
ಮಕರ ಸಂಕ್ರಮಣದಂದು ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಹಳ್ಳಿಗಳಲ್ಲಿ ಸುತ್ತಾಡುತ್ತಿದ್ದೆ. ಈ ಭಾಗದಲ್ಲಿ 'ಸಂಕ್ರಾಂತಿ ಹಬ್ಬ' (ಸುಗ್ಗಿ ಹಬ್ಬ) ವಿಶೇಷ. ಹೊಲದಿಂದ ಕಟಾವ್ ಆಗಿ ಸಂಸ್ಕರಣೆಗೊಂಡ ಧಾನ್ಯಗಳು ಜಗಲಿ ಏರಿರುತ್ತವೆ. ಹಬ್ಬದ ಹೊತ್ತಿಗೆ ಯಾವುದೆಲ್ಲಾ ಕಾಳುಗಳು ಲಭ್ಯವಾಗುತ್ತವೋ ಅವೆಲ್ಲದರ ಬಳಕೆ. ಹೊಸ ಬೆಳೆಯ ಸ್ವಾಗತಕ್ಕೆ ಮನೆ-ಮನ ಸಜ್ಜು. ಊರಿಗೆ ಊರೇ ಬೆಸೆದುಕೊಳ್ಳುತ್ತವೆ.
ಯಾಕೋ ಗೊತ್ತಿಲ್ಲ, ನಾನು ಭೇಟಿ ನೀಡಿದ ಮೂರ್ನಾಲ್ಕು ಹಳ್ಳಿಗಳಲ್ಲಿ 'ಎಳ್ಳು-ಬೆಲ್ಲ'ದ 'ಹಳೆ ನೆನಪು'ಗಳ ಮಾತುಕತೆ ನಡೆಯುತ್ತಿದ್ದುವು. ಹಬ್ಬದ ವಾತಾವರಣ ಅಷ್ಟಕ್ಕಷ್ಟೇ. 'ಹಬ್ಬದ ಸಂಭ್ರಮ ಕಡಿಮೆಯಾಗಿದೆ. ಸಾಮುದಾಯಿಕ ಭಾವನೆ ಇಲ್ಲ. ಗುಂಪು ಸೇರಿ ಹಬ್ಬ ಮಾಡುವುದಕ್ಕಿಂತ ಖಾಸಗಿಯಾಗಿ ಆಚರಿಸುವುದತ್ತ ಜನರ ಒಲವು,' ಎಂದರು ಅಮ್ಮನಘಟ್ಟದ ಕೃಷಿಕ ಶಂಕರಪ್ಪನವರು.
ಎಳ್ಳು, ಬೆಲ್ಲ, ಕೊಬ್ಬರಿ, ಅವರೆಕಾಳು, ಶೇಂಗಾ ಮಿಶ್ರಿತ ಪಾಕದೊಂದಿಗೆ ಬಾಳೆಹಣ್ಣು, ಕಬ್ಬಿನ ತುಂಡನ್ನು ಜತೆಗಿಟ್ಟು ಅತಿಥಿಗಳಿಗೆ ನೀಡಿ ಶುಭಾಶಯ ವಿನಿಮಯ ಮಾಡಿಕೊಳ್ಳುವುದು ವಾಡಿಕೆ. ಇದನ್ನು ಸಿದ್ಧಪಡಿಸಲು ಹದಿನೈದು ದಿವಸ ಹಿಂದಿನಿಂದಲೇ ತಯಾರಿ. ಹೆಣ್ಮಕ್ಕಳ ಪಾಲುಗಾರಿಕೆ ಹೆಚ್ಚು. ಒಂದರ್ಥದಲ್ಲಿ 'ಹೆಣ್ಮಕ್ಕಳ ಹಬ್ಬ'ವಿದು. ಉತ್ತಮವಾದ ಕೊಬ್ಬರಿಯನ್ನು ಆಯ್ದು ಚಿಕ್ಕ ಚಿಕ್ಕ ಚೂರುಗಳನ್ನಾಗಿ ಮಾಡಿಟ್ಟುಕೊಳ್ಳುವುದು, ಬಿಳಿ ಎಳ್ಳನ್ನು ಶುಚಿಗೊಳಿಸುವುದು, ಉತ್ತಮ ಶೇಂಗಾ ಆಯ್ದುಕೊಳ್ಳುವುದು.. ಹೀಗೆ ಮನೆಮನೆಗಳಲ್ಲಿ ಸಂತಸ, ಸಂಭ್ರಮದ ಸಿದ್ಧತೆ.
ಸಂಕ್ರಾಂತಿ ದನಗಳ ಹಬ್ಬವೂ ಹೌದು. ಮನೆಯೊಡೆಯನ ಹೊಟ್ಟೆಪಾಡಿಗಾಗಿ ವರ್ಷವಿಡೀ ಅವನೊಂದಿಗೆ ದುಡಿದುದರ ಫಲವಾಗಿ ಧಾನ್ಯಗಳು ಮನೆ ಸೇರುತ್ತವೆ. ಹಾಗಾಗಿ ಅವುಗಳಿಗೆ ಕೃತಜ್ಞತೆ ಹೇಳುವ ಹಬ್ಬ. ಬೆಳಿಗ್ಗೆ ದನಗಳಿಗೆ ಸ್ನಾನ ಮಾಡಿಸಲು ಹೊಂತಕಾರಿಗಳ ದಂಡು ಸಜ್ಜಾಗುತ್ತದೆ. ಕೊಂಬುಗಳಿಗೆ ಎಣ್ಣೆ ಪಾಲಿಶ್. ಕಾಲಿಗೆ-ಕೊರಳಿಗೆ ಹೂಮಾಲೆ, ಅಲಂಕಾರ. ಧರಿಸಲು ಗೌನು. ಗಾಡಿಗಳಿಗೆ ಚಿತ್ತಾರ, ತೋರಣ. ಇದಕ್ಕಾಗಿ ತಾಮುಂದು, ನಾಮುಂದು ಎನ್ನುವ ಪೈಪೋಟಿ. ದನಗಳಿಗೆ ತಿನಿಸು (ಎಡೆ) ನೀಡಿದ ಬಳಿಕ ಮನೆ ಮಂದಿಯ ಸಿಹಿಭೋಜನ. ಹಬ್ಬದ ಈ ವರ್ಣನೆಯೀಗ ಬರೆದು ಓದುವುದಕ್ಕೆ ಖುಷಿ! ಕಾರಣ, ಎಳ್ಳು-ಬೆಲ್ಲವನ್ನು ತಟ್ಟೆಯಲ್ಲಿಟ್ಟು 'ತೆಕ್ಕೊಳ್ರಿ.. ಹಬ್ಬದ ಶುಭಾಶಯಗಳು' ಎಂಬ ವಿನಿಮಯಕ್ಕೆ ಮಾತ್ರ ಸೀಮಿತ. ಹಿಂದಿರುವ ಭಾವನೆಗಳು, ಶೃದ್ಧೆಗಳಿಗೆ ಮಸುಕು ಹಿಡಿದಿದೆ.
ಬಣ್ಣ ಬಣ್ಣದ ಹೊಸ ಬಟ್ಟೆಯುಟ್ಟು ಹಬ್ಬವನ್ನು ಆಚರಿಸುವ ಹೆಣ್ಮಕ್ಕಳ ಸಂಖ್ಯೆ ಹಳ್ಳಿಗಳಲ್ಲಿ ಕಡಿಮೆಯಾಗುತ್ತಿವೆ.
'ಹಳ್ಳಿ ಬಿಟ್ಟು ಹತ್ತಿರದ ಪಟ್ಟಣಗಳಿಗೆ ಹೆಣ್ಮಕ್ಕಳು ವಿದ್ಯಾಭ್ಯಾಸಕ್ಕಾಗಿ ಹೋಗವ್ರೆ. ಅಲ್ಲೇ ಸೆಟ್ಲ್ ಆಗವ್ರೆ. ಹಾಂಗಾಗಿ ಹಬ್ಬ ಮಾಡವ್ರು ಇಲ್ಲ' ಎಂಬ ಸತ್ಯವನ್ನು ಹೇಳುತ್ತಾರೆ ತೋವಿನಕೆರೆಯ ಪದ್ಮರಾಜು. ಹಳ್ಳಿ ಮನೆಗಳಲ್ಲಿ ತಂದೆ, ತಾಯಿ, ಅಜ್ಜ, ಅಜ್ಜಿ ಮಾತ್ರ ವಾಸವಿದ್ದು, ಮಿಕ್ಕುಳಿದವರು 'ಬೇರೆ ಬೇರೆ' ಕಾರಣಕ್ಕೆ ನಗರದ ಬಸ್ಸನ್ನು ಏರಿದ್ದಾರೆ, ಏರುತ್ತಿದ್ದಾರೆ. ಒಮ್ಮೆ ನಗರ ಸೇರಿದರೆ ಮುಗಿಯಿತು, ಮತ್ತೆಂದಿಗೂ ಅವರಿಗೆ ಹಳ್ಳಿ ಮಾರ್ಗ ದುರ್ಗಮ!. ಇದನ್ನು 'ಸಹಜ' ಅಂತ ಸ್ವೀಕರಿಸಬೇಕಾದ ಕಾಲಘಟ್ಟವಿದು.
ಎಳ್ಳು ಬೆಲ್ಲವನ್ನು ಮನೆಯಲ್ಲೇ ಮಾಡಿದರೆ ಅದಕ್ಕೆ ರುಚಿ-ಶುಚಿ ಜಾಸ್ತಿ. ನಮ್ಮದೇ ಬೆವರಿನ ಫಲವಲ್ವಾ, ಜತೆಗೆ ಹೆಮ್ಮೆ, ಅಭಿಮಾನವೂ ಅಧಿಕ. ನಗರದಲ್ಲಿ ರೆಡಿಮೇಡ್ ಆಗಿ ಅವೆಲ್ಲಾ ಸಿಗುತ್ತದೆ. ಬೇಕಾದರೆ ಇನ್ನೂ ಬಣ್ಣ ಬಣ್ಣದ ಒಳಸುರಿಗಳಲ್ಲಿ! ಅದರೊಂದಿಗೆ ಸಿಗುವ ಸಕ್ಕರೆ ಅಚ್ಚಿನ ಸಾಚಾತನಕ್ಕೆ ಈಚೆಗೆ ಪತ್ರಿಕೆಯೊಂದು ಬೆಳಕು ಚೆಲ್ಲಿತ್ತು. 'ಇಲ್ಲಾರಿ, ಅಕ್ಕ ಪಕ್ಕದ ಮನೆಯವರಿಗೆ ಕೊಡಲು ಬೇಕಲ್ವಾ, ಹಾಂಗಾಗಿ ಸಕ್ಕರೆ ಅಚ್ಚನ್ನು ತಂದುಬಿಟ್ವಿ' ಎನ್ನುವ ಅಮ್ಮಂದಿರು ಜಾಸ್ತಿ.
'ಮಗುವಿಗೆ ದನದ ಹಾಲು ನೀಡಲಿಕ್ಕಾದರೂ ಮನೆಮನೆಗಳಲ್ಲಿ ನಾಟಿ ಹಸುವನ್ನು ಸಾಕಲೇಬೇಕ್ರಿ. ಆದರೆ ದುರಾದೃಷ್ಟ ನೋಡಿ, ಹಾಲಿಗಾಗಿ ಪಾತ್ರೆ ಹಿಡಿದು ಬೆಳಿಗ್ಗೆ ಮನೆ ಮುಂದೆ ನಿಲ್ಲೋ ಪರಿಸ್ಥಿತಿ ಬಹುತೇಕ ಮಂದಿಯದು' ಹಳ್ಳಿ ಸಂಭ್ರಮದ ಇಳಿ ಲೆಕ್ಕವನ್ನು ಊಹಿಸಲು ಶಂಕರಪ್ಪನವರ ಈ ಮಾತು ಸಾಕು.
ಹಾಲಿಗಾಗಿ ಮಿಶ್ರತಳಿ ದನಗಳ ಸಾಕಣೆ ಹೆಚ್ಚುತ್ತಿದೆ. ಹೂಟೆಗಾಗಿ ಬಳಸುತ್ತಿದ್ದ ನಾಟಿ ಹಸುಗಳು ಅಜ್ಞಾತವಾಗುತ್ತಿವೆ. ಹಾಲು ನೀಡುವ ಹಸುಗಳ ಸಂಖ್ಯೆ ಕ್ಷೀಣಿಸುತ್ತಿವೆ. ಸಂಕ್ರಾಂತಿಯ ಪೂಜೆ, ಅಲಂಕಾರಗಳು ನಾಟಿ ಹಸುಗಳಿಗೆ ವಿನಾ, ದೈತ್ಯ ಸಂಕರ ತಳಿಗಳಿಗೆ ಅಲ್ಲವಲ್ಲ. ಹಬ್ಬದಲ್ಲಿ ಯಾವುದು ಪ್ರಧಾನವೋ, ಅದೇ ಮಾಯವಾಗಿದೆ. ದನಗಳು ಇವೆಯೆನ್ನಿ. ಅವುಗಳ ಸ್ನಾನಕ್ಕೆ ನೀರಿಲ್ಲ. ಕೆರೆಗಳು, ನಾಲೆಗಳು, ಕೊಳವೆಬಾವಿಗಳು ದಿನೇ ದಿನೇ ಬತ್ತುತ್ತಿವೆ.
ಹಿಂದೆಲ್ಲಾ ಧಾನ್ಯಗಳದು ಏಕಬೆಳೆ. ಈಗ ಹಾಗಲ್ಲ, ಹೆಚ್ಚಿನೆಡೆ ನಾಲೆ, ಕೊಳವೆಬಾವಿ, ಕೆರೆಯ ನೀರು ಸದಾ ಲಭ್ಯ. ವರ್ಷದ ಯಾವ ಋತುವಿನಲ್ಲಾದರೂ ಬೆಳೆ ತೆಗೆಯಬಹುದು. ಕೃಷಿ ಕ್ರಮ ಬದಲಾದುದರಿಂದ ಅದರ ಪರಿಣಾಮ ಹಬ್ಬಗಳ ಮೇಲೂ ಆಗದೆ ಇದ್ದೀತೇ?
ಟಿವಿ ಕೂಡಾ ಹಳ್ಳಿಯ 'ನಿಜ ನೆಮ್ಮದಿ'ಯನ್ನು ಕಸಿದಿದೆ. ಸೀರಿಯಲ್ಗಳಿಗೆ ನಾವು ಹೊಂದಿಕೊಂಡಿದ್ದೇವೆ. ಅದನ್ನು ನೋಡಿದ ಬಳಿಕವೇ ಹಬ್ಬವೋ, ಜಾತ್ರೆಯೋ. ಹಾಗಾಗಿ ಈ ಭಾಗದಲ್ಲಿ ಸಂಜೆ ಯಾವುದೇ ಕಾರ್ಯಕ್ರಮವನ್ನು ಹಮ್ಮಿಕೊಂಡರೆ ಜನವೇ ಬರುವುದಿಲ್ಲ ಎನ್ನುತ್ತಾರೆ ದೊಡ್ಡಬಳ್ಳಾಪುರದ ನಟರಾಜ್.
ಸಂಕ್ರಾಂತಿಯಂದು ಸಂಜೆ ಹೊತ್ತು ಕಿಚ್ಚಿನ ಮೇಲೆ ದನಗಳನ್ನು ಹಾರಿಸುವುದು ಸಂಪ್ರದಾಯ. ಅವುಗಳ ಮೇಲಿರುವ ಉಣ್ಣಿ, ಕ್ರಿಮಿಗಳು ನಾಶವಾಗಲಿ ಎಂಬುದು ವೈಜ್ಞಾನಿಕ ಕಾರಣವಾದರೆ, ಅವುಗಳಿಗೆ ದೃಷ್ಟಿ ಬೀಳದಿರಲಿ - ಇದು ಎರಡನೇ ಕಾರಣ. ದನಗಳನ್ನು ಕಿಚ್ಚಿನ ಮೇಲೆ ಹಾಯಿಸುವ ಫೋಟೋ ತೆಗೆಯಲೆಂದು ಊರಿಡೀ ಸುತ್ತಾಡಿದ ನಟರಾಜ್ಗೆ ನಿರಾಶೆ. 'ಈ ಆಚರಣೆಯನ್ನೇ ಬಿಟ್ಟುಬಿಟ್ಟಿದ್ದಾರೆ ಸಾರ್' ಎನ್ನುತ್ತಾರೆ.
ಎರಡು ದಿವಸ ಹಳ್ಳಿ ಸುತ್ತಾಡಿದ ನನಗೆ ಹೊಸ ಬಟ್ಟೆಯುಟ್ಟು ಎಳ್ಳುಬೆಲ್ಲದೊಂದಿಗೆ ನೆರೆ ಮನೆಗೆ ಹೋಗುತ್ತಿದ್ದ ಬಾಲಪೋರಿಯೊಬ್ಬಳು ಮಾತ್ರ ಪ್ರತ್ಯಕ್ಷಳಾದಷ್ಟೇ. ಮತ್ತೆಲ್ಲಾ ರಾಜಧಾನಿಯ ಗಬ್ಬು ರಾಜಕೀಯದ ಸುದ್ದಿ-ವಿಮರ್ಶೆ. ಕೆಲವು ಹಳ್ಳಿಗಳಲ್ಲಿ ಹಬ್ಬಗಳೂ ಈಗಲೂ ಜೀವಂತ. ಎಲ್ಲೆಲ್ಲಿ ಶ್ರಮಿಕ ವರ್ಗದವರ ಸಂಖ್ಯೆ ಹೆಚ್ಚಿದೆಯೋ ಅಲ್ಲೆಲ್ಲಾ ಸಂಕ್ರಾಂತಿ ಬರೋಬ್ಬರಿ.
'ನಮ್ಮೂರಲ್ಲಿ ನಾಟಿ ತಳಿಗಳು ಇನ್ನೂ ಉಳಿದುಕೊಂಡಿವೆ. ಕಾರಣ, ಇಲ್ಲಿ ಬೀಜದ ಹೋರಿಗಳನ್ನು ಸಾಕುವವರಿದ್ದಾರೆ. ನಾಟಿ ಹಸುವಿಗೆ ಕೃತಕ ಗರ್ಭಧಾರಣೆ ಮಾಡಿದರೆ ಅದರಲ್ಲಿ ಹುಟ್ಟುವ ಕರುಗಳು ಯಾವ ತಳಿಯವು ಎನ್ನುವ ಹಾಗಿಲ್ಲ. ಹಾಗಾಗಿ ಇಲ್ಲಿ ಸಾಂಪ್ರದಾಯಿಕ ಕ್ರಮದಲ್ಲೇ ಗರ್ಭಧಾರಣೆ ಮಾಡಿಸಲಾಗುತ್ತದೆ' ಎಂಬ ಹೊಸ ಸುಳಿವನ್ನು ಕನಕಪುರದ ಸನಿಹದ ಹಾರೋಹಳ್ಳಿ ಗಣಪತಿ ಭಟ್ ನೀಡುತ್ತಾರೆ. ನಾಟಿ ತಳಿಗಳನ್ನು ಉಳಿಸುವ ಹಳ್ಳಿ ಜಾಣ್ಮೆ ನಿಜಕ್ಕೂ ಕಾಲದ ಅನಿವಾರ್ಯತೆ. ಎಲ್ಲೆಲ್ಲಿ ನಾಟಿ ಹಸುಗಳ ಸಂಖ್ಯೆ ಹೆಚ್ಚಿವೆಯೋ ಅಲ್ಲೆಲ್ಲಾ ಸುಗ್ಗಿ ಹಬ್ಬದ ಸಂಭ್ರಮವೂ ಹೆಚ್ಚು.
ಹಳ್ಳಿಗಳೂ ಬದಲಾಗುತ್ತಿದೆ. ಮೊಬೈಲ್ ಟವರ್ಗಳು ಮೇಲೇಳುತ್ತಲೇ ಇವೆ. ಯುವಕರನ್ನು ಮೋಹಿಸುವ ಮೊಬೈಲ್ ಕಂಪೆನಿಗಳ ಜಾಹೀರಾತು ಹಳ್ಳಿಯ ಚಹಾ ಅಂಗಡಿಯನ್ನು ಅಲಂಕರಿಸಿವೆ. ಅಗತ್ಯವಿದೆಯೋ ಇಲ್ಲವೋ ಎರಡೋ ಮೂರೋ ಮೊಬೈಲ್ಗಳು ಕೈಯಲ್ಲಿ ತಿರುಗಿಸುತ್ತಾ ಇರುವುದನ್ನು ಪ್ರತಿಷ್ಠೆ ಅಂತ ಸ್ವೀಕರಿಸಿದ್ದೇವೆ. ತಪ್ಪಲ್ಲ ಬಿಡಿ! ಮೊಬೈಲ್ ಅವರದೇ, ಅದಕ್ಕೆ ನೀಡಿದ ಹಣವೂ ಅವರದೇ. ಆದರೆ ಕೃಷಿಯ ಖುಷಿ ಬದುಕನ್ನು ಕಸಿಯುವಷ್ಟೂ ಆಧುನಿಕ ಸೌಲಭ್ಯಗಳು ನುಗ್ಗಿಬಿಟ್ಟರೆ ಹಳ್ಳಿಗಳ ಭವಿಷ್ಯ ಕರಾಳ. ಎಲ್ಲ ಹಳ್ಳಿಗಳೂ ಇದಕ್ಕಿಂತ ಹೊರತಿಲ್ಲ.
ಸಂಕ್ರಾಂತಿ ಯಾಕೆ, ಎಲ್ಲಾ ಹಬ್ಬಗಳಲ್ಲೂ ನಲಿವಿನ ಸುಳಿವಿಲ್ಲ. ಸಂತಸದ ವಿನಿಮಯವಿಲ್ಲ. ಭಾವನೆಗಳು ಎಂದೋ ಹೊರಟುಹೋಗಿವೆ. ಎಲ್ಲವೂ ವ್ಯವಹಾರ. 'ಕಾಸು ಕೊಟ್ಟರೆ ಆಯಿತು, ಎಲ್ಲವೂ ಸಿಗುತ್ತದೆ' ಎಂಬ ನಂಬುಗೆಯ ಅಡಿಗಟ್ಟಿನ ಮೇಲೆ ಬದುಕನ್ನು ಕಟ್ಟುತ್ತಿದ್ದೇವೆ. ಇಂತಹ ಸ್ಥಿತಿಯಿರುವಾಗ ಸಂಕ್ರಾಂತಿ, ಯುಗಾದಿ, ದೀಪಾವಳಿ ಹಬ್ಬಗಳು ಕ್ಯಾಲೆಂಡರಿನಲ್ಲಿ ಸದ್ದಿಲ್ಲದೆ ಮಲಗಿ ಎದ್ದೇಳುತ್ತಿರುತ್ತವೆ.
0 comments:
Post a Comment