Wednesday, December 4, 2013

'ಅಕ್ಕಿ ಖರೀದಿಗೆ ಶಾಶ್ವತ ರಜೆ'
                 'ನಾವೇ ಬೆಳೆದ ಅಕ್ಕಿಯನ್ನು ಉಣ್ಣುವುದು ಅಭಿಮಾನ. ಈಗಿನ ಮಾರುಕಟ್ಟೆ ಮತ್ತು ಅಕ್ಕಿಯ ಉತ್ಪಾದನೆಯ ಸ್ಥಿತಿಗತಿಗಳನ್ನು ಗಮನಿಸಿದಾಗ ಭವಿಷ್ಯದಲ್ಲಿ ಅಕ್ಕಿಯ ವಿಚಾರದಲ್ಲಿ ನಾವು ಪರಾವಲಂಬಿಯಾಗುವುದಂತೂ ಖಂಡಿತ' ಎನ್ನುವ ಕೃಷಿಕ ಮಣಿಲ ಮಹಾದೇವ ಶಾಸ್ತ್ರಿ (54), 'ಕಳೆದ ನಾಲ್ಕು ವರುಷದಿಂದ ನಾವು ಮಾರುಕಟ್ಟೆಯಿಂದ ಅಕ್ಕಿ ತಂದಿಲ್ಲ. ನಾವೇ ಬೆಳೆಯುತ್ತೇವೆ' ಎಂದು ಖುಷಿ ಪಡುತ್ತಾರೆ.

                  ಪುತ್ತೂರಿನಿಂದ ಹದಿನೆಂಟು ಕಿಲೋಮೀಟರ್ ದೂರದ ನಿಡ್ಪಳ್ಳಿಯಲ್ಲಿದೆ ಅವರ ಅಡಿಕೆ ತೋಟ. ಅಡಿಕೆಯನ್ನು ಒಣಗಿಸಲು ದೊಡ್ಡ ಅಂಗಳ ಬಹುತೇಕ ಕೃಷಿಕರಲ್ಲಿದೆ. ಮಳೆಗಾಲದಲ್ಲಿ ಕೆಲವರು ಅಡಿಕೆ ಅಂಗಳದಲ್ಲಿ ತರಕಾರಿ, ಭತ್ತ ಕೃಷಿ ಮಾಡುತ್ತಾರೆ. ಶಾಸ್ತ್ರಿಯವರು ಅಡಿಕೆ ಅಂಗಳವೂ ಸೇರಿದಂತೆ ಎಪ್ಪತ್ತು ಸೆಂಟ್ಸ್ ಜಾಗದಲ್ಲಿ ಐದು ವರುಷದಿಂದ ಭತ್ತದ ಬೇಸಾಯ ಮಾಡುತ್ತಿದ್ದಾರೆ.

                  ವರುಷಕ್ಕೆ ಎರಡು ಬೆಳೆ. ಸುಮಾರು ಹತ್ತು ಕ್ವಿಂಟಾಲ್ ಅಕ್ಕಿ ಸಿಗುತ್ತಿದೆ. ಈ ವರುಷ ಇನ್ನೂ ಜಾಸ್ತಿಯಾಗಬಹುದೆಂಬ ನಿರೀಕ್ಷೆ. ಬೇಸಾಯಕ್ಕೆ 'ಎಂಒ4' ತಳಿ. ಹಟ್ಟಿಗೊಬ್ಬರ, ಸ್ಲರಿ ಮುಖ್ಯ ಗೊಬ್ಬರ. ಸಸಿಯಾಗಿದ್ದಾಗ ಒಮ್ಮೆ ರಾಸಾಯನಿಕ ಗೊಬ್ಬರ ಉಣಿಕೆ.

                 ಪವರ್ ಟಿಲ್ಲರಿನಲ್ಲಿ ಹೂಟೆ ಮಾಡುವಾಗಲೇ ಸ್ಲರಿಯಿಂದ ಮಣ್ಣನ್ನು ತೋಯಿಸಿದರೆ ಸಸಿಯ ಬೆಳವಣಿಗೆ ಕ್ಷಿಪ್ರವಾಗುತ್ತದೆ. ಸ್ಲರಿಯನ್ನು ನಿಲ್ಲಿಸಿ ಸಸಿ ನೆಟ್ಟರೆ ಗಿಡ ಸೊಕ್ಕುತ್ತದೆ. ಭತ್ತದ ಸಸಿ ಸೊಕ್ಕಿದರೆ ಇಳುವರಿಯಲ್ಲಿ ಗಣನೀಯವಾಗಿ ಇಳಿತ ಕಂಡುಬರುತ್ತದೆ - ಭತ್ತ ಕಲಿಸಿದ ಅನುಭವ. ಹಿಂದಿನ ವರುಷ ಬೆಂಕಿ ರೋಗ ಬಂದು ಇಳುವರಿ ಕಡಿಮೆಯಾಗಿತ್ತು.
ಭತ್ತವು ಅವಲಂಬನಾ ಕೃಷಿಯಾದ್ದರಿಂದ ಮುಖ್ಯವಾಗಿ ನೇಜಿ (ಸಸಿ) ನೆಡಲು, ಕಟಾವ್ ಮಾಡಲು ಸಹಾಯಕರು ಬೇಕು. ಸಕಾಲಕ್ಕೆ ಕೊಯ್ಲು ಕೆಲಸ ಆಗದಿದ್ದರೆ ತೆನೆ ಗದ್ದೆಯಲ್ಲೇ ಉಳಿದು ಬಿಡುತ್ತದೆ. ಇದರಿಂದಾಗುವ ನಷ್ಟವನ್ನು ತಪ್ಪಿಸಲು ಕಟಾವ್ ಯಂತ್ರದ ಮೂಲಕ ತೆನೆಯ ಕಟಾವ್ ಮಾಡಿಸಿಕೊಂಡಿದ್ದಾರೆ.

                   ಎಪ್ಪತ್ತು ಸೆಂಟ್ಸ್ ಗದ್ದೆಯನ್ನು ಮೂರು ಗಂಟೆಯಲ್ಲಿ ಕಟಾವ್ ಯಂತ್ರ ಕಟಾವ್ ಮಾಡಿದೆ. ಒಂದು ಗಂಟೆಗೆ ನಾಲ್ಕುನೂರ ಐವತ್ತು ರೂಪಾಯಿ ಬಾಡಿಗೆ. ಹದಿನೈದು ಮಂದಿ ಮಾಡುವ ಕೆಲಸವನ್ನು ಯಂತ್ರವು ಮೂರೇ ಗಂಟೆಯಲ್ಲಿ ಪೂರೈಸಿದೆ ಎಂಬ ಲೆಕ್ಕವನ್ನು ಮುಂದಿಡುತ್ತಾರೆ. ಯಂತ್ರವು ಸಸಿಯ ಬುಡವನ್ನು ಕತ್ತರಿಸುತ್ತಾ ಸಾಗುತ್ತದೆ. ಇನ್ನೊಂದು ಬದಿಯಲ್ಲಿ ಕತ್ತರಿಸಿದ ತೆನೆಗಳೆಲ್ಲಾ ಒಂದು ಬದಿಯಲ್ಲಿ ಪೇರಿಸುತ್ತಾ ಸಾಗುತ್ತದೆ. ಇದನ್ನು ಮತ್ತೆ ಜೋಡಿಸಿ ಅಂಗಳಕ್ಕೆ ಸಾಗಿಸಿದರಾಯಿತು.

                        ಯಂತ್ರದ ಮೂಲಕ ಕಟಾವ್ ಮಾಡುವಾಗ ಒಂದೆರಡು ಅಂಶವನ್ನು ಗಮನಿಸಬೇಕು. ಕಟಾವ್ ಮಾಡುವ ಮೂರು ದಿವಸದಿಂದ ಗದ್ದೆಯ ನೀರನ್ನು ಖಾಲಿ ಮಾಡಿ ಸಾಧ್ಯವಾದಷ್ಟು ಡ್ರೈ ಆಗಿರುವಂತೆ ನೋಡಿಕೊಳ್ಳಬೇಕು. ಸಸಿಗಳು ಬಾಗಿಕೊಂಡಿದ್ದರೆ ಯಂತ್ರಕ್ಕೆ ಕಟಾವ್ ಕಷ್ಟ. ಯಂತ್ರ ಚಲಿಸಲು ಅನುಕೂಲವಾಗಲು ಗದ್ದೆಯ ಸುತ್ತ ಎರಡೂವರೆ ಅಡಿ ಜಾಗದಷ್ಟು ಕೈಯಲ್ಲೇ ಕಟಾವ್ ಮಾಡಿಡಬೇಕು.

                         ಶಾಸ್ತ್ರಿಗಳು ವಿದ್ಯಾರ್ಥಿಯಾಗಿದ್ದಾಗಲೇ ಭತ್ತದ ಕೃಷಿಯತ್ತ ಒಲವು. ಹಟ್ಟಿ ತುಂಬ ಪಶು ಸಂಸಾರ. ಯಥೇಷ್ಟ ಸ್ಲರಿ, ಹಟ್ಟಿಗೊಬ್ಬರ. 'ಭತ್ತದ ಕೃಷಿಯಿಂದ ಎದ್ದು ಕಾಣುವ ಲಾಭವೆಂದರೆ ಅದರ ಒಣಹುಲ್ಲು. ಇದು ದನಗಳಿಗೆ ಆಹಾರ' ಎನ್ನುತ್ತಾರೆ.   ಮೂರು ಪ್ಲಾಟ್ಗಳಲ್ಲಿ ಭತ್ತದ ಕೃಷಿ ಹಂಚಿ ಹೋಗಿದೆ. ಭತ್ತದ ಒಂದು ಬೆಳೆಯಾದ ತಕ್ಷಣ ಒಂದು ಪ್ಲಾಟಿನಲ್ಲಿ ಕುಂಬಳ ಕೃಷಿ. ನಮಗೆ ಬೇಕಾದ ತರಕಾರಿಯನ್ನು ನಾವೇ ಬೆಳೆಯುತ್ತೇವೆ.  ಕಳೆದ ವರುಷ ಕುಂಬಳ (ಬೂದುಗುಂಬಳ) ಬೆಳೆದಿದ್ದೇವೆ. ಬೆಳೆ ಚೆನ್ನಾಗಿತ್ತು. ಮಾರುಕಟ್ಟೆಯಲ್ಲಿ ದರ ಅಷ್ಟಕ್ಕಷ್ಟೇ. ಖರ್ಚು ಅಲ್ಲಿಂದಲ್ಲಿಗೆ ಸರಿಯೋಯಿತು. ಈ ವರುಷ ಕುಂಬಳ ಕೃಷಿಯ ಜಾಗವನ್ನು ವಿಸ್ತರಿಸುತ್ತಿದ್ದೇವೆ ಹೊಸ ಸುಳಿವನ್ನು ನೀಡಿದರು, ರಾಜೇಶ್ವರಿ ಶಾಸ್ತ್ರಿ. ಗಂಡನ ಅನುಪಸ್ಥಿತಿಯಲ್ಲಿ ಕೃಷಿಯನ್ನು ನಿಭಾಯಿಸುತ್ತಾರೆ.

                  ಮಹಾದೇವ ಶಾಸ್ತ್ರಿಯವರು ಕೃಷಿಯೊಂದಿಗೆ ವಿದ್ಯುತ್ ಗುತ್ತಿಗೆದಾರ ವೃತ್ತಿಯಲ್ಲಿ ಮೂವತ್ತಮೂರು ವರುಷದ ಅನುಭವ. ಜತೆಗೆ ವಿದ್ಯಾಸಂಸ್ಥೆಗಳು, ಸಾರ್ವಜನಿಕ ಸಂಸ್ಥೆಗಳಲ್ಲಿ ವಿವಿಧ ಹುದ್ದೆಗಳ ನಿಭಾವಣೆ. ಕೃಷಿ ಆಗುಹೋಗುಗಳು, ಹೊಸ ಕೃಷಿ, ತರಕಾರಿ, ಹಣ್ಣುಗಳತ್ತ ಆಸಕ್ತ.
 (94481 52824)


1 comments:

Ashoka Vardhana said...

ಉಳುಮೆಯಿಂದ ಅಡಿಕೆ ಜಾಲು ಹಾಳಾಗದಿರುವುದಕ್ಕೇನು ಮಾಡ್ತಾರೆ? ತರಕಾರಿ ಬೆಳೆಯಂತೇ ಸೋಗೆ ಹಾಸಿನ ಮೇಲಿನ ಮಣ್ಣಿನಲ್ಲಶ್ಟೇ ಬತ್ತ ಬೆಳೆಯುವುದನ್ನು ಕೇಳಿದ ನೆನಪು ನನ್ನದು. ಅದರ ಕುರಿತು ಶಾಸ್ತ್ರಿಗಳ ಅನುಭವ ಏನು ಹೇಳುತ್ತದೋ? (ಕ್ಷಮಿಸಿ, ನಾನು ಕೇವಲ ಕುತೂಹಲಿ, ಕೃಷಿಕನಲ್ಲ)

Post a Comment