Saturday, March 28, 2009

ಸ್ಮಶಾನದಲ್ಲಿ ಒಂದು ಸಂಜೆ.....
ಮನೆಯೊಂದರಲ್ಲಿ ವ್ಯಕ್ತಿಯೊಬ್ಬನ ಮರಣವಾಗುತ್ತದೆ. 289201ಕ್ಕೆ ದೂರವಾಣಿ ಕರೆ ಬರುತ್ತದೆ. ಕೆಲವೇ ನಿಮಿಷದಲ್ಲಿ ಅಂಬುಲೆನ್ಸ್ ಪ್ರತ್ಯಕ್ಷ. ಶವದೊಂದಿಗೆ ಬಂಧುಗಳು ಸ್ಮಶಾನಕ್ಕೆ. ಶವಸಂಸ್ಕಾರದ ಎಲ್ಲಾ ಪರಿಕರಗಳು ಸಿದ್ಧವಾಗಿರುತ್ತವೆ. ತಾಸಿನೊಳಗೆ ಯಾವುದೇ ಶ್ರಮವಿಲ್ಲದೆ ಶವದಹನ ನಡೆದು, ಸಂಬಂಧಪಟ್ಟ ಬಂಧುಗಳು ನಿಗದಿತ ಶುಲ್ಕ ಪಾವತಿಸಿ ನಿರಾಳವಾಗಿ ಹೊರನಡೆಯುತ್ತಾರೆ.
ಇದು ಗದಗಿನ ಹುಲಕೋಟಿಯ ಸ್ಮಶಾನ ವ್ಯವಸ್ಥೆಯೊಂದರ ಒಂದು ಮುಖ. ಸ್ಮಶಾನವೆಂದಾಗ - ಬೆಳ್ಳನೆಯ ಉಡುಗೆಯ ಆಕೃತಿ, ಸುರಳಿ ಸುರುಳಿಯಾಗಿ ಸುತ್ತುವ ಧೂಮ, ತಕ್ಷಣ ಬಿರುಗಾಳಿ ಎದ್ದಾಗ ಢೀ ಕೊಡುವ ಮರಗಳು, ಬಿದ್ದಿರುವ ಎಲುಬಿನ ಚೂರು, ನಗುತ್ತಿರುವ ತಲೆಬುರುಡೆ, ಹಿನ್ನಲೆಯಲ್ಲಿ ಕೀರಲು ದನಿ....ಇದು ನಮ್ಮ ಸಿನಿಮಾಗಳು, ಕಥೆಗಳು ಬಿಂಬಿಸುವ ದೃಶ್ಯ.
ಆದರೆ ಹುಲಕೋಟಿಯಲ್ಲಿರುವುದು ಸ್ಮಶಾನವಲ್ಲ! ಮುಕ್ತಿವನ. ಇದರ ಹಿಂದೆ ನಡೆದಿದೆ, ಒಳ್ಳೆಯ ಮನಸ್ಸಿನ ರೂಪೀಕರಣ. ನಿಜಾರ್ಥದ ಭಾವ್ಯೆಕ್ಯ ಐದು ವರುಷ ಹಿಂದೆ, ಮುಕ್ತಿವನಕ್ಕಾಗಿ ಜಾಗ ಗುರುತುಮಾಡಿದಾಗ ಅದರ ಒಂದು ಪಾಶ್ರ್ವದಲ್ಲಿತ್ತು, ಮುಸ್ಲಿಂ ಬಾಂಧವರ ಗೋರಿಗಳು. ಉದ್ದೇಶಿತ ಮುಕ್ತಿವನಕ್ಕಾಗಿ ವಿನ್ಯಾಸ ರೂಪಿತವಾದಾಗ, ಈ ಗೋರಿಗಳನ್ನು ಮತ್ತೊಂದು ಪಾಶ್ರ್ವಕ್ಕೆ ಸ್ಥಳಾಂತರಿಸುವ ಅನಿವಾರ್ಯತೆ ಬಂದಿತ್ತು. ಮುಸ್ಲೀಂ ಬಾಂಧವರು ಇದನ್ನು ಒಪ್ಪಿಯಾರೇ? ಇದು ಸಾಧ್ಯವೇ? ಎಂಬ ಪ್ರಶ್ನೆ ಎದುರಾದಾಗ ಉತ್ತರ ಸಿಕ್ಕದ ಕ್ಷಣಗಳಿದ್ದುವು ಮೋಹನ್ ದುರಗಣ್ಣನವರ್ ನೆನಪಿಸಿಕೊಳ್ಳುತ್ತಾರೆ.
ಮುಕ್ತಿವನದ ಕಲ್ಪನೆಯನ್ನು ತಿಳಿಸುವ ಪ್ರಯತ್ನ. ಅದಕ್ಕಾಗಿ ಮನೆಭೇಟಿ. ಹಿರಿಯರ ಒಪ್ಪಿಗೆ. ಅಲ್ಲಿಗೆ ಬೆಟ್ಟದಂತಹ ಸಮಸ್ಯೆ ಹತ್ತಿಯಂತೆ ಹಗುರವಾಯಿತು. ಸಂಬಂಧಪಟ್ಟ ಬಂಧುಗಳೇ ಗೋರಿಗಳನ್ನು ನಿಗದಿತ ಸ್ಥಳಕ್ಕೆ ಸ್ಥಳಾಂತರಿಸಿದರು. ಅಲ್ಲದೆ ಮುಂದೆ ಶವ ಹೂತಾಗ, ಗೋರಿ ಕಟ್ಟದಿರಲೂ ನಿಶ್ಚಯಿಸಿದರು ಎನ್ನುತ್ತರೆ ಮೋಹನ್.
ಒಳಹೊಕ್ಕಾಗ ಬಲಗಡೆಗೆ ವ್ಯವಸ್ಥಿತವಾಗಿ ರೂಪಿತವಾಗಿದೆ, ವಿಶಾಲ ಪ್ರಾರ್ಥನಾ ಸ್ಥಳ. ಇದು ಮುಸ್ಲಿಂ ಸಮುದಾಯಕ್ಕೆ ಮೀಸಲು. ಅದರೆದುರೇ ಶವ ಹೂಳುವ ಪ್ರಕ್ರಿಯೆಗೂ ಸ್ಥಳ. ದ್ವಾರದಾಟಿ ಎಡಬದಿಗೆ ತಿರುಗಿದರೆ ಕಾಣುವುದು ಉದ್ಯಾನವನ! ಅದರೊಳಗಿದೆ ದಹನದ ವ್ಯವಸ್ಥೆ. ನಿಜಕ್ಕೂ ಇದೊಂದು ಬಹುದೊಡ್ಡ ಆದರ್ಶ. ಮನುಷ್ಯ-ಮನುಷ್ಯರೊಳಗೆ ನಂಬುಗೆ ವಿಶ್ವಾಸಗಳು ದೂರವಾಗುತ್ತಿರುವ ಈ ದಿನಗಳಲ್ಲಿ ಹುಲಕೋಟಿಯ ಮುಸ್ಲಿಂ ಬಾಂಧವರ ಅನ್ಯೋನ್ಯತೆ ಒಂದು ರಾಷ್ಟ್ರೀಯ ಮಾದರಿ.
ಹುಲಕೋಟಿ - ಹತ್ತು ಸಾವಿರ ಜನಸಂಖ್ಯೆಯಿರುವ ಚಿಕ್ಕ ಊರು. ಮುಕ್ತಿವನವು ಹಿಂದೂ, ಮುಸ್ಲಿಂ ಸಮುದಾಯಗಳಿಗಿರುವ ಜಂಟಿ ಸ್ಮಶಾನ. ಶವವನ್ನು ಸುಡುವ, ಹೂಳುವ ವ್ಯವಸ್ಥೆ ಇಲ್ಲಿನ ವಿಶೇಷ. ಮುಕ್ತಿವನದ ಕಣಕಣದಲ್ಲಿ ಹುಲಕೋಟಿಯ ಪ್ರತೀ ಮನೆಯ ದೇಣಿಗೆಯಿದೆ. ಹತ್ತು ರೂಪಾಯಿಯಿಂದ ಇಪ್ಪತ್ತೈದು ಸಾವಿರದ ತನಕವೂ ಸ್ವ ಇಚ್ಚೆಯಿಂದ ದೇಣಿಗೆ ನೀಡಿದ್ದಾರೆ.
ಮೊದಲಿಗೆ ವ್ಯಕ್ತಿಯ ಮರಣ ಸಹಜವೋ, ಅಸಹಜವೋ ಎಂಬ ವಿಚಾರಣೆ! ಅಸಹಜವಾದರೆ ಹೇಗೆ, ಸಂಬಂಧಪಟ್ಟ ಕಡತಗಳ ಪರಿಶೀಲನೆ. ದಾಖಲಾತಿ. ನಂತರವಷ್ಟೇ ದಹನಕ್ಕೋ, ಹೂಳಲೋ ಅನುಮತಿ. ಆಯಾಯ ಧರ್ಮದಂತೆ ಅಸ್ತಿ ಸಂಚಯನ. ಅದನ್ನು ಹಾಕಿಡಲು ಬಟ್ಟೆಯ ಚೀಲ. ಶವವನ್ನು ದಹನ ಮಾಡುವುದಾದರೆ 600-700 ರೂ. ಶುಲ್ಕ. ಹೂಳುವುದಾದರೆ ರೂ.100. ತೀರಾ ಬಡವರಿಗೆ ಉಚಿತ!
ಎಂಟೆಕ್ರೆ ವಿಸ್ತೀರ್ಣ. ವೃತ್ತಾಕಾರದಲ್ಲಿ ಒಂಭತ್ತು ವಿಭಾಗ ಬರುವಂತೆ ವಿಂಗಡಿಸಿದ್ದಾರೆ. ಒಂದೊಂದು ಭಾಗದಲ್ಲಿ ಗುಲಾಬಿ, ದಾಸವಾಸ, ಕೇಪುಳು, ಅಲಂಕಾರಿಕ ಗಿಡಗಳು.....ಹೂವಿನ ಗಿಡಗಳು. ಮಧ್ಯೆ ಬರ್ನರ್ಗಾಗಿ ಎತ್ತರದ ವೇದಿಕೆ. ಸುತ್ತಲೂ ನಿಂತು ಶವದಹನ ಕಾರ್ಯವನ್ನು ವೀಕ್ಷಿಸಲು ಮೆಟ್ಟಿಲುಗಳು.
35 ಮಂದಿಯ ಸಮಿತಿಯ ಆಡಳಿತ. ಇದರಲ್ಲಿ 25 ಮಂದಿ ಪಂಚಾಯತ್ ಸದಸ್ಯರು. ಮಿಕ್ಕುಳಿದವರು ಗ್ರಾಮಸ್ಥರು. ಮುಕ್ತಿವನ ರಚನೆಯ ಬಹುಪಾಲು ಪಂಚಾಯತ್ ದೇಣಿಗೆ. ಊರಿನವರ ದೇಣಿಗೆಯ ಬಡ್ಡಿಯಿಂದ ನಿರ್ವಹಣೆ. ಒಬ್ಬ ಖಾಯಂ ಅಲ್ಲೇ ವಾಸ್ತವ್ಯ ಹದಿನೈದು ದಿನಗಳಿಗೊಮ್ಮೆ ಸಭೆ.
ಕುಂಡದೊಳಗಿರುವ ಅಲಂಕಾರಿಕ ಸಸ್ಯಗಳು ಮುಕ್ತಿವನದ ಅಂದವನ್ನು ಹೆಚ್ಚಿಸಿದೆ. ಫಕ್ಕನೆ ನೋಡಿದರೆ ಉದ್ಯಾನವನದ ಕಲ್ಪನೆ. ಒಳಹೊಕ್ಕಾಗಲೂ ಗೊತ್ತಾಗದು. ಅಷ್ಟು ನವಿರಾಗಿ ರೂಪಿಸಿದ್ದಾರೆ. ಚಿಕ್ಕ ಚಿಕ್ಕ ಕುಂಡಗಳಲ್ಲಿ ಅಲಂಕಾರಿಕ, ಹೂವಿನ ಸಸಿಗಳು. ಈ ಕುಂಡಗಳನ್ನು ಅಲ್ಲೇ ತಯಾರಿಸಲಾಗುತ್ತದೆ. ಸಸಿಗಳನ್ನು ತಯಾರಿಸುವ ಚಿಕ್ಕ ನರ್ಸರಿಯೂ ಇದೆ. ಇಲ್ಲಿಂದ ತೋಟಗಾರಿಕಾ ಇಲಾಖೆಯವರು ಹಳ್ಳಿಗಳಿಗೆ ವಿತರಿಸುತ್ತಾರೆ. ಇದರಿಂದ ಬರುವ ಚಿಕ್ಕ ಆದಾಯ ಮುಕ್ತಿವನ ಖಾತೆಗೆ.
ನಮ್ಮ ನಡುವೆ ಇರುವ ಸ್ಮಶಾನವನ್ನೊಮ್ಮೆ ಕಲ್ಪಿಸಿಕೊಳ್ಳಿ. ಅನಿವಾರ್ಯವಾದಾಗಲಷ್ಟೇ ಅಲ್ಲಿಗೆ ಹೋಗುವುದು ಬಿಟ್ಟರೆ, ಅದರ ಹತ್ತಿರ ಸುಳಿಯಲೂ ಮನಬಾರದು. ಅಂತಹ ವಾತಾವರಣವಿರಕೂಡದು. ಇಲ್ಲಿ ಸುತ್ತುವುದು ಒಂದು ರೀತಿಯ ವಾಕಿಂಗ್ ಆಗಬೇಕು ಎನ್ನುತ್ತಾರೆ ಮೋಹನ್.
ಹಿಂದು-ಮುಸ್ಲಿಂ ಎಂಬ ಬೇಧಗಳಿಂದ ಹೊರತಾದ ಹುಲಕೋಟಿಯ ಮುಕ್ತಿವನ ಶಾಂತಿ-ಸೌಹಾರ್ದತೆಗೊಂದು ಮಾದರಿ. ಬದುಕಿನಲ್ಲಿ ಪರಸ್ಪರ ಒಪ್ಪುವಿಕೆ ಇದ್ದಾಗ ಬದುಕಿನಲ್ಲಿ ಯಾವ ಸಮಸ್ಯೆಯೂ ಎದುರಾಗದು ಎಂಬ ಸಂದೇಶ ಇಲ್ಲಿದೆ. ದೂರದೂರಿಂದ ಮುಕ್ತಿವನ ನೋಡುವ ಕುತೂಹಲಿಗಳಿಗೆ ಸ್ವಾಗತ. ಗುಲಾಬಿ ಹೂ ಕೊಟ್ಟು ಸ್ವಾಗತಿಸುವ ಆಡಳಿತ ವರ್ಗದವರ ಪರಿಚಾರಿಕೆ ಕಂಡಾಗ ಸ್ಮಶಾನ ದೂರವಾಗುತ್ತದೆ!
ಮರಳುವಾಗ ಚಹ-ಸಿಹಿ. ಭೂಮಿಗೆ ಬರುವಾಗ ಎಲ್ಲರಿಗೂ ಸಿಹಿ. ತೆರಳುವಾಗಲೂ ಸಿಹಿಯೇ!Tuesday, March 24, 2009

ಬಾನಂಗಳದಲ್ಲಿ 'ಮೈನಾ' ಕಸರತ್ತು!


ಮೊನ್ನೆ ಬೆಂಗಳೂರಲ್ಲಿ ನಡೆಯಿತಲ್ಲಾ, ವಿಮಾನ ಹಾರಾಟ ಪ್ರದರ್ಶನ. ಅದನ್ನೂ ಮೀರಿಸುವ ಸೊಗಸು ಇಲ್ಲಿದೆ! ಪುತ್ತೂರಿನ ಬೊಳ್ವಾರಿಗೆ ನೀವು ಆರರ ಸುಮಾರಿಗೆ ಅರ್ಧ ಗಂಟೆ ಪುರುಸೊತ್ತು ಮಾಡಿಕೊಂಡು ಬನ್ನಿ. ಬಾನಂಗಳದಲ್ಲಿ ಮೂಡುವ ವಿವಿಧ ನಮೂನೆಯ ಚಿತ್ತಾರಗಳು ಕಣ್ಣೆದುರೇ ಮೂಡುತ್ತವೆ. ಲೋಹದ ಹಕ್ಕಿಗಳು ನಾಚುವಷ್ಟು!

ಆರ್.ಟಿ.ಓ.ಕಚೇರಿ ಸುತ್ತುಮುತ್ತ ಸಂಜೆಯಾಗುತ್ತಲೇ ಪ್ರದರ್ಶನಕ್ಕೆ ವೇದಿಕೆ ಸಜ್ಜಾಗುತ್ತದೆ. ಕೆಲವರ ದೃಷ್ಟಿಯಂತೂ ಬಾನಲ್ಲೇ ನೆಟ್ಟಿರುತ್ತದೆ. 'ಶುರುವಾಗಬೇಕಿತ್ತಲ್ಲಾ. ಯಾಕಿಷ್ಟು ಲೇಟು', 'ಸೂರ್ಯ ಕಂತಲು ಸ್ವಲ್ಪ ಹೊತ್ತಿದೆ. ಹಾಗಾಗಿ..', 'ಇಲ್ಲ, ಅದು ಕರೆಕ್ಟ್ ಆರೂ ಇಪ್ಪತ್ತಕ್ಕೆ ಬರ್ತದೆ..ನೋಡಿ ಬೇಕಾದ್ರೆ'.. ಇಂತಹ ಒಂದೊಂದು ಪ್ರಶ್ನೆ-ಸಬೂಬುಗಳು. ನಮ್ಮ ಪಾನೀಪೂರಿ ಶ್ರೀಧರರಿಗೆ ಉತ್ತರ ಕೊಟ್ಟೇ ಸುಸ್ತು!

ಏನಿದು ಪ್ರದರ್ಶನ! ಕಳೆದೊಂದು ತಿಂಗಳಿಂದ ಬೂದು ತಲೆ ಮೈನಾ ಹಕ್ಕಿಗಳು ಠಿಕಾಣಿ ಹೂಡಿವೆ. ಒಂದಲ್ಲ, ಎರಡಲ್ಲಸಾವಿರ ಸಾವಿರ! ಆರ್.ಟಿ.ಓ.ಕಚೇರಿ ಎದುರಿನ ಮಾವಿನ ಮರದಲ್ಲಿ ಅವುಗಳ ವಾಸ. ಸಂಜೆ ಆರೂ ಕಾಲರಿಂದ ಆರುಮುಕ್ಕಾಲರೊಳಗೆ ಮರ ಸೇರುವ ಮೈನಾಗಳು, ಮರುದಿನ ಜನರ ಗದ್ದಲ(!) ಶುರುವಾಗುವ ಮೊದಲೇ ಹಾರಿಬಿಡುತ್ತವೆ.
ಸಾವಿರಗಟ್ಟಲೆ ಪಕ್ಷಿಗಳು ಒಂದೇ ಪರಿಸರದಲ್ಲಿ ನೋಡಸಿಗುವುದು ಅಪರೂಪ. ಪಕ್ಷಿಧಾಮಗಳಲ್ಲಾದರೆ ಅವುಗಳದ್ದೇ ಕಾರುಬಾರು. ಇಲ್ಲಿ..ಅದೂ ಪಟ್ಟಣದಲ್ಲಿ! ಸಂಜೆಯಾಗುತ್ತಲೇ ಹಂಚಿಹೋದ ಮೈನಾಗಳ ಸಣ್ಣ ಸಣ್ಣ ಗುಂಪುಗಳು ಜಮೆಯಾಗುತ್ತವೆ. ಹತ್ತಿರದಲ್ಲಿದ್ದ ತೆಂಗು, ಕಂಗು ಮರಗಳಲ್ಲಿ ಕುಳಿತು, ಹಾರುತ್ತಾ ತಮ್ಮ ಬಂಧುಗಳ ನಿರೀಕ್ಷೆಯಲ್ಲಿರುತ್ತವೆ. ಕೆಲವಂತೂ ಸ್ವಸ್ಥಾನಕ್ಕೆ ಬಂದು, ಪುನಃ ಅಷ್ಟೇ ವೇಗದಲ್ಲಿ ಹಿಂದಕ್ಕೆ ಹೋಗಿ, ಗುಂಪಿನೊಂದಿಗೆ ಬರುತ್ತವೆ. ಮೊದಲು ಸಣ್ಣ ಗುಂಪುಗಳಲ್ಲಿ ಕಾಣಿಸಿಕೊಂಡು, ನಂತರ ಎಲ್ಲವೂ ಒಟ್ಟಾಗಿ ಆಗಸದಲ್ಲಿ ನೋಡಿಯೇ ಅನುಭವಿಸಬೇಕು. ಅದು ಶಬ್ಧಕ್ಕೆ ನಿಲುಕದ್ದು. ಕಣ್ಣುರೆಪ್ಪೆ ಮುಚ್ಚಿ ಬಿಡುವುದರೊಳಗೆ ಬಹಳಷ್ಟು ದೂರ ಸಾಗುವಷ್ಟು ವೇಗ. ಸುತ್ತುತ್ತಾ, ಮೇಲೇರುತ್ತಾ, ರಪ್ಪನೆ ಕೆಳಗಿಳಿಯುತ್ತಾ, ತಕ್ಷಣ 'ತಿರುವು' ತೆಕ್ಕೊಳ್ಳುತ್ತಾ - ನಮನ್ನು ಭ್ರಮಗೆ ಒಳಗಾಗಿಸುವ ಮೋಡಿ-ಒಂದು 'ಕಲಾಸೃಷ್ಟಿ'.

ಎರಡು ಹೂಬಿಟ್ಟ ಮಾವಿನ ಮರಗಳು ಮೈನಾಗಳಿಗೆ ಮನೆ. ಇವುಗಳು ಕುಳಿತಾಗ ಮರದಲ್ಲಿದ್ದ ಎಲೆಗಳೂ ಮರೆಯಾಗುತ್ತವೆ. ಹಾರಿ ಬಂದು ಕುಳಿತುಕೊಳ್ಳುವಾಗ ಅವುಗಳ 'ಚಿಲಿಪಿಲಿ-ಮಾತುಕತೆ', ಒಂದರ್ಧ ಗಂಟೆಯಲ್ಲಿ ನಿಶ್ಶಬ್ಧ! 'ಇಷ್ಟೊಂದು ಪಕ್ಷಿಗಳು ಈ ಮರದಲ್ಲಿ ಇವೆಯಾ' - ಅಂತ ಆಶ್ಚರ್ಯವಾಗುತ್ತದೆ.

ಪಾಪ, ಮೈನಾಗಳು ಬರುವುದಕ್ಕಿಂತ ಮೊದಲು ಮರವು ಕೊಕ್ಕರೆಯ, ಕಾಗೆಗಳ ಮನೆಯಾಗಿತ್ತು. ಈಗವು ಅನಾಥ. ಅವುಗಳಿಗೆ ಮೈನಾಗಳು ಬಂದವೆಂದರೆ 'ಟೆನ್ಶನ್' ಏರುವ ಹೊತ್ತು. ವಿಪರೀತವಾಗಿ ಕಿರುಚುತ್ತಾ ಅಸ್ತಿತ್ವವನ್ನು ಕಾಪಾಡಲು ಹೆಣಗಾಡುತ್ತವೆ. ತಮ್ಮ ಮನೆಯನ್ನು ಇತರರು ಆಕ್ರಮಿಸಿಕೊಂಡರೂ, 'ನೋಡುವಾ, ಸ್ವಲ್ಪ ಜಾಗ ಸಿಕ್ಕೀತು' ಅಂತ ಪ್ರಯತ್ನಿಸುವ ಪರಿ.

ಇದು 'ಬೂದುತಲೆ ಮೈನಾ' ಅಂತ ಗುರುತುಹಿಡಿದವರು - ಖ್ಯಾತ ಪಕ್ಷಿತಜ್ಞ ಡಾ.ಸಿ.ಎನ್.ಮಧ್ಯಸ್ಥ. 'ಹಿಂಡುಹಿಂಡಾಗಿರುವುದು ಅವುಗಳ ಸ್ವಭಾವ. ಆದರೆ ಹೀಗೆ ಇರುವುದು ಅಪರೂಪ. ಇದಕ್ಯಾಕೆ ಮಾಧ್ಯಮ ದೃಷ್ಟಿ ಬೀಳಲಿಲ್ಲ' ಅಂತ ಪ್ರಶ್ನಿಸುತ್ತಾರೆ!
ಬೂದುತಲೆ ಮೈನಾ (Grey Headed Myna) ಸ್ಥಳೀಯವಾಗಿ ವಲಸೆ ಹೋಗುವ ಹಕ್ಕಿಗಳಿವು. ಹೆಚ್ಚೆಂದರೆ ಇಪ್ಪತ್ತು ಸೆಂಟಿಮೀಟರ್ ಉದ್ದ. ಹಳದಿ ಕೊಕ್ಕು, ಕೊಕ್ಕಿನ ಬುಡದಲ್ಲಿ ನಸುನೀಲಿ ವರ್ಣ. ಇವುಗಳು ಮಾಂಸಹಾರಿಯೂ ಹೌದು, ಸಸ್ಯಾಹಾರಿಯೂ ಹೌದು.

'ಮರ, ಗಿಡ, ಹಸಿರು ಅವಕ್ಕೆ ಇಷ್ಟ. ದೊಡ್ಡ ಕಾಡು, ಪೇಟೆ ಅವಕ್ಕೆ ಇಷ್ಟವಾಗುವುದಿಲ್ಲ. ಯಾಕೆಂದರೆ ಹಾರಾಡಲು ಕಷ್ಟ. ಇಲ್ಲಿ ಮಾತ್ರ ಅವುಗಳು ಪೇಟೆಯನ್ನೇ ಇಷ್ಟಪಟ್ಟಿವೆ. ಬಹುಶಃ ಮೊದಲು ಅವುಗಳ ವಾಸಸ್ಥಾನವಾಗಿತ್ತೋ ಏನೋ' ವಿನೋದವಾಗಿ ಹೇಳುತ್ತಾರೆ ಮಧ್ಯಸ್ಥರು.

'ಸಾವಿರಾರು ಹಕ್ಕಿಗಳು ಒಂದೇ ಸ್ಥಳದಲ್ಲಿ ಬಿಡಾರ ಹೂಡುವುದು - ಬಹುಶಃ ವಿದೇಶದಲ್ಲಾಗುತ್ತಿದ್ದರೆ ಜನ ಸಾಲು ಸಾಲಾಗಿ ಬರುತ್ತಿದ್ದರು' ಎನ್ನುತ್ತಾರೆ ಶ್ರೀ ವೆಂಕಟ್ರಾಮ ದೈತೋಟ. ಯಾರೋ ಹೇಳಿದರು - 'ಮರದ ಕೆಳಗೆ ಕಾಗದ, ಕಸಗಳನ್ನು ಸುಡಲು ಬೆಂಕಿ ಹಾಕುತ್ತಾರೆ. ಅವುಗಳ ಹೊಗೆ ಪಕ್ಷಿಗಳಿಗೆ ತೊಂದರೆಯಾಗುವುದಿಲ್ವಾ'. ಹೌದು. ಅದಕ್ಕಾಗಿ ಹಗಲು ಹೊತ್ತಲ್ಲಿ ತ್ಯಾಜ್ಯ ಸುಡೋಣ.

ಹಕ್ಕಿಗಳೂ ಬರುವ ಸಮಯದಲ್ಲಿ ಅವುಗಳಿಗೆ ಬೇಕಾದಂತೆ ವಾತಾವರಣವನ್ನು ಸೃಷ್ಟಿಸಿದರೆ ಅವುಗಳಿಗೂ ಸುಖ, ನಮಗೂ ಹಿತ. ಗುಲ್ಲೆಬ್ಬಿಸಿದ್ದರಿಂದ 'ಮನುಷ್ಯನ ಸಹವಾಸವೇ ಬೇಡ' ಎನ್ನುತ್ತಾ ಮನೆ ಬದಲಿಸಿದರೂ ಆಶ್ಚರ್ಯಪಡಬೇಕಿಲ್ಲ.

(ಈಗ ತಾನೆ ಬಂದ ಸುದ್ದಿ! ಸಂಜೆ ಹೊತ್ತಿಗೆ ಅವುಗಳು ಕುಳಿತುಕೊಳ್ಳುತ್ತಿದ್ದಾಗ, 'ಮನುಷ್ಯನ ವಿಕಾರ ಮನಸ್ಸು' ಕೆಲಸ ಮಾಡುತ್ತದೆ! ಚಪ್ಪಾಳೆ ಸದ್ದಿಗೆ ಕುಳಿತವುಗಳನ್ನು ಓಡಿಸಿ ಸಂತೋಷಪಡುವ 'ಪತನ ಸುಖಿ'ಗಳ ಕಾರುಬಾರು! ಸಂಜೆ ಹೊತ್ತಿಗೆ ಟಯರ್, ತ್ಯಾಜ್ಯಗಳಿಗೆ ಬೆಂಕಿಯಿಟ್ಟು, ಹೊಗೆಬರಿಸುವ ನಮಗೆ ನಿಜಕ್ಕೂ ಯಮನೂರಲ್ಲೂ ಜಾಗವಿಲ್ಲ! ಕಳೆದ ೩-೪ ದಿನಗಳಿಂದ ಪಕ್ಷಿ ಸಂಸಾರ ಬೊಳ್ವಾರಿಗೆ ವಿದಾಯ ಹೇಳಿದೆ. ಮಾನವ ಸಂಚಾರವಿಲ್ಲದ ಜಾಗದಲ್ಲಿ ಅವಕ್ಕೆ 'ನೂತನ ಮನೆ' ಸಿಗಲಿ ಎಂದು ಹಾರೈಸೋಣ.)


Monday, March 23, 2009

ಕೃಷಿಕನ ಆವಿಷ್ಕಾರ


ಆವಶ್ಯಕತೆಯೇ ಆವಿಷ್ಕಾರಕ್ಕೆ ಮೂಲ. ಮಹಾಬಲೇಶ್ವರ ಭಟ್ ನಿಟಿಲೆಯವರು ರೂಪಿಸಿದ ಕಾಳುಮೆಣಸು ಆಯುವ ಯಂತ್ರವು ಕೃಷಿ ಕೆಲಸವನ್ನು ಹಗುರಮಾಡಿದೆ. ಈ ಯಂತ್ರ ಎಷ್ಟು ಜನೋಪಯೋಗಿಯಾಯಿತೆಂದರೆ, ಸಿದ್ಧಪಡಸಿದ 7 ವರುಷದಲ್ಲಿ ಮುನ್ನೂರಕ್ಕೂ ಹೆಚ್ಚು ತಯಾರಾಗಿದೆ.
ಹಾಗೆಂತ ನಿಟಿಲೆಯವರಿಗೆ ಇದು 'ಬ್ಯುಸಿನೆಸ್' ಅಲ್ಲ. ಮೊದಲು ತಮಗಾಗಿ ಸಿದ್ಧಪಡಿಸಿದ ಮೋಡೆಲ್, ಮುಂದೆ ಕೃಷಿಕರ ಬೇಡಿಕೆಗನುಸಾರ ತಯಾರಾಯಿತು. ಹೇಳುವಂತಹ ಯಾವುದೆ workshop ಇವರಲ್ಲಿಲ್ಲ. ತೀರಾ ಹಳ್ಳಿಯಾದುದರಿಂದ ತಮ್ಮ 'ಮಿತಿಯ' ಸಂಪನ್ಮೂಲದಲ್ಲಿ ಯಂತ್ರವನ್ನು ತಯಾರಿಸಿದ್ದಾರೆ.
ಮೊದಲೆಲ್ಲಾ ಕಾಳುಮೆಣಸು ಕೊಯ್ಲು ಆದ ನಂತರ ಅದನ್ನು ಗೋಣಿಯಲ್ಲಿ ಕಟ್ಟಿ, ಕಾಲಿನಲ್ಲಿ ಮೆಟ್ಟಿ ಕಾಳನ್ನು ಬೇರ್ಪಡಿಸುವ ದೇಸಿ ಪದ್ದತಿಯಿತ್ತು. ಯಂತ್ರವು ಕಾಲಲ್ಲಿ ತುಳಿವ ಕೆಲಸವನ್ನು ಹಗುರಮಾಡಿದೆ.
ಯಂತ್ರದ ಪ್ರಧಾನಾಂಗ - ಕೇಸಿಂಗ್ ಪೈಪಿನ ರೋಲರ್. ಇದಕ್ಕೆ 10 ಮಿ.ಮಿ. ಕಬ್ಬಿಣದ ಸರಳನ್ನು ನಿಶ್ಚಿತ ಆಕಾರದಲ್ಲಿ ಬೆಸೆಯಲಾಗಿದೆ. ಯಂತ್ರದ ಮೇಲ್ಭಾಗದಲ್ಲಿ ಕಾಳುಮೆಣಸಿನ ಗುಚ್ಚ ಹಾಕುವ ವ್ಯವಸ್ಥೆ. ತ್ಯಾಜ್ಯಕ್ಕೆ ಬೇರೊಂದು ಕಿಂಡಿ. ಕಾಲು ಅಶ್ವಶಕ್ತಿಯ ಮೋಟಾರಿನಿಂದ ಯಂತ್ರ ಚಾಲೂ. ನಾಲ್ಕೂವರೆ ಗಂಟೆ ನಿರಂತರ ಓಡಿದರೆ ಒಂದು ಯೂನಿಟ್ ವಿದ್ಯುತ್. ಗಂಟೆ 250-260 ಕಿಲೋ ಕಾಳುಮೆಣಸು ಆಯಬಹುದು. ಕರೆಂಟ್ ಕೈಕೊಟ್ಟರೆ ಕೈಯಲ್ಲಿ ಚಾಲೂ ಮಾಡುವ ವ್ಯವಸ್ಥೆಯಿದೆ.
ವರುಷದಲ್ಲಿ ಜನವರಿ-ಫೆಬ್ರವರಿ-march ತಿಂಗಳು ಕಾಳುಮೆಣಸಿನ ಋತು. ಉಳಿದ ಸಮಯದಲ್ಲಿ ಪ್ರತ್ಯೇಕ ಸಲಕರಣೆಯನ್ನು ಜೋಡಿಸಿ ಕಾಯಿ ತುರಿಯಲು, ಮೆಣಸು, ಸಾಸಿವೆ ಹುಡಿಮಾಡಲು ಬಳಸಬಹುದು. ಯಂತ್ರದ ದರ ಸುಮಾರು ಎಂಟು ಸಾವಿರ. ತೂಕ 30 ಕಿಲೋ. ಮನೆಯವರೇ ಕಾಳುಮೆಣಸು ಆಯುವ ಕೆಲಸವನ್ನು ಮಾಡಬಹುದು. ಇದರಿಂದ ಅವಲಂಬನಾ ಕೆಲಸ ಹಗುರವಾಗಿದೆ' ಎನ್ನುವುದು ಯಂತ್ರವನ್ನು ಬಳಸುವವರ ಅನುಭವ.
(ವಿಳಾಸ: ಮಹಾಬಲೇಶ್ವರ ಭಟ್, ನಿಟಿಲೆ, ಅಂಚೆ : ಕೋಡಪದವು, ಬಂಟ್ವಾಳ ತಾಲೂಕು - 574 269 (ದ.ಕ.)
ದೂರವಾಣಿ: 08255-267 475 (ಮನೆ), ಮೊ: 94483 30404)

Tuesday, March 17, 2009

'ಎರಡು ನಿಮಿಷದಲ್ಲಿ ದೇಹ ಫ್ರೀ ಕೊಡುವ' ಹರಿಣಿ
'ಹರಿಣಿ' - ಹೆಣ್ಣೊ, ಗಂಡೋ? ಉತ್ತರ ತಿಳಿಯದ ದಿನಗಳಿದ್ದುವು! 'ತರಂಗ' ಸಾಪ್ತಾಹಿಕ ದಲ್ಲಿ 'ಹರಿಣಿ' ವ್ಯಂಗ್ಯಚಿತ್ರ ಪುಟಕ್ಕೆ ಮೊದಲ ಮಣೆ! ಪುಟವಿಡೀ ಓರೆಕೋರೆ. ತರಂಗದ ಆರಂಭದಿಂದ ಹರಿಣಿ ಓದುಗರ ದೃಷ್ಟಿನಿಂದ ಹೆಣ್ಣು. ಗಂಡಾಗಲು ಐದು ವರುಷ ಬೇಕಾಯ್ತು!
ಗುಟ್ಟು ರಟ್ಟಾಗಿ ಹರಿಶ್ಚಂದ್ರ ಶೆಟ್ಟಿ ಅಂತ ಗೊತ್ತಾದಾಗ, ಫಕ್ಕನೆ ಯಾರೂ ನಂಬಲಿಲ್ಲ. 'ಬಹುಶಃ ನನ್ನ ವ್ಯಂಗ್ಯಚಿತ್ರಗಳನ್ನು 'ಪಾಪ, ಹೆಣ್ಣೋರ್ವಳು ರಚಿಸಿದ್ದಾಳೆ' ಎಂಬ ಕರುಣೆಯೋ, ಔದಾರ್ಯವೋ ಕಾರಣಕ್ಕಾಗಿ ಇಷ್ಟಪಟ್ಟರೋ ಏನೋ?' ಶೆಟ್ರು ಹೇಳುತ್ತಾರೆ.
ಮೊದಲು ರೂಪಾತಾರದಲ್ಲಿ ಚಲನಚಿತ್ರ ಕಲಾವಿದರ ವ್ಯಂಗ್ಯ ಭಾವಚಿತ್ರ (ಕ್ಯಾರಿಕೇಚರ್) ರಚಿಸುತ್ತಿದ್ದ ಶೆಟ್ರು, ದೊಡ್ಡ ಹೆಜ್ಜೆಯನ್ನಿಟ್ಟುದು ತರಂಗದ ಮೂಲಕ. 'ಮನಸ್ಸಿನ ಆಲೋಚನೆಯ ಅನಾವರಣಕ್ಕೆ ಮುಕ್ತ ವೇದಿಕೆ' ಕೃತಜ್ಞತೆಯಿಂದ ಜ್ಞಾಪಿಸಿಕೊಳ್ಳುತ್ತಾರೆ. ಜತೆಗೆ ಒಂದು ಪುಟದ ವ್ಯಕ್ತಿಚಿತ್ರದಲ್ಲಿ ಅರ್ಧಪುಟ ಇವರಿಗೇ ಮೀಸಲು.
ಏನಿದು ಕ್ಯಾರಿಕೇಚರ್? ಭಾವ ಮತ್ತು ವ್ಯಕ್ತಿತ್ವವನ್ನು ಅತಿರಂಜಿತವಾಗಿ ಗೆರೆಗಳ ಮೂಲಕ ಮೂಡಿಸುವುದು. ಫಕ್ಕನೆ ನೋಡಿದಾಗ ವ್ಯಕ್ತಿ, ಆತನ ವೃತ್ತಿ ನೆನಪಾಗಬೇಕು. ರುಂಡಕ್ಕೆ ಪಾಶಸ್ತ್ಯ. ಮುಂಡ - ಕಲಾವಿದನ ಕಲ್ಪನೆ.
ಕ್ಯಾರಿಕೇಚರ್ ಪತ್ರಿಕೆಗಳಲ್ಲಿ ಆಗಷ್ಟೇ ಶುರುವಾಗಿತ್ತು. ಪೂಜ್ಯ ಪೇಜಾವರ ಶ್ರೀಗಳ ಭಾವಚಿತ್ರವನ್ನು ಬಿಡಿಸಿದ್ದರಂತೆ. ಅದಕ್ಕೆ ಅವರ ಸಹಿಯನ್ನು ಪಡೆದಿದ್ದರು. ಪತ್ರಿಕೆಯಲ್ಲಿ ಅದು ಪ್ರಕಟವಾದಾಗ, ಅವರ ಆಭಿಮಾನಿಗಳಿಗೆ ಬಹಳ ನೋವಾಗಿತ್ತಂತೆ. 'ಅದನ್ನು ವ್ಯಕ್ತಿಯಾಗಿ ನೋಡ್ತಾರೆ, ಕಲೆಯೆಂದು ಸ್ವೀಕರಿಸುತ್ತಿರಲಿಲ್ಲ' ಎನ್ನುವ ಶೆಟ್ಟಿ, 'ಶ್ರೀಗಳು ತಮ್ಮ ಕ್ಯಾರಿಕೇಚರ್ ನೋಡಿ ಸಂತೋಷಪಟ್ಟಿದ್ದಾರೆ' ಎನ್ನಲು ಮರೆಯಲಿಲ್ಲ.
'ವ್ಯಂಗ್ಯ ಭಾವಚಿತ್ರವೆನ್ನುವುದು ಒಬ್ಬ ವ್ಯಕ್ತಿಯನ್ನು ಟೀಕಿಸುವುದು ಎಂಬ ಭಾವವಿತ್ತು. ತರಂಗ ಅದನ್ನು ದೂರಮಾಡಿದೆ' ಎನ್ನುತ್ತಾರೆ. ಡಾ.ಕಾರಂತ, ಕುವೆಂಪು, ಬೇಂದ್ರೆ..ಮೊದಲಾದ ನಾಡಿನ ಖ್ಯಾತ ಸಾಹಿತಿಗಳು ಹರಿಶ್ಚಂದ್ರ ಶೆಟ್ಟರ ಗೆರೆಗಳಿಗೆ ಸಿಲುಕಿದ್ದಾರೆ. ದಶಕದಿಂದೀಚೆಗೆ ನಮ್ಮೆಲ್ಲಾ ಪತ್ರಿಕೆಗಳಲ್ಲಿ ಕ್ಯಾರಿಕೇಚರ್, ವ್ಯಂಗ್ಯಚಿತ್ರಗಳು ಮಾಯ. ಪ್ರಕಟವಾದರೂ ಸ್ಥಾನ-ಮಾನ ಮೊದಲಿನಷ್ಟಿಲ್ಲ. ಬರೇ 'ಸ್ಥಳ ತುಂಬಿಸಲು' ಮಾತ್ರ. ಇಡೀ ಪುಟವನ್ನಾವರಿಸುತ್ತಿದ್ದ ನಗೆಗುಳಿಗೆಗಳು ಈಗೆಲ್ಲಿ? ಜತೆಗೆ ಕಲಾವಿದರೂ ಕೂಡಾ. 'ಕಾಲದ ಓಟ' ಅಂತ ಸ್ವೀಕರಿಸಬೇಕಷ್ಟೇ.
ಯಾವಾಗ ಪತ್ರಿಕೆಗಳು ಕಲಾವಿದರ ಕೈಬಿಟ್ಟವೋ, ಕಲಾವಿದರು ದೂರವುಳಿದರು. ಸದಾ ಓಡುತ್ತಿದ್ದ ರೇಖೆಗಳು ತಟಸ್ಥವಾದುವು. 'ಪತ್ರಿಕೆಗಳಲ್ಲಿ ಈಗ ನಾವು ಏನು ನೋಡ್ತೇವೋ, ಅದನ್ನು ವ್ಯಂಗ್ಯಚಿತ್ರಗಳು ಅಂತ ಒಪ್ಪಲು ಕಷ್ಟವಾಗುತ್ತಿದೆ.' ಶೆಟ್ಟರ ನೋವು.
'ಬದುಕಿಗೆ ಪ್ರತ್ಯೇಕವಾದ ಉದ್ಯೋಗವಿದ್ದುದರಿಂದ ಬಚಾವಾದೆ. ಇದನ್ನೇ ನಂಬಿರುತ್ತಿದ್ದರೆ ಬದುಕು ಅಯೋಮಯ'. ಇವರ ತಮ್ಮ ಪ್ರಕಾಶ್ ಶೆಟ್ಟಿ. 'ದ ವೀಕ್' ಆಂಗ್ಲ ಮ್ಯಾಗಜ್ಹಿನ್ನಲ್ಲಿ ವ್ಯಂಗ್ಯಚಿತ್ರಕಾರರಾಗಿ ಖ್ಯಾತಿ. ಈಟಿವಿಯಲ್ಲಿ 'ಪ್ರಕಾಶ್ ಪಂಚ್' ಮನೆಮಾತು. ಅಣ್ಣನ ಹೆಜ್ಜೆ ಇವರದಲ್ಲ. ಇವರಿಗೆ 'ಬಣ್ಣವೇ ಬದುಕು'. ಒಮ್ಮೆ ಸೃಷ್ಟಿಯಾದ ಇಮೇಜ್ನಿಂದ ಹಿಂದೆ ಸರಿಯುವ ಹಾಗಿಲ್ಲ, ಮುಂದಿನ ದಾರಿ ಅಸ್ಪಷ್ಟ. ಮೌನವಾಗಿದ್ದ ರೇಖೆಗಳನ್ನು ಮಾತನಾಡಿಸುವ ಬಗೆ ಹೊಳೆಯುತ್ತಿಲ್ಲ. ಮನಸ್ಸಿನ ತುಡಿತ-ಕಲ್ಪನೆಗೆ ರೂಪುಕೊಡಲು ಉಪಾಧಿಗಳಿಲ್ಲ. ಸ್ವಸಂತೋಷಕ್ಕಾಗಿಯೋ, ಸ್ನೇಹಿತರ ಒತ್ತಾಯಕ್ಕಾಗಿಯೋ ಚಿತ್ರಗಳು ತಯಾರಾದರೂ ಜನರನ್ನು ತಲಪುವುದು ಹೇಗೆ? - ಈ ಗೊಂದಲದಲ್ಲಿ ಒಂದಷ್ಟು ವರುಷ ನಷ್ಟ.
ಮೂರು ವರುಷದ ಹಿಂದೆ ನಡೆದ ಮಂಗಳೂರಿನಲ್ಲಿ ವಿಶ್ವ ಬಂಟರ ಸಮ್ಮೇಳನವು ಮತ್ತೊಮ್ಮೆ ಬಣ್ಣದ ಬದುಕಿನ ಬಾಗಿಲು ತೆಗೆಯಿತು. ಮನೆಯೊಳಗೆ ಕುಳಿತು, ಕಾಗದದಲ್ಲಿ ಗೆರೆಯನ್ನೆಳೆದು ಸಂಪಾದಕರಿಗೆ ಕಳುಹಿಸುತ್ತಿದ್ದ ಸ್ಥಿತಿಗಿಂತ ಭಿನ್ನವಾದ - 'ಸ್ಥಳದಲ್ಲೇ ಕ್ಯಾರಿಕೇಚರ್' ರಚನೆ. 'ಆರಂಭಕ್ಕೆ ಮುಜುಗರವಾಯಿತು' ಎನ್ನುವ ಶೆಟ್ರು, 'ಮುಂಬಯಿಯ ಅನೇಕ ಬಂಧುಗಳು ಬಹಳ ಖುಷಿ ಪಟ್ಟರು'. ಪ್ರತಿಫಲವೂ ಸಿಕ್ಕಿತೆನ್ನಿ. ಜತೆಗೆ ಪ್ರಕಾಶ್ ಕೂಡಾ ಇದ್ದರು.
ನಂತರ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವ. ವಿದೇಶಿಯರು ಸಾಕಷ್ಟು ಸಂಖ್ಯೆಯಲ್ಲಿ ಬಂದಿದ್ದರು. 'ವಾ...ಬ್ಯೂಟಿಫುಲ್'' ಎನ್ನುತ್ತಾ ತಮ್ಮ ಚಿತ್ರಕ್ಕಾಗಿ ಮುಗಿಬೀಳುತ್ತಿದ್ದರು. ಈ ಹೊಸಹಾದಿ ಶೆಟ್ಟಿಯವರನ್ನು ಮತ್ತಷ್ಟು ಹುರಿದುಂಬಿಸಿತು. ನಡೆಯುವ ಸಾಹಿತ್ಯ, ಕಲಾ ಕಾರ್ಯಕ್ರಮದಲ್ಲಿ, ಸಂಘಟಕರು ಇಚ್ಛೆ ಪಟ್ಟಲ್ಲಿ ಶೆಟ್ರು, ಅಲ್ಲ 'ಹರಿಣಿ'ಯವರು ರೆಡಿ. ಅಣ್ಣ ಜೀವನ್, ತಮ್ಮ ಪ್ರಕಾಶ್ ಸಾಥಿ.
ಪ್ರೇಕ್ಷಣೀಯ ಸ್ಥಳಗಳಲ್ಲಿ ತಂತಮ್ಮ ಭಾವಚಿತ್ರ ತೆಗೆಸಲು ಪ್ರವಾಸಿಗಳು ಹೇಗೆ ಆತುರಪಡುತ್ತಾರೋ, ಹಾಗೆನೇ ಇವರಿಂದ ವ್ಯಂಗ್ಯಭಾವಚಿತ್ರಗಳನ್ನು ಬಿಡಿಸಲೂ ಜನ ಮುಗಿಬೀಳುತ್ತಾರೆ! ಪತ್ರಿಕೆಗಳಲ್ಲಿ ಓದುಗರ ಆಭಿಪ್ರಾಯಕ್ಕೆ ವಾರಗಟ್ಟಲೆ ಕಾಯಬೇಕು. ಇಲ್ಲ ಹಾಗಲ್ಲ, ತಕ್ಷಣದಲ್ಲೇ ಪ್ರತಿಕ್ರಿಯೆ ಬಂದುಬಿಡುತ್ತದೆ-'ಚೆನ್ನಾಗಿದೆ', 'ತೊಂದರೆಯಿಲ್ಲ', 'ಸಾಮಾನ್ಯ', ಕೆಲವರದಂತೂ 'ನಿರುತ್ತರ'!
'ಎರಡು ನಿಮಿಷದಲ್ಲಿ ನಿಮ್ಮ ಭಾವಚಿತ್ರ. ತಲೆಗೆ ರೂ.100. ದೇಹ ಫ್ರೀ'. ನೀವು ಅವರಿಗೆ ಒಂದು ನಿಮಿಷ ಮುಖ ಒಡ್ಡ್ಡಿಸಿದರೆ ಸಾಕು. ಮತ್ತೊಂದು ನಿಮಿಷದಲ್ಲಿ ನಿಮ್ಮ ಕೈಯೊಳಗೆ ನಿಮ್ಮ ಚಿತ್ರ. 'ಕೆಲವರು ಇನ್ನೂ ಬುದ್ದಿವಂತರಿದ್ದಾರೆ - 'ನಮ್ಮಿಬ್ಬರ ಚಿತ್ರವನ್ನು ಒಟ್ಟಿಗೆ ಬಿಡಿಸಿ ಅಂತ ಹೇಳುತ್ತಾರೆ. ಅಂತಹವರು ಇನ್ನೂರು ಕೊಡುವುದಿಲ್ಲ'! ಟೂ-ಇನ್-ವನ್! ವ್ಯಂಗ್ಯಭಾವಚಿತ್ರವನ್ನು ಕಲೆ, ಹಾಸ್ಯ ಅಂತ ಗುರುತಿಸುತ್ತಾರೆ' ಎನ್ನುತ್ತಾರೆ ಹರಿಶ್ಚಂದ್ರ ಶೆಟ್ಟಿ. 'ಹಣವೂ ಮುಖ್ಯ. ಆದರೆ ಹಣಕ್ಕಾಗಿ ಕ್ಯಾರಿಕೇಚರ್ ಬಿಡಿಸುವುದಲ್ಲ. ಉಚಿತ ಅಂದರೆ ತಾತ್ಸಾರ'.
ಸುನಾಮಿ ಸಂತ್ರಸ್ತರ ದೇಣಿಗೆ ಸಂಗ್ರಹ ಕಾರ್ಯಕ್ಕಾಗಿ ನಡೆದ ಕಲಾಉತ್ಸವದಲ್ಲಿ ಇವರು ನೂರು ಮಂದಿಯ ವ್ಯಂಗ್ಯಭಾವಚಿತ್ರವನ್ನು ಬಿಡಿಸಿ ತನ್ನ ದೇಣಿಗೆ ಹತ್ತುಸಾವಿರ ಮೊತ್ತವನ್ನು ನೀಡಿದ್ದಾರೆ.
ಸ್ಥಳದಲ್ಲೇ ಚಿತ್ರ ರಚನೆ ಬಹಳಷ್ಟು ಏಕಾಗ್ರತೆ ಬೇಡುವಂತಹ ಕೆಲಸ. ಪೆನ್ ಹಿಡಿದು ಕಾಗದದ ಮೇಲೆ ರೇಖೆಗಳು ಚಲನೆಗೆ ಶುರುವಾದರೆ ಸಾಕು, ಎಲ್ಲವನ್ನೂ ಮರೆಯುವ ಏಕಾಗ್ರತೆ! ಇದು ಅವರಿಗೆ ಸಿದ್ಧಿ. ಇತ್ತೀಚೆಗೆ ಮಂಗಳೂರಿನಲ್ಲಿ ಕಲಾಮೇಳ. ಮೂವರು ಸ್ಥೂಲಕಾಯದ ಯುವಕರು ತಮ್ಮ ಚಿತ್ರಗಳನ್ನು ಬಿಡಿಸಬೇಕು, ಜತೆಗೆ ಮೊಬೈಲ್ನಲ್ಲಿದ್ದ ತಮ್ಮ ಮಿತ್ರನ ಚಿತ್ರವನ್ನೂ ಸೇರಿಸಬೇಕು - ಎಂಬ ಬೇಡಿಕೆ ಮುಂದಿಟ್ಟರಂತೆ. ಕಣ್ಣಿಗೆ ಕಂಡಂತೆ ಚಿತ್ರ ಬಿಡಿಸಬಹುದು. ಆದರೆ ಎಲ್ಲೋ ಇದ್ದವರನ್ನು ಚಿತ್ರ ನೋಡಿ ಬಿಡಿಸುವುದು ಹೇಗಪ್ಪಾ - ಫಜೀತಿಯಾಗಿತ್ತಂತೆ. ಸ್ವಲ್ಪ ಹೊತ್ತು ತಲೆಬಿಸಿ! ಕೊನೆಗೆ ಬಿಡಿಸಿದ ಚಿತ್ರ ನೋಡಿ ಆ ಯುವಕರು ಬಹಳ ಖುಷಿಪಟ್ಟರಂತೆ. ಅಂದರೆ ಕ್ಯಾರಿಕೇಚರ್ ಕಲಾವಿದನಿಗೆ ಸವಾಲುಗಳು ಹೇಗೆ ಬರ್ತವೆ ಎಂಬುದಕ್ಕೆ ಉದಾಹರಣೆಯಷ್ಟೇ.
ಈಗ ಕಂಪ್ಯೂಟರ್ ಯುಗ. ಸಾಕಾರ-ನಿರಾಕಾರ ಎಲ್ಲವೂ 'ಫೋಟೊಶಾಪ್'ನಿಂದ ಸಾಧ್ಯ! ಹರಿಣಿ ಹೇಳುತ್ತಾರೆ -'ನಾವದನ್ನು ಬಳಸುವುದರಲ್ಲಿ ಇರುವುದು, ಫೋಟೋಶಾಪ್ನಿಂದ ಕ್ಯಾರಿಕೇಚರ್ ರಚನೆಗೆ ಹಿನ್ನಡೆಯಾಗಲಿಲ್ಲ. ಚಿತ್ರಗಳಿಗೆ ಬಣ್ಣಕೊಡುವುದರಿಂದ ಲುಕ್ ಬಂತು.' 'ಬ್ಯಾನರ್ ಬರೆಯುವವರನ್ನು ಕಂಪ್ಯೂಟರ್ ಓಡಿಸಿದೆ. ಕತ್ತಲೆ ಕೋಣೆಯೊಳಗೆ ಕುಳಿತು ಕಪ್ಪುಬಿಳುಪು ಫೋಟೋವನ್ನು ಸಂಸ್ಕರಿಸುವ ವಿಧಾನಗಳು ಮೂಲೆಸೇರಿವೆ. ಆದರೆ ವ್ಯಂಗ್ಯಚಿತ್ರಕ್ಕೆ ಮತ್ತೊಂದು ಬದಲಿ ಬಂದಿಲ್ಲ.. ಹಾಗಾಗಿ ಹರಿಣಿಯವರ ವ್ಯಂಗ್ಯಭಾವಚಿತ್ರ ನಿತ್ಯನೂತನ. ಇಂದು 'ಇಲೋಕ' ಎಷ್ಟು ಮುಂದುವರಿದರೂ, ಹರಿಣಿಯವರ ಗೆರೆಯನ್ನು ಬದಲಾಯಿಸಲು ಅದು ಶಕ್ತವಾಗಿಲ್ಲ' ಚಿತ್ರಕಾರ ಎಸ್ಸಾರ್ ಪುತ್ತೂರು ಹೇಳುತ್ತಾರೆ.
ತಮ್ಮ ಪ್ರಕಾಶ್ ಶೆಟ್ಟರ ಸಾರಥ್ಯದಲ್ಲಿ ಕನ್ನಡದಲ್ಲಿ ಮೊದಲ ಬಾರಿಗೆ 'ವಾರೆ-ಕೋರೆ' ತರ್ಲೆ ಮಾಸಪತ್ರಿಕೆಯನ್ನು ತಂದಿದ್ದಾರೆ. ಈಗಾಗಲೇ ಎರಡು ಸಂಚಿಕೆಗಳು ಓದುಗರ ಕೈಸೇರಿವೆ. ದೊಡ್ಡ ಸಾಹಸ. ಆರಂಭದಲ್ಲೇ ಸಂಚಿಕೆಗಳು ಗೆದ್ದಿವೆ. ಸಹೋದರರ ಸಾಥಿ. 'ಒಂದು ವರುಷ ಚಂದಾ ನೀಡಿದರೆ - ನಿಮ್ಮ ಕ್ಯಾರಿಕೇಚರ್ ಫ್ರೀ'!
'ಖ್ಯಾತ ಛಾಯಾಚಿತ್ರಕಾರ ಯಜ್ಞರು ಮೊದಲು ಕ್ಯಾರಿಕೇಚರ್ನಲ್ಲಿ ಎತ್ತಿದ ಕೈ. ಅವರು ಬಿಡಿಸುತ್ತಿದ್ದ ಚಿತ್ರಗಳನ್ನು ನೋಡಿ ಪ್ರಭಾವಿತನಾದೆ. ಜತೆಗೆ ಕೆ.ಆರ್.ಸ್ವಾಮಿ, ಶ್ರೀಧರ್ ಹುಂಚ ಅವರ ಚಿತ್ರ ಮೋಡಿಮಾಡಿತು' ನಡೆದು ಬಂದ ದಾರಿಯತ್ತ ಹೊರಳುತ್ತಾರೆ.
2005ರಲ್ಲಿ ಬಣ್ಣದ ಬದುಕಿನ ಇಪ್ಪತ್ತೈದರ ನೆನಪಿಗಾಗಿ 'ಪೋಕ್ರಿ' ಕಾಟರ್ೂನ್ ಗುಚ್ಚ ಪ್ರಕಟವಾಗಿತ್ತು ಮಡದಿ ಆಶಾ ಶೆಟ್ಟಿ. ಅತಿತ್, ಅಂಕಿತ್ ಮಕ್ಕಳು. ಮಂಗಳೂರಿನ ಕಾವೂರಿನಲ್ಲಿ ವಾಸ. ಒಂದೇ ಕುಟುಂಬದ ಮೂವರು ಅಣ್ಣತಮ್ಮಂದಿರು ಗೆರೆಯ ಬಲೆಯಲ್ಲಿರುವುದು ದೇಶದಲ್ಲೇ ಅನನ್ಯ ಇರಬಹುದು! ಬದುಕಿನ ಚಿನ್ನದ ಸಂಭ್ರಮದ ಹರಿಣಿಗೆ ಮತ್ತೆ ಹರೆಯ ಬಂದಿದೆ. ಈಗವರು ಫ್ರೆಶ್.


Monday, March 16, 2009

ವಿಶೇಷ ತಳಿಗಳ ಬೆನ್ನ ಹಿಂದೆ

'ಎಲ್ಲರೂ ಮಾಡುವ ಕೆಲಸ ಮಾಡಲು ಕಷ್ಟವಿಲ್ಲ. ನನಗದು ಇಷ್ಟವೂ ಇಲ್ಲ. ಹೊಸತನ್ನು ಹುಡುಕುತ್ತಿರುತ್ತೇನೆ' - ತಳಿ ಆಯ್ಕೆ, ಅಭಿವೃದ್ಧಿ ವಿಚಾರದಲ್ಲಿ ದಕ್ಷಿಣ ಕನ್ನಡದ ಕೃಷಿಕ ಗೊರಗೋಡಿ ಶ್ಯಾಮ ಭಟ್ಟರ ನಿಲುವು.

ಕೃಷಿಯೊಂದಿಗೆ 'ತಳಿ ಸಂಗ್ರಹ' ಇವರಾಸಕ್ತಿ. ಅಪರೂಪದ್ದಾದ ಮಾವು, ಹಲಸು ತಳಿಗಳನ್ನು ಅರಸಿ, ಕಸಿ ಕಟ್ಟಿ, ಬೆಳೆಸುವುದು ಒಂಭತ್ತು ವರುಷಗಳಿಂದ ಹಚ್ಚಿಕೊಂಡ ಹವ್ಯಾಸ. 'ನನ್ನ ತೋಟದಲ್ಲಿ ಎಲ್ಲಾ ಜಾತಿ ಇರಬೇಕು' ಎನ್ನುವ ಜಾಯಮಾನ ಇವರದಲ್ಲ. ಸುತ್ತಮುತ್ತ ಇರುವ ತಳಿ ಸಂಗ್ರಾಹಕರಲ್ಲಿ ಇರದೇ ಇದ್ದುದು ತನ್ನಲ್ಲಿರಬೇಕು. ಅದಕ್ಕಾಗಿ ವಿಶೇಷ ಯತ್ನ.

'ಸುತ್ತಮುತ್ತ ಲಭ್ಯವಿರುವ ತಳಿಗಳನ್ನು ತಂದು ಅಭಿವೃದ್ಧಿ ಪಡಿಸುವುದು ಕಷ್ಟದ ಕೆಲಸವಲ್ಲ. ಉದಾಹರಣೆಗೆ, ಮರ್ಕಂಜದ ಮಾಪಲ್ತೋಟದವರಲ್ಲಿ ನೂರಕ್ಕೂ ಮಿಕ್ಕಿ ಹಲಸು, ಮಾವು ತಳಿಗಳಿವೆ. ಅಲ್ಲಿಂದ ಯಾವಾಗ ಬೇಕಾದರೂ ತರಬಹುದು. ಆದರೆ ಅವರ ಸಂಗ್ರಹದಲ್ಲಿ ಇರದೇ ಇದ್ದ ತಳಿಗಳು ಯಾವುದಿದೆ ಅದನ್ನು ಹುಡುಕುತ್ತಿದ್ದೇನೆ' ಎನ್ನುತ್ತಾರೆ ಇವರು.

ಆಯ್ಕೆಯ ತಳಿಯೊಂದರ ಸುಳಿವಿನ ಹಿಂದೆ ಬೀಳುತ್ತಾರೆ. ಮೊದಲು ಹಣ್ಣಿನ ರುಚಿಯ ಆಯ್ಕೆ. ಸ್ವತಃ ತಾನೇ ತಿಂದು, 'ಇದನ್ನು ಬೆಳೆಯಬೇಕೋ, ಬೇಡವೋ, ಹತ್ತಿರದಲ್ಲಿ ಯಾರಾದರೂ ಬೆಳೆಯುತ್ತಾರೋ' ಎಂಬ ಪರಿಶೀಲನೆ. ಸಂಬಂಧಪಟ್ಟ ಮರದ ಯಜಮಾನರಲ್ಲಿ ಕುಡಿಯ ಬೇಡಿಕೆ.

ಹೀಗೆ ಸಂಗ್ರಹವಾದ ತಳಿಗಳು 'ವಿಪರೀತ' ಇಲ್ಲದಿದ್ದರೂ, ಬೆಳೆಸಿದಷ್ಟೂ ಅಪರೂಪದವುಗಳು. ಹತ್ತು ಜಾತಿಯ ಹಲಸು, ಹದಿನೈದು ಕಾಡು ಮಾವು - ಅಭಿವೃದ್ಧಿಯಾಗಿವೆ. ಕೆಲವು ಫಲ ಕೊಟ್ಟಿವೆ.

ಕಾಂತಿಲ ವೆಂಕಟ್ರಮಣ ಜೋಶಿ-'ತಳಿ ಸಂಗ್ರಹ'ದಲ್ಲಿ ದೊಡ್ಡ ಹೆಸರು. 'ನಾನು ಏನನ್ನು ನೆಡುವುದಿದ್ದರೂ ಅವರು ಪಾಸ್ ಮಾಡಬೇಕು', ಶ್ಯಾಮ ಭಟ್ ಹೇಳುತ್ತಾರೆ. ಹಲಸು, ಮಾವು ಯಾವುದೇ ಇರಲಿ, ಅದರಲ್ಲಿನ ಅನುಭವಿಗಳ ಅಭಿಪ್ರಾಯ ದಾರಿದೀಪ. 'ಅದೊಂದು ಕೃಷಿ ಶಿಕ್ಷಣ' - ಶ್ಯಾಮ ಭಟ್ಟರ ದಾರಿಯಿದು.

'ಪಾಯಸ, ಬೆರಟಿಗೆ ದಳದ ಮುಂಡುಗ ಹಲಸಿನಷ್ಟು ಬೇರ್ಯಾವುದೂ ಆಗುವುದಿಲ್ಲ' ಮಾತಿನ ಮಧ್ಯೆ ಮನೆಯೊಡತಿ ಉಷಾ ಶ್ಯಾಮ ಭಟ್ ದನಿಗೂಡಿಸಿದರು. 'ನೋಡಿ. ಇದು ಸೌತೆ ಬಕ್ಕೆ. ಇದರ ದೋಸೆ ಕಾವಲಿಯಿಂದ ಪೇಪರ್ ಎದ್ದ ಹಾಗೆ ಸರಕ್ಕನೆ ಏಳುತ್ತದೆ' ಭಟ್ ಅಂದಾಗ ಬಾಯಲ್ಲಿ ನೀರೂರಿತ್ತು. ಇವರ ತೋಟದಲ್ಲೊಂದು ದಪ್ಪ, ಸಿಹಿ ಸೊಳೆಯ ಫಲ ಕೊಡುವ ಹಳೆ ಹಲಸಿನ ಮರವಿದೆ. ಇದರ ಹಪ್ಪಳ, ದೋಸೆ ರುಚಿ. 'ಗೊರಗೋಡಿ ಹಲಸು' ಅಂತಲೇ ಹೆಸರಿಟ್ಟಿದ್ದಾರೆ. ಮುತ್ಲಾಜೆ ಹಲಸು, ಜೇನುಬಕ್ಕೆ, ಮಟ್ಟಂ ಹಲಸು, ಚಂದ್ರ ಬಕ್ಕೆ ಇನ್ನಿತರ ವಿಶೇಷದವು.

ಇನ್ನು ಮಾವಿನ ಕತೆ. ಸಂಪಿಗೆ ಪರಿಮಳದ 'ಸಂಪಿಗೆ ಮಾವು', ಉಪ್ಪಿನಕಾಯಿಗೆ ಶ್ರೇಷ್ಠವಾದ 'ಭಟ್ಕಳ ಮಾವು', ಬೆಟ್ಟ ಮಾವು, ಹಳೆ ಮಾವು, ಆಟಿ ಮಾವು ವಿಶಿಷ್ಟ. ಆಟಿ ಮಾವು - ಆಷಾಢದಲ್ಲಿ ಇಳುವರಿ ಕೊಡುತ್ತದಂತೆ. 'ಪಂಬೆತ್ತಾಡಿ ಭೀಮಗುಳಿಯಿಂದ ತಂದಿದ್ದೆ. ಹಂದಿ ಕಾಟದಿಂದ ಫಲ ಕೊಟ್ಟ ಮುಂದಿನ ವರುಷವೇ ಅಳಿಯಿತು' ಎಂಬ ಬೇಸರ.

ಅಡಿಕೆ ಪತ್ರಿಕೆಯಲ್ಲಿ ಬಂದ ಮಾಹಿತಿಯಂತೆ ಸರ್ವಋತು ಹಲಸನ್ನು ಅರಿಸಿ ಬೆಂಗಳೂರಿಗೆ ಹೋಗಿದ್ದರು. ಆ ಮರ ಕೊಡಲಿಗೆ ಬಲಿಯಾಗಿತ್ತು! 'ಅಲ್ಲಿದೆ, ಇಲ್ಲಿದೆ ಅಂತ ಕೆಲವರು ಹೇಳಿದ್ದರು' ಅನ್ನುತ್ತಾರೆ. ಹುಡುಕಾಟದಲ್ಲಿದ್ದಾರೆ.

ಕುಡಿ ತರಲು ಮನೆಗಳಿಗೆ ಹೋದಾಗ 'ನಮಗೊಂದು ಗಿಡ ಮಾಡಿ ಕೊಡಿ' ಎಂಬ ಬೇಡಿಕೆ ಮುಂದಿಡುತ್ತಾರಂತೆ. ಅಂತಹವರಿಗೆ ಸ್ವತಃ ಕಸಿ ಕಟ್ಟಲು ಕಲಿಸಿ ಬರುತ್ತಾರೆ. ಹಾಗಾಗಿ ಇವರ 'ಕಸಿ ಶಿಷ್ಯರ' ಬಳಗ ದೊಡ್ಡದಿದೆ!

ಅವರ ಮುಂದಿನ ಪಯಣ - ತಿರುಪತಿ, ಕಾಂಚಿಗೆ. 'ಅಲ್ಲಿ ಬೇಕಾದಷ್ಟು ಹಲಸಿನ ತಳಿಗಳಿವೆ. ಹಣ್ಣಾಗುವ ಸಮಯಕ್ಕೆ ಅಲ್ಲಿಗೆ ಹೋಗಿ, ರುಚಿ ನೋಡಿ, ಆಯ್ಕೆಯಾದರೆ ತರಬೇಕು.'

ಗುತ್ತಿಗಾರು ಸನಿಹದ ಗೊರಗೋಡಿಗೆ ಬಂದು ಹನ್ನೊಂದು ವರುಷ. ಐವತ್ತೆಕ್ರೆ ಜಾಗ. ಅದರಲ್ಲಿ ಮೂರೆಕ್ರೆಯಲ್ಲಿ 'ಕಾಡು ಕೃಷಿ'. ಯಾವುದೇ ಮರವನ್ನು ಕಡಿದಿಲ್ಲ. ಖಾಲಿಯಿದ್ದೆಡೆ ಹಲವು ಕಾಡು ಸಸಿ ನೆಟ್ಟಿದ್ದಾರೆ. ಅರ್ಧದಷ್ಟು ಮರಗಳು ಇಲ್ಲೇ ಬೆಳೆದವುಗಳು. ನೂರಕ್ಕೂ ಮಿಕ್ಕಿದ ಜಾತಿಯ ಮರಗಳಿವೆ. 'ಇದು ಟಿಂಬರ್ಗಾಗಿ ಅಲ್ಲ' ಎಂಬ ಸ್ಪಷ್ಟನೆ.

ಶ್ಯಾಮ್ ಗೊರಗೋಡಿಗೆ ಬರುವುದಕ್ಕಿಂತ ಮುಂಚೆ ಸುತ್ತಲಿನ ಕಾಡಲ್ಲಿ ದೊಡ್ಡದೊಡ್ಡ ಮರಗಳಿದ್ದುವು. ಅವೆಲ್ಲಾ ಈಗ ಮಾಯ. ಉಳಿದವೂ ಕಣ್ಮರೆಯಾಗುತ್ತಿವೆ! 'ಎಂತೆಂತಾ ಮರಗಳನ್ನು ಕಳೆದುಕೊಂಡೆವು ' ಎಂದು ವಿಷಾದಿಸುತ್ತಾರೆ.

ಐವತ್ತಕ್ಕೂ ಮಿಕ್ಕಿ ಔಷಧೀಯ ಗಿಡಗಳು, ಮೂವತ್ತರ ಹತ್ತಿರ ಹಣ್ಣಿನ ಗಿಡಗಳು. ಏಳು ಜಾತಿಯ ನಿಂಬೆ. ಇವುಗಳ ಕತೆ ಹೇಳುವುದು ಶ್ಯಾಮ ಭಟ್ಟರಿಗೆ ಇಷ್ಟದ ಸಂಗತಿ. 'ನೋಡಿ. ಇದು ಸ್ಥಳೀಯ ಅಂಬಟೆ ಮರ. ಇದಕ್ಕೆ ಬೀಜರಹಿತ (ಸೀಡ್ಲೆಸ್) ಅಂಬಟೆಯನ್ನು ಕಸಿ ಮಾಡಿದ್ದೆ. ಎಂತಹ ರುಚಿ. ತೋಟ ಇರುವವರು ನಾವೇ ಮಾಡಬಹುದು. ಪೇಟೆಯಿಂದ ತರಬೇಕಾಗಿಲ್ಲ' ಅನುಭವಿಸಿದ ಮಾತು.

ಶ್ಯಾಮ ಭಟ್ಟರ ತಳಿ ಸಂಗ್ರಹ ಕಾಯಕಕ್ಕೆ ವಿಶ್ರಾಂತಿಯಿಲ್ಲ. ಹುಮ್ಮಸ್ಸು ಕುಗ್ಗಿಲ್ಲ. ಮೂಲತಃ ಕಲ್ಮಡ್ಕದವರಾದ ಶ್ಯಾಮ್, ಮಹಾರಾಷ್ಟ್ರದಲ್ಲಿ ಎಂಎಸ್ಡಬ್ಲ್ಯೂ ಶಿಕ್ಷಣ ಮುಗಿಸಿದಾಗ ಉದ್ಯೋಗ ಕಾದಿತ್ತು. ವರ್ಷಗಳಲ್ಲೇ ಮಾವನ ಕೃಷಿ ಭೂಮಿ ಕೈ ಬೀಸಿ ಕರೆಯಿತು. ಉದ್ಯೋಗ ಬಿಟ್ಟು ಪ್ರೀತಿಯಿಂದ ತೋಟಕ್ಕೇರಿದರು.


ಕೆ. ಶ್ಯಾಮ ಭಟ್, ಗೊರಗೋಡಿ ಮನೆ, ಅಂಚೆ : ಗುತ್ತಿಗಾರು, ಸುಳ್ಯ ತಾಲೂಕು - 574 218 ದ.ಕ.
ದೂರವಾಣಿ : 08257-282 420, 94492 68691

Monday, March 9, 2009

ಪುತ್ತೂರಿನಲ್ಲಿ ಗೌಜಿ-ಗದ್ದಲದ 'ಕಂಬಳ'

ಕಂಬಳ - ಸರಳವಾಗಿ ಹೇಳುವುದಾದರೆ ಕೋಣಗಳ ಓಟದ ಸ್ಪರ್ಧೆ. ಇದೊಂದು ಪ್ರತಿಷ್ಠಿತ ಕ್ರೀಡೆ. ಕಂಬಳಕ್ಕಾಗಿಯೇ ಕೋಣಗಳನ್ನು ಸಾಕುವುದು ಕೂಡಾ ಪ್ರತಿಷ್ಠೆ. ಅಂತಸ್ತಿಗೆ ಹೊಂದಿಕೊಂಡು ವೈಭವವನ್ನು ಪಡೆಯುತ್ತದೆ.

ಪುತ್ತೂರಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಎದುರಿನ ಗದ್ದೆಯಲ್ಲಿ ನಡೆಯುವ 'ಕೋಟಿ-ಚೆನ್ನಯ' ಜೋಡುಕೆರೆ ಕಂಬಳವು ಜಿಲ್ಲೆಯಲ್ಲೇ ಸಂಭ್ರಮ. ಉಭಯಜಿಲ್ಲೆಗಳಲ್ಲಿ ಕೆಲವೆಡೆ ನಡೆಯುತ್ತದೆಯಾದರೂ ಪುತ್ತೂರಿನ ಕಂಬಳಕ್ಕೆ ಪ್ರತ್ಯೇಕ ಸ್ಥಾನಮಾನ.
ಓಟದ ಕೋಣಗಳಿಗೆ, ಕೋಣಗಳ ಯಜಮಾನರುಗಳಿಗೆ ಮತ್ತು ಅದರಲ್ಲಿ ತೊಡಗಿಸಿಕೊಂಡ ಇತರರಿಗೆ 'ಕಂಬಳ' ಹತ್ತಿರ ಬಂತೆಂದರೆ ಮದುವೆಗಿಂತಲೂ ಸಂಭ್ರಮ. 'ಈ ವರುಷ ನಮ್ಮ ಕೋಣವೇ ಗೆಲ್ಲಬೇಕು' ಎಂಬ ತುಡಿತ.

ಅದಕ್ಕಾಗಿ ಕೋಣಕ್ಕೆ ವಿಶೇಷ ಆತಿಥ್ಯ! ಕೋಣಗಳು ಅಲಂಕಾರಗೊಂಡು, ಬ್ಯಾಂಡ್-ವಾಲಗ-ಕೊಂಬು ನಾದದೊಂದಿಗೆ ಕಂಬಳದ ಗದ್ದೆಗೆ ಬರುತ್ತವೆ. ಗದ್ದೆಗಿಳಿದ ಕೋಣಗಳು ಕಂಬಳ ಕೆರೆಗೆ ಪ್ರವೇಶ. ಮುದ್ದಿನಿಂದ ಸಾಕಿದ ಅವುಗಳನ್ನು ಕೆರಳಿಸಲು 'ಬಾರುಕೋಲು ಪೆಟ್ಟಿನ' ರುಚಿ! ಕೆರಳಿಸಿದಷ್ಟೂ ವೇಗವಾಗಿ ಓಡುತ್ತವೆ ಎಂಬ ನಂಬುಗೆ!

ಇತ್ತೀಚೆಗಂತೂ ಸುಡುಮದ್ದು ಪ್ರದರ್ಶನ, ತಾರಾ ಸಂದೋಹ ಆಗಮನ, ಸಾಧಕರಿಗೆ ಸಂಮಾನ, ಯಕ್ಷಗಾನ ಬಯಲಾಟ. ಚರುಮುರಿ-ತೊಟ್ಟಿಲು, ಐಸ್ಕ್ರೀಂ-ಫ್ಯಾನ್ಸಿ ಧಾರಾಳ. ಪುತ್ತೂರಿನ ಮಹಾಲಿಂಗೇಶ್ವರ ಜಾತ್ರೆ ಬಹಳ ಗೌಜಿ. ಅದನ್ನು ನೆನಪಿಸುವಂತಹ ಗೌಜಿ!

ಕೆರೆಯ ಎರಡೂ ಬದಿಗಳಲ್ಲಿ ಜನರು ಕುಳಿತು-ನಿಂತು ಕಂಬಳವನ್ನು ವೀಕ್ಷಿಸುತ್ತಾರೆ. ಕುಳಿತಲ್ಲೇ 'ಪಂಥ'ಗಳು ನಡೆಯುತ್ತವೆ! ಐವತ್ತು ರೂಪಾಯಿಯಿಂದ ಐನೂರು, ಸಾವಿರದ ತನಕವೂ ಬಾಜಿಕಟ್ಟುವ 'ಕಂಬಳಪ್ರಿಯ'ರಿದ್ದಾರೆ. ಇದೆಲ್ಲಾ ಒಂದೆರಡು ನಿಮಿಷದಲ್ಲಿ ನಡೆದುಹೋಗುತ್ತದೆ. ಪ್ರತಿಯೊಂದು ಜತೆ ಕೋಣಗಳು ಕೆರೆಗೆ ಇಳಿದಾಗಲೂ 'ಬಾಜಿ' ನಡೆದು, ಕೆಲವರ ಕಿಸೆ ಭದ್ರವಾಗುತ್ತದೆ. ಈ ಪಂಥಗಳು ಬೆರಳುಸನ್ನೆಯಲ್ಲಿ ನಡೆಯುವುದೂ ಇದೆ. ಉದಾ: ನೂರು ರೂಪಾಯಿಯಾದರೆ 'ಒಂದು ಬೆರಳು' ಐನೂರಾದರೆ 'ಐದುಬೆರಳು'...

ಕೊನೆಗೆ ಸರ್ವಶ್ರೇಷ್ಠ ಬಹುಮಾನವನ್ನು ಪಡೆದ ಕೋಣಗಳ ವೈಭವ ಮೆರವಣಿಗೆ. ಕೋಣದ ಯಜಮಾನನ ಮುಖದಲ್ಲಿ ಮಂದಹಾಸ. ಮತ್ತೆ ಮುಂದಿನ ಕಂಬಳದ ತನಕ ವಿಶ್ರಾಂತಿ. ಕೋಣಗಳ ಆರೈಕೆ.


Thursday, March 5, 2009

ರೇಷ್ಮೆ ಗೂಡಲ್ಲರಳಿದ ಕಲಾಕುಸುರಿ


ಉಟ್ಟರೆ ರೇಷ್ಮೆ ಸೀರೆ ಉಡಬೇಕು' ನೀರೆಯರ ಮನದ ಆಸೆ. ಹಲವರಿಗೆ ಕೈಗೆಟಕುವುದಿಲ್ಲ. ಕೆಲವರಿಗೆ ಸಲೀಸು. ಸಮಾರಂಭದಲ್ಲಿ 'ರೇಷ್ಮೆ ಶಾಲು ಹೊದೆಸಿ' ಸಂಮಾನಿಸಿದಾಗ ಗೌರವದ ಹೊಳೆ! ಸರಿ, ರೇಷ್ಮೆ ಸೀರೆ, ಶಾಲು. ಇದರೊಂದಿಗೆ ಯಾವ್ಯಾವುದೋ ಹಾರ ಹಾಕುವ ಬದಲು ರೇಷ್ಮೆಯದ್ದೇ ಹಾರ ಇದ್ದಿದ್ದರೆ? ಅದರ ಗತ್ತೇ ಬೇರೆ! ಗೌರವ ದುಪ್ಪಟ್ಟು!
ತಿಪಟೂರಿನ 'ಬೈಫ್' ರೇಷ್ಮೆಯಿಂದ ಹಾರ, ಬಾಗಿಲ ಪರದೆ, ಹೂಗುಚ್ಚ ತಯಾರಿಸುತ್ತದೆ ಇಲ್ಲಿ ದೊಡ್ಡ ಪ್ರಮಾಣದ ರೇಷ್ಮೆ ಘಟಕವಿದೆ. ಕಚ್ಚಾವಸ್ತು ಇಲ್ಲೇ ಲಭ್ಯ. ಚಿಟ್ಟೆ ಕೊರೆದ ರೇಷ್ಮೆ ಗೂಡು ಕಚ್ಚಾವಸ್ತು. ಕಲಾತ್ಮಕವಾಗಿ ಕತ್ತರಿಸಿ, ಬಣ್ಣ ಲೇಪಿಸಿದರೆ ಹೂ ಸಿದ್ಧ. ನಾಲ್ಕು ಹೂಗಳು ಸೇರಿ ಒಂದು ಗುಚ್ಚ. ಹಲವು ಗುಚ್ಚಗಳ ಪೋಣಿಕೆ ಹಾರ. ಹಾರದ ಮಧ್ಯಕ್ಕೆ ದೊಡ್ಡ ಗುಚ್ಚವೊಂದನ್ನು ತೂಗಿಸಿದರೆ, ಅಸಲಿ ಹೂ ನಾಚುತ್ತದೆ.. ಬಿದಿರಿನ ಯಾ ಬೆತ್ತದ ಚಿಕ್ಕ ಬುಟ್ಟಿಯೊಳಗೆ ಎರಡ್ಮೂರು ಗುಚ್ಚ ಇಟ್ಟರೆ ಬರೋಬ್ಬರಿ! ಮಧ್ಯೆಮಧ್ಯೆ ಮುತ್ತನ್ನು ಪೋಣಿಸಿ ಹಾರ ಮಾಡುವುದೂ ಇದೆ. ಕಲಾವಿದನ ಜಾಣ್ಮೆಯಂತೆ ವಿನ್ಯಾಸ.
ವಿವಿಧ ನಮೂನೆಯಲ್ಲಿ ಹೂ ತಯಾರಿಸಬಹುದು. ಒಂದು ಹಾರಕ್ಕೆ ನೂರ ಇಪ್ಪತ್ತು ರೂಪಾಯಿಗಳಿಂದ ಎರಡು ನೂರರ ತನಕ ದರ. ಬಳಸಿದ ರೇಷ್ಮೆ ಗೂಡಿನ ಪ್ರಮಾಣಕ್ಕನುಸರಿಸಿ ದರ ನಿಗದಿ. ಹೂ, ಹಾರ ತಯಾರಿಸಲು ಯಾವುದೇ ಯಂತ್ರಗಳಿಲ್ಲ. ಕೈಗಳೇ ಯಂತ್ರಗಳು. ಈ ರೇಷ್ಮೆ ತಯಾರಿ ವಸ್ತುಗಳು ಧೂಳಿನಿಂದ ಮತ್ತು ತೇವದಿಂದ ಮುಕ್ತವಾಗಿರಬೇಕು.
ಬಯಲುಪ್ರದೇಶಕ್ಕೆ ಇಂತಹ ಅಲಂಕಾರಿಕ ವಸ್ತುಗಳು ಉತ್ತಮ. 'ಜನರು ಇಷ್ಟ ಪಡುತ್ತಾರೆ. ರೇಷ್ಮೆ ಅಂದರೆ ಲಕ್ಸುರಿ ಅಲ್ವಾ! ಅದರ ಹಾರವನ್ನೋ, ಹೂವನ್ನೋ ಹೊಂದುವುದು ಗೌರವ. ಉಡುಗೊರೆ ಕೊಟ್ಟರೆ ಮೌಲ್ಯ ಹೆಚ್ಚು ಎಂಬ ಭಾವನೆ ಇದೆ' ಎನ್ನುತ್ತಾರೆ ಭೈಫ್ನ ಡಾ:ಐ.ಐ.ಹೂಗಾರ್. ಭೈಫ್ ಸಂಸ್ಥೆಯು ಇಂತಹ ಅಲಂಕಾರಿಕ ವಸ್ತುಗಳ ತಯಾರಿಗೆ ತರಬೇತಿ ನೀಡುತ್ತಿದೆ. ರಾಜ್ಯದ ನಾನಾ ಭಾಗಗಳಲ್ಲಿ ತರಬೇತಿ ಪಡೆದ ಕೆಲವು ಕಲಾವಿದರು ಈ ಹವ್ಯಾಸವನ್ನು ರೂಢಿಸಿಕೊಂಡಿದ್ದಾರೆ.
ಸ್ವ-ಸಹಾಯ ಗುಂಪುಗಳು ಇತ್ತೀಚೆಗೆ ಇದನ್ನು ವೃತ್ತಿಯನ್ನಾಗಿ ಸ್ವೀಕರಿಸುವುದು ಕಂಡುಬರುತ್ತದೆ. ಕೃಷಿಮೇಳಗಳಲ್ಲಿ ಇದಕ್ಕೆ ಪ್ರತ್ಯೇಕವಾಗಿ ಮಳಿಗೆಯನ್ನು ತೆರೆಯುವಷ್ಟು ಅವಕಾಶ ಪ್ರಾಪ್ತವಾಗಿದೆ. ಇಂದು ಗಂಧದ ಹಾರವೆಂದು ಯಾವುದೋ ಮರದ ತೊಗಟೆಗೆ/ಕೆತ್ತೆಗೆ ಸೆಂಟ್ ಲೇಪಿಸಿ, ಹಾರ ಹಾಕಿ ಸಂತೃಪ್ತಿಪಡುತ್ತೇವೆ! ಸಮಾರಂಭದ ಬಳಿಕ ಅವುಗಳ ಪಾಡು! ಹಾಗಾಗಿ ಗಂಧ(?)ದ ಹಾರದ ಬದಲು ರೇಷ್ಮೆ ಹಾರ, ಹೂಗುಚ್ಚ, ಅಲಂಕಾರಿಕಾ ವಸ್ತುಗಳನ್ನು ಯಾಕೆ ಆಯ್ಕೆ ಮಾಡಿಕೊಳ್ಳಬಾರದು?