Sunday, November 29, 2009

ಎಳನೀರ ಕಣ್ಣೀರಿಗೆ ಶಾಪಮೋಕ್ಷ!

ತುಮಕೂರು ಜಿಲ್ಲೆಯ ಬಿಳಿಗೆರೆಯ 'ಎಳನೀರು ಮೇಳ'ಕ್ಕೆ ಹೋಗುತ್ತಿದ್ದಾಗ ಮಾರ್ಗ ಮಧ್ಯದಲ್ಲಿ ಬಸ್ಸಿಗೆ ವಿರಾಮವಿತ್ತು. ನಮ್ಮ ಸರಕಾರಿ ಬಸ್ಸೇ ಹಾಗಲ್ವಾ.. 'ಅವರಿಗಿಷ್ಟ ಬಂದಲ್ಲಿ ನಿಲುಗಡೆ, ಊಟ-ತಿಂಡಿ'! 'ಬನ್ರಿ..ಎಳನೀರು ಕುಡೀರಿ..ಇದು ಊರಿದ್ದು..ಹದಿನಾರು ರೂಪಾಯಿ. ಇದು ಹಾಸನ ಕಡೆಯವು..ಹತ್ತೇ ರೂಪಾಯಿ..' ಎಳನೀರನ್ನು ಪೇರಿಸಿಟ್ಟ ಗಾಡಿವಾಲಾನಿಂದ ನಾನ್ಸ್ಟಾಪ್ ಉವಾಚ!

'ಎಳನೀರಿಗೆ ಹದಿನಾರು ರೂಪಾಯಿ'! 'ಗೆಂದಾಳಿ'ಗೆ ಇಪ್ಪತ್ತಂತೆ! ಇದೇ ಗುಂಗಿನಲ್ಲಿ ಬಿಳಿಗೆರೆ ಎಳನೀರು ಮೇಳ ತಲುಪಿದಾಗ, 'ಬನ್ರಿ ಕೇವಲ ಐದು ರೂಪಾಯಿ.. ಮೇಳದ ಆಫರ್.. ಮತ್ತದೇ ಕೂಗು! ಮತ್ತೆ ತಿಳಿಯಿತು - 'ಇಲ್ಲಿ ಎಳನೀರು ಬಳಕೆಯೇ ಇಲ್ಲ.' ದಶಕಕ್ಕಿಂತಲೂ ಹಿಂದೆ ತೆಂಗಿನಕಾಯಿಯನ್ನು ಕೇಳುವವರು ಇಲ್ಲದೇ ಇದ್ದ ಹೊತ್ತಲ್ಲಿ ದಕ್ಷಿಣ ಕನ್ನಡದಲ್ಲಿ 'ಬೊಂಡ ಮೇಳ' ಯಶಸ್ವಿಯಾಗಿತ್ತು.

'ಸರ್.. ಇಲ್ಲಿ ಎಳ್ನೀರ್ ಕುಡಿಯೋರಿಲ್ಲ. ಎಳ್ನೀರ್ ಕೀಳೋದು ಬದುಕಿನಲ್ಲಿ ದಟ್ಟ ದರಿದ್ರ ಸ್ಥಿತಿ ತಲುಪಿರೋರು ಮಾತ್ರ ಎಂಬ ಭಾವನೆ ಇದೆ. ಒಂದು ವೇಳೆ ಕುಡಿಯುವುದಿದ್ದರೂ ಮರದಿಂದ ಬಿದ್ದವನ್ನು ಮಾತ್ರ ಕುಡಿಯೋದು' ಮೇಳದ ಸಂಘಟಕ ಬಿಳಿಗೆರೆ ಕೃಷ್ಣಮೂರ್ತಿ ಆಶಯವನ್ನು ಕಟ್ಟಿಕೊಟ್ಟರು.

ತುಮಕೂರು ಜಿಲ್ಲೆಯಲ್ಲಿ ತೆಂಗನ್ನು ಕೊಬ್ಬರಿ ಮಾಡಿ ಮಾರುವ ಪಾರಂಪರಿಕ ಪದ್ಧತಿಗೆ ಜನ ಒಗ್ಗಿಹೋಗಿದ್ದಾರೆ. ಆರ್ಥಿಕವಾಗಿ ಕೃಷಿಕರಿಗಿದು ಆಧಾರ. ಇಲ್ಲಿನ ಬಹುಪಾಲು ಕೊಬ್ಬರಿಗೆ ಉತ್ತರ ಭಾರತ ಮಾರುಕಟ್ಟೆ. ತುಮಕೂರು, ಪಕ್ಕದ ಹಾಸನ ಜಿಲ್ಲೆಯವರೆಗಿನ ಕೊಬ್ಬರಿಗಳೆಲ್ಲಾ 'ತುಮಕೂರು ಕೊಬ್ಬರಿ' ಅಂತಲೇ ಪ್ರಸಿದ್ಧ.

ದರದಲ್ಲಿ ಸ್ಥಿರತೆಯಿಲ್ಲ. ಈ ವರುಷ ಬಂಪರ್ ಬೆಲೆಯಾದರೆ ಮುಂದಿನ ವರುಷ ಕಣ್ಣೀರು! ಎಲ್ಲವೂ ಉದ್ದಿಮೆಗಳ ಮತ್ತು ವ್ಯಾಪಾರಿಗಳ ಮುಷ್ಠಿಯೊಳಗೆ! 'ಕೊಬ್ಬರಿ ಕ್ವಿಂಟಾಲಿಗೆ ಎರಡೂವರೆ ಸಾವಿರ ಆದುದೂ ಇದೆ. ಕನಿಷ್ಠ ಆರು ಸಾವಿರವಾದರೂ ಸಿಗಲೇ ಬೇಕು. ಪ್ರಸ್ತುತ ನಾಲ್ಕೂವರೆ ಸಾವಿರದ ಹತ್ತಿರ ದರವಿದೆ' ಅಂಕಿಅಂಶ ಮುಂದಿಡುತ್ತಾರೆ ಬಿಳಿಗೆರೆಯ ಕೃಷಿಕ ಮುಹಾಲಿಂಗಯ್ಯ.

ಹತ್ತಿರದಲ್ಲೇ ಹೆದ್ದಾರಿಯಿದ್ದರೂ ಎಳನೀರು ಮಾರಾಟದ ಒಂದೇ ಒಂದು 'ಗಾಡಿ' ಕಾಣ ಸಿಗುವುದಿಲ್ಲ. 'ಎಳನೀರಿನಲ್ಲಿ ನಷ್ಟ - ಕೊಬ್ಬರಿಯಲ್ಲಿ ಲಾಭ' ಎನ್ನುವ ಭಾವನೆ. ಎಳನೀರಿನಿಂದ ಕಾಯಿ ಆಗಲು ಏಳೆಂಟು ತಿಂಗಳು ಬೇಕು. ಕಿತ್ತ ಕಾಯಿಗೆ ಮತ್ತೆ ಅಷ್ಟೇ ತಿಂಗಳು ಗೃಹಬಂಧನ. ಸುಮಾರು ಒಂದೂವರೆ ವರುಷದ ಪ್ರಕ್ರಿಯೆ. ನಂತರವಷ್ಟೇ ಇಳಿಸಿ ಸಿಪ್ಪಿ ಬಿಚ್ಚಿ, ಗೆರಟೆ ಕಳಚಿದ ಕೊಬ್ಬರಿ ಮಾರುಕಟ್ಟೆಗೆ.

ಮೇಳದಲ್ಲಿ ಭಾಗವಹಿಸಿದ ಮೀಯಪದವಿಯ ಡಾ.ಡಿ.ಕೆ.ಚೌಟ ಅವರು ಮುಂದಿಟ್ಟ ಸೂಕ್ಷ್ಮ ಲೆಕ್ಕಾಚಾರವು ಮೇಳ ಮುಗಿದ ನಂತರವೂ ಮಾತಿನ ವಿಷಯವಾಗಿತ್ತು - 'ಕೊಬ್ಬರಿಗಿಂತ ಎಳನೀರು ಮಾರಾಟ ಮಾಡಿದರೆ ಒಂದೂವರೆ ವರುಷ ಮೊದಲೇ ಹಣ ಸಿಗುತ್ತದೆ. ಕೊಬ್ಬರಿ ಮಾಡಿಯೇ ಮಾರಾಟ ಮಾಡಬೇಕೆಂದರೆ ಕಾಯಬೇಕು. ನಿರೀಕ್ಷಿತ ದರ ಸಿಕ್ಕರೆ ಓಕೆ. ಇಲ್ಲದಿದ್ದರೆ ಅದೃಷ್ಟವನ್ನು ಯಾಕೆ ಹಳಿಯಬೇಕು? ಎಳನೀರಿಗೆ ಆರು ರೂಪಾಯಿ ಸಿಕ್ಕರೆ, ಕೊಬ್ಬರಿಗೆ ಏಳು ಸಿಗಲೇ ಬೇಕಲ್ವಾ.. ಅಷ್ಟು ಸಿಗುತ್ತಾ? ನನ್ನ ಅನುಭವದಂತೆ ಎಳನೀರು ಕಿತ್ತರೆ ಮುಂದಿನ ಋತುವಿನಲ್ಲಿ ಹೆಚ್ಚು ಕಾಯಿ ಹಿಡಿವ ಕ್ಷಮತೆಯನ್ನು ಮರವೇ ವೃದ್ಧಿಸಿಕೊಳ್ಳುತ್ತದೆ. ತೆಂಗು ಮಾಗುವ ತನಕದ ನೀರು-ಗೊಬ್ಬರ ಪರೋಕ್ಷ ಉಳಿತಾಯವಲ್ವಾ'.

ಇಲ್ಲಿ ಎಳನೀರು ಮಾರಲು ಕೆಲವು ಪ್ರಾಕ್ಟಿಕಲ್ ಸಮಸ್ಯೆಯಿದೆ. ಮರವೇರಲು ಜನ ಸಿಕ್ಕದೇ ಇರುವುದು ಒಂದಾದರೆ, ಎಳನೀರು ಮಾರುವವ ದರಿದ್ರ ಸ್ಥಿತಿಗೆ ತಲುಪಿದವ ಎಂಬ ಮಾನಸಿಕ ತಡೆ! (ಮೆಂಟಲ್ ಬ್ಲಾಕ್) ಈ ಸ್ಥಿತಿಯನ್ನು ಮೇಳದ ಸಾರಥ್ಯ ವಹಿಸಿದ ಕೃಷ್ಣ ಮೂರ್ತಿ, ವಿಶ್ವನಾಥ್ ಮತ್ತು ಸಮಾನಾಸಕ್ತರು ಬದಲಾಯಿಸುವ ನಿರ್ಧಾರ ಮಾಡಿದರು. ಬಿಳಿಗೆರೆಯಲ್ಲೇ 'ಎಳನೀರ್ ಊರ್' ಎಂಬ ಮಾರಾಟ ಮಳಿಗೆ ಆರಂಭ. 'ಎಳನೀರು ಕುಡಿಯಿರಿ - ಆರೋಗ್ಯ ವೃದ್ಧಿಸಿಕೊಳ್ಳಿ' ಅಂತ ಪ್ರಚಾರ ಫಲಕಗಳು. 'ಕೆಲವರು ಗೇಲಿ ಮಾಡಿದರು - ಇನ್ನೂ ಕೆಲವರು ಮುಖ ತಿರುಗಿಸಿದರು' ನೆನಪಿಸುತ್ತಾರೆ ಕೃಷ್ಣ ಮೂರ್ತಿ.

ಮಾರಾಟ ವ್ಯವಸ್ಥೆಗಾಗಿ 'ಸೌಹಾರ್ದ ಸಹಕಾರಿ ಸಂಘ' ಸ್ಥಾಪನೆ. ಸದಸ್ಯತನಕ್ಕೆ ಮುನ್ನೂರೈವತ್ತು ರೂಪಾಯಿ. ಈಗಾಗಲೇ ಸಂಘಕ್ಕೆ ನಲವತ್ತು ಮಂದಿ (ಸದಸ್ಯರು) ಎಳನೀರು ನೀಡಲು ಮುಂದಾಗಿದ್ದಾರೆ! ಎಳನೀರು ಕೊಯ್ಲಿಗೆ ಸಂಘದಿಂದ ನಿಯುಕ್ತಿ ಹೊಂದಿದ ಸಿಬ್ಬಂದಿ. ಕೀಳಲು ಒಂದು ರೂಪಾಯಿ. ಕೆತ್ತಿ ಕೊಡಲು ಪುನಃ ಒಂದು ರೂಪಾಯಿ. ಒಂಭತ್ತು ರೂಪಾಯಿಗೆ ಮಾರಾಟ. ದಿನಕ್ಕೆ ಏನಿಲ್ಲವೆಂದರೂ ನೂರಕ್ಕೂ ಮಿಕ್ಕಿ ಮಾರಾಟ.

'ರೊಕ್ಕ ತಕ್ಷಣ ಸಿಗುತ್ತದಲ್ವಾ. ಹಾಗಾಗಿ ಎಳನೀರು ತಂದು ಕೊಡುವಷ್ಟು ಕೆಲವು ಕೃಷಿಕರು ತಯಾರಾಗಿದ್ದಾರೆ. ಇನ್ನಷ್ಟು ಸಿದ್ಧರಾಗುತ್ತಿದ್ದಾರೆ' ಎನ್ನುತ್ತಾರೆ ಸಂಘದ ಅಧ್ಯಕ್ಷ ಶಿವಶಂಕರಪ್ಪ. ಎಳನೀರು ಒದಗಿಸುವ ರೈತರ ಸಂಖ್ಯೆ ಹೆಚ್ಚಾದರೆ ತುಮಕೂರಿನಲ್ಲೂ ಮಳಿಗೆಯೊಂದನ್ನು ತೆರೆಯುವ ಆಸೆ ಇವರಿಗಿದೆ. ಹೆದ್ದಾರಿಯಲ್ಲಿ ಮೂರ್ನಾಲ್ಕು ಕಡೆಗಳಲ್ಲಿ ಮಳಿಗೆ ತೆರೆಯುವುದು ಸಂಘದ ನಿಕಟ ಭವಿಷ್ಯದ ಯೋಜನೆ-ಯೋಚನೆ.

ಎಳನೀರು ಕುಡಿಯುವವರ ಸಂಖ್ಯೆ ಹೆಚ್ಚಾಗುತ್ತಿದೆಯಂತೆ. ಬೆಳೆದ ಎಲ್ಲವನ್ನೂ ಕೊಬ್ಬರಿ ಮಾಡಿದರೆ ಉಳಿಗಾಲವಿಲ್ಲ ಎಂಬ ಸತ್ಯ ಕೆಲವು ಕೃಷಿಕರಿಗೆ ಮನವರಿಕೆಯಾಗಿದೆ. ಬೆಳೆದ ಅರ್ಧದಷ್ಟಾದರೂ ಎಳನೀರು ಮಾರಾಟ, ಮೌಲ್ಯವರ್ಧನೆ ಮಾಡುವ ಮೂಲಕವೋ ಮಾರುಕಟ್ಟೆ ಮಾಡಲೇಬೇಕು - ಎಂಬ ವಿಚಾರ ತಲೆಯೊಳಗೆ ಹೊಕ್ಕಿರುವುದು ಸಂತೋಷ ಸುದ್ದಿ.

ಇದೆಲ್ಲಾ ಒಬ್ಬಿಬ್ಬರು ಮಾಡುವಂತಹುದಲ್ಲ. ಸಮಷ್ಠಿ ಕೆಲಸ. ಆಗಲೇ ಸಮಸ್ಯೆಗೆ ಪರಿಹಾರ. ಎಳನೀರು ಮಾರಾಟ ಸಾಧ್ಯವೇ ಇಲ್ಲ ಎನ್ನುವ ಬಿಳಿಗೆರೆಯಲ್ಲಿ 'ಎಳನೀರು ಸ್ಟಾಲ್' ಶುರುವಾದುದು ಇತಿಹಾಸ. ಮೀಯಪದವಿನ ಡಾ.ಚೌಟರು ತಮ್ಮೂರಿನಲ್ಲಿ ಎಳನೀರಿಗೆ ಮಾರುಕಟ್ಟೆಯನ್ನು ರೂಪಿಸಿರುವ ಯಶೋಗಾಥೆ ಮುಂದಿದೆ. ಇಲ್ಲಿ ಎಳನೀರು ಕುಡಿಯುವವರು ಯಾರು ಗೊತ್ತಾ - ಕೂಲಿ ಕಾರ್ಮಿಕರು, ಮಧ್ಯಮ ವರ್ಗದ ಜನರು!

'ನಾವೂ ಮೀಯಪದವಿನಂತೆ ಮಾರುಕಟ್ಟೆ ಹಿಡಿದು ಬದುಕಿನ ನರಳಾಟವನ್ನು ಯಾಕೆ ಕಡಿಮೆಗೊಳಿಸಬಾರದು' ಮೇಳದಲ್ಲಿ ಭಾಗವಹಿಸಿದ್ದ ಹಿರಿಯ ಸಾಹಿತಿಗಳಾದ ಲಿಂಗದೇವರು ಹಳೆಮನೆ ರೈತರಿಗೆ ವಿಶ್ವಾಸ ತುಂಬುತ್ತಾ, 'ತೆಂಗು, ಕೊಬ್ಬರಿ ಅಂತ ವ್ಯಾಪಾರಿಗಳಲ್ಲಿ ಮುಂಗಡ ತೆಕ್ಕೊಂಡು, ಸಾಲ ಮಾಡಿ, ಅದರ ಬಡ್ಡಿ ಕಟ್ಟಲೂ ಹರ ಸಾಹಸ ಪಡುತ್ತಾ ಜೀವಿಸೋದಕ್ಕಿಂತ ಸುಲಭದಲ್ಲಿ ರೊಕ್ಕ ಬರುವ ಎಳನೀರನ್ನು ಮಾರ್ರಿ. ಮೌಢ್ಯವನ್ನು ಕಟ್ಟಿಡಿ' ಎಂದರು. ಮುಂದಿನ ಬದಲಾವಣೆ ಕಣ್ಣ ಮುಂದಿದೆ.
ಇಷ್ಟೆಲ್ಲಾ ಮಾಡಿದರೂ, 'ವಾರಕ್ಕೆ ಕನಿಷ್ಠ ಹತ್ತು ಸಾವಿರ ಎಳನೀರಿಗೆ ಬೇರೆಡೆಯಿಂದ ಬೇಡಿಕೆಯಿದೆ. ಎಳನೀರೂ ಮರದಲ್ಲಿದೆ. ಆದರೆ ರೈತರು ಕೊಡೊಲ್ಲ' ರೈತರ ಮನೋಸ್ಥಿತಿಗೆ ವಿಷಾದಿಸುತ್ತಾರೆ ಬಿಳಿಗೆರೆ ಕೃಷ್ಣ ಮೂರ್ತಿ..

2 comments:

ವೆಂಕಟಕೃಷ್ಣ ಕೆ ಕೆ ಪುತ್ತೂರು said...

ಇಂದಿನ ತೆಂಗು ಮಾರುಕಟ್ಟೆಯನ್ನು
ಗಮನಿಸಿದರೆ ನಮ್ಮ ದಕ್ಷಿಣ ಕನ್ನಡದಲ್ಲೂ
ಮತ್ತೆ ತೆಂಗು ಮೇಳ ಗಳು ನಡೆಯಲೇ ಬೇಕು .
ಎನಂತಿರಿ ?
ತುಮಕೂರಿನ ಮಾದರಿ ಪುತ್ತುರಿಗೂ ಬರಲಿ .

prasca said...

ಒಂದು ಗೊನೆಯಲ್ಲಿ ೫-೬ ಎಳನೀರು ಬುರುಡೆಗಳನ್ನು ಕಿತ್ತರೆ ಪರವಾಗಿಲ್ಲ. ಆದರೆ ನೀವು ಹೇಳಿದಂತೆ ಇಡೀ ಗೊನೆಯನ್ನೆ ಇಳಿಸಿದರೆ ಮರ ೫-೬ ವರ್ಷದಲ್ಲಿ ಮುರುಟಿ ಹೋಗುವುದು ಸಿದ್ದ. ತುರುವೇಕೆರೆಯಲ್ಲಿ ತೆಂಗಿನ ತೋಟದ ಪದವಿಧರನ ಅನುಭವ ಇದು.

Post a Comment