Monday, March 9, 2009

ಪುತ್ತೂರಿನಲ್ಲಿ ಗೌಜಿ-ಗದ್ದಲದ 'ಕಂಬಳ'

ಕಂಬಳ - ಸರಳವಾಗಿ ಹೇಳುವುದಾದರೆ ಕೋಣಗಳ ಓಟದ ಸ್ಪರ್ಧೆ. ಇದೊಂದು ಪ್ರತಿಷ್ಠಿತ ಕ್ರೀಡೆ. ಕಂಬಳಕ್ಕಾಗಿಯೇ ಕೋಣಗಳನ್ನು ಸಾಕುವುದು ಕೂಡಾ ಪ್ರತಿಷ್ಠೆ. ಅಂತಸ್ತಿಗೆ ಹೊಂದಿಕೊಂಡು ವೈಭವವನ್ನು ಪಡೆಯುತ್ತದೆ.

ಪುತ್ತೂರಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಎದುರಿನ ಗದ್ದೆಯಲ್ಲಿ ನಡೆಯುವ 'ಕೋಟಿ-ಚೆನ್ನಯ' ಜೋಡುಕೆರೆ ಕಂಬಳವು ಜಿಲ್ಲೆಯಲ್ಲೇ ಸಂಭ್ರಮ. ಉಭಯಜಿಲ್ಲೆಗಳಲ್ಲಿ ಕೆಲವೆಡೆ ನಡೆಯುತ್ತದೆಯಾದರೂ ಪುತ್ತೂರಿನ ಕಂಬಳಕ್ಕೆ ಪ್ರತ್ಯೇಕ ಸ್ಥಾನಮಾನ.
ಓಟದ ಕೋಣಗಳಿಗೆ, ಕೋಣಗಳ ಯಜಮಾನರುಗಳಿಗೆ ಮತ್ತು ಅದರಲ್ಲಿ ತೊಡಗಿಸಿಕೊಂಡ ಇತರರಿಗೆ 'ಕಂಬಳ' ಹತ್ತಿರ ಬಂತೆಂದರೆ ಮದುವೆಗಿಂತಲೂ ಸಂಭ್ರಮ. 'ಈ ವರುಷ ನಮ್ಮ ಕೋಣವೇ ಗೆಲ್ಲಬೇಕು' ಎಂಬ ತುಡಿತ.

ಅದಕ್ಕಾಗಿ ಕೋಣಕ್ಕೆ ವಿಶೇಷ ಆತಿಥ್ಯ! ಕೋಣಗಳು ಅಲಂಕಾರಗೊಂಡು, ಬ್ಯಾಂಡ್-ವಾಲಗ-ಕೊಂಬು ನಾದದೊಂದಿಗೆ ಕಂಬಳದ ಗದ್ದೆಗೆ ಬರುತ್ತವೆ. ಗದ್ದೆಗಿಳಿದ ಕೋಣಗಳು ಕಂಬಳ ಕೆರೆಗೆ ಪ್ರವೇಶ. ಮುದ್ದಿನಿಂದ ಸಾಕಿದ ಅವುಗಳನ್ನು ಕೆರಳಿಸಲು 'ಬಾರುಕೋಲು ಪೆಟ್ಟಿನ' ರುಚಿ! ಕೆರಳಿಸಿದಷ್ಟೂ ವೇಗವಾಗಿ ಓಡುತ್ತವೆ ಎಂಬ ನಂಬುಗೆ!

ಇತ್ತೀಚೆಗಂತೂ ಸುಡುಮದ್ದು ಪ್ರದರ್ಶನ, ತಾರಾ ಸಂದೋಹ ಆಗಮನ, ಸಾಧಕರಿಗೆ ಸಂಮಾನ, ಯಕ್ಷಗಾನ ಬಯಲಾಟ. ಚರುಮುರಿ-ತೊಟ್ಟಿಲು, ಐಸ್ಕ್ರೀಂ-ಫ್ಯಾನ್ಸಿ ಧಾರಾಳ. ಪುತ್ತೂರಿನ ಮಹಾಲಿಂಗೇಶ್ವರ ಜಾತ್ರೆ ಬಹಳ ಗೌಜಿ. ಅದನ್ನು ನೆನಪಿಸುವಂತಹ ಗೌಜಿ!

ಕೆರೆಯ ಎರಡೂ ಬದಿಗಳಲ್ಲಿ ಜನರು ಕುಳಿತು-ನಿಂತು ಕಂಬಳವನ್ನು ವೀಕ್ಷಿಸುತ್ತಾರೆ. ಕುಳಿತಲ್ಲೇ 'ಪಂಥ'ಗಳು ನಡೆಯುತ್ತವೆ! ಐವತ್ತು ರೂಪಾಯಿಯಿಂದ ಐನೂರು, ಸಾವಿರದ ತನಕವೂ ಬಾಜಿಕಟ್ಟುವ 'ಕಂಬಳಪ್ರಿಯ'ರಿದ್ದಾರೆ. ಇದೆಲ್ಲಾ ಒಂದೆರಡು ನಿಮಿಷದಲ್ಲಿ ನಡೆದುಹೋಗುತ್ತದೆ. ಪ್ರತಿಯೊಂದು ಜತೆ ಕೋಣಗಳು ಕೆರೆಗೆ ಇಳಿದಾಗಲೂ 'ಬಾಜಿ' ನಡೆದು, ಕೆಲವರ ಕಿಸೆ ಭದ್ರವಾಗುತ್ತದೆ. ಈ ಪಂಥಗಳು ಬೆರಳುಸನ್ನೆಯಲ್ಲಿ ನಡೆಯುವುದೂ ಇದೆ. ಉದಾ: ನೂರು ರೂಪಾಯಿಯಾದರೆ 'ಒಂದು ಬೆರಳು' ಐನೂರಾದರೆ 'ಐದುಬೆರಳು'...

ಕೊನೆಗೆ ಸರ್ವಶ್ರೇಷ್ಠ ಬಹುಮಾನವನ್ನು ಪಡೆದ ಕೋಣಗಳ ವೈಭವ ಮೆರವಣಿಗೆ. ಕೋಣದ ಯಜಮಾನನ ಮುಖದಲ್ಲಿ ಮಂದಹಾಸ. ಮತ್ತೆ ಮುಂದಿನ ಕಂಬಳದ ತನಕ ವಿಶ್ರಾಂತಿ. ಕೋಣಗಳ ಆರೈಕೆ.


2 comments:

VasanthKaje said...

ನಾ ಕಾರಂತರೆ,

ಕಂಬಳದ ಬಗ್ಗೆ ನನಗೆ ಸ್ವಲ್ಪ ಭಿನ್ನಾಭಿಪ್ರಾಯವಿದೆ. ನನ್ನ ಮನೆಗೆ ಕೆಲವು ಕಿಲೋಮೀಟರುಗಳ ದೂರದಲ್ಲಿ ಕಂಬಳ ನಡೆಯುತ್ತಿದ್ದರೂ ನಾನು ಇಷ್ಟರವರೆಗೆ ಅದನ್ನು ವೀಕ್ಷಿಸಿಲ್ಲ. ಚಿಕ್ಕಂದಿನಲ್ಲಿ ಅದು ಯಾಕೋ ಆಗಲಿಲ್ಲ. ಈಗ ನನ್ನ ಮನೋಧರ್ಮ ನನ್ನನ್ನು ತಡೆಯುತ್ತಿದೆ.

ಮನುಷ್ಯರ ಓಟ ಸ್ಪರ್ಧೆಗೂ ಪ್ರಾಣಿಗಳ ಓಟ ಸ್ಪರ್ಧೆಗೂ ಸಾಕಷ್ಟು ವ್ಯತ್ಯಾಸವಿದೆ. ನಾವು ನಮ್ಮ ಸ್ವ-ಪ್ರೇರಣೆಯಿಂದ ಓಡುತ್ತೇವೆ. ನಾನು ಕೇಳಿದ ಪ್ರಕಾರ ಕಂಬಳದ ಕೋಣಗಳು ಪೆಟ್ಟು, ಪೆಟ್ಟಿನ ಗಾಯಕ್ಕೆ ಹಾಕಲಾಗುವ ನಿಂಬೆಹುಳಿ (?) - ಗಾಯದಲ್ಲಿ ಉರಿ ಉಂಟಾಗಲು, ಸಿಡಿಸಲಾಗುವ ಪಟಾಕಿ ಮತ್ತು ಇತರ ಶಬ್ದಗಳ ಭಯದಿಂದ ಓಡುತ್ತವೆ.

ಇದು ಅಮಾನವೀಯ. ವರ್ಷವಿಡೀ ಚೆನ್ನಾಗಿ ಸಾಕುವುದು ಇದಕ್ಕೆ ಪರಿಹಾರ/excuse ಆಗಲಾರವು.
ಮೊನ್ನೆ ಬೆಂಗಳೂರಿನಲ್ಲಿ ಒಂದು ಎತ್ತಿನ ಗಾಡಿಯನ್ನು ನೋಡಿದೆ. ಅದರ ಯಜಮಾನ ಎತ್ತಿನ ಬಾಲದಿಂದ ಆಗುವ ತೊಂದರೆಯನ್ನು ನಿವಾರಿಸಲು ಬಾಲವನ್ನೇ ಕತ್ತರಿಸಿ ಬಿಟ್ಟಿದ್ದ. ಅವನಿಗಾಗಿ ಶ್ರಮಿಸಿದ್ದಕ್ಕೆ ಎತ್ತಿಗೆ ತನ್ನ ರಕ್ಷಣೆ ಮಾಡಿಕೊಳ್ಳುವ ಅಧಿಕಾರವೂ ಇಲ್ಲ ಪಾಪ!. ಅವನು ಎತ್ತನ್ನು ಸಾಕುತ್ತಾನೆ / ಅವನಂತಹವರು ಕೆಲವರಿಲ್ಲದಿದ್ದರೆ ಎತ್ತುಗಳೇ ಅಳಿದು ಹೋಗುತ್ತವೆ ಎನ್ನುವುದು ಈ ಹೇಯ ಕೃತ್ಯಕ್ಕೆ ಉತ್ತರವಲ್ಲ ಎಂದುಕೊಳ್ಳುತ್ತೇನೆ.

ಈ ಅದ್ಭುತವಾದ (!) ಜನಪದ ವೈಭವಕ್ಕೆ (!) ಸರಕಾರ ಮತ್ತಿತರರ ಸಹಕಾರವಲ್ಲದೆ ವೀರೇಂದ್ರ ಹೆಗ್ಗಡೆಯವರ ಪ್ರೋತ್ಸಾಹ ನನ್ನನ್ನು ಇನ್ನಷ್ಟು ಚಕಿತನನ್ನಾಗಿಸಿದೆ. ಅವರು ಹೇಳಿ ಕೇಳಿ ಜೈನರು. ಕತ್ತಲಾದ ಬಳಿಕ ಆಹಾರವನ್ನೂ ಸೇವಿಸದ ಪರಮ ಅಹಿಂಸಾ ಮತದಿಂದ ಬಂದವರು. ಇಂತಹ ಹಿಂಸಾತ್ಮಕ ಕ್ರೀಡೆಯನ್ನು ಯಾಕೆ ಪ್ರೋತ್ಸಾಹಿಸುತ್ತಾರೋ ನನಗೆ ತಿಳಿಯುತ್ತಿಲ್ಲ (ಹೆಗ್ಗಡೆಯವರ ಸಮಾಜ ಸೇವೆಯ ಬಗ್ಗೆ ನನಗೆ ಗೌರವವಿದೆ).

ವಂದನೆಗಳು,
ವಸಂತ್ ಕಜೆ.

harini said...

VASANTHA KAJE AVARA
MAATHINALLI SATHYAVIDE.
PRAANI HIMSE...MAHAA PAAPA...!
NIMMA MAATHININDA JANA HECHETTU GOLLALI


HARINI

Post a Comment