Monday, February 27, 2012

'ಶ್ರೀ' ಪಡ್ರೆಯವರಿಗೆ ಸಂದೇಶ ಪ್ರಶಸ್ತಿ ಪ್ರದಾನ

ಮಂಗಳೂರಿನ ಸಂದೇಶ ಕಲಾ ಪ್ರತಿಷ್ಠಾನವು ನಿನ್ನೆ (26-2-2012) ಅಡಿಕೆ ಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕ 'ಶ್ರೀ' ಪಡ್ರೆಯವರಿಗೆ 'ಸಂದೇಶ ಶಿಕ್ಷಣ ಮಾಧ್ಯಮ ಪ್ರಶಸ್ತಿ' ನೀಡಿ ಗೌರವಿಸಿತು.

ಜಲಸಂರಕ್ಷಣೆಯ ಅರಿವನ್ನು ಬಿತ್ತ ಜಲಸಾಕ್ಷರರನ್ನು ರೂಪಿಸಿದ್ದ ಸಾಧನೆಯನ್ನು ಪರಿಗಣಿಸಿ ಸಂದೇಶ ಸಂಸ್ಥೆಯು ಈ ಪ್ರಶಸ್ತಿಯನ್ನು ಶ್ರೀ ಪಡ್ರೆಯವರಿಗೆ ನೀಡಿತ್ತು. ಸಮಾರಂಭದ ಅಧ್ಯಕ್ಷತೆ ರೆ.ಡಾ.ಅಲೋಶಿಯಸ್ ಪೌಲ್ ಡಿ'ಸೋಜ. ಫಾ.ಡಾ.ಹೆನ್ರಿ ಡಿ'ಸೋಜರು ಮತ್ತು ಸಾಹಿತಿ ವೈದೇಹಿ - ಮುಖ್ಯಅತಿಥಿ.

ಸಾಹಿತಿ ಡಾ.ನಾ.ಡಿ'ಸೋಜ ನೇತೃತ್ವದ ತೀರ್ಪುಗಾರರ ಸಮಿತಿ ಪ್ರಶಸ್ತಿಗೆ ಅರ್ಹರರನ್ನು ಆಯ್ಕೆ ಮಾಡಿತ್ತು. ಇತರ ಪ್ರಶಸ್ತಿ ಪುರಸ್ಕೃತರು : ಎಂ.ಮಾಧವ ಪೈ, ಕ್ಯಾಥರಿನ್ ರಾಡ್ರಿಗಸ್, ಪೀಟರ್ ಲೂಯಿಸ್, ಇಂದೂಧರ ಹೊನ್ನಾಪುರ, ಸಿಸ್ಟರ್ ಮರಿಯ ಜ್ಯೋತಿ,ಜಾನ್ ಡಿ'ಸಿಲ್ವ, ಗೀತಪ್ರಿಯ, ಜೆರೋಮ್ ಡಿ'ಸೋಜ.

(ಚಿತ್ರ ಕೃಪೆ : ಡಿಜಿವರ್ಲ್ಡ್ )

Wednesday, February 22, 2012

ನೀರಿನರಿವಿನ ದಿನದರ್ಶಿನಿ 'ಜಲಸಿರಿ'


ದಶಂಬರ ಕೊನೆ ದಿನಾಂಕಕ್ಕೆ ಹಳೆ ಕ್ಯಾಲೆಂಡರಿನ ದಿನಮಾನದ ಅಂತ್ಯ. ಹೊಸ ಕ್ಯಾಲೆಂಡರಿನ ಆಗಮನವಾಗುತ್ತಿದ್ದಂತೆ ಬದುಕಿನಲ್ಲೂ ಒಂದು ವರುಷ ಕ್ಷೀಣವಾಗಿರುತ್ತದೆ. ಪ್ರತೀವರುಷ ಕ್ಯಾಲೆಂಡರನ್ನು ಬದಲಿಸುತ್ತಾ ಇರುತ್ತೇವೆ. ನಾವು ಮಾತ್ರ 'ಅಭಿವೃದ್ಧಿ, ಔನ್ನತ್ಯ, ಹೊಸ ತಂತ್ರಜ್ಞಾನ'ದ ಗುಂಗಿನಲ್ಲಿ ಮೊಬೈಲನ್ನು ತಿರುಗಿಸುತ್ತಾ ಒಂಚೂರೂ ಬದಲಾಗದೆ ನಿಶ್ಚಲವಾಗಿ ಇರುತ್ತೇವೆ!

ಸಂಸ್ಥೆಗಳು, ಕಂಪೆನಿಗಳು ವರ್ಷಾರಂಭಕ್ಕೆ ಡೈರಿಯನ್ನು, ಕ್ಯಾಲೆಂಡರನ್ನು ಅಚ್ಚು ಹಾಕಿಸುತ್ತವೆ. ಗ್ರಾಹಕರೊಂದಿಗೆ ಶುಭಾಶಯ ವಿನಿಮಯ ಮಾಡಿಕೊಳ್ಳುತ್ತಾರೆ. ಕೆಲವು ಕ್ಯಾಲೆಂಡರ್ಗಳು ತಾರೀಕಿಗೆ ಮಾತ್ರ ಸೀಮಿತ. ದಿನಕ್ಕೊಂದು ಪುಟದಂತೆ ಡೈರಿಯ ಪುಸ್ತಕರೂಪ. ಎಷ್ಟು ಮಂದಿ ಡೈರಿ ಬರೆಯುತ್ತಾರೋ..? ಇರಲಿ.

ನಮ್ಮ ನಡುವೆ ಪ್ರಚಾರದಿಂದ ದೂರವಿದ್ದು ಸದ್ದಿಲ್ಲದೆ ಕೆಲಸ ಮಾಡುವ ಸಂಸ್ಥೆಗಳಿವೆ. ಪರಿಸರ, ನೀರು, ಸಾಮಾಜಿಕ, ಮಾನವೀಯ ವಿಚಾರಗಳನ್ನು ಕೈಗೆತ್ತಿಕೊಂಡು ಜನರ ನಡುವೆಯೇ ದುಡಿತ. ಅಂತಹುದರಲ್ಲಿ ತುಮಕೂರಿನ 'ಧಾನ್ಯ ಸಂಸ್ಥೆ'ಯು ವರ್ಷವಿಡೀ ಮಾಹಿತಿಯನ್ನು ನೀಡುವ 'ಜಲಸಿರಿ' ಎಂಬ ಕ್ಯಾಲೆಂಡರನ್ನು ಮೂರು ವರುಷಗಳಿಂದ ಪ್ರಕಾಶಿಸುತ್ತಿದೆ.

ನೀರಿನ ಕುರಿತು ಮಾತುಕತೆಗೆ ತೆರೆದುಕೊಂಡ ಕಿರು ಮಾಸ ಪತ್ರಿಕೆ 'ಜಲಸಿರಿ'. ಧಾನ್ಯ ಸಂಸ್ಥೆಯ ಪ್ರಕಟಣೆ. ಪತ್ರಕರ್ತ ಮಲ್ಲಿಕಾರ್ಜುನ ಹೊಸಪಾಳ್ಯ ಸಂಪಾದಕರು. ಪತ್ರಿಕೆಯ ಹೆಸರಿನಲ್ಲೇ ನೀರಿನ ಮಾಹಿತಿಯುಳ್ಳ ಕ್ಯಾಲೆಂಡರ್ಗೆ ಬೆಂಗಳೂರಿನ 'ಅಘ್ರ್ಯಂ' ಸಂಸ್ಥೆಯು ಹೆಗಲೆಣೆ ನೀಡಿದೆ. 2012ರ ಜಲಸಿರಿಯು ನೈರ್ಮಲ್ಯ, ಹವಾಮಾನ ಬದಲಾವಣೆ, ಅಲ್ಪ ನೀರಿನ ಬೇಸಾಯಕ್ಕೆ ಒತ್ತು ನೀಡಿದೆ.

ಸ್ವಚ್ಛತೆ ಆರೋಗ್ಯದ ಮೊದಲ ಮೆಟ್ಟಿಲು. ಕಲುಷಿತ ನೀರು ಸೇವನೆ ಹಲವಾರು ಕಾಯಿಲೆಗಳಿಗೆ ದಾರಿ. ಹೆಚ್ಚು ತೊಂದರೆಗೆ ಒಳಗಾಗುವವರು ಮಕ್ಕಳು ಮತ್ತು ಮಹಿಳೆಯರು. ನಾಡಿನ ದೊರೆಗಳು ನೈರ್ಮಲ್ಯದ ಪಾಠ ಹೇಳುವುದನ್ನು ಮಾಧ್ಯಮಗಳಲ್ಲಿ ಓದುತ್ತೇವೆ ವಾಹಿನಿಗಳಲ್ಲಿ ಬಿತ್ತರವಾಗುತ್ತದೆ.

ಆದರೆ ವಸ್ತುಸ್ಥಿತಿಯೇ ಬೇರೆ. ಹಳ್ಳಿಗಳಲ್ಲಿ ಒಂದು ಸುತ್ತು ತಿರುಗಾಡಿ ಬಂದರೆ ನೈರ್ಮಲ್ಯದ ನಿಜವಾದ ದರ್ಶನ. ಹಳ್ಳಿಯಲ್ಲಿ ನೈರ್ಮಲ್ಯ ಕಾಪಾಡಿಕೊಳ್ಳಲು 'ಜಲಸಿರಿ' ಮಾಹಿತಿಯನ್ನು ನೀಡಿದೆ. ಮನೆ ಸುತ್ತ ಮುತ್ತ ಹಸಿರು ನೆಡುವ ಕೆಲಸ, ತ್ಯಾಜ್ಯವನ್ನು ಕಡಿತಗೊಳಿಸುವುದು, ಹತ್ತಿರದ ಕೆಲಸಗಳಿಗೆ ಕಾಲ್ನಡಿಗೆ ರೂಢನೆ, ಸೈಕಲ್ ತುಳಿಯುವ ಆಭ್ಯಾಸ, ರೀಸೈಕಲ್ ಮಾಡುವತ್ತ ಗಮನ..

'ಒಂದು ಅಂದಾಜಿನಂತೆ ವಿಶ್ವದಲ್ಲಿ ದಿನಂಪ್ರತಿ ನಾಲ್ಕು ಸಾವಿರ ಮಕ್ಕಳು ಕಲುಷಿತ ನೀರು ಕುಡಿದು ಅಸುನೀಗುತ್ತಿದ್ದಾರೆ. ಪ್ರತಿ ವರುಷ 1.5 ಮಿಲಿಯನ್ ಮಕ್ಕಲು 'ಡಯೇರಿಯಾ' ಕಾಯಿಲೆಗಳಿಂದ ಸಾವನ್ನಪ್ಪುತ್ತಿದ್ದಾರೆ' ಎಂಬ ಮನಕಲಕುವ ವಿಚಾರಗಳನ್ನು ಸಂಪಾದಕ ಮಲ್ಲಿಕಾರ್ಜುನ ಹೊಸಪಾಳ್ಯ ದಾಖಲಿಸುತ್ತಾರೆ.

ಕೆರೆ, ಬಾವಿ, ದೊಣೆ, ನದಿ, ಗೋಕಟ್ಟೆ..ಯಂತಹ ಜಲಮೂಲಗಳನ್ನು ಸುಸ್ಥಿತಿಯಲ್ಲಿಡಬೇಕಾದ ಅನಿವಾರ್ಯತೆಯನ್ನು ಜಲಸಿರಿ ತೆರೆದಿಟ್ಟಿದೆ. ಕೊಳ, ತೀರ್ಥ, ಪುಷ್ಕರಿಣಿ ಎಂಬ ಹೆಸರಿನ ಕಲ್ಯಾಣಿಗಳ ರಕ್ಷಣೆಯ ಹೊಣೆಯೂ ನಮ್ಮದೇ ತಾನೆ.

ಕಡಿಮೆ ನೀರಿನಲ್ಲಿ ಬೆಳೆಯುವ ಭತ್ತದ 'ಶ್ರೀ ಪದ್ಧತಿ'ಯ ವ್ಯಾಪಕತೆ ಕಾಲದ ಅನಿವಾರ್ಯತೆ. ಬರವನ್ನೂ ಎದುರಿಸುವ ಸಾಮಥ್ರ್ಯ ಹೊಂದಿರುವ, ಕಡಿಮೆ ನೀರನ್ನು ಬೇಡುವ ಸಿರಿಧಾನ್ಯಗಳು ಮತ್ತೊಮ್ಮೆ ಬೀಸುಹೆಜ್ಜೆಯಿಂದ ಹೊಲಕ್ಕೆ ಧಾಂಗುಡಿಯಿಡುವ ಪ್ರಯತ್ನವಾಗಬೇಕಾಗಿದೆ. ಋತುಮಾನಗಳ ಏರುಪೇರಿಗೂ, ನೀರು - ಕಾಡುಗಳಿಗೂ ಹತ್ತಿರದ ಸಂಬಂಧಗಳು. ಕೃಷಿ ರಂಗಕ್ಕೆ ಇದರ ನೇರ ಪರಿಣಾಮ. ನಾವೇನು ಮಾಡಬಹುದು? ಓದಿ, ಜಲಸಿರಿ.

ವಿದ್ಯಾರ್ಥಿಗಳಿಂದು ಪುಸ್ತಕದಿಂದ ಉರುಹೊಡೆವ ಯಂತ್ರಗಳಾಗಿದ್ದಾರೆ. ಪರಿಸರ ಅಂದರೆ ಮರ, ಗಿಡ, ಗಾಳಿ, ನೀರು.. ಇಷ್ಟನ್ನು ಮಗುಮ್ಮನೆ ಹೇಳುವ ಕಂದಮ್ಮಗಳಿಗೆ ಅದರಾಚೆಗಿನ ವಿಚಾರಗಳ ಕೊರತೆಯಿದೆ. ಪಾಠಪುಸ್ತಕದಲ್ಲಿಲ್ಲ, ಅಧ್ಯಾಪಕರಿಗೆ ಬೇಕಿಲ್ಲ ಎಂಬಂತಹ ಸ್ಥಿತಿ. ನೀರಿನ ಮಿತ ಬಳಕೆ, ಮರುಬಳಕೆ, ಮರುಪೂರಣದಂತಹ ವಿಚಾರಗಳನ್ನು ಪ್ರಾಯೋಗಿಕವಾಗಿ ಅಳವಡಿಸುವ ಪಠ್ಯೇತರ ಚಟುವಟಿಕೆಗಳನ್ನು ವಿದ್ಯಾರ್ಥಿಗಳಿಗೆ ತಿಳಿಸಿಹೇಳುವ ಆವಶ್ಯಕತೆಯಿದೆ.

'ಜನವರಿ, ಫೆಬ್ರವರಿ..' ಮಗು ಉದರದಲ್ಲಿರುವಾಗಲೇ ಪಾಠವಾಗಿರುತ್ತದೆ! ಹಳ್ಳಿಯಲ್ಲಿ ಈ ಕ್ರಮದಲ್ಲಿ ತಿಂಗಳುಗಳನ್ನು ಎಣಿಸುವುದು ಕಡಿಮೆ. ಚೈತ್ರ, ವೈಶಾಖ, ಜ್ಯೇಷ್ಠ, ಆಷಾಢ.. ಹೀಗೆ ತಿಂಗಳುಗಳ ಎಣಿಕೆ. ಜಲಸಿರಿಯು ಆಂಗ್ಲ ತಿಂಗಳುಗಳ ಜತೆಯಲ್ಲೇ ಪಾರಂಪರಿಕ ಮಾಸಗಳ ಹೆಸರುಗಳು, ಋತುಗಳ ಹೆಸರುಗಳನ್ನು ಆಯಾಯ ಪುಟಗಳಲ್ಲಿ ತಿಳಿಸಿರುವುದು ಅರಿವಿನ ದೃಷ್ಟಿಯಿಂದ ಅನುಕೂಲವಾಗಿದೆ. ಪ್ರತೀ ಪುಟಗಳಲ್ಲಿ ನೀರಿನ ಕುರಿತಾದ ಗಾದೆಗಳಿವೆ.
ನಿತ್ಯ ತಾರೀಕುಗಳನ್ನು ನೋಡುವುದು ನಮಗೆ ದೈನಂದಿನ ಅಭ್ಯಾಸ. ಜಲಸಿರಿ ಕ್ಯಾಲೆಂಡರ್ ನೀರಿನ, ಪರಿಸರದ ಕುರಿತು ಅರಿವನ್ನು ಮೂಡಿಸುತ್ತದೆ. ಕ್ಯಾಲೆಂಡರಿನ ಬೆಲೆ ಮೂವತ್ತು ರೂಪಾಯಿ. ರವಾನೆ ವೆಚ್ಚಕ್ಕಾಗಿ ಇಪ್ಪತ್ತು ರೂಪಾಯಿ ಪ್ರತ್ಯೇಕ. ಆಕರ್ಷಕ ವರ್ಣ ಪುಟಗಳು.

ವಿಳಾಸ : ಧಾನ್ಯ ಸಂಸ್ಥೆ, 'ತೆನೆ', ಮೊದಲ ಮಹಡಿ, 3ನೇ ಮುಖ್ಯ ರಸ್ತೆ, ಸದಾಶಿವನಗರ, ತುಮಕೂರು - 572 101,
ಮೊ: 9686194641

Friday, February 17, 2012

'ಶ್ರೀ'ಪಡ್ರೆಯವರಿಗೆ ಸಂದೇಶ ಪ್ರಶಸ್ತಿ



ಅಡಿಕೆ ಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕ 'ಶ್ರೀ' ಪಡ್ರೆಯವರಿಗೆ ಈ ಸಾಲಿನ ಸಂದೇಶ (sandesha media education award) ಮಾಧ್ಯಮ ಶಿಕ್ಷಣ ಪ್ರಶಸ್ತಿ ಪ್ರಾಪ್ತಿ. ಕನ್ನಾಡಿನಾದ್ಯಂತ 'ಜಲಸಂರಕ್ಷಣೆ ಶಿಕ್ಷಣ' ಸಾಧನೆಗೆ ಪ್ರಶಸ್ತಿ.

ಜಲಕೂಟ ಮತ್ತು ಅಡಿಕೆ ಪತ್ರಿಕೆಯ ಆಶ್ರಯದಲ್ಲಿ ಸುಮಾರು ಒಂದು ದಶಕಕ್ಕೂ ಹೆಚ್ಚು ಕಾಲ ಮಳೆಕೊಯ್ಲಿನ ಅಧ್ಯಯನ, ಬರವಣಿಗೆ, ದೇಶ-ವಿದೇಶಗಳಲ್ಲಿ ಮಳೆಕೊಯ್ಲಿನ ವಿವರಗಳ ಸಂಗ್ರಹ, ಸ್ಲೈಡ್, ಪವರ್ಪಾಯಿಂಟ್ ಮೂಲಕ ಜನರಿಗೆ ಹಂಚುವ ಕೆಲಸ ಮಾಡಿದ್ದಾರೆ, ಮಾಡುತ್ತಿದ್ದಾರೆ.

ಕೇರಳದ ಎಂಡೋಸಲ್ಪಾನ್ ಹೋರಾಟ ಸಮಿತಿಯ ಮೂಲಕ ಸಮಾನಾಸಕ್ತರೊಂದಿಗೆ 'ಎಂಡೋಸಲ್ಫಾನ್ ನಿಷೇಧ' ಹೋರಾಟ. ಮಾಧ್ಯಮಗಳ ಮೂಲಕ ದುರಂತಗಳನ್ನು ಬಿತ್ತರಿಸುವಲ್ಲಿ ಸದ್ದಿಲ್ಲದ ಕೆಲಸ.

ಕಳೆದ ನಾಲ್ಕು ವರುಷದಿಂದ ನಿರ್ಲಕ್ಷಿತ ಹಲಸಿಗೆ ಮಾನ ಕೊಡುವ ಕೆಲಸ. ಅದರ ಮೌಲ್ಯವರ್ಧಿತ ಉತ್ಪನ್ನಗಳ ಹುಡುಕಾಟ, ಕಾಣದ ಯಶೋಗಾಥೆಗಳಿಗೆ ಬೆಳಕು.

ಈಚೆಗೆ ಹವಾಯಿಯಲ್ಲಿ ಜರುಗಿದ ಹಣ್ಣು ಬೆಳೆಗಾರರ ವಾರ್ಶಿಕ ಸಮ್ಮೇಳನದಲ್ಲಿ ಭಾರತವನ್ನು ಪ್ರತಿನಿಧಿಸಿದ ಪಡ್ರೆಯವರು ಇಲ್ಲಿನ ಹಣ್ಣುಗಳ ಕುರಿತು ಪವರ್ಪಾಯಿಂಟ್ ಮೂಲಕ ಪ್ರಸ್ತುತ ಪಡಿಸಿದ್ದಾರೆ. ಅವರ ಹವಾಯ್ ಅನುಭವ ಅಡಿಕೆ ಪತ್ರಿಕೆಯಲ್ಲಿ ಮಾಲಿಕೆಯಾಗಿ ಪ್ರಕಟವಾಗುತ್ತಿದೆ.

ನೆಲ-ಜಲ ಉಳಿಸಿ, ಹನಿಗೂಡಿಸುವ ಹಾದಿಯಲ್ಲಿ, ಮತ್ತೆ ರೂಪಾರೆಲ್ ಬತ್ತಲಿಲ್ಲ, ಬಾನಿಗೊಂದು ಆಲಿಕೆ, ಗುಜರಾತಿನ ನೀರ ತಿಜೋರಿ ಟಾಂಕಾ, ನೀರ ನೆಮ್ಮದಿಗೆ ನೂರಾರು ದಾರಿ ಮತ್ತು ರೈನ್ ವಾಟರ್ ಹಾರ್ವೆಸ್ಟಿಂಗ್".. ಹೀಗೆ.. ಹಲವು ಕೃತಿಗಳು ಪ್ರಕಟಗೊಂಡಿವೆ.
ಗುಡ್ ನ್ಯೂಸ್ ಇಂಡಿಯಾ ಡಾಟ್ ಕಾಂ ಎಂಬ ಜಾಲತಾಣ (ವೆಬ್ಸೈಟ್) ಇವರನ್ನು ದ ರೈನ್ ಮ್ಯಾನ ಆಪ್ ಕೆನರಾ ಕೋಸ್ಟ್ ಎಂದು ಬಣ್ಣಿಸಿದೆ. Canara Rural Award, Public Relations Society Award, Outstanding Youngman, Ashoka Fellow, ಸ್ಟೇಟ್ಸ್ಮ್ಯಾನ್ ಪ್ರಶಸ್ತಿ, ಪಾವನಾ ಪರಿಸರ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಸಂದೇಶ ಪ್ರಶಸ್ತಿ, ಪುರುಷೋತ್ತಮ ಪ್ರಶಸ್ತಿ, ವಿಲ್ ಗ್ರೋ ಪ್ರಶಸ್ತಿ.. ಹೀಗೆ ಹಲವು ಪ್ರಶಸ್ತಿಗಳಿಂದ ಪುರಸ್ಕೃತರು.

ಸಂದೇಶ ಕನ್ನಡ ಸಾಹಿತ್ಯ ಪ್ರಶಸ್ತಿಗೆ ಸಾಹಿತಿ ಡಾ.ಕೆ.ವಿ.ತಿರುಮಲೇಶ್, ಕೊಂಕಣಿ ಸಾಹಿತ್ಯ ಪ್ರಶಸ್ತಿಗೆ ಎಂ.ಮಾಧವ ಪೈ, ತುಳು ಸಾಹಿತ್ಯ ಪ್ರಶಸ್ತಿಗೆ ಕ್ಯಾಥರಿನ್ ರೋಡ್ರಿಗಸ್, ಚಲನಚಿತ್ರ ಪ್ರಶಸ್ತಿಗೆ ಗೀತಪ್ರಿಯ, ಕಲಾ ಪ್ರಶಸ್ತಿಗೆ ಪೀಟರ್ ಲೂಯಿಸ್, ಪತ್ರಿಕೋದ್ಯಮ ಪ್ರಶಸ್ತಿಗೆ ಇಂದೂಧರ ಹೊನ್ನಾಪುರ, ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ ಮರಿಯ ಜ್ಯೋತಿ, ಕೊಂಕಣಿ ಸಂಗೀತ ಪ್ರಶಸ್ತಿಗೆ ಜೆರೋಮ್ ಡಿ'ಸೋಜ ಮತ್ತು ಸಂದೇಶ ವಿಶೇಷ ಪ್ರಶಸ್ತಿಗೆ ಜೋನ್ ಡಿ'ಸಿಲ್ವ ಭಾಜನರಾಗಿದ್ದಾರೆ.

ಪ್ರಶಸ್ತಿ ಪ್ರದಾನ ಸಮಾರಂಭವು ಫೆ.26ರಂದು ಸಂಜೆ ಗಂಟೆ 5-30ಕ್ಕೆ ಮಂಗಳೂರಿನ ಸಂದೇಶ ಪ್ರತಿಷ್ಠಾನದ ಆವರಣದಲ್ಲಿ ಜರುಗಲಿದೆ.

ಈಗ ಸಂದೇಶ ಪ್ರಶಸ್ತಿಯ ಗರಿ. ಹಿರಿಯ ಪತ್ರಕರ್ತ 'ಶ್ರೀ' ಪಡ್ರೆಯವರಿಗೆ ಅಭಿನಂದನೆಗಳು.

Tuesday, February 14, 2012

ನಾಶದಂಚಿನಲ್ಲಿದೆ, ದೊಡ್ಡರಾಗಿ


ಆಕಳಿಂದ ಆಹಾರ ತನಕ ಎಲ್ಲವೂ ಹೈಬ್ರಿಡ್! ಮತ್ತೊಂದೆಡೆ ಕುಲಾಂತರಿ ಭೂತ! ಕೃಷಿಗೆ, ಕೃಷಿಕರಿಗೆ ಉಪಕಾರ ಮಂತ್ರವನ್ನು ಉಪದೇಶಿಸುತ್ತಾ ಕಳೆದರ್ಧ ಶತಮಾನಗಳಿಂದ ಇವೆಲ್ಲಾ ಹೊಲಕ್ಕೆ ನುಗ್ಗಿಬಿಟ್ಟು ಮಗುಮ್ಮನೆ ಕುಳಿತಿವೆ. ಪರಿಣಾಮ, ಪಾರಂಪರಿಕವಾಗಿ ಬದುಕಿನೊಂದಿಗೆ ಥಳಕು ಹಾಕಿಕೊಂಡಿದ್ದ ಸ್ಥಳೀಯ ತಳಿಗಳಿಗೆ ಮಸುಕು. ಅಲ್ಲ, ನಾಶ.

ಜನವರಿ ಮಧ್ಯ ಭಾಗದಲ್ಲಿ ಪತ್ರಕರ್ತ ಮಲ್ಲಿಕಾರ್ಜುನ ಹೊಸಪಾಳ್ಯ ಜತೆ ತುಮಕೂರಿನ ಗುಬ್ಬಿ ತಾಲೂಕಿನ ಹಳ್ಳಿಗಳಲ್ಲಿ ಸುತ್ತಾಡುತ್ತಿದ್ದೆ. ಮೂರು ದಶಕಗಳಿಂದ ಸ್ಥಳೀಯ ಪಾರಂಪರಿಕ 'ದೊಡ್ಡರಾಗಿ'ಯನ್ನು (ಐನ್ರಾಗಿ, ಐಯನ್ರಾಗಿ) ಬೆಳೆಯುವ ಏಕೈಕ ಕೃಷಿಕರ ಸುಳಿವು ಸಿಕ್ಕಿತು. ಸುಳಿವಿನ ಬೆನ್ನೇರಿ ದೊಡ್ಡರಾಗಿಯನ್ನು ಬೆಳೆಯುತ್ತಿರುವ ಅಳಿಲುಘಟ್ಟದ ಕೆಂಪಸಿದ್ದಯ್ಯರವರ ಮನೆ ಪತ್ತೆ ಮಾಡಿದೆವು.

ಅವರ ಪತ್ನಿ ಕೆಂಪಮ್ಮ ಸಹಾಯಕರೊಂದಿಗೆ ರಾಗಿಯ ಕೆಲಸದಲ್ಲೇ ಮಗ್ನರಾಗಿದ್ದರು. 'ಬನ್ನಿ ಸಾರ್, ಯಾಕೋ ಈ ಸಾರಿ ನಮ್ಮ ಹಳೆ ತಳಿಗೆ ಬೇರೆ ತಳಿಗಳು ಮಿಶ್ರವಾಗಿಬಿಟ್ಟಿವೆ. ಅದನ್ನು ಪ್ರತ್ಯೇಕಿಸುತ್ತಿದ್ದೇವೆ. ಮುಂದಿನ ಸಾರಿ ಬಿತ್ತನೆಗೆ ಬೇಕಲ್ವಾ' ಎನ್ನುತ್ತಾ ಕೆಂಪಮ್ಮ ಸ್ವಾಗತಿಸಿದರು.

ಅರೆ, ಹೇಗೆ ಮಿಶ್ರವಾಯಿತು? ಹೊಸಪಾಳ್ಯರಿಂದ ಥಟ್ ಅಂತ ಪ್ರಶ್ನೆ. 'ಕಳೆದ ವರುಷ ರಾಗಿ ಕಟಾವ್ ಆದ ಬಳಿಕ ಮೆದೆ (ರಾಶಿ) ಮಾಡಿದ್ದೆವು. ಅಷ್ಟು ಹೊತ್ತಿಗೆ ಮಳೆ ಬಂದು ಬಿಡ್ತು. ಅದರ ಮೇಲೆ ಪ್ಲಾಸ್ಟಿಕ್ ಹೊದೆಸಿಲ್ಲವಾದ್ದರಿಂದ ನೀರು ಮೆದೆಯ ಒಳಕ್ಕೆ ಇಳಿಯಿತು. ನೀರನ್ನು ಹೀರಿಕೊಂಡ ರಾಗಿಕಾಳುಗಳು ಮತ್ತೆ ಮೊಳಕೆಗೆ ಒಗ್ಗಿಕೊಳ್ಳುವುದಿಲ್ಲ. ಹಾಗಾಗಿ ಬೇರೆಡೆಯಿಂದ ತಂದ್ವಿ. ಅವರಲ್ಲಿ ಮಿಕ್ಸ್ ಆಗಿದೆ' ಎಂದರು ಕೆಂಪಮ್ಮ.

ಇವರಿಂದಲೇ ಕೃಷಿಕರೊಬ್ಬರು ದೊಡ್ಡರಾಗಿಯ ಬೀಜ ಕೊಂಡುಹೋಗಿದ್ದರು. ಅವರ ಹೊಲದಲ್ಲಿ ಹೈಬ್ರಿಡ್ ಮತ್ತು ದೊಡ್ಡ ರಾಗಿ ಮಿಶ್ರವಾಗಿದ್ದಿರಬೇಕು. ತನ್ನದೇ ತಳಿಯಲ್ವಾ ಎನ್ನುತ್ತಾ ಕೆಂಪಸಿದ್ದಯ್ಯ ಬಿತ್ತನೆಗಾಗಿ ರಾಗಿ ತಂದಿದ್ದರು. ಅದನ್ನು ಬಿತ್ತಿ, ಕಾಳು ಬೇರ್ಪಡಿಸುವಾಗಲೇ ತಿಳಿಯಿತು, ಇದು ಸಾಚಾ ಅಲ್ಲ.

ಕಳೆದ ದಶಂಬರದಲ್ಲಿ ರಾಗಿ ಕಟಾವ್ ಮಾಡಿದ್ದ ಕೆಂಪಸಿದ್ದಯ್ಯರಿಗೆ, ಈಗ ಮಿಶ್ರವಾಗಿದ್ದ ರಾಗಿ ತೆನೆಗಳಲ್ಲಿ ಸದೃಢವಾತರುವ ತೆನೆಗಳನ್ನು ಆಯ್ದು ತಳಿ ಶುದ್ಧಗೊಳಿಸುವ ಕೆಲಸ. 'ಇನ್ನೆಂದೂ ಹೀಗೆ ಆಗದಂತೆ ಎಚ್ಚರ ವಹಿಸುತ್ತೇವೆ' ಎಂಬ ನಿಗಾ.

ಒಂದು ಕಾಲಘಟ್ಟದಲ್ಲಿ ಸುತ್ತೆಲ್ಲಾ ದೊಡ್ಡರಾಗಿಯನ್ನೇ ಬೆಳೆಯುತ್ತಿದ್ದರು. ಹೆಚ್ಚು ಇಳುವರಿ ನೀಡುವ ಕಾರಣಕ್ಕಾಗಿ ಹೈಬ್ರಿಡ್ ತಳಿಗಳನ್ನು ಜನರು ಆಯ್ಕೆಮಾಡಿಕೊಂಡರು. ರಾಗಿಯ ಗುಣಗಳನ್ನು ಕೆಂಪಮ್ಮ ಹೇಳುತ್ತಾರೆ - ದೊಡ್ಡರಾಗಿ ತುಂಬಾ ಒದಗು. ಹೈಬ್ರಿಡ್ ಇಳುವರಿ ಹೆಚ್ಚು ಕೊಡಬಹುದು. ಆದರೆ ರುಚಿಯಲ್ಲಿ ಹಿಂದೆ. ಆರೋಗ್ಯದಲ್ಲೂ ಕೂಡಾ. ಬೆಳಿಗ್ಗೆ ಮುದ್ದೆ ಊಟ ಮಾಡಿದರೆ ಸಂಜೆವರೆಗೂ ಹೊಟ್ಟೆಗಟ್ಟಿ. ಹಸಿವಾಗೊಲ್ಲ. ದೊಡ್ಡರಾಗಿಯಲ್ಲಿ ಇಳುವರಿ ಕಡಿಮೆ ಬಂದರೂ, ಹಿಟ್ಟು ಹೆಚ್ಚು ಬರುತ್ತೆ. ನಮ್ಮೆಜನಮಾನರಿಗೆ ದೊಡ್ಡರಾಗಿಯದ್ದೇ ಮುದ್ದೆ ಆಗ್ಬೇಕು. ಹಾಂಗಾಗಿ ಊರೆಲ್ಲಾ ಹೈಬ್ರಿಡ್ ಬಂದರೂ ನಮ್ಗೆ ಬೇಡ!

ಕೆಂಪಸಿದ್ದಯ್ಯರು ಒಂದೂವರೆ ಎಕರೆಯಲ್ಲಿ ರಾಗಿ ಬೆಳೆಯುತ್ತಾರೆ. ಹತ್ತರಿಂದ ಹನ್ನೆರಡು ಮೂಟೆ ಇಳುವರಿ (ಒಂದು ಮೂಟೆ ಅಂದರೆ 80 ಕಿಲೋ) ಅಕ್ಕಡಿಸಾಲಿನಲ್ಲಿ ಅವರೆ, ತೊಗರಿ, ಜೋಳಗಳು. 'ಸಾರ್, ಇವೆಲ್ಲಾ ನಮ್ಮ ಹೊಟ್ಟೆ ಸೇರೋಕೆ. ಮಾರಾಟಕ್ಕಲ್ಲ. ಹಾಗಾಗಿ ಎಷ್ಟು ಕೂಲಿ ಬರುತ್ತೆ, ಎಷ್ಟು ಖರ್ಚು ಆಗುತ್ತೆ ಅಂತ ನೋಡೋಲ್ಲ' ಅಂತ ಮಾತಿನ ಮಧ್ಯೆ ಖಡಕ್ ಆಗಿ ಹೇಳಿದರು ಕೆಂಪಸಿದ್ದಯ್ಯನವರ ಭಾವಮೈದುನ ಬೋರಯ್ಯ.

ದನಕ್ಕೆ ರಾಗಿಯ ಹುಲ್ಲು ಉತ್ತಮ ಆಹಾರ. ಅದು ಪುಡಿಪುಡಿಯಾಗುವುದಿಲ್ಲವಂತೆ. ತನ್ನ ಐದು ದನಗಳಿಗೆ ಹುಲ್ಲು ಅಲ್ಲದೆ ರಾಗಿ ಹುಡಿಯನ್ನು ಅಂಬಲಿ ಮಾಡಿ ಕುಡಿಸುತ್ತಾರೆ.

ಕಳೆದು ಹೋಗುತ್ತಿರುವ ದೊಡ್ಡರಾಗಿಯನ್ನು ಉಳಿಸುತ್ತಿರುವ, ಉಳಿಸಿ ಬಳಸುತ್ತಿರುವ ಕೆಂಪಸಿದ್ದಯ್ಯ ಹೊಸ ಹೊಸ ಬೆಳೆಗಳು ಹೊಲಕ್ಕೆ ನುಗ್ಗುತ್ತಿರುವ ಹೊತ್ತಲ್ಲೇ ಪಾರಂಪರಿಕ ತಳಿಯ ಪರ ಮಾತನಾಡುತ್ತಿರುವುದು ನಿಜಕ್ಕೂ ಗ್ರೇಟ್.

"ದೊಡ್ಡರಾಗಿಯ ಬೀಜಕೇಳಿಕೊಂಡು ಬರ್ತಾರೆ. ಕೊಡೋಕೆ ನಮ್ಮಲ್ಲಿ ಇಲ್ಲ. ಮೊದಲೆಲ್ಲಾ ಸಾಕಷ್ಟು ಮಂದಿಗೆ ಕೊಟ್ಟಿದ್ವಿ. ಯಾರೂ ಉಳಿಸಿಕೊಂಡಿಲ್ಲ" - ಎನ್ನುತ್ತಾ ಕೆಂಪಮ್ಮ ನಮ್ಮನ್ನು ಬೀಳ್ಕೊಟ್ಟರು.

ನಾಶದಂಚಿನಲ್ಲಿರುವ ದೊಡ್ಡರಾಗಿ ತಳಿಯನ್ನು ಉಳಿಸಬೇಕಿದೆ. ಇದಕ್ಕಾಗಿ ಸಂಸ್ಥೆಗಳನ್ನೋ, ಸರಕಾರಿ ಸಹಾಯವನ್ನೋ ನಿರೀಕ್ಷಿಸಬೇಕಾಗಿಲ್ಲ. ರೈತರೇ ಮನಸ್ಸು ಮಾಡಬೇಕಷ್ಟೇ. ಇಲ್ಲದಿದ್ದರೆ ನಮ್ಮ ಕಣ್ಣೆದುರು ಪಾರಂಪರಿಕ ತಳಿಯೊಂದು ನಾಶವಾದುದಕ್ಕೆ ನಾವು ಸಾಕ್ಷಿಯಾಗುತ್ತೇವೆ.

ಅಡುಗೆ ಮನೆಯತ್ತ ಸಾಂಪ್ರದಾಯಿಕ ನಡಿಗೆ

ಆಹಾರಗಳ ಮೂಲಕ ಅವ್ಯಕ್ತವಾಗಿ ಊಟದ ತಟ್ಟೆಗೆ ವಿಷ ಬೀಳುತ್ತಿದೆ! ವಿಷಮುಕ್ತ ಆಹಾರಗಳ ಸೇವನೆಯ ಅನಿವಾರ್ಯಗಳ ಕುರಿತು ಶಾಲಾ ವಿದ್ಯಾರ್ಥಿಗಳಿಗೆ ಪವರ್ ಪಾಯಿಂಟ್ ಮೂಲಕ ಅರಿವನ್ನು ಮೂಡಿಸುವ ತರಗತಿಗಳನ್ನು ಮಾಡುತ್ತಿದ್ದಾಗ ಬಹುತೇಕ ವಿದ್ಯಾರ್ಥಿಗಳಲ್ಲಿ ಮೂಡಿದ ಪ್ರಶ್ನೆ - 'ಹಾಗಿದ್ದರೆ ನಾವು ಏನನ್ನು ಸೇವಿಸಬೇಕು?

ಮನೆಯ ಹಿತ್ತಿಲಿನಲ್ಲಿ, ಸುತ್ತಮುತ್ತಲಿನ ಪರಿಸರದಲ್ಲಿ ಆಹಾರವಾಗಿ ಹೊಟ್ಟೆ ಸೇರಬಹುದಾದ ಎಷ್ಟು ವಸ್ತುಗಳಿಲ್ಲ? ಬಾಳೆಕಾಯಿ, ಕುಂಡಿಗೆ, ಬಾಳೆದಿಂಡು, ಚಿಗುರುಗಳು, ಗೆಡ್ಡೆಗಳು, ಕಾಯಿಗಳು.. ಇವೆಲ್ಲಾ ಊಟದ ಬಟ್ಟಲಿನಿಂದ ದೂರಸರಿದಿವೆ. 'ಸಾರು ಅಂದರೆ ಟೊಮೆಟೋ ಸಾರು, ಸಾಂಬಾರು ಅಂದರೆ ಆಲೂಗೆಡ್ಡೆಯದು, ಪಲ್ಯ ಕ್ಯಾಬೇಜಿನದು'.. ಇಂತಹ ಮೆನುಗಳು ಅಡುಗೆ ಮನೆಗಳಲ್ಲಿ ಸ್ಥಾಪಿತವಾಗಿವೆ.

ತರಕಾರಿ ಅಂಗಡಿಯೊಂದರಲ್ಲಿದ್ದೆ. ಮಗುವಿನೊಂದಿಗೆ ದಂಪತಿ ಖರೀದಿಗೆ ಬಂದಿದ್ದರು. ಶಾಲೆಯೊಂದರ ಪವರ್ಪಾಯಿಂಟ್ ತರಗತಿಯಲ್ಲಿ ಆ ಮಗುವನ್ನು ನೋಡಿದ ನೆನಪು. 'ಸೊಪ್ಪು, ಗೆಡ್ಡೆ ತರಕಾರಿ ಆರೋಗ್ಯಕ್ಕೆ ಒಳ್ಳೆಯದಂತೆ. ಅದನ್ನೇ ತೆಕ್ಕೋ ಅಮ್ಮ..' ಎಂದು ಮಗು ಒತ್ತಾಯಿಸುತ್ತಿತ್ತು. 'ಕರ್ಮ, ಯಾರೋ ಶಾಲೆಗೆ ಬಂದು ನಿನ್ನ ತಲೆ ಹಾಳು ಮಾಡಿರಬೇಕು' ಎಂದು ಬಯ್ಯುತ್ತಲೇ ಮಗುವಿನ ಆಯ್ಕೆಯನ್ನು ಸ್ವೀಕರಿಸಿದರೆನ್ನಿ. ಅಮ್ಮನನ್ನು ಮನಸಾ ಅಭಿನಂದಿಸಿದೆ.

ಮಗು ಆ ತರಕಾರಿಗಳನ್ನೇ ಯಾಕೆ ಆಯ್ಕೆ ಮಾಡಿತು? ಪವರ್ಪಾಯಿಂಟ್ ತರಗತಿಯಲ್ಲಿ ವಿವರಿಸಿದ ಸೊಪ್ಪು, ಗೆಡ್ಡೆ ತರಕಾರಿಗಳ ಆರೋಗ್ಯದಾಯಕ ವಿಚಾರಗಳು ಮಗುವಿನ ಮನಸ್ಸಿಗೆ ಹೊಕ್ಕಿದೆ ಎಂಬುದಕ್ಕೆ ನಿದರ್ಶನ. ಹಾಗೆಂತ ಬೀನ್ಸ್, ಬದನೆ, ಬೆಂಡೆ.. ತರಕಾರಿಗಳು ಅನಾರೋಗ್ಯಕರ ಎಂದರ್ಥವಲ್ಲ. ನಮ್ಮ ನಡುವೆಯೇ ಕೀಟನಾಶಕ ಸಿಂಪಡಿಸದೆ ತಾಜಾ ತರಕಾರಿಗಳನ್ನು ಬೆಳೆಯುವವರು, ಬೆಳೆದು ತಿನ್ನುವವರು ಎಷ್ಟು ಮಂದಿ ಇಲ್ಲ. ವಿಷರಹಿತ ಆಹಾರಗಳನ್ನು ಸ್ವೀಕರಿಸಿದಷ್ಟೂ ಆಸ್ಪತ್ರೆಯಿಂದ ದೂರವಿರಬಹುದು! ತರಕಾರಿ ಮಾತ್ರವಲ್ಲ, ಉದರದೊಳಗೆ ಸೇರುವ ಎಲ್ಲಾ ಪದಾರ್ಥಗಳಲ್ಲೂ 'ಬುದ್ಧಿಪೂರ್ವಕ'ವಾಗಿ ಬೆರೆಸಿದ ಕಲಬೆರಕೆಗಳನ್ನು ಮನತುಂಬಿ ಮನೆ ತುಂಬಿಸಿದ್ದೇವೆ. ಒಪ್ಪಿಕೊಂಡು 'ಅಸಹಾಯಕ'ರು ಎನ್ನುತ್ತಾ ವ್ಯವಸ್ಥೆಯನ್ನು ಅಪ್ಪಿಕೊಂಡಿದ್ದೇವೆ.

ಈಚೆಗೆ ಮಾನ್ಯ ಪ್ರಧಾನಿಗಳು ಮಕ್ಕಳ ಪೌಷ್ಟಿಕ ಆಹಾರದ ಕುರಿತು ಹೇಳಿಕೆ ನೀಡಿದ್ದರಲ್ಲಾ.. ಅಲ್ಲಿಂದ ಶುರುವಾಯಿತು ನೋಡಿ, ಪೌಷ್ಟಿಕ ಆಹಾರಗಳ ಸುತ್ತ ಮಾತುಕತೆ-ಚರ್ಚೆ. ಗ್ರಾಮ್ ಲೆಕ್ಕಾಚಾರದಲ್ಲಿ ಮಗುವಿಗೆ ಆಹಾರವನ್ನು ನೀಡಿದ ಮಾತ್ರಕ್ಕೆ ಪೌಷ್ಟಿಕತೆ ಬಾರದು. ನಿತ್ಯ ಬದುಕಿನ ಆಹಾರದಲ್ಲೂ ಆರೋಗ್ಯಕ್ಕೆ ಸಂಬಂಧಪಟ್ಟಂತೆ ಬೇಕು, 'ಎಚ್ಚರ'.

ಒಂದೆಡೆ ಶಾಲೆಗಳಲ್ಲಿ ನೀಡುತ್ತಿರುವ ಪವರ್ಪಾಯಿಂಟ್ ತರಗತಿ, ಮತ್ತೊಂದೆಡೆ ಅಪೌಷ್ಟಿಕ ಆಹಾರದ ಸುದ್ದಿ. ಈ ಮಧ್ಯೆ ಬಂಟ್ವಾಳ ತಾಲೂಕಿನ ಶಾಲೆಗಳಿಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳಿಂದ ಪ್ರಣೀತವಾದ 'ಆಹಾರ ಸನದು' (ಆಹಾರ ನಿರೂಪ). ಆಹಾರದ ಕುರಿತು ವಿದ್ಯಾರ್ಥಿಗಳಿಗೆ ಅರಿವನ್ನು ಬಿಂಬಿಸಬೇಕೆನ್ನುವ ನನ್ನ ಆಲೋಚನೆಗೆ ಇನ್ನಷ್ಟು ಗರಿಗಳು ಮೂಡಿದುವು.

ಏನಿದು ಆಹಾರ ಸನದು? ಶಾಲಾ ಮಕ್ಕಳ ಆರೋಗ್ಯಕ್ಕಾಗಿ ಸಮತೋಲನ ಆಹಾರವನ್ನು ಒದಗಿಸುವ ಬದ್ಧತೆ. ಸೂಚಿತ ತರಕಾರಿಗಳಲ್ಲಿ ಕೆಲವನ್ನಾದರೂ ಶಾಲೆಯಲ್ಲಿ ನೀಡುವುದಲ್ಲದೆ, ಮನೆಯಲ್ಲೂ ಬಳಸುವ ಮತ್ತು ಬೆಳೆಯುವತ್ತ ಒತ್ತು. ಬಂಟ್ವಾಳ ಕ್ಷೇತ್ರ ಶಿಕ್ಷಣಾಧಿಕಾರಿ ಕೆ. ಸುಧಾಕರ್ ಅವರ ಮೆದುಳಮರಿಯಿದು. ತನ್ನ ವ್ಯಾಪ್ತಿಯ ಸರಕಾರಿ, ಅನುದಾನಿತ ಶಿಕ್ಷಣ ಸಂಸ್ಥೆಗಳಿಗೆ ನಿರೂಪವನ್ನು ಒದಗಿಸಿ, ಅನುಷ್ಠಾನದ ವರದಿ ಕೊಡುವಂತೆ ವಿನಂತಿಸಿದ್ದಾರೆ.

ಸನದಿನಲ್ಲಿರುವ ತರಕಾರಿಗಳು: ಒಂದೆಲಗ (ತಿಮರೆ), ನುಗ್ಗೆ ಸೊಪ್ಪು, ವಿಟಮಿನ್ಸೊಪ್ಪು, ನೆಲಬಸಳೆ, ಪಪ್ಪಾಯಿ, ಕೆಸುವಿನ ದಂಟು, ಕುಂಬಳಕಾಯಿ, ಬಾಳೆದಿಂಡು, ಕುಂಡಿಗೆ (ಪೂಂಬೆ, ಬಾಳೆಹೂ), ಚಕ್ತೆ ಸೊಪ್ಪು (ಸಜಂಕ್), ಬೇವಿನಸೊಪ್ಪು ಮತ್ತು ಹಲಸಿನ ಬೀಜ.

ಇವುಗಳ ಗುಣಗಳು: ಒಂದೆಲಗದಿಂದ ಬುದ್ಧಿಶಕ್ತಿವರ್ಧನೆ; ನುಗ್ಗೆ ಸೊಪ್ಪಿನಲ್ಲಿ ಹರಿತ್ತು-ಕಬ್ಬಿಣದ ಸತ್ವ ಮತ್ತು ಹಿಮೋಗ್ಲೋಬಿನ್ ಹೆಚ್ಚಳ, ವಿಟಮಿನ್ಸೊಪ್ಪು ಸೇವನೆಯಿಂದ ಶರೀರದ ಎಲ್ಲಾ ಘಟಕಗಳ ಸದೃಢತೆ, ನೆಲಬಸಳೆಯು ಪುಷ್ಟಿಗೆ, ಹಣ್ಣು ಪಪ್ಪಾಯಿಯಿಂದ ಮಲಬದ್ಧತೆ ದೂರ, ರಕ್ತಶುದ್ಧಿಗೆ ಕುಂಬಳಕಾಯಿ, ಬಾಳೆದಿಂಡಿನಲ್ಲಿ ನಾರಿನಂಶವಿರುವುದರಿಂದ ಕರುಳು ಶುದ್ಧಿಗೆ ಸಲೀಸು, ಶರೀರದ ಕ್ರಿಮಿದೋಷಗಳನ್ನು ಚಕ್ತೆಸೊಪ್ಪು ಹೋಗಲಾಡಿಸುತ್ತದೆ. ಜೀರ್ಣಕ್ರಿಯೆ ವೃದ್ಧಿಗೆ ಬೇವಿನಸೊಪ್ಪು. ಕೆಸುವಿನ ದಂಟು ಮತ್ತು ಹಲಸಿನ ಬೀಜ ಸೇರಿಸಿದ ಪದಾರ್ಥ ಊಟಕ್ಕೆ ಒಳ್ಳೆಯ ಕಾಂಬಿನೇಶನ್.

'ಇವೆಲ್ಲವನ್ನೂ ಹಿತವಾಗಿ, ಮಿತವಾಗಿ ಬಳಸಿದರೆ ಮಾತ್ರ ಆರೋಗ್ಯ. ಎಲ್ಲವನ್ನೂ ಎಲ್ಲಾ ದಿವಸ ಬಳಸಬಾರದು' ಎಂದು ಎಚ್ಚರಿಸುತ್ತಾರೆ ಹಿರಿಯ ಮೂಲಿಕಾ ತಜ್ಞೆ ಪಾಣಾಜೆಯ ಜಯಲಕ್ಷ್ಮೀ ವಿ. ದೈತೋಟ.

ಪ್ರತೀ ಶಾಲೆಯಲ್ಲಿ ಶಾಲಾಭಿವೃದ್ಧಿ ಸಮಿತಿ, ಶಿಕ್ಷಕ ವೃಂದ ಮತ್ತು ವಿದ್ಯಾರ್ಥಿಗಳಿಂದ ಸನದಿನ ಆಶಯವನ್ನು ಅನುಷ್ಠಾಸುವ ಪ್ರತಿಜ್ಞಾ ಸ್ವೀಕಾರದ ಮೂಲಕ ಚಾಲನೆ. ಮಧ್ಯಾಹ್ನದ ಬಿಸಿಯೂಟದಲ್ಲಿ ಬಳಕೆ. ಮನೆಗಳಲ್ಲಿ ಜಾಗೃತಿ. ತಾಲೂಕಿನ ಕೆಲವು ಶಾಲೆಗಳು ಸನದನ್ನು ಅದ್ದೂರಿಯಾಗಿಯೇ ರಂಗಕ್ಕಿಳಿಸಿವೆ! ಜನಪ್ರತಿನಿಧಿಗಳು, ಆಡಳಿತ ಮಂಡಳಿಯ ಉತ್ಸುಕತೆ ಎದ್ದು ಕಾಣುತ್ತದೆ. ಈ ಉತ್ಸಾಹವು ಅನುಷ್ಠಾನದಲ್ಲೂ ಕಂಡರೆ ಯಶಸ್ಸು.

'ಕಳೆದ ವರುಷ ಸಮುದಾಯದತ್ತ ಶಾಲಾ ಕಾರ್ಯಕ್ರಮದಲ್ಲಿ ಇಲಾಖೆಯ ವತಿಯಿಂದ ಆಹಾರ ಪೌಷ್ಟಿಕತೆಯ ಪ್ರಾಮುಖ್ಯತೆಯನ್ನು ತಿಳಿಸಲಾಗಿತ್ತು. ಅದರಂತೆ ಡ್ರಾಯಿಂಗ್, ಚರ್ಚೆ, ಪ್ರಬಂಧಗಳನ್ನು ಶಾಲೆಗಳಲ್ಲಿ ನಡೆಸಲಾಗಿತ್ತು. ಅದರ ಮುಂದುವರಿದ ಭಾಗವೇ ಸನದು' ಎನ್ನುತ್ತಾರೆ ಸುಧಾಕರ್.

ಈಗಾಗಲೇ ಕೆಲವು ಶಾಲೆಗಳಲ್ಲಿ ಸನದಿನಂತೆ ತರಕಾರಿಗಳನ್ನು ಮಕ್ಕಳಿಗೆ ಉಣಿಸಲಾಗುತ್ತದೆ. ಉದಾ: ಅಳಿಕೆ ಸನಿಹದ ಮುಳಿಯ ಶಾಲೆ. ಇಲ್ಲಿನ ಅಧ್ಯಾಪಕ ಮುಳಿಯ ವೆಂಕಟಕೃಷ್ಣ ಶರ್ಮರ ತೋಟದ ತರಕಾರಿಗಳು ವರ್ಷಪೂರ್ತಿ ಬಿಸಿಯೂಟದೊಂದಿಗೆ ಮಕ್ಕಳ ಉದರ ಸೇರುತ್ತಿದೆ. ಅಂಗಡಿಯಿಂದ ತರಕಾರಿ ತಾರದೆ ಎರಡು ವರುಷಗಳೇ ಸಂದವು! ಹಲಸಿನ ಋತುವಿನಲ್ಲಿ ಹಲಸಿನ ಖಾದ್ಯ, ಹಣ್ಣು ಸೇವನೆ, ತರಕಾರಿಗಳು, ಬಾಳೆಯ ಎಲ್ಲಾ ಭಾಗಗಳು, ಗೆಡ್ಡೆಗಳು, ಸೊಪ್ಪುಗಳು.. ಎಲ್ಲವೂ 'ಫ್ಯೂರ್' ಸಾವಯವ. ತನ್ನ ತೋಟದಲ್ಲಿ ಶಾಲೆಗಾಗಿಯೇ ತರಕಾರಿ ಬೆಳೆಯಲು ಒಂದಷ್ಟು ಜಾಗ ಮೀಸಲು. ಇದು ನೂರ ಇಪ್ಪತ್ತೈದು ಮಕ್ಕಳ ಭಾಗ್ಯ, ಏನಂತೀರಿ?

'ನಾನು ತರಕಾರಿ ಕಟ್ಟಿನೊಂದಿಗೆ ಸ್ಕೂಟರಿನಲ್ಲಿ ಶಾಲೆಯಂಗಳದಲ್ಲಿ ಇಳಿದರೆ ಸಾಕು. ಇಂದಿನ ಬಿಸಿಯೂಟಕ್ಕೆ ಯಾವ ತರಕಾರಿ ಅಂತ ಮಕ್ಕಳು ಇಣುಕಿ ನೋಡುತ್ತಾರೆ' ಎನ್ನುತ್ತಾರೆ ಶರ್ಮ. ಮಕ್ಕಳಲ್ಲೂ ಆಸಕ್ತಿ ಕುದುರಿದೆ. ಹಲಸಿನ ಹಣ್ಣನ್ನು ತಂದರಂತೂ ಮಕ್ಕಳ ಬಾಯಿಲ್ಲಿ ಸವಿನೀರು!

ಈಚೆಗೆ ಸನದಿನ ಆರಂಭವನ್ನು ಮುಳಿಯ ಶಾಲೆ ವಿಶಿಷ್ಟವಾಗಿ ಆಚರಿಸಿತು. ಸೂಚಿತ ತರಕಾರಿಗಳನ್ನು ವಿದ್ಯಾರ್ಥಿಗಳೇ ಸಂಗ್ರಹಿಸಿ ಪ್ರದರ್ಶನಕ್ಕಿಟ್ಟಿದ್ದರು. ವರ್ಷವಿಡೀ ತಿಂದು ಸವಿದಿದ್ದ ಮಕ್ಕಳಿಗೆ ಇವನ್ನೆಲ್ಲಾ ಆಯಲು ಕಷ್ಟವಾಗಲೇ ಇಲ್ಲ. ಇಂತಹ ವಾತಾವರಣ ಎಲ್ಲಾ ಶಾಲೆಗಳಲ್ಲಿ ಬಂದುಬಿಟ್ಟರೆ ಸನದಿನ ಅನುಷ್ಠಾನ ಸುಲಭಸಾಧ್ಯ.

ಇಂದು ಶಿಕ್ಷಣದಲ್ಲಿ ಕೃಷಿ ದೂರ. ಸಾಂಸ್ಕೃತಿಕ ಪರಿಕಲ್ಪನೆಗಳು ಇಲ್ಲ. ವಾಹಿನಿಗಳ ರಸಪ್ರಶ್ನೆಗಳಲ್ಲಿ ಬರುವ ಕೃಷಿ ಸಂಬಂಧಿ ಮತ್ತು ಗಿಡ, ಹೂಗಳನ್ನು ಗುರುತಿಸುವ ಪ್ರಶ್ನೆಗಳಲ್ಲಿ ವಿದ್ಯಾರ್ಥಿಗಳು ಗೆಲ್ಲುವುದು ಕಡಿಮೆ. ಆದರೆ ಅಲ್ಲೋ ಇಲ್ಲೋ ಅಧ್ಯಾಪಕರ ಆಸಕ್ತಿಯಂತೆ ವಿದ್ಯಾರ್ಥಿಗಳಿಗೆ ಭತ್ತ, ತರಕಾರಿ ಪಾಠಗಳಾಗುತ್ತಿವೆ. ಪ್ರೌಢ ಶಾಲಾ ಹಂತದ ವರೆಗಾದರೂ ಒಂದು ಅವಧಿ ಕೃಷಿ ಕಲಿಕೆಗೆ ಬೇಕು. ಅದೂ ಥಿಯರಿಗಿಂತ, ಪ್ರಾಕ್ಟಿಕಲ್ಲಿಗೆ ಹೆಚ್ಚು ಒತ್ತು.

ಅಧಿಕಾರಿಗಳ ಸೂಚನೆಯನ್ನು ಶಾಲೆಗಳು ಪಾಲಿಸಿವೆ. ಅದು ಜನಗಣತಿ ದಾಖಲಾತಿಯಂತೆ ಆಗಬಾರದಲ್ವಾ! ಫಾರಂ ಫಿಲ್ ಮಾಡಿದಲ್ಲಿಗೆ ಮುಗಿಯಬಾರದು. ಇಲ್ಲಿ 'ಅನುಷ್ಠಾನ' ಮುಖ್ಯವಾಗುತ್ತದೆ. ಆರೋಗ್ಯದಾಯಕ ಆಹಾರದ ಗಾಢತೆಯ ಬಗ್ಗೆ ಅಧ್ಯಾಪಕರಿಗೆ ಪ್ರತ್ಯೇಕವಾದ ತರಬೇತಿ ಬೇಕಾಗಬಹುದು. ಈಗಾಗಲೇ ಕಾರ್ಯಾಗಾರ, ತರಬೇತಿ, ಸಭೆಗಳ ಭಾರದಿಂದ ಮಾನಸಿಕವಾಗಿ ಕುಗ್ಗಿದ ಅಧ್ಯಾಪಕರಿಗೆ 'ಸನದು' ಭಾರವಾಗದಂತೆ ಪ್ರತ್ಯೇಕ ವ್ಯವಸ್ಥೆ ಬೇಕಾಗಬಹುದು.

'ಬರುವ ಶಿಕ್ಷಣ ವರ್ಷದಿಂದ ಬಿಸಿಯೂಟಕ್ಕೆ ಒಂದು ಚಮಚವಾದರೂ ತಿಮರೆಯ ಚಟ್ನಿ ಮಕ್ಕಳಿಗೆ ಸಿಗಲೇಬೇಕು,' ಸುಧಾಕರ್ ಕನಸು. ಮಕ್ಕಳ ಆರೋಗ್ಯದತ್ತ ಕಾಳಜಿಯುಳ್ಳ, ಕಾಳಜಿಯನ್ನು ಅನುಷ್ಠಾನಗೊಳಿಸುವ ಸುಧಾಕರ್ ಅವರಂತಹ ಶಿಕ್ಷಣಾಧಿಕಾರಿಗಳು ಎಲ್ಲಾ ತಾಲೂಕಿನಲ್ಲೂ ರೂಪುಗೊಳ್ಳಲಿ.

Monday, February 6, 2012

ನಲಿವಿನ ಸುಳಿವಿಲ್ಲದ 'ಸುಗ್ಗಿ ಹಬ್ಬ'

ಮಕರ ಸಂಕ್ರಮಣದಂದು ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಹಳ್ಳಿಗಳಲ್ಲಿ ಸುತ್ತಾಡುತ್ತಿದ್ದೆ. ಈ ಭಾಗದಲ್ಲಿ 'ಸಂಕ್ರಾಂತಿ ಹಬ್ಬ' (ಸುಗ್ಗಿ ಹಬ್ಬ) ವಿಶೇಷ. ಹೊಲದಿಂದ ಕಟಾವ್ ಆಗಿ ಸಂಸ್ಕರಣೆಗೊಂಡ ಧಾನ್ಯಗಳು ಜಗಲಿ ಏರಿರುತ್ತವೆ. ಹಬ್ಬದ ಹೊತ್ತಿಗೆ ಯಾವುದೆಲ್ಲಾ ಕಾಳುಗಳು ಲಭ್ಯವಾಗುತ್ತವೋ ಅವೆಲ್ಲದರ ಬಳಕೆ. ಹೊಸ ಬೆಳೆಯ ಸ್ವಾಗತಕ್ಕೆ ಮನೆ-ಮನ ಸಜ್ಜು. ಊರಿಗೆ ಊರೇ ಬೆಸೆದುಕೊಳ್ಳುತ್ತವೆ.

ಯಾಕೋ ಗೊತ್ತಿಲ್ಲ, ನಾನು ಭೇಟಿ ನೀಡಿದ ಮೂರ್ನಾಲ್ಕು ಹಳ್ಳಿಗಳಲ್ಲಿ 'ಎಳ್ಳು-ಬೆಲ್ಲ'ದ 'ಹಳೆ ನೆನಪು'ಗಳ ಮಾತುಕತೆ ನಡೆಯುತ್ತಿದ್ದುವು. ಹಬ್ಬದ ವಾತಾವರಣ ಅಷ್ಟಕ್ಕಷ್ಟೇ. 'ಹಬ್ಬದ ಸಂಭ್ರಮ ಕಡಿಮೆಯಾಗಿದೆ. ಸಾಮುದಾಯಿಕ ಭಾವನೆ ಇಲ್ಲ. ಗುಂಪು ಸೇರಿ ಹಬ್ಬ ಮಾಡುವುದಕ್ಕಿಂತ ಖಾಸಗಿಯಾಗಿ ಆಚರಿಸುವುದತ್ತ ಜನರ ಒಲವು,' ಎಂದರು ಅಮ್ಮನಘಟ್ಟದ ಕೃಷಿಕ ಶಂಕರಪ್ಪನವರು.

ಎಳ್ಳು, ಬೆಲ್ಲ, ಕೊಬ್ಬರಿ, ಅವರೆಕಾಳು, ಶೇಂಗಾ ಮಿಶ್ರಿತ ಪಾಕದೊಂದಿಗೆ ಬಾಳೆಹಣ್ಣು, ಕಬ್ಬಿನ ತುಂಡನ್ನು ಜತೆಗಿಟ್ಟು ಅತಿಥಿಗಳಿಗೆ ನೀಡಿ ಶುಭಾಶಯ ವಿನಿಮಯ ಮಾಡಿಕೊಳ್ಳುವುದು ವಾಡಿಕೆ. ಇದನ್ನು ಸಿದ್ಧಪಡಿಸಲು ಹದಿನೈದು ದಿವಸ ಹಿಂದಿನಿಂದಲೇ ತಯಾರಿ. ಹೆಣ್ಮಕ್ಕಳ ಪಾಲುಗಾರಿಕೆ ಹೆಚ್ಚು. ಒಂದರ್ಥದಲ್ಲಿ 'ಹೆಣ್ಮಕ್ಕಳ ಹಬ್ಬ'ವಿದು. ಉತ್ತಮವಾದ ಕೊಬ್ಬರಿಯನ್ನು ಆಯ್ದು ಚಿಕ್ಕ ಚಿಕ್ಕ ಚೂರುಗಳನ್ನಾಗಿ ಮಾಡಿಟ್ಟುಕೊಳ್ಳುವುದು, ಬಿಳಿ ಎಳ್ಳನ್ನು ಶುಚಿಗೊಳಿಸುವುದು, ಉತ್ತಮ ಶೇಂಗಾ ಆಯ್ದುಕೊಳ್ಳುವುದು.. ಹೀಗೆ ಮನೆಮನೆಗಳಲ್ಲಿ ಸಂತಸ, ಸಂಭ್ರಮದ ಸಿದ್ಧತೆ.

ಸಂಕ್ರಾಂತಿ ದನಗಳ ಹಬ್ಬವೂ ಹೌದು. ಮನೆಯೊಡೆಯನ ಹೊಟ್ಟೆಪಾಡಿಗಾಗಿ ವರ್ಷವಿಡೀ ಅವನೊಂದಿಗೆ ದುಡಿದುದರ ಫಲವಾಗಿ ಧಾನ್ಯಗಳು ಮನೆ ಸೇರುತ್ತವೆ. ಹಾಗಾಗಿ ಅವುಗಳಿಗೆ ಕೃತಜ್ಞತೆ ಹೇಳುವ ಹಬ್ಬ. ಬೆಳಿಗ್ಗೆ ದನಗಳಿಗೆ ಸ್ನಾನ ಮಾಡಿಸಲು ಹೊಂತಕಾರಿಗಳ ದಂಡು ಸಜ್ಜಾಗುತ್ತದೆ. ಕೊಂಬುಗಳಿಗೆ ಎಣ್ಣೆ ಪಾಲಿಶ್. ಕಾಲಿಗೆ-ಕೊರಳಿಗೆ ಹೂಮಾಲೆ, ಅಲಂಕಾರ. ಧರಿಸಲು ಗೌನು. ಗಾಡಿಗಳಿಗೆ ಚಿತ್ತಾರ, ತೋರಣ. ಇದಕ್ಕಾಗಿ ತಾಮುಂದು, ನಾಮುಂದು ಎನ್ನುವ ಪೈಪೋಟಿ. ದನಗಳಿಗೆ ತಿನಿಸು (ಎಡೆ) ನೀಡಿದ ಬಳಿಕ ಮನೆ ಮಂದಿಯ ಸಿಹಿಭೋಜನ. ಹಬ್ಬದ ಈ ವರ್ಣನೆಯೀಗ ಬರೆದು ಓದುವುದಕ್ಕೆ ಖುಷಿ! ಕಾರಣ, ಎಳ್ಳು-ಬೆಲ್ಲವನ್ನು ತಟ್ಟೆಯಲ್ಲಿಟ್ಟು 'ತೆಕ್ಕೊಳ್ರಿ.. ಹಬ್ಬದ ಶುಭಾಶಯಗಳು' ಎಂಬ ವಿನಿಮಯಕ್ಕೆ ಮಾತ್ರ ಸೀಮಿತ. ಹಿಂದಿರುವ ಭಾವನೆಗಳು, ಶೃದ್ಧೆಗಳಿಗೆ ಮಸುಕು ಹಿಡಿದಿದೆ.
ಬಣ್ಣ ಬಣ್ಣದ ಹೊಸ ಬಟ್ಟೆಯುಟ್ಟು ಹಬ್ಬವನ್ನು ಆಚರಿಸುವ ಹೆಣ್ಮಕ್ಕಳ ಸಂಖ್ಯೆ ಹಳ್ಳಿಗಳಲ್ಲಿ ಕಡಿಮೆಯಾಗುತ್ತಿವೆ.
'ಹಳ್ಳಿ ಬಿಟ್ಟು ಹತ್ತಿರದ ಪಟ್ಟಣಗಳಿಗೆ ಹೆಣ್ಮಕ್ಕಳು ವಿದ್ಯಾಭ್ಯಾಸಕ್ಕಾಗಿ ಹೋಗವ್ರೆ. ಅಲ್ಲೇ ಸೆಟ್ಲ್ ಆಗವ್ರೆ. ಹಾಂಗಾಗಿ ಹಬ್ಬ ಮಾಡವ್ರು ಇಲ್ಲ' ಎಂಬ ಸತ್ಯವನ್ನು ಹೇಳುತ್ತಾರೆ ತೋವಿನಕೆರೆಯ ಪದ್ಮರಾಜು. ಹಳ್ಳಿ ಮನೆಗಳಲ್ಲಿ ತಂದೆ, ತಾಯಿ, ಅಜ್ಜ, ಅಜ್ಜಿ ಮಾತ್ರ ವಾಸವಿದ್ದು, ಮಿಕ್ಕುಳಿದವರು 'ಬೇರೆ ಬೇರೆ' ಕಾರಣಕ್ಕೆ ನಗರದ ಬಸ್ಸನ್ನು ಏರಿದ್ದಾರೆ, ಏರುತ್ತಿದ್ದಾರೆ. ಒಮ್ಮೆ ನಗರ ಸೇರಿದರೆ ಮುಗಿಯಿತು, ಮತ್ತೆಂದಿಗೂ ಅವರಿಗೆ ಹಳ್ಳಿ ಮಾರ್ಗ ದುರ್ಗಮ!. ಇದನ್ನು 'ಸಹಜ' ಅಂತ ಸ್ವೀಕರಿಸಬೇಕಾದ ಕಾಲಘಟ್ಟವಿದು.

ಎಳ್ಳು ಬೆಲ್ಲವನ್ನು ಮನೆಯಲ್ಲೇ ಮಾಡಿದರೆ ಅದಕ್ಕೆ ರುಚಿ-ಶುಚಿ ಜಾಸ್ತಿ. ನಮ್ಮದೇ ಬೆವರಿನ ಫಲವಲ್ವಾ, ಜತೆಗೆ ಹೆಮ್ಮೆ, ಅಭಿಮಾನವೂ ಅಧಿಕ. ನಗರದಲ್ಲಿ ರೆಡಿಮೇಡ್ ಆಗಿ ಅವೆಲ್ಲಾ ಸಿಗುತ್ತದೆ. ಬೇಕಾದರೆ ಇನ್ನೂ ಬಣ್ಣ ಬಣ್ಣದ ಒಳಸುರಿಗಳಲ್ಲಿ! ಅದರೊಂದಿಗೆ ಸಿಗುವ ಸಕ್ಕರೆ ಅಚ್ಚಿನ ಸಾಚಾತನಕ್ಕೆ ಈಚೆಗೆ ಪತ್ರಿಕೆಯೊಂದು ಬೆಳಕು ಚೆಲ್ಲಿತ್ತು. 'ಇಲ್ಲಾರಿ, ಅಕ್ಕ ಪಕ್ಕದ ಮನೆಯವರಿಗೆ ಕೊಡಲು ಬೇಕಲ್ವಾ, ಹಾಂಗಾಗಿ ಸಕ್ಕರೆ ಅಚ್ಚನ್ನು ತಂದುಬಿಟ್ವಿ' ಎನ್ನುವ ಅಮ್ಮಂದಿರು ಜಾಸ್ತಿ.

'ಮಗುವಿಗೆ ದನದ ಹಾಲು ನೀಡಲಿಕ್ಕಾದರೂ ಮನೆಮನೆಗಳಲ್ಲಿ ನಾಟಿ ಹಸುವನ್ನು ಸಾಕಲೇಬೇಕ್ರಿ. ಆದರೆ ದುರಾದೃಷ್ಟ ನೋಡಿ, ಹಾಲಿಗಾಗಿ ಪಾತ್ರೆ ಹಿಡಿದು ಬೆಳಿಗ್ಗೆ ಮನೆ ಮುಂದೆ ನಿಲ್ಲೋ ಪರಿಸ್ಥಿತಿ ಬಹುತೇಕ ಮಂದಿಯದು' ಹಳ್ಳಿ ಸಂಭ್ರಮದ ಇಳಿ ಲೆಕ್ಕವನ್ನು ಊಹಿಸಲು ಶಂಕರಪ್ಪನವರ ಈ ಮಾತು ಸಾಕು.

ಹಾಲಿಗಾಗಿ ಮಿಶ್ರತಳಿ ದನಗಳ ಸಾಕಣೆ ಹೆಚ್ಚುತ್ತಿದೆ. ಹೂಟೆಗಾಗಿ ಬಳಸುತ್ತಿದ್ದ ನಾಟಿ ಹಸುಗಳು ಅಜ್ಞಾತವಾಗುತ್ತಿವೆ. ಹಾಲು ನೀಡುವ ಹಸುಗಳ ಸಂಖ್ಯೆ ಕ್ಷೀಣಿಸುತ್ತಿವೆ. ಸಂಕ್ರಾಂತಿಯ ಪೂಜೆ, ಅಲಂಕಾರಗಳು ನಾಟಿ ಹಸುಗಳಿಗೆ ವಿನಾ, ದೈತ್ಯ ಸಂಕರ ತಳಿಗಳಿಗೆ ಅಲ್ಲವಲ್ಲ. ಹಬ್ಬದಲ್ಲಿ ಯಾವುದು ಪ್ರಧಾನವೋ, ಅದೇ ಮಾಯವಾಗಿದೆ. ದನಗಳು ಇವೆಯೆನ್ನಿ. ಅವುಗಳ ಸ್ನಾನಕ್ಕೆ ನೀರಿಲ್ಲ. ಕೆರೆಗಳು, ನಾಲೆಗಳು, ಕೊಳವೆಬಾವಿಗಳು ದಿನೇ ದಿನೇ ಬತ್ತುತ್ತಿವೆ.

ಹಿಂದೆಲ್ಲಾ ಧಾನ್ಯಗಳದು ಏಕಬೆಳೆ. ಈಗ ಹಾಗಲ್ಲ, ಹೆಚ್ಚಿನೆಡೆ ನಾಲೆ, ಕೊಳವೆಬಾವಿ, ಕೆರೆಯ ನೀರು ಸದಾ ಲಭ್ಯ. ವರ್ಷದ ಯಾವ ಋತುವಿನಲ್ಲಾದರೂ ಬೆಳೆ ತೆಗೆಯಬಹುದು. ಕೃಷಿ ಕ್ರಮ ಬದಲಾದುದರಿಂದ ಅದರ ಪರಿಣಾಮ ಹಬ್ಬಗಳ ಮೇಲೂ ಆಗದೆ ಇದ್ದೀತೇ?

ಟಿವಿ ಕೂಡಾ ಹಳ್ಳಿಯ 'ನಿಜ ನೆಮ್ಮದಿ'ಯನ್ನು ಕಸಿದಿದೆ. ಸೀರಿಯಲ್ಗಳಿಗೆ ನಾವು ಹೊಂದಿಕೊಂಡಿದ್ದೇವೆ. ಅದನ್ನು ನೋಡಿದ ಬಳಿಕವೇ ಹಬ್ಬವೋ, ಜಾತ್ರೆಯೋ. ಹಾಗಾಗಿ ಈ ಭಾಗದಲ್ಲಿ ಸಂಜೆ ಯಾವುದೇ ಕಾರ್ಯಕ್ರಮವನ್ನು ಹಮ್ಮಿಕೊಂಡರೆ ಜನವೇ ಬರುವುದಿಲ್ಲ ಎನ್ನುತ್ತಾರೆ ದೊಡ್ಡಬಳ್ಳಾಪುರದ ನಟರಾಜ್.

ಸಂಕ್ರಾಂತಿಯಂದು ಸಂಜೆ ಹೊತ್ತು ಕಿಚ್ಚಿನ ಮೇಲೆ ದನಗಳನ್ನು ಹಾರಿಸುವುದು ಸಂಪ್ರದಾಯ. ಅವುಗಳ ಮೇಲಿರುವ ಉಣ್ಣಿ, ಕ್ರಿಮಿಗಳು ನಾಶವಾಗಲಿ ಎಂಬುದು ವೈಜ್ಞಾನಿಕ ಕಾರಣವಾದರೆ, ಅವುಗಳಿಗೆ ದೃಷ್ಟಿ ಬೀಳದಿರಲಿ - ಇದು ಎರಡನೇ ಕಾರಣ. ದನಗಳನ್ನು ಕಿಚ್ಚಿನ ಮೇಲೆ ಹಾಯಿಸುವ ಫೋಟೋ ತೆಗೆಯಲೆಂದು ಊರಿಡೀ ಸುತ್ತಾಡಿದ ನಟರಾಜ್ಗೆ ನಿರಾಶೆ. 'ಈ ಆಚರಣೆಯನ್ನೇ ಬಿಟ್ಟುಬಿಟ್ಟಿದ್ದಾರೆ ಸಾರ್' ಎನ್ನುತ್ತಾರೆ.

ಎರಡು ದಿವಸ ಹಳ್ಳಿ ಸುತ್ತಾಡಿದ ನನಗೆ ಹೊಸ ಬಟ್ಟೆಯುಟ್ಟು ಎಳ್ಳುಬೆಲ್ಲದೊಂದಿಗೆ ನೆರೆ ಮನೆಗೆ ಹೋಗುತ್ತಿದ್ದ ಬಾಲಪೋರಿಯೊಬ್ಬಳು ಮಾತ್ರ ಪ್ರತ್ಯಕ್ಷಳಾದಷ್ಟೇ. ಮತ್ತೆಲ್ಲಾ ರಾಜಧಾನಿಯ ಗಬ್ಬು ರಾಜಕೀಯದ ಸುದ್ದಿ-ವಿಮರ್ಶೆ. ಕೆಲವು ಹಳ್ಳಿಗಳಲ್ಲಿ ಹಬ್ಬಗಳೂ ಈಗಲೂ ಜೀವಂತ. ಎಲ್ಲೆಲ್ಲಿ ಶ್ರಮಿಕ ವರ್ಗದವರ ಸಂಖ್ಯೆ ಹೆಚ್ಚಿದೆಯೋ ಅಲ್ಲೆಲ್ಲಾ ಸಂಕ್ರಾಂತಿ ಬರೋಬ್ಬರಿ.

'ನಮ್ಮೂರಲ್ಲಿ ನಾಟಿ ತಳಿಗಳು ಇನ್ನೂ ಉಳಿದುಕೊಂಡಿವೆ. ಕಾರಣ, ಇಲ್ಲಿ ಬೀಜದ ಹೋರಿಗಳನ್ನು ಸಾಕುವವರಿದ್ದಾರೆ. ನಾಟಿ ಹಸುವಿಗೆ ಕೃತಕ ಗರ್ಭಧಾರಣೆ ಮಾಡಿದರೆ ಅದರಲ್ಲಿ ಹುಟ್ಟುವ ಕರುಗಳು ಯಾವ ತಳಿಯವು ಎನ್ನುವ ಹಾಗಿಲ್ಲ. ಹಾಗಾಗಿ ಇಲ್ಲಿ ಸಾಂಪ್ರದಾಯಿಕ ಕ್ರಮದಲ್ಲೇ ಗರ್ಭಧಾರಣೆ ಮಾಡಿಸಲಾಗುತ್ತದೆ' ಎಂಬ ಹೊಸ ಸುಳಿವನ್ನು ಕನಕಪುರದ ಸನಿಹದ ಹಾರೋಹಳ್ಳಿ ಗಣಪತಿ ಭಟ್ ನೀಡುತ್ತಾರೆ. ನಾಟಿ ತಳಿಗಳನ್ನು ಉಳಿಸುವ ಹಳ್ಳಿ ಜಾಣ್ಮೆ ನಿಜಕ್ಕೂ ಕಾಲದ ಅನಿವಾರ್ಯತೆ. ಎಲ್ಲೆಲ್ಲಿ ನಾಟಿ ಹಸುಗಳ ಸಂಖ್ಯೆ ಹೆಚ್ಚಿವೆಯೋ ಅಲ್ಲೆಲ್ಲಾ ಸುಗ್ಗಿ ಹಬ್ಬದ ಸಂಭ್ರಮವೂ ಹೆಚ್ಚು.

ಹಳ್ಳಿಗಳೂ ಬದಲಾಗುತ್ತಿದೆ. ಮೊಬೈಲ್ ಟವರ್ಗಳು ಮೇಲೇಳುತ್ತಲೇ ಇವೆ. ಯುವಕರನ್ನು ಮೋಹಿಸುವ ಮೊಬೈಲ್ ಕಂಪೆನಿಗಳ ಜಾಹೀರಾತು ಹಳ್ಳಿಯ ಚಹಾ ಅಂಗಡಿಯನ್ನು ಅಲಂಕರಿಸಿವೆ. ಅಗತ್ಯವಿದೆಯೋ ಇಲ್ಲವೋ ಎರಡೋ ಮೂರೋ ಮೊಬೈಲ್ಗಳು ಕೈಯಲ್ಲಿ ತಿರುಗಿಸುತ್ತಾ ಇರುವುದನ್ನು ಪ್ರತಿಷ್ಠೆ ಅಂತ ಸ್ವೀಕರಿಸಿದ್ದೇವೆ. ತಪ್ಪಲ್ಲ ಬಿಡಿ! ಮೊಬೈಲ್ ಅವರದೇ, ಅದಕ್ಕೆ ನೀಡಿದ ಹಣವೂ ಅವರದೇ. ಆದರೆ ಕೃಷಿಯ ಖುಷಿ ಬದುಕನ್ನು ಕಸಿಯುವಷ್ಟೂ ಆಧುನಿಕ ಸೌಲಭ್ಯಗಳು ನುಗ್ಗಿಬಿಟ್ಟರೆ ಹಳ್ಳಿಗಳ ಭವಿಷ್ಯ ಕರಾಳ. ಎಲ್ಲ ಹಳ್ಳಿಗಳೂ ಇದಕ್ಕಿಂತ ಹೊರತಿಲ್ಲ.

ಸಂಕ್ರಾಂತಿ ಯಾಕೆ, ಎಲ್ಲಾ ಹಬ್ಬಗಳಲ್ಲೂ ನಲಿವಿನ ಸುಳಿವಿಲ್ಲ. ಸಂತಸದ ವಿನಿಮಯವಿಲ್ಲ. ಭಾವನೆಗಳು ಎಂದೋ ಹೊರಟುಹೋಗಿವೆ. ಎಲ್ಲವೂ ವ್ಯವಹಾರ. 'ಕಾಸು ಕೊಟ್ಟರೆ ಆಯಿತು, ಎಲ್ಲವೂ ಸಿಗುತ್ತದೆ' ಎಂಬ ನಂಬುಗೆಯ ಅಡಿಗಟ್ಟಿನ ಮೇಲೆ ಬದುಕನ್ನು ಕಟ್ಟುತ್ತಿದ್ದೇವೆ. ಇಂತಹ ಸ್ಥಿತಿಯಿರುವಾಗ ಸಂಕ್ರಾಂತಿ, ಯುಗಾದಿ, ದೀಪಾವಳಿ ಹಬ್ಬಗಳು ಕ್ಯಾಲೆಂಡರಿನಲ್ಲಿ ಸದ್ದಿಲ್ಲದೆ ಮಲಗಿ ಎದ್ದೇಳುತ್ತಿರುತ್ತವೆ.