'ಹರಿಣಿ' - ಹೆಣ್ಣೊ, ಗಂಡೋ? ಉತ್ತರ ತಿಳಿಯದ ದಿನಗಳಿದ್ದುವು! 'ತರಂಗ' ಸಾಪ್ತಾಹಿಕ ದಲ್ಲಿ 'ಹರಿಣಿ' ವ್ಯಂಗ್ಯಚಿತ್ರ ಪುಟಕ್ಕೆ ಮೊದಲ ಮಣೆ! ಪುಟವಿಡೀ ಓರೆಕೋರೆ. ತರಂಗದ ಆರಂಭದಿಂದ ಹರಿಣಿ ಓದುಗರ ದೃಷ್ಟಿನಿಂದ ಹೆಣ್ಣು. ಗಂಡಾಗಲು ಐದು ವರುಷ ಬೇಕಾಯ್ತು!
ಗುಟ್ಟು ರಟ್ಟಾಗಿ ಹರಿಶ್ಚಂದ್ರ ಶೆಟ್ಟಿ ಅಂತ ಗೊತ್ತಾದಾಗ, ಫಕ್ಕನೆ ಯಾರೂ ನಂಬಲಿಲ್ಲ. 'ಬಹುಶಃ ನನ್ನ ವ್ಯಂಗ್ಯಚಿತ್ರಗಳನ್ನು 'ಪಾಪ, ಹೆಣ್ಣೋರ್ವಳು ರಚಿಸಿದ್ದಾಳೆ' ಎಂಬ ಕರುಣೆಯೋ, ಔದಾರ್ಯವೋ ಕಾರಣಕ್ಕಾಗಿ ಇಷ್ಟಪಟ್ಟರೋ ಏನೋ?' ಶೆಟ್ರು ಹೇಳುತ್ತಾರೆ.
ಮೊದಲು ರೂಪಾತಾರದಲ್ಲಿ ಚಲನಚಿತ್ರ ಕಲಾವಿದರ ವ್ಯಂಗ್ಯ ಭಾವಚಿತ್ರ (ಕ್ಯಾರಿಕೇಚರ್) ರಚಿಸುತ್ತಿದ್ದ ಶೆಟ್ರು, ದೊಡ್ಡ ಹೆಜ್ಜೆಯನ್ನಿಟ್ಟುದು ತರಂಗದ ಮೂಲಕ. 'ಮನಸ್ಸಿನ ಆಲೋಚನೆಯ ಅನಾವರಣಕ್ಕೆ ಮುಕ್ತ ವೇದಿಕೆ' ಕೃತಜ್ಞತೆಯಿಂದ ಜ್ಞಾಪಿಸಿಕೊಳ್ಳುತ್ತಾರೆ. ಜತೆಗೆ ಒಂದು ಪುಟದ ವ್ಯಕ್ತಿಚಿತ್ರದಲ್ಲಿ ಅರ್ಧಪುಟ ಇವರಿಗೇ ಮೀಸಲು.
ಏನಿದು ಕ್ಯಾರಿಕೇಚರ್? ಭಾವ ಮತ್ತು ವ್ಯಕ್ತಿತ್ವವನ್ನು ಅತಿರಂಜಿತವಾಗಿ ಗೆರೆಗಳ ಮೂಲಕ ಮೂಡಿಸುವುದು. ಫಕ್ಕನೆ ನೋಡಿದಾಗ ವ್ಯಕ್ತಿ, ಆತನ ವೃತ್ತಿ ನೆನಪಾಗಬೇಕು. ರುಂಡಕ್ಕೆ ಪಾಶಸ್ತ್ಯ. ಮುಂಡ - ಕಲಾವಿದನ ಕಲ್ಪನೆ.
ಕ್ಯಾರಿಕೇಚರ್ ಪತ್ರಿಕೆಗಳಲ್ಲಿ ಆಗಷ್ಟೇ ಶುರುವಾಗಿತ್ತು. ಪೂಜ್ಯ ಪೇಜಾವರ ಶ್ರೀಗಳ ಭಾವಚಿತ್ರವನ್ನು ಬಿಡಿಸಿದ್ದರಂತೆ. ಅದಕ್ಕೆ ಅವರ ಸಹಿಯನ್ನು ಪಡೆದಿದ್ದರು. ಪತ್ರಿಕೆಯಲ್ಲಿ ಅದು ಪ್ರಕಟವಾದಾಗ, ಅವರ ಆಭಿಮಾನಿಗಳಿಗೆ ಬಹಳ ನೋವಾಗಿತ್ತಂತೆ. 'ಅದನ್ನು ವ್ಯಕ್ತಿಯಾಗಿ ನೋಡ್ತಾರೆ, ಕಲೆಯೆಂದು ಸ್ವೀಕರಿಸುತ್ತಿರಲಿಲ್ಲ' ಎನ್ನುವ ಶೆಟ್ಟಿ, 'ಶ್ರೀಗಳು ತಮ್ಮ ಕ್ಯಾರಿಕೇಚರ್ ನೋಡಿ ಸಂತೋಷಪಟ್ಟಿದ್ದಾರೆ' ಎನ್ನಲು ಮರೆಯಲಿಲ್ಲ.
'ವ್ಯಂಗ್ಯ ಭಾವಚಿತ್ರವೆನ್ನುವುದು ಒಬ್ಬ ವ್ಯಕ್ತಿಯನ್ನು ಟೀಕಿಸುವುದು ಎಂಬ ಭಾವವಿತ್ತು. ತರಂಗ ಅದನ್ನು ದೂರಮಾಡಿದೆ' ಎನ್ನುತ್ತಾರೆ. ಡಾ.ಕಾರಂತ, ಕುವೆಂಪು, ಬೇಂದ್ರೆ..ಮೊದಲಾದ ನಾಡಿನ ಖ್ಯಾತ ಸಾಹಿತಿಗಳು ಹರಿಶ್ಚಂದ್ರ ಶೆಟ್ಟರ ಗೆರೆಗಳಿಗೆ ಸಿಲುಕಿದ್ದಾರೆ. ದಶಕದಿಂದೀಚೆಗೆ ನಮ್ಮೆಲ್ಲಾ ಪತ್ರಿಕೆಗಳಲ್ಲಿ ಕ್ಯಾರಿಕೇಚರ್, ವ್ಯಂಗ್ಯಚಿತ್ರಗಳು ಮಾಯ. ಪ್ರಕಟವಾದರೂ ಸ್ಥಾನ-ಮಾನ ಮೊದಲಿನಷ್ಟಿಲ್ಲ. ಬರೇ 'ಸ್ಥಳ ತುಂಬಿಸಲು' ಮಾತ್ರ. ಇಡೀ ಪುಟವನ್ನಾವರಿಸುತ್ತಿದ್ದ ನಗೆಗುಳಿಗೆಗಳು ಈಗೆಲ್ಲಿ? ಜತೆಗೆ ಕಲಾವಿದರೂ ಕೂಡಾ. 'ಕಾಲದ ಓಟ' ಅಂತ ಸ್ವೀಕರಿಸಬೇಕಷ್ಟೇ.
ಯಾವಾಗ ಪತ್ರಿಕೆಗಳು ಕಲಾವಿದರ ಕೈಬಿಟ್ಟವೋ, ಕಲಾವಿದರು ದೂರವುಳಿದರು. ಸದಾ ಓಡುತ್ತಿದ್ದ ರೇಖೆಗಳು ತಟಸ್ಥವಾದುವು. 'ಪತ್ರಿಕೆಗಳಲ್ಲಿ ಈಗ ನಾವು ಏನು ನೋಡ್ತೇವೋ, ಅದನ್ನು ವ್ಯಂಗ್ಯಚಿತ್ರಗಳು ಅಂತ ಒಪ್ಪಲು ಕಷ್ಟವಾಗುತ್ತಿದೆ.' ಶೆಟ್ಟರ ನೋವು.
'ಬದುಕಿಗೆ ಪ್ರತ್ಯೇಕವಾದ ಉದ್ಯೋಗವಿದ್ದುದರಿಂದ ಬಚಾವಾದೆ. ಇದನ್ನೇ ನಂಬಿರುತ್ತಿದ್ದರೆ ಬದುಕು ಅಯೋಮಯ'. ಇವರ ತಮ್ಮ ಪ್ರಕಾಶ್ ಶೆಟ್ಟಿ. 'ದ ವೀಕ್' ಆಂಗ್ಲ ಮ್ಯಾಗಜ್ಹಿನ್ನಲ್ಲಿ ವ್ಯಂಗ್ಯಚಿತ್ರಕಾರರಾಗಿ ಖ್ಯಾತಿ. ಈಟಿವಿಯಲ್ಲಿ 'ಪ್ರಕಾಶ್ ಪಂಚ್' ಮನೆಮಾತು. ಅಣ್ಣನ ಹೆಜ್ಜೆ ಇವರದಲ್ಲ. ಇವರಿಗೆ 'ಬಣ್ಣವೇ ಬದುಕು'. ಒಮ್ಮೆ ಸೃಷ್ಟಿಯಾದ ಇಮೇಜ್ನಿಂದ ಹಿಂದೆ ಸರಿಯುವ ಹಾಗಿಲ್ಲ, ಮುಂದಿನ ದಾರಿ ಅಸ್ಪಷ್ಟ. ಮೌನವಾಗಿದ್ದ ರೇಖೆಗಳನ್ನು ಮಾತನಾಡಿಸುವ ಬಗೆ ಹೊಳೆಯುತ್ತಿಲ್ಲ. ಮನಸ್ಸಿನ ತುಡಿತ-ಕಲ್ಪನೆಗೆ ರೂಪುಕೊಡಲು ಉಪಾಧಿಗಳಿಲ್ಲ. ಸ್ವಸಂತೋಷಕ್ಕಾಗಿಯೋ, ಸ್ನೇಹಿತರ ಒತ್ತಾಯಕ್ಕಾಗಿಯೋ ಚಿತ್ರಗಳು ತಯಾರಾದರೂ ಜನರನ್ನು ತಲಪುವುದು ಹೇಗೆ? - ಈ ಗೊಂದಲದಲ್ಲಿ ಒಂದಷ್ಟು ವರುಷ ನಷ್ಟ.
ಮೂರು ವರುಷದ ಹಿಂದೆ ನಡೆದ ಮಂಗಳೂರಿನಲ್ಲಿ ವಿಶ್ವ ಬಂಟರ ಸಮ್ಮೇಳನವು ಮತ್ತೊಮ್ಮೆ ಬಣ್ಣದ ಬದುಕಿನ ಬಾಗಿಲು ತೆಗೆಯಿತು. ಮನೆಯೊಳಗೆ ಕುಳಿತು, ಕಾಗದದಲ್ಲಿ ಗೆರೆಯನ್ನೆಳೆದು ಸಂಪಾದಕರಿಗೆ ಕಳುಹಿಸುತ್ತಿದ್ದ ಸ್ಥಿತಿಗಿಂತ ಭಿನ್ನವಾದ - 'ಸ್ಥಳದಲ್ಲೇ ಕ್ಯಾರಿಕೇಚರ್' ರಚನೆ. 'ಆರಂಭಕ್ಕೆ ಮುಜುಗರವಾಯಿತು' ಎನ್ನುವ ಶೆಟ್ರು, 'ಮುಂಬಯಿಯ ಅನೇಕ ಬಂಧುಗಳು ಬಹಳ ಖುಷಿ ಪಟ್ಟರು'. ಪ್ರತಿಫಲವೂ ಸಿಕ್ಕಿತೆನ್ನಿ. ಜತೆಗೆ ಪ್ರಕಾಶ್ ಕೂಡಾ ಇದ್ದರು.
ನಂತರ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವ. ವಿದೇಶಿಯರು ಸಾಕಷ್ಟು ಸಂಖ್ಯೆಯಲ್ಲಿ ಬಂದಿದ್ದರು. 'ವಾ...ಬ್ಯೂಟಿಫುಲ್'' ಎನ್ನುತ್ತಾ ತಮ್ಮ ಚಿತ್ರಕ್ಕಾಗಿ ಮುಗಿಬೀಳುತ್ತಿದ್ದರು. ಈ ಹೊಸಹಾದಿ ಶೆಟ್ಟಿಯವರನ್ನು ಮತ್ತಷ್ಟು ಹುರಿದುಂಬಿಸಿತು. ನಡೆಯುವ ಸಾಹಿತ್ಯ, ಕಲಾ ಕಾರ್ಯಕ್ರಮದಲ್ಲಿ, ಸಂಘಟಕರು ಇಚ್ಛೆ ಪಟ್ಟಲ್ಲಿ ಶೆಟ್ರು, ಅಲ್ಲ 'ಹರಿಣಿ'ಯವರು ರೆಡಿ. ಅಣ್ಣ ಜೀವನ್, ತಮ್ಮ ಪ್ರಕಾಶ್ ಸಾಥಿ.
ಪ್ರೇಕ್ಷಣೀಯ ಸ್ಥಳಗಳಲ್ಲಿ ತಂತಮ್ಮ ಭಾವಚಿತ್ರ ತೆಗೆಸಲು ಪ್ರವಾಸಿಗಳು ಹೇಗೆ ಆತುರಪಡುತ್ತಾರೋ, ಹಾಗೆನೇ ಇವರಿಂದ ವ್ಯಂಗ್ಯಭಾವಚಿತ್ರಗಳನ್ನು ಬಿಡಿಸಲೂ ಜನ ಮುಗಿಬೀಳುತ್ತಾರೆ! ಪತ್ರಿಕೆಗಳಲ್ಲಿ ಓದುಗರ ಆಭಿಪ್ರಾಯಕ್ಕೆ ವಾರಗಟ್ಟಲೆ ಕಾಯಬೇಕು. ಇಲ್ಲ ಹಾಗಲ್ಲ, ತಕ್ಷಣದಲ್ಲೇ ಪ್ರತಿಕ್ರಿಯೆ ಬಂದುಬಿಡುತ್ತದೆ-'ಚೆನ್ನಾಗಿದೆ', 'ತೊಂದರೆಯಿಲ್ಲ', 'ಸಾಮಾನ್ಯ', ಕೆಲವರದಂತೂ 'ನಿರುತ್ತರ'!
'ಎರಡು ನಿಮಿಷದಲ್ಲಿ ನಿಮ್ಮ ಭಾವಚಿತ್ರ. ತಲೆಗೆ ರೂ.100. ದೇಹ ಫ್ರೀ'. ನೀವು ಅವರಿಗೆ ಒಂದು ನಿಮಿಷ ಮುಖ ಒಡ್ಡ್ಡಿಸಿದರೆ ಸಾಕು. ಮತ್ತೊಂದು ನಿಮಿಷದಲ್ಲಿ ನಿಮ್ಮ ಕೈಯೊಳಗೆ ನಿಮ್ಮ ಚಿತ್ರ. 'ಕೆಲವರು ಇನ್ನೂ ಬುದ್ದಿವಂತರಿದ್ದಾರೆ - 'ನಮ್ಮಿಬ್ಬರ ಚಿತ್ರವನ್ನು ಒಟ್ಟಿಗೆ ಬಿಡಿಸಿ ಅಂತ ಹೇಳುತ್ತಾರೆ. ಅಂತಹವರು ಇನ್ನೂರು ಕೊಡುವುದಿಲ್ಲ'! ಟೂ-ಇನ್-ವನ್! ವ್ಯಂಗ್ಯಭಾವಚಿತ್ರವನ್ನು ಕಲೆ, ಹಾಸ್ಯ ಅಂತ ಗುರುತಿಸುತ್ತಾರೆ' ಎನ್ನುತ್ತಾರೆ ಹರಿಶ್ಚಂದ್ರ ಶೆಟ್ಟಿ. 'ಹಣವೂ ಮುಖ್ಯ. ಆದರೆ ಹಣಕ್ಕಾಗಿ ಕ್ಯಾರಿಕೇಚರ್ ಬಿಡಿಸುವುದಲ್ಲ. ಉಚಿತ ಅಂದರೆ ತಾತ್ಸಾರ'.
ಸುನಾಮಿ ಸಂತ್ರಸ್ತರ ದೇಣಿಗೆ ಸಂಗ್ರಹ ಕಾರ್ಯಕ್ಕಾಗಿ ನಡೆದ ಕಲಾಉತ್ಸವದಲ್ಲಿ ಇವರು ನೂರು ಮಂದಿಯ ವ್ಯಂಗ್ಯಭಾವಚಿತ್ರವನ್ನು ಬಿಡಿಸಿ ತನ್ನ ದೇಣಿಗೆ ಹತ್ತುಸಾವಿರ ಮೊತ್ತವನ್ನು ನೀಡಿದ್ದಾರೆ.
ಸ್ಥಳದಲ್ಲೇ ಚಿತ್ರ ರಚನೆ ಬಹಳಷ್ಟು ಏಕಾಗ್ರತೆ ಬೇಡುವಂತಹ ಕೆಲಸ. ಪೆನ್ ಹಿಡಿದು ಕಾಗದದ ಮೇಲೆ ರೇಖೆಗಳು ಚಲನೆಗೆ ಶುರುವಾದರೆ ಸಾಕು, ಎಲ್ಲವನ್ನೂ ಮರೆಯುವ ಏಕಾಗ್ರತೆ! ಇದು ಅವರಿಗೆ ಸಿದ್ಧಿ. ಇತ್ತೀಚೆಗೆ ಮಂಗಳೂರಿನಲ್ಲಿ ಕಲಾಮೇಳ. ಮೂವರು ಸ್ಥೂಲಕಾಯದ ಯುವಕರು ತಮ್ಮ ಚಿತ್ರಗಳನ್ನು ಬಿಡಿಸಬೇಕು, ಜತೆಗೆ ಮೊಬೈಲ್ನಲ್ಲಿದ್ದ ತಮ್ಮ ಮಿತ್ರನ ಚಿತ್ರವನ್ನೂ ಸೇರಿಸಬೇಕು - ಎಂಬ ಬೇಡಿಕೆ ಮುಂದಿಟ್ಟರಂತೆ. ಕಣ್ಣಿಗೆ ಕಂಡಂತೆ ಚಿತ್ರ ಬಿಡಿಸಬಹುದು. ಆದರೆ ಎಲ್ಲೋ ಇದ್ದವರನ್ನು ಚಿತ್ರ ನೋಡಿ ಬಿಡಿಸುವುದು ಹೇಗಪ್ಪಾ - ಫಜೀತಿಯಾಗಿತ್ತಂತೆ. ಸ್ವಲ್ಪ ಹೊತ್ತು ತಲೆಬಿಸಿ! ಕೊನೆಗೆ ಬಿಡಿಸಿದ ಚಿತ್ರ ನೋಡಿ ಆ ಯುವಕರು ಬಹಳ ಖುಷಿಪಟ್ಟರಂತೆ. ಅಂದರೆ ಕ್ಯಾರಿಕೇಚರ್ ಕಲಾವಿದನಿಗೆ ಸವಾಲುಗಳು ಹೇಗೆ ಬರ್ತವೆ ಎಂಬುದಕ್ಕೆ ಉದಾಹರಣೆಯಷ್ಟೇ.
ಈಗ ಕಂಪ್ಯೂಟರ್ ಯುಗ. ಸಾಕಾರ-ನಿರಾಕಾರ ಎಲ್ಲವೂ 'ಫೋಟೊಶಾಪ್'ನಿಂದ ಸಾಧ್ಯ! ಹರಿಣಿ ಹೇಳುತ್ತಾರೆ -'ನಾವದನ್ನು ಬಳಸುವುದರಲ್ಲಿ ಇರುವುದು, ಫೋಟೋಶಾಪ್ನಿಂದ ಕ್ಯಾರಿಕೇಚರ್ ರಚನೆಗೆ ಹಿನ್ನಡೆಯಾಗಲಿಲ್ಲ. ಚಿತ್ರಗಳಿಗೆ ಬಣ್ಣಕೊಡುವುದರಿಂದ ಲುಕ್ ಬಂತು.' 'ಬ್ಯಾನರ್ ಬರೆಯುವವರನ್ನು ಕಂಪ್ಯೂಟರ್ ಓಡಿಸಿದೆ. ಕತ್ತಲೆ ಕೋಣೆಯೊಳಗೆ ಕುಳಿತು ಕಪ್ಪುಬಿಳುಪು ಫೋಟೋವನ್ನು ಸಂಸ್ಕರಿಸುವ ವಿಧಾನಗಳು ಮೂಲೆಸೇರಿವೆ. ಆದರೆ ವ್ಯಂಗ್ಯಚಿತ್ರಕ್ಕೆ ಮತ್ತೊಂದು ಬದಲಿ ಬಂದಿಲ್ಲ.. ಹಾಗಾಗಿ ಹರಿಣಿಯವರ ವ್ಯಂಗ್ಯಭಾವಚಿತ್ರ ನಿತ್ಯನೂತನ. ಇಂದು 'ಇಲೋಕ' ಎಷ್ಟು ಮುಂದುವರಿದರೂ, ಹರಿಣಿಯವರ ಗೆರೆಯನ್ನು ಬದಲಾಯಿಸಲು ಅದು ಶಕ್ತವಾಗಿಲ್ಲ' ಚಿತ್ರಕಾರ ಎಸ್ಸಾರ್ ಪುತ್ತೂರು ಹೇಳುತ್ತಾರೆ.
ತಮ್ಮ ಪ್ರಕಾಶ್ ಶೆಟ್ಟರ ಸಾರಥ್ಯದಲ್ಲಿ ಕನ್ನಡದಲ್ಲಿ ಮೊದಲ ಬಾರಿಗೆ 'ವಾರೆ-ಕೋರೆ' ತರ್ಲೆ ಮಾಸಪತ್ರಿಕೆಯನ್ನು ತಂದಿದ್ದಾರೆ. ಈಗಾಗಲೇ ಎರಡು ಸಂಚಿಕೆಗಳು ಓದುಗರ ಕೈಸೇರಿವೆ. ದೊಡ್ಡ ಸಾಹಸ. ಆರಂಭದಲ್ಲೇ ಸಂಚಿಕೆಗಳು ಗೆದ್ದಿವೆ. ಸಹೋದರರ ಸಾಥಿ. 'ಒಂದು ವರುಷ ಚಂದಾ ನೀಡಿದರೆ - ನಿಮ್ಮ ಕ್ಯಾರಿಕೇಚರ್ ಫ್ರೀ'!
'ಖ್ಯಾತ ಛಾಯಾಚಿತ್ರಕಾರ ಯಜ್ಞರು ಮೊದಲು ಕ್ಯಾರಿಕೇಚರ್ನಲ್ಲಿ ಎತ್ತಿದ ಕೈ. ಅವರು ಬಿಡಿಸುತ್ತಿದ್ದ ಚಿತ್ರಗಳನ್ನು ನೋಡಿ ಪ್ರಭಾವಿತನಾದೆ. ಜತೆಗೆ ಕೆ.ಆರ್.ಸ್ವಾಮಿ, ಶ್ರೀಧರ್ ಹುಂಚ ಅವರ ಚಿತ್ರ ಮೋಡಿಮಾಡಿತು' ನಡೆದು ಬಂದ ದಾರಿಯತ್ತ ಹೊರಳುತ್ತಾರೆ.
2005ರಲ್ಲಿ ಬಣ್ಣದ ಬದುಕಿನ ಇಪ್ಪತ್ತೈದರ ನೆನಪಿಗಾಗಿ 'ಪೋಕ್ರಿ' ಕಾಟರ್ೂನ್ ಗುಚ್ಚ ಪ್ರಕಟವಾಗಿತ್ತು ಮಡದಿ ಆಶಾ ಶೆಟ್ಟಿ. ಅತಿತ್, ಅಂಕಿತ್ ಮಕ್ಕಳು. ಮಂಗಳೂರಿನ ಕಾವೂರಿನಲ್ಲಿ ವಾಸ. ಒಂದೇ ಕುಟುಂಬದ ಮೂವರು ಅಣ್ಣತಮ್ಮಂದಿರು ಗೆರೆಯ ಬಲೆಯಲ್ಲಿರುವುದು ದೇಶದಲ್ಲೇ ಅನನ್ಯ ಇರಬಹುದು! ಬದುಕಿನ ಚಿನ್ನದ ಸಂಭ್ರಮದ ಹರಿಣಿಗೆ ಮತ್ತೆ ಹರೆಯ ಬಂದಿದೆ. ಈಗವರು ಫ್ರೆಶ್.
1 comments:
ಕುಂಚದಿಂದ ಭಾವ ಮತ್ತು ವ್ಯಕ್ತಿತ್ವವನ್ನು ಅತಿರಂಜಿತವಾಗಿ ಗೆರೆಗಳ ಮೂಲಕ ಮೂಡಿಸುವ ವ್ಯಂಗ್ಯಚಿತ್ರಕಾರ ಶ್ರೀ.ಹರಿಶ್ಚಂದ್ರ ಶೆಟ್ಟಿಯವರ ಭಾವ ಮತ್ತು ವ್ಯಕ್ತಿತ್ವವನ್ನು ಲೇಖನಿಯಿಂದ ಮೂಡಿಸಿದ ಶ್ರೀ. ನಾ.ಕಾರಂತ ಪೆರಾಜೆಯವರಿಗೆ ವಂದನೆಗಳು.
-ಪ. ರಾಮಚಂದ್ರ , ರಾಸ್ ಲಫ್ಫಾನ್, ಕತಾರ್ ದೇಶ.
Post a Comment