಕ ಮುದ್ದುಮುದ್ದಾಗಿ ಕಲಿಯುತ್ತವೆ. ನಂತರ ಶುರುವಾಯಿತು ನೋಡಿ - ಭರತನಾಟ್ಯ, ಸಂಗೀತ, ಡ್ಯಾನ್ಸ್ ಇನ್ನೂ ಏನೇನೋ. ಶಾಲಾಭ್ಯಾಸದೊಂದಿಗೆ ಮತ್ತಷ್ಟು ಹೊರೆ.

ತನ್ನ ಮಗುವಿಗೆ ಸಂಗೀತಕ್ಕೆ ಬೇಕಾದ ಸ್ವರ ಇದೆಯೋ? ಅದಕ್ಕಿಂತ ಮುಖ್ಯವಾಗಿ ನಮಗೆ ಸಂಗೀತ ಜ್ಞಾನ ಏನಾದರೂ ಇದೆಯೋ ಅಥವಾ ಸಂಗೀತವನ್ನು ಹಾರ್ದಿಕವಾಗಿ ಗೌರವಿಸುವ ಮನಸ್ಸಾದರೂ ನಮಗಿದೆಯೇ? ಈ ಯಾವ ಪ್ರಶ್ನೆಗೆ ಉತ್ತರವನ್ನು ಕಂಡುಕೊಳ್ಳದೆ 'ನನ್ನ ಮಗು ಸಂಗೀತ ಕಲಿಯಬೇಕು' ಎಂದರೆ ಕಲಿಸುವ ಗುರುಗಳಿಗೊಂದು ಶಿಕ್ಷೆ. ಮಗುವಿನ ಧಾರಣ ಶಕ್ತಿಯನ್ನು ಎಷ್ಟು ಮಂದಿ ಹೆತ್ತವರು ಅರ್ಥಮಾಡಿಕೊಂಡಿದ್ದಾರೆ? ಆದರೆ ಈ ಹಿನ್ನೆಲೆಯಿರುವ ಕೆಲವು ಮಕ್ಕಳು ಯಶಸ್ಸಾಗುತ್ತಾರೆ. ಮಗುವಿನ ತುಡಿತವನ್ನು ಅರ್ಥಮಾಡಿಕೊಂಡು ಪೋಷಿಸಿದರೆ ಉತ್ತಮ ಬೆಳೆ ಖಂಡಿತ.

ಚೆನ್ನರಾಯಪಟ್ನದ ಸ್ನೇಹಿತರ ಮನೆಯಲ್ಲಿ ಒಂದು ದಿವಸ ಉಳಕೊಳ್ಳಬೇಕಾದ ಸಂದರ್ಭ ಬಂದಿತ್ತು. ಮನೆಯವರೆಲ್ಲರೂ ಪ್ರತಿಭಾವಂತರು. ಚೇತನ್ ನಾಲ್ಕರ ಹುಡುಗ. ಅಪ್ಪ ಯಕ್ಷಗಾನ ಕಲಾವಿದ. ಅಮ್ಮನಿಗೆ ಭರತನಾಟ್ಯವೆಂದರೆ ಪ್ರಾಣ. ಅಜ್ಜ ಸಂಗೀತಪ್ರಿಯ. ಅಂದು ಶಾಲೆಯಿಂದ ಬಂದವನೇ 'ಟ್ಯೂಶನ್'ಗೆ ಹೋಗುವ ಸಿದ್ಧತೆಯಲ್ಲಿದ್ದ. ಅಮ್ಮ ಒಂದಿಷ್ಟು ಆಹಾರವನ್ನು ಬಾಯಿಗೆ ತುರುಕಿದರು. ಸರಿ, ಟ್ಯೂಶನ್ ಮುಗಿಸಿ ಚೇತನ್ ಮನೆಗೆ ಹೊಕ್ಕಿದ್ದಷ್ಟೇ. ಯಕ್ಷಗಾನ ತರಗತಿಗೆ ಕರೆದೊಯ್ಯಲು ಅಪ್ಪ ರೆಡಿ. ಎಲ್ಲಾ ಮುಗಿಸಿ ಚೇತನ್ ಮನೆ ತಲುಪುವಾಗ ಒಂಭತ್ತೂವರೆ ದಾಟಿತ್ತು. ಮತ್ತೆ ಗೊತ್ತಾಯಿತು, ಆತ ಯಕ್ಷಗಾನ ತರಗತಿ ಮುಗಿಸಿ, ಜೊತೆಗೆ ಭರತನಾಟ್ಯ ತರಗತಿಯನ್ನು ಅಭ್ಯಸಿಸಿ ಮನೆಗೆ ಬಂದಾಗ ಪಾಪ, ಆ ಮಗುವಿನ ಮುಖ ನೋಡಬೇಕಿತ್ತು. ಇಷ್ಟು ಹೊರೆ ಬೇಕಿತ್ತಾ? ಅಪ್ಪಾಮ್ಮಂದಿರ ಆಸಕ್ತಿಯ ಭಾರವನ್ನು ಚೇತನ್ ಯಾಕೆ ಹೊರಬೇಕು?

ಇದು ಚೇತನ್ ಒಬ್ಬನ ಅವಸ್ತೆಯಲ್ಲ, ನಮ್ಮಲ್ಲೂ ಪರೋಕ್ಷವಾಗಿ ಮತ್ತೊಬ್ಬ ಚೇತನ್ ಇದ್ದಾನೆ! ಹಾಗಿದ್ದರೆ ಮಕ್ಕಳು ಕಲಿಯಬೇಡ್ವಾ ಈ ವಯಸ್ಸಿನಲ್ಲಲ್ಲದೆ ಬೇರ್ಯಾವಾಗ ಕಲಿಯುವುದು' ಪ್ರಶ್ನೆ ಬರುವುದು ಸಹಜ. ಕಲಿಯಲಿ, ಅದಕ್ಕೂ ಮಿತಿ ಇರಲಿ.ಬಾಲ್ಯಶಿಕ್ಷಣ ಭವಿಷ್ಯದ ಊರುಗೋಲುಬಾಲ್ಯಶಿಕ್ಷಣ ಮಾತೃಭಾಷೆಯಲ್ಲಿಯೇ ಇರಬೇಕು. ಈ ಸಂಸ್ಕೃತಿಯಲ್ಲಿ ಬೆಳೆದ ಮಗು, ಮುಂದೆ ಇತರ ಭಾಷೆಗಳನ್ನು ಚೆನ್ನಾಗಿ ಕಲಿಯುತ್ತದೆ. ಎಷ್ಟು ಮನೆಗಳಲ್ಲಿ ಇಂದು ಕನ್ನಡ ಮಾತುಕತೆಯಿದೆ?

ಪ್ರಾಥಮಿಕ ಶಾಲೆಯ ಅಧ್ಯಾಪಕರನ್ನೊಮ್ಮೆ ಜ್ಞಾಪಿಸಿಕೊಂಡರೆ ನೆನಪಾಗುತ್ತದೆ - ಅವರ ಮನೆಗಳಲ್ಲಿ ಚಿಕ್ಕ ಕನ್ನಡ ಗ್ರಂಥಾಲಯವಿರುತ್ತಿತ್ತು. ಅವರು ಶಾಲೆಗೆ ಬರುವಾಗ ಯಾವುದಾದರೊಂದು ಪುಸ್ತಕ ಕೈಯಲ್ಲಿರುತ್ತಿತ್ತು. ನನ್ನ ಬಾಲ್ಯದ ಉಪಾಧ್ಯಾಯರಾದ ನಾರಾಯಣ ಪಂಡಿತರು, ಕೃಷ್ಣಪ್ಪ ಉಪಾಧ್ಯಾಯರು ಕನ್ನಡದ ಉಚ್ಛಾರ ಸ್ವಲ್ಪ ತಪ್ಪಿದರೂ ಶಿಕ್ಷಿಸುತ್ತಿದ್ದರು. ತಪ್ಪಿದ ಉಚ್ಚಾರವನ್ನು ಅದು ಮತ್ತಷ್ಟು ಸರಿಪಡಿಸುತ್ತಿತ್ತು! ಈಗ 'ಶಿಕ್ಷೆ' ಬಿಡಿ, ಶಾಲಾಭ್ಯಾಸದಲ್ಲಿ ಮಗು ತಪ್ಪು ಬರೆದರೆ ತಿದ್ದುವಷ್ಟೂ ವ್ಯವಧಾನ ಇಲ್ಲ! ಎಷ್ಟು ಮಂದಿ ಅಧ್ಯಾಪಕರಲ್ಲಿ ನಿತ್ಯ ಓದು ಇದೆ - ಒಮ್ಮೆ ಪರಾಮರ್ಶಿಸಿ

ಹೀಗೆ ಹೇಳುವಾಗ ನಮ್ಮ ಪುಸ್ತಕ ಮಿತ್ರ ಪ್ರಕಾಶ್ ಕುಮಾರ್ ಹೇಳಿದ ಒಂದು ಮಾತು ನೆನಪಾಗುತ್ತದೆ - ಶಾಲೆಯೊಂದರಲ್ಲಿ ಇವರು ಪುಸ್ತಕದ ಪ್ರದರ್ಶನವೇರ್ಪಡಿಸಿದ್ದರು. 'ಸರ್.. ಇದು ಶಿವರಾಮ ಕಾರಂತರು ಬರೆದ ಪುಸ್ತಕ, ಚೆನ್ನಾಗಿದೆ' ಅಂತ ಉಪನ್ಯಾಸಕ ಮಹಾಶಯರೊಬ್ಬರಿಗೆ ಕೊಟ್ಟರಂತೆ. 'ಓ.. ಹೌದಾ.. ಶಿವರಾಮ ಕಾರಂತರು ಪುಸ್ತಕ ಬರೀತಾರಾ' ಅಂತ ಅಂದರಂತೆ!

ಇರಲಿ, ಪ್ರಪಂಚ ಅರಿಯುವ ಮುನ್ನ 'ಎಲ್ಕೆಜಿ'ಗೆ ಮಗುವನ್ನು ದೂಡುವ ಪ್ರವೃತ್ತಿ, ಕನ್ನಡದ ಉಚ್ಚಾರ ಮಾಡಿದಾಗ-ಮಾತನಾಡಿದಾಗ ಮಗುವನ್ನು ಭಯಪಡಿಸುವ ಸನ್ನಿವೇಶ, ಪುಸ್ತಕದಂಗಡಿಯಲ್ಲಿ ಮಗು ಕನ್ನಡ ಪುಸ್ತಕವನ್ನು ಆಯ್ದುಕೊಂಡಾಗ ಬೈದು-ಬಡಿವ ಸ್ಥಿತಿ - ಬಹುತೇಕ ಕಾಣುತ್ತೇವೆ. ಅಧ್ಯಾಪಕರು ಸ್ಲೇಟಿನಲ್ಲಿ ದೊಡ್ಡ ಅಕ್ಷರದಲ್ಲಿ ಬರೆದ ಅ, ಆ... ಮೇಲೆ ಬರೆದು ಬರೆದೇ ಕಲಿತ ಎಷ್ಟೋ ಮಂದಿ ಇಂದು ವಿದೇಶದಲ್ಲಿಲ್ವಾ. ಅವರೆಲ್ಲರೂ 'ಅಪ್ಪ-ಅಮ್ಮ' ಎನ್ನುತ್ತಾ ಬೆಳೆದವರೇ. ಮನೆಯಿಂದ ಶಾಲೆ ತನಕದ ಪ್ರತೀ ಕ್ಷಣವನ್ನು ಪೋಸ್ಟ್ಮಾರ್ಟಂ ಮಾಡಿದಾಗ ಎಲ್ಲೂ ಮಗುವಿನ ಮನಸ್ಸನ್ನರಿಯುವ ಉಪಾಧಿಗಳು ಸಿಗುತ್ತಿಲ್ಲ. 'ಕೋಳಿಯನ್ನು ಕೇಳಿ ಮಸಾಲೆ ಅರಿಯುವುದಿಲ್ಲ' - ನನ್ನ ಈ ವಿಚಾರಕ್ಕೆ ಓರ್ವ ತಾಯಿ ಪ್ರತಿಕ್ರಿಯಿಸಿದ ರೀತಿಯಿದು.

ಈ ಎಲ್ಲಾ ವಿಚಾರಗಳನ್ನಾದರೂ ಸಹಿಸಬಹುದು, ಆದರೆ ಮಕ್ಕಳ ಮನಸ್ಸನ್ನು ಅಣುಅಣುವಾಗಿ ಕೊಲ್ಲುವ 'ನಿಧಾನ ವಿಷ' - ನಮ್ಮ ವಾಹಿನಿಗಳ 'ರಿಯಾಲಿಟಿ ಶೋ'ಗಳು. ಇವುಗಳು ಯಾವಾಗ ಟೀವಿಯೊಳಗೆ ನುಸುಳಿದುವೋ, ಅಲ್ಲಿಂದ 'ಸಂಗೀತ, ಸಾಹಿತ್ಯ, ಮಾನ-ಮರ್ಯಾದಿ' ಎಲ್ಲಾ ದೂರವಾದುವು. 'ದಿಢೀರ್ ಸಂಗೀತ' ಕಲಿಯುವ ಶಾಲೆಗಳು ಶುರುವಾದುವು. ದಿಢೀರ್ ಗುರುಗಳು ಪ್ರತ್ಯಕ್ಷರಾದರು. ಸಂಗೀತವನ್ನೋ, ನೃತ್ಯವನ್ನು ಕಲಿಯಲು ಐದಾರು ವರುಷ ಬೇಡ. ಐದಾರು ವಾರ ಸಾಕು ಎಂಬ ಭಾವವನ್ನು ವಾಹಿನಿಗಳು ಬಿಂಬಿಸಿದುವು. ಹಾಗಾಗಿ ಅಲ್ಪಸ್ವಲ್ಪ ಹಾಡುತ್ತಿದ್ದ ಪ್ರತಿಭೆಗಳಿಗೆ ವೇದಿಕೆ ಸಿಕ್ತು. ಪದ್ಯಗಳ ಜೆರಾಕ್ಸ್ ಪ್ರತಿಗಳಾದರು. ಈ ಢಾಂಢೂಂಗಳ ಮಧ್ಯೆ ನಿಜ ಕಾಳಜಿಯಿದ-ಪ್ರೀತಿಯಿಂದ ಸಂಗೀತ ಕಲಿತ, ನೃತ್ಯ ಕಲಿತ ಪ್ರತಿಭಾವಂತರ ಪ್ರತಿಭೆಯು ಮಸುಕಾಯಿತು.

ಒಮ್ಮೆ ವಾಹಿನಿಯಲ್ಲಿ ಕಷ್ಟಪಟ್ಟು ಹಾಡಿದರೆ ಸಾಕು, ಪತ್ರಿಕೆಗಳಲ್ಲಿ ಫೋಟೋ ಹಾಕಿಸಿ ಸಂತೋಷಪಡುವಷ್ಟರ ತನಕ ಚಾಳಿ ಎಬ್ಬಿಸಿಬಿಟ್ಟಿದೆ. ಎಲ್ಲಾದರೂ ವಾಹಿನಿಯಲ್ಲಿ ಹಾಡಿ ಪ್ರಥಮ ಸ್ಥಾನ ಬಾರದಿದ್ದರೆ, 'ಭವಿಷ್ಯವೇ ಸರ್ವನಾಶ' ಎಂಬಂತೆ ವರ್ತಿಸುವ ಹೆತ್ತವರು, ಅದನ್ನು ಮಕ್ಕಳ ಮೇಲೆ ಹೇರಿ ಮುಗ್ಧ ಮನಸ್ಸಿಗೆ ಭಗ್ನ ತರುವ ನಿರೂಪಕರು, ಅಸಂಬದ್ದ ಪ್ರಶ್ನೆಗಳನ್ನು ಕೇಳಿ ಮಕ್ಕಳನ್ನು ಗೊಂದಲಕ್ಕೆ ಸಿಲುಕಿಸುವ ತೀರ್ಪುಗಾರರು, ಕೆಲವೊಂದು ಸಲ ತೀರ್ಪುಗಾರರ ಮೇಲೆ ಹೆತ್ತವರೇ ಕೈಮಾಡುವ ದಾರಿದ್ರ್ಯ ಸ್ಥಿತಿ..

ನಮ್ಮ ವಾಹಿನಿಗಳ ಉದ್ಘೋಷಕಿಯರು ಯಾಕೋ 'ವಸ್ತ್ರದ್ವೇಷಿ'ಗಳು! ಈ ಚಾಳಿ ಇತ್ತಿತ್ತ ಮಕ್ಕಳ ಮೇಲೂ ಪ್ರಯೋಗಿಸಲಾಗುತ್ತಿದೆ. ವಾಹಿನಿಯೊಂದರಲ್ಲಿ ಮಕ್ಕಳ ಡ್ಯಾನ್ಸ್ ಕಾರ್ಯಕ್ರಮವೊಂದರಲ್ಲಿ ಎಲ್ಲಾ ಮಕ್ಕಳಿಗೂ ಅಂಗಾಂಗ ಕಾಣುವಂತೆ ಕಡಿಮೆ ವಸ್ತವನ್ನು ತೊಡಿಸಲಾಗಿತ್ತು. ಪಾಪ, ಮಕ್ಕಳಿಗೆ ಏನು ತಿಳಿಯುತ್ತೆ ಹೇಳಿ. ಇದಕ್ಕೆ ಹೆತ್ತವರ ಪ್ರೋತ್ಸಾಹ. 'ಮಕ್ಕಳಲ್ಲಿ ಯಾಕೆ ಅಂತಹ ದೃಷ್ಟಿ' ಅಂತ ಪ್ರಶ್ನಿಸಬಹುದು. ಆದರೆ ಎಳವೆಯಲ್ಲೇ ಮಕ್ಕಳಲ್ಲಿ 'ವಸ್ತ್ರದ್ವೇಷ'ವನ್ನು ಯಾಕೆ ಸೃಷ್ಟಿಸಬೇಕು. 'ಈ ಕಾರ್ಯಕ್ರಮ ಬರುತ್ತಿದ್ದಂತೆ ನಾವು ಟಿವಿ ಆಫ್ ಮಾಡಿದೆವು' ಎನ್ನುತ್ತಾರೆ ಪುತ್ತೂರಿನ ಕಲಾವಿದ ಎಸ್. ಶಿವರಾಮ್.

ಸ್ಪರ್ಧಾ ತೀರ್ಪು ಘೋಷಣೆಯ ಸಂದರ್ಭವನ್ನೊಮ್ಮೆ ಜ್ಞಾಪಿಸಿಕೊಳ್ಳಿ. ಪುಟ್ಟ ಮಕ್ಕಳು ಮುಖ ಮುಖ ನೋಡುತ್ತಿರುತ್ತಾರೆ. ಹೆತ್ತವರು ಆಕಾಶವೇ ತಲೆಮೇಲೆ ಬಿದ್ದಂತೆ ಬಿಳುಚಿರುತ್ತಾರೆ. ಅದಕ್ಕೆ ಪೂರಕವೋ/ಮಾರಕವೋ ಎಂಬಂತೆ ಕೆಟ್ಟ ಹಿನ್ನೆಲೆ ಧ್ವನಿ. ಒತ್ತಡ ಹೆಚ್ಚಿಸುವ ಉದ್ಘೋಷಕರ ವರ್ತನೆ. ಇವೆಲ್ಲಾ ಯಾಕೆ ಬೇಕು? ನೇರ, ಸಹಜವಾಗಿರಲು ಬರುವುದಲ್ಲವೇನು? ಈ ಉದ್ಘೋಷಕರ ಕೆಟ್ಟ ಕನ್ನಡ ಇದೆಯಲ್ಲಾ ಅದು ಕನ್ನಾಡಿಗೆ ಬಡಿದ ಶಾಪ! ಅವರು ಉದುರಿಸುವ ವಾಕ್ಯಗಳಲ್ಲಿ ಕನ್ನಡವನ್ನು ಹುಡುಕಬೇಕು! ಅದೇ ಪರಿಪಾಠ ಮಕ್ಕಳಿಗೂ ವರ್ಗಾವಣೆಯಾಗಿರುತ್ತದೆ. ರಿಯಾಲಿಟಿ ಶೋಗಳಲ್ಲಿ ಮಾತನಾಡುವ ಮಕ್ಕಳಿಗೂ ಅದು ಅಂಟಿರುತ್ತದೆ!

ಪ್ರೌಢರಂತೆ ಮಕ್ಕಳ ಮೇಲೆ ಒತ್ತಡಗಳನ್ನು ಹಾಕುವುದರಿಂದ ಮನಸ್ಸು ಅರಳುವುದಿಲ್ಲ. ವರುಷದ ಹಿಂದೆ ಇದೇ ರಿಯಾಲಿಟಿ ಶೋದಲ್ಲಿ ಅವಮಾನಿತಳಾದ ಬಾಲಕಿಯೊಬ್ಬಳು ಆತ್ಮಹತ್ಯೆಗೆ ಶರಣಾದುದು ಇನ್ನೂ ಹಸಿಯಾಗಿಯೇ ಇದೆ.'ಡ್ಯಾಡಿ ನಂ.1' ಎಂಬ ಶೋ ಬಂತಲ್ಲಾ. ಅದಕ್ಕೆ 'ಪ್ರಸಿದ್ಧ' ಅಂತ ಹಣೆಪಟ್ಟಿ. ಸ್ಪರ್ಧೆಯಡಿ ಮಗುವಿನ ಅಪ್ಪನನ್ನು ಹಿಗ್ಗಾಮುಗ್ಗಾ ದುಡಿಸಿದ್ದೇ ಬಂತು. ಬಹುಮಾನ ಬಂದವರು ಸಂತಸ ಪಟ್ಟರು. ಬಹುಮಾನ ಸಿಗದ ಮಗುವಿಗೆ ಅಪ್ಪನ ಮೇಲೆ ಎಂತಹ ದೃಷ್ಟಿ ಇರಬಹುದು ಹೇಳಿ! 'ನನ್ನಪ್ಪ ದಡ್ಡ, ಪ್ರಯೋಜನವಿಲ್ಲ' ಅಂತ ಭಾವ ಎಳವೆಯಲ್ಲೇ ಮೂಡಿದರೆ ಭವಿಷ್ಯದ ಸ್ಥಿತಿ! ಮಗು ಶಾಲಾಭ್ಯಾಸವನ್ನು ಮಾಡುತ್ತಿರುವಾಗ ಹೆತ್ತವರಿಗೆ ಸೀರಿಯಲ್ ನೋಡದೆ ನಿದ್ದೆ ಬಾರದು. ಬದುಕಿನಲ್ಲಿ ಹೊಸ ಹೊಸ ಸಮಸ್ಯೆಯನ್ನು ಸೃಷ್ಟಿಸುತ್ತ, ಕುಟುಂಬವನ್ನು ಛಿದ್ರ ಛಿದ್ರವನ್ನಾಗಿಸುವ ಹೂರಣದ ಸೀರಿಯಲ್ಗಳನ್ನು ಹೆತ್ತವರೊಂದಿಗೆ ಮಕ್ಕಳೂ ನೋಡ್ತಾರೆ. ಅಲ್ಲಿನ ಕ್ರೌರ್ಯ, ದಾಂಪತ್ಯದ ತುಣುಕುಗಳಿಗೆ ಉತ್ತರ ಸಿಗದೆ ಮಗು ಒದ್ದಾಡುವುದನ್ನು ಎಷ್ಟು ಮಂದಿ ಹೆತ್ತವರು ಗಮನಿಸಿದ್ದೀರಿ?

ಹಾಗಿದ್ದರೆ 'ಮನಸ್ಸು' ಅಂದರೇನು? ಅದಕ್ಕೆ ಬೇರೆ ಅರ್ಥ ಬೇಡ. ಮಗುವಿನ ಬೆಳವಣಿಗೆಗೆ ಪೂರಕವಾಗುವ ಸರಕುಗಳು ಅಂತ ಭಾವಿಸಿದರೆ ಸಾಕು. ಈ ಸರಕುಗಳನ್ನು ಒದಗಿಸಲು ಹೆತ್ತವರ ತ್ಯಾಗ ಬೇಕು. ಅಧ್ಯಾಪಕರ ಕಾಳಜಿ ಬೇಕು. ಬದಲಾಗುತ್ತಿರುವ ಕಾಲಘಟ್ಟದಲ್ಲಿ ಬದುಕು-ಶಿಕ್ಷಣ ಬದಲಾಗುತ್ತಲೇ ಇದೆ. ಇದಕ್ಕಾಗಿ ಮಕ್ಕಳನ್ನ ಎಳವೆಯಿಂದಲೇ ಸಜ್ಜುಗೊಳಿಸಬೇಕಾದ ಅನಿವಾರ್ಯತೆ ಇದೆ. ಮಗುವಿನ ಧಾರಣಶಕ್ತಿ ಮತ್ತು ಮನಸ್ಸನ್ನು ಹೆತ್ತವರೇ ಅರ್ಥಮಾಡಿಕೊಳ್ಳಬೇಕು. ಅದಕ್ಕೆ ಬೇಕಾದ ವಾತಾವರಣ ಕಲ್ಪಿಸಿದರೆ ಸಾಕು, ಆ ಪರೀಧಿಯಲ್ಲಿ ಮಗು ಬೆಳೆಯುತ್ತದೆ. ಬಾಲ್ಯ ಶಿಕ್ಷಣ ಮನೆಯಿಂದಲೇ ಶುರುವಾಗಲಿ. ಅದೂ ಮಾತೃಭಾಷೆಯಲ್ಲೇ. ಉಳಿದೆಲ್ಲಾ ಭಾಷೆಗಳ ಕಲಿಕೆಗಳು 'ಆಯ್ಕೆ'ಯಾಗಿರಲಿ. ಕಾಲ ಬದಲಾಗುತ್ತಿದೆ ಅಂತ ಮಕ್ಕಳ ಮೇಲೆ ಶಿಕ್ಷಣವನ್ನು ಹೇರಿದರೆ, ಅಂತಹ ಮಕ್ಕಳಿಗೆ ಅಕ್ಷರಗಳೆಲ್ಲಾ 'ಮಯಮಯ'ವಾಗಿ ಕಂಡರೆ ಯಾರನ್ನೂ ದೂಶಿಸಬೇಕಿಲ್ಲ! ಆಯ್ಕೆ ನಮ್ಮ ಮುಂದಿದೆ. ನಮ್ಮ ಏಳ್ಗೆಗೆ ನಾವೇ ಶಿಲ್ಪಿಗಳು.

Monday, November 2, 2009

ಜಾಲತಾಣ ಪ್ರಪಂಚಕ್ಕೆ ಅಡಿಕೆ ಪತ್ರಿಕೆ

ದೂರದೂರಿನ, ಕಡಲಾಚೆಯ, ಹಿತೈಷಿಗಳ, ಕೃಷಿ ಕುಟುಂಬದ ಐಟಿ ಬಂಧುಗಳ ಬಹುಕಾಲದ ಬೇಡಿಕೆ ಈಗ ಈಡೇರುವ ದಾರಿಯಲ್ಲಿದೆ. ಅಡಿಕೆ ಪತ್ರಿಕೆಯ ಜಾಲತಾಣ www.adikepatrike.com ರಾಜ್ಯೋತ್ಸವದಂದು ಶುಭಾರಂಭಗೊಂಡಿದೆ.

ಹಿಂದಿನ ತಿಂಗಳುಗಳ ಸಂಚಿಕೆಗಳನ್ನು ಇಳಿಸಿಕೊಳ್ಳಲು ಅವಕಾಶ. ಆಸಕ್ತರು ಇಡೀ ಸಂಚಿಕೆಯ ಪಿಡಿಎಫ್ ಕಡತವನ್ನು ಇಳಿಸಿಕೊಂಡು ಸಾವಕಾಶವಾಗಿ ಓದಿಕೊಳ್ಳಬಹುದು. ಚಿತ್ರಗಳೆಲ್ಲವೂ ವರ್ಣಮಯವಾಗಿರುವುದು ವಿಶೇಷ.

ನಿಕಟ ಭವಿಷ್ಯದಲ್ಲಿ ಆಸಕ್ತರು ಆನ್ಲೈನ್ ಚಂದಾದಾರರಾಗುವ ಅವಕಾಶವೂ ತೆರೆದುಕೊಳ್ಳಲಿದೆ. ಅಡಿಕೆ ಪತ್ರಿಕೆಯನ್ನು ನೀವೂ ಓದಿ. ಹಾಗೆಯೇ ನಿಮ್ಮ ಸ್ನೇಹಿತ, ಬಂಧುಗಳಿಗೆ, ಅನಿವಾಸಿ ಸ್ನೇಹಿತರಿಗೆ, ಎಲ್ಲಾ ಆಸಕ್ತ ಕೃಷಿಸ್ನೇಹಿಗಳಿಗೆ ನಮ್ಮ ಜಾಲತಾಣದ ವಿಳಾಸ ತಿಳಿಸಿ. ಓದಿ ಅಭಿಪ್ರಾಯ ತಿಳಿಸಲು ಸಲಹೆ ಮಾಡಿ.

Sunday, November 1, 2009

ಅಡಿಕೆ ಯಂತ್ರ ಮೇಳಕ್ಕೆ ತೆರೆ

ಅಡಿಕೆ ಸಂಶೋಧನೆ ಮತ್ತು ಅಭಿವೃದ್ಧಿ ಪ್ರತಿಷ್ಠಾನ (ರಿ) ಸಾರಥ್ಯದಲ್ಲಿ ವಿವೇಕಾನಂದ ವಿದ್ಯಾವರ್ಧಕ ಸಂಘ, ಪುತ್ತೂರು ಮತ್ತು ಫಾರ್ಮರ್ ಫಸ್ಟ್ ಟ್ರಸ್ಟ್ ಪುತ್ತೂರು ಇವರ ಹೆಗಲೆಣೆಯೊಂದಿಗೆ ಅಕ್ಟೋಬರ್ 30, 31 ಮತ್ತು ನವೆಂಬರ್ 1ರಂದು ಪುತ್ತೂರಿನ ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನಲ್ಲಿ ನಡೆದ 'ಅಡಿಕೆ ಯಂತ್ರ ಮೇಳ'ಕ್ಕಿಂದು ತೆರೆ.
* ಸ್ವಾಗತ - ಶ್ರೀ ಪಡ್ರೆ, ಕಾರ್ಯನಿರ್ವಾಹಕ ಸಂಪಾದಕ, ಅಡಿಕೆ ಪತ್ರಿಕೆ
* ಸಮಾರೋಪ ಭಾಷಣ : ಪ್ರೊ: ಅನಿಲ್ ಕೆ.ಗುಪ್ತಾ, ಪ್ರೊಫೆಸರ್, ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್, ಅಹಮದಾಬಾದ್, ನ್ಯಾಶನಲ್ ಇನ್ನೋವೇಶನ್ ಪೌಂಡೇಶನ್ ಇದರ ಕಾರ್ಯಕಾರಿ ಉಪಾಧ್ಯಕ್ಷರು - "ಅಡಿಕೆ ಸಂಸ್ಕರಣೆ ಮತ್ತು ಸಿಂಪಡಣೆಯ ಸಂಶೋಧನೆಯಲ್ಲಿ ರೈತರೇ ಇಷ್ಟೊಂದು ಉತ್ಸಾಹದಿಂದ ಮುಂದೆ ಬಂದಿರುವುದು ನಿಜಕ್ಕೂ ಅದ್ಭುತ. ಕ್ಯಾಂಪ್ಕೋ, ವಿವೇಕಾನಂದ ಸಂಸ್ಥೆಗಳು, ಹಿರಿಯ ಸಂಶೋಧಕರು ಮತ್ತು ಇತರ ತಾಂತ್ರಿಕ ಅನುಭವವುಳ್ಳ ಹಿರಿಯರನ್ನೊಳಗೊಂಡ ಒಂದು ಸಲಹಾ ಸಮಿತಿ ರಚಿಸಿ, ಇದರಿಂದ ಸಂಶೋಧನೆಗೆ ಏನು ಅಗತ್ಯಗಳಿವೆ ಎಂಬುದನ್ನು ವಿಷದವಾಗಿ ವಿಶ್ಲೇಷಿಸಿ ನಮ್ಮ ನ್ಯಾಶನಲ್ ಇನೋವೇಶನ್ ಪೌಂಡೇಶನ್ ಸಂಸ್ಥೆಗೆ ಕಳುಹಿಸಿಕೊಟ್ಟರೆ ಸರ್ವಸಾಧ್ಯ ಸಹಕಾರವನ್ನು ನೀಡುತ್ತೇವೆ. ಇದರಲ್ಲಿ ಆರ್ಥಿಕ ಕೊಡುಗೆ ಹೆಚ್ಚು ಇರದು, ಆದರೆ ತಾಂತ್ರಿಕ ಮತ್ತಿತರ ಸಹಾಯವನ್ನು ನೀಡುವುದಲ್ಲದೆ, ಸಂಶೋಧಕರು ಬಯಸಿದರೆ ಅವರ ಸಂಶೋಧನೆಯು ಇನ್ನಷ್ಟು ಸುಧಾರಿಸುವಲ್ಲಿ ನಮ್ಮ ಸಹಾಯ ಹಸ್ತ ಇದೆ. ಎನ್.ಐ.ಫ್ ಪ್ರಯತ್ನದಿಂದ ಇದುವರೆಗೆ ಇನ್ನೂರ ಮೂವತ್ತೆಂಟು ಗ್ರಾಮೀಣ ಪೇಟೆಂಟ್ಗಳು ಸಿಕ್ಕಿವೆ. ಕಾಲೇಜುಗಳ ಮತ್ತು ಹೈಸ್ಕೂಲ್ಗಳಲ್ಲಿರುವ ವಿದ್ಯಾರ್ಥಿ ಶಕ್ತಿಯು ನಮ್ಮ ಅತಿ ದೊಡ್ಡ ಶಕ್ತಿ. ಬೆಳಕಿಗೆ ಬಾರದ ಗ್ರಾಮೀಣ ಪ್ರತಿಭೆಗಳು, ಸಂಶೋಧನೆ, ಅನುಶೋಧನೆಗಳನ್ನು ಹೊರತರುವ ಕೆಲಸಗಳಿಗೆ ಇವರನ್ನು ಹಚ್ಚಿ ದಯವಿಟ್ಟು ಪ್ರೇರೇಪಿಸಿ. ನಮ್ಮ ಇಂತಹ ಪ್ರಯತ್ನಗಳು ಬೇರೆಡೆ ಸಾಕಷ್ಟು ಫಲ ಕೊಟ್ಟಿದೆ.
ಶುಭಾಶಂಸನೆ : * ಕೆ.ಸಂತೋಷ್ ಕುಮಾರ್ ಭಂಡಾರಿ, ಅಧ್ಯಕ್ಷರು, ದ.ಕ.ಜಿಲ್ಲಾ ಪಂಚಾಯತ್ * ರಾಜೇಶ್ ಬನ್ನೂರು, ಪುರಸಭಾಧ್ಯಕ್ಷರು, ಪುತ್ತೂರು - ಇವರಿಂದ ಸಮಯೋಚಿತ ಮಾತು.
* ಸಂಶೋಧಕರಿಗೆ ಪ್ರಮಾಣ ಪತ್ರ ನೀಡಿದವರು - ಬಿ.ನಾಗರಾಜ ಶೆಟ್ಟಿ, ಅಧ್ಯಕ್ಷರು, ಕರಾವಳಿ ಅಭಿವೃದ್ಧಿ ಪ್ರಾಧಿಕಾರ * ಸಂಶೋಧಕರಾದ ಎನ್. ಶಿವಶಂಕರ ಭಟ್, ಅಗಸಿ ಟೆಕ್ನಾಲಜೀಸ್, ಬೆಂಗಳೂರು ಮತ್ತು ಶ್ರೀಮತಿ ಗೀತಾ, ದುರ್ಗಾ ಮೆಕ್ಯಾನಿಕಲ್ ವಕ್ಸ್ಸ್ರ, ಗೋವಾ. - ಇವರಿಂದ ಅನಿಸಿಕೆ.
* ಎಸ್.ಆರ್.ರಂಗಮೂರ್ತಿಯವರಿಂದ ವಿವಿಧ ವ್ಯವಸ್ಥಾ ವಿಭಾಗಗಳ ಸಂಘಟಕರಿಗೆ ನೆನಪಿನ ಕಾಣಿಕೆ ನೀಡಿಕೆ
* ಉಪಸಂಹಾರ : ಕ್ಯಾಂಪ್ಕೋ ಅಧ್ಯಕ್ಷ ಎಸ್.ಆರ್.ರಂಗಮೂರ್ತಿಯವರಿಂದ ಎಲ್ಲಾ ಸಂಶೋಧಕರನ್ನು ಒಂದೇ ಸೂರಿನಡಿಯಲ್ಲಿ ತಂದು, ರೈತರಿಗೆ ಮಾಹಿತಿ ನೀಡಲು ಅಡಿಕೆ ಯಂತ್ರ ಮೇಳವನ್ನು ಆಯೋಜಿಸಿದ್ದೇವೆ ಉದ್ದೇಶ ಸ್ಪಷ್ಟನೆ.
* ಅಧ್ಯಕ್ಷರ ಮಾತು : ಸಭಾಧ್ಯಕ್ಷ ಶ್ರೀ ನಾಗರಾಜ ಇತರ ದೇಶಗಳ ತಂತ್ರಜ್ಞಾನಗಳನ್ನು ಬಳಸಿಕೊಂಡು ವೈಜ್ಙಾನಿಕವಾಗಿ ಕೃಷಿ ಮಾಡಬೇಕು. ಅಡಿಕೆಯ ಪರ್ಯಾಯ ಬಳಕೆಯ ಬಗ್ಗೆ ಒತ್ತು ನೀಡಬೇಕಾದ ಅನಿವಾರ್ಯತೆ ಬಂದಿದೆ' ಎಂದರು.
* ಅತಿಥಿಗಳಿಗೆ ಸ್ಮರಣಿಕೆ - ಶ್ರೀನಿವಾಸ ಆಚಾರ್, ಅಧ್ಯಕ್ಷರು ಫಾರ್ಮರ್ ಫಸ್ಟ್ ಟ್ರಸ್ಟ್ ಮತ್ತು ಮಧುಸೂದನ ರಾವ್, ಆಡಳಿತ ನಿರ್ದೇಶಕರು , ಕ್ಯಾಂಪ್ಕೋ ಲಿ.,* ಧನ್ಯವಾದ - ಶ್ಯಾಮ ಭಟ್, ಮಹಾಪ್ರಬಂಧಕರು, ಕ್ಯಾಂಪ್ಕೋ ಲಿ., ಮಂಗಳೂರು ಮತ್ತು ಸಂಚಾಲಕರು, ಅಡಿಕೆ ಯಂತ್ರ ಮೇಳ-೦೯
* ನಿರ್ವಹಣೆ : ಉಪನ್ಯಾಸಕರಾದ ಡಾ.ಶ್ರೀಶಕುಮಾರ್. ಹರಿಪ್ರಸಾದ್
* ಸಮ್ಮೇಳನ ವಿಶೇಷ: ಮೂರೂ ದಿವಸಗಳಲ್ಲಿ ಸುಮಾರು ಮೂವತ್ತು ಸಾವಿರಕ್ಕೂ ಅಧಿಕ ಕೃಷಿಕರು ಭಾಗವಹಿಸಿದ್ದರು.
ಚಿತ್ರ : ಶಶಿ ಪುತ್ತೂರು