Thursday, December 26, 2013

ವಾರಣಾಶಿ ಸುಬ್ರಾಯ ಭಟ್ ವಿಧಿವಶ


ಕ್ಯಾಂಪ್ಕೋ ಸ್ಥಾಪಕಾಧ್ಯಕ್ಷ ವಾರಣಾಶಿ ಸುಬ್ರಾಯ ಭಟ್ (87) ಇಂದು ಮುಂಜಾನೆ ವಿಧಿವಶರಾದರು. 70ರ ದಶಕದ ಆದಿಯಲ್ಲಿ ಅಡಿಕೆ ಮಾರುಕಟ್ಟೆ ಮತ್ತು ಅಡಿಕೆ ಕೃಷಿಕರು ಕಂಗೆಟ್ಟಾಗ ಕ್ಯಾಂಪ್ಕೋ ಸ್ಥಾಪನೆ. ಬಳಿಕ ಅಡಿಕೆ ಜತೆ ಕೊಕ್ಕೋ ಬೆಳೆಸಿ ಎಂದ ಭಟ್, 1986 ಸೆಪ್ಟೆಂಬರಿನಲ್ಲಿ ಪುತ್ತೂರು ಕೊಕ್ಕೋ ಚಾಕಲೇಟ್ ಫ್ಯಾಕ್ಟರಿ ಸ್ಥಾಪನೆ. ಸುಮಾರು ಹದಿನೇಳು ವರುಷ ಕ್ಯಾಂಪ್ಕೋವನ್ನು ಸುಬ್ರಾಯ ಭಟ್ಟರು ಮುನ್ನಡೆಸಿದ್ದರು. ಕಷ್ಟ-ಸುಖ, ಮಾನ-ಅಪಮಾನ, ಹೊಗಳಿಕೆ-ತೆಗಳಿಕೆಗಳನ್ನು ಸಮಭಾವದಿಂದ ಸ್ವೀಕರಿಸಿ, ಅಡಿಕೆ ಬೆಳೆಗಾರರ ಹಿತಕ್ಕಾಗಿ ಕಟ್ಟಿದ ಕ್ಯಾಂಪ್ಕೋ ಸಂಸ್ಥೆ ಇಂದು ರಾಷ್ಟ್ರ ಮಟ್ಟದ ಸಂಸ್ಥೆಯಾಗಿದೆ. ಭಟ್ಟರ ಕಲ್ಪನೆಯ ಸಂಸ್ಥೆಯು ತ್ರಿವಿಕ್ರಮನಾಗಿ ಬೆಳೆದುದರಲ್ಲಿ ಅವರಿಗೆ ಖುಷಿಯಿತ್ತು. ಅಗಲಿನ ಸುಬ್ರಾಯ ಭಟ್ಟರಿಗೆ ನುಡಿ ನಮನ.

Monday, December 16, 2013

ಗದ್ದೆಯಲ್ಲಿ ಮಣ್ಣಿನ ಪಾಠ


                ಎಷ್ಟೋ ಸಲ ಅನ್ನಿಸುತ್ತದೆ, ಶಾಲೆಯ ಅಧ್ಯಾಪಕರ ಆಸಕ್ತಿ, ಅನುಭವ ಮತ್ತು ಪ್ರಜ್ಞೆಗಳ ಗಾಢತೆಯನ್ನು ಹೊಂದಿಕೊಂಡು ಮಕ್ಕಳ ಬದುಕು ವಿಕಾಸವಾಗುತ್ತದೆ. ಅಧ್ಯಾಪಕರು ಪಠ್ಯೇತರವಾಗಿ ನಿರ್ಲಿಪ್ತರಾದರೆ ವಿದ್ಯಾರ್ಥಿಗಳು ಪುಸ್ತಕದ ಹುಳುಗಳಾಗುತ್ತಾರೆ. ಅಂಕಪಟ್ಟಿಯಲ್ಲಿ ನೂರಕ್ಕೆ ನೂರು ಅಂಕ ಸಿಕ್ಕಿರಬಹುದು. ವಿದ್ಯಾರ್ಥಿಯ ಬೌದ್ಧಿಕ ಗಟ್ಟಿತನಕ್ಕೆ ಇದು ಮಾನದಂಡವಲ್ಲ.

                  ಶೈಕ್ಷಣಿಕ ವಿಚಾರ ಬಂದಾಗ ಎಲ್ಲವೂ ನಗರ ಕೇಂದ್ರಿತ ವ್ಯವಸ್ಥೆ. ಆ ವ್ಯವಸ್ಥೆಯ ಕೂಪದೊಳಗೆ ಎಲ್ಲಾ ಶೈಕ್ಷಣಿಕ ವಿಚಾರಗಳನ್ನು ಕೂಡುವ ಯತ್ನ. ಹಾಗಾಗಿಯೇ ನೋಡಿ, ಅಧ್ಯಾಪಕರು ಪಾಠ ಮಾಡದಿದ್ದರೂ ಚಿಂತೆಯಿಲ್ಲ, ಬಿಸಿಯೂಟದ ಲೆಕ್ಕ ಮಾತ್ರ ಬರೆದಿಡಲೇ ಬೇಕು, ಸೈಕಲ್ಗಳ ಬ್ಯಾಲೆನ್ಸ್ಶೀಟ್ ತಯಾರಿಸಲೇಬೇಕು!

                 ಸುಳ್ಯಪದವು ಸರ್ವೋದಯ ಪೌಢ ಶಾಲೆಯ ವಿದ್ಯಾರ್ಥಿಗಳು 'ಗದ್ದೆಯಲ್ಲೊಂದು ದಿನ' ಎನ್ನುವ ವಿಶಿಷ್ಟವಾದ ಕಾರ್ಯಕ್ರಮವನ್ನು ಹಮ್ಮಿಕೊಂಡಾಗ, 'ಪುರುಸೊತ್ತಿಲ್ಲ, ಯಾರಿಗೆ ಬೇಕು' ಎನ್ನುವ ನನ್ನ ಅಧ್ಯಾಪಕ ಸ್ನೇಹಿತರ  ಗೊಣಗಾಟದ ಮಾತುಗಳು ನೆನಪಾದುವು. ಎಲ್ಲಾ ಅಧ್ಯಾಪಕರಂತೆ ಸುಳ್ಯಪದವು ಶಾಲೆಯ ಅಧ್ಯಾಪಕರಿದ್ದಾರೆ. ಅವರಿಗೂ ಮೀಟಿಂಗ್, ಬಿಸಿಯೂಟ.. ಗಳ ಲೆಕ್ಕಾಚಾರಗಳಿವೆ. ಆದರೆ ಪಠ್ಯೇತರವಾಗಿ ಹೆಚ್ಚು ತೊಡಗಿಸಿಕೊಂಡು, ವಿದ್ಯಾರ್ಥಿಗಳನ್ನೂ ಬೌದ್ಧಿಕವಾಗಿ ಗಟ್ಟಿಮಾಡುವ ಪುರುಸೊತ್ತು ಅವರಿಗೆ ಹೇಗೆ ಬಂತು?

                     ಹಳ್ಳಿ, ಕೃಷಿ, ಗ್ರಾಮೀಣ ವಿಚಾರಗಳು ಮಾತಿನ ವಸ್ತುವಾಗಿದೆಯಷ್ಟೇ. ರಾಜಕೀಯ ಕ್ಷೇತ್ರದಲ್ಲಿ ಕೃಷಿ ಒಂದು ಐಕಾನ್ ಅಷ್ಟೇ. ಗ್ರಾಮೀಣಾಭಿವೃದ್ಧಿಯ ನೈಜ ಕಾಳಜಿ ಬೇಕಾಗಿಲ್ಲ. ಆದರೆ ಮಣ್ಣಿನಲ್ಲೇ ಬೆರೆತು, ಕೃಷಿ ಸಂಸ್ಕೃತಿಯನ್ನು ರೂಢಿಸಿಕೊಂಡ ಅಧ್ಯಾಪಕರು ತಮ್ಮ ವಿದ್ಯಾರ್ಥಿಗಳಲ್ಲೂ ಅಂತಹ ಸಂಸ್ಕೃತಿಯನ್ನು ಕಾಣುತ್ತಾರೆ. ಹಾಗಾಗಿಯೇ ನೋಡಿ, ಕೆಲವೊಂದು ಖಾಸಗಿ, ಸರಕಾರಿ ಶಾಲೆಗಳಲ್ಲೂ ಕೃಷಿ, ಗ್ರಾಮೀಣ ಪಾಠಗಳು ಜೀವಂತವಾಗಿರುತ್ತದೆ. ಈ ಶಾಲೆಯ ವಿದ್ಯಾರ್ಥಿಗಳಿಗೆ ಗೊತ್ತು, 'ಅಡಿಕೆಯು ಮರದಲ್ಲಿ ಆಗುತ್ತದೆ, ಶುಂಠಿ ಮಣ್ಣಿನೊಳಗೆ ಬೆಳೆಯುತ್ತದೆ..'!

                    ಸುಳ್ಯಪದವು ಶಾಲೆಯ ವಿದ್ಯಾರ್ಥಿಗಳು 'ಗದ್ದೆಯಲ್ಲೊಂದು ದಿನ'ದಲ್ಲಿ ಕೆಸರಿಗಿಳಿದರು, ಆಟವಾಡಿದರು, ಬಿದ್ದರು, ಹೊರಳಾಡಿದರು, ಕೇಕೇ ಹಾಕಿ ಮನದಣೀಯ ಖುಷಿ ಪಟ್ಟರು. ಖುಷಿ, ನೆಮ್ಮದಿಗಳನ್ನು ಹುಡುಕುವ ನಮಗೆ ಮನದಣೀಯ ನಗಲು, ಬಾಯಿ ತುಂಬಾ ಮಾತನಾಡಲು ಪುರುಸೊತ್ತಿಲ್ಲ. ಮಕ್ಕಳ ಖುಷಿಗೆ ಶೈಕ್ಷಣಿಕ ವ್ಯವಸ್ಥೆಗಳು ಅಡ್ಡಿಯಾಗಿವೆ. ಪಠ್ಯಗಳು ಬದುಕಿಗೆ ಬೇಕಾದುದನ್ನು ಹೇಳಿಕೊಡುತ್ತಿಲ್ಲ. ಪಠ್ಯಗಳಲ್ಲಿ ಕೃಷಿ, ಗ್ರಾಮೀಣ ವಿಚಾರಗಳ ಸೊಲ್ಲಿಲ್ಲ. ಗದ್ದೆ ಯಾವುದು, ನೇಜಿ ಯಾವುದು, ಭತ್ತ ಯಾವುದರಿಂದ ಬೆಳೆಯುತ್ತಾರೆ ಮೊದಲಾದ ಪ್ರಶ್ನೆಗಳಿಗೆ ವಿದ್ಯಾರ್ಥಿಗಳದು ಮೌನವೇ ಉತ್ತರ.  

                   ಸರ್ವೋದಯ ಪ್ರೌಢ ಶಾಲೆಯ ವಿದ್ಯಾರ್ಥಿಗಳು ಇಂದಾಜೆ-ಪೈರುಪುಣಿ ನಾರಾಯಣ ಭಟ್ಟರ ಗದ್ದೆಯಲ್ಲಂದು ಕೆಸರು ಗದ್ದೆಗೆ ಇಳಿದರು. ಭತ್ತದ ನೇಜಿ ನೆಟ್ಟರು. ವಿದ್ಯಾರ್ಥಿಗಳಿಗೆ ಹಿರಿಯರಿಂದ ನೇರ ಪಾಠ. ಶಾಲೆಯು ಮೂರು ವರುಷಗಳಿಂದ ಇಂತಹ ಶಿಕ್ಷಣವನ್ನು ಮಕ್ಕಳಿಗೆ ಕಲಿಸುತ್ತದೆ. ಇಲ್ಲಿ ಕಲಿತವರು ಮುಂದಿನ ವಿದ್ಯಾಭ್ಯಾಸಕ್ಕಾಗಿ ನಗರ ಸೇರುತ್ತಾರೆ. ನಗರ ಸಂಸ್ಕೃತಿಯು ಅವರನ್ನು ನುಂಗಿ ಬಿಡುವ ಮೊದಲೇ ಹಳ್ಳಿ ಸಂಸ್ಕೃತಿ ಮಕ್ಕಳಿಗೆ ಮನದಟ್ಟಾಗಬೇಕು ಎನ್ನುವ  ಉದ್ದೇಶ ಎನ್ನುತ್ತಾರೆ ಶಾಲೆಯ ಮುಖ್ಯ ಗುರು ಶಿವರಾಮ ಹೆಚ್.ಡಿ. ಮೂಲತಃ ಇವರು ಕೃಷಿಕರು. ಹಾಗಾಗಿಯೇ ನೋಡಿ, ವಿದ್ಯಾರ್ಥಿಗಳಿಗೂ ಕೃಷಿ, ಗ್ರಾಮೀಣ ವಿಚಾರಗಳು ತಿಳಿಯಬೇಕೆನ್ನುವ ದೂರದೃಷ್ಟಿ.

    ಮಂಗಳೂರಿನ ವಿಜಯ ಗ್ರಾಮೀಣ ಪ್ರತಿಷ್ಠಾನ, ಈಶ್ವರಮಂಗಲ ವಿಜಯಾ ಬ್ಯಾಂಕ್, ಗ್ರಾಮಾಭಿವೃದ್ಧಿ ಸಮಿತಿಯ ಆಯೋಜನೆ. ನೇಜಿ ನೆಟ್ಟಾಯಿತು, ಪೈರನ್ನು ಕಟಾವ್ ಮಾಡುವ ವಿಧಾನ ಮಕ್ಕಳಿಗೆ ಕಲಿಸುವ ಯೋಚನೆ ಶಾಲೆಗಿದೆ. ಕಟಾವ್ ಆಗುವ ಹೊತ್ತಿಗೆ ವಿದ್ಯಾಥರ್ಿಗಳಿಗೆ ಪರೀಕ್ಷಾ ಒತ್ತಡ. ಆದರೂ ಈ ಶಿಕ್ಷಣದಿಂದ ಮಕ್ಕಳನ್ನು ವಂಚಿತರನ್ನಾಗಿ ಮಾಡುವುದಿಲ್ಲ ಎನ್ನುತ್ತಾರೆ ಶಾಲೆಯ ವರಿಷ್ಠ ಹಾಗೂ ಗ್ರಾಮಾಭಿವೃದ್ಧಿ ಸಮಿತಿಯ ಮುಖ್ಯಸ್ಥ ಗೋವಿಂದ ಭಟ್. ಎರಡು ವರುಷದ ಹಿಂದೆ ಸುಳ್ಯ ಸನಿಹದ ಪೆರಾಜೆ ಕುಂಬಳಚೇರಿ ಸರಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಭತ್ತದ ಬೇಸಾಯದ ಶಿಕ್ಷಣ ನಡೆದಿತ್ತು. ಭತ್ತ ಕಟಾವ್, ನೇಜಿಯನ್ನು ಕಟ್ಟ (ಸೂಡಿ) ಕಟ್ಟುವ ರೀತಿ, ಭತ್ತವನ್ನು ಬೇರ್ಪಡಿಸುವುದು, ಕುಟ್ಟುವುದು.. ಹೀಗೆ ಕಲಾಪ ನಡೆದಿತ್ತು.  ಅಲ್ಲೋ ಇಲ್ಲೋ ಕೆಲವು ಶಾಲೆಗಳಲ್ಲಿ ಇಂತಹ ನೇರ ಶಿಕ್ಷಣದ ಯತ್ನ ಆಗುತ್ತಿದೆ.
                
                     ಸ್ಕೂಲ್ ಡೇ, ಕ್ರೀಡೆ, ಪ್ರವಾಸ.. ಮೊದಲಾದ ವಿಚಾರಗಳಿಗೆ ಎಷ್ಟೊಂದು ಸಮಯ ವಿನಿಯೋಗವಾಗುವುದಿಲ್ಲ? ಇದರ ಜತೆಗೆ ಕೃಷಿ, ಗ್ರಾಮೀಣ ವಿಚಾರಗಳ ಪಠ್ಯೇತರ ಚಟುವಟಿಕೆಗಳಿಗೂ ಸಮಯ ಮೀಸಲಿಡುವ ಪರಿಪಾಠ ರೂಢಿಸಿಕೊಳ್ಳಬೇಕು. ಇದೆಲ್ಲಾ ಸರಕಾರಿ ಕಾನೂನುಗಳಿಂದ ಆಗುವಂತಹುದಲ್ಲ. ವಾರಕ್ಕೊಮ್ಮೆ ಒಂದು ಅವಧಿಯು ಕೃಷಿ ವಿಚಾರಗಳಿಗೆ ಸೀಮಿತವಾಗಿರಲಿ. ಸಂಪನ್ಮೂಲ ವ್ಯಕ್ತಿಗಳಿಂದ ವಿದ್ಯಾರ್ಥಿಗಳಿಗೆ ಕೃಷಿ ಅನುಭವ, ವಿಚಾರಗಳನ್ನು ಹೇಳುವ ವ್ಯವಸ್ಥೆ ಮಾಡಿಕೊಳ್ಳಬಹುದು. ಕೃಷಿ ಕ್ಷೇತ್ರಗಳಿಗೆ ಪ್ರವಾಸಗಳನ್ನು ಹಮ್ಮಿಕೊಳ್ಳಬಹುದು. ಅನುಭವಿ ಕೃಷಿಕರೊಂದಿಗೆ ಸಂದರ್ಶನ ಮಾಡಿಸಬಹುದು. ಈಗಾಗಲೇ ಬಂಟ್ವಾಳ ತಾಲೂಕಿನ ಕಲ್ಲಂಗಳ ಸರಕಾರಿ ಶಾಲೆಯು ಈ ದಿಸೆಯಲ್ಲಿ ಸಕ್ರಿಯವಾಗಿರುವುದು ಗುರುತರ.

                      'ಅವನು ಬಸವ, ಇವಳು ಕಮಲ..' ಎನ್ನುವ ಪಠ್ಯದಲ್ಲಿ ಬೆಳೆದ ವಿದ್ಯಾರ್ಥಿಗಳು ಸದೃಢವಾದ ಬದುಕನ್ನು ಹೊಂದಿರುವುದನ್ನು ಕಾಣುತ್ತೇವೆ. ಆದರೆ ಆಧುನಿಕ ಭಾರತಕ್ಕೆ ಈ ಪಠ್ಯ ಢಾಳಾಗಿ ಕಂಡಿರುವುದು ಕಾಲದ ದೋಷವಲ್ಲ, ಅದನ್ನು ಕಾಣುವ ಕಣ್ಣಿನ, ಮನಸ್ಸಿನ ದೋಷ, ಎಲ್ಲವನ್ನೂ ಮತೀಯ, ರಾಜಕೀಯ ನೋಟದಿಂದಲೇ ನೋಡುವ ಮನಸ್ಸುಗಳನ್ನು ರೂಪುಗೊಳಿಸುವ ಅಜ್ಞಾತ ವ್ಯವಸ್ಥೆ ಎಲ್ಲಿಯವರೆಗೂ ನಮ್ಮಲ್ಲಿರುತ್ತದೋ, ಅಲ್ಲಿಯ ವರೆಗೆ ಬೌದ್ಧಿಕ ಗಟ್ಟಿತನಕ್ಕೆ ಸಹಕಾರಿಯಾಗುವ ಯಾವುದೇ ಪಠ್ಯ ರಚನೆಯಾಗುವುದಿಲ್ಲ!


Wednesday, December 4, 2013

'ಅಕ್ಕಿ ಖರೀದಿಗೆ ಶಾಶ್ವತ ರಜೆ'
                 'ನಾವೇ ಬೆಳೆದ ಅಕ್ಕಿಯನ್ನು ಉಣ್ಣುವುದು ಅಭಿಮಾನ. ಈಗಿನ ಮಾರುಕಟ್ಟೆ ಮತ್ತು ಅಕ್ಕಿಯ ಉತ್ಪಾದನೆಯ ಸ್ಥಿತಿಗತಿಗಳನ್ನು ಗಮನಿಸಿದಾಗ ಭವಿಷ್ಯದಲ್ಲಿ ಅಕ್ಕಿಯ ವಿಚಾರದಲ್ಲಿ ನಾವು ಪರಾವಲಂಬಿಯಾಗುವುದಂತೂ ಖಂಡಿತ' ಎನ್ನುವ ಕೃಷಿಕ ಮಣಿಲ ಮಹಾದೇವ ಶಾಸ್ತ್ರಿ (54), 'ಕಳೆದ ನಾಲ್ಕು ವರುಷದಿಂದ ನಾವು ಮಾರುಕಟ್ಟೆಯಿಂದ ಅಕ್ಕಿ ತಂದಿಲ್ಲ. ನಾವೇ ಬೆಳೆಯುತ್ತೇವೆ' ಎಂದು ಖುಷಿ ಪಡುತ್ತಾರೆ.

                  ಪುತ್ತೂರಿನಿಂದ ಹದಿನೆಂಟು ಕಿಲೋಮೀಟರ್ ದೂರದ ನಿಡ್ಪಳ್ಳಿಯಲ್ಲಿದೆ ಅವರ ಅಡಿಕೆ ತೋಟ. ಅಡಿಕೆಯನ್ನು ಒಣಗಿಸಲು ದೊಡ್ಡ ಅಂಗಳ ಬಹುತೇಕ ಕೃಷಿಕರಲ್ಲಿದೆ. ಮಳೆಗಾಲದಲ್ಲಿ ಕೆಲವರು ಅಡಿಕೆ ಅಂಗಳದಲ್ಲಿ ತರಕಾರಿ, ಭತ್ತ ಕೃಷಿ ಮಾಡುತ್ತಾರೆ. ಶಾಸ್ತ್ರಿಯವರು ಅಡಿಕೆ ಅಂಗಳವೂ ಸೇರಿದಂತೆ ಎಪ್ಪತ್ತು ಸೆಂಟ್ಸ್ ಜಾಗದಲ್ಲಿ ಐದು ವರುಷದಿಂದ ಭತ್ತದ ಬೇಸಾಯ ಮಾಡುತ್ತಿದ್ದಾರೆ.

                  ವರುಷಕ್ಕೆ ಎರಡು ಬೆಳೆ. ಸುಮಾರು ಹತ್ತು ಕ್ವಿಂಟಾಲ್ ಅಕ್ಕಿ ಸಿಗುತ್ತಿದೆ. ಈ ವರುಷ ಇನ್ನೂ ಜಾಸ್ತಿಯಾಗಬಹುದೆಂಬ ನಿರೀಕ್ಷೆ. ಬೇಸಾಯಕ್ಕೆ 'ಎಂಒ4' ತಳಿ. ಹಟ್ಟಿಗೊಬ್ಬರ, ಸ್ಲರಿ ಮುಖ್ಯ ಗೊಬ್ಬರ. ಸಸಿಯಾಗಿದ್ದಾಗ ಒಮ್ಮೆ ರಾಸಾಯನಿಕ ಗೊಬ್ಬರ ಉಣಿಕೆ.

                 ಪವರ್ ಟಿಲ್ಲರಿನಲ್ಲಿ ಹೂಟೆ ಮಾಡುವಾಗಲೇ ಸ್ಲರಿಯಿಂದ ಮಣ್ಣನ್ನು ತೋಯಿಸಿದರೆ ಸಸಿಯ ಬೆಳವಣಿಗೆ ಕ್ಷಿಪ್ರವಾಗುತ್ತದೆ. ಸ್ಲರಿಯನ್ನು ನಿಲ್ಲಿಸಿ ಸಸಿ ನೆಟ್ಟರೆ ಗಿಡ ಸೊಕ್ಕುತ್ತದೆ. ಭತ್ತದ ಸಸಿ ಸೊಕ್ಕಿದರೆ ಇಳುವರಿಯಲ್ಲಿ ಗಣನೀಯವಾಗಿ ಇಳಿತ ಕಂಡುಬರುತ್ತದೆ - ಭತ್ತ ಕಲಿಸಿದ ಅನುಭವ. ಹಿಂದಿನ ವರುಷ ಬೆಂಕಿ ರೋಗ ಬಂದು ಇಳುವರಿ ಕಡಿಮೆಯಾಗಿತ್ತು.
ಭತ್ತವು ಅವಲಂಬನಾ ಕೃಷಿಯಾದ್ದರಿಂದ ಮುಖ್ಯವಾಗಿ ನೇಜಿ (ಸಸಿ) ನೆಡಲು, ಕಟಾವ್ ಮಾಡಲು ಸಹಾಯಕರು ಬೇಕು. ಸಕಾಲಕ್ಕೆ ಕೊಯ್ಲು ಕೆಲಸ ಆಗದಿದ್ದರೆ ತೆನೆ ಗದ್ದೆಯಲ್ಲೇ ಉಳಿದು ಬಿಡುತ್ತದೆ. ಇದರಿಂದಾಗುವ ನಷ್ಟವನ್ನು ತಪ್ಪಿಸಲು ಕಟಾವ್ ಯಂತ್ರದ ಮೂಲಕ ತೆನೆಯ ಕಟಾವ್ ಮಾಡಿಸಿಕೊಂಡಿದ್ದಾರೆ.

                   ಎಪ್ಪತ್ತು ಸೆಂಟ್ಸ್ ಗದ್ದೆಯನ್ನು ಮೂರು ಗಂಟೆಯಲ್ಲಿ ಕಟಾವ್ ಯಂತ್ರ ಕಟಾವ್ ಮಾಡಿದೆ. ಒಂದು ಗಂಟೆಗೆ ನಾಲ್ಕುನೂರ ಐವತ್ತು ರೂಪಾಯಿ ಬಾಡಿಗೆ. ಹದಿನೈದು ಮಂದಿ ಮಾಡುವ ಕೆಲಸವನ್ನು ಯಂತ್ರವು ಮೂರೇ ಗಂಟೆಯಲ್ಲಿ ಪೂರೈಸಿದೆ ಎಂಬ ಲೆಕ್ಕವನ್ನು ಮುಂದಿಡುತ್ತಾರೆ. ಯಂತ್ರವು ಸಸಿಯ ಬುಡವನ್ನು ಕತ್ತರಿಸುತ್ತಾ ಸಾಗುತ್ತದೆ. ಇನ್ನೊಂದು ಬದಿಯಲ್ಲಿ ಕತ್ತರಿಸಿದ ತೆನೆಗಳೆಲ್ಲಾ ಒಂದು ಬದಿಯಲ್ಲಿ ಪೇರಿಸುತ್ತಾ ಸಾಗುತ್ತದೆ. ಇದನ್ನು ಮತ್ತೆ ಜೋಡಿಸಿ ಅಂಗಳಕ್ಕೆ ಸಾಗಿಸಿದರಾಯಿತು.

                        ಯಂತ್ರದ ಮೂಲಕ ಕಟಾವ್ ಮಾಡುವಾಗ ಒಂದೆರಡು ಅಂಶವನ್ನು ಗಮನಿಸಬೇಕು. ಕಟಾವ್ ಮಾಡುವ ಮೂರು ದಿವಸದಿಂದ ಗದ್ದೆಯ ನೀರನ್ನು ಖಾಲಿ ಮಾಡಿ ಸಾಧ್ಯವಾದಷ್ಟು ಡ್ರೈ ಆಗಿರುವಂತೆ ನೋಡಿಕೊಳ್ಳಬೇಕು. ಸಸಿಗಳು ಬಾಗಿಕೊಂಡಿದ್ದರೆ ಯಂತ್ರಕ್ಕೆ ಕಟಾವ್ ಕಷ್ಟ. ಯಂತ್ರ ಚಲಿಸಲು ಅನುಕೂಲವಾಗಲು ಗದ್ದೆಯ ಸುತ್ತ ಎರಡೂವರೆ ಅಡಿ ಜಾಗದಷ್ಟು ಕೈಯಲ್ಲೇ ಕಟಾವ್ ಮಾಡಿಡಬೇಕು.

                         ಶಾಸ್ತ್ರಿಗಳು ವಿದ್ಯಾರ್ಥಿಯಾಗಿದ್ದಾಗಲೇ ಭತ್ತದ ಕೃಷಿಯತ್ತ ಒಲವು. ಹಟ್ಟಿ ತುಂಬ ಪಶು ಸಂಸಾರ. ಯಥೇಷ್ಟ ಸ್ಲರಿ, ಹಟ್ಟಿಗೊಬ್ಬರ. 'ಭತ್ತದ ಕೃಷಿಯಿಂದ ಎದ್ದು ಕಾಣುವ ಲಾಭವೆಂದರೆ ಅದರ ಒಣಹುಲ್ಲು. ಇದು ದನಗಳಿಗೆ ಆಹಾರ' ಎನ್ನುತ್ತಾರೆ.   ಮೂರು ಪ್ಲಾಟ್ಗಳಲ್ಲಿ ಭತ್ತದ ಕೃಷಿ ಹಂಚಿ ಹೋಗಿದೆ. ಭತ್ತದ ಒಂದು ಬೆಳೆಯಾದ ತಕ್ಷಣ ಒಂದು ಪ್ಲಾಟಿನಲ್ಲಿ ಕುಂಬಳ ಕೃಷಿ. ನಮಗೆ ಬೇಕಾದ ತರಕಾರಿಯನ್ನು ನಾವೇ ಬೆಳೆಯುತ್ತೇವೆ.  ಕಳೆದ ವರುಷ ಕುಂಬಳ (ಬೂದುಗುಂಬಳ) ಬೆಳೆದಿದ್ದೇವೆ. ಬೆಳೆ ಚೆನ್ನಾಗಿತ್ತು. ಮಾರುಕಟ್ಟೆಯಲ್ಲಿ ದರ ಅಷ್ಟಕ್ಕಷ್ಟೇ. ಖರ್ಚು ಅಲ್ಲಿಂದಲ್ಲಿಗೆ ಸರಿಯೋಯಿತು. ಈ ವರುಷ ಕುಂಬಳ ಕೃಷಿಯ ಜಾಗವನ್ನು ವಿಸ್ತರಿಸುತ್ತಿದ್ದೇವೆ ಹೊಸ ಸುಳಿವನ್ನು ನೀಡಿದರು, ರಾಜೇಶ್ವರಿ ಶಾಸ್ತ್ರಿ. ಗಂಡನ ಅನುಪಸ್ಥಿತಿಯಲ್ಲಿ ಕೃಷಿಯನ್ನು ನಿಭಾಯಿಸುತ್ತಾರೆ.

                  ಮಹಾದೇವ ಶಾಸ್ತ್ರಿಯವರು ಕೃಷಿಯೊಂದಿಗೆ ವಿದ್ಯುತ್ ಗುತ್ತಿಗೆದಾರ ವೃತ್ತಿಯಲ್ಲಿ ಮೂವತ್ತಮೂರು ವರುಷದ ಅನುಭವ. ಜತೆಗೆ ವಿದ್ಯಾಸಂಸ್ಥೆಗಳು, ಸಾರ್ವಜನಿಕ ಸಂಸ್ಥೆಗಳಲ್ಲಿ ವಿವಿಧ ಹುದ್ದೆಗಳ ನಿಭಾವಣೆ. ಕೃಷಿ ಆಗುಹೋಗುಗಳು, ಹೊಸ ಕೃಷಿ, ತರಕಾರಿ, ಹಣ್ಣುಗಳತ್ತ ಆಸಕ್ತ.
 (94481 52824)