Wednesday, November 11, 2009

ಮಕ್ಕಳಿಗೂ ಒಂದು ಮನಸ್ಸಿದೆ!

'ಮಕ್ಕಳೇ.. ಮಹಾತ್ಮ ಗಾಂಧೀಜಿ ಭಾರತಕ್ಕೆ ಸ್ವಾತಂತ್ರ್ಯ ತಂದು ಕೊಟ್ಟರು ಚಾಚಾ ನೆಹರು ಗೊತ್ತಲ್ಲಾ.. ಇಂದು ಅವರ ಜನ್ಮ ದಿನಾಚರಣೆ.. ಅವರು ಮಕ್ಕಳನ್ನು ಪ್ರೀತಿಸುತ್ತಿದ್ದರು.. ಹಾಗಾಗಿ ಇಂದು ಮಕ್ಕಳ ದಿನಾಚರಣೆ' ತರಗತಿಯಲ್ಲಿ ಟೀಚರ್ ಹೇಳುತ್ತಾ ಇದ್ದಂತೆ ಬೆರಗು ಕಂಗಳಿಂದ ಕೇಳಿಸಿಕೊಳ್ಳುವ ಪುಟ್ಟ ಕಂದಮ್ಮಗಳು. ಟೀಚರ್ ಹೇಳಿದ್ದನ್ನೇ ಮನೆಯಲ್ಲಿ ಉರುಹೊಡೆವ ಎಳೆ ಮನಸ್ಸುಗಳು. ನಮ್ಮ ಬಹುತೇಕ ಪ್ರಾಥಮಿಕ ಶಾಲೆಗಳ ಮಕ್ಕಳ ದಿನಾಚರಣೆ ಇಲ್ಲಿಗೆ ಮುಗಿಯುತ್ತದೆ!

ನೆಹರೂರವರ ಕಪ್ಪು ಕೋಟಿನ ಜೇಬಿಗೆ ಗುಲಾಬಿ ಸಿಕ್ಕಿಸಿದ ಚಿತ್ರವನ್ನು ಮಕ್ಕಳ ಮುಂದೆ ಈಗಲೂ ಬಿಂಬಿಸಲಾಗುತ್ತದೆ. ಗುಲಾಬಿ ಮುದುಡಿದಾಗ ಒಂದು ಸೌಂದರ್ಯ, ಅರಳಿದಾಗ ಮತ್ತೊಂದು ಸೌಂದರ್ಯ. ಇನ್ನೇನು ಕ್ಷಣಗಳ ಲೆಕ್ಕಣಿಗೆ ಮುಂದೊತ್ತುತ್ತಿದ್ದಂತೆ ಅರಳಿದ ಹೂಗಳ ಪಕಳೆಗಳು ಬೇರ್ಪಡಲು ಹವಣಿಸುತ್ತವೆ. ಇದನ್ನೇ ಮಕ್ಕಳಿಗೆ ಹೋಲಿಸಿ. ಮಕ್ಕಳ ಮನಸ್ಸು ಮುದುಡಿದ ಗುಲಾಬಿಯಂತೆ. ಅದನ್ನು ಬೌದ್ಧಿಕ ಜ್ಞಾನದಿಂದ ಅರಳಿಸುವ ಕೆಲಸ ಮಾಡಿದಾಗ, ಮುಂದದು ಮಾಗಿ ಹಲವು ಪ್ರತಿಭೆಗಳ ಪಕಳೆಗಳಾಗಿ ಅನಾವರಣಗೊಳ್ಳುತ್ತವೆ. ಗುಲಾಬಿಯ ಈ ಉಪಮೆ ನಮ್ಮ ಎಷ್ಟು ಶಾಲೆಗಳಲ್ಲಿ ಅನುಷ್ಠಾನಗೊಳ್ಳುತ್ತವೆ. ಎಷ್ಟು ಮನೆಗಳಲ್ಲಿ ಮಕ್ಕಳ ಮನಸ್ಸನ್ನು ಅರಳಿಸುವ ಕೆಲಸ ನಡೆಯುತ್ತವೆ?

ಮಗುವಿನ ಮನಸ್ಸು 'ಮಣ್ಣಿನ ಮುದ್ದೆ'! ಅದಕ್ಕೆ ಆಕಾರವನ್ನು ಕೊಡುವ ಮೊದಲ ಕೆಲಸ ಮನೆಯಿಂದಾಗಬೇಕು. ಅದು ಒಪ್ಪ-ಓರಣಗೊಳ್ಳುವುದು ಶಾಲಾ ತರಗತಿಗಳಲ್ಲಿ. ಮಕ್ಕಳು ಐದರ ತನಕ ಮುದ್ದುಮುದ್ದಾಗಿ ಕಲಿಯುತ್ತವೆ. ನಂತರ ಶುರುವಾಯಿತು ನೋಡಿ - ಭರತನಾಟ್ಯ, ಸಂಗೀತ, ಡ್ಯಾನ್ಸ್ ಇನ್ನೂ ಏನೇನೋ. ಶಾಲಾಭ್ಯಾಸದೊಂದಿಗೆ ಮತ್ತಷ್ಟು ಹೊರೆ.

ತನ್ನ ಮಗುವಿಗೆ ಸಂಗೀತಕ್ಕೆ ಬೇಕಾದ ಸ್ವರ ಇದೆಯೋ? ಅದಕ್ಕಿಂತ ಮುಖ್ಯವಾಗಿ ನಮಗೆ ಸಂಗೀತ ಜ್ಞಾನ ಏನಾದರೂ ಇದೆಯೋ ಅಥವಾ ಸಂಗೀತವನ್ನು ಹಾರ್ದಿಕವಾಗಿ ಗೌರವಿಸುವ ಮನಸ್ಸಾದರೂ ನಮಗಿದೆಯೇ? ಈ ಯಾವ ಪ್ರಶ್ನೆಗೆ ಉತ್ತರವನ್ನು ಕಂಡುಕೊಳ್ಳದೆ 'ನನ್ನ ಮಗು ಸಂಗೀತ ಕಲಿಯಬೇಕು' ಎಂದರೆ ಕಲಿಸುವ ಗುರುಗಳಿಗೊಂದು ಶಿಕ್ಷೆ. ಮಗುವಿನ ಧಾರಣ ಶಕ್ತಿಯನ್ನು ಎಷ್ಟು ಮಂದಿ ಹೆತ್ತವರು ಅರ್ಥಮಾಡಿಕೊಂಡಿದ್ದಾರೆ? ಆದರೆ ಈ ಹಿನ್ನೆಲೆಯಿರುವ ಕೆಲವು ಮಕ್ಕಳು ಯಶಸ್ಸಾಗುತ್ತಾರೆ. ಮಗುವಿನ ತುಡಿತವನ್ನು ಅರ್ಥಮಾಡಿಕೊಂಡು ಪೋಷಿಸಿದರೆ ಉತ್ತಮ ಬೆಳೆ ಖಂಡಿತ.

ಚೆನ್ನರಾಯಪಟ್ನದ ಸ್ನೇಹಿತರ ಮನೆಯಲ್ಲಿ ಒಂದು ದಿವಸ ಉಳಕೊಳ್ಳಬೇಕಾದ ಸಂದರ್ಭ ಬಂದಿತ್ತು. ಮನೆಯವರೆಲ್ಲರೂ ಪ್ರತಿಭಾವಂತರು. ಚೇತನ್ ನಾಲ್ಕರ ಹುಡುಗ. ಅಪ್ಪ ಯಕ್ಷಗಾನ ಕಲಾವಿದ. ಅಮ್ಮನಿಗೆ ಭರತನಾಟ್ಯವೆಂದರೆ ಪ್ರಾಣ. ಅಜ್ಜ ಸಂಗೀತಪ್ರಿಯ. ಅಂದು ಶಾಲೆಯಿಂದ ಬಂದವನೇ 'ಟ್ಯೂಶನ್'ಗೆ ಹೋಗುವ ಸಿದ್ಧತೆಯಲ್ಲಿದ್ದ. ಅಮ್ಮ ಒಂದಿಷ್ಟು ಆಹಾರವನ್ನು ಬಾಯಿಗೆ ತುರುಕಿದರು. ಸರಿ, ಟ್ಯೂಶನ್ ಮುಗಿಸಿ ಚೇತನ್ ಮನೆಗೆ ಹೊಕ್ಕಿದ್ದಷ್ಟೇ. ಯಕ್ಷಗಾನ ತರಗತಿಗೆ ಕರೆದೊಯ್ಯಲು ಅಪ್ಪ ರೆಡಿ. ಎಲ್ಲಾ ಮುಗಿಸಿ ಚೇತನ್ ಮನೆ ತಲುಪುವಾಗ ಒಂಭತ್ತೂವರೆ ದಾಟಿತ್ತು. ಮತ್ತೆ ಗೊತ್ತಾಯಿತು, ಆತ ಯಕ್ಷಗಾನ ತರಗತಿ ಮುಗಿಸಿ, ಜೊತೆಗೆ ಭರತನಾಟ್ಯ ತರಗತಿಯನ್ನು ಅಭ್ಯಸಿಸಿ ಮನೆಗೆ ಬಂದಾಗ ಪಾಪ, ಆ ಮಗುವಿನ ಮುಖ ನೋಡಬೇಕಿತ್ತು. ಇಷ್ಟು ಹೊರೆ ಬೇಕಿತ್ತಾ? ಅಪ್ಪಾಮ್ಮಂದಿರ ಆಸಕ್ತಿಯ ಭಾರವನ್ನು ಚೇತನ್ ಯಾಕೆ ಹೊರಬೇಕು?

ಇದು ಚೇತನ್ ಒಬ್ಬನ ಅವಸ್ತೆಯಲ್ಲ, ನಮ್ಮಲ್ಲೂ ಪರೋಕ್ಷವಾಗಿ ಮತ್ತೊಬ್ಬ ಚೇತನ್ ಇದ್ದಾನೆ! ಹಾಗಿದ್ದರೆ ಮಕ್ಕಳು ಕಲಿಯಬೇಡ್ವಾ ಈ ವಯಸ್ಸಿನಲ್ಲಲ್ಲದೆ ಬೇರ್ಯಾವಾಗ ಕಲಿಯುವುದು' ಪ್ರಶ್ನೆ ಬರುವುದು ಸಹಜ. ಕಲಿಯಲಿ, ಅದಕ್ಕೂ ಮಿತಿ ಇರಲಿ.ಬಾಲ್ಯಶಿಕ್ಷಣ ಭವಿಷ್ಯದ ಊರುಗೋಲುಬಾಲ್ಯಶಿಕ್ಷಣ ಮಾತೃಭಾಷೆಯಲ್ಲಿಯೇ ಇರಬೇಕು. ಈ ಸಂಸ್ಕೃತಿಯಲ್ಲಿ ಬೆಳೆದ ಮಗು, ಮುಂದೆ ಇತರ ಭಾಷೆಗಳನ್ನು ಚೆನ್ನಾಗಿ ಕಲಿಯುತ್ತದೆ. ಎಷ್ಟು ಮನೆಗಳಲ್ಲಿ ಇಂದು ಕನ್ನಡ ಮಾತುಕತೆಯಿದೆ?

ಪ್ರಾಥಮಿಕ ಶಾಲೆಯ ಅಧ್ಯಾಪಕರನ್ನೊಮ್ಮೆ ಜ್ಞಾಪಿಸಿಕೊಂಡರೆ ನೆನಪಾಗುತ್ತದೆ - ಅವರ ಮನೆಗಳಲ್ಲಿ ಚಿಕ್ಕ ಕನ್ನಡ ಗ್ರಂಥಾಲಯವಿರುತ್ತಿತ್ತು. ಅವರು ಶಾಲೆಗೆ ಬರುವಾಗ ಯಾವುದಾದರೊಂದು ಪುಸ್ತಕ ಕೈಯಲ್ಲಿರುತ್ತಿತ್ತು. ನನ್ನ ಬಾಲ್ಯದ ಉಪಾಧ್ಯಾಯರಾದ ನಾರಾಯಣ ಪಂಡಿತರು, ಕೃಷ್ಣಪ್ಪ ಉಪಾಧ್ಯಾಯರು ಕನ್ನಡದ ಉಚ್ಛಾರ ಸ್ವಲ್ಪ ತಪ್ಪಿದರೂ ಶಿಕ್ಷಿಸುತ್ತಿದ್ದರು. ತಪ್ಪಿದ ಉಚ್ಚಾರವನ್ನು ಅದು ಮತ್ತಷ್ಟು ಸರಿಪಡಿಸುತ್ತಿತ್ತು! ಈಗ 'ಶಿಕ್ಷೆ' ಬಿಡಿ, ಶಾಲಾಭ್ಯಾಸದಲ್ಲಿ ಮಗು ತಪ್ಪು ಬರೆದರೆ ತಿದ್ದುವಷ್ಟೂ ವ್ಯವಧಾನ ಇಲ್ಲ! ಎಷ್ಟು ಮಂದಿ ಅಧ್ಯಾಪಕರಲ್ಲಿ ನಿತ್ಯ ಓದು ಇದೆ - ಒಮ್ಮೆ ಪರಾಮರ್ಶಿಸಿ

ಹೀಗೆ ಹೇಳುವಾಗ ನಮ್ಮ ಪುಸ್ತಕ ಮಿತ್ರ ಪ್ರಕಾಶ್ ಕುಮಾರ್ ಹೇಳಿದ ಒಂದು ಮಾತು ನೆನಪಾಗುತ್ತದೆ - ಶಾಲೆಯೊಂದರಲ್ಲಿ ಇವರು ಪುಸ್ತಕದ ಪ್ರದರ್ಶನವೇರ್ಪಡಿಸಿದ್ದರು. 'ಸರ್.. ಇದು ಶಿವರಾಮ ಕಾರಂತರು ಬರೆದ ಪುಸ್ತಕ, ಚೆನ್ನಾಗಿದೆ' ಅಂತ ಉಪನ್ಯಾಸಕ ಮಹಾಶಯರೊಬ್ಬರಿಗೆ ಕೊಟ್ಟರಂತೆ. 'ಓ.. ಹೌದಾ.. ಶಿವರಾಮ ಕಾರಂತರು ಪುಸ್ತಕ ಬರೀತಾರಾ' ಅಂತ ಅಂದರಂತೆ!

ಇರಲಿ, ಪ್ರಪಂಚ ಅರಿಯುವ ಮುನ್ನ 'ಎಲ್ಕೆಜಿ'ಗೆ ಮಗುವನ್ನು ದೂಡುವ ಪ್ರವೃತ್ತಿ, ಕನ್ನಡದ ಉಚ್ಚಾರ ಮಾಡಿದಾಗ-ಮಾತನಾಡಿದಾಗ ಮಗುವನ್ನು ಭಯಪಡಿಸುವ ಸನ್ನಿವೇಶ, ಪುಸ್ತಕದಂಗಡಿಯಲ್ಲಿ ಮಗು ಕನ್ನಡ ಪುಸ್ತಕವನ್ನು ಆಯ್ದುಕೊಂಡಾಗ ಬೈದು-ಬಡಿವ ಸ್ಥಿತಿ - ಬಹುತೇಕ ಕಾಣುತ್ತೇವೆ. ಅಧ್ಯಾಪಕರು ಸ್ಲೇಟಿನಲ್ಲಿ ದೊಡ್ಡ ಅಕ್ಷರದಲ್ಲಿ ಬರೆದ ಅ, ಆ... ಮೇಲೆ ಬರೆದು ಬರೆದೇ ಕಲಿತ ಎಷ್ಟೋ ಮಂದಿ ಇಂದು ವಿದೇಶದಲ್ಲಿಲ್ವಾ. ಅವರೆಲ್ಲರೂ 'ಅಪ್ಪ-ಅಮ್ಮ' ಎನ್ನುತ್ತಾ ಬೆಳೆದವರೇ. ಮನೆಯಿಂದ ಶಾಲೆ ತನಕದ ಪ್ರತೀ ಕ್ಷಣವನ್ನು ಪೋಸ್ಟ್ಮಾರ್ಟಂ ಮಾಡಿದಾಗ ಎಲ್ಲೂ ಮಗುವಿನ ಮನಸ್ಸನ್ನರಿಯುವ ಉಪಾಧಿಗಳು ಸಿಗುತ್ತಿಲ್ಲ. 'ಕೋಳಿಯನ್ನು ಕೇಳಿ ಮಸಾಲೆ ಅರಿಯುವುದಿಲ್ಲ' - ನನ್ನ ಈ ವಿಚಾರಕ್ಕೆ ಓರ್ವ ತಾಯಿ ಪ್ರತಿಕ್ರಿಯಿಸಿದ ರೀತಿಯಿದು.

ಈ ಎಲ್ಲಾ ವಿಚಾರಗಳನ್ನಾದರೂ ಸಹಿಸಬಹುದು, ಆದರೆ ಮಕ್ಕಳ ಮನಸ್ಸನ್ನು ಅಣುಅಣುವಾಗಿ ಕೊಲ್ಲುವ 'ನಿಧಾನ ವಿಷ' - ನಮ್ಮ ವಾಹಿನಿಗಳ 'ರಿಯಾಲಿಟಿ ಶೋ'ಗಳು. ಇವುಗಳು ಯಾವಾಗ ಟೀವಿಯೊಳಗೆ ನುಸುಳಿದುವೋ, ಅಲ್ಲಿಂದ 'ಸಂಗೀತ, ಸಾಹಿತ್ಯ, ಮಾನ-ಮರ್ಯಾದಿ' ಎಲ್ಲಾ ದೂರವಾದುವು. 'ದಿಢೀರ್ ಸಂಗೀತ' ಕಲಿಯುವ ಶಾಲೆಗಳು ಶುರುವಾದುವು. ದಿಢೀರ್ ಗುರುಗಳು ಪ್ರತ್ಯಕ್ಷರಾದರು. ಸಂಗೀತವನ್ನೋ, ನೃತ್ಯವನ್ನು ಕಲಿಯಲು ಐದಾರು ವರುಷ ಬೇಡ. ಐದಾರು ವಾರ ಸಾಕು ಎಂಬ ಭಾವವನ್ನು ವಾಹಿನಿಗಳು ಬಿಂಬಿಸಿದುವು. ಹಾಗಾಗಿ ಅಲ್ಪಸ್ವಲ್ಪ ಹಾಡುತ್ತಿದ್ದ ಪ್ರತಿಭೆಗಳಿಗೆ ವೇದಿಕೆ ಸಿಕ್ತು. ಪದ್ಯಗಳ ಜೆರಾಕ್ಸ್ ಪ್ರತಿಗಳಾದರು. ಈ ಢಾಂಢೂಂಗಳ ಮಧ್ಯೆ ನಿಜ ಕಾಳಜಿಯಿದ-ಪ್ರೀತಿಯಿಂದ ಸಂಗೀತ ಕಲಿತ, ನೃತ್ಯ ಕಲಿತ ಪ್ರತಿಭಾವಂತರ ಪ್ರತಿಭೆಯು ಮಸುಕಾಯಿತು.

ಒಮ್ಮೆ ವಾಹಿನಿಯಲ್ಲಿ ಕಷ್ಟಪಟ್ಟು ಹಾಡಿದರೆ ಸಾಕು, ಪತ್ರಿಕೆಗಳಲ್ಲಿ ಫೋಟೋ ಹಾಕಿಸಿ ಸಂತೋಷಪಡುವಷ್ಟರ ತನಕ ಚಾಳಿ ಎಬ್ಬಿಸಿಬಿಟ್ಟಿದೆ. ಎಲ್ಲಾದರೂ ವಾಹಿನಿಯಲ್ಲಿ ಹಾಡಿ ಪ್ರಥಮ ಸ್ಥಾನ ಬಾರದಿದ್ದರೆ, 'ಭವಿಷ್ಯವೇ ಸರ್ವನಾಶ' ಎಂಬಂತೆ ವರ್ತಿಸುವ ಹೆತ್ತವರು, ಅದನ್ನು ಮಕ್ಕಳ ಮೇಲೆ ಹೇರಿ ಮುಗ್ಧ ಮನಸ್ಸಿಗೆ ಭಗ್ನ ತರುವ ನಿರೂಪಕರು, ಅಸಂಬದ್ದ ಪ್ರಶ್ನೆಗಳನ್ನು ಕೇಳಿ ಮಕ್ಕಳನ್ನು ಗೊಂದಲಕ್ಕೆ ಸಿಲುಕಿಸುವ ತೀರ್ಪುಗಾರರು, ಕೆಲವೊಂದು ಸಲ ತೀರ್ಪುಗಾರರ ಮೇಲೆ ಹೆತ್ತವರೇ ಕೈಮಾಡುವ ದಾರಿದ್ರ್ಯ ಸ್ಥಿತಿ..

ನಮ್ಮ ವಾಹಿನಿಗಳ ಉದ್ಘೋಷಕಿಯರು ಯಾಕೋ 'ವಸ್ತ್ರದ್ವೇಷಿ'ಗಳು! ಈ ಚಾಳಿ ಇತ್ತಿತ್ತ ಮಕ್ಕಳ ಮೇಲೂ ಪ್ರಯೋಗಿಸಲಾಗುತ್ತಿದೆ. ವಾಹಿನಿಯೊಂದರಲ್ಲಿ ಮಕ್ಕಳ ಡ್ಯಾನ್ಸ್ ಕಾರ್ಯಕ್ರಮವೊಂದರಲ್ಲಿ ಎಲ್ಲಾ ಮಕ್ಕಳಿಗೂ ಅಂಗಾಂಗ ಕಾಣುವಂತೆ ಕಡಿಮೆ ವಸ್ತವನ್ನು ತೊಡಿಸಲಾಗಿತ್ತು. ಪಾಪ, ಮಕ್ಕಳಿಗೆ ಏನು ತಿಳಿಯುತ್ತೆ ಹೇಳಿ. ಇದಕ್ಕೆ ಹೆತ್ತವರ ಪ್ರೋತ್ಸಾಹ. 'ಮಕ್ಕಳಲ್ಲಿ ಯಾಕೆ ಅಂತಹ ದೃಷ್ಟಿ' ಅಂತ ಪ್ರಶ್ನಿಸಬಹುದು. ಆದರೆ ಎಳವೆಯಲ್ಲೇ ಮಕ್ಕಳಲ್ಲಿ 'ವಸ್ತ್ರದ್ವೇಷ'ವನ್ನು ಯಾಕೆ ಸೃಷ್ಟಿಸಬೇಕು. 'ಈ ಕಾರ್ಯಕ್ರಮ ಬರುತ್ತಿದ್ದಂತೆ ನಾವು ಟಿವಿ ಆಫ್ ಮಾಡಿದೆವು' ಎನ್ನುತ್ತಾರೆ ಪುತ್ತೂರಿನ ಕಲಾವಿದ ಎಸ್. ಶಿವರಾಮ್.

ಸ್ಪರ್ಧಾ ತೀರ್ಪು ಘೋಷಣೆಯ ಸಂದರ್ಭವನ್ನೊಮ್ಮೆ ಜ್ಞಾಪಿಸಿಕೊಳ್ಳಿ. ಪುಟ್ಟ ಮಕ್ಕಳು ಮುಖ ಮುಖ ನೋಡುತ್ತಿರುತ್ತಾರೆ. ಹೆತ್ತವರು ಆಕಾಶವೇ ತಲೆಮೇಲೆ ಬಿದ್ದಂತೆ ಬಿಳುಚಿರುತ್ತಾರೆ. ಅದಕ್ಕೆ ಪೂರಕವೋ/ಮಾರಕವೋ ಎಂಬಂತೆ ಕೆಟ್ಟ ಹಿನ್ನೆಲೆ ಧ್ವನಿ. ಒತ್ತಡ ಹೆಚ್ಚಿಸುವ ಉದ್ಘೋಷಕರ ವರ್ತನೆ. ಇವೆಲ್ಲಾ ಯಾಕೆ ಬೇಕು? ನೇರ, ಸಹಜವಾಗಿರಲು ಬರುವುದಲ್ಲವೇನು? ಈ ಉದ್ಘೋಷಕರ ಕೆಟ್ಟ ಕನ್ನಡ ಇದೆಯಲ್ಲಾ ಅದು ಕನ್ನಾಡಿಗೆ ಬಡಿದ ಶಾಪ! ಅವರು ಉದುರಿಸುವ ವಾಕ್ಯಗಳಲ್ಲಿ ಕನ್ನಡವನ್ನು ಹುಡುಕಬೇಕು! ಅದೇ ಪರಿಪಾಠ ಮಕ್ಕಳಿಗೂ ವರ್ಗಾವಣೆಯಾಗಿರುತ್ತದೆ. ರಿಯಾಲಿಟಿ ಶೋಗಳಲ್ಲಿ ಮಾತನಾಡುವ ಮಕ್ಕಳಿಗೂ ಅದು ಅಂಟಿರುತ್ತದೆ!

ಪ್ರೌಢರಂತೆ ಮಕ್ಕಳ ಮೇಲೆ ಒತ್ತಡಗಳನ್ನು ಹಾಕುವುದರಿಂದ ಮನಸ್ಸು ಅರಳುವುದಿಲ್ಲ. ವರುಷದ ಹಿಂದೆ ಇದೇ ರಿಯಾಲಿಟಿ ಶೋದಲ್ಲಿ ಅವಮಾನಿತಳಾದ ಬಾಲಕಿಯೊಬ್ಬಳು ಆತ್ಮಹತ್ಯೆಗೆ ಶರಣಾದುದು ಇನ್ನೂ ಹಸಿಯಾಗಿಯೇ ಇದೆ.'ಡ್ಯಾಡಿ ನಂ.1' ಎಂಬ ಶೋ ಬಂತಲ್ಲಾ. ಅದಕ್ಕೆ 'ಪ್ರಸಿದ್ಧ' ಅಂತ ಹಣೆಪಟ್ಟಿ. ಸ್ಪರ್ಧೆಯಡಿ ಮಗುವಿನ ಅಪ್ಪನನ್ನು ಹಿಗ್ಗಾಮುಗ್ಗಾ ದುಡಿಸಿದ್ದೇ ಬಂತು. ಬಹುಮಾನ ಬಂದವರು ಸಂತಸ ಪಟ್ಟರು. ಬಹುಮಾನ ಸಿಗದ ಮಗುವಿಗೆ ಅಪ್ಪನ ಮೇಲೆ ಎಂತಹ ದೃಷ್ಟಿ ಇರಬಹುದು ಹೇಳಿ! 'ನನ್ನಪ್ಪ ದಡ್ಡ, ಪ್ರಯೋಜನವಿಲ್ಲ' ಅಂತ ಭಾವ ಎಳವೆಯಲ್ಲೇ ಮೂಡಿದರೆ ಭವಿಷ್ಯದ ಸ್ಥಿತಿ! ಮಗು ಶಾಲಾಭ್ಯಾಸವನ್ನು ಮಾಡುತ್ತಿರುವಾಗ ಹೆತ್ತವರಿಗೆ ಸೀರಿಯಲ್ ನೋಡದೆ ನಿದ್ದೆ ಬಾರದು. ಬದುಕಿನಲ್ಲಿ ಹೊಸ ಹೊಸ ಸಮಸ್ಯೆಯನ್ನು ಸೃಷ್ಟಿಸುತ್ತ, ಕುಟುಂಬವನ್ನು ಛಿದ್ರ ಛಿದ್ರವನ್ನಾಗಿಸುವ ಹೂರಣದ ಸೀರಿಯಲ್ಗಳನ್ನು ಹೆತ್ತವರೊಂದಿಗೆ ಮಕ್ಕಳೂ ನೋಡ್ತಾರೆ. ಅಲ್ಲಿನ ಕ್ರೌರ್ಯ, ದಾಂಪತ್ಯದ ತುಣುಕುಗಳಿಗೆ ಉತ್ತರ ಸಿಗದೆ ಮಗು ಒದ್ದಾಡುವುದನ್ನು ಎಷ್ಟು ಮಂದಿ ಹೆತ್ತವರು ಗಮನಿಸಿದ್ದೀರಿ?

ಹಾಗಿದ್ದರೆ 'ಮನಸ್ಸು' ಅಂದರೇನು? ಅದಕ್ಕೆ ಬೇರೆ ಅರ್ಥ ಬೇಡ. ಮಗುವಿನ ಬೆಳವಣಿಗೆಗೆ ಪೂರಕವಾಗುವ ಸರಕುಗಳು ಅಂತ ಭಾವಿಸಿದರೆ ಸಾಕು. ಈ ಸರಕುಗಳನ್ನು ಒದಗಿಸಲು ಹೆತ್ತವರ ತ್ಯಾಗ ಬೇಕು. ಅಧ್ಯಾಪಕರ ಕಾಳಜಿ ಬೇಕು. ಬದಲಾಗುತ್ತಿರುವ ಕಾಲಘಟ್ಟದಲ್ಲಿ ಬದುಕು-ಶಿಕ್ಷಣ ಬದಲಾಗುತ್ತಲೇ ಇದೆ. ಇದಕ್ಕಾಗಿ ಮಕ್ಕಳನ್ನ ಎಳವೆಯಿಂದಲೇ ಸಜ್ಜುಗೊಳಿಸಬೇಕಾದ ಅನಿವಾರ್ಯತೆ ಇದೆ. ಮಗುವಿನ ಧಾರಣಶಕ್ತಿ ಮತ್ತು ಮನಸ್ಸನ್ನು ಹೆತ್ತವರೇ ಅರ್ಥಮಾಡಿಕೊಳ್ಳಬೇಕು. ಅದಕ್ಕೆ ಬೇಕಾದ ವಾತಾವರಣ ಕಲ್ಪಿಸಿದರೆ ಸಾಕು, ಆ ಪರೀಧಿಯಲ್ಲಿ ಮಗು ಬೆಳೆಯುತ್ತದೆ. ಬಾಲ್ಯ ಶಿಕ್ಷಣ ಮನೆಯಿಂದಲೇ ಶುರುವಾಗಲಿ. ಅದೂ ಮಾತೃಭಾಷೆಯಲ್ಲೇ. ಉಳಿದೆಲ್ಲಾ ಭಾಷೆಗಳ ಕಲಿಕೆಗಳು 'ಆಯ್ಕೆ'ಯಾಗಿರಲಿ. ಕಾಲ ಬದಲಾಗುತ್ತಿದೆ ಅಂತ ಮಕ್ಕಳ ಮೇಲೆ ಶಿಕ್ಷಣವನ್ನು ಹೇರಿದರೆ, ಅಂತಹ ಮಕ್ಕಳಿಗೆ ಅಕ್ಷರಗಳೆಲ್ಲಾ 'ಮಯಮಯ'ವಾಗಿ ಕಂಡರೆ ಯಾರನ್ನೂ ದೂಶಿಸಬೇಕಿಲ್ಲ! ಆಯ್ಕೆ ನಮ್ಮ ಮುಂದಿದೆ. ನಮ್ಮ ಏಳ್ಗೆಗೆ ನಾವೇ ಶಿಲ್ಪಿಗಳು.

0 comments:

Post a Comment