Tuesday, March 24, 2009

ಬಾನಂಗಳದಲ್ಲಿ 'ಮೈನಾ' ಕಸರತ್ತು!


ಮೊನ್ನೆ ಬೆಂಗಳೂರಲ್ಲಿ ನಡೆಯಿತಲ್ಲಾ, ವಿಮಾನ ಹಾರಾಟ ಪ್ರದರ್ಶನ. ಅದನ್ನೂ ಮೀರಿಸುವ ಸೊಗಸು ಇಲ್ಲಿದೆ! ಪುತ್ತೂರಿನ ಬೊಳ್ವಾರಿಗೆ ನೀವು ಆರರ ಸುಮಾರಿಗೆ ಅರ್ಧ ಗಂಟೆ ಪುರುಸೊತ್ತು ಮಾಡಿಕೊಂಡು ಬನ್ನಿ. ಬಾನಂಗಳದಲ್ಲಿ ಮೂಡುವ ವಿವಿಧ ನಮೂನೆಯ ಚಿತ್ತಾರಗಳು ಕಣ್ಣೆದುರೇ ಮೂಡುತ್ತವೆ. ಲೋಹದ ಹಕ್ಕಿಗಳು ನಾಚುವಷ್ಟು!

ಆರ್.ಟಿ.ಓ.ಕಚೇರಿ ಸುತ್ತುಮುತ್ತ ಸಂಜೆಯಾಗುತ್ತಲೇ ಪ್ರದರ್ಶನಕ್ಕೆ ವೇದಿಕೆ ಸಜ್ಜಾಗುತ್ತದೆ. ಕೆಲವರ ದೃಷ್ಟಿಯಂತೂ ಬಾನಲ್ಲೇ ನೆಟ್ಟಿರುತ್ತದೆ. 'ಶುರುವಾಗಬೇಕಿತ್ತಲ್ಲಾ. ಯಾಕಿಷ್ಟು ಲೇಟು', 'ಸೂರ್ಯ ಕಂತಲು ಸ್ವಲ್ಪ ಹೊತ್ತಿದೆ. ಹಾಗಾಗಿ..', 'ಇಲ್ಲ, ಅದು ಕರೆಕ್ಟ್ ಆರೂ ಇಪ್ಪತ್ತಕ್ಕೆ ಬರ್ತದೆ..ನೋಡಿ ಬೇಕಾದ್ರೆ'.. ಇಂತಹ ಒಂದೊಂದು ಪ್ರಶ್ನೆ-ಸಬೂಬುಗಳು. ನಮ್ಮ ಪಾನೀಪೂರಿ ಶ್ರೀಧರರಿಗೆ ಉತ್ತರ ಕೊಟ್ಟೇ ಸುಸ್ತು!

ಏನಿದು ಪ್ರದರ್ಶನ! ಕಳೆದೊಂದು ತಿಂಗಳಿಂದ ಬೂದು ತಲೆ ಮೈನಾ ಹಕ್ಕಿಗಳು ಠಿಕಾಣಿ ಹೂಡಿವೆ. ಒಂದಲ್ಲ, ಎರಡಲ್ಲಸಾವಿರ ಸಾವಿರ! ಆರ್.ಟಿ.ಓ.ಕಚೇರಿ ಎದುರಿನ ಮಾವಿನ ಮರದಲ್ಲಿ ಅವುಗಳ ವಾಸ. ಸಂಜೆ ಆರೂ ಕಾಲರಿಂದ ಆರುಮುಕ್ಕಾಲರೊಳಗೆ ಮರ ಸೇರುವ ಮೈನಾಗಳು, ಮರುದಿನ ಜನರ ಗದ್ದಲ(!) ಶುರುವಾಗುವ ಮೊದಲೇ ಹಾರಿಬಿಡುತ್ತವೆ.
ಸಾವಿರಗಟ್ಟಲೆ ಪಕ್ಷಿಗಳು ಒಂದೇ ಪರಿಸರದಲ್ಲಿ ನೋಡಸಿಗುವುದು ಅಪರೂಪ. ಪಕ್ಷಿಧಾಮಗಳಲ್ಲಾದರೆ ಅವುಗಳದ್ದೇ ಕಾರುಬಾರು. ಇಲ್ಲಿ..ಅದೂ ಪಟ್ಟಣದಲ್ಲಿ! ಸಂಜೆಯಾಗುತ್ತಲೇ ಹಂಚಿಹೋದ ಮೈನಾಗಳ ಸಣ್ಣ ಸಣ್ಣ ಗುಂಪುಗಳು ಜಮೆಯಾಗುತ್ತವೆ. ಹತ್ತಿರದಲ್ಲಿದ್ದ ತೆಂಗು, ಕಂಗು ಮರಗಳಲ್ಲಿ ಕುಳಿತು, ಹಾರುತ್ತಾ ತಮ್ಮ ಬಂಧುಗಳ ನಿರೀಕ್ಷೆಯಲ್ಲಿರುತ್ತವೆ. ಕೆಲವಂತೂ ಸ್ವಸ್ಥಾನಕ್ಕೆ ಬಂದು, ಪುನಃ ಅಷ್ಟೇ ವೇಗದಲ್ಲಿ ಹಿಂದಕ್ಕೆ ಹೋಗಿ, ಗುಂಪಿನೊಂದಿಗೆ ಬರುತ್ತವೆ. ಮೊದಲು ಸಣ್ಣ ಗುಂಪುಗಳಲ್ಲಿ ಕಾಣಿಸಿಕೊಂಡು, ನಂತರ ಎಲ್ಲವೂ ಒಟ್ಟಾಗಿ ಆಗಸದಲ್ಲಿ ನೋಡಿಯೇ ಅನುಭವಿಸಬೇಕು. ಅದು ಶಬ್ಧಕ್ಕೆ ನಿಲುಕದ್ದು. ಕಣ್ಣುರೆಪ್ಪೆ ಮುಚ್ಚಿ ಬಿಡುವುದರೊಳಗೆ ಬಹಳಷ್ಟು ದೂರ ಸಾಗುವಷ್ಟು ವೇಗ. ಸುತ್ತುತ್ತಾ, ಮೇಲೇರುತ್ತಾ, ರಪ್ಪನೆ ಕೆಳಗಿಳಿಯುತ್ತಾ, ತಕ್ಷಣ 'ತಿರುವು' ತೆಕ್ಕೊಳ್ಳುತ್ತಾ - ನಮನ್ನು ಭ್ರಮಗೆ ಒಳಗಾಗಿಸುವ ಮೋಡಿ-ಒಂದು 'ಕಲಾಸೃಷ್ಟಿ'.

ಎರಡು ಹೂಬಿಟ್ಟ ಮಾವಿನ ಮರಗಳು ಮೈನಾಗಳಿಗೆ ಮನೆ. ಇವುಗಳು ಕುಳಿತಾಗ ಮರದಲ್ಲಿದ್ದ ಎಲೆಗಳೂ ಮರೆಯಾಗುತ್ತವೆ. ಹಾರಿ ಬಂದು ಕುಳಿತುಕೊಳ್ಳುವಾಗ ಅವುಗಳ 'ಚಿಲಿಪಿಲಿ-ಮಾತುಕತೆ', ಒಂದರ್ಧ ಗಂಟೆಯಲ್ಲಿ ನಿಶ್ಶಬ್ಧ! 'ಇಷ್ಟೊಂದು ಪಕ್ಷಿಗಳು ಈ ಮರದಲ್ಲಿ ಇವೆಯಾ' - ಅಂತ ಆಶ್ಚರ್ಯವಾಗುತ್ತದೆ.

ಪಾಪ, ಮೈನಾಗಳು ಬರುವುದಕ್ಕಿಂತ ಮೊದಲು ಮರವು ಕೊಕ್ಕರೆಯ, ಕಾಗೆಗಳ ಮನೆಯಾಗಿತ್ತು. ಈಗವು ಅನಾಥ. ಅವುಗಳಿಗೆ ಮೈನಾಗಳು ಬಂದವೆಂದರೆ 'ಟೆನ್ಶನ್' ಏರುವ ಹೊತ್ತು. ವಿಪರೀತವಾಗಿ ಕಿರುಚುತ್ತಾ ಅಸ್ತಿತ್ವವನ್ನು ಕಾಪಾಡಲು ಹೆಣಗಾಡುತ್ತವೆ. ತಮ್ಮ ಮನೆಯನ್ನು ಇತರರು ಆಕ್ರಮಿಸಿಕೊಂಡರೂ, 'ನೋಡುವಾ, ಸ್ವಲ್ಪ ಜಾಗ ಸಿಕ್ಕೀತು' ಅಂತ ಪ್ರಯತ್ನಿಸುವ ಪರಿ.

ಇದು 'ಬೂದುತಲೆ ಮೈನಾ' ಅಂತ ಗುರುತುಹಿಡಿದವರು - ಖ್ಯಾತ ಪಕ್ಷಿತಜ್ಞ ಡಾ.ಸಿ.ಎನ್.ಮಧ್ಯಸ್ಥ. 'ಹಿಂಡುಹಿಂಡಾಗಿರುವುದು ಅವುಗಳ ಸ್ವಭಾವ. ಆದರೆ ಹೀಗೆ ಇರುವುದು ಅಪರೂಪ. ಇದಕ್ಯಾಕೆ ಮಾಧ್ಯಮ ದೃಷ್ಟಿ ಬೀಳಲಿಲ್ಲ' ಅಂತ ಪ್ರಶ್ನಿಸುತ್ತಾರೆ!
ಬೂದುತಲೆ ಮೈನಾ (Grey Headed Myna) ಸ್ಥಳೀಯವಾಗಿ ವಲಸೆ ಹೋಗುವ ಹಕ್ಕಿಗಳಿವು. ಹೆಚ್ಚೆಂದರೆ ಇಪ್ಪತ್ತು ಸೆಂಟಿಮೀಟರ್ ಉದ್ದ. ಹಳದಿ ಕೊಕ್ಕು, ಕೊಕ್ಕಿನ ಬುಡದಲ್ಲಿ ನಸುನೀಲಿ ವರ್ಣ. ಇವುಗಳು ಮಾಂಸಹಾರಿಯೂ ಹೌದು, ಸಸ್ಯಾಹಾರಿಯೂ ಹೌದು.

'ಮರ, ಗಿಡ, ಹಸಿರು ಅವಕ್ಕೆ ಇಷ್ಟ. ದೊಡ್ಡ ಕಾಡು, ಪೇಟೆ ಅವಕ್ಕೆ ಇಷ್ಟವಾಗುವುದಿಲ್ಲ. ಯಾಕೆಂದರೆ ಹಾರಾಡಲು ಕಷ್ಟ. ಇಲ್ಲಿ ಮಾತ್ರ ಅವುಗಳು ಪೇಟೆಯನ್ನೇ ಇಷ್ಟಪಟ್ಟಿವೆ. ಬಹುಶಃ ಮೊದಲು ಅವುಗಳ ವಾಸಸ್ಥಾನವಾಗಿತ್ತೋ ಏನೋ' ವಿನೋದವಾಗಿ ಹೇಳುತ್ತಾರೆ ಮಧ್ಯಸ್ಥರು.

'ಸಾವಿರಾರು ಹಕ್ಕಿಗಳು ಒಂದೇ ಸ್ಥಳದಲ್ಲಿ ಬಿಡಾರ ಹೂಡುವುದು - ಬಹುಶಃ ವಿದೇಶದಲ್ಲಾಗುತ್ತಿದ್ದರೆ ಜನ ಸಾಲು ಸಾಲಾಗಿ ಬರುತ್ತಿದ್ದರು' ಎನ್ನುತ್ತಾರೆ ಶ್ರೀ ವೆಂಕಟ್ರಾಮ ದೈತೋಟ. ಯಾರೋ ಹೇಳಿದರು - 'ಮರದ ಕೆಳಗೆ ಕಾಗದ, ಕಸಗಳನ್ನು ಸುಡಲು ಬೆಂಕಿ ಹಾಕುತ್ತಾರೆ. ಅವುಗಳ ಹೊಗೆ ಪಕ್ಷಿಗಳಿಗೆ ತೊಂದರೆಯಾಗುವುದಿಲ್ವಾ'. ಹೌದು. ಅದಕ್ಕಾಗಿ ಹಗಲು ಹೊತ್ತಲ್ಲಿ ತ್ಯಾಜ್ಯ ಸುಡೋಣ.

ಹಕ್ಕಿಗಳೂ ಬರುವ ಸಮಯದಲ್ಲಿ ಅವುಗಳಿಗೆ ಬೇಕಾದಂತೆ ವಾತಾವರಣವನ್ನು ಸೃಷ್ಟಿಸಿದರೆ ಅವುಗಳಿಗೂ ಸುಖ, ನಮಗೂ ಹಿತ. ಗುಲ್ಲೆಬ್ಬಿಸಿದ್ದರಿಂದ 'ಮನುಷ್ಯನ ಸಹವಾಸವೇ ಬೇಡ' ಎನ್ನುತ್ತಾ ಮನೆ ಬದಲಿಸಿದರೂ ಆಶ್ಚರ್ಯಪಡಬೇಕಿಲ್ಲ.

(ಈಗ ತಾನೆ ಬಂದ ಸುದ್ದಿ! ಸಂಜೆ ಹೊತ್ತಿಗೆ ಅವುಗಳು ಕುಳಿತುಕೊಳ್ಳುತ್ತಿದ್ದಾಗ, 'ಮನುಷ್ಯನ ವಿಕಾರ ಮನಸ್ಸು' ಕೆಲಸ ಮಾಡುತ್ತದೆ! ಚಪ್ಪಾಳೆ ಸದ್ದಿಗೆ ಕುಳಿತವುಗಳನ್ನು ಓಡಿಸಿ ಸಂತೋಷಪಡುವ 'ಪತನ ಸುಖಿ'ಗಳ ಕಾರುಬಾರು! ಸಂಜೆ ಹೊತ್ತಿಗೆ ಟಯರ್, ತ್ಯಾಜ್ಯಗಳಿಗೆ ಬೆಂಕಿಯಿಟ್ಟು, ಹೊಗೆಬರಿಸುವ ನಮಗೆ ನಿಜಕ್ಕೂ ಯಮನೂರಲ್ಲೂ ಜಾಗವಿಲ್ಲ! ಕಳೆದ ೩-೪ ದಿನಗಳಿಂದ ಪಕ್ಷಿ ಸಂಸಾರ ಬೊಳ್ವಾರಿಗೆ ವಿದಾಯ ಹೇಳಿದೆ. ಮಾನವ ಸಂಚಾರವಿಲ್ಲದ ಜಾಗದಲ್ಲಿ ಅವಕ್ಕೆ 'ನೂತನ ಮನೆ' ಸಿಗಲಿ ಎಂದು ಹಾರೈಸೋಣ.)


0 comments:

Post a Comment