Tuesday, February 14, 2012

ನಾಶದಂಚಿನಲ್ಲಿದೆ, ದೊಡ್ಡರಾಗಿ


ಆಕಳಿಂದ ಆಹಾರ ತನಕ ಎಲ್ಲವೂ ಹೈಬ್ರಿಡ್! ಮತ್ತೊಂದೆಡೆ ಕುಲಾಂತರಿ ಭೂತ! ಕೃಷಿಗೆ, ಕೃಷಿಕರಿಗೆ ಉಪಕಾರ ಮಂತ್ರವನ್ನು ಉಪದೇಶಿಸುತ್ತಾ ಕಳೆದರ್ಧ ಶತಮಾನಗಳಿಂದ ಇವೆಲ್ಲಾ ಹೊಲಕ್ಕೆ ನುಗ್ಗಿಬಿಟ್ಟು ಮಗುಮ್ಮನೆ ಕುಳಿತಿವೆ. ಪರಿಣಾಮ, ಪಾರಂಪರಿಕವಾಗಿ ಬದುಕಿನೊಂದಿಗೆ ಥಳಕು ಹಾಕಿಕೊಂಡಿದ್ದ ಸ್ಥಳೀಯ ತಳಿಗಳಿಗೆ ಮಸುಕು. ಅಲ್ಲ, ನಾಶ.

ಜನವರಿ ಮಧ್ಯ ಭಾಗದಲ್ಲಿ ಪತ್ರಕರ್ತ ಮಲ್ಲಿಕಾರ್ಜುನ ಹೊಸಪಾಳ್ಯ ಜತೆ ತುಮಕೂರಿನ ಗುಬ್ಬಿ ತಾಲೂಕಿನ ಹಳ್ಳಿಗಳಲ್ಲಿ ಸುತ್ತಾಡುತ್ತಿದ್ದೆ. ಮೂರು ದಶಕಗಳಿಂದ ಸ್ಥಳೀಯ ಪಾರಂಪರಿಕ 'ದೊಡ್ಡರಾಗಿ'ಯನ್ನು (ಐನ್ರಾಗಿ, ಐಯನ್ರಾಗಿ) ಬೆಳೆಯುವ ಏಕೈಕ ಕೃಷಿಕರ ಸುಳಿವು ಸಿಕ್ಕಿತು. ಸುಳಿವಿನ ಬೆನ್ನೇರಿ ದೊಡ್ಡರಾಗಿಯನ್ನು ಬೆಳೆಯುತ್ತಿರುವ ಅಳಿಲುಘಟ್ಟದ ಕೆಂಪಸಿದ್ದಯ್ಯರವರ ಮನೆ ಪತ್ತೆ ಮಾಡಿದೆವು.

ಅವರ ಪತ್ನಿ ಕೆಂಪಮ್ಮ ಸಹಾಯಕರೊಂದಿಗೆ ರಾಗಿಯ ಕೆಲಸದಲ್ಲೇ ಮಗ್ನರಾಗಿದ್ದರು. 'ಬನ್ನಿ ಸಾರ್, ಯಾಕೋ ಈ ಸಾರಿ ನಮ್ಮ ಹಳೆ ತಳಿಗೆ ಬೇರೆ ತಳಿಗಳು ಮಿಶ್ರವಾಗಿಬಿಟ್ಟಿವೆ. ಅದನ್ನು ಪ್ರತ್ಯೇಕಿಸುತ್ತಿದ್ದೇವೆ. ಮುಂದಿನ ಸಾರಿ ಬಿತ್ತನೆಗೆ ಬೇಕಲ್ವಾ' ಎನ್ನುತ್ತಾ ಕೆಂಪಮ್ಮ ಸ್ವಾಗತಿಸಿದರು.

ಅರೆ, ಹೇಗೆ ಮಿಶ್ರವಾಯಿತು? ಹೊಸಪಾಳ್ಯರಿಂದ ಥಟ್ ಅಂತ ಪ್ರಶ್ನೆ. 'ಕಳೆದ ವರುಷ ರಾಗಿ ಕಟಾವ್ ಆದ ಬಳಿಕ ಮೆದೆ (ರಾಶಿ) ಮಾಡಿದ್ದೆವು. ಅಷ್ಟು ಹೊತ್ತಿಗೆ ಮಳೆ ಬಂದು ಬಿಡ್ತು. ಅದರ ಮೇಲೆ ಪ್ಲಾಸ್ಟಿಕ್ ಹೊದೆಸಿಲ್ಲವಾದ್ದರಿಂದ ನೀರು ಮೆದೆಯ ಒಳಕ್ಕೆ ಇಳಿಯಿತು. ನೀರನ್ನು ಹೀರಿಕೊಂಡ ರಾಗಿಕಾಳುಗಳು ಮತ್ತೆ ಮೊಳಕೆಗೆ ಒಗ್ಗಿಕೊಳ್ಳುವುದಿಲ್ಲ. ಹಾಗಾಗಿ ಬೇರೆಡೆಯಿಂದ ತಂದ್ವಿ. ಅವರಲ್ಲಿ ಮಿಕ್ಸ್ ಆಗಿದೆ' ಎಂದರು ಕೆಂಪಮ್ಮ.

ಇವರಿಂದಲೇ ಕೃಷಿಕರೊಬ್ಬರು ದೊಡ್ಡರಾಗಿಯ ಬೀಜ ಕೊಂಡುಹೋಗಿದ್ದರು. ಅವರ ಹೊಲದಲ್ಲಿ ಹೈಬ್ರಿಡ್ ಮತ್ತು ದೊಡ್ಡ ರಾಗಿ ಮಿಶ್ರವಾಗಿದ್ದಿರಬೇಕು. ತನ್ನದೇ ತಳಿಯಲ್ವಾ ಎನ್ನುತ್ತಾ ಕೆಂಪಸಿದ್ದಯ್ಯ ಬಿತ್ತನೆಗಾಗಿ ರಾಗಿ ತಂದಿದ್ದರು. ಅದನ್ನು ಬಿತ್ತಿ, ಕಾಳು ಬೇರ್ಪಡಿಸುವಾಗಲೇ ತಿಳಿಯಿತು, ಇದು ಸಾಚಾ ಅಲ್ಲ.

ಕಳೆದ ದಶಂಬರದಲ್ಲಿ ರಾಗಿ ಕಟಾವ್ ಮಾಡಿದ್ದ ಕೆಂಪಸಿದ್ದಯ್ಯರಿಗೆ, ಈಗ ಮಿಶ್ರವಾಗಿದ್ದ ರಾಗಿ ತೆನೆಗಳಲ್ಲಿ ಸದೃಢವಾತರುವ ತೆನೆಗಳನ್ನು ಆಯ್ದು ತಳಿ ಶುದ್ಧಗೊಳಿಸುವ ಕೆಲಸ. 'ಇನ್ನೆಂದೂ ಹೀಗೆ ಆಗದಂತೆ ಎಚ್ಚರ ವಹಿಸುತ್ತೇವೆ' ಎಂಬ ನಿಗಾ.

ಒಂದು ಕಾಲಘಟ್ಟದಲ್ಲಿ ಸುತ್ತೆಲ್ಲಾ ದೊಡ್ಡರಾಗಿಯನ್ನೇ ಬೆಳೆಯುತ್ತಿದ್ದರು. ಹೆಚ್ಚು ಇಳುವರಿ ನೀಡುವ ಕಾರಣಕ್ಕಾಗಿ ಹೈಬ್ರಿಡ್ ತಳಿಗಳನ್ನು ಜನರು ಆಯ್ಕೆಮಾಡಿಕೊಂಡರು. ರಾಗಿಯ ಗುಣಗಳನ್ನು ಕೆಂಪಮ್ಮ ಹೇಳುತ್ತಾರೆ - ದೊಡ್ಡರಾಗಿ ತುಂಬಾ ಒದಗು. ಹೈಬ್ರಿಡ್ ಇಳುವರಿ ಹೆಚ್ಚು ಕೊಡಬಹುದು. ಆದರೆ ರುಚಿಯಲ್ಲಿ ಹಿಂದೆ. ಆರೋಗ್ಯದಲ್ಲೂ ಕೂಡಾ. ಬೆಳಿಗ್ಗೆ ಮುದ್ದೆ ಊಟ ಮಾಡಿದರೆ ಸಂಜೆವರೆಗೂ ಹೊಟ್ಟೆಗಟ್ಟಿ. ಹಸಿವಾಗೊಲ್ಲ. ದೊಡ್ಡರಾಗಿಯಲ್ಲಿ ಇಳುವರಿ ಕಡಿಮೆ ಬಂದರೂ, ಹಿಟ್ಟು ಹೆಚ್ಚು ಬರುತ್ತೆ. ನಮ್ಮೆಜನಮಾನರಿಗೆ ದೊಡ್ಡರಾಗಿಯದ್ದೇ ಮುದ್ದೆ ಆಗ್ಬೇಕು. ಹಾಂಗಾಗಿ ಊರೆಲ್ಲಾ ಹೈಬ್ರಿಡ್ ಬಂದರೂ ನಮ್ಗೆ ಬೇಡ!

ಕೆಂಪಸಿದ್ದಯ್ಯರು ಒಂದೂವರೆ ಎಕರೆಯಲ್ಲಿ ರಾಗಿ ಬೆಳೆಯುತ್ತಾರೆ. ಹತ್ತರಿಂದ ಹನ್ನೆರಡು ಮೂಟೆ ಇಳುವರಿ (ಒಂದು ಮೂಟೆ ಅಂದರೆ 80 ಕಿಲೋ) ಅಕ್ಕಡಿಸಾಲಿನಲ್ಲಿ ಅವರೆ, ತೊಗರಿ, ಜೋಳಗಳು. 'ಸಾರ್, ಇವೆಲ್ಲಾ ನಮ್ಮ ಹೊಟ್ಟೆ ಸೇರೋಕೆ. ಮಾರಾಟಕ್ಕಲ್ಲ. ಹಾಗಾಗಿ ಎಷ್ಟು ಕೂಲಿ ಬರುತ್ತೆ, ಎಷ್ಟು ಖರ್ಚು ಆಗುತ್ತೆ ಅಂತ ನೋಡೋಲ್ಲ' ಅಂತ ಮಾತಿನ ಮಧ್ಯೆ ಖಡಕ್ ಆಗಿ ಹೇಳಿದರು ಕೆಂಪಸಿದ್ದಯ್ಯನವರ ಭಾವಮೈದುನ ಬೋರಯ್ಯ.

ದನಕ್ಕೆ ರಾಗಿಯ ಹುಲ್ಲು ಉತ್ತಮ ಆಹಾರ. ಅದು ಪುಡಿಪುಡಿಯಾಗುವುದಿಲ್ಲವಂತೆ. ತನ್ನ ಐದು ದನಗಳಿಗೆ ಹುಲ್ಲು ಅಲ್ಲದೆ ರಾಗಿ ಹುಡಿಯನ್ನು ಅಂಬಲಿ ಮಾಡಿ ಕುಡಿಸುತ್ತಾರೆ.

ಕಳೆದು ಹೋಗುತ್ತಿರುವ ದೊಡ್ಡರಾಗಿಯನ್ನು ಉಳಿಸುತ್ತಿರುವ, ಉಳಿಸಿ ಬಳಸುತ್ತಿರುವ ಕೆಂಪಸಿದ್ದಯ್ಯ ಹೊಸ ಹೊಸ ಬೆಳೆಗಳು ಹೊಲಕ್ಕೆ ನುಗ್ಗುತ್ತಿರುವ ಹೊತ್ತಲ್ಲೇ ಪಾರಂಪರಿಕ ತಳಿಯ ಪರ ಮಾತನಾಡುತ್ತಿರುವುದು ನಿಜಕ್ಕೂ ಗ್ರೇಟ್.

"ದೊಡ್ಡರಾಗಿಯ ಬೀಜಕೇಳಿಕೊಂಡು ಬರ್ತಾರೆ. ಕೊಡೋಕೆ ನಮ್ಮಲ್ಲಿ ಇಲ್ಲ. ಮೊದಲೆಲ್ಲಾ ಸಾಕಷ್ಟು ಮಂದಿಗೆ ಕೊಟ್ಟಿದ್ವಿ. ಯಾರೂ ಉಳಿಸಿಕೊಂಡಿಲ್ಲ" - ಎನ್ನುತ್ತಾ ಕೆಂಪಮ್ಮ ನಮ್ಮನ್ನು ಬೀಳ್ಕೊಟ್ಟರು.

ನಾಶದಂಚಿನಲ್ಲಿರುವ ದೊಡ್ಡರಾಗಿ ತಳಿಯನ್ನು ಉಳಿಸಬೇಕಿದೆ. ಇದಕ್ಕಾಗಿ ಸಂಸ್ಥೆಗಳನ್ನೋ, ಸರಕಾರಿ ಸಹಾಯವನ್ನೋ ನಿರೀಕ್ಷಿಸಬೇಕಾಗಿಲ್ಲ. ರೈತರೇ ಮನಸ್ಸು ಮಾಡಬೇಕಷ್ಟೇ. ಇಲ್ಲದಿದ್ದರೆ ನಮ್ಮ ಕಣ್ಣೆದುರು ಪಾರಂಪರಿಕ ತಳಿಯೊಂದು ನಾಶವಾದುದಕ್ಕೆ ನಾವು ಸಾಕ್ಷಿಯಾಗುತ್ತೇವೆ.

0 comments:

Post a Comment