Monday, March 16, 2009

ವಿಶೇಷ ತಳಿಗಳ ಬೆನ್ನ ಹಿಂದೆ

'ಎಲ್ಲರೂ ಮಾಡುವ ಕೆಲಸ ಮಾಡಲು ಕಷ್ಟವಿಲ್ಲ. ನನಗದು ಇಷ್ಟವೂ ಇಲ್ಲ. ಹೊಸತನ್ನು ಹುಡುಕುತ್ತಿರುತ್ತೇನೆ' - ತಳಿ ಆಯ್ಕೆ, ಅಭಿವೃದ್ಧಿ ವಿಚಾರದಲ್ಲಿ ದಕ್ಷಿಣ ಕನ್ನಡದ ಕೃಷಿಕ ಗೊರಗೋಡಿ ಶ್ಯಾಮ ಭಟ್ಟರ ನಿಲುವು.

ಕೃಷಿಯೊಂದಿಗೆ 'ತಳಿ ಸಂಗ್ರಹ' ಇವರಾಸಕ್ತಿ. ಅಪರೂಪದ್ದಾದ ಮಾವು, ಹಲಸು ತಳಿಗಳನ್ನು ಅರಸಿ, ಕಸಿ ಕಟ್ಟಿ, ಬೆಳೆಸುವುದು ಒಂಭತ್ತು ವರುಷಗಳಿಂದ ಹಚ್ಚಿಕೊಂಡ ಹವ್ಯಾಸ. 'ನನ್ನ ತೋಟದಲ್ಲಿ ಎಲ್ಲಾ ಜಾತಿ ಇರಬೇಕು' ಎನ್ನುವ ಜಾಯಮಾನ ಇವರದಲ್ಲ. ಸುತ್ತಮುತ್ತ ಇರುವ ತಳಿ ಸಂಗ್ರಾಹಕರಲ್ಲಿ ಇರದೇ ಇದ್ದುದು ತನ್ನಲ್ಲಿರಬೇಕು. ಅದಕ್ಕಾಗಿ ವಿಶೇಷ ಯತ್ನ.

'ಸುತ್ತಮುತ್ತ ಲಭ್ಯವಿರುವ ತಳಿಗಳನ್ನು ತಂದು ಅಭಿವೃದ್ಧಿ ಪಡಿಸುವುದು ಕಷ್ಟದ ಕೆಲಸವಲ್ಲ. ಉದಾಹರಣೆಗೆ, ಮರ್ಕಂಜದ ಮಾಪಲ್ತೋಟದವರಲ್ಲಿ ನೂರಕ್ಕೂ ಮಿಕ್ಕಿ ಹಲಸು, ಮಾವು ತಳಿಗಳಿವೆ. ಅಲ್ಲಿಂದ ಯಾವಾಗ ಬೇಕಾದರೂ ತರಬಹುದು. ಆದರೆ ಅವರ ಸಂಗ್ರಹದಲ್ಲಿ ಇರದೇ ಇದ್ದ ತಳಿಗಳು ಯಾವುದಿದೆ ಅದನ್ನು ಹುಡುಕುತ್ತಿದ್ದೇನೆ' ಎನ್ನುತ್ತಾರೆ ಇವರು.

ಆಯ್ಕೆಯ ತಳಿಯೊಂದರ ಸುಳಿವಿನ ಹಿಂದೆ ಬೀಳುತ್ತಾರೆ. ಮೊದಲು ಹಣ್ಣಿನ ರುಚಿಯ ಆಯ್ಕೆ. ಸ್ವತಃ ತಾನೇ ತಿಂದು, 'ಇದನ್ನು ಬೆಳೆಯಬೇಕೋ, ಬೇಡವೋ, ಹತ್ತಿರದಲ್ಲಿ ಯಾರಾದರೂ ಬೆಳೆಯುತ್ತಾರೋ' ಎಂಬ ಪರಿಶೀಲನೆ. ಸಂಬಂಧಪಟ್ಟ ಮರದ ಯಜಮಾನರಲ್ಲಿ ಕುಡಿಯ ಬೇಡಿಕೆ.

ಹೀಗೆ ಸಂಗ್ರಹವಾದ ತಳಿಗಳು 'ವಿಪರೀತ' ಇಲ್ಲದಿದ್ದರೂ, ಬೆಳೆಸಿದಷ್ಟೂ ಅಪರೂಪದವುಗಳು. ಹತ್ತು ಜಾತಿಯ ಹಲಸು, ಹದಿನೈದು ಕಾಡು ಮಾವು - ಅಭಿವೃದ್ಧಿಯಾಗಿವೆ. ಕೆಲವು ಫಲ ಕೊಟ್ಟಿವೆ.

ಕಾಂತಿಲ ವೆಂಕಟ್ರಮಣ ಜೋಶಿ-'ತಳಿ ಸಂಗ್ರಹ'ದಲ್ಲಿ ದೊಡ್ಡ ಹೆಸರು. 'ನಾನು ಏನನ್ನು ನೆಡುವುದಿದ್ದರೂ ಅವರು ಪಾಸ್ ಮಾಡಬೇಕು', ಶ್ಯಾಮ ಭಟ್ ಹೇಳುತ್ತಾರೆ. ಹಲಸು, ಮಾವು ಯಾವುದೇ ಇರಲಿ, ಅದರಲ್ಲಿನ ಅನುಭವಿಗಳ ಅಭಿಪ್ರಾಯ ದಾರಿದೀಪ. 'ಅದೊಂದು ಕೃಷಿ ಶಿಕ್ಷಣ' - ಶ್ಯಾಮ ಭಟ್ಟರ ದಾರಿಯಿದು.

'ಪಾಯಸ, ಬೆರಟಿಗೆ ದಳದ ಮುಂಡುಗ ಹಲಸಿನಷ್ಟು ಬೇರ್ಯಾವುದೂ ಆಗುವುದಿಲ್ಲ' ಮಾತಿನ ಮಧ್ಯೆ ಮನೆಯೊಡತಿ ಉಷಾ ಶ್ಯಾಮ ಭಟ್ ದನಿಗೂಡಿಸಿದರು. 'ನೋಡಿ. ಇದು ಸೌತೆ ಬಕ್ಕೆ. ಇದರ ದೋಸೆ ಕಾವಲಿಯಿಂದ ಪೇಪರ್ ಎದ್ದ ಹಾಗೆ ಸರಕ್ಕನೆ ಏಳುತ್ತದೆ' ಭಟ್ ಅಂದಾಗ ಬಾಯಲ್ಲಿ ನೀರೂರಿತ್ತು. ಇವರ ತೋಟದಲ್ಲೊಂದು ದಪ್ಪ, ಸಿಹಿ ಸೊಳೆಯ ಫಲ ಕೊಡುವ ಹಳೆ ಹಲಸಿನ ಮರವಿದೆ. ಇದರ ಹಪ್ಪಳ, ದೋಸೆ ರುಚಿ. 'ಗೊರಗೋಡಿ ಹಲಸು' ಅಂತಲೇ ಹೆಸರಿಟ್ಟಿದ್ದಾರೆ. ಮುತ್ಲಾಜೆ ಹಲಸು, ಜೇನುಬಕ್ಕೆ, ಮಟ್ಟಂ ಹಲಸು, ಚಂದ್ರ ಬಕ್ಕೆ ಇನ್ನಿತರ ವಿಶೇಷದವು.

ಇನ್ನು ಮಾವಿನ ಕತೆ. ಸಂಪಿಗೆ ಪರಿಮಳದ 'ಸಂಪಿಗೆ ಮಾವು', ಉಪ್ಪಿನಕಾಯಿಗೆ ಶ್ರೇಷ್ಠವಾದ 'ಭಟ್ಕಳ ಮಾವು', ಬೆಟ್ಟ ಮಾವು, ಹಳೆ ಮಾವು, ಆಟಿ ಮಾವು ವಿಶಿಷ್ಟ. ಆಟಿ ಮಾವು - ಆಷಾಢದಲ್ಲಿ ಇಳುವರಿ ಕೊಡುತ್ತದಂತೆ. 'ಪಂಬೆತ್ತಾಡಿ ಭೀಮಗುಳಿಯಿಂದ ತಂದಿದ್ದೆ. ಹಂದಿ ಕಾಟದಿಂದ ಫಲ ಕೊಟ್ಟ ಮುಂದಿನ ವರುಷವೇ ಅಳಿಯಿತು' ಎಂಬ ಬೇಸರ.

ಅಡಿಕೆ ಪತ್ರಿಕೆಯಲ್ಲಿ ಬಂದ ಮಾಹಿತಿಯಂತೆ ಸರ್ವಋತು ಹಲಸನ್ನು ಅರಿಸಿ ಬೆಂಗಳೂರಿಗೆ ಹೋಗಿದ್ದರು. ಆ ಮರ ಕೊಡಲಿಗೆ ಬಲಿಯಾಗಿತ್ತು! 'ಅಲ್ಲಿದೆ, ಇಲ್ಲಿದೆ ಅಂತ ಕೆಲವರು ಹೇಳಿದ್ದರು' ಅನ್ನುತ್ತಾರೆ. ಹುಡುಕಾಟದಲ್ಲಿದ್ದಾರೆ.

ಕುಡಿ ತರಲು ಮನೆಗಳಿಗೆ ಹೋದಾಗ 'ನಮಗೊಂದು ಗಿಡ ಮಾಡಿ ಕೊಡಿ' ಎಂಬ ಬೇಡಿಕೆ ಮುಂದಿಡುತ್ತಾರಂತೆ. ಅಂತಹವರಿಗೆ ಸ್ವತಃ ಕಸಿ ಕಟ್ಟಲು ಕಲಿಸಿ ಬರುತ್ತಾರೆ. ಹಾಗಾಗಿ ಇವರ 'ಕಸಿ ಶಿಷ್ಯರ' ಬಳಗ ದೊಡ್ಡದಿದೆ!

ಅವರ ಮುಂದಿನ ಪಯಣ - ತಿರುಪತಿ, ಕಾಂಚಿಗೆ. 'ಅಲ್ಲಿ ಬೇಕಾದಷ್ಟು ಹಲಸಿನ ತಳಿಗಳಿವೆ. ಹಣ್ಣಾಗುವ ಸಮಯಕ್ಕೆ ಅಲ್ಲಿಗೆ ಹೋಗಿ, ರುಚಿ ನೋಡಿ, ಆಯ್ಕೆಯಾದರೆ ತರಬೇಕು.'

ಗುತ್ತಿಗಾರು ಸನಿಹದ ಗೊರಗೋಡಿಗೆ ಬಂದು ಹನ್ನೊಂದು ವರುಷ. ಐವತ್ತೆಕ್ರೆ ಜಾಗ. ಅದರಲ್ಲಿ ಮೂರೆಕ್ರೆಯಲ್ಲಿ 'ಕಾಡು ಕೃಷಿ'. ಯಾವುದೇ ಮರವನ್ನು ಕಡಿದಿಲ್ಲ. ಖಾಲಿಯಿದ್ದೆಡೆ ಹಲವು ಕಾಡು ಸಸಿ ನೆಟ್ಟಿದ್ದಾರೆ. ಅರ್ಧದಷ್ಟು ಮರಗಳು ಇಲ್ಲೇ ಬೆಳೆದವುಗಳು. ನೂರಕ್ಕೂ ಮಿಕ್ಕಿದ ಜಾತಿಯ ಮರಗಳಿವೆ. 'ಇದು ಟಿಂಬರ್ಗಾಗಿ ಅಲ್ಲ' ಎಂಬ ಸ್ಪಷ್ಟನೆ.

ಶ್ಯಾಮ್ ಗೊರಗೋಡಿಗೆ ಬರುವುದಕ್ಕಿಂತ ಮುಂಚೆ ಸುತ್ತಲಿನ ಕಾಡಲ್ಲಿ ದೊಡ್ಡದೊಡ್ಡ ಮರಗಳಿದ್ದುವು. ಅವೆಲ್ಲಾ ಈಗ ಮಾಯ. ಉಳಿದವೂ ಕಣ್ಮರೆಯಾಗುತ್ತಿವೆ! 'ಎಂತೆಂತಾ ಮರಗಳನ್ನು ಕಳೆದುಕೊಂಡೆವು ' ಎಂದು ವಿಷಾದಿಸುತ್ತಾರೆ.

ಐವತ್ತಕ್ಕೂ ಮಿಕ್ಕಿ ಔಷಧೀಯ ಗಿಡಗಳು, ಮೂವತ್ತರ ಹತ್ತಿರ ಹಣ್ಣಿನ ಗಿಡಗಳು. ಏಳು ಜಾತಿಯ ನಿಂಬೆ. ಇವುಗಳ ಕತೆ ಹೇಳುವುದು ಶ್ಯಾಮ ಭಟ್ಟರಿಗೆ ಇಷ್ಟದ ಸಂಗತಿ. 'ನೋಡಿ. ಇದು ಸ್ಥಳೀಯ ಅಂಬಟೆ ಮರ. ಇದಕ್ಕೆ ಬೀಜರಹಿತ (ಸೀಡ್ಲೆಸ್) ಅಂಬಟೆಯನ್ನು ಕಸಿ ಮಾಡಿದ್ದೆ. ಎಂತಹ ರುಚಿ. ತೋಟ ಇರುವವರು ನಾವೇ ಮಾಡಬಹುದು. ಪೇಟೆಯಿಂದ ತರಬೇಕಾಗಿಲ್ಲ' ಅನುಭವಿಸಿದ ಮಾತು.

ಶ್ಯಾಮ ಭಟ್ಟರ ತಳಿ ಸಂಗ್ರಹ ಕಾಯಕಕ್ಕೆ ವಿಶ್ರಾಂತಿಯಿಲ್ಲ. ಹುಮ್ಮಸ್ಸು ಕುಗ್ಗಿಲ್ಲ. ಮೂಲತಃ ಕಲ್ಮಡ್ಕದವರಾದ ಶ್ಯಾಮ್, ಮಹಾರಾಷ್ಟ್ರದಲ್ಲಿ ಎಂಎಸ್ಡಬ್ಲ್ಯೂ ಶಿಕ್ಷಣ ಮುಗಿಸಿದಾಗ ಉದ್ಯೋಗ ಕಾದಿತ್ತು. ವರ್ಷಗಳಲ್ಲೇ ಮಾವನ ಕೃಷಿ ಭೂಮಿ ಕೈ ಬೀಸಿ ಕರೆಯಿತು. ಉದ್ಯೋಗ ಬಿಟ್ಟು ಪ್ರೀತಿಯಿಂದ ತೋಟಕ್ಕೇರಿದರು.


ಕೆ. ಶ್ಯಾಮ ಭಟ್, ಗೊರಗೋಡಿ ಮನೆ, ಅಂಚೆ : ಗುತ್ತಿಗಾರು, ಸುಳ್ಯ ತಾಲೂಕು - 574 218 ದ.ಕ.
ದೂರವಾಣಿ : 08257-282 420, 94492 68691

0 comments:

Post a Comment